ಮೂರ್ತಿ ಅವರ ಸಾಧನೆಗೆ ಕಲಶವಿಟ್ಟಂತೆ ಅವರಿಗೆ ದೇಶದ ಚಲನಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ವಿಶೇಷವೆಂದರೆ ಈ ಪ್ರಶಸ್ತಿಗೆ ಪಾತ್ರರಾದ ದೇಶದ ಮೊದಲ ತಂತ್ರಜ್ಞ ಹಾಗೂ ಮೊದಲ ಚಲನಚಿತ್ರ ಛಾಯಾಗ್ರಾಹಕ ಅವರಾಗಿದ್ದರು. ಈ ಮಹೋನ್ನತ ಸಾಧನೆಯನ್ನು ತಮ್ಮದಾಗಿಸಿಕೊಂಡ ಮೂರ್ತಿ ಅವರಿಗೆ, ಅವರ ಕುಟುಂಬಕ್ಕೆ ಚಲನಚಿತ್ರದ ಹಿನ್ನೆಲೆಯೇನಾದರೂ ಇತ್ತೇ ಎಂದು ಕೇಳಿದರೆ ಇಲ್ಲ ಎನ್ನುವ ಉತ್ತರವೇ ಸಿಗುತ್ತದೆ. ಅಂತಹ ಹಿನ್ನೆಲೆ ಇಲ್ಲದಿದ್ದುದು ಮಾತ್ರವಲ್ಲ; ಅದನ್ನು ಕಲಿಯುವುದಕ್ಕೆ ಬೇಕಾದ ಸಾಧನ–ಸಂಪತ್ತುಗಳಾಗಲಿ, ಪರಿಕರ–ಅನುಕೂಲಗಳಾಗಲಿ ಕೂಡಾ ಅವರಿಗೆ ಇರಲಿಲ್ಲ. ವಿದ್ಯೆಯ ಒಂದು ಕ್ಷೇತ್ರದ ಬಗೆಗಿನ ಎಣೆಯಿಲ್ಲದ ಆಸಕ್ತಿ ಮತ್ತು ಕ್ರಿಯಾಶೀಲವಾದ ಮನಸ್ಸು–ವಿವೇಕಗಳೇ ಅವರನ್ನು ಆ ಮಟ್ಟದ ಸಾಧನೆಗೆ ಅರ್ಹರನ್ನಾಗಿ ಮಾಡಿದವು ಎಂದು ಒಪ್ಪಿಕೊಳ್ಳಲೇಬೇಕು.
ವಿ.ಕೆ. ಮೂರ್ತಿ ಅವರಿಗೆ ನನ್ನಂತೆಯೇ ಅತ್ಯಂತ ಶ್ರೇಷ್ಠಮಟ್ಟದ ಪರಿಣಾಮವನ್ನೇ ಪಡೆಯಬೇಕೆಂಬ ಹುಚ್ಚಿದೆ. ಚಿತ್ರಗಳಲ್ಲಿ ಅವರು ಗಳಿಸಿರುವ ಅನುಭವ ಅಮೂಲ್ಯವಾದದ್ದು. ಅವರಿಗೆ ಡೆನ್ಸಿಟಿ ಬಗ್ಗೆ, ಸ್ಯಾಚುರೇಶನ್ ಬಗ್ಗೆ, ಇಂಪ್ರಿಂಟಿಂಗ್ ಬಗ್ಗೆ ಎಂಥಾ ತಿಳಿವಳಿಕೆ ಇತ್ತೆಂದರೆ, ಅವರು ಲ್ಯಾಬೊರೇಟರಿಗೆ ಕೊಡುತ್ತಿದ್ದದ್ದು ಒಂದು ‘ಪರ್ಫೆಕ್ಟ್ಲೀ ಎಕ್ಸ್ಪೋಸ್ಡ್ ನೆಗೆಟಿವ್.’ ಅದನ್ನು ಲ್ಯಾಬೊರೇಟರಿಯವರು ನೇರವಾಗಿ ಪ್ರೊಸೆಸ್ ಮಾಡಿದರೆ ಸಾಕಾಗುತ್ತಿತ್ತು. ಇದನ್ನು ಹೆಚ್ಚು ಮಾಡು, ಇದನ್ನು ಕಡಮೆ ಮಾಡು… ಈ ರೀತಿಯ ರಗಳೆಗಳೇ ಇರುತ್ತಿರಲಿಲ್ಲ. ಇದು ಒಬ್ಬ ಛಾಯಾಗ್ರಾಹಕನ ಅದ್ಭುತ ಸಾಮರ್ಥ್ಯ. ಏಕೆಂದರೆ ಆಗಿನ ಕಾಲದಲ್ಲಿ ಲ್ಯಾಬೊರೇಟರಿ ತಂತ್ರಜ್ಞಾನ ಇಂದಿನಷ್ಟು ಮುಂದುವರಿದೂ ಇರಲಿಲ್ಲ. ಇಷ್ಟೆಲ್ಲ ಸಾಧಿಸಲು ಅವರು ತೆಗೆದುಕೊಳ್ಳುತ್ತಿದ್ದ ಆಸಕ್ತಿ, ವಹಿಸುತ್ತಿದ್ದ ಎಚ್ಚರ ಮೆಚ್ಚಬೇಕಾದ್ದು” ಎಂದು ಹೇಳಿದವರು ಹಲವು ಶ್ರೇಷ್ಠ ಚಿತ್ರಗಳ ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಂ ಬೆನಗಲ್ ಅವರು. ಜನ್ಮಶತಮಾನೋತ್ಸವದ ಈ ಸಂದರ್ಭದಲ್ಲಿ ತಾನು ಕೆಲಸ ಮಾಡಿದಲ್ಲೆಲ್ಲ ಶ್ರೇಷ್ಠತೆಯನ್ನು ಮೆರೆದು ಅಪೂರ್ವ ಗೌರವಕ್ಕೆ ಪಾತ್ರರಾದ ವಿ.ಕೆ. ಮೂರ್ತಿ ಅವರನ್ನು ನೆನಪಿಸಿಕೊಳ್ಳುವುದು ಕನ್ನಡಿಗರಿಗೆ ಅಭಿಮಾನದ ವಿಷಯವೇ ಸರಿ.
‘ಭಾರತ್ ಏಕ್ ಖೋಜ್’ ಸಂಬಂಧ
ಶ್ಯಾಂ ಬೆನಗಲ್ ಅವರು ಮೂರ್ತಿ ಅವರೊಂದಿಗೆ ಕೆಲಸ ಮಾಡಿದ ಅನುಭವದಿಂದಲೇ ಮೇಲಿನ ಮಾತುಗಳನ್ನು ಹೇಳಿದ್ದಾರೆನ್ನುವುದು ಗಮನಾರ್ಹ. ಆ ಕುರಿತು ಅವರ ಮಾತುಗಳಿವು: “ನಾನು ಇದಕ್ಕೆ ಮೊದಲು ಮೂರ್ತಿ ಅವರನ್ನು ನೋಡಿದ್ದರೂ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದು ೧೯೮೮ರಲ್ಲಿ, ‘ಭಾರತ್ ಏಕ್ ಖೋಜ್’ ಧಾರಾವಾಹಿ ಮಾಡುವ ಸಾಹಸಕ್ಕೆ ಕೈಹಾಕಿದಾಗ. ಆ ಧಾರಾವಾಹಿಯಲ್ಲಿ ನಾನು ಟಿವಿ ನಿರ್ಮಾಪಕರು ಯಾರೂ ಅದುವರೆಗೆ ಮಾಡದ ಒಂದು ಕೆಲಸವನ್ನು ಮಾಡಿದೆ. ಇಡೀ ಧಾರಾವಾಹಿಯನ್ನು ೩೫ ಎಂಎಂ ಫಿಲ್ಮ್ ಮೇಲೆ ಚಿತ್ರೀಕರಣ ಮಾಡಲು ನಿರ್ಧರಿಸಿದೆ. ಸಮಯ, ಹಣ ವಿಪರೀತ ಖರ್ಚಾಗುತ್ತದೆಂದು ಟಿವಿ ನಿರ್ದೇಶಕರು ಆ ಸಾಹಸಕ್ಕೆ ಕೈಹಾಕುತ್ತಿರಲಿಲ್ಲ. ಆದರೆ ನನ್ನ ನಿರ್ಧಾರಕ್ಕೆ ಕಾರಣಗಳಿದ್ದವು. ಅಂದಿನ ವಿಡಿಯೋ ತಂತ್ರಜ್ಞಾನದಿಂದ ಆಗುವ ಪಿಕ್ಚರ್ ಮತ್ತು ಸೌಂಡಿನ ಗುಣಮಟ್ಟ ಸಾಧಾರಣವಾಗಿರುತ್ತಿತ್ತು. ಇನ್ನೊಂದೇನೆಂದರೆ ಭಾರತದ ಇಡೀ ಇತಿಹಾಸದ ಬಗ್ಗೆ ನಾನು ಮಾಡಿದ ಕೆಲಸ ಹೆಚ್ಚು ಕಾಲ ಉಳಿಯುವಂಥದ್ದಾಗಿರಬೇಕಿತ್ತು.
ಆಗ ನಾನು ಹುಡುಕುತ್ತಿದ್ದ ಛಾಯಾಗ್ರಾಹಕನಿಗೆ ಕೆಲವು ಗುಣಗಳು ಅಗತ್ಯವಾಗಿ ಇರಬೇಕಿತ್ತು. ನನಗೆ ಬೇಕಾಗಿದ್ದದ್ದು ಒಬ್ಬ ಫಸ್ಟ್ ಕ್ಲಾಸ್ ಕ್ಯಾಮೆರಾಮನ್; ಬರೀ ‘ಪರವಾಗಿಲ್ಲ, ಕೆಲಸ ಮಾಡುತ್ತಾರೆ’ ಅನ್ನಿಸಿಕೊಂಡವರಲ್ಲ. ಜೊತೆಗೆ ಚಿತ್ರೀಕರಣದಲ್ಲಿ ಸೀರಿಯಲ್ ಉದ್ದಕ್ಕೂ ಒಬ್ಬನೇ ನಿರ್ದೇಶಕ, ಒಬ್ಬನೇ ಕ್ಯಾಮೆರಾಮನ್ ದುಡಿಯಬೇಕಾಗಿತ್ತು. ಒಂದು ಗಂಟೆಯ ೫೩ ಎಪಿಸೋಡ್ಗಳನ್ನು ಶೂಟ್ ಮಾಡಿದಾಗ ಇದು ಸುಲಭವಲ್ಲ, ಜೊತೆಗೆ ನಿಷ್ಠೆಯಿಂದ ಕೆಲಸ ಮಾಡುವವರು ಬೇಕಿತ್ತು. ಈ ವಿಷಯದಲ್ಲಿ ಮೂರ್ತಿಯವರನ್ನು ಮೀರಿಸುವವರು ಯಾರೂ ಇಲ್ಲ. ಅವರಿಗೆ ತಾವು ಮಾಡುವ ಕೆಲಸದಲ್ಲಿ ಯಾವಾಗಲೂ ಶೇ.೧೦೦ ಕಮಿಟ್ಮೆಂಟ್ (ಬದ್ಧತೆ) ಇರುತ್ತದೆ. ಅವರೆಂದೂ ತಡವಾಗಿ ಬರುವುದು, ತಮ್ಮ ಬದಲಿಗೆ ಇನ್ನೊಬ್ಬ ಕ್ಯಾಮೆರಾಮೆನ್ ಕಳಿಸುವುದು ಅವೆಲ್ಲ್ಲ ಮಾಡಿದ್ದು ನಾವು ಕೇಳಿಯೇ ಇಲ್ಲ. ಜೊತೆಗೆ ಭಾರತೀಯ ಚಿತ್ರರಂಗದಲ್ಲಿ ನಾನು ನೋಡಿ ಮೆಚ್ಚಿದ ಶ್ರೇಷ್ಠ ಗುಣಮಟ್ಟದ ಕೆಲಸ ಮಾಡಿದವರು ಮೂರ್ತಿ. ಗುರುದತ್ ಚಿತ್ರಗಳು ಮೂಡಿಬಂದ ರೀತಿಯನ್ನು ನಾನು ಅಗಾಧವಾಗಿ ಮೆಚ್ಚಿದ್ದೆ. ಆ ಚಿತ್ರಗಳು ಹಾಗೆ ಬರಲು ಮುಖ್ಯ ಕಾರಣ ಮೂರ್ತಿ ಅವರ ಕೌಶಲ. ಹೀಗಾಗಿ ನಾನು ‘ಭಾರತ್ ಏಕ್ ಖೋಜ್’ ಛಾಯಾಗ್ರಾಹಕರಾಗಿ ಮೂರ್ತಿ ಅವರನ್ನೇ ಆಯ್ಕೆ ಮಾಡಿದೆ” ಎಂದಿದ್ದಾರೆ ಶ್ಯಾಂ ಬೆನಗಲ್ (ನೋಡಿ-ಉಮಾರಾವ್ ಅವರ ಪುಸ್ತಕ ‘ಬಿಸಿಲುಕೋಲು’, ಪ್ರಕಾಶಕರು ಪ್ರಿಸಮ್ ಬುಕ್ಸ್ ಪ್ರೈ.ಲಿ.).
ರಜೆಯಿಲ್ಲದೆ ಕೆಲಸ
ಮುಂದುವರಿದು, “೧೯ ತಿಂಗಳ ಶೂಟಿಂಗ್ನಲ್ಲಿ ಭಾನುವಾರಗಳನ್ನು ಬಿಟ್ಟರೆ ಮೂರ್ತಿ ಒಂದು ದಿನವೂ ರಜೆ ತೆಗೆದುಕೊಳ್ಳಲಿಲ್ಲ. ಅವರು ವಯಸ್ಸಿನಲ್ಲೂ ಆಗ ಸಣ್ಣವರಾಗಿರಲಿಲ್ಲ (೬೬-೬೭ ವರ್ಷ). ಆದರೆ ಮೂರ್ತಿ ಸಣ್ಣ ವಯಸ್ಸಿನ ಕೆಲಸಗಾರರಷ್ಟೇ ಉತ್ಸಾಹದಿಂದ ದುಡಿಯುತ್ತಿದ್ದರು. ಒಂದು ದಿನವೂ ಸುಸ್ತೆಂದಿದ್ದು ನನಗೆ ನೆನಪಿಲ್ಲ. ೫೩ ಗಂಟೆಗಳ ಟಿವಿ ಫುಟೇಜ್, ಜೊತೆಗೆ ಅಷ್ಟೊಂದು ನಟರು, ಅಷ್ಟೊಂದು ಸೆಟ್ಗಳು, ಬೇರೆ ಬೇರೆ ಕತೆಗಳು. ಎಲ್ಲ ಸಂಚಿಕೆಗಳನ್ನು ಸೇರಿಸಿದರೆ ಎಷ್ಟೋ ಪೂರ್ಣ ಅವಧಿಯ ಫಿಲ್ಮ್ಗಳನ್ನು ಶೂಟ್ ಮಾಡಿದಷ್ಟು!” ಎಂದಿದ್ದಾರೆ ಶ್ಯಾಂ ಬೆನಗಲ್.
ಇನ್ನು ಖ್ಯಾತ ಛಾಯಾಗ್ರಾಹಕ, ನಿರ್ದೇಶಕ ಗೋವಿಂದ ನಿಹಲಾನಿ ಅವರಂತೂ ವಿ.ಕೆ. ಮೂರ್ತಿ ಅವರ ಶಿಷ್ಯ ಎಂದು ಹೇಳಿಕೊಳ್ಳಲು ಹೆಮ್ಮೆಪಟ್ಟವರು. ಅವರು ಮೂರ್ತಿಯವರನ್ನು ಕುರಿತು “ಮೂರ್ತಿ ಅವರು ಚಿತ್ರರಂಗಕ್ಕೆ ಕೊಟ್ಟ ದೊಡ್ಡ ಕೊಡುಗೆಯೆಂದರೆ ಛಾಯಾಗ್ರಹಣವು ರಮ್ಯೀಕರಣವಿಲ್ಲದೆಯೇ ಸುಂದರವಾಗಿರಬಹುದು, ಕಲಾತ್ಮಕವಾಗಿರಬಹುದು ಎಂದು ತೋರಿಸಿದ್ದು. ಹಿಂದಿ ಸಿನೆಮಾದ ‘ಆಧುನಿಕ ಯುಗ’ ಪ್ರಾರಂಭವಾಗುವುದು ಇಲ್ಲಿಂದಲೇ. ‘ಪ್ಯಾಸಾ’ ಮತ್ತು ‘ಕಾಗಜ್ ಕೇ ಫೂಲ್’ ಚಿತ್ರಗಳು ಛಾಯಾಗ್ರಾಹಕರಿಗೆ ಬೇರೆ ಬೇರೆ ಸಾಧ್ಯತೆಗಳ ಅರಿವು ಮೂಡಿಸಿ ಹೊಸ ಜಗತ್ತಿನ ಬಾಗಿಲು ತೆರೆದ ಚಿತ್ರಗಳು. ಆವರೆಗೆ ಇದ್ದ ಸಾಂಪ್ರದಾಯಿಕ ಸಂಕೋಲೆಗಳಿಂದ ಮುಕ್ತಿ ನೀಡಿದ ಚಿತ್ರಗಳು” ಎಂದಿದ್ದಾರೆ.
ಸ್ವಾತಂತ್ರ್ಯೋತ್ತರ ಭಾರತದ ಅತಿ ಮಹತ್ತ್ವದ ಚಿತ್ರಗಳಲ್ಲಿ ಒಂದಾದ ‘ತಮಸ್’ಗೆ (ಭೀಷ್ಮ ಸಾಹನಿ ಕಾದಂಬರಿ ಆಧಾರಿತ) ನಿಹಲಾನಿ ಮೂರ್ತಿಸಾಬ್ ಅವರ ನೆರವು ಪಡೆಯಲು ಬಯಸಿದರು. ದೇಶದ ವಿಭಜನೆಯ ಕಥೆಯನ್ನು ಒಳಗೊಂಡ ಆ ಚಿತ್ರದಲ್ಲಿ ನೂರಾರು ಪಾತ್ರಗಳು, ವಸ್ತುವಿನ ಸಂಕೀರ್ಣತೆ ಎಲ್ಲ ಇತ್ತು. “ಮೂರ್ತಿಸಾಬ್ ಅವರನ್ನು ಕೇಳುವುದಕ್ಕೆ ಸ್ವಲ್ಪ ಹಿಂಜರಿಕೆ ಇತ್ತು. ಎಷ್ಟಾದರೂ ಅವರು ನನ್ನ ಗುರು. ಆದರೆ ನನ್ನ ಮತ್ತು ಅವರ ಶೈಲಿಯಲ್ಲಿ ಸಾಮ್ಯ ಇರುವುದರಿಂದ ಯಾವ ಗೊಂದಲಗಳೂ ಬರಲಾರವು ಎಂಬ ಭರವಸೆಯೂ ಇತ್ತು. ಅವರು ತಮ್ಮ ಎಂದಿನ ದೊಡ್ಡಗುಣದಿಂದ ಒಪ್ಪಿಕೊಂಡರು” ಎಂದಿದ್ದಾರೆ.
ಮುಂದುವರಿದು, “ಮೂರ್ತಿಸಾಬ್ ಸೆಟ್ ಮೇಲಿದ್ದರೆ ಅಲ್ಲಿಯ ವಾತಾವರಣಕ್ಕೆ ಒಂದು ಗಾಂಭೀರ್ಯ ಬಂದುಬಿಡುತ್ತದೆ. ಅವರು ಅಷ್ಟು ಹಿರಿಯ, ಗೌರವಾನ್ವಿತ ಕ್ಯಾಮೆರಾಮೆನ್ ಆದ್ದರಿಂದ ಅವರು ಅಲ್ಲಿ ನಡೆದುಬಂದ ಕೂಡಲೆ ಒಂದು ರೀತಿಯ ಶಿಸ್ತು ಎಲ್ಲ ಕಡೆ ಕಾಣತೊಡಗುತ್ತದೆ. ಅವರು ತುಂಬ ಸ್ನೇಹಮಯಿ. ಕೆಲಸ ಮಾಡುವ ಜನ ಮತ್ತು ಕೆಲಸದ ಬಗ್ಗೆ ಅವರ ನಿಲವು ಎಷ್ಟು ಸಕಾರಾತ್ಮಕವಾಗಿರುತ್ತದೆಂದರೆ ಅವರಿದ್ದಾಗ ಎಲ್ಲರಿಗೂ ಒಂದು ರೀತಿಯ ಧೈರ್ಯ ಇರುತ್ತದೆ; ಸುರಕ್ಷಾ ಭಾವನೆ ಇರುತ್ತದೆ. ಯಾರಾದರೂ ಸರಿಯಾಗಿ ಕೆಲಸ ಮಾಡದಿದ್ದರೆ ಅವರಿಗೆ ಕಿರಿಕಿರಿಯಾಗುತ್ತದೆ ಎನ್ನುವುದು ನಿಜ. ಆದರೆ ಆ ವಿಷಯದಲ್ಲಿಯೂ ಅವರು ಸ್ಪಂದಿಸುವುದು ತುಂಬಾ ಪಾಸಿಟಿವ್ ಆಗಿಯೇ. ಅವರನ್ನು ಕರೆದು ಏನು ತಪ್ಪಾಗಿದೆ ಎಂದು ನಿಧಾನವಾಗಿ ವಿವರಿಸಿ ಅದನ್ನು ಸರಿಪಡಿಸುವುದು ಹೇಗೆಂದು ತಿಳಿಸುತ್ತಾರೆ” ಎಂದಿದ್ದಾರೆ.
ಇನ್ನು ವಿ.ಕೆ. ಮೂರ್ತಿ ಅವರೆಂದರೆ ಚಿತ್ರನಿರ್ದೇಶಕ ಗುರುದತ್ (ಪಡುಕೋಣೆ) ಅವರ ಹೆಸರು ಬರಲೇಬೇಕು. ಮೇಲೆ ಹೇಳಿದ ‘ಪ್ಯಾಸಾ’, ‘ಕಾಗಜ್ ಕೇ ಫೂಲ್’ ಮತ್ತು ‘ಸಾಹಿಬ್ ಬಿಬೀಬಿ ಔರ್ ಗುಲಾಮ್’ ಚಿತ್ರಗಳ ನಿರ್ದೇಶಕರು ಅವರು. ಚಲನಚಿತ್ರದ ಆಧುನಿಕಯುಗಕ್ಕೆ ಅವು ಯಾವ ರೀತಿಯಲ್ಲಿ ಬಾಗಿಲು ತೆರೆದವೋ ಅದರಲ್ಲಿ ನಿರ್ದೇಶಕ ಗುರುದತ್ ಪಾತ್ರವೆಷ್ಟು ಮತ್ತು ಛಾಯಾಗ್ರಾಹಕ ವಿ.ಕೆ. ಮೂರ್ತಿ ಅವರ ಕೊಡುಗೆಯೆಷ್ಟು ಎನ್ನುವುದು ಗಂಭೀರ ಅಧ್ಯಯನದ ವಿಷಯವೇ ಆಗಬಹುದು.
ಮೂರ್ತಿ ಅವರ ಸಾಧನೆಗೆ ಕಲಶವಿಟ್ಟಂತೆ ಅವರಿಗೆ ೨೦೦೮ರಲ್ಲಿ ಚಲನಚಿತ್ರರಂಗದ ದೇಶದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ವಿಶೇಷವೆಂದರೆ ಈ ಪ್ರಶಸ್ತಿಗೆ ಪಾತ್ರರಾದ ದೇಶದ ಮೊದಲ ತಂತ್ರಜ್ಞ ಹಾಗೂ ಮೊದಲ ಚಲನಚಿತ್ರ ಛಾಯಾಗ್ರಾಹಕ ಅವರಾಗಿದ್ದರು. ೨೦೧೦ರಲ್ಲಿ ನವದೆಹಲಿಯಲ್ಲಿ ಜರಗಿದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ‘ಉತ್ಕೃಷ್ಟ ಜೀವಮಾನದ ಸಾಧನೆಗಾಗಿ’ ಮೂರ್ತಿಯವರಿಗೆ ಈ ಪ್ರಶಸ್ತಿಯನ್ನು ನೀಡಿದರು.
ಈ ಮಹೋನ್ನತ ಸಾಧನೆಯನ್ನು ತಮ್ಮದಾಗಿಸಿಕೊಂಡ ಮೂರ್ತಿ ಅವರಿಗೆ, ಅವರ ಕುಟುಂಬಕ್ಕೆ ಚಲನಚಿತ್ರದ ಹಿನ್ನೆಲೆಯೇನಾದರೂ ಇತ್ತೇ ಎಂದು ಕೇಳಿದರೆ ಇಲ್ಲ ಎನ್ನುವ ಉತ್ತರವೇ ಸಿಗುತ್ತದೆ. ಅಂತಹ ಹಿನ್ನೆಲೆ ಇಲ್ಲದಿದ್ದುದು ಮಾತ್ರವಲ್ಲ; ಅದನ್ನು ಕಲಿಯುವುದಕ್ಕೆ ಬೇಕಾದ ಸಾಧನ-ಸಂಪತ್ತುಗಳಾಗಲಿ, ಪರಿಕರ-ಅನುಕೂಲಗಳಾಗಲಿ ಕೂಡಾ ಅವರಿಗೆ ಇರಲಿಲ್ಲ. ವಿದ್ಯೆಯ ಒಂದು ಕ್ಷೇತ್ರದ ಬಗೆಗಿನ ಎಣೆಯಿಲ್ಲದ ಆಸಕ್ತಿ ಮತ್ತು ಕ್ರಿಯಾಶೀಲವಾದ ಮನಸ್ಸು-ವಿವೇಕಗಳೇ ಅವರನ್ನು ಆ ಮಟ್ಟದ ಸಾಧನೆಗೆ ಅರ್ಹರನ್ನಾಗಿ ಮಾಡಿದವು ಎಂದು ಒಪ್ಪಿಕೊಳ್ಳಲೇಬೇಕು.
ಬಾಲ್ಯ–ಬಡತನ
ವೆಂಕಟರಾಮಾ ಪಂಡಿತ್ ಕೃಷ್ಣಮೂರ್ತಿ ಇದು ಮೂರ್ತಿ ಅವರ ಪೂರ್ಣ ಹೆಸರು. ತಂದೆ ವೆಂಕಟರಾಮಾ ಪಂಡಿತ್, ತಾಯಿ ನಾಗಮ್ಮ. ಐವರು ಮಕ್ಕಳು; ಇಬ್ಬರು ಗಂಡು, ಮೂವರು ಹೆಣ್ಣು. ಮಧ್ಯದವರಾದ ಮೂರ್ತಿಗೆ ಓರ್ವ ಅಣ್ಣ, ಒಬ್ಬಾಕೆ ಅಕ್ಕ; ಇಬ್ಬರು ತಂಗಿಯರು. ತಂದೆ ಸರ್ಕಾರೀ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರು. ಕುಟುಂಬದ ವಾಸ ಮೈಸೂರಿನ ಲಕ್ಷ್ಮೀಪುರಂನಲ್ಲಿ. ಆವರಣದಲ್ಲಿದ್ದ ಸಂಪಿಗೆ ಮರಗಳಿಂದಾಗಿ ಮನೆಗೆ ‘ಸಂಪಿಗೆ ಮನೆ’ ಎಂದು ಹೆಸರು. ಮುಖ್ಯ ಮನೆಯನ್ನು ಬಾಡಿಗೆಗೆ ಕೊಟ್ಟು ಕುಟುಂಬ ಔಟ್ಹೌಸಿನಲ್ಲಿತ್ತು.
ಕೃಷ್ಣಮೂರ್ತಿ ಎನ್ನುವ ಹೆಸರು ಮನೆಯವರಿಗೆ ಮತ್ತು ಆಚೀಚಿನವರಿಗೆ ಕುಟ್ಟಿ ಆಗಿತ್ತು. ತಾಯಿಗೆ ಯಾವಾಗಲೂ ಅನಾರೋಗ್ಯ. ಕುಟ್ಟಿಗೆ ೮-೯ ವರ್ಷವಿದ್ದಾಗ ಆಕೆ ತೀರಿಕೊಂಡರು. ಆಗ ಸಣ್ಣ ಮಗುವಿಗೆ ಹನ್ನೊಂದು ತಿಂಗಳು. ಮೂರ್ತಿ ಅಕ್ಕನಿಗೆ ಮದುವೆಯಾಗಿತ್ತು. ಪುಟ್ಟ ಮಗು ಸೇರಿದಂತೆ ಇಬ್ಬರು ತಂಗಿಯರನ್ನು ದೊಡ್ಡಮ್ಮ ಕರೆದುಕೊಂಡು ಹೋಗಿ ಸಾಕಿದರು. ತಂದೆ ಮತ್ತು ಇಬ್ಬರು ಗಂಡುಮಕ್ಕಳು ಮೈಸೂರಿನಲ್ಲಿ ಉಳಿದರು.
ತಂದೆ ಮತ್ತೆ ಮದುವೆಯಾಗಲಿಲ್ಲವಾದರೂ ಅವರ ಜೀವನಶೈಲಿ ಒಂಥರಾ ಇತ್ತು. ಸಂಜೆ ೬ ಗಂಟೆಗೆ ಆಫೀಸು ಬಿಟ್ಟ ತಂದೆ ಸ್ನೇಹಿತರ ಭೇಟಿ, ಮಾತುಕತೆ ಎಲ್ಲ ಮುಗಿಸಿ ರಾತ್ರಿ ೮.೩೦ರ ಹೊತ್ತಿಗೆ ಮನೆಗೆ ಬರುತ್ತಿದ್ದರು. ಸಂಜೆಗಳು ಈ ಮಕ್ಕಳನ್ನು ಸಿನೆಮಾದತ್ತ ಎಳೆದವು. ಸುಬ್ಬರಾಮಯ್ಯ ಎನ್ನುವ ಕುಟ್ಟಿಯ ಬಂಧು ಸಿನೆಮಾಹಾಲ್ನಲ್ಲಿ ಹಾರ್ಮೋನಿಯಂ ನುಡಿಸುತ್ತಿದ್ದ. ಆಗ ಮೂಕಿಚಿತ್ರಗಳ ಕಾಲ. ತೆರೆಯ ಮೇಲೆ ಮೂಕಿಚಿತ್ರದ ಪ್ರದರ್ಶನ ನಡೆಯುವಾಗ ಸಿನೆಮಾಹಾಲ್ನ ಬದಿಯಲ್ಲಿ ಆರ್ಕೆಸ್ಟಾç ಇರುತ್ತಿತ್ತು; ಹಾರ್ಮೋನಿಯಂ, ವಯೊಲಿನ್, ತಬಲಾಗಳ ಹಿಮ್ಮೇಳ.
ಸಿನೆಮಾ ಗೀಳು
ತಾಯಿ ಇಲ್ಲದ ಹುಡುಗನೆಂದು ಕುಟ್ಟಿಯ ಬಗೆಗೆ ಚಿತ್ರಮಂದಿರದ ಸಿಬ್ಬಂದಿಗಳಲ್ಲೂ ಒಂದು ಬಗೆಯ ಮಮಕಾರವಿತ್ತು. ಅದೇ ಸುಲಭದ ಸಿನೆಮಾ ವೀಕ್ಷಣೆಗೆ ಸಹಾಯವಾಯಿತು. ಮನೆಯಲ್ಲಿ ಅಣ್ಣ-ತಮ್ಮ ಅಡುಗೆ ಮಾಡಲು ಕಲಿಯುವುದು ಅನಿವಾರ್ಯವಾಯಿತು. ಅಕ್ಕನ ಮನೆ ಸಮೀಪವೇ ಇದ್ದ ಕಾರಣ ಹಬ್ಬದ ಸಂದರ್ಭಗಳಲ್ಲಿ ಆಕೆ ಬಂದು ಎಲ್ಲ ಸೇರಿ ಅಡುಗೆ ಮಾಡುತ್ತಿದ್ದರು. ದಿನದ ಅಡುಗೆ ಕ್ರಮೇಣ ಪೂರ್ತಿ ತಮ್ಮನ ಪಾಲಿಗೇ ಬಂತು. ಅಡುಗೆಯೆಂದರೆ ಅನ್ನ-ಸಾರು. ತರಕಾರಿ ಇದ್ದರೆ ಸಾರಿಗೇ ಹಾಕಿಬಿಡುವುದು.
ಸಿನೆಮಾದ ಮಾಂತ್ರಿಕ ವಾತಾವರಣವು ಬಾಲಕ ಕುಟ್ಟಿಯ ಮೇಲೆ ಮೋಡಿ ಮಾಡಿತು. ಆದಷ್ಟು ಸಿನೆಮಾ ನೋಡಿ ರಾತ್ರಿ ತಂದೆ ಮನೆಗೆ ಬರುವ ಮುನ್ನ ಮನೆಗೆ ಬಂದು ಸೇರಿಕೊಳ್ಳುತ್ತಿದ್ದ. ಸಿನೆಮಾ ಮೂಕಿಯಿಂದ ಟಾಕಿಗೆ ಬಂದಾಗ ಅದೊಂದು ದೊಡ್ಡ ಉತ್ಸಾಹದ ಬದಲಾವಣೆಯಾಗಿತ್ತು. ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಎಲ್ಲ ಬಗೆಯ ಚಿತ್ರಗಳು ಬರಲಾರಂಭಿಸಿದವು. ಮೊದಲು ಹಿಂದಿ, ಇಂಗ್ಲಿಷ್, ತಮಿಳು ಚಿತ್ರಗಳು ಬರುತ್ತಿದ್ದವು; ಕನ್ನಡ ಇರಲಿಲ್ಲ. ಹೆಚ್ಚಾಗಿ ಬರೇ ಆ್ಯಕ್ಷನ್ ಪಿಕ್ರ್ಸ್. ತಲೆ ಕತ್ತರಿಸುವುದನ್ನು ಕೂಡ ತೋರಿಸುತ್ತಿದ್ದರು. “ಅದು ತುಂಬ ನೈಜ ಆಗಿರುತ್ತಿತ್ತು; ನನಗೆ ಮರೆಯುವುದಕ್ಕೇ ಆಗುವುದಿಲ್ಲ” ಎಂಬುದು ವಿ.ಕೆ. ಮೂರ್ತಿ ಅವರ ಉದ್ಗಾರ. ಮೋತಿಲಾಲ್, ಈಶ್ವರಲಾಲ್, ಶಾಂತಾ ಆಪ್ಟೆ, ದುರ್ಗಾಖೋಟೆ ಆಗಿನ ಸ್ಟಾರ್ಗಳು. ಮೋತಿಲಾಲ್, ಸಬಿತಾದೇವಿ ಒಳ್ಳೆಯ ಜೋಡಿ. ಟಾಕಿ ಸಿನೆಮಾ ಬಂದಾಗ ಹಾಲ್ನಲ್ಲಿ ಆರ್ಕೆಸ್ಟ್ರಾ ನುಡಿಸುತ್ತಿದ್ದವರ ಉದ್ಯೋಗಕ್ಕೆ ಕತ್ತರಿ ಬಿತ್ತು. ಚಿತ್ರಮಂದಿರದ ಯಾವಾವುದೋ ಕೆಲಸಗಳಲ್ಲಿ ಸಾಧ್ಯವಾದವರಿಗೆ ಉದ್ಯೋಗ ನೀಡಿದರು ಎಂಬುದು ಮೂರ್ತಿ ನೆನಪು.
ಲಕ್ಷ್ಮೀಪುರಂ ಪ್ರಾಥಮಿಕ ಶಾಲೆಯಲ್ಲಿ ಅವರ ಮೊದಲ ಓದು; ಮತ್ತೆ ಬನುಮಯ್ಯಸ್ ಮಿಡ್ಲ್ ಸ್ಕೂಲ್. ಹೈಸ್ಕೂಲ್ ವಿದ್ಯಾಭ್ಯಾಸ ಇಂಗ್ಲಿಷ್ ಮಾಧ್ಯಮದಲ್ಲಿ ನಡೆಯಿತು. ಸಮವಸ್ತ್ರದಲ್ಲಿ ಕೋಟು ಕಡ್ಡಾಯ, ಕರಿ ಟೋಪಿ ಇರುತ್ತಿತ್ತು; ಮುಂದೆ ಗಾಂಧಿ ಟೋಪಿಗೆ ಕೂಡ ಒಪ್ಪಿಗೆ ಕೊಟ್ಟರು. “ಒಂದು ಸಲ ನಾವು ಏಳೆಂಟು ಹುಡುಗರು ಸೈಕಲ್ ಮೇಲೆ ಶ್ರವಣಬೆಳಗೊಳಕ್ಕೆ ಹೋಗಿದ್ದೆವು. ಯಾರೋ ೩೦ ಮೈಲು ಅಂದಿದ್ದರು. ಅದು ನೋಡಿದರೆ ೧೦೦ ಮೈಲಿಗಿಂತ ಹೆಚ್ಚಿತ್ತು. ಬೆಳಗ್ಗೆ ಹೊರಟವರು ಸೇರಿದ್ದು ರಾತ್ರಿ” – ಇದೊಂದು ಅನುಭವ. ಕುಟ್ಟಿಗೆ ಈಜುವುದೆಂದರೆ ಮೊದಲಿನಿಂದ ಹುಚ್ಚು; ಈಜಲು ಶ್ರೀರಂಗಪಟ್ಟಣ ಮುಂತಾದೆಡೆಗೆ ಹೋಗುತ್ತಿದ್ದರು. ಒಮ್ಮೆ ಸರ್ಕಸ್ನಂತೆ ಸೈಕಲ್ ಜಂಪಿಂಗ್ ಮಾಡಿ ಗಾಯ ಮಾಡಿಕೊಂಡಿದ್ದರು. ಅವರ ತಂಗಿಯರು ದೂರ ಇದ್ದರು. ಕಲಿತದ್ದು ಸಹ ವ್ಯವಸ್ಥೆಯಲ್ಲಿ ಅಲ್ಲ. ಆದ್ದರಿಂದ ಹುಡುಗಿಯರೆಂದರೆ ನಾಚಿಕೆ. “ಹಾಗಾಗಿ ಫಿಲ್ಮ್ ಇಂಡಸ್ಟ್ರಿಗೆ ಬಂದ ಮೇಲೆ ಕೂಡ ನಾನು ಫ್ರೀಯಾಗಿ ಹೆಂಗಸರ ಜೊತೆ ಮಾತನಾಡುತ್ತಿದ್ದದ್ದು ತುಂಬಾ ಕಡಮೆ. ಏನಾದರೂ ಕಾರಣವಿದ್ದರೆ ಮಾತ್ರ ಮಾತು. ಇಲ್ಲವಾದರೆ ನನ್ನ ಪಾಡಿಗೆ ನಾನು ಇರುತ್ತಿದ್ದೆ” ಎಂದಿದ್ದರು ಮೂರ್ತಿ.
ಸಂಗೀತದತ್ತ ಒಲವು
ಮಿಡ್ಲ್ ಸ್ಕೂಲ್ನಲ್ಲಿದ್ದಾಗ ಕುಟ್ಟಿಗೆ ಸಂಗೀತದ ಮೇಲೆ ಆಕರ್ಷಣೆ ಬಂತು. ಮುಂದಿನ ಮನೆಗೆ ಸಂಗೀತ ಕಲಿಸಲು ವಯೊಲಿನ್ ಗುರುಗಳು ಬಂದರೆ ಈತ ಹೋಗಿ ಅಲ್ಲಿ ಕುಳಿತುಬಿಡುತ್ತಿದ್ದ. ವಯೊಲಿನ್ ಬೇಡ; ಶಾಲೆಯದ್ದು ಓದು ಎಂದು ತಂದೆ ಬುದ್ಧಿವಾದ ಹೇಳಿದರು.
ಆದರೆ ಆತ ಕೇಳಬೇಕಲ್ಲ! ವರ್ಷವಾದ ಮೇಲೆ ‘ಕಲಿತುಕೋ’ ಎಂದು ತಂದೆ ವಯೊಲಿನ್ ಕೊಡಿಸಿದರು. ಅದಕ್ಕೆ ಮೂರು ರೂಪಾಯಿ; ರಿಪೇರಿ ಅಂಗಡಿಯಿಂದ ಖರೀದಿಸಿದ್ದು. ಶಂಕರಪ್ಪ ಎಂಬವರು ವಯೊಲಿನ್ ಗುರುಗಳು. ಸುತ್ತಲಿನ ಕೆಲವು ಹುಡುಗರಿಗೂ ಸಂಗೀತದಲ್ಲಿ ಆಸಕ್ತಿ ಬಂದು ಅವರೂ ಕಲಿಯತೊಡಗಿದರು. ಒಟ್ಟು ಸೇರಿ ಅಭ್ಯಾಸ ಮಾಡುವುದು, ರೇಡಿಯೊ, ಗ್ರಾಮೋಫೋನ್ ಕೇಳುವುದು, ರಾಮೋತ್ಸವ ಕಛೇರಿಗಳಿಗೆ ಹೋಗುವುದು, ಬಿಡಾರಂ ಕೃಷ್ಣಪ್ಪ, ಚೌಡಯ್ಯ ಕಾರ್ಯಕ್ರಮಗಳಿಗೆ ತಪ್ಪದೆ ಹೋಗುವುದು – ಎಲ್ಲ ನಡೆಯಿತು.
ಮಹಾರಾಣೀಸ್ ಹೈಸ್ಕೂಲಿನಲ್ಲಿ ಶಾಸ್ತ್ರೀಯ ಸಂಗೀತವನ್ನು ಒಂದು ಐಚ್ಛಿಕ ವಿಷಯವಾಗಿ ಕಲಿಯುವ ಅವಕಾಶ ಒದಗಿತು. ತಂದೆಯಲ್ಲಿ ಕೇಳಿದಾಗ ‘ನಿನಗೆ ಆಸಕ್ತಿ ಇದ್ದರೆ ತೆಗೆದುಕೋ’ ಎಂದರು. ಗಾಯನಕ್ಕಿಂತ ವಯೊಲಿನ್, ವೀಣೆ ಕಲಿಕೆ ಇಷ್ಟವೆನಿಸಿತು. ಹಾಡಲು ಸಂಕೋಚ. ವಯೊಲಿನ್ ಕಲಿತರು. ಪರೀಕ್ಷಕರಾಗಿ ವೆಂಕಟಗಿರಿಯಪ್ಪ, ದೇವೇಂದ್ರಪ್ಪ ಬಂದಿದ್ದರು. ಶಾಲಾ ಕಲಿಕೆಯಲ್ಲಿ ಮೂರ್ತಿ ಸಾಮಾನ್ಯ ವಿದ್ಯಾರ್ಥಿ. ಗಮನವೆಲ್ಲ ಸಂಗೀತ, ನಾಟಕ, ಸಿನೆಮಾಗಳತ್ತ ಹೋಗಿತ್ತು. ಮಹಾರಾಣೀಸ್ನಲ್ಲಿ ಆರ್ಕೆಸ್ಟ್ರಾ ಮಾಡಿದರು. ಅದರಲ್ಲಿ ಏಳೆಂಟು ವಿದ್ಯಾರ್ಥಿಗಳಿದ್ದರು. ಮೂರ್ತಿಯೇ ಮುಖ್ಯ ವಾದಕ (ಮೇನ್ ಪ್ಲೇಯರ್).
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ. ರಾಮನ್ ಮಾತನಾಡಿಸಿದರು. ಸ್ಪೆಷಲ್ಲಾಗಿ ಮೂರ್ತಿ ಹೆಸರನ್ನು ಹೇಳಿ ಹೊಗಳಿದರು. ಅನಂತರ ಈತನ ಸಂಗೀತಾಭ್ಯಾಸ ಸೀರಿಯಸ್ಸಾಗಿ ನಡೆಯಿತು. ಅಣ್ಣನ ಮದುವೆಯಾಗಿ ಉದ್ಯೋಗದ ನಿಮಿತ್ತ ಬೇರೆ ಕಡೆ ಹೋದ ಮೇಲೆ ಮನೆಯಲ್ಲಿ ತಂದೆ-ಮಗ ಇಬ್ಬರೇ.
ಜಾಹೀರಾತು ನೋಡಿ ಮುಂಬಯಿಗೆ
ಕುಟ್ಟಿಯ ಸಿನೆಮಾ ಆಕರ್ಷಣೆ ಯಾವ ರೀತಿ ಇತ್ತೆಂದರೆ ಇನ್ನೂ ಎಸ್ಸೆಸ್ಸೆಲ್ಸಿ ಆಗುವಾಗಲೇ ಪತ್ರಿಕೆಯಲ್ಲಿ ಬಂದ ಪ್ರಭಾತ್ ಮೂವಿಟೋನ್ ಎಂಬ ಕಾಲೇಜಿನ ಜಾಹೀರಾತು ನೋಡಿ ಆಕರ್ಷಿತನಾದ. ಮುಂಬಯಿಯ ಸಂಸ್ಥೆ. ನಟನೆ, ನಿರ್ದೇಶನ, ಸಿನಿಛಾಯಾಗ್ರಹಣಗಳಲ್ಲಿ ಆರು ತಿಂಗಳ ತರಬೇತಿ ಎಂದಿತ್ತು. ಬ್ರೋಶರ್ ತರಿಸಿ ನೋಡಿದ್ದೂ ಆಯಿತು. ತಂದೆಯಲ್ಲಿ ಹೇಳಿದಾಗ ಬೇಡ ಎಂದು ಬೈದರು. ಆದರೂ ಅವರಿವರಲ್ಲಿ ಕೇಳಿ ೪೦ ರೂ. ಸಂಗ್ರಹಿಸಿ ೧೨ ರೂ. ಟಿಕೆಟ್ ಕೊಂಡು ಮುಂಬಯಿ ರೈಲು ಹತ್ತಿದ್ದಾಯಿತು. ಇನ್ನೂ ೧೫-೧೬ ವರ್ಷದ ಹುಡುಗ.
ಅಲ್ಲಿ ಉಳಿದುಕೊಳ್ಳುವ ಬಗ್ಗೆ ಬಂಧುವಾದ ಪೊಲೀಸ್ ಇನ್ಸ್ಪೆಕ್ಟರ್ ವಿ.ಆರ್. ರಾವ್ ಅವರನ್ನು ಭೇಟಿ ಮಾಡಿದಾಗ ಅದು ವಂಚಿಸುವ ನಕಲಿ ಸಂಸ್ಥೆ ಇರಬಹುದು ಎಂದರು. ಪರಿಶೀಲಿಸಿದಾಗ ಅದು ನಿಜವೇ ಆಗಿತ್ತು. ವಾಪಸು ಹೋಗುವುದೆಂದು ನಿರ್ಧರಿಸುವಾಗ ಏಕಾಂಗಿಯಾಗಿದ್ದ ಪೊಲೀಸ್ ಇನ್ಸ್ಪೆಕ್ಟರಿಗೆ ಟೈಫಾಯ್ಡ್ ಆಯಿತು. ಕುಟ್ಟಿ ಅವರನ್ನು ನೋಡಿಕೊಳ್ಳಲು ನಿಂತ. ಟೈಫಾಯ್ಡ್ ಆಗ ದೊಡ್ಡ ಕಾಯಿಲೆ. ಗುಣಮುಖರಾದ ಅವರು ಸುಮ್ಮನೆ ಮೈಸೂರಿಗೆ ವಾಪಸ್ಸಾಗಬೇಡ; ಅಪ್ರೆಂಟಿಸ್ ಕೆಲಸವಾದರೂ ಕೊಡಿಸುತ್ತೇನೆ ಎಂದರು. ಅಷ್ಟಾಗುವಾಗ ೨-೩ ತಿಂಗಳು ಕಳೆದಿತ್ತು. ಆ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬಿಟ್ಟದ್ದಾಯಿತು. ಆದ ಲಾಭವೆಂದರೆ ಅಂದಿನ (೧೯೩೮-೩೯) ಮುಂಬಯಿಯನ್ನು ನೋಡಿದ್ದು. ಒಂದಾಣೆ (ಆರು ಪೈಸೆ) ಟಿಕೆಟ್ ತೆಗೆದುಕೊಂಡರೆ ನಗರದಲ್ಲಿ ಇಡೀ ದಿನ ಸುತ್ತಬಹುದು. ಗಂಟೆಗಟ್ಟಲೆ ಸಮುದ್ರದ ಎದುರು ಕೂತಿರುವುದು, ಬೇಜಾರಾದರೆ ಸಿನೆಮಾ ನೋಡುವುದು (ಟಿಕೆಟಿಗೆ ೩-೪ ಆಣೆ). ನೋಡುವುದು ಇಂಗ್ಲಿಷ್ ಸಿನೆಮಾವೇ ಜಾಸ್ತಿ; ಕಾರಣ ಅಲ್ಲಿಯ ತಂತ್ರಗಳ ಆಕರ್ಷಣೆ. ಇರಾನಿ ಹೊಟೇಲ್ಗಳಲ್ಲಿ ಒಳ್ಳೆಯ ಟೀ, ಖಾರ ಬಿಸ್ಕತ್ತು ಸಿಗುತ್ತಿತ್ತು. ಆಗ ಮುಂಬಯಿಯಲ್ಲಿ ಬೆಂಗಳೂರಿನವರಿಗಿಂತ ಮಂಗಳೂರಿನವರೇ ಜಾಸ್ತಿ; ಮಾತುಂಗಾದಲ್ಲಿ ದಕ್ಷಿಣ ಭಾರತೀಯರು ತುಂಬಾ ಇದ್ದರು; ತಿರುಗಾಡುತ್ತಾ ಸಿನೆಮಾ ಸ್ಟುಡಿಯೋಗಳತ್ತ ಇಣುಕುವುದು; ಚಿತ್ರ ನಿರ್ಮಾಣವನ್ನು ನೋಡುವ ಆಸಕ್ತಿ. ಆದರೆ ಯಾರೂ ಒಳಗೆ ಬಿಡುತ್ತಿರಲಿಲ್ಲ. ವಾಚ್ಮನ್ಗಳು ‘ಜಾವೋ ಜಾವೋ’ ಎಂದು ಓಡಿಸುತ್ತಿದ್ದರು. ಮುಂದೆ ಛಾಯಾಗ್ರಾಹಕನಾಗಿ ಬಾಂಬೆ ಟಾಕೀಸ್ಗೆ ಶೂಟಿಂಗ್ಗೆ ಹೋದಾಗ ಒಬ್ಬ ವಾಚ್ಮೆನ್ ಬಂದು ಗುರುತು ಹಿಡಿದು, ಹಿಂದೆ ನಾನು ನಿಮ್ಮನ್ನು ಗೇಟಿನಿಂದ ಓಡಿಸಿದ್ದೆ ಎಂದನಂತೆ.
ಬರಿಗೈಲಿ ವಾಪಸ್
ಕೊನೆಗೆ ವಾಪಸ್ಸಾಗಲು ನಿರ್ಧರಿಸಿದ್ದಾಯಿತು. ಶಾಲೆಗೆ ಮತ್ತೆ ಸೇರಿಸಿಕೊಳ್ಳುತ್ತಾರೆಯೆ ಎನ್ನುವ ಭಯ. ಕೈಯಲ್ಲಿ ಸಾಕಷ್ಟು ಹಣ ಇಲ್ಲ. ಪುಣೆಗೆ ಹೋಗಿ ಅಲ್ಲಿಂದ ಅರಸೀಕೆರೆಗೆ ಹೋಗಿ ರೈಲಿನಲ್ಲಿ ಟಿ.ಸಿ.ಯಿಂದ ಸಿಕ್ಕಿ ಬಿದ್ದದ್ದೂ ಆಯಿತು. ಕೈಯಲ್ಲಿದ್ದ ೨-೩ ರೂ. ಆತ ತೆಗೆದುಕೊಂಡ. ಅರಸೀಕೆರೆಯಲ್ಲಿ ಸೋದರಮಾವ ಇದ್ದರು. ಅಲ್ಲಿ ಒಂದು ತಿಂಗಳು ಕಳೆದದ್ದಾಯಿತು. ಮೈಸೂರಿನಲ್ಲಿ ಮನೆಯವರಿಗಿಂತ ಸ್ನೇಹಿತರಿಗೆ ಮುಖ ತೋರಿಸಲು ನಾಚಿಕೆ, ಭಯ. ಮೈಸೂರಿಗೆ ತಲಪಿ ಚಿಪ್ಪಿನೊಳಗೆ ಸೇರಿಕೊಂಡ. ಮನೆಯಿಂದ ಹೊರಗೆ ಬರಲೇ ಇಲ್ಲ. ತಂದೆ ಒಂದು ವರ್ಷ ಸ್ಕೂಲು ಹೋಯಿತಲ್ಲ ಎಂದು ಸ್ವಲ್ಪ ಬೈದರು; ಅವರು ಆಗ ೩೦ ರೂ. ಪಿಂಚಣಿಯಲ್ಲಿದ್ದರು. ಆದರೆ ಹುಡುಗ ಕುಟ್ಟಿ ಅಂದು ನಿರ್ಧಾರ ಮಾಡಿಯೇಬಿಟ್ಟ; ಒಂದು ದಿನ ಸಿನೆಮಾ ಸೇರಿಯೇ ಸೇರುತ್ತೇನೆ ಎಂದು.
ಮಂತ್ರಾಲಯದಲ್ಲಿ ಜೀವರಕ್ಷಣೆ
ಮತ್ತೆ ವಯೊಲಿನ್ಗೆ ಹೆಚ್ಚಿನ ಗಮನ ನೀಡಿದ. ಸಂಗೀತದ ಈ ಸ್ನೇಹ ನಿರಂತರವಾಯಿತು. ಅವರ ಬದುಕಿನ ಮುಖ್ಯ ತಿರುವುಗಳಲ್ಲಿ ಅವರಿಗೆ ಜೊತೆ ನೀಡಿರುವುದು ಸಂಗೀತವೇ. ಹಣ ಪಡೆಯದೆ ವಯೊಲಿನ್ ಕಲಿಸುವವರ ಹುಡುಕಾಟ ನಡೆಯಿತು. ಆಗ ಸಿಕ್ಕಿದವರು ಬಿ. ಕೇಶವಮೂರ್ತಿ ಅವರು. ಮಂತ್ರಾಲಯಕ್ಕೆ ಕಛೇರಿ ನೀಡಲು ಹೋಗುತ್ತಿದ್ದ ಅವರು ಜೊತೆಗೆ ಕುಟ್ಟಿಯನ್ನು ಕರೆದುಕೊಂಡು ಹೋದರು. ಅಲ್ಲಿ ನದಿಗೆ ಸ್ನಾನಕ್ಕೆ ಹೋದಾಗ ಒಂದು ಘಟನೆ ನಡೆಯಿತು. ಒಂದು ಮಗು ಮುಳುಗುತ್ತಿದ್ದರೂ ಅಲ್ಲಿದ್ದ ಮೂವರು ಬ್ರಾಹ್ಮಣರು ಸುಮ್ಮನೆ ನೋಡುತ್ತಾ ನಿಂತಿದ್ದರು. ಕಾರಣ ಅದು ಶೂದ್ರ ಮಗು. ಮತ್ತೆ ಮಠಕ್ಕೆ ಹೋದಾಗ ಆ ಮೂವರು ‘ಮುಳುಗುತ್ತಿದ್ದ ಮಗುವನ್ನು ರಾಯರೇ ರಕ್ಷಿಸಿದರೆಂದು’ ಸ್ವಾಮಿಗಳ ಮುಂದೆ ಕತೆ ಕಟ್ಟಿ ವರ್ಣಿಸುತ್ತಿದ್ದರಂತೆ. ಇವರ ಗುರುಗಳು ಸಿಟ್ಟಾಗಿ ಸ್ವಾಮಿಗಳ ಎದುರೇ ರೇಗಾಡಿದರು. ಸ್ವಾಮಿಗಳಿಗೆ ಸತ್ಯ ಗೊತ್ತಾಗಿ ಆ ಮೂವರಿಗೆ ಬೈದರು. ಕುಟ್ಟಿಯನ್ನು ಹೊಗಳಿ ಶಾಲು ಹೊದಿಸಿ ಅಭಿನಂದಿಸಿದರು.
ಮತ್ತೆ ಶಾಲೆಗೆ ಸೇರಿದ್ದಾಯಿತು. ಜೊತೆಗೆ ಮೂವರು ಮಕ್ಕಳಿಗೆ ಮನೆಪಾಠ ಹೇಳಿ ತಿಂಗಳಿಗೆ ೯ ರೂ. ಗಳಿಸಲು ಆರಂಭಿಸಿದ. ಮೊದಲು ಮುಂಬಯಿನಲ್ಲಿದ್ದ ಅಣ್ಣ ಸೈನ್ಯಕ್ಕೆ ಸೇರಿ ಮದ್ರಾಸಿಗೆ(ಚೆನ್ನೈ) ವರ್ಗವಾಗಿದ್ದರು. ಆದರೆ ಮನೆಗೆ ಅವರಿಂದ ಸಿಗುತ್ತಿದ್ದ ನೆರವು ಅಷ್ಟಕ್ಕಷ್ಟೆ. ಆ ವರ್ಷ ಇಪಿಎಸ್ (ಎಲಿಜಿಬಲ್ ಫಾರ್ ಪಬ್ಲಿಕ್ ಸರ್ವೀಸ್) ಬಂತು. ಆ ಸರ್ಟಿಫಿಕೇಟ್ ತೆಗೆದುಕೊಂಡು ಕೆಲಸ ಸಿಕ್ಕಿದರೆ ಸೇರಬಹುದು. ಶಿಕ್ಷಣವನ್ನು ಮುಂದುವರಿಸುವಂತಿಲ್ಲ. ಕುಟ್ಟಿ ಸಿನೆಮಾಗೆ ಸೇರುವ ಆಸೆಯಿಂದ ಪುಣೆಗೆ ಹೋದ. ಅಲ್ಲಿ ಪುರೋಹಿತ್ ಎನ್ನುವವರ ಪರಿಚಯವಾಗಿ ಅವರ ಮೂಲಕ ಸರಸ್ವತಿ ಸಿನಿಟೋನ್ ಸ್ಟುಡಿಯೋಗೆ ಸೇರಿದ. ಆದರೆ ಅಲ್ಲಿ ಕ್ಯಾಮರಾ ಹತ್ತಿರವೂ ಬಿಡುತ್ತಿರಲಿಲ್ಲ. ಊರಿಗೆ ವಾಪಸಾಗುತ್ತೇನೆ ಎನ್ನುವಾಗ ಪುರೋಹಿತ್ ತನ್ನ ಲಾ ಪುಸ್ತಕಗಳ ಅಂಗಡಿಯಲ್ಲಿ ಸೇರಿಕೊಳ್ಳುವಂತೆ ಹೇಳಿದರು. ಸಂಬಳ ಕೇಳಿದಾಗ ಕಾಂಗ್ರೆಸ್ ಪ್ರೊಸೀಡಿಂಗ್ಸ್ (ಕಾಂಗ್ರೆಸ್ ಕಲಾಪಗಳು) ಪುಸ್ತಕದ ೩೦ ಪ್ರತಿ ಕೊಟ್ಟು ಮಾರಿಕೊಳ್ಳುವಂತೆ ಹೇಳಿದರು. ಅದನ್ನು ಯಾರೂ ಕೊಳ್ಳಲಿಲ್ಲ. ಒಬ್ಬ ವಕೀಲರು ಮಾತ್ರ ಒಂದು ಪ್ರತಿಯನ್ನು ಕೊಂಡುಕೊಂಡರು. ವಿವಿಧ ತೊಂದರೆಗಳಿಂದಾಗಿ ಎಸ್ಸೆಸ್ಸೆಲ್ಸಿ ಮುಗಿಸಲು ನಾಲ್ಕು ವರ್ಷಗಳು ಬೇಕಾದವು. ಮೊದಲ ವರ್ಷ ಮುಂಬಯಿಗೆ ಹೋದರು; ಎರಡನೇ ವರ್ಷ ಇಪಿಎಸ್ ಬಂತು. ಮುಂದಿನ ವರ್ಷ ಪುಣೆಗೆ ಹೋದದ್ದು; ಅಂತೂ ನಾಲ್ಕನೇ ವರ್ಷ ಪರೀಕ್ಷೆಗೆ ಕುಳಿ ಎಸ್ಎಸ್ಎಲ್ಸಿ ಪೂರೈಸಿದ್ದಾಯಿತು; ಅದು ೧೯೪೨ ಎಂದು ಉಮಾರಾವ್ ಈ ಬವಣೆಗಳನ್ನು ವಿವರಿಸಿದ್ದಾರೆ.
ಕ್ವಿಟ್ ಇಂಡಿಯಾ ಚಳವಳಿ
ಆ ವರ್ಷ ಕ್ವಿಟ್ ಇಂಡಿಯಾ ಚಳವಳಿ. ಕುಟ್ಟಿ ವಿದ್ಯಾರ್ಥಿ ಚಳವಳಿಗೆ ಸೇರಿದ. ಚಳವಳಿ ಬಗ್ಗೆ ಸಹಾನುಭೂತಿ ಇದ್ದ ಕಾರಣ ತಂದೆ ಬೇಡ ಅನ್ನಲಿಲ್ಲ. ಬಿಳಿ ಖಾದಿ ಪಂಚೆ ಮತ್ತು ಜುಬ್ಬಾ ಆಗಿನ ಅವರ ಡ್ರೆಸ್. ನೂರಾರು ಹುಡುಗರು ಸೇರಿ ಮೆರವಣಿಗೆ ನಡೆಸುವುದು, ಮೈಸೂರಿನ ಸುಬ್ಬರಾಯನ ಕೆರೆ ಮೈದಾನದಲ್ಲಿ ಸಭೆ. ಮುಂದೆ ಪ್ರಧಾನಿ ಕಚೇರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಎಚ್.ವೈ. ಶಾರದಾಪ್ರಸಾದ್ ಆಗ ಇವರ ಜೊತೆ ಇದ್ದರು. ಸೈಕಲ್ ದಳ ರಚಿಸಲು ಹೇಳಿ ಕುಟ್ಟಿಗೆ ಸೈಕಲ್ ಕೊಡಿಸಿದರು. ಊರೆಲ್ಲ ಸುತ್ತಿ ಸೆಂಟ್ರಲ್ ಪೊಲೀಸ್ ಠಾಣೆ ಎದುರು ನಿಂತರು. ಹೊರಟಾಗ ೬೦-೭೦ ಹುಡುಗರಿದ್ದರು. ಪೊಲೀಸರು ಕರೆದಾಗ ಈತ ಠಾಣೆಯ ಒಳಗೆ ಹೋಗಿ ತಿರುಗಿ ನೋಡಿದರೆ ಅಲ್ಲಿದ್ದದ್ದು ಶಾರದಾಪ್ರಸದ್ ಸೇರಿ ೧೩ ಜನ ಮಾತ್ರ. ಅವರನ್ನೆಲ್ಲ ಬಂಧಿಸಿದರು. ಹುಡುಗರಾದ್ದರಿಂದ ಬಿಡುವರೇನೋ ಎಂಬ ನಿರೀಕ್ಷೆಯಿತ್ತು; ಬಿಡಲಿಲ್ಲ. ಮೂರು ತಿಂಗಳು ಜೈಲು ವಾಸವಾಯಿತು. ಅಲ್ಲಿಯೂ ಸುಮ್ಮನಿರದ ಮೂರ್ತಿ ಕೈದಿಗಳಿಗೆ ಅಕ್ಷರ ಕಲಿಸಿದರು. ಬಂಧಿತ ವಿದ್ಯಾರ್ಥಿಗಳನ್ನೆಲ್ಲ ಮೈಸೂರು ಜೈಲಿಗೆ ಹಾಕಿದ್ದರು. “ಊಟ-ತಿಂಡಿ ಚೆನ್ನಾಗಿತ್ತು; “ಜೈಲಿನಿಂದ ಹೊರಬಂದಾಗ ನನ್ನ ತೂಕ ಐದು ಪೌಂಡ್ ಜಾಸ್ತಿಯಾಗಿತ್ತು” ಎಂದಿದ್ದಾರೆ. ವಿ.ಕೆ. ಮೂರ್ತಿ ಕ್ಷಮೆ ಕೇಳಿದರೆ ಬಿಡುತ್ತಿದ್ದರು. ತಂದೆ ಜೈಲಿಗೆ ಬಂದು ನೋಡಿದವರು ಅತ್ತರು; ಮನೆಗೆ ಬಾ ಎಂದು ಕರೆದರು. ಆದರೂ ಬರಲಿಲ್ಲ. ಜೈಲರ್ ಇವರನ್ನು ಲೀಡರ್ ಮಾಡಿದರು. ಆದರೆ ಅಲ್ಲಿಯ ಗುಂಪುಗಾರಿಕೆ ನೋಡಿ ಇನ್ನು ಚಳವಳಿ ಬೇಡ ಅನ್ನಿಸಿತಂತೆ.
ಹೀರೋ ಆಗುವಾಸೆ
ಮೂರ್ತಿ ಅವರಿಗೆ ಮೊದಲು ಇದ್ದದ್ದು ಸಿನೆಮಾದ ಹೀರೋ ಆಗುವಾಸೆಯೇ. ಆದರೆ ಬಹುಬೇಗ ಅದು ಆಗುವುದಿಲ್ಲವೆಂದು ಗೊತ್ತಾಯಿತು. ಮತ್ತೆ ಆರಿಸಿಕೊಂಡದ್ದು ಛಾಯಾಗ್ರಹಣ. ಆಗಲೇ ನಾಲ್ಕೂವರೆ ರೂಪಾಯಿಗೆ ಕೊಡಾಕ್ ಬಾಕ್ಸ್ ಕ್ಯಾಮೆರಾ ಕೊಂಡಿದ್ದರು. ಸೋದರಮಾವನ ಮಗ ಜುಬಾರಿ (ಎಂ.ಎನ್. ಸುಬ್ಬರಾಯ) ಬೆಂಗಳೂರಿನಲ್ಲಿ ತರಬೇತಿಗೆ ಸೇರುವಂತೆ ಕರೆದರು. ಅದು ಶ್ರೀ ಜಯಚಾಮರಾಜೇಂದ್ರ ಆಕ್ಯುಪೇಶನಲ್ ಇನ್ಸ್ಟಿಟ್ಯೂಟ್ (ಮುಂದೆ ‘ಪಾಲಿಟೆಕ್ನಿಕ್’); ಎಂ. ವಿಶ್ವೇಶ್ವರಯ್ಯನವರು ಕಟ್ಟಿದ ಸಂಸ್ಥೆ. ಅಲ್ಲಿ ಹತ್ತಾರು ಕೋರ್ಸ್ಗಳಿದ್ದವು. ೬೦ ರೂ. ಫೀಸ್. ಮೂರು ವರ್ಷ ಈ ಹಣವನ್ನು ಕೊಟ್ಟು ಓದಿಸಿದ್ದು ಶ್ರೀನಿವಾಸನ್ ಎನ್ನುವ ಗೆಳೆಯ. ಆಗಲೇ ಉದ್ಯೋಗಕ್ಕೆ ಸೇರಿದ್ದ ಆತ ಮುಂದೆ ೧೭-೧೮ ಕಂಪೆನಿಗಳ ಒಡೆಯನಾದರು. “ಗೆಳೆಯರೇ ನಾನು ಮುಂದೆ ಬರಲು ಕಾರಣ” ಎಂಬುದು ವಿ.ಕೆ. ಮೂರ್ತಿ ಅವರು ಮನದುಂಬಿ ಹೇಳಿದ ಮಾತು. ಉಳಿದುಕೊಂಡದ್ದು ವಾಸು ಎನ್ನುವ ಗೆಳೆಯನ ಜೊತೆ; ಅದೇ ಕುಟ್ಟಿ-ವಾಸು (ಕುವಾ) ನಿವಾಸವಾಯಿತು. ವಿಶ್ವೇಶ್ವರಪುರಂನ ರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್ನಲ್ಲಿ ಊಟ. ತಂದೆ ನಿಧನ ಹೊಂದಿದ ಅನಂತರ ಮೈಸೂರಿನ ಸಂಬಂಧ ಕಡಿಯಿತು.
ಆರ್ಕೆಸ್ಟ್ರಾ, ನಾಟಕ
ಸಂಸ್ಥೆಯಲ್ಲಿ ಸಿನೆಮಾಟೋಗ್ರಫಿ ವಿಭಾಗದ ಮುಖ್ಯಸ್ಥರಾಗಿದ್ದವರು ಲಕ್ಷ್ಮೀಪುರಂ ನರಸಿಂಹ ಎಂಬವರು. ಕ್ಯಾಮೆರಾ ಇಲ್ಲ; ಪ್ರಾಕ್ಟಿಕಲ್ ತರಬೇತಿ ಇಲ್ಲ. ಬೇಡವಾದುದನ್ನೆಲ್ಲ ಕಲಿಸುತ್ತಾರೆಂದು ಹೇಳಿ ಕೋರ್ಸನ್ನು ಸರಿಪಡಿಸುವಲ್ಲಿಯೂ ಮೂರ್ತಿ ಶ್ರಮಿಸಿದರು. ಸಂಗೀತದ ಹುಚ್ಚಿನಿಂದ ಇವರು ಜೆ.ಸಿ. ಇನ್ಸ್ಟಿಟ್ಯೂಟ್ನಲ್ಲೂ ಒಂದು ಆರ್ಕೆಸ್ಟಾç ಮಾಡಿದರು. ಪಂಕಜ್ ಮಲ್ಲಿಕ್ ಮತ್ತು ಗಾಯಕ ಸುರೇಂದ್ರನಾಥ ಇವರಿಗೆ ಇಷ್ಟ. ವಯೊಲಿನ್ನ ಇವರೇ ಲೀಡ್ ಪ್ಲೇಯರ್. ಒಂದು ಕಾರ್ಯಕ್ರಮಕ್ಕೆ ಬಂದಿದ್ದ ಮೈಸೂರು ಮಹಾರಾಜರು ಇವರ ಸಂಗೀತ ಕೇಳಿ ಕೈಯನ್ನು ಕುಲುಕಿದರಂತೆ. ಅಲ್ಲೇ ಅವರ ನಾಟಕ ನಿರ್ದೇಶನವೂ ಆರಂಭವಾಯಿತು; ಆರಿಸಿಕೊಂಡ ನಾಟಕ ನಾ. ಕಸ್ತೂರಿ ಅವರ ‘ಗಗ್ಗಯ್ಯನ ಗಡಿಬಿಡಿ.’ ಖ್ಯಾತ ನೃತ್ಯಪಟು ರಾಂಗೋಪಾಲ್ ಅವರಿಗೆ ಒಬ್ಬ ಒಳ್ಳೆಯ ವಯೊಲಿನಿಸ್ಟ್ ಬೇಕು; ತಿಂಗಳಿಗೆ ೨೫೦ ರೂ. ಕೊಡುತ್ತಾರೆ ಎಂದು ಆಗಲೇ ಮೂರ್ತಿಗೆ ಒಂದು ಆಫರ್ ಕೂಡ ಬಂತು. ಅದಕ್ಕೆ ಸೇರಿ ಕಾಲೇಜಿನ ತರಗತಿಗಳನ್ನು ತಪ್ಪಿಸಿಕೊಂಡು ಕಾರ್ಯಕ್ರಮಗಳಿಗೆ ಹೋದದ್ದೂ ಆಯಿತು; ಕಾಲೇಜಿನಿಂದ ಎಚ್ಚರಿಕೆಯೂ ಬಂತು. ಅದರ ರಿಹರ್ಸಲ್ ಕೂಡ ಇರುತ್ತಿತ್ತು. ಆರು ತಿಂಗಳಾದರೂ ಹಣ ಕೊಡಲಿಲ್ಲ. ಕೊಟ್ಟದ್ದು ಮುಂಬಯಿ ಕಾರ್ಯಕ್ರಮದಿಂದ ಮರಳಲು ೭೫ ರೂ. ಮಾತ್ರ. ಮುಂದೆ ಕೂಡ ಹಣದ ವ್ಯವಹಾರವೆಂದರೆ ಮೂರ್ತಿ ಅವರಿಗೆ ನಾಚಿಕೆ. ಅದನ್ನು ಸಂಧ್ಯಾ (ಪತ್ನಿ) ನೋಡಿಕೊಳ್ಳುತ್ತಾಳೆ ಎಂಬುದು ಅವರ ವಿವರಣೆ.
೧೩ನೇ ರ್ಯಾಂಕ್ ಪಾಲಿಟೆಕ್ನಿಕ್ನವರು
ಪಾಲಿಟೆಕ್ನಿಕ್ನವರು ಪ್ರಾಕ್ಟಿಕಲ್ಗೆ ಇವರನ್ನು ಮುಂಬಯಿಗೆ ಕಳಿಸಿದರು. ಪರೀಕ್ಷೆ ಮುಗಿಯಿತು. ೧೩ ಜನರ ತರಗತಿಯಲ್ಲಿ ಮೂರ್ತಿ ೧೩ನೇ ರ್ಯಾಂಕ್. “ನಾನು ಯಾವಾಗಲೂ ಸಾಧಾರಣ ವಿದ್ಯಾರ್ಥಿ. ಆದರೆ ವೃತ್ತಿಜೀವನದಲ್ಲಿ ಯಶಸ್ಸು ಗಳಿಸಿದೆ. ಏಕೆಂದರೆ ಕ್ಯಾಮೆರಾ ವರ್ಕ್ನಲ್ಲಿ ನನಗೆ ಅಷ್ಟು ಆಸಕ್ತಿಯಿತ್ತು.” ಪ್ರಾಕ್ಟಿಕಲ್ ತರಬೇತಿಗೆ ಅವಕಾಶವಿದ್ದರೂ ಮೂರ್ತಿ ಮದ್ರಾಸಿಗೆ ಹೋಗಲಿಲ್ಲ. ಬಾಂಬೆ ಅವರಿಗೆ ಮೋಡಿ ಮಾಡಿತ್ತು. ಮುಂದೆ ಸಾಂದರ್ಭಿಕವಾಗಿ ತಮ್ಮ ಜೆ.ಸಿ. ಪಾಲಿಟೆಕ್ನಿಕ್ ಬಗ್ಗೆ ಪ್ರಸ್ತಾವಿಸಿ “ಈಗ ಹೆಸರಘಟ್ಟದಲ್ಲಿ (ಬೆಂಗಳೂರು) ಟಿವಿ, ಸಿನೆಮಾ ವಿಭಾಗಕ್ಕೆ ಪ್ರತ್ಯೇಕ ಕಟ್ಟಡ ಕಟ್ಟಿಸಿದ್ದಾರೆ; ವ್ಯವಸ್ಥೆ ಸರಿಯಿಲ್ಲ; ಬೇಕಾದ ಪರಿಕರಗಳಿಲ್ಲ. ಕೇಳಿದರೆ ನಾವು ಸಲಹೆ ನೀಡುತ್ತಿರಲಿಲ್ಲವೆ?” ಎಂದು ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ ೯೦ ಸಮೀಪವಾಗುತ್ತಿದ್ದ ಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದರು.
ಮೊದಲು ಅಪ್ರೆಂಟಿಸ್
ಉದ್ಯೋಗ ಅರಸಲು ಮೂರ್ತಿ ಹೋದದ್ದು ಮುಂಬಯಿಗೇ. ಮೂರು ತಿಂಗಳು ಅಪ್ರೆಂಟಿಸ್ ಆಗಿ ಸೇರಿದರು. ಸಂಬಳ ಇಲ್ಲ. ಮತ್ತೆ ಮುಂಬಯಿಯ ಮಾಮೂಲಿ ಸಮಸ್ಯೆ; ಉಳಿದುಕೊಳ್ಳುವುದೆಲ್ಲಿ? ಮೊದಲಿಗೆ ನೆಂಟರಾದ ಪೊಲೀಸ್ ಇನ್ಸ್ಪೆಕ್ಟರ್ ಮನೆಗೆ ಹೋದರು. ಮೂರು ತಿಂಗಳು ಕಳೆದು ಅಲ್ಲಿಂದ ಹೊರಟರು. ಅಂಧೇರಿಯ ಪ್ರಕಾಶ್ ಸ್ಟುಡಿಯೋದಲ್ಲಿ ಕೆಲಸ ಕಲಿಯುವುದಾಯಿತು. ಆಗ ತಾನೆ ಅಲ್ಲಿಂದ ಸೂಪರ್ಹಿಟ್ ಚಿತ್ರ ‘ರಾಮರಾಜ್ಯ’ ಬಂದಿತ್ತು. ಪ್ರೇಂ ಅದೀಪ್, ಶೋಭನಾ ಸಮರ್ಥ್ ನಾಯಕ-ನಾಯಕಿಯರು. ಶಂಕರ ವ್ಯಾಸ್ ಸಂಗೀತ. ಅಲ್ಲಿಯ ಕ್ಯಾಮೆರಾಮನ್ ಗುರುನಾಥ್ರಿಂದ ಕಲಿತರು. ಇಂಗ್ಲಿಷ್ ಸಿನೆಮಾಗಳ ಕ್ಯಾಮೆರಾ ಇಫೆಕ್ಟ್ ಗಮನಿಸುವುದು ಮುಂದುವರಿದಿತ್ತು. ೨-೩ ವಾರದಲ್ಲಿ ಬಹುತೇಕ ಎಲ್ಲ ಕಲಿತಾಯಿತು. ಒಂದು ದಿನ ಸೀನಿಯರ್ ಸೌಂಡ್ ರೆಕಾರ್ಡಿಸ್ಟ್ ಗಿಲಾನಿ ಸಾಬ್ ಅವರು ಬಂದಿರಲಿಲ್ಲ. ಏನೋ ಸಮಸ್ಯೆಯಾಯಿತು. ಇವರು ಕಾರ್ ಬ್ಯಾಟರಿಗೆ ಲಿಂಕ್ ಮಾಡಿ ಸರಿ ಮಾಡಿಕೊಟ್ಟರು. ಎಲ್ಲರಿಗೂ ಆಶ್ಚರ್ಯ. ಆಗಿನ ಒಂದು ಸಮಸ್ಯೆಯೆಂದರೆ, ಸೀನಿಯರ್ಗಳು ಸರಿಯಾಗಿ ಕಲಿಸಿಕೊಡುತ್ತಿರಲಿಲ್ಲ. ತಪ್ಪು ಮಾಡಿಯೇ ಕಲಿಯಬೇಕಿತ್ತು. ಮೂರ್ತಿಗಿದ್ದ ಒಂದು ಅನುಕೂಲವೆಂದರೆ ಅವರು ಡಿಪ್ಲೊಮಾ ಓದಿದವರಾಗಿದ್ದುದು.
ಅಲ್ಲೂ ಸಂಗೀತ ಮುಂದೆ ಬಂತು. ಇವರ ವಯೊಲಿನ್ ವಾದನವನ್ನು ಮೆಚ್ಚಿದ ಮೋಹನ ಸೇಗಾಲ್ ಸಂಗೀತ ನಿರ್ದೇಶಕರಿಗೆ ಪರಿಚಯಿಸಿದರು. ಪರೇಲ್ನ ಜಯಂತ್ ಸ್ಟುಡಿಯೋದಲ್ಲಿ ‘ರೇಣುಕಾ’ ಚಿತ್ರಕ್ಕೆ ಒಂದು ಹಾಡನ್ನು ರೆಕಾರ್ಡ್ ಮಾಡಿದಾಗ ಅಂದಿನ ದೊಡ್ಡ ಮೊತ್ತ ೧೦೦ ರೂ.ಗಳೇ ಮೂರ್ತಿ ಕೈಗೆ ಬಂತು.
ದ್ರೋಣಾಚಾರ್ಯರ ಶಿಷ್ಯ
ಮುಂದೆ ಹಿರಿಯ ಕ್ಯಾಮೆರಾಮನ್ ದ್ರೋಣಾಚಾರ್ಯರ ಶಿಷ್ಯನಾಗಿ ಜಯಂತ್ ದೇಸಾಯಿ ಸ್ಟುಡಿಯೋದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ತಿಂಗಳಿಗೆ ೭೫ ರೂ. ಸಂಬಳ. ಆಗ ಅಲ್ಲಿ ‘ಮಹಾರಾಣಾ ಪ್ರತಾಪ್’ ಶೂಟಿಂಗ್ ನಡೆಯುತ್ತಿತ್ತು. ಆಗ ಕ್ಯಾಮೆರಾ ಸರಿಯಾಗಿ ಫೋಕಸ್ ಆಗುತ್ತಿಲ್ಲ ಎಂಬ ಸಮಸ್ಯೆ ಬಂದಾಗ ಅದನ್ನು ಸರಿಪಡಿಸಿದ್ದು ಮೂರ್ತಿಯೇ. ಸುಮ್ಮನೆ ಗ್ರೌಂಡ್ ಗ್ಲಾಸ್ ತಿರುಗಾಮುರುಗಾ ಹಾಕಿದಾಗ ಫೋಕಸ್ ಸರಿಯಾಯಿತು. ದ್ರೋಣಾಚಾರ್ಯರು ‘ನನ್ನ ೧೪ ವರ್ಷಗಳ ಅನುಭವವನ್ನು ನೀರಿಗೆ ಹಾಕಿಬಿಟ್ಟೆ’ ಎಂದರು. ಸ್ಟುಡಿಯೋದಲ್ಲಿ ಎಲ್ಲ ಟೆಕ್ನಿಕಲ್ ವಿಷಯಗಳಿಗೆ ಇವರನ್ನೇ ಕೇಳುತ್ತಿದ್ದರು. ಕಾರಣ ಇವರಿಗೆ ಥಿಯರಿ ಮೊದಲೇ ಕರಗತವಾಗಿತ್ತು. “ನನಗೆ ಆ ವಿಷಯಗಳಲ್ಲಿ ಯಾವಾಗಲೂ ಜಾಣತನವಿತ್ತು. ಭಯ ಇರಲಿಲ್ಲ. ಓದಿದ್ದರಿಂದ ಆತ್ಮವಿಶ್ವಾಸವಿತ್ತು. ಲೈಟಿಂಗ್ ಮಾಡುವಾಗಲೂ ಅಷ್ಟೆ. ಭಾಷೆಯೂ ಸಮಸ್ಯೆಯಾಗಲಿಲ್ಲ. ಕನ್ನಡ, ಇಂಗ್ಲಿಷ್ ಜೊತೆಗೆ ಸ್ವಲ್ಪ ಹಿಂದಿಯೂ ಬರುತ್ತಿತ್ತು. ಸ್ಟುಡಿಯೋದಲ್ಲಿ ಎಲ್ಲರೂ ಹಿಂದಿ ಮಾತನಾಡುತ್ತಿದ್ದರು. ಕೆಳಹಂತದ ಕೆಲಸಗಾರರು ಮಾತ್ರ ಮರಾಠಿ ಬಳಸುತ್ತಿದ್ದರು” ಎಂದು ವಿ.ಕೆ. ಮೂರ್ತಿ ಹೇಳಿದ್ದಿದೆ.
ಒಮ್ಮೆ ಸೀನಿಯರ್ ಅಸಿಸ್ಟೆಂಟ್ ಬಂದಿರಲಿಲ್ಲ. ಆಗ ಮೂವಿಂಗ್ ಶಾಟ್ಸ್ನಲ್ಲಿ ಫೋಕಸ್ ಅಡ್ಜಸ್ಟ್ ಮಾಡುತ್ತಿದ್ದರು. ದ್ರೋಣಾಚಾರ್ಯರು ಜೋರಾಗಿ ಕೂಗಿ “ನನ್ನ ಕಡೆ ಯಾಕೆ ನೋಡ್ತೀಯಾ? ಆ್ಯಕ್ಷನ್ ಆ ಕಡೆ ನಡೆಯುತ್ತಿದೆ” ಎಂದರು. ನಡೆದದ್ದು ಅಷ್ಟೆ. ಮೂರ್ತಿ ಅವರಿಗೆ ‘ಇನ್ನು ಇಲ್ಲಿಗೆ ಬರುವುದಿಲ್ಲ’ ಎಂದು ನಿರ್ಧರಿಸಲು ಅಷ್ಟೇ ಸಾಕಾಯಿತು. ಮರುದಿನ ಆಫೀಸಿಗೆ ಲೆಕ್ಕಾಚಾರ ಮಾಡುವುದಕ್ಕೇನೇ ಹೋದರು. ದ್ರೋಣಾಚಾರ್ಯರು ಅಲ್ಲಿ ಇವರನ್ನು ಕಂಡು ಸಮಾಧಾನಪಡಿಸಿ ‘ತುಂಬ ಸೆನ್ಸಿಟಿವ್ ಆಗಿರಬೇಡ’ ಎಂದು ವಾಪಸು ಕರೆದುಕೊಂಡು ಬಂದರು.
ಬಿಸಿಲುಕೋಲು
‘ಮಹಾರಾಣಾ ಪ್ರತಾಪ್’ ಮೂರ್ತಿ ಅವರ ಮೊದಲ ಚಿತ್ರ. ಐತಿಹಾಸಿಕವಾದ ಕಾರಣ ತುಂಬ ಅವಕಾಶ ಅಲ್ಲಿಂದಲೇ (ಸ್ಕೋಪ್) ಇತ್ತು. ಇವರು ಜೈಲಿನಲ್ಲಿದ್ದ ಕೊಠಡಿಗೆ ಒಂದೇ ಕಿಟಕಿ. ಅಲ್ಲಿಂದಲೇ ಬೆಳಕು ಬರುವುದು. ಅದೇ ಥರ ಇದ್ದ ಇಂಗ್ಲಿಷ್ ಚಿತ್ರಗಳ ಲೈಟಿಂಗನ್ನು ಮೂರ್ತಿ ನೋಡಿದ್ದರು. “ಒಂದು ಕಿಟಕಿಯಿಂದ ಒಂದೇ ಒಂದು ಬಿಸಿಲುಕೋಲು ರೂಮಿನೊಳಗೆ ಬರುವುದನ್ನು ಮಾಡೋಣವೆ? ಇಂಗ್ಲಿಷ್ ಚಿತ್ರಗಳಲ್ಲಿ ಮಾಡುತ್ತಾರೆ” ಎಂದು ಆಚಾರ್ಯರಲ್ಲಿ ಕೇಳಿದರು. ಅದಕ್ಕೆ ಆತ “ಅದು ಇಂಗ್ಲಿಷ್ ಚಿತ್ರ. ನಾವಿಲ್ಲಿ ಮಾಡುವುದಕ್ಕೆ ಆಗುವುದಿಲ್ಲ” ಎಂದುಬಿಟ್ಟರು. ಆ ಸ್ಟುಡಿಯೋದಲ್ಲಿ ಎಲ್ಲರೂ ಇವರನ್ನು ಕುಟ್ಟಿ ಎಂದೇ ಕರೆಯುತ್ತಿದ್ದು, ಸಿನೆಮಾದ ಟೈಟಲ್ಸ್ನಲ್ಲೂ ಹಾಗೆಯೇ ಬಂತಂತೆ!
ಮೂರನೇ ಅಸಿಸ್ಟೆಂಟಾಗಿ ಅಲ್ಲಿ ಸೇರಿದ ಕುಟ್ಟಿ ಎರಡೇ ತಿಂಗಳಲ್ಲಿ ಫಸ್ಟ್ ಅಸಿಸ್ಟೆಂಟಾಗಿ ಪ್ರೊಮೋಶನ್ ಪಡೆದರು. ಇವರಿಗೆ ವಿಷಯ ಚೆನ್ನಾಗಿ ತಿಳಿದಿದ್ದು, ಮುಖ್ಯ ಕ್ಯಾಮೆರಾಮನ್ ಮತ್ತು ನಿರ್ದೇಶಕರು ಕೂಡ ಇವರ ಸಲಹೆ ಕೇಳುತ್ತಿದ್ದರು. “ನನ್ನ ಆತ್ಮವಿಶ್ವಾಸ ಹೆಚ್ಚಾಯಿತು. ಮೊದಲು ಹಿಂಜರಿಕೆ ಇದ್ದರೂ ಅನಂತರ ಧೈರ್ಯವಾಗಿ ನಾನೇ ಸಲಹೆ ಕೊಡುವುದಕ್ಕೆ ಶುರುಮಾಡಿದೆ” ಎಂದವರು ಹೇಳಿದ್ದಿದೆ.
ದ್ರೋಣಾಚಾರ್ಯರ ಜೊತೆ ಕೆಲಸ ಮಾಡಿದ್ದು ಏಳು ತಿಂಗಳು. ಅಲ್ಲಿದ್ದಾಗ ಒಮ್ಮೆ ‘ಆಮ್ರಪಾಲಿ’ ಸಿನೆಮಾವನ್ನು ನೋಡಿದರು. ಅದರಲ್ಲಿ ಫಾಲಿ ಮಿಸ್ತ್ರಿ ಅವರ ಅದ್ಭುತ ಕ್ಯಾಮೆರಾ ಕೆಲಸ ಗಮನಸೆಳೆಯಿತು. ಅವರೊಂದಿಗೆ ಕೆಲಸ ಮಾಡಬೇಕೆಂದು ಯೋಚಿಸುವಾಗಲೇ ಅವರೇ ಕರೆಯುತ್ತಿದ್ದಾರೆಂದು ವರ್ತಮಾನ ಬಂತು. ಲಕ್ಷ್ಮಿ ಸ್ಟುಡಿಯೋಗೆ ಹೋಗಿ ಆ ‘ಎತ್ತರದ ಸುಂದರ ಪಾರ್ಸಿ ವ್ಯಕ್ತಿ’ಯನ್ನು ಕಂಡರು. ಸೀದಾ ಸೇರಿಸಿಕೊಂಡರು. ಫಾಲಿ ಅವರಿಂದ “ನನ್ನ ಜೊತೆ ೨೩ ಜನ ಅಸಿಸ್ಟೆಂಟ್ಗಳು ಕೆಲಸ ಮಾಡಿದ್ದಾರೆ; ಅದರಲ್ಲಿ “You are the best” ಎನ್ನುವ ಹೊಗಳಿಕೆ ಸಿಕ್ಕಿತು. ಅಲ್ಲಿ ನಾಲ್ವರು ಕ್ಯಾಮೆರಾಮನ್ಗಳು, ಏಳೆಂಟು ಜನ ಅಸಿಸ್ಟೆಂಟ್ಗಳು ಇದ್ದರು. ಆದರೆ ಎಲ್ಲ ಕ್ಯಾಮೆರಾಮನ್ಗಳೂ ಅಸಿಸ್ಟೆಂಟಾಗಿ ಮೂರ್ತಿಯೇ ಬೇಕೆಂದು ಅಪೇಕ್ಷಿಸುತ್ತಿದ್ದರು. ಫಾಲಿ ಮಿಸ್ತ್ರಿ ಅವರಂತೂ “ನಾನು ಅಥವಾ ಸಹೋದರ ಜಾಲ್ ಶೂಟ್ ಮಾಡುವಾಗ ಅಸಿಸ್ಟೆಂಟಾಗಿ ಮೂರ್ತಿಯೇ ಬೇಕು” ಎಂದು ಅಪೇಕ್ಷೆಪಟ್ಟಿದ್ದರು.
“ಮೊದಲೆಲ್ಲ ಸ್ಟುಡಿಯೋದಲ್ಲೇ ಶೂಟಿಂಗ್; ಹೊರಾಂಗಣ ಇರಲಿಲ್ಲ. ಅದೆಲ್ಲ ತುಂಬ ಅಮೆಚೂರಿಶ್ ಅನ್ನಿಸುತ್ತಿತ್ತು. ನಾನು ಫಾಲಿ ಮಿಸ್ತ್ರಿ ಅವರೊಂದಿಗೆ ಕೆಲಸ ಶುರು ಮಾಡಿದ ಮೇಲೆ ಎಲ್ಲ ಬದಲಾಯಿತು. ನನಗಿಷ್ಟ ಬಂದದ್ದು ಮಾಡಲು ಪೂರ್ಣ ಸ್ವಾತಂತ್ರ್ಯವಿತ್ತು. ನಾವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೆವು” ಎಂದು ಮೂರ್ತಿ ಹೇಳಿದ್ದರು. ಅಲ್ಲಿ ‘ಬಾಬುಲ್’, ‘ಮೇಲಾ’ ಚಿತ್ರಗಳಲ್ಲಿ ತುಂಬ ಕಲಿತೆ. ಅದು ನಾನು ಈ ಕ್ಷೇತ್ರದಲ್ಲಿ ಗ್ರಾಜುಯೇಟ್ ಆದ ಕಾಲ. ‘ಮೇಲಾ’ ಸೂಪರ್ಹಿಟ್ ಆಯಿತು ಎಂದು ಕೂಡ ಹೇಳಿದ್ದಾರೆ.
“ಫಾಲಿ ತುಂಬ ಪುಸ್ತಕಗಳನ್ನು ಓದುತ್ತಿದ್ದರು. ಇಂಗ್ಲಿಷ್ ಚಿತ್ರಗಳನ್ನು ನೋಡುತ್ತಿದ್ದರು. ವಿದೇಶೀ ಪತ್ರಿಕೆಗಳಲ್ಲಿ ಬರುವ ಲೇಖನ, ವಿಮರ್ಶೆಗಳನ್ನು ಓದುತ್ತಿದ್ದರು. ಜೊತೆಗೆ ತುಂಬ ಪ್ರತಿಭೆ ಇತ್ತು. ಪಾರ್ಸಿಗಳು ತುಂಬ ಹೆದರಿಕೆಯ ಜನ. ಅಲ್ಲಲ್ಲಿ ಕುಡಿಯಬಾರದೆಂದು ಫಾಲಿ ಮಿಸ್ತ್ರಿ ನೀರನ್ನೇ ಕುಡಿಯುತ್ತಿರಲಿಲ್ಲ. ಮಾತೆತ್ತಿದರೆ ಸೋಡಾ ತರಿಸುತ್ತಿದ್ದರು. ಮನೆಯಿಂದ ಊಟ ಬರುತ್ತಿತ್ತು. ಅವರ ತಮ್ಮ ಜಾಲ್ಗೆ ನಟಿ ನೂತನ್ ಬಹಳ ಇಷ್ಟ. ಅವಳನ್ನು ಚೆನ್ನಾಗಿ ಫೋಟೋಗ್ರಾಫ್ ಮಾಡುತ್ತಿದ್ದ. ಅವಳು ತನ್ನನ್ನು ಪ್ರೀತಿಸುತ್ತಾಳೆಂದು ತಪ್ಪು ತಿಳಿದಿದ್ದ” ಎಂದು ವಿ.ಕೆ. ಮೂರ್ತಿ ಹಿಂದಿ ಚಿತ್ರರಂಗದ ಹಲವರ ಬಗೆಗೆ ಒಳನೋಟಗಳನ್ನು ನೀಡುತ್ತಾರೆ.
ಎರಡು ತಿಂಗಳು ಕಳೆಯುವಾಗ ಫಾಲಿ ಮಿಸ್ತ್ರಿ “ನಾನು ದೊಡ್ಡ ಪಿಕ್ಚರ್ ಮಾಡಲಿದ್ದೇನೆ. ನಿನ್ನ ಹೆಸರು ಕೊಟ್ಟಿದ್ದೇನೆ. ತಿಂಗಳಿಗೆ ೫೦೦ ರೂ. ಸಂಬಳ ಕೊಡುತ್ತಾರೆ” ಎಂದರು. ಅಲ್ಲಿ ಸಿಗುತ್ತಿದ್ದುದು ೧೦೦ ರೂ. ಅಲ್ಲಿ ಏಳೆಂಟು ತಿಂಗಳು ಕಳೆಯಿತು.
ಬಳಿಕ ಫೇಮಸ್ ಸ್ಟುಡಿಯೋ ಆರಂಭವಾದಾಗ ಫಾಲಿ ಮೂರ್ತಿಯನ್ನು ಅಲ್ಲಿಗೆ ಕಳುಹಿಸಿ ತಾನು ಮತ್ತೆ ಬರುವೆ ಎಂದರು. ಅಲ್ಲಿ ಮ್ಯಾನೇಜರ್ ಆಗಿದ್ದವರು ಸರ್ವೋತ್ತಮ ಬದಾಮಿ ಎನ್ನುವ ಕನ್ನಡಿಗರು. ಹಲವು ಚಿತ್ರ ನಿರ್ದೇಶಿಸಿದ್ದ ಆತ ಮೂರ್ತಿಗೆ ೫೦೦ ರೂ. ಆಗಲ್ಲ, ೧೭೫ ರೂ. ಕೊಡುವೆ ಎಂದರು. ಅಲ್ಲಿ ಮೂರ್ತಿ ತುಂಬ ಪಾಪ್ಯುಲರ್ ಆದರು. ಅಲ್ಲಿ ೩-೪ ವರ್ಷ ಕಳೆಯಿತು. ಫಾಲಿ ಮಿಸ್ತ್ರಿಯಿಂದ ಅಗಾಧವಾಗಿ ಕಲಿತರು.
“ನನ್ನ ಗುರು ಫಾಲಿ ನಟರ ಮುಖದ ಸೌಂದರ್ಯ ಎದ್ದು ಕಾಣುವಂತೆ ಫೋಟೋಗ್ರಾಫ್ ಮಾಡುವಲ್ಲಿ ಸಾಟಿ ಇಲ್ಲದವರು. ಪ್ರತಿಯೊಂದು ಮುಖವನ್ನೂ ಗಮನಿಸಿ ಅರ್ಥ ಮಾಡಿಕೊಂಡು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದರು. ಪ್ರತಿಯೊಬ್ಬರೂ ಫೋಟೋಜೆನಿಕ್ಕೇ; ಅರ್ಥ ಮಾಡಿಕೊಂಡು ಲೈಟಿಂಗ್ ಮಾಡಬೇಕು – ಎನ್ನುತ್ತಿದ್ದರು. “ಅವರೊಬ್ಬ ಹುಟ್ಟು ಕಲಾವಿದ. ಜೊತೆಗೆ ಆಧುನಿಕ ತಂತ್ರಗಳ ಬಗ್ಗೆ ತುಂಬ ಓದಿಕೊಂಡು ಪ್ರಯೋಗ ಮಾಡುತ್ತಿದ್ದರು. ಅವರ ಲೈಟಿಂಗ್ ತಂತ್ರ ಎಷ್ಟು ಕಲಾತ್ಮಕ ಆಗಿತ್ತೆಂದರೆ ಹೊರಾಂಗಣದಲ್ಲಿ (ಲೊಕೇಶನ್) ಶೂಟಿಂಗ್ ಮಾಡಿದ್ದಾರೋ ಸೆಟ್ನಲ್ಲೋ ಎಂಬುದೇ ತಿಳಿಯುತ್ತಿರಲಿಲ್ಲ. ಅಂತಹ ಮೂರು-ಆಯಾಮ (ತ್ರೀ-ಡೈಮೆನ್ಶನಲ್) ಇಫೆಕ್ಟ್, ಡೆಪ್ತ್ ಕೊಡುವ ಸಾಮರ್ಥ್ಯ ಅವರಲ್ಲಿತ್ತು. ಅವರು ನೆರಳು-ಬೆಳಕುಗಳನ್ನು ಬಳಸುವ ರೀತಿ ಅದ್ಭುತ. ಅವರಿಗೆ ಅವರದೇ ಶೈಲಿ ಇತ್ತು. ಹಿಂದೆ ಕ್ಯಾಮೆರಾಮನ್ಗಳು ಪ್ರಖರ ಬೆಳಕಿನಲ್ಲಿ ಶೂಟ್ ಮಾಡುತ್ತಿದ್ದರು. ಫಾಲಿ ಯಾವಾಗಲೂ ಹಿಂಬೆಳಕು (ಅಗೈನ್ಸ್ಟ್ ಲೈಟ್) ಶೂಟ್ ಮಾಡುತ್ತಿದ್ದರು. ಅದರಿಂದ ಹೆಚ್ಚು ಡೆಪ್ತ್ ತರಲು ಸಾಧ್ಯವಿತ್ತು. ಅದು ಫಾಲಿ ಸ್ಟೆöÊಲ್ ಎಂದು ಹೆಸರಾಯಿತು” ಎಂದು ಮೂರ್ತಿ ತಿಳಿಸಿದ್ದಾರೆ.
ಅವರು ಯಾವ ಸವಾಲಿಗೂ ಇಲ್ಲ ಎನ್ನುವವರಲ್ಲ. ಪರಿಣಾಮಕಾರಿಯಾಗಲು ನಿರ್ದೇಶಕರಿಗೂ ಸಲಹೆ ಕೊಡುತ್ತಿದ್ದರು. ಕರುಣಾಳು, ಮೃದು ಸ್ವಭಾವದ ಆದರ್ಶ ಗುರು. ಮೇಲಾಗಿ ಯಾವ ಜ್ಞಾನವನ್ನೂ ಮುಚ್ಚಿಡುವವರಲ್ಲ. ಅವರ ಬಹಳಷ್ಟು ಶಿಷ್ಯರು ಕೆಲವೇ ವರ್ಷಗಳಲ್ಲಿ ಪ್ರಖ್ಯಾತ ಕ್ಯಾಮೆರಾಮನ್ಗಳಾದರು ಎಂದ ಮೂರ್ತಿ, ಸ್ವತಃ ಆ ಬಳಗಕ್ಕೆ ಸೇರಿದ್ದಾರೆ. ಗುರುಗಳ ಈ ಗುಣ-ಲಕ್ಷಣಗಳೆಲ್ಲ ಅವರಲ್ಲೂ ಬಂದವು. “ಇಂಡಸ್ಟ್ರಿಯಲ್ಲಿ ಶೇ. ೮೦ರಷ್ಟು ಜನ ಫ್ಲಾಟ್ ಲೈಟಿಂಗ್ ಮಾಡುತ್ತಿದ್ದಾಗ ನನಗೆ ಬೇರೆ ದಾರಿಯಲ್ಲಿ ಹೋಗಲು ಧೈರ್ಯ ಬಂತು. ದಿಟ್ಟತನ, ಎದೆಗಾರಿಕೆ ಎಲ್ಲ ಫಾಲಿ ಅವರಿಂದ ಕಲಿತೆ. ನಾಯಕಿಯರ ಸೌಂದರ್ಯವನ್ನು ಹೆಚ್ಚಿಸುವ ತಂತ್ರವನ್ನೂ ಕಲಿತೆ” ಎಂದಿದ್ದಾರೆ. ಮಿಸ್ತ್ರಿ ಸಹೋದರರಂತೆ ಮೂರ್ತಿ ಕೂಡ ಗರಿಗರಿಯಾದ ಬಿಳಿ ಪ್ಯಾಂಟ್, ಬಿಳಿ ಶರ್ಟ್ ಧರಿಸಿ ಸ್ಟುಡಿಯೋಗೆ ಹೋಗುತ್ತಿದ್ದರು.
ನಾಟಕ ಪ್ರೀತಿ
ಮುಂಬಯಿ ಜೀವನದಲ್ಲಿ ವಿ.ಕೆ. ಮೂರ್ತಿ ಮತ್ತು ಸಂಧ್ಯಾ ಅವರು ಮೈಸೂರು ಅಸೋಸಿಯೇಶನ್ ಜೊತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದರು. ನಾಟಕ ಪ್ರದರ್ಶನ, ಸಂಗೀತ ಕಾರ್ಯಕ್ರಮ ಮುಂತಾಗಿ ಅಲ್ಲಿ ಅನೇಕ ಚಟುವಟಿಕೆಗಳನ್ನು ಆರಂಭಿಸಿದರು. ನಾಟಕ ನಿರ್ದೇಶನ, ನಟನೆಗಳು ಅವರಿಗೆ ಪ್ರಿಯವಾದ ಹವ್ಯಾಸವಾಗಿತ್ತು. ಸಂಧ್ಯಾ ಅವರು ತುಂಬ ನಾಟಕಗಳಲ್ಲಿ ಅಭಿನಯಿಸಿದರು. “ನಾನು ನಾಟಕ ಮಾಡಿಸುತ್ತಿದ್ದ ಕಾಲದಲ್ಲಿ ಯಾರಾದರೂ ತಿಂಗಳಿಗೆ ೧೦ ಸಾವಿರ ರೂ. ಸಂಬಳ ಕೊಡ್ತೀನಿ, ನಾಟಕ ಮಾಡಿಕೊಂಡಿರು ಅಂದಿದ್ರೆ ಖಂಡಿತ ಒಪ್ಪಿಕೊಂಡುಬಿಡುತ್ತಿದ್ದೆ; ಸಿನೆಮಾ ಕೂಡ ಬಿಟ್ಟುಬಿಡುತ್ತಿದ್ದೆ” ಎಂದು ಕೂಡ ಅವರು ಹೇಳಿದ್ದಿದೆ. ಮೊದಲಿಗೆ ಹೆಂಗಸರ ಪಾತ್ರಗಳನ್ನು ಗಂಡಸರೇ ಮಾಡುತ್ತಿದ್ದರು. ಮತ್ತೆ ನಿಧಾನವಾಗಿ ಪರಿಸ್ಥಿತಿ ಸುಧಾರಿಸಿತು.
“ಈಗ ಮಾಡುತ್ತಾರಲ್ಲ ಸೆಟ್ಸ್ ಇಲ್ಲದ ನಾಟಕಗಳು. ಅವು ನನಗೆ ಹಿಡಿಸುವುದಿಲ್ಲ. ಸೆಟ್ಸ್ ಹಾಕಿದರೆ ನಿಜವಾಗಿ ಕಾಣಬೇಕು; ನ್ಯಾಚುರಲ್ ಆಗಿರಬೇಕು. ಎಲ್ಲರಿಗೂ ಅಲ್ಲೇ ಇದ್ದೀವಿ ಅನ್ನಿಸಬೇಕು. ಬರೀ ಕರಿ ಪರದೆ ಹಾಕ್ಕೊಂಡು ಮಾಡಿದರೆ ಕೇವಲ ಡಯಲಾಗ್ ಹೇಳಿದಂತೆ ಆಗುವುದಿಲ್ಲವೆ? ನೀವೊಂದು ಘಟನೆಯ ಬಗ್ಗೆ ತೋರಿಸುತ್ತಿರುವಾಗ ಲೊಕೇಶನ್ನೇ ಇಲ್ಲದಿದ್ದರೆ ಹೇಗೆ? ಮನೆ ಅಂದುಬಿಟ್ಟು ಕುರ್ಚಿ, ಮೇಜು ಕೂಡ ಇಲ್ಲದಿದ್ದರೆ ಹೇಗೆ?” – ಎಂಬುದವರ ಪ್ರಶ್ನೆ. ಅವರು ತಮ್ಮ ನಾಟಕಗಳಿಗೆ ಸೆಟ್ಸ್ ಮಾಡಲು ಸ್ಟುಡಿಯೋ ಸಿಬ್ಬಂದಿಯನ್ನು ಕೂಡ ಬಳಸಿಕೊಳ್ಳುತ್ತಿದ್ದರು.
ವಿ.ಕೆ. ಮೂರ್ತಿ ಅವರ ಸಂಸಾರಜೀವನವು ಅಕ್ಷರಶಃ ಸಿಹಿ-ಕಹಿಗಳಿಂದ ಕೂಡಿತ್ತು. ಮೊದಲ ಪತ್ನಿ ಓರ್ವ ಗೆಳೆಯನ ತಂಗಿ ಸುಶೀಲಾ. ಹೆಣ್ಣುಮಗುವಿಗೆ ಜನ್ಮ ನೀಡಿದ (೧೯೫೮) ಆಕೆ ಕೆಲವೇ ಸಮಯದಲ್ಲಿ ತೀರಿಕೊಂಡರು. ಮಗು ಛಾಯಾಗೆ ಸೆರೆಬ್ರಲ್ ಪಾಲ್ಸಿ; ಎಲ್ಲರಂತೆ ಬದುಕಲಾರದ ಮಗು. ತನ್ನ ಬಿಡುವಿಲ್ಲದ ಜೀವನದ ನಡುವೆ ಗೆಳೆಯರ ಸಹಕಾರದಿಂದ ಮಗುವಿನ ಲಾಲನೆ-ಪಾಲನೆ ನಡೆಸುತ್ತಿದ್ದರು. ಆಗ ಅವರ ಜೀವನದಲ್ಲಿ ಸಂಧ್ಯಾ ಬಂದರು. ಬೆಂಗಳೂರಿನ ಪ್ರಸಿದ್ಧ ಆಯುರ್ವೇದ ವಿದ್ವಾಂಸರೂ, ಸ್ವಾತಂತ್ರ್ಯಯೋಧರೂ ಆದ ಪಾರ್ಥನಾರಾಯಣ ಪಂಡಿತರ ಮಗಳಾದ ಆಕೆ ಎಂ.ಎ. ಕಲಿಯಲು ಮುಂಬಯಿಗೆ ಬಂದಿದ್ದರು. ಸಮಾನ ಸ್ನೇಹಿತರ ಮೂಲಕ ಪರಿಚಯವಾದದ್ದು ಮದುವೆ ಪ್ರೊಪೋಸಲ್ ಮಾಡುವ ತನಕ ಮುಂದುವರಿಯಿತು. “ನಿನಗೆ ಮಗುವಾದರೆ ಈ ಮಗುವನ್ನು ಅಲಕ್ಷಿಸಬಾರದು” ಎಂದು ತಂದೆ ಸಂಧ್ಯಾಗೆ ಹೇಳಿದ್ದರು. ಆಕೆ ಆ ಕೆಲಸವನ್ನು ಬಹು ಚೆನ್ನಾಗಿ ನಿರ್ವಹಿಸಿದರು. ಮಗು ಚೆನ್ನಾಗಿ ಅವಳ ಗೆಳತಿಯೇ ಆದಳು. ಚಿಕಿತ್ಸೆಯಿಂದ ಆಕೆ ತುಂಬ ಸುಧಾರಿಸಿದಳು. ಮೂರ್ತಿ ದಂಪತಿಗೆ ಆಕೆ ಒಬ್ಬಳೇ ಮಗಳು.
ಕುಟ್ಟಿ–ಗುರುದತ್ ಜೋಡಿ
ನಿರ್ದೇಶಕ ಗುರುದತ್ ಮತ್ತು ವಿ.ಕೆ. ಮೂರ್ತಿ ಅವರ ಮೊದಲ ಭೇಟಿ ಆದದ್ದು ೧೯೫೦ರಲ್ಲಿ. ಪುಣೆಯ ಪ್ರಭಾತ್ ಸ್ಟುಡಿಯೋದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಇಬ್ಬರೂ ತುಂಬ ಸ್ನೇಹಿತರಾದರು. ಆಗ ಒಬ್ಬರಿಗೊಬ್ಬರು ಮಾತುಕೊಟ್ಟಿದ್ದರಂತೆ – ಯಾರಿಗೆ ಮೊದಲು ಬ್ರೇಕ್ ಸಿಗುತ್ತದೋ ಅವರು ಇನ್ನೊಬ್ಬರಿಗೆ ಬ್ರೇಕ್ ಕೊಡಬೇಕು ಎಂಬುದಾಗಿ. ‘ಬಾಜಿ’ ಚಿತ್ರದಲ್ಲಿ ನಿರ್ದೇಶಕನಾಗಿ ಗುರುದತ್ಗೆ ಬ್ರೇಕ್ ಸಿಕ್ಕಿತು. ಮುಂದೆ ಇಬ್ಬರೂ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದರು. ಆ ರೀತಿಯಲ್ಲಿ ಸೃಷ್ಟಿಸಿದ ಮಾಯಾ ಜಗತ್ತು ಈಗ ಸಿನೆಮಾ ಇತಿಹಾಸ!
‘ಪ್ಯಾಸಾ’, ‘ಕಾಗಜ್ ಕೇ ಫೂಲ್’ ಮತ್ತು ‘ಸಾಹಿಬ್, ಬೀಬೀ ಔರ್ ಗುಲಾಮ್’ ಚಿತ್ರಗಳಂತೂ ಇಡೀ ಚಿತ್ರರಂಗದ ಪಥದರ್ಶಕಗಳಾಗಿಬಿಟ್ಟವು. ೧೯೫೨ರಲ್ಲಿ ಮೂರ್ತಿ ಸ್ವತಂತ್ರವಾಗಿ ಕ್ಯಾಮೆರಾಮನ್ ಆದ ಮೊದಲ ಚಿತ್ರ ‘ಜಾಲ್’ ಬಂತು. ಮೊದಲೇ ಮಾಡಿದ್ದರು. ಅಧಿಕೃತವಾಗಿ ಮಾಡಿದ್ದು ಇದು. ಗುರುದತ್ ನಿರ್ದೇಶನ. ಮೂರ್ತಿ ಛಾಯಾಗ್ರಹಣದ ಚಿತ್ರಗಳು ಕಾವ್ಯದ ಮಟ್ಟಕ್ಕೇರಿದವು.
ಸಿನೆಮಾಗಳು ಒಂದೆಡೆ ಅದ್ಭುತ ಯಶಸ್ಸನ್ನು ಕಾಣುತ್ತಿರುವಾಗಲೇ ಗುರುದತ್ ಅವರ ವೈಯಕ್ತಿಕ ಜೀವನವು ದುರಂತದತ್ತ ಸಾಗುತ್ತಿತ್ತು. ಅದು ಮೂರ್ತಿ ಅವರಿಗೆ ತುಂಬ ನೋವು ತಂದ ವಿಚಾರವಾಗಿತ್ತು. ಚಿತ್ರನಟಿ ಗೀತಾರಾಯ್ ಮದುವೆಯಾಗಿ ಮಕ್ಕಳೂ ಆದವು. ನಟಿಯಾಗಿ ವಹೀದಾ ರೆಹಮಾನ್ ಗುರುದತ್ ಚಿತ್ರಕ್ಕೆ ಬಂದಳು. ಆ ಸಂಬಂಧ ಮೂರ್ತಿ ಹೀಗೆ ಹೇಳಿದ್ದಾರೆ: “ವಹೀದಾ-ಗುರುದತ್ ನಡುವೆ ಮೊದಲೆಲ್ಲ ಸರಿಯಾಗಿಯೇ ಇತ್ತು. ಆಮೇಲೇನೋ ಶುರುವಾಯ್ತು. ಆದರೆ ಗುರುದತ್ರಿಗೆ ಗೀತಾಳನ್ನು ಕಂಡರೆ, ಮಕ್ಕಳನ್ನು ಕಂಡರೆ ಅಪಾರ ಪ್ರೀತಿ ಇತ್ತು. ಅವಳು ಅವನಿಗಿಂತ ಹೆಚ್ಚು ರಂಪ ಮಾಡಿಬಿಟ್ಟಳು. ವಹೀದಾ, ಗುರುದತ್ ಒಂದೇ ಮನೆಯಲ್ಲೇನೂ ಇರಲಿಲ್ಲ. ಏನೋ ಸ್ವಲ್ಪ ದಿನ ಸರಿಹೋಗುತ್ತೇಂತ ಗೀತಾ ಸುಮ್ಮನಿದ್ದುಬಿಡಬಹುದಾಗಿತ್ತು. ಅವನು ದಿನಾ ಮನೆಗೆ ಬರೋನು, ಇರೋನು. ಅವಳು ಸ್ವಲ್ಪ ತಾಳ್ಮೆಯಿಂದ ಇರಬಹುದಾಗಿತ್ತು. ಅವನು ತುಂಬಾ ಸೆಂಟಿಮೆಂಟಲ್ ಫೆಲೋ… ಮುಂದಿನದು ಗೊತ್ತೇ ಇದೆ. ಒಂದು ಅಪೂರ್ವ ಪ್ರತಿಭೆ ತನ್ನ ಕೊನೆಯನ್ನು ತಾನೇ ತಂದುಕೊಂಡದ್ದು.”
ಇದೇ ವೇಳೆ ವಿ.ಕೆ. ಮೂರ್ತಿ ಅವರ ವೈಯಕ್ತಿಕ ಜೀವನ ಆದರ್ಶಪ್ರಾಯವಾದದ್ದು. ತನ್ನ ಒಂದು ನೋವನ್ನು (ಮಗಳ ಅಸಾಮರ್ಥ್ಯ) ಅವರು ಎದುರಿಸಿದ ರೀತಿಯೂ ಅದ್ಭುತ. ಚಿತ್ರರಂಗದಲ್ಲಿರಲು ಇವರು ಲಾಯಕ್ಕಲ್ಲ ಎಂದು ಪತ್ನಿಯಿಂದಲೇ ತಮಾಷೆ ಮಾಡಿಕೊಂಡವರು ಅವರು!
ಭಾವನೆಯಾಗಿ ಬಿಂಬ: ಮೂರ್ತಿ ತತ್ತ್ವ
ಸಿನೆಮಾಗಳ ಬಗ್ಗೆ ತಿಳಿಯುತ್ತ ಹೋದಂತೆ ನನಗೆ ವಿ.ಕೆ. ಮೂರ್ತಿ ಅವರ ಅಸಿಸ್ಟೆಂಟಾಗಿ ಕೆಲಸ ಮಾಡಬೇಕೆನ್ನುವ ಆಸೆ ಅಂಕುರಿಸಿತು. ಆಗ ನಾನು ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ನಲ್ಲಿ ಮೋಶನ್ ಪಿಕ್ರ್ಸ್ ಟೆಕ್ನಿಕ್ ಡಿಪ್ಲೊಮಾದ ವಿದ್ಯಾರ್ಥಿ. (ಮೂರ್ತಿ ಅಲ್ಲೇ ಕಲಿತದ್ದು) ಮೂರು ವರ್ಷಗಳಲ್ಲಿ ಅವರ ಅಸಿಸ್ಟೆಂಟ್ ಆಗುವ ಆಸೆ ದೃಢವಾಗಿ ಬೇರುಬಿಟ್ಟಿತು. ಹೋಗಿ ಕೇಳಿದಾಗ ಸೀದಾ ಸೇರಿಸಿಕೊಂಡರು.
ಅವರ ಛಾಯಾಗ್ರಹಣ ಮತ್ತು ಗುರುದತ್ ನಿರ್ದೇಶನದ ‘ಕಾಗಜ್ ಕೇ ಫೂಲ್’ ನೋಡಿದಾಗ ನನ್ನ ಸಿನಿಮ್ಯಾಟಿಕ್ ವಿಶುವಲ್ ಸೆನ್ಸಿಬಿಲಿಟಿಯ ಬೀಜಗಳು ಮೊಳೆತವು. ಅನಂತರ ‘ಸಾಹಿಬ್, ಬೀಬೀ ಔರ್ ಗುಲಾಮ್’ ಇವು ಮತ್ತು ಇವುಗಳಿಗಿಂತ ಮೊದಲು ಬಂದ ‘ಪ್ಯಾಸಾ’ ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್ಗಳಲ್ಲಿ ಸೇರುತ್ತವೆ. ಇವು ಭಾರತೀಯ ಸಿನೆಮಾ ಇತಿಹಾಸ ದಾಖಲಿಸಿದ ಶ್ರೇಷ್ಠ ಬಿಂಬಗಳು. ಗುರುದತ್ ಮತ್ತು ಮೂರ್ತಿ ಅವರ ಸೂಕ್ಷ್ಮ ಕಲಾತ್ಮಕ ಸ್ಪಂದನದ ಸಾಮರಸ್ಯಕ್ಕೆ ಇವು ಸಾಕ್ಷಿ. ಇಲ್ಲಿ ಮೂರ್ತಿಸಾಬ್ ಭಾರತೀಯ ಚಿತ್ರರಂಗಕ್ಕೆ ಆಧುನಿಕ ಸಂವೇದನೆಯನ್ನು ತಂದಿದ್ದರು. ಇದು ಸತ್ಯಜಿತ್ರಾಯ್ ಮತ್ತು ಸುಬ್ರತೋಮಿತ್ರ ಅವರ ಜೋಡಿಯಂತೆಯೇ ಅಪೂರ್ವವಾದದ್ದು.
ಗುರುದತ್ ಮತ್ತು ವಿ.ಕೆ. ಮೂರ್ತಿ ಅವರು ಸೃಷ್ಟಿಸಿದ ದೃಶ್ಯಗಳಿಂದ ಹುಟ್ಟಿಕೊಂಡ ಅತಿಮುಖ್ಯ ಅಂಶಗಳೆಂದರೆ ಭಾವನೆಗಳು. ಹಲವು ವರ್ಷ ನಾನು ಮೂರ್ತಿಸಾಬ್ ಅವರ ಅಸಿಸ್ಟೆಂಟ್ ಆಗಿದ್ದೆ. ಅವರ ನಂಬಿಕೆ ತುಂಬ ಸರಳವಾಗಿತ್ತು: ‘ಚಿತ್ರಕತೆ ಹೇಳುವುದು ಮನುಷ್ಯರ ಬಗ್ಗೆ. ಮನುಷ್ಯ ಸಂಬಂಧಗಳೆಂದರೆ ಭಾವನೆಗಳ ತಾಕಲಾಟಗಳು. ಛಾಯಾಗ್ರಾಹಕನ ಮೊದಲ ಜವಾಬ್ದಾರಿಯೆಂದರೆ ತೆರೆಯ ಮೇಲಿನ ಘಟನೆಗಳು ನೋಡುಗರ ಭಾವನೆಗಳನ್ನು ತಟ್ಟಿ ಎಬ್ಬಿಸಿ ಅವರು ಚಿತ್ರಕತೆಗೆ ಸ್ಪಂದಿಸುವಂತಹ ಬಿಂಬಗಳನ್ನು ಸೃಷ್ಟಿಸುವುದು. ಒಬ್ಬ ಸಿನೆಛಾಯಾಗ್ರಾಹಕ ಈ ಉದ್ದೇಶಕ್ಕಾಗಿ ತನ್ನೆಲ್ಲ ತಂತ್ರಗಳನ್ನು ಬಳಸಬೇಕು.’ ನನಗೆ ಇದೇ ಗುರುಮಂತ್ರ; ನನ್ನ ಪ್ರತಿಯೊಂದು ಕೆಲಸದಲ್ಲಿಯೂ ಇದೇ ನನಗೆ ಮಾರ್ಗದರ್ಶನ ಮಾಡುವುದು. ಮೂರ್ತಿಸಾಬ್ ಅವರ ತತ್ತ್ವ-ಇಮೇಜ್ ಆ್ಯಸ್ ಇಮೋಶನ್ (ಭಾವನೆಯಾಗಿ ಬಿಂಬ).
– ಗೋವಿಂದ ನಿಹಲಾನಿ, ಸಿನೆಛಾಯಾಗ್ರಾಹಕ, ನಿರ್ದೇಶಕ
ಕೈಲಾಸಂ: ವಿ.ಕೆ. ಮೂರ್ತಿ ಕಂಡಂತೆ
ನ್ಯಾಷನಲ್ ಹೈಸ್ಕೂಲ್ ಟೀಚರ್ ರಾಮರಾವ್ ಎಂಬವರು ಖ್ಯಾತ ನಾಟಕಕಾರ ಟಿ.ಪಿ. ಕೈಲಾಸಮ್ ಅವರಿಗೆ ಆಪ್ತರಾಗಿದ್ದರು. ಅವರು ಒಮ್ಮೆ ಕೈಲಾಸಮ್ ಭೇಟಿಗೆ ಹೋಗುವಾಗ ವಿದ್ಯಾರ್ಥಿ ಮೂರ್ತಿಯವರನ್ನು ತನ್ನ ಜೊತೆ ಕರೆದುಕೊಂಡು ಹೋದರು. ಆಗ ತಾನು ಕಂಡ ಕೈಲಾಸಮ್ ಬಗ್ಗೆ ಮೂರ್ತಿ ನೀಡಿದ ವಿವರಗಳಿವು: “ಮೊದಲು ಕೈಲಾಸಂ ಅವರ ತಂದೆಯ ಮನೆ ‘ವೈಟ್ಹೌಸ್’ನಲ್ಲಿದ್ದರು. ನಾವು ಹೋದಾಗ ಆಗಲೇ ವೈಟ್ಹೌಸ್ ಮಾರಾಟವಾಗಿಹೋಗಿತ್ತು. ಆ ಮನೆಯ ಪಕ್ಕದಲ್ಲೇ ಒಂದು ಔಟ್ಹೌಸಿತ್ತು. ಕೈಲಾಸಂ ಅವರ ತಂದೆ ತಮ್ಮ ಮನೆ ಅಡುಗೆಯವನಿಗೆ ಅದನ್ನು ಉಡುಗೊರೆಯಾಗಿ ಕೊಟ್ಟುಬಿಟ್ಟಿದ್ದರು. ಅವನು ಅಲ್ಲೊಂದು ಅಂಗಡಿ ತೆರೆದುಕೊಂಡಿದ್ದ. ಬೀಡಿ, ಸಿಗರೇಟು, ಪೆಪ್ಪರ್ಮಿಂಟ್ ಎಲ್ಲ ಮಾರುತ್ತಿದ್ದ. ಹಿಂದುಗಡೆ ಸ್ವಲ್ಪ ಜಾಗ ಇರುತ್ತಲ್ಲಾ, ಅಲ್ಲೇ ಕೈಲಾಸಂ ಮಲಗಿಕೊಳ್ಳುತ್ತಿದ್ದರು.
“ನಾವು ಆಲ್ಲಿ ಹೋಗಿ ಕೂಗಿದ ತಕ್ಷಣ ಕೈಲಾಸಂ ‘ಪ್ಲೀಸ್ ಕೂತ್ಕೊಳ್ಳಿ, ರೆಡಿಯಾಗಿ ರ್ತೀನಿ’ ಅಂದ್ರು. ಹನ್ನೆರಡೂವರೆ ಗಂಟೆಯವರೆಗೂ ಕಾದಿದ್ದೆವು. ಹಿಂದುಗಡೆ ಯಾವುದೋ ಮನೆಯಲ್ಲಿ ಅವರು ಸ್ನಾನ ಮಾಡಿ ಬರುವುದು ತುಂಬಾ ತಡವಾಯ್ತು. ಪಂಚೆ, ಒಂದು ಕಪ್ಪು ತೋಳಿಲ್ಲದ ಬನಿಯನ್ ಹಾಕಿಕೊಂಡು ಬಂದರು. ಕೈಲಾಸಂ ಅವರನ್ನು ನಾನು ಕಂಡದ್ದು ಅದೇ ಮೊದಲು. ಅನಂತರ ನ್ಯಾಷನಲ್ ಹೈಸ್ಕೂಲಿನಲ್ಲಿ ಅವರು ನಾಟಕಗಳನ್ನು ಓದುತ್ತಿದ್ದಾಗ ತಪ್ಪದೆ ಹೋಗುತ್ತಿದ್ದೆ. ಸೊಗಸಾಗಿ ಓದುತ್ತಿದ್ದರು. ಪುಸ್ತಕ ನೋಡಿಕೊಳ್ತಾ ಇರಲಿಲ್ಲ. ಶುರು ಮಾಡಿಬಿಟ್ರೆ ಹೇಳ್ತಾ ಹೋಗುತ್ತಿದ್ದರು.
“ಒಂದು ಸಲ ಟೌನ್ಹಾಲಿನಲ್ಲಿ ಕೈಲಾಸಂ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೆವು. ಆಗ ಕೈಲಾಸಂ ಮತ್ತು ಅವರ ಹೆಂಡತಿ ಒಟ್ಟಿಗೆ ಇರಲಿಲ್ಲ ಅಂತ ಕೇಳಿದ್ದೆವು. ಆವತ್ತು ಅವರ ಹೆಂಡತಿ ಬಂದು ನಾನು ಅವರಿಗೆ ಒಂದು ನಮಸ್ಕಾರ ಮಾಡಿ ಹೊರಟುಹೋಗುತ್ತೇನೆಂದು ಕೇಳಿಕೊಂಡರು.
ವ್ಯವಸ್ಥಾಪಕರು ಕೈಲಾಸಂ ಅವರಲ್ಲಿ ಈ ವಿಷಯವನ್ನು ಕೇಳಿಕೊಂಡಾಗ ಅವರು ಒಪ್ಪಿದರು. ಆಕೆ ಸುಮ್ಮನೆ ಬಂದು ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿ ಹೊರಟುಹೋದರು. ಎಷ್ಟೋ ಸಲ ಅವರ ರೀಡಿಂಗ್ ಇದ್ದಾಗ ಕೂಡ ಬಂದು ನಮಸ್ಕರಿಸಿ ಹೋಗುತ್ತಿದ್ದರು. ಮುಂದೊಮ್ಮೆ ಕೈಲಾಸಂ ಬಾಂಬೆಗೆ ಹೋಗಿ ದೀರ್ಘಕಾಲ ಅಲ್ಲಿದ್ದ ಬಗ್ಗೆಯೂ ಮೂರ್ತಿ ಹೇಳಿದ್ದಾರೆ.