ಶ್ರೀರಾಮಮಂದಿರ ನಿರ್ಮಾಣವು ನಿಸ್ಸಂದೇಹವಾಗಿ ಅಯೋಧ್ಯೆ ಮಾತ್ರವಲ್ಲದೇ ಸಂಪೂರ್ಣ ಉತ್ತರಪ್ರದೇಶದ ಆರ್ಥಿಕ ಬೆಳವಣಿಗೆಯ ವೇಗವರ್ಧಕವಾಗಿ ಹೊರಹೊಮ್ಮುತ್ತಿದೆ. ಇದು ವಿವಿಧ ಕ್ಷೇತ್ರಗಳಲ್ಲಿ ಹೊಸಅಲೆಯನ್ನು ಸೃಷ್ಟಿಸಿದ್ದು, ಆರ್ಥಿಕ ಸಮೃದ್ಧಿಯ ಹೊಸಯುಗಕ್ಕೆ ನಾಂದಿ ಹಾಡಿದೆ. ಹೀಗೆ ಅಯೋಧ್ಯೆಯು ಮುಂದಿನ ಪೀಳಿಗೆಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿ ವಿಕಸನಗೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ.
ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣವು ಭಾರತದ ಇತಿಹಾಸದ ಮಹತ್ತ್ವದ ಕ್ಷಣವಾಗಿದೆ. ಇದು ಕೇವಲ ಕಟ್ಟಡದ ನಿರ್ಮಾಣವಲ್ಲ, ಬದಲಿಗೆ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಪುನರುಜ್ಜೀವನದ ಪ್ರತೀಕವಾಗಿದೆ.
ಮಂದಿರ ನಿರ್ಮಾಣವು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮರುಸ್ಥಾಪಿಸುವ ಪ್ರಯತ್ನವಾಗಿದೆ. ಶ್ರೀರಾಮನು ಕೋಟ್ಯಂತರ ಹಿಂದುಗಳಿಗೆ ಮರ್ಯಾದಾ ಪುರುಷೋತ್ತಮ ಮತ್ತು ಆರಾಧ್ಯದೈವ. ಮಂದಿರವು ಜನರಲ್ಲಿ ಆಧ್ಯಾತ್ಮಿಕತೆಯನ್ನು ಹೆಚ್ಚಿಸುತ್ತದೆ ಮತ್ತು ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪುನರುಜ್ಜೀವನಗೊಳಿಸುತ್ತದೆ.
ಕೇವಲ ಸಾಮಾನ್ಯಜನರ ಆರ್ಥಿಕ ಪರಿಸ್ಥಿತಿಯ ಸುಧಾರಣೆ ಮಾತ್ರವಲ್ಲದೆ, ಅಯೋಧ್ಯೆ ಮತ್ತು ಉತ್ತರಪ್ರದೇಶದ ಮೂಲಸೌಕರ್ಯ ಅಭಿವೃದ್ಧಿ ಕೂಡ ಮಂದಿರನಿರ್ಮಾಣದ ಜೊತೆಜೊತೆಗೆ ನಡೆಯುತ್ತಿರುವುದನ್ನು ನಾವು ನಿಚ್ಚಳವಾಗಿ ಕಾಣಬಹುದು. ರಾಮಮಂದಿರದ ಪುನರ್ನಿರ್ಮಾಣವು ಜನಜೀವನದ ಗುಣಮಟ್ಟದಲ್ಲಿ ಅಭೂತಪೂರ್ವವಾದಂತಹ ಬದಲಾವಣೆ ತರುವುದರಲ್ಲಿ ಯಾವ ಸಂದೇಹವೂ ಇಲ್ಲ.
ಅಯೋಧ್ಯೆಯ ಮೂಲಸೌಕರ್ಯ ಪರಿವರ್ತನೆ: ಹೊಸ ಯುಗದ ಉದಯ
ಶ್ರೀರಾಮಮಂದಿರ ನಿರ್ಮಾಣವು ಅಯೋಧ್ಯೆಯ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರಬಿಂದುವಾಗಿದೆ. ಹೆಚ್ಚುತ್ತಿರುವ ಭಕ್ತರು ಮತ್ತು ಪ್ರವಾಸಿಗರನ್ನು ನಿಭಾಯಿಸಲು ಸರ್ಕಾರವು ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಪ್ರಾರಂಭಿಸಿದೆ.
ಶ್ರೀರಾಮಮಂದಿರದ ಭವ್ಯತೆಗೆ ಅನುಗುಣವಾಗಿ ನಗರವನ್ನು ವಿಶ್ವದರ್ಜೆಯ ತೀರ್ಥಯಾತ್ರೆ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿ ಪರಿವರ್ತಿಸಲು ಅಯೋಧ್ಯೆ ಮತ್ತು ಸುತ್ತಮುತ್ತ ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯು ನಡೆಯುತ್ತಿದೆ.
ಪ್ರಮುಖ ಯೋಜನೆಗಳ ಪಕ್ಷಿನೋಟ
ಸಾರಿಗೆ
ಅಯೋಧ್ಯಾ ವಿಮಾನನಿಲ್ದಾಣ: ನಗರದಿಂದ ೬ ಕಿ.ಮೀ. ದೂರದಲ್ಲಿ ಹೊಸ ಗ್ರೀನ್ಫೀಲ್ಡ್ ವಿಮಾನನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. ಪ್ರತಿಕೂಲ
ಹವಾಮಾನದಲ್ಲಿಯೂ ಸುಗಮ ಭೂಸ್ಪರ್ಶಕ್ಕೆ ಅಗತ್ಯವಾದ ಆಧುನಿಕ ತಂತ್ರಜ್ಞಾನದೊಂದಿಗೆ, ವಾರ್ಷಿಕವಾಗಿ ೧೮ ದಶಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಇದು ೨೦೨೪ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ರೈಲುನಿಲ್ದಾಣ: ಅಸ್ತಿತ್ವದಲ್ಲಿರುವ ಅಯೋಧ್ಯಾ ನಿಲ್ದಾಣವನ್ನು ಆರು ಪ್ಲಾಟ್ಫಾರ್ಮ್ಗಳ “ಅಯೋಧ್ಯಾ ಧಾಮ್ ರೈಲುನಿಲ್ದಾಣ”ವಾಗಿ ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ಮರು ಅಭಿವೃದ್ಧಿ ಮಾಡಲಾಗುತ್ತಿದೆ.
ರಸ್ತೆ ಜಾಲ: ತಡೆರಹಿತ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಎಕ್ಸ್ಪ್ರೆಸ್ವೇಗಳು, ಹೆದ್ದಾರಿಗಳು ಮತ್ತು ವರ್ತುಲ ರಸ್ತೆಗಳ ಜಾಲವನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ೧೯೨ ಕಿ.ಮೀ. ಅಯೋಧ್ಯೆ-ಪ್ರಯಾಗ್ರಾಜ್ ಚತುಷ್ಪಥ ಎಕ್ಸ್ಪ್ರೆಸ್ವೇ ಮತ್ತು ೧೪೦ ಕಿ.ಮೀ. ಅಯೋಧ್ಯೆ-ವಾರಣಾಸಿ ಎಕ್ಸ್ಪ್ರೆಸ್ವೇ ಸೇರಿವೆ.
ರೋಪ್ವೇ: ನಗರ ಮತ್ತು ಸರಯೂ ನದಿಯ ವಿಹಂಗಮ ನೋಟವನ್ನು ನೀಡಲು ೧.೭ ಕಿಮೀ ಉದ್ದದ ರೋಪ್ವೇ ನಿರ್ಮಿಸಲಾಗುತ್ತಿದೆ.
ಸಾರ್ವಜನಿಕ ಸೌಕರ್ಯಗಳು:
ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ರೂ. ೨೯,೭೮೯ ಕೋಟಿ ಮೌಲ್ಯದ ೨೫೯ ಯೋಜನೆಗಳನ್ನು ನೋಡಿಕೊಳ್ಳುತ್ತಿದೆ.
ಇದರೊಂದಿಗೆ ಪ್ರಪಂಚದ ಹಾಗೂ ದೇಶದ ಮೂಲೆಮೂಲೆಗಳಿಂದ ಬರುವ ಲಕ್ಷಾಂತರ ಯಾತ್ರಿಗಳ ಅನುಕೂಲಕ್ಕೋಸ್ಕರ ಬಹುಮಹಡಿಯ ಪಾರ್ಕಿಂಗ್ ಸಂಕೀರ್ಣ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ.
ಸರಯೂ ನದಿಯ ಉದ್ದಕ್ಕೂ ತೀರ್ಥಯಾತ್ರೆಯ ಮಾರ್ಗಗಳ ಡಿಜಿಟಲೀಕರಣ, ನದಿಯ ಉದ್ದಕ್ಕೂ ಇರುವ ಘಾಟ್ಗಳನ್ನು ಲೈಟಿಂಗ್, ಲ್ಯಾಂಡ್ಸ್ಕೇಪಿಂಗ್ ಮತ್ತು ಸಾರ್ವಜನಿಕ ಸ್ಥಳಗಳೊಂದಿಗೆ ಸುಂದರಗೊಳಿಸಲಾಗುತ್ತಿದೆ. ಉದ್ಯಾನವನಗಳು ಮತ್ತು ಉದ್ಯಾನಗಳ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ವ್ಯವಸ್ಥೆಗಳು, ಆಸ್ಪತ್ರೆಗಳು ಮತ್ತು ಶಿಕ್ಷಣಸಂಸ್ಥೆಗಳ ಉನ್ನತೀಕರಣ ಭರದಿಂದ ಸಾಗುತ್ತಿದೆ.
ಕೇವಲ ಸರ್ಕಾರವಲ್ಲದೆ, ಖಾಸಗಿ ಸಂಸ್ಥೆಗಳು, ಕಂಪೆನಿಗಳು ಕೂಡ ಅಯೋಧ್ಯೆ ಮತ್ತು ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಮತ್ತು ಯಾತ್ರಿಗಳಿಗೆ ಅನುಕೂಲವಾಗುವ ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ.
ಕಿರಿದಾದ ಲೇನ್ಗಳಿಗೆ ಹೆಸರುವಾಸಿಯಾಗಿದ್ದ ನಗರವು ಈಗ ರಿಯಲ್ ಎಸ್ಟೇಟ್ ಹೂಡಿಕೆದಾರರ ಪ್ರಮುಖ ತಾಣವಾಗಿ ಹೊರಹೊಮ್ಮಿದೆ. ಈ ಸಾಲಿನಲ್ಲಿ ಮುಂಬೈ ಮೂಲದ ರಿಯಲ್ ಎಸ್ಟೇಟ್ ಕಂಪೆನಿ ‘ದಿ ಹೌಸ್ ಆಫ್ ಅಭಿನಂದನ್ ಲೋಧಾ (HOABL)’ ಅಯೋಧ್ಯೆಯಲ್ಲಿ ೨೫ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸುಮಾರು ರೂ. ೩೦೦ ಕೋಟಿ ಹೂಡಿಕೆ ಮಾಡಿದೆ ಮತ್ತು ೨೦೨೪ರ ಜನವರಿಯಲ್ಲಿ ಅಭಿವೃದ್ಧಿ ಪ್ರಾರಂಭಿಸುವ ಯೋಜನೆಯನ್ನು ಹಾಕಿದೆ.
ಈ ಯೋಜನೆಯು ಶ್ರೀರಾಮ ದೇವಸ್ಥಾನದಿಂದ ಸರಿಸುಮಾರು ೧೨ರಿಂದ ೧೫ ನಿಮಿಷಗಳ ಅಂತರದಲ್ಲಿದೆ. HOABLನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸಮುಜ್ವಲ್ ಘೋಷ್ ಅವರ ಪ್ರಕಾರ, ಕಂಪೆನಿಯು ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಸುಮಾರು ೧೨೦೦ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ. ಮುಂದಿನ ವರ್ಷ ಅಯೋಧ್ಯೆಯಲ್ಲಿ ೨೦೦-೨೫೦ ಫ್ಲಾಟ್ಗಳನ್ನು ಪ್ರಾರಂಭಿಸಲು HOABL ಯೋಚಿಸುತ್ತಿದೆ.
ಆಧ್ಯಾತ್ಮಿಕ ಪಟ್ಟಣವು ರಿಯಲ್ ಎಸ್ಟೇಟ್ ಬೂಮ್ಗೆ ಒಳಗಾಗುತ್ತಿದೆ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಬದಲಾಗುತ್ತಿದೆ. ರಿಯಲ್ ಎಸ್ಟೇಟ್ ಏಜೆಂಟರ ಪ್ರಕಾರ, ದೇಶಾದ್ಯಂತ ಮತ್ತು ಸಾಗರೋತ್ತರ ಹೂಡಿಕೆದಾರರು ಭೂಮಿಗಾಗಿ ಸ್ಪರ್ಧಿಸುತ್ತಿದ್ದಾರೆ, ಆಸ್ತಿ ಮೌಲ್ಯಗಳು ಏರಿವೆ. ನಾಲ್ಕರಿಂದ ಐದು ವರ್ಷಗಳ ಹಿಂದೆ ಇದ್ದುದಕ್ಕಿಂತ ನಾಲ್ಕರಿಂದ ಹತ್ತುಪಟ್ಟು ಹೆಚ್ಚಾಗಿವೆ.
ಯಾತ್ರಿಕರು-ಪ್ರವಾಸಿಗರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೊಸ ವಸತಿಯೋಜನೆಗಳು, ಅಪಾರ್ಟ್ಮೆಂಟ್ಗಳಿಂದ ಹಿಡಿದು ಐಷಾರಾಮಿ ವಿಲ್ಲಾಗಳು ರೂಪಗೊಳ್ಳುತ್ತಿವೆ.
ನಗರದ ವಿವಿಧ ಟೌನ್ಶಿಪ್ಗಳು ಮತ್ತು ಖಾಸಗಿ ಹೋಟೆಲ್ಗಳ ಅಭಿವೃದ್ಧಿಗೆ ಸರ್ಕಾರ ಅನುಮೋದನೆ ನೀಡಿದೆ. ಈ ಸ್ಥಳಗಳು ಚೌದಾ ಕೋಸಿ ಪರಿಕ್ರಮ, ರಿಂಗ್ರಸ್ತೆ ಮತ್ತು ಲಕ್ನೋ-ಗೋರಖ್ಪುರ ಹೆದ್ದಾರಿಯ ಸಮೀಪದಲ್ಲಿವೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ೨೦೨೩ರ ಅಂತ್ಯದ ವೇಳೆಗೆ ಸುಮಾರು ೮೦ ಎಕರೆಗೂ ಅಧಿಕ ಭೂಪ್ರದೇಶವನ್ನು ವಸತಿಯೋಜನೆಗಾಗಿ ಮೀಸಲಿಟ್ಟಿದೆ.
ಈ ವರ್ಷದ ಏಪ್ರಿಲ್ ಮತ್ತು ನವೆಂಬರ್ ನಡುವೆ, ಅಯೋಧ್ಯೆಯಲ್ಲಿ ೨೯,೩೨೫ ಮಾರಾಟ ಪತ್ರಗಳನ್ನು ನೋಂದಾಯಿಸಲಾಗಿದೆ. ಸ್ಟ್ಯಾಂಪ್ ಮತ್ತು ನೋಂದಣಿ ಇಲಾಖೆಯ ಅಂದಾಜಿನ ಪ್ರಕಾರ, ಭೂ-ವಹಿವಾಟುಗಳು ಒಟ್ಟು ಶೇಕಡಾ ೮೦ರಷ್ಟಿದೆ. ದೇವಸ್ಥಾನದ ೫ರಿಂದ ೧೦ ಕಿ.ಮೀ. ವ್ಯಾಪ್ತಿಯಲ್ಲಿರುವ ಭೂಮಿಯ ಬೆಲೆಗಳು ವರ್ಧಿಸಿವೆ. ದರಗಳು ಪ್ರತಿ ಚದರ ಅಡಿಗೆ ೨೦೦೦ ರೂ. ಗಳಿಂದ ೧೮,೦೦೦ ರೂ.ಗಳವರೆಗೆ ಇದೆ. ಜೊತೆಗೆ ವಾಣಿಜ್ಯ ಫ್ಲಾಟ್ಗಳು ಸ್ಥಳವನ್ನು ಅವಲಂಬಿಸಿ ಪ್ರತಿ ಚದರ ಅಡಿಗೆ ಸುಮಾರು ರೂ. ೪೦೦೦ದಿಂದ ಪ್ರಾರಂಭವಾಗುತ್ತವೆ.
ಉತ್ತರಪ್ರದೇಶದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಆದಾಯವು ೨೦೧೮-೧೯ರಲ್ಲಿ ಸುಮಾರು ೧೦,೦೦೦ ಲಕ್ಷದಷ್ಟಿದ್ದರೆ ಈ ವರ್ಷದ (೨೦೨೩ರ) ನವೆಂಬರ್ಗೆ ರೂ. ೧೫,೬೩೧.೩೩ ಲಕ್ಷಕ್ಕೆ ಏರಿಕೆಯಾಗಿದೆ ಎಂದು ವರದಿಗಳು ಹೇಳುತ್ತವೆ. ಇಲಾಖೆಯ ಆದಾಯವೂ ನವೆಂಬರ್ನಲ್ಲಿ ೧೦೯%ರಷ್ಟು ಹೆಚ್ಚಾಗಿದೆ, ಇದು ರಾಜ್ಯದಲ್ಲಿಯೇ ಅತ್ಯಧಿಕವಾಗಿದೆ.
ಶ್ರೀರಾಮಮಂದಿರದ ಪ್ರಾಣಪ್ರತಿಷ್ಠಾಪನೆಯ ನಂತರ ಯಾತ್ರಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ.
ಅಯೋಧ್ಯೆಯ ಯಾತ್ರಾರ್ಥಿಗಳು-ಪ್ರವಾಸಿಗರಿಗಾಗಿ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವೂ ಅಭಿವೃದ್ಧಿಗೊಳ್ಳುತ್ತಿವೆ. ಹೋಟೆಲ್ ಉದ್ಯಮವು ಭಾರಿ ಲಾಭ ಗಳಿಸುವ ಭರವಸೆ ಮೂಡಿಸುತ್ತಿವೆ. ಪ್ರಸ್ತುತ ಒಟ್ಟು ೫೨೦ ಕೊಠಡಿಗಳನ್ನು ಹೊಂದಿರುವ ಐದು ಬ್ರಾಂಡೆಡ್ ಹೋಟೆಲ್ಗಳು ನಿರ್ಮಾಣಗೊಳ್ಳುತ್ತಿವೆ. ಮುಖ್ಯವಾಗಿ ಇಂಡಿಯನ್ ಹೋಟೆಲ್ಸ್ ಕಂಪೆನಿ ಲಿಮಿಟೆಡ್ (IHCL), ಮ್ಯಾರಿಯೊಟ್ ಇಂಟರ್ನ್ಯಾಷನಲ್, ಸರೋವರ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್ ಮತ್ತು ವಿಂಧಮ್ ಹೋಟೆಲ್ಸ್ ಅಂಡ್ ರೆಸಾರ್ಟ್ಗಳು ಅಯೋಧ್ಯೆಯಲ್ಲಿ ಹೋಟೆಲ್ಗಳನ್ನು ನಿರ್ಮಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಈ ಹೋಟೆಲ್ಗಳು ೨೦೨೪ರ ಜನವರಿಯಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ, ವಸತಿ ನಿರ್ಮಾಣ, ರಿಯಲ್ ಎಸ್ಟೇಟ್, ಆತಿಥ್ಯ – ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಬಾರೀ ಮೊತ್ತದ ಹೂಡಿಕೆ ಆಗುತ್ತಿದ್ದು, ಅಯೋಧ್ಯೆ ಸುತ್ತಮುತ್ತಲಿನ ನಿವಾಸಿಗಳಿಗೆ ಉದ್ಯೋಗಾವಕಾಶಗಳು ಕೂಡಾ ಹೆಚ್ಚಾಗುತ್ತಿವೆ. ಅಸ್ತಿತ್ವದಲ್ಲಿರುವ ಟ್ರಾವೆಲ್ ಏಜೆನ್ಸಿಗಳು ವಿಸ್ತರಿಸುತ್ತಿವೆ ಮತ್ತು ಹತ್ತಾರು ಹೊಸ ಏಜೆನ್ಸಿಗಳು ಹುಟ್ಟಿಕೊಳ್ಳುತ್ತಿವೆ. ರೆಸ್ಟೋರೆಂಟ್ಗಳು, ಕರಕುಶಲ ಅಂಗಡಿಗಳು ಮತ್ತು ಸಾರಿಗೆ ಪೂರೈಕೆದಾರರಂತಹ ಸ್ಥಳೀಯ ವ್ಯಾಪಾರಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ.
ಇನ್ನೊಂದೆಡೆ ಯಾತ್ರಾರ್ಥಿಗಳ ಮತ್ತು ಪ್ರವಾಸಿಗರ ಆಸಕ್ತಿಗಳನ್ನು ಪೂರೈಸಲು ಹಲವು ಸಾರ್ವಜನಿಕ ಕ್ಷೇತ್ರಗಳು ತಲೆಯೆತ್ತುತ್ತಿವೆ.
ಧಾರ್ಮಿಕ ವಸ್ತುಗಳು, ಸ್ಮರಣಿಕೆಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಉತ್ಕರ್ಷಕ್ಕೆ ಸಾಕ್ಷಿಯಾಗುತ್ತಿವೆ.
ಟೂರ್ಗೈಡ್ಗಳು, ಪುರೋಹಿತರು ಮತ್ತು ಧೋಬಿಗಳಂತಹ ಸೇವಾ ಪೂರೈಕೆದಾರರಿಗೆ ಬೇಡಿಕೆ ಹೆಚ್ಚುತ್ತಿದೆ. ಕಲ್ಲು, ಸಿಮೆಂಟ್ ಮತ್ತು ಸ್ಟೀಲ್ನಂತಹ ಕಟ್ಟಡಸಾಮಗ್ರಿಗಳ ಪೂರೈಕೆದಾರರ ವ್ಯವಸ್ಥೆಗಳಲ್ಲೂ ಗಣನೀಯ ಹೆಚ್ಚಳವಾಗಿದೆ. ಆಟೋರಿಕ್ಷಾಗಳು, ಟ್ಯಾಕ್ಸಿಗಳು ಮತ್ತು ಬಸ್ಗಳಂತಹ ಸಾರಿಗೆ ಕಂಪೆನಿಗಳು ವ್ಯಾಪಾರವನ್ನು ಹೆಚ್ಚಿಸಿಕೊಂಡಿವೆ ಮತ್ತು ಭಾರೀ ನಿರೀಕ್ಷೆ ಹೊಂದಿವೆ. ಸಾಂಪ್ರದಾಯಿಕ ಮತ್ತು ಸಸ್ಯಾಹಾರಿ ಆಹಾರ ಪೂರೈಸುವ ಗುಣಮಟ್ಟದ ರೆಸ್ಟೋರೆಂಟ್ಗಳು ಪ್ರವರ್ಧಮಾನವಾಗಿವೆ.
ಬೆಳೆಯುತ್ತಿರುವ ಆರ್ಥಿಕ ಚಟುವಟಿಕೆಯನ್ನು ಪೂರೈಸಲು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಶಾಖೆಗಳನ್ನು ತೆರೆಯುತ್ತಿವೆ.
ಶ್ರೀರಾಮಮಂದಿರ ನಿರ್ಮಾಣವು ನಿಸ್ಸಂದೇಹವಾಗಿ ಅಯೋಧ್ಯೆ ಮಾತ್ರವಲ್ಲದೆ ಸಂಪೂರ್ಣ ಉತ್ತರಪ್ರದೇಶದ ಆರ್ಥಿಕ ಬೆಳವಣಿಗೆಯ ವೇಗವರ್ಧಕವಾಗಿ ಹೊಮ್ಮುತ್ತಿದೆ. ಇದು ವಿವಿಧ ಕ್ಷೇತ್ರಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದು, ಆರ್ಥಿಕ ಸಮೃದ್ಧಿಯ ಹೊಸಯುಗಕ್ಕೆ ನಾಂದಿ ಹಾಡಿದೆ. ಹೀಗೆ ಅಯೋಧ್ಯೆಯು ಮುಂದಿನ ಪೀಳಿಗೆಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿ ವಿಕಸನಗೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ.
ಅಭಿವೃದ್ಧಿಯ ಎಂಟು ಪರಿಕಲ್ಪನೆಗಳು
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯ ಭವ್ಯತೆಯನ್ನು ಪುನಃಸ್ಥಾಪಿಸಲು ಎಂಟು ಪ್ರಮುಖ ಕಲ್ಪನೆಗಳಿಗೆ ಆದ್ಯತೆ ನೀಡಿದ್ದಾರೆ. ಈ ಕಲ್ಪನೆಗಳು ಅಯೋಧ್ಯೆಯನ್ನು ಸಾಂಸ್ಕöÈತಿಕ, ಸಕ್ಷಮ (ಸಮರ್ಥ), ಆಧುನಿಕ, ಸುಗಮ್ಯ (accessible), ಸುರಮ್ಯ (beautiful), ಭಾವನಾತ್ಮಕ (emotional), ಸ್ವಚ್ಛ ಮತ್ತು ಆಯುಷ್ಮಂತ (healthy) ನಗರವನ್ನಾಗಿ ರೂಪಿಸುವ ಗುರಿ ಹೊಂದಿವೆ.
ಸಾಂಸ್ಕೃತಿಕ ಅಯೋಧ್ಯೆ: ಅಯೋಧ್ಯೆಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪ್ರಚಾರ ಮಾಡುವತ್ತ ವಿಶೇಷ ಒತ್ತು ನೀಡಿದೆ. ವಿಶ್ವರೂಪ ದರ್ಶನ ನೀಡಿದ ವಿಷ್ಣುವಿನ ಚಕ್ರದ ಮೇಲಿದೆ ಎನ್ನಲಾದ ಸಾಕೇತಪುರಿಯನ್ನು ಸಾಂಸ್ಕೃತಿಕ ಅಯೋಧ್ಯೆಯ ಮಾದರಿಯಾಗಿ ಮುನ್ನೆಲೆಗೆ ತರುವ ಉದ್ದೇಶವಿದೆ.
ಸಕ್ಷಮ ಅಯೋಧ್ಯೆ: ಈ ಪರಿಕಲ್ಪನೆಗೆ ಅನುಗುಣವಾಗಿ, ಅಯೋಧ್ಯೆಯನ್ನು ಸಂಪೂರ್ಣ ಸ್ವಾವಲಂಬಿ ನಗರವಾಗಿ ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರವಾಸೋದ್ಯಮ, ಧಾರ್ಮಿಕ ಮತ್ತು ಸಾಂಸ್ಕöÈತಿಕ ಚಟುವಟಿಕೆಗಳು ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಗಣನೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ.
ಆಧುನಿಕ ಅಯೋಧ್ಯೆ: ಪವಿತ್ರನಗರ ಅಯೋಧ್ಯೆಯ ಆಧುನಿಕೀಕರಣಕ್ಕೆ ಸ್ಮಾರ್ಟ್ ಸಿಟಿ, ಸೇಫ್ ಸಿಟಿ, ಸೋಲಾರ್ ಸಿಟಿ ಮತ್ತು ಗ್ರೀನ್ಫೀಲ್ಡ್ ಟೌನ್ಶಿಪ್ನಂತಹ ಉಪಕ್ರಮಗಳು ಪ್ರಾರಂಭಗೊAಡಿವೆ.
ಸುಗಮ್ಯ ಅಯೋಧ್ಯೆ: ಯಾತ್ರಾರ್ಥಿಗಳು-ಪ್ರವಾಸಿಗಳ ಅನುಕೂಲಕ್ಕಾಗಿ ಸುಗಮ-ಸಂಪರ್ಕಜಾಲವನ್ನು ಅಭಿವೃದ್ದಿಪಡಿಸುವುದೇ ಈ ಕಲ್ಪನೆ. ಇದಕ್ಕಾಗಿ ಈಗಾಗಲೇ ಮರ್ಯಾದಾಪುರುಷೋತ್ತಮ ಶ್ರೀರಾಮ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ, ಅಯೋಧ್ಯಾ ಧಾಮ್ ರೈಲುನಿಲ್ದಾಣದ ಪುನರುಜ್ಜೀವನದ ಜೊತೆಗೆ ಸರಯೂ ಮತ್ತು ಒಳನಾಡಿನ ಜಲಮಾರ್ಗದ ನಡುವೆ ಸಂಪರ್ಕ ಕಲ್ಪಿಸುವ ಯೋಜನೆಗಳನ್ನೂ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಕೈಗೊಂಡಿದೆ.
ಸುರಮ್ಯ ಅಯೋಧ್ಯೆ: ಇದು ನಗರದ ಸೌಂದರ್ಯವನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ಕೇಂದ್ರೀಕೃತವಾಗಿವೆ. ಹಲವು ಪ್ರಾಚೀನ ಕೆರೆಕಟ್ಟೆಗಳನ್ನು, ಸರೋವರಗಳನ್ನು, ಜಲಾಶಯಗಳನ್ನು ಮತ್ತು ಹಳೆಯ ಉದ್ಯಾನಗಳನ್ನು ಪಾರಂಪರಿಕ ಸ್ಥಳಗಳ ಪುನರುಜ್ಜೀವನಕರಣದೊಂದಿಗೆ ಹೊಸದನ್ನು ನಿರ್ಮಿಸುವುದು ಉದ್ದೇಶ. ಬೆಳಕಿನ ವ್ಯವಸ್ಥೆ ಮುಂತಾದ ವಿವಿಧ ಉಪಕ್ರಮಗಳಿಂದ ಅಯೋಧ್ಯೆಯನ್ನು ಆಕರ್ಷಣೆಯ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಭಾವನಾತ್ಮಕ ಅಯೋಧ್ಯೆ: ಪ್ರಭು ಶ್ರೀರಾಮನ ಜನ್ಮಸ್ಥಾನದೊಂದಿಗೆ ಜಗತ್ತಿನೆಲ್ಲೆಡೆ ಇರುವ ಸನಾತನ ಹಿಂದು ಧರ್ಮದವರಲ್ಲಿ ಭಾವನಾತ್ಮಕ ಸಂಬಂಧ ಕಲ್ಪಿಸುವುದು ಬಹಳ ಮಹತ್ತ್ವದ್ದಾಗಿದೆ. ಹೀಗಾಗಿ ನಗರದ ರಸ್ತೆಗಳು, ಗೊಡೆಗಳು, ಕಂಬಗಳನ್ನು ಪ್ರಭು ಶ್ರೀರಾಮ-ರಾಮಾಯಣನೊಂದಿಗೆ ಸಂಪರ್ಕಹೊಂದುವಂತೆ ರಚಿಸಲಾಗುತ್ತಿದೆ.
ಸ್ವಚ್ಛ ಅಯೋಧ್ಯೆ: ನಗರದಾದ್ಯಂತ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡುವುದು: ಅಯೋಧ್ಯೆಯನ್ನು ದೇಶದ ಸ್ವಚ್ಛ ನಗರವನ್ನಾಗಿ ಮಾಡಲು ಮುಖ್ಯಮಂತ್ರಿ ಪಣ ತೊಟ್ಟಿದ್ದಾರೆ.
‘ಆಯುಷ್ಮಾನ್’ ಅಯೋಧ್ಯೆ: ಎಲ್ಲರಿಗೂ ಉತ್ತಮ ಗುಣಮಟ್ಟದ ಮತ್ತು ಅನುಕೂಲಕರ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಅಯೋಧ್ಯೆಯ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲಾಗಿದೆ. ಏಮ್ಸ್ನ ರಾಜರ್ಷಿ ದಶರಥ್ ವೈದ್ಯಕೀಯ ಕಾಲೇಜಿನಂತಹ ದೇಶದ ಐದು ಪ್ರತಿಷ್ಠಿತ ಸಂಸ್ಥೆಗಳು ವೈದ್ಯಕೀಯ ಸೇವೆಗಳನ್ನು ಒದಗಿಸಲು ಮುಂದಾಗಿವೆ. ಜೊತೆಜೊತೆಗೆ ತುರ್ತು ವೈದ್ಯಕೀಯ ಸೌಲಭ್ಯಗಳ ಕುರಿತು ವ್ಯಾಪಕವಾದ ಸಂಶೋಧನೆಯನ್ನೂ ನಡೆಸಲಾಗುತ್ತಿವೆ.
ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣದ ಹೋರಾಟದ ಸಮಯದಲ್ಲಿ ಸ್ವಯಂಘೋಷಿತ ಪ್ರಗತಿಪರರು ಮತ್ತು ಎಡಪಂಥೀಯರು ಕೇಳುತ್ತಿದ್ದ ಪ್ರಶ್ನೆ “ಮಂದಿರನಿರ್ಮಾಣದಿಂದ ಸಾಮಾನ್ಯ ಪ್ರಜೆಗೆ ಯಾವ ಲಾಭವಿದೆ?”, “ಜನಸಾಮಾನ್ಯರ ಜೀವನದ ಗುಣಮಟ್ಟದಲ್ಲಿ ಯಾವ ಬದಲಾವಣೆಯು ಕಾಣಲು ಸಿಗುತ್ತದೆ?” – ಎಂದು. ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಅಯೋಧ್ಯೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಆಗುತ್ತಿರುವ ಅಭೂತಪೂರ್ವ ಬದಲಾವಣೆಯು ಅಂತಹವರಿಗೆಲ್ಲ ಉತ್ತರಿಸುತ್ತಿದೆ.
ಒಟ್ಟಾರೆಯಾಗಿ, ಶ್ರೀರಾಮಮಂದಿರದ ಪುನರ್ನಿರ್ಮಾಣವು ಈ ಪ್ರದೇಶದ ಆರ್ಥಿಕತೆ ಮತ್ತು ಜನರ ಜೀವನಮಟ್ಟವನ್ನು ಏರಿಸುವ ಒಂದು ಪ್ರಮುಖವಾದ ಹೆಜ್ಜೆಯೂ ಆಗಿದೆ. ಇದು ಸಾಂಸ್ಕೃತಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಪ್ರಗತಿಯ ಶಿಖರವನ್ನು ಮುಟ್ಟಿ ಭವಿಷ್ಯದ ಪೀಳಿಗೆಗಳಿಗೆ ಸ್ಥಿರ ಸುಂದರ ಮತ್ತು ಸುವ್ಯವಸ್ಥಿತ ಜೀವನಕ್ಕೆ ನೆರವಾಗಲಿದೆ.
ಅಯೋಧ್ಯೆಯ ಶ್ರೀರಾಮಮಂದಿರವು ಕೇವಲ ಕಟ್ಟಡವಲ್ಲ. ಅದು ನಂಬಿಕೆ, ಭಕ್ತಿ ಮತ್ತು ಸಮೃದ್ಧಿ – ಇವೆಲ್ಲದರ ಸಂಕೇತ. ಈ ಪುಣ್ಯಕ್ಷೇತ್ರದ ಪುನರ್ನಿರ್ಮಾಣವು ಭಾರತದ ಆತ್ಮವನ್ನು ಪ್ರತಿನಿಧಿಸುತ್ತದೆ ಮತ್ತು ಭವಿಷ್ಯದ ಪೀಳಿಗೆಗಳಿಗೆ ಬೆಳಕು ನೀಡುತ್ತದೆ.
ಮಂದಿರ ರಾಷ್ಟ್ರೀಯ ಅಸ್ಮಿತೆಯ ಪ್ರತೀಕ
೨೦೨೦ರ ಆಗಸ್ಟ್ ೫ರಂದು ಭವ್ಯ ಶ್ರೀರಾಮಮಂದಿರ ನಿರ್ಮಾಣದ ಆರಂಭದ ಪೂಜಾಕಾರ್ಯ ನಡೆಯಿತು. ಸಾಮಾಜಿಕ ಸಮರಸದ, ರಾಷ್ಟ್ರೀಯ ಭಾವೈಕ್ಯದ ಸಂಕೇತವಾಗಿ ರಾಷ್ಟ್ರದ ಮೂಲೆಮೂಲೆಗಳಿಂದ ತರಲಾದ ವಿವಿಧ ನದಿಗಳ ತೀರ್ಥಗಳು ಮತ್ತು ವಿವಿಧ ತೀರ್ಥಕ್ಷೇತ್ರಗಳ ಮೃತ್ತಿಕೆಗಳ ಪೂಜೆ-ಸಮರ್ಪಣೆ ನಡೆಯಿತು. ಇದೀಗ ಇಡೀ ವಿಶ್ವವೇ ಶತಶತಮಾನಗಳಿಂದ ನಿರೀಕ್ಷಿಸುತ್ತಿದ್ದ ಅಮೃತಘಳಿಗೆ ಕೈಗೂಡಿಬಂದಿದೆ. ಇದೇ ೨೦೨೪ರ ಜನವರಿ ೨೨ರಂದು ವಿಧ್ಯುಕ್ತ ಪ್ರಾಣಪ್ರತಿಷ್ಠೆ ನಡೆದು ಭವ್ಯ ರಾಮಮಂದಿರವು ಲೋಕಾರ್ಪಣೆಗೊಳ್ಳಲಿದೆ.
ದಶಕಗಳ ಕಾಲ ನ್ಯಾಯಾಲಯದ ಪ್ರಕ್ರಿಯೆಯನ್ನು ಶಾಂತವಾಗಿ ವೀಕ್ಷಿಸುತ್ತ ಹಿಂದೂಸಮಾಜವು ಕಾದಿದೆ. ನಡುನಡುವೆ ಬಂದ ಮಧ್ಯಂತರ ವಿಚಿತ್ರ ತೀರ್ಪುಗಳನ್ನು ಭಾರತೀಯ ಜನತೆ ಸಹನೆಯಿಂದ ಕೇಳಿದೆ. ಮಧ್ಯಸ್ಥಿಕೆ ವಹಿಸಲೆಂದು ಬಂದರೂ ತಿರಸ್ಕರಿಸದೇ ಶಾಂತಿಯ ಸಹಬಾಳ್ವೆಗೆ ನಮ್ಮ ಆದ್ಯತೆ ಎಂಬುದನ್ನು ಹಿಂದೂ ಸಂಘಟನೆಗಳು ತೋರಿಸಿಕೊಟ್ಟಿವೆ. ಆದರೆ ಈ ಸಹಬಾಳ್ವೆ ಸತ್ಯದ ಸಮಾಧಿಯ ಮೇಲಲ್ಲ ಎಂಬುದನ್ನೂ ಕಾಲಕಾಲಕ್ಕೆ ಸಾತ್ತ್ವಿಕ ಹೋರಾಟಗಳಿಂದ ಸ್ಪಷ್ಟಪಡಿಸುತ್ತಲೇ ಬರಲಾಗಿದೆ. ಇವೆಲ್ಲಕ್ಕೂ ಅಂತ್ಯ ಹಾಡುವ ಮಂಗಲಕರ ಸಂದರ್ಭಕ್ಕೆ ಈಗ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ.
ಭವ್ಯ ಶ್ರೀರಾಮಮಂದಿರ ಕೇವಲ ಹಿಂದೂಗಳ ಶ್ರದ್ಧಾಕೇಂದ್ರವಲ್ಲ; ಅದು ಭಾರತದ ಅಸ್ಮಿತೆಯ ಪ್ರತೀಕ. ರಾಮನು ಭಾರತದ ಆದರ್ಶ. ಅಳಿಲು, ಜಟಾಯು, ಹನುಮಂತ-ಸುಗ್ರೀವರಂತಹ ಕಪಿಗಳಿಂದ ಹಿಡಿದು ಸೃಷ್ಟಿಯ ಎಲ್ಲ ಚರಾಚರ ವಸ್ತುಗಳ ಸಾಂಗತ್ಯ ಪಡೆದವನು ಶ್ರೀರಾಮ.
ಅಯೋಧ್ಯೆ –ಇದು ಸಕಲ ಹಿಂದುಗಳಿಗೆ ಪಾವನ ಕ್ಷೇತ್ರ
ಅಯೋಧ್ಯೆ – ಮಾನವತೆಯ ಮೇರುಶಿಖರವೆನಿಸಿರುವ ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಳವಾಗಿ ಇಡೀ ವಿಶ್ವದ ಜನತೆಗೇ ಮಹತ್ತ್ವದ್ದೆನಿಸುವ ಮಂಗಳಮಯ ಭೂಮಿ. ಕಳೆದ ಕೆಲ ದಶಕಗಳಿಂದ ಭಾರತದಲ್ಲಿ ತಾಂಡವವಾಡುತ್ತಿರುವ ತಥೋಕ್ತ ‘ಜಾತ್ಯತೀತತೆ’ಯ ಹುಚ್ಚಿಗೆ ಬಲಿಯಾಗಿ ಶ್ರೀರಾಮನ ವ್ಯಕ್ತಿತ್ವವನ್ನೇ ಕುಬ್ಜಗೊಳಿಸಿ ಬರೀ ಕಾಲ್ಪನಿಕ ವ್ಯಕ್ತಿಯನ್ನಾಗಿಸುವ ಪ್ರಯತ್ನಗಳಲ್ಲಿ ಕೆಲವರು ನಿರತರಾಗಿದ್ದಾರೆ. ಮುಸ್ಲಿಂ ತುಷ್ಟೀಕರಣದ ರಾಜಕಾರಣಕ್ಕೆ ಬಲಿಯಾಗಿ ಆ ಮಹಾಪುರುಷ ತನ್ನ ಜನ್ಮಸ್ಥಳದಲ್ಲಿಯೇ ಸಣ್ಣ ಜೋಪಡಿಯಲ್ಲಿ ಪೂಜೆಗೊಳ್ಳಬೇಕಾದ ಸ್ಥಿತಿ ಬಂದಿತ್ತು. ಹಾಗೆ ನೋಡಿದರೆ ಬೃಹತ್ ದೇವಾಲಯವೊಂದು ರಾಮಜನ್ಮಸ್ಥಾನದಲ್ಲಿರಬೇಕೆಂಬುದು ಇಂದಿನ ರಾಜಕೀಯ ಪಕ್ಷಗಳ ಅಥವಾ ಹಿಂದು ಸಂಘಟನೆಗಳ ಕಲ್ಪನೆಯೇನಲ್ಲ. ಯುಗಯುಗಗಳಿಂದ ಶ್ರೀರಾಮನ ಭವ್ಯಮಂದಿರ ಅಲ್ಲಿ ಇತ್ತು. ಮತ್ತು ಕಾಲಕಾಲಕ್ಕೆ ಅದು ನವೀಕರಣಗೊಂಡು ರಾಮಭಕ್ತರ ಪ್ರೇರಣಾಕೇಂದ್ರವಾಗಿ ಕಂಗೊಳಿಸುತ್ತಿತ್ತು. ರಾಷ್ಟ್ರೀಯತೆಯ ಅಸ್ಮಿತೆಯಾಗಿ ರೂಪಗೊಂಡಿತ್ತು. ಮತ್ತೊಮ್ಮೆ ಆ ಭವ್ಯತೆಯನ್ನು ತರಲೆಂದೇ ಈಗಿನ ಪ್ರಯತ್ನಗಳು.
ಅಯೋಧ್ಯೆ ವಿಶ್ವದ ಅತ್ಯಂತ ಶೌರ್ಯವಂತ ರಾಜರು ಆಳಿದ ಕೋಸಲ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಪ್ರದೇಶ. ಇಕ್ಷ್ವಾಕುವಂಶ, ಸೂರ್ಯವಂಶ ಅಥವಾ ರಘುವಂಶವೆಂದು ಕರೆಯಲ್ಪಟ್ಟ ಈ ವಂಶದ ರಾಜರು ಒಬ್ಬರಿಗಿಂತ ಒಬ್ಬರು ಪರಾಕ್ರಮಶಾಲಿಗಳು, ಪರೋಪಕಾರಿಗಳು. ಸಗರ, ಭಗೀರಥ, ಸತ್ಯಹರಿಶ್ಚಂದ್ರ, ದಿಲೀಪ ಮುಂತಾದವರು ಸಿಂಹಾಸನವನ್ನಲಂಕರಿಸಿದ್ದ ಸಾಮ್ರಾಜ್ಯವಿದು. ಶ್ರೀರಾಮನ ಕಾಲಕ್ಕೂ ಹಿಂದಿನಿಂದ ಇಲ್ಲಿಯವರೆಗೂ ಅಯೋಧ್ಯೆಯೆಂಬ ಜಾಗವನ್ನು ಸರಿಯಾಗಿಯೇ ಗುರುತಿಸಿಕೊಂಡು ಬರಲಾಗಿದೆ. ಅನೇಕ ಬಾರಿ ಇಡೀ ಪಟ್ಟಣವೇ ಪುನರ್ನಿರ್ಮಾಣಗೊಂಡಿರುವ ಕುರುಹುಗಳು ಕಂಡುಬಂದಿವೆ. ಉತ್ಖನನದ ಸಮಯದಲ್ಲಿ ಅನೇಕ ಪದರಗಳಲ್ಲಿ ಒಂದರಮೇಲೊಂದರಂತೆ ವಿವಿಧ ಕಾಲಘಟ್ಟದ ಕಟ್ಟಡಗಳು ಭೂಮಿಯೊಳಗೆ ಸೇರಿಕೊಂಡಿರುವುದನ್ನು ಪತ್ತೆಹಚ್ಚಲಾಗಿದೆ.
ಅಯೋಧ್ಯೆಯ ಸಾಕ್ಷಿಗಳು ಈ ಸ್ಥಳದ ಬಗ್ಗೆ ಇರುವ ನಂಬಿಕೆಗಳನ್ನು ದೃಢಪಡಿಸಿವೆ. ಇದರೊಟ್ಟಿಗೆ ಶ್ರೀರಾಮನೂ ಈ ನೆಲದಲ್ಲಿ ಜನಿಸಿ ಜೀವಿಸಿದ ಐತಿಹಾಸಿಕ ಪುರುಷ ಎಂಬುದೂ ದೃಢಪಟ್ಟಿದೆ. ರಾಮಾಯಣದಲ್ಲಿ ಅನೇಕ ಪ್ರಮುಖ ಸಂದರ್ಭಗಳಲ್ಲಿ ಉಲ್ಲೇಖಗೊಂಡಿರುವ ವಿವಿಧ ನಕ್ಷತ್ರಗಳ, ಗ್ರಹಸ್ಥಾನಗಳ ಆಧಾರದ ಮೇಲೆ ಇದರ ಕಾಲವನ್ನೂ ನಿರ್ಣಯಿಸುವ ಪ್ರಯತ್ನಗಳು ತಜ್ಞರಿಂದ ನಡೆದಿವೆ. ಇವೆಲ್ಲವೂ ಸಹಸ್ರಾರು ವರ್ಷಗಳ ಇತಿಹಾಸವನ್ನೇ ಸಾರಿ ಹೇಳುತ್ತವೆಯೇ ಹೊರತು ಬರೀ ಶಾಸನ, ದಾಖಲೆಗಳ ಕಾಲದ ಇರುವಿಕೆಯನ್ನಲ್ಲ. ಇಷ್ಟೊಂದು ದೀರ್ಘಕಾಲ ತಮ್ಮ ಅಸ್ತಿತ್ವವನ್ನು ಕಾಪಿಟ್ಟುಕೊಂಡಿರುವುದು ಮನುಕುಲದ ಇತಿಹಾಸದಲ್ಲೇ ಅತ್ಯಪೂರ್ವ ಎನ್ನಬಹುದು.