ಕೆಲವು ಪಾಠಗಳು
ಗಾಂಧಿ ಮತ್ತು ಖಿಲಾಫತ್ ಚಳವಳಿಗಾರರು ಒಟ್ಟು ಸೇರಿದ ಕಾರಣ ಖಿಲಾಫತ್ ಚಳವಳಿಯು ಹಿಂದೂ-ಮುಸ್ಲಿಂ ಏಕತೆಯ ರೀತಿ ಕಂಡುಬಂತು. ಸ್ವರಾಜ್(ಸ್ವಾತಂತ್ರ್ಯ)ಗಾಗಿ ಈ ಚಳವಳಿ ಎಂದು ಹಿಂದುಗಳಿಗೆ ಮಂಕುಬೂದಿ ಎರಚಿದರು; ಆದರೆ ಖಿಲಾಫತ್ನವರ ಉದ್ದೇಶ ಬೇರೆಯೇ ಇತ್ತೆಂಬುದು ಸ್ಪಷ್ಟವಿದೆ. ಖಿಲಾಫತ್ ಚಳವಳಿಯ ಪ್ರತ್ಯೇಕ ಅಜೆಂಡಾದ ಬಗ್ಗೆ ಇದ್ದ ಭ್ರಮೆ ಇಂದಿಗೂ ಮುಂದುವರಿದಿದೆ. ಸ್ವರಾಜ್ ಬೇಕಿದ್ದರೆ ಹಿಂದೂ-ಮುಸ್ಲಿಂ ಏಕತೆ ಅಗತ್ಯವೆಂದು ಗಾಂಧಿ ಮತ್ತಿತರರು ಜನರ ತಲೆಗೆ ತುಂಬಿದರು (ಬ್ರೈನ್ವಾಶ್). ಆದರೆ ಮುಸ್ಲಿಮರು ಕಾಂಗ್ರೆಸ್ ಜೊತೆ ಸೇರಿದ್ದಕ್ಕೆ ಮತ್ತು ಹಿಂದುಗಳಿಗೆ ರಾಜಕೀಯ ಸಹಕಾರ ನೀಡಿದ್ದಕ್ಕೆ ಕಾರಣ ಅವರ ಪಾನ್-ಇಸ್ಲಾಮಿಕ್ ಗುರಿಯಷ್ಟೆ.

(ಕಳೆದ ಸಂಚಿಕೆಯಿಂದ)
ಉದ್ರಿಕ್ತ ಜನರಿಂದ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆದು ಹಲವು ಜೀವಹಾನಿಗಳಾದ ಚೌರಿಚೌರಾ ಘಟನೆಯ ಕಾರಣದಿಂದ ಗಾಂಧಿಯವರು ಫೆಬ್ರುವರಿ ೪, ೧೯೨೨ರಂದು ಅಸಹಕಾರ ಚಳವಳಿಯನ್ನು ನಿಲ್ಲಿಸಿದರು; ನಿಜವೆಂದರೆ ಅದು ದೇಶದ ಹಲವು ಭಾಗದಲ್ಲಿ ಖಿಲಾಫತ್ ಚಳವಳಿಯ ಬಾಲಂಗೋಚಿಯಂತಿತ್ತು. ಖಿಲಾಫತ್ ಚಳವಳಿಯ ಗುರಿ ಈಡೇರದಿದ್ದ ಕಾರಣ ಅದು ಅಸಹಕಾರ ಚಳವಳಿಯ ನಿಯಮಗಳನ್ನು ಬಿಟ್ಟು ಮುಂದುವರಿಯಿತು.
ಖಿಲಾಫತ್ ಚಳವಳಿಗೆ ಮುಖ್ಯವಾಗಿ ನಾಲ್ಕು ಗುರಿಗಳಿದ್ದವು:
೧. ಟರ್ಕಿಶ್ ಸಾಮ್ರಾಜ್ಯದ ಪೂರ್ಣ ಸ್ವಾತಂತ್ರ್ಯ.
೨. ಯೂರೋಪ್ನ ಆಗ್ನೇಯ ಭಾಗದ ಥ್ರೇಸ್ ಪ್ರದೇಶವನ್ನು ಟರ್ಕಿಗೆ ಸೇರಿಸುವುದು.
೩. ಏಷ್ಯಾ ಮೈನರ್ ಕರಾವಳಿ ಮತ್ತಿತರ ಪ್ರದೇಶಗಳನ್ನು ಟರ್ಕಿಗೆ ಸೇರಿಸುವುದು.
೪. ಅರೇಬಿಯನ್ ಪರ್ಯಾಯದ್ವೀಪದ ಸ್ವಾತಂತ್ರ್ಯ ಮತ್ತು ರಕ್ಷಣೆ.
ಖಿಲಾಫತ್ ಅಂತ್ಯ
ಮಿತ್ರಪಕ್ಷಗಳು ಮತ್ತು ಟರ್ಕಿ ನಡುವೆ ಜುಲೈ ೨೪, ೧೯೨೫ರಂದು ನಡೆದ ಒಪ್ಪಂದದ ಪ್ರಕಾರ ಟರ್ಕಿಗೆ ಕಾನ್ಸ್ಟಾಂಟಿನೋಪಲ್ ಮತ್ತು ಥ್ರೇಸ್ನ ಕೆಲವು ಭಾಗಗಳು ದೊರೆತವು. ಜಲಸಂದಿಯ ನಿಯಂತ್ರಣ ಕೂಡ ಅದರಲ್ಲಿ ಸೇರಿತ್ತು. ಟರ್ಕಿ ವಿಶಾಲ ಸಾಮ್ರಾಜ್ಯವನ್ನು ಕಳೆದುಕೊಂಡರೂ ಸಮೀಪಪೂರ್ವದ ಪ್ರಮುಖ ಶಕ್ತಿಯಾಗಿ ಮೂಡಿಬಂತು. ಆ ಮೂಲಕ ಮೊದಲ ಮೂರು ಗುರಿಗಳು ಈಡೇರಿದಂತಾಯಿತು. ಆದರೆ ನಾಲ್ಕನೇ ಗುರಿ ತುಂಬ ಮುಖ್ಯವಾದ ಕಾರಣ ಖಿಲಾಫತ್ ನಾಯಕರು ಚಳವಳಿಯನ್ನು ಮುಂದುವರಿಸಲು ನಿರ್ಧರಿಸಿದರು. ಮೊದಲಿಗೆ ಟರ್ಕಿಯ ನಾಯಕ ಮುಸ್ತಾಫಾ ಕಮಾಲ್ಗೆ ಬೆಂಬಲ ನೀಡಿದರು; ಆದರೆ ಆತ ಖಿಲಾಫತನ್ನೇ ರದ್ದು ಮಾಡುತ್ತಾನೆಂದು ಅವರಿಗೆ ತಿಳಿದಿರಲಿಲ್ಲ.
ಮುಸ್ತಾಫಾ ಕಮಾಲ್ ಅವರ ಹೊಸ ಟರ್ಕಿಶ್ ಗಣರಾಜ್ಯದ ಪ್ರಕಾರ ಖಿಲಾಫತ್ ಎಂದರೆ ಒಂದು ಅನಾಮಧೇಯ ಮತ್ತು ಅನಪೇಕ್ಷಿತ ಸಂಸ್ಥೆ ಎನಿಸಿತು. ಕಮಾಲ್ ಅದನ್ನು ನಿರಂತರ ನ್ಯೂಸೆನ್ಸ್ ಮತ್ತು ತಮ್ಮ ಗಣರಾಜ್ಯಕ್ಕೆ ಶಾಶ್ವತ ಅಪಾಯವೆಂದು ಮನಗಂಡರು. ಟರ್ಕಿಗೆ ಇನ್ನು ಮುಂದೆ ಮಿಲಿಟರಿ ಸಾಹಸ ಮಾಡುವುದಾಗಲಿ ಅಥವಾ ಸಮಗ್ರ ಇಸ್ಲಾಮ್ನ ರಕ್ಷಣೆಯ ಬಗ್ಗೆ ಹಕ್ಕು ಮಂಡಿಸುವುದಾಗಲಿ ಅಸಾಧ್ಯ ಎಂದಾತ ಹೇಳಿದರು. ಮಾತ್ರವಲ್ಲ, ಮಾರ್ಚ್ ೩, ೧೯೨೪ರಂದು ಖಿಲಾಫತ್ ಕಚೇರಿಯನ್ನೇ ವಜಾಗೊಳಿಸಿ, ಖಲೀಫನನ್ನು ಪದಚ್ಯುತಗೊಳಿಸಿದರು.
ಟರ್ಕಿಶ್ ರಾಷ್ಟ್ರೀಯವಾದಿಗಳು ಖಲೀಫನನ್ನು ಬಹಳಷ್ಟು ಅವಮಾನಿಸಿದರು. ದೇಶವನ್ನು ಕೂಡಲೆ ತೊರೆಯಬೇಕೆಂದು ದೊರೆಯ ಕುಟುಂಬಕ್ಕೆ ಹೇಳಿದರು. ಶುಕ್ರವಾರದ ಪ್ರಾರ್ಥನೆಯಲ್ಲಿ ಖಲೀಫನಿಗೆ ಯಾವುದೇ ಸ್ಥಾನ ನೀಡಲಿಲ್ಲ. ಮುಂದೆ ಆತ ಹೈದರಾಬಾದ್ ನಿಜಾಮನ ಸ್ಟೈಪಂಡ್ (ಜೀವನಾಂಶ), ಭಾರತದ ರಾಜರ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳ ಉದಾರದಾನದಿಂದ ಜೀವಿಸಬೇಕಾಯಿತು.
ಚಳವಳಿಗೆ ಆಘಾತ
ಇದರಿಂದ ಭಾರತದ ಖಿಲಾಫತಿಗಳಿಗೆ ದೊಡ್ಡ ಆಘಾತವೇ ಆಯಿತು. ಆದರೆ ಅವರು ಅದೇ ರೀತಿ ಮುಂದುವರಿದರು. ಆಗ ಮುಸ್ತಾಫಾ ಕಮಾಲ್ ಅವರೇ ಖಲೀಫರಾಗಲಿ ಎಂದು ಹೇಳಿದವರು ಮೌಲಾನಾ ಅಬುಲ್ ಕಲಾಂ ಆಜಾದ್. ಖಿಲಾಫತಿಗಳ ಆಂತರಿಕ ಭಿನ್ನಾಭಿಪ್ರಾಯಗಳು ಬಯಲಿಗೆ ಬಂದವು. ಅಸಹಕಾರ ಚಳವಳಿ ಮತ್ತು ವಿಶೇಷವಾಗಿ ವಿಧಾನ ಪರಿಷತ್ ಪ್ರವೇಶಗಳು ವಿವಾದದ ವಿಷಯಗಳಾದವು. ಕೇಂದ್ರೀಯ ಖಿಲಾಫತ್ ಸಮಿತಿಯ (ಸಿಕೆಸಿ) ಅಧಿಕೃತ ನೀತಿ ಮತ್ತು ಜಮೀಯತ್-ಉಲ್-ಉಲೆಮಾಗಳ ಫತ್ವಾದಿಂದ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ಮೌಲಾನಾ ಅಬ್ದುಲ್ ಬಾರಿ ಮತ್ತು ಅಜ್ಮಲ್ಖಾನ್ ಅವರು ವಿಧಾನಪರಿಷತ್ತಿಗೆ ಹೋಗೋಣವೆಂದರೆ ಕೆಲವು ಖಿಲಾಫತ್ ನಾಯಕರಿಗೆ ತಾವು ಕಾಂಗ್ರೆಸ್ ಕಾರ್ಯಕ್ರಮದ ಭಾಗವಾಗುತ್ತಿದ್ದೇವೆ ಅನ್ನಿಸಿತು. ಖಿಲಾಫತಿಗಳಿಗೆ ಬ್ರಿಟಿಷ್ ವಿರೋಧವು ಆಕಸ್ಮಿಕವಾಗಿದ್ದು, ಟರ್ಕಿಗೆ ಬ್ರಿಟನ್ ವಿರುದ್ಧ ಇದ್ದಾಗ ಮಾತ್ರ (ಅವರ ಪ್ರಕಾರ) ಅದಕ್ಕೆ ಅರ್ಥವಿತ್ತು. ಬ್ರಿಟಿಷರ ಜೊತೆಗಿನ ಸಂಬಂಧವನ್ನು ಸರಿಪಡಿಸಿಕೊಳ್ಳಬೇಕೆಂದು ಬಾರಿ ಮತ್ತು ಕಿದ್ವಾಯಿ ೧೯೨೨ರ ಫೆಬ್ರುವರಿ ಹೊತ್ತಿಗೇನೇ ಹೇಳಿದ್ದರು.
ಅಸಹಕಾರ ಚಳವಳಿಯ ಬಗ್ಗೆ ಬಾಯಿ ಪ್ರಚಾರ ಮಾತ್ರ ಉಳಿದುಕೊಂಡಿತ್ತು. ೧೯೨೨ರ ಅನಂತರ ನಡೆದ ಗಲಭೆಗಳು ಹಿಂದೂ-ಮುಸ್ಲಿಂ ಏಕತೆಯ ಮುಖವಾಡವನ್ನು ಕಳಚಿದವು. ೧೯೨೪ರ ಜುಲೈನಲ್ಲಿ ಬಕ್ರೀದ್ ಹೊತ್ತಿಗೆ ದೆಹಲಿಯಲ್ಲಿ ಕೋಮುಗಲಭೆ ಕಾಣಿಸಿಕೊಂಡಿತು. ಅದೇ ತಿಂಗಳು ನಾಗಪುರದಲ್ಲಿ, ಮುಂದಿನ ತಿಂಗಳು ಪಾಣಿಪತ್ನಲ್ಲಿ ಹಿಂಸೆ ಸ್ಫೋಟಗೊಂಡಿತು. ಮುಂದೆ ಲಾಹೋರ್, ಲಕ್ನೋ, ಮುರಾದಾಬಾದ್, ಭಾಗಲ್ಪುರ, ಫಿಲಿಬಿತ್, ಷಹಜಹಾನ್ಪುರ, ಹರ್ದೋಯಿ, ಅಲಹಾಬಾದ್, ಝಂಗ್, ನಿಜಾಮ್ಗುಲ್ಬರ್ಗಗಳಲ್ಲೂ ಗಲಭೆಗಳು ಹರಡಿದವು. ಆರ್ಯ ಸಮಾಜದ ನೇತಾರರೂ ಬಹಳಷ್ಟು ಘರ್ವಾಪ್ಸಿ ಪ್ರಕರಣಗಳ ಮುಂದಾಳುಗಳೂ ಆಗಿದ್ದ ಸ್ವಾಮಿ ಶ್ರದ್ಧಾನಂತರ ಹತ್ಯೆ (ಡಿಸೆಂಬರ್ ೧೯೨೬) ಹಿಂದುಗಳಲ್ಲಿ ತುಂಬಾ ಆಕ್ರೋಶವುಂಟು ಮಾಡಿತು.
ಹಲವು ಲಕ್ಷ ರೂಪಾಯಿ (ಅಂದಿನ ದೊಡ್ಡ ಮೊತ್ತ) ಖಿಲಾಫತ್ ಫಂಡ್ನ ಹಣ ದುರುಪಯೋಗವಾಗಿದೆ ಎಂಬುದು ಬೆಳಕಿಗೆ ಬಂತು. ಅದರಿಂದ ಖಿಲಾಫತ್ ನಾಯಕರ ವಿಶ್ವಾಸಾರ್ಹತೆಯು ಕುಸಿಯಿತು. ಸಿಕೆಸಿ ಅಲ್ಲದೆ ವಿವಿಧ ಪ್ರಾಂತಗಳ ಖಿಲಾಫತ್ ಸಮಿತಿಗಳ ಮೇಲೂ ಅಂತಹ ಆರೋಪಗಳು ಕೇಳಿಬಂದವು. ಪಂಜಾಬ್ ಒಂದರಲ್ಲೇ ೪೦-೫೦ ಸಾವಿರ ರೂ. ಅವ್ಯವಹಾರ ನಡೆದಿತ್ತು. ಕೋಶಾಧಿಕಾರಿಯ ಬಳಿ ೧೬ ಲಕ್ಷಕ್ಕೂ ಅಧಿಕ ಮೊತ್ತವಿದ್ದು, ಅದನ್ನು ಆತ ತನ್ನ ಖಾಸಗಿ ಸಂಸ್ಥೆಗೆ ವರ್ಗಾಯಿಸಿದ್ದ ಎಂದು ಡಾ|| ಶ್ರೀರಂಗ ಗೋಡ್ಬೋಲೆ (ಆರ್ಗನೈಸರ್) ವಿವರಿಸಿದ್ದಾರೆ.
ಖಿಲಾಫತ್ ಚಳವಳಿಯ ಕೊನೆಯ ಹಂತದಲ್ಲಿ ಆರ್ಥಿಕ ಹಗರಣಗಳು, ರಾಜಕೀಯ ಗುಂಪುಗಾರಿಕೆ, ವೈಯಕ್ತಿಕ ಜಗಳ ಮತ್ತು ಹಿಂದೂ-ಮುಸ್ಲಿಂ ಘರ್ಷಣೆಗಳು ಒಟ್ಟಾಗಿ ಬಂದವು. ೧೯೨೯ರ ಬಳಿಕವೂ ಕೇಂದ್ರೀಯ ಖಿಲಾಫತ್ ಸಮಿತಿ ಇತ್ತು; ಆದರೆ ಸಮಾವೇಶಗಳು ನಡೆಯಲಿಲ್ಲ. ಖಿಲಾಫತಿಗಳು ಚದರಿಹೋಗಿ ಕೆಲವು ಗುಂಪುಗಳಾದರು.
ಹೊಸ ಪಕ್ಷ ರಚನೆ
ರಾಷ್ಟ್ರೀಯವಾದಿ ಮುಸ್ಲಿಮರು ಎಂದು ತಮ್ಮನ್ನು ಕರೆದುಕೊಂಡ ಅನ್ಸಾರಿ, ಆಜಾದ್, ಡಾ|| ಮಹಮ್ಮದ್ ಶೇರ್ವಾನಿ, ಕಿದ್ವಾಯಿ, ಅಸಫ್ ಅಲಿ, ಅಕ್ರಮ್ ಖಾನ್, ಕಿಚ್ಲೂ, ಡಾ|| ಅಲಂ ಮುಂತಾದವರು ಸೇರಿ ಮುಸ್ಲಿಂ ನೇಷನಲಿಸ್ಟ್ ಪಾರ್ಟಿ ಎನ್ನುವ ಪಕ್ಷವನ್ನು ರಚಿಸಿದರು. ಅದೇ ವೇಳೆ ಆಲಿ ಸಹೋದರರು (ಮಹಮ್ಮದಾಲಿ, ಶೌಕತ್ ಆಲಿ), ಹಸ್ರತ್ ಮೊಹಾನಿ, ಆಜಾದ್ ಸುಭಾನಿ ಇವರೆಲ್ಲ ಸೇರಿ ಮುಸ್ಲಿಂ ಲೀಗ್ನ ಸಹಯೋಗದಲ್ಲಿ ಅಖಿಲ ಭಾರತ ಮುಸ್ಲಿಂ ಕಾನ್ಫರೆನ್ಸ್ ಎನ್ನುವ ಸಂಘಟನೆಯನ್ನು ರಚಿಸಿಕೊಂಡರು. ಹಲವು ನಾಯಕರು ನಿಧನ ಹೊಂದಿದರು. ಹೀಗೆ ಖಿಲಾಫತ್ ಸಂಘಟನೆ ಶಿಥಿಲವಾಗಿ ಒಂದು ಕಾಲದಲ್ಲಿ ಮುಸ್ಲಿಂಲೀಗ್ಗಿಂತ ಪ್ರಬಲವಾಗಿದ್ದ ಅದು ೧೯೩೮ರ ಹೊತ್ತಿಗೆ ಕಾಣದಾಯಿತು; ಮುಂಬೈಯಲ್ಲಿ ಖಿಲಾಫತ್ ಹೌಸ್ ಮಾತ್ರ ಉಳಿಯಿತು.
ಖಿಲಾಫತ್ ಮಹತ್ತ್ವ
ಹೀಗೆ ಅಂತಿಮವಾಗಿ ಖಿಲಾಫತ್ ಚಳವಳಿ ವಿಫಲವಾದರೂ ಕೂಡ ಭಾರತದ ರಾಜಕೀಯ ಇತಿಹಾಸದಲ್ಲಿ ಅದಕ್ಕೊಂದು ಮಹತ್ತ್ವ ಇದ್ದೇ ಇದೆ. ಅದು ಭಾರತದ ಮುಸ್ಲಿಮರ ಮೊದಲ ಅಖಿಲ ಭಾರತ ಚಳವಳಿಯಾಗಿತ್ತು; ಅದಕ್ಕೆ ಕೇಂದ್ರ ಸಂಘಟನೆಯು ಮಾರ್ಗದರ್ಶನ ಮಾಡಿತ್ತು. ಮೊದಲು ಹಿಂದಿದ್ದ ಪಂಜಾಬ್, ಸಿಂಧ್, ಗಡಿನಾಡುಗಳು ಖಿಲಾಫತ್ ಚಳವಳಿಯ ಕಾರಣದಿಂದ ಮುಂದೆ ಬಂದವು. ಹಿಂದೆ ಮುಂಬೈ, ಬಂಗಾಳ ಮತ್ತು ಸಂಯುಕ್ತ ಪ್ರಾಂತ (ಯುನೈಟೆಡ್ ಪ್ರಾವಿನ್ಸಸ್ – ಯುಪಿ)ಗಳು ಮಾತ್ರ ಮುಂದಿದ್ದವು.
ಹಿಂದೆ ದೇಶದ ಮುಸ್ಲಿಂ ರಾಜಕೀಯವು ಮೇಲ್ವರ್ಗದವರದಾಗಿತ್ತು. ಖಿಲಾಫತ್ ಚಳವಳಿಯು ಮುಸ್ಲಿಮರನ್ನು ಸಂಘಟಿಸಿದಾಗ ಕೆಳವರ್ಗದವರು ಕೂಡ ಸೇರಿಕೊಂಡರು. ಆ ಸಂಘಟನೆ ಹೇಗಿತ್ತೆಂದರೆ ಗಾಂಧಿಯವರು ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಂಡಾಗ ಬಂದ ಬದಲಾವಣೆಯಂತಿತ್ತು.
ಖಿಲಾಫತ್ನ ಪ್ರಭಾವದಿಂದ ಇನ್ನೂ ಕೆಲವು ಚಳವಳಿಗಳು ಬಂದವು. ಡಾ|| ಕಿಚ್ಲೂ ತಾಂಝಮ್ ಚಳವಳಿಯನ್ನು ಶುರು ಮಾಡಿದರು. ೧೯೨೩ರಲ್ಲಿ ಸಿಕೆಸಿ ಅದನ್ನು ಸ್ವೀಕರಿಸಿತ್ತು. ಅದು ಮುಸ್ಲಿಮರ ಶಿಕ್ಷಣ, ವಕ್ಫ್ ಮುಂತಾದವುಗಳ ಬಗ್ಗೆ ಗಮನ ನೀಡಿತು. ೧೯೧೯ರಲ್ಲಿಯೆ ಜಮೀಯತ್-ಉಲೆಮಾ-ಹಿಂದ್ನ ಸ್ಥಾಪನೆಯಾಗಿತ್ತು; ಮುಂದೆ ಅದು ದೇವಬಂದ್ ಸಂಸ್ಥೆಯ ರಾಜಕೀಯ ಗಂಧವೆನಿಸಿತು.
ಗಾಂಧಿ ಮತ್ತು ಖಿಲಾಫತ್ ಚಳವಳಿಗಾರರು ಒಟ್ಟು ಸೇರಿದ ಕಾರಣ ಖಿಲಾಫತ್ ಚಳವಳಿಯು ಹಿಂದೂ-ಮುಸ್ಲಿಂ ಏಕತೆಯ ರೀತಿ ಕಂಡುಬಂತು. ಸ್ವರಾಜ್(ಸ್ವಾತಂತ್ರ್ಯ)ಗಾಗಿ ಈ ಚಳವಳಿ ಎಂದು ಹಿಂದುಗಳಿಗೆ ಮಂಕುಬೂದಿ ಎರಚಿದರು; ಆದರೆ ಖಿಲಾಫತ್ನವರ ಉದ್ದೇಶ ಬೇರೆಯೇ ಇತ್ತೆಂಬುದು ಸ್ಪಷ್ಟವಿದೆ. ಖಿಲಾಫತ್ ಚಳವಳಿಯ ಪ್ರತ್ಯೇಕ ಅಜೆಂಡಾದ ಬಗ್ಗೆ ಇದ್ದ ಭ್ರಮೆ ಇಂದಿಗೂ ಮುಂದುವರಿದಿದೆ. ಸ್ವರಾಜ್ ಬೇಕಿದ್ದರೆ ಹಿಂದೂ-ಮುಸ್ಲಿಂ ಏಕತೆ ಅಗತ್ಯವೆಂದು ಗಾಂಧಿ ಮತ್ತಿತರರು ಜನರ ತಲೆಗೆ ತುಂಬಿದರು (ಬ್ರೈನ್ವಾಶ್). ಆದರೆ ಮುಸ್ಲಿಮರು ಕಾಂಗ್ರೆಸ್ ಜೊತೆ ಸೇರಿದ್ದಕ್ಕೆ ಮತ್ತು ಹಿಂದುಗಳಿಗೆ ರಾಜಕೀಯ ಸಹಕಾರ ನೀಡಿದ್ದಕ್ಕೆ ಕಾರಣ ಅವರ ಪಾನ್-ಇಸ್ಲಾಮಿಕ್ ಗುರಿಯಷ್ಟೆ. ೧೯೨೦ರ ನವೆಂಬರ್ನಲ್ಲಿ ಅಬ್ದುಲ್ ಬಾರಿ ಹೀಗೆ ಬರೆದರು: ಇಸ್ಲಾಂನ ಶಕ್ತಿ ಆತನ (ಗಾಂಧಿ) ಜೊತೆಗಿನ ಸಹಯೋಗದಲ್ಲಿದೆ.
೧೯೨೩ರ ಡಿಸೆಂಬರ್ನಲ್ಲಿ ಕಾಕಿನಾಡಾದಲ್ಲಿ ಜರಗಿದ ಖಿಲಾಫತ್ ಸಮಾವೇಶದಲ್ಲಿ ಶೌಕತ್ ಆಲಿ ಸ್ವರಾಜ್ ಗಳಿಕೆ ರಾಜಕೀಯ ಮತ್ತು ರಾಷ್ಟ್ರೀಯ ಅಷ್ಟೇ ಅಲ್ಲ; ಅದು ಅತಿಮುಖ್ಯವಾದ ಇಸ್ಲಾಮಿಕ್ ಕರ್ತವ್ಯವಾಗಿದೆ. ಒಂದು ಮಾತಿನಲ್ಲಿ ಹೇಳುವುದಾದರೆ ಹಿಂದುಗಳು ಹಿಂದುತನವನ್ನು ಬಿಟ್ಟು ಭಾರತೀಯರಾದರು; ಆದರೆ ಮುಸ್ಲಿಮರು ಪೂರ್ತಿ ಮುಸ್ಲಿಮರಾಗಿಯೇ ಇದ್ದರು ಎಂದು ಸ್ಪಷ್ಟವಾಗಿಯೇ ಹೇಳಿದರು.
ಶಾಶ್ವತ ಕೊಡುಗೆ
ಖಿಲಾಫತ್ ಚಳವಳಿಯ ಶಾಶ್ವತ ಕೊಡುಗೆಯೆಂದರೆ ಅದು ಭಾರತದಲ್ಲಿ ಮುಸ್ಲಿಂ ರಾಜಕೀಯಕ್ಕೆ, ಅಂತಿಮವಾಗಿ ಪಾಕಿಸ್ತಾನದ ರಚನೆಗೆ ಅಸ್ತಿಭಾರ ಹಾಕಿತು. ಕುತೂಹಲದ ಸಂಗತಿಯೆಂದರೆ, ಗಾಂಧಿಯವರು ಖಿಲಾಫತ್ ಚಳವಳಿಗೆ ಕೈಹಾಕಿದಾಗ ಮುಂದೆ ಪಾಕಿಸ್ತಾನದ ಸ್ಥಾಪಕರಾದ ಮಹಮ್ಮದಾಲಿ ಜಿನ್ನಾ ಹೇಗೂ ಇದು ದೂರದ ಬೇರಾವುದೋ ದೇಶದ ಸಮಸ್ಯೆ. ಇದನ್ನು ನೀವೇಕೆ ಮೈಮೇಲೆ ಎಳೆದುಕೊಳ್ಳುತ್ತಿದ್ದೀರಿ? ಎಂದು ಕೇಳಿದ್ದರು. ಮಾತ್ರವಲ್ಲ, ಅದೇ ಕಾರಣಕ್ಕೆ ಅವರು ಕಾಂಗ್ರೆಸ್ಗೆ ರಾಜೀನಾಮೆಯನ್ನೂ ನೀಡಿದರು. ಇಸ್ಲಾಮಿಗೆ ಒತ್ತು ನೀಡುವ ಮೂಲಕ ಖಿಲಾಫತ್ ಚಳವಳಿ ಮುಸ್ಲಿಮರಿಗೆ ತಾವು ಮುಸ್ಲಿಮರೆನ್ನುವ ಪ್ರಜ್ಞೆಯನ್ನು ಗಟ್ಟಿಮಾಡಿತು. ಅಂತಹ ಭಾವನೆಯು ಹಳತಾದರೂ ಹಿಂದೆಂದೂ ಇಲ್ಲದ ತೀವ್ರತೆಯೊಂದಿಗೆ ನಾವು ಮೊದಲಿಗೆ ಮುಸ್ಲಿಮರು, ನಂತರ ಭಾರತೀಯರು ಎನ್ನುವುದು ಅವರ ಧೋರಣೆಯಾಯಿತು. ಇದು ಮುಸ್ಲಿಂ ರಾಷ್ಟ್ರೀಯತೆಗೆ ಹೆಮ್ಮೆಯ ವಿಷಯವಾಯಿತು. ಈ ತಳಹದಿಯ ಮೇಲೆ ಇತರ ಏಕತೆ(ಒಗ್ಗಟ್ಟು)ಗಳನ್ನು ಕಟ್ಟಲು ಅವರಿಗೆ ಸಾಧ್ಯವಾಯಿತು. ಹೀಗೆ ದೇಶಕ್ಕೆ ಖಿಲಾಫತ್ ಚಳವಳಿ ಕೆಲವು ಪಾಠಗಳನ್ನೇ ನೀಡಿತೆನ್ನಬಹುದು.
ಇಸ್ಲಾಂ ಮೊದಲು
ಸಾಮಾನ್ಯವಾಗಿ ಮುಸ್ಲಿಂ ರಾಜಕೀಯ, ಅದರಲ್ಲಿಯೂ ಖಿಲಾಫತ್ ಚಳವಳಿಯನ್ನು ಗಮನವಿಟ್ಟು ಪರಿಶೀಲಿಸಿದರೆ ಮುಸ್ಲಿಂ ಮಾನಸಿಕತೆಯು ಸ್ಪಷ್ಟಗೊಳ್ಳುತ್ತದೆ. ಖಿಲಾಫತ್ ಚಳವಳಿಯ ಹಿನ್ನೆಲೆಯಲ್ಲಿ ಮುಸ್ಲಿಂ ರಾಜಕೀಯವನ್ನು ಗಮನಿಸಿದ ಹೋಂ ರೂಲ್ ಚಳವಳಿಯ ನೇತಾರರಾದ ಆನಿಬೆಸೆಂಟ್ ಹೀಗೆ ಹೇಳುತ್ತಾರೆ: ಇದರಲ್ಲಿ ಹಳೆಯ ಖಡ್ಗದ ಮುಸ್ಲಿಂ ಮತ ಪುನರುಜ್ಜೀವನಗೊಂಡದ್ದನ್ನು ಕಾಣುತ್ತೇವೆ. ಇದರಿಂದ ಮರೆತ ಹಳೆಯ ಪ್ರತ್ಯೇಕತೆಯನ್ನು ಹೊರಗೆಳೆದಂತಾಯಿತು. ಅರೇಬಿಯ ದ್ವೀಪದ ಪರಿಕಲ್ಪನೆ, ಆ ಪವಿತ್ರ ನೆಲವನ್ನು ಮುಸ್ಲಿಮೇತರರು ಮೆಟ್ಟಬಾರದು. ಆಫಘಾನಿಸ್ತಾನ ಭಾರತದ ಮೇಲೆ ದಾಳಿ ನಡೆಸಿದರೆ ಇಲ್ಲಿನ ಮುಸ್ಲಿಮರು ತಮ್ಮ ಮತದವರ ಜೊತೆ ಸೇರಿಕೊಳ್ಳಬೇಕು. ತಮ್ಮ ಮಾತೃಭೂಮಿಯನ್ನು ರಕ್ಷಿಸುವ ಹಿಂದುಗಳನ್ನು ಕೊಲ್ಲಬೇಕು. ಮುಸಲ್ಮಾನರ ಮೊದಲ ವಿಧೇಯತೆ ಇಸ್ಲಾಮಿಕ್ ದೇಶಗಳಿಗೇ ಹೊರತು ಮಾತೃಭೂಮಿಗಲ್ಲ. ಅವರು ತಾವಿರುವ ದೇಶದ ಶಾಸನಕ್ಕಿಂತ ಹೆಚ್ಚಾಗಿ ಪ್ರವಾದಿಯವರ ಶಾಸನಗಳಂತೆ ನಡೆದುಕೊಳ್ಳಬೇಕು, ಅದರಿಂದಾಗಿ ಅವರು ಕೆಟ್ಟ ನಾಗರಿಕರಾಗುತ್ತಾರೆ. ಏಕೆಂದರೆ ಅವರ ವಿಧೇಯತೆ ದೇಶದ ಹೊರಗಿರುತ್ತದೆ. ಅವರನ್ನು ನಂಬುವಂತಿಲ್ಲ. ಏಕೆಂದರೆ ಅವರು ಆಲಿ ಸಹೋದರರಂತಹ ತಮ್ಮ ನಾಯಕರ ಮಾತನ್ನು ಕೇಳುವವರು. ಭಾರತವು ಸ್ವತಂತ್ರವಾದರೆ ಮುಸ್ಲಿಮರು ಪ್ರವಾದಿಯವರು ಹೇಳಿದ್ದೆಂದು ಹೇಳುವ ಅವರ ನಾಯಕರ ಮಾತನ್ನು ಕೇಳುತ್ತಾರೆ; ಆ ಮೂಲಕ ಅವರು ದೇಶದ ಸ್ವಾತಂತ್ರ್ಯಕ್ಕೆ ಆಪತ್ಕಾರಿಗಳಾಗಬಹುದು ಎಂದವರು ವಿಶ್ಲೇಷಿಸಿದ್ದಾರೆ.
ಈ ಸತ್ಯವನ್ನು ಡಾ|| ಬಿ.ಆರ್. ಅಂಬೇಡ್ಕರ್ ಅವರು ಕೂಡ ಚೆನ್ನಾಗಿಯೇ ಗುರುತಿಸಿದ್ದಾರೆ; ಪಾನ್-ಇಸ್ಲಾಮಿಸಂ ಬಗ್ಗೆ ಅವರು ಇಸ್ಲಾಂ ಜನರ ಪ್ರದೇಶಗಳ ಗಡಿಗಳನ್ನು ಬೆಂಬಲಿಸುವುದಿಲ್ಲ. ಅದರ ವಿಧೇಯತೆ ಸಾಮಾಜಿಕ ಮತ್ತು ಮತೀಯವಾದದ್ದು. ಅದರಿಂದಾಗಿ ಅದು ಪ್ರದೇಶೇತರ. ಪಾನ್-ಇಸ್ಲಾಮಿಸಂಗೆ ಇದೇ ಆಧಾರ. ಇದರಿಂದಾಗಿ ಭಾರತದ ಪ್ರತಿಯೊಬ್ಬ ಮುಸಲ್ಮಾನ ತಾನು ಮೊದಲು ಮುಸ್ಲಿಂ ಅನಂತರ ಭಾರತೀಯ ಎನ್ನುತ್ತಾನೆ. ಭಾರತದ ಮುಂದುವರಿಕೆಯಲ್ಲಿ (ಪ್ರಗತಿ) ಮುಸ್ಲಿಮರು ತುಂಬ ಸಣ್ಣ ಪಾತ್ರ ವಹಿಸುವುದಕ್ಕೆ ಈ ಭಾವನೆಯೇ ಕಾರಣ. ಇತರ ಮುಸ್ಲಿಂ ದೇಶಗಳ ವಿಷಯ(ಸಮಸ್ಯೆ)ವನ್ನು ಇವರು ಎತ್ತಿಕೊಳ್ಳುತ್ತಾರೆ. ಒಟ್ಟಿನಲ್ಲಿ ಅವರ ಚಿಂತನೆಯಲ್ಲಿ ಮುಸ್ಲಿಂ ದೇಶಗಳು ಮೊದಲು; ಭಾರತಕ್ಕೆ ಎರಡನೇ ಸ್ಥಾನ ಎಂದು ವಿವರಿಸಿದ್ದಾರೆ.
ಕಾರ್ಯತಂತ್ರದ ಮೈತ್ರಿ ಮಾತ್ರ
ಒಗ್ಗಟ್ಟಿಲ್ಲ; ಕಾರ್ಯತಂತ್ರದ ಮೈತ್ರಿ ಮಾತ್ರ – ಇದು ಖಿಲಾಫತ್ ಚಳವಳಿ ತೋರಿಸಿದ ಎರಡನೇ ಪಾಠ. ಪಾನ್-ಇಸ್ಲಾಮಿಸಂನ ಕಾರಣದಿಂದಾಗಿ ಮುಸ್ಲಿಮರಿಗೆ ದೇಶದ ಮುಸ್ಲಿಮೇತರರ ಜೊತೆ ಸೇರಲು ಸಾಧ್ಯವಾಗುವುದಿಲ್ಲ. ಒಂದು ಬಂಗಾಳಿ ಪತ್ರಿಕೆಯ ಸಂಪಾದಕರು ರವೀಂದ್ರನಾಥ ಟಾಗೋರರ ಸಂದರ್ಶನ ಮಾಡಿದ್ದು, ಅದು ಏಪ್ರಿಲ್ ೧೮, ೧೯೨೪ರ ಟೈಮ್ಸ್ ಆಫ್ ಇಂಡಿಯದಲ್ಲಿ ಪ್ರಕಟಗೊಂಡಿತು. ಅದರಲ್ಲಿ ಅವರು ಹಿಂದೂ-ಮುಸ್ಲಿಂ ಏಕತೆ ಬಹುತೇಕ ಅಸಾಧ್ಯ. ಏಕೆಂದರೆ ಮಹಮ್ಮದೀಯರಿಗೆ ಯಾವುದೇ ಒಂದು ದೇಶದ ದೇಶಪ್ರೇಮವನ್ನು ಹೊಂದಲು ಸಾಧ್ಯವಾಗುವುದಿಲ್ಲ. ನಾನು ಹಲವು ಮಹಮ್ಮದೀಯರಲ್ಲಿ ನೇರವಾಗಿ ಕೇಳಿದ್ದೇನೆ. ಯಾವುದಾದರೂ ಮಹಮ್ಮದೀಯ ಶಕ್ತಿ ನಮ್ಮ ದೇಶದ ಮೇಲೆ ದಾಳಿ ಮಾಡಿದರೆ ನೀವು ಹಿಂದೂ ಸಹಜೀವಿಗಳ ಜೊತೆಗೆ ನಿಂತು ದೇಶವನ್ನು ರಕ್ಷಿಸುತ್ತೀರಾ ಎಂದು ಕೇಳಿದಾಗ ಬಂದ ಉತ್ತರದಿಂದ ನನಗೆ ಸಮಾಧಾನವಾಗಿಲ್ಲ. ಮಹಮ್ಮದಾಲಿ ಅವರಂತಹ ಜನ ಕೂಡ ಯಾವುದೇ ಮುಸ್ಲಿಮನಿಗೆ, ಆತನ ದೇಶ ಯಾವುದೇ ಇದ್ದರೂ ಇನ್ನೊಬ್ಬ ಮುಸ್ಲಿಮನ ವಿರುದ್ಧ ನಿಲ್ಲಲು ಅವಕಾಶವಿಲ್ಲ ಎಂದೇ ಹೇಳಿದರು. ಗಾಂಧಿಯಂಥ ನಾಯಕರು ಹಿಂದೂ-ಮುಸ್ಲಿಂ ಏಕತೆಯ ಬಗ್ಗೆ ಏನು ಹೇಳಿದರೂ ವಾಸ್ತವ ಮೇಲಿನದು. ಇದು ಹಿಂದೂ-ಮುಸ್ಲಿಂ ಏಕತೆಯಲ್ಲಿರುವ ಸಮಸ್ಯೆ.
ಇನ್ನು ಪ್ರಧಾನಿ ನೆಹರು ಈ ವಿಷಯದಲ್ಲಿ ಇಚ್ಛಾಪೂರ್ವಕವಾಗಿ ಕುರುಡರಾಗಿದ್ದರು. ಭಾರತದಲ್ಲಿ ಮುಸ್ಲಿಂ ಸಮಸ್ಯೆ ಎಂಬುದಿಲ್ಲ. ಕೋಮುವಾದ ಎಂಬುದು ಕೇವಲ ಪ್ರಚಾರವಾಗಿದ್ದು, ಅದರಿಂದ ಯಾವುದೇ ಕಷ್ಟವಾಗಿಲ್ಲ. ಅದನ್ನು ಅತಿ ಮಾಡಲಾಗುತ್ತಿದೆ. ಜನಸಮುದಾಯಕ್ಕೆ ಅದರಿಂದ ತೊಂದರೆಯಾಗಿಲ್ಲ. ಸಾಮಾಜಿಕ ವಿಷಯಗಳು ಎದುರು ಬಂದಾಗ ಅದು ಹಿಂದೆ ಸರಿಯುತ್ತದೆ ಎಂದವರು ಹೇಳಿದ್ದರು. ಇದರಲ್ಲಿ ಕೂಡ ವಾಸ್ತವವಾದಿ ಆಗಿದ್ದವರು ಬಾಬಾಸಾಹೇಬ್ ಅಂಬೇಡ್ಕರ್: ಹಿಂದೂ-ಮುಸ್ಲಿಂ ಏಕತೆಯನ್ನು ಸಾಧಿಸಲು ಪ್ರಾಮಾಣಿಕ ಹಾಗೂ ನಿರಂತರ ಪ್ರಯತ್ನವನ್ನು ಇದುವರೆಗೆ ನಡೆಸಲಾಗಿದೆ. ಅದರಿಂದ ಒಂದು ಪಕ್ಷದವರು ಇನ್ನೊಂದು ಪಕ್ಷಕ್ಕೆ ಶರಣಾಗುವುದನ್ನು ಬಿಟ್ಟು ಬೇರೇನೂ ಸಾಧಿತವಾಗಲಿಲ್ಲ. ಕೇವಲ ಆಶಾವಾದವನ್ನು ಆತುಕೊಳ್ಳುವವರಿಗೆ ಮಾತ್ರ ಅಂತಹ ಉಪಕ್ರಮಕ್ಕೆ ಸಮರ್ಥನೆ ಸಿಗಬಹುದು. ಏಕೆಂದರೆ ಹಿಂದೂ-ಮುಸ್ಲಿಂ ಏಕತೆ ಎಂಬುದೊಂದು ಮೃಗಜಲ. ಆದ್ದರಿಂದ ಈ ಚಿಂತನೆಯನ್ನು ಕೈ ಬಿಡುವುದೇ ಉತ್ತಮ. ನನ್ನನ್ನು ನಿರಾಶಾವಾದಿ ಅಥವಾ ಸಹನೆಯಿಲ್ಲದ ಆದರ್ಶವಾದಿ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ. ಈ ನಿಷ್ಫಲ ಪ್ರಯತ್ನವನ್ನು ನಡೆಸಬೇಕೇ ಎಂಬುದು ಹಿಂದುಗಳಿಗೆ ಸೇರಿದ್ದು. ಅವರ ಪ್ರಯತ್ನ ಈಗಾಗಲೆ ಸೋತದ್ದಾಗಿದೆ. ಖಿಲಾಫತ್ ಚಳವಳಿಯ ವೇಳೆ ಒಂದು ಹಂತದಲ್ಲಿ ಹಿಂದೂ-ಮುಸ್ಲಿಂ ಏಕತೆ ಭಾಸವಾಗಿತ್ತು; ಏಕೆಂದರೆ ಆಗ ಅದು ಅವರಿಗೆ ಬೇಕಿತ್ತು. ಅದು ಎಂದೂ ಹೃದಯ-ಮನಸ್ಸುಗಳ ಏಕತೆ ಆಗಿರದೆ ಕೇವಲ ಕಾರ್ಯತಂತ್ರದ ಮೈತ್ರಿಯಾಗಿತ್ತು. ಇಸ್ಲಾಂನ ಅಡಿಯಲ್ಲಿ ಅಪೇಕ್ಷಿತ ಏಕತೆ ಅಸಾಧ್ಯ ಎಂದಿದ್ದಾರೆ ಡಾ|| ಅಂಬೇಡ್ಕರ್.
ಮತ–ರಾಜಕೀಯ ಒಂದೇ
ಇಸ್ಲಾಂನಲ್ಲಿ ಮತ ಮತ್ತು ರಾಜಕೀಯಗಳು ಒಂದೇ ಎಂಬುದು ಖಿಲಾಫತ್ ಚಳವಳಿ ಕಲಿಸಿದ ಮೂರನೇ ಪಾಠ. ಆ ಚಳವಳಿ ಮತೀಯವೆ ಅಥವಾ ರಾಜಕೀಯವೆ ಎಂದು ಕೇಳುವವರಿದ್ದಾರೆ. ಆದರೆ ಈ ಪ್ರಶ್ನೆಯೇ ಅಸಂಬದ್ಧ. ಏಕೆಂದರೆ ಇಸ್ಲಾಮಿನಲ್ಲಿ ಅವುಗಳನ್ನು ಪ್ರತ್ಯೇಕಿಸುವುದೇ ಅಸಾಧ್ಯ. ಇಸ್ಲಾಮಿಕ್ ತತ್ತ್ವವೇ ಅವೆರಡನ್ನೂ ಆಳುತ್ತದೆ. ಇಸ್ಲಾಮಿನ ಆಧುನಿಕ ಚಿಂತಕ ಸಯ್ಯದ್ ಅಬುಲ್ ಅಲಾ ಮೌದೂದಿ (೧೯೦೩-೭೯) ಹೀಗೆ ಹೇಳಿದ್ದಾರೆ:
ಇಸ್ಲಾಂ ಕೇವಲ ತತ್ತ್ವ ಮತ್ತು ಆಚರಣೆ ಅಲ್ಲ. ಅದು ಪೂರ್ಣ ಜೀವನವಿಧಾನ. ಜೀವನದ ಎಲ್ಲ ಕ್ಷೇತ್ರಗಳಿಗೆ ದಿವ್ಯ ಮಾರ್ಗದರ್ಶನ. ಮತ ಮತ್ತು ರಾಜಕೀಯಗಳನ್ನು ಇಸ್ಲಾಂ ಪ್ರತ್ಯೇಕಿಸುವುದಿಲ್ಲ; ಮತದ ಮಾರ್ಗದರ್ಶನದಂತೆಯೆ ರಾಜಕೀಯವು ಇರಬೇಕೆಂದು ಹೇಳುತ್ತದೆ. ಸರ್ಕಾರವು ದೇವರ ಸೇವಕನಾಗಿದ್ದು, ಅಲ್ಲಾನೇ ಸಾರ್ವಭೌಮನಾಗಿರುತ್ತಾನೆ. ಆತ ನೀಡಿದ ಶಾಸನವು ನಾಡಿನ ಶಾಸನವಾಗುತ್ತದೆ. ಆದ್ದರಿಂದ ಮತವು ಮನೆಗೆ ಸೀಮಿತವಾಗಿದ್ದು ಆಳುವುದಕ್ಕೆ ಸೆಕ್ಯುಲರ್ ಸಂವಿಧಾನ ಇರಬೇಕು ಎನ್ನುವವರಿಗೆ ಇಸ್ಲಾಂ ಬಗೆಗೆ ಗೊತ್ತಿಲ್ಲ – ಎಂಬುದು ಚಳವಳಿಯಿಂದ ಸ್ಪಷ್ಟವಾಯಿತು.
ಪಾನ್–ಇಸ್ಲಾಮಿಸಂ ಕಟ್ಟುಕತೆ
ಭಾರತದ ಖಿಲಾಫತ್ ನಾಯಕರು ಟರ್ಕಿಶ್ ಖಲೀಫನ ಗುಂಗಿನಲ್ಲಿದ್ದಾಗಲೇ ಟರ್ಕಿಯಲ್ಲಿ ಜನ ಆತನಿಗೆ ಅತ್ಯಲ್ಪವೂ ಬೆಲೆ ಕೊಡುತ್ತಿರಲಿಲ್ಲ. ಮೆಕ್ಕಾದ ಶರೀಫ್ ಪ್ರವಾದಿಯವರ ವಂಶಸ್ಥ ಎಂದವನೇ ಟರ್ಕಿಯ ಖಲೀಫನ ವಿರುದ್ಧ ಪ್ರತಿಭಟಿಸಿದ. ಒಟ್ಟೊಮನ್ ಸಾಮ್ರಾಜ್ಯದ ಅರಬ್ ಪ್ರಜೆಗಳು ಸ್ವಯಂ ನಿರ್ಧಾರ ಕೈಗೊಳ್ಳುವುದನ್ನು ಬಯಸಿದರು. ಆಫಘಾನಿಸ್ತಾನದ ಅಮೀರನ ಕಡೆ ನೋಡಿದ (ಅಲ್ಲಿಗೆ ವಲಸೆ ಹೋದ) ಭಾರತದ ಮುಹಾಜಿರಿನ್ಗಳಿಗೆ ಆತ ಸರಿಯಾಗಿಯೆ ಕೈಕೊಟ್ಟ.
೧೯೨೪ರಲ್ಲಿ ಸೌದಿ ವಂಶದ ಸ್ಥಾಪಕ ಇಬನ್ಸೌದ್ ಇಸ್ಲಾಮಿನ ಪವಿತ್ರಸ್ಥಳಗಳ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡ; ಮತ್ತು ಮುಸ್ಲಿಮರ ಗೋರಿಗಳ ಮೇಲಿನ ಕಮಾನು ತೆಗೆಯುವಂತೆ ಆದೇಶಿಸಿದ. ಆಗ ಖಿಲಾಫತಿಗಳಲ್ಲಿ ಪರ-ವಿರೋಧ ಗುಂಪುಗಳಾಗಿ ವಿಭಜನೆ ಉಂಟಾಯಿತು. ಒಟ್ಟಿನಲ್ಲಿ ಪಾನ್-ಇಸ್ಲಾಮಿಸಂ ಕಟ್ಟುಕತೆ ಎನಿಸಿತು. ಆದರೂ ಅವರಿಗೆ ಅದನ್ನು ಬಿಡುವುದಕ್ಕೆ ಉಪಾಯವಿಲ್ಲ. ಏಕೆಂದರೆ ಅದಕ್ಕೆ ಧರ್ಮಗ್ರಂಥಗಳ ಆಧಾರವಿತ್ತು. ಧರ್ಮಗ್ರಂಥಗಳ ಆಧಾರವಿರುವ ಕಾರಣ ಮುಂದಿನ ಜನಾಂಗಗಳ ಮುಸ್ಲಿಂ ನಾಯಕರು ಮುಂದೆಯೂ ಆ ಕಟ್ಟುಕತೆಗೆ ಆತುಕೊಂಡರೆ ಆಶ್ಚರ್ಯವಿಲ್ಲ. ಇಲ್ಲಿ ಸೇರಿಸಬಹುದಾದ ಇನ್ನೊಂದು ಅಂಶವೆಂದರೆ, ನಿಜವಿರಲಿ ಅಥವಾ ಕಾಲ್ಪನಿಕವಿರಲಿ, ಒಂದು ದೊಡ್ಡ ಶತ್ರು ಅವರ ಮುಂದಿದ್ದಾಗ ಮುಸ್ಲಿಂ ನಾಯಕರು ಹಾಗೂ ಜನಸಮುದಾಯ ತಮ್ಮ ನಡುವಣ ಪರಸ್ಪರ ದ್ವೇಷವನ್ನು ಬದಿಗಿಟ್ಟು ಒಂದಾಗುತ್ತಾರೆ.
ಊಹೆಗೆ ಸಿಗುವ ಮುಸ್ಲಿಂ ವರ್ತನೆ
ಖಿಲಾಫತ್ ಚಳವಳಿಯಿಂದ ಹೊರಗೆ ಬಂದ ಐದನೆಯ ಹಾಗೂ ಕೊನೆಯ ಪ್ರಮುಖ ಪಾಠವೆಂದರೆ, ಮುಸಲ್ಮಾನರ ವರ್ತನೆಯ ವಿನ್ಯಾಸವು ಊಹೆಗೆ ಸಿಗುವಂಥದು ಎನ್ನುವುದು. ಇಸ್ಲಾಮಿಕ್ ನಂಬಿಕೆ-ವ್ಯವಸ್ಥೆಯು ಅವರ ವರ್ತನೆಯ ವಿನ್ಯಾಸವನ್ನು ನಿರ್ಧರಿಸುತ್ತದೆ. ನಂಬಿಕೆ-ವ್ಯವಸ್ಥೆಯ ಮೂಲವು ಧರ್ಮಗ್ರಂಥದಲ್ಲಿ ಇರುವ ಕಾರಣ ಕಾಲ-ದೇಶಗಳನ್ನು ಮೀರಿ ಅದೊಂದು ರೂಪವನ್ನು ಪಡೆದಿರುತ್ತದೆ. ಆ ಮೂಲಕ ಅವರ ವರ್ತನೆಯು ಸ್ವಂತಿಕೆಗಿಂತ ಹೆಚ್ಚಾಗಿ ಊಹೆಗೆ ಸಿಗುವಂಥದಾಗಿರುತ್ತದೆ. ಉದಾಹರಣೆಗೆ, ಮನವಿ ಸಲ್ಲಿಕೆ, ಮನವೊಲಿಕೆಗಳಿಗಿಂತ ಅಲ್ಲಿ ಬಲಾತ್ಕಾರ ಮತ್ತು ಹಿಂಸಾಚಾರಗಳೇ ಮೇಲುಗೈ ಸಾಧಿಸುತ್ತವೆ. ಅದೇ ರೀತಿ ಜಿಹಾದ್ ವೇಳೆ ನಡೆಯುವ ದೌರ್ಜನ್ಯಗಳಲ್ಲಿ ವ್ಯತ್ಯಾಸ ಇರುವುದಿಲ್ಲ. ಅದನ್ನು ಮುಂದಾಗಿ ಊಹಿಸಿ ತಪ್ಪಿಸಲು ಅಥವಾ ವಿಫಲಗೊಳಿಸಲು ಪ್ರಯತ್ನಿಸಬಹುದು. ಅವರ ನಂಬಿಕೆ-ವ್ಯವಸ್ಥೆಯನ್ನು ತಿಳಿದಿದ್ದರೆ ವರ್ತನೆಯನ್ನು ಊಹಿಸಬಹುದು. ಬದಲಾಗಿ ವರ್ತನೆಯನ್ನು ಮುಂದಾಗಿ ಊಹಿಸದಿದ್ದಲ್ಲಿ ಹೆಚ್ಚಿನ ಅನಾಹುತಗಳೇ ಆಗಬಹುದು.
ಖಿಲಾಫತ್ ಚಳವಳಿಯ ವೇಳೆ ಹಿಂದೂ ನಾಯಕರು ಇಸ್ಲಾಮಿಕ್ ನಂಬಿಕೆ-ವ್ಯವಸ್ಥೆಯನ್ನು ಅರ್ಥೈಸಿಕೊಳ್ಳುವುದಕ್ಕಾಗಲಿ ಅಥವಾ ತಮ್ಮ ಹಿಂದೂ ಹಿಂಬಾಲಕರಿಗೆ ಆ ಬಗ್ಗೆ ತಿಳಿವಳಿಕೆ ನೀಡುವುದಕ್ಕಾಗಲಿ ಯಾವುದೇ ಪ್ರಯತ್ನ ಮಾಡಿದಂತೆ ಕಾಣಲಿಲ್ಲ; ಇದು ಕೇರಳದ ಮೋಪ್ಲಾ ಹತ್ಯಾಕಾಂಡಕ್ಕೂ ಅನ್ವಯಿಸುತ್ತದೆ. ಅನಂತರವೂ ಇದರಲ್ಲಿ ಬದಲಾವಣೆಯೇನೂ ಆದಂತಿಲ್ಲ.
ಮೋಪ್ಲಾಗಳ ಸ್ವಾತಂತ್ರ್ಯ ಹೋರಾಟ!
ಇತಿಹಾಸದ ಒಂದು ಕ್ರೂರ ವ್ಯಂಗ್ಯ ಎಂಬಂತೆ ಈಚಿನ ವರ್ಷಗಳಲ್ಲಿ ಮೋಪ್ಲಾ ಕಾಂಡವನ್ನು ಸ್ವಾತಂತ್ರ್ಯ ಹೋರಾಟವೆಂದು ಸಮೀಕರಿಸುವ ಪ್ರಯತ್ನಗಳು ನಡೆದಿವೆ. ಈ ಹೇಯ ಪ್ರಯತ್ನ ನಡೆದದ್ದು ಮೋಪ್ಲಾ ದಂಗೆ ನಡೆದ ೫೦ನೆ ವರ್ಷದ ಸಂದರ್ಭದಲ್ಲಿ (೧೯೭೧). ಅದರ ಭಾಗವಾಗಿ ಮೋಪ್ಲಾಗಳಿಂದ ಹಿಂಸೆ, ದೌರ್ಜನ್ಯ, ಅವಮಾನ, ಕೊಲೆ, ಸುಲಿಗೆಗಳಿಗೆ ಗುರಿಯಾದ ಸಂತ್ರಸ್ತರನ್ನು ಅಲಕ್ಷಿಸಲಾಯಿತು. ೭೫ನೇ ವರ್ಷದ ಸ್ಮರಣೆಯ ಸಂದರ್ಭದಲ್ಲಿ ೧೯೯೭ರ ಹೊತ್ತಿಗೂ ಅದನ್ನು ಸ್ವಾತಂತ್ರ್ಯ ಹೋರಾಟವೆಂದು ಚಿತ್ರಿಸುವ ಪ್ರಯತ್ನ ನಡೆಯಿತು; ಅದಕ್ಕೆ ವ್ಯಾಪಕ ಪ್ರತಿಭಟನೆಗಳೂ ಬಂದವು. ಆಶ್ಚರ್ಯದ ಸಂಗತಿಯೆಂದರೆ, ಅಂದಿನ ಪೊಲೀಸ್ ವರದಿಗಳಿರಲಿ ಅಥವಾ ಆ ಬಗೆಗಿನ ಯಾವುದೇ ಮೌಲಿಕ ಗ್ರಂಥಗಳಿರಲಿ ಎಲ್ಲವೂ ನಾಶಗೊಳಿಸಲ್ಪಟ್ಟು ಕೇರಳದ ಗ್ರಂಥಾಲಯಗಳಲ್ಲೆಲ್ಲೂ ಸಿಗುವುದಿಲ್ಲ ಎನ್ನಲಾಗಿದೆ.
ಮೋಪ್ಲಾ ಹಿಂಸಾಚಾರವು ಅಷ್ಟೊಂದು ಭೀಕರವಾಗಿದ್ದರೂ ಕೂಡ ಅದನ್ನು ಮರೆಸುವ ಪ್ರಯತ್ನ ನಡೆದಿದೆ. ಗಾಂಧಿಯವರ ಸಮರ್ಥನೆಯ ಚುಂಗು ಹಿಡಿದ ಕಾಂಗ್ರೆಸಿಗರು ಅಂಥದೇನೂ ನಡೆದಿಲ್ಲ ಎನ್ನಲು ಪ್ರಯತ್ನಿಸಿದರಾದರೂ ಅದು ಕೈಗೂಡಲಿಲ್ಲ. ಮುಂದೆ ವೋಟ್ಬ್ಯಾಂಕ್ ರಾಜಕೀಯದಿಂದ ಪ್ರೇರಿತರಾದ ಕಮ್ಯೂನಿಸ್ಟರು ಅದು ರೈತಹೋರಾಟ ಎಂದರು; ಮೋಪ್ಲಾ ನಾಯಕರಿಗೆ ಸ್ವಾತಂತ್ರ್ಯಯೋಧರ ಪಿಂಚಣಿ ದೊರಕಿಸಿಕೊಟ್ಟರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಡಾ|| ಹೆಡಗೆವಾರರು ಗಾಂಧಿಯವರು ಮತ್ತು ಕಾಂಗ್ರೆಸ್ ಕೈಗೊಂಡ ಖಿಲಾಫತ್ ಆಂದೋಲನವು ವಿಷಮಯ ಮತೀಯ ಆಂದೋಲನವಾಗಲಿದೆ; ಇದು ಇಡೀ ದೇಶಕ್ಕೇ ಭಾರೀ ತಲೆನೋವು ತರುವುದು ಎಂದು ಆಗಲೇ ಎಚ್ಚರಿಸಿದ್ದರು. ಮೋಪ್ಲಾಗಳ ಅಸಮಾಧಾನವಿದ್ದುದು ಬ್ರಿಟಿಷರ ಬಗ್ಗೆ; ಆದರೆ ಅವರು ಎರಗಿದ್ದು ಹಿಂದುಗಳ ಮೇಲೆ! ಎದುರಿಗೆ ಸಿಕ್ಕವರ ಮೇಲೆ ಎರಗಬೇಕೆಂಬುದು ಜೆಹಾದಿ ಮಾನಸಿಕತೆಯ ಒಂದು ಲಕ್ಷಣವಾಗಿದೆ; ಆಗ ಮೋಪ್ಲಾ ದಂಗೆಯೊಂದಿಗೆ ಇಸ್ಲಾಮೀ ರಾಜ್ಯ ಸ್ಥಾಪನೆಯನ್ನೇ ಗುರಿಯಾಗಿ ಇರಿಸಿಕೊಂಡು ಹಿಂಸಾಚಾರಕ್ಕೆ ಇಳಿಯಲಾಯಿತು. ಅದೇ ಹೊತ್ತಿಗೆ ಅಹಮದಾಬಾದಿನಲ್ಲಿ ನಡೆದ ಮುಸ್ಲಿಂ ಲೀಗ್ ಅಧಿವೇಶನದ ಅಧ್ಯಕ್ಷಭಾಷಣದಲ್ಲಿ ಹಜರತ್ ಮೊಹಾನಿ ಮೋಪ್ಲಾ ಹಿಂಸಾಕಾಂಡವನ್ನು ಪೂರ್ತಿಯಾಗಿ ಸಮರ್ಥಿಸಿದ್ದಲ್ಲದೆ ಹಿಂದುಗಳು ಜೆಹಾದನ್ನು ಸ್ವೀಕರಿಸಿಲ್ಲ ಎಂದ ಮೇಲೆ ಅವರು ನಮ್ಮ ಶತ್ರುಗಳೇ ಸರಿ. ಯುದ್ಧದ ಹೊತ್ತಿಗೆ ಅತ್ಯಾಚಾರಗಳು ದೋಷವೆನಿಸುವುದಿಲ್ಲ ಎಂದು ಮೋಪ್ಲಾಗಳನ್ನು ಶ್ಲಾಘಿಸಿದ್ದಾಗಿ ವರದಿಯಾಗಿದೆ; ಆ ಭಾಷಣದ ವೇಳೆ ಗಾಂಧಿಯವರೂ ಅಲ್ಲಿದ್ದರಂತೆ! ಆದರೆ ಆಗ ಜಿನ್ನಾ ಮಾತ್ರ ಖಿಲಾಫತ್ ವಿರೋಧಿಯಾಗಿದ್ದರು.
ಪಿಎಫ್ಐ ಹೇಯ ರ್ಯಾಲಿ
ಈಚೆಗೆ ಮೋಪ್ಲಾ ಕಾಂಡವು ಶತಮಾನವನ್ನು ಪೂರೈಸುವ ಹೊತ್ತಿಗೂ ಕೇರಳದಲ್ಲಿ ಈ ಭೀಕರತೆಯ ಪುನರುಜ್ಜೀವನವು ನಡೆದಿದೆ. ಜಾಗತಿಕ ಭಯೋತ್ಪಾದಕತೆಯು ಹೆಚ್ಚುತ್ತಿರುವ ಈ ಸಂದರ್ಭವನ್ನು ತನ್ನ ಕೃತ್ಯಗಳಿಂದ ಕುಖ್ಯಾತಿ ಗಳಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ತನ್ನದೇ ರೀತಿಯಲ್ಲಿ ಬಳಸಿಕೊಳ್ಳಲು ನಿರ್ಧರಿಸಿದೆ. ಹಿಂದುಗಳ ಮನಸ್ಸಿನಲ್ಲಿ ಭಯ ಹುಟ್ಟಿಸಲೆಂಬಂತೆ ಪಿಎಫ್ಐ ಕಾರ್ಯಕರ್ತರು ಮೋಪ್ಲಾ ಬಂಡುಕೋರರ ಅಂದಿನ ಸಮವಸ್ತ್ರ ಧರಿಸಿ ರ್ಯಾಲಿ ನಡೆಸಿದರು; ಮಲಪ್ಪುರಂ ಜಿಲ್ಲೆಯ ತೆನ್ಹಿಪಾಲಂನಲ್ಲಿ ನಡೆದ ಆ ರ್ಯಾಲಿಯಲ್ಲಿ ಅಲ್ಲಾ ಹೋ ಅಕ್ಬರ್, ಲಾ ಇಲಾಹ ಇಲ್ಲಲ್ಲಾಹ ಘೋಷಣೆಗಳನ್ನು ಕೂಗಿದರು. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಆರೆಸ್ಸೆಸ್ ಸಮವಸ್ತ್ರಧಾರಿಗಳಾದ ಕೆಲವರನ್ನು ಸರಪಳಿ ತೊಡಿಸಿ ಇಡೀ ಮೆರವಣಿಗೆಯಲ್ಲಿ ಒಯ್ಯಲಾಯಿತು. ಆರೆಸ್ಸೆಸ್ ಕಾರ್ಯಕರ್ತರಿಗೆ ಸರಪಳಿ ಹಾಕಿ ಎಂದು ಘೋಷಣೆ ಕೂಗುತ್ತಿದ್ದರು.
ಈ ರ್ಯಾಲಿಯಲ್ಲಿ ಬ್ರಿಟಿಷ್ ಅಧಿಕಾರಿಗಳ ವೇಷ ತೊಟ್ಟವರನ್ನು ಕೂಡ ಸರಪಳಿ ತೊಡಿಸಿ ಒಯ್ಯಲಾಯಿತು. ಆರೆಸ್ಸೆಸ್ ಮತ್ತು ಬ್ರಿಟಿಷ್ ಅಧಿಕಾರಿಗಳ ವೇಷ ಧರಿಸಿದವರಿಗೆ ಕಟ್ಟಿದ ಹಗ್ಗವನ್ನು ಸ್ಕಲ್ ಕ್ಯಾಪ್ ಮತ್ತು ಲುಂಗಿ ತೊಟ್ಟವರು ಹಿಡಿದಿದ್ದರು. ಇಂತಹ ಒಂದು ಹೇಯ ರ್ಯಾಲಿಯನ್ನು ನಡೆಸುವುದು ಈಗಲೂ ಅವರಿಗೆ ಸಾಧ್ಯ ಎಂಬುದು ಇದರಿಂದ ಸಾಬೀತಾಯಿತು. ಆರೆಸ್ಸೆಸ್ ಮತ್ತು ಭಾರತೀಯ ಜನತಾ ಪಕ್ಷ ಅಂತಹ ರ್ಯಾಲಿ ನಡೆದ ಬಗ್ಗೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿ, ಸಂಬಂಧಪಟ್ಟವರನ್ನು ಶಿಕ್ಷಿಸಬೇಕೆಂದು ಆಗ್ರಹಿಸಿದವು; ಆದರೆ ಅಧಿಕಾರಸ್ಥ ಎಡರಂಗ (ಎಲ್ಡಿಎಫ್) ಸರ್ಕಾರ ಯಾವುದೇ ಕ್ರಮ ಜರುಗಿಸಲಿಲ್ಲ. ವಿಷಯ ಅಲ್ಲಿಗೆ ಮುಗಿದಂತೆ ತೋರುತ್ತದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದಲ್ಲಿ ವಿವಿಧ ಅಪರಾಧವೆಸಗಿದ ಪಿಎಫ್ಐಯ ಕಾರ್ಯಕರ್ತರ ಮೇಲಿದ್ದ ನೂರಾರು ಕೇಸುಗಳನ್ನು ಒಮ್ಮೆಗೇ ಹಿಂತೆಗೆದುಕೊಂಡಿದ್ದರು. ಅದು ಅಂತಹ ಕೃತ್ಯಗಳನ್ನು ಎಸಗುವುದಕ್ಕೆ ಪರವಾನಿಗೆಯೋ ಎಂಬಂತೆ ಆಗ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಹಲವರ ಹತ್ಯೆಗಳು ನಡೆದವು. ಇಷ್ಟಾದರೂ ದೇಶಾದ್ಯಂತ ಪಿಎಫ್ಐ, ಅದರ ರಾಜಕೀಯ ಪಕ್ಷ ಎಸ್ಡಿಪಿಐ, ವಿದ್ಯಾರ್ಥಿ ಸಂಘಟನೆ ಸಿಎಫ್ಐ ಮುಂತಾದವು ಪಸರಿಸಿ ಬಗೆಬಗೆಯ ಕೃತ್ಯಗಳನ್ನು ಎಸಗುತ್ತಲೇ ಇವೆ; ಪಿಎಫ್ಐಯನ್ನು ನಿಷೇಧಿಸಬೇಕೆನ್ನುವ ಕೂಗು ಆಗೀಗ ಸದ್ದು ಮಾಡಿ ತಣ್ಣಗಾಗುತ್ತಿದೆ.
ಕಳೆದ ಫೆಬ್ರುವರಿ ೧೭ರಂದು ಮಂಗಳೂರು ಸಮೀಪದ ಉಳ್ಳಾಲದಲ್ಲಿ ಪಿಎಫ್ಐ ಇನ್ನೊಂದು ರ್ಯಾಲಿ ನಡೆಸಿತು. ಮೆರವಣಿಗೆ ನಡೆಸುವುದಕ್ಕೆ ಅನುಮತಿ ಪಡೆದಿಲ್ಲ ಎಂಬುದು ಸೇರಿದಂತೆ ಪೊಲೀಸರು ೧೪ ಜನರ ವಿರುದ್ಧ ಪ್ರಕರಣ ದಾಖಲಿಸಿದರು. ಮೆರವಣಿಗೆಯಲ್ಲಿ ೫,೦೦೦ಕ್ಕೂ ಅಧಿಕ ಸಮವಸ್ತ್ರಧಾರಿ ಮುಸ್ಲಿಮರು ಭಾಗವಹಿಸಿದ್ದು, ಹಿಂದೂ-ವಿರೋಧಿ ಮತ್ತು ಆರೆಸ್ಸೆಸ್ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು. ಅದರ ಹೆಸರು ಯೂನಿಟಿ ಮಾರ್ಚ್ ಎಂದಿದ್ದು, ಒಂದು ಹೊಸ ಸಶಸ್ತ್ರ ಪಡೆ ಬಂದಿದೆ ಎಂಬುದನ್ನು ಅದು ಹೇಳುವಂತಿತ್ತು.
ಹೀರೋ ಆದ ಅಪರಾಧಿ
ಮೋಪ್ಲಾ ಕಾಂಡದ ಶತಮಾನ ವರ್ಷದಲ್ಲೊಂದು ಮಲೆಯಾಳಿ ಸಿನೆಮಾ ಬಂದಿದೆ. ಅದರ ಪ್ರಮುಖ ಪಾತ್ರಧಾರಿ ಮೋಪ್ಲಾ ದಂಗೆಯ ಓರ್ವ ಪ್ರಮುಖ ಆರೋಪಿ ವರಿಯಂಕುನ್ನತ್ ಕುಂಞಹಮದ್ ಹಾಜಿ; ಆತನೇ ಹೀರೋ ಆಗಿರುವ ಈ ಬಯೋಪಿಕ್ನ ನಿರ್ದೇಶಕ ಆಶಿಕ್ ಬಾಬು; ನಾಯಕ ಪಾತ್ರಧಾರಿ ಪೃಥ್ವಿರಾಜ್. ನಿರೀಕ್ಷೆಯಂತೆ ಹಾಜಿಯನ್ನು ಚಿತ್ರ ಧನಾತ್ಮಕವಾಗಿ ತೋರಿಸಲು ಹೊರಟಿದೆ; ಆದರೆ ಅದನ್ನು ಸ್ವೀಕರಿಸುವವರು ಯಾರೆಂಬುದು ಗೊತ್ತಿಲ್ಲ.
ಆರೆಸ್ಸೆಸ್ ಪ್ರಚಾರಕ್ ಹಾಗೂ ಸಂಘದ ಪ್ರಜ್ಞಾಪ್ರವಾಹದ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ್ ಅವರು ಈ ವಿದ್ಯಮಾನವನ್ನು ತರಾಟೆಗೆ ತೆಗೆದುಕೊಂಡು ಖಂಡಿಸಿದ್ದಾರೆ. ಮೋಪ್ಲಾ ಕಾಂಡವೆಂದರೆ ಹಿಂದೂ ನರಮೇಧವಲ್ಲದೆ ಬೇರೇನೂ ಅಲ್ಲ ಎಂದ ಅವರು, ಆತನ ಕುಟುಂಬವೇ ಹಾಗೆ. ಕೋಮುಗಲಭೆ ನಡೆಸಿದ್ದಕ್ಕಾಗಿ ಅವನನ್ನು ಮೆಕ್ಕಾಗೆ ಗಡೀಪಾರು ಮಾಡಿದರು. ಹಾಜಿ ನರಮೇಧದ ನೇತೃತ್ವ ವಹಿಸಿದ್ದ ಎಂದು ವಿವರಿಸಿದ್ದಾರೆ. ಸಿನೆಮಾದಲ್ಲಿ ಅವನನ್ನು ಕೋಮುಸೌಹಾರ್ದದ ನೇತಾರನಂತೆ ಮತ್ತು ಹಿಂದುಗಳನ್ನು ಬ್ರಿಟಿಷರ ಪರವಾಗಿದ್ದ ಖಳರಂತೆ ಚಿತ್ರಿಸಲಾಗಿದೆ. ಆತನ ಶೌರ್ಯದ ಕೆಲಸಗಳಿಂದಾಗಿ ಬ್ರಿಟಿಷರ ಜೊತೆ ಅವನಿಗೆ ಕಾದಾಟ ಉಂಟಾಯಿತು; ಆತ ಕೆಲವು ತಿಂಗಳುಗಳ ಕಾಲ ಮಲೆಯಾಳ ನಾಡು ಸ್ಥಾಪಿಸಿದನೆಂದು ಕೂಡ ಈ ಸಿನೆಮಾ ಹೇಳುತ್ತದೆ. ನಿಜವೆಂದರೆ ಆತ ಸ್ಥಾಪಿಸಿದ್ದು ಅಲ್ ದೌಲಾ (ಇಸ್ಲಾಮಿಕ್ ರಾಜ್ಯ). ಅಲ್ಲಿ ಹಿಂದುಗಳ ಮೇಲೆ ಜಿಜಿಯಾ (ತಲೆಗಂದಾಯ) ಹೇರಲಾಗಿತ್ತು.
ಮೋಪ್ಲಾ ರೆಬೆಲಿಯನ್-೧೯೨೧ ಎನ್ನುವ ಒಂದು ಪುಸ್ತಕದ ಪ್ರಕಾರ ಕುಂಞಹಮದ್ ಹಾಜಿ ಒಬ್ಬ ಕಾನೂನುಬಾಹಿರ ವ್ಯಕ್ತಿ (outlaw). ಮೋಪ್ಲಾ ಕಾಂಡದಲ್ಲಿ ಆತನದು ಪ್ರಮುಖ ಪಾತ್ರವೆಂದು ಲೇಖಕ ಸಿ. ಗೋಪಾಲನ್ ನಾಯರ್ ತಮ್ಮ ಆ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ವರಿಯಂ ಕುನ್ನತ್ ಕುಂಞ ಅಹಮದ್ ಹಾಜಿ ಸಣ್ಣ ಪ್ರಾಯದಲ್ಲೇ ತನ್ನ ಸುತ್ತಮುತ್ತ ಕಾನೂನು-ಸುವ್ಯವಸ್ಥೆಯ ಸಮಸ್ಯೆ ಉಂಟುಮಾಡುವ ಮೂಲಕ ನೊಟೋರಿಯಸ್ ಎನಿಸಿದ್ದ. ಹಿಂದುಗಳು ಮತ್ತವರ ದೇವಾಲಯಗಳ ಮೇಲೆ ಹಲವು ದಾಳಿಗಳನ್ನು ನಡೆಸಿದ ಕಾರಣ ಸರ್ಕಾರ ಅವನನ್ನು ಮೆಕ್ಕಾಗೆ ಗಡೀಪಾರು ಮಾಡಿತು. ಜನರ ಸುಲಿಗೆ ಮಾಡುತ್ತಿದ್ದ ಆತ ಅರಬರ ಉಪಪತ್ನಿಯರಾಗಲು ಹೆಂಗಸರನ್ನು ಅಲ್ಲಿಗೆ ಕಳುಹಿಸುತ್ತಿದ್ದ. ಗಡೀಪಾರಾಗಿ ಹಲವು ಕಾಲ ಅಲ್ಲಿದ್ದ ಬಳಿಕ ಹುಟ್ಟೂರಿಗೆ ಹೋಗಬಾರದೆಂಬ ಶರತ್ತಿನ ಮೇರೆಗೆ ಅವನನ್ನು ದೇಶಕ್ಕೆ ಮರಳಲು ಅನುಮತಿ ನೀಡಲಾಯಿತು.
ಖಿಲಾಫತ್ ಚಳವಳಿಗೆ ಮುಸ್ಲಿಮರನ್ನು ಆಕರ್ಷಿಸಲು ಕಾಂಗ್ರೆಸ್ ನಾಯಕರು ಅವನ ನೆರವು ಕೇಳಿದರು. ಮೊದಲಿಗೆ ಅವನಿಗೆ ಚಳವಳಿಗೆ ಸೇರಲು ಮನಸ್ಸಿರಲಿಲ್ಲವಂತೆ; ಕಾಂಗ್ರೆಸ್ ಹಿಂದುಗಳದ್ದು ಎಂದಾತ ಹೇಳುತ್ತಿದ್ದನಂತೆ. ಕಾಂಗ್ರೆಸ್ ನಾಯಕರು ಅವನನ್ನು ಒತ್ತಾಯ ಮಾಡಿ ಚಳವಳಿಗೆ ಸೇರಿಸಿಕೊಂಡರು; ಏಕೆಂದರೆ ಮುಸ್ಲಿಂ ಯುವಕರ ಮಧ್ಯೆ ಆತ ಜನಪ್ರಿಯನಾಗಿದ್ದ.
ಗಲಭೆಯ ಆರಂಭದಲ್ಲಿ ಕುಂಞ ಅಹಮದ್ ಹಾಜಿ ಹಿಂದುಗಳ ಮೇಲೆ ದಾಳಿ ನಡೆಸಲಿಲ್ಲವಾದರೂ ಇಸ್ಲಾಮೀಕರಣವು ವೇಗ ಪಡೆದಂತೆ ಅವನ ನಿಜ ಬಣ್ಣ ಪ್ರಕಟವಾಯಿತು. ಕೊಲೆ, ಬಲಾತ್ಕಾರದ ಮತಾಂತರಗಳನ್ನು ನಡೆಸಿದ. ಕೆಲವು ಇತಿಹಾಸಕಾರರು ಮತ್ತು ಇಸ್ಲಾಮಿಸ್ಟ್ಗಳು ಹಿಂದೂವಿರೋಧಿ ಗಲಭೆಯಲ್ಲಿ ಆತನ ಪಾತ್ರ ಇರುವುದಕ್ಕೆ ಸಾಕ್ಷ್ಯ ಇಲ್ಲವೆಂದು ವಾದಿಸುತ್ತಾರೆ. ಆದರೆ ಸಂತ್ರಸ್ತರು ಮತ್ತು ಸಾಕ್ಷಿಗಳು ನಿಜವನ್ನು ದಾಖಲಿಸಿದ್ದಾರೆ. ದಿ ಇಂಗ್ಲಿಷ್ಮನ್ ಪತ್ರಿಕೆ ಅಕ್ಟೋಬರ್ ೬, ೧೯೨೧ರಂದು ಆ ಬಗ್ಗೆ ನಿಖರವಾದ ವರದಿಯನ್ನೇ ನೀಡಿದೆ. ಈಚಿನ ಹಲವು ವರದಿಗಳು ಹಾಜಿ ಮತ್ತು ಚೆಂಬಕಕ್ಕೇರಿತಂಗಳ್ ಒಟ್ಟಾಗಿ ಹಳ್ಳಿಗಳಲ್ಲಿ ವಾಸಿಸುವ ಎಲ್ಲ ಹಿಂದುಗಳು ತಮ್ಮ, ಅಂದರೆ ಬಂಡುಕೋರರ ಕರುಣೆಗೆ ಪಾತ್ರರಾಗಿ ಇರಬೇಕು; ಇಸ್ಲಾಮಿಗೆ ಮತಾಂತರಗೊಳ್ಳದಿದ್ದರೆ ಅವರನ್ನು ಕೊಲ್ಲಬೇಕು – ಎಂದು ನಿರ್ಧರಿಸಿದರೆಂದು ಪತ್ರಿಕೆ ತಿಳಿಸಿದೆ. ಹತ್ಯೆಗೆ ಗುರಿಯಾಗುವ ಮುನ್ನ ಹಿಂದುಗಳು ತಮ್ಮ ಗೋರಿಯನ್ನು ತಾವೇ ತೋಡಬೇಕಿತ್ತು ಎನ್ನುವ ಆತನ ದೌರ್ಜನ್ಯದ ವಿವರ ಸಿಗುತ್ತದೆ. ಆತನ ಕ್ರೌರ್ಯಕ್ಕೆ ಮಿತಿ ಇರಲಿಲ್ಲ.
ಸಿ. ಗೋಪಾಲನ್ ನಾಯರ್ ಹೀಗೆ ಹೇಳುತ್ತಾರೆ: ಗಲಭೆ ಸ್ಫೋಟಗೊಂಡಾಗ ಕುಂಞ ಅಹಮದ್ ರಾಜನಾದ. ನಿವೃತ್ತ ಮೋಪ್ಲಾ ಪೊಲೀಸ್ ಅಧಿಕಾರಿ ಖಾನ್ ಬಹಾದುರ್ ಚೆಕ್ಕುಟ್ಟಿ ಅವರನ್ನು ಕೊಲ್ಲುವ ಮೂಲಕ ತನ್ನ ಅಧಿಕಾರ ಸ್ವೀಕಾರವನ್ನು ಆಚರಿಸಿಕೊಂಡ (ಸೆಲೆಬ್ರೇಟ್ ಮಾಡಿದ). ಪತ್ನಿಯ ಎದುರೇ ಅವರ ಹತ್ಯೆ ನಡೆಸಿದ.
ಹಾಜಿ ನೇತೃತ್ವದಲ್ಲಿ ಮೋಪ್ಲಾಗಳು ಮುಗ್ಧ ಹಿಂದುಗಳ ಮೇಲೆ ಹೇಳಲಾಗದ ದೌರ್ಜನ್ಯ ನಡೆಸಿದರು. ಮೋಪ್ಲಾ ಗಲಭೆ ಸಂಬಂಧಿ ಕೇಸುಗಳ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಹೀಗೆ ಬರೆದಿದ್ದಾರೆ: ಮೋಪ್ಲಾಗಳು ತಮಗೆ ಹಿಡಿಯಲು ಸಾಧ್ಯವಾದ ಆ ಪ್ರದೇಶದ ಎಲ್ಲ (ಹಿಂದೂ) ಗಂಡಸರನ್ನು ಕೊಂದರು. ಉಳಿದವರೆಂದರೆ ಆಗ ಸ್ಥಳದಲ್ಲಿ ಇಲ್ಲದವರು ಅಥವಾ (ಹೊಡೆದಾಗ) ಸತ್ತರೆಂದು ಬಿಟ್ಟುಹೋದವರು. ಒಂದು ಪ್ರಕರಣದಲ್ಲಿ ಓರ್ವ ಯುವಕ ಹಾಗೂ ಯುವತಿಯನ್ನು ಸೆರೆಹಿಡಿದು ಯುವಕನನ್ನು ಕೊಂದರು; ಯುವತಿಯನ್ನು ಆರು ವಾರಗಳ ಬಳಿಕ ಅವರ ಕೈಯಿಂದ ಬಿಡುಗಡೆಗೊಳಿಸಲಾಯಿತು. ಆಗ ಆಕೆ ಅವರ ಬಳಿ ಹೇಳಲಾಗದ ಅವಮಾನಗಳನ್ನು ಅನುಭವಿಸಿದ್ದಳು.
ಮರಣದಂಡನೆ
ಇಸ್ಲಾಮಿನ ಪ್ರಚಾರ, ಮತಾಂತರ ಮಾಡುತ್ತಿದ್ದವರಿಗೆ ಮೋಪ್ಲಾ ದಂಗೆ ಸುವರ್ಣಾವಕಾಶವನ್ನೇ ನೀಡಿತು. ಪೂರ್ವ ಎರ್ನಾಡ್ನ ತಿರುರಂಗಾಡಿ ಮುಂತಾದ ಕಡೆ ಅಲೀ ಮುಸಲಿಯಾರ್ ಇಸ್ಲಾಂನ ಪ್ರಚಾರ ಮಾಡುತ್ತಿದ್ದ. ಖಿಲಾಫತ್ ಚಳವಳಿ ಆರಂಭವಾಗುತ್ತಲೇ ಮೌಲ್ವಿಗಳೆಲ್ಲ ಖಿಲಾಫತಿಗಳಾದರು. ಅಲೀ ಮುಸಲಿಯಾರ್ ತಾನೇ ರಾಜನೆಂದು ಘೋಷಿಸಿಕೊಂಡ. ಆತ ಅಂಬಿಗರಿಂದ ಹಲವು ವರ್ಷ ಕಪ್ಪ ವಸೂಲು ಮಾಡುತ್ತಿದ್ದ. ಕೊಲೆ ಮತ್ತಿತರ ಆಪಾದನೆಗಳಿಗೆ ಗುರಿಯಾದ ಮುಸಲಿಯಾರ್ ಹಾಗೂ ಆತನ ೧೩ ಜನ ಒಡನಾಡಿಗಳಿಗೆ ಮರಣದಂಡನೆ ವಿಧಿಸಲಾಯಿತು.
ವಿ.ಕೆ. ಹಾಜಿ ನೀಲಂಬೂರು ಎಂಬಾತ ತನ್ನ ಆಸುಪಾಸಿನಲ್ಲಿ ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದ. ತಾನು ನಡೆಸುವ ಕೊಲೆ, ಲೂಟಿ, ಮಾನಭಂಗಗಳ ಸುದ್ದಿ ಊರಿನ(ಮಂಜೇರಿ) ಆಚೆಗೆ ಹೋಗದಂತೆ ವ್ಯವಸ್ಥೆ ಮಾಡಿಕೊಂಡಿದ್ದ. ವಿಶೇಷ ಪೊಲೀಸ್ ದಳ ಅವನನ್ನು ಬಂಧಿಸಿ, ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತು. ಮಾರ್ಷಲ್ ಲಾ ಕೋರ್ಟ್ ಇಬ್ಬರು ಸಹವರ್ತಿಗಳ ಸಹಿತ ಅವನಿಗೆ ಮರಣದಂಡನೆ ವಿಧಿಸಿತು.
ಮೋಪ್ಲಾಗಳ ಬರ್ಬರತೆಯ ಕಥನ ಈಗಲೂ ಮಲಬಾರ್ನ ಜನಮಾನಸದಲ್ಲಿ ಉಳಿದಿದೆ. ಕಲ್ಲಿಕೋಟೆ ಸಮೀಪದ ಮುದುವಣೆಯಿಲ್ಲಂ ಎಂಬಲ್ಲಿ ಮೋಪ್ಲಾ ಬಂಡುಕೋರ ನಾಯಕ ಅಬೂಬಕರ್ ದೇವಾಲಯದ ಗರ್ಭಗುಡಿಯಲ್ಲಿ ಕುಳಿತು ದರ್ಬಾರು ನಡೆಸುತ್ತಿದ್ದ. ಜನರನ್ನು ಬಂಧಿಸಿ ಅವನ ಮುಂದೆ ತಂದಾಗ ಇಸ್ಲಾಮಿಗೆ ಮತಾಂತರವಾಗಲು ಒಪ್ಪುತ್ತೀರಾ, ಇಲ್ಲವಾ? ಎಂದು ಕೇಳುತ್ತಿದ್ದ. ಇಲ್ಲ ಎಂದವರ ತಲೆ ಕಡಿದು ಸಮೀಪದ ಬಾವಿಗೆ ಹಾಕಿಸುತ್ತಿದ್ದ. ಮಲಪ್ಪುರಂ ಜಿಲ್ಲೆಯಲ್ಲಿ (ಹಿಂಸಾಚಾರದ ನಿಯಂತ್ರಣಕ್ಕೆ ಬಂದ) ಸೈನಿಕರಿಗೆ ಹಾಲು-ಹಣ್ಣು ನೀಡಿದ್ದಕ್ಕಾಗಿ ಮೋಪ್ಲಾಗಳು ೨೭ ಜನರ ತಲೆ ಕಡಿದು ಬಾವಿಗೆ ಎಸೆದರೆಂದು ದಾಖಲಾಗಿದೆ.
ಪಿಂಚಣಿಯ ಗೌರವ
ಈ ಬಗೆಯ ದೌರ್ಜನ್ಯ, ಹಿಂಸಾಚಾರ ನಡೆಸಿದ ಅಮಾನುಷ ವ್ಯಕ್ತಿಗಳನ್ನು ಸ್ವಾತಂತ್ರ್ಯ ಯೋಧರೆಂದು ಪರಿಗಣಿಸಿ ಸರ್ಕಾರದ ಕಡೆಯಿಂದ ಮಾನ್ಯತೆ, ನಿವೃತ್ತಿ ವೇತನಗಳನ್ನು ನೀಡಿದ್ದಕ್ಕೆ ಏನೆನ್ನಬೇಕು? ಆದರೆ ಕೇರಳದಲ್ಲಿ ಅದು ನಡೆದಿದೆ. ಇತಿಹಾಸ ಸಂಶೋಧನೆಯ ಭಾರತೀಯ ಮಂಡಳಿ (ಐಸಿಎಚ್ಆರ್) ಸದಸ್ಯ ಸಿ.ಐ. ಇಸಾಕ್ ಅವರು ಮೋಪ್ಲಾ ಬಂಡುಕೋರ ನಾಯಕರನ್ನು ಸ್ವಾತಂತ್ರ್ಯ ಹೋರಾಟದ ಹುತಾತ್ಮರ ಪಟ್ಟಿಯಿಂದ ತೆಗೆಯಬೇಕೆಂದು ಒತ್ತಾಯಿಸಿದಾಗ ಹಲವರ ಹುಬ್ಬುಗಳು ಮೇಲೇರಿದವು. ೨೦೧೬ರಲ್ಲಿ ಸಲ್ಲಿಸಿದ ವರದಿಯಲ್ಲಿ ಅವರು ಮೋಪ್ಲಾ ಕೈದಿಗಳನ್ನು ಸಾಗಿಸುವಾಗ ನಡೆದ ವ್ಯಾಗನ್ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಕೂಡ ಆ ಪಟ್ಟಿಯಿಂದ ಕೈಬಿಡಬೇಕೆಂದು ಆಗ್ರಹಿಸಿದರು.
ಇನ್ನೊಂದು ಕುತೂಹಲಕರ ಘಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ೨೦೧೯ರಲ್ಲಿ ಹುತಾತ್ಮರ ಕೋಶ (ಡಿಕ್ಷನರಿ ಆಫ್ ಮಾರ್ಟಿಯರ್ಸ್), ಭಾರತದ ಸ್ವಾತಂತ್ರ್ಯ ಹೋರಾಟ, ೧೮೫೭-೧೯೪೭ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದರು. ಅದರಲ್ಲಿ ಕೂಡ ಮೋಪ್ಲಾ ಬಂಡುಕೋರ ನಾಯಕರನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಹುತಾತ್ಮ ಸ್ವಾತಂತ್ರ್ಯ ಯೋಧರ ಬಗೆಗಿನ ಐದನೇ ಸಂಪುಟ ಸಿದ್ಧಗೊಳ್ಳುವಾಗ ಇಸಾಕ್ ತನ್ನ ವರದಿಯನ್ನು ಸಲ್ಲಿಸಿದ್ದರು. ಅದರಲ್ಲಿ ಕುಂಞ ಅಹಮದ್ ಹಾಜಿಯನ್ನು ಕುಖ್ಯಾತ ಮೋಪ್ಲಾ ದಂಗೆಯ ನಾಯಕ; ಕಟ್ಟಾ ಕ್ರಿಮಿನಲ್. ಅಸಂಖ್ಯ ನಿರಪರಾಧಿ ಹಿಂದೂ ಸ್ತ್ರೀ-ಪುರುಷ-ಮಕ್ಕಳನ್ನು ಕೊಂದು ಬಾವಿಗೆ ಹಾಕಿದವ ಎಂದು ವಿವರಿಸಿದ್ದಾರೆ. ಆತನನ್ನು ಬಂಧಿಸಿ ಮಾರ್ಷಲ್ ಲಾ ಕೋರ್ಟಿನಲ್ಲಿ ವಿಚಾರಣೆಗೆ ಒಳಪಡಿಸಿ ಜನವರಿ ೨೨, ೧೯೨೨ರಂದು ಗುಂಡು ಹಾರಿಸಿ ಕೊಲ್ಲಲಾಗಿತ್ತು.
ಹೆಸರು ವಜಾಕ್ಕೆ ಕ್ರಮ
ಈಗ ಆ ಡಿಕ್ಷನರಿಯಲ್ಲಿ ದಾಖಲಾದ ಹೆಸರುಗಳ ಪರಿಶೀಲನೆಗೆ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಕುಂಞ ಅಹಮದ್ ಹಾಜಿ, ಅಲೀ ಮುಸ್ಲಿಯಾರ್ ಸೇರಿದಂತೆ ಎಲ್ಲ ವಿವಾದಿತ ಹೆಸರುಗಳ ಪರಿಶೀಲನೆಯನ್ನು ನಡೆಸಲಿದೆ. ಇಸಾಕ್ ಅವರು ಭಾರತೀಯ ವಿಚಾರ ಕೇಂದ್ರದ ಉಪಾಧ್ಯಕ್ಷರು ಕೂಡ ಆಗಿದ್ದಾರೆ. ಅವರ ಪ್ರಕಾರ ಎಲ್ಲ ಮೋಪ್ಲಾ ದಂಗೆ ಘಟನೆಗಳು ಕೋಮುವಾದಿ; ಅದು ಹಿಂದೂ ಸಮಾಜದ ಬಗೆಗಿನ ಅಸಹನೆಯಿಂದ ನಡೆದಂಥದು. ಅದರಲ್ಲಿ ಭಾಗಿಯಾದವರ ಹೆಸರುಗಳನ್ನು ಗ್ರಂಥದ ಸಂಪುಟಗಳಿಂದ ವಜಾಗೊಳಿಸಬೇಕು. ಅದಲ್ಲದೆ ವ್ಯಾಗನ್ ದುರಂತದಲ್ಲಿ ಮೃತಪಟ್ಟವರು ಕೂಡ ಸ್ವಾತಂತ್ರ್ಯ ಹೋರಾಟಗಾರರಲ್ಲ. ಅವರು ಖಿಲಾಫತ್ ಧ್ವಜವನ್ನು ಹಾರಿಸಿಕೊಂಡು ತಮ್ಮದೇ ಖಿಲಾಫತ್ ರಾಜ್ಯ ನ್ಯಾಯಾಲಯವನ್ನು ರಚಿಸಿಕೊಂಡಿದ್ದರು. ಮೋಪ್ಲಾ ದಂಗೆಯಲ್ಲಿ ಭಾಗಿಯಾದ ಹತ್ತು ಜನ ಹಿಂದುಗಳ ಹೆಸರುಗಳನ್ನು ಕೂಡ ಡಿಕ್ಷನರಿಯಿಂದ ತೆಗೆಯಬೇಕು ಎಂದು ಇಸಾಕ್ ಸೂಚಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ತಿರೂರು ರೈಲು ನಿಲ್ದಾಣದಲ್ಲಿ ಒಂದು ಮ್ಯೂರಲನ್ನು (ಭಿತ್ತಿಚಿತ್ರ) ರಚಿಸಿದ್ದು, ಅದರಲ್ಲಿ ೧೯೨೧ರ ಮೋಪ್ಲಾ ದಂಗೆಯನ್ನು ಸ್ವಾತಂತ್ರ್ಯ ಹೋರಾಟದಂತೆ ಚಿತ್ರಿಸಲಾಗಿತ್ತು. ಬಿಜೆಪಿ ೨೦೧೭ರ ಅಕ್ಟೋಬರ್ನಲ್ಲಿ ಅದರ ವಿರುದ್ಧ ಪ್ರತಿಭಟಿಸಿತು. ಮೋಪ್ಲಾ ದಂಗೆಯು ಬ್ರಿಟಿಷರ ವಿರುದ್ಧ ಆಗಿದ್ದರೆ ಸಾವಿರಾರು ಜನರನ್ನು ಕೊಂದದ್ದೇಕೆ? ದೇವಾಲಯಗಳನ್ನು ಅಪವಿತ್ರಗೊಳಿಸಿದ್ದು ಹಾಗೂ ನಾಶ ಮಾಡಿದ್ದೇಕೆ? ಸ್ತ್ರೀಯರ ಮಾನಭಂಗ ನಡೆಸಿದ್ದೇಕೆ? – ಎಂದು ಪ್ರಶ್ನಿಸಿದ ಪಕ್ಷ, ಒಂದು ವೇಳೆ ಗಲಭೆಯ ಹೆಸರಿನಲ್ಲಿ ಯಾರಿಗಾದರೂ ಪಿಂಚಣಿ ನೀಡುವುದಾದರೆ, ಆಗ ಮನೆಬಿಟ್ಟು ಓಡಿಹೋದವರಿಗೆ ನೀಡುವುದಾದರೆ ನೀಡಲಿ; ಮೋಪ್ಲಾ ಹಿಂಸೆಯಲ್ಲಿ ಜೀವ ಕಳೆದುಕೊಂಡವರ ನಿಕಟಬಂಧುಗಳಿಗೆ ನೀಡಲಿ ಎಂದು ಆಗ್ರಹಿಸಿತು. ಆದರೂ ಎಡರಂಗ ಸರ್ಕಾರ ಈ ವಿಷಯದಲ್ಲಿ ತನ್ನ ಕಳ್ಳಾಟಗಳನ್ನು ಈಗಲೂ ಮುಂದುವರಿಸಿದೆ. ಭಾರತ ಸರ್ಕಾರದ ಗೃಹ ಇಲಾಖೆಯ ಅಡಿಯಲ್ಲಿ ಬರುವ ಸ್ವಾತಂತ್ರ್ಯ ಹೋರಾಟಗಾರರ ಕ್ಷೇಮ ಮತ್ತು ಪುನರ್ವಸತಿ ವಿಭಾಗವು ಬಹಳ ಹಿಂದೆ ಖಿಲಾಫತ್ ಆಂದೋಲನ ಮತ್ತು ಮೋಪ್ಲಾ ದಂಗೆ ಎರಡನ್ನೂ ಸ್ವಾತಂತ್ರ್ಯಯೋಧರ ಪಿಂಚಣಿ ಯೋಜನೆಗೆ ಅಂಗೀಕರಿಸಿದ್ದೇ ಈ ಅವಾಂತರಗಳ ಮೂಲವೆಂದು ನಂಬಲಾಗಿದೆ.
ಡಾ|| ಅಂಬೇಡ್ಕರ್ ಅವರು ಮೋಪ್ಲಾ ಕಾಂಡದ ಹಿನ್ನೆಲೆಯನ್ನು ಸ್ಪಷ್ಟ ಮಾತುಗಳಲ್ಲಿ ಬಹಿರಂಗಗೊಳಿಸಿದ್ದಾರೆ. ಆ ವರ್ಷ ಮಲಬಾರಿನಲ್ಲಿ ನಡೆದ ಮೋಪ್ಲಾ ದಂಗೆ ಎನ್ನುವ ಹಿಂಸಾಚಾರವು ಖುದ್ದಂ-ಐ-ಕಾಬಾ (ಮೆಕ್ಕಾ ಪವಿತ್ರಸ್ಥಳ ಕಾಬಾದ ಸೇವಕರು) ಮತ್ತು ಕೇಂದ್ರೀಯ ಖಿಲಾಫತ್ ಸಮಿತಿ (ಸಿಕೆಸಿ) ಎನ್ನುವ ಎರಡು ಮುಸ್ಲಿಂ ಸಂಘಟನೆಗಳಿಂದ ನಡೆಯಿತು. ಬ್ರಿಟಿಷರ ಕೆಳಗಿನ ಭಾರತವೆಂದರೆ ದಾರುಲ್ ಹರ್ಬ್. ಮುಸ್ಲಿಮರು ಅದರ ವಿರುದ್ಧ ಹೋರಾಡಬೇಕು. ಶರೀಯತ್ ಪಾಲಿಸಬೇಕು ಎನ್ನುವ ತತ್ತ್ವವನ್ನು ಚಳವಳಿಯ ನಾಯಕರು ಜನರಿಗೆ ಸರಿಯಾಗಿಯೇ ಬೋಧಿಸಿದರು. ಮೋಪ್ಲಾಗಳು ತಡವಿಲ್ಲದೆ ಈ ಚಳವಳಿಯಲ್ಲಿ ಸೇರಿಕೊಂಡರು. ಅವರ ಗುರಿ ಮುಖ್ಯವಾಗಿ ಬ್ರಿಟಿಷ್ ಸರ್ಕಾರದ ವಿರುದ್ಧ ದಂಗೆ ಏಳುವುದಾಗಿದ್ದರೂ ಕೂಡ ಕ್ರಮೇಣ ಇಸ್ಲಾಂ ರಾಜ್ಯ ಸ್ಥಾಪನೆಯ ಗುರಿಯನ್ನು ಪ್ರಧಾನವಾಗಿ ಮುಂದಿರಿಸಿಕೊಂಡು ಹಿಂಸಾಚಾರಕ್ಕೆ ಇಳಿದರು ಎಂದವರು ವಿಶ್ಲೇಷಿಸಿದ್ದಾರೆ. ಹಿಂಸೆಯಿಂದ ಆಡಳಿತ ಕುಸಿದಾಗ ಅಲ್ಲಿ ಸ್ವರಾಜ್ ಘೋಷಿಸಿಕೊಂಡ ಅಲಿ ಮುಸಲಿಯಾರ್ನನ್ನು ರಾಜ ಎಂದು ಸ್ವೀಕರಿಸಿದರು. ಎರ್ನಾಡ್ ಮತ್ತು ವಳ್ಳುವನಾಡ್ ಖಿಲಾಫತ್ ರಾಜ್ಯಗಳಾದವು. ಬ್ರಿಟಿಷ್ ಸರ್ಕಾರದ ವಿರುದ್ಧ ದಂಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಹಲವರಿಗೆ ಗಾಬರಿ ಹುಟ್ಟಿಸಿದ್ದು ದಂಗೆ ಎದ್ದವರು ಹಿಂದೂ ಜನಗಳ ಜೊತೆ ನಡೆದುಕೊಂಡ ರೀತಿ. ಅವರ ಕೈಯಲ್ಲಿ ಹಿಂದುಗಳಿಗೆ ಭೀಕರ ವಿಧಿ ಎದುರಾಯಿತಲ್ಲ – ಅದೇನು?
ಈಗಿನ ಕೇರಳ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಅವರು ಟೆಕ್ಸ್ಟ್ ಆಂಡ್ ಕಾಂಟೆಕ್ಸ್ಟ್ ಎನ್ನುವ ತಮ್ಮ ಗ್ರಂಥದಲ್ಲಿ ಹೀಗೆ ಬರೆದಿದ್ದಾರೆ: ಟರ್ಕೀಯರೇ ಖಿಲಾಫತ್ ವ್ಯವಸ್ಥೆಯನ್ನು ವಜಾ ಮಾಡಿದ ಕಾರಣ ಖಿಲಾಫತ್ ಚಳವಳಿ ವಿಫಲವಾಯಿತು. ಆದರೆ ರಾಜಕೀಯ ಬದಲಾವಣೆಗೆ ಒಂದು ಮತವಾಗಿ ಅದನ್ನು ಬಳಸಿಕೊಳ್ಳುವಲ್ಲಿ ಕೆಲವರು ಯಶಸ್ವಿಗಳಾದರು. ಈ ಮತೀಯತೆಯು ಮುಂದಿನ ರಾಜಕೀಯದಲ್ಲಿ, ಮುಖ್ಯವಾಗಿ ೧೯೪೭ರ ದೇಶವಿಭಜನೆಯಂತಹ ಘಟನೆಗಳಲ್ಲಿ ಯಾವ ಪಾತ್ರ ವಹಿಸಿತೆಂಬುದನ್ನು ಈಗ ಮತ್ತೆ ನೋಡಬೇಕಾಗಿದೆ ಎಂದವರು ಗಮನ ಸೆಳೆದಿದ್ದಾರೆ.
ಖಿಲಾಫತ್ ನಂತರದ ಗಾಂಧಿ
ಖಿಲಾಫತ್ ದುರಂತ ಮತ್ತದರ ನಂತರದ ಘಟನೆಗಳನ್ನು ಈಗ ನೋಡುವಾಗ ಖಿಲಾಫತ್ನ ವೈಫಲ್ಯ ಗಾಂಧಿಯವರ ನಂಬಿಕೆಯಲ್ಲಿ ಯಾವುದೇ ಬದಲಾವಣೆ ಉಂಟು ಮಾಡಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮಹಮ್ಮದಾಲಿ ಜಿನ್ನಾ ಮತ್ತು ಮುಸ್ಲಿಂ ಲೀಗ್ನ ಎದುರು ಅವರು ಅದೇ ತಪ್ಪನ್ನು ಮಾಡಿದರು. ಅದು ದೇಶದ ವಿಭಜನೆಯಲ್ಲಿ ಪರ್ಯವಸಾನವಾಯಿತು.
ಇಲ್ಲಿ ವಿಷಯ ಕೇವಲ ದೇಶವಿಭಜನೆ ಅಲ್ಲ; ಆ ಹೊತ್ತಿಗೆ ಅದು ಅನಿವಾರ್ಯ ಎಂಬಂತಿತ್ತು ಎನ್ನುವ ನವರತ್ನ ಎಸ್. ರಾಜಾರಾಮ್, ಅಂತಹ ಮಾನವೀಯ ದುರಂತದ ಎದುರಿನ ಅವರ ವರ್ತನೆಯೇ ನೈಜ ವಿಷಯ. ಅಹಿಂಸೆಯ ಬಗೆಗಿನ ತಮ್ಮ ದ್ವಂದ್ವ ನೀತಿಯನ್ನು ಅವರು ಮತ್ತೂ ಒತ್ತಾಯಿಸಿದ ಕಾರಣ ಹಿಂದು ಹಾಗೂ ಸಿಖ್ ನಿರಾಶ್ರಿತರಿಗೆ ತುಂಬ ಕಷ್ಟವಾಯಿತು. ಮುಸ್ಲಿಮರ ಆಸ್ತಿಯನ್ನು ರಕ್ಷಿಸಿ ಎಂದಾತ ಹೇಳುತ್ತಲೇ ಇದ್ದರು – ಎಂದು ಆಕ್ಷೇಪಿಸುತ್ತಾರೆ. ೧೯೪೮ರ ಜನವರಿ ಹೊತ್ತಿಗೆ ದೆಹಲಿಯ ಕೆಲವು ಪಾಳುಬಿದ್ದ ಮಸೀದಿಗಳಲ್ಲಿ ಹಿಂದುಗಳು, ಸಿಕ್ಖರು ಆಶ್ರಯ ಪಡೆದಿದ್ದರು. ಅವರನ್ನು ಅಲ್ಲಿಂದ ಹೊರಹಾಕಬೇಕೆಂದು ಗಾಂಧಿ ಒತ್ತಡ ತಂದರು. ಹೊರಹಾಕಿದಾಗ ಅಲ್ಲಿದ್ದ ಹೆಂಗಸರು, ಮಕ್ಕಳು ಚಳಿಯಿಂದ ಸಾಯುವ ಪರಿಸ್ಥಿತಿ ಉಂಟಾಯಿತು. ಗಾಂಧಿಯವರ ಅಹಿಂಸೆ ಈಗ ಉಳಿದಿಲ್ಲ; ಆದರೆ ವಿಭಿನ್ನ ನೈತಿಕ ಮಾನದಂಡವು (Moral relativism) ಸೆಕ್ಯುಲರಿಸಂನ ಹೆಸರಿನಲ್ಲಿ ತುಷ್ಟೀಕರಣದ ಸಮಾನ ನಾಗರಿಕ ಸಂಹಿತೆಯು ಬರುತ್ತಿಲ್ಲ; ಸಂತ್ರಸ್ತ ಮುಸ್ಲಿಂ ಮಹಿಳೆಯರ ಮಾನವೀಯ ಸುಧಾರಣೆಯೂ ಆಗುತ್ತಿಲ್ಲ – ಎಂದು ರಾಜಾರಾಮ್ ವಿಶ್ಲೇಷಿಸುತ್ತಾರೆ:
ಖಿಲಾಫತ್ ಚಳವಳಿ ಹಲವು ರೀತಿಗಳಲ್ಲಿ ಅನಾಹುತಕಾರಿಯಾಗಿತ್ತು. ಭಾರತದ ಇತಿಹಾಸ ಪುಸ್ತಕಗಳು ಅದನ್ನು ಕೈಬಿಡುತ್ತವೆ. ಕೇಳಿದರೆ ಅದು ಹಿಂದು ಮತ್ತು ಮುಸ್ಲಿಮರನ್ನು ಬೆಸೆಯಿತು ಎನ್ನುತ್ತಾರೆ. ಆದರೆ ನಿಜಸಂಗತಿ ಅದಕ್ಕಿಂತ ಪೂರ್ತಿ ಭಿನ್ನವಾದದ್ದು. ಅದರಿಂದಾಗಿ ದೇಶಾದ್ಯಂತ ಭಾರೀ ಹತ್ಯಾಕಾಂಡಗಳು ನಡೆದು ಸಾವಿರಗಟ್ಟಲೆ ಜನ ಮೃತಪಟ್ಟರು. ಕೇರಳದಲ್ಲಿ ಅದು ದೈವದ್ರೋಹಿಗಳ ವಿರುದ್ದದ ಪವಿತ್ರ ಯುದ್ಧ ಎಂಬ ರೀತಿಯಲ್ಲಿ ನಾಲ್ಕಾರು ತಿಂಗಳು ನಡೆಯಿತು. ಇದು ಸಾಲದೆಂಬಂತೆ ಆಲಿ ಸಹೋದರರು ಗಾಂಧಿಯವರನ್ನೂ ಸಾರ್ವಜನಿಕವಾಗಿ ಅವಮಾನಿಸಿದರು; ಒಬ್ಬ ಮುಸ್ಲಿಂ ಕಳ್ಳ ಗಾಂಧಿಗಿಂತ ಉತ್ತಮ ಎಂದು ಮಹಮ್ಮದಾಲಿ ಹೇಳಿದರು.
ಇತಿಹಾಸಕಾರರು ಮೋಪ್ಲಾ ಕಾಂಡವನ್ನು ಕೂಡ ದೂರ ಇಡುತ್ತಾರೆ ಎಂದು ಆಕ್ಷೇಪಿಸಲಾಗಿದೆ. ಮೋಪ್ಲಾಕಾಂಡದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯಕ್ಕೆ ಸಮಾನವಾದದ್ದು ನನಗೆ ಇತಿಹಾಸದಲ್ಲಿ ಬೇರೆಲ್ಲಿಯೂ ಕಾಣುವುದಿಲ್ಲ ಎನ್ನುವ ಸಿ. ಶಂಕರನ್ ನಾಯರ್, ಅವು ಎಷ್ಟು ಭೀಕರ ಮತ್ತು ಹೇಳಬಾರದ್ದು ಎಂದರೆ ನನ್ನ ಪುಸ್ತಕದಲ್ಲಿ ನಾನು ಅದನ್ನು ಹೇಳಿಲ್ಲ. ಇಂಗ್ಲಿಷ್ ಮತ್ತು ಭಾಷಾ ಪತ್ರಿಕೆಗಳಿಂದ ನಾನು ನೂರಾರು ಘಟನೆಗಳನ್ನು ಹೇಳಬಹುದು; ಆದರೆ ಕೆಲವನ್ನು ಮಾತ್ರ ಆರಿಸಿ ಹೇಳಿದ್ದೇನೆ – ಎಂದು ತಿಳಿಸಿದ್ದಾರೆ. ಇವು ವಿಭಜನೆ ವೇಳೆ ನಡೆದ ಘಟನೆಗಳಿಗೆ ಕಡಮೆ ಅಲ್ಲ ಎಂಬುದು ಆನಿ ಬೆಸೆಂಟ್ ಅವರ ಮಾತು.
ಅಲ್ಪಸಂಖ್ಯಾತರಲ್ಲ
ಭಾರತದ ಮುಸಲ್ಮಾನರು ಯಾವುದೇ ಕಾಲದಲ್ಲಿ ಅಲ್ಪಸಂಖ್ಯಾತರಂತೆ ನಡೆದುಕೊಂಡಿಲ್ಲ; ಬದಲಾಗಿ ಒಂದು ಪ್ರತಿಷ್ಠಿತ ಸಮುದಾಯದಂತೆ ನಡೆದುಕೊಳ್ಳುತ್ತಾರೆ ಎನ್ನುವ ಪ್ರಸಿದ್ಧ ವಿದ್ವಾಂಸ ಡಾ|| ಡಿ. ಪ್ರೀತಿಲಾಲ್ ಅವರ ಮಾತನ್ನು ರಾಜಾರಾಂ ಉಲ್ಲೇಖಿಸುತ್ತಾರೆ. ತಮ್ಮ ಅಭಿಪ್ರಾಯ, ನಂಬಿಕೆ, ಆಚರಣೆಗಳು ರಾಷ್ಟ್ರಜೀವನದ ಎಲ್ಲ ಅಂಶಗಳಲ್ಲಿ ಪೂರ್ವನಿದರ್ಶನ ಆಗಬೇಕು. ಅದರಂತೆ ಅವರು ಕೇವಲ ವಿಶ್ವಾಸಿಗರಿಗೆ ಮಾತ್ರ ಅಲ್ಲ; ಅವಿಶ್ವಾಸಿಗಳಿಗೂ ನಡತೆ, ನಿಯಮಗಳನ್ನು ರೂಪಿಸಲು ಬಯಸುತ್ತಾರೆ. ಅದರಲ್ಲಿ ದೇಶಕ್ಕೆ ಸಂಬಂಧಿಸಿದ ಎಲ್ಲವೂ ಸೇರುತ್ತದೆ; ರಾಜಕೀಯದಿಂದ ಕಲೆಯವರೆಗೆ. ಇತಿಹಾಸವನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದು ಕೂಡ ಅದರಲ್ಲಿ ಸೇರುತ್ತದೆ. ಇದರಿಂದ ಒಂದು ಪ್ರಮುಖ ರಾಜಕೀಯ ಮತ್ತು ಇತಿಹಾಸದ ಪಾಠ ಹೊರಬರುತ್ತದೆ. ಅದೆಂದರೆ ಮುಸ್ಲಿಂ ನಾಯಕರ ಏಕೈಕ ಕಾಳಜಿಯೆಂದರೆ ಮುಸ್ಲಿಂ ಅಸ್ಮಿತೆಯ (ಐಡೆಂಟಿಟಿ) ಪ್ರತ್ಯೇಕತೆಯನ್ನು ಉಳಿಸಿಕೊಳ್ಳುವುದು. ಮುಸ್ಲಿಂ ನಾಯಕರ ದೊಡ್ಡ ಭಯ – ಅವರಲ್ಲಿ ತುಂಬ ಜನ ಮತೀಯ ಹಿನ್ನೆಲೆಯಿಂದ ಬಂದವರು – ಭಾರತದ ಮುಸ್ಲಿಮರು ತಮ್ಮ ಪ್ರಾಚೀನ ಪರಂಪರೆಯ ಮರುಸಂಶೋಧನೆಗೆ ಹೊರಡಬಹುದು; ಮತ್ತು ಅದಕ್ಕೆ ಮರಳಲೂಬಹುದು ಎನ್ನುವುದು.
ಬಹುಶಃ ಇದೇ ಕಾರಣಕ್ಕಾಗಿ ಉಲೇಮಾಗಳು ಮುಸ್ಲಿಂ ಜನ ಹಿಂದುಳಿದವರಾಗಿ ಇರಬೇಕೆಂದು ಬಯಸುತ್ತಾರೆ. ಮುಸ್ಲಿಂ ಬುದ್ಧಿಜೀವಿಗಳಿಗೆ ಇರುವ ಭಯವೆಂದರೆ, ಇಸ್ಲಾಮಿಕ್ ದಾಖಲೆಗೆ (ರೆಕಾರ್ಡ್) ಮರಳಿ ಅದರಿಂದ ಹಿಂದುಗಳ ಪ್ರತೀಕಾರ ಬರಬಹುದು ಎಂಬುದು. ಅದಕ್ಕಾಗಿ ಅವರು ಮುಸ್ಲಿಂ ಐತಿಹಾಸಿಕ ರೆಕಾರ್ಡನ್ನು ಯಾರಿಗೂ ತೋರಿಸುವುದಿಲ್ಲ.
ಮೋಪ್ಲಾ ಕಾಂಡದಲ್ಲೂ ಅದೇ ನಡೆದದ್ದು ಕಾಣಿಸುತ್ತದೆ. ಕೆಳಮಟ್ಟದ ಶಿಕ್ಷಣ ಮತ್ತು ಸಂಸ್ಕೃತಿಯ ಜನ ಮತೀಯ ಪ್ರೇರಣೆ ದೊರೆತಾಗ ಮೂಢನಂಬಿಕೆಯ ಜ್ವರಕ್ಕೆ ಗುರಿಯಾಗುತ್ತಾರೆ. ಅದರಿಂದ ಮಹಮ್ಮದಾಲಿಯಂತಹ ಖಿಲಾಫತ್ ನಾಯಕರು ಮುಸ್ಲಿಮರನ್ನು ಹಿಂದುಳಿಕೆಯಲ್ಲೇ ಇರಿಸಿದರು. ಪರಿಸ್ಥಿತಿ ಈಗಲಾದರೂ ಬದಲಾಗಿದೆಯೆ ಎಂಬುದು ಇಲ್ಲಿ ಏಳುವ ಪ್ರಶ್ನೆಯಾಗಿದೆ.
ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪುನರ್ವಿಮರ್ಶೆ ಆಗಬೇಕೆಂದು ಎನ್.ಎಸ್. ರಾಜಾರಾಮ್ ಬಯಸುತ್ತಾರೆ. ಆದರೆ ಸಮಸ್ಯೆಯೆಂದರೆ ಗಾಂಧಿ ರಾಜಕೀಯ ಮಾತ್ರವಲ್ಲ; ಆರ್ಥಿಕ ಆಸ್ತಿಯೂ ಆಗಿದ್ದಾರೆ. ರಾಜಕೀಯದ ಮೌಲ್ಯ ಕುಸಿದರೂ ಗಾಂಧೀವಾದಿಗಳೆನ್ನುವವರು ಗಾಂಧಿಯವರ ಟೀಕೆ ಬಂದರೆ ತಮ್ಮ ಬಂಡವಾಳ ಮುಗಿಯುತ್ತದೆಂದು ಭಾವಿಸುತ್ತಾರೆ. ಗಾಂಧಿ ಟೀಕೆಯನ್ನು ದಮನಿಸುತ್ತಾರೆ. ಗಾಂಧಿ ಹತ್ಯೆ ಪ್ರಕರಣದ ಕೋರ್ಟ್ ದಾಖಲೆಗಳನ್ನು ದಶಕಗಳ ಕಾಲ ತಡೆಹಿಡಿದರು (ಸೆನ್ಸಾರ್ ಮಾಡಿದರು). ಕಾರಣವೆಂದರೆ ಅದರಲ್ಲಿ ನಾಥೂರಾಮ್ ಗೋಡ್ಸೆ ಹೇಳಿಕೆಗಳಿದ್ದವು. ಈ ಹೆದರಿಕೆ, ಅಸಹನೆಯ ವಾತಾವರಣದಲ್ಲಿ ಗಾಂಧಿಯವರಿಗೆ ಸಂಬಂಧಿಸಿದ ಯಾವುದೋ ಸಣ್ಣ ವಿಷಯಕ್ಕೆ ಭಾರೀ ಪ್ರಚಾರ ಸಿಗುತ್ತದೆ.
ಗಂಭೀರ ಚರ್ಚೆಯನ್ನು ತಡೆಹಿಡಿದಿರುವ ಕಾರಣ ಹೀಗೆ ಆಗುತ್ತಿದೆ ಎಂದು ಭಾವಿಸಲಾಗಿದೆ. ಚರ್ಚೆ ನಡೆದರೆ ನಷ್ಟ ಆಗುವುದು ಗಾಂಧಿ ಅವರಿಗಲ್ಲ; ಅವರ ಹೆಸರಿನಲ್ಲಿ ಲಾಭ ಮಾಡಿಕೊಳ್ಳುವವರಿಗೆ ಎಂದು ರಾಜಾರಾಮ್ ವಿವರಿಸುತ್ತಾರೆ. ಅಲ್ಲಿಯ ತನಕ ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸ ಒಪ್ಪಿಕೊಂಡ ದಂತಕಥೆಯಾಗಷ್ಟೆ ಮುಂದುವರಿಯುತ್ತಿದೆ ಎಂದರೆ ತಪ್ಪಲ್ಲ.
ಇನ್ನು ಮೋಪ್ಲಾ ಕಾಂಡದ ಶತಮಾನದ ಹೊತ್ತಿನ ಕೆಲವು ವಿದ್ಯಮಾನಗಳು, ಮುಖ್ಯವಾಗಿ ಪಿಎಫ್ಐ ಅದನ್ನು ಬಳಸಿಕೊಳ್ಳಲು ಹೊರಟ ರೀತಿ ಆಘಾತಕಾರಿಯೆನ್ನದೆ ವಿಧಿಯಿಲ್ಲ. ಕ್ರಮ ಇಲ್ಲದೆ ಕೇವಲ ಚರ್ಚೆಯಲ್ಲಿ ನಾವು ಎಷ್ಟು ಸಮಯ ಕಳೆಯಬಹುದು?
(ಮುಗಿಯಿತು)