ಮೋಪ್ಲಾ ಜೆಹಾದನ್ನು ಹಲವು ರೀತಿಯಲ್ಲಿ ವಿವರಿಸಲಾಗಿದೆ. ಬ್ರಿಟಿಷ್ ಅಧಿಕಾರಸ್ಥರು ಮತ್ತು ಹಿಂದುಗಳ ವಿರುದ್ಧ ನಡೆಸಿದ ರಾಷ್ಟ್ರೀಯವಾದಿ ದಂಗೆ ಎಂದು ಕೆಲವರು ಹೇಳಿದರೆ, ಹಿಂದೂ ಭೂ ಮಾಲೀಕರ ವಿರುದ್ಧ ಮುಸ್ಲಿಂ ರೈತರು ನಡೆಸಿದ ದಂಗೆ ಎನ್ನುವವರಿದ್ದಾರೆ. ಕಮ್ಯೂನಿಸ್ಟ್ ನಾಯಕ ಇ.ಎಂ.ಎಸ್. ನಂಬೂದಿರಿಪಾಡ್ ಅವರು ನಿರಕ್ಷರಿ ಹಿಂದುಳಿದ ಮೋಪ್ಲಾಗಳು ಜನ್ಮಿಗಳ (ಸ್ಥಳೀಯ ಭೂಮಾಲೀಕರು) ಮೇಲೆ ನಡೆಸಿದ ಪ್ರತಿಭಟನೆ ಎಂದು ಪ್ರತಿಭಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ.
(ಕಳೆದ ಸಂಚಿಕೆಯಿಂದ)
ಇರುವ ಉದ್ಯಾನದಲ್ಲಿ ತೊಂದರೆ ಎದುರಾದರೆ ಅದನ್ನು ತೊರೆದು ಬೇರೆ ಸುಂದರ ಉದ್ಯಾನವನ್ನು ಅರಸಿ ಅತ್ತ ಹಾರಿಹೋಗುವ ಹಕ್ಕಿಗಳ ವಿಷಯ ಬಂತಲ್ಲವೆ? ಭಾರತೀಯ ಮುಸ್ಲಿಮರ ಹಿಜ್ರತ್ ಆಂದೋಲನದ ಪ್ರಮುಖ ಸಾಂಸ್ಥಿಕ ನೆಲೆ, ಎಂದರೆ ಖಿಲಾಫತ್ ಸಮಿತಿಯು ಸೆಂಟ್ರಲ್ ಹಿಜ್ರತ್ ಆಫೀಸನ್ನು ತೆರೆಯಿತು. ಅದಕ್ಕೆ ದೇಶಾದ್ಯಂತ ಶಾಖೆಗಳನ್ನು ತೆರೆದರು. ಆ ಬಗ್ಗೆ ವಿಶಾಲವಾದ ಪ್ರಚಾರಾಂದೋಲನವನ್ನು ನಡೆಸಿದರು. ದೇಶಾದ್ಯಂತ, ವಿಶೇಷವಾಗಿ ಗಡಿನಾಡು ಪ್ರಾಂತದಲ್ಲಿ ಸ್ಥಳೀಯ ಹಿಜ್ರತ್ ಸಮಿತಿಗಳನ್ನು ರಚಿಸಲಾಯಿತು. ಹಿಜ್ರತ್ನ ಸಿದ್ಧತೆಗಳ ಹೊಣೆ ಪೇಷಾವರ್ ಸಮಿತಿಯ ಮೇಲೆ ಬಂತು. ಅದರ ಹೆಸರು ಅಂಜುಮಾನ್-ಮುಹಾಜಿರಿನ್-ಐ-ಇಸ್ಲಾಂ ಸುಬಾ ಸರ್ಹದಿ.
ಸಾಮಾನ್ಯವಾಗಿ ಮಸೀದಿಗಳನ್ನು ಹಿಜ್ರತ್ಗೆ ಪ್ರೋತ್ಸಾಹ ನೀಡಲು ಬಳಸಲಾಯಿತು. ವಲಸೆ ಹೋಗದ ಮುಸ್ಲಿಮರು ದೈವನಿಂದಕರಾಗುತ್ತಾರೆಂದು ಮೌಲವಿಗಳು ಮಸೀದಿಯಿಂದ ಬೋಧಿಸಿದರು. ಸಾಹಿತಿಗಳು ಗದ್ಯಸಾಹಿತ್ಯ ಮತ್ತು ಕಾವ್ಯಗಳ ಮೂಲಕ ಜನರ ಭಾವನೆಗಳನ್ನು ಕೆರಳಿಸಿದರು. ಪ್ರಾದೇಶಿಕ ಭಾಷಾ ಪತ್ರಿಕೆಗಳು ಆಫಘಾನ್ನ ಜೀವನದ ಬಗ್ಗೆ ರಂಜನೀಯ ಲೇಖನಗಳನ್ನು ಪ್ರಕಟಿಸಿದವು. ಅಲ್ಲಿಗೆ ಹೋದ ಮಹಾಜಿರಿನ್ಗಳಿಗೆ ಕೆಂಪು ಜಮಖಾನೆಯ ಸ್ವಾಗತ ಕಾದಿದೆ ಎಂಬಂತಹ ಕಥೆಗಳನ್ನು ಜನರಿಗೆ ಹೇಳಲಾಯಿತು.
ವಿಶ್ವಾಸಿಗರ ಸಾಲುಸಾಲು
ಆಂದೋಲನದ ಆರಂಭದ ಬಗ್ಗೆ ಒಂದು ಸಾಂಕೇತಿಕ ಘಟನೆಯನ್ನು (ಚರ್ಯೆ) ರೂಪಿಸಲಾಯಿತು. ಉರ್ದು ಪತ್ರಿಕೆ ಜಮೀನ್ದಾರ್ ಮೇ ೭, ೧೯೨೦ರಂದು ಮುಸ್ಲಿಂ ಹೀರಾ ಶಕೆಯ ವರ್ಷಕ್ಕೆ ಅನುಗುಣವಾಗಿ ೧೩೩೮ ಜನ ಆಫಘಾನ್ಗೆ ಹೊರಡಲು ಸಿದ್ಧರಾಗಿದ್ದಾರೆ ಎಂದು ಪ್ರಕಟಿಸಿತು. ಕೆಲವು ಉತ್ಸಾಹಿಗಳು ಗುಟ್ಟಾಗಿ ಗಡಿ ದಾಟಲು ಆರಂಭಿಸಿದ್ದರೂ ಕೂಡ ಒಂದು ವ್ಯವಸ್ಥಿತ ವಲಸೆಯಾಗಿ ಹಿಜ್ರತ್ ಅದೇ ಮೇ ೧೫ರಂದು ಆರಂಭವಾಯಿತು. ಟರ್ಕಿ ಜೊತೆಗಿನ ಶಾಂತಿ ಶರತ್ತುಗಳನ್ನು ಆಗ ಭಾರತದಲ್ಲಿ ಪ್ರಕಟಿಸಲಾಯಿತು. ಕುತೂಹಲಿ ಮುಹಾಜಿರಿನ್ಗಳ ಮೊದಲ ತಂಡ ಅಂದು ಕಾಬೂಲ್ಗೆ ಹೋಗಲು ತುಂಬ ಸಂತೋಷ ಮತ್ತು ಯಶಸ್ಸಿನೊಂದಿಗೆ ಗಡಿದಾಟಿತು.
ಆರಂಭದಲ್ಲಿ ಹಿಜ್ರತ್ ನಿಧಾನವಾಗಿ ನಡೆಯಿತು. ಅದಕ್ಕೆ ಒಂದು ಕಾರಣ ಕೇಂದ್ರ ಖಿಲಾಫತ್ ಸಮಿತಿ (ಸಿಕೆಸಿ) ಮತ್ತು ಜಮೀಯತ್-ಉಲ್-ಉಲೆಮಾಗಳು ಅಸಹಕಾರ ಚಳವಳಿಯ ಉದ್ಘಾಟನೆಯ ಕೆಲಸದಲ್ಲಿ ತೊಡಗಿದ್ದವು. ಅದಲ್ಲದೆ ಅಜ್ಮಲ್ಖಾನ್, ಕಿಚ್ಲೂ, ಜಿನ್ನಾ, ಇಕ್ಬಾಲ್ ಹಾಗೂ ಪ್ರಮುಖರು ಹಿಜ್ರತನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಏಕೆಂದರೆ ಸಮುದಾಯದ ಹಿತಾಸಕ್ತಿಗೆ ಅದು ಪೂರಕವಲ್ಲ ಎಂದವರು ಪ್ರಾಮಾಣಿಕವಾಗಿ ನಂಬಿದ್ದರು.
ಶೃಂಗಸ್ಥಿತಿಯಲ್ಲಿ ಆಂದೋಲನವು (ಜುಲೈ ೧೯೨೦) ವಾಯವ್ಯ ಗಡಿಪ್ರಾಂತಕ್ಕೆ ಸೀಮಿತವಾಗಿತ್ತು. ಆಗ ವಲಸೆ ಹೋದವರಲ್ಲಿ ಶೇ. ೮೫ರಷ್ಟು ಜನ ಅಲ್ಲಿನವರು. ಶೇ. ೧೦ ಜನ ಪಂಜಾಬಿನವರಾದರೆ ಉಳಿದ ಶೇ. ೫ ಸಿಂಧ್ನವರು. ಅತಿ ಹೆಚ್ಚಿನ ಅಂದಾಜಿನ ಪ್ರಕಾರ, ಆಫಘಾನ್ಗೆ ವಲಸೆ ಹೋದ ಮುಹಾಜಿರಿನ್ಗಳ ಸಂಖ್ಯೆ ೫೦ ಸಾವಿರಕ್ಕಿಂತ ಸ್ವಲ್ಪ ಜಾಸ್ತಿ. ಆಫಘಾನಿಸ್ತಾನದ ಲೆಕ್ಕದ ಪ್ರಕಾರ ೪೦ ಸಾವಿರ. ಹಿಜ್ರತ್ ನಿಲ್ಲಿಸಲು ಅಮೀರ್ ಸೂಚಿಸಿದ ಅನಂತರ ಕೂಡ ೭೦೦೦ ಜನ ಹೋದರು. ಸಣ್ಣ ತಂಡಗಳು ಸೆಪ್ಟೆಂಬರ್ನಷ್ಟು (೧೯೨೦) ತಡವಾಗಿ ಕೂಡ ಅಲ್ಲಿನ ಖೋಸ್ಟ್ಗೆ ಹೋದವು. ಹೆಚ್ಚಿನ ಮಹಾಜಿರಿನ್ಗಳು ಖೈಬರ್ ಕಣಿವೆಗೆ ಹೊರತಾದ ಮಾರ್ಗಗಳಲ್ಲಿ ಹೋದರು.
ಇದರಲ್ಲಿ ಎರಡು ಅಂಶಗಳು ಬ್ರಿಟಿಷರಿಗೆ ಚಿಂತೆಯುಂಟು ಮಾಡಿದವು. ಇಡೀ ಹಳ್ಳಿಗಳೇ ಖಾಲಿಯಾದ ಕಾರಣ ಜಮೀನು, ಆಸ್ತಿಗಳ ಮಾರಾಟ ಜೋರಾಗಿ ನಡೆಯಿತು; ದರಗಳು ಕುಸಿದವು. ಬ್ರಿಟಿಷ್ ಅಧಿಕಾರಿಗಳಿಗೆ ಆತಂಕ ತಂದ ಎರಡನೇ ಅಂಶವೆಂದರೆ, ಪೊಲೀಸ್ ಅಧಿಕಾರಿಗಳು ಮತ್ತು ಸೇನೆಯ ಮೇಲೆ ಹಿಜ್ರತ್ ಉಂಟುಮಾಡಿದ ಪರಿಣಾಮ. ಆಗಸ್ಟ್ ಆರಂಭದ ಹೊತ್ತಿಗೆ ವಲಸೆ ಹೋದ ಮುಸ್ಲಿಂ ಸೈನಿಕರ ಸಂಖ್ಯೆ ಒಂದು ಇಡೀ ಕಂಪೆನಿಯ ಸಂಖ್ಯೆಗೆ ಸಮನಾಗಿತ್ತು.
ಪಾನ್ ಇಸ್ಲಾಮಿಸಂ ಗುಳ್ಳೆ
ಮುಹಾಜಿರಿನ್ಗಳು ಭಾರತದ ಬೇಸಗೆಯ ಬಿಸಿಯಲ್ಲಿ ಪರ್ವತಪ್ರಧಾನ ದೇಶದ ಖಾಲಿ ಪ್ರದೇಶದಲ್ಲಿ ಹೋಗಬೇಕಿತ್ತು. ಆಹಾರ ಮತ್ತು ನೀರಿನ ಕೊರತೆ ಇತ್ತು. ಭಾರತದ ನೆಲವನ್ನು ಬಿಡುತ್ತಲೇ ಅವರ ಪ್ರಯಾಣ ಮೃಗಜಲದಂತಾಯಿತು. ಆಫಘಾನ್ ಅಮೀರ ಭರವಸೆ ನೀಡಿದ್ದರೂ ನಿಜವಾಗಿ ಮಾಡಿದ್ದು ತೀರಾ ಕಡಮೆ. ಅಮೀರನ ಅಧಿಕಾರಿಗಳು ಮುಹಾಜಿರಿನ್ಗಳ ಹೊಸ ದೇಶದ ಜನರನ್ನು ಕೆಟ್ಟದಾಗಿ ಮತ್ತು ಕ್ರೂರವಾಗಿ ನಡೆಸಿಕೊಂಡರು. ತಂಡದಲ್ಲಿದ್ದ ಮಹಿಳೆಯರನ್ನು ಅಗೌರವದಿಂದ ನೋಡಲಾಯಿತು. ವಲಸೆಗೆ ಪ್ರೇರಣೆ ನೀಡಿದವರ ಮೇಲೆ ಈ ಜನ ಎಷ್ಟೊಂದು ಕೋಪಗೊಂಡಿದ್ದರೆಂದರೆ ತಮ್ಮ ಊರಿಗೆ ವಾಪಸಾದಾಗ (ವಾಪಸಾದರೆ) ಆ ಮುಲ್ಲಾಗಳಿಗೆ ಗುಂಡು ಹಾರಿಸುವುದಾಗಿ ಹೇಳುತ್ತಿದ್ದರು.
ಗಡಿನಾಡಿನಿಂದ ಕಾಬೂಲ್ವರೆಗಿನ ರಸ್ತೆಯ ಉದ್ದಕ್ಕೂ ಮುಹಾಜಿರಿನ್ಗಳ ಗೋರಿಗಳ ಸಾಲೇ ಇತ್ತಂತೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಖೈಬರ್ ಕಣಿವೆಯಲ್ಲಿ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆಗಸ್ಟ್ ಹೊತ್ತಿಗೆ ಕಾಬೂಲ್ಗೆ ಹೋಗುವ ಮಾರ್ಗಗಳು ಜನನಿಬಿಡವಾಗಿದ್ದವು. ಚಳಿಗಾಲ ಸಮೀಪಿಸುತ್ತಿತ್ತು. ಚಳಿಗಾಲ ಬರುವವರೆಗೆ ಕೇವಲ ೪೦ ಸಾವಿರ ಮುಹಾಜಿರಿನ್ಗಳಿಗೆ ಆಫಘಾನ್ ಆಶ್ರಯ ನೀಡಬಹುದಿತ್ತು. ಆಗಸ್ಟ್ ೧೨ರಂದು ಅಮೀರ ಹಿಜ್ರತನ್ನು ಮುಂದೂಡಿದ. ಆಫಘಾನ್ ಜನ ಬಂದೂಕು ಮತ್ತು ಬಯೋನೆಟ್ ತೋರಿಸಿ ಮುಹಾಜಿರಿನ್ಗಳನ್ನು ಓಡಿಸಲು (ವಾಪಸ್ ಕಳಿಸಲು) ಯತ್ನಿಸುತ್ತಿದ್ದರೆನ್ನುವ ವರದಿಗಳಿದ್ದವು. ಭ್ರಮನಿರಸನಗೊಂಡ ಮುಹಾಜಿರಿನ್ಗಳು ಭಾರತಕ್ಕೆ ಮರಳಲು ಬಯಸಿದರು. ಅದಕ್ಕೆ ಮೊದಲೇ ಆಫಘಾನ್ ಜನರ ಗುಂಪುಗಳು ಹೆಚ್ಚುತಲೇ ಇದ್ದ ಮುಹಾಜಿರಿನ್ಗಳನ್ನು ಓಡಿಸಲು ಯತ್ನಿಸುತ್ತಿದ್ದವು. ಏಕೆಂದರೆ ಮುಹಾಜಿರಿನ್ಗಳಿಗಾಗಿ ಅವರ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಖೋಸ್ಟ್ ಪ್ರದೇಶದಲ್ಲಿ ಸಮಸ್ಯೆ ಬೆಳೆಯುತ್ತಲೇ ಇತ್ತು. ಅಲ್ಲಿ ಮುಹಾಜಿರಿನ್ಗಳು ಮತ್ತು ಸ್ಥಳೀಯರ ನಡುವೆ ಒಂದು ಬಗೆಯ ದ್ವೇಷ ಬೆಳೆದಿತ್ತು. ಪ್ರತಿ-ಹಿಜ್ರತ್(ಮರುವಲಸೆ) ಆರಂಭವಾಗಿಯೇ ಬಿಟ್ಟಿತು. ಅಂತಿಮವಾಗಿ ಶೇ. ೭೫ರಷ್ಟು ಮುಹಾಜಿರಿನ್ಗಳು ಭಾರತಕ್ಕೆ ಮರಳಿದರು.
ಒಟ್ಟಿನಲ್ಲಿ ಪಾನ್-ಇಸ್ಲಾಮಿಸಂನ ಒಂದು ಮಹತ್ತ್ವದ ಪರಿಕಲ್ಪನೆಯಾಗಿ ರೂಪಗೊಂಡ ಹಿಜ್ರತ್ ಚಳವಳಿ ಭಾರೀ ವೈಫಲ್ಯಕ್ಕೆ ಗುರಿಯಾಯಿತು. ಹಿಜ್ರತ್ನ ಬಿಸಿ ತಾಗುತ್ತಲೇ ಅಫಘಾನ್ ಜನ ಅದನ್ನು ನಿಲ್ಲಿಸಿದರು. ತಮ್ಮ ಮುಸ್ಲಿಂ ಸೋದರರನ್ನು, ಅವರ ಸ್ತ್ರೀಯರನ್ನು ಅವಮಾನಿಸಿ ವಾಪಸು ಹೋಗುವಂತೆ ಮಾಡಿದರು. ತಮ್ಮ ಉದ್ಯಾನವನ್ನು ತೊರೆದು ಹೋಗಿದ್ದ ಬುಲ್ಬುಲ್ ಹಕ್ಕಿಗಳು ಆಚೆ ಕಡೆಯ ಹುಲ್ಲು ನಿಜವಾಗಿಯೂ (ಹೆಚ್ಚು) ಹಸಿರಾಗಿಲ್ಲ ಎಂಬುದನ್ನು ಕಂಡುಕೊಂಡವು!
* * *
ಮೋಪ್ಲಾ ಜೆಹಾದ್
ಸೈದ್ಧಾಂತಿಕ ಹಿಂಸಾಚಾರಗಳ ವೇಳೆ ಮೊದಲು ಬಲಿಯಾಗುವುದು ಸತ್ಯ. ಇದು ಕೇರಳದ ಮೋಪ್ಲಾ ಕಾಂಡಕ್ಕೂ ಅನ್ವಯಿಸುತ್ತದೆ. ನಿಜವೆಂದರೆ ಅದು ಬಂಡಾಯ ಅಥವಾ ದಂಗೆ (ರೆಬೆಲಿಯನ್) ಅಲ್ಲ; ಕೇವಲ ಜೆಹಾದ್; ಮೋಪ್ಲಾ ಜೆಹಾದ್. ಖಿಲಾಫತ್ ಚಳವಳಿಯ ನೇತೃತ್ವವನ್ನು ಗಾಂಧಿಯವರು ವಹಿಸಿದ್ದರೂ, ಅಸಹಕಾರ ಚಳವಳಿಯ ಜೊತೆಗೇ ಅದು ನಡೆದಿದ್ದರೂ ಅದರಲ್ಲಿ ಆಗಾಗ ಹಲವು ಹಿಂಸಾತ್ಮಕ ಘಟನೆಗಳು ನಡೆದವು.
೧೯೧೯-೨೨ರ ಅವಧಿಯಲ್ಲಿ ನಡೆದ ಮುಸ್ಲಿಂ ಹಿಂಸಾಚಾರದ ಘಟನೆಗಳನ್ನು ಕಡಮೆಯಾಗಿ ಅಂದಾಜಿಸಿದರೂ ಹಲವು ಘಟನೆಗಳು ದಾಖಲೆಗೆ ಸಿಗುತ್ತವೆ; ನೆಲ್ಲೂರು (ಸೆಪ್ಟೆಂಬರ್, ೧೯೧೯), ಮುತ್ತುಪೇಟೆ, ತಂಜಾವೂರು (ಮೇ, ೧೯೨೦) ಮದರಾಸ್ (ಮೇ, ೧೯೨೦), ಸೂಕೊರ್, ಸಿಂಧ್(ಮೇ, ೧೯೨೦), ಕಸೂರ್, ಪಂಜಾಬ್ (ಆಗಸ್ಟ್, ೧೯೨೦), ಫಿಲಿಬಿತ್, ಉತ್ತರ ಪ್ರದೇಶ (ಸೆಪ್ಟೆಂಬರ್, ೧೯೨೦), ಕೊಲಾಬಾ ಜಿಲ್ಲೆ, ಮುಂಬಯಿ (ಜನವರಿ, ೧೯೨೧), ನೈಪಾತಿ, ಬಂಗಾಳ (ಫೆಬ್ರುವರಿ, ೧೯೨೧) ಕರಾಚಿ (ಆಗಸ್ಟ್, ೧೯೨೧), ಹೌರಾ (ನವೆಂಬರ್, ೧೯೨೧), ಕೊಡಗು (ನವೆಂಬರ್, ೧೯೨೧), ಕಣ್ಣಾನೂರು (ಡಿಸೆಂಬರ್, ೧೯೨೧) ಜಮುನಾ ಮುಖ (ಅಸ್ಸಾಂ, ಫೆಬ್ರುವರಿ, ೧೯೨೨) ಸಿಲ್ಹೆಟ್ (ಫೆಬ್ರುವರಿ, ೧೯೨೨). ಈ ಸಾಲಿನಲ್ಲಿ ಅತ್ಯಂತ ತೀವ್ರ ಸ್ವರೂಪದ್ದೆಂದರೆ ಮೋಪ್ಲಾ ಜೆಹಾದ್ (೧೯೨೧-೨೨).
ಮೋಪ್ಲಾ ಜೆಹಾದನ್ನು ಹಲವು ರೀತಿಯಲ್ಲಿ ವಿವರಿಸಲಾಗಿದೆ. ಬ್ರಿಟಿಷ್ ಅಧಿಕಾರಸ್ಥರು ಮತ್ತು ಹಿಂದುಗಳ ವಿರುದ್ಧ ನಡೆಸಿದ ರಾಷ್ಟ್ರೀಯವಾದಿ ದಂಗೆ ಎಂದು ಕೆಲವರು ಹೇಳಿದರೆ, ಹಿಂದೂ ಭೂ ಮಾಲೀಕರ ವಿರುದ್ಧ ಮುಸ್ಲಿಂ ರೈತರು ನಡೆಸಿದ ದಂಗೆ ಎನ್ನುವವರಿದ್ದಾರೆ. ಕಮ್ಯೂನಿಸ್ಟ್ ನಾಯಕ ಇ.ಎಂ.ಎಸ್. ನಂಬೂದಿರಿಪಾಡ್ ಅವರು ನಿರಕ್ಷರಿ ಹಿಂದುಳಿದ ಮೋಪ್ಲಾಗಳು ಜನ್ಮಿಗಳ (ಸ್ಥಳೀಯ ಭೂಮಾಲೀಕರು) ಮೇಲೆ ನಡೆಸಿದ ಪ್ರತಿಭಟನೆ ಎಂದು ಪ್ರತಿಭಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಕುತೂಹಲದ ಸಂಗತಿಯೆಂದರೆ, ಭಾರತ ಸರ್ಕಾರದ ಗೃಹ ಇಲಾಖೆಯ ಅಡಿಯಲ್ಲಿ ಬರುವ ಸ್ವಾತಂತ್ರ್ಯ ಹೋರಾಟಗಾರರ ಪುನರ್ವಸತಿ ವಿಭಾಗವು ಖಿಲಾಫತ್ ಚಳವಳಿಯೊಂದಿಗೆ ಮೋಪ್ಲಾ ದಂಗೆಯನ್ನು ಕೂಡ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಯೋಜನೆಗೆ ಸೇರಿಸಿದೆ!
ಮಾಪಿಳ್ಳೆ ಅಥವಾ ಮೋಪ್ಲಾ ಎನ್ನುವ ಈ ಮಲೆಯಾಳಿ ಮಾತನಾಡುವ ಮುಸ್ಲಿಮರು ಉತ್ತರ ಕೇರಳದ ಮಲಬಾರ್ ಕರಾವಳಿಯ ಉದ್ದಕ್ಕೂ ವಾಸಿಸುವವರು. ೧೯೨೧ರ ಹೊತ್ತಿಗೆ ಮೋಪ್ಲಾಗಳು ಆ ಭಾಗದ ಅತಿ ದೊಡ್ಡ ಮತ್ತು ಅತಿವೇಗವಾಗಿ ಬೆಳೆಯುತ್ತಿದ್ದ ಸಮುದಾಯವಾಗಿದ್ದರು. ಅವರ ಜನಸಂಖ್ಯೆ ಸುಮಾರು ಹತ್ತು ಲಕ್ಷವಿದ್ದು ಅವರು ಆ ಭಾಗದ (ಮಲಬಾರ್) ಜನಸಂಖ್ಯೆಯ ಶೇ. ೩೨ರಷ್ಟಿದ್ದರು. ದಕ್ಷಿಣ ಮಲಬಾರಿನಲ್ಲಿ ಅವರ ಜನದಟ್ಟಣೆಯಿತ್ತು. ಮೋಪ್ಲಾ ಹತ್ಯಾಕಾಂಡದ ಕೇಂದ್ರವಾಗಿದ್ದ ಎರ್ನಾಡ್ ತಾಲೂಕಿನಲ್ಲಿ ಅವರು ಒಟ್ಟು ಜನಸಂಖ್ಯೆಯ ಶೇ. ೬೦ರಷ್ಟಿದ್ದರು. ಹಿಂಸಾಚಾರ ತೀವ್ರವಾಗಿದ್ದ ನಾಲ್ಕು ತಾಲ್ಲೂಕುಗಳಲ್ಲಿ ಅವರ ಜನಸಂಖ್ಯೆ ಹೀಗಿತ್ತು:
ಮೊದಲಿಗೆ ವಾಣಿಜ್ಯ ಉದ್ದೇಶಗಳಿಗಾಗಿ ಈ ಮುಸ್ಲಿಮರಿಗೆ ಮಲಬಾರಿನಲ್ಲಿ ನೆಲೆ ಸಿಕ್ಕಿತ್ತು. ದೇಶದ ಆಳರಸರಿಂದ ಅನುಮತಿ ಪಡೆದು ಮಲಬಾರ್ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು ಹತ್ತು ಮಸೀದಿಗಳನ್ನು ಕಟ್ಟಿಸಿದರು. ವೃತ್ತಿಜೀವನದೊಂದಿಗೆ ಮತಾಂತರ ಕೂಡ ನಡೆಯುತ್ತಿತ್ತು. ಅದರೊಂದಿಗೆ ಮಾಪಿಳ್ಳೆ ಎಂಬ ಜನಾಂಗ ಆರಂಭವಾಯಿತು. (ಮಾಪಿಳ್ಳೆ ಎಂದರೆ ಅಳಿಯ ಎಂದರ್ಥ.)
ಅರಬ್ ಹಡಗುಗಳಿಗೆ ಸಿಬ್ಬಂದಿ ಒದಗಿಸುವ ಸಲುವಾಗಿ ಕಲ್ಲಿಕೋಟೆಯ ಜಾಮೊರಿನ್ ದೊರೆ ಮತಾಂತರಕ್ಕೆ ಪ್ರೋತ್ಸಾಹ ನೀಡಿದ. ಪ್ರತಿ ಮೀನುಗಾರ ಕುಟುಂಬದಲ್ಲಿ ಕನಿಷ್ಠ ಗಂಡಸನ್ನು ಮುಸಲ್ಮಾನನಾಗಿ ಬೆಳೆಸಬೇಕೆಂದು ಷರತ್ತು ವಿಧಿಸಲಾಗಿತ್ತು (ಜಿಲ್ಲಾ ಗೆಜೆಟಿಯರ್). ಮೈಸೂರಿನ ಟಿಪ್ಪು ಸುಲ್ತಾನ್ ೧೭೮೯ರಲ್ಲಿ ಮಲಬಾರ್ ಮೇಲೆ ದಾಳಿ ನಡೆಸಿ ಬಲಾತ್ಕಾರದ ಮತಾಂತರಗಳನ್ನು ನಡೆಸಿದುದು ಸುವಿದಿತ. ಉತ್ತರ ಮಲಬಾರ್ನ ಮಾಪಿಳ್ಳೆಗಳು ಮೇಲ್ಜಾತಿಯ ಆಸ್ತಿವಂತ ವರ್ಗಗಳಿಂದ ಮತಾಂತರಗೊಂಡವರಾದರೆ, ದಕ್ಷಿಣ ಮಲಬಾರ್ನಲ್ಲಿ ಮುಖ್ಯವಾಗಿ ಕೆಳಜಾತಿಯ ತಿಯ್ಯಾಗಳು, ಚೆರುಮನ್ ಮತ್ತು ಮುಕ್ರುವನ್ ಸಮುದಾಯಗಳಿಂದ ಮತಾಂತರಿಸಲಾಯಿತು.
ಹಿಂದಿನ ಮೋಪ್ಲಾ ಗಲಭೆಗಳು
೧೭೪೨ರ ಅನಂತರದ ಮೋಪ್ಲಾ ದಂಗೆ (ಹಿಂಸಾಚಾರ)ಗಳನ್ನು ದಾಖಲಿಸಲಾಗಿದೆ. ಇಬ್ಬರು ಮೋಪ್ಲಾಗಳು (ಮೂರ್ಗಳು) ಧರ್ಮಧಾಮ್ಸ್ನ ಎರಡು ಪೋರ್ಚುಗೀಸ್ ಚರ್ಚ್ಗಳ ಮೇಲೆ ನಡೆಸಿದ ದಾಳಿ ಮೊತ್ತ ಮೊದಲ ಘಟನೆಯಾಗಿದೆ. ಈ ಗಲಭೆಗಳಿಗೆ ವಿವರಣೆ ಮಲಬಾರ್ನ ೧೬ನೇ ಶತಮಾನದ ಅರಬ್ ಇತಿಹಾಸ ಗ್ರಂಥದಲ್ಲಿ ಸಿಗುತ್ತದೆ. ಝೈನ್ ಅಲ್ ದಿನ್ ಅಲ್ ಮಲ್ಬಾರಿ ಎಂಬಾತ ಅದನ್ನು ಬರೆದಿದ್ದ. ಪೋರ್ಚುಗೀಸರ ವಿರುದ್ಧ ಜೆಹಾದ್ ನಡೆಸಲು ಮುಸ್ಲಿಮರಿಗೆ ಪ್ರಚೋದನೆ ನೀಡಲು ಆತ ಅದನ್ನು ಬರೆದಿದ್ದ.
ಗಮನಿಸಬೇಕಾದ ಅಂಶವೆಂದರೆ, ೧೬ನೇ ಶತಮಾನದಷ್ಟು ಹಿಂದೆಯೇ ಮೋಪ್ಲಾಗಳಲ್ಲಿ ಪಾನ್ ಇಸ್ಲಾಮಿಕ್ ಭಾವನೆ ಇತ್ತು. ಆಗ ಅವರು ಇಂಡೋನೇಷ್ಯಾದ ಮುಸ್ಲಿಮರ ಜೊತೆ ಸೇರಿ ಪೋರ್ಚುಗೀಸರ ವಿರುದ್ಧ ಕಾದಾಟ ನಡೆಸಿದ್ದರು.
ಈ ದಂಗೆಗಳ ಒಂದು ವಿಶ್ಲೇಷಣೆಯನ್ನು ಜರ್ನಲ್ ಆಫ್ ಏಷ್ಯನ್ ಸ್ಟಡೀಸ್ನಲ್ಲಿ ಸ್ಟೀಫನ್ ಡೇಲ್ ಮಾಡಿದ್ದಾರೆ. ಮಲಬಾರ್ ಜಿಲ್ಲೆಯಲ್ಲಿ ೧೮೩೬ರಿಂದ ೧೯೨೧-೨೨ರ ಮೋಪ್ಲಾ ಕಾಂಡದ ನಡುವೆ ಸುಮಾರು ೩೩ ಮೋಪ್ಲಾ ದಂಗೆಗಳು ನಡೆದ ಬಗ್ಗೆ ದಾಖಲಾಗಿದೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಈ ಅವಧಿಯ ಮೊದಲ ೧೬ ವರ್ಷಗಳಲ್ಲಿ ನಡೆದಂಥವು. ಬಹುತೇಕ ಈ ಎಲ್ಲ ಹಿಂಸಾಸ್ಫೋಟಗಳು ಗ್ರಾಮೀಣ ಪ್ರದೇಶದಲ್ಲಿ ನಡೆದವು; ಮತ್ತು ಬಹಳಷ್ಟು ಘಟನೆಗಳಿಗೆ ಭೂವ್ಯಾಜ್ಯ ಕಾರಣವಾಗಿತ್ತು; ಗೇಣಿದಾರರಾದ ಮೋಪ್ಲಾಗಳು ಕ್ಷುಲ್ಲಕ ಕಾರಣಗಳಿಗೆ ಭೂಮಾಲೀಕರು ಮತ್ತಿತರರ ವಿರುದ್ಧ ಹಿಂಸೆಗೆ ಇಳಿಯುತ್ತಿದ್ದರು. ಮೂರಕ್ಕೆ ಹೊರತಾಗಿ ಉಳಿದ ಎಲ್ಲ ಘಟನೆಗಳಲ್ಲಿ ಮೋಪ್ಲಾಗಳು ಹಿಂದುಗಳ ಮೇಲೆ ದಾಳಿ ಮಾಡಿದ್ದರು. ಘಟನೆಗಳು ಸಣ್ಣದಾಗಿದ್ದು ಕೆಲವು ದಿನದೊಳಗೆ ಅವುಗಳನ್ನು ನಿಯಂತ್ರಿಸಲಾಯಿತು. ಸಂತ್ರಸ್ತರ ಸಂಖ್ಯೆ ಕೂಡ ಕಡಮೆಯಿತ್ತು. ಮೂರು ಸಲ ಮಾತ್ರ ೩೦ಕ್ಕೂ ಅಧಿಕ ಮೋಪ್ಲಾಗಳು ದಾಳಿಯಲ್ಲಿ ಭಾಗವಹಿಸಿದ್ದರು. ಆದರೆ ಕೆಲವು ಸಲ ಈ ಪ್ರಕರಣಗಳು ಜೋರಾದವು. ಅದಕ್ಕೆ ಕಾರಣ ಘಟನೆಯಲ್ಲಿ ಭಾಗಿಯಾದ ಎಲ್ಲ ಮೋಪ್ಲಾಗಳು ಹುತಾತ್ಮರಾಗುವ (ಶಹೀದ್) ಉದ್ದೇಶದಿಂದ ಆತ್ಮಹತ್ಯೆಗೈದಿದ್ದರು. ದಾಳಿಗಳಲ್ಲಿ ಒಟ್ಟು ೩೫೦ ಜನ ಮೋಪ್ಲಾಗಳು ಭಾಗಿಯಾಗಿದ್ದು, ಅದರಲ್ಲಿ ೩೨೨ ಜನ ಜೀವ ಕಳೆದುಕೊಂಡರೆ ೨೮ ಜನ ಬದುಕುಳಿದು ಸೆರೆ ಹಿಡಿಯಲ್ಪಟ್ಟರು. ಅಂತಿಮ ಆತ್ಮಾಹುತಿ ದಾಳಿಗೆ ಕೆಲವು ವಾರ ಮೊದಲು ಅದರ ಆಚರಣೆಗಳು ಪ್ರಾರಂಭವಾಗುತ್ತಿದ್ದವು.
ಒಟ್ಟು ೩೩ ಘಟನೆಗಳಲ್ಲಿ ಒಂಬತ್ತು ಸ್ಪಷ್ಟವಾಗಿ ಗ್ರಾಮೀಣ ಸಂಘರ್ಷದಲ್ಲಿ ಬೇರು ಹೊಂದಿದ್ದವು. ಮೂರು ಭಾಗಶಃ ಕೃಷಿ ಸಂಬಂಧ ಅಹವಾಲಿನಿಂದ ಹುಟ್ಟಿದ್ದವು. ೧೩ ಘಟನೆಗಳನ್ನು ಚೆನ್ನಾಗಿ ದಾಖಲಿಸಲಾಗಿದೆ. ಅವುಗಳಲ್ಲಿ ನಾಲ್ಕು ವೈಯಕ್ತಿಕ ಜಗಳದಿಂದ ಆದಂಥವು. ಎರಡು ಘಟನೆಗಳು ಬ್ರಿಟಿಷ್ ಕಲೆಕ್ಟರ್ಗಳ ಮೇಲೆ ನಡೆಸಿದ ದಾಳಿಗಳಾಗಿದ್ದು, ಒಂದಕ್ಕೆ ಕಾರಣ ಸಂಬಂಧಪಟ್ಟ ಕಲೆಕ್ಟರ್ ಒಬ್ಬ ಮುಸ್ಲಿಂ ನಾಯಕನನ್ನು ಗಡೀಪಾರು ಮಾಡಿದ್ದ. ಇನ್ನೊಬ್ಬ ಕಲೆಕ್ಟರ್ ಮೇಲಿನ ಮೋಪ್ಲಾ ದಾಳಿಗೆ ಕಾರಣ ಆತ ಬಲಾತ್ಕಾರದಿಂದ ಇಸ್ಲಾಮಿಗೆ ಮತಾಂತರಗೊಂಡ ಒಬ್ಬ ಹಿಂದೂ ಬಾಲಕನನ್ನು ರಕ್ಷಿಸಿದ್ದ. ಮೂರು ಪ್ರಕರಣಗಳಲ್ಲಿ ಹಿಂದೂ ಕುಟುಂಬಗಳನ್ನು ಕೊಲ್ಲಲಾಗಿತ್ತು; ಏಕೆಂದರೆ ಅವರು ಇಸ್ಲಾಂನಿಂದ ಮತಾಂತರಗೊಂಡಿದ್ದರು.
ಅಂತಿಮವಾಗಿ ಎಂಟು ಪ್ರಕರಣಗಳಲ್ಲಿ ಹಂತಕರು ಏಕೆ ಕೊಂದರೆಂದು ಊಹಿಸುವುದೇ ಅಸಾಧ್ಯವಾಯಿತು. ಧಾರ್ಮಿಕ ನಾಯಕ ಸಯ್ಯದ್ ಫಾಜಿ (೧೮೨೦-೧೯೦೧) ಜೆಹಾದ್ ಬೋಧನೆ ಮಾಡಿದ್ದು, ಆತನೇ ಮೋಪ್ಲಾ ಹಿಂಸಾತ್ಮಕ ಘಟನೆಗಳಿಗೆ ಪ್ರಚೋದನೆ ನೀಡಿದ್ದ ಎನ್ನಲಾಗಿದೆ. ಮುಸ್ಲಿಂ ಧಾರ್ಮಿಕ ನಾಯಕರಲ್ಲಿ ಎರಡು ಬಗೆಯವರಿದ್ದರು: ನಿಜವಾಗಿ ಅರಬರಾದ ತಂಗಳ್ಗಳು ಹಾಗೂ ಸಾಮಾನ್ಯವಾಗಿ ಕಡಮೆ ಶಿಕ್ಷಣ ಪಡೆದ ಮುಸಲಿಯಾರ್ಗಳು. ತಂಗಳ್ಗಳು ಖಾಜಿ ಮತ್ತು ಇಮಾಮರಾಗಿ ಪ್ರಮುಖ ಮಸೀದಿಗಳಲ್ಲಿ ಕೆಲಸ ಮಾಡಿದರೆ ಮುಸಲಿಯಾರ್ಗಳು ಕುರಾನ್ ವ್ಯಾಖ್ಯಾನಕ್ಕೆ ಅರ್ಹರಾದ ಮುಲ್ಲಾಗಳಾಗಿ ಕೆಲಸ ಮಾಡುತ್ತಿದ್ದರು.
ಮಹತ್ತ್ವದ ಸಂಗತಿಯೆಂದರೆ, ಹಿಂದಿನ ಮೋಪ್ಲಾ ಘಟನೆಗಳನ್ನು ಕೇವಲ ಆರ್ಥಿಕ ಕಾರಣಗಳಿಂದ ವಿವರಿಸಲು ಅಸಾಧ್ಯ. ಗೇಣಿದಾರರನ್ನು ಭೂಮಾಲೀಕರು ಒಕ್ಕಲೆಬ್ಬಿಸುವುದು ಪ್ರಮುಖ ಕಾರಣವಾಗಿದ್ದರೂ ಕೂಡ ಹಿಂದೂ ಕೃಷಿಕ ಜಾತಿಗಳ ನಡುವೆ ಕೃಷಿಸಂಬಂಧಿ ಹಿಂಸಾಚಾರ ನಡೆದಿಲ್ಲ. ಎರಡನೆಯದಾಗಿ ಒಕ್ಕಲೆಬ್ಬಿಸುವ ಆದೇಶಗಳು (ಡಿಕ್ರಿ) ಹೆಚ್ಚಾದಂತೆ ಮೋಪ್ಲಾ ಹಿಂಸಾತ್ಮಕ ಘಟನೆಗಳಲ್ಲಿ ಏರಿಕೆಯೇನಾಗಿಲ್ಲ. ೧೮೬೨-೮೦ರ ನಡುವಣ ೧೮ ವರ್ಷಗಳಲ್ಲಿ ಘಟನೆಗಳು ಕೇವಲ ಮೂರು ನಡೆದಿವೆ.
ಈ ಹಿಂಸಾತ್ಮಕ ಘಟನೆಗಳು ಮತ್ತು ೧೯೨೧-೨೨ರ ಮೋಪ್ಲಾ ಕಾಂಡದ ನಡುವಣ ದೊಡ್ಡ ವ್ಯತ್ಯಾಸವೆಂದರೆ, ೧೯೨೧ರಲ್ಲಿ ಖಿಲಾಫತ್ ಚಳವಳಿಯು ಸಾಂಸ್ಥಿಕ ಮತ್ತು ಸಿದ್ಧಾಂತದ ನಿರ್ಣಾಯಕ ಅಂಶಗಳನ್ನು ನೀಡಿತು. ಅದರಿಂದಾಗಿ ಆಗಲೇ ಇದ್ದ ಮತೀಯ ಉಗ್ರತೆ ಮತ್ತು ಸಾಮಾಜಿಕ ಘರ್ಷಣೆಯ ಪರಿಪಾಟಿಗೆ ತೀವ್ರತೆಯನ್ನು ನೀಡಿದಂತಾಯಿತು.
ಜೆಹಾದ್ನ ಬೀಜಾವಾಪ
ಏಪ್ರಿಲ್ ೨೮, ೧೯೨೦ರಂದು ಮಲಬಾರ್ ಮತ್ತು ಬಹಳಷ್ಟು ಜಿಲ್ಲೆಗೆ ಪ್ರಥಮವಾಗಿ ಖಿಲಾಫತ್ ಚಳವಳಿಯನ್ನು ಪರಿಚಯಿಸಲಾಯಿತು. ಎರ್ನಾಡ್ ತಾಲೂಕಿನ ಮೆಂಜೇರಿಯಲ್ಲಿ ನಡೆದ ಮಲಬಾರ್ ಜಿಲ್ಲಾ ಸಮಾವೇಶದಲ್ಲಿ ಸುಮಾರು ೧,೦೦೦ ಪ್ರತಿನಿಧಿಗಳು ಭಾಗವಹಿಸಿದ್ದರು; ಅವರಲ್ಲಿ ಹೆಚ್ಚಿನವರು ಮೋಪ್ಲಾಗಳು. ಟರ್ಕಿಶ್ ಪ್ರಶ್ನೆಯನ್ನು ಸರ್ಕಾರ ಕೂಡಲೆ ಇತ್ಯರ್ಥ ಮಾಡಬೇಕು; ವಿಫಲವಾದಲ್ಲಿ ಜನ ಸರ್ಕಾರದೊಂದಿಗೆ ಅಸಹಕಾರವನ್ನು ಆರಂಭಿಸಲಿದ್ದಾರೆ ಎಂದು ತಿಳಿಸಲಾಯಿತು. ಮದರಾಸಿನಲ್ಲಿ ಮೌಲಾನಾ ಶೌಕತ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಖಿಲಾಫತ್ ಸಮಾವೇಶದ ನಿರ್ಣಯಕ್ಕೆ ಅನುಗುಣವಾಗಿ ಈ ಸಮಾವೇಶ ನಡೆದಿತ್ತು.
ಮಲಬಾರಿಗೆ ಗಾಂಧಿ ಭೇಟಿ
ಗಾಂಧಿ ಮತ್ತು ಶೌಕತ್ ಅಲಿ ಅದೇ ಆಗಸ್ಟ್ ೧೮ ರಂದು ಕಲ್ಲಿಕೋಟೆಗೆ ಭೇಟಿ ನೀಡಿ, ಖಿಲಾಫತ್ ಮತ್ತು ಅಸಹಕಾರಗಳ ಬಗ್ಗೆ ಭಾಷಣ ಮಾಡಿದರು. ಆ ಭಾಷಣಗಳ ಮುಂದುವರಿಕೆಯಾಗಿ ಮಲಬಾರ್ನಲ್ಲಿ ಖಿಲಾಫತ್ ಸಮಿತಿಗಳನ್ನು ರಚಿಸಲಾಯಿತು. ಪ್ರಮುಖ ಮೋಪ್ಲಾ ಕೇಂದ್ರಗಳಲ್ಲಿ ಹಿಂಸೆಗೆ ಪೂರಕವಾದ ಹಲವು ಸಭೆಗಳನ್ನು ಕೂಡ ನಡೆಸಲಾಯಿತೆಂದು ಶಂಕರನ್ ನಾಯರ್ ದಾಖಲಿಸಿದ್ದಾರೆ. ಬಹುಶಃ ಅದೇ ಕಾರಣದಿಂದ ಮದರಾಸ್ನ ಖಿಲಾಫತ್ ನಾಯಕ ಯಾಕೂಬ್ ಹಸನ್ ಅವರು ಫೆಬ್ರುವರಿ ೧೫, ೧೯೨೧ರಂದು ಖಿಲಾಫತ್ ಮತ್ತು ಅಸಹಕಾರ ಚಳವಳಿ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡುವ ಬಗ್ಗೆ ಕಲ್ಲಿಕೋಟೆಗೆ ಭೇಟಿ ನೀಡಿದಾಗ ಅವರಿಗೆ ನಿಷೇಧಾಜ್ಞೆ ವಿಧಿಸಲಾಯಿತು.
ಇದರಿಂದ ಮೋಪ್ಲಾಗಳಲ್ಲಿ ಭಾರೀ ಅಸಮಾಧಾನ ಉಂಟಾಯಿತು. ಕೆಲವರು (ಮತೀಯ ಬೋಧಕರು?) ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಖಿಲಾಫತ್ ಪರ ಪ್ರಚಾರ ನಡೆಸಿದರು. ವದಂತಿಗಳು ವ್ಯಾಪಕವಾಗಿ ಹಬ್ಬಿದವು; ಭಾರತದ ಮೇಲೆ ದಾಳಿ ನಡೆಸಲು ಅಫಘಾನರು ಬರುತ್ತಿದ್ದಾರೆ ಎನ್ನುವುದು ಅದರಲ್ಲೊಂದು. ಚಳವಳಿಗೆ ಮುನ್ನ ಖಿಲಾಫತ್ ನಾಯಕರು ಬಡ ಮೋಪ್ಲಾಗಳ ಜಮೀನನ್ನು ಬಿಡಿಸಿದರು; ಆ ಮೂಲಕ ಚಳವಳಿ ಜೋರಾಗಬೇಕೆನ್ನುವುದು ಅವರ ಉದ್ದೇಶವಾಗಿತ್ತು.
ಮೌಲಾನಾ ಮಹಮದ್ ಅಲಿ ಅವರು ಚಳವಳಿಯ ಬಗ್ಗೆ ಮದರಾಸಿನಲ್ಲಿ ಮಾಡಿದ ಭಾಷಣವನ್ನು ಕರಪತ್ರಗಳಲ್ಲಿ ಮುದ್ರಿಸಿ ಹಂಚಲಾಯಿತು; ಜಿಲ್ಲಾ ಅಧಿಕಾರಿಗಳು ಅದನ್ನು ನಿರ್ಬಂಧಿಸಿದರು.
ಜೆಹಾದ್ಗೆ ಅನುಕೂಲ
ಕ್ರಮೇಣ ಮಲಬಾರಿನಲ್ಲಿ ಮೋಪ್ಲಾಗಳ ಜೆಹಾದ್ಗೆ ಅನುಕೂಲಕರ ಪರಿಸರ ನಿರ್ಮಾಣವಾಯಿತು. ಪ್ರತಿ ಮೋಪ್ಲಾ ಕೇಂದ್ರದಲ್ಲಿ (ಗ್ರಾಮ) ಒಂದು ಖಿಲಾಫತ್ ಅಸೋಸಿಯೇಶನ್ ಇತ್ತು. ಅದರಲ್ಲಿ ಮೋಪ್ಲಾ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಬಹುಸಂಖ್ಯಾತರಾಗಿ ಮೋಪ್ಲಾ ಸದಸ್ಯರಿದ್ದರು. ಅಂತಹ ಸುಮಾರು ೧೦೦ ಸಂಘಟನೆಗಳು ಎರ್ನಾಡ್ ಮತ್ತು ಪೊನ್ನಾನಿ ಈ ಎರಡು ತಾಲೂಕುಗಳಲ್ಲೇ ಇದ್ದಿರಬೇಕೆಂದು ಅಂದಾಜಿಸಲಾಗಿದೆ. ಖಿಲಾಫತ್ ಅಸೋಸಿಯೇಶನ್ನಲ್ಲಿ ಹಳ್ಳಿಯ ಜನರ ನಡುವೆ ಪರಸ್ಪರ ಸಂಪರ್ಕದ ಕ್ರಮಬದ್ಧ ವ್ಯವಸ್ಥೆಯಿತ್ತು. ಆ ಮೂಲಕ ಸಾಕಷ್ಟು ದೊಡ್ಡದಾದ ಒಂದು ಪ್ರದೇಶದ ಎಲ್ಲ ಗಂಡಸರನ್ನು ತಕ್ಷಣ ಒಂದು ನಿರ್ದಿಷ್ಟ ಸ್ಥಳದಲ್ಲಿ ಸೇರಿಸಲು ಸಾಧ್ಯವಿತ್ತು. ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಾಗ ಮೋಪ್ಲಾಗಳು ಅಲ್ಲಿ ಒಂದು ಸಂಘಟಿತ ಗುಂಪಿನ ರೂಪದಲ್ಲಿ ಸೇರುತ್ತಿದ್ದರು. ಮಲಬಾರ್ನ ಹಿಂದುಗಳಲ್ಲಿ ಅದು ಇಲ್ಲ; ಅವರು ಮಾಮೂಲಾಗಿ ವಿರಳವಾಗಿಯೇ ಇದ್ದರು.
ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎಚ್. ಹಿಚ್ಕಾರ್ ಹೀಗೆ ಹೇಳಿದ್ದರು: ಖಿಲಾಫತ್ ಚಳವಳಿ ಜಾಲಕ್ಕಿಂತ ಮುಖ್ಯವಾಗಿ ಮೋಪ್ಲಾಗಳ ನಡುವೆ ಸಂಪರ್ಕದ ಸಾಂಪ್ರದಾಯಿಕ ವ್ಯವಸ್ಥೆಯೇ ಇತ್ತು. ಅದು ಹಿಂದುಗಳು ಮತ್ತು ಮೋಪ್ಲಾಗಳ ನಡುವಣ ದೊಡ್ಡ ವ್ಯತ್ಯಾಸವಾಗಿದೆ. ಇರುವ ಕೆಲವು ಬಜಾರ್ಗಳು ಸಂಪೂರ್ಣ ಮಾಪಿಳ್ಳೆಯವರದ್ದು; ಅವರಲ್ಲಿ ಹೆಚ್ಚಿನವರು ಕನಿಷ್ಠ ವಾರಕ್ಕೊಮ್ಮೆ ಶುಕ್ರವಾರದ ಪ್ರಾರ್ಥನೆಗೆ ಮಸೀದಿಯಲ್ಲಿ ಸೇರುತ್ತಾರೆ; ಮಸೀದಿಯಲ್ಲಿ ಬೇರೆ ಕೆಲವು ಸಲ ಕೂಡ ಸೇರುತ್ತಾರೆ. ಆದ್ದರಿಂದ ಅವರು ತಮ್ಮದಾದ ಒಂದು ಜನಾಭಿಪ್ರಾಯವನ್ನು ಸುಲಭವಾಗಿ ರೂಪಿಸಬಲ್ಲರು; ಮತ್ತು ಒಟ್ಟು ಸೇರಬಲ್ಲರು, ಇದನ್ನು ಮತದ ಅಡಿಯಲ್ಲಿ ಮಾಡುವುದರಿಂದ ಹಿಂದು ಅಥವಾ ಯೂರೋಪಿಯನ್ನರಿಗೆ ಅಲ್ಲಿ ಪ್ರವೇಶ ಸಿಗಲಾರದು; ಮತ್ತು ಇತರರಿಗೆ ಅದು ತಿಳಿಯುವುದೂ ಇಲ್ಲ. ಇದಕ್ಕೆ ಹೋಲಿಸಿದರೆ ಹಿಂದುಗಳಿಗೆ ಕೆಲವು ಸಾಂದರ್ಭಿಕ ಹಬ್ಬಗಳನ್ನು ಬಿಟ್ಟರೆ ಆ ರೀತಿ ಪರಸ್ಪರ ಭೇಟಿ ಮಾಡುವ ಸಂದರ್ಭಗಳೇ ಇಲ್ಲ.
ಆಯುಧ ವೈವಿಧ್ಯ
ಆಗ ಮೋಪ್ಲಾಗಳ ಕೈಯಲ್ಲಿ ಹಲವು ರೀತಿಯ ಆಯುಧಗಳು ಇರುತ್ತಿದ್ದವೆಂದು ದಾಖಲಾಗಿದೆ. ಅದರಲ್ಲಿ ಕೊಂಬಿನ ಹಿಡಿ ಸಹಿತವಾದ ಎರಡು ಅಡಿ ಉದ್ದದ ಖಡ್ಗ ಮಾಮೂಲಾಗಿತ್ತು. ಅದರಲ್ಲಿ ಒಂದು ಕಡೆ ಬಾಯಿ ಮತ್ತು ಎರಡು ಕಡೆ ಬಾಯಿಯವೂ ಇದ್ದವು; ತುದಿಯಲ್ಲಿ ಪಾಂಟ್. ಒಂದೂವರೆ ಅಡಿ ಉದ್ದದ ದೊಡ್ಡ ಶಿಕಾರಿ ಚಾಕುಗಳು, ಸಾಮಾನ್ಯ ಮೋಪ್ಲಾ ಚಾಕುಗಳು, ಮಧ್ಯದಲ್ಲಿ ಕಟ್ ಮಾಡಿದ ಮೂರು ಅಡಿ ಉದ್ದದ ಹಂದಿ ಈಟಿಗಳು, ದೊಣ್ಣೆಗಳು, ಕೈಗೊಡಲಿಗಳು ಎಲ್ಲ ಇದ್ದವು.
ಮಲಬಾರ್ ಪ್ರದೇಶ ಮುಚ್ಚಿದಂತಿದ್ದು, ವಿಶೇಷವಾಗಿ ಗುಡ್ಡಗಾಡುಗಳಿಂದ ಕೂಡಿದ್ದಾಗಿದೆ. ಅದರಿಂದಾಗಿ ಜೆಹಾದಿಗಳನ್ನು ಸುತ್ತುವರಿಯುವ ಕೆಲಸ ಕಷ್ಟವಾಯಿತು. ಅವರು ವಿವಿಧ ಗ್ಯಾಂಗ್ಗಳಾಗಿ ಒಡೆದರು; ಗೆರಿಲ್ಲಾ ಸಮರತಂತ್ರವನ್ನು ಅನುಸರಿಸಿದರು. ಅದರಿಂದ ತುಂಬ ಕಷ್ಟದ ಮಿಲಿಟರಿ ಸಮಸ್ಯೆ ಉಂಟಾಯಿತು. ಬಹಳಷ್ಟು ಮೋಪ್ಲಾಗಳಿಂದ ಕೂಡಿದ ಸ್ಥಳೀಯ ಪೊಲೀಸ್ ಪಡೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಕಾಗಲಿಲ್ಲ. ಪೊಲೀಸ್ ಠಾಣೆಗಳ ಮೇಲೆ ಮೋಪ್ಲಾಗಳು ದಾಳಿ ನಡೆಸಿದರು. ವಾಸ್ತವವಾಗಿ ಹಲವೆಡೆ ಪೊಲೀಸರು ತಡೆಯೊಡ್ಡಲೇ ಇಲ್ಲ. ಠಾಣೆಯ ಎಲ್ಲ ಶಸ್ತ್ರಾಸ್ತ್ರಗಳನ್ನು ದಂಗೆಕೋರರು ಸಾಗಿಸಿದರು.
ಅದಕ್ಕಿಂತ ಮುಖ್ಯವಾಗಿ ಹಿಂದೂ-ಮುಸ್ಲಿಂ ಏಕತೆಯ ಹುಚ್ಚು ಘೋಷಣೆಯಿಂದಾಗಿ ಹಿಂದುಗಳು ಮೂಕರಾಗಬೇಕಾಯಿತು. ಆ ಬಗ್ಗೆ ಲೇಖಕ ಟಾಟ್ಟನ್ಹಮ್ ಹೀಗೆ ಬರೆದಿದ್ದಾರೆ: ಮಹಾತ್ಮರ ಅಹಿಂಸೆಯ ಹಿಂದೂ ಹೊದಿಕೆಯ ಕೆಳಗೆ ಇಸ್ಲಾಂನ ಹಿಂಸೆಯ ಖಡ್ಗ ದೊಡ್ಡ ಸದ್ದನ್ನೇ ಮಾಡಿತು. ಮೋಪ್ಲಾಗಳು ಮನೆ ಮನೆಗಳಲ್ಲಿ ನೇಗಿಲನ್ನು (ಅದರ ಕಬ್ಬಿಣದಿಂದ) ಖಡ್ಗ ಮಾಡಿಕೊಂಡರು. ಗರಗಸದಿಂದ ಯುದ್ಧದ ಚಾಕು ಮಾಡಿಕೊಂಡರು. ಅಹಿಂಸೆ ಎಂಬುದು ಕೇವಲ ಮುಸುಕು (ಆವರಣ) ಮಾತ್ರ ಆಗಿತ್ತು. ಕಾರ್ಯಾಚರಣೆಯ ಸಮಯ ಬಂದ ಕೂಡಲೆ ಅದನ್ನು ಬಿಸಾಡಿಬಿಡಬಹುದಿತ್ತು. ಮಾಪಿಳ್ಳೆಗಳ ಮಾನಸಿಕತೆ ಏನೆಂದು ಗೊತ್ತೇ ಇಲ್ಲದ ಮುಗ್ಧ ಹಿಂದೂ ಯುವಕರು ಆಂದೋಲನವನ್ನು ಮುಂದುವರಿಸುತ್ತಲೇ ಇದ್ದರು.
ಜೆಹಾದಿಸ್ಟ್ ಹತ್ಯಾಕಾಂಡ
ಖಿಲಾಫತ್ ಅಸಹಕಾರ ಆಂದೋಲನವನ್ನು ಆರಂಭಿಸುವಾಗ ಗಾಂಧಿ ವರ್ಷದೊಳಗೆ ಗುರಿಯನ್ನು ಸಾಧಿಸುವುದಾಗಿ ಭರವಸೆ ನೀಡಿದ್ದರು. ಅದಕ್ಕೆ ಹಿಂದುಗಳು ಬಹುತೇಕ ಸ್ವರಾಜ್ ಎಂಬ ಅರ್ಥವನ್ನು ಮಾಡಿಕೊಂಡಿದ್ದರೆ ಮುಸಲ್ಮಾನರು ಅಟ್ಟೊಮನ್ ಸಾಮ್ರಾಜ್ಯದ ಮರುಸ್ಥಾಪನೆ ಅಥವಾ ಸ್ಥಳೀಯವಾಗಿ ತಮ್ಮ ಸ್ವರಾಜ್ಯ ಎಂಬಂತೆ ಅರ್ಥೈಸಿಕೊಂಡಿದ್ದರು. ವರ್ಷದ ಅವಧಿ ಮುಗಿಯುತ್ತಲೇ ಆಗಸ್ಟ್ ೨೦, ೧೯೨೦ರಂದು ಜೆಹಾದ್ ಸ್ಫೋಟಗೊಂಡಿತು; ಮಲಬಾರಿನಲ್ಲಿ ಕೇವಲ ಒಂದು ವಾರದಲ್ಲಿ ಸರ್ಕಾರ ಲಷ್ಕರಿ ಶಾಸನವನ್ನು ಜಾರಿ ಮಾಡಿತು. ಆದರೂ ಹಿಂಸಾಚಾರವು ನಿಯಂತ್ರಣಕ್ಕೆ ಬಂದು ಲಷ್ಕರಿ ಶಾಸನವನ್ನು ಹಿಂತೆಗೆದುಕೊಳ್ಳುವಾಗ ಆರು ತಿಂಗಳುಗಳೇ ಕಳೆದುಹೋದವು. ಅಂದು (ಫೆಬ್ರುವರಿ ೨೫) ಬದುಕುಳಿದ ಕೊನೆಯ ಮೋಪ್ಲಾ ನಾಯಕ ಅಬೂಬಕರ್ ಮುಸಲಿಯಾರ್ನನ್ನು ಸೆರೆಹಿಡಿಯಲಾಯಿತು. ಸೆಪ್ಟೆಂಬರ್ನಿಂದ ಡಿಸೆಂಬರ್ವರೆಗೆ ಹಿಂಸಾಚಾರ, ಕೊಲೆ, ಸುಲಿಗೆ, ಅತ್ಯಾಚಾರ, ಮತಾಂತರಗಳು ಉತ್ತುಂಗ ಸ್ಥಿತಿಯಲ್ಲಿದ್ದವು. ಕೇಂದ್ರ ಶಾಸನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಕಾರ್ಯದರ್ಶಿ ಸರ್ ವಿಲಿಯಂ ವಿನ್ಸೆಂಟ್ ಬಲಾತ್ಕಾರದ ಮತಾಂತರಗಳು ಬಹುಶಃ ಸಾವಿರಾರು ನಡೆದಿವೆ; ಆದರೆ ಸ್ಪಷ್ಟ ಕಾರಣಗಳಿಗಾಗಿ ನಿಖರವಾದ ಅಂದಾಜು ಮಾಡುವುದು ಅಸಾಧ್ಯವಾಗಬಹುದು ಎಂದು ತಿಳಿಸಿದರು.
ಮೋಪ್ಲಾ ಹಿಂಸಾಚಾರದ ವೇಳೆ ಒಟ್ಟು ಸುಮಾರು ೨೦,೮೦೦ ಹಿಂದುಗಳನ್ನು ಕೊಲ್ಲಲಾಯಿತು. ಖಡ್ಗದ ಮೊನೆಯ ಎದುರಿನಲ್ಲಿ ೪,೦೦೦ಕ್ಕೂ ಅಧಿಕ ಹಿಂದುಗಳು ಮುಸಲ್ಮಾನರಾದರು. ಲಕ್ಷಾಂತರ ಹಿಂದುಗಳು ಮನೆ ಕಳೆದುಕೊಂಡರು. ಬ್ರಿಟಿಷ್ ಸರ್ಕಾರ ಸೇನೆಯನ್ನು ಕಾರ್ಯಾಚರಣೆಗೆ ಇಳಿಸಿದಾಗ ೨೩೩೯ ಮೋಪ್ಲಾಗಳು ಗುಂಡಿಗೆ ಬಲಿಯಾಗಿ, ೧೬೫೨ ಜನ ಗಾಯಾಳುಗಳಾದರು. ೩೯,೩೩೮ ಜನ ಮೋಪ್ಲಾಗಳ (ಜೆಹಾದಿಗಳು) ಮೇಲೆ ಕೇಸು ಹಾಕಿದ್ದು, ಅದರಲ್ಲಿ ೨೪,೧೬೭ ಜನರ ವಿಚಾರಣೆ ನಡೆಯಿತು. ಗಲಭೆಯ ವೇಳೆ ೧,೦೦೦ಕ್ಕೂ ಅಧಿಕ ದೇವಾಲಯಗಳನ್ನು ಮೋಪ್ಲಾಗಳು ನಾಶಗೊಳಿಸಿದರು ಅಥವಾ ಅಪವಿತ್ರಗೊಳಿಸಿದರು.
ಹಿಂಸಾಚಾರ ಸ್ಫೋಟಗೊಳ್ಳುವಾಗ ಕಲ್ಲಿಕೋಟೆ ಮತ್ತು ಮಲಪ್ಪುರಂನ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಇದ್ದದ್ದು ಕೇವಲ ೨೧೦ ಜನ. ಜೆಹಾದ್ ವೇಳೆ ಮಲಬಾರ್ ಸ್ಪೆಷಲ್ ಪೊಲೀಸ್ ಎಂಬ ಪಡೆಯನ್ನು ರಚಿಸಲಾಯಿತು; ಕಾರ್ಯಾಚರಣೆ ವೇಳೆ ಮಲಬಾರ್ ಸ್ಪೆಷಲ್ ಪೊಲೀಸ್ನ ೪೩ ಜನ ಸತ್ತರು ಮತ್ತು ೧೨೬ ಜನ ಗಾಯಗೊಂಡರು; ಜಿಲ್ಲಾ ಪೊಲೀಸ್ ಮತ್ತು ಮೀಸಲು ಪೊಲೀಸ್ನ ೨೪ ಜನ ಮೃತರಾಗಿ ೨೯ ಜನ ಗಾಯಾಳುಗಳಾದರು. ಇದರಿಂದ ಹಿಂಸಾಚಾರದ ತೀವ್ರತೆಯನ್ನು ಅರ್ಥೈಸಿಕೊಳ್ಳಬಹುದು. ಮಲಬಾರಿನ ಮೋಪ್ಲಾ ಜೆಹಾದ್ನಲ್ಲಿ ಈ ಕೆಳಗಿನ ಸಾಮಾನ್ಯ ಲಕ್ಷಣಗಳನ್ನು ಸಿ. ಶಂಕರನ್ ನಾಯರ್ ಗುರುತಿಸಿದ್ದಾರೆ.
೧. ಮಹಿಳೆಯರನ್ನು ಅತ್ಯಂತ ಕ್ರೂರವಾಗಿ ಅವಮಾನಿಸಿದ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು.
೨. ಜನರ ಸಜೀವ ದಹನ.
೩. ಪುರುಷರು, ಸ್ತ್ರೀಯರು ಮತ್ತು ಮಕ್ಕಳ ಸಾಮೂಹಿಕ ಹತ್ಯೆ
೪. ಇಡೀ ಕುಟುಂಬಗಳನ್ನು ಸುಟ್ಟುಹಾಕಿದ್ದು.
೫. ಸಾವಿರಗಟ್ಟಲೆ ಜನರ ಬಲಾತ್ಕಾರದ ಮತಾಂತರ ಮತ್ತು ಮತಾಂತರಗೊಳ್ಳಲು ನಿರಾಕರಿಸಿದವರ ಹತ್ಯೆ
೬. ಅರೆಜೀವವಾಗಿದ್ದ ಜನರನ್ನು ಬಾವಿಗೆ ಎಸೆದು ಹತ್ಯೆ ಮತ್ತು ಸಂತ್ರಸ್ತ ಗಾಯಾಳುಗಳು ತಪ್ಪಿಸಿಕೊಳ್ಳಲು ಬಿಟ್ಟು ಕೆಲವು ಗಂಟೆಗಳ ಬಳಿಕ ಅಂತಿಮವಾಗಿ ಕೊಂದುಹಾಕುವುದು.
೭. ಜನರನ್ನು ಬೆಂಕಿಗೆ ಎಸೆದು (ಸುಟ್ಟುಹಾಕಿ), ಅನಂತರ ಪೀಡಿತ ಪ್ರದೇಶದ ಎಲ್ಲ ಹಿಂದು ಮತ್ತು ಕ್ರೈಸ್ತ ಮನೆಗಳ ಲೂಟಿ. ಅದರಲ್ಲಿ ಮೋಪ್ಲಾ ಹೆಂಗಸರು ಮತ್ತು ಮಕ್ಕಳು ಕೂಡ ಭಾಗಿಯಾಗಿರುತ್ತಿದ್ದರು. ಮಹಿಳೆಯರು ಧರಿಸಿದ್ದ ಬಟ್ಟೆಗಳನ್ನು ಕೂಡ ಬಿಚ್ಚಿಸಿ ಕೊಂಡೊಯ್ದರು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಎಲ್ಲ ಮುಸ್ಲಿಮೇತರ ಜನರನ್ನು ಏನೇನೂ ಇಲ್ಲದ ದಟ್ಟದರಿದ್ರರನ್ನಾಗಿ ಮಾಡಿದರು.
೮. ಹಿಂದುಗಳ ಧಾರ್ಮಿಕ ಭಾವನೆಗಳನ್ನು ಅತ್ಯಂತ ಕ್ರೂರವಾಗಿ ಅವಮಾನಿಸಿದರು. ಪೀಡಿತ ಪ್ರದೇಶದ ದೇವಾಲಯಗಳನ್ನು ಅಪವಿತ್ರಗೊಳಿಸಿದರು ಮತ್ತು ನಾಶಗೊಳಿಸಿದರು. ದೇವಾಲಯಗಳ ಒಳಗೆ ಗೋಹತ್ಯೆ ಮಾಡಿ, ಅದರ ಅವಶೇಷಗಳನ್ನು ದೇವರಮೂರ್ತಿಗಳ ಮೇಲೆ ಹಾಕಿದರು; ತಲೆಬುರುಡೆಗಳನ್ನು ದೇವಾಲಯದ ಗೋಡೆ ಮತ್ತು ಮಾಡಿನ ಮೇಲೆ ನೇತಾಡಿಸಿದರು.
ಹಲವು ಮೋಪ್ಲಾ ನಾಯಕರು ತಮ್ಮನ್ನು ಖಿಲಾಫತ್ ಗವರ್ನರ್ಗಳೆಂದು ಪ್ರತಿಷ್ಠಾಪಿಸಿಕೊಂಡು ಹಿಂದುಗಳ ಹತ್ಯಾಕಾಂಡದ ಉಸ್ತುವಾರಿಯನ್ನು ನಡೆಸಿದರು. ಸಿ.ಐ. ಕೋಯಾ ತಂಗಳ್ ಅಂತಹ ಒಬ್ಬ ವ್ಯಕ್ತಿ. ಆತ ಒಂದು ಖಾಲಿಗುಡ್ಡದ ಮೇಲೆ ತನ್ನ ಕೋರ್ಟ್ ನಡೆಸುತ್ತಿದ್ದ; ಆತನಿಗೆ ಸುಮಾರು ೪೦೦೦ ಜನ ಹಿಂಬಾಲಕರಿದ್ದರು. ಒಮ್ಮೆ ೪೦ಕ್ಕೂ ಅಧಿಕ ಹಿಂದುಗಳನ್ನು ಅವರ ಕೈಗಳನ್ನು ಬೆನ್ನ ಹಿಂದೆ ಕಟ್ಟಿ ತಂಗಳ್ ಬಳಿಗೆ ಕರೆದೊಯ್ಯಲಾಯಿತು. ಮಿಲಿಟರಿಗೆ ಸಹಾಯ ಮಾಡಿದರೆಂಬುದು ಅವರ ಮೇಲಿದ್ದ ಆರೋಪ. ಅವರಲ್ಲಿ ೩೮ ಜನರನ್ನು ವಧಿಸಲಾಯಿತು. ಆತ ಸ್ವತಃ ಅಲ್ಲಿದ್ದು ಆ ಹತ್ಯೆಗಳ ಉಸ್ತುವಾರಿ ನಡೆಸಿದ. ಒಂದು ಬಾವಿಯ ಸಮೀಪ ಇದ್ದ ಬಂಡೆಯ ಮೇಲೆ ಕುಳಿತು ತನ್ನ ಹಿಂಬಾಲಕರು ಸಂತ್ರಸ್ತರ ಕತ್ತು ಸೀಳುವುದನ್ನು ಮತ್ತು ಶವಗಳನ್ನು ಬಾವಿಗೆ ಎಸೆಯುವುದನ್ನು ನೋಡುತ್ತಿರುತ್ತಿದ್ದ. ಕುತೂಹಲದ ಸಂಗತಿಯೆಂದರೆ, ಇದು ಒಂದು ಹತ್ಯೆಯ ಯಥಾಪ್ರತಿಯಾಗಿದ್ದು, ಪ್ರವಾದಿ ನೇತೃತ್ವದ ಇಸ್ಲಾಮಿಕ್ ಪಡೆಗಳು ಟ್ರೆಂಚ್ ಸಮರದಲ್ಲಿ ಬಾನು ಖುರೇಜಾನ ಯಹೂದಿ ಬುಡಕಟ್ಟಿನ ಜನರನ್ನು ಕೊಂದಂತಿತ್ತು ಎಂದು ಡಾ|| ಶ್ರೀರಂಗ ಗೋಡಬೋಲೆ ಉಲ್ಲೇಖಿಸುತ್ತಾರೆ.
ವೈಸರಾಯ್ ಪತ್ನಿಗೆ ದೂರು
ಮೋಪ್ಲಾಗಳ ಆಘಾತಕಾರಿ ದೌರ್ಜನ್ಯಗಳಿಗೆ ಗುರಿಯಾದ ಎರಡು ಸಾವಿರ ಮಹಿಳೆಯರು ನೀಲಂಬೂರು ಮಹಾರಾಣಿಯ ನೇತೃತ್ವದಲ್ಲಿ ಆಗಿನ ವೈಸರಾಯ್ ರೆಡಿಂಗ್ನ ಪತ್ನಿಗೆ ಪತ್ರ ಬರೆದು ತಮ್ಮ ದುಃಖ ನಿವಾರಿಸುವಂತೆ ಕೋರಿದ್ದರು. ಅಲ್ಲಿ ಅವರ ನೋವು-ದುಃಖ ಘನೀಕೃತವಾಗಿದೆ:
ವಿವಿಧ ವರ್ಗಗಳ ಹಿಂದೂ ಮಹಿಳೆಯರಾದ ನಾವು ಮೋಪ್ಲಾ ದಂಗೆ ಎಂಬ ಈಚಿನ ಭೀಕರ ಅನಾಹುತದಿಂದ ದುಃಖಿತರಾಗಿ ತಮಗೆ ಬರೆದುಕೊಳ್ಳುತ್ತಿದ್ದೇವೆ. ಕಳೆದ ನೂರು ವರ್ಷಗಳಲ್ಲಿ ಹಲವು ಸಲ ಮೋಪ್ಲಾಗಳ ಹಿಂಸೆ ನಡೆದಿದೆ. ಆದರೆ ಈ ಸಲದ್ದು ಗಾತ್ರವೂ ದೊಡ್ಡದು, ತೀವ್ರತೆಯೂ ಹಿಂದೆ ಇಲ್ಲದ್ದು. ಎಲ್ಲ ಭೀಕರತೆ ಮತ್ತು ಕ್ರೌರ್ಯ ತಮಗೆ ತಿಳಿದಿರಲಾರದು. ಮತಾಂತರಗೊಳ್ಳಲು ಒಪ್ಪದವರ ದೇಹ, ಕೈ-ಕಾಲುಗಳನ್ನು ತುಂಡರಿಸಿ ಕೆರೆ ಬಾವಿಗಳಿಗೆ ಹಾಕಲಾಗಿದೆ. ಗರ್ಭಿಣಿ ಹೆಂಗಸರನ್ನು ತುಂಡುತುಂಡು ಮಾಡಿ ಶವಗಳನ್ನು ರಸ್ತೆಯ ಬದಿಯಲ್ಲಿ ಎಸೆದಿದ್ದಾರೆ; ಆ ಶವಗಳಿಂದ ಮೃತ ಭ್ರೂಣಗಳು ಹೊರಗೆ ಬಂದಿವೆ. ನಮ್ಮ ಕೈಯಲ್ಲಿದ್ದ ಮುಗ್ಧ, ಅಸಹಾಯ ಮಕ್ಕಳನ್ನು ಸೆಳೆದುಕೊಂಡು ನಮ್ಮೆದುರೇ ಕೊಂದುಹಾಕಿದರು. ನಮ್ಮ ಪತಿ, ತಂದೆ, ಸೋದರರಿಗೆ ಚಿತ್ರಹಿಂಸೆ ನೀಡಿದರು; ಸಜೀವವಾಗಿ ಸುಟ್ಟುಹಾಕಿದರು.
ನಮ್ಮ ಸೋದರಿಯರನ್ನು ಬಂಧುಗಳ ನಡುವಿನಿಂದಲೇ ಎಳೆದುಕೊಂಡು ಹೋಗಿ ಆ ಅಮಾನವೀಯ ಪಶುಗಳು ಎಲ್ಲ ರೀತಿಯಲ್ಲಿ ಅವಮಾನಿಸಿದರು. ಮನೆಗಳನ್ನು ಉರುಳಿಸಿ ಮಣ್ಣಿನ ರಾಶಿಯಾಗಿದೆ. ದೇವಾಲಯಗಳನ್ನು ಅಪವಿತ್ರಗೊಳಿಸಿದರು, ನಾಶಮಾಡಿದರು. ವಿಗ್ರಹಗಳನ್ನು ಒಡೆದುಹಾಕಿದರು. ಹೂಮಾಲೆ ಇಡಬೇಕಾದಲ್ಲಿ ಗೋಮಾಂಸವನ್ನು ಹಾಕಿದರು. ನಮ್ಮ ಮನೆಗಳಲ್ಲಿದ್ದ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿದರು. ಶ್ರೀಮಂತರು ಕೂಡ ದರಿದ್ರರಾಗಿ ಕಲ್ಲಿಕೋಟೆಯ ಬೀದಿಗಳಲ್ಲಿ ಬೇಡುವಂತಾಗಿದೆ.
ಕೆರೆ-ಬಾವಿಗಳು ಕೊಳೆತ ಶವ, ಅಸ್ಥಿಪಂಜರ, ಮನೆಗಳ ಅವಶೇಷಗಳಿಂದ ತುಂಬಿಹೋಗಿವೆ. ದೇವಾಲಯಗಳು ಕಲ್ಲಿನ ರಾಶಿಯಾಗಿವೆ. ನಮ್ಮೆದುರೇ ಕೊಂದ ಮಕ್ಕಳ ಅಳು ಈಗಲೂ ನಮ್ಮ ಕಿವಿಗಳಲ್ಲಿ ತುಂಬಿಕೊಂಡಿದೆ; ಇದು ನಾವು ಸಾಯುವ ತನಕವೂ ನಮ್ಮನ್ನು ಬಾಧಿಸಲಿದೆ. ನಾವು ನಮ್ಮ ಮನೆಗಳನ್ನು ತೊರೆದು ಉಪವಾಸವಿದ್ದು ಅಲೆದಿದ್ದೇವೆ; ಕಾಡುಗಳಲ್ಲಿ ಬೆತ್ತಲೆಯಾಗಿ ದಿನ ಕಳೆದಿದ್ದೇವೆ. ದಾಳಿಕೋರರಿಗೆ ನಾವು ಅಡಗಿಕೊಂಡ ಸ್ಥಳ ತಿಳಿಯಬಾರದೆಂದು ಅಳುತ್ತಿದ್ದ ಮಕ್ಕಳ ಉಸಿರುಗಟ್ಟಿಸಿದ್ದೇವೆ. ಸಾವಿರ ಸಂಖ್ಯೆಯ ನಮ್ಮನ್ನು ನೈತಿಕ, ಧಾರ್ಮಿಕ ನೋವು ಬಾಧಿಸುತ್ತಿದೆ. ಈ ರಕ್ತದಾಹಿ ದುಷ್ಟರ ಮತಕ್ಕೆ ಬಲಾತ್ಕಾರವಾಗಿ ಮತಾಂತರಗೊಂಡ ಅಸಹನೀಯ ದುಃಖ ಈಗಲೂ ನಮ್ಮನ್ನು ಬಾಧಿಸುತ್ತಿದೆ. ಗೌರವಾನ್ವಿತ ಕುಟುಂಬಗಳಲ್ಲಿ ಜನಿಸಿದವರು ಕೂಡ ಬಲಾತ್ಕಾರದ ಮತಾಂತರಕ್ಕೆ ಗುರಿಯಾಗಿದ್ದಾರೆ; ಮತಾಂತರಗೊಳಿಸಿ ಅವರನ್ನು ಬಡ ಮುಸ್ಲಿಂ ಕೂಲಿಗಳಿಗೆ ಮದುವೆ ಮಾಡಿಕೊಟ್ಟರು.
ಕಳೆದ ಐದು ತಿಂಗಳು ಒಂದು ದಿನವೂ ಭೀಕರ ಘಟನೆ ನಡೆಯದೆ ಇಲ್ಲ. ಖಿಲಾಫತ್ ಹೆಸರಿನಲ್ಲಿ ಇದೆಲ್ಲ ನಡೆದಿದೆ. ನಾವು ತಮ್ಮಲ್ಲಿ ಪ್ರತೀಕಾರವನ್ನು ಕೇಳುತ್ತಿಲ್ಲ. ಈ ಕ್ರೂರಿ ಜನರಿಗೆ ಅದೇ ರೀತಿ ಮಾಡಿದರೆ ನಮ್ಮ ದುಃಖ ಕಡಮೆ ಆಗುವುದಿಲ್ಲ. ಕೊಂದವರನ್ನು ಕೊಂದರೆ ಸತ್ತವರು ಮರಳುವುದಿಲ್ಲ. ಆ ಜನಾಂಗಕ್ಕೆ ನಾವು ಸದಾ ಸ್ನೇಹಪರ ನೆರೆಕರೆ ಆಗಲು ಯತ್ನಿಸಿದ್ದೇವೆ. ನಾವು ಪರಿಹಾರ ಕೇಳುತ್ತಿಲ್ಲ. ಮೋಪ್ಲಾಗಳ ಮತೀಯ ಅಂಧತೆಯಿಂದ ಸರ್ಕಾರ ನಮ್ಮನ್ನು ರಕ್ಷಿಸಲಿ ಎಂದು ಪ್ರಾರ್ಥನೆ.
ಪತ್ರವು ಹೇಳುವ ವಿಷಯಗಳಿಗೆ ಯಾವ ವಿವರಣೆಯೂ ಬೇಕಾಗಿಲ್ಲ ಎಂದಷ್ಟೇ ಹೇಳಬಹುದು.
ಸೆಕ್ಯುಲರ್ವಾದಿ ಸುಳ್ಳು
ಮೋಪ್ಲಾ ಅತ್ಯಾಚಾರ ಮತ್ತು ಕೊಲೆಗಳನ್ನು ಸಮರ್ಥಿಸುವ ಸೆಕ್ಯುಲರ್ವಾದಿಗಳ ಒಂದು ಕಥನವಿದ್ದು, ಘಟನೆಗಳಿಗೆ ಜಾತ್ಯತೀತವಾದ ಪ್ರೇರಣಗಳೇ ಕಾರಣವೆಂದು ಅದು ಹೇಳುತ್ತದೆ. ೧೮೫೨ರಷ್ಟು ಹಿಂದೆಯೇ ಮೋಪ್ಲಾಗಳ ಹಿಂಸಾಚಾರದ ಕಾರಣಗಳ ತನಿಖೆ ನಡೆಸಲು ನೇಮಕಗೊಂಡ ಮಲಬಾರ್ನ ವಿಶೇಷ ಕಮಿಷನರ್ ಟಿ.ಎಲ್. ಸ್ಟ್ರೇಂಜ್ ತನ್ನ ವರದಿಯಲ್ಲಿ ಹೀಗೆ ಬರೆದಿದ್ದ: ಯಾವನೋ ಒಬ್ಬ ಗೇಣಿದಾರನಿಗೆ ಕಷ್ಟವಾದಂತಹ ಉದಾಹರಣೆಗಳು ಇರಬಹುದಾದರೂ, ಹಿಂದೂ ಭೂಮಾಲೀಕರು ಗೇಣಿದಾರರ ಬಗೆಗೆ ಸಾಮಾನ್ಯವಾಗಿ ನಡೆದುಕೊಳ್ಳುತ್ತಿದ್ದ ರೀತಿ – ಆತ ಮೋಪ್ಲಾ ಇರಲಿ, ಹಿಂದು ಇರಲಿ – ಸೌಮ್ಯವಾಗಿಯೇ ಇತ್ತು. ಸಮಾನತೆಯಿಂದ ಕೂಡಿತ್ತು ಹಾಗೂ ಸಹನೀಯವಾಗಿತ್ತು. ಮೋಪ್ಲಾ ಗೇಣಿದಾರರು, ವಿಶೇಷವಾಗಿ ದಕ್ಷಿಣ ಮಲಬಾರ್ ತಾಲೂಕುಗಳವರು (ಅಲ್ಲಿ ಹಿಂಸಾಚಾರ ಸಾಮಾನ್ಯವಾಗಿತ್ತು) ತಮ್ಮ ಮೇಲಿದ್ದ ಕಟ್ಟುಪಾಡುಗಳನ್ನು ಮೀರುವುದನ್ನು ಅಭ್ಯಾಸ ಮಾಡಿಕೊಂಡವರು. ಸುಳ್ಳು ಮತ್ತು ಕಾನೂನಿನ ತಕರಾರು ತೆಗೆಯುವವರು. ಆ ಭಾಗದ ಹಿಂದುಗಳಿಗೆ ಮೋಪ್ಲಾಗಳ ಭಯ ಎಷ್ಟೊಂದು ಇತ್ತೆಂದರೆ ತಮ್ಮ ಹಕ್ಕುಗಳಿಗೆ ಸಂಬಂಧಿಸಿ ಮೋಪ್ಲಾಗಳ ವಿರುದ್ಧ ಒತ್ತಡ ತರುವ ಸ್ಥಿತಿಯಲ್ಲಿ ಅವರು ಇರಲೇ ಇಲ್ಲ. ಬಹಳಷ್ಟು ಮೋಪ್ಲಾ ಗೇಣಿದಾರರು ತಾವು ಕೊಡಬೇಕಾದ ಗೇಣಿಯನ್ನು ಕೊಡುತ್ತಿರಲಿಲ್ಲ. ಅವರನ್ನು ಎಬ್ಬಿಸುವುದು ಅಪಾಯಕಾರಿ ಮತ್ತು ಅಸಾಧ್ಯ ಎಂಬಂತಿತ್ತು ಎಂದು ದಾಖಲಾಗಿದೆ.
ಜೆಹಾದ್ ಕಡೆಗೆ ಹೋಗುತ್ತಿದ್ದ ಕಾಲದಲ್ಲಿ ಮೋಪ್ಲಾಗಳು ಕೆಳಜಾತಿಯ ತಿಯ್ಯಾಗಳ ಮೇಲೆ ಹಲವು ದಾಳಿಗಳನ್ನು ನಡೆಸಿದರು. ಸೇಂದಿ ಅಂಗಡಿಯ ಮುಂದೆ ಪ್ರತಿಭಟನೆ ನಡೆಸುವ ಹೆಸರಿನಲ್ಲಿ ಆ ದಾಳಿಗಳನ್ನು ನಡೆಸಲಾಗಿತ್ತು; ಏಕೆಂದರೆ ಪಾನನಿಷೇಧವು ಅಸಹಕಾರ ಚಳವಳಿಯ ಭಾಗವಾಗಿತ್ತು. ಅದನ್ನು ಅಲ್ಲಿ ಮುಸ್ಲಿಂ ಭಾವನೆಗಳ ತುಷ್ಟೀಕರಣಕ್ಕೆ ಬಳಸಿಕೊಳ್ಳಲಾಯಿತು. ಸೆಕ್ಯುಲರ್ವಾದಿಗಳು ಹೇಳುವಂತೆ ಮೋಪ್ಲಾ ದಂಗೆಯು ವಸಾಹತು ವಿರೋಧಿ ಅಥವಾ ಭೂಮಾಲೀಕರ ವಿರುದ್ಧ ಪ್ರಗತಿಪರ ಉದ್ದೇಶಕ್ಕಾಗಿ ನಡೆದದ್ದೇ ಆಗಿದ್ದರೆ ಹಿಂದುಗಳನ್ನು ಮತಾಂತರ ಮಾಡಿದ್ದೇಕೆ? ದೇವಾಲಯಗಳ ನಾಶ, ಅಪವಿತ್ರ ಮಾಡಿದ್ದೇಕೆ? ಮಸೀದಿಗಳಿಗೆ ಏನೂ ಆಗಲಿಲ್ಲ ಏಕೆ? ತಮ್ಮ ಉದ್ದೇಶಗಳ ಬಗ್ಗೆ ಈ ಹಂತಕರೇ ಸೆಕ್ಯುಲರ್ ಮುಖವಾಡ ಪ್ರದರ್ಶಿಸಿದ ದಾಖಲೆ ಇಲ್ಲ. ಖಿಲಾಫತ್ ಚಳವಳಿಯ ಪ್ರಮುಖ ನಾಯಕರು ತಮ್ಮದೇ ರೀತಿಯಲ್ಲಿ ಸೆಕ್ಯುಲರ್ವಾದಿಗಳಲ್ಲ; ತಮ್ಮ ಇಸ್ಲಾಮಿಕ್ ಪ್ರೇರಣೆಯ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.
ಗಾಂಧಿ ಸಮರ್ಥನೆ
ಮೋಪ್ಲಾ ಕಾಂಡಕ್ಕೆ ಸಂಬಂಧಿಸಿ ಎದ್ದುಕಾಣುವ ಒಂದು ಅಂಶವೆಂದರೆ, ಅಲ್ಲಿ ನಡೆದ ಅಮಾನವೀಯ ಕೃತ್ಯಗಳ ಜವಾಬ್ದಾರಿಯಿಂದ ಗಾಂಧಿಯವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೇ ಎನ್ನುವುದು; ಧೀರ (ಧೈರ್ಯಶಾಲಿ), ದೈವಭೀರು ಮೋಪ್ಲಾಗಳು ಮತ ಎಂದು ತಾವು ತಿಳಿದಿದ್ದರ ಬಗ್ಗೆ ಹೋರಾಟ ನಡೆಸಿದರು; ಮತ್ತು ಮತೀಯ ಎಂದು ತಿಳಿದ ರೀತಿಯಲ್ಲಿ ಹೋರಾಟ (ಸಮರ) ನಡೆಸಿದರು ಎಂದು ಗಾಂಧಿ ಹೇಳಿದರು. ಮೊದಲಿಗೆ ಅವರು ನನಗೆ ಆ ವಿಷಯವೇ ತಿಳಿಯದು ಎಂದಿದ್ದರು.
ಆಗ್ರಹಿಸಿ ಕೇಳಿದಾಗ ಇನ್ನೂ ಒಂದು ಹೆಜ್ಜೆ ಮುಂದಿರಿಸಿ ಹಿಂದುಗಳ ಮೇಲೆರಗಿದ ವಿಪತ್ಪರಂಪರೆಗೆ ಹಿಂದೂಗಳೇ ಕಾರಣವೆಂದು ಗಾಂಧಿ ವಾದಿಸಿದರು! ವ್ಯಾಪಕ ಮತಾಂತರ ನಡೆದಿಲ್ಲವೆಂದೂ ಮತಾಂತರದ ಒಂದೇ ಒಂದು ಪ್ರಕರಣ ನಡೆದಿದೆಯೆಂದೂ ಯಂಗ್ ಇಂಡಿಯದಲ್ಲಿ ಬರೆದರು! (ನೋಡಿ: ಸಾವರಕರ್ ಅವರ ಮೋಪ್ಲಾ ಕಾಂಡ – ಒಂದು ಕಾದಂಬರಿ ಅದರ ಪ್ರಸ್ತಾವನೆ – ಎಸ್.ಆರ್. ರಾಮಸ್ವಾಮಿ ಅವರಿಂದ).
ಮೋಪ್ಲಾ ದೌರ್ಜನ್ಯಗಳ ವಿಷಯದಲ್ಲಿ ತುಂಬ ಅತಿಶಯೋಕ್ತಿ ನಡೆದಿದೆ ಎಂದು ಡಾ|| ಮಹಮದ್ ಹೇಳಿದರು; ಒಂದು ಪ್ರಕರಣ ಅವರ ಗಮನಕ್ಕೆ ಬಂದಿದ್ದು ಅದು ಕೂಡ ಸಾಬೀತಾಗಲಿಲ್ಲವಂತೆ – ಎಂದು ಗಾಂಧಿ ಹೇಳಿದರು. ಈ ಹೇಳಿಕೆ ಕಾಂಗ್ರೆಸ್ ನಾಯಕರನ್ನೇ ಅಚ್ಚರಿಯಲ್ಲಿ ಕೆಡವಿತು. ಇಂಥ ಬಾಲಿಶ ಹೇಳಿಕೆಗಳನ್ನು ಕೊಡಬೇಡಿ ಎಂದು ಕಲ್ಲಿಕೋಟೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೆ.ಪಿ. ಕೇಶವ ಮೆನನ್ ಅವರೇ ಗಾಂಧಿಯವರಿಗೆ ಹೇಳಿದರು. ಗಾಂಧಿಯವರಿಗೆ ಸಲಹೆ ನೀಡಿದರೆಂದು ಮೆನನ್ ಅವರ ಮನೆಯ ಮೇಲೆ ಕಾಂಗ್ರೆಸಿಗರು ಕಲ್ಲು ತೂರಿದರು.
ಮೋಪ್ಲಾ ಕಾಂಡದ ಬಗ್ಗೆ, ಬ್ರಿಟಿಷ್ ಸರ್ಕಾರವನ್ನು ಪದಚ್ಯುತಗೊಳಿಸಿ ಇಸ್ಲಾಂ ಸಾಮ್ರಾಜ್ಯ (ರಾಜ್ಯ)ವನ್ನು ಸ್ಥಾಪಿಸುವುದು ಅದರ ಗುರಿಯಾಗಿತ್ತು ಎಂದು ಹೇಳಿದ ಡಾ|| ಬಿ.ಆರ್. ಅಂಬೇಡ್ಕರ್ ಅವರು ಸತ್ಯಕ್ಕೆ ಹೆಚ್ಚು ಸಮೀಪವಿದ್ದರು ಎನ್ನಬಹುದು.
* * *
ಮೋಪ್ಲಾ ದಂಗೆಯ ಹಿನ್ನೆಲೆಯನ್ನು ಗಮನಿಸಿದಾಗ ತಿಳಿಯುವ ಅಂಶವೆಂದರೆ, ಅದು ಪೂರ್ವಯೋಜಿತವಾದದ್ದು ಹೊರತು ತಕ್ಷಣದ ಸ್ಫೋಟವಲ್ಲ. ಏಕೆಂದರೆ ಗಾಂಧಿಯವರು ವರ್ಷದೊಳಗೆ ಸ್ವರಾಜ್ ಸಿಗುತ್ತದೆ ಎಂದು ನೀಡಿದ ಭರವಸೆಯ ಅವಧಿ ಮುಗಿಯುತ್ತಲೇ ಅದು ಶುರುವಾಯಿತು ಹೊರತು ಸಾಮಾನ್ಯವಾಗಿ ನಡೆಯುವ ಸ್ಫೋಟದಂತಿರಲಿಲ್ಲ. ಹೋಂರೂಲ್ ಚಳವಳಿಯ ಆನಿ ಬೆಸೆಂಟ್ ಅವರ ಪ್ರಕಾರ ಆ ದಿನವೇ ಆರಂಭವಾಯಿತು; ಕೂಡಲೆ ಇಡೀ ಪ್ರದೇಶಕ್ಕೆ ವಿಸ್ತರಿಸಿತು. ಆಗಸ್ಟ್ ೨೦ರ ಆಚೀಚೆ ಪೂರ್ಣರೂಪದ ದಂಗೆ ನಡೆಯಿತು. ಪೊಲೀಸ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಇದು ಗೊತ್ತಿರಲೇ ಇಲ್ಲ; ಮತ್ತು ಇಂಥ ದೊಡ್ಡ ದಂಗೆಯ ನಿಯಂತ್ರಣಕ್ಕೆ ಬೇಕಾದ ವ್ಯವಸ್ಥೆ ಅವರ ಬಳಿ ಏನೂ ಇರಲಿಲ್ಲ. ಮಲಬಾರಿನಲ್ಲಿ ಕೆಲವು ತಿಂಗಳು ಗೊಂದಲದಲ್ಲೇ ಕಳೆಯಿತು. ಕೊನೆಗೆ ಸರ್ಕಾರ ಲಷ್ಕರಿ ಶಾಸನವನ್ನು ಹಾಕಬೇಕಾಯಿತು; ಸೇನೆ ಬರಬೇಕಾಯಿತು. ಅಷ್ಟರಲ್ಲಿ ಸಾವಿರಾರು ಜನರ ಹತ್ಯೆ ಮತ್ತು ಭೀಕರ ದೌರ್ಜನ್ಯ ನಡೆದುಹೋಗಿತ್ತು. ಕಾಂಗ್ರೆಸ್ ಇತಿಹಾಸಕಾರರು ಹಾಗೆಲ್ಲ ಆಗಿಲ್ಲವೆಂದು ನಟಿಸುತ್ತಾರೆ. ಇನ್ನು ಮಾರ್ಕ್ಸ್ವಾದಿಗಳು ಮೋಪ್ಲಾಗಳನ್ನು ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರೆಂದು ವೈಭವೀಕರಿಸುತ್ತಾರೆ ಎಂದು ಕಲ್ಲಿಕೋಟೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಾಧವನ್ ನಾಯರ್ ಅವರು ವರದಿಯನ್ನು ಉಲ್ಲೇಖಿಸಿ ಎನ್.ಎಸ್. ರಾಜಾರಾಮ್ ಆಕ್ಷೇಪಿಸುತ್ತಾರೆ. ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರ ಕೊಲೆಗಿಂತ ಹೆಚ್ಚಿನ ಅಮಾನವೀಯ ಅಪರಾಧ ಸಾಧ್ಯವೇ – ಎಂದು ಪ್ರಶ್ನಿಸುತ್ತಾರೆ.
ಆನಿ ಬೆಸೆಂಟ್ ವರದಿ
ಮೋಪ್ಲಾ ಕಾಂಡದ ಸಂತ್ರಸ್ತರ ಪರವಾಗಿ ದೃಢವಾಗಿ ನಿಂತ ಹೋಂರೂಲ್ ಚಳವಳಿಯ ಅಧಿನಾಯಕಿ ಆನಿ ಬೆಸೆಂಟ್ ಅವರು, ಮೋಪ್ಲಾ ಕಾಂಡಕ್ಕೆ ಸಂಬಂಧಿಸಿ ಗಾಂಧಿ ನಡೆದುಕೊಂಡ ರೀತಿಯನ್ನು ಸಮರ್ಥವಾಗಿ ಪ್ರಶ್ನಿಸಿದ್ದಾರೆ. ಅಸಹಕಾರ ಚಳವಳಿಯನ್ನು ಖಿಲಾಫತ್ನ ಭಾಗವಾಗಿ ಮಾಡಿದ್ದರಿಂದ ಗಾಂಧೀವಾದವು ಹಿಂಸೆಯ ಭಾಗವಾಯಿತು. ಹಿಂಸೆಗೆ ಅದು ಜನ್ಮ ನೀಡಿತು. ಈ ಹೊಣೆಯಿಂದ ತಪ್ಪಿಸಿಕೊಳ್ಳಲು ಗಾಂಧಿಗೆ ಅಸಾಧ್ಯ ಎಂದವರು ಹೇಳಿದ್ದಾರೆ. ಕುತೂಹಲದ ಸಂಗತಿ ಎಂದರೆ ಅಂದಿನ ವರದಿಗಳು ಅಸಹಕಾರ ಚಳವಳಿಯು ಖಿಲಾಫತ್ನ ಭಾಗ ಎನ್ನುತ್ತವೆ! ಆಧುನಿಕ ಇತಿಹಾಸ ಪುಸ್ತಕಗಳು ಹೇಳುವಂತೆ ಅಸಹಕಾರವು ಸ್ವತಂತ್ರವಲ್ಲ ಎಂದು ಗುರುತಿಸಲಾಗಿದೆ.
ಆನಿ ಬೆಸೆಂಟ್ ಅವರು ಮುಂದುವರಿದು, ಗಾಂಧಿಯವರನ್ನು ಮಲಬಾರಿಗೆ ಕರೆದುಕೊಂಡು ಹೋಗಿ ಅವರು ಭೀಕರ ಘಟನೆಗಳನ್ನು ಸ್ವತಃ ನೋಡುವುದು ಒಳ್ಳೆಯದು. ಇದು ಅವರ ಮತ್ತು ಅವರ ಪ್ರೀತಿಯ ಸೋದರರಾದ ಮೌಲಾನಾ ಮಹಮದಾಲಿ ಮತ್ತು ಮೌಲಾನಾ ಶೌಕತಾಲಿ ಅವರ ಬೋಧನೆಗಳಿಂದ ಆದದ್ದು. ಗಾಂಧಿ ಸ್ವರಾಜ್ ಬರುವುದೆಂದು ಘೋಷಿಸಿದ ದಿನವೇ ಮೋಪ್ಲಾಗಳು ಪೊಲೀಸ್ ಇನ್ಸ್ಪೆಕ್ಟರನ್ನು ಸುತ್ತುವರಿದರು. ಅಂದಿನಿಂದ ಸಾವಿರಾರು ನಿಷೇಧಿತ ಕತ್ತಿಗಳನ್ನು (ಖಡ್ಗ) ತಯಾರಿಸಿ ಗುಟ್ಟಾಗಿ ಸಾಗಿಸಿದರು. ಆಗಸ್ಟ್ ೨೦ರಂದು ದಂಗೆ ಸ್ಫೋಟಿಸಿತು. ಪೊಲೀಸ್ ಠಾಣೆ ಮತ್ತು ಸರ್ಕಾರಿ ಕಛೇರಿಗಳ ಮೇಲೆ ಖಿಲಾಫತ್ ಧ್ವಜ ಹಾರಿಸಿದರು. ಮೋಪ್ಲಾಗಳಿಂದ ಹೃದಯವಿದ್ರಾವಕ ದುಷ್ಟತನ ನಡೆಯಿತು. ಅದಕ್ಕೆ ಕಾರಣ ಅಸಹಕಾರ ಮತ್ತು ಖಿಲಾಫತ್ ಚಳಿವಳಿಯ ನಾಯಕರು. ಸ್ವರಾಜ್ ಸ್ಥಾಪನೆಯೆಂದರೆ ಇಸ್ಲಾಂವಿರೋಧಿ ಇಂಗ್ಲೆಂಡ್ ವಿರುದ್ಧ ಇಸ್ಲಾಂ ಜಯಗಳಿಸುತ್ತದೆಂದು ಮೋಪ್ಲಾಗಳು ತಿಳಿದುಕೊಂಡು ಹಿಂಸೆಗಿಳಿದರು; ಮಸೀದಿಗಳು ಘೋಷಣೆ ಮಾಡಿದವು. ಕಾಂಗ್ರೆಸ್ ಮತ್ತು ಮುಸ್ಲಿಂ ಮತೀಯ ನಾಯಕರು ಒಂದೇ ಎಂಬಂತಿತ್ತು – ಎಂದು ಆನಿ ಬೆಸೆಂಟ್ ಮತ್ತು ಮಾಧವನ್ ನಾಯರ್ ಅವರ ಪ್ರತ್ಯಕ್ಷದರ್ಶಿ ವರದಿಯು ವಿವರಿಸುತ್ತದೆ.
ಸತ್ಯದ ಹೊಣೆ ಹೊರಲಿ
ಗಲಭೆಯ ಜವಾಬ್ದಾರಿಯನ್ನು ಅಸಹಕಾರಿಗಳು (ಓ.ಅ.ಔ. – ಓoಟಿ-ಅo-oಠಿeಡಿಚಿಣoಡಿs) ತೆಗೆದುಕೊಳ್ಳುವುದಿಲ್ಲವೆಂದು ಗಾಂಧಿಯವರು ಮನಸ್ಸಿಗೆ ಬಂದಂತೆ ಹೇಳಬಹುದು. ಇದು ಅವರು ಸ್ವೀಕರಿಸುವ ಪ್ರಶ್ನೆ ಅಲ್ಲ; ಸತ್ಯಾಂಶಗಳು ಏನು ಹೇಳುತ್ತವೆ ಅದು ಮುಖ್ಯ. ಮುಂಬಯಿ ರಕ್ತಪಾತದ ಜವಾಬ್ದಾರಿಯನ್ನು ಆತ ವಹಿಸಿಕೊಂಡರು; ಮಲಬಾರಿನ ನರಮೇಧ ಆತನ ಜವಾಬ್ದಾರಿಗಾಗಿ ಕೂಗಿಕೊಳ್ಳುತ್ತಿದೆ. ಮಲಬಾರಿನಲ್ಲಿ ಅಸಹಕಾರಿಗಳು (ಎನ್ಸಿಓ) ಇಲ್ಲವೇ ಇಲ್ಲ; ಆದರೆ ಅಲ್ಲಿ ಅತ್ಯಂತ ಕಹಿಯಾದ ದ್ವೇಷ ತಲೆಯೆತ್ತಿದೆ. ಅದು ಗಾಂಧೀವಾದ, ಎನ್ಸಿಓ ಮತ್ತು ಖಿಲಾಫತಿಗಳ ಬೋಧನೆಯ ನೇರ ಪರಿಣಾಮ ಎಂದು ಆನಿ ಬೆಸೆಂಟ್ ಆರೋಪಿಸಿದ್ದಾರೆ.
ಎಲ್ಲರೂ ಖಿಲಾಫತ್ರಾಜ್ ಬಗ್ಗೆ ಮಾತನಾಡುತ್ತಿದ್ದಾರೆ. ಸರ್ಕಾರ ಅದನ್ನು ಬಲವಾದ ಕೈಯಿಂದ ಮಟ್ಟ ಹಾಕಬೇಕೆಂಬುದು ಜನಸಮುದಾಯದ ಅಪೇಕ್ಷೆಯಾಗಿದೆ. ಸರ್ಕಾರದ ಮೇಲಿನ ದ್ವೇಷ ನಿಲ್ಲಿಸುವಂತೆ ಕಾಂಗ್ರೆಸ್ನ ಸೌಮ್ಯವಾದಿಗಳು ಒತ್ತಡ ತರಬೇಕೆಂದು ಗಾಂಧಿ ಹೇಳುತ್ತಾರೆ. ಅಂದರೆ ಇದು ಉಳಿದ ಜೀವಗಳ ಮೇಲೆ ತೋಳಗಳನ್ನು ಛೂ ಬಿಟ್ಟಂತೆ. ಸೌಮ್ಯವಾದಿಗಳ ಸಹಾನುಭೂತಿ ಕೊಲೆಗಡುಕರ ಜೊತೆ ಇಲ್ಲದಿರಬಹುದು; ಆದರೆ ಅವರು ಸರ್ಕಾರವನ್ನು ನಿಷ್ಫಲಗೊಳಿಸುವ (ಅಸಹಕಾರ) ಬೋಧನೆಯನ್ನು ಜಾರಿಗೆ ತರುವವರಾಗಿದ್ದಾರೆ. ಅವರದೇ ರೀತಿಯಲ್ಲಿ ಸರ್ಕಾರದ ಮೇಲೆ ಯುದ್ಧ ಸಾರಿದ್ದಾರೆ – ಎಂದಿರುವ ವರದಿ ಮಲಬಾರಿನ ಅಂದಿನ ಪರಿಸ್ಥಿತಿಯನ್ನು ಬಯಲಿಗೆಳೆಯುತ್ತದೆ.
ಮೋಪ್ಲಾಗಳ ಮಾನಸಿಕತೆಯನ್ನು ಗಾಂಧಿಯವರು ಹೇಗೆ ಇಷ್ಟಪಡುತ್ತಾರೋ ಗೊತ್ತಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬ ಗಾಯಾಳು ಮೋಪ್ಲಾ ಖೈದಿ ತಾನು ಸಾಯುತ್ತೇನಾ ಎಂದು ವೈದ್ಯರಲ್ಲಿ ಕೇಳಿದ. ಬದುಕುವುದು ಕಷ್ಟ ಎಂದು ಅವರು ಹೇಳಿದರು; ಆಗ ಆತ ಸರಿ, ನಾನು ಹದಿನಾಲ್ಕು ಜನ ಅವಿಶ್ವಾಸಿ (ಕಾಫಿರ್)ಗಳನ್ನು ಕೊಂದೆನೆಂಬ ಸಂತೋಷ ಇದೆ ಎಂದು ಹೇಳಿದ. ಅಂತಹ ದೈವಭೀರು ಮೋಪ್ಲಾಗಳನ್ನು ಗಾಂಧಿ ಮೆಚ್ಚುತ್ತಾರೆ! ಅವರ ಪ್ರಕಾರ ಇವರೆಲ್ಲ ಮತ ಎಂದು ತಾವು ತಿಳಿದುದರ ಪರವಾಗಿ ಹೋರಾಡುತ್ತಿದ್ದಾರೆ; ಮತೀಯ (ಧಾರ್ಮಿಕ) ಎಂದು ತಮಗೆ ತಿಳಿದ ರೀತಿಯಲ್ಲಿ ಹೋರಾಡುತ್ತಿದ್ದಾರೆ. ಕೊಲೆ, ಅತ್ಯಾಚಾರ, ಲೂಟಿ, ಮಹಿಳೆ-ಮಕ್ಕಳ ಕೊಲೆ, ಇಡೀ ಕುಟುಂಬವನ್ನು ತರಿದುಹಾಕುವುದು ಇದೆಲ್ಲ ಆ ಜನರ ಪ್ರಕಾರ ಧಾರ್ಮಿಕ ಕಾರ್ಯ. ಆದರೆ ಯಾವುದೇ ನಾಗರಿಕ ಸಮಾಜ ಅದನ್ನು ನಿಯಂತ್ರಿಸದೆ ಇರಲು ಸಾಧ್ಯವಿಲ್ಲ – ಎಂದು ಆನಿ ಬೆಸೆಂಟ್ ಒತ್ತಿಹೇಳುತ್ತಾರೆ.
ಕೆಲವು ಪಾರ್ಸಿ ಮಹಿಳೆಯರ ಸೀರೆ ಹರಿದಾಗ ಗಾಂದಿಯವರಿಗೆ ಶಾಕ್ ಆಯಿತು. ಆಗಲೂ ದೈವಭೀರು ಗೂಂಡಾಗಳಿಗೆ ವಿದೇಶೀ ಬಟ್ಟೆ ಧರಿಸುವುದು ಪಾಪ ಎಂದು ಬೋಧಿಸಲಾಗಿತ್ತು. ಅಂಥ ಗಾಂಧಿಯವರಿಗೆ ಚಿಂದಿ ಬಟ್ಟೆಯೊಂದಿಗೆ ಮನೆಗಳಿಂದ ಹೊರಹಾಕಲಾದ ಸಾವಿರಾರು ಸ್ತ್ರೀಯರ ಬಗ್ಗೆ ಸ್ವಲ್ಪವೂ ಕರುಣೆ ಇಲ್ಲವಾಯಿತೆ? ರಸ್ತೆ ಬದಿಯ ನಿರಾಶ್ರಿತ ಶಿಬಿರದಲ್ಲಿರುವ ತಾಯಂದಿರ, ಪುಟ್ಟ ಮಕ್ಕಳ ಬಗ್ಗೆ ಅವರಿಗೆ ಏನೂ ಅನ್ನಿಸುವುದಿಲ್ಲವೆ? ಈ ಶೋಚನೀಯ ಸ್ಥಿತಿ ವರ್ಣನೆಗೆ ಸಿಗುವಂಥದ್ದಲ್ಲ. ವಿವಾಹಿತೆಯರಾದ ಸುಂದರ ಯುವತಿಯರು ಅತ್ತು ಅತ್ತು ಅವರ ಕಣ್ಣು ಅರ್ಧ ಕುರುಡಾಗಿದೆ. ಮೋಪ್ಲಾಗಳು ಧಾರ್ಮಿಕ ಎಂದು ತಿಳಿಯುವ ರೀತಿಯಲ್ಲಿ ಕಣ್ಣ ಮುಂದೆಯೇ ಪತಿಯ ಕೊಲೆಯಾಗಿ ಭಯಕಂಪಿತೆಯರಾದವರು ಶಿಬಿರಗಳಲ್ಲಿದ್ದಾರೆ. ಕುಂಟುವ ವೃದ್ಧೆಯರ ಮುಖದಲ್ಲಿ ದುಃಖ ಎದ್ದುಕಾಣುತ್ತಿದೆ. ಮೈಮುಟ್ಟಿದರೆ ಅಳುತ್ತಾರೆ; ನಿದ್ದೆಯಿಂದ ಎದ್ದರೆ ಅಳುತ್ತಾರೆ. ಎಲ್ಲ ಕಳೆದುಕೊಂಡ ಗಂಡಸರು ಹತಾಶ ಸ್ಥಿತಿಯಲ್ಲಿದ್ದಾರೆ. ನಿರಾಶ್ರಿತರ ಶಿಬಿರಗಳಲ್ಲಿ ಅಂಥ ಸಾವಿರಾರು ಜನರೊಂದಿಗೆ ನಾನು ಮಾತನಾಡಿದೆ. ಕಣ್ಣು ಬಿಟ್ಟರೆ ದಯಾಪೂರ್ಣ ನೋಟ. ಶಿಬಿರಗಳಲ್ಲಿ ಅಂಥವರೇ ತುಂಬಿದ್ದಾರೆ. ಇಂತಹ ನಾಚಿಕೆಗೇಡು ಅಮಾನವೀಯತೆ ಮಲಬಾರಿನಲ್ಲಿ ಮಡುಗಟ್ಟಿದೆ ಎಂದು ಹೋಂರೂಲ್ನ ನಾಯಕಿ ಆನಿ ಬೆಸೆಂಟ್ ವಿವರಿಸಿದ್ದಾರೆ.
ನೆನಪಿರಲಿ, ಈ ಭೀಕರ ಕೃತ್ಯವನ್ನು ಶುರುಮಾಡಿದ್ದು ಮೋಪ್ಲಾಗಳು. ಅನಂತರ ಸರ್ಕಾರ (ಸೇನೆ) ಮಧ್ಯಪ್ರವೇಶಿಸಿ ಬಹಳಷ್ಟು ಸಂತ್ರಸ್ತರನ್ನು ಉಳಿಸಿತು. ಆ ರೀತಿಯಲ್ಲಿ ಸಾವಿರಾರು ಜನ ಬದುಕುಳಿದರು; ಏನಿದ್ದರೂ ಗಾಂಧಿಯವರು ಆ ದ್ವೇಷಿಗಳನ್ನು ತಡೆಯಲಿಲ್ಲ. ಸರ್ಕಾರ ತಡೆಯದಿದ್ದರೆ ಮೋಪ್ಲಾಗಳು ನಿರಾಶ್ರಿತರ ಶಿಬಿರದ ಮೇಲೆ ಕೂಡ ದಾಳಿ ನಡೆಸಿ ತಮ್ಮ ಕೆಲಸವನ್ನು ಮುಗಿಸಬಹುದಿತ್ತು ಎಂದಿದ್ದಾರೆ.
ನಾನು ಕಲ್ಲಿಕೋಟೆಯಲ್ಲಿ ಮೂರು ದೊಡ್ಡ ಶಿಬಿರಗಳನ್ನು ನೋಡಿದೆ. ಕಾಂಗ್ರೆಸ್ ಕಟ್ಟಡ ಹಾಗೂ ಆವರಣದಲ್ಲಿ ಬೆಳಗ್ಗೆ ೭ರಿಂದ ಮಧ್ಯಾಹ್ನದವರೆಗೆ ಅಕ್ಕಿ ಕೊಡುತ್ತಾರೆ. ವ್ಯವಸ್ಥೆ ಚೆನ್ನಾಗಿದೆ. ದೊಡ್ಡ ಹುಲ್ಲಿನ ಮಾಡಿನ ಕಟ್ಟಡದಲ್ಲಿ ಹೆಂಗಸರು, ಮಕ್ಕಳಿದ್ದಾರೆ. ಗಂಡಸರು ಹೊರಗಡೆ ಮಲಗುತ್ತಾರೆ. ಎಲ್ಲ ನೋಡಿಕೊಳ್ಳುವವರು ಭಾರತೀಯರು. ಜಾಮೊರಿನ್ ಸಮಿತಿ (ಕೊಚ್ಚಿ ಮಹಾರಾಜ ಜಾಮೊರಿನ್ ರಚಿಸಿದ್ದು) ಎಲ್ಲರಿಗೆ ಬಟ್ಟೆ, ಹಣವನ್ನು ವಿತರಿಸುತ್ತಿದೆ; ಕಾಂಗ್ರೆಸ್ ಆಹಾರ ನೀಡುತ್ತಿದೆ. ಪಾಲ್ಗಾಟ್ನಲ್ಲೂ ಇಂಥದೇ ವ್ಯವಸ್ಥೆ ಇದೆ ಎನ್ನುವ ಆನಿ ಬೆಸೆಂಟ್ ತಮಗೆ ಇಷ್ಟವಾದ ಒಂದು ಘಟನೆ (ಸಂದರ್ಭ) ಹೇಳಿ ವರದಿಯನ್ನು ಮುಗಿಸುತ್ತಾರೆ.
ಇಬ್ಬರು ಪುಲಾಯಾಗಳನ್ನು (ತೀರಾ ಕೆಳಗಿನ ಅವರ್ಣೀಯರು, ಅಸ್ಪೃಶ್ಯರು) ಮೋಪ್ಲಾಗಳು ಹಿಡಿದು ಇಸ್ಲಾಂ ಅಥವಾ ಸಾವಿನ ನಡುವೆ ಒಂದನ್ನು ಆರಿಸಿಕೊಳ್ಳುವಂತೆ ಹೇಳಿದರು. ಹಿಂದೂಧರ್ಮ ಅವರಿಗೆ ಮಲತಾಯಿಯ ರೀತಿಯಲ್ಲಿದ್ದರೂ ಕೂಡ ಅವರು ಅದನ್ನು ಎಷ್ಟೊಂದು ಪ್ರೀತಿಸುತ್ತಿದ್ದರೆಂದರೆ, ಮುಸ್ಲಿಂ ಆಗುವ ಬದಲು ಹಿಂದುಗಳಾಗಿಯೇ ಸಾಯುತ್ತೇವೆ ಎಂದು ಹೇಳಿದರಂತೆ. ಇದನ್ನು ಉಲ್ಲೇಖಿಸುವ ಹೋಂರೂಲ್ ನಾಯಕಿ ಎರಡೂ ಮತಗಳ ದೇವರು ತಮ್ಮ ಸಂದೇಶವಾಹಕರನ್ನು ಕಳುಹಿಸಲಿ; ಅವರು ಮರಣ ಹೊಂದಿದ ಮತದಲ್ಲೇ ಮರಳಿ ಹುಟ್ಟುವಂತಾಗಲಿ ಎನ್ನುವ ತಮ್ಮ ತೀರ್ಮಾನವನ್ನು ಹೇಳುತ್ತಾರೆ.
(ಮುಂದುವರಿಯಲಿದೆ)