ಹಿಂದುಗಳು ಈ ಬೇಡಿಕೆಗಳನ್ನು ಬೆಂಬಲಿಸಬೇಕು. ಅದನ್ನು ವೈಸರಾಯ್ಗೆ ಸಲ್ಲಿಸಿ, ಅದಕ್ಕೆ ಆತ ಒಪ್ಪದಿದ್ದರೆ ಜೆಹಾದ್ ನಡೆಯುತ್ತದೆಂದು ಎಚ್ಚರಿಸಬೇಕು. ಹಿಂದುಗಳ ಸಹಾಯಕ್ಕೆ ಪ್ರತಿಯಾಗಿ ಮೌಲ್ವಿ ಅಬ್ದುಲ್ ಬಾರಿ ಅವರು ಶೇಕ್–ಉಲ್–ಇಸ್ಲಾಂ ಎನ್ನುವ ನೆಲೆಯಲ್ಲಿ ಒಂದು ಫತ್ವಾ ನೀಡುತ್ತಾರೆ. ಅದರಲ್ಲಿ ಅವರು ಇಬ್ರಾಹಿಂ ಮೂಲತಃ ಬಲಿ ನೀಡಿದ್ದು ಕುರಿಯನ್ನೇ ವಿನಾ ದನವನ್ನಲ್ಲ ಎಂದು ಘೋಷಿಸುತ್ತಾರೆ; ಮತ್ತು ಮುಂದೆ ಗೋವಧೆಯನ್ನು ನಿಷೇಧಿಸಲಾಗುತ್ತದೆ ಎಂದು ಪ್ರಕಟಿಸುತ್ತಾರೆ – ಎಂದು ತಿಳಿಸಲಾಯಿತು. ಆದರೆ ದೇಶದ ವಿವಿಧ ಭಾಗಗಳಲ್ಲಿ ಹಿಂಸೆ ಸ್ಫೋಟಗೊಂಡ ಕಾರಣ ಆ ಯೋಜನೆ ವಿಫಲವಾಗಿರಬೇಕೆಂದು ನಂಬಲಾಗಿದೆ.
ಡಿಸೆಂಬರ್ ೩೦-೩೧, ೧೯೧೮ರಂದು ದೆಹಲಿಯಲ್ಲಿ ನಡೆದ ಅಖಿಲ ಭಾರತ ಮುಸ್ಲಿಂ ಲೀಗ್ ಸಮಾವೇಶದಲ್ಲಿ ಟರ್ಕಿಯ ಘಟನೆಗಳ (ಒಟ್ಟೊಮನ್ ಸಾಮ್ರಾಜ್ಯದ ಪತನ) ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಆತಂಕದಿಂದ ಕೂಡಿದ ಹೇಳಿಕೆಯನ್ನು ಪ್ರಕಟಿಸಲಾಯಿತು. ಆದರೆ ಟರ್ಕಿಗೆ ಸಂಬಂಧಿಸಿದ ಚಳವಳಿ ಬಹುತೇಕ ಸಂಯುಕ್ತ ಸಂಸ್ಥಾನ (ಯುನೈಟೆಡ್ ಪ್ರಾವಿನ್ಸ್), ಬಂಗಾಳ, ಪಂಜಾಬ್, ಬೊಂಬಾಯಿ ಮತ್ತು ಸಿಂಧ್ಗಳ ದೊಡ್ಡ ನಗರಗಳಿಗೆ ಸೀಮಿತವಾಗಿತ್ತು. ಚಳವಳಿಗೆ ಕೇವಲ ಮುಸಲ್ಮಾನರ ಸಂಘಟನೆ ಸಾಕಿರಲಿಲ್ಲ. ಪಾನ್-ಇಸ್ಲಾಮಿಸ್ಟ್ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರಲು ಹಿಂದುಗಳ ಬೆಂಬಲ ಅಗತ್ಯ ಎಂಬುದು ಎದ್ದು ತೋರುತ್ತಿತ್ತು.
ಗಾಂಧಿ – ಬಾರಿ ಒಂದೇ
ಸ್ವಾತಂತ್ರ್ಯ ಹೋರಾಟದ ಬಗೆಗಿನ ಒಂದು ಮೂಲವು ಮಾರ್ಚ್ ೩, ೧೯೧೯ರ ಒಂದು ವರದಿಯಲ್ಲಿ ಹೀಗೆ ಹೇಳಿದೆ: ಮಾರ್ಚ್ ತಿಂಗಳಿನಲ್ಲಿ ಗಾಂಧಿಯವರು ಲಕ್ನೋದಲ್ಲಿ ಮೌಲ್ವಿ ಅಬ್ದುಲ್ ಬಾರಿ ಅವರ ಅತಿಥಿಯಾಗಿದ್ದರು. ಒಬ್ಬ ಮಾಹಿತಿದಾರನ ಪ್ರಕಾರ ಗಾಂಧಿಯವರು ಸ್ವಲ್ಪ ಸಮಯದ ಹಿಂದೆ ಅಬ್ದುಲ್ ಬಾರಿ ಅವರನ್ನು ಭೇಟಿ ಮಾಡಿ ರೌಲೆಟ್ ಕಾಯ್ದೆಯ ವಿರುದ್ಧ ಮಾಡಬೇಕಾದ ಸತ್ಯಾಗ್ರಹದ ಕುರಿತು ಚರ್ಚಿಸಿದರು. ಚಳವಳಿ ಯಶಸ್ವಿ ಆಗುವುದೆಂದು ಗಾಂಧಿ ತುಂಬ ಆಶಾವಾದಿಯಾಗಿದ್ದರು. ಅಬ್ದುಲ್ ಬಾರಿ ಅವರು, ನನಗೆ ಎಲ್ಲ ನಗರಗಳಲ್ಲಿ ಪ್ರತಿನಿಧಿಗಳಿದ್ದಾರೆ; ಅಸಹಕಾರ ಚಳವಳಿ ಸರ್ಕಾರಿ ಅಧಿಕಾರಿಗಳ ಕೆಳಗಿನ ಸಿಬ್ಬಂದಿ ಮತ್ತು ಸೇನೆಗೆ ಕೂಡ ವಿಸ್ತರಿಸುತ್ತದೆ ಎಂದು ಹೇಳಿದರು. ಇದರಿಂದ ಹಿಂದೂ-ಮುಸ್ಲಿಂ ಏಕತೆಯು ಪೂರ್ಣವಾಗುತ್ತದೆ; ಸರ್ಕಾರವು ಅಡಿಮೇಲಾಗುತ್ತದೆ. ಚಳವಳಿಯು ಅತ್ಯುಚ್ಚ ಮಟ್ಟದಲ್ಲಿದ್ದಾಗ ಉಲೇಮಾಗಳು, ಮೌಲ್ವಿಗಳು ಮತ್ತು ಮುಸಲ್ಮಾನರ ದೊಡ್ಡ ಸಭೆಯನ್ನು ಏರ್ಪಡಿಸಬೇಕು; ಅಲ್ಲಿ ಅಬ್ದುಲ್ ಬಾರಿ ಅವರನ್ನು ಶೇಕ್-ಉಲ್-ಇಸ್ಲಾಂ ಆಗಿ ಆರಿಸಬೇಕು; ಮತ್ತು ಖಿಲಾಫತ್, ಪವಿತ್ರ ಸ್ಥಳಗಳು ಇತ್ಯಾದಿ ಬಗೆಗಿನ ಮುಸ್ಲಿಮರ ಬೇಡಿಕೆಗಳ ಪಟ್ಟಿ ತಯಾರಿಸಬೇಕು ಎಂದು ಒಮ್ಮತಕ್ಕೆ ಬರಲಾಯಿತು.
ಹಿಂದುಗಳು ಈ ಬೇಡಿಕೆಗಳನ್ನು ಬೆಂಬಲಿಸಬೇಕು. ಅದನ್ನು ವೈಸರಾಯ್ಗೆ ಸಲ್ಲಿಸಿ, ಅದಕ್ಕೆ ಆತ ಒಪ್ಪದಿದ್ದರೆ ಜೆಹಾದ್ ನಡೆಯುತ್ತದೆಂದು ಎಚ್ಚರಿಸಬೇಕು. ಹಿಂದುಗಳ ಸಹಾಯಕ್ಕೆ ಪ್ರತಿಯಾಗಿ ಬಾರಿ ಅವರು ಶೇಕ್-ಉಲ್-ಇಸ್ಲಾಂ ಎನ್ನುವ ನೆಲೆಯಲ್ಲಿ ಒಂದು ಫತ್ವಾ ನೀಡುತ್ತಾರೆ. ಅದರಲ್ಲಿ ಅವರು ಇಬ್ರಾಹಿಂ ಮೂಲತಃ ಬಲಿ ನೀಡಿದ್ದು ಕುರಿಯನ್ನೇ ವಿನಾ ದನವನ್ನಲ್ಲ ಎಂದು ಘೋಷಿಸುತ್ತಾರೆ; ಮತ್ತು ಮುಂದೆ ಗೋವಧೆಯನ್ನು ನಿಷೇಧಿಸಲಾಗುತ್ತದೆ ಎಂದು ಪ್ರಕಟಿಸುತ್ತಾರೆ – ಎಂದು ತಿಳಿಸಲಾಯಿತು. ಆದರೆ ದೇಶದ ವಿವಿಧ ಭಾಗಗಳಲ್ಲಿ ಹಿಂಸೆ ಸ್ಫೋಟಗೊಂಡ ಕಾರಣ ಆ ಯೋಜನೆ ವಿಫಲವಾಗಿರಬೇಕೆಂದು ನಂಬಲಾಗಿದೆ.
ಆ ಹೊತ್ತಿಗೆ ಗಾಂಧಿ ಮತ್ತು ಅಬ್ದುಲ್ ಬಾರಿ ಒಬ್ಬರು ಇನ್ನೊಬ್ಬರನ್ನು ಪರಸ್ಪರ ಬಳಸಿಕೊಳ್ಳುತ್ತಿದ್ದರು. ತಮ್ಮ ಉದ್ದೇಶ ಸಾಧನೆಗೆ ಮುಸ್ಲಿಮರ ಬೆಂಬಲವನ್ನು ಗಳಿಸುವುದಕ್ಕಾಗಿ ಗಾಂಧಿ ಖಿಲಾಫತ್ ವಿಷಯವನ್ನು ಬಳಸಿಕೊಂಡರು. ಆ ಮೂಲಕ ಇಡೀ ಭಾರತದ ನಾಯಕತ್ವವನ್ನು ಗಳಿಸಿಕೊಳ್ಳುವುದು ಅವರ ಗುರಿಯಾಗಿತ್ತು. ಇಲ್ಲವಾದರೆ ಟರ್ಕಿಯ ಬಗ್ಗೆ ತನಗೇನೂ ಇಲ್ಲ ಎಂದವರು ಹೇಳಿದ್ದೂ ಇದೆ. ಭಾರತದ ಮುಸ್ಲಿಮರು ತನಗೆ ಬೇಕು ಎಂಬುದು ಅವರ ನಿಲವು. ಆ ವಿಷಯವನ್ನು ಎತ್ತಿಹಿಡಿದದ್ದು ಸರಿ ಎಂದವರು ಸಮರ್ಥಿಸಿಕೊಂಡಿದ್ದರು.
ಇನ್ನೊಂದೆಡೆ ಅಬ್ದುಲ್ ಬಾರಿ ಅವರಿಗೆ ಗಾಂಧಿಯವರ ಬೆಂಬಲವೆಂದರೆ ಖಿಲಾಫತ್ ಚಳವಳಿಯನ್ನು ಬಲಪಡಿಸಿದಂತೆ; ಮತ್ತು ಇಡೀ ಭಾರತ ಉಪಖಂಡದ ಶೇರ್-ಉಲ್-ಇಸ್ಲಾಂ ಎಂಬ ಕೀರ್ತಿ. ಇದಕ್ಕಾಗಿ ಆತ ತನ್ನ ಹಿಂದಿನ ನಿಲವನ್ನು ಬದಲಿಸಲು, ಅಂದರೆ ಗೋಸಂರಕ್ಷಣೆ ಬಗ್ಗೆ ಬೋಧಿಸಲು ಸಿದ್ಧರಿದ್ದರು. ರೌಲೆಟ್ ಕಾಯ್ದೆ ವಿರುದ್ಧದ ಸತ್ಯಾಗ್ರಹ ಅಲ್ಪಾವಧಿಯದಾಯಿತು, ಏಪ್ರಿಲ್ ೧೮ರಂದು ಗಾಂಧಿ ಸತ್ಯಾಗ್ರಹವನ್ನು ನಿಲ್ಲಿಸಿದರು.
ಇಸ್ಲಾಮಿಸ್ಟ್ ಬಲವರ್ಧನೆ
ಫಿರಂಗಿ ಮಹಲ್ ಸಂಬಂಧದ ಬೊಂಬಾಯಿಯ ಕೆಲವು ಶ್ರೀಮಂತ ಮುಸ್ಲಿಂ ವ್ಯಾಪಾರಿಗಳು ೧೯೧೯ರ ಮಾರ್ಚ್ ೧೯ರಂದು ಬಾಂಬೆ ಖಿಲಾಫತ್ ಕಮಿಟಿ ಸ್ಥಾಪನೆಗೆ ಹಣ ನೀಡಿದರು. ಅದೇ ವರ್ಷ ಮೇ ಮಧ್ಯಭಾಗದಲ್ಲಿ ಆಫಘಾನಿಸ್ತಾನದ ಅಮೀರ್ ಅಮಾನುಲ್ಲಾ ಬ್ರಿಟಿಷರ ಮೇಲೆ ಯುದ್ಧ ಸಾರಿದ. ಭಾರತದ ಪಾನ್-ಇಸ್ಲಾಮಿಸ್ಟರು ಕೂಡಲೆ ಅಮೀರನ ಏಜೆಂಟರನ್ನು ಸಂಪರ್ಕಿಸಿದರು. ಬಾರಿ ಒಂದು ಜೋರಾದ ಕರಪತ್ರವನ್ನು ಹೊರಡಿಸಿದರು; ಮತ್ತು ಸಂಯುಕ್ತ ಪ್ರಾಂತ (ಯು.ಪಿ.)ದಲ್ಲಿ ಒಂದು ಉದ್ದವಾದ ಜೆಹಾದಿ ಕರಪತ್ರವು ಪ್ರಕಟಗೊಂಡಿದ್ದು, ಮತೀಯ ಯುದ್ಧದ ಅಗತ್ಯಕ್ಕೆ ಅದು ಒತ್ತು ನೀಡಿತ್ತು.
ಟರ್ಕಿಯ ಪ್ರಕರಣದ ಬಗ್ಗೆ ಒತ್ತಾಯಿಸಲು ಲಂಡನ್ಗೆ ನಿಯೋಗಗಳು ಹೋದರೂ, ಲಂಡನ್ನಲ್ಲಿ ಪಾನ್-ಇಸ್ಲಾಮಿಸ್ಟ್ ಸಂಸ್ಥೆಗಳು ಪ್ರಯತ್ನಿಸಿದರೂ, ಮತ್ತು ಭಾರತದಲ್ಲಿ ಚಳವಳಿಗಳು ನಡೆದರೂ ಕೂಡ ಯಾವುದೇ ಫಲ ಸಿಗುವುದು ಕಾಣಲಿಲ್ಲ. ಅವರ ಭಾವನೆಗಳಿಗೆ ಒಟ್ಟಾದ ಅಭಿವ್ಯಕ್ತಿ ನೀಡಲು ಅದೇ ವರ್ಷ ಸೆಪ್ಟೆಂಬರ್ನಲ್ಲಿ ಲಕ್ನೋದಲ್ಲಿ ಅಖಿಲ ಭಾರತ ಮುಸ್ಲಿಂ ಸಮಾವೇಶವನ್ನು ಏರ್ಪಡಿಸಲಾಯಿತು. ಅದರಲ್ಲಿ ವಿಭಿನ್ನ ರಾಜಕೀಯ ನಿಲವುಗಳ ಸುಮಾರು ೧,೦೦೦ ಪ್ರಮುಖ ಮುಸ್ಲಿಂ ನಾಯಕರು ಭಾಗವಹಿಸಿದ್ದರು. ಅಲ್ಲಿ ಎರಡು ಮಹತ್ತ್ವದ ನಿರ್ಧಾರಗಳನ್ನು ಕೈಗೊಂಡರು:
೧. ಕೇಂದ್ರೀಯ ಸಮನ್ವಯ ಸಮಿತಿಯನ್ನು ಸ್ಥಾಪಿಸಬೇಕು.
೨. ಅಕ್ಟೋಬರ್ ೧೭, ೧೯೧೯ನ್ನು ಖಿಲಾಫತ್ ದಿನವಾಗಿ ಆಚರಿಸಬೇಕು.
ಮುಸ್ಲಿಂ ಲೀಗಿಗೆ ಸರ್ಕಾರದ ವಿರುದ್ಧ ಆಕ್ರಮಣಕಾರಿಯಾಗಿ ಹೋಗಲು ಮನಸ್ಸಿಲ್ಲವಾದ ಕಾರಣ ಅದಕ್ಕಾಗಿ ಖಿಲಾಫತ್ಗೆ ಸಂಬಂಧಿಸಿ ಒಂದು ತಾತ್ಕಾಲಿಕ ಸಂಘಟನೆಯನ್ನು ಸ್ಥಾಪಿಸುವುದು ಅಗತ್ಯವೆಂದು ಮುಸ್ಲಿಂ ನಾಯಕರು ಚಿಂತಿಸಿದರು. ಬಾಂಬೆ ಖಿಲಾಫತ್ ಕಮಿಟಿಯನ್ನು ಕೇಂದ್ರೀಯ ಸಂಸ್ಥೆ ಎಂದು ಸ್ವೀಕರಿಸಿ ದೇಶಾದ್ಯಂತ ಅದರ ಶಾಖೆಗಳನ್ನು ತೆರೆಯಲು ನಿರ್ಧರಿಸಿದರು. ನವೆಂಬರ್ ೧೧, ೧೯೧೯ರ ಸಭೆಯಲ್ಲಿ ಬಾಂಬೆ ಖಿಲಾಫತ್ ಕಮಿಟಿಯ ಹೆಸರನ್ನು ಸೆಂಟ್ರಲ್ ಖಿಲಾಫತ್ ಕಮಿಟಿ ಆಫ್ ಇಂಡಿಯಾ ಎಂದು ಬದಲಾಯಿಸಿದರು.
ಸೆಂಟ್ರಲ್ ಖಿಲಾಫತ್ ಕಮಿಟಿ
ಸೆಂಟ್ರಲ್ ಖಿಲಾಫತ್ ಕಮಿಟಿಯ ಇನ್ನೊಂದು ಹೆಸರು ಜಮೀಯತ್-ಎ-ಖಿಲಾಫತ್-ಎ-ಹಿಂದ್. ಅದೇ ಡಿಸೆಂಬರ್ನಲ್ಲಿ ಅಮೃತಸರದಲ್ಲಿ ಅದರ ಸಭೆ ನಡೆಯಿತು. ಸೆಂಟ್ರಲ್ ಖಿಲಾಫತ್ ಕಮಿಟಿಯು ತನ್ನ ಮುಂದಿರಿಸಿಕೊಂಡ ಗುರಿಗಳೆಂದರೆ – ಟರ್ಕಿಗೆ ನ್ಯಾಯಸಮ್ಮತ ಮತ್ತು ಗೌರವಯುತ ಶಾಂತಿಯನ್ನು ತರುವುದು; ಖಿಲಾಫತ್ ಸಮಸ್ಯೆಗೆ ಉತ್ತರ (ಪರಿಹಾರ) ಕಂಡುಕೊಳ್ಳುವುದು; ಇಸ್ಲಾಂ ಮತ್ತು ಅರೇಬಿಯದ ಪವಿತ್ರಸ್ಥಾನಗಳ ಸಮಸ್ಯೆಗೂ (ಶರೀಯತ್ನ ಆವಶ್ಯಕತೆಗಳಿಗೆ ಅನುಗುಣವಾದ) ಪರಿಹಾರ ಕಂಡುಕೊಳ್ಳುವುದು; ಟರ್ಕಿ ಸಾಮ್ರಾಜ್ಯದ ಘನತೆಗೆ ಸಂಬಂಧಿಸಿ ನೀಡಲಾದ ಭರವಸೆಗಳನ್ನು ಈಡೇರಿಸಿಕೊಳ್ಳುವುದು; ಈ ಉದ್ದೇಶಗಳಿಗಾಗಿ ಬ್ರಿಟಿಷ್ ಮಂತ್ರಿಗಳು ಮತ್ತು ಭಾರತದ ವೈಸರಾಯ್ರನ್ನು ಸಂಪರ್ಕಿಸುವುದು ಮತ್ತು ಭಾರತದ ಒಳಗೆ ಮತ್ತು ಹೊರಗೆ ಈ ಬಗ್ಗೆ ಪ್ರಚಾರ ನಡೆಸುವುದು.
ಸೆಂಟ್ರಲ್ ಖಿಲಾಫತ್ ಕಮಿಟಿಯಲ್ಲಿ(ಸಿಕೆಸಿ) ಮೊದಲಿಗೆ ಇನ್ನೂರು ಸದಸ್ಯರಿದ್ದರು. ೧೯೨೩ರ ಹೊತ್ತಿಗೆ ಅದು ೨೫೦ ಆಯಿತು. (ಬಾಂಬೆ ಪ್ರಾಂತದಲ್ಲಿ ೫೪, ಸಿಂಧ್ನಲ್ಲಿ ೨೦ ಮತ್ತು ಮದ್ರಾಸ್ನಲ್ಲಿ ೧೫). ಪ್ರಾಂತೀಯ ಕಮಿಟಿಗಳು ಸಿಕೆಸಿಯೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಹಾಗೂ ಸೆಂಟ್ರಲ್ ಮತ್ತು ಪ್ರಾಂತ ಸಮಿತಿಗಳು ನಿಧಿ ಸಂಗ್ರಹಿಸಬೇಕೆಂದಾಗಿತ್ತು. ನೂರಕ್ಕೂ ಅಧಿಕ ಸ್ಥಳೀಯ(ಲೋಕಲ್) ಸಮಿತಿಗಳಿದ್ದು, ಅವು ಬಹಳಷ್ಟು ಸದಸ್ಯರನ್ನು ಹೊಂದಿದ್ದವು. ಒಟ್ಟಿನಲ್ಲಿ ೧೯೨೦ರ ದಶಕದ ಕೊನೆಯ ವೇಳೆಗೆ ಮುಸ್ಲಿಂ ಲೀಗನ್ನು ಪುನಶ್ಚೇತನಗೊಳಿಸುವವರೆಗೂ ಸೆಂಟ್ರಲ್ ಖಿಲಾಫತ್ ಕಮಿಟಿಯೇ ಅತ್ಯಂತ ಶಕ್ತಿಶಾಲಿ ಮುಸ್ಲಿಂ ಸಂಘಟನೆಯಾಗಿದ್ದುದು.
ಖಿಲಾಫತ್ ವರ್ಕರ್ಸ್ (ಕಾರ್ಯಕರ್ತರು), ಖಿಲಾಫತ್ ಸ್ವಯಂಸೇವಕರು (ಗಿoಟuಟಿಣeeಡಿs) ಎಂದೆಲ್ಲ ಅವರು ತಮ್ಮನ್ನು ಕರೆದುಕೊಳ್ಳುತ್ತಿದ್ದರು. ಕೆಲವು ಕಡೆ ಖಿಲಾಫತ್ ಸದಸ್ಯ ಎಂದು ಗುರುತಿಸಿಕೊಳ್ಳಲು ಬಯಸುವವರಿಂದ ತಲಾ ನಾಲ್ಕಾಣೆ (ಇಂದಿನ ೨೫ ಪೈಸೆ) ಸಂಗ್ರಹಿಸುತ್ತಿದ್ದರು. ಸಾಮೂಹಿಕ ಸದಸ್ಯತ್ವದ ನೆಲೆಯಲ್ಲಿ ಕಾಂಗ್ರೆಸ್ ಮತ್ತು ಖಿಲಾಫತ್ಗಳ ನಡುವೆ ವ್ಯತ್ಯಾಸ ಇರಲಿಲ್ಲ. ಕಾಂಗ್ರೆಸ್ ಮತ್ತು ಖಿಲಾಫತ್ಗಳ ಸಂಯುಕ್ತ (ಕಂಬೈಂಡ್) ಆಫೀಸು ಇರುತ್ತಿತ್ತು. ಏಕೆಂದರೆ ಗಾಂಧಿಯವರ ಅಪೇಕ್ಷೆಯ ಮೇರೆಗೆ ೧೯೨೦ರ ಬೇಸಿಗೆಯ ಅನಂತರ ಕಾಂಗ್ರೆಸ್ ಸಂಸ್ಥೆ ಖಿಲಾಫತ್ ಕಮಿಟಿಯ ಬೇಡಿಕೆಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಿತ್ತು.
ಜಿನ್ನಾ ವಿರೋಧ
ಪಂಜಾಬ್, ಸಿಂಧ್, ಬೊಂಬಾಯಿ, ಯುನೈಟೆಡ್ ಪ್ರಾವಿನ್ಸ್ಸಸ್, ಬಿಹಾರ, ಬಂಗಾಳ, ಮದ್ರಾಸ್ಗಳಲ್ಲಿ ಖಿಲಾಫತ್ನ ಬೃಹತ್ ಸಭೆಗಳು ನಡೆದವು; ಚಳವಳಿ ಹಳ್ಳಿಗಳಿಗೂ ಹಬ್ಬಿತು. ಮುಸ್ಲಿಂ ಜನಸಮಾನ್ಯರಷ್ಟೇ ಅಲ್ಲ; ಉದಾರವಾದಿ(ಲಿಬರಲ್) ಮುಸ್ಲಿಮರು ಕೂಡ ಆ ಸಭೆಗಳಲ್ಲಿ ಭಾಗವಹಿಸುತ್ತಿದ್ದರು.
ಅಪವಾದವೆಂಬಂತೆ ಮಹಮ್ಮದಾಲಿ ಜಿನ್ನಾ ಥರದ ಕೆಲವು ಲಿಬರಲ್ ಮುಸ್ಲಿಮರು ಖಿಲಾಫತ್ ಚಳವಳಿಯನ್ನು ಒಂದು ಹುಸಿ ಮತೀಯ ಹುಚ್ಚು (False religious frenzy) ಎಂದು ತಿಳಿದಿದ್ದರು; ಅಂತಿಮವಾಗಿ ಅದರಿಂದ ಭಾರತಕ್ಕೆ ಅಥವಾ ಭಾರತದ ಮುಸ್ಲಿಮರಿಗೆ ಒಳ್ಳೆಯ ಫಲಿತಾಂಶವೇನೂ ಬರುವುದಿಲ್ಲ ಎಂದು ನೇರವಾಗಿಯೇ ಹೇಳುತ್ತಿದ್ದರು.
ಗಮನಿಸಬೇಕಾದ ಅಂಶವೆಂದರೆ, ಖಿಲಾಫತ್ ಚಳವಳಿಯ ಆರಂಭದ ವರ್ಷಗಳಲ್ಲಿ ಹಿಂದುಗಳ ಬಗ್ಗೆ ಅಥವಾ ಸ್ವರಾಜ್ ಚಳವಳಿಗೆ ಸಹಕಾರ ನೀಡುವ ಬಗ್ಗೆ ಉಲ್ಲೇಖವೇನೂ ಇಲ್ಲ. ಬದಲಾಗಿ ಸಿಂಧ್ನ ಖಿಲಾಫತ್ ಸಮಾವೇಶದ ಅಧ್ಯಕ್ಷ ಸೇಠ್ ಹಾಜಿ ಅಬ್ದುಲ್ಲಾ ಹಾರೂನ್ ಅವರು ತಮ್ಮ ಭಾಷಣದಲ್ಲಿ ಉಗ್ರಗಾಮಿಗಳು ಮತ್ತು ಹೋಂರೂಲರ್ಸ್ ಜೊತೆ ನಮ್ಮನ್ನು ಕೂಡಿಹಾಕಲಾಗಿದೆ ಎಂದು ಕಟುವಾಗಿ ಟೀಕಿಸಿದ್ದಿದೆ.
ಖಿಲಾಫತ್ಗೆ ಬೆಂಬಲ ಬೇಡ
ಹಿಂದೂ-ಮುಸ್ಲಿಂ ಒಗ್ಗಟ್ಟಿನ ಬಗ್ಗೆ ಖಿಲಾಫತ್ ಚಳವಳಿಯ ಬೆಂಬಲಿಗರಿಗೇನೇ ಸಂಶಯವಿತ್ತು. ೧೯೧೩ರಲ್ಲೇ ಮಹಮ್ಮದ್ ಆಲಿ, ಆಕಸ್ಮಿಕವಾದುದನ್ನು ಅಗತ್ಯವಾದದ್ದೆಂದು ತಿಳಿಯಬೇಡಿ; ಮತ್ತು ಶಬ್ದಗಳ ಪ್ರವಾಹದಲ್ಲಿ ಸಮಸ್ಯೆಯನ್ನು ಮುಳುಗಿಸಬೇಡಿ ಎಂದು ಹಿಂದೂ-ಮುಸ್ಲಿಂ ಎರಡೂ ಸಮುದಾಯಗಳ ನಾಯಕರನ್ನು ಎಚ್ಚರಿಸಿದ್ದರು. ಹಲವು ವರ್ಷಗಳ ನಂತರ ಮುಸ್ಲಿಂ ಲೀಗಿನ ಚೌಧರಿ ಖಲೀಕುಜ್ಮನ್ ತನ್ನ ನೆನಪುಗಳಲ್ಲಿ ಸ್ವಾಮಿ ಶ್ರದ್ಧಾನಂದರನ್ನು ದಿಲ್ಲಿಯ ಮಸೀದಿಯೊಳಗೆ ಕರೆದುಕೊಂಡು ಹೋದ ಮುಸ್ಲಿಮರ ಬಗ್ಗೆ ಹೇಳುತ್ತಾ ಕ್ಷುಲ್ಲಕ ಉದ್ರೇಕ (silly excitement) ಎಂದು ಆಕ್ಷೇಪಿಸಿದ್ದರು. ಸುಮಾರು ಮೂವತ್ತು ವರ್ಷಗಳ ಅನಂತರ ಬುದ್ಧಿವಂತರಾದ ನೆಹರು ವಿಭಿನ್ನ ಅತೃಪ್ತಿಗಳ ನಡುವೆ ಗಾಂಧಿ ಕೃತಕ ಏಕತೆಯನ್ನು ತಂದರು ಎಂದು ಬಣ್ಣಿಸಿದ್ದಿದೆ.
ಬಹುಸಂಖ್ಯಾತ ಹಿಂದುಗಳಿಗಾದರೋ ಖಿಲಾಫತ್ ಚಳವಳಿಯ ಮತೀಯ ಮತ್ತು ರಾಜಕೀಯ ಅಂಶಗಳು ಗಮನ ಸೆಳೆದಿರಲೇ ಇಲ್ಲ! ಅದರಲ್ಲಿ ಬಹುಶಃ ನಾಯಕರಾದ ಪಂಡಿತ್ ಮದನ ಮೋಹನ ಮಾಲವೀಯರು(೧೮೬೧-೧೯೪೮) ಪ್ರಮುಖ ಸಂದೇಹವಾದಿ(ಸ್ಕೆಪ್ಟಿಕ್). ೧೯೧೮ರ ಡಿಸೆಂಬರ್ನಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಅವರು, ಖಿಲಾಫತ್ ಚಳವಳಿಗೆ ಬೆಂಬಲ ನೀಡಬೇಕೆಂದು ಬಂದ ಪ್ರಸ್ತಾವವನ್ನು ತಳ್ಳಿಹಾಕಿದರು. ಇನ್ನೋರ್ವ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ಶಂಕರನ್ ನಾಯರ್(೧೮೫೭-೧೯೩೪) ಖಿಲಾಫತ್ ಸದಸ್ಯರ ಉದ್ದೇಶಗಳನ್ನು ಬಹಿರಂಗವಾಗಿ ಟೀಕಿಸಿದರು.
ಅಗ್ರಮಾನ್ಯ ನಾಯಕ ಬಾಲ ಗಂಗಾಧರ ತಿಲಕ್ (೧೮೫೬-೧೯೨೦) ಅವರು ಕೂಡ ಖಿಲಾಫತ್ ಚಳವಳಿಯ ವಿಷಯದಲ್ಲಿ ಸಂದೇಹವಾದಿ. ಸರ್ದಾರ್ ಪಟೇಲ್(೧೮೭೫-೧೯೫೦) ಮತ್ತು ಇಂದೂಲಾಲ್ ಯಾಜ್ಞಿಕ್(೧೮೯೨-೧೯೭೨) ಅವರು ಖಿಲಾಫತ್ನ ಪವಿತ್ರ ಧ್ಯೇಯದ ಬಗ್ಗೆ ಹಲವು ಅಪವಿತ್ರ ಜೋಕ್ ಮತ್ತು ತಮಾಷೆಗಳನ್ನೂ ವಿನಿಮಯ ಮಾಡಿಕೊಂಡಿದ್ದರು. ಬಿಪಿನ್ ಚಂದ್ರ ಪಾಲ್(೧೮೫೮-೧೯೩೨) ಪಾನ್-ಇಸ್ಲಾಮಿಸಮನ್ನು Pan-dreaded (ವಿಶಾಲ-ಭೀಕರ) Virus ಎಂದು ಬಣ್ಣಿಸಿ ಬೆಂಬಲ ನೀಡಲು ಹಿಂಜರಿದಿದ್ದರು. ಮೋತಿಲಾಲ್ ನೆಹರು ಅವರು (೧೮೬೧-೧೯೩೧), ಖಿಲಾಫತ್ಗಿಂತ ನಾವು ಗಮನಕೊಡಬೇಕಾದ ಹಲವಾರು ವಿಷಯಗಳು ನಮ್ಮ ಬಳಿಯೇ ಇವೆ ಎಂದು ಅಭಿಪ್ರಾಯಪಟ್ಟಿದ್ದರು. ಇನ್ನೋರ್ವ ನಾಯಕ ವಿ.ಎಸ್. ಶ್ರೀನಿವಾಸಶಾಸ್ತ್ರಿ ಅವರು (೧೮೬೯-೧೯೪೬ – ಗೋಖಲೆ ನಿಕಟವರ್ತಿಯಾದ ಅವರನ್ನು ಗಾಂಧಿಯವರು ಅಣ್ಣ ಎನ್ನುತ್ತಿದ್ದರು.) ಗಾಂಧಿಯವರಿಗೆ ಖಿಲಾಫತ್ ವಿಷಯದಿಂದ ದೂರವಿರಿ ಎಂದೇ ಸಲಹೆ ನೀಡಿದ್ದರು. ಸರ್ಕಾರಕ್ಕೆ ಮುಜುಗರ ಉಂಟುಮಾಡುವುದು ಬೇಡ ಎಂಬುದು ಅವರ ವಿವರಣೆಯಾಗಿತ್ತು. ಮತ್ತೆ ಕೆಲವರು ಮುಸ್ಲಿಮರ ಜೊತೆ ಸೇರುವ ಮೊದಲು ಗೋಸಂರಕ್ಷಣೆಯ ಶರತ್ತನ್ನು ಒಡ್ಡಿದ್ದರು.
ಏನೇ ಆದರೂ ಗಾಂಧಿಯವರು ಖಿಲಾಫತ್ ಚಳವಳಿಯಿಂದ ಹಿಂದೆ ಸರಿಯಲಿಲ್ಲ. ೨೧ ಕೋಟಿ ಹಿಂದುಗಳು ಮುಸ್ಲಿಮರಿಗೆ ಬೆಂಬಲ ನೀಡಲು ಸಿದ್ಧ ಎಂದ ಅವರು ಸಾಕಷ್ಟು ಪ್ರಯತ್ನಿಸಿದರಾದರೂ ಅಕ್ಟೋಬರ್ ೧೭ರ (೧೯೧೯) ಖಿಲಾಫತ್ ದಿನದಂದು ಹಿಂದುಗಳು ಮತ್ತು ಮುಸಲ್ಮಾನರು ದೊಡ್ಡ ರೀತಿಯಲ್ಲೇನೂ ಸೇರಲಿಲ್ಲ. ಢಾಕಾ, ಬೊಂಬಾಯಿ, ಲಕ್ನೋ, ಹೈದರಾಬಾದ್ (ಸಿಂಧ್), ಸುಕ್ಕೂರ್ ಮುಂತಾದ ಕೆಲವು ಕಡೆ ಮಾತ್ರ ಪ್ರತಿಭಟನೆ ಮತ್ತು ಹರತಾಳಗಳಲ್ಲಿ ಹಿಂದುಗಳು ಮುಸ್ಲಿಮರ ಜೊತೆ ಸೇರಿಕೊಂಡರು.
೧೯೨೦ರಲ್ಲಿ ನಡೆದ ಸಿಕೆಸಿಯ ಒಂದು ಸಭೆಯಲ್ಲಿ ಕೆಲವು ಉಗ್ರ ಮುಸ್ಲಿಂ ನಾಯಕರು, ಬ್ರಿಟಿಷರನ್ನು ಹೊರಹಾಕಲು ಭಾರತದ ಮೇಲೆ ದಾಳಿ ನಡೆಸುವ ಆಫಘಾನ್ ಸೇನೆಗೆ ಮುಸ್ಲಿಮರು ಸೇರಬೇಕೆಂದು ವಾದಿಸಿದರು. ಹಿಂದೂ ನಾಯಕರು ಆ ಬಗ್ಗೆ ವಿವರಣೆ ಕೇಳಿದರು; ಮತ್ತು ಅಂತಹ ಅಪಾಯ ಎದುರಾಗುವುದಾದರೆ ಖಿಲಾಫತ್ಗೆ ಹಿಂದುಗಳ ಸಹಕಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲ ಪ್ರಯತ್ನಗಳ ಹೊರತಾಗಿಯೂ ಬ್ರಿಟಿಷ್ ಪ್ರಧಾನಿ ಲಾಯ್ಡ್ ಜಾರ್ಜ್ ಭಾಷಣಗಳು ಖಿಲಾಫತ್ ನಾಯಕರ ಮನಸ್ಸಿನಲ್ಲಿ ಬಹಳಷ್ಟು ಸಂಶಯ ಉಂಟುಮಾಡಿದವು; ತಾವು ಆಸೆಪಟ್ಟದ್ದು ಟರ್ಕಿಗೆ ಸಿಗಬಹುದೇ ಎನ್ನುವ ಚಿಂತೆಗೆ ಕಾರಣವಾಯಿತು. ಯುದ್ಧ ಮುಗಿದ ಬಗ್ಗೆ ಭಾರತದಲ್ಲಿ ಶಾಂತಿ ಆಚರಣೆಗೆ ಸರ್ಕಾರ ಕರೆ ನೀಡಿತು (ಡಿಸೆಂಬರ್, ೧೯೧೯); ಮತ್ತು ನವೆಂಬರ್ ೨೩ರಂದು ಅಖಿಲ ಭಾರತ ಖಿಲಾಫತ್ ಸಮಾವೇಶವು ದೆಹಲಿಯಲ್ಲಿ ನಡೆದಾಗ, ಮತೀಯ ಎಂಬ ನೆಲೆಯಲ್ಲಿ ಅದನ್ನು ಬಹಿಷ್ಕರಿಸಬೇಕೆಂದು ನಿರ್ಧರಿಸಲಾಯಿತು.
ಖಿಲಾಫತ್ನ ಬೇಡಿಕೆಗಳನ್ನು ಬ್ರಿಟಿಷ್ ಮಂತ್ರಿಗಳ ಮುಂದಿಡಲು ಬ್ರಿಟನ್ಗೆ ಒಂದು ನಿಯೋಗವನ್ನು ಕಳುಹಿಸಬೇಕೆಂದು ತೀರ್ಮಾನಿಸಿದರು. ಅದರಿಂದ ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಬ್ರಿಟಿಷ್ ಸರಕನ್ನು ಬಹಿಷ್ಕರಿಸಬೇಕು; ಅನಂತರ ಅಗತ್ಯವಾದರೆ ಸರ್ಕಾರದ ವಿರುದ್ಧ ಅಸಹಕಾರಕ್ಕೆ ಇಳಿಯಬೇಕೆಂದು ಕೂಡ ನಿರ್ಧರಿಸಲಾಯಿತು.
ಅಸಹಕಾರದ ಸಲಹೆ
ಸರ್ಕಾರದ ಜೊತೆ ಅಸಹಕಾರದ ಸಲಹೆ ನೀಡಿದವರು ಗಾಂಧಿ. ಮುಸ್ಲಿಮರು ಬ್ರಿಟಿಷ್ ಸರಕುಗಳ ಬಹಿಷ್ಕಾರ ಮತ್ತು ಹಿಂಸೆಯ ಬಗ್ಗೆ ಒತ್ತಾಯಿಸಬಾರದೆಂದು ಗಾಂಧಿ ಈ ಸಲಹೆಯನ್ನು ನೀಡಿದರು. ಖಿಲಾಫತ್ ಚಳವಳಿಗೆ ಹಿಂದುಗಳ ನಿರ್ಣಾಯಕ ಬೆಂಬಲವನ್ನು ಪಡೆಯುವ ಸಲುವಾಗಿ ಮರುದಿನ (ನವೆಂಬರ್ ೨೪) ಹಿಂದೂ-ಮುಸ್ಲಿಂ ಪ್ರತಿನಿಧಿಗಳ ಜಂಟಿ ಸಭೆಯನ್ನು ಏರ್ಪಡಿಸಲಾಯಿತು. ಬ್ರಿಟಿಷ್ ಸರಕುಗಳ ಬಹಿಷ್ಕಾರವನ್ನು ವಿರೋಧಿಸುವುದನ್ನು ಗಾಂಧಿಯವರು ನಿಲ್ಲಿಸಬಹುದೆಂಬ ನಿರೀಕ್ಷೆಯೊಂದಿಗೆ ಅವರನ್ನು ಜಂಟಿ ಸಭೆಯು ಅಧ್ಯಕ್ಷರಾಗಿ ಆರಿಸಿತು. ಚಳವಳಿಗೆ ಹಿಂದುಗಳ ಬೆಂಬಲ ಪಡೆಯುವ ಉದ್ದೇಶದಿಂದ ಫಜ್ಲುಲ್ ಹಕ್ ಖಿಲಾಫತ್ಗೆ ಪಂಜಾಬ್ ವಿಷಯವನ್ನು (ಜಲಿಯನ್ವಾಲಾಬಾಗ್ ಹತ್ಯಾಕಾಂಡ – ರೌಲೆಟ್ ಕಾಯ್ದೆ) ಸೇರಿಸಬೇಕೆನ್ನುವ ಸಲಹೆ ನೀಡಿದರು. ಗಾಂಧಿಯವರು ವಿರೋಧಿಸಿದ ಕಾರಣ ಆ ಸಲಹೆ ಬಿದ್ದುಹೋಯಿತು; ಅಸಹಕಾರ ಚಳವಳಿಗೆ ಖಿಲಾಫತ್ ಏಕೈಕ ವಿಷಯ ಆಗಬೇಕೆಂದು ಅವರು ಬಯಸಿದರು!
ಸರ್ಕಾರ ಸೂಚಿಸಿದ ಯುದ್ಧಾನಂತರದ ಶಾಂತಿ ಆಚರಣೆಯನ್ನು ಖಿಲಾಫತಿಗಳು ಯಶಸ್ವಿಯಾಗಿ ಬಹಿಷ್ಕರಿಸಿದರು. ಸೆಂಟ್ರಲ್ ಖಿಲಾಫತ್ ಕಮಿಟಿಯಲ್ಲಿದ್ದ ಸೌಮ್ಯವಾದಿ ವ್ಯಾಪಾರಿಗಳನ್ನು ಬದಿಗೆ ತಳ್ಳಿ ಆಲಿ ಸಹೋದರರು ಖಿಲಾಫತ್ ಚಳವಳಿಯ ನಾಯಕರಾದರು. ೧೯೨೦ರ ಏಪ್ರಿಲ್, ಮೇ ತಿಂಗಳಲ್ಲಿ ಬೊಂಬಾಯಿಯಲ್ಲಿ ಜರುಗಿದ ಸಿಕೆಸಿ ಸಭೆಗಳಲ್ಲಿ ಅಸಹಕಾರದ ತತ್ತ್ವವನ್ನು ಸ್ವೀಕರಿಸಲಾಯಿತು. ಅದನ್ನು ಜಾರಿಗೊಳಿಸುವ ಯೋಜನೆಯನ್ನು ರೂಪಿಸುವ ಬಗ್ಗೆ ಒಂದು ಸಮಿತಿಯನ್ನು ನೇಮಿಸಿದರು. ಜೂನ್ನಲ್ಲಿ ಅಲಹಾಬಾದ್ನಲ್ಲಿ ಜರುಗಿದ ಅಖಿಲ ಭಾರತ ಖಿಲಾಫತ್ ಸಮಾವೇಶವು ಅಸಹಕಾರದ ಜಾರಿಗೆ ನಿರ್ಧರಿಸಿತು. ಅದರಂತೆ ವೈಸರಾಯ್ಗೆ ಒಂದು ತಿಂಗಳ ಅವಧಿಯ ಎಚ್ಚರಿಕೆಯನ್ನು ನೀಡಲಾಯಿತು. ಗಮನಿಸಬೇಕಾದ ಅಂಶವೆಂದರೆ ಖಿಲಾಫತ್ ಸದಸ್ಯರು ಅಸಹಕಾರವನ್ನು ತಡವಿಲ್ಲದೆ (ವಿರೋಧವಿಲ್ಲದೆ) ಸ್ವೀಕರಿಸಿದರೆ ಕಾಂಗ್ರೆಸ್ ಸಂಸ್ಥೆಯೇ ಅದಕ್ಕೆ ಸ್ವಲ್ಪ ಹೆಚ್ಚು ಸಮಯವನ್ನು ತೆಗೆದುಕೊಂಡಿತು.
ಆರಂಭದಲ್ಲಿ ಖಿಲಾಫತಿಗಳು ಕಾಂಗ್ರೆಸ್ಗಿಂತ ತುಂಬ ಮುಂದೆ ಹೋಗಲು ಸಿದ್ಧರಿದ್ದರು. ಪೊಲೀಸ್ ಮತ್ತು ಸೈನ್ಯದಲ್ಲಿದ್ದವರು ಅದಕ್ಕೆ ರಾಜೀನಾಮೆ ನೀಡುವುದು, ತೆರಿಗೆ ನೀಡದಿರುವುದು ಮೊದಲಾದವು ಅವರ ಕಾರ್ಯಕ್ರಮದಲ್ಲಿತ್ತು. ಆದರೆ ಕಾಂಗ್ರೆಸ್ನ ಕಾರ್ಯಕ್ರಮದಲ್ಲಿ ಸೇನೆಗೆ ಸೇರಬೇಡಿ ಎಂದು ಜನರಿಗೆ ಬೋಧಿಸುವುದು ಮಾತ್ರ ಇತ್ತು. ಕಾರ್ಯಕ್ರಮಗಳ ಈ ವ್ಯತ್ಯಾಸದಿಂದ ಸ್ಪಷ್ಟವಾಗುವ ಅಂಶವೆಂದರೆ, ಕಾಂಗ್ರೆಸ್ನ ಹಿಂದೂನಾಯಕರು ಇದರಲ್ಲಿ ಗಟ್ಟಿಯಾಗಿರಲಿಲ್ಲ ಎಂಬುದು.
ಬಲಾತ್ಕಾರದ ಬೆಂಬಲ
ಕಾಂಗ್ರೆಸ್ನ ಒಳಗೇ ಖಿಲಾಫತ್ ಚಳವಳಿಯ ಬಗೆಗಿದ್ದ ವಿರೋಧವನ್ನು ಗಾಂಧಿ ಸ್ಥಗಿತಗೊಳಿಸಿ, ಕಾಂಗ್ರೆಸ್ ಖಿಲಾಫತಿಗಳ ಜೊತೆಗೇ ಹೋಗುವಂತೆ ಒತ್ತಾಯಿಸಿದರು. ಗಾಂಧಿಯಂಥ ಮಿತ್ರ ಜೊತೆಗಿದ್ದ ಕಾರಣ ಖಿಲಾಫತ್ ನಾಯಕರಿಗೆ ಕಾಂಗ್ರೆಸ್ನವರನ್ನು ಮನವೊಲಿಸುವ ಅಥವಾ ಪುಸಲಾಯಿಸುವ ಅಗತ್ಯ ಬೀಳಲಿಲ್ಲ. ಹೀಗೆ ಖಿಲಾಫತ್ನ ಪರವಾಗಿ ಬಲಾತ್ಕಾರವೇ ನಡೆಯಿತೆನ್ನಬಹುದು.
ಅಸಹಕಾರ ಮತ್ತು ಖಿಲಾಫತ್ ಚಳವಳಿಗಳಲ್ಲಿ ಯಾವುದು ಮೊದಲು ಎಂದು ಹೇಳುವುದು ಕಷ್ಟ; ಅವುಗಳನ್ನು ಏಕಕಾಲಕ್ಕೆ ನಡೆಸಲಾಯಿತು ಎಂದು ಕೂಡ ಹೇಳಬಹುದು. ಇದರಲ್ಲಿ ಅಸಹಕಾರದ ಉದ್ದೇಶ ಸ್ವರಾಜ್ ಅಥವಾ ಸ್ವಾತಂತ್ರ್ಯವಾಗಿತ್ತು ಎಂಬ ತಪ್ಪು ಕಲ್ಪನೆ ವ್ಯಾಪಕವಾಗಿದೆ. ಆ ಬಗ್ಗೆ ಅಂಬೇಡ್ಕರ್ ಹೀಗೆ ಹೇಳುತ್ತಾರೆ: ಖಿಲಾಫತ್ ಚಳವಳಿ ಮತ್ತು ಅಸಹಕಾರ ಚಳವಳಿಗಳ ನಡುವಣ ಸಂಬಂಧ ಅಸ್ಪಷ್ಟವಾಗಿತ್ತು. ಅದಕ್ಕೆ ಕಾರಣವೆಂದರೆ, ಹೆಚ್ಚಿನ ಜನರು ಅಸಹಕಾರ ಚಳವಳಿಯನ್ನು ಆರಂಭಿಸಿದ್ದು ಕಾಂಗ್ರೆಸ್; ಮತ್ತು ಅದನ್ನು ನಡೆಸಿದ್ದು ಸ್ವರಾಜ್ ಗಳಿಕೆಗಾಗಿ ಎಂದು ಭಾವಿಸಿದ್ದರು. ಅಂತಹ ಅಭಿಪ್ರಾಯ ಏಕೆ ಬಂತೆಂದು ತಿಳಿಯುವುದು ಕಷ್ಟವಲ್ಲ. ಏಕೆಂದರೆ ಹೆಚ್ಚಿನವರಿಗೆ ಹಾಗೆ ತಿಳಿಯುವುದಕ್ಕೆ ಇಷ್ಟೇ ಸಾಕು. ಕಲ್ಕತ್ತಾದಲ್ಲಿ ೧೯೨೦ರ ಸೆಪ್ಟೆಂಬರ್ ೭-೮ರಂದು ಅಸಹಕಾರ ಚಳವಳಿ ಸಂಬಂಧ ಕಾಂಗ್ರೆಸ್ನ ವಿಶೇಷ ಅಧಿವೇಶನ ನಡೆದಿತ್ತು. ಅವುಗಳ ನಡುವೆ ಸಂಬಂಧವಿದೆ ಎನ್ನುವ ಕಲ್ಪನೆ ಮೂಡಿದ್ದುದು ಸಹಜವೇ ಆಗಿದೆ. ಆದರೆ ಯಾರಾದರೂ ಆ ದಿನಗಳಿಗೆ ಹೋಗಿ ಅಂದಿನ ಸ್ಥಿತಿಯನ್ನು ಗಮನಿಸಿದರೆ, ಈ ಅಭಿಪ್ರಾಯ ಸರಿಯಲ್ಲ ಎಂಬುದು ಸುಸ್ಪಷ್ಟವಾಗುತ್ತದೆ. ಅಂದಿನ ಅಸಹಕಾರ ಚಳವಳಿಯ ಮೂಲ ಇದ್ದುದು ಖಿಲಾಫತ್ ಚಳವಳಿಯಲ್ಲಿಯೇ ಹೊರತು ಸ್ವಾತಂತ್ರ್ಯಕ್ಕಾಗಿ ನಡೆದ ಕಾಂಗ್ರೆಸ್ನ ಹೋರಾಟದಲ್ಲಿ ಅಲ್ಲ. ಟರ್ಕಿಗೆ ನೆರವಾಗಲು ಖಿಲಾಫತ್ ನಾಯಕರು ಅದನ್ನು ಆರಂಭಿಸಿದರು; ಮತ್ತು ಖಿಲಾಫತಿಗಳಿಗೆ ನೆರವಾಗುವುದಕ್ಕಾಗಿ ಕಾಂಗ್ರೆಸ್ ಅದನ್ನು ಸ್ವೀಕರಿಸಿತು. ಸ್ವಾತಂತ್ರ್ಯವು ಅಂದಿನ ಅಸಹಕಾರ ಚಳವಳಿಯ ಮೊದಲ ಗುರಿ ಆಗಿರಲಿಲ್ಲ; ಬದಲಾಗಿ ಮೊದಲ ಗುರಿ ಖಿಲಾಫತ್. ಚಳವಳಿಯ ಎರಡನೇ ಗುರಿಯಾಗಿಯಷ್ಟೆ ಸ್ವರಾಜನ್ನು (ಸ್ವಾತಂತ್ರ್ಯ) ಸೇರಿಸಲಾಗಿತ್ತು.
ಖಿಲಾಫತ್ಗಾಗಿ ಅಸಹಕಾರ
ಖಿಲಾಫತ್ಗೆ ಸ್ವರಾಜನ್ನು ಸೇರಿಸಿಕೊಂಡದ್ದು ಚಳವಳಿಗೆ ಹಿಂದುಗಳನ್ನು ಸೇರಿಸಿಕೊಳ್ಳುವ ಸಲುವಾಗಿ ಎಂಬುದು ಕೆಳಗಿನ ಅಂಶಗಳಿಂದ ಸ್ಪಷ್ಟವಾಗುತ್ತದೆ ಎಂದು ಡಾ|| ಶ್ರೀರಂಗ ಗೋಡ್ಬೋಲೆ ಇತ್ತೀಚಿನ ಆರ್ಗನೈಸರ್ನ ತಮ್ಮ ಲೇಖನಮಾಲೆಯಲ್ಲಿ ಆಧಾರಸಹಿತ ವಿವರಿಸಿದ್ದಾರೆ.
೧೯೨೦ರ ಫೆಬ್ರುವರಿಯಲ್ಲಿ ಕಲ್ಕತ್ತದಲ್ಲಿ ನಡೆದ ಅಖಿಲ ಭಾರತೀಯ ಖಿಲಾಫತ್ ಸಮಾವೇಶದ ಅಧ್ಯಕ್ಷ ಮೌಲಾನಾ ಆಜಾದ್ ಅವರು, ಶರೀಯತ್ ಧನಾತ್ಮಕವಾಗಿದ್ದು ಮುಸ್ಲಿಮೇತರರ ಜೊತೆ ಯಾವುದೇ ಸಹಕಾರವೆಂದರೆ ಮವಾಲಾ (ಪಾಪ). ಆದ್ದರಿಂದ ಅಸಹಕಾರವೆಂದರೆ ಇಸ್ಲಾಂನ ಸಾಮಾಜಿಕ ಬಹಿಷ್ಕಾರ. ಇದು ಮುಸ್ಲಿಮರಿಗಿರುವ ಏಕೈಕ ಪರಿಹಾರ ಎಂದು ವಿವರಿಸಿದರು (ಇಲ್ಲಿ ಆತ ಹಿಂದುಗಳನ್ನು ಹೊರಗಿಟ್ಟರು ಎಂಬುದು ಗಮನಾರ್ಹ).
ಮೇ ೧೧, ೧೯೨೦ರಂದು ಟರ್ಕಿಶ್ ಸ್ವಾತಂತ್ರ್ಯ ಮತ್ತದರ ಸಾಮ್ರಾಜ್ಯದ ರದ್ದತಿ ಬಗೆಗಿನ ಶಾಂತಿ ಶರತ್ತುಗಳನ್ನು ಘೋಷಿಸಲಾಯಿತು. ಕಾಂಗ್ರೆಸ್ನ ಹಿಂದೂ ನಾಯಕರ ಬೆಂಬಲವನ್ನು ಪಡೆಯುವ ಸಲುವಾಗಿ ಖಿಲಾಫತ್ ನಾಯಕರು ಗಾಂಧಿಯವರ ಜೊತೆ ಚರ್ಚಿಸಿ ಅಲಹಾಬಾದ್ನಲ್ಲಿ ನಡೆಯುವ ಸೆಂಟ್ರಲ್ ಖಿಲಾಫತ್ ಕಮಿಟಿಯ ವಿಶೇಷ ಸಭೆಗೆ ಹಿಂದೂ ನಾಯಕರನ್ನು ಕೂಡ ಆಹ್ವಾನಿಸಲು ನಿರ್ಧರಿಸಿದರು. ಮಹತ್ತ್ವದ ಆ ಸಭೆಯಲ್ಲಿ ಚಳವಳಿಯಲ್ಲಿ ಹಮ್ಮಿಕೊಳ್ಳುವ ಅಸಹಕಾರದ ಸ್ವರೂಪವನ್ನು ಅಂಗೀಕರಿಸಲಾಯಿತು. ಅದು ಹೀಗಿದೆ:
೧. ಸರ್ಕಾರದ ಬಿರುದುಗಳನ್ನು ತ್ಯಜಿಸಬೇಕು ಮತ್ತು ಗೌರವ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು.
೨. ಸರ್ಕಾರದ ಪೌರಸೇವೆ, ಪೊಲೀಸ್ ಹುದ್ದೆಗಳಿಗೆ ರಾಜೀನಾಮೆ ನೀಡಬೇಕಿಲ್ಲ.
೩. ಪೊಲೀಸ್ ಮತ್ತು ಸೇನೆಯ ಸೇವೆಗೆ ರಾಜೀನಾಮೆ ನೀಡಬೇಕು.
೪. ಸರ್ಕಾರಕ್ಕೆ ತೆರಿಗೆ ನೀಡುವುದಿಲ್ಲ.
ಗಾಂಧಿಯವರ ಆದ್ಯತೆ
ಸರ್ಕಾರ ಹೇಳಿದ ಯುದ್ಧಾನಂತರದ ಶಾಂತಿ ಸಮಾರಂಭಗಳನ್ನು ಬಹಿಷ್ಕರಿಸಲು ಗಾಂಧಿಯವರು ನೀಡಿದ ಕಾರಣ ಖಿಲಾಫತ್ನ ವಿಷಯವೇ ಆಗಿತ್ತು. ಬಹಿಷ್ಕರಿಸುವುದಕ್ಕೆ ಪಂಜಾಬ್ನ ವಿಷಯವನ್ನು (ಜಲಿಯನ್ವಾಲಾಬಾಗ್) ಸೇರಿಸಲು ಅವರಿಗೆ ಇಷ್ಟವಿರಲಿಲ್ಲ. ಖಿಲಾಫತ್ ಏರ್ಪಡಿಸಿದ ಜಂಟಿ ಹಿಂದೂ-ಮುಸ್ಲಿಂ ಸಭೆಯಲ್ಲಿ ಮಾತನಾಡಿದ ಅವರು ಎಷ್ಟೇ ಸಂಕಷ್ಟ ಆಗಿದ್ದರೂ (ಜಲಿಯನ್ವಾಲಾಬಾಗ್) ಒಂದು ಸ್ಥಳೀಯ ವಿಷಯಕ್ಕಾಗಿ ಇಡೀ ಸಾಮ್ರಾಜ್ಯಕ್ಕೆ ಸಂಬಂಧಪಟ್ಟ ಆಚರಣೆಯಿಂದ ದೂರವಿರುವುದು ನನಗೆ ಸರಿ ಎನಿಸುವುದಿಲ್ಲ. ಆದ್ದರಿಂದ ಕೇವಲ ಖಿಲಾಫತ್ ವಿಷಯದ ಮೇಲಿನಿಂದ ನಾವು ಶಾಂತಿ ಸಮಾರಂಭಗಳಲ್ಲಿ ಭಾಗವಹಿಸಲು ನಿರಾಕರಿಸಬಹುದು. ಇದು ಶಬ್ದಶಃ ಗಾಂಧಿ ಹೇಳಿದುದು.
ಆದರೆ ಖಿಲಾಫತ್ ನಾಯಕರು ಪಂಜಾಬ್ ವಿಷಯವನ್ನು ಬಳಸಿಕೊಳ್ಳಲು ತೊಡಗಿದರು. ಏಕೆಂದರೆ ಅದರ ಬಗ್ಗೆ ಜನರಲ್ಲಿ ವ್ಯಾಪಕ ಆಕ್ರೋಶ ಕಂಡುಬಂದಿತ್ತು. ಅನಂತರ ಗಾಂಧಿ ಕೂಡ ಖಿಲಾಫತ್ ಜೊತೆ ಪಂಜಾಬ್ ವಿಷಯವನ್ನೂ ಸೇರಿಸಿಕೊಂಡರು. ಉದ್ದೇಶ – ಅಸಹಕಾರ ಚಳವಳಿಗೆ ಹಿಂದುಗಳನ್ನು ಸೆಳೆಯುವುದಾಗಿತ್ತು. ಇದು ಕಾಂಗ್ರೆಸ್ ತನ್ನ ಸಾಂಪ್ರದಾಯಿಕ, ಸಾಂಸ್ಥಿಕ ಮಾರ್ಗವನ್ನು ಬಿಟ್ಟ ಸಂದರ್ಭವಾಗಿತ್ತು.
ಖಿಲಾಫತ್ ಚಳವಳಿಯನ್ನು ಮುಸ್ಲಿಮರು ಮತೀಯ ದೃಷ್ಟಿಯಿಂದ ಕೂಡ ಕಂಡಿದ್ದರು. ಅದನ್ನು ಬೆಂಬಲಿಸಿದ ಗಾಂಧಿಯವರ ಮತೀಯ ಅಥವಾ ಧಾರ್ಮಿಕ ನಿಲವನ್ನು ಪರಿಶೀಲಿಸುವುದು ಇಲ್ಲಿ ಪ್ರಸ್ತುತವಾಗಬಹುದು. ನವರತ್ನ ಎಸ್. ರಾಜಾರಾಮ್ ಅವರ ಪ್ರಕಾರ, ಗಾಂಧಿಯವರ ಪಾಲಿಗೆ ಮತ ಮತ್ತು ರಾಜಕೀಯಗಳು ಅವಿಭಾಜ್ಯ ಅಂಗಗಳು. ಅವರ ಮತದ ಮುಖ್ಯ ಸ್ಫೂರ್ತಿ ರಾಜಕೀಯದಲ್ಲಿದೆ; ಅವರಿಗೆ ಮತ ಎಂದರೆ ಅವರು ಆಗಲೇ ನಿರ್ಧರಿಸಿದ್ದ ರಾಜಕೀಯ ಕ್ರಮದ ಜಾರಿಗೊಂದು ಉಪಕರಣ. ಶ್ರೀ ಅರವಿಂದರ ಪ್ರಕಾರ ಅದು ಮತವೇ ಅಲ್ಲ; ಅದೊಂದು ಬಿಗುವಾದ ಮಾನಸಿಕ ನಂಬಿಕೆ. ಅವರ ಕ್ರಮಗಳು ಮತಧರ್ಮದಲ್ಲುಳಿದರೆ ಸರಿ; ಆದರೆ ಅವರು ಅದನ್ನು ರಾಜಕೀಯಕ್ಕೆ ತಂದರು. ಅವರ ಮತ ಮತ್ತು ರಾಜಕೀಯಗಳು ಒಟ್ಟಿಗೇ ಹೋಗುವ ಕಾರಣ ಅವರಿಗೆ ಖಿಲಾಫತ್ನಂತಹ ಮತೀಯ ಚಳವಳಿಗೆ ಬೆಂಬಲ ನೀಡುವುದು ಸುಲಭವಾಯಿತು; ಹೀಗೆ ಅವರು ಜ್ಞಾನದ ಯುಗದಿಂದ ನಂಬಿಕೆ ಅಥವಾ ಕತ್ತಲ ಯುಗಕ್ಕೆ ಹಿಂದೆ ಹೋಗಿಬಿಟ್ಟರು.
ಹಿಂದುವಾದರೂ ಗಾಂಧಿ ಕ್ರೈಸ್ತ ಹಾಗೂ ಇಸ್ಲಾಂ ಮತಗಳ ರೀತಿಯಲ್ಲಿಯೆ ನಡೆದುಕೊಂಡರು. ಅದಕ್ಕೆ ಅವರೇ ಪ್ರವಾದಿ. ಅವರ ಸರ್ವಧರ್ಮ ಸಮಭಾವದಿಂದ ಬಂದ ತಪ್ಪು ತಿಳಿವಳಿಕೆಯೇ ಅದಕ್ಕೆ ಆಧಾರ. ಅತ್ಯುನ್ನತ ಶಕ್ತಿಯೊಂದು ತನ್ನೊಳಗಿನಿಂದ ತನಗೆ ಮಾರ್ಗದರ್ಶನ ಮಾಡುತ್ತಿದೆ ಎಂದವರು ನಂಬಿದ್ದರು. ಅವರ ಕೈಯಲ್ಲಿ ಹಿಂದೂಧರ್ಮ ಮೂಢನಂಬಿಕೆಗಳಿಗೆ ಪರವಾಗಿತ್ತು; ಅಹಿಂಸೆ ಅದರ ಕೇಂದ್ರದಲ್ಲಿತ್ತು. ಅವರು ಅಹಿಂಸೆಯ ಪ್ರವಾದಿಯಾದರು. ಎಲ್ಲ ಪ್ರವಾದಿಗಳಂತೆ ತನ್ನ ನಂಬಿಕೆಯನ್ನು ಇತರರ ಮೇಲೆ ಹೇರುವಲ್ಲಿ ಅವರು ನಿಷ್ಠುರರಾಗುತ್ತಿದ್ದರು. ಅವರ ಸತ್ಯಾಗ್ರಹ ಹಾಗೂ ಉಪವಾಸಗಳನ್ನು ಆ ಹಿನ್ನೆಲೆಯಲ್ಲಿ ನೋಡಬೇಕು ಎಂದು ರಾಜಾರಾಮ್ ಸೂಚಿಸುತ್ತಾರೆ.
ಗಾಂಧಿಯವರ ನಮೂನೆಯ ಅಹಿಂಸೆ ಎಲ್ಲರಿಗೂ ಸಮಾನವಾಗಿ ಅನ್ವಯ ಆಗುವಂಥದ್ದಲ್ಲ; ಆಯ್ಕೆಯಿಂದ ಅನ್ವಯ ಆಗುವಂಥದ್ದು. ಹಿಂದುಗಳಿಗೆ ಮಾತ್ರ ಅದರ ಅನ್ವಯ! ಹಿಂದುಗಳು ಅಹಿಂಸೆಗೆ ನಿಷ್ಠರಾಗಿರಬೇಕೆಂದು ಅವರು ಒತ್ತಡ ತರುತ್ತಿದ್ದರು. ಮುಸ್ಲಿಮರು ಇಸ್ಲಾಂನ ಬೋಧನೆಗಳಂತೆ ನಡೆದುಕೊಳ್ಳುತ್ತಿದ್ದರು; ಅದಕ್ಕೆ ಯಾವಾಗಲೂ ಗಾಂಧಿಯವರ ಸಹಮತ ಇರುತ್ತಿತ್ತು. ಆದರೆ ಹಿಂದುಗಳು ಅವರ ಅಹಿಂಸಾಕೇಂದ್ರಿತ ಹಿಂದೂಧರ್ಮವನ್ನು ಅನುಸರಿಸಬೇಕು. ಅದು ಆಚರಣೆಯಲ್ಲಿ ಏನಾಯಿತೆಂದರೆ ಒಂದು ಕಡೆಯವರು (ಹಿಂದುಗಳು) ಇನ್ನೊಂದು ಕಡೆಯವರ (ಮುಸ್ಲಿಮರ) ಬೇಡಿಕೆಗಳಿಗೆ ಪೂರ್ತಿ ಶರಣಾಗಬೇಕಾಯಿತು. ಎದುರಿನವರ ಹಿಂಸೆಗೆ ಹಿಂದುಗಳು ಸುಮ್ಮನಿರಬೇಕು. ಇದೇ ಮೋಪ್ಲಾ ಕಾಂಡದಂತಹ ದುರಂತಕ್ಕೆ ಕಾರಣವಾದುದು.ಗಾಂಧಿಯವರ ಸಹನೆ ಕೂಡ ಏಕಮುಖವಾದದ್ದು (ಒನ್ವೇ) ಪರಸ್ಪರ ಅಲ್ಲ.
ಹಿಂದೂ ನಾಯಕರ ವಿರೋಧ
ಹಲವು ಹಿಂದೂ ನಾಯಕರು ಅಸಹಕಾರ ಚಳವಳಿಯನ್ನೇ ವಿರೋಧಿಸಿದ್ದ ಕಾರಣ ಖಿಲಾಫತಿಗಳಿಗೆ ಅಭದ್ರತೆಯ ಭಾವನೆ ಬಂತು. ಆದರೂ ಹಿಂದುಗಳ ಜೊತೆಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಭಾರತರಾಷ್ಟ್ರವನ್ನು ಕಟ್ಟಬೇಕೆಂಬ ಪ್ರಾಮಾಣಿಕ ಬಯಕೆ ಮುಸ್ಲಿಂ ನಾಯಕರಲ್ಲಿ ಇರಲೇ ಇಲ್ಲ ಎಂದು ಇತಿಹಾಸಕಾರ ಆರ್.ಸಿ. ಮಜುಂದಾರ್ ಗುರುತಿಸಿದ್ದಾರೆ. ಗಾಂಧಿಯವರು ಖಿಲಾಫತ್ ಫಂಡ್ನ ಹಣ ಪಡೆದು ದೇಶದಲ್ಲಿ ಪ್ರವಾಸ ಮಾಡುತ್ತಿದ್ದರು. ಇತರ ಬಹಳಷ್ಟು ಹಿಂದೂ ನಾಯಕರು ಈ ಚಳವಳಿಯನ್ನು ಕೇಂದ್ರೀಯ ಖಿಲಾಫತ್ ಸಮಿತಿ ನಡೆಸುವ ಚಳವಳಿ ಎಂದು ಭಾವಿಸಿ ಅದರಿಂದ ದೂರವಿದ್ದರು.
ಕಾಂಗ್ರೆಸ್ನ ಸೌಮ್ಯವಾದಿಗಳು. ಇದರ ಪರಿಕಲ್ಪನೆ ವಿಪರೀತದ್ದು; ಇದು ಎಷ್ಟು ಮಾತ್ರವೂ ಅನುಷ್ಠಾನ ಯೋಗ್ಯವಲ್ಲ ಎಂದು ಭಾವಿಸಿದ್ದರು.
ಹೋಂರೂಲ್ ಚಳವಳಿಯ ನೇತಾರರಾದ ಆನಿ ಬೆಸೆಂಟ್ ಖಿಲಾಫತ್ ಅಸಹಕಾರ ಚಳವಳಿಯನ್ನು ರಾಷ್ಟ್ರೀಯ ಆತ್ಮಹತ್ಯೆ ಎಂದು ಬಣ್ಣಿಸಿದರು.
ಮದ್ರಾಸ್ ಪ್ರೆಸಿಡೆನ್ಸಿಯ ಅಡ್ವೊಕೇಟ್ ಜನರಲ್ ಸರ್ ಪಿ.ಎಸ್. ಶಿವಸ್ವಾಮಿ ಅಯ್ಯರ್ ಅವರು ಖಿಲಾಫತ್ ಚಳವಳಿಯು ಒಂದು ತಪ್ಪು ಕಲ್ಪನೆಯ (ill-advised) ಚಳವಳಿ; ದೇಶಕ್ಕೆ ಖಂಡಿತವಾಗಿ ಅನಾಹುತಕಾರಿ ಎಂದರೆ, ರೈಟ್ ಆನರೇಬಲ್ ವಿ.ಎಸ್. ಶ್ರೀನಿವಾಸಶಾಸ್ತ್ರಿ ಅವರು, ಈ ಚಳವಳಿ ಮುಂದೆ ಹಿಂಸಾತ್ಮಕವಾಗುತ್ತದೆಂದು ಭವಿಷ್ಯ ನುಡಿದರು; ಮತ್ತು ಇದು ಅತಾರ್ಕಿಕ ಹಾಗೂ ಅನಾಹುತಕಾರಿ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ನ ಸ್ಥಾಪಕ ಸದಸ್ಯ ಸುರೇಂದ್ರನಾಥ ಬ್ಯಾನರ್ಜಿ ಅವರು (೧೮೪೮-೧೯೨೫) ಖಿಲಾಫತ್ ಚಳವಳಿಗೆ ತನ್ನ ಅಸಮ್ಮತಿಯ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಿದರೆ, ಮದನ ಮೋಹನ ಮಾಲವೀಯ ಅವರು ಇದು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಆಕ್ಷೇಪ ಸೂಚಿಸಿದರು. ಮೋತಿಲಾಲ್ ನೆಹರು ಈ ಚಳವಳಿಯಿಂದ ಹಿಂಸಾಚಾರ ಹಬ್ಬಬಹುದೆಂದು ಆತಂಕ ವ್ಯಕ್ತಪಡಿಸಿದರು; ಸಿ.ಆರ್. ದಾಸ್, ಬಿಪಿನಚಂದ್ರ ಪಾಲ್, ಜಿ.ಎಸ್. ಖಪರ್ದೆ, ಎನ್.ಸಿ. ಕೇಳ್ಕರ್, ವಿಠಲಭಾ ಪಟೇಲ್ ಮುಂತಾದವರು ಖಿಲಾಫತ್ ಚಳವಳಿಯ ಬಗ್ಗೆ ಸಂದೇಹವಾದಿಗಳಾಗಿದ್ದರು. ಆದುದರಿಂದ ಗಾಂಧಿ ಮತ್ತು ಖಿಲಾಫತಿಗಳಿಗೆ ಕಲ್ಕತ್ತಾದ ವಿಶೇಷ ಕಾಂಗ್ರೆಸ್ ಅಧಿವೇಶನವು ನಿರ್ಣಾಯಕವಾಗಿತ್ತು.
ಸ್ವರಾಜ್ಗೆ ಮುನ್ನ ಖಿಲಾಫತ್
ಖಿಲಾಫತ್ ನಾಯಕರು ಮತ್ತು ಕಾಂಗ್ರೆಸ್ ಅಸಹಕಾರ ಚಳವಳಿಯ ಬಗ್ಗೆ ಚರ್ಚಿಸುವ ಮುನ್ನವೇ ಹಿಂದುಗಳಿಗೆ ತಮ್ಮ ಬಲವನ್ನು ತೋರಿಸುವ ಸಲುವಾಗಿ ಖಿಲಾಫತಿಗಳು ೧೯೧೯ರ ಸೆಪ್ಟೆಂಬರ್ ೫ರಂದು ತಮ್ಮ ಸಮಾವೇಶವನ್ನು ನಡೆಸಿದರು. ಅಸಹಕಾರವು ತಪ್ಪದೆ ಪಾಲಿಸಬೇಕಾದ ಮತೀಯ(ಧಾರ್ಮಿಕ) ಕರ್ತವ್ಯ ಎಂದು ಅಲ್ಲಿ ಅವಿರೋಧವಾಗಿ ಇನ್ನೊಮ್ಮೆ ದೃಢಪಡಿಸಲಾಯಿತು. ಶೌಕತ್ ಅಲಿ ಮತ್ತಿತರ ಖಿಲಾಫತ್ ನಾಯಕರ ತೀವ್ರ ಒತ್ತಡದ ಫಲವಾಗಿ ಮುಸ್ಲಿಂ ಲೀಗ್ ಸೆಂಟ್ರಲ್ ಖಿಲಾಫತ್ ಕಮಿಟಿಯನ್ನು ಅನುಸರಿಸಲು ನಿರ್ಧರಿಸಿತು; ಆಗ ಜಿನ್ನಾ ಎಚ್ಚರಿಕೆಯ ಮಾತುಗಳನ್ನು ಹೇಳಿದರಾದರೂ ಲೀಗನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ.
ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸನ್ನು ತನ್ನ ತತ್ತ್ವಗಳಿಗೆ (ಕ್ರೀಡ್) ಅನುಗುಣವಾಗಿ ಬದಲಾಯಿಸುವುದು ಗಾಂಧಿಯವರ ತಕ್ಷಣದ ಗುರಿಯಾಗಿತ್ತು. ಆದರೆ ಅವರು ನಿಜವಾದ ಕೂಲಂಕಷ ವಿವರಗಳೊಂದಿಗೆ ಸಿದ್ಧತೆ ಮಾಡಿಕೊಂಡಿದ್ದರು. ಅವರಿಗೆ ಮತ ಹಾಕುವ ಸಲುವಾಗಿ ಬೊಂಬಾಯಿ, ಮದ್ರಾಸ್ಗಳಿಂದ ಹಲವು ಪ್ರತಿನಿಧಿಗಳು ಆಗಮಿಸಿದ್ದರು (ಖಿಲಾಫತ್ ಸ್ಪೆಷಲ್ಸ್). ಖಿಲಾಫತಿಗಳು ಆ ರೀತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂದು ಬಹುಮತ ಸಾಧಿಸಿದ್ದಾರೆಂದು ರಾಷ್ಟ್ರೀಯವಾದಿಗಳು ಆಕ್ಷೇಪಿಸಿದರು. ಅಸಹಕಾರ ಚಳವಳಿಯ ಪ್ರಸ್ತಾಪವನ್ನು ವಿಷಯ ಸಮಿತಿಯಲ್ಲಿ ಮೂರು ದಿನ ಚರ್ಚಿಸಲಾಯಿತು. ಅನಂತರ ಅದು ಅಲ್ಪ ಬಹುಮತದಲ್ಲಿ ಸ್ವೀಕೃತವಾಯಿತು (೧೪೪-೧೩೨ ಮತಗಳ ಅಂತರ). ಅಸಹಕಾರದ ಪರವಾದ ಈ ಬಹುಮತದಲ್ಲಿ ಮುಸ್ಲಿಂ ಪ್ರಾಬಲ್ಯ ಕಂಡುಬಂತು.
ಅಸಹಕಾರ ಚಳವಳಿಯ ಬಗೆಗಿನ ನಿರ್ಣಯವನ್ನು ಮಂಡಿಸುತ್ತಾ ಗಾಂಧಿ ಹೀಗೆ ಹೇಳಿದರು: ಭಾರತದ ಮುಸ್ಲಿಮರು ಗೌರವಾನ್ವಿತ ವ್ಯಕ್ತಿಗಳಾಗಿ ಉಳಿಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ; ಮತ್ತು ಪ್ರವಾದಿಯಲ್ಲಿನ ಅವರ ನಂಬಿಕೆಯ ಅನುಯಾಯಿಗಳಾಗಿ ಜೀವಿಸಲು ಸಾಧ್ಯವಿಲ್ಲವಾಗಿದೆ. ಯಾವುದೇ ಬೆಲೆ ತೆತ್ತಾದರೂ ಆ ನಂಬಿಕೆಯ ಗೌರವವನ್ನು ಎತ್ತಿ ಹಿಡಿಯಬೇಕಾಗಿದೆ. ಪಂಜಾಬನ್ನು ಅತ್ಯಂತ ಕ್ರೂರವಾಗಿ ಮತ್ತು ನಿರ್ದಯವಾಗಿ ನಡೆಸಿಕೊಳ್ಳಲಾಗಿದೆ. ಈ ಎರಡು ತಪ್ಪುಗಳನ್ನು ದೂರ ಮಾಡುವ ಉದ್ದೇಶದಿಂದ ನಾನು ದೇಶದ ಮುಂದೆ ಅಸಹಕಾರದ ಒಂದು ಕಾರ್ಯಕ್ರಮವನ್ನು (ಯೋಜನೆ) ಮುಂದಿಡುತ್ತಿದ್ದೇನೆ.
ಪಂಜಾಬ್ನ ವಿಷಯವನ್ನು (ಜಲಿಯನ್ ವಾಲಾಬಾಗ್, ರೌಲೆಟ್ ಕಾಯ್ದೆ) ಸೇರಿಸಿದ್ದು ಅನಂತರ ಎನ್ನುವಲ್ಲಿ ಯಾವ ಸಂಶಯಕ್ಕೂ ಅವಕಾಶವೇ ಇಲ್ಲ. ೧೯೧೯ರ ಡಿಸೆಂಬರ್ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಅಸಹಕಾರದ ಒಂದು ಸೌಮ್ಯ ರೂಪದ ಜಾರಿಯನ್ನು ಕೂಡ ಗಾಂಧಿ ವಿರೋಧಿಸಿದ್ದರು. ಸರ್ಕಾರ ಸೂಚಿಸಿದ ಶಾಂತಿ ಸಂಭ್ರಮಾಚರಣೆಯನ್ನು ಬಹಿಷ್ಕರಿಸಬೇಕು ಎಂಬಲ್ಲಿ ಕೂಡ ಅವರು ಪಂಜಾಬ್ ವಿಷಯವನ್ನು ಕಾರಣವಾಗಿ ಪರಿಗಣಿಸಿರಲಿಲ್ಲ. ಬಳಿಕ ವರ್ಷದೊಳಗೆ ಅದಕ್ಕಿಂತ ತೀವ್ರವಾದ ಅಸಹಕಾರ ಚಳವಳಿಯ ಪರವಾಗಿ ಅವರು ವಾದಿಸಬೇಕಾಯಿತು; ಮತ್ತು ಪಂಜಾಬ್ ವಿಷಯವನ್ನು ಅದರಲ್ಲಿ ಸೇರಿಸಿಕೊಂಡರು!
ಇದಕ್ಕೆ ಅಸಹಕಾರ ಚಳವಳಿ ನಿರ್ಣಯದ ಬಗೆಗಿನ ಮುಸ್ಲಿಂ ವೋಟಿನ ಉದ್ದೇಶ ಇರಲೇಬೇಕು. ೫,೦೦೦ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದು, ಕಲ್ಕತ್ತಾದ ಟ್ಯಾಕ್ಸಿ ಚಾಲಕರನ್ನು ಕೂಡ ವೋಟು ಹಾಕಲು ಕರೆತಂದಿದ್ದರು ಎಂಬ ವರದಿಯೂ ಇದೆ. ಆದರೆ ಅದರಲ್ಲಿ ಅರ್ಧ ಜನವೂ ವೋಟು ಹಾಕಲಿಲ್ಲ. ೧೮೨೬ ಮತಗಳು ಪರವಾಗಿದ್ದರೆ, ೮೦೪ ವಿರುದ್ಧವಾಗಿದ್ದವು. ೧೯೨೦ರ ಏಪ್ರಿಲ್ನಲ್ಲಿ ಖಿಲಾಫತ್ ಕಮಿಟಿ ಮುಂದಿಟ್ಟ ಅಸಹಕಾರ ಪ್ರಸ್ತಾಪ (ಗಾಂಧಿಯವರು ತಯಾರಿಸಿದ್ದು) ಮತ್ತು ಅದೇ ಸೆಪ್ಟೆಂಬರ್ನಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನವು ಅಂಗೀಕರಿಸಿದ ನಿರ್ಣಯವನ್ನು ಹೋಲಿಸಿದರೆ ಖಿಲಾಫತಿಗಳು ಕಾಂಗ್ರೆಸ್ಗಿಂತ ಮುಂದೆ ಹೋಗಲು ಸಿದ್ಧವಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ.
ಒಂದು ವರ್ಷ ಕಳೆಯುವಷ್ಟರಲ್ಲಿ ಮುಸ್ಲಿಮರ ಬೇಡಿಕೆ ಈಡೇರಿಸುವಲ್ಲಿ ಅಸಹಕಾರ ಚಳವಳಿಯು ವಿಫಲವಾಯಿತು ಎನ್ನುವ ಭಾವನೆ ಬಂತು. ಆಗ ಗಾಂಧಿ ಹೀಗೆ ಬರೆದರು: ತಮ್ಮ ಅಸಹನೆಯ ಕೋಪದಲ್ಲಿ ಮುಸಲ್ಮಾನರು ಹೆಚ್ಚು ಶಕ್ತಿಶಾಲಿ ಮತ್ತು ಪರಿಣಾಮಕಾರಿ ಕ್ರಮವನ್ನು ಕಾಂಗ್ರೆಸ್ನಿಂದ ಮತ್ತು ಖಿಲಾಫತ್ನಿಂದ ಕೇಳುತ್ತಿದ್ದಾರೆ. ಸ್ವರಾಜ್ ಜೊತೆ ಸೇರಿಸುವುದೆಂದರೆ ಅನಿರ್ದಿಷ್ಟಾವಧಿ ವಿಳಂಬ ಆದಂತೆ. ಅಷ್ಟು ಕಾಯಲು ಅವರು ಸಿದ್ಧರಿಲ್ಲ. ಆದ್ದರಿಂದ ನಾನು ಸ್ವರಾಜ್ (ಸ್ವಾತಂತ್ರ್ಯ) ಚಟುವಟಿಕೆಗಳನ್ನು ಮುಂದೂಡುವುದನ್ನು ಸಂತೋಷಪೂರ್ವಕವಾಗಿ ಕೇಳುತ್ತೇನೆ. ಆ ಮೂಲಕ ಖಿಲಾಫತ್ನ ಹಿತಾಸಕ್ತಿಯನ್ನು ಬೇಗ ಪೂರೈಸಬಹುದು.
ಖಿಲಾಫತ್ ಸಶಸ್ತ್ರ ಪೆರೇಡ್
ಪ್ರಚಾರ ಸಮಿತಿ ಹೇಳಿದಂತೆ ಖಿಲಾಫತ್ ಕಮಿಟಿ ಸಾಕಷ್ಟು ಹಣ ಖರ್ಚು ಮಾಡಿ ಭಾಷಣಗಳನ್ನು ಮಾಡಿಸಿತು. ಆ ಕೆಲಸಕ್ಕಾಗಿಯೆ ರಹಸ್ಯ ಕಾರ್ಯಕರ್ತರು ಮತ್ತು ಪ್ರತಿನಿಧಿಗಳು ಕೂಡ ಇದ್ದರು. ಮುಸ್ಲಿಂ ಸ್ವಯಂಸೇವಕರು ಪ್ರತಿದಿನ ದೊಡ್ಡ ನಗರಗಳ ಬೀದಿಗಳಲ್ಲಿ ಡ್ರಿಲ್ ಹಾಗೂ ಪೆರೇಡ್ಗಳನ್ನು ನಡೆಸಿದರು. ಖಾಕಿ ಸಮವಸ್ತ್ರ, ಕೈಯಲ್ಲಿ ಚೂರಿ, ಈಟಿಗಳನ್ನು ಹಿಡಿದ ಖಿಲಾಫತ್ ಸ್ವಯಂಸೇವಕರು ಖಿಲಾಫತ್ ಬೇಡಿಕೆಗಳನ್ನು ಮುಂದಿಟ್ಟು ರಾಜಕೀಯ ಸಭೆಗಳನ್ನು ಸಂಘಟಿಸಿದರು. ಈ ರೀತಿಯಲ್ಲಿ ಅವರ ಅಸಹಕಾರ ಚಳವಳಿ ನಡೆಯಿತು. (ಅದು ಹಿಂಸೆಗೆ ಮುಸುಕು ಹಾಕಿದಂತಿತ್ತು). ಕರಪತ್ರ, ಪದ್ಯ, ಪೊಲೆಮಿಕ್ಸ್ (ವಾದಕಥೆ)ಗಳಿಂದ ಜನರ ಭಾವನೆಗಳನ್ನು ಕೆರಳಿಸಿದರು; ಮಾಮೂಲಿ ಘೋಷಣೆಯಾದ ಇಸ್ಲಾಂ ಅಪಾಯದಲ್ಲಿದೆ ಅಥವಾ ಕ್ರೈಸ್ತ ಶಕ್ತಿಗಳ ತಂತ್ರಗಾರಿಕೆ (Machinations) ಎಂಬ ಹೆಸರಿನಲ್ಲಿ ಉದಾರದಾನಕ್ಕೆ (ಹಣ) ನೇರ ಮನವಿ ಮಾಡಿದ್ದಲ್ಲದೆ ಸೆಂಟ್ರಲ್ ಖಿಲಾಫತ್ ಕಮಿಟಿ(ಸಿಕೆಸಿ) ಪೇಪರ್ ಕರೆನ್ಸಿಯನ್ನು ಕೂಡ ಹೊರಡಿಸಿತು. ಒಂದು ರೂಪಾಯಿ ನೋಟಿನ ಆಕಾರ ಮತ್ತು ಗಾತ್ರದಲ್ಲಿ ಒಂದು ರೂಪಾಯಿ ರಶೀದಿ ಮಾಡಿ ಅದರಿಂದ ಹಣ ಸಂಗ್ರಹಿಸಿತು. ಅದರಲ್ಲಿ ಕುರಾನ್ನ ಉಕ್ತಿಗಳನ್ನು ಉರ್ದುವಿನಲ್ಲಿ ಮುದ್ರಿಸಿತ್ತು.
ಸಮಾಜದಲ್ಲಿ ಬೆಳೆಯುತ್ತಿದ್ದ ಜಾತ್ಯತೀತತೆ (ಸೆಕ್ಯುಲರಿಸಂ) ವಿರುದ್ಧ ಕೂಡ ಅಸಹಕಾರವನ್ನು ಬಳಸಲು ಉಲೇಮಾಗಳು ಬಯಸಿದರು. ಶಾಸನಸಭೆಗಳ ಬದಲಿಗೆ ಉಲೇಮಾ ಸಮಿತಿ, ನಾಸ್ತಿಕ ಕೋರ್ಟ್ಗಳ ಬದಲಿಗೆ ಶರೀಯತ್ ಕೋರ್ಟ್, ಸರ್ಕಾರೀ ಶಾಲೆಗಳ ಬದಲಿಗೆ ದಾರ್-ಉಲ್-ಉಲೂಮ್ ಇತ್ಯಾದಿ. ಜಮೀಯತ್ ಉಲ್ ಉಲೇಮಾ ಎ ಹಿಂದ್ ಒಂದು ಸಾಮೂಹಿಕ ಫತ್ವಾ ಹೊರಡಿಸಿ ಅಸಹಕಾರ ಚಳವಳಿಗೆ ಬೆಂಬಲ ಘೋಷಿಸಿತು; ಕುರಾನ್ನ ಪಠ್ಯ ಮತ್ತು ಪ್ರವಾದಿಯವರ ಹೇಳಿಕೆಗಳ ಆಧಾರವನ್ನು ಅದಕ್ಕೆ ಬಳಸಲಾಯಿತು. ೧೯೨೧ರ ಮಾರ್ಚ್ನಲ್ಲಿ ಜಮೀಯತ್ ಉಲ್ ಉಲೇಮಾ ಬರೇಲಿಯಲ್ಲಿ ಸಭೆ ನಡೆಸಿ, ಅಸಹಕಾರ ಚಳವಳಿಯ ವಿರೋಧಿಗಳನ್ನು ಮತೀಯ ಟ್ರೈಬ್ಯುನಲ್ ಮೂಲಕ ಶಿಕ್ಷಿಸಬೇಕೆಂದು ನಿರ್ಣಯಿಸಿತು.
ಖಿಲಾಫತಿಗಳು ಕಾಂಗ್ರೆಸ್ನ ದೊಡ್ಡ ವ್ಯವಸ್ಥೆ ಮತ್ತು ಅದರ ಎಲ್ಲ ಹಣವನ್ನು ವಶಪಡಿಸಿಕೊಂಡರು; ತಿಲಕ್ ಸ್ವರಾಜ್ ಫಂಡ್ ಕೂಡ ಅವರ ಕೈ ಸೇರಿತು. ಅದಕ್ಕೆ ಒಂದು ಕೋಟಿ ಐದು ಲಕ್ಷ ಪ್ಲೆಡ್ಜಸ್ (ಖಾತ್ರಿ) ಇತ್ತು. ಖಿಲಾಫತ್ ನಿಧಿಯ ಹೇಳಿಕೆ ಮತ್ತು ಆಡಿಟ್(ಲೆಕ್ಕಪತ್ರ) ಬಗ್ಗೆ ಬೇಡಿಕೆಗಳು ಬರುತ್ತಿದ್ದವು; ಆದರೆ ಬಹುಕಾಲ ಏನೂ ಪ್ರತಿಕ್ರಿಯೆ ಬರಲಿಲ್ಲ. ಖಿಲಾಫತ್ ನಿಯೋಗವು ಯೂರೋಪ್ನಲ್ಲಿ ಮಾಡಿದ ಖರ್ಚು ನೋಡಿ ಹಲವರಿಗೆ ಆಘಾತವೇ ಆಗಿತ್ತು.
ಆಫಘಾನ್ ದೊರೆಗೆ ಆಹ್ವಾನ
೧೯೨೧ರ ಬೇಸಿಗೆಯ ಹೊತ್ತಿಗೆ ಕೆಲವು ಖಿಲಾಫತ್ ನಾಯಕರ ಸ್ವರ ಹೆಚ್ಚು ಹಿಂಸಾತ್ಮಕವಾಯಿತು. ಸೇನೆಯ ಸೇವೆ ಹರಾಮ್ ಮುಂತಾಗಿ ಹೇಳುವ ಮುತ್ತಫಿಕಾ (ಸಾಮೂಹಿಕ ಫತ್ವಾ) ಪ್ರತಿಗಳನ್ನು ಗುಟ್ಟಾಗಿ ಹಂಚಲಾಯಿತು. ಈ ಫತ್ವಾವನ್ನು ಕರಪತ್ರಗಳಲ್ಲಿ ಮುದ್ರಿಸಿ ಸೇನೆಯ ಹಲವು ಘಟಕಗಳಲ್ಲಿ ಹಂಚಿದರು; ಮಾತ್ರವಲ್ಲ, ಸೈನಿಕರಿಗೆ ಲಂಚ ಕೊಡಲು ಖಿಲಾಫತ್ ಫಂಡ್ನ ದೊಡ್ಡ ಮೊತ್ತವನ್ನು ಬಳಸಲಾಯಿತು.
ಈ ನಡುವೆ ೧೯೨೦-೨೧ರಲ್ಲಿ ಭಾರತದ ಮೇಲೆ ದಾಳಿ ನಡೆಸಲು ಆಫಘಾನಿಸ್ತಾನದ ಅಮೀರನನ್ನು ಆಹ್ವಾನಿಸುವ ಒಂದು ಪಿತೂರಿ ಕೂಡ ನಡೆಯಿತು. ಆಲಿ ಸಹೋದರರಲ್ಲಿ ಒಬ್ಬರಾದ ಮೌಲಾನಾ ಮಹಮ್ಮದ್ ಆಲಿ ಅವರು ೧೯೨೧ರ ಏಪ್ರಿಲ್ ೧೮ರಂದು ಮಾಡಿದ ಭಾಷಣದಲ್ಲಿ ಅಮೀರ ದಾಳಿ ಮಾಡಿದರೆ ಆಗ ಭಾರತದ ಮುಸ್ಲಿಮರು ಏನು ಮಾಡಬೇಕೆಂದು ವಿವರಿಸಿದರು: ಮಣಿಸುವ (ಸಬ್ಜುಗೇಶನ್) ಉದ್ದೇಶದಿಂದ ದಾಳಿ ಮಾಡಿದರೆ ಮುಸ್ಲಿಮರು ಅದನ್ನು ವಿರೋಧಿಸಬೇಕು. ಖಲಿಫೇಟ್ ಮತ್ತು ಇಸ್ಲಾಮಿನ ದಮನಕಾರಿಗಳನ್ನು ಸೋಲಿಸುವುದು ಅಮೀರನ ಉದ್ದೇಶವಾಗಿದ್ದರೆ ಆಗ ಭಾರತದ ಮುಸ್ಲಿಮರು ಭಾರತ ಸರ್ಕಾರಕ್ಕೆ ಯವುದೇ ಸಹಾಯ ನೀಡಬಾರದು; ಮತ್ತು ಆಘಘಾನಿಗಳ ಜೊತೆ ಸೇರಿ ಇಸ್ಲಾಂಗಾಗಿ ಹೋರಾಟ ನಡೆಸಬೇಕು ಎಂದು ಸೂಚಿಸಿದರು.
ಈ ಅಭಿಪ್ರಾಯದಿಂದ ಹಿಂದುಗಳಲ್ಲಿ ತುಂಬ ಅಭದ್ರತೆಯ ಭಾವನೆ ಉಂಟಾಯಿತು. ಗಾಂಧಿ ಯಂಗ್ ಇಂಡಿಯಾದಲ್ಲಿ ಹೀಗೆ ಬರೆದರು: ಒಂದು ರೀತಿಯಲ್ಲಿ ಹೇಳುವುದಾದರೆ, ಆಫಘಾನ್ ಅಮೀರ ಬ್ರಿಟಿಷ್ ಸರ್ಕಾರದ ವಿರುದ್ಧ ಯುದ್ಧ ಮಾಡುವುದಾದರೆ ನಾನು ಆತನಿಗೆ ಖಂಡಿತವಾಗಿ ನೆರವು ನೀಡುವೆ. ಜನರ ವಿಶ್ವಾಸ ಕಳೆದುಕೊಂಡ ಸರ್ಕಾರ ಅಧಿಕಾರದಲ್ಲಿರುವುದು ಅಪರಾಧ ಎಂದು ನಾನು ನನ್ನ ದೇಶಬಾಂಧವರಿಗೆ ಮುಕ್ತವಾಗಿ ಹೇಳುವೆ.
ಇನ್ನೊಂದೆಡೆ ದೇಶದಲ್ಲಿ ಆತಂಕಕಾರಿ ವಾತಾವರಣವು ಹಬ್ಬುತ್ತಿತ್ತು. ಯುನೈಟೆಡ್ ಪ್ರಾವಿನ್ಸಸ್ ಗವರ್ನರ್ ಟಿಪ್ಪಣಿಯಲ್ಲಿ (ಜನವರಿ ೧೨, ೧೯೨೨) ಮುಸಲ್ಮಾನ್ ರೌಡಿ ಶಕ್ತಿಗಳು ಕೊಲೆ ಮತ್ತು ಯಾವುದೇ ರೀತಿಯ ಹಿಂಸೆಗೆ ಸಜ್ಜಾಗಿವೆ ಎಂದು ತಿಳಿಸಿದ್ದರು. ಅಂತಹ ಪರಿಸ್ಥಿತಿಯಲ್ಲಿ ಹಲವು ಕಡೆ ಗುಂಪುಗಳು ಮತ್ತು ಪೊಲೀಸರ ನಡುವೆ ಘರ್ಷಣೆಗಳಾದವು; ವಿಶೇಷವಾಗಿ ಯು.ಪಿ. ಮತ್ತು ಬಂಗಾಳಗಳಲ್ಲಿ ಅಂತಹ ಘಟನೆಗಳು ನಡೆದವು. ಪೊಲೀಸ್ ಠಾಣೆ ಹಾಗೂ ಇತರ ಸರ್ಕಾರೀ ಕಟ್ಟಡಗಳು ದಾಳಿಯ ವಿಶೇಷ ಗುರಿಗಳಾದವು. ಆ ರೀತಿಯಲ್ಲಿ ಮುಸಲ್ಮಾನರ ರಕ್ತದಾಹದ ಬಗೆಗಿನ ಗವರ್ನರ್ ಬಟ್ಲರ್ ಮಾತು ನೈಜ ಭವಿಷ್ಯವಾಣಿಯಾಯಿತು.
ಚೌರಿಚೌರಾ ಹಿಂಸಾಚಾರ
೧೯೨೨ರ ಫೆಬ್ರುವರಿ ೪ರಂದು ೩,೦೦೦ದಿಂದ ೫,೦೦೦ದಷ್ಟಿದ್ದ ಪ್ರತಿಭಟನಕಾರರು ಯು.ಪಿ.ಯ ಗೋರಖ್ಪುರ ಜಿಲ್ಲೆಯ ಚೌರಿಚಾರಾ ಪೊಲೀಸ್ ಠಾಣೆಗೆ ಪಾದಯಾತ್ರೆಯನ್ನು ಕೈಗೊಂಡರು. ಅಲ್ಲಿ ನಡೆದ ಘರ್ಷಣೆಯಲ್ಲಿ ಗುಂಪು ಪೊಲೀಸರ ಮೇಲೆ ಕಲ್ಲೆಸೆಯಿತು. ಪೊಲೀಸರು ಮೊದಲು ಗಾಳಿಗೆ ಗುಂಡು ಹಾರಿಸಿದರು; ಅನಂತರ ಗುಂಪಿನತ್ತ ಕಲ್ಲೆಸೆದರು. ಪೊಲೀಸರ ಬಳಿ ಹೆಚ್ಚು ಮದ್ದುಗುಂಡಿಲ್ಲ ಎಂದು ಗೊತ್ತಾದ ಗುಂಪು ಪೊಲೀಸರನ್ನು ಬೆನ್ನಟ್ಟಿತು; ಕೆಲವು ಪೊಲೀಸರು ಬಯಲಿಗೆ, ಮತ್ತೆ ಕೆಲವರು ಠಾಣೆಯ ಕಟ್ಟಡಕ್ಕೆ ಓಡಿದರು. ಠಾಣೆಯ ಕಟ್ಟಡಕ್ಕೆ ಗುಂಪು ಬೆಂಕಿಹಚ್ಚಿತು. ಘಟನೆಯಲ್ಲಿ ೨೧ ಪೊಲೀಸರು ಮತ್ತು ಚೌಕಿದಾರರು ಮೃತಪಟ್ಟರು. ಸಬ್ಇನ್ಸ್ಪೆಕ್ಟರ್ ಅವರ ಚಾಲಕ-ಸೇವಕನನ್ನು ಕೂಡ ಕೊಂದರು. ಹೆಚ್ಚಿನ ಪೊಲೀಸರನ್ನು ದೊಣ್ಣೆಯಿಂದ ಹೊಡೆದು ಮತ್ತು ಕಲ್ಲೆಸೆದು ಕೊಲ್ಲಲಾಗಿತ್ತು; ಹಲವು ಶವಗಳ ಮೇಲೆ ಈಟಿಯಿಂದ ಚುಚ್ಚಿದ ಗುರುತು ಕೂಡ ಇತ್ತು.
ಗಾಂಧಿ ಈ ಹಿಂಸಾಚಾರದ ಬಗ್ಗೆ ಬಹಿರಂಗವಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿದರು; ಮತ್ತು ಅಸಹಕಾರ ಚಳವಳಿಗೆ ಹಠಾತ್ತಾಗಿ ವಿರಾಮ ಘೋಷಿಸಿದರು. ಇತಿಹಾಸದ ವ್ಯಂಗ್ಯವೆಂಬಂತೆ ಚೌರಿಚೌರಾ ದುರ್ಘಟನೆಯನ್ನು ರೈತರ ಸಿಟ್ಟಿನ ಸ್ಫೋಟ ಎಂದು ವ್ಯಾಖ್ಯಾನಿಸುವ ಪ್ರಯತ್ನ ಕೂಡ ನಡೆದಿದೆ. ಚೌರಿಚೌರಾ ಠಾಣೆಗೆ ಬೆಂಕಿ ಹಾಕಿದವರ ಮತೀಯ ದುರುದ್ದೇಶಗಳನ್ನು ಉದ್ದೇಶಪೂರ್ವಕವಾಗಿ ಮರೆತುದನ್ನು ಇಂದು ಕಾಣಬಹುದು. ಆದರೆ ಪುಸ್ತಕಗಳಲ್ಲೂ ದಾಖಲಾದ ಆ ಘಟನೆಯ ನಿಜಾಂಶಗಳು ಸುಳ್ಳು ಹೇಳಲಾರವು.
ಘಟನೆಯ ಹಿನ್ನೆಲೆ
೧೯೨೧-೨೨ರ ಚಳಿಗಾಲದಲ್ಲಿ ಖಿಲಾಫತ್ ಮತ್ತು ಕಾಂಗ್ರೆಸ್ ಸ್ವಯಂಸೇವಕ ಸಂಘಟನೆಗಳನ್ನು ವಿಲೀನಗೊಳಿಸಿ ಸಂಯುಕ್ತ ರಾಷ್ಟ್ರೀಯ ಸ್ವಯಂಸೇವಕ ಕೋರ್ (ದಳ) ರಚಿಸಲಾಯಿತು. ೧೯೨೧ರ ಮಧ್ಯಭಾಗದಲ್ಲಿ ಅಂತಹ ಸ್ವಯಂಸೇವಕರು ಒಂದು ಮಂಡಲ (ಗ್ರಾಮ) ಘಟಕವನ್ನು ಚೌರಿಚೌರಾ ಠಾಣೆಯ ಪಶ್ಚಿಮದಲ್ಲಿ ಒಂದು ಮೈಲು ದೂರದ ಚೋಟಿದುಮ್ರಿ ಎಂಬಲ್ಲಿ ಸ್ಥಾಪಿಸಿದ್ದರು. ಗೋರಖ್ಪುರ ಜಿಲ್ಲಾ ಕಾಂಗ್ರೆಸ್ ಮತ್ತು ಖಿಲಾಫತ್ ಸಮಿತಿಯ ಒಬ್ಬ ಪದಾಧಿಕಾರಿಯನ್ನು ಚೌರಿಚೌರಾದ ಲಾಲ್ ಮಹಮ್ಮದ್ ಸೈನ್ ಎಂಬಾತ ಗ್ರಾಮ ಘಟಕ ಸ್ಥಾಪನೆಯ ಬಗ್ಗೆ ಆಮಂತ್ರಿಸಿದ್ದ. ಪ್ರಮುಖ ಖಿಲಾಫತ್ ಸದಸ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನೂ ಆಗಿದ್ದ ಮೌಲ್ವಿ ಸುಬಾನುಲ್ಲಾ ದುಮ್ರಿ ಘಟಕವನ್ನು ಸ್ಥಾಪಿಸಿದ್ದು, ಆಗ ಗೋರಖ್ಪುರ ಖಿಲಾಫತ್ ಸಮಿತಿ ಉಪಾಧ್ಯಕ್ಷ ಹಕೀಂ ಅನೀಫ್ ಭಾಷಣ ಮಾಡಿದ; ಮತ್ತು ಕೆಲವು ಪದಾಧಿಕಾರಿಗಳನ್ನು ನೇಮಿಸಿ ಸಂಜೆ ಜಿಲ್ಲಾ ಕೇಂದ್ರಕ್ಕೆ ಮರಳಿದ.
೧೯೨೨ರ ಫೆಬ್ರುವರಿ ೪ರಂದು ಸ್ವಯಂಸೇವಕರು ದುಮ್ರಿಯಲ್ಲಿ ಸೇರಬೇಕೆಂದು ಸೂಚಿಸಲಾಯಿತು. ಚೌರಿಚೌರಾ ಗಲಭೆ ನಡೆದ ದಿನ ಬೆಳಗ್ಗೆ ದುಮ್ರಿ ಸಭೆಯಲ್ಲಿ ಹಸಿರು ಕನ್ನಡಕ ಧರಿಸಿದ ಒಬ್ಬ ವ್ಯಕ್ತಿ ಮುಂದೆ ಬಂದು ಒಂದು ಚೀಟಿಯನ್ನು ಓದಿದ; ಮತ್ತು ಮಹಮ್ಮದ್ ಆಲಿ ಮತ್ತು ಶೌಕತ್ ಆಲಿ ಅವರಂತೆ ಸೆರೆಮನೆ ಸೇರಲು ಸಿದ್ಧರಾಗಿ ಎಂದು ಹೇಳುವ ಒಂದು ಪದ್ಯವನ್ನು ಹಾಡಿದ; ಮತ್ತೆ ಆತ ನಾಪತ್ತೆಯಾದ. ನಜೀರ್ ಅಲಿ ಎಂಬಾತ ಸಭೆಯಲ್ಲಿ ಪ್ರತಿಜ್ಞೆ ಮಾಡಿಸಿದ; ಬಳಿಕ ಸಭೆ ಚೌರಿಚೌರಾ ಠಾಣೆಗೆ ಪಾದಯಾತ್ರೆ ಕೈಗೊಂಡಿತು.
ಕೆಲವು ದಿನಗಳ ಹಿಂದೆ ಸ್ವಯಂಸೇವಕರ ಮೇಲೆ ಪೊಲೀಸರು ಲಾಠಿ ಬೀಸಿದ್ದೇಕೆ ಎಂದು ವಿವರಣೆ ಕೇಳುವುದು ಪಾದಯಾತ್ರೆಯ ಉದ್ದೇಶ ಎಂದು ಹೇಳಲಾಗಿತ್ತು. ಠಾಣೆದಾರ ಗೋಪೇಶ್ವರ ಸಿಂಗ್ ಗುಂಪನ್ನು ಚದುರಿಸಲು ಕಳುಹಿಸಿದ ಪ್ರಭಾವಿ ವ್ಯಕ್ತಿಗಳನ್ನು ಗುಂಪು ಮಾನ್ಯ ಮಾಡಲಿಲ್ಲ. ರೈಲ್ವೆ ಗೋಡೌನ್ ಬಳಿ ಕೆಲವೇ ದಿನಗಳ ಹಿಂದೆ ಚರ್ಮದ ಒಂದು ವಿಶೇಷ ಮಾರ್ಟ್ ತೆರೆದಿತ್ತು. ಸಮೀಪದ ಮುಸ್ಲಿಮರು ಅಲ್ಲಿಗೆ ಭೇಟಿ ನೀಡುವವರೇ. ಅದು ಮುಸ್ಲಿಂ ಪ್ರಾಬಲ್ಯದ ಪ್ರದೇಶ ಎಂಬುದನ್ನು ಸೂಚಿಸುವಂತೆ ಈಚೆಗೆ ಅಲ್ಲೊಂದು ಮಸೀದಿ ಬಂದಿತ್ತು. ಚರ್ಮದ ದುರ್ವಾಸನೆಯ ಕಾರಣದಿಂದ ಹಿಂದುಗಳು ಬಹುತೇಕ ಆ ಸ್ಥಳದಿಂದ ದೂರ ಇರುತ್ತಿದ್ದರು.
ಒಂದು ಮೂಲದ ಪ್ರಕಾರ, ಗಲಭೆಯಲ್ಲಿ ಪಾಲ್ಗೊಂಡವರು ಪಠಾಣ ವ್ಯಾಪಾರಿಗಳ ಪ್ರಾಬಲ್ಯದ ಮದನಪುರದವರು. ಅದು ಚೌರಿಚೌರಾದಿಂದ ಇಪ್ಪತ್ತು ಮೈಲು ಆಗ್ನೇಯದ ಊರು. ರೈಲುಮಾರ್ಗದಲ್ಲಿರುವ (ಹಳಿ) ಕಲ್ಲುಗಳನ್ನು ಎಸೆಯಲು ಬಳಸಬಹುದೆಂದು ಸೂಚಿಸಿದವರು ಮತ್ತು ಠಾಣೆಗೆ ಬೆಂಕಿ ಹಚ್ಚಲು ಬಳಸಿದ ಸೀಮೆಎಣ್ಣೆ ಒದಗಿಸಿದವರು ಕೂಡ ಮದನಪುರದವರೆಂದು ಡಾ|| ಶ್ರೀರಂಗ ಗೋಡ್ಬೋಲೆ ವಿಶ್ಲೇಷಿಸುತ್ತಾರೆ. ಗಲಭೆಯ ಅನಂತರ ಆ ವ್ಯಾಪಾರಿಗಳು ಅಕ್ಕಿ, ಸಕ್ಕರೆ ತುಂಬಿದ್ದ ತಮ್ಮ ಗಾಡಿಗಳೊಂದಿಗೆ ಪಲಾಯನ ಮಾಡಿದರೆನ್ನಲಾಗಿದೆ.
ಬೆಂಕಿ ಹಚ್ಚಿದಾಗ ತುಂಬ ಹೊಗೆ ತುಂಬಿದ ಕಾರಣ ಪೊಲೀಸರು ಠಾಣೆಯಿಂದ ಹೊರಗೆ ಬಂದರು. ಆಗ ಅಲ್ಲಿದ್ದ ನಝರ್ ಅಲಿ, ಶಿಕಾರಿ ಮತ್ತಿತರ ನಾಲ್ಕೈದು ಮದನಪುರದ ಪಠಾಣರು, ಯಾರು ಕೂಡ ಓಡಿಹೋಗದಂತೆ ನೀವೆಲ್ಲ ಕಣ್ಣಿಡಬೇಕು. ತುಮ್ ಕ್ಯಾ ಮರೋಗೇ, ಹಮ್ ಮರೇಂಗೇ ಎನ್ನುತ್ತಿದ್ದರಂತೆ. ಠಾಣಾ ಜಲಾನೆ ಮೇ ಮದನ್ಪುರ್ ಕೇ ಪಠಾಣ್ ಕಾ ಬಹುತ್ ಹಾಥ್ ಥಾ. ವಹೀ ಸಬ್ ಟ್ರೇಡರ್ ಥೇ (ನೀವೇನು ಸಾಯುತ್ತೀರಿ; ನಾವು ಸಾಯುತ್ತೇವೆ. ಠಾಣೆಗೆ ಬೆಂಕಿ ಹಚ್ಚುವುದರಲ್ಲಿ ಮದನಪುರದ ಪಠಾಣರ ಬಹಳಷ್ಟು ಕೈ ಇತ್ತು. ಅವರೆಲ್ಲ ವ್ಯಾಪಾರಿಗಳು). ಈ ವಿವರ ನೀಡಿದವರು ತನ್ನ ತಂದೆಯಿಂದ ಅದನ್ನು ಕೇಳಿದ್ದ ಮೇವಾಲಾಲ್ ಎಂಬವರು.
ಆ ದುರಂತಮಯ ವರ್ಷಗಳಲ್ಲಿ ಬಲಾತ್ಕಾರ ಮತ್ತು ಹಿಂಸಾಚಾರದ ಎರಡು ಪ್ರಮುಖ ಘಟನೆಗಳು ನಡೆದವು. ಬಲಾತ್ಕಾರವು (coersion) ಆಫಘಾನಿಸ್ತಾನಕ್ಕೆ ಮುಸ್ಲಿಮರ ಹಿಜ್ರತ್ (ಸಾಮೂಹಿಕ ವಲಸೆ) ರೂಪದಲ್ಲಿದ್ದರೆ, ಹಿಂಸಾಚಾರವು ಅತ್ಯಂತ ಕ್ರೂರವಾದ ಮೋಪ್ಲಾ (ಮಾಪ್ಳಾ) ಜೆಹಾದ್ನ ರೂಪದಲ್ಲಿ ನಡೆಯಿತು. ಎರಡನೆಯದು ಸ್ವಲ್ಪವಾದರೂ ಚರ್ಚಿತವಾಗುತ್ತಿದೆ; ಆದರೆ ಮೊದಲನೆಯದನ್ನು ಬಹುತೇಕ ಎಲ್ಲರೂ ಮರೆತಂತಿದೆ.
ಎರಡು ಬಗೆಯ ಕಾವ್ಯ
ಕಾವ್ಯವು ಒಳಗಿನ ಭಾವನೆಗಳ ಸ್ಫೋಟ ಎನ್ನುತ್ತಾರೆ; ಅದು ಸಾಮೂಹಿಕ ಪ್ರಜ್ಞೆಗೆ ಇಳಿದು ನಮ್ಮ ನಡತೆಯ ಮೇಲೆ ಕೂಡ ಪ್ರಭಾವ ಬೀರುತ್ತದೆ. ಉದಾಹರಣೆಗೆ, ಬಂಕಿಮಚಂದ್ರರ ಪದ್ಯ ವಂದೇ ಮಾತರಂ ಜನ್ಮಭೂಮಿಯನ್ನು ಭೂಮಿ ಮಾತ್ರವಲ್ಲ; ದಿವ್ಯಮಾತೆ ಎಂದು ಹೇಳುತ್ತದೆ. ಆದರೆ ಅದೇ ವೇಳೆ ತಮ್ಮ ಜನ್ಮಭೂಮಿಯನ್ನು ಕುರಿತು ಬೇರೆ ಅಭಿಪ್ರಾಯವನ್ನು ಹೊಂದಿರುವವರು ಕೂಡ ಇದ್ದಾರೆ. ಅವರಿಗೆ ತಾವು ಹುಟ್ಟಿದ ನೆಲವನ್ನು ದಿವ್ಯಮಾತೆ ಎನ್ನುವುದು (ದಿವ್ಯತೆ ನೀಡುವುದು) ದೈವದ್ರೋಹವಾಗುತ್ತದೆ. ಕವಿ ಇಕ್ಬಾಲ್ ತನ್ನ ತರೆನ್-ಎ-ಹಿಂದಿಯಲ್ಲಿ (ಹಿಂದುಸ್ತಾನದ ಜನರ ರಾಷ್ಟ್ರಗೀತೆ) – ಪ್ರಸಿದ್ಧ ಸಾರೇ ಜಹಾನ್ ಸೇ ಅಚ್ಛಾ ದಲ್ಲಿ ಹಮ್ ಬುಲ್ಬುಲ್ ಹೈ ಇಸ್ ಕೀ, ಯೇ ಗುಲಿಸ್ತಾನ್ ಹಮಾರಾ) (ನಾವು ಈ ಉದ್ಯಾನದ ಬುಲ್ಬುಲ್ ಹಕ್ಕಿಗಳು) ಎಂದು ಹೇಳುತ್ತಾರೆ. ಹಕ್ಕಿಗಳು ಉದ್ಯಾನಕ್ಕೆ ಬಂದು ಮೋಜು ಮಾಡುತ್ತವೆ; ಉದ್ಯಾನಕ್ಕೇನಾದರೂ ಆದರೆ ಅವು ಸೀದಾ ಹಾರಿಹೋಗುತ್ತವೆ. ಜನ್ಮಭೂಮಿಯನ್ನು ದೇವತೆ ಎಂದು ಭಕ್ತಿಯಿಂದ ಕಾಣುವುದು ಮತ್ತು ಉದ್ಯಾನ ಚೆನ್ನಾಗಿದ್ದಾಗ ಅಲ್ಲಿದ್ದು, ಅದಕ್ಕೆ ಹಾನಿಯಾದರೆ ಹಾರಿಹೋಗುವುದರಲ್ಲಿನ (ದೂರವಾಗುವುದು) ವ್ಯತ್ಯಾಸದ ಕಡೆಗೆ ಡಾ|| ಶ್ರೀರಂಗ ಗೋಡ್ಬೋಲೆ ಗಮನ ಸೆಳೆಯುತ್ತಾರೆ.
೧೯೨೦ರ ಬೇಸಿಗೆಯ ಹೊತ್ತಿಗೆ ಅಂತಿಮವಾಗಿ ಏನು ಮಾಡುವುದೆಂದು ಖಿಲಾಫತ್ ಚಳವಳಿಯ ನಾಯಕರಿಗೆ ಗೊತ್ತಿರಲಿಲ್ಲ. ಆ ಹೊತ್ತಿಗೆ, ಅಂದರೆ ಅದೇ ಮೇ ತಿಂಗಳಿನಿಂದ ನವೆಂಬರ್ ವರೆಗೆ ಭಾರತದ ಸುಮಾರು ೬೦ ಸಾವಿರ ಹಕ್ಕಿಗಳು ಸಮೀಪದ ಆಫಘಾನಿಸ್ತಾನಕ್ಕೆ ವಲಸೆ (ಹಿಜ್ರತ್) ಹೋದವು. ಏಕೆಂದರೆ ಅವರ ಆಶ್ರಯತಾಣವು ಅವರ ದೃಷ್ಟಿಯಲ್ಲಿ ಅವಿಶ್ವಾಸಿಗಳಾದವರ ಸೇನೆಗಳಿಂದ ಅಪವಿತ್ರವಾಗಿತ್ತು. ದೈವಸಂಬಂಧಿಯಾದ ನಂಬಿಕೆಯಲ್ಲದೆ ಅಷ್ಟು ದೊಡ್ಡ ವಲಸೆ ನಡೆಯುತ್ತಿರಲಿಲ್ಲ ಎಂದು ಭಾವಿಸಲಾಗಿದೆ.
ವಿಶ್ವಾಸ ಮತ್ತು ವಲಸೆ
ಅವಿಶ್ವಾಸದಿಂದ ಬದುಕುವುದೆಂದರೆ ತಪ್ಪು ಮಾಡಿದಂತೆ. ತಪ್ಪು ಮಾಡಬೇಕಾದ ಕಡೆ ಬದುಕುವ ಬದಲು ವಿಶ್ವಾಸದಿಂದ ಬದುಕುವ ಕಡೆಗೆ ಹೊರಟುಹೋಗಿ ಎಂದು ಕುರಾನ್ ಸ್ಪಷ್ಟವಾಗಿ ಹೇಳುತ್ತದೆ. ತಾವಿರುವ ದೇಶವು ದಮನ ಮಾಡಿದ ಕಾರಣ ವಲಸೆ ಹೋಗಲು ಸಾಧ್ಯವಾಗಲಿಲ್ಲ ಎನ್ನುವವರಿಗೆ ದೇವದೂತರು ವಲಸೆ ಹೋಗಲು ಸಾಧ್ಯವಾಗಲಿಲ್ಲ ಎಂದರೆ ಏನರ್ಥ? ಅಲ್ಲಾನ ಭೂಮಿ ಅಷ್ಟೊಂದು ಚಿಕ್ಕದಾಯಿತೆ? ಹಾಗಿದ್ದರೆ ನಿಮ್ಮ ವಾಸಸ್ಥಳ ನರಕ ಎಂದರ್ಥ; ಅದು ಒಂದು ಕೆಟ್ಟ ಪ್ರಯಾಣದ ಕೊನೆ ಎಂದು ಟೀಕಿಸುತ್ತಾರೆ.
ಯೋಜನೆಯನ್ನು ಹಾಕಿಕೊಳ್ಳಲಾಗದ ದುರ್ಬಲರು ಮತ್ತು ದಾರಿಕಾಣದವರಿಗೆ ಮಾತ್ರ ರಿಯಾಯಿತಿ ಇದೆ. ಅಂತಹ ಸಂದರ್ಭದಲ್ಲಿ ವಲಸೆ ಹೋಗುವವರಿಗೆ ಕುರಾನ್ ಈ ಭರವಸೆಯನ್ನು ನೀಡುತ್ತದೆ: ಅಲ್ಲಾನ ಉದ್ದೇಶಕ್ಕಾಗಿ ವಲಸೆ ಹೋಗುವವರಿಗೆ ಭೂಮಿಯಲ್ಲಿ ಆಶ್ರಯ, ಸಂಪತ್ತುಗಳು ಸಿಗುತ್ತವೆ. ಯಾರು ಮನೆ ಬಿಡುವುದಿಲ್ಲವೋ ಅಂಥವನು ಅಲ್ಲಾ ಮತ್ತು ಸಂದೇಶವಾಹಕನಿಗೆ ದ್ರೋಹ ಬಗೆದಂತಾಗಿ ಅವನಿಗೆ ಸಾವು ಪ್ರಾಪ್ತಿಯಾಗುತ್ತದೆ; (ಆಗ ಅವನ ಕೊಡುಗೆ ಅಲ್ಲಾನಿಗೆ ಮಾಡುವ ಕರ್ತವ್ಯವಾಗಿರುತ್ತದೆ).
ಪ್ರವಾದಿ (ಮಹಮ್ಮದ್ ಪೈಗಂಬರ್) ಹಿಜ್ರತನ್ನು ಪ್ರೋತ್ಸಾಹಿಸಿದರು. ನಿಜವೆಂದರೆ, ಅವರ ಕಾರ್ಯಯೋಜನೆಯ ಐದನೇ ವರ್ಷ ಅವರೇ ಅದನ್ನು ಮಾಡಿದರು; ಅವರ ಸಹವರ್ತಿಗಳು ಅಫ್ಲಿಕ್ಷನ್ಗೆ (ಹಿಂಸೆ) ಒಳಗಾದಾಗ ಅವರಿಗೆ ಪ್ರವಾದಿ ಹೀಗೆ ಹೇಳಿದರು: ನೀವು ಅಬಿಸೀನಿಯಕ್ಕೆ ಹೋಗುವುದಾದರೆ (ಅದು ನಿಮಗೆ ಒಳಿತು) ರಾಜ ಅನ್ಯಾಯವನ್ನು ಸಹಿಸುವುದಿಲ್ಲ. ಮತ್ತು ಅಲ್ಲಾ ನಿಮ್ಮನ್ನು ದುಃಖದಿಂದ ಪಾರು ಮಾಡುವ ತನಕ ಅದು ಸ್ನೇಹಸಂದೇಶ ಆಗಿರುತ್ತದೆ. ಅಫ್ಲಿಕ್ಷನ್ ಮತ್ತು ದುಃಖ (distress)ಗಳು ಪರ್ಸೆಕ್ಯೂಶನ್ ಬಗ್ಗೆ ಹೇಳುತ್ತವೆ.
ಅದಲ್ಲದೆ ಮುಸ್ಲಿಮೇತರರಾಗಿದ್ದ ಮೆಕ್ಕಾದ ಖುರಾಯಿಷ್ ಬುಡಕಟ್ಟಿನವರಿಂದ ಕ್ರಿ.ಶ. ೬೨೨ರ ಸೆಪ್ಟೆಂಬರ್ನಲ್ಲಿ ಅಂಕಲ್ ಅಬುತಾಲಿಬ್ ಸಾವು ಸಂಭವಿಸಿ, ತಮ್ಮ ವಂಶದವರ ಬೆಂಬಲ ನಿಂತುಹೋದಾಗ, ಪ್ರವಾದಿಯವರು ಮೆಕ್ಕಾದಿಂದ ಮದೀನಾಗೆ ಹಿಜ್ರತ್ ಮಾಡಿದರು. ಗಮನಿಸಬೇಕಾದ ಅಂಶವೆಂದರೆ, ಇಸ್ಲಾಂನ ಪ್ರಕಾರ ಹಿಜ್ರತ್ ಹೇಡಿಗಳು ಮಾಡುವ ಕೆಲಸವಲ್ಲ; ಬದಲಾಗಿ ಇಸ್ಲಾಮಿಕ್ ಭೂಮಿಯಲ್ಲಿ ನಡೆಸುವ ಮರುಸಂಘಟನೆಯ ಕಾರ್ಯತಂತ್ರ; ಮುಂದೆ ಮರಳಿ ಯುದ್ಧ ಮಾಡಿ ಆ ನೆಲವನ್ನು ವಶಮಾಡಿಕೊಳ್ಳುವುದು. ಹಿಜ್ರತ್ ಮತ್ತು ಜೆಹಾದ್ಗಳು ಬೇರೆಯಲ್ಲ. ಸೇಡಿನೊಂದಿಗೆ ಜೆಹಾದ್ಗೆ ಸಿದ್ಧತೆ ಮಾಡುವುದೇ ಹಿಜ್ರತ್.
ಹೀಗಿರುವಾಗ ತಾವು ಹುಟ್ಟಿದ ದೇಶವನ್ನು ದಿವ್ಯಮಾತೆ (ದೇವತೆ) ಎಂದು ಭಾವಿಸಿ ಆ ಭೂಮಿಗೆ ಅಂಟಿಕೊಳ್ಳುವವರಿಗೂ ವಲಸೆ ಹೋಗುವ ಇವರಿಗೂ ಅಜಗಜಾಂತರ. ಈ ಸರಳ ಸತ್ಯವನ್ನು ತಿಳಿಯದವರಿಗೆ ೧೯೨೦ರ ಹೊತ್ತಿಗೆ ಭಾರತದಲ್ಲಿ ನಡೆದ ಇಸ್ಲಾಮಿಕ್ ವಲಸೆ ಅರ್ಥವಾಗಲಾರದು.
ದಾರ್–ಉಲ್–ಹರ್ಬ್ ಭಾರತ
ಕ್ರಿ.ಶ. ೧೮೦೩ರ ಅನಂತರ ಶಾ ಅಬ್ದುಲ್ ಅಜೀಜ್ ಒಂದು ಫತ್ವಾ ಹೊರಡಿಸಿ, ದೇಶವನ್ನು (ಭಾರತ) ಇಮಾಂ-ಉಲ್-ಮುಸ್ಲಿಮೀನ್ ಆದೇಶದಂತೆ ಆಳುತ್ತಿಲ್ಲ. ಬದಲಾಗಿ ಕ್ರೈಸ್ತ ರಾಜರು (ಆಳರಸರು) ಆಳುತ್ತಿದ್ದಾರೆ. ಬ್ರಿಟಿಷರ ಕೆಳಗಿನ ಭಾರತದ ಬಗ್ಗೆ ಹೇಳುವುದಾದರೆ, ಆತನ ಶಿಷ್ಯ ಮತ್ತು ಅಳಿಯ(Son-in-Law) ಅಬ್ದುಲ್ ಹೇ ಆಡಳಿತ ಇನ್ನೂ ವಿಭಿನ್ನ. ಅದು ಶತ್ರುವಿನ ದೇಶ ಎನಿಸುವಂತಿದೆ. ಏಕೆಂದರೆ ಇಲ್ಲಿ ನಮ್ಮ ಪವಿತ್ರ ಶಾಸನಕ್ಕೆ ಪೂರಕವಾದ ವಾತಾವರಣ ಇಲ್ಲ ಎಂದು ಸಾರಿದ. ಕುತೂಹಲದ ಸಂಗತಿಯೆಂದರೆ, ಅಬ್ದುಲ್ ಹೇ ಈಸ್ಟ್ ಇಂಡಿಯಾ ಕಂಪೆನಿಯ ಕೆಳಗೆ ಸೇವೆ ಸಲ್ಲಿಸುತ್ತಿದ್ದ.
ಶಾಸ್ತ್ರೀಯ ಪರಿಭಾಷೆಯಲ್ಲಿ ಹೇಳುವುದಾದರೆ, ದಾರ್-ಉಲ್-ಹರ್ಬ್ ಎಂದರೆ ಇಸ್ಲಾಮಿಕ್ ಶಾಸನವು ಆಚರಣೆಯಲ್ಲಿಲ್ಲದ ದೇಶಗಳು. ಆರಾಧನೆ ಮತ್ತು ವಿಶ್ವಾಸಿಗರ ರಕ್ಷಣೆಯಲ್ಲಿ, ಅದೇ ರೀತಿ ಧಿಮ್ಮಿಗಳ (ತಮ್ಮ ರಕ್ಷಣೆಯ ಬಗ್ಗೆ ತೆರಿಗೆ ಕೊಡಬೇಕಾದ ಮುಸ್ಲಿಮೇತರರು) ವಿಷಯದಲ್ಲಿ ಒಂದು ಮುಸ್ಲಿಂ ದೇಶವು ದಾರ್-ಉಲ್-ಹರ್ಬ್ ಆಗಿ ಬದಲಾವಣೆಯಾದಾಗ ಅಲ್ಲಿರುವ ಎಲ್ಲ ಮುಸ್ಲಿಮರು ಒಂದು ದಾರ್-ಉಲ್-ಇಸ್ಲಾಂ ದೇಶಕ್ಕೆ ವಲಸೆ ಹೋಗಬೇಕು; ಮತ್ತು ಮರಳಿ ಬಂದು ದಾರ್-ಉಲ್-ಹರ್ಬ್ ಆದ ದೇಶವನ್ನು ಗೆಲ್ಲಬೇಕು.
ಪ್ರವಾದಿ ತಮ್ಮ ಜೀವಮಾನದಲ್ಲಿ ಕ್ರಿ.ಶ. ೬೨೨ರಲ್ಲಿ ಮೆಕ್ಕಾದಿಂದ ಮದೀನಾಗೆ ಹಿಜ್ರತ್ ಮಾಡಿದರು; ಮತ್ತು ಎಂಟು ವರ್ಷಗಳ ನಂತರ ಮೆಕ್ಕಾವನ್ನು ಗೆದ್ದು ಅಲ್ಲಿಗೆ ಮರಳಿದರು. ೧೯೨೦ರ ಹಿಜ್ರತ್ನ ಬೆಂಬಲಿಗರು ಆಫಘಾನಿಸ್ತಾನಕ್ಕೆ ವಲಸೆ ಹೋಗಬೇಕೆಂದು ಜನರನ್ನು ಒತ್ತಾಯಿಸಿದಾಗ ಅವರ ತಲೆಯಲ್ಲಿ ಇದೇ ಗುರಿ ಇತ್ತು.
ಬ್ರಿಟಿಷರು ಖಿಲಾಫತ್ ಅಪಾಯ ಉಂಟು ಮಾಡಿದ ಕಾರಣ, ಖಿಲಾಫತ್ನ ದೃಷ್ಟಿಯಲ್ಲಿ ಭಾರತ ಅಪವಿತ್ರವಾಗಿತ್ತು. ಈ ದೃಷ್ಟಿಕೋನದ ದೊಡ್ಡ ಸಮರ್ಥಕರು ಆಲಿ ಸಹೋದರರು. ವೈಸರಾಯ್ ಚೆಮ್ಸ್ಸ್ಫರ್ಡ್ಗೆ ೧೯೧೯ರ ಏಪ್ರಿಲ್ನಲ್ಲಿ ಬರೆದ ಪತ್ರದಲ್ಲಿ ಅವರು, ಮುಸಲ್ಮಾನರು ಬೇರೆ ಯಾವುದಾದರೂ ಮುಕ್ತವಾದ ಸ್ಥಳಕ್ಕೆ ವಲಸೆಹೋಗಬೇಕು; ಮತ್ತು ಇಸ್ಲಾಮಿಗೆ ಹೆಚ್ಚು ಸುರಕ್ಷಿತ ಎನಿಸಿದಾಗ ಮರಳಬೇಕು. ನಮ್ಮ ಈಗಿನ ದುರ್ಬಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಲಸೆಯೊಂದೇ ಉಳಿದಿರುವ ದಾರಿ ಎಂದು ಹೇಳಿದ್ದರು.
ಆಫಘಾನ್ ಕೊಡುಗೆ
ಆ ಹೊತ್ತಿಗೆ ಟರ್ಕಿ, ಅರೇಬಿಯ, ಪರ್ಷಿಯಗಳೆಲ್ಲ ಯೂರೋಪಿನ ಕ್ರೈಸ್ತ ಆಳ್ವಿಕೆಗೆ ಒಳಪಟ್ಟಿದ್ದ ಕಾರಣ ಆಫಘಾನಿಸ್ತಾನ ಏಕೈಕ ದಾರ್-ಉಲ್-ಇಸ್ಲಾಂ ದೇಶವಾಗಿತ್ತು; ಮತ್ತು ಒಟ್ಟೊಮನ್ ಸಾಮ್ರಾಜ್ಯದ ಅಳಿವಿನಿಂದ ಉಂಟಾದ ಖಾಲಿ ಸ್ಥಳವನ್ನು ತುಂಬುವ ಕನಸನ್ನು ಅದು ಕಾಣುತ್ತಿತ್ತು. ಆಫಘಾನಿಸ್ತಾನದ ಅಮೀರ್ ಅಮಾನುಲ್ಲಾ (೧೮೯೨-೧೯೬೦) ೧೯೨೦ರ ಫೆಬ್ರುವರಿ ೯ರಂದು ಮಾಡಿದ ಭಾಷಣದಲ್ಲಿ ಖಿಲಾಫತ್ಗಾಗಿ ನಾನು ನನ್ನ ಜೀವವನ್ನೇ ಕೊಡಲು ಸಿದ್ಧ; ಮತ್ತು ಭಾರತದಿಂದ ಬರುವ ಮುಹಾಜರಿನ್ಗಳನ್ನು (ಹಿಜ್ರತ್ ಮಾಡುವವರು) ಸ್ವಾಗತಿಸಲು ಸಿದ್ಧ ಎಂದು ಹೇಳಿದ್ದ.
ಭಾರತದಲ್ಲಿ ಈ ಭಾಷಣಕ್ಕೆ ವ್ಯಾಪಕ ಪ್ರಚಾರವನ್ನು ನೀಡಲಾಯಿತು; ಹಾಗೂ ಅದರಿಂದ ಭಾರೀ ಸಂಚಲನ ಉಂಟಾಯಿತು. ಅಮೀರ್ ಅಮಾನುಲ್ಲಾ ಮುಹಾಜರಿನ್ಗಳಿಗಾಗಿ ಈ ಕೆಳಗಿನ ನಿಜಾಮ್ನಾಮಾ (ಸುಗ್ರೀವಾಜ್ಞೆ)ವನ್ನು ಕೂಡ ಹೊರಡಿಸಿದ:
೧) ಆಫಘಾನಿಸ್ತಾನಕ್ಕೆ ಹಿಜ್ರತ್ ಮಾಡಬಯಸುವ ಯಾವನೇ ವ್ಯಕ್ತಿಗೆ ಪೇಷಾವರ ಅಥವಾ ಢಾಕಾದಲ್ಲಿ ಪಾಸ್ಪೋರ್ಟ್ ನೀಡಲಾಗುವುದು. ಆಫಘಾನ್ ನೆಲದಲ್ಲಿ ಯಾರೇ ಕಾಲಿಡಲಿ; ಅವರನ್ನು ಆಫಘಾನ್ ಪ್ರಜೆ ಎಂದು ಪರಿಗಣಿಸಲಾಗುವುದು. ಆತನಿಗೆ ಎಲ್ಲ ಹಕ್ಕುಗಳು ಇರುತ್ತವೆ. ಆತ ಮಹಮ್ಮದೀಯ ಕಾನೂನು ಮತ್ತು ಆಂತರಿಕ ಶಾಸನಗಳಿಗೆ ಒಳಪಡುತ್ತಾನೆ.
೨) ಆಫಘಾನ್ ದೇಶವನ್ನು ಪ್ರವೇಶಿಸುವ ಯಾವುದೇ ವ್ಯಕ್ತಿಗೆ ಮತ್ತು ಆಫಘಾನ್ ಸರ್ಕಾರಕ್ಕೆ ವಿಧೇಯತೆಯನ್ನು ಘೋಷಿಸುವವರಿಗೆ ಕೃಷಿಯೋಗ್ಯ ಭೂಮಿಯನ್ನು ನೀಡಲಾಗುವುದು. ಅವಿವಾಹಿತನಿಗೆ ಆರು ಜಾರಿಬ್ (ಒಂದು ಜಾರಿಬ್ ಎಂದರೆ ೦.೪೯ ಎಕರೆ ಅಥವಾ ೨೦೦೦ ಚದರ ಮೀಟರ್) ಮತ್ತು ವಿವಾಹಿತನಿಗೆ ಎಂಟು ಜಾರಿಬ್ ಜಾಗವನ್ನು ನೀಡುತ್ತೇವೆ. ಅವಿವಾಹಿತ ಹುಡುಗಿ ಅಥವಾ ಅಪ್ರಾಪ್ತವಯಸ್ಕನಿಗೆ ಜಾಗ ಕೊಡಲಾಗುವುದಿಲ್ಲ.
೩) ಕೊಟ್ಟ ಜಾಗದಲ್ಲಿ ಕೃಷಿ ಮಾಡಿ ಫಸಲು ಕೈಗೆ ಬರುವವರೆಗೆ ಸಂಬಂಧಪಟ್ಟವರಿಗೆ ರೇಷನ್ ಕೊಡಲಾಗುವುದು. ವಯಸ್ಕರಿಗೆ ತಿಂಗಳಿಗೆ ಐದು ಸೇರು (ಕಾಬೂಲ್ನಲ್ಲಿ ಒಂದು ಸೇರು ಅಂದರೆ ಏಳು ಕೆ.ಜಿ. ಅಥವಾ ೧೫.೫ ಪೌಂಡ್) ಗೋಧಿಹಿಟ್ಟು; ಆರು ವರ್ಷದಿಂದ ಪ್ರಾಯಕ್ಕೆ ಬರುವವರೆಗೆ ತಿಂಗಳಿಗೆ ಮೂರು ಸೇರು ಗೋಧಿಹಿಟ್ಟು ನೀಡುತ್ತೇವೆ.
೪) ಜಮೀನು ಕೊಡಲಾದವರಿಗೆ ಮೊದಲ ವರ್ಷ ಸಾಲ ನೀಡಲಾಗುವುದು. ನೇಗಿಲು ಇತ್ಯಾದಿ ಖರೀದಿ ಬಗ್ಗೆ ಪ್ರತಿ ಜಾರಿಬ್ಗೆ ಆರು ಸೇರು ಗೋಧಿ ಮತ್ತು ಐದು ರೂ. ನೀಡುತ್ತೇವೆ. ನಗದು ಸಾಲವನ್ನು ಮೂರು ವರ್ಷದ ಬಳಿಕ ಮೂರು ವಾರ್ಷಿಕ ಕಂತುಗಳಲ್ಲಿ ಮರಳಿಸಬೇಕು.
೫) ಭಾರತದ ಮುಹಾಜರಿನ್ಗಳು ಮೂರು ವರ್ಷದವರೆಗೆ ಭೂ ಕಂದಾಯವನ್ನು ಕಟ್ಟಬೇಕಿಲ್ಲ; ನಾಲ್ಕನೇ ವರ್ಷ ಸರ್ಕಾರದ ನಿಯಮದಂತೆ ಅದನ್ನು ಪಾವತಿಸಬೇಕು.
೬) ಆಫಘಾನ್ ಸರ್ಕಾರದ ಸಲಹೆ ಪಡೆಯದೆ ರಾಜಕೀಯ ಚಟುವಟಿಕೆ ನಡೆಸಬಾರದು.
೭) ಶಿಕ್ಷಕರು ಅಥವಾ ಆರ್ಟ್ಸ್, ಸಯನ್ಸ್ ಬಲ್ಲವರಿದ್ದು, ಸರ್ಕಾರ ಅವರ ಸೇವೆಯನ್ನು ಪಡೆಯಬಯಸಿದರೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸಂಬಳ ನೀಡಲಾಗುತ್ತದೆ. ಉಳಿದ ಜನ ಸರ್ಕಾರದ ಸೇವೆಗೆ ಸೇರಬಹುದು; ಅಥವಾ ಯಾವುದೇ ವ್ಯಾಪಾರ, ವೃತ್ತಿ ಕೈಗೊಳ್ಳಬಹುದು.
೮) ಆಫಘಾನಿಸ್ತಾನಕ್ಕೆ ಪ್ರವೇಶಿಸಿದ ಭಾರತದ ಮುಹಾಜರಿನ್ಗಳು ಒಂದರಿಂದ ಎರಡು ತಿಂಗಳ ಕಾಲ ಓಬಲ್-ಉಸ್-ಸಿರಾಜ್ (ಕ್ವಾರ್ಟರ್ಸ್)ನಲ್ಲಿರಬೇಕು. ಆಗ ಸರ್ಕಾರ ಅವರಿಗೆ ಕೊಡುವ ನಿವೇಶನವನ್ನು ಆಯ್ಕೆ ಮಾಡಿ ಕೊಡುತ್ತದೆ; ಅದುವರೆಗೆ ಅವರು ಕ್ವಾರ್ಟರ್ಸ್ನಲ್ಲಿರಬೇಕು.
ಏಪ್ರಿಲ್ ೨೦, ೧೯೨೦ರಂದು ದೆಹಲಿಯಲ್ಲಿ ಜರುಗಿದ ಖಿಲಾಫತ್ ಕಾರ್ಯಕರ್ತರ ಸಮಾವೇಶವು ಆಫಘಾನಿಸ್ತಾನವು ಪ್ರಕಟಿಸಿದ ಕೊಡುಗೆಯನ್ನು ಸ್ವಾಗತಿಸಿತು. ಹಿಜ್ರತ್ (ವಲಸೆ) ಮಾಡಬೇಕೇ ಬೇಡವೇ ಎಂಬ ಬಗ್ಗೆ ಉಲೇಮಾಗಳಲ್ಲಿ ಭಿನ್ನಾಭಿಪ್ರಾಯ ಬಂತು. ಕಾಂಗ್ರೆಸ್ನ ಪ್ರಮುಖ ರಾಷ್ಟ್ರೀಯವಾದಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಹಿಜ್ರತ್ ಪರವಾಗಿ ಪ್ರಬಲವಾಗಿ ವಾದಿಸಿದರು.
ಆಜಾದ್: ಹಿಜ್ರತ್ ಚಾಂಪಿಯನ್
ಖಿಲಾಫತ್ ಚಳವಳಿಗೆ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಕೊಡುಗೆ ಮುಖ್ಯವಾಗಿ ಪರಿಕಲ್ಪನೆಗೆ ಸಂಬಂಧಿಸಿದ್ದು. ೧೯೨೦ರ ಫೆಬ್ರುವರಿ ಕೊನೆಯಲ್ಲಿ ನಡೆದ ಸಮಾವೇಶದಲ್ಲಿ ಖಿಲಾಫತ್ ಚಳವಳಿಗೆ ಶಾಸ್ತ್ರೀಯವಾಗಿ ನೀಡಿದ ಧಾರ್ಮಿಕ ವ್ಯಾಖ್ಯಾನದ ಸಾರಾಂಶವೇ ಅದಾಗಿತ್ತು. ಅವರ ಖಿಲಾಫತ್ ಮತ್ತು ಇಸ್ಲಾಂನ ಪವಿತ್ರ ಸ್ಥಳಗಳು ಎನ್ನುವ ಮಹಾಪ್ರಬಂಧವು ಪ್ರಮುಖ ಇಸ್ಲಾಮಿಕ್ ದಾಖಲೆಯಾಗಿದ್ದು, ಖಿಲಾಫತ್ ಬಗೆಗಿನ ಭಾರತೀಯ ಮುಸ್ಲಿಮರ ಅಭಿಪ್ರಾಯ-ಭಾವನೆಗಳ ಸಾರಾಂಶವಾಗಿದೆ.
ಅದೇ ಮಾರ್ಚ್ ೨೫ರಂದು ಅಬುಲ್ ಕಲಾಂ ಆಜಾದ್ ಮುಸ್ಲಿಮರಿಗೆ ಹೋಗಲು ಜಾಗವಿಲ್ಲದ ಕಾರಣ ಹಿಜ್ರತ್ ಅಸಾಧ್ಯ ಎಂದು ಹೇಳಿದ್ದರು. ಅನಂತರ ತಮ್ಮ ನಿಲವನ್ನು ಬದಲಿಸಿ ಹಿಜ್ರತ್ ಕಾ ಫತ್ವಾ ಬರೆದರು. ಅದು ಒಂದು ಉರ್ದು ದಿನಪತ್ರಿಕೆಯಲ್ಲಿ ಅದೇ ವರ್ಷ ಜುಲೈ ೩೦ರಂದು ಪ್ರಕಟವಾಯಿತು. ಧರ್ಮದ ದಾರಿಯಲ್ಲಿ ನಡೆಯಬಯಸುವವರು ನನ್ನನ್ನು ಅಥವಾ ಹಿಜ್ರತ್ ಪರ ಉಲೇಮಾಗಳನ್ನು ಸಂಪರ್ಕಿಸಬಹುದು ಎಂದು ಅದರಲ್ಲಿ ಅವರು ಹೇಳಿದ್ದರು.
ಹಿಜ್ರತ್ ಕಾ ಫತ್ವಾದಲ್ಲಿ ಮೌಲಾನಾ ಆಜಾದ್ ಹೀಗೆ ಹೇಳಿದ್ದರು: ಶರೀಯತ್ನ ಎಲ್ಲ ಅಂಶಗಳು, ಸಮಕಾಲೀನ ಘಟನೆಗಳು, ಮುಸಲ್ಮಾನರ ಹಿತಾಸಕ್ತಿಗಳು ಮತ್ತು ರಾಜಕೀಯದ ಪರ-ವಿರೋಧ ಅಂಶಗಳನ್ನು ಗಮನಿಸಿ ಹೇಳುವುದಾದರೆ ನನಗೆ ಸಮಾಧಾನದ ಭಾವನೆ ಬಂದಿದೆ. ಭಾರತದ ಮುಸ್ಲಿಮರಿಗೆ ಈಗ ಭಾರತದಿಂದ ವಲಸೆ ಹೋಗುವುದಲ್ಲದೆ ಅನ್ಯಮಾರ್ಗವಿಲ್ಲ. ಕೂಡಲೆ ವಲಸೆ ಹೋಗಲು ಸಾಧ್ಯವಾಗದವರು ವಲಸೆ ಹೋಗುವ ಮುಹಾಜರಿನ್ಗಳಿಗೆ ಸಹಾಯ ಮಾಡಬೇಕು. ಭಾರತದಲ್ಲಿ ಉಳಿದುಕೊಂಡವರು ಇಸ್ಲಾಮಿನ ಶತ್ರುಗಳು ಎನ್ನುವ ಸಂಸ್ಥೆಯ ಜೊತೆ ಯಾವುದೇ ಸಹಕಾರ ಅಥವಾ ಸಂಪರ್ಕ ಹೊಂದಿರಬಾರದು ಎಂದು ಮೌಲಾನಾ ಆಜಾದ್ ಸಮರ್ಥಿಸಿಕೊಂಡರು.
ಹೀಗೆ ಅಬುಲ್ ಕಲಾಂ ಆಜಾದ್ರ ಗುರಿ ಮುಸ್ಲಿಂ ಮತಶ್ರದ್ಧೆಯನ್ನು ಉಳಿಸಿಕೊಳ್ಳುವುದಾಗಿತ್ತು. ಹಿಜ್ರತ್ ಬಗ್ಗೆ ಅವರಿಗಿದ್ದ ಏಕೈಕ ಆಕ್ಷೇಪ ಅದನ್ನು ನಡೆಸುವ ಕ್ರಮದ ಬಗೆಗಿತ್ತು. ಅದನ್ನು ಸಂಘಟಿತ (ವ್ಯವಸ್ಥಿತ) ರೀತಿಯಲ್ಲಿ ಮಾಡಬೇಕು; ಅವ್ಯವಸ್ಥಿತವಾಗಿ ಅಲ್ಲ – ಎಂದವರು ಸೂಚಿಸಿದ್ದರು. ಮೌಲಾನಾ ಆಜಾದ್ ವಿಧಿಸಿದ ಇನ್ನೊಂದು ಶರತ್ತೆಂದರೆ, ಯಾರಾದರೂ ವಲಸೆ ಹೋಗುವ ಮುನ್ನ ಆ ಬಗ್ಗೆ ಪ್ರತಿಜ್ಞೆ ಮಾಡಬೇಕು ಎಂಬುದಾಗಿತ್ತು. ಚಳವಳಿ ಮುಂದುವರಿದಂತೆ ಹಿಜ್ರತ್ನ ಮಿತಿ ಮತ್ತು ಅಪಾಯಗಳು ಅವರಿಗೆ ಮನವರಿಕೆ ಆದವು. ಆಗ ಅತ ತನ್ನ ತತ್ತ್ವಕ್ಕೆ ನಿಷ್ಠರಾದರು; ಮತ್ತು ಬಿಗಿ ನಿಲವು ತಾಳಿದರು; ಪ್ರಾಯೋಗಿಕ ನೆಲೆಯಲ್ಲಿ ಸಣ್ಣ ಶರತ್ತುಗಳನ್ನು ಮಾತ್ರ ಸೂಚಿಸಿದರು.
(ಮುಂದುವರಿಯಲಿದೆ)
ಮೋಪ್ಲಾ ಕಾಂಡದ ಮೊದಲನೇ ಭಾಗ: https://utthana.in/wp-admin/post.php?post=8756&action=edit