ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ದಾಖಲೆ ಎನ್ನಬಹುದಾದ್ದು ಭಾರತ-ಭಾರತಿ ಮಕ್ಕಳ ಸಾಹಿತ್ಯ ಮಾಲೆ. ಭಾರತದ ೫೧೦ ಮಹಾಪುರುಷರ ಜೀವನಗಾಥೆಗಳು ಯೋಜನಾಬದ್ಧವಾಗಿ ನಿರಂತರವಾಗಿ ಪ್ರಕಟವಾದದ್ದು ಕನ್ನಡದಲ್ಲಿ ಮಾತ್ರ. ಇದು ಭಾರತದ ಬೇರಾವ ಭಾಷೆಯಲ್ಲೂ ಕಂಡುಬರದಂತಹ ಮಹಾನ್ ಸಾಧನೆ. ರಾಷ್ಟ್ರೋತ್ಥಾನ ಪರಿಷತ್ತಿನ ಆರಂಭದ ದಶಕಗಳಲ್ಲೇ, ಅದು ಆರ್ಥಿಕವಾಗಿ ಅಷ್ಟೇನು ಸಂಪನ್ನಸ್ಥಿತಿಯಲ್ಲಿ ಇರದಿದ್ದಾಗಲೇ ಕೈಗೊಂಡ ದೀರ್ಘಕಾಲದ ಸಾಹಿತ್ಯಯಾತ್ರೆ (ನವೆಂಬರ್ ೧೯೭೨- ಜನವರಿ ೧೯೮೧). ಈ ಸಾಹಿತ್ಯಕೈಂಕರ್ಯದ ಉಗಮಾವಸ್ಥೆಯಿಂದ ಕೊನೆಯವರೆಗೆ ಹಾಗೂ ಭಾರತ-ಭಾರತಿ ಎರಡನೆಯ ಹಂತದಲ್ಲೂ ಅಲ್ಪಸ್ವಲ್ಪ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದಿದ್ದು ನನ್ನ ಅದೃಷ್ಟವೇ ಸರಿ.
ಈ ಕಾರ್ಯಯೋಜನೆಯ ಬೃಹತ್ತನ್ನು ಅರ್ಥಮಾಡಿಕೊಳ್ಳಲು ಇಲ್ಲಿ ನಾನು ನೀಡುವ ಅಂಕಿ-ಅಂಶಗಳೇ ಸಾಕು. (ಇದರಲ್ಲಿ ಪುನರ್ಮುದ್ರಣದ ಅಂಕಿ ಅಂಶ ಸೇರಿಲ್ಲ.)
- ಯೋಜನೆಯ ಕಾಲಾವಧಿ: ೮ ವರ್ಷ, ೬೭ ದಿನಗಳು
- ೫೧೦ ಮಕ್ಕಳ ಪುಸ್ತಕಗಳ ಪುಟಗಳ ಒಟ್ಟು ಸಂಖ್ಯೆ ೨೨, ೧೪೦.
- ಒಟ್ಟು ಪದಗಳ ಸಂಖ್ಯೆ ಸುಮಾರು ಹದಿನೈದು ಲಕ್ಷ ಮೂವತ್ತು ಸಾವಿರ.
- ಸುಮಾರು ಒಂದು ಕೋಟಿಗೂ ಮೀರಿ ಪ್ರತಿಗಳ ಮುದ್ರಣ!
- ‘ಮಕ್ಕಳ ಕೈಗೆ ಸರಸ್ವತಿ’ ಎಂಬ ಪುಸ್ತಕ ಯೋಜನೆಯಡಿ ಹಿಂದುಳಿದ ದೀನದಲಿತ ಸಮಾಜವರ್ಗಗಳ ಸುಮಾರು ಎರಡು ಲಕ್ಷ ಮಕ್ಕಳಿಗೆ ಪುಸ್ತಕಗಳ ಉಚಿತ ವಿತರಣೆ!
- ಜನಸಾಮಾನ್ಯರಿಂದ ಮಾತ್ರ ಈ ಯೋಜನೆಗೆ ಸಂಗ್ರಹವಾದ ಠೇವಣಿಯ ಒಟ್ಟು ಮೊತ್ತ ರೂ. ೭,೪೦,೦೦೦.
- ಠೇವಣಿ ನೀಡಿದ ಸಾರ್ವಜನಿಕರ ಸಂಖ್ಯೆ ೬೫೯.
- ಈ ಬೃಹತ್ ಯೋಜನೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರ ಸಂಖ್ಯೆ ಸಾವಿರಾರು.
ರೋಮಾಂಚನಕಾರಿ ಸಾಹಸಯಾತ್ರೆ
ಈ ಯೋಜನೆಯ ಕಥೆಯನ್ನು ಅರಿಯಬೇಕಾದರೆ ಯೋಜನೆಗಳ ಮುಖ್ಯ ರೂವಾರಿಗಳ ಮಾತುಗಳಿಗಿಂತ ಯುಕ್ತವಾದ ಬೇರೊಂದು ದಾರಿ ಇಲ್ಲ ಎಂದು ನನ್ನ ಅನಿಸಿಕೆ.
ರಾಷ್ಟ್ರೋತ್ಥಾನ ಪರಿಷತ್ತೆಂಬ ಷಷ್ಟಿಪೂರ್ತಿ ಸಮೀಪಿಸುತ್ತಿರುವ ಸಂಸ್ಥೆಯ ಹುಟ್ಟಿಗೆ ಕಾರಣರಾದ ಪ್ರಪ್ರಥಮ ಪ್ರಧಾನ ಕಾರ್ಯದರ್ಶಿ ದಿ. ನಂ. ಮಧ್ವರಾವ್ ಅವರದೇ. ಪವಾಡ ಸದೃಶ ಅದ್ಭುತ ಪರಿಕಲ್ಪನೆ ಈ ಭಾರತ-ಭಾರತಿ ಯೋಜನೆಯೂ ಸಹ.
ಅದು ಹೇಗೆ ಆರಂಭವಾಯಿತೆಂದು ಅವರ ಮಾತುಗಳಲ್ಲೇ ನೋಡೋಣ;
“ಆ ದಿನಗಳಲ್ಲಿ, ೧೯೫೦ರಿಂದ ೧೯೮೦ರವರೆಗಿನ ಕಾಲದಲ್ಲಿ ನಾನೊಬ್ಬ ಅಲೆಮಾರಿ. ಬೆಂಗಳೂರಿಗೆ ಬಂದಾಗ ಶಂಕರಪುರದ ಕೇಶವಕೃಪಾದಲ್ಲಿ ಇರುತ್ತಿದ್ದೆ. ಕೇಶವ ಕೃಪಾದಲ್ಲಿ ನಿತ್ಯ ಬೆಳಗ್ಗೆ ಅಲ್ಲಿರುವವರೆಲ್ಲ ಸೇರಿ ಪ್ರಾತಃಸ್ಮರಣೆ ಎಂಬ ಶ್ಲೋಕಗಳನ್ನು ಹೇಳುವುದು ವಾಡಿಕೆ. ಇದನ್ನು ಹೇಳುವಾಗ, ನಮ್ಮ ದೇಶದಲ್ಲಿ ಆಗಿಹೋದ ನೂರಾರು ಮಹಾವ್ಯಕ್ತಿಗಳ ಹೆಸರುಗಳು ಬರುತ್ತವೆ…
“ಅವರೆಲ್ಲರನ್ನು ಕುರಿತು ಒಂದೊಂದು ಪುಸ್ತಕ ಬರೆದರೆ? ಅಬ್ಬಾ, ಬಲು ಕಷ್ಟ! ಅನೇಕ ದಶಕಗಳ ಕೆಲಸ. ಲಕ್ಷಾಂತರ ರೂಪಾಯಿಗಳ ಕೆಲಸ… ನನ್ನ ಪ್ರವಾಸದ ಕಾಲದಲ್ಲಿ ಈ ಕುರಿತೇ ಎಡೆಬಿಡದ ಆಲೋಚನೆಗಳು. ಆಲೋಚನೆಗಳು ಕನಸಾದವು…ಆಲೋಚನೆಗಳೇ ಹುಚ್ಚಾದವು. ಈ ಹುಚ್ಚಿಗೆ ಹಲವು ಮುಖಗಳು, ಚಿಂತೆಗಳು. ಸಂಪಾದಕರು, ಬರಹಗಾರರು, ಸಿಬ್ಬಂದಿ, ಮುದ್ರಣ ಯಂತ್ರಗಳು, ಚಿತ್ರಗಳು, ಚಿತ್ರಕಾರರು, ಮಾರಾಟದ ವ್ಯವಸ್ಥೆ, ಹಣದ ವ್ಯವಸ್ಥೆ ಇತ್ಯಾದಿ ಇತ್ಯಾದಿ. ಚಾಟಿ ಇಲ್ಲದೆ ಬುಗುರಿ ಆಡಿಸುವ ಹುಚ್ಚು ಕಲ್ಪನೆ!
“ಈ ನನ್ನ ಕನಸನ್ನು ನನಸು ಮಾಡುವುದರಲ್ಲಿ ನನ್ನೆರಡು ಭುಜಗಳಂತೆ ಕೆಲಸ ಮಾಡಲು ರಾಷ್ಟ್ರೋತ್ಥಾನದ ಪ್ರಧಾನ ವ್ಯವಸ್ಥಾಪಕ ಮೈ.ಚ. ಜಯದೇವ ಮತ್ತು ಕಾರ್ಯದರ್ಶಿ ಅರಕಲಿ ನಾರಾಯಣ ಮುಂದಾದರು. ಹಣ ಕೂಡಿಸಲು, ಕೊಟ್ಟ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವುದರಲ್ಲಿ ಇವರ ಸೇವೆಯನ್ನು ಮರೆತರೆ ಲೋಪವಾದೀತು. ಈ ಯೋಜನೆಯನ್ನು ಚೆನ್ನಾಗಿ ನಿರ್ವಹಿಸಿದ ತಿರು ಕೂಡ ಸ್ಮರಣೀಯರು. ಶಿವರಾಮು, ಬಾಬು ಕೃಷ್ಣಮೂರ್ತಿ, ಕೊ.ರಾ. ರಾಜಗೋಪಾಲ್, ಪ್ರೆಸ್ ಮಂಚನಬಲೆ ರಾಘವೇಂದ್ರ ಮುಂತಾದ ಸಹಕಾರಿಗಳ ಸೇವೆಯನ್ನು ಹೇಗೆ ಮರೆಯಲಿ?…
“ಭಾರತ-ಭಾರತಿ ಮಕ್ಕಳ ಪುಸ್ತಕಮಾಲೆಗೆ ಯಾರು ಪ್ರಧಾನ ಸಂಪಾದಕರು ಎಂಬ ಚಿಂತೆ ಎದ್ದಾಗ ತೋರಿದ ಹೆಸರೇ ಎಲ್.ಎಸ್. ಶೇಷಗಿರಿರಾಯರದು. ‘ಇದು ಆಗಬೇಕಾದ ಕೆಲಸ. ನಾನು ಪ್ರಧಾನ ಸಂಪಾದಕನಾಗಿ ನಿರ್ವಹಿಸಬಲ್ಲೆನೇ?’ ಎಂಬ ಸಂಶಯದಿಂದಲೇ ಅವರು ಒಪ್ಪಿಕೊಂಡರು… ಹತ್ತಿರ ಹೋದಷ್ಟೂ ಅವರು ಎಷ್ಟು ಎತ್ತರ ಎಂಬುದನ್ನು ಕಂಡು ಬೆರಗಾಗಿದ್ದೇನೆ…”
ಇವು ಭಾರತ-ಭಾರತಿ ಯೋಜನೆಯ ಶಿಲ್ಪಿ ನಂ. ಮಧ್ವರಾಯರ ಆರಂಭದ ಕಾಲದ ನೆನಪಿನ ತುಣುಕುಗಳು.
ನಿಜ. ಇಂತಹ ಬೃಹತ್ ಯೋಜನೆಯ ಪ್ರಧಾನ ಸಂಪಾದಕರು ಯಾರು ಎಂದು ತೀವ್ರ ಹುಡುಕಾಟ ನಡೆಯಿತು. ಕೆಲವು ಹೆಸರುಗಳು ಚರ್ಚೆಗೆ ಬಂದವು. ಆದರೆ ಒಬ್ಬೊಬ್ಬರದು ಒಂದೊಂದು ಸಮಸ್ಯೆ. ಕೆಲವು ಗುಣಗಳಿದ್ದರೆ ಜೊತೆಜೊತೆಯಲ್ಲಿ ಕೆಲವು ಕೊರತೆಗಳು. ಎಲ್ಲವನ್ನು ಅಳೆದು ತೂಗಿ ನೋಡಿದಾಗ ಕೊನೆಗೆ ಎಲ್ಲ ರೀತಿಯಲ್ಲಿಯೂ ಸಮರ್ಪಕವಾಗಿ ಭರವಸೆ ಮೂಡಿಸಿದ್ದು ದಿ. ಎಲ್.ಎಸ್. ಶೇಷಗಿರಿರಾಯರ ಹೆಸರೇ. ಕನ್ನಡ, ಇಂಗ್ಲಿಷ್ ಎರಡು ಕ್ಷೇತ್ರಗಳಲ್ಲೂ ನುರಿತ ಸಾಹಿತ್ಯಸಾಧಕರು; ಬೃಹತ್ ಯೋಜನೆಗಳನ್ನು ಅಂತಿಮ ಹಂತದವರೆಗೆ ಕೊಂಡೊಯ್ಯಬಲ್ಲ ಸಾಮರ್ಥ್ಯ ಸಂಪನ್ನರು. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯ ಕ್ಷೇತ್ರದಲ್ಲಿ ಅವರಿಗೆ ಪರಿಚಯವಿಲ್ಲದ ಮುಂಚೂಣಿಯ ಸಾಹಿತಿಗಳೇ ಇರಲಿಲ್ಲವೆನ್ನಬಹುದಾದ ಸವ್ಯಸಾಚಿ ವ್ಯಕ್ತಿತ್ವದವರು. ಹೊಸ ಹೊಸ ಸಾಹಸಗಳಿಗೆ ಹಿಂಜರಿಯದೆ ಹೆಗಲು ಕೊಡುವಂತಹವರು. ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರು. ಎಷ್ಟು ವಿನಯಶಾಲಿಗಳೋ ಅಷ್ಟೇ ಕಠೋರ ಶಿಸ್ತಿನ ಸಿಪಾಯಿ.
ಎಲ್.ಎಸ್.ಎಸ್. ಈ ಯೋಜನೆಯನ್ನು ಒಪ್ಪಿ ಜವಾಬ್ದಾರಿ ಸ್ವೀಕರಿಸಿದ್ದೇ ಯೋಜನೆಯ ಒಂದು ಮಹತ್ತ್ವದ ಹೆಜ್ಜೆ. ಅವರು ಒಪ್ಪಿದ್ದು ಸಂಯೋಜಕರ ಚಿಂತೆಗೆ ಹಾಕಿದ ಪೂರ್ಣವಿರಾಮ.
ಎಲ್.ಎಸ್.ಎಸ್ ಸಾರಥ್ಯ
ಇನ್ನು ಮುಂದೆ ಪ್ರಧಾನ ಸಂಪಾದಕ ಎಲ್.ಎಸ್.ಎಸ್. ಅವರ ಅನುಭವದ ಕೆಲವು ಮಾತುಗಳಲ್ಲೇ ಈ ಯೋಜನೆಯ ಇನ್ನೊಂದು ಪಾರ್ಶ್ವವನ್ನು ಅರಿಯುವುದು ಹೆಚ್ಚು ಸಮಂಜಸ.
“ಭಾರತ-ಭಾರತಿ ಪುಸ್ತಕ ಸಂಪದದ ಸಂಪಾದಕೀಯ ಕೆಲಸ ಒಂದು ಬಗೆಯ ಶಿಕ್ಷಣವೇ…ಒಂದು ಬಿಗಿಯಾದ ಚೌಕಟ್ಟಿನಲ್ಲಿ ಕೆಲಸ ಮಾಡಲು ಮೊದಲೇ ಸಂಪಾದಕ ಮಂಡಳಿ ನಿರ್ಧರಿಸಿತ್ತು. ಪ್ರತಿ ಪುಸ್ತಕದಲ್ಲಿ ಓದಲು ನಲವತ್ತು ಪುಟಗಳ ಸಾಮಗ್ರಿ ಇರಬೇಕು, ಮಧ್ಯದ ಎರಡು ಪುಟಗಳನ್ನು ತುಂಬುವ ಒಂದು ಚಿತ್ರ ಇರಬೇಕು, ಹತ್ತು ಪುಸ್ತಕಗಳ ಕಂತಿನಲ್ಲಿ ವೈವಿಧ್ಯ ಇರಬೇಕು, ಮೊದಲೇ ನಿರ್ಧರಿಸಿದ ದಿನಾಂಕಗಳಲ್ಲಿ ಬಿಡುಗಡೆಯಾಗಬೇಕು – ಹೀಗೆ ಪುಸ್ತಕದ ಆಕಾರ, ಬಿಡುಗಡೆ ಇಂತಹ ವಿಷಯಗಳನ್ನು ನಮಗೆ ನಾವೇ ಸ್ಪಷ್ಟಮಾಡಿಕೊಂಡಿದ್ದೆವು…
“ಕೆಲಸ ಪ್ರಾರಂಭಿಸುತ್ತಲೇ ಸಮಸ್ಯೆಗಳೂ ಪ್ರಾರಂಭವಾದವು. ನಾವು ಹಸ್ತಪ್ರತಿ ಬರೆದುಕೊಡಿ ಎಂಬ ಪ್ರಾರ್ಥನೆಯೊಂದಿಗೆ ಲೇಖಕರ ತಾಳ್ಮೆ ಪರೀಕ್ಷಿಸುವಷ್ಟು ಉದ್ದದ ಸೂಚನಾಪತ್ರವನ್ನೂ ಕಳುಹಿಸುತ್ತಿದ್ದೆವು. ನಮ್ಮ ಮಾಲೆಯ ಗುರಿ, ಮಿತಿ, ನಮ್ಮ ಆವಶ್ಯಕತೆಗಳು, ಎಲ್ಲವನ್ನು ವಿವರಿಸುತ್ತಿದ್ದೆವು. ಆದರೂ ಒಮ್ಮೊಮ್ಮೆ ಸಮಸ್ಯೆಗಳು ಉದ್ಭವವಾಗುತ್ತಿದ್ದವು.
“ಹಸ್ತಪ್ರತಿಗಳ ಸಂಪಾದನೆ ಪ್ರಾರಂಭಿಸಿದ ಅನಂತರ ಮತ್ತೊಂದು ಸಮಸ್ಯೆ ಎದುರಾಯಿತು. ನಮ್ಮ ಪುಸ್ತಕದ ಮಿತಿ ಮೂರು ಸಾವಿರ ಪದಗಳು. ನಾವು ಆರಿಸಿಕೊಂಡ ಕೆಲವರು ಹಿರಿಯರ ಸಾಧನೆ ಎಷ್ಟು ಬೃಹತ್ತಾದುದೆಂದರೆ ಅವರನ್ನು ಕುರಿತು ಮಹಾಕಾವ್ಯಗಳನ್ನೇ ಬರೆಯಬಹುದು. ಇಂತಹ ಮಹಾನ್ ಚಾರಿತ್ರಿಕ ವ್ಯಕ್ತಿಗಳನ್ನು ಕುರಿತು ಮೂರು ಸಾವಿರ ಪದಗಳಲ್ಲಿ ಪುಸ್ತಕ ಬರೆದುಕೊಡಿ ಎಂದು ಪ್ರಾರ್ಥಿಸುವಾಗ ನಮಗೇ ಅಳುಕು. ಆನೆಯನ್ನು ಕನ್ನಡಿಯಲ್ಲಿ ತೋರಿಸುವ ಈ ಪ್ರಯತ್ನ ಒಂದು ಸವಾಲೇ!…
“ಸಾಮಗ್ರಿಯನ್ನು ಆಯುವಾಗ ನಾವು ಬಿಡಿ ವಿವರಗಳ ಸಮೃದ್ಧಿಗಿಂತ ಘಟನೆಗಳಿಗೆ ಹೆಚ್ಚು ಪ್ರಾಮುಖ್ಯ ಕೊಡುತ್ತಿದ್ದೆವು…ಎಳೆಯರ ಮನಸ್ಸಿನಲ್ಲಿ ಘಟನೆಗಳು ಸುಲಭವಾಗಿ ಉಳಿಯುತ್ತವೆ. ಹಾಗೆಯೇ ಶೌರ್ಯ ಪರಾಕ್ರಮಗಳು ಸುಲಭವಾಗಿ ಉಳಿಯುತ್ತವೆ. ಹಾಗೆ ಶೌರ್ಯ-ಪರಾಕ್ರಮಗಳು ನಮಗೆ ಮೆಚ್ಚುಗೆಯ ಗುಣಗಳೇ…ಆದರೆ ಯಾವುದನ್ನು ನಾವಿಂದು ಫ್ಯೂಡಲ್ ವ್ಯಾಲ್ಯೂಸ್ ಎಂದು ಕರೆಯುತ್ತೇವೋ ಆ ಪಾಳೆಗಾರಿಕೆ ಕಾಲದ ಮೌಲ್ಯಗಳನ್ನು ಇಂದು ಬಿತ್ತಲು ನಾವು ಸಿದ್ಧರಿರಲಿಲ್ಲ. ನಾವು ಯಾವ ಶೀರ್ಷಿಕೆಯನ್ನು ಆರಿಸಲಿ, ಹಸ್ತಪ್ರತಿಯನ್ನು ಕೈಗೆತ್ತಿಕೊಳ್ಳಲಿ, ಕೇಳಿಕೊಳ್ಳುತ್ತಿದ್ದ ಪ್ರಶ್ನೆ – ಇತರರಿಗಾಗಿ ಇವರು ಮಾಡಿದ್ದೇನು? ಯಾವ ಸಾರ್ವಕಾಲಿಕ ಮೌಲ್ಯಗಳನ್ನು ನೆಚ್ಚಿ ಬದುಕಿದರು?…
“ಸಾರ್ವಕಾಲಿಕ ಮೌಲ್ಯಗಳು ಯಾವುವು ಎನ್ನುವುದರ ನಿರ್ಧಾರವೂ ಸುಲಭವಲ್ಲ. ಮತ್ತೆ ಮತ್ತೆ ನಮ್ಮ ಮುಂದೆ ನಿಲ್ಲುತ್ತಿದ್ದ ಪ್ರಶ್ನೆ – ನಮ್ಮ ನಂಬಿಕೆಗಳನ್ನೂ ಮೌಲ್ಯಗಳನ್ನೂ, ಧ್ಯೇಯಗಳನ್ನೂ ಎಷ್ಟರಮಟ್ಟಿಗೆ ಮಕ್ಕಳ ಮೇಲೆ ಹೇರುತ್ತಿದ್ದೇವೆ? ಅವರ ಮನಸ್ಸು ಬೆಳೆಯುವುದಕ್ಕೆ ಅವಕಾಶ ಮಾಡುವುದು ನಮ್ಮ ಗುರಿ. ಆದರೆ ನಾವು ಪಂಜರವನ್ನು ನಿರ್ಮಿಸುತ್ತಿದ್ದೇವೆಯೋ… ಭಾರತದಲ್ಲಿ ಎಲ್ಲ ಧರ್ಮಗಳಿಂದ, ಎಲ್ಲ ಜಾತಿಗಳಿಂದ ಹಿರಿಯ ಚೇತನಗಳು ಮೂಡಿಬಂದಿವೆ ಎನ್ನುವುದಕ್ಕೆ ಭಾರತ-ಭಾರತಿಯ ಶೀರ್ಷಿಕೆಗಳ ಮಾಲೆಯೇ ಉಜ್ಜ್ವಲ ಸಾಕ್ಷಿ. ಒಂದು ದೊಡ್ಡ ಆದರ್ಶದ ಬೆಳಕಿನಲ್ಲಿ ನಡೆದವರು. ತಮ್ಮ ಸುಖ-ಅಭ್ಯುದಯಗಳಿಗೆ ಜೋತುಬೀಳದೆ ಇತರರಿಗಾಗಿ ಬಾಳಿದವರು – ಇಂತಹವರೇ ಭಾರತದ ಭಾಗ್ಯವನ್ನು ರೂಪಿಸಿದವರು. ಈ ಸತ್ಯವನ್ನು ಎಳೆಯ ಹೃದಯಗಳಲ್ಲಿ ಸ್ಥಾಪಿಸುವುದಷ್ಟೆ ನಮ್ಮ ಗುರಿಯಾದುದರಿಂದಲೇ ಶೀರ್ಷಿಕೆಗಳ ಆಯ್ಕೆಯಲ್ಲಿ ನಾವು ಯಾವ ಒಂದು ಧರ್ಮ, ಜಾತಿ, ಪಂಥ, ಯುಗ, ರಾಜಕೀಯ ಪಕ್ಷದ ಸೆರೆಗೆ ಸಿಕ್ಕಿಬೀಳಲಿಲ್ಲ… ಹೀಗೆ ಈ ಮಾಲೆಯ ಪುಸ್ತಕಗಳನ್ನು ಸಿದ್ಧಗೊಳಿಸುವುದು ನಮಗೊಂದು ಶಿಕ್ಷಣವಾಯಿತು. ಮಕ್ಕಳ ಸಾಹಿತ್ಯದ ರಚನೆಗೆ ನಮ್ಮಲ್ಲಿ ಇನ್ನೂ ಎಷ್ಟು ಸಿದ್ಧತೆಯಾಗಬೇಕು ಎನ್ನುವುದು ಸ್ಪಷ್ಟವಾಯಿತು. ಕಿರಿಯ ಓದುಗರನ್ನು ವಯಸ್ಸಿಗನುಗುಣವಾಗಿ ವರ್ಗೀಕರಿಸಬೇಕು. ಪ್ರತಿ ವರ್ಗದ ಓದುಗರಿಗಾಗಿ ಬರೆಯುವಾಗ ಬಳಸಬಹುದಾದ ಶಬ್ದಗಳು ಮತ್ತು ವಾಕ್ಯಬಂಧಗಳು ಇವನ್ನು ವೈಜ್ಞಾನಿಕವಾಗಿ ಗುರುತಿಸಿ ಪಟ್ಟಿ ಮಾಡಬೇಕು. ಒಂದು ವಿಷಯದಲ್ಲಿ ಪ್ರಭುತ್ವ ಪಡೆದವರೆಲ್ಲ ಮಕ್ಕಳಿಗಾಗಿ ಬರೆಯಲಾರರು. ಇದಕ್ಕೆ ವಿಶೇಷ ಶಿಕ್ಷಣ ಪಡೆದವರ ತಂಡವೇ ಸೃಷ್ಟಿಯಾಗಬೇಕು…”
ಹೀಗೆ ಭಾರತ-ಭಾರತಿ ಪುಸ್ತಕ ಸಂಪದದ ಪ್ರಧಾನ ಸಂಪಾದಕ ಎಲ್.ಎಸ್.ಎಸ್. ತಮ್ಮ ಅನುಭವಗಳನ್ನು ದಾಖಲಿಸುತ್ತಾ ತುರ್ತುಪರಿಸ್ಥಿತಿಯ ಬಿಕ್ಕಟ್ಟಿನ ದಿನಗಳಲ್ಲಿ (೧೯೭೫-೭೬) ಮಕ್ಕಳ ಮನಸ್ಸುಗಳನ್ನು, ಹೃದಯಗಳನ್ನು ಅರಳಿಸುವ ಪವಿತ್ರ ಕಾರ್ಯದಲ್ಲಿ ತೊಡಗಿದ್ದ ಭಾರತ-ಭಾರತಿ ಯೋಜನೆಯ ಮೇಲಿನ ವಜ್ರಾಘಾತದ ದಿನಗಳನ್ನು ಹೀಗೆ ನೆನೆಸಿಕೊಳ್ಳುತ್ತಾರೆ:
“ರಾಷ್ಟ್ರೋತ್ಥಾನಕ್ಕೆ ಸರ್ಕಾರ ಬೀಗಮುದ್ರೆ ಹಾಕಿದ್ದ ಕಷ್ಟದ ದಿನಗಳು. ಒಬ್ಬ ಲೇಖಕರು ಹಸ್ತಪ್ರತಿ ಕೊಟ್ಟಿದ್ದರು, ಇನ್ನೂ ಅದು ಪ್ರಕಟವಾಗಿರಲಿಲ್ಲ. ಕಟ್ಟಡ ಸರ್ಕಾರದ ವಶವಾಯಿತು. ಲೇಖಕರು ಸಂಪಾದಕರಿಗೆ ಕಾಗದ ಬರೆದರು. ಹಸ್ತಪ್ರತಿ ಬೇಕು ಎಂದು. ಇದ್ದ ಸಂಗತಿ ತಿಳಿಸಿ ಪ್ರಧಾನ ಸಂಪಾದಕರು ಉತ್ತರ ಬರೆದರು. ಒಂದು ರಾತ್ರಿ ಹತ್ತು ಗಂಟೆಗೆ ಲೇಖಕರು ಪ್ರಧಾನ ಸಂಪಾದಕರ ಮನೆಗೆ ಬಂದರು. ಹಸ್ತಪ್ರತಿ ಕೊಡುವವರೆಗೆ ನಾನು ಅಲ್ಲಿಂದ ಕದಲುವುದಿಲ್ಲ ಎಂದರು, ರೇಗಾಡಿದರು, ಕೂಗಾಡಿದರು. ಆದರೆ ಇಂತಹ ಅನುಭವಗಳು ಕೆಲವೇ. ಇವನ್ನು ಮೆಟ್ಟಿ ನಿಂತು ಮನಸ್ಸನ್ನು ತುಂಬುವ ನೆನಪುಗಳು ಹಲವಾರು;
“ಯೋಜನೆ ಮುಗಿಯುತ್ತಬಂದಾಗ ಸಂಪಾದಕ ಮಂಡಲಿಯವರಿಗೆ ಸಂತೋಷ, ವಿಷಾದ… ೫೧೦ ಪುಸ್ತಕಗಳು ಪ್ರಕಟವಾಗಿವೆ. ರಾಷ್ಟ್ರಜೀವನಕ್ಕೆ ಸತ್ತ್ವ, ಬೆಳಕುಗಳನ್ನು ಕೊಟ್ಟ ಮಹಾಚೇತನಗಳ ಸಮ್ಮೇಳನವೇ ಕಣ್ಣ ಮುಂದಿದೆ… ಮಾಸ್ತಿ, ಬೇಂದ್ರೆಯವರಿಂದ ಪ್ರಾರಂಭಿಸಿ ಅನೇಕ ಮಂದಿ ಹಿರಿಯ ಸಾಹಿತಿಗಳು ಈ ಮಾಲೆಗೆ ಪುಸ್ತಕಗಳನ್ನು ಬರೆದುಕೊಟ್ಟು ಆಶೀರ್ವದಿಸಿದ್ದಾರೆ.”
‘ನ ಭೂತೋ ನ ಭವಿಷ್ಯತಿ’ ಎಂಬಂತಹ ಅಪೂರ್ವ, ಅದ್ಭುತ, ಅವಿಸ್ಮರಣೀಯ ಭಾರತ-ಭಾರತಿ ಪುಸ್ತಕ ಸಂಪದ ಯೋಜನೆಯ ಸಂಪಾದಕೀಯ ಸಾರಥ್ಯ ವಹಿಸಿದ ಎಲ್.ಎಸ್.ಎಸ್. ಅವರ ಈ ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಕೊಡುಗೆ ಅಜರಾಮರವಾದದ್ದು. ಅವರ ಶಿಸ್ತಿನ ಜೀವನಶೈಲಿಯದು ಇದನ್ನು ಯಶಸ್ವಿಗೊಳಿಸುವುದರಲ್ಲಿ ಪ್ರಧಾನ ಪಾತ್ರ. ಮಧ್ಯೆ ಅಡ್ಡಿ-ಆತಂಕಗಳು ಹಲವಾರು. ಎಲ್.ಎಸ್.ಎಸ್. ಅವರ ಧರ್ಮಪತ್ನಿಯವರ ಅಕಾಲಿಕ ಮರಣದ ತೀವ್ರ ಆಘಾತ, ಸರ್ಕಾರದ ಅನಾವಶ್ಯಕ, ಅನ್ಯಾಯ, ಅನೀತಿಗಳ ಕಾರಣ ಯೋಜನೆಗೆ ಮಾರಕ ಪೆಟ್ಟು. ಅಧಿಕಾರದಲ್ಲಿದ್ದ ಕೆಲವು ಸಮಾಜವಿರೋಧಿ ಶಕ್ತಿಗಳ ಕುತಂತ್ರದಿಂದ ಭಾರತ-ಭಾರತಿ ಮಕ್ಕಳ ಸಾಹಿತ್ಯವನ್ನು ಕೊಳ್ಳುತ್ತಿದ್ದ ಸರ್ಕಾರದ ನೀತಿಗೆ ಕುಠಾರಾಘಾತ. ಕೊಳ್ಳುವ ವ್ಯವಸ್ಥೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಸರ್ಕಾರವೇ ಪುಸ್ತಕಗಳನ್ನು ಕೊಳ್ಳುವಂತೆ ಅನುಮತಿ ಕೊಟ್ಟಿದ್ದ ಶಿಕ್ಷಣ ಸಚಿವರಿಗೇ ಈ ಜನರ ಧಿಕ್ಕಾರ, ಅವಹೇಳನ. ಆರ್ಥಿಕ ಸಂಕಷ್ಟಗಳು… ಹೀಗೆ ಒಂದೇ ಎರಡೇ. ಆದರೂ ರಾಷ್ಟ್ರೋತ್ಥಾನದ ಅಧ್ವರ್ಯುಗಳ ದೃಢ ಸಂಕಲ್ಪ, ಅವರ ಬೆನ್ನ ಹಿಂದೆ ನಿಂತ ಕಾರ್ಯಕರ್ತರ ತಂಡದ ನಿಃಸ್ವಾರ್ಥ ಕಾಯಕ, ಕನ್ನಡ ಜನತೆಯ, ಸಹೃದಯರ, ಹಿರಿಯ ಜೀವಿಗಳ ಆಶೀರ್ವಾದದಿಂದ ಎಂಟು ವರ್ಷಗಳಲ್ಲಿ ೫೧೦ ಪುಸ್ತಕಗಳ ಪ್ರಕಟಣೆ ಕನ್ನಡ ಸಾಹಿತ್ಯೇತಿಹಾಸದಲ್ಲಿ ಶಾಶ್ವತ ದಾಖಲೆ ಸೃಷ್ಟಿಸಿತು. ‘ಸಂಘೇ ಶಕ್ತಿಃ ಕಲೌ ಯುಗೇ’ ಎಂಬ ಆರ್ಯೋಕ್ತಿಗೆ ಉಜ್ಜ್ವಲ ಉದಾಹರಣೆಯಾಯಿತು.
ನ ಭೂತೋ ನ ಭವಿಷ್ಯತಿ
ಮೊದಲ ಹತ್ತು ಪುಸ್ತಕಗಳ ಪ್ರಕಟಣ ಕಾರ್ಯಕ್ರಮವೂ ಐತಿಹಾಸಿಕವೇ. ಕರ್ನಾಟಕ ರಾಜ್ಯದ ಮೂವತ್ತೆರಡು ಸ್ಥಳಗಳಲ್ಲಿ ಏಕಕಾಲದಲ್ಲಿ ಒಂದೇ ದಿನ ಭಾರತ-ಭಾರತಿ ಮೊದಲ ಕಂತು ಪ್ರಕಟವಾದದ್ದು ಇನ್ನೊಂದು ದಾಖಲೆ. ಕನ್ನಡದ ಹಿರಿಯ ಚೇತನಗಳಾದ ಕುವೆಂಪು, ದೇಜಗೌ, ಜಿ. ನಾರಾಯಣ, ಶಿವರಾಮ ಕಾರಂತ, ಟಿ.ಎಂ.ಎ. ಪೈ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ‘ಎಚ್ಚೆಸ್ಕೆ’, ಶಾಂತಾದೇವಿ ಕಣವಿ, ‘ಸಿಸು’ ಸಂಗಮೇಶ, ಸರಿತಾ ಕುಸುಮಾಕರ ದೇಸಾಯಿ, ಪಿ.ಎಂ. ಗಲಗಲಿ, ಪೂಜ್ಯ ಸಿದ್ಧಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮಿಗಳು, ಪದ್ಮಾಶೆಣೈ, ಎಚ್.ಎಸ್. ಪಾರ್ವತಿ, ‘ನೀನಾಸಮ್’ ಕೆ.ವಿ. ಸುಬ್ಬಣ್ಣ, ವಿಘ್ನೇಶ್ವರ ಶರ್ಮ ತದ್ದಲಸೆ, ಡಾ. ರಂಗನಾಥ ದಿವಾಕರ್, ಹೊ.ವೆ. ಶೇಷಾದ್ರಿ, ಶಾಂತಾದೇವಿ ಮಾಳವಾಡ, ಕೃಷ್ಣಮೂರ್ತಿ ಪುರಾಣಿಕ, ದು.ನಿಂ. ಬೆಳಗಲಿ, ತಿ.ತಾ. ಶರ್ಮ, ಟಿ. ಸುನಂದಮ್ಮ, ಪೂಜ್ಯ ತರಳಬಾಳು ಜಗದ್ಗುರುಗಳು ಮುಂತಾದ ಹಲವಾರು ಮಹಾನುಭಾವರು ಭಾಗವಹಿಸಿದ ಕಾರ್ಯಕ್ರಮ ಅಂದು ಕರ್ನಾಟಕಾದ್ಯಂತ ಜರುಗಿದ್ದು ಮಹತ್ಸಾಧನೆಯೇ ಸರಿ.
ಮೈಸೂರಿನ ಸಮಾರಂಭದಲ್ಲಿ ರಾಷ್ಟ್ರಕವಿ ಕುವೆಂಪು ನುಡಿದ ಮಾತುಗಳು ಯೋಜನೆಗೆ ಸಂದ ಆಶೀರ್ವಚನ;
“ಮಕ್ಕಳಿಗೆ ವಿಚಾರಶಕ್ತಿ, ವೈಜ್ಞಾನಿಕ ದೃಷ್ಟಿ ಕೊಡಬೇಕು. ವಿಚಾರಶಕ್ತಿ ಉದ್ದೀಪನಗೊಳಿಸಿದ್ದಲ್ಲಿ, ವ್ಯಕ್ತಿ ಅವಿವೇಕಿಯಾಗಲಾರ, ವಿವೇಕಿ ಆಗಿಯೇ ಆಗುವನು. ಭರತಖಂಡದ ಸಾವಿರಾರು ಮಹಾಪುರುಷರಿಂದ ಸ್ಫೂರ್ತಿ ಪಡೆದು ನಮ್ಮ ಎಳೆಯ ಜನಾಂಗ ಬೆಳೆದು ನಾಡನ್ನು ಮೇಲಕ್ಕೆತ್ತಬೇಕು. ಅದರ ಕೀರ್ತಿ ಜಗದ್ವಿಖ್ಯಾತವಾಗಬೇಕು – ಎಂಬ ಉದ್ದೇಶ ‘ಭಾರತ-ಭಾರತಿ ಪುಸ್ತಕ ಸಂಪದದಲ್ಲಿದೆ.”
* * *
ಎಲ್.ಎಸ್.ಎಸ್. ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಗಳನ್ನು ಕುರಿತು ಪ್ರಗಲ್ಬ ವಿದ್ವಾಂಸರು. ಉತ್ತಮ ವಾಗ್ಮಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಒಟ್ಟು ೧೫೫ ಪುಸ್ತಕಗಳನ್ನು ರಚಿಸಿದವರು. ಜೀವನ ಪರ್ಯಂತ ಬರವಣಿಗೆಯನ್ನು ನಿಲ್ಲಿಸಿದವರೇ ಅಲ್ಲ. ಸಣ್ಣ ಕಥೆಗಳು, ವಿಮರ್ಶಾ ಸಂಕಲನಗಳು, ನಾಟಕಗಳು, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ, ಅನುವಾದ, ನಿಘಂಟುಗಳು, ಪುಸ್ತಕಗಳ ಸಂಪಾದನೆ. ಹೀಗೆ ಹಲವಾರು ಸಾಹಿತ್ಯ ಕ್ಷೇತ್ರಗಳಲ್ಲಿ ನಿರಂತರ ಲೇಖನಿ ನಡೆಸಿದವರು. ಅವರಿಗೆ ಸಂದ ಗೌರವ-ಸನ್ಮಾನಗಳು ಲೆಕ್ಕವಿಲ್ಲದಷ್ಟು. ಆದರೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಭಾರತ-ಭಾರತಿ ಪುಸ್ತಕ ಸಂಪದದ ೫೧೦ ಪುಸ್ತಕಗಳ ಪ್ರಧಾನ ಸಂಪಾದಕರಾಗಿ ಸಾರಥ್ಯ ವಹಿಸಿದ್ದು ಅವರಿಗೆ ಕಿರೀಟಪ್ರಾಯವಾದ ಕನ್ನಡ ಸಾಹಿತ್ಯ ಸೇವೆ ಎಂದರೆ ಅತಿಶಯೋಕ್ತಿಯಲ್ಲ. ಅವರ ಜನ್ಮಶತಾಬ್ದದ ಸಂಭ್ರಮದ ಆಚರಣೆಯ ವೇಳೆ ಅವರು ತಾಯಿ ಭುವನೇಶ್ವರಿಗೆ ಎತ್ತಿದ ಭಾರತ-ಭಾರತಿ ಆರತಿಯ ನೆನಪು ಅವಿಸ್ಮರಣೀಯ, ಅಭಿನಂದನೀಯ.
ಹಿರಿಯ ಚೇತನಗಳ ನುಡಿಮುತ್ತುಗಳು
“ಬೆಳೆಯುತ್ತಿರುವ ನಮ್ಮ ಬಾಲಕರು-ಮುಂದಿನ ಪ್ರಜೆಗಳು-ಓದಿ ಸುಸಂಸ್ಕೃತರಾಗಲು ಅವರಿಗೆ ಒಂದು ಪುಸ್ತಕಭಂಡಾರವನ್ನೇ ನೀಡುತ್ತಿದ್ದೀರಿ. ಸೊಗಸಾದ ಯೋಜನೆ, ದಕ್ಷರೂ ದೂರದೃಷ್ಟಿಯುಳ್ಳವರೂ ಕೈಗೊಂಡಿರುವ ಯೋಜನೆ. ಧನಸಹಾಯ ಮಾಡಿ, ಲೇಖನ ಬರೆದು ನಿಮಗೆ ನೆರವಾಗುತ್ತಿರುವ ಎಲ್ಲ ಮಹನೀಯರೂ ಅಭಿನಂದನೀಯರು. ನಿಮ್ಮ ಪರಿಷತ್ತು ಇಂತಹ ಅನೇಕ ನೂತನ ಯೋಜನೆಗಳನ್ನು ಸಾಧಿಸಿ ಆಚಂದ್ರಾರ್ಕವಾಗಿ ಬಾಳಲಿ.”
– ಡಿವಿಜಿ, ನಾಡಿನ ಹಿರಿಯ ಚೇತನ
“ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನವರು ಕೈಗೊಂಡಿರುವ ಭಾರತ-ಭಾರತಿ ಪುಸ್ತಕ ಸಂಪದ ಯೋಜನೆಯನ್ನು ಭಗವಂತನು ಹರಸಲಿ, ಬೆಳೆಸಲಿ.”
– ಶ್ರೀ ಗುರೂಜಿ ಗೋಳವಲಕರ್, ರಾ.ಸ್ವ. ಸಂಘದ ಪ್ರಮುಖರು
“ಮಗುವಿನ ಭಾಷೆ, ಮನೋಧರ್ಮ ತಿಳಿದು ಮನಸ್ಸು ತೇಲುವಂತೆ ಆ ಮಟ್ಟಕ್ಕೆ ಇಳಿದು ಬರೆದರೆ ಮನಸ್ಸು ಅರಳುತ್ತದೆ. ಅದು ಮಕ್ಕಳ ಸಾಹಿತ್ಯ ಆಗುತ್ತದೆ. ರಾಷ್ಟ್ರೋತ್ಥಾನ ಪರಿಷತ್ತು ಇತ್ತ ಗಮನ ಹರಿಸಲಿ.”
– ಕೋಟ ಶಿವರಾಮ ಕಾರಂತ, ಶ್ರೇಷ್ಠ ಕಾದಂಬರಿಕಾರರು
“ಭಾರತ-ಭಾರತಿ ಪುಸ್ತಕಗಳಿಂದ ಮುಂದಿನ ಜನಾಂಗದಲ್ಲಿ ಭೇದಭಾವನೆ ಮಾಯವಾಗಿ ದೇಶದ ಭವಿಷ್ಯ ಉಜ್ಜ್ವಲಗೊಳ್ಳಲಿ.”
– ತಿ.ತಾ. ಶರ್ಮ, ಕನ್ನಡದ ಹಿರಿಯ ಚೇತನ
“ಇಂದು ನಮಗೆ ಎಲ್ಲವೂ ಇದೆ. ಆದರೆ ಭಾರತೀಯತೆಗೆ ಬರಗಾಲ. ವಿಶ್ವಕ್ಕೇ ಭಾರತ ದರ್ಶನ ಮಾಡಿಸಿದ ಪೂರ್ವಜರನೇಕರ ಜೀವನ ಪರಿಚಯ ಭಾರತ-ಭಾರತಿ ಯೋಜನೆಯ ಮೂಲಕ ಸಾಧ್ಯವಾಗುತ್ತದೆ.”
– ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕನ್ನಡದ ಹಿರಿಯ ಸಾಹಿತಿಗಳು
“ನೀವು ಕೈಗೊಂಡಿರುವ ಪ್ರಕಾಶನ ಕಾರ್ಯ ತುಂಬ ಬೆಲೆಯುಳ್ಳದ್ದು. ಈ ನಾಡಿನ ಮಹಾಪುರುಷರನ್ನೂ ಸಂಸ್ಕೃತಿ ಚರಿತ್ರೆಗಳನ್ನೂ ಕುರಿತು ಮುಖ್ಯವಾಗಿ ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ತಿಳಿವಳಿಕೆ ಅಗತ್ಯ. ಭಾರತ-ಭಾರತಿ ಅದನ್ನು ನೆರವೇರಿಸಲಿದೆ.”
– ವಿ. ಸೀತಾರಾಮಯ್ಯ, ಹಿರಿಯ ಸಾಹಿತಿಗಳು, ಪ್ರಾಧ್ಯಾಪಕರು.
“ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನವರು `ಭಾರತ-ಭಾರತಿ ಪುಸ್ತಕ ಸಂಪದ’ ಎಂಬ ಯೋಜನೆಯ ಮೂಲಕ ಕನ್ನಡದಲ್ಲಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸುವ ಪ್ರಚಂಡ ಯೋಜನೆ ಕೈಗೊಂಡಿರುವುದನ್ನೂ ಅದರ ಮೊದಲ ಕಂತಿನ ಪುಸ್ತಕಗಳು ಕರ್ನಾಟಕಾದಾದ್ಯಂತ ೫ ನವೆಂಬರ್ ೧೯೭೨ರಂದು ಬಿಡುಗಡೆಯಾಗಲಿರುವುದನ್ನೂ ತಿಳಿದು ಆನಂದವಾಯಿತು… ಹಾರ್ದಿಕ ಶುಭಾಶಯಗಳು.”
– ಎ.ಆರ್. ಬದರಿನಾರಾಯಣ್, ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ
“ಸಾಹಿತ್ಯ ಮತ್ತು ಶಿಕ್ಷಣಗಳ ಮಾಧ್ಯಮದ ಮೂಲಕ ಪರಿಷತ್ತು ಸಮಾಜಕ್ಕೆ ತುಂಬ ಉಪಯುಕ್ತ ಸೇವೆ ಸಲ್ಲಿಸುತ್ತಿರುವುದು ಹರ್ಷದಾಯಕ… ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯಗಳ ಯಶಸ್ಸಿಗೆ ನನ್ನ ಶುಭಾಶಯಗಳು.”
– ಬಿ.ಡಿ. ಜತ್ತಿ, ರಾಜ್ಯಪಾಲರು, ಒರಿಸ್ಸಾ