ಶೇಷಗಿರಿರಾಯರು ಏನಿಲ್ಲವೆಂದರೂ ಮೂವತ್ತು ಸಾವಿರ ಪುಟಗಳಿಗೂ ಮೀರಿದ ಬರವಣಿಗೆಯನ್ನು ಮಾಡಿದ್ದಾರೆ. ಅವರ ಬರವಣಿಗೆ ಆರಂಭಿಸಿದ್ದು ಆಧುನಿಕ ಕನ್ನಡ ರೂಪಗೊಂಡ ದಿನಗಳಲ್ಲಿ. ಆಗ ಇನ್ನೂ ವಿಮರ್ಶೆಯ ಸ್ವರೂಪ ನಿಖರವಾಗಿರಲಿಲ್ಲ. ಸಾಹಿತ್ಯದ ಪರಿಚಯ ಆಗಿನ ತುರ್ತು ಅಗತ್ಯವಾಗಿತ್ತು. ಅದನ್ನು ಶೇಷಗಿರಿರಾಯರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹೀಗಿದ್ದರೂ ನವೋದಯದ ದಿಗ್ಗಜರ ಕುರಿತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಗಟ್ಟಿತನವೂ ಅವರಿಗೆ ಇತ್ತು ಎನ್ನುವುದನ್ನು ಗಮನಿಸಬೇಕು. ನವ್ಯ ಚಳವಳಿ ಏಕೆ ಕನ್ನಡದಲ್ಲಿ ವಿಫಲವಾಯಿತು ಎಂದು ಚರ್ಚಿಸಲು ಪ್ರಯತ್ನಿಸಿದವರಲ್ಲಿ ಶೇಷಗಿರಿರಾಯರೇ ಮೊದಲಿಗರು. ದಲಿತ, ಬಂಡಾಯ, ಮುಸ್ಲಿಂ ಸಾಹಿತ್ಯ, ಮಹಿಳಾ ಸಾಹಿತ್ಯ ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಅದರ ಶಕ್ತಿಗಳನ್ನು ಗುರುತಿಸಿದಂತೆ ಮಿತಿಗಳ ಕುರಿತೂ ಬರೆದ ಶೇಷಗಿರಿರಾಯರು ಮೂಲತಃ ಚರಿತ್ರ್ರಕಾರರು. ಅವರಿಗೆ ದಾಖಲಾತಿ ಮುಖ್ಯ. ಯಾವುದನ್ನೂ ಅವರು ಸೂಕ್ತ ಆಧಾರವಿಲ್ಲದೆ ಒಪ್ಪಿಕೊಳ್ಳಲಾರರು. ಎಲ್ಲವನ್ನೂ ಅವರು ಚರಿತ್ರೆಯ ವಿಶಾಲ ತಳಹದಿಯಲ್ಲಿ ಇಟ್ಟೇ ನೋಡುವವರು. ಶೇಷಗಿರಿರಾಯರು ವ್ಯಾಪಕವಾಗಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದರು. ಹೀಗೆ ಬರೆಯುವಾಗ ಸಮಾಜದ ಎಲ್ಲ ವರ್ಗದವರಿಗೂ ತಮ್ಮ ಚಿಂತನೆಗಳು ತಲಪುವಂತೆ ಬರೆದರು. ಅವರ ಚಿಂತನೆಗಳು ಈ ಪ್ರಕ್ರಿಯೆಯಲ್ಲಿ ಸರಳವಾದವು. ಆದರೆ ತಮ್ಮ ಘನತೆಯನ್ನು ಕಳೆದುಕೊಳ್ಳಲಿಲ್ಲ.
-೧-
೧೯೯೫ನೆಯ ಇಸವಿ. ರವೀಂದ್ರ ಕಲಾಕ್ಷೇತ್ರದಲ್ಲೊಂದು ಕಾರ್ಯಕ್ರಮ. ಪ್ರೊ. ಎಲ್.ಎಸ್. ಶೇಷಗಿರಿರಾಯರದೇ ಅಧ್ಯಕ್ಷತೆ. ಕಾರ್ಯಕ್ರಮ ಮುಗಿದ ಮೇಲೆ “ನೀವು ಶ್ರೀಧರಮೂರ್ತಿಯವರಲ್ಲವೆ?” ಎಂದು ಅವರೇ ಮಾತನಾಡಿಸಿದರು. ನಾನು ಅಚ್ಚರಿಯಿಂದ “ಹೌದು” ಎಂದಾಗ “ನಮ್ಮ ಮನೆಗೆ ಬರಬೇಕಲ್ಲ” ಎಂದು ಆಹ್ವಾನ ಕೊಟ್ಟರು. ಹೀಗೆ ಅವರೊಂದಿಗೆ ಒಡನಾಟ ಆರಂಭವಾಯಿತು. ನಾನು ಮೃದು ಟೀಕೆಯ ರೂಪದಲ್ಲಿ ಒಮ್ಮೆ ಕೆಲವು ಮಾತುಗಳನ್ನು ಬರೆದಿದ್ದೆ. ಶೇಷಗಿರಿರಾಯರು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸದೇ ಔದಾರ್ಯ ತೋರಿ ತಮ್ಮ ಪ್ರಮುಖ ಕೃತಿಗಳನ್ನು ಪರಿಶೀಲಿಸುವಂತೆ ಹೇಳಿ ಅದರಲ್ಲಿ ನಾನು ತೊಡಗುವಂತೆ ಮಾಡುವ ಸಜ್ಜನಿಕೆಯನ್ನು ಮೆರೆದರು. ಭಾರತೀಯ ವಿದ್ಯಾಭವನವು ಆಳಸಿಂಗಾಚಾರ್ಯರ ಮಹಾಭಾರತದ ಹದಿನೆಂಟು ಸಂಪುಟಗಳನ್ನು ಪ್ರಕಟಿಸಿತು. ಇದೇ ಸಂದರ್ಭದಲ್ಲಿ ಇಂಗ್ಲಿಷ್ನಲ್ಲಿ ಕೂಡ ಮಹಾಭಾರತ ಬಂದರೆ ಚೆನ್ನಾಗಿರುತ್ತದೆ ಎನ್ನುವ ಅಭಿಪ್ರಾಯ ಬಂದಿತು. ಅದನ್ನು ಬರೆಯುವ ಹೊಣೆಗಾರಿಕೆ ಶೇಷಗಿರಿರಾಯರಿಗೆ ಬಂದಿತು. ಅದರ ಸಹಯೋಗವನ್ನು ನಾನು ಮಾಡಿದ್ದರಿಂದ ಇನ್ನಷ್ಟು ನಿಕಟ ಒಡನಾಟ ಸಿಕ್ಕಿತು.
೨೦೦೫ನೆಯ ಇಸವಿ ಫೆಬ್ರುವರಿ ೮ನೆಯ ತಾರೀಖು. ಆಗ ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿದ್ದ ಡಾ. ಮತ್ತೂರು ಕೃಷ್ಣಮೂರ್ತಿಯವರು ಫೋನ್ ಮಾಡಿ “ನಿಮ್ಮ ಹಸ್ತಪ್ರತಿ ಯಾವಾಗ ಸಿಗುತ್ತದೆ?” ಎಂದರು. ನನಗೆ ಅಚ್ಚರಿ ಮತ್ತು ಆತಂಕ. “ಯಾವ ಹಸ್ತಪ್ರತಿ?” ಎಂದರೆ “ಅದೇ ಶೇಷಗಿರಿರಾಯರ ಪುಸ್ತಕ, ಫೆಬ್ರುವರಿ ೧೬ಕ್ಕೆ ಬಿಡುಗಡೆ” ಎಂದರು. ಭಾರತೀಯ ವಿದ್ಯಾಭವನದವರು ಎಲ್.ಎಸ್.ಎಸ್. ಅವರ ಎಂಬತ್ತನೆಯ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ರಾಜ್ಯಪಾಲರಾದ ಟಿ.ಎನ್. ಚತುರ್ವೇದಿ ಬರುತ್ತಿದ್ದಾರೆ. ಹೀಗಿರುವಾಗ ಬರೀ ಕಾರ್ಯಕ್ರಮ ಎಂದರೆ ಹೇಗೆ? ಜೊತೆಗೆ ಒಂದು ಪುಸ್ತಕವೂ ಬರಬೇಕು – ಎಂಬುದು ಆಯೋಜಕರ ಆಶಯವಾಗಿತ್ತು. ಆದರೆ ಇನ್ನು ಬರೆಯುವುದು ಯಾವಾಗ, ಮುದ್ರಣ ಆಗುವುದು ಯಾವಾಗ, ಕಾರ್ಯಕ್ರಮಕ್ಕೆ ಎಂಟೇ ದಿನ ಉಳಿದಿದೆ. ಶೇಷಗಿರಿರಾಯರ ಬಗೆಗಿನ ಪ್ರೀತಿಗೆ ಇಲ್ಲ ಎನ್ನಲಾಗಲಿಲ್ಲ. ಒಂದು ದಿನ ಬರವಣಿಗೆ, ಮತ್ತೊಂದು ದಿನ ಪ್ರೂಫ್, ಇನ್ನೊಂದು ದಿನ ಮುದ್ರಣ – ಹೀಗೆ ಪುಸ್ತಕ ಸಿದ್ಧವಾಗಿ ಬಿಡುಗಡೆಯೂ ಆಯಿತು.
ಇದಾದ ಎರಡು ವರ್ಷಕ್ಕೆ ಅವರು ಉಡುಪಿಯಲ್ಲಿ ನಡೆದ ೭೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲರು ಫೋನ್ ಮಾಡಿ “ನೀವು ಎಲ್.ಎಸ್.ಎಸ್. ಬಗ್ಗೆ ಒಂದು ಪುಸ್ತಕ ಬರೆಯಬೇಕು. ಅದನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತದೆ, ಆದಷ್ಟು ಬೇಗ ಹಸ್ತಪ್ರತಿ ಕೊಡಿ” ಎಂದರು. ಶೇಷಗಿರಿರಾಯರಿಗೆ ಫೋನ್ ಮಾಡಿದೆ. “ನಿಮಗೆ ತೃಪ್ತಿ, ಸಮಾಧಾನವಾಗುವಂತೆ ಬರೆಯಿರಿ” ಎಂದು ನಕ್ಕರು. ಈ ಸಲ ಅಧ್ಯಯನಕ್ಕೆ ಸಾಕಷ್ಟು ಅವಕಾಶ ಸಿಕ್ಕಿತು. ಪುಸ್ತಕ ಚೆನ್ನಾಗಿಯೂ ಬಂದಿತು. ಸಮ್ಮೇಳನದಲ್ಲಿ ಎಂ.ಎಚ್. ಕೃಷ್ಣಯ್ಯ ಅದನ್ನು ಬಿಡುಗಡೆ ಮಾಡಿದರು. ಅವರು ಮತ್ತು ಶೇಷಗಿರಿರಾಯರು ಮುಜುಗರವಾಗುವಂತೆ ನನ್ನನ್ನು ಹೊಗಳಿ ಸಂಕೋಚ ತಂದರು.
ತೊಂಬತ್ತು ವರ್ಷಕ್ಕೂ ಮೀರಿದ ಸಂತೃಪ್ತ ಜೀವನವನ್ನು ನಡೆಸಿದ ಶೇಷಗಿರಿರಾಯರು ಏನಿಲ್ಲವೆಂದರೂ ಮೂವತ್ತು ಸಾವಿರ ಪುಟಗಳಿಗೂ ಮೀರಿದ ಬರವಣಿಗೆಯನ್ನು ಮಾಡಿದ್ದಾರೆ. ಅವರ ಬರವಣಿಗೆ ಆರಂಭಿಸಿದ್ದು ಆಧುನಿಕ ಕನ್ನಡ ರೂಪಗೊಂಡ ದಿನಗಳಲ್ಲಿ. ಆಗ ಇನ್ನೂ ವಿಮರ್ಶೆಯ ಸ್ವರೂಪ ನಿಖರವಾಗಿರಲಿಲ್ಲ. ಸಾಹಿತ್ಯದ ಪರಿಚಯ ಆಗಿನ ತುರ್ತು ಅಗತ್ಯವಾಗಿತ್ತು. ಅದನ್ನು ಶೇಷಗಿರಿರಾಯರು ಯಶಸ್ವಿಯಾಗಿ ನಿರ್ವಹಿಸಿದರು. ಹೀಗಿದ್ದರೂ ನವೋದಯದ ದಿಗ್ಗಜರ ಕುರಿತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಗಟ್ಟಿತನವೂ ಅವರಿಗೆ ಇತ್ತು ಎನ್ನುವುದನ್ನು ಗಮನಿಸಬೇಕು. ಪ್ರಗತಿಶೀಲರಲ್ಲಿ ಅನೇಕರು ಅವರಿಗೆ ವೈಯಕ್ತಿಕವಾಗಿ ಆಪ್ತರು. ಹೀಗಿದ್ದರೂ ಅವರು ಈ ಚಳವಳಿಯ ಮಿತಿಗಳನ್ನು ತೋರಿಸುವಲ್ಲಿ ಹಿಂದೆ ಬೀಳಲಿಲ್ಲ. ನವ್ಯ ಬರಹಗಾರರ ಮಹತ್ತ್ವವನ್ನೂ ಅವರು ಗುರುತಿಸಿದರು. ಅದರ ಮಿತಿಗಳನ್ನೂ ಗುರುತಿಸಿದರು. ನವ್ಯ ಚಳವಳಿ ಏಕೆ ಕನ್ನಡದಲ್ಲಿ ವಿಫಲವಾಯಿತು ಎಂದು ಚರ್ಚಿಸಲು ಪ್ರಯತ್ನಿಸಿದವರಲ್ಲಿ ಶೇಷಗಿರಿರಾಯರೇ ಮೊದಲಿಗರು. ದಲಿತ, ಬಂಡಾಯ, ಮುಸ್ಲಿಂ ಸಾಹಿತ್ಯ, ಮಹಿಳಾ ಸಾಹಿತ್ಯ ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಅದರ ಶಕ್ತಿಗಳನ್ನು ಗುರುತಿಸಿದಂತೆ ಮಿತಿಗಳ ಕುರಿತೂ ಬರೆದ ಶೇಷಗಿರಿರಾಯರು ಮೂಲತಃ ಚರಿತ್ರ್ರಕಾರರು. ಅವರಿಗೆ ದಾಖಲಾತಿ ಮುಖ್ಯ. ಯಾವುದನ್ನೂ ಅವರು ಸೂಕ್ತ ಆಧಾರವಿಲ್ಲದೆ ಒಪ್ಪಿಕೊಳ್ಳಲಾರರು. ಎಲ್ಲವನ್ನೂ ಅವರು ಚರಿತ್ರೆಯ ವಿಶಾಲ ತಳಹದಿಯಲ್ಲಿ ಇಟ್ಟೇ ನೋಡುವವರು. ಶೇಷಗಿರಿರಾಯರು ವ್ಯಾಪಕವಾಗಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದರು. ಹೀಗೆ ಬರೆಯುವಾಗ ಸಮಾಜದ ಎಲ್ಲ ವರ್ಗದವರಿಗೂ ತಮ್ಮ ಚಿಂತನೆಗಳು ತಲಪುವಂತೆ ಬರೆದರು. ಅವರ ಚಿಂತನೆಗಳು ಈ ಪ್ರಕ್ರಿಯೆಯಲ್ಲಿ ಸರಳವಾದವು. ಆದರೆ ತಮ್ಮ ಗಹನತೆಯನ್ನು ಕಳೆದುಕೊಳ್ಳಲಿಲ್ಲ.
ಗ್ರೀಕ್ ನಾಟಕಗಳು, ಇಂಗ್ಲಿಷ್ ಸಾಹಿತ್ಯ ಚರಿತ್ರೆ, ಅದರಲ್ಲಿಯೂ ಷೇಕ್ಸ್ಪಿಯರ್ ಮತ್ತು ಮಹಾಕಾವ್ಯಗಳು ಶೇಷಗಿರಿರಾಯರಿಗೆ ಬಹಳ ಪ್ರಿಯವಾದ ಕ್ಷೇತ್ರಗಳು. ಈ ವಿಷಯಗಳ ಕುರಿತು ಅವರು ಮತ್ತೆಮತ್ತೆ ನಿರಂತರವಾಗಿ ಬರೆಯುತ್ತಲೇ ಹೋಗಿದ್ದಾರೆ. ಆದರೆ ಈ ಬರವಣಿಗೆಗಳು ಪುನರಾವರ್ತನೆಯಾದರೂ ಹೊಸಹೊಸ ಒಳನೋಟಗಳನ್ನು ಪಡೆಯುತ್ತಹೋಗಿವೆ. ತಮ್ಮ ವಿದ್ಯಾರ್ಥಿದೆಸೆಯಿಂದ ಕೊನೆಯ ದಿನಗಳವರೆಗೆ ಅವರು ಈ ಕುರಿತು ಅಧ್ಯಯನ ಮಾಡುತ್ತಹೋದರು. ಭಾರತದ ವಿವಿಧ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಂಪರ್ಕವಿರಿಸಿಕೊಂಡ ಶೇಷಗಿರಿರಾಯರು ಈ ಒಡನಾಟವನ್ನು ಕನ್ನಡದ ಉಪಯೋಗಕ್ಕೆ ಬಳಸಿಕೊಂಡರು. ಕರ್ನಾಟಕದ ಹೊರಗಿನ ಸಾಹಿತ್ಯಿಕ ವೇದಿಕೆಗಳಲ್ಲಿ ಕನ್ನಡದ ಕಂಪು ಹರಡಿದರು. ಹಾಗೆ ಕನ್ನಡಕ್ಕೆ ಜಾಗತಿಕ ಸಾಹಿತ್ಯದ ಬೆಳವಣಿಗೆ ತಂದು ಸುವರ್ಣ ಸೇತುವೆಯಾದರು. ಹಲವು ಪ್ರಮುಖ ಯೋಜನೆಗಳ ಸಂಪಾದಕರಾಗಿಯೂ ಅವರು ಮಹತ್ತ್ವದ ಕೆಲಸ ಮಾಡಿದ್ದಾರೆ. ಕನ್ನಡ ಬರಹಗಾರರಲ್ಲಿ ಇಂತಹ “ನಾಯಕತ್ವದ ಗುಣ” ಇರುವವರು ತೀರಾ ಅಪರೂಪ.
೨೦೨೦ರ ಸುಮಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿಗಳಾದ ಮಹಾಲಿಂಗೇಶ್ವರ ಭಟ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ “ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆ”ಗೆ ಶೇಷಗಿರಿರಾಯರ ಬಗ್ಗೆ ಪುಸ್ತಕ ಬರೆದು ಕೊಡುತ್ತೀರಾ? – ಎಂದು ಕೇಳಿದರು. ನಾನು ಈಗಾಗಲೇ ಎರಡು ಪುಸ್ತಕ ಬರೆದಿದ್ದೇನೆ, ಬೇಡ ಎಂದರೆ ಇದರ ಸ್ವರೂಪ ಬೇರೆ ಎಂದು ಅವರು ಒತ್ತಾಯಿಸಿದರು. ಆಗ ಶೇಷಗಿರಿರಾಯರು ಇರಲಿಲ್ಲ. ಅವರ ಮಡದಿ ಭಾರತಿ ಮೇಡಂ ಅದೇ ಪ್ರೀತಿಯಿಂದ ಪುಸ್ತಕಗಳನ್ನು ಕೊಟ್ಟು ಮಾರ್ಗದರ್ಶನ ನೀಡಿದರು. ಹೀಗೆ ನಾನು ಶೇಷಗಿರಿರಾಯರ ಬಗ್ಗೆ ಮೂರು ಪುಸ್ತಕಗಳನ್ನು ಬರೆದೆ. ಮೂರೂ ಭಿನ್ನವಾಗಿರುವುದರ ಜೊತೆಗೆ ಈ ಕುರಿತ ಅಧ್ಯಯನ ನನ್ನನ್ನು ಬೆಳೆಸಿತು. ಇದೂ ಒಂದು ರೀತಿಯಲ್ಲಿ ಶೇಷಗಿರಿರಾಯರು ನನ್ನ ಮೇಲಿಟ್ಟಿದ್ದ ಪ್ರೀತಿಯ ಕುರುಹು ಎನ್ನಬಹುದೇನೋ!
– ೨ –
ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ಹಿರಿಯರು ಮಹಾರಾಷ್ಟçದ ಮೂಲದವರು. ದೇಶಪಾಂಡೆ ಮನೆತನದವರು. ಅಲ್ಲಿನ ರಾಜ ಮನೆತನದಲ್ಲಿ ಆಡಳಿತ ಸಲಹೆಗಾರರಾಗಿ ಗೌರವಾನ್ವಿತ ಹುದ್ದೆಯಲ್ಲಿ ಇದ್ದವರು. ಕ್ರಮೇಣ ಈ ರಾಜಮನೆತನಗಳು ಇತಿಹಾಸದ ಚಕ್ರದ ಅಡಿಯಲ್ಲಿ ಸಿಕ್ಕು ಮರೆಯಾಗುತ್ತಹೋದವು. ಅನಂತರ ಸುಮಾರು ಮುನ್ನೂರು ವರ್ಷಗಳ ಹಿಂದೆ ಶೇಷಗಿರಿರಾಯರ ಪೂರ್ವಜರು ಧಾರವಾಡ ಜಿಲ್ಲೆಯ ರಿತ್ತಿ ಮತ್ತು ಲಕ್ಷ್ಮೇಶ್ವರಗಳಲ್ಲಿ ನಿಂತರು. ಅದರಲ್ಲಿಯೂ ಶೇಷಗಿರಿರಾಯರ ನಿಕಟ ಪೂರ್ವಜರು ನೆಲೆ ನಿಂತಿದ್ದು ಈಗ ಹಾವೇರಿ ಜಿಲ್ಲೆಯಲ್ಲಿರುವ ಲಕ್ಷ್ಮೇಶ್ವರದಲ್ಲಿ. ಈ ಊರನ್ನು ‘ಕವಿರಾಜಮಾರ್ಗ’ದಲ್ಲಿ ‘ಕನ್ನಡದ ತಿರುಳ್’ ಎಂದು ಕರೆಯಲಾಗಿದೆ ಎಂದು ಶೇಷಗಿರಿರಾಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
ಶೇಷಗಿರಿರಾಯರ ಮುತ್ತಾತನ ಕಾಲಕ್ಕೆ ಈ ಕುಟುಂಬ ಬೆಂಗಳೂರಿಗೆ ಬಂದಿತು. ಇವರ ತಾತ ರಾಘವೇಂದ್ರ ರಾಯರು ಸೇನಾ ಇಲಾಖೆಯಲ್ಲಿ ಮುಖ್ಯ ಗುಮಾಸ್ತರಾಗಿದ್ದರು. ಅವರಿಗೆ ಸ್ವಾಮಿರಾವ್ ಮತ್ತು ರಾಮರಾವ್ ಇಬ್ಬರು ಮಕ್ಕಳು. ಅವರಲ್ಲಿ ಹಿರಿಯವರಾದ ಸ್ವಾಮಿರಾವ್ ಅವರೇ ಶೇಷಗಿರಿರಾಯರ ತಂದೆ. ತಮ್ಮ ತಂದೆಯನ್ನು ಶೇಷಗಿರಿರಾಯರು ಸ್ಮರಿಸಿಕೊಂಡಿದ್ದು ಹೀಗೆ:
“ನನ್ನ ತಂದೆ ಲಕ್ಷ್ಮೇಶ್ವರ ಸ್ವಾಮಿರಾಯರು ಪ್ರಸಿದ್ಧ ಅಧ್ಯಾಪಕರು, ನಾನೂ ಅವರ ವಿದ್ಯಾರ್ಥಿ. ಮಾಧ್ಯಮಿಕ ಶಾಲೆಯಲ್ಲಿ ಬಹು ಕಟ್ಟುನಿಟ್ಟು ಎಂದು ಪ್ರಸಿದ್ಧಿ. ಅಗತ್ಯವೆನ್ನಿಸಿದಾಗ ಬೆತ್ತವನ್ನೂ ಕೂಡ ಬಳಸುವಷ್ಟು ಕಟ್ಟುನಿಟ್ಟಿನವರು. ಆದರೆ ವಿದ್ಯಾರ್ಥಿಗಳ ಕುರಿತು ಅಷ್ಟೇ ಪ್ರೀತಿಯನ್ನು ಇಟ್ಟುಕೊಂಡಿದ್ದರು. ಅವಿಭಕ್ತ ಕುಟುಂಬದ ಹಿರಿಯರಾದ ಸ್ವಾಮಿರಾಯರಿಗೆ ಬಹುಬೇಗ ಕುಟುಂಬನಿರ್ವಹಣೆಯ ಹೊಣೆಗಾರಿಕೆ ಹೆಗಲಿಗೇರಿತು. ಕಾಲೇಜಿನಲ್ಲಿ ಓದುವಾಗಲೇ ಮನೆಯ ಆರ್ಥಿಕ ಒತ್ತಡದಿಂದಾಗಿ ಒಂದು ವರ್ಷದ ಶಿಕ್ಷಣವನ್ನು ಕೈಬಿಟ್ಟು ನೌಕರಿ ಮಾಡಿ ತಮ್ಮ ತಂದೆಗೆ ನೆರವಾದರು. ಮುಂದಿನ ವರ್ಷ ಮತ್ತೆ ಕಾಲೇಜು ಸೇರಿ ಪದವಿ ಮುಗಿಸಿದರು. ಇದೇ ಸಮಯದಲ್ಲಿ ಇವರ ತಮ್ಮ ರಾಮರಾಯರ ವಿದ್ಯಾಭ್ಯಾಸ ಸಾಗುತ್ತಿತ್ತು. ತಮ್ಮನ ವಿದ್ಯಾಭ್ಯಾಸಕ್ಕೂ ಅವರು ಸಾಕಷ್ಟು ಬೆಂಬಲ ನೀಡಿದರು. ಇಂತಹ ಸವಾಲುಗಳ ನಡುವೆ ಸ್ವಾಮಿರಾಯರ ಖಾಸಗಿ ಬದುಕು ಸರಾಗವಾಗಿ ಸಾಗಲಿಲ್ಲ. ಮೊದಲ ಪತ್ನಿ ಅನಾರೋಗ್ಯಪೀಡಿತರಾಗಿ ಹರೆಯದಲ್ಲಿಯೇ ಸಾವನ್ನಪ್ಪಿದರು. ಎರಡು ಎಳೆ ಹೆಣ್ಣುಮಕ್ಕಳ ಪೋಷಣೆಯ ದೃಷ್ಟಿಯಿಂದ ಮರುಮದುವೆ ಅನಿವಾರ್ಯವಾಯಿತು. ಅವರ ಎರಡನೇ ಮಡದಿಯಾಗಿ ಬಂದ ಕಮಲಾಬಾಯಿ ಸೇಲಂನವರು. ಇವರಿಗೆ ಶಾಲಾ ವಿದ್ಯಾಭ್ಯಾಸ ಹೆಚ್ಚಿರದಿದ್ದರೂ ಓದುವ ಮತ್ತು ಬರೆಯುವ ಆಸಕ್ತಿ ಇತ್ತು. ತಮಿಳು ಭಾಷೆಯ ಹಿನ್ನೆಲೆಯಿಂದ ಬಂದಿದ್ದರೂ ಅವರು ಕನ್ನಡ ಮತ್ತು ಮರಾಠಿಯನ್ನು ಚೆನ್ನಾಗಿ ಮಾತನಾಡಬಲ್ಲವರಾಗಿದ್ದರು. ಅವರ ಕಂಠವೂ ಬಹಳ ಚೆನ್ನಾಗಿತ್ತು. ಸುಮಧುರವಾಗಿ ತಮ್ಮಷ್ಟಕ್ಕೆ ಹಾಡುತ್ತ ಗೃಹಕೃತ್ಯವನ್ನು ನೆರವೇರಿಸುತ್ತಿದ್ದರು. ಇವರ ಸುಪುತ್ರರಾಗಿ ಶೇಷಗಿರಿರಾಯರು ೧೯೨೫ನೇ ಇಸವಿ ಫೆಬ್ರುವರಿ ೧೬ರಂದು ಜನಿಸಿದರು. ಈ ಕಾಲದಲ್ಲಿ ಸ್ವಾಮಿರಾಯರು ದೊಡ್ಡಬಳ್ಳಾಪುರದಲ್ಲಿ ಸ್ಕೂಲ್ ಇನ್ಸ್ಪೆಕ್ಟರ್ ಆಗಿದ್ದರು. ಗಂಡು ಮಗು ಬೇಕು ಎಂದು ಹಂಬಲಿಸುತ್ತಿದ್ದ ದಂಪತಿಗಳು ಘಾಟಿ ಸುಬ್ರಹ್ಮಣ್ಯಕ್ಕೆ ಹರಕೆ ಹೊತ್ತ ನಂತರ ಜನಿಸಿದ ಮಗುವಾದ್ದರಿಂದ ಪುತ್ರನಿಗೆ ಮೊದಲೇ ನಿರ್ಧರಿಸಿದ್ದಂತೆ “ಶೇಷಗಿರಿ” ಎಂಬ ಹೆಸರನ್ನು ಇಟ್ಟರು.” ಬಹುಕಾಲದ ನಂತರ ಜನಿಸಿದ ಮಗುವಾದ್ದರಿಂದ ಅಕ್ಕಂದಿರೂ ಕೂಡ ತಾಯಿಯಂತೆಯೇ ಪಾಲನೆ ಮಾಡಿದರು. ಈ ಕುರಿತು ಶೇಷಗಿರಿರಾಯರು ಹೀಗೆ ಹೇಳುತ್ತಿದ್ದರು – “ಅಕ್ಕಂದಿರು, ಭಾವಂದಿರ ವಿಷಯದಲ್ಲಿ ನಾನು ಭಾಗ್ಯಶಾಲಿ. ನನ್ನನ್ನು ತುಂಬ ಪ್ರೀತಿಯಿಂದ ಕಂಡರು, ಕಷ್ಟ ಕಾಲದಲ್ಲಿ ನೆರವಾದರು. ಅವರೆಲ್ಲರ ಮಕ್ಕಳೂ ಅಳಿಯಂದಿರೂ ಇಂದಿಗೂ ಅದೇ ಪ್ರೀತಿ ತೋರಿದರು.” ಬಾಲ್ಯದಲ್ಲಿ ಶೇಷಗಿರಿರಾಯರ ಮೇಲೆ ಪ್ರಭಾವ ಬೀರಿದ ಇನ್ನೊಬ್ಬ ವ್ಯಕ್ತಿ ಎಂದರೆ ಅವರ ತಂದೆಯ ಚಿಕ್ಕಮ್ಮ ಜೀವೋಬಾಯಿ.
ಶೇಷಗಿರಿರಾಯರು ಪ್ರಾಥಮಿಕ ಮಟ್ಟದ ವಿದ್ಯಾಭ್ಯಾಸವನ್ನು ಆರಂಭಿಸುವ ಹೊತ್ತಿಗೆ ಸ್ವಾಮಿ ರಾಯರು ಕಡೂರಿನಲ್ಲಿ ಇದ್ದರು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ಬರುವುದು ಸೂಕ್ತ ಎಂದು ಅವರಿಗೆ ಅನ್ನಿಸಿತು. ಅವರ ಬೇಡಿಕೆಯನ್ನು ಸರ್ಕಾರವೂ ಮಾನ್ಯ ಮಾಡಿತು. ಬೆಂಗಳೂರಿಗೇನೋ ಬಂದರು, ಆದರೆ ವಾಸಕ್ಕೆ ಮನೆ ಸಿಕ್ಕಲಿಲ್ಲ, ಆದರೆ ಜನಾನುರಾಗಿಯಾದ ಸ್ವಾಮಿರಾಯರಿಗೆ ಇದು ಸಮಸ್ಯೆಯೇ ಆಗಲಿಲ್ಲ. ಅವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಚಿನ್ನಸ್ವಾಮಿಶೆಟ್ಟರು ತಮ್ಮದೇ ಆದ ‘ಪೋಲೆಪಲ್ಲಿ ಸುಬ್ಬಯ್ಯಶೆಟ್ಟಿ ಛತ್ರ’ದಲ್ಲಿ ಕುಟುಂಬಸಮೇತ ಇರಲು ಹೇಳಿದರು. ಹೀಗೆ ಒಂದಲ್ಲ ಎರಡಲ್ಲ ಆರು ತಿಂಗಳ ಕಾಲ ಸ್ವಾಮಿರಾಯರ ಸಂಸಾರದ ವಾಸ ಛತ್ರದಲ್ಲಿ ಸಾಗಿತು. ಸ್ವಾಮಿರಾಯರು ಮಲ್ಲೇಶ್ವರಂನ ಮಿಡ್ಲಸ್ಕೂಲ್ನಲ್ಲಿ ಅಧ್ಯಾಪಕರು. ಛತ್ರದಿಂದ ಅದು ಬಲು ದೂರ. ಹತ್ತಿರದಲ್ಲಿ ಬೇರೆ ಯಾವ ಶಾಲೆಗಳೂ ಕೂಡ ಇರಲಿಲ್ಲ. ಇದರಿಂದ ಎದೆಗುಂದದ ಸ್ವಾಮಿರಾಯರು ಆಗ ಶಿಕ್ಷಣ ಇಲಾಖೆಯಲ್ಲಿ ಇದ್ದ ವಿಶಿಷ್ಟ ನಿಯಮವನ್ನು ಬಳಸಿ ಮನೆಯಲ್ಲಿಯೇ ಮಗನಿಗೆ ಪಾಠ ಮಾಡಿ ನೇರವಾಗಿ ಮಿಡ್ಲಸ್ಕೂಲ್ ಮೊದಲನೆಯ ವರ್ಷದ ಪರೀಕ್ಷೆಗೆ ಕಟ್ಟಿಸಿದರು. ಹೀಗಾಗಿ ಶೇಷಗಿರಿರಾಯರು ಪ್ರಾಥಮಿಕ ಹಂತದ ಎರಡು ವರ್ಷಗಳನ್ನು ಶಾಲೆಗೆ ಹೋಗದೆಯೇ ಮುಗಿಸಿದರು. ಇದರಿಂದ ಅವರು ಏಳನೇ ವಯಸ್ಸಿಗಾಗಲೇ ಮಾಧ್ಯಮಿಕ ಶಾಲೆಯಲ್ಲಿ ಇದ್ದರು. ಆಗ ಅವರ ತರಗತಿಯ ವಿದ್ಯಾರ್ಥಿಗಳೆಲ್ಲರೂ ಇವರಿಗಿಂತ ಸರಿಸುಮಾರು ಎರಡು ವರ್ಷಕ್ಕೆ ದೊಡ್ಡವರಾಗಿದ್ದರು.
ಶೇಷಗಿರಿರಾಯರ ಆನರ್ಸ್ ತರಗತಿಯಲ್ಲಿದ್ದವರು ಅವರನ್ನು ಸೇರಿಸಿ ಆರು ಜನ. ಸೂರ್ಯನಾರಾಯಣ ರಾವ್, ಸಿ.ಡಿ. ಸಿದ್ದಯ್ಯ, ಕೃಷ್ಣಅಯ್ಯರ್ ಇವರು ವಿದ್ಯಾರ್ಥಿಗಳಾದರೆ ಶಾಂತ ಕಡಾಂಬಿ ಮತ್ತು ಮಿರ್ಜಾ ಬೇಗಂ ವಿದ್ಯಾರ್ಥಿನಿಯರು. ಎಲ್ಲರೂ ಪ್ರತಿಭಾವಂತರೇ. ಇದರಿಂದ ಆನರ್ಸ್ ಅಧ್ಯಯನ ಸಂತೋಷದಾಯಕವಾಗಿದ್ದಿತು. ಜೊತೆಗೆ ಘಟಾನುಘಟಿಗಳೇ ಪ್ರಾಧ್ಯಾಪಕರು. ಬಿ.ಎಂ.ಶ್ರೀಯವರ ಪ್ರಭಾವ ಕೂಡ ಕಡಮೆಯೇನಲ್ಲ. ಗ್ರೀಕ್ ದುರಂತ ನಾಟಕಗಳ ಕುರಿತು ಅದರಲ್ಲಿಯೂ ಈಸ್ಕಲಸ್ ಕುರಿತು ಮಾಡಿದ ಪಾಠ ರಾಯರ ಮನಸ್ಸಿನಲ್ಲಿ ಅಚ್ಚು ಒತ್ತಿದಂತೆ ಉಳಿದುಕೊಂಡಿತು. ಇದು ಮುಂದೆ ರಾಯರು ಗ್ರೀಕ್ ನಾಟಕಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಪ್ರೇರಣೆಯನ್ನು ನೀಡಿತು. ಶೇಷಗಿರಿರಾಯರ ಮೇಲೆ ಪ್ರಭಾವ ಬೀರಿದ ಉಳಿದ ಅಧ್ಯಾಪಕರು ಎಂದರೆ ಎಸ್.ವಿ. ರಂಗಣ್ಣ ಮತ್ತು ಕೆ. ಅನಂತರಾಮಯ್ಯ. ಶೇಷಗಿರಿರಾಯರ ಮಾತಿನಲ್ಲಿಯೇ ಹೇಳುವುದಾದರೆ “ಅವರು ತಮ್ಮ ವ್ಯಾಪಕ ವಿದ್ವತ್ತಿನ ಸಾರವನ್ನೆಲ್ಲ ತರಗತಿಗಳಲ್ಲಿ ಉಪನ್ಯಾಸಗಳ ಮೂಲಕ ತೇಲಿಬಿಡುತ್ತಿದ್ದರು”. ಇನ್ನು ಕನ್ನಡ ಅಧ್ಯಾಪಕರಾಗಿದ್ದ ವಿ.ಸೀ. ಮತ್ತು ರಾಜರತ್ನಂ ಅವರೂ ತಮ್ಮ ಪ್ರವಚನ ಮಾದರಿಯಿಂದ ಇವರ ಮೇಲೆ ಪ್ರಭಾವ ಬೀರಿದರು. ಶೇಷಗಿರಿರಾಯರ ವಿದ್ಯಾರ್ಥಿಜೀವನದಲ್ಲಿ ನೇರ ಅಧ್ಯಾಪಕರಾಗದಿದ್ದರೂ ಪ್ರಭಾವ ಬೀರಿದ ಹಲವು ಮಹನೀಯರು ಇದ್ದಾರೆ. ಅವರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ಮ್ಯಾಕಿಂಟಾಷ್ ಪ್ರಮುಖರಾದವರು. ಎಂ.ಎ. ಅಧ್ಯಯನ ಇನ್ನೂ ಎರಡು ತಿಂಗಳ ಕಾಲ ಜರುಗಿತ್ತು ಅಷ್ಟೇ. ಆಗ ಶೇಷಗಿರಿರಾಯರ ಬದುಕಿನಲ್ಲಿ ಇನ್ನೊಂದು ತಿರುವು ಸಂಭವಿಸಿತು. ಅನರ್ಸ್ ಫಲಿತಾಂಶ ಬಂದ ಮೇಲೆ ಜರುಗಿದ ಯೂನಿವರ್ಸಿಟಿ ‘ಪದವಿ ಪ್ರದಾನ’ ಸಮಾರಂಭದಲ್ಲಿ ಎರಡು ಚಿನ್ನದ ಪದಕವನ್ನು ಪಡೆದ ಅವರು ಎಲ್ಲರ ಗಮನ ಸೆಳೆದರು. ಸ್ವತಃ ವೈಸ್ ಛಾನ್ಸಲರ್ ಸಿಂಗಾರವೇಲು ಮೊದಲಿಯಾರ್ ಅವರ ಕುರಿತು ವಿಚಾರಿಸಿಕೊಂಡು ತಮ್ಮ ಸಹೋದ್ಯೋಗಿ ಪ್ರೊ. ಈಗಲ್ಟನ್ ಅವರ ಬಳಿ ‘He must be on the University staff. He can do his M.A. later. Take him; snaps him up’ ಎಂದು ಉದ್ಗರಿಸಿ ರಾಯರಿಗೆ ಹೇಳಿ ಕಳುಹಿಸಿದರು. ವೈಸ್ ಛಾನ್ಸಲರ್ ಅವರೇ ಹೇಳಿ ಕಳುಹಿಸಿದ್ದು ರಾಯರನ್ನು ಗೊಂದಲದಲ್ಲಿ ಸಿಲುಕಿಸಿತು. ಅವರಿಗೆ ಎಂ.ಎ. ಅಧ್ಯಯನವನ್ನು ಮುಂದುವರಿಸುವ ಉದ್ದೇಶ ಇತ್ತು. ಆದರೆ ಪ್ರೊ. ಈಗಲ್ಟನ್ ಎಂ.ಎ., ಪಿಎಚ್.ಡಿ ಮಾಡಿರುವ ಪದವೀಧರರೇ ಉದ್ಯೋಗಕ್ಕೆ ಅಲೆದಾಡುತ್ತಿರುವ ಪರಿಸ್ಥಿತಿಯನ್ನು ವಿವರಿಸಿ, ಸಿಕ್ಕಿರುವ ಅವಕಾಶವನ್ನು ಬಿಡಬಾರದು ಎಂದು ಅವರನ್ನು ಓಲೈಸಿದರು. ಜೊತೆಗೆ ಮನೆಯ ಪರಿಸ್ಥಿತಿ ಕೂಡ ಕಷ್ಟಕರವಾಗಿದ್ದಿದ್ದರಿಂದ ಶೇಷಗಿರಿರಾಯರಿಗೂ ಅದು ಸರಿ ಎನ್ನಿಸಿತು. ಆದರೆ ತಂದೆಯವರಿಗೆ ಮಗ ಹೀಗೆ ಓದನ್ನು ನಿಲ್ಲಿಸಿ ಮನೆಯ ಪರಿಸ್ಥಿತಿಯ ಕಾರಣದಿಂದ ಕೆಲಸಕ್ಕೆ ಸೇರುತ್ತಿರುವುದು ಇಷ್ಟವಿರಲಿಲ್ಲ. ಶೇಷಗಿರಿರಾಯರು ಅವರ ಮನಸ್ಸನ್ನು ಗೆಲ್ಲುವಲ್ಲಿ ಸಫಲರಾದರು. ಹೀಗೆ ಅವರ ಬದುಕು ಇನ್ನೊಂದು ತಿರುವಿಗೆ ಸಿದ್ಧವಾಯಿತು. ಅಧ್ಯಾಪಕರಾದಾಗ ಅವರಿಗೆ ಇನ್ನೂ ೧೯ ವರ್ಷ ಅಷ್ಟೆ!
ಬೆಂಗಳೂರಿನ ಇಂಟರ್ಮೀಡಿಯಟ್ ಕಾಲೇಜ್, ಮಡಿಕೇರಿ ಮತ್ತು ಕೋಲಾರಗಳಲ್ಲಿ ಶೇಷಗಿರಿರಾಯರು ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ೧೯೬೭-೬೮ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಧ್ಯಾಪಕರ ಹುದ್ದೆಗೆ ಅರ್ಜಿಯನ್ನು ಕರೆಯಿತು. ಈಗಾಗಲೇ ಶೇಷಗಿರಿರಾಯರು ೨೪ ವರ್ಷ ಸೇವೆ ಸಲ್ಲಿಸಿದರು. ವಿಶ್ವವಿದ್ಯಾಲಯ ಸೇರಿದ ಮೇಲೆ ಇನ್ನು ೧೮ ವರ್ಷ ಮಾತ್ರ ಸೇವೆ ಸಲ್ಲಿಸಲು ಸಾಧ್ಯವಿತ್ತು. ಈ ಎಲ್ಲ ಅಂಶವನ್ನು ಯೋಚಿಸಿ ಏಳು ಮುಂಬಡ್ತಿ ನೀಡಿದರೆ ಮಾತ್ರ ಸೇವೆಗೆ ಬರುವುದಾಗಿ ಶೇಷಗಿರಿರಾಯರು ಷರತ್ತನ್ನು ಒಡ್ಡಿದರು. ವಿಶ್ವವಿದ್ಯಾಲಯದಲ್ಲಿ ‘ಶೈಲಿ’ ಶಾಸ್ತ್ರವನ್ನು ಬೋಧಿಸಲು ಪರಿಣತರ ಅನಿವಾರ್ಯತೆ ಇತ್ತು. ಹೀಗಾಗಿ ಹಲವು ಸುತ್ತಿನ ಚರ್ಚೆಯ ನಂತರ ಅವರ ಷರತ್ತುಗಳನ್ನು ಅಂಗೀಕರಿಸಲಾಯಿತು.
ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿದ ನಂತರ ಶೇಷಗಿರಿರಾಯರು ಸಾಹಿತ್ಯಲೋಕದ ಕೇಂದ್ರಕ್ಕೆ ಬಂದರು. ಎಂ.ಎ. ತರಗತಿಗಳಿಗೆ ಪಾಠ ಹೇಳುವುದು, ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದು ಹೀಗೆ ಎಂದೋ ದೊರಕಬೇಕಾಗಿದ್ದ ಗೌರವಗಳು ಅವರಿಗೆ ದೊರಕಿದವು. ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯವೂ ಸೇರಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿ, ಇಂಡಿಯನ್ ರೈಟರ್ಸ್ ಅಸೋಸಿಯೇಷನ್, ರಾಷ್ಟ್ರೋತ್ಥಾನ ಪರಿಷತ್ ಮೊದಲಾದ ಬೃಹತ್ ಸಂಸ್ಥೆಗಳ ಕೆಲಸಗಳಲ್ಲಿ ಭಾಗಿಯಾಗುವುದು ಅವರಿಗೆ ಸಾಧ್ಯವಾಯಿತು. ಡಾ. ಜಿ.ಎಸ್. ಶಿವರುದ್ರಪ್ಪನವರು ರೂಪಿಸಿದ ಹಲವು ಮಹತ್ತ್ವದ ವಿಚಾರ ಸಂಕಿರಣಗಳ ಹಿಂದಿನ ಬೆನ್ನೆಲುಬಾಗಿ ಅವರು ಕೆಲಸ ಮಾಡಿದರು.
ಸ್ನಾತಕೋತ್ತರ ತರಗತಿಗಳಿಗೆ ಪಾಠ ಮಾಡುವಾಗಲೂ ತಮ್ಮ “ಮೇಷ್ಟ್ರಗಿರಿ”ಯನ್ನು ರಾಯರು ಉಳಿಸಿಕೊಂಡರು. ಅವರ ವಿದ್ಯಾರ್ಥಿನಿಯಾಗಿದ್ದ ಡಾ. ವನಮಾಲಾ ವಿಶ್ವನಾಥ್ ಅವರು ಹೇಳುವಂತೆ “ಬೆಟ್ಟದಷ್ಟು ಗೊತ್ತಿದ್ದರೂ ಪ್ರತಿ ವಿದ್ಯಾರ್ಥಿಯ ಮಿತಿಯನ್ನು ಅರಿತು ಅಷ್ಟನ್ನು ಮಾತ್ರ ಮನದಟ್ಟು ಮಾಡಿಸುವ ಕಲೆ ಅವರಿಗೆ ಕರಗತ”. ಪಿಎಚ್.ಡಿ.ಗೆ ಮಾರ್ಗದರ್ಶನ ಮಾಡುವಾಗಲೂ ತಮ್ಮ ವಿದ್ಯಾರ್ಥಿಗಳು ಜ್ಞಾನಭಾರತಿಯಷ್ಟು ದೂರ ಹೋಗಬೇಕು ಎಂದು ಅಪೇಕ್ಷೆಪಟ್ಟವರೇ ಅಲ್ಲ. ಎಲ್ಲ್ಲ ಚರ್ಚೆಗಳು, ಮಾರ್ಗದರ್ಶನ ಅವರ ಮನೆಯಲ್ಲಿ ಅದೂ ಸ್ವಾದಿಷ್ಟ ತಿಂಡಿ-ಕಾಫಿಯ ಆತಿಥ್ಯದೊಂದಿಗೆ. ಸಂಶೋಧನೆ ಮಾಡಲು ಬುದ್ಧಿಗೆ ಮಾತ್ರವಲ್ಲ ದೇಹಕ್ಕೂ ಶಕ್ತಿ ಬೇಕು ಎಂದು ನಂಬಿದವರು ಅವರು. ಸಂಶೋಧನೆ ಕಗ್ಗಂಟಾದಾಗ, ಸಂಸಾರ ತಾಪತ್ರಯದಲ್ಲಿ ಆಗಬೇಕಾದ ಕೆಲಸ ಆಗದೆ ಹೋದಾಗ, ಥೀಸಿಸ್ ಟೈಪ್ ಮಾಡಿಸಲು ಹಣವಿಲ್ಲದೆ ಹೋದಾಗ – ಎಲ್ಲ ಸಂದರ್ಭದಲ್ಲಿಯೂ ಅಕ್ಷರಶಃ ಮಾರ್ಗದರ್ಶಕರಾಗಿ ಅವರು ವಿದ್ಯಾರ್ಥಿಗಳನ್ನು ನಡೆಸಿಕೊಂಡರು. ೧೯೮೫ರಲ್ಲಿ ನಿವೃತ್ತರಾಗುವವರೆಗೂ ಈ ಕೈಂಕರ್ಯ ನಡೆಯಿತು. ನಿವೃತ್ತಿಯ ನಂತರವೂ ಮಾರ್ಗದರ್ಶನದ ಸೌಲಭ್ಯ ಎಲ್ಲರಿಗೂ ದೊರಕುತ್ತಲೇ ಬಂದಿತು. ಇದರ ಲಾಭವನ್ನು ಪಡೆದವರಲ್ಲಿ ನಾನೂ ಕೂಡ ಒಬ್ಬನು. ಕೊನೆಯವರೆಗೂ ಶೇಷಗಿರಿರಾಯರು ಇದ್ದಿದ್ದು ಅಧ್ಯಾಪಕರಾಗಿಯೇ; ಅದರಲ್ಲಿಯೂ ಅವರೇ ವರ್ಣಿಸಿಕೊಂಡAತೆ “ಇಂಗ್ಲಿಷ್ ಅಧ್ಯಾಪಕರಾಗಿ”. ಅವರ ಮಟ್ಟಿಗೆ ಕನ್ನಡ ವಿಮರ್ಶೆ-ವಿಶ್ಲೇಷಣೆ ಬೆಳೆಯಲು ಜಗತ್ತಿನ ಸಾಹಿತ್ಯದ ಅರಿವು ಬೇಕೇಬೇಕು. ಜೀವನವನ್ನು ಹೊಸ ರೀತಿಯಿಂದ ನೋಡುವುದನ್ನು, ನಮ್ಮ ಪರಂಪರೆಯನ್ನು ಹೊಸ ನೆಲೆಯಿಂದ ಗ್ರಹಿಸುವುದನ್ನೂ ಇಂಗ್ಲಿಷಿನ ಮೂಲಕ ದಕ್ಕಿದ ಜಗತ್ತಿನ ಸಾಹಿತ್ಯ ದೊರಕಿಸಿಕೊಟ್ಟಿದೆ.
ಭಾರತ–ಭಾರತಿ ನೇತಾರರಾಗಿ
ಶೇಷಗಿರಿರಾಯರು ಪ್ರಧಾನ ಸಂಪಾದಕರಾಗಿ ಪ್ರಮುಖ ಪಾತ್ರ ವಹಿಸಿದ ಒಂದು ಮುಖ್ಯವಾದ ಯೋಜನೆ ಎಂದರೆ ರಾಷ್ಟ್ರೋತ್ಥಾನ ಪರಿಷತ್ನವರ “ಭಾರತ-ಭಾರತಿ ಪುಸ್ತಕ ಸಂಪದ”. ಈ ಮಾಲಿಕೆಯ ಪ್ರಧಾನ ಸಂಪಾದಕರಾಗಿ ಶೇಷಗಿರಿರಾಯರು ಬಹಳ ಮುಖ್ಯವಾದ ಕೊಡುಗೆಯನ್ನು ನೀಡಿದರು. ಭಾರತದ ಸಹಸ್ರಾರು ವರ್ಷದ ಪರಂಪರೆಯಲ್ಲಿ ಬಂದ ಮಹಾಪುರುಷರು, ವಿದ್ವಾಂಸರು, ರಾಜಕೀಯ ನೇತಾರರು, ವಿಜ್ಞಾನಿಗಳು, ಬರಹಗಾರರು, ಕಲಾಕ್ಷೇತ್ರದ ದಿಗ್ಗಜರು, ಕ್ರೀಡಾ ಜಗತ್ತಿನ ಕಣ್ಮಣಿಗಳು ಎಲ್ಲರೂ ಈ ಮಾಲಿಕೆಯಲ್ಲಿ ಬರಬೇಕು, ಮಾಹಿತಿಯು ಬಾಲಕ-ಬಾಲಕಿಯರಿಗೆ ಎಟಕುವಂತೆ ಇದ್ದು, ಆಕರ್ಷಕ ಚಿತ್ರಗಳೊಂದಿಗೆ ಅಧಿಕೃತ ಮಾಹಿತಿಗಳೊಂದಿಗೆ ಬರಬೇಕು – ಎಂದು ಶೇಷಗಿರಿರಾಯರು ನಿರ್ಧರಿಸಿದರು. ನಾಡಿನ ಖ್ಯಾತ ಬರಹಗಾರರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ. ಬೇಂದ್ರೆ, ಸ.ಸ. ಮಾಳವಾಡ ಮೊದಲಾದವರಿಂದ ಈ ಮಾಲಿಕೆಗೆ ತಮಗಿದ್ದ ಸಂಪರ್ಕದ ಕಾರಣದಿಂದ ಬರೆಸುವಲ್ಲಿ ಶೇಷಗಿರಿರಾಯರು ಯಶಸ್ವಿಯಾದರು. ಮೊದಲ ಮುದ್ರಣದಲ್ಲಿ ಹತ್ತು ಸಾವಿರ ಪ್ರತಿಗಳನ್ನು ಮಾತ್ರ ಅಚ್ಚು ಹಾಕಲಾಗುತ್ತಿತ್ತು. ಇದು ಕೇವಲ ಎರಡು-ಮೂರು ವಾರಗಳಲ್ಲಿಯೇ ಪೂರ್ತಿ ಖಾಲಿಯಾಗಿ ಮರುಮುದ್ರಣಕ್ಕೆ ಬೇಡಿಕೆ ಬರುತ್ತಿತ್ತು. ಈ ಪುಸ್ತಕಗಳು ಭಾರತದಲ್ಲಿ ಮಾತ್ರವಲ್ಲದೆ, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಜರ್ಮನಿ ಮೊದಲಾದ ದೇಶಗಳಲ್ಲಿ ಕೂಡ ಜನಪ್ರಿಯವಾದವು.
ಭಾರತ-ಭಾರತಿ ಪುಸ್ತಕಗಳ ಕುರಿತು ಕೆಲವು ಸ್ವಾರಸ್ಯಕರ ಪ್ರಸಂಗಗಳಿವೆ. ಕಮಲಾ ನೆಹರು ಅವರ ಕುರಿತು ಪುಸ್ತಕ ಸಿದ್ಧವಾಗುತ್ತಿದ್ದಾಗ ಒಂದು ಮಾಹಿತಿ ಕುರಿತು ಅನುಮಾನ ಬಂದಿತು. ಶೇಷಗಿರಿರಾಯರ ಬಾಲ್ಯ ಸ್ನೇಹಿತರೂ ಮತ್ತು ಕಮಲಾ ನೆಹರು ಅವರ ಮಗಳು ಆಗಿನ ಪ್ರಧಾನಿ ಇಂದಿರಾಗಾಂಧಿಯವರ ಪತ್ರಿಕಾ ಕಾರ್ಯದರ್ಶಿಗಳೂ ಆದ ಎಚ್.ವೈ. ಶಾರದಾ ಪ್ರಸಾದ್ ಅವರಿಂದ ಮಾಹಿತಿ ಕೇಳಿ ಪತ್ರ ಬರೆದರು. ಮಾಹಿತಿ ವಿಳಂಬವಾಯಿತು. ಪ್ರತಿ ತಿಂಗಳ ಹತ್ತನೇ ತಾರೀಖು ಒಂದು ಸೆಟ್ ಸಿದ್ಧವಾಗಲೇಬೇಕಾಗಿದ್ದರಿಂದ ಮುದ್ರಣ ಮುಂದುವರಿಯಿತು. ಪುಸ್ತಕ ಸಿದ್ಧವಾಗಿ ಬಿಡುಗಡೆ ಆಗಬೇಕು ಎನ್ನುವಷ್ಟರಲ್ಲಿ ಮಾಹಿತಿ ಬಂದಿತು. ದೊರೆತ ಮಾಹಿತಿ ಮತ್ತು ಪುಸ್ತಕದಲ್ಲಿ ಇದ್ದ ಮಾಹಿತಿ ಭಿನ್ನವಾಗಿತ್ತು. ಕೂಡಲೇ ಮುದ್ರಿತವಾಗಿದ್ದ ಫಾರಂ ಅನ್ನು ನಾಶ ಮಾಡಿ ಸರಿಯಾದ ಮಾಹಿತಿಯೊಂದಿಗೆ ಮರುಮುದ್ರಿಸಿ ಪುಸ್ತಕವನ್ನು ನಿಗದಿತ ದಿನದಂದೇ ಬಿಡುಗಡೆ ಮಾಡಲಾಯಿತು. ಇದು ಶೇಷಗಿರಿರಾಯರು ಮಾಹಿತಿಯ ನಿಖರತೆಗೆ ನೀಡುತ್ತಿದ್ದ ಮಹತ್ತ್ವಕ್ಕೆ ಒಂದು ಉದಾಹರಣೆ.
ಇನ್ನೊಮ್ಮೆ ಶ್ರೀಕೃಷ್ಣನ ಕುರಿತು ಪ್ರಕಟವಾದ ಪುಸ್ತಕದಲ್ಲಿ ಆತ ಮೊದಲು ಕಾಣಿಸಿಕೊಳ್ಳುವುದು ದ್ರೌಪದಿ ಸ್ವಯಂವರದಲ್ಲಿ ಎನ್ನುವ ಮಾಹಿತಿ ಇತ್ತು. ಈ ಕುರಿತು ಒಂದು ವರ್ಗದಿಂದ ಆಕ್ಷೇಪ ಬಂದಿತು. ಪುಸ್ತಕ ಹಿಂದೆಗೆದುಕೊಳ್ಳದಿದ್ದರೆ ಪ್ರತಿಭಟನೆ ಮಾಡುವ ಬೆದರಿಕೆ ಕೂಡ ಬಂದಿತು. ಆಗ ಶೇಷಗಿರಿರಾಯರು ಎ.ಆರ್. ಕೃಷ್ಣಶಾಸ್ತಿçಗಳ ‘ವಚನ ಭಾರತ’ದಿಂದ ಹಿಡಿದು ಹಲವು ಅಧಿಕೃತ ಗ್ರಂಥಗಳ ಉದಾಹರಣೆ ನೀಡಿ ಪರಿಸ್ಥಿತಿಯನ್ನು ತಿಳಿಯಾಗಿಸಿದರು. ಇದರಂತೆ ‘ಮೇಡಂ ಕಾಮಾ’ ಅವರ ಕುರಿತು ಪುಸ್ತಕ ಬಂದಾಗ ಅವರು ಭಾರತೀಯರು ಅಲ್ಲ ಎನ್ನುವ ಪ್ರಶ್ನೆ ಬಂದಿತು. ಶೇಷಗಿರಿರಾಯರು ಆಕೆಯ ಭಾರತೀಯ ಪ್ರೇಮವನ್ನು ವಿವರವಾಗಿ ವರ್ಣಿಸಿ ಸಮರ್ಥಿಸಿಕೊಂಡರು. ಜಗಜಟ್ಟಿ ಗಾಮಾ, ಕ್ರಿಕೆಟಿಗರಾದ ವಿಜಯ್ ಮರ್ಚೆಂಟ್, ಸಿ.ಕೆ. ನಾಯ್ಡು, ಹಾಕಿಯ ಧ್ಯಾನಚಂದ್ ಮೊದಲಾದವರ ಬಗ್ಗೆ ಕೃತಿಗಳು ಬಂದಾಗ ಒಂದು ವರ್ಗದಿಂದ ಆಕ್ಷೇಪ ಬಂದರೂ ಕ್ರಮೇಣ ಈ ಕೃತಿಗಳ ಕಾರಣದಿಂದಲೇ ಸಾಂಸ್ಕೃತಿಕ ಕ್ಷೇತ್ರ ಕ್ರೀಡಾರಂಗದ ಕುರಿತು ಇಟ್ಟುಕೊಂಡಿದ್ದ ಅಸ್ಪೃಶ್ಯತಾಭಾವ ದೂರವಾಗುವಂತಾಯಿತು. ಖ್ಯಾತ ಗಾಂಧಿವಾದಿ ಜಿ.ಟಿ. ನಾರಾಯಣರಾವ್ ಅವರಿಂದ ಗಾಂಧಿ ಕುರಿತು ಕನ್ನಡ-ಇಂಗ್ಲಿಷ್ ಎರಡೂ ಅವತರಣಿಕೆಗಳಲ್ಲಿ ಪುಸ್ತಕ ಬರೆಸಿ ಅವರಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಶೇಷಗಿರಿರಾಯರು ಹೊರಕ್ಕೆ ತಂದರು.
ಭಾರತ-ಭಾರತಿ ಯೋಜನೆಗೆ ಕರ್ನಾಟಕ ಸರ್ಕಾರ ಕೂಡ ಪ್ರೋತ್ಸಾಹ ನೀಡಿತು. ೧೯೭೨ರಲ್ಲಿ ಹತ್ತು ಸಾವಿರ ಪ್ರತಿಗಳನ್ನು ಕೊಂಡು ಶಾಲೆಗಳಿಗೆ ತಲಪಿಸುವ ಯೋಜನೆಗೆ ಅಂಗೀಕಾರ ದೊರಕಿತು. ಇದು ಸುಗಮವಾಗಿ ಸಾಗುತ್ತಿರುವಾಗಲೇ ಯೋಜನೆ ಪೂರ್ವಗ್ರಹಪೀಡಿತ ಎನ್ನುವ ಆಕ್ಷೇಪ ಬಂದಿತು. ಆಗ ಸರ್ಕಾರ ಹಸ್ತಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು, ಆಕ್ಷೇಪ ಬಂದರೆ ಸರ್ಕಾರದ ಜೊತೆ ಚರ್ಚಿಸಿದ ನಂತರವೇ ಪ್ರಕಟಣೆ ಎನ್ನುವ ವಿಧಿಯನ್ನು ಸೇರಿಸಿತು. ಆದರೆ ಯಾವತ್ತೂ ಆಕ್ಷೇಪ ಬರಲೇ ಇಲ್ಲ ಎನ್ನುವುದು ಪುಸ್ತಕಗಳ ಪಾರದರ್ಶಕತೆಗೆ ಕನ್ನಡಿ ಹಿಡಿದಂತಾಯಿತು.
೧೯೭೫ರಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭಾರತ-ಭಾರತಿ ಕಚೇರಿ ತಾಂತ್ರಿಕ ಕಾರಣಕ್ಕೆ ಮುಟ್ಟುಗೋಲಾಯಿತು. ವಿದೇಶಗಳಿಂದ ಬರುತ್ತಿದ್ದ ಬೇಡಿಕೆಗೆ ಪೆಟ್ಟು ಬಿದ್ದಿತು. ಪುಸ್ತಕ ಚಳವಳಿಗೆ ಹಠಾತ್ ನಿಲುಗಡೆ ಬಂದಿತು. ಆದರೆ ತುರ್ತುಪರಿಸ್ಥಿತಿ ಕೊನೆಯಾದ ನಂತರ ಯೋಜನೆಯನ್ನು ಪೂರ್ಣಗೊಳಿಸಲಾಯಿತು. ಕೊನೆಯ ಕಂತಿನ ಪುಸ್ತಕಗಳ ಬಿಡುಗಡೆ ಅದ್ಧೂರಿಯಾಗಿ ನಡೆಯಿತು. ಅಲ್ಲಿಯವರೆಗೆ ಬಂದಿದ್ದ ಎಲ್ಲ ೫೧೦ ಪುಸ್ತಕಗಳನ್ನು ಪ್ರದರ್ಶಿಸಿದ್ದಲ್ಲದೆ, ಈ ಕೃತಿಗಳನ್ನು ಬರೆದ ನೂರ ಅರವತ್ತು ಲೇಖಕರನ್ನು ಸನ್ಮಾನಿಸಲಾಯಿತು. ರಾಜ್ಯಪಾಲ ಗೋವಿಂದ ನಾರಾಯಣ್ ಈ ಜ್ಞಾನಯಜ್ಞಕ್ಕೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ನ ಒಡನಾಟದಲ್ಲಿ
ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ಶೇಷಗಿರಿರಾಯರಿಗೆ ಅರ್ಧ ಶತಮಾನಕ್ಕೂ ಹೆಚ್ಚಿನ ಸಂಬಂಧ ಇತ್ತು. ೧೯೭೪ರ ವೇಳೆಗೆ ಆಗ ಪರಿಷತ್ತಿನ ಅಧ್ಯಕ್ಷರಾಗಿದ್ದ ತಿ.ತಾ. ಶರ್ಮ ಅವರ ಒತ್ತಾಯದ ಮೇರೆಗೆ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದರು. ಆಗ ರಾಯರಿಗೆ ಕೇವಲ ೨೨ ವರ್ಷ. ತಂದೆ ಸ್ವಾಮಿರಾಯರಿಗೆ ಮಗ ಚಿಕ್ಕ ವಯಸ್ಸಿನಲ್ಲಿ ಇಂತಹ ದೊಡ್ಡ ಜವಾಬ್ದಾರಿ ವಹಿಸಿಕೊಳ್ಳುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ಶೇಷಗಿರಿರಾಯರು ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸಿದರು.
ಆಗ ಭಾರತದ ಗವರ್ನರ್-ಜನರಲ್ ಆಗಿದ್ದ ಸಿ. ರಾಜಗೋಪಾಲಾಚಾರಿ ಅವರು ಪರಿಷತ್ತಿಗೆ ಭೇಟಿ ನೀಡುವ ಸಂದರ್ಭ ಬಂದಿತು. ಆ ಸಮಯದಲ್ಲಿ ಅಧ್ಯಕ್ಷರು ಊರಿನಲ್ಲಿ ಇರಲಿಲ್ಲ. ಹೀಗಾಗಿ ಸಂಪೂರ್ಣ ಕಾರ್ಯಕ್ರಮದ ವ್ಯವಸ್ಥೆ ಶೇಷಗಿರಿರಾಯರ ಮೇಲೆಯೇ ಬಿದ್ದಿತು. ರಾಷ್ಟçದ ಪ್ರಥಮ ಪ್ರಜೆ ಭಾಗವಹಿಸುವ ಕಾರ್ಯಕ್ರಮ ಆಗಿದ್ದರಿಂದ ರಾಜ್ಯದ ಐ.ಜಿ.ಪಿ. ಬೊಂಭೋರೆ ಸ್ಥಳ ಪರಿಶೀಲನೆಗೆ ಬಂದರು. ಷರಿಷತ್ತಿನ ಸಭಾಂಗಣ ಕಂಡವರೇ ಹೌಹಾರಿದರು. ಇಲ್ಲಿ ಗಣ್ಯ ಅತಿಥಿಗೂ ಪ್ರೇಕ್ಷಕರಿಗೂ “ಪಾಯಿಂಟ್ ಬ್ಲಾಂಕ್ ರೇಂಜ್” ಇದೆ ಅನುಮತಿ ನೀಡಲು ಸಾಧ್ಯವೇ ಇಲ್ಲ ಎಂದು ಪಟ್ಟುಹಿಡಿದರು. ಶೇಷಗಿರಿರಾಯರು “ಇದು ಸಾಹಿತ್ಯದ ಕಾರ್ಯಕ್ರಮ, ರಾಜಕೀಯ ಸಮಾವೇಶವಲ್ಲ. ಬರುವವರೆಲ್ಲರೂ ಸುಸಂಸ್ಕೃತರು. ಯಾವುದೇ ಅನಾಹುತ ಆಗುವುದು ಸಾಧ್ಯವಿಲ್ಲ. ಪರಿಷತ್ತಿನ ಯಾವುದೇ ಕಾರ್ಯಕ್ರಮ ಪರಿಷತ್ತಿನಲ್ಲಿಯೇ ನಡೆಯಬೇಕು. ಬೇರೆ ಕಡೆ ನಡೆದರೆ ನಾವೇ ಕೆಟ್ಟ ಪರಂಪರೆ ಹಾಕಿಕೊಟ್ಟ ಹಾಗಾಗುತ್ತದೆ” ಎಂದು ವಾದಿಸಿದರು. ಕೊನೆಗೆ ಬೊಂಭೋರೆ ಅವರು “ನಿಮ್ಮ ವಯಸ್ಸಿಗಿಂತ ಜಾಸ್ತಿ ನನಗೆ ಸರ್ವೀಸ್ ಆಗಿದೆ” ಎಂದರೂ ಶೇಷಗಿರಿರಾಯರು ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ಕೊನೆಯ ನಿರ್ಧಾರವೆಂಬಂತೆ ಬೊಂಭೋರೆ ಅವರು “ನಾನು ಫುಲ್ ಪೊಲೀಸ್ ಫೋರ್ಸ್ ಜೊತೆ ಇಲ್ಲಿಯೇ ಇರುತ್ತೇನೆ, ಏನಾದರೂ ಹೆಚ್ಚುಕಡಮೆಯಾದರೆ ಪರಿಸ್ಥಿತಿಯನ್ನು ಕೈಗೆ ತೆಗೆದುಕೊಳ್ಳುತ್ತೇನೆ” ಎಂದರು. ರಾಜಾಜಿಯವರು ಕೆಲವೇ ನಿಮಿಷ ಮಾತನಾಡುವ ಕಾರ್ಯಕ್ರಮವಿತ್ತು. ಆದರೆ ಅವರು ಉತ್ಸಾಹದಿಂದ ಸುಮಾರು ಒಂದು ಗಂಟೆಯ ಕಾಲ ಅದ್ಭುತವಾಗಿ ಮಾತನಾಡಿದರು. ಬೇರೊಂದು ಕಾರ್ಯಕ್ರಮವಿದ್ದರೂ ಇಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಬೋಂಭೋರೆ ಕಾರ್ಯಕ್ರಮ ನಡೆದ ರೀತಿಯನ್ನು ನೋಡಿ ಸಂತೋಷಪಟ್ಟರು. ಕೇವಲ ಇಪ್ಪತ್ತೆರಡು ವರ್ಷದ ಹುಡುಗ ಇಷ್ಟೊಂದು ದಕ್ಷವಾಗಿ ಕಾರ್ಯಕ್ರಮ ನಡೆಸಿದ್ದ ಎಂದು ಬಹುಕಾಲ ಎಲ್ಲರ ಬಳಿ ಹೇಳಿಕೊಂಡು ಬಂದಿದ್ದರು.
ಮೂರು ದಶಕಗಳ ನಂತರ ಒಂದು ವಿಶಿಷ್ಟ ಸನ್ನಿವೇಶದಲ್ಲಿ ಎಲ್.ಎಸ್. ಶೇಷಗಿರಿರಾಯರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಗೆ ಸ್ಪರ್ಧಿಸಿದರು. ಆಗ ಪರಿಷತ್ ವಿವಾದಕ್ಕೆ ಸಿಲುಕಿತ್ತು. ಪರಿಷತ್ ಸೋತರೆ ಕನ್ನಡವೂ ಸೋಲುತ್ತದೆ ಎನ್ನುವುದು, ಕನ್ನಡಿಗರೂ ಸೋಲುತ್ತಾರೆ ಎನ್ನುವ ಆತಂಕ ಎದುರಾಗಿದ್ದ ಸಂದರ್ಭ ಅದು. ಆದರೆ ಚುನಾವಣೆ ಸಮರ್ಪಕವಾಗಿ ನಡೆಯದೆ ಶೇಷಗಿರಿರಾಯರಿಗೆ ಸೋಲು ಉಂಟಾಯಿತು. ಹಲವಾರು ಕಹಿ ಪ್ರಸಂಗಗಳು ನಡೆದವು. ಚುನಾವಣೆಗಳ ಅಕ್ರಮದ ಬಗ್ಗೆ ಶೇಷಗಿರಿರಾಯರು ಸರ್ಕಾರದ ಗಮನವನ್ನು ಸೆಳೆದರು. ಇದರಲ್ಲಿ ನಿಜಾಂಶಗಳು ಇರುವುದನ್ನು ಗಮನಿಸಿದ ಸರ್ಕಾರವು “ಶ್ಯಾಮಸುಂದರ ಆಯೋಗ”ವನ್ನು ನೇಮಿಸಿತು. ಆಯೋಗ ಚುನಾವಣೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅಕ್ರಮಗಳನ್ನು ಪತ್ತೆ ಹಚ್ಚಿ ಗೆದ್ದ ಅಭ್ಯರ್ಥಿಯನ್ನು ಅನೂರ್ಜಿತಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿತು. ಶೇಷಗಿರಿರಾಯರು ಹೀಗೆ ಅಧ್ಯಕ್ಷರಾಗದಿದ್ದರೂ ಅಪಾಯದಿಂದ ಪರಿಷತ್ತನ್ನು ಕನ್ನಡಿಗರಿಗೆ ಉಳಿಸಿಕೊಟ್ಟಿದ್ದರು. ಮುಂದೆ ಕಾಲು ಶತಮಾನದ ನಂತರ ೨೦೦೭ರ ಡಿಸೆಂಬರ್ ೧೨ರಿಂದ ೧೫ರವರೆಗೆ ಉಡುಪಿಯಲ್ಲಿ ನಡೆದ ೭೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶೇಷಗಿರಿರಾಯರು ಅಧ್ಯಕ್ಷರಾಗಿ ಆಯ್ಕೆಯಾದರು. ಈಗಲೂ ಅವರು ಒಂದು ಪಂಥವನ್ನು ಪ್ರತಿನಿಧಿಸುತ್ತಾರೆ ಎಂಬ ವಿವಾದ ಎದ್ದಿತ್ತು. ಇದಕ್ಕಾಗಿ ಉಡುಪಿಯಲ್ಲಿಯೇ ಒಂದು ಪರ್ಯಾಯ ಸಮ್ಮೇಳನ ಕೂಡ ನಡೆಯಿತು. ಆದರೆ ತಮ್ಮ ಅಧ್ಯಕ್ಷ ಭಾಷಣದಲ್ಲಿ ಶೇಷಗಿರಿರಾಯರು ಪಂಥಗಳನ್ನು ಮೀರಿದ ಕನ್ನಡ ಕಾಳಜಿ ತಮಗೆ ಇರುವುದನ್ನು ಖಚಿತವಾಗಿ ಬಿಂಬಿಸಿದರು. ಕನ್ನಡದ ಭವಿಷ್ಯದ ಕುರಿತು ಸ್ಪಷ್ಟ ಚಿಂತನೆಗಳನ್ನು ನೀಡಿದರು. ಅವರದು ಒಂದು ರೀತಿಯಲ್ಲಿ ಮಾದರಿ ಎನ್ನಿಸಬಲ್ಲ ಭಾಷಣವಾಗಿ ರೂಪಗೊಂಡಿತ್ತು.
ಎಲ್.ಎಸ್. ಶೇಷಗಿರಿರಾವ್ ಜೀವನ ಪಥ
ಜನನ : ೧೬-೦೨-೧೯೨೫, ಬೆಂಗಳೂರು
ತಂದೆ : ಎಲ್. ಸ್ವಾಮಿರಾವ್ (ಜಿಲ್ಲಾ ವಿದ್ಯಾಧಿಕಾರಿಗಳಾಗಿ ನಿವೃತ್ತಿ)
ತಾಯಿ : ಕಮಲಾಬಾಯಿ
ಶಿಕ್ಷಣ : ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಗಳಲ್ಲಿ ಬಿ.ಎ. ಆನರ್ಸ್ ಮತ್ತು ಎಂ.ಎ. – ಪ್ರಥಮ ಸ್ಥಾನ, ಚಿನ್ನದ ಪದಕಗಳು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ನಲ್ಲಿ ವಿಶೇಷ ತರಬೇತಿ
೧೯೪೪: ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗಕ್ಕೆ ಉಪನ್ಯಾಸಕರಾಗಿ ಪ್ರವೇಶ (೧೯ನೆಯ ವಯಸ್ಸಿನಲ್ಲಿ.) ಹಲವು ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ, ೧೯೮೫ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದಿಂದ ನಿವೃತ್ತಿ.
೧೯೯೨: ಡಾ. ಮಾಸ್ತಿ ಸಾಹಿತ್ಯ ಪ್ರಶಸ್ತಿ ಸಮಿತಿಯ ಅಧ್ಯಕ್ಷರು
೧೯೪೮-೧೯೫೦: ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು
೧೯೬೯-೧೯೭೧: ಜ್ಞಾನಗಂಗೋತ್ರಿ ವಿಶ್ವಕೋಶ ಸಂಪಾದಕ
೧೯೮೧-೧೯೮೨: ಕರ್ನಾಟಕದ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ
೧೯೮೬-೧೯೮೮: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಸಂಶೋಧನಾ ವೇತನ
೧೯೮೯-೧೯೯೦: ಪಂಪ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು
೧೯೯೦-೧೯೯೧: ಮೈಸೂರು ವಿಶ್ವವಿದ್ಯಾನಿಲಯ ಸ್ವರ್ಣ ಮಹೋತ್ಸವ ಪ್ರಶಸ್ತಿ ಸಮಿತಿಯ ಅಧ್ಯಕ್ಷರು
೧೯೯೧: ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು
೧೯೯೨: ಡಾ. ಮಾಸ್ತಿ ಸಾಹಿತ್ಯ ಪ್ರಶಸ್ತಿ ಸಮಿತಿಯ ಅಧ್ಯಕ್ಷರು
೧೯೯೦-೧೯೯೨: ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರು
೧೯೯೨-೧೯೯೪: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಹಾಗೂ ಸೆನೆಟ್ ಸದಸ್ಯರು.
೧೯೯೪-೧೯೯೫: ಕರ್ನಾಟಕ ರಾಜ್ಯದ ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲನೆಯ ಅಧ್ಯಕ್ಷ (ರಾಜ್ಯ ಸಚಿವರ ಸ್ಥಾನಮಾನ)
೨೦೦೭: ಉಡುಪಿಯಲ್ಲಿ ನಡೆದ ೭೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೨೦-೧೨-೨೦೧೯: ನಿಧನ.
ಪ್ರಧಾನ ಸಂಪಾದಕರು:
ಭಾರತ-ಭಾರತಿ ಪುಸ್ತಕ ಸಂಪದ (೧೯೭೨-೧೯೮೦, ೫೧೦ ಪುಸ್ತಕಗಳು); ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ (೧೯೯೩); ಕಿರಿಯರ ಕರ್ನಾಟಕ (೧೯೯೪); ಸಪ್ನಾ ಜ್ಞಾನದೀಪ ಮಾಲೆ (೧೯೯೭-೧೯೯೯); ಬೆಂಗಳೂರು ದರ್ಶನ (೨೦೦೫-೨ ಸಂಪುಟಗಳಲ್ಲಿ); ನಾಗರಿಕತೆಯ ಕಥೆ (೨೦೦೭-೨೦೦೮ – ೧,೨,೩ ಸಂಪುಟಗಳಿಗೆ); ಸಪ್ನಾ ದಿವ್ಯದರ್ಶನ ಮಾಲೆ (೨೦೦೦-೨೦೧೦, ೧೦೧ ಪುಸ್ತಕಗಳು).
ಸಂಪಾದಕರು:
ಕನ್ನಡ ಸಣ್ಣಕತೆಗಳು, ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ೧೯೬೨); ಜ್ಞಾನಗಂಗೋತ್ರಿ (೧೯೭೦-೭೧ ಎರಡು ಸಂಪುಟಗಳಿಗೆ); ಕಾರಂತ ಕಿರಣ (೧೯೭೮); ಕನ್ನಡ ಭಾರತಿ (೧೯೮೪); ಕನ್ನಡದ ಅಳಿವು ಉಳಿವು (೧೯೮೫); ಭಾರತೀಯ ಸಾಹಿತ್ಯ ಸಮೀಕ್ಷೆ (೧೯೯೦ ೨ ಸಂಪುಟಗಳು); ಕನ್ನಡ ತಾಯಿಗೆ ನುಡಿನಮನ (೧೯೯೩); ಕನ್ನಡ ವಿಭಾಗ Encyclopaedia of Indian Writing (ಕೇಂದ್ರ ಸಾಹಿತ್ಯ ಅಕಾಡೆಮಿ Indian Writing in English (Encyclopaedia of Modern Indian Literature, ಕೇಂದ್ರ ಸಾಹಿತ್ಯ ಅಕಾಡೆಮಿ)
ಪುರಸ್ಕಾರಗಳು
ರಾಜ್ಯ ಸರ್ಕಾರದ ದೇವರಾಜ ಬಹದ್ದೂರ್ ಬಹುಮಾನ (‘ಇಲಿಯಡ್’ ಕೃತಿಗೆ ೧೯೭೦); ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ (೧೯೭೭); ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೫); ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೦); ವರ್ಧಮಾನ ಸಾಹಿತ್ಯ ಪ್ರಶಸ್ತಿ, (‘ಷೇಕ್ಸ್ಪಿಯರ್’ ಕೃತಿಗೆ ೧೯೯೩); ಕೆಂಪೇಗೌಡ ಪ್ರಶಸ್ತಿ (ಬೆಂಗಳೂರು ಮಹಾನಗರ ಪಾಲಿಕೆ ೧೯೯೪); ಕಾವ್ಯಾನಂದ ಪುರಸ್ಕಾರ (‘ಭಾರತದ ಸ್ವಾತಂತ್ರ್ಯ ಸಂಗ್ರಾಮ’ ಕೃತಿಗೆ ೧೯೯೭); ಡಾ. ಅ.ನ.ಕೃ. ಪ್ರಶಸ್ತಿ (೧೯೯೮); ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ, (‘ಇಂಗ್ಲಿಷ್ ಸಾಹಿತ್ಯ ಚರಿತ್ರೆ’ಗೆ ೧೯೯೮); ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, (‘ಇಂಗ್ಲಿಷ್ ಸಾಹಿತ್ಯ ಚರಿತ್ರೆ’ಗೆ ೨೦೦೧); ಡಾ. ಕಾರಂತ ಕವಿ ಸಮ್ಮಾನ (೨೦೦೧); ಡಾ. ಮಾಸ್ತಿ ಸಾಹಿತ್ಯ ಪ್ರಶಸ್ತಿ (೨೦೦೨); ಶ್ರೀ ಕೃಷ್ಣ ಪ್ರಶಸ್ತಿ (೨೦೦೪); ವಿಶ್ವ ಮಾನವ ಪ್ರಶಸ್ತಿ (೨೦೧೦); ಶ್ರೀ ವನಮಾಲಿ ಸೇವಾ ಪ್ರಶಸ್ತಿ (೨೦೧೧); ವಿ.ಕೃ. ಗೋಕಾಕ್ ಪ್ರಶಸ್ತಿ (೨೦೧೧); ಪೆೆÇ್ರ. ತೀ.ನಂ. ಶ್ರೀಕಂಠಯ್ಯ ಸಾಹಿತ್ಯ ವಿಮರ್ಶೆ ಪ್ರಶಸ್ತಿ (೨೦೧೧); ಶ್ರೀ ಸಾಹಿತ್ಯ ಪ್ರಶಸ್ತಿ (೨೦೧೮); ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ (೨೦೧೮); ಧರ್ಮಸ್ಥಳದ ೬೫ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (೧೯೯೭).
ಸದಸ್ಯರು:
೧) ಕರ್ನಾಟಕ ಸಾಹಿತ್ಯ ಅಕಾಡೆಮಿ; ೨) ಕನ್ನಡ ಸಲಹಾ ಸಮಿತಿ, ಜ್ಞಾನಪೀಠ ಪ್ರಶಸ್ತಿ; ೩) ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ; ೪) ಕನ್ನಡ ಸಲಹಾ ಸಮಿತಿ, ನ್ಯಾಷನಲ್ ಬುಕ್ ಟ್ರಸ್ಟ್; ೫) ವರ್ಧಮಾನ ಪ್ರಶಸ್ತಿ ಆಯ್ಕೆ ಸಮಿತಿ; ೬) ಕಾರಂತ ಪ್ರಶಸ್ತಿ ಆಯ್ಕೆ ಸಮಿತಿ; ೭) ಅಖಿಲ ಭಾರತ ಸಂಪಾದಕ ಮಂಡಲಿ, Comparative Indian Literature, ಕೇರಳ ಸಾಹಿತ್ಯ ಅಕಾಡೆಮಿ; ೮) ಸಂಪಾದಕ ಮಂಡಲಿ, ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು ವಿಶ್ವವಿದ್ಯಾನಿಲಯ; ೯) ಸಂಪಾದಕ ಮಂಡಲಿ, Indian Writers Contribution to the Freedom Struggle, ಕೇರಳ.