“ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರನ್ನು ಒಬ್ಬ ಕನ್ನಡದ ನಿಷ್ಠಾವಂತ ಕಾರ್ಯಕರ್ತನಾಗಿ, ಕನ್ನಡ ಚಳವಳಿಯ ನೇತಾರನಾಗಿ ಹತ್ತಿರದಿಂದ ನೋಡಿದಷ್ಟೂ ಅವರ ಬಗ್ಗೆ ನನಗಿರುವ ಗೌರವ ಹೆಚ್ಚುತ್ತಬಂದಿದೆ. ೧೯೮೨ರ ಗೋಕಾಕ್ ಚಳವಳಿಯಿಂದ ಇಲ್ಲಿಯವರೆಗೆ ಬಹುತೇಕ ಎಲ್ಲ ಕನ್ನಡಪರ ಕೆಲಸಗಳಲ್ಲಿ ಅವರಷ್ಟು ತೊಡಗಿಕೊಂಡವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೀರಾ ವಿರಳ. ಸಾಹಿತಿಗಳ–ಕಲಾವಿದರ ಬಳಗ, ಕನ್ನಡ ಶಕ್ತಿ ಕೇಂದ್ರಗಳ ಎಲ್ಲ ಬಗೆಯ ಕನ್ನಡ ಕಾರ್ಯಗಳಲ್ಲೂ ಅವರದು ಸಕ್ರಿಯವಾದ ಪಾತ್ರ. ಯಾವುದೇ ಕೆಲಸಗಳಿರಲಿ ಅವರ ಸಲಹೆಯನ್ನು ಕೇಳಿಯೇ ನಾವು ಮುಂದುವರಿಯುತ್ತಿದ್ದೆವು. ಬೀದಿ ಚಳವಳಿಗಳು, ಸಭೆ ಸಮಾರಂಭಗಳು, ನಿಯೋಗಗಳು ಇಲ್ಲೆಲ್ಲ ಅವರಿಲ್ಲದೆ ಯಾವುದೇ ಕನ್ನಡ ಕೆಲಸ ಆಗದು ಎನ್ನುವಷ್ಟರಮಟ್ಟಿಗೆ ಅವರು ನನ್ನಂತಹ ನೂರಾರು ಕನ್ನಡ ಕಾರ್ಯಕರ್ತರಿಗೆ ಮಾರ್ಗದರ್ಶಿಯಾಗಿದ್ದಾರೆ, ಸ್ಫೂರ್ತಿಯಾಗಿದ್ದಾರೆ.”
– ಡಾ. ಎಂ. ಚಿದಾನಂದಮೂರ್ತಿ
ಉಡುಪಿಯಲ್ಲಿ ನಡೆದ ೭೪ನೆಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಪ್ರೊ. ಎಲ್.ಎಸ್. ಶೇಷಗಿರಿರಾವ್, ‘ಕನ್ನಡ ಸಾಹಿತ್ಯ ಪರಿಷತ್ತಿನ ಬಂಧುಗಳ ಮತ್ತು ಈ ಸಮ್ಮೇಳನದ ಸ್ವಾಗತ ಸಮಿತಿಯ ಬಂಧುಗಳು ನನ್ನನ್ನು ಸಮ್ಮೇಳನಾಧ್ಯಕ್ಷನೆಂದು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಆದರೆ ನಾನು ಕನ್ನಡ ಕಾರ್ಯಕರ್ತನಾಗಿ ಬರುತ್ತಿದ್ದೇನೆ.’ ಎಂದು ತಮ್ಮ ಅಧ್ಯಕ್ಷಭಾಷಣವನ್ನು ಪ್ರಾರಂಭಿಸಿದರು. ‘ಕನ್ನಡದ ಕಣ್ವ’ ಎಂದು ಗುರುತಿಸುವ ಬಿ.ಎಂ. ಶ್ರೀಕಂಠಯ್ಯ ಅವರ ನೇರ ವಿದ್ಯಾರ್ಥಿಯಾಗಿ, ನಾಡು-ನುಡಿಯ ಹಿತ ಕಾಪಾಡಲು ನೇರ ಹೋರಾಟ ಆರಂಭಿಸಿ, ‘ಕನ್ನಡ ಚಳವಳಿ’ ಯ ಚಾಲಕ ಶಕ್ತಿಯಾಗಿದ್ದ ಅ.ನ.ಕೃ. ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರು ಪ್ರೊ. ಎಲ್.ಎಸ್. ಶೇಷಗಿರಿರಾವ್. ಆ ಈರ್ವರ ಕನ್ನಡ ಜಾಗೃತಿಯ ಮಾದರಿಯನ್ನೂ ಮೇಳೈಸಿಕೊಂಡು ‘ನಾನು ಕನ್ನಡಕ್ಕಾಗಿ, ಕನ್ನಡನಾಡಿಗಾಗಿ ಒಂದಿಷ್ಟು ಕೆಲಸ ಮಾಡಿದ್ದರೆ ಅದು ಮಹತ್ತ್ವದ ಸಂಗತಿಯಲ್ಲ; ಹಾಗೆ ಕೆಲಸ ಮಾಡದಿದ್ದರೆ ತಪ್ಪಾಗುತ್ತಿತ್ತು.’ ಎಂದು ವಿನೀತರಾಗಿ ಹೇಳುತ್ತಿದ್ದ ಶೇಷಗಿರಿರಾವ್ ಕನ್ನಡವನ್ನು ಬದುಕಿನ ಭಾಗವಾಗಿಸಿಕೊಂಡಿದ್ದರು. ೧೯೪೮ರಲ್ಲಿ ೨೪ನೆಯ ವಯಸ್ಸಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗಿಯಾಗಿ ಅದರೊಂದಿಗೆ ಕನ್ನಡ ಹೋರಾಟದ ಭಾಗವಾಗಿದ್ದರು. ಅಂದಿನಿAದ ತಮ್ಮ ೯೦ರ ಹರೆಯದವರೆಗೂ ಕನ್ನಡಪರ ಚಟುವಟಿಕೆಗಳ ಭಾಗವಾಗಿದ್ದರು.
ಎಲ್.ಎಸ್. ಶೇಷಗಿರಿರಾವ್ ಅವರು ಪರಿಷತ್ತಿನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಸಭೆ ಬೇರೆಬೇರೆ ಸ್ಥಳಗಳಲ್ಲಿ ನಡೆಯುತ್ತಿತ್ತು. ಒಂದು ಕಾರ್ಯಕಾರಿ ಸಭೆ ಹೊಸೂರಿನಲ್ಲಿ ನಡೆಯಿತು. ಅಂದು ಸಂಜೆ ಅಲ್ಲಿ ಸಾರ್ವಜನಿಕ ಸಭೆ ನಡೆಯಿತು. ಆ ಸಭೆಯಲ್ಲಿ ಮಾತನಾಡಿದ ರಾಯರು, ‘ಕರ್ನಾಟಕದ ಏಕೀಕರಣವಾಗಬೇಕು. ಹೊಸೂರು ಕರ್ನಾಟಕದಲ್ಲಿ ಸೇರಬೇಕು’ ಎಂದರಂತೆ. ಅದು ಪತ್ರಿಕೆಗಳಲ್ಲಿ ವರದಿಯಾಗಿ, ವಿಶ್ವವಿದ್ಯಾಲಯ, ‘ಸರ್ಕಾರಿ ನೌಕರರಾಗಿ ರಾಜಕೀಯ ವಿಷಯವನ್ನು ಪ್ರಸ್ತಾಪಿಸಿದ್ದು ಶಿಸ್ತು ಉಲ್ಲಂಘನೆ’ ಎಂದು ಎಚ್ಚರಿಕೆ ಪತ್ರ ನೀಡಿತು. ಅನಂತರ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಯಾಗಿ ಇವರು ಏಕೀಕರಣ ಸಂಬಂಧ ಬಳ್ಳಾರಿ, ಬೆಳಗಾವಿಗಳಿಗೆ ಹೋಗಿದ್ದರು. ಧರ್ ಸಮಿತಿಯು ಭಾಷಾವಾರು ರಾಜ್ಯಗಳ ಸಂಬಂಧವಾಗಿ ಆಹ್ವಾನಿತ ಕನ್ನಡ ಪ್ರತಿನಿಧಿಗಳ ಅಭಿಪ್ರಾಯ ಪಡೆಯಲು ಧಾರವಾಡದಲ್ಲಿ ಸಭೆ ನಡೆಯಿತು. ಬೆಂಗಳೂರಿನಿಂದ ಮಾಸ್ತಿ, ಬಿ. ಶಿವಮೂರ್ತಿಶಾಸ್ತ್ರಿ, ಪರಿಷತ್ತಿನ ಅಧ್ಯಕ್ಷರಾಗಿದ್ದ ತಿ.ತಾ. ಶರ್ಮ ಮತ್ತು ಕಾರ್ಯದರ್ಶಿ ಎಲ್.ಎಸ್. ಶೇಷಗಿರಿರಾವ್ ಅವರನ್ನು ಸಮಿತಿ ಆಹ್ವಾನಿಸಿತ್ತು.
ಕರ್ನಾಟಕ ಏಕೀಕರಣ ‘ಸುವರ್ಣ ಸಂಭ್ರಮ’ದಲ್ಲಿ ಏಕೀಕರಣಕ್ಕೆ ದುಡಿದವರನ್ನು ಕರ್ನಾಟಕ ಸರ್ಕಾರ ಗೌರವಿಸಿತು. ಏಕೀಕರಣ ವಿರೋಧಿಸಿ ನಡೆದ ಸಭೆಯಲ್ಲಿ ಪಾಲ್ಗೊಂಡವರು ಮತ್ತು ಏಕೀಕರಣದ ವಿಚಾರದಲ್ಲಿ ತಟಸ್ಥರಾಗಿದ್ದ ಇಬ್ಬರಿಗೆ ಪ್ರಶಸ್ತಿ ಬಂತು. ಈ ಸಂಗತಿಯನ್ನು ಏಕೀಕರಣ ಚಳವಳಿಯ ಮುಂಚೂಣಿಯಲ್ಲಿದ್ದವರು ಸಾರ್ವಜನಿಕವಾಗಿಯೇ ಹೇಳಿದರು. ಆದರೆ, ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡು, ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಶೇಷಗಿರಿರಾವ್ ಅವರು ಸರ್ಕಾರ ರಚಿಸಿದ್ದ ಆಯ್ಕೆ ಸಮಿತಿಯವರಿಗೆ ಕಾಣಿಸಲೇ ಇಲ್ಲ. ಮಡಿಕೇರಿಯ ಸರ್ಕಾರಿ ಕಾಲೇಜಿನಲ್ಲಿ ಹಲವಾರು ವರ್ಷಗಳ ಕಾಲ ಅಧ್ಯಾಪಕರಾಗಿದ್ದ ಎಲ್ಎಸ್ಎಸ್ ಕೊಡಗು ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಶಿವರಾಮ ಕಾರಂತ, ಮಾಸ್ತಿ, ರಾಜರತ್ನಂ ಅಂತಹವರನ್ನು ಕರೆಸಿದ್ದನ್ನು ಹಾಗೂ ಅವರು ನಡೆಸಿದ ಕನ್ನಡ ಚಟುವಟಿಕಗಳನ್ನು ಇಂದಿಗೂ ಮಡಿಕೇರಿಯ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಕೋಲಾರದಲ್ಲಿ ಅಧ್ಯಾಪಕರಾಗಿದ್ದಾಗ ಕಾಲೇಜಿನ ಕನ್ನಡ ಸಂಘದ ಚಟುವಟಿಕೆಯ ಬೆನ್ನೆಲುಬಾಗಿದ್ದರು. ಅಲ್ಲಿಗೆ ಅನಕೃ ಅವರನ್ನು ಕರೆಸಿದ್ದನ್ನು ಕೋಲಾರದ ಹಿರಿಯ ಕನ್ನಡ ಹೋರಾಟಗಾರರು ಮರೆತಿಲ್ಲ.
ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿದ್ದಾಗಲೂ ಕನ್ನಡ ಹೋರಾಟದಲ್ಲಿ ಭಾಗಿ
ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಉದ್ದೀಪನಗೊಳಿಸಿ, ಕನ್ನಡ ನವಜಾಗೃತಿಗೆ ಕಾರಣೀಭೂತವಾದ ‘ಗೋಕಾಕ್ ಚಳವಳಿ’ಯ ಸಂದರ್ಭದಲ್ಲಿ ಚಿದಾನಂದಮೂರ್ತಿಯವರ ಜೊತೆಯಲ್ಲೇ ನೇರ ಕನ್ನಡ ಹೋರಾಟಕ್ಕಿಳಿದ ಎಲ್ಎಸ್ಎಸ್, ಅಂದಿನಿಂದ ಜೀವಿತದ ಕೊನೆಯವರೆಗೂ ನಡೆದ ಎಲ್ಲ ಹೋರಾಟಗಳಲ್ಲಿಯೂ ಯಾವುದೇ ಸಂಕೋಚವಾಗಲಿ ಮುಜುಗರವಾಗಲಿ ತೋರದೆ ಕ್ರಿಯಾತ್ಮಕವಾಗಿ ಪಾಲ್ಗೊಂಡರು. ಕನ್ನಡ ಚಳವಳಿಯ ಸಾಧ್ಯತೆಯನ್ನು ವಿಸ್ತರಿಸಿದ ‘ಸಾಹಿತಿಗಳ-ಕಲಾವಿದರ ಬಳಗ’, ‘ಕನ್ನಡ ಶಕ್ತಿ ಕೇಂದ್ರ’ ಮತ್ತು ಕನ್ನಡ ಗೆಳೆಯರ ಬಳಗಗಳ ಭಾಗವಾಗಿ ಅವುಗಳು ರೂಪಿಸಿದ ಎಲ್ಲ ಕಾರ್ಯಕ್ರಮಗಳಲ್ಲೂ ಆಲೋಚನೆಯ ಹಂತದಿಂದ ಅನುಷ್ಠಾನ ಹಂತದವರೆಗೆ ಪಾಲ್ಗೊಂಡು, ಇತರ ಸಂಘಟನೆಗಳೊಡನೆಯೂ ಕೈ ಜೋಡಿಸಿ, ಕನ್ನಡ ಕಾರ್ಯಕರ್ತರಿಗೆ ಮಾರ್ಗದರ್ಶಿಯಾಗಿ ‘ಕನ್ನಡದ ಸಾತ್ತ್ವಿಕಶಕ್ತಿ’ಯಾಗಿದ್ದರು. ಅವರ ನಿಕಟ ಸಂಪರ್ಕ ಹೊಂದಿದ್ದ ನನ್ನಂತಹ ಕನ್ನಡ ಕಾರ್ಯಕರ್ತರಿಗೆ ಎಲ್ಎಸ್ಎಸ್ ಆಪದ್ಬಾಂಧವರಾಗಿದ್ದರು. ಅವರಿಗೆ ಅಧಿಕಾರ ಸಿಕ್ಕಾಗ ಕನ್ನಡದ ಕೆಲಸ ಮಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಕನ್ನಡಿಗರ ವಾಚನಾಭಿರುಚಿ ಹೆಚ್ಚಿಸಲು ಶ್ರಮಿಸಿದರು. ಕನ್ನಡಕ್ಕೆ ವಿವಿಧ ಜ್ಞಾನ ಶಿಸ್ತುಗಳ ಪುಸ್ತಕ ಪ್ರಕಟಿಸುವ ಯೋಜನೆ ರೂಪಿಸಿದರು. ‘ಪುಸ್ತಕ ಪ್ರೀತಿ ಕನ್ನಡ ಜಾಗೃತಿ’ ಎಂಬ ಚಿಂತನಗೋಷ್ಠಿ ನಡೆಸಿದರು. ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಅವರ ಕಚೇರಿಯಲ್ಲೂ ಕನ್ನಡದ ಬಳಕೆ ಹೆಚ್ಚಿಸಿದರು. ಕನ್ನಡ ಬೆರಳಚ್ಚು ಯಂತ್ರ ತರಿಸಿದರು. ಇದೆಲ್ಲಕ್ಕೂ ಮಿಗಿಲಾಗಿ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿಯೂ ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡಿದ್ದುದನ್ನು ಮರೆಯಲಾಗದು. ಕೇಂದ್ರಕ್ಕೆ ಸಲ್ಲಿಸಿದ ಕನ್ನಡ ಶಾಸ್ತ್ರೀಯ ಭಾಷಾತಜ್ಞರ ಸಮಿತಿಯ ಸದಸ್ಯರಾಗಿ, ಶಿಕ್ಷಣಮಾಧ್ಯಮ ಕುರಿತು ರಚನೆಯಾದ ಎಚ್. ನರಸಿಂಹಯ್ಯ ಸಮಿತಿಯ ಸದಸ್ಯರಾಗಿ ಸಲ್ಲಿಸಿದ ಕನ್ನಡ ಕಾಯಕ ಮರೆಯಲಾಗದು.
ಕರ್ನಾಟಕದ ಏಕೀಕರಣವಾದ ನಂತರವೂ ಕನ್ನಡಿಗ ತನ್ನ ನಾಡಿನಲ್ಲಿಯೇ ‘ಸ್ಥಳೀಯ ನಿರಾಶ್ರಿತ’ನಾಗಿದ್ದಾನೆ ಕನ್ನಡ ಅನಾಥವಾಗುತ್ತಿದೆ – ಎಂಬ ಭಾವ ಜಾಗೃತ ಕನ್ನಡಿಗರನ್ನು ಆವರಿಸಿ, ಆಳುವವರು ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಗಮನ ನೀಡದಿರುವುದರ ಜೊತೆಗೆ ಕನ್ನಡ ನಾಡಿನ ನೆಲ-ಜಲ ರಕ್ಷಣೆಗೆ ಇಚ್ಛಾಶಕ್ತಿ ತೋರದೆ ಬೆಂಗಳೂರು ಕನ್ನಡಿಗರ ಕೈ ತಪ್ಪುತ್ತಿದೆ ಅನ್ನುವ ಪರಿಸ್ಥಿತಿ ಉದ್ಭವಿಸಿದಾಗ ನಾಡಿನ ಸಾಹಿತಿಗಳು, ಕಲಾವಿದರು ಅನಕೃ ನೇತೃತ್ವದಲ್ಲಿ ‘ಕನ್ನಡ ಚಳವಳಿ’ ಆರಂಭಿಸಿದರು. ಅನಕೃ ನೇತೃತ್ವದಲ್ಲಿ ಕರ್ನಾಟಕದ ಕಲಾವಿದರು, ಕನ್ನಡ ಗೇಯ ಕೃತಿಗಳಿಗೆ ಆದ್ಯತೆ ಕೊಡುವಂತೆ ಚಾಮರಾಜಪೇಟೆಯ ‘ರಾಮಸೇವಾ ಮಂಡಲಿ’ ೨೭-೪-೧೯೬೨ರಂದು ಸುಪ್ರಸಿದ್ಧ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಗಾಯನವನ್ನು ವ್ಯವಸ್ಥೆ ಮಾಡಿತ್ತು (ಕಾರ್ಯಕ್ರಮದ ಜಾಹೀರಾತು ಇಂಗ್ಲಿಷ್ನಲ್ಲಿ ಮಾತ್ರ ಇತ್ತು). ಜನರ ಗಮನ ಸೆಳೆಯಲು ಇದೇ ಸರಿಯಾದ ಸಂದರ್ಭ ಎಂದು ಭಾವಿಸಿದ ಹೋರಾಟಗಾರರು ದೊಡ್ಡ ಸಂಖ್ಯೆಯಲ್ಲಿ ಎಂ.ಎಸ್. ಅವರ ಸಂಗೀತ ಕಚೇರಿಗೆ ಪ್ರತಿಭಟನೆ ವ್ಯಕ್ತಪಡಿಸಿದರು. ಇದು ಕನ್ನಡ ಹಿತಕ್ಕಾಗಿ ನಡೆದ ಪ್ರಥಮ ಬಹಿರಂಗ ಪ್ರತಿಭಟನೆ ಎಂಬುದು ವಿಶೇಷ. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಗ್ಗೆ ಎಲ್ಎಸ್ಎಸ್ ಅವರು ಸಭೆಯಲ್ಲಿ ಹೇಳಿದ್ದರು. ಹೀಗೆ ಕನ್ನಡಿಗರು ಅನ್ಯಾಯದ ವಿರುದ್ಧ ನಡೆಸಿದ ಪ್ರಥಮ ಪ್ರತಿಭಟನೆಯಿಂದ ಜೀವಿತದ ಕೊನೆಯವರೆಗೂ ಕನ್ನಡ ಕಾಯಕದಲ್ಲಿ ತೊಡಗಿಕೊಂಡಿದ್ದರು.
ದುರ್ದೈವವೆಂದರೆ, ಕನ್ನಡಿಗರಲ್ಲಿ ನಾಡು-ನುಡಿಯ ಬಗ್ಗೆ ಜಾಗೃತಿ ಮೂಡುತ್ತಿದೆ ಎನ್ನುವ ವಾತಾವರಣ ಸೃಷ್ಟಿಯಾಗುತ್ತಿದ್ದಾಗಲೇ ಭಿನ್ನಾಭಿಪ್ರಾಯದಿಂದ ಆ ಹೋರಾಟ ಹೆಚ್ಚು ಕಾಲ ಮುಂದುವರಿಯದಿದ್ದುದು. ಕನ್ನಡದ ಹಿತದೃಷ್ಟಿಯಿಂದ ಅದೊಂದು ದೊಡ್ಡ ದುರಂತ. ಆನಂತರದ ದಿನಗಳಲ್ಲಿ ಕನ್ನಡ ಚಳವಳಿ ಪಡೆದುಕೊಂಡ ಸ್ವರೂಪ ಪ್ರಜ್ಞಾವಂತರು ಕನ್ನಡ ಚಳವಳಿಯಿಂದ ದೂರ ಸರಿಯುವಂತೆ ಮಾಡಿತು. ಕನ್ನಡಪರ ಹೋರಾಟ ಗಾಂಭೀರ್ಯ ಕಳೆದುಕೊಂಡು, ಚಳವಳಿ ಹಾಸ್ಯಾಸ್ಪದವಾಗುತ್ತಿದೆ ಎನ್ನುವ ಮಾತುಗಳು ಕೇಳಿಬರತೊಡಗಿದವು. ಅದೇ ಕಾಲಘಟ್ಟದಲ್ಲಿ ‘ಬೀದಿಗಿಳಿದ ಸಾಹಿತಿ, ಚಲಿಸುವ ಜ್ವಾಲಾಮುಖಿ’, ‘ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆ,’ ಎಂಬಂತಹ ಘೋಷಣೆಗಳೊಡನೆ ಮೂರು ತಲೆಮಾರಿನ ಗಣ್ಯ ಸಾಹಿತಿಗಳು ‘ಗೋಕಾಕ್ ಭಾಷಾ ಸೂತ್ರ’ದ ಅನುಷ್ಠಾನಕ್ಕೆ ಒತ್ತಾಯಿಸಿ ಬೆಂಗಳೂರಿನಲ್ಲಿ ಮೆರವಣಿಗೆ ನಡೆಸಿದರು (೧೯೮೨). ಮೊದಲಿನಿಂದಲೂ ಕನ್ನಡ ಹೋರಾಟದ ಬಗ್ಗೆ ಒಲವಿದ್ದ ಪ್ರೊ. ಶೇಷಗಿರಿರಾಯರು ಆ ಮೆರವಣಿಗೆಯ ಮುಂಚೂಣಿಯಲ್ಲಿದ್ದರು. ‘ಗೋಕಾಕ್ ಚಳವಳಿ’ಯಿಂದ ಕನ್ನಡಪರ ಕೆಲಸಗಳಿಗೆ ಹೊಸ ಉತ್ಸಾಹ ಬಂದದ್ದು, ಎಲ್ಲ ವರ್ಗದ ಜನ ಸ್ಪಂದಿಸಿದ್ದು, ಚಳವಳಿಗೆ ಅಗತ್ಯವಿದ್ದ ಘನತೆ-ಗಾಂಭೀರ್ಯ ಒದಗಿಬಂದದ್ದು ಈಗ ಇತಿಹಾಸ. ಆಗ ಬಳಗ ರೂಪಿಸಿದ ಎಲ್ಲ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅನಂತಮೂರ್ತಿಯವರು ಗೋಕಾಕ್ ಚಳವಳಿಯನ್ನು ‘ಸಮೂಹ ಸನ್ನಿ’ ಎಂದು ಅವಮಾನಿಸಿ, ಗೋಕಾಕ್ ಭಾಷಾ ಸೂತ್ರದ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯುತ್ತಿದ್ದ ಚಳವಳಿಯನ್ನು ವಿರೋಧಿಸಿ, ಜನರಲ್ಲಿ ಗೊಂದಲ ಸೃಷ್ಟಿಸಿ, ಚಳವಳಿಯ ದಿಕ್ಕು ತಪ್ಪಿಸುವ ರೀತಿಯಲ್ಲಿ ವಿಸ್ತಾರವಾದ ಲೇಖನವನ್ನು ಪ್ರಜಾವಾಣಿಯಲ್ಲಿ ಬರೆದರು. ಅದಕ್ಕೆ ಉತ್ತರರೂಪವಾಗಿ ‘ಭಾಷೆ, ಸಂಸ್ಕೃತಿಗಳ ಬಗ್ಗೆ ಇಷ್ಟೊಂದು ಕಳಕಳಿಯಿರುವ ಅನಂತಮೂರ್ತಿಯವರಿಗೆ ಕನ್ನಡಿಗನ ಅನ್ನದ ವಿಷಯದ ಬಗ್ಗೆ ಕಳಕಳಿ ಏಕಿಲ್ಲ? ಕನ್ನಡಿಗ ಎನ್ನುವ ಕಾರಣಕ್ಕೆ ಕಾರ್ಖಾನೆ, ಕೇಂದ್ರಸರ್ಕಾರದ ಕಚೇರಿ, ರೈಲ್ವೆಗಳಲ್ಲಿ ಕೆಲಸ ಸಿಗುತ್ತಿಲ್ಲ. ಕೆಲವು ಕಡೆ ಕನ್ನಡದಲ್ಲಿ ಮಾತನಾಡಿದರೆ ಕೆಲಸ ಆಗುವುದಿಲ್ಲ. ಇಂತಹ ಕಟುಸತ್ಯ ಅವರಿಗೇಕೆ ಮನವರಿಕೆಯಾಗಿಲ್ಲ?’ ಎಂದು ಪ್ರಶ್ನಿಸಿ ‘ಅನಂತಮೂರ್ತಿ – ಆಶ್ಚರ್ಯಕರ ಗೊಂದಲ’ ಎಂಬ ಲೇಖನವನ್ನು ಕನ್ನಡಪ್ರಭದಲ್ಲಿ ಬರೆದರು. ಈ ಲೇಖನ ಅನಂತಮೂರ್ತಿಯವರಿಗೆ ಮಾತ್ರವಲ್ಲ ಚಳವಳಿಯ ಬಗ್ಗೆ ಒಡಕು ಮಾತುಗಳನ್ನು ಆಡುತ್ತಿದ್ದವರಿಗೆ ಎಚ್ಚರಿಕೆಯಾಗಿ, ಚಳವಳಿ ಹೆಚ್ಚು ಗಟ್ಟಿಯಾಗಲು ನೆರವಾಯಿತು.
ಗೋಕಾಕ್ ಚಳವಳಿಯ ತೀವ್ರತೆ ಹೆಚ್ಚಿದಂತೆ ಪೊಲೀಸರ ದಬ್ಬಾಳಿಕೆಯೂ ಹೆಚ್ಚಿತು. ಚಳವಳಿಗಾರರ ಗುಡಾರಗಳನ್ನು ಕೀಳುವುದು, ಹೋರಾಟಗಾರರ ಮೇಲೆ ಹಲ್ಲೆ ನಡೆಸುವುದು, ನಿರಶನನಿರತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡುವುದರಲ್ಲಿ ಪೊಲೀಸರು ತೊಡಗಿದಾಗ ಚಳವಳಿ ನಾಯಕರು ಆತಂಕ ವ್ಯಕ್ತಪಡಿಸಿದರು. ಚಳವಳಿಯನ್ನು ‘ಸಮೂಹ ಸನ್ನಿ,’ ಕನ್ನಡ ಚಳವಳಿ ಫ್ಯಾಸಿಸ್ಟ್ ಸ್ವರೂಪದ್ದು ಎಂದೆಲ್ಲ ಹೇಳಿದ್ದ ‘ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್’ ಕಾರ್ಯದರ್ಶಿ ಯು.ಆರ್. ಅನಂತಮೂರ್ತಿ ಗೋಕಾಕ್ ವರದಿಯ ಅನುಷ್ಠಾನಕ್ಕೆ ನಡೆದಿರುವ ಚಳವಳಿಯಲ್ಲಿ ಪೊಲೀಸರು ಹೋರಾಟಗಾರರನ್ನು ನಡೆಸಿಕೊಂಡ ರೀತಿಯನ್ನು ಜನತೆಯ ಮುಂದಿಡಲು ಮಾಹಿತಿ ನೀಡಲು ಹೋರಾಟ ನಿರತರಲ್ಲಿ ಮನವಿ ಮಾಡಿದರು. ಆಗ ಹೋರಾಟದ ಮುಂಚೂಣಿಯಲ್ಲಿದ್ದ ಎಲ್ಎಸ್ಎಸ್ ‘ಚಳವಳಿಯನ್ನು ವಿರೋಧಿಸುತ್ತಿರುವ ಅನಂತಮೂರ್ತಿಯವರಿಗೆ ಮಾಹಿತಿ ನೀಡಬೇಡಿ. ಅಗತ್ಯ ಬಿದ್ದರೆ ನಾವೇ ಜನತೆಗೆ ತಿಳಿಸೋಣ. ಜನತೆ ನಮಗೇನೂ ದೂರವಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಗೋಕಾಕ್ ಚಳವಳಿ ನಿಂತ ನಂತರವೂ ಸಾಹಿತಿಗಳ-ಕಲಾವಿದರ ಬಳಗ ಕ್ರಿಯಾಶೀಲವಾಗುಳಿಯುವಲ್ಲಿ ಎಲ್ಎಸ್ಎಸ್ ಅವರ ಪಾತ್ರ ದೊಡ್ಡದಿದೆ. ಕನ್ನಡ ಮಾಧ್ಯಮದ ಶಿಕ್ಷಣಕ್ಕಾಗಿ ಒತ್ತಾಯಿಸಿ ನಡೆದ ಹೋರಾಟವಿರಲಿ, ಕಾವೇರಿ ಜಲವಿವಾದ ಸಂದರ್ಭದಲ್ಲಿ ನಡೆದ ಪಂಜಿನ ಮೆರವಣಿಗೆಯಿರಲಿ, ಕೃಷ್ಣಾ ನದಿ ನೀರಿನ ಹಂಚಿಕೆ ವಿಚಾರವಿರಲಿ, ಗಡಿ ವಿವಾದವಿರಲಿ, ಕನ್ನಡಿಗರ ಉದ್ಯೋಗಕ್ಕೆ ಸಂಬಂಧಿಸಿದ ಹೋರಾಟವಿರಲಿ, ಹಂಪೆ-ಗೋಕರ್ಣಗಳಲ್ಲಿ ಹಿಪ್ಪಿಗಳ ಹಾವಳಿ ವಿರುದ್ಧದ ಹೋರಾಟವಿರಲಿ, ಹಿಂದಿ ಹೇರಿಕೆ ವಿರೋಧಿ ಚಳವಳಿಯಿರಲಿ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ಒತ್ತಾಯಿಸಿ ನಡೆದ ಚಳವಳಿಯಿರಲಿ, ಇನ್ನಾವುದೇ ಕನ್ನಡಪರ ಧರಣಿ, ಮೆರವಣಿಗೆ-ಪ್ರದರ್ಶನಗಳಿರಲಿ, ಎಲ್ಲ ಕಡೆಯೂ ಮನಃಪೂರ್ವಕವಾಗಿ ಭಾಗವಹಿಸಿದರು. ಕೊಡಗಿನಲ್ಲಿ ಪ್ರತ್ಯೇಕತೆಯ ಧ್ವನಿ ಕೇಳಿಬಂದಾಗ, ಮಡಿಕೇರಿಯಲ್ಲಿ ಬಹಳ ವರ್ಷಗಳು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೊಡಗಿನಲ್ಲಿ ವಿಶೇಷ ಗೌರವ ಗಳಿಸಿದ್ದ ಎಲ್ಎಸ್ಎಸ್, ವಯೋಮಾನದ ಕಾರಣ ಆಯಾಸವಾಗುವುದನ್ನೂ ಕಡೆಗಣಿಸಿ ಅಲ್ಲಿಗೇ ಹೋಗಿ ಪ್ರತ್ಯೇಕತೆಯ ವಿರುದ್ಧ ಧ್ವನಿ ಎತ್ತಿ ಬಂದರು. ನಬಾರ್ಡನಲ್ಲಿ ಕನ್ನಡೇತರರ ನೇಮಕಾತಿ ವಿರುದ್ಧ ನಡೆದ ಚಳವಳಿಯಲ್ಲಿ ಯುವಕರು ನಾಚುವ ರೀತಿ ಹಲವಾರು ಬಾರಿ ಪಾಲ್ಗೊಂಡಿದ್ದಾರೆ. ಅದೆಲ್ಲಕ್ಕಿಂತ ಕಾವೇರಿ ಜಲವಿವಾದ ಸಂಬAಧ ನಡೆದ ಬೃಹತ್ ಪಂಜಿನ ಮೆರವಣಿಗೆಯಲ್ಲಿ ಸಡಗರದಿಂದ ಓಡಾಡಿದ್ದು, ಪಂಜು ಹಿಡಿದು ಮಹಾನಗರ ಪಾಲಿಕೆ ಮುಂಭಾಗದ ಕೆಂಪೇಗೌಡ ಪ್ರತಿಮೆಯಿಂದ ವಿಧಾನಸೌಧದವರೆಗೆ ನಡೆದದ್ದು – ಎಲ್ಲವನ್ನು ನನಗೆ ಮರೆಯಲು ಸಾಧ್ಯವೇ ಇಲ್ಲ! ಇದರಾಚೆಗೆ ಬೇರೆ ಸಂಘಟನೆಗಳೊಡನೆಯೂ ಕೈ ಜೋಡಿಸಿದ್ದಾರೆ. ಇಷ್ಟೊಂದು ವ್ಯಾಪಕವಾಗಿ ಕನ್ನಡ ಹೋರಾಟದಲ್ಲಿ ಪಾಲ್ಗೊಂಡ ಎಲ್ಎಸ್ಎಸ್ ಅವರ ಎಲ್ಲ ಕನ್ನಡ ಹೋರಾಟಗಳನ್ನು ಪಟ್ಟಿ ಮಾಡುವುದು ಈ ಲೇಖನದ ಉದ್ದೇಶವಲ್ಲ. ನಾಡಿನ ಜನತೆಗೆ ರಾಯರ ಕನ್ನಡ ಪ್ರೀತಿ ತಿಳಿದಿದೆ. ಅವರು ಕನ್ನಡದ ಕೆಲಸಗಳ ಬಗ್ಗೆ ತೋರುತ್ತಿದ್ದ ಉತ್ಸಾಹ, ಕಾಳಜಿಯನ್ನು ಸೂಚ್ಯವಾಗಿ ಇಲ್ಲಿ ಉಲ್ಲೇಖಿಸಿದೆ ಅಷ್ಟೆ.
‘ಕನ್ನಡ ಉಳಿಸಿ ವರ್ಷ’
ಕನ್ನಡ-ಕನ್ನಡಿಗ-ಕರ್ನಾಟಕಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ, ಅವುಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಸೂಚಿಸಿ, ಅನುಷ್ಠಾನಗೊಳಿಸಿದ ರಾಜ್ಯ ಮಟ್ಟದಲ್ಲಿ ಕ್ರಿಯಾಶೀಲವಾದ ಮೊದಲ ಸಂಘಟನೆ ಕನ್ನಡ ಶಕ್ತಿ ಕೇಂದ್ರ. ಅದರಲ್ಲಿಯೂ ಶಕ್ತಿಕೇಂದ್ರವು ಆಚರಿಸಿದ ‘ಕನ್ನಡ ಉಳಿಸಿ ವರ್ಷ’ ಭಾರತದ ಭಾಷಾ ಚಳವಳಿಗಳಲ್ಲೇ ಅನನ್ಯವಾದದ್ದು. ಆ ಮಹತ್ತ್ವದ ಸಲಹೆ ಎಲ್ಎಸ್ಎಸ್ ಅವರದು – ೧೯೯೦ರಲ್ಲಿ ‘ಕನ್ನಡ ಚಳವಳಿ ಸಾಗಬೇಕಾದ ದಾರಿ’ ಎಂಬ ಚಿಂತನಗೋಷ್ಠಿಯಲ್ಲಿ. ಗೋಪಾಲಕೃಷ್ಣ ಅಡಿಗರು ಉದ್ಘಾಟಿಸಿದ ಆ ಚಿಂತನ ಸಭೆಯಲ್ಲಿ ಎಲ್ಎಸ್ಎಸ್, ‘ಕನ್ನಡ ಚಳವಳಿ ಕೆಲವು ನಗರಗಳಿಗೆ ಮಾತ್ರ ಸೀಮಿತಗೊಂಡರೆ ಸಾಲದು, ಕರ್ನಾಟಕದ ಎಲ್ಲ ಪಟ್ಟಣ-ಹಳ್ಳಿಗಳಿಗೂ ವಿಸ್ತರಿಸಬೇಕು. ಎಲ್ಲ ಕನ್ನಡಿಗರಿಗೆ ಕನ್ನಡದ ಸಮಸ್ಯೆಗಳು ಹಾಗೂ ಪರಿಹಾರಮಾರ್ಗಗಳು, ಕನ್ನಡದ ಒಳಿತಿಗೆ ಆಗಬೇಕಾದ ಕೆಲಸಗಳ ಸ್ಪಷ್ಟ ಚಿತ್ರಣ ತಿಳಿದಿರಬೇಕು. ಈ ಉದ್ದೇಶವನ್ನು ವ್ಯಾಪಕವಾಗಿ ತಿಳಿಸಲು ಇಡೀ ವರ್ಷ ಕನ್ನಡ ಉಳಿಸಿ ಕಾರ್ಯಕ್ರಮವನ್ನು ಆಚರಿಸಬೇಕು. ಆ ಕೂಗಿನಿಂದ ಇಲ್ಲಿಯವರೆಗೂ ಕನ್ನಡ ಕೂಗು ಕೇಳಿಸದ ಕಡೆಗಳಲ್ಲೂ ಕನ್ನಡನಾಡು-ನುಡಿಯ ಬಗ್ಗೆ ಜಾಗೃತಿ ಮೂಡಲು ಸಹಕಾರಿಯಾಗುತ್ತದೆ – ಎಂದರು.
ಆ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸಿದ ಕನ್ನಡ ಶಕ್ತಿ ಕೇಂದ್ರ ನವೆಂಬರ್ ೧೯೯೦ರಿಂದ ‘ಕನ್ನಡ ಉಳಿಸಿ ವರ್ಷ’ವನ್ನು ಆಚರಿಸಿ, ಆ ಸಂದರ್ಭದಲ್ಲಿ ‘ಕನ್ನಡ-ಕನ್ನಡಿಗ-ಕರ್ನಾಟಕ’ ಎಂಬ ಪುಸ್ತಕವನ್ನು ಪ್ರಕಟಿಸಿತು (ಸಂ: ಎಲ್ಎಸ್ಎಸ್, ಗೊರುಚ, ರಾನಂಚಂ). ಈ ಕೃತಿಯನ್ನು ಡಾ. ಎಸ್.ಎಲ್. ಭೈರಪ್ಪನವರು, ‘ಕನ್ನಡಿಗರ ಅನಧಿಕೃತ ಸಂವಿಧಾನ’ ಎಂದರೆ, ಡಿ.ಬಿ. ಚಂದ್ರೇಗೌಡರು, ‘ಶಾಸಕರುಗಳಿಗೆ ಉತ್ತಮ ಕೈಪಿಡಿ’ ಎಂದರು. ಈ ಕೃತಿಯು ೧೬ ಮರುಮುದ್ರಣ ಕಂಡು, ಪ್ರಸ್ತುತ ೧೭ನೆಯ ಪರಿಷ್ಕೃತ ಆವೃತ್ತಿ ಸಿದ್ಧವಾಗುತ್ತಿದೆ. ಇಂತಹ ಪ್ರಯತ್ನ ದೇಶದ ಇನ್ನಾವುದೇ ರಾಜ್ಯಗಳಲ್ಲಿ ಆಗಿಲ್ಲ ಎಂದು ಗುಜರಾತಿನ ‘ಲೋಕಸತ್ತಾ’ ಪತ್ರಿಕೆಯ ವರದಿಗಾರರು ಹೇಳಿದ್ದಲ್ಲದೆ ಆ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿದರು. ನಾಡಿನ ಮೂಲೆಮೂಲೆಗಳಲ್ಲಿ ಸಭೆಗಳು ನಡೆದವು. ಎಲ್ಲ ಕ್ಷೇತ್ರದ ಜನರ ಸಮಾವೇಶಗಳು ನಡೆದವು. ಕನ್ನಡ ಚಳವಳಿಯನ್ನು ವ್ಯಾಪಕವಾಗಿಸಿದ ಆ ‘ಕನ್ನಡ ಉಳಿಸಿ ವರ್ಷ’ದ ಸಲಹೆಯನ್ನಿತ್ತ ಎಲ್ಎಸ್ಎಸ್ಗೆ ಕನ್ನಡ ಕಾರ್ಯಕರ್ತರ ಕೃತಜ್ಞತೆಗಳು ಸಂದವು.
ಕನ್ನಡದ ಹಿತಕ್ಕೆ ಧಕ್ಕೆ ಬರುತ್ತಿದೆ ಅನ್ನುವ ಸನ್ನಿವೇಶ ಉದ್ಭವಿಸಿದಾಗೆಲ್ಲ ಎಲ್.ಎಸ್.ಎಸ್. ನೇರ ಚಳವಳಿಯ ನೇತೃತ್ವ ವಹಿಸಿದ ಪ್ರಸಂಗಗಳೂ ಇವೆ. ಅದರಲ್ಲಿ ಮುಖ್ಯವಾದದ್ದು ಹಿಂದಿ ಹೇರಿಕೆ ವಿರೋಧಿ ದಿನಾಚರಣೆ. ಹಿಂದಿ ಹೇರಿಕೆಯ ಅಪಾಯವನ್ನು ಕನ್ನಡಿಗರು ಸರಿಯಾಗಿ ಗ್ರಹಿಸದೇ ಇದ್ದುದರ ಪರಿಣಾಮ ಕೇಂದ್ರಸರ್ಕಾರದ ಕಚೇರಿ, ಬ್ಯಾಂಕ್, ಕೈಗಾರಿಕೆ, ರೈಲ್ವೆ ಮುಂತಾದೆಡೆಯಲ್ಲೆಲ್ಲ ಹಿಂದಿ ಹೇರಿಕೆಯ ಭರಾಟೆಯಲ್ಲಿ ಕನ್ನಡ ಕಾಣದಂತಾಯಿತು. ಕನ್ನಡದ ಜ್ಞಾನವೇ ಕಡ್ಡಾಯವಲ್ಲ ಎಂದಾಗ ಕನ್ನಡಿಗರಿಗೆ ಕೆಲಸ ಸಿಗುವುದಾದರೂ ಹೇಗೆ? ಆಗ ಕನ್ನಡ ಶಕ್ತಿ ಕೇಂದ್ರ, ಸಾಹಿತಿಗಳ-ಕಲಾವಿದರ ಬಳಗದ ಕಾರ್ಯಕರ್ತರು, ಜೊತೆಗೆ ಕೇಂದ್ರಸರ್ಕಾರದಲ್ಲಿದ್ದ ಕನ್ನಡಿಗರು ಸೇರಿ, ಎಲ್ಎಸ್ಎಸ್ ಅಧ್ಯಕ್ಷತೆಯಲ್ಲಿ ‘ಹಿಂದಿ ಸಾಮ್ರಾಜ್ಯಶಾಹಿ ವಿರೋಧಿ ಕ್ರಿಯಾ ಸಮಿತಿ’ಯನ್ನು ಅಸ್ತಿತ್ವಕ್ಕೆ ತಂದರು. ಜನವರಿ ೨೬ರ ಗಣರಾಜ್ಯ ದಿನವನ್ನು ‘ಹಿಂದಿ ಹೇರಿಕೆ ದಿನ’ವನ್ನಾಗಿ ಆಚರಿಸಲು ಆರಂಭಿಸಲಾಯಿತು. ೨೫-೧-೧೯೮೭ರಂದು ಹಿಂದಿ ಹೇರಿಕೆ ವಿರೋಧಿಸಿ ಸಭೆಯನ್ನು ನಡೆಸಿತು. ಶಿವರಾಮ ಕಾರಂತ, ಬಿ.ಸಿ. ರಾಮಚಂದ್ರ ಶರ್ಮರಂತಹ ಗಣ್ಯರು ಆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಹೆಗ್ಗಳಿಕೆ ರಾಯರದು. ಆ ಸಮಿತಿಯು ಬ್ಯಾಂಕ್, ವಿಮಾ ಕಚೇರಿ, ಕೇಂದ್ರಸರ್ಕಾರದ ಕಚೇರಿ ಮುಂತಾದೆಡೆ ಆಚರಿಸುತ್ತಿದ್ದ ‘ಹಿಂದಿ ಸಪ್ತಾಹ’, ‘ಹಿಂದಿ ದಿವಸ’ಗಳಂತಹ ಹಿಂದಿ ಹೇರುವ ಸಂದರ್ಭಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿತು. ಅರ್ಥಪೂರ್ಣ ಪ್ರತಿರೋಧ ತೋರುತ್ತಿದ್ದ ಆ ಸಮಿತಿ ಹೆಚ್ಚು ಕಾಲ ಉಳಿಯಲಿಲ್ಲ.
ಕನ್ನಡ ಕಾರ್ಯಕರ್ತರಿಗೆ ಆಪದ್ಬಾಂಧವ
ಇಲ್ಲಿ ಇನ್ನೊಂದು ಹೋರಾಟವನ್ನು ಪ್ರಸ್ತಾಪಿಸಬೇಕು. ೨೦೦೨ರಲ್ಲಿ ಕಾವೇರಿ ವಿವಾದ ವಿಕೋಪಕ್ಕೆ ಹೋಯಿತು. ನಾಡಿನ ರೈತರು ಹೋರಾಟಕ್ಕಿಳಿದರು. ನಾಡಿನ ಪ್ರಜ್ಞಾವಂತರು ಏನೂ ಮಾಡುತ್ತಿಲ್ಲ ಎಂದು ರೈತ ನಾಯಕರು ನೊಂದು ನುಡಿದರು. ಚಿದಾನಂದಮೂರ್ತಿಯವರು ನೇಪಾಳಕ್ಕೆ ಹೋಗಿದ್ದುದರಿಂದ ನನ್ನಂತಹವರಿಗೆ ಏನು ಮಾಡುವುದಕ್ಕೂ ತೋರದೆ ತೊಳಲಾಟದಲ್ಲಿದ್ದೆವು. ಆ ಸಂದರ್ಭದಲ್ಲಿ ಎಲ್ಎಸ್ಎಸ್ ದೂರವಾಣಿ ಮಾಡಿ, ‘ರಾನಂ, ಕಾವೇರಿ ಬಗ್ಗೆ ಇಷ್ಟೆಲ್ಲ ನಡೆಯುತ್ತಿರುವಾಗ ನಾವು ಸುಮ್ಮನಿರುವುದು ಸರಿಯಲ್ಲ. ಯೋಚನೆ ಮಾಡಿ ಕಾರ್ಯಕ್ರಮ ರೂಪಿಸೋಣ. ಸಂಜೆ ಮನೆಗೆ ಬರಲು ಸಾಧ್ಯವೇ?’ ಎಂದರು. ಸಂಜೆ ನಾನು, ಇನ್ನೊಬ್ಬ ಸಂಚಾಲಕ ಬಾ.ಹ. ಉಪೇಂದ್ರ ಅವರ ಮನೆಗೆ ಹೋದೆವು. ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಯ ಎದುರು ಧರಣಿ ನಡೆಸುವ ನಿರ್ಧಾರವಾಯಿತು. ಕನ್ನಡ ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ಆ ಧರಣಿಯಲ್ಲಿ ವಿವಿಧ ಕ್ಷೇತ್ರಗಳ ೫೨ ಗಣ್ಯರು ಪಾಲ್ಗೊಂಡರು. ನಾಲ್ಕು ದಿನದಲ್ಲಿ ಅಷ್ಟೊಂದು ಗಣ್ಯರು ಪಾಲ್ಗೊಳ್ಳುವಂತೆ ಮಾಡಿದ ಎಲ್ಎಸ್ಎಸ್ ಅವರು, ಕನ್ನಡ ಕಾರ್ಯಕರ್ತರ ಪಾಲಿಗೆ ಆಪದ್ಬಾಂಧವರಾದರು. ಎಂದೂ ಚಳವಳಿಯಲ್ಲಿ ಪಾಲ್ಗೊಳ್ಳದ ಕೆಲವರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ‘ಈ ಹೋರಾಟ ರೈತರಿಗೆ ಹೊಸ ಶಕ್ತಿ ತಂದುಕೊಟ್ಟಿದೆ’ ಎಂದು ಮಂಡ್ಯ ರೈತರ ನಾಯಕ ಜಿ. ಮಾದೇಗೌಡರು ಸಾರ್ವಜನಿಕವಾಗಿ ಹೇಳಿದರು. ‘ಕನ್ನಡ-ಕನ್ನಡಿಗ-ಕರ್ನಾಟಕ’ಗಳ ಹಿತ ಆತಂಕಕ್ಕೀಡಾದಾಗ ಶೇಷಗಿರಿರಾವ್ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂಬುದಕ್ಕೆ ಈ ನಿದರ್ಶನಗಳು ಸಾಕ್ಷಿಯಾಗಿವೆ.
‘ಇಂಥ ಸಂದರ್ಭಗಳಲ್ಲಿ ಕನ್ನಡಿಗರಿಗೆ ಒಂದು ಸಂದೇಹ ಮೂಡುತ್ತದೆ. ನಮ್ಮ ಸರ್ಕಾರಗಳ ಜಾಣ ಕುರುಡುಗಳಿಗೆ ಯಾವುದೋ “ರಿಮೋಟ್ ಕಂಟ್ರೋಲ್” ಕಾರಣ ಎನ್ನಿಸುತ್ತದೆ. ತನ್ನ ಹಕ್ಕುಗಳನ್ನು ನೆರೆ ರಾಜ್ಯಗಳು ಕಾಲಿನಿಂದೊದ್ದಾಗ, ಕರ್ನಾಟಕವು ಆ ಹಕ್ಕುಗಳನ್ನು ಕಾಯ್ದುಕೊಳ್ಳಲು ಮುಂದಾದರೆ, ಆಂಧ್ರ-ತಮಿಳುನಾಡು-ಮಹಾರಾಷ್ಟ್ರಗಳಲ್ಲಿ ತನಗೆ ಬರುವ ಮತಗಳಿಗೆ ಧಕ್ಕೆಯಾಗುವುದೆಂದು ದೆಹಲಿಯಲ್ಲಿರುವ ಯಾವುದೋ ರಾಷ್ಟ್ರೀಯ ಪಕ್ಷದ ಹೈಕಮಾಂಡ್ ಕರ್ನಾಟಕ ಸರ್ಕಾರಕ್ಕೆ ಲಗಾಮು ಬಿಗಿಯುತ್ತದೆ ಎಂಬ ಭಾವನೆ ಬರುತ್ತದೆ (ಜಲ ಸಮಸ್ಯೆ ಸಂಬಂಧವಾಗಿ)’.
‘ಕನ್ನಡಿಗರಿರುವುದು ಪರ ರಾಜ್ಯದವರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಪಲ್ಲಕ್ಕಿ ಹೊರುವುದಕ್ಕಲ್ಲ’ (ಪರಪ್ರಾಂತದವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದಾಗ).
‘ವಲಸೆಯು ಕರ್ನಾಟಕದ ಕುತ್ತಿಗೆಯನ್ನು, ಅದರಲ್ಲಿಯೂ ಬೆಂಗಳೂರಿನ ಕುತ್ತಿಗೆಯನ್ನು, ಹಿಡಿದು ಹಿಸುಕುತ್ತಿರುವ ಹೆಬ್ಬಾವು. ಆದರೆ ಈ ವಿಷಯದಲ್ಲಿ ಕರ್ನಾಟಕ ಸರ್ಕಾರವು ಏನನ್ನೂ ಮಾಡದೆ, ಸಂವಿಧಾನದತ್ತ ಬೊಟ್ಟು ಮಾಡಿ ಕುಳಿತಿದೆ.’
ಎಲ್.ಎಸ್. ಶೇಷಗಿರಿರಾವ್ ಅಂತಹವರ ಕನ್ನಡ ಕೆಲಸದ ಬಗ್ಗೆ ಎಷ್ಟು ಹೇಳಿದರೂ, ಇನ್ನೂ ಹೇಳಬಹುದಾದ ಸಾಕಷ್ಟು ಸಂಗತಿಗಳಿರುತ್ತವೆ. ನಾನು ಕೆಲಸ ಮಾಡಿರುವ, ಮಾಡುತ್ತಿರುವ ಎಲ್ಲ ಸಂಘಟನೆಗಳಲ್ಲೂ ಎಲ್ಎಸ್ಎಸ್ ಅವರ ಪಾತ್ರವಿದೆ. ಅವರನ್ನು ತೀರಾ ಹತ್ತಿರದಿಂದ ಕಂಡು, ಅವರ ಆತ್ಮೀಯ ವಲಯದವನಾಗಿ ಅವರ ಸಜ್ಜನಿಕೆ-ಸೌಜನ್ಯಗಳನ್ನು ಕಂಡಿರುವ ನನಗಂತೂ ಹೇಳುವುದು ಬಹಳಷ್ಟಿರುತ್ತದೆ. ಇಲ್ಲಿ ಪ್ರಾಸಂಗಿಕವಾಗಿ ಕೆಲವೊಂದು ಘಟನೆಗಳನ್ನು ಮಾತ್ರ ದಾಖಲಿಸಿದ್ದೇನೆ.
ಅವರು ಸಂಪಾದಿಸಿರುವ ‘ಕನ್ನಡದ ಅಳಿವು-ಉಳಿವು’, ‘ಪ್ರಿಯ ಕನ್ನಡ ಬಂಧು’ ಹಾಗೂ ಕನ್ನಡ ಪರವಾದ ಬಿಡಿ ಲೇಖನಗಳು ಕನ್ನಡ ಕಾರ್ಯಕರ್ತರಿಗೆ ಮಾರ್ಗಸೂಚಿಗಳಾಗಿವೆ. ‘ಸಾಹಿತಿಗಳ-ಕಲಾವಿದರ ಬಳಗ’ ಮತ್ತು ‘ಕನ್ನಡ ಶಕ್ತಿ ಕೇಂದ್ರ’ಗಳ ಕಾರ್ಯಕರ್ತರು ಸರ್ಪಭೂಷಣ ಮಠದಲ್ಲಿ ಪ್ರತಿ ಬುಧವಾರ ನಿರಂತರವಾಗಿ ಹಲವು ವರ್ಷಗಳವರೆಗೆ ಸೇರುತ್ತಿದ್ದೆವು. ಅಲ್ಲಿ ಅವರು ನಮಗೆ ಎಷ್ಟೋ ವಿಷಯಗಳನ್ನು ತಿಳಿಸಿದ್ದಾರೆ. ಅವರು ಒಮ್ಮೆ, ‘ಕನ್ನಡವಲ್ಲದ ಕಣ್ಣುಗಳಲ್ಲಿ ಕನ್ನಡ’ ಎಂಬ ಉಪನ್ಯಾಸ ಮಾಡಿದ್ದರು. ನಿಶ್ಚಿತವಾಗಿ ಆ ಉಪನ್ಯಾಸ ಕನ್ನಡದ ವೈಶಿಷ್ಟ್ಯವನ್ನು ಸಮರ್ಥವಾಗಿ ತಿಳಿಸಿತ್ತು. ಅವರೊಡನೆ ಮಾತನಾಡಿದಾಗ ಆಗುತ್ತಿದ್ದ ಅನುಭವ ಅವರ್ಣನೀಯ. ಇಳಿವಯಸ್ಸಿನಲ್ಲೂ ಕನ್ನಡ ನಾಡು-ನುಡಿಯ ಬಗ್ಗೆ ಅವರು ತೋರುತ್ತಿದ್ದ ಉತ್ಸಾಹ, ಬದ್ಧತೆಗಳನ್ನು ಕಂಡು ನಾವೇ ನಾಚಿ ನೀರಾಗುವ ಸಂದಿಗ್ಧ ಕಾಡಿದ್ದಿದೆ. ಅವರು ಪಾಲ್ಗೊಂಡ ಅಗಣಿತ ಕನ್ನಡ ಚಳವಳಿಗಳನ್ನು ಪರಿಚಯಿಸುವ ಪ್ರಯತ್ನ ಪೂರ್ಣ ಯಶಸ್ವಿಯಾಗಿದೆ ಎಂದು ನಾನು ಭಾವಿಸಿಲ್ಲ. ಅಲ್ಪ ಪ್ರಮಾಣದಲ್ಲಾದರೂ ಅದು ಪ್ರಕಟವಾಗಿದೆ ಎಂದು ಓದುಗರು ಭಾವಿಸಿದರೆ ನಾನು ಧನ್ಯ. ಅವರ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಭಾಷಣ ಕನ್ನಡ ಸಾಹಿತ್ಯದ ಹಿರಿಮೆಯನ್ನು ಪರಿಚಯಿಸಿರುವುದಲ್ಲದೆ, ‘ಕನ್ನಡ-ಕನ್ನಡಿಗ-ಕರ್ನಾಟಕ’ಗಳು ಎದುರಿಸುತ್ತಿರುವ ಆತಂಕಗಳಿಗೆ ದರ್ಪಣವಾಗಿ, ಆ ಆತಂಕಗಳ ಪರಿಹಾರಕ್ಕೆ ಮಾರ್ಗ ತೋರಿಸುವ ದೀವಟಿಗೆಯೂ ಆಗಿದೆ.
ಸಾರ್ವಜನಿಕ ಪ್ರೀತಿ
ಸಾರ್ವಜನಿಕದ ಪ್ರೀತಿಯೆ ಅಂಕಣಕಾರನ ಉಸಿರು. ಈ ಪ್ರೀತಿ, ಈ ಉಸಿರು ಎರಡೂ ಕೂಡ ಎಲ್.ಎಸ್.ಎಸ್. ಅವರ ಅಂಕಣ ಬರಹಗಳಲ್ಲಿ ಸಮರ್ಥವಾಗಿ ಆತ್ಮೀಯವಾಗಿ ವ್ಯಕ್ತವಾಗುತ್ತದೆ. ಸಾಹಿತ್ಯದ ಪ್ರೀತಿ, ಸಾಹಿತ್ಯದ ವಿಮರ್ಶೆ ಅವರಿಗೆ ಒಂದು ನೆಪ, ಒಂದು ಮಾರ್ಗ. ಅವರ ಗುರಿಯಿರುವುದು, ಕಾಳಜಿಯಿರುವುದು ಒಂದೇ ಸಮಸ್ಯೆಯ ಬಗ್ಗೆ: ಸಾರ್ವಜನಿಕ ಜೀವನವನ್ನು ಹಸನಗೊಳಿಸುವುದು ಹೇಗೆ, ಸಾರ್ವಜನಿಕರಿಗೆ ‘ಉತ್ತಮ’ದ ಆಸೆಯನ್ನು ರುಚಿಯನ್ನು ಹುಟ್ಟಿಸುವುದು ಹೇಗೆ – ಎಂಬುದರ ಬಗ್ಗೆ. ಸಾಹಿತ್ಯದ ಓದು, ಬರಹ, ಸಾಹಿತ್ಯದ ಸಂವೇದನೆ ‘ಉತ್ತಮ’ ದ ಬಯಕೆಗೆ ಹೇಗೆ ಪೂರಕವಾಗಬಲ್ಲದು ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳುತ್ತಾ ಓದುಗರಿಗೂ, ಜ್ಞಾಪಿಸುತ್ತಾ ಹೋಗುತ್ತಾರೆ. ಈ ಸಾರ್ವಜನಿಕದ ಪ್ರೀತಿಯೆ ಎಲ್.ಎಸ್.ಎಸ್. ಅವರನ್ನು ಅವರ ಬರವಣಿಗೆಯ ಶೈಲಿಯನ್ನು ವಿಶ್ವವಿದ್ಯಾನಿಲಯದ ಅಧ್ಯಾಪಕರಿಗೆ ಮಾತ್ರವೇ ವಿಶಿಷ್ಟವಾದ ಭಾರವೆನ್ನಿಸುವ ಬರವಣಿಗೆಯಿಂದ ಪಾರು ಮಾಡಿದೆಯೆಂದು ನನ್ನ ತಿಳಿವಳಿಕೆ. ನಾನೇನು ಊಹೆ ಮಾಡುತ್ತಿಲ್ಲ; ಶೇಷಗಿರಿರಾಯರ ‘ವಿಶ್ವವಿದ್ಯಾನಿಲಯಗಳ ಯುಗ’ ಎಂಬ ಬರಹದಲ್ಲಿ ಸಾಹಿತ್ಯದ ಬೋಧನೆ, ಆಸಕ್ತಿ ಕೇವಲ ವೃತ್ತಿಯಾದಾಗ ಆಗುವ ಅಪಾಯಗಳನ್ನು ವಿಶ್ಲೇಷಿಸುತ್ತಾ ಕನ್ನಡದ ಸಂದರ್ಭದಲ್ಲೆ ವಿ.ವಿ.ಗಳಿಂದ ದೂರ ಉಳಿದು ಮಹತ್ತ್ವವಾದದ್ದನ್ನು ಸಾಧಿಸಿದವರ ದೊಡ್ಡ ಪಟ್ಟಿಯನ್ನು ಕೊಡುತ್ತಾರೆ. ಹಾಗಾಗಿಯೆ ಅವರ ಅಂಕಣಗಳನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಇಳಿವಯಸ್ಸಿನ ಮುದುಕನೊಬ್ಬನು ಆಸಕ್ತಿಯಿಂದ ಓದುವಂತೆ ಚಾಮರಾಜಪೇಟೆಯ ಹಜಾಮರ ಅಂಗಡಿಯಲ್ಲಿ ಬರೇ ಕ್ಷೌರಕ್ಕೆಂದು ಕಾದು ಕುಳಿತ ರಿಕ್ಷಾ ಡ್ರೈವರ್ ಕೂಡ ಆಸಕ್ತಿಯಿಂದ ಓದುತ್ತಾನೆ. ಇವರಿಬ್ಬರ ಮಧ್ಯೆ, ಪಠ್ಯಪುಸ್ತಕಗಳಾಗಿದ್ದ ಇಂಗ್ಲಿಷ್ ಕಾದಂಬರಿಗಳು ನಾಟಕಗಳಿಗೆ ಎಲ್.ಎಸ್.ಎಸ್. ಬರೆದ ವಿಶ್ಲೇಷಣಾತ್ಮಕ ಟಿಪ್ಪಣಿಗಳನ್ನು ಓದಿ ಸಾಹಿತ್ಯದ ಅಭಿರುಚಿ-ಬಲವನ್ನು ರೂಢಿಸಿಕೊಂಡಂತಹ ನನ್ನಂಥವರು ಇರುತ್ತಾರೆ
ಕೆ. ಸತ್ಯನಾರಾಯಣ
(ಕೃಪೆ: ‘ಸೌಜನ್ಯ’ ಎಲ್.ಎಸ್.ಎಸ್. ಗೌರವ ಸಂಚಿಕೆ, ೧೯೯೧)