“ಮಾತೃಶ್ರೀ ರಮಾಬಾಯಿ ಪತಿ ಬಾಬಾಸಾಹೇಬರ ಆಜ್ಞೆಯಂತೆ, ೧೯೩೧ರಲ್ಲಿ ಧಾರವಾಡಕ್ಕೆ ಬರುತ್ತಾರೆ. ಡಿಪ್ರೆಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ವಸತಿ ನಿಲಯ ಆಗ್ಗೆ ತುಂಬ ಅಧೋಗತಿಗೆ ಇಳಿದಿರುತ್ತದೆ. ತಮ್ಮ ಮೈಮೇಲಿದ್ದ ಎಲ್ಲ ಬಂಗಾರದ ಒಡವೆಗಳನ್ನು ಮಾರಿ, ಅಲ್ಲಿನ ಮಕ್ಕಳಿಗಾಗಿ ಸುಸ್ಥಿತಿಯ ಕಟ್ಟಡ ಮತ್ತು ಊಟೋಪಚಾರಕ್ಕೆ ರೇಷನ್ ವ್ಯವಸ್ಥೆ ಮಾಡುತ್ತಾರೆ. ಸ್ವತಃ ಅಡುಗೆ ಮಾಡಿ ಹಸಿದ ಮಕ್ಕಳಿಗೆ ತುತ್ತು ಅನ್ನ ಬಡಿಸುತ್ತಾರೆ. ಕೈ ತುತ್ತು ನೀಡಿ, ಮನೋಬಲ ಕಾಯುತ್ತಾರೆ.”
ತಳ ಸಮುದಾಯ ಮತ್ತು ಹಿಂದುಳಿದ ಸಮಾಜದ ಹೋರಾಟಗಳಿಗೆ ಧಾರವಾಡ ಇಂಬು ನೀಡಿದ್ದು ಅಷ್ಟಕ್ಕಷ್ಟೇ. ಹೀಗಾಗಿ ಯಾವುದೇ ದಲಿತ ಹೋರಾಟಗಳಿಗೆ ಸಾಕ್ಷಿ ಅಥವಾ ಪ್ರೇರಣಾದಾಯಿ ಆಗಿ ಈ ಸ್ಥಳ ಅಷ್ಟಾಗಿ ಉಲ್ಲೇಖವಾಗಿಲ್ಲ.
ಆದರೆ, ದಲಿತ ಹೋರಾಟದ ಅಲಿಖಿತ ಇತಿಹಾಸ ಚೇತೋಹಾರಿ. ಹೀಗಾಗಿ, ಧಾರವಾಡ ದಲಿತರಿಗೆ ಜ್ಞಾನದ ಬೀಜವನ್ನು ಬಿತ್ತಿ, ಅಂಕುರಿಸಲು ಕಾಪಿಟ್ಟ ಪುಣ್ಯದ ನೆಲ. ಆ ತೋಟಿಗ ಬೇರಾರೂ ಅಲ್ಲ, ವಿಶ್ವಜ್ಞಾನಿ ಭಾರತರತ್ನ ಬಾಬಾಸಾಹೇಬರು.
ಡಾಕ್ಟರ್ ಭೀಮರಾವ್ ರಾಮ್ಜೀಸಕ್ಪಾಲ್ ಅಂಬೇಡ್ಕರ್ ಸ್ವಾತಂತ್ರ್ಯಪೂರ್ವದಲ್ಲಿ, ೧೯೨೭ರ ಸುಮಾರಿಗೆ ಪ್ರಥಮ ಬಾರಿ ಧಾರವಾಡಕ್ಕೆ ಆಗಮಿಸಿದ್ದು, ಪರಿಶಿಷ್ಟ ಸಮುದಾಯಗಳಿಗೆ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಪ್ರಥಮ ಬಾರಿಗೆ ಚಿಂತಿಸುವಂತೆ ಪ್ರೇರೇಪಿಸಿತು. ಅರಿವು ಮೂಡಿಸಿತು.
ಹೀಗಾಗಿ ಭಾರತ ಸಂವಿಧಾನದ ಮುಖ್ಯ ಶಿಲ್ಪಿ, ದಲಿತ ಮತ್ತು ಹಿಂದುಳಿದ ಸಮುದಾಯದ ಆಶಾಕಿರಣ, ಅವರ ಹಕ್ಕುಗಳಿಗಾಗಿ ಅವಿರತ ಹೋರಾಡಿದ ಮಹಾನುಭಾವ, ಬಾಬಾಸಾಹೇಬರ ಪಾದಸ್ಪರ್ಶದಿಂದ ಪುನೀತವಾದ ಸ್ಥಳ ಧಾರವಾಡ.
ಆ ೧೦ ಕೋಣೆಗಳ ಮಂಗಳೂರು ಹೆಂಚಿನ ಐತಿಹಾಸಿಕ ಕಟ್ಟಡ
ಕರ್ನಾಟಕದಲ್ಲಿ ದಲಿತ ಸಮುದಾಯಗಳ ಏಳ್ಗೆಗಾಗಿ ಅಂಬೇಡ್ಕರ್ ಅವರು ಕೈಗೊಂಡ ಜನಾಂದೋಲನದ ಸಾಕ್ಷಿ ಕುರುಹು ಧಾರವಾಡದ ಮರಾಠಾ ಕಾಲೋನಿ ಬಳಿಯ ಕೊಪ್ಪದಕೇರಿಯ ಬುದ್ಧರಕ್ಖಿತ ವಸತಿಯುತ ಬಾಲಕರ ಪ್ರೌಢಶಾಲೆ ಆವರಣದಲ್ಲಿರುವ ಮಂಗಳೂರು-ಹೆಂಚಿನ ಐತಿಹಾಸಿಕ ಕಟ್ಟಡ.
ತಮ್ಮ ಶ್ರೀಮತಿ ರಮಾಬಾಯಿ ಅವರೊಡನೆ ೧೯೨೯ರ ಸುಮಾರಿಗೆ ಧಾರವಾಡಕ್ಕೆ ಆಗಮಿಸಿದ ಬಾಬಾಸಾಹೇಬರು, ಕೆಲವು ತಿಂಗಳುಗಳ ಕಾಲ ಇಲ್ಲಿನ ಪುಟ್ಟ ಕೋಣೆಯಲ್ಲಿ ನಿವಾಸ ಹೂಡಿದ್ದರು. ಆ ೧೦ ಕೋಣೆಗಳ ಮಂಗಳೂರು-ಹೆಂಚಿನ ಐತಿಹಾಸಿಕ ಕಟ್ಟಡ, ದಲಿತ ವಿದ್ಯಾರ್ಥಿಗಳ ವಸತಿ ನಿಲಯವಾಗಿ, ಕಲಿಕಾರ್ಥಿಗಳಿಗೆ ಅರಿವಿನ ದಾರಿ ತೋರಿದೆ, ಅವರನ್ನು ಸ್ವಾವಲಂಬಿಯಾಗಿಸಿದೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಿದೆ.
ಬಾಬಾಸಾಹೇಬರು ಮತ್ತು ರಮಾಬಾಯಿಯವರ ಪ್ರೇರಣೆಯಿಂದ, ಇದೇ ಕಟ್ಟಡದಲ್ಲಿ ದಲಿತರ ಆರ್ಥಿಕ ಶ್ರೇಯೋಭಿವೃದ್ಧಿಗಾಗಿ ಸಹಕಾರಿ ಬ್ಯಾಂಕ್, ಕೋ-ಆಪರೇಟಿವ್ ಸೊಸಾಯಿಟಿ ಬ್ಯಾಂಕ್ ಸ್ಥಾಪನೆಗೊಂಡು, ಇಡೀ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಾರ್ಯಾರಂಭಿಸಿತು. ಆದರೆ ಈ ಬಗ್ಗೆ ಮಹತ್ತ್ವದ ದಾಖಲೆಗಳು ಲಭ್ಯವಿಲ್ಲ. ಚಿತ್ರಗಳೂ ಇಲ್ಲ.
ಬಾಬಾಸಾಹೇಬರಿಗೆ ಮತ್ತು ಧಾರವಾಡಕ್ಕೆ ನಂಟು ಬೆಸೆದಿದ್ದು ವಿಶೇಷ ಸಂದರ್ಭದಲ್ಲಿ. ೧೯೨೦ರ ಸುಮಾರಿಗೆ. ೨೦೨೦ರಲ್ಲಿ ಶತಮಾನೋತ್ಸವದ ಗರಿಮೆ ಆ ಸಂಬಂಧಕ್ಕೆ ಪ್ರಾಪ್ತವಾಗಿದೆ. ಸದ್ಯ ಶತಮಾನೋತ್ತರ ತ್ರೈವಾರ್ಷಿಕ ಹರ್ಷದ ಸಂದರ್ಭ.
‘ದ ಮಹಾರ್ ಫ್ರಮ್ ಧಾರವಾರ್’
೧೮೫೬ರ ಸುಮಾರಿಗೆ ದಲಿತ ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶವನ್ನು ದೊರಕಿಸಿಕೊಡುವಲ್ಲಿ ಬ್ರಿಟಿಷ್ ಸರ್ಕಾರ ಕ್ರಮವಹಿಸಿತ್ತು.
ಆದರೂ ದುರ್ದೈವ ನೋಡಿ, ಮುಂಬೈ ಕರ್ನಾಟಕ ಪ್ರಾಂತದ ಮೈಸೂರು ಕರ್ನಾಟಕ ರಾಜ್ಯದ ಧಾರವಾಡದಲ್ಲಿ, ೧೯೨೦ರ ಸುಮಾರಿಗೆ ‘ಮಹಾರರ ಮಕ್ಕಳು’ ಎಂಬ ಕಾರಣ ಮುಂದುಮಾಡಿ, ದಲಿತ ಸಮುದಾಯದ ಮಕ್ಕಳಿಗೆ ಶಾಲಾ ಪ್ರವೇಶ ನಿರಾಕರಿಸಲಾಗಿತ್ತು.
ಈ ವಿಷಯ ಡಾ. ಅಂಬೇಡ್ಕರ್ ಗಮನಕ್ಕೆ ಬಂತು. ಅಂದಿನ ಮುಂಬೈ ಸರ್ಕಾರದ ದಾಖಲೆಗಳಲ್ಲಿ ಕೇವಲ ‘ದ ಮಹಾರ್ ಫ್ರಮ್ ಧಾರವಾರ್/ಡ್’ ಎಂದಷ್ಟೇ ಉಲ್ಲೇಖವಿದೆ. ಆ ವಿದ್ಯಾರ್ಥಿಯ ಹೆಸರು, ಪಾಲಕರ ಮಾಹಿತಿ, ವಿಳಾಸ ಕೂಡ ದಾಖಲಿಸಲಾಗಿಲ್ಲ!
ಬಾಬಾಸಾಹೇಬರು ದಲಿತ ಮಹಾರ್ ಸಮುದಾಯದ ವಿದ್ಯಾರ್ಥಿಯನ್ನು ಶಾಲೆಗೆ ದಾಖಲಿಸಿಕೊಳ್ಳಲು ಶಿಕ್ಷಣಸಂಸ್ಥೆ ಹಿಂದೇಟು ಹಾಕಿದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರು.
ಬಾಂಬೆ ನೇಟಿವ್ ಎಜ್ಯುಕೇಶನ್ ಸೊಸಾಯಿಟಿ
ಬಾಂಬೆ ನೇಟಿವ್ ಎಜ್ಯುಕೇಶನ್ ಸೊಸಾಯಿಟಿಯನ್ನು ಮುನ್ನಡೆಸುತ್ತಿದ್ದ ಎಡ್ವರ್ಡ್ ಎಲ್ಫಿನ್ಸ್ಟನ್ ಅವರನ್ನು ಭೇಟಿ ಮಾಡಿದರು. ದಲಿತ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ಮನವಿಪತ್ರ ನೀಡಿದರು. ಬ್ರಿಟಿಷ್ ಅಧಿಕಾರಿ ಎಡ್ವರ್ಡ್ ಸಹೃದಯತೆಯಿಂದ ಸ್ಪಂದಿಸಿ ಡಾ. ಅಂಬೇಡ್ಕರ್ ಬರೆದ ಪತ್ರವನ್ನು ಈಸ್ಟ್ ಇಂಡಿಯಾ ಕಂಪೆನಿಯ ಪ್ರಧಾನ ಕಚೇರಿ ಇಂಗ್ಲೆಂಡ್ಗೆ ತನ್ನ ಷರಾದೊಂದಿಗೆ ರವಾನಿಸಿದರು.
ಕೂಡಲೇ ಬ್ರಿಟಿಷ್ ಸರ್ಕಾರ ಈ ವಿಷಯವನ್ನು ಆದ್ಯತೆ ಮೇರೆಗೆ ಪರಿಗಣಿಸಿ ಅಧಿಕೃತ ಆದೇಶ ಹೊರಡಿಸಿತು. ಭಾರತದ ಎಲ್ಲ ಬ್ರಿಟಿಷ್ ಶಾಲೆಗಳಲ್ಲಿ ಕಲಿಕಾರ್ಥಿ ದಲಿತ ಮಕ್ಕಳಿಗೆ ಪ್ರವೇಶಾವಕಾಶ ಕಲ್ಪಿಸಬೇಕು, ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕು – ಎಂಬುದು ಆಜ್ಞೆಯ ಸಾರಾಂಶ.
೧೯೨೭ರಲ್ಲಿ ಪ್ರಥಮ ಬಾರಿಗೆ ಅಂಬೇಡ್ಕರ್ ದಂಪತಿ ಧಾರವಾಡಕ್ಕೆ
ಘಟನೆ ಜರುಗಿದ ೭ ವರ್ಷಗಳ ಬಳಿಕ ಡಾ. ಬಾಬಾಸಾಹೇಬರು ಸಪತ್ನೀಕರಾಗಿ ರಮಾಬಾಯಿಯವರ ಜೊತೆ, ಆ ವಿದ್ಯಾರ್ಥಿ ಮತ್ತು ಅವರ ಪಾಲಕರನ್ನು ಭೇಟಿ ಮಾಡಿ, ಮಾತುಕತೆ ನಡೆಸುವ ಬಯಕೆಯೊಂದಿಗೆ ಧಾರವಾಡಕ್ಕೆ ಬಂದರು. ಮುಂದೇನಾಯಿತು? ಆ ವಿದ್ಯಾರ್ಥಿಯ ಕನಸು ಮತ್ತು ಭವಿಷ್ಯ ಎಂಬುದನ್ನು ತಿಳಿಯುವ ತುಡಿತ ಅವರಲ್ಲಿತ್ತು.
ದುರ್ದೈವದಿಂದ, ಆ ತಳ ಸಮುದಾಯದ ವಿದ್ಯಾರ್ಥಿ ಮತ್ತು ಆತನ ಪಾಲಕರು ಎಲ್ಲಿದ್ದಾರೆ, ಹೇಗಿದ್ದಾರೆ, ಕಲಿಕೆಗೆ ಅವಕಾಶ ಸಿಕ್ಕಿತೆ ಎಂಬ ಬಗ್ಗೆ ಯಾವ ಸಣ್ಣ ಸುಳಿವು, ಮಾಹಿತಿ ಮೂಲ ಅಂಬೇಡ್ಕರ್ ದಂಪತಿಗೆ ಸಿಗಲೇ ಇಲ್ಲ. ಇಂದಿಗೂ ಆ ಕುಟುಂಬ ನಿಗೂಢವಾಗಿ ಉಳಿದಿದೆ. ಆ ವಿವರಗಳು ಎಲ್ಲಿಯೂ ಲಭ್ಯವಿಲ್ಲ. ಬಹುಶಃ ಆ ದಲಿತ ಮಗುವಿನ ಪ್ರವೇಶ ಯಾವುದೇ ಶಾಲೆಯಲ್ಲಿ ಆಗದೇ ಇರುವುದು ಬಲವಾದ ಕಾರಣವಿರಬಹುದು.
ಆದರೆ ಧಾರವಾಡದೊಂದಿಗೆ ಅವರ ನಂಟು ಮತ್ತು ಬಂಧ ಶಾಶ್ವತವಾಯಿತು. ಆಗ ಅವರು ಉಳಿದುಕೊಂಡಿದ್ದೇ ಧಾರವಾಡದ ಹಳೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ವೃತ್ತದ ಸಮೀಪವಿರುವ ಸ್ಥಳ, ಕೊಪ್ಪದಕೇರಿಯ ಇಂದಿನ ಬುದ್ಧರಕ್ಖಿತ ಬಾಲಕರ ವಸತಿಯುತ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ.
ಬಾಬಾಸಾಹೇಬರು ಸಪತ್ನೀಕರಾಗಿ ಧಾರವಾಡಕ್ಕೆ ಆಗಮಿಸಿದ ಸಂದರ್ಭದಲ್ಲಿ, ಈ ಭಾಗದ ದಲಿತ ವಿದ್ಯಾರ್ಥಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಮತ್ತು ಶೈಕ್ಷಣಿಕ ಮಟ್ಟವನ್ನು, ಸ್ಥಳೀಯ ದಲಿತ ಮುಖಂಡರು ಅನ್ಯ ಸಮಾಜದ ಸಮಾನಮನಸ್ಕ ಸಮಾಜಸೇವಕರೊಂದಿಗೆ ಸಮೀಕ್ಷಿಸುತ್ತಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ತಳಸಮುದಾಯದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುವಂತೆ ಪ್ರೇರೇಪಿಸುತ್ತಾರೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸುವ ಜವಾಬ್ದಾರಿ ತಮ್ಮದೆಂದು ಅಭಯ ನೀಡುತ್ತಾರೆ.
ಪ್ರಥಮ ಕರಾರು ಪತ್ರ ಡಾ. ಅಂಬೇಡ್ಕರ್ ಹೆಸರಲ್ಲಿ..
ಸಂಸ್ಥೆಯ ವಿಶ್ವಸ್ಥ ಕಾರ್ಯದರ್ಶಿ ಎಫ್.ಎಚ್. ಜಕ್ಕಪ್ಪನವರ ವಿವರಿಸುವಂತೆ, “ಬಾಬಾಸಾಹೇಬರು, ಧಾರವಾಡದ ಅಂದಿನ ಬ್ರಿಟಿಷ್ ಕಲೆಕ್ಟರ್ ಅವರನ್ನು ಸ್ವತಃ ಭೇಟಿ ಮಾಡುತ್ತಾರೆ. ಅವರಿಗೆ ದಲಿತ ಬಾಲಕರ ಶಿಕ್ಷಣ ಮತ್ತು ವಾಸ್ತವ್ಯದ ಸೌಕರ್ಯಕ್ಕೆ ಸಹಾಯ ಮಾಡುವಂತೆ ಮನವಿ ಸಲ್ಲಿಸುತ್ತಾರೆ. ವಸತಿ ನಿಲಯ ಪ್ರಾರಂಭಿಸಲು ಎರಡು ಎಕರೆ ಜಮೀನು ಮಂಜೂರು ಮಾಡುವಂತೆ ಕೋರುತ್ತಾರೆ. ಹೀಗಾಗಿ ತುಳಿತಕ್ಕೊಳಗಾದ ದಲಿತ ಸಮುದಾಯದ ವಿದ್ಯಾರ್ಥಿಗಳ ವಸತಿ ನಿಲಯದ ಜಾಗ, ಪ್ರಥಮ ಅಸಲಿ ಒಪ್ಪಿಗೆ ಮತ್ತು ಕರಾರುಪತ್ರ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಲ್ಲಿಯೇ ಇದೆ.”
‘ಡಿಪ್ರೆಸ್ಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ಹಾಸ್ಟೆಲ್’
ಡಾ. ಅಂಬೇಡ್ಕರ್ ಎಂಬ ಶಕ್ತಿ-ಯುಕ್ತಿಯ ದೂರದೃಷ್ಟಿಯ ಫಲವಾಗಿ ಅಂದಿನ ಕೊಪ್ಪದಕೇರಿ ಬಡಾವಣೆ, ಇಂದಿನ ಮರಾಠಾ ಕಾಲೋನಿಯಲ್ಲಿ ದಲಿತ ಬಾಲಕರಿಗಾಗಿ ಮೀಸಲಿರಿಸಿದ ‘ಡಿಪ್ರೆಸ್ಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ಹಾಸ್ಟೆಲ್’ ಜನ್ಮ ತಾಳುತ್ತದೆ. ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್, ಧಾರವಾಡ – ಎಂದು ಅದಕ್ಕೆ ಮರುನಾಮಕರಣ ಮಾಡಲಾಯಿತು.
ಬಾಬಾಸಾಹೇಬರೇ ಸ್ವತಃ ಅನೇಕ ವರ್ಷಗಳ ಕಾಲ ಕಾರ್ಯನಿರ್ವಾಹಕ ವಿಶ್ವಸ್ಥ ‘ಮ್ಯಾನೇಜಿಂಗ್ ಟ್ರಸ್ಟೀ’ ಆಗಿ ಈ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಮಾತೃಶ್ರೀ ರಮಾಬಾಯಿ ಅವರೂ ಕೂಡ ಈ ದಲಿತ ವಿದ್ಯಾರ್ಥಿಗಳ ವಸತಿನಿಲಯದ ಬಗ್ಗೆ ಅಪಾರ ಪ್ರೀತಿ ಮತ್ತು ಅಲ್ಲಿನ ವಿದ್ಯಾರ್ಥಿಗಳ ಬಗ್ಗೆ ಅಂತಃಕರಣ ಹೊಂದಿದ್ದರು. ಬಳಿಕ ಬಾಬಾಸಾಹೇಬರ ಅನುಯಾಯಿ, ಟ್ರಸ್ಟಿಯೂ ಆಗಿದ್ದ ಬಿ.ಎಚ್. ವರಾಳೆ ಅವರನ್ನು ವಸತಿ ನಿಲಯದ ಗೌರವ ಅಧೀಕ್ಷಕರನ್ನಾಗಿ ನೇಮಿಸಲಾಯಿತು.
೧೯೨೯ರಲ್ಲಿ ಬಾಬಾಸಾಹೇಬರು ತಮ್ಮ ಪತ್ನಿ ರಮಾಬಾಯಿಯವರ ಆರೋಗ್ಯ ಸುಧಾರಿಸಲಿ ಎಂಬ ವೈಯಕ್ತಿಕ ಅಭಿಲಾಷೆಯಿಂದ ಧಾರವಾಡದ ಹಿತಕರ ಹವಾಗುಣ ಬಯಸಿ, ನಾಲ್ಕು ತಿಂಗಳುಗಳ ಕಾಲ ಇಲ್ಲಿ ವಾಸ್ತವ್ಯ ಹೂಡುತ್ತಾರೆ. ಸ್ವಾಮಿಕಾರ್ಯ ಮತ್ತು ಸ್ವಕಾರ್ಯ ಎಂಬಂತೆ ಅವರು ದಕ್ಷಿಣ ಭಾರತದಲ್ಲಿ ದಲಿತ ಸಮುದಾಯ ಮತ್ತು ವರ್ಗದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಇಲ್ಲಿಂದಲೇ ಯೋಚನೆ-ಯೋಜನೆ ಮತ್ತು ಭದ್ರ ಬುನಾದಿ ಹಾಕುತ್ತಾರೆ. ಯೋಗ್ಯ ವ್ಯಕ್ತಿಗಳನ್ನು ಹುಡುಕಿ ಜೋಡಿಸುತ್ತಾರೆ. ದಮನಿತ, ಶೋಷಿತ, ದಲಿತ ಸಮುದಾಯಗಳು ಮತ್ತು ಮಕ್ಕಳ ಹಕ್ಕಿಗಾಗಿ ಬಲವಾದ ಹೋರಾಟ ಆರಂಭಿಸುತ್ತಾರೆ.
ಧಾರವಾಡ ಮಚಗಾರ ಕೋ–ಆಪರೇಟಿವ್ ಕ್ರೆಡಿಟ್ ಸೊಸಾಯಿಟಿ
ಸರ್ವೋದಯ ಸೇವಾ ಕಾರ್ಯಗಳ ಮೂಲಕ ಗ್ರಾಮಗಳನ್ನು ಕಟ್ಟುವ ಕನಸು ಹೊತ್ತು ಸಾಗಿದ ಹಿರಿಯ ಸ್ವಾತಂತ್ರ್ಯ ಸೇನಾನಿ, ಖಾದಿ ಕಾರ್ಯಕರ್ತ, ಕೀರ್ತಿಶೇಷ ನರಸಿಂಹ ದಾಬಡೆ ಅವರ ಪುತ್ರ ಡಾ. ಗೋಪಾಲ ದಾಬಡೆ ಹಾಗೂ ಗಾಂಧಿ ಅವರ ಕೋರಿಕೆಯಂತೆ ದಲಿತ ಸಮುದಾಯದ ಹೆಣ್ಣುಮಕ್ಕಳಿಗಾಗಿ ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದಲ್ಲಿ ಹರಿಜನ ಬಾಲಿಕಾಶ್ರಮ ಸ್ಥಾಪಿಸಿದ ಕೀರ್ತಿಶೇಷ ಪದ್ಮಶ್ರೀ ಸರದಾರ ವೀರನಗೌಡ ಪಾಟೀಲ ಹಾಗೂ ಪ್ರಥಮ ಮಹಿಳಾ ಶಾಸಕಿ ನಾಗಮ್ಮಾ ತಾಯಿ ವೀರನಗೌಡ ಪಾಟೀಲ ಅವರ ಸುಪುತ್ರಿ ಅಮಲಾತಾಯಿ ಕಡಗದ ಅವರು ಹೇಳುವಂತೆ, ಬಾಬಾಸಾಹೇಬರು ಹಾಗೂ ರಮಾಬಾಯಿಯವರು, ಧಾರವಾಡದಲ್ಲಿ ಮಚಗಾರ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿ ಸ್ಥಾಪಿಸಿದರು.
ಹಿರಿಯ ಸಮಾಜಸೇವಕ ಲಕ್ಷ್ಮಣ ಬಕ್ಕಾಯಿ ವಿವರಿಸುವಂತೆ, “ಧಾರವಾಡದ ಮಚಗಾರ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿ, ಬಾಬಾಸಾಹೇಬರು ಮತ್ತು ರಮಾತಾಯಿ ಅವರ ಮೇಲಿನ ಅಭಿಮಾನದಿಂದ, ಅವರ ಅನುಯಾಯಿಗಳಾದ ಚಮ್ಮಾರ ವೃತ್ತಿಯ ಪರಶುರಾಮ ಎನ್. ಪವಾರ್ ಹಾಗೂ ಯಲ್ಲಪ್ಪ ಹೊಂಗಲ್ ಮುನ್ನಡೆಸಲು ಒಪ್ಪುತ್ತಾರೆ. ವಿಶೇಷವೆಂದರೆ, ಈ ಇಬ್ಬರೂ ನಿರಕ್ಷಕರಕುಕ್ಷಿಗಳು, ಬಾಬಾಸಾಹೇಬರ ನೇತೃತ್ವದಲ್ಲಿ ನಡೆದ ಜನಾಂದೋಲನ ಮಹಾಡ್ ಸತ್ಯಾಗ್ರಹದಲ್ಲಿ ಸ್ವತಃ ಪಾಲ್ಗೊಂಡಿದ್ದರು. ಅವರಿಗಿದ್ದ ಅರ್ಹತೆ ಇಷ್ಟೇ ಮತ್ತು ಅದೊಂದೇ.”
ಮಚಗಾರ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿ ಪ್ರಥಮ ಸದಸ್ಯರು ಮತ್ತು ನಿರ್ದೇಶಕರೆಲ್ಲ ಅನುಭವ ವಿಶ್ವವಿದ್ಯಾಲಯದಲ್ಲಿ ಪಳಗಿದವರು. ಒಬ್ಬರೂ ಅಕ್ಷರ ಬಲ್ಲವರಿರಲಿಲ್ಲ. ಆದರೆ ಬಾಬಾಸಾಹೇಬರ ಪ್ರೇರಣೆ ಮತ್ತು ಬೆಂಬಲ, ಧೈರ್ಯದಿಂದ ಮುನ್ನುಗ್ಗುವ ಪ್ರೋತ್ಸಾಹ ಇವರಲ್ಲಿ ಉತ್ಸಾಹ ತುಂಬಿ ಸೊಸಾಯಿಟಿಯನ್ನು ಯಶಸ್ವಿಯಾಗಿ ಮುನ್ನಡೆಸಿತು.
ಸೊಸಾಯಿಟಿ ಬದುಕಿ ಬಾಳಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಾಗ, ತುಂಬ ಅಭಿಮಾನಪಟ್ಟು ಸ್ವತಃ ಡಾ. ಬಾಬಾಸಾಹೇಬರು ಮತ್ತೆ ಧಾರವಾಡಕ್ಕೆ ಆಗಮಿಸಿ ಹೊಸ ಕಟ್ಟಡವನ್ನು ಉದ್ಘಾಟಿಸಿ, ಹರಸುತ್ತಾರೆ. ಸದ್ಯ ಈ ಕಟ್ಟಡವಿದೆ. ಆದರೆ ಸೊಸಾಯಿಟಿ ಕಣ್ಮುಚ್ಚಿದೆ. ೨೦೨೯ರ ಸೊಸಾಯಿಟಿ ಶತಮಾನೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಅದು ಕಾರ್ಯಾರಂಭಿಸುವಂತೆ ಮಾಡಬೇಕಿದೆ. ಅದಕ್ಕಾಗಿ ಪ್ರತ್ಯೇಕ ಯೋಚನೆ, ಯೋಜನೆ ಮತ್ತು ಬಾಬಾಸಾಹೇಬರು ಮತ್ತು ರಮಾಬಾಯಿಯವರ ನೆನಪಿಗಾಗಿ ವಸ್ತುಸಂಗ್ರಹಾಲಯ ಸಿದ್ಧಗೊಳ್ಳಬೇಕಿದೆ.
ಮನುಷ್ಯತ್ವದ ಜೀವಂತ ಮೂರ್ತಿ ಅಂಬೇಡ್ಕರ್ ದಂಪತಿ
೧೯೩೧ರಲ್ಲಿ ದುಂಡುಮೇಜಿನ ಪರಿಷತ್ ಸಭೆಯಲ್ಲಿ ಪಾಲ್ಗೊಳ್ಳಲು ಬಾಬಾಸಾಹೇಬರು ಇಂಗ್ಲೆಂಡಿಗೆ ತೆರಳಿದ ಸಂದರ್ಭ. ಸಕಾಲಿಕವಾಗಿ ಧಾರವಾಡದ ಈ ‘ಡಿಪ್ರೆಸ್ಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ಹಾಸ್ಟೆಲ್’ಗೆ ಹಣ ಕಳುಹಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಕೂಡಲೇ ಪರ್ಯಾಯ ಆಲೋಚನೆ ಮಾಡುವ ಬಾಬಾಸಾಹೇಬರು, ಪುಣೆಯಲ್ಲಿದ್ದ ತಮ್ಮ ಪತ್ನಿಗೆ ಕೂಡಲೇ ಧಾರವಾಡಕ್ಕೆ ತೆರಳಿ ವಸತಿ ನಿಲಯದ ವ್ಯವಸ್ಥೆ, ಅಲ್ಲಿರುವ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವಂತೆ ಸೂಚಿಸುತ್ತಾರೆ.
ಮಾತೃಶ್ರೀ ರಮಾಬಾಯಿ ಪತಿಯ ಆಜ್ಞೆಯಂತೆ, ಕೂಡಲೇ ಧಾರವಾಡಕ್ಕೆ ಬರುತ್ತಾರೆ. ವಸತಿ ನಿಲಯ ಆ ವೇಳೆಗೆ ತುಂಬ ಅಧೋಗತಿಗೆ ಇಳಿದಿರುತ್ತವೆ. ತಮ್ಮ ಮೈಮೇಲಿದ್ದ ಎಲ್ಲ ಬಂಗಾರದ ಒಡವೆಗಳನ್ನು ಮಾರಿ ಅಲ್ಲಿನ ಮಕ್ಕಳಿಗಾಗಿ ಸುಸ್ಥಿತಿಯ ಕಟ್ಟಡ ಮತ್ತು ಊಟೋಪಚಾರಕ್ಕೆ ರೇಷನ್ ವ್ಯವಸ್ಥೆ ಮಾಡುತ್ತಾರೆ. ಸ್ವತಃ ಅಡುಗೆಮಾಡಿ ಹಸಿದ ಬಡ ದಲಿತ ಮಕ್ಕಳಿಗೆ ತುತ್ತು ಅನ್ನ ಬಡಿಸುತ್ತಾರೆ. ಕೈ ತುತ್ತು ನೀಡಿ, ಮನೋಬಲ ಕಾಯುತ್ತಾರೆ. ಓದಿನಲ್ಲಿ ಹಿಂದೆ ಬೀಳದಂತೆ ಪ್ರೋತ್ಸಾಹಿಸುತ್ತಾರೆ.
೧೯೬೭ರಲ್ಲಿ ಸಚಿವ ಬಸವಲಿಂಗಪ್ಪನವರು ಶಾಲೆ ಹಾಗೂ ವಸತಿ ನಿಲಯದ ಸಂಪೂರ್ಣ ಜೀರ್ಣೋದ್ಧಾರ ಕೈಗೊಳ್ಳುತ್ತಾರೆ. ಕಾಲಾನಂತರ ಸ್ಥಳೀಯರು ಈ ಸಂಸ್ಥೆಯ ಕರ್ಣಧಾರತ್ವ ವಹಿಸಿಕೊಳ್ಳುತ್ತಾರೆ.
ಇಂದಿಗೂ, ಅಂಬೇಡ್ಕರ್ ಕುಟುಂಬದ ಕರುಳಕುಡಿ ರಾಜಕಾರಣಿ, ಬರೆಹಗಾರ ಹಾಗೂ ನ್ಯಾಯವಾದಿ, ಮಹಾರಾಷ್ಟ್ರ ಅಕೋಲಾದ ಎರಡು ಅವಧಿಗೆ (೧೨ ಮತ್ತು ೧೩ನೇ ಲೋಕಸಭೆ) ಹಾಗೂ ರಾಜ್ಯಸಭೆ ಸಂಸದರಾಗಿದ್ದ, ಡಾ. ಪ್ರಕಾಶ್ ಯಶವಂತರಾವ್ ಅಂಬೇಡ್ಕರ್ (ಬಾಳಾಸಾಹೇಬ್ ಅಂಬೇಡ್ಕರ್), ಅವರೇ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದಾರೆ.
ಬುದ್ಧರಕ್ಖಿತ ವಸತಿಯುತ ಬಾಲಕರ ಪ್ರೌಢಶಾಲೆಯ ಪ್ರಧಾನ ಶಿಕ್ಷಕ ಎಂ.ಎ. ಹುಂಡೇಕಾರ ಅವರು, “ಸುಂದರ, ಸುಸಜ್ಜಿತ ಬುದ್ಧರಕ್ಖಿತ ವಸತಿ ಶಾಲೆ, ಗ್ರಂಥಾಲಯ, ಸಭಾಗೃಹ ಹಾಗೂ ಧ್ಯಾನಮಂದಿರ ಹಳೆಯ ಐತಿಹಾಸಿಕ ಮಂಗಳೂರು-ಹೆಂಚಿನ ಮನೆಯ ಮುಂದೆ ತಲೆಯೆತ್ತಿದೆ. ಐತಿಹಾಸಿಕ ೧೦ ಕೋಣೆಗಳ ಕಟ್ಟಡ, ರೆಡ್ ಆಕ್ಸೈಡ್ ನೆಲಹಾಸಿನಿಂದ, ಟೈಲ್ಸ್ಗೆ ಬದಲಾಗಿದೆ. ಇನ್ನೇನು ಉದ್ಘಾಟನೆಗೊಳ್ಳಲಿರುವ ಭವ್ಯ ಕಟ್ಟಡದ ಎದುರು ಭೀಮಾ-ಕೋರೇಗಾಂವ್ ಹೋರಾಟದ ಕುರುಹಾಗಿ, ಆ ನೆಲದ ಮೃತ್ತಿಕೆ ತಂದು ನಿರ್ಮಿಸಲಾದ ಸ್ಮೃತಿ ಸ್ಮಾರಕ, ಅಶೋಕಸ್ತಂಭ, ಪುಟ್ಟ ಉದ್ಯಾನ ಮೈದಳೆದಿದೆ” ಎಂದರು.
ಕಳೆದ ೩೦ಕ್ಕೂ ಹೆಚ್ಚು ವರ್ಷಗಳಿಂದ ಸಂಸ್ಥೆಯ ದ್ವಾರಪಾಲಕರಾಗಿರುವ ಬಸಪ್ಪ ಹುಣಸೀಮರದ ತುಂಬ ಆಸ್ಥೆಯಿಂದ ಆಸಕ್ತರಿಗೆ ಇಡೀ ಸಂಸ್ಥೆಯ ಬಗ್ಗೆ ಪರಿಚಯಿಸುವ ಬಗೆ ಅಭಿಮಾನ ಮೂಡಿಸುತ್ತದೆ.
ಐತಿಹಾಸಿಕ ಕಟ್ಟಡ ಮತ್ತಷ್ಟು ನಿರ್ವಹಣೆ, ಸುಸ್ಥಿತಿ ಕಾಮಗಾರಿ ಬಯಸುತ್ತದೆ. ಸದ್ಯ ಪದವಿ ಹಂತದಲ್ಲಿ ಓದುತ್ತಿರುವ ಮಕ್ಕಳು ಇಲ್ಲಿ ವಾಸ್ತವ್ಯ ಹೂಡಿದ್ದು, ಪ್ರಾತಃಸ್ಮರಣೀಯರಾದ ಭೀಮರಾವ್ ಹಾಗೂ ಮಾತೃಶ್ರೀ ರಮಾಬಾಯಿ ಅಂಬೇಡ್ಕರ್ ಅವರ ತ್ಯಾಗದ ಮೌಲ್ಯ ಅರಿತರೂ, ಅವರ ವಾಸದ ಎರಡು ಕೊಠಡಿಗಳನ್ನು ದೇಗುಲದಂತೆ ಶ್ರದ್ಧಾ ಕೇಂದ್ರವಾಗಿಸಬಹುದು.
ಮಾತೃಶ್ರೀ ರಮಾಬಾಯಿ ಅಂಬೇಡ್ಕರ್
ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅತ್ಯಂತ ಕಡುಬಡತನದ ಕುಟುಂಬದಲ್ಲಿ ಜನಿಸಿದರು. ತಂದೆ ಭಿಕ್ಕು ಧೋತ್ರೆ ವಾಲಂನ್ಗಕರ ಹಾಗೂ ತಾಯಿ ರುಕ್ಮಣಿ. ಮಹಾರಪುರದ ನದಿ ದಂಡೆಯ ವೃಂದಗಾಂವ್ದಲ್ಲಿ ಅವರು ವಾಸವಾಗಿದ್ದರು. ಮೀನು ಹಿಡಿದು ಟೋಪಲಾಲಿಯಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ತಂದೆ ಭಿಕ್ಕು ಜೀವನ ಸಾಗಿಸುತ್ತಿದ್ದರು.
ರಮಾ ಅವರಿಗೆ ಮೂವರು ಅಕ್ಕ-ತಂಗಿಯರು ಹಾಗೂ ಓರ್ವ ಸಹೋದರ ಶಂಕರ್. ರಮಾ ಅವರ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ತಮ್ಮ ತಂದೆ-ತಾಯಿಯನ್ನು ಕಳೆದುಕೊಳ್ಳುವಂತಾಯಿತು. ಬಳಿಕ ಛಲ್ಲಾದಲ್ಲಿ ಹಿರಿಯ ಅಕ್ಕ ಗೌರಾ ಅವರೊಂದಿಗೆ ವಾಸ. ಚಿಕ್ಕಪ್ಪ ವಾಲಂನ್ಗಕರ ಹಾಗೂ ಮಾವ ಗೋವಿಂದಪುರಕರ ಅವರೊಂದಿಗೆ ಪೋಷಣೆಗಾಗಿ ಮುಂಬೈಗೆ ಆಗಮನ.
ಸುಬೇದಾರ್ ರಾಮ್ಜಿ ಅಂಬೇಡ್ಕರ್ ತಮ್ಮ ಮಗನಿಗಾಗಿ ಕನ್ಯೆಯ ಹುಡುಕಾಟದಲ್ಲಿದ್ದರು. ಏಪ್ರಿಲ್ ೧೯೦೬ರಲ್ಲಿ ಭೀಮರಾವ್ ಹಾಗೂ ರಮಾ ಅವರ ಮದುವೆ ಆಯಿತು. ಆಗ ರಮಾ ಅವರಿಗೆ ೯ ವರ್ಷ ವಯಸ್ಸು. ಭೀಮ್ರಾವ್ ಅವರಿಗೆ ೧೪ ವರ್ಷ. ೫ನೇ ತರಗತಿ ಇಂಗ್ಲಿಷ್ ವ್ಯಾಸಂಗನಿರತ ವಿದ್ಯಾರ್ಥಿ ಬಾಬಾಸಾಹೇಬರು! ಅವರದ್ದು ಬಾಲ್ಯ ವಿವಾಹ. ಭೀಮ್ರಾವ್ ಹಾಗೂ ರಮಾಬಾಯಿ ಅವರಿಗೆ ಮೂವರು ಗಂಡುಮಕ್ಕಳು, ಓರ್ವ ಹೆಣ್ಣುಮಗಳು. ಸತತ ಅನಾರೋಗ್ಯದಿಂದ ಬಳಲಿದ ಪ್ರೀತಿಯ ಅರ್ಧಾಂಗಿ ರಮಾಬಾಯಿ ಅವರ ಆರೋಗ್ಯ ಸುಧಾರಣೆಗೆ ಬಾಬಾಸಾಹೇಬರು ತುಂಬಾ ಪ್ರಯಾಸಪಟ್ಟರು. ಅನ್ಯಾನ್ಯಕಾರಣಗಳಿಂದ ಮಕ್ಕಳು ಅವರಿಂದ ದೂರವಾದರು. ಬಾಬಾಸಾಹೇಬರ ಚಿಂತೆಗಳು ಬೆಟ್ಟವಾದವು. ಸಪತ್ನೀಕರಾಗಿ ಧಾರವಾಡಕ್ಕೆ ಬಂದು ಕೆಲಕಾಲ ತಂಗಿದರು. ಮಾನಸಿಕ ನೆಮ್ಮದಿ ಅರಸಿದರು. ಆದರೂ ಕರ್ತವ್ಯವಿಮುಖರಾಗಲಿಲ್ಲ. ಸಮಾಜಮುಖಿಯಾಗಿಯೇ ಬದುಕಿದರು.
ಮೇ ೨೭, ೧೯೩೫ರಂದು (೨೦೨೫ಕ್ಕೆ ೯೦ ವರ್ಷಗಳು) ರಮಾಬಾಯಿ ಮೃತರಾದರು. ಬಾಬಾಸಾಹೇಬರ ಅಂತಃಶಕ್ತಿ ಉಡುಗಿತು. ೧೦ ಸಾವಿರಕ್ಕೂ ಹೆಚ್ಚು ಜನ ಅವರ ಮಹಾಪರಿನಿರ್ವಾಣದಲ್ಲಿ ಪಾಲ್ಗೊಂಡು, ಕಂಬನಿ ಮಿಡಿದರು.
ಬಾಬಾಸಾಹೇಬರು ಕೌಟುಂಬಿಕ ಆಘಾತದಿಂದ ತುಂಬ ಜರ್ಜರಿತರಾದರು. ವೈಯಕ್ತಿಕ ನಷ್ಟಗಳನ್ನು ಅನುಭವಿಸಿಯೂ, ಸ್ಥಿತಪ್ರಜ್ಞರಾಗಿ ಬಾಳಿದರು ಡಾ. ಅಂಬೇಡ್ಕರ್.
ಭೀಮರಾವ್ ಅಂಬೇಡ್ಕರ್ ಅವರ ಕರ್ನಾಟಕದ ಸಂಬಂಧ
೩೦ ಮೇ ೧೯೩೭, ಬೆಳಗ್ಗೆ ೧೦ ಗಂಟೆಗೆ, ಡಾ. ಬಿ.ಆರ್. ಅಂಬೇಡ್ಕರ್ ಬಿಜಾಪುರ (ವಿಜಯಪುರ)ಕ್ಕೆ ಬಂದಿಳಿದರು. ಬೀಳಗಿಯ ಸೋಮನಗೌಡರ ಪ್ರಕರಣದಲ್ಲಿ ವಾದಿಸಲು ನ್ಯಾಯವಾದಿಯಾಗಿ ಅವರು ಬಂದಿದ್ದರು. ಅಮಾಯಕ, ಮುಗ್ಧ ಜನರನ್ನು ಕೊಂದರು ಎಂಬ ಆರೋಪದ ಕ್ರಿಮಿನಲ್ ಖಟ್ಲೆಯಲ್ಲಿ ವಾದ ಮಂಡಿಸಲು ಬಾಬಾಸಾಹೇಬರು ವಿಜಯಪುರಕ್ಕೆ ಆಗಮಿಸಿದ್ದರು.
ಸ್ಥಳೀಯ ವಕೀಲರಾಗಿದ್ದ ಅಂದಾನೆಪ್ಪ ಅಂಗಡಿ ಅವರ ಆಪ್ತರಾಗಿದ್ದ ಬಾಬಾಸಾಹೇಬರು, ಅವರ ಕೋರಿಕೆಯ ಮೇರೆಗೆ ಪ್ರಕರಣದಲ್ಲಿ ವಾದಿಸಲು ಒಪ್ಪಿ ಬಂದರು. ಆದರೆ ಸಾಕ್ಷಿಗಳೆಲ್ಲ ಸೋಮನಗೌಡರ ವಿರುದ್ಧ ಇದ್ದ ಕಾರಣ ಪ್ರಕರಣ ತುಂಬ ಬಿಗಿಯಾಗಿತ್ತು. ಹೀಗಾಗಿ ಬಾಬಾಸಾಹೇಬರನ್ನು ವಾದಿಸಲು ಕರೆತರಲಾಗಿತ್ತು. ಮುಂಬೈಯಿಂದ ರೈಲಿನಲ್ಲಿ ಆಗಮಿಸಿದ ಬಾಬಾಸಾಹೇಬರನ್ನು ಸಾವಿರಾರು ಮಂದಿ ಸ್ವಾಗತಿಸಿದರು. ಗೌರಾ ಗುರೂಜಿ ಮಾಲಾರ್ಪಣೆ ಮಾಡಿ ನಿರೀಕ್ಷಣಾ ಮಂದಿರಕ್ಕೆ ಅವರನ್ನು ಕರೆದೊಯ್ದರು.
ಬ್ಯಾರಿಸ್ಟರ್ ಅಂಬೇಡ್ಕರ್ ೯೦ ನಿಮಿಷಗಳ ಕಾಲ ನಿರರ್ಗಳವಾಗಿ ತಮ್ಮ ಕಕ್ಷಿದಾರ ಸೋಮನಗೌಡರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಪ್ರಕರಣದ ದಿಕ್ಕೇ ಬದಲಾಯಿತು. ಆರೋಪಿಯನ್ನು ನಿರ್ದೋಷಿ ಎಂದು ಘೋಷಿಸಿ, ನ್ಯಾಯಾಲಯ ಬಿಡುಗಡೆ ಮಾಡಿತು.
ಬಳಿಕ ಮೊದಲೇ ನಿರ್ಧರಿಸಿದಂತೆ ಮರುದಿನ ಮೇ ೩೧, ೧೯೩೭ರಲ್ಲಿ ಗೌರಾ ಗುರೂಜಿ, ಅಂದಾನೆಪ್ಪ ಅಂಗಡಿ ಹಾಗೂ ರೇವಪ್ಪ ಕಾಳೆ ಅವರ ನೇತೃತ್ವದಲ್ಲಿ ಆಯೋಜನೆಗೊಂಡ ‘ಬಿಜಾಪುರ ಡಿಸ್ಟಿçಕ್ಟ್ ಹರಿಜನ ಪರಿಷತ್’ ಸಭೆಯಲ್ಲಿ ಬಾಬಾಸಾಹೇಬರು ಪಾಲ್ಗೊಂಡು, ಮಾರ್ಗದರ್ಶನ ಮಾಡಿದರು.
ವಿಜಯಪುರ, ಬೆಳಗಾವಿ ಹಾಗೂ ಸೊಲಾಪುರ ಜಿಲ್ಲೆಗಳಿಗೆ ಸೀಮಿತವಾಗಿ ಸಭೆಯ ಎಜೆಂಡಾ ಚರ್ಚಿಸಿ, ನಿರ್ಧರಿಸಲಾಯಿತು. ಬಾಬಾಸಾಹೇಬರು ಮರಾಠಿಯಲ್ಲಿ ತುಂಬಾ ಮನೋಜ್ಞವಾಗಿ ಮಾತನಾಡಿ ಸಹಸ್ರಾರು ಜನರ ಮನಗೆದ್ದರು. ಅವರ ಐತಿಹಾಸಿಕ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು ಫರಾಳೆ.
ಎರಡು ತಾಸುಗಳ ಅವರ ಭಾಷಣದ ಸಾರ – ದಮನಿತ ಸಮುದಾಯಗಳ ಸಮಸ್ಯೆಗಳು, ಅಸ್ಪೃಶ್ಯತೆ ಆಚರಣೆಯ ಇತಿಹಾಸ, ಹಿಂದೂಧರ್ಮದ ಅಮಾನವೀಯ ಆಚರಣೆಗಳು ಹಾಗೂ ನಡವಳಿಕೆಗಳು, ದಲಿತರ ಪ್ರತಿ ಮೇಲ್ವರ್ಗದ ಜನರ ಅಸಹಕಾರ ಮತ್ತು ಅಸಹಿಷ್ಣುತೆ, ಪ್ರತ್ಯೇಕತಾ ಮನೋಭಾವ, ಸಾಮಾಜಿಕ-ರಾಜಕೀಯ ಹೋರಾಟದ ಮೂಲಕ ದಮನಿತ ಸಮುದಾಯಗಳ ಹಕ್ಕುಗಳನ್ನು ಗಳಿಸುವ ಬಗೆ, ದೇವದಾಸಿ ಪದ್ಧತಿ ನಿರ್ಮೂಲನೆ, ದಲಿತ ಸಮುದಾಯದ ಮಕ್ಕಳನ್ನು ಶಾಲೆಗೆ ಕಳುಹಿಸುವ ಅಗತ್ಯ ಮತ್ತು ತುರ್ತು ಕುರಿತು ಡಾ. ಅಂಬೇಡ್ಕರ್ ಮಾರ್ಗದರ್ಶನ ಮಾಡಿದರು.
ವಿಜಯಪುರದಲ್ಲಿ ಇಂದು ದಲಿತರನೇಕರು ಓದಿ, ಉನ್ನತ ಸ್ಥಾನಮಾನ ಗಳಿಸಿದ ಹಿನ್ನೆಲೆ ಹಾಗೂ ಪ್ರೇರಣೆ, ಡಾ. ಬಾಬಾಸಾಹೇಬರ ಮೌಲಿಕ ಭೇಟಿ ಎಂಬುದು ಗಮನಾರ್ಹ.
ಐತಿಹಾಸಿಕ ಬಹಿಷ್ಕೃತ ಹಿತಕಾರಣಿ ಸಭೆ – ನಿಪ್ಪಾಣಿ (೧೯೨೪), ಬೆಳಗಾವಿ (೧೯೨೫) ಇದೇ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗಾವನಾಳದಲ್ಲಿ ಆಯೋಜಿಸಲಾದ ೫ನೇ ಬಹಿಷ್ಕೃತ ಹಿತಕಾರಣಿ ಸಭೆ (೧೫ನೇ ಮೇ, ೧೯೨೭), ಪ್ರಥಮ ಸಾಮಾಜಿಕ ಪರಿಷದ್ ಸಮ್ಮೇಳನ, ಬೆಳಗಾವಿ (೨೩ನೇ ಮಾರ್ಚ್, ೧೯೨೯) ಇತ್ಯಾದಿ ಕರ್ನಾಟಕದ ಪ್ರಮುಖ ಸಭೆಗಳಲ್ಲಿ ಬಾಬಾಸಾಹೇಬರು ಪಾಲ್ಗೊಂಡು ಮಾರ್ಗದರ್ಶನ ಮಾಡಿದ್ದು, ಕರ್ನಾಟಕಾಂತರ್ಗತ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ನಿರೂಪಿಸಲ್ಪಟ್ಟ, ಕಾಲನ ಹೆಜ್ಜೆಗಳು.