ಕವಿ ಎಂ. ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದ ವರ್ಷ ಇದು (ಜನನ: ೧೮.೨.೧೯೧೮ ರಂದು ಕುಂದಾಪುರದ ಮೊಗೇರಿಯಲ್ಲಿ). ಅವರು ಕನ್ನಡ ಸಾಹಿತ್ಯಕ್ಕೆ ಹೊಸತೊಂದು ದಾರಿಯನ್ನು ನೀಡಿದ ನೇತಾರ; ಕನ್ನಡ ಭಾಷೆ ಸೂಕ್ಷ್ಮತೆಗೆ, ಸಾಹಿತ್ಯ ವಿಮರ್ಶೆಗೆ ಹೊಸ ದೃಷ್ಟಿಯನ್ನೂ, ಪ್ರಬುದ್ಧತೆಯನ್ನೂ ನೀಡಿದವರು. ’ನವ್ಯಕಾವ್ಯ’ ಎನ್ನುವ ಹೊಸದಿಶೆಗೆ ಚಾಲನೆ ನೀಡಿದ ಅಡಿಗರು, ಕನ್ನಡ ಕಾವ್ಯಲೋಕದಲ್ಲಿ ಒಂದು ಬಗೆಯ ಕ್ರಾಂತಿಗೆ ಮುನ್ನುಡಿ ಬರೆದವರೂ ಹೌದು. ಅರ್ಥಪೂರ್ಣ ನವ್ಯಕಾವ್ಯಗಳನ್ನು ನೀಡಿದ ಅಡಿಗರನ್ನು ಕುರಿತು ಹತ್ತಿರದ ಬಂಧುವಾಗಿ ಅವರೊಡನೆ ಒಡನಾಟ ಹೊಂದಿದ್ದ ಎಚ್. ಡುಂಡಿರಾಜ್ ಅವರು ಸಾಂದರ್ಭಿಕವಾಗಿ ’ಉತ್ಥಾನ’ಕ್ಕೆಂದೇ ಬರೆದ ಲೇಖನ ಇಲ್ಲಿದೆ.
ಇಂದು ಕೆಂದಾವರೆಯು ನಳನಳಿಸಿ ದಾರಿಯಲಿ
ಗಂಧದೌತಣ ಹೋಗಿ ಬರುವ ಜನಕೆ
ಮಂದಮಾರುತವಿರಲಿ ಮರಿದುಂಬಿ ಇರಲಿ ಆ-
ನಂದವಿರೆ ಅತಿಥಿಗಳ ಕರೆಯಬೇಕೆ?
ಇದು ನಾನು ಓದಿದ ಅಡಿಗರ ಕವಿತೆಗಳಲ್ಲಿ ಮೊದಲನೆಯದು. ಯಾವುದೋ ತರಗತಿಯಲ್ಲಿ ನಮಗದು ಪಠ್ಯವಾಗಿತ್ತು. ಈಗ ಅಡಿಗರು ಹುಟ್ಟಿ ನೂರು ವ?ಗಳಾಗಿವೆ. ಅವರು ಕಾಲನ ಮುರಲಿಯ ಕರೆಗೆ ಓಗೊಟ್ಟು ಇಲ್ಲಿರುವುದನ್ನೆಲ್ಲ ಬಿಟ್ಟು ಇಲ್ಲದವರ ನಾಡಿಗೆ ನಡೆದು ೨೬ ವರ್ಷಗಳು ಸಂದಿವೆ. ಆದರೂ ಅವರ ಕಾವ್ಯದ ಕೆಂದಾವರೆ ನಳನಳಿಸುತ್ತಲೇ ಇದೆ; ಇಂದೂ ಕೂಡ ಕಾವ್ಯಪ್ರಿಯರಿಗೆ ಗಂಧದೌತಣವನ್ನು ಉಣಬಡಿಸುತ್ತಲೇ ಇದೆ. ಇದಕ್ಕೆ ಕಾರಣ ಅವರ ಕಾವ್ಯದ ಅನನ್ಯತೆ. ನವೋದಯದ ಸಂದರ್ಭದಲ್ಲಿ ಕಾವ್ಯರಚನೆ ಆರಂಭಿಸಿದ ಅಡಿಗರು ಕೆಂದಾವರೆ, ಮೋಹನ ಮುರಲಿ ಮುಂತಾದ ಅನೇಕ ಚೆಲುವಾದ ಭಾವಗೀತೆಗಳನ್ನು ಬರೆದಿದ್ದರು. ಪಿ. ಕಾಳಿಂಗರಾವ್ ಹಾಡಿದ “ಅಳುವ ಕಡಲೊಳೂ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ” ಮತ್ತು ರತ್ನಮಾಲಾ ಪ್ರಕಾಶ್ ಅವರ ಗಾಯನದಲ್ಲಿ “ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು” ಈಗಲೂ ನಾನು ಆಗಾಗ ಕೇಳುವ ನನ್ನ ಮೆಚ್ಚಿನ ಭಾವಗೀತೆಗಳು. ಅಡಿಗರು ಇಂಥ ಕವನಗಳನ್ನಷ್ಟೆ ಬರೆದಿದ್ದರೂ ನವೋದಯ ಕಾವ್ಯದ ಪ್ರಮುಖ ಕವಿಗಳ ಸಾಲಿನಲ್ಲಿ ನಿಲ್ಲುತ್ತಿದ್ದರು. ಆದರೆ ಅವರಿಗೆ ಹಾಗೆ ನಿಲ್ಲುವುದು, ನಿಂತ ನೀರಾಗಿ ಪಾಚಿಗಟ್ಟುವುದು ಇಷ್ಟವಿರಲಿಲ್ಲ. ಅವರೊಬ್ಬ ಮಹತ್ತ್ವಾಕಾಂಕ್ಷೆಯ ಕವಿಯಾದ್ದರಿಂದ ತಮಗೆ ಸುಲಭವಾಗಿದ್ದ ಆರಾಮವಲಯವನ್ನು (ಕಂಫರ್ಟ್ ಝೋನ್) ಬಿಟ್ಟು “ನಡೆದು ಬಂದ ದಾರಿಕಡೆಗೆ ತಿರುಗಿಸಬೇಡ ಕಣ್ಣ ಹೊರಳಿಸಬೇಡ” ಎಂದು ನವ್ಯಕಾವ್ಯವೆಂಬ ಕನ್ನಡದಲ್ಲಿ ಅದುವರೆಗೆ ಯಾರೂ ತುಳಿಯದ ಹೊಸಹಾದಿಯನ್ನು ಹುಡುಕಿದರು. ಹಾಗೆ ಮಾಡಿದ್ದರಿಂದಲೇ ಅಡಿಗರು ಓರ್ವ ಮಾರ್ಗಪ್ರವರ್ತಕ ಕವಿ ಅನ್ನಿಸಿಕೊಂಡರು. ಈ ನಿರ್ಧಾರ ಆಕಸ್ಮಿಕವಲ್ಲ. ಹೊಸತನ್ನು ಸೃಷ್ಟಿಸುವ ಬಯಕೆ ಅವರ ಹಲವಾರು ಹಳೆಯ ಕವನಗಳಲ್ಲಿ ಅಲ್ಲಲ್ಲಿ ಕಾಣುತ್ತಿತ್ತು. ನಿದರ್ಶನಕ್ಕೆ ಈ ಸಾಲುಗಳನ್ನು ಗಮನಿಸಬಹುದು.
ಚಂದ್ರಸೂರ್ಯರ ನೆರವಿನಿಂದೆ ಬೆಳಗುವಳೀ ವ-
ಸುಂಧರೆಗದೆಂದು ಬಹುದೋ ಸ್ವಯಂದೀಪಕತೆ!
ಅವರಿವರ ನುಡಿಗಳನು ಕದ್ದು ಮರುನುಡಿಗೊಡುವ
ದೆಸೆಗಳೇ, ನಿಮಗೆಂದು ಬಹುದು, ಮೀಸಲು
ನಿನದ?
(ನನ್ನ ನುಡಿ)ಹೊಸತನದ ಮೃದುಗಂಭೀರ ಝಂಕಾರ
ಇಳೆಯಗಲವನು ಮಿಡಿದು ಮೊಳಗುತಿರಲಿ!
(ಬಯಕೆ)ಹೊಸಹಾದಿಯನು ಹಿಡಿದು ನಡೆಯಣ್ಣ, ಮುಂದೆ!
ಹೊಸಜೀವ, ಹೊಸಭಾವ, ಹೊಸವೇಗದಿಂದೆ.
ಹಳೆಹಾದಿ ನಡೆಗಲಿವವರೆಗೆಮಗೆ ಸಾಕು;
ಬಲಿವುದಕೆ, ನಲಿವುದಕೆ ಹೊಸಹಾದಿ ಬೇಕು!
(ಹೊಸಹಾದಿ)
ಹುಡುಕಿದರೆ ಇಂಥ ಸಾಲುಗಳು ಇನ್ನಷ್ಟು ಸಿಗುತ್ತವೆ. ಅವರಿಗಿಂತ ಹಿಂದಿನ ಮತ್ತು ಅವರ ಸಮಕಾಲೀನ ಕವಿಗಳಂತೆ ಅಡಿಗರೂ ಕೂಡಾ ರೂಢಿಯಿಂದ ಬಂದ ಮಾರ್ಗದಲ್ಲೆ ತೃಪ್ತರಾಗಿ “ಇಷ್ಟು ಸಾಕೆಂದು” ಇದ್ದಿದ್ದರೆ, ಸಂಪ್ರದಾಯಸ್ಥರು ಬೆಚ್ಚಿಬೀಳುವಂತೆ ನವ್ಯಕಾವ್ಯದ ’ಚಂಡೆ ಮದ್ದಳೆ’ಯನ್ನು ಬಾರಿಸುವ ಅಪಾಯಕಾರಿ ಸಾಹಸಕ್ಕೆ ಕೈಹಾಕುತ್ತಿರಲಿಲ್ಲ. ಅವರ ಮಾತಿನಲ್ಲೆ ಹೇಳುವುದಾದರೆ “ರೂಢಿಯಾದದ್ದರ ಒಳಹೊಕ್ಕು ಸಿಡಿಮದ್ದಿನ ಹಾಗೆ ಸ್ಫೋಟಿಸಿ ಅದನ್ನು ಅಸ್ತವ್ಯಸ್ತಗೊಳಿಸದೆ ಹೊಸಕಾಲದ ಹೊಸ ಬದುಕಿಗೆ ಅತ್ಯಗತ್ಯವಾದ ಮೌಲ್ಯಗಳನ್ನು ಬೆಳೆಯುವುದು ಸಾಧ್ಯವಾಗುವುದಿಲ್ಲ.” ”ಹಾಕಿಟ್ಟ ಹಳಿಗಳ ಮೇಲೆ ರೈಲು ಬಿಡದೆ” ಕಲ್ಲು ಮುಳ್ಳುಗಳಿಂದ ಕೂಡಿದ ಹೊಸ ಹಾದಿಯನ್ನು ಹಿಡಿಯಲು ಅಂಜದೆ ಮುನ್ನುಗ್ಗಿದ್ದರಿಂದಲೇ ಅವರಿಗೆ ಕಾವ್ಯದಲ್ಲಿ ಅವರದೇ ಆದ ವಿಶಿ? ’ಅಸಲುಕಸುಬು’ ತೋರಿಸುವುದು ಸಾಧ್ಯವಾಯಿತು.
ನವ್ಯಕಾವ್ಯದ ಜೊತೆ ನನ್ನ ಮೊದಲ ಮುಖಾಮುಖಿ ನಡೆದದ್ದು ೧೯೭೨ರಲ್ಲಿ. ಆಗತಾನೆ ಎಸ್.ಎಸ್.ಎಲ್.ಸಿ. ಮುಗಿಸಿದ್ದ ನಾನು, ನನ್ನ ಹುಟ್ಟೂರಾದ ಹಟ್ಟಿಕುದ್ರು ಎಂಬ ದ.ಕ.ಜಿಲ್ಲೆಯ ಹಳ್ಳಿಯನ್ನು ಅಗಲಿ ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿನಲ್ಲಿದ್ದ ನನ್ನ ಅಣ್ಣನ ಮನೆಗೆ ಬಂದಿದ್ದೆ. ಅಣ್ಣ ಸಾಹಿತ್ಯಾಭಿಮಾನಿಯಾಗಿದ್ದರಿಂದ ಅವನ ಮನೆಯಲ್ಲಿ ಸಾಕ್ಷಿ, ಸಂಕ್ರಮಣ ಮುಂತಾದ ಸಾಹಿತ್ಯಿಕ ಪತ್ರಿಕೆಗಳು ಇದ್ದವು. ಅಡಿಗ, ರಾಮಚಂದ್ರಶರ್ಮ, ಕಂಬಾರ, ಪಾಟೀಲ, ನಿಸಾರ್, ನಾಡಿಗ್ ಮುಂತಾದವರ ನವ್ಯಕವಿತೆಗಳ ಸಂಕಲನಗಳೂ ಇದ್ದವು. ಪತ್ರಿಕೆಗಳ ಅನೇಕ ಪುರವಣಿಗಳಲ್ಲಿ ನವ್ಯಕವಿತೆಗಳೇ ಪ್ರಕಟವಾಗುತ್ತಿದ್ದವು. ಅಲ್ಲಿಯವರೆಗೆ ನಾನು ಛಂದೋಬದ್ಧವಾದ, ಪ್ರಾಸಾನುಪ್ರಾಸಗಳಿಂದ ಕೂಡಿದ ಮಕ್ಕಳ ಕವನ ಹಾಗೂ ಗೀತೆಗಳನ್ನು ಮಾತ್ರ ಓದಿದ್ದೆ. ಒಂದಿ? ಪ್ರಾಸಬದ್ಧವಾದ ಮಕ್ಕಳ ಪದ್ಯಗಳನ್ನು ರಚಿಸಿದ್ದೆ. ಇವುಗಳಿಗಿಂತ ತೀರಾ ಭಿನ್ನವಾದ ಮುಕ್ತಛಂದಸ್ಸಿನ, ಪ್ರಾಸಗಳಿಲ್ಲದ, ತುಂಡರಿಸಿದ ಗದ್ಯದ ಸಾಲುಗಳಂತೆ ತೋರುತ್ತಿದ್ದ ನವ್ಯಕವಿತೆಗಳನ್ನು ಕಂಡು ನನಗೆ ದಿಗಿಲಾಯಿತು. ಎ? ಬಾರಿ ಓದಿದರೂ ಅವುಗಳ ಸಂಪೂರ್ಣ ಅರ್ಥ ತಿಳಿಯುತ್ತಿರಲಿಲ್ಲ. ಅರ್ಥವಾಗಲಿಲ್ಲ ಎಂದರೆ ಬೇರೆಯವರು ನನ್ನನ್ನು ದಡ್ಡನೆಂದು ತಿಳಿದುಕೊಳ್ಳಬಹುದೆಂಬ ಅಂಜಿಕೆ! ಹಳ್ಳಿಯಿಂದ ಬಂದ ನನಗೆ ಬೆಂಗಳೂರೆಂಬ ಮಹಾನಗರವನ್ನು ನೋಡಿ ವಿಪರೀತ ಗಾಬರಿ, ಆತಂಕ, ಭಯ ಉಂಟಾಗಿತ್ತು. ನವ್ಯಕಾವ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ ಅದಕ್ಕಿಂತ ಹೆಚ್ಚು ಗಾಬರಿಯಾಯಿತು. ನವ್ಯ ಕವಿತೆಗಳ ಬಗ್ಗೆ ಅನಂತಮೂರ್ತಿ, ಜಿ.ಎಚ್. ನಾಯಕ, ಎಂ.ಜಿ. ಕೃಷ್ಣಮೂರ್ತಿ ಮುಂತಾದವರು ಬರೆದ ಪುಟಗಟ್ಟಲೆ ವಿಮರ್ಶೆ ಓದಿದರೂ ಅದರ ಸ್ವಾರಸ್ಯ ಗೊತ್ತಾಗುತ್ತಿರಲಿಲ್ಲ.
ಬಂಡಾಯ ಕಾವ್ಯದ ಅಬ್ಬರದಲ್ಲಿ ಅಡಿಗರ ನವ್ಯಕಾವ್ಯ ಟೀಕೆಗೆ ಒಳಗಾಯಿತು. ಅಡಿಗರನ್ನು ಬಂಡಾಯದವರು ಜೀವವಿರೋಧಿ ಎಂದರು. ಈ ಹಿನ್ನೆಲೆಯಲ್ಲಿ ನಾನು ಅಡಿಗರ ಕಾವ್ಯವನ್ನು ಓದಬೇಕೆ , ಬೇಡವೆ? – ಎಂಬ ಸಂದಿಗ್ಧದಲ್ಲಿದ್ದಾಗ ಪುನಃ ಅಡಿಗರ ಕಾವ್ಯವನ್ನು ಅಭ್ಯಾಸ ಮಾಡುವಂತೆ , ಅವರ ಕಾವ್ಯದ ವಿಭಿನ್ನ ಆಯಾಮಗಳನ್ನು ಗುರುತಿಸುವಂತೆ ಮಾಡಿದವರು ವಿಮರ್ಶಕ ಕಿ.ರಂ. ನಾಗರಾಜ್.
ಆದರೂ ನಾನು ಅಡಿಗರ ಕವನಸಂಕಲನಗಳನ್ನು, ಲಂಕೇಶರ ಸಂಪಾದಕತ್ವದಲ್ಲಿ ಪ್ರಕಟವಾಗಿದ್ದ ’ಅಕ್ಷರ ಹೊಸ ಕಾವ್ಯ’ದಲ್ಲಿದ್ದ ಕವನಗಳನ್ನು ಹಠ ಹಿಡಿದು ಓದಿದೆ. ವಿಮರ್ಶಕರು ತುಂಬಾ ಹೊಗಳುತ್ತಿದ್ದ ಅಡಿಗರ ಮುಖ್ಯ ಕವಿತೆಗಳಾದ ’ಹಿಮಗಿರಿಯ ಕಂದರ’, ’ಭೂಮಿಗೀತ’, ’ಭೂತ’, ’ಹದ್ದು’, ’ವರ್ಧಮಾನ’ಗಳಿಗಿಂತ ’ನನ್ನ ಅವತಾರ’, ’ಪು? ಕವಿಯ ಪರಾಕು’, ’ಏನಾದರೂ ಮಾಡುತಿರು ತಮ್ಮ’, ’ಹಳೆಮನೆಯ ಮಂದಿ’, ’ಪ್ರಾರ್ಥನೆ’, ’ನೆಹರೂ ನಿವೃತ್ತರಾಗುವುದಿಲ್ಲ’, ’ಮೂಲಕ ಮಹಾಶಯರು’, ’ನಿನ್ನ ಗದ್ದೆಗೆ ನೀರು’ ಮುಂತಾದ ಅವರ ವಿಡಂಬನಾತ್ಮಕ ಕವನಗಳು ನನಗೆ ಹೆಚ್ಚು ಇಷ್ಟವಾಗುತ್ತಿದ್ದವು. ನಾನು ಓದುತ್ತಿದ್ದ ಬೆಂಗಳೂರಿನ ಹೆಬ್ಬಾಳದ ಕೃಷಿ ಕಾಲೇಜಿನಲ್ಲಿ ಎಚ್.ಎ. ರಾಮಕೃಷ್ಣ ಎಂಬ ಇಂಗ್ಲಿ? ಪ್ರಾಧ್ಯಾಪಕರಿದ್ದರು. ಸ್ವತಃ ಲೇಖಕರಾಗಿದ್ದ ಅವರು ವಿದ್ಯಾರ್ಥಿಗಳಿಗಾಗಿ ಒಂದು ಕಾವ್ಯಕಮ್ಮಟವನ್ನು ಏರ್ಪಡಿಸಿ ಅದಕ್ಕೆ ಮುಖ್ಯ ಅತಿಥಿಯನ್ನಾಗಿ ಅಡಿಗರನ್ನು ಕರೆಸಿದ್ದರು. ಅಂದು ಅಡಿಗರು ಕಾವ್ಯ ರಚನೆಯ ಬಗ್ಗೆ ಬಹಳ ಸರಳವಾಗಿ ಮಾತನಾಡಿದ್ದರು. ಅನಂತರ ನಡೆದ ಸಂವಾದದಲ್ಲಿ ನಾನು ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೆ.
೧೯೭೮ರಲ್ಲಿ ನಾನು ಧಾರವಾಡದಲ್ಲಿ ಎಂ.ಎಸ್ಸಿ. (ಕೃಷಿ) ಓದುತ್ತಿದ್ದಾಗ ವಿದ್ಯಾರ್ಥಿಸಂಘದ ಅಧ್ಯಕ್ಷನಾಗಿದ್ದೆ. ಸಂಘದ ಉದ್ಘಾಟನಾ ಸಮಾರಂಭಕ್ಕೆ ಆಗ ತರುಣಜನಾಂಗಕ್ಕೆ ಪ್ರಿಯರಾಗಿದ್ದ ಲಂಕೇಶರನ್ನು ಬೆಂಗಳೂರಿನ ಅವರ ಕಚೇರಿಗೆ ಬಂದು ಆಹ್ವಾನಿಸಿದೆ. ಆದರೆ ಅವರು ಬರಲೊಪ್ಪಲಿಲ್ಲ. ಒತ್ತಾಯಿಸಿದಾಗ “ಯೂ ಫೂಲ್ ಗೆಟ್ ಔಟ್” ಎಂದು ಬೈದರು. ನಾನು ಬೇಸರದಿಂದ ನನ್ನ ಅಣ್ಣನ ಸ್ನೇಹಿತರಾಗಿದ್ದ ಸಾಹಿತಿ ಸುಮತೀಂದ್ರ ನಾಡಿಗರ ಪುಸ್ತಕದ ಅಂಗಡಿಗೆ ಹೋಗಿ ನಡೆದ ಸಂಗತಿಯನ್ನು ತಿಳಿಸಿದೆ. ಅವರು “ಬೇಜಾರು ಮಾಡಿಕೊಳ್ಳಬೇಡ. ನಿನಗೆ ನಾನು ಲಂಕೇಶನಿಗಿಂತ ಒಳ್ಳೆಯ ಕವಿಯನ್ನು ಪರಿಚಯಿಸುತ್ತೇನೆ” ಎಂದು ನನ್ನನ್ನು ಅಡಿಗರ ಮನೆಗೆ ಕರೆದುಕೊಂಡು ಹೋದರು. ನಾನು ತುಂಬಾ ಅಂಜಿಕೆಯಿಂದ ವಿದ್ಯಾರ್ಥಿಸಂಘದ ಉದ್ಘಾಟನೆಗೆ ಬರಬೇಕು ಎಂದು ಕೇಳಿಕೊಂಡಾಗ ಅಡಿಗರು ಸಂತೋ?ದಿಂದ ಒಪ್ಪಿಕೊಂಡರು. ಸಮಾರಂಭದ ದಿನ ರೈಲಿನಲ್ಲಿ ಧಾರವಾಡಕ್ಕೆ ಬಂದರು. ಅವರನ್ನು ಬರಮಾಡಿಕೊಳ್ಳಲು ನಾನು ಕಾಲೇಜಿನ ಕಾರಿನಲ್ಲಿ ರೈಲುನಿಲ್ದಾಣಕ್ಕೆ ಹೋಗಿದ್ದೆ. ಆದರೆ ಅಂದು ಇಂದಿರಾಗಾಂಧಿಯ ಮಗ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ನಿಧನರಾದ ಸುದ್ದಿ ಬಂದದ್ದರಿಂದ ವಿದ್ಯಾರ್ಥಿಸಂಘದ ಉದ್ಘಾಟನಾ ಸಮಾರಂಭ ರದ್ದಾಯಿತು.
ಅಡಿಗರಿಂದ ವಿದ್ಯಾರ್ಥಿಸಂಘವನ್ನು ಉದ್ಘಾಟಿಸುವ ಅವಕಾಶ ತಪ್ಪಿಹೋದದ್ದಕ್ಕೆ ನನಗೆ ತುಂಬಾ ಬೇಸರವಾಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ಅವಕಾಶ ತಪ್ಪಿಹೋದದ್ದರಿಂದ ಅಡಿಗರಿಗೂ ನಿರಾಸೆಯಾಯಿತು. ಎಷ್ಟು ಕೇಳಿಕೊಂಡರೂ ನಮ್ಮ ಶಿಕ್ಷಣ ನಿರ್ದೇಶಕರು ಕಾರ್ಯಕ್ರಮ ನಡೆಸಲು ಒಪ್ಪಲಿಲ್ಲ. ಕೊನೆಗೆ ಅಡಿಗರೇ ಒಂದು ಉಪಾಯ ಸೂಚಿಸಿದರು. “ಹಾಸ್ಟೆಲ್ನಲ್ಲಿ ಒಂದು ಕಡೆ ವಿದ್ಯಾರ್ಥಿಗಳನ್ನು ಸೇರಿಸು, ನಾನು ಅಲ್ಲೇ ಮಾತನಾಡುತ್ತೇನೆ” ಎಂದರು. ಅವರ ಸಲಹೆಯಂತೆ ನಾನು ಹಾಸ್ಟೆಲ್ನ ಡೈನಿಂಗ್ ಹಾಲ್ನಲ್ಲಿ ಒಂದಿಷ್ಟು ಹುಡುಗರನ್ನು ಸೇರಿಸಿದೆ. ವೇದಿಕೆ, ಮೈಕ್ ಇಲ್ಲದಿದ್ದರೂ ಕೂಡಾ ಅಡಿಗರು ಅರ್ಧ ಗಂಟೆ ಸೊಗಸಾಗಿ ಮಾತನಾಡಿದರು. ಆಗ ದೇಶದಲ್ಲಿ ತುರ್ತುಪರಿಸ್ಥಿತಿ ಇತ್ತು. ಅಡಿಗರು ತಮ್ಮ ಭಾಷಣದಲ್ಲಿ ಇಂದಿರಾಗಾಂಧಿಯ ಸರ್ವಾಧಿಕಾರಿ ಧೋರಣೆ ಹಾಗೂ ತುರ್ತುಪರಿಸ್ಥಿತಿಯನ್ನು ಖಂಡಿಸಿದರು. ಅವರ ಪಕ್ಕದಲ್ಲಿ ಕುಳಿತಿದ್ದ ನನ್ನ ಬೆನ್ನಿಗೊಂದು ಗುದ್ದಿ “ಇವನು ಡುಂಡಿ-ರಾಜ. ನಿಮ್ಮಲ್ಲಿ ಪ್ರತಿಯೊಬ್ಬರೂ ರಾಜನೇ. ನೀವು ಯಾರಿಗೂ ಅಂಜಬಾರದು” ಎಂದು ಭಾಷಣ ಮುಗಿಸಿದಾಗ, ಅಲ್ಲಿ ಸೇರಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು. ಅಂದು ಧಾರವಾಡದಲ್ಲಿ ಉಳಿದುಕೊಂಡಿದ್ದ ಅಡಿಗರನ್ನು ಮರುದಿನ ಅವರ ಕೋರಿಕೆಯಂತೆ ಕವಿ ಕಣವಿಯವರ ಮನೆಗೆ ಮತ್ತು ಜಿ.ಬಿ. ಜೋಷಿಯವರ ಅಟ್ಟಕ್ಕೆ ಕರೆದುಕೊಂಡು ಹೋಗಿದ್ದೆ. ಮಾರ್ಗಮಧ್ಯದಲ್ಲಿ ಅವರ ನೆಚ್ಚಿನ ಸಿಗರೇಟು ಖರೀದಿಸಿ ಕೊಟ್ಟಿದ್ದೆ. ಅವರು ಸಿಗರೇಟು ಸೇದುತ್ತ ಉಫ್ ಎಂದು ಹೊಗೆ ಉಗುಳಿದಾಗ ’ಸಿಗರೇಟಿನ ಹೊಗೆ/ ವರ್ತುಳ, ವರ್ತುಳ/ ಧೂಪಧೂಮ ಮಾಲೆ’ ಎಂಬ ಅವರ ’ಧೂಮಲೀಲೆ’ ಕವನ ನೆನಪಾಗಿತ್ತು.
ಮೊಗೇರಿಯಲ್ಲಿ ಕಾರಿನಿಂದ ಇಳಿಯುತ್ತಿದ್ದ ಹಾಗೆ ಭಾವೋದ್ವೇಗಕ್ಕೆ ಒಳಗಾದ ಕಿ.ರಂ. “ಇದು ಜಗತ್ತಿನ ಶ್ರೇಷ್ಠ ಕವಿ ಓಡಾಡಿದ ಮಣ್ಣು. ಇಲ್ಲಿ ಕುಳಿತು ಅವರ ಕಾವ್ಯ ಓದಬೇಕು” ಎಂದು ನೆಲದ ಮೇಲೆಯೇ ಕುಳಿತುಬಿಟ್ಟರು. ಉಪಾಧ್ಯರಿಗೂ ಕುಳಿತುಕೊಳ್ಳುವಂತೆ ಹೇಳಿ, ಅಡಿಗರ ಒಂದು ಕವನವನ್ನು ಓದುವಂತೆ ಸೂಚಿಸಿದರು. ಅದನ್ನು ಕೇಳಿ ಕಿ.ರಂ. ವ್ಹಾ ವ್ಹಾ ಎಂದು ತಲೆದೂಗುತ್ತಿದ್ದಾಗ ನಮ್ಮನ್ನು ಆ ಹಳ್ಳಿಯ ಜನರು ದೂರದಿಂದ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು…
ನಂತರದ ದಿನಗಳಲ್ಲಿ ಬಂಡಾಯ ಕಾವ್ಯದ ಅಬ್ಬರದಲ್ಲಿ ಅಡಿಗರ ನವ್ಯಕಾವ್ಯ ಟೀಕೆಗೆ ಒಳಗಾಯಿತು. ಅಡಿಗರನ್ನು ಬಂಡಾಯದವರು ಜೀವವಿರೋಧಿ ಎಂದರು. ಈ ಹಿನ್ನೆಲೆಯಲ್ಲಿ ನಾನು ಅಡಿಗರ ಕಾವ್ಯವನ್ನು ಓದಬೇಕೆ, ಬೇಡವೆ? – ಎಂಬ ಸಂದಿಗ್ಧದಲ್ಲಿದ್ದಾಗ ಪುನಃ ಅಡಿಗರ ಕಾವ್ಯವನ್ನು ಅಭ್ಯಾಸ ಮಾಡುವಂತೆ, ಅವರ ಕಾವ್ಯದ ವಿಭಿನ್ನ ಆಯಾಮಗಳನ್ನು ಗುರುತಿಸುವಂತೆ ಮಾಡಿದವರು ವಿಮರ್ಶಕ ಕಿ.ರಂ. ನಾಗರಾಜ್. ಅವರೊಮ್ಮೆ ಮಂಗಳೂರಿಗೆ ಬಂದಿದ್ದಾಗ ನಮ್ಮ ಗೆಳೆಯರ ಕೂಟದಲ್ಲಿ ಅಡಿಗರ ಕವಿತೆಗಳನ್ನು ಓದುತ್ತ ಅದರ ಶ್ರೇಷ್ಠತೆಯನ್ನು ವಿವರಿಸುತ್ತ ಬೆಳಕು ಹರಿವ ತನಕ ಕಾವ್ಯದ ರಸದೌತಣ ಉಣಬಡಿಸಿದ್ದರು. ನನಗಂತೂ ಆ ದಿನ ರಾತ್ರಿ ಇಡೀ ಯಕ್ಷಗಾನಕ್ಕೆ ಹೋಗಿ ಬಂದ ಅನುಭವ!
ಈ ನಡುವೆ ಇನ್ನೂ ಒಂದು ಪ್ರಸಂಗ ನಡೆಯಿತು. ಮದುವೆಯ ವಯಸ್ಸಿಗೆ ಬಂದಿದ್ದ ನನಗೆ ಮೊಗೇರಿ ಎಂಬ ಊರಿನಿಂದ ಒಂದು ಜಾತಕ ಬಂದಿರುವುದಾಗಿ ತಂದೆಯವರು ತಿಳಿಸಿದರು. ಮೊಗೇರಿ ಎಂದಾಕ್ಷಣ ಸಾಹಿತ್ಯಪ್ರಿಯರಿಗೆ ನೆನಪಾಗುವುದು ಆ ಊರಿನಲ್ಲಿ ಜನಿಸಿದ ಕವಿ ಎಂ. ಗೋಪಾಲಕೃ? ಅಡಿಗ. ನನಗೂ ಹಾಗೇ ಆಯಿತು. ಹೆಣ್ಣು ಹೇಗಾದರೂ ಇರಲಿ, ಅಡಿಗರ ಹುಟ್ಟೂರನ್ನು ನೋಡಿದ ಹಾಗಾಯಿತು ಎಂದು ಮನೆಯವರ ಜೊತೆ ಹುಡುಗಿಯನ್ನು ನೋಡಲು ಮೊಗೇರಿಗೆ ಹೋದೆ. ಏನಾಶ್ಚರ್ಯ? ಅದು ಅಡಿಗರು ಬಾಲ್ಯವನ್ನು ಕಳೆದ ಮನೆ! ನಾನು ಕಂಡ ಹುಡುಗಿ ಕವಿ ಅಡಿಗರ ತಮ್ಮ (ಚಿಕ್ಕಪ್ಪನ ಮಗ) ಶಂಕರನಾರಾಯಣ ಅಡಿಗರ ಮಗಳು. ಉದಯೋನ್ಮುಖ ಕವಿಯಾಗಿದ್ದ ನಾನು ಹುಡುಗಿಯನ್ನು ಒಪ್ಪಿಕೊಳ್ಳಲು ಅದೂ ಒಂದು ಕಾರಣವಾಯಿತು. ಮದುವೆಯಾದ ನಂತರ ನಾನು ಆಗಾಗ ಆ ಮನೆಗೆ ಹೋಗಿ ಬರುತ್ತಿದ್ದೆ. ಅಲ್ಲಿಗೆ ಹೋದಾಗಲೆಲ್ಲ ಆ ಹಳೆಯ ಮನೆಯ ಪತ್ತಾಸಿನಲ್ಲಿ, ಮರದ ಕಪಾಟಿನಲ್ಲಿ ಅಡಿಗರ ಸಹಿ, ಹಸ್ತಾಕ್ಷರ ಇರುವ ಪುಸ್ತಕಗಳನ್ನು ಕಂಡು ರೋಮಾಂಚನಗೊಳ್ಳುತ್ತಿದ್ದೆ.
ನಾನು ಉಡುಪಿಯಲ್ಲಿದ್ದಾಗ ಕಿ.ರಂ. ಯಾವುದೋ ಕಾರ್ಯಕ್ರಮಕ್ಕೆ ಬಂದಿದ್ದರು. ರಾತ್ರಿ ಯಥಾಪ್ರಕಾರ ಅಡಿಗರ ಕಾವ್ಯದ ಬಗ್ಗೆ ಆವೇಶಭರಿತರಾಗಿ ಮಾತನಾಡುತ್ತಿದ್ದರು. ಮಾತಿನ ನಡುವೆ ನಾನು ಮೊಗೇರಿಯ ಅಳಿಯ ಅನ್ನುವುದು ಅವರಿಗೆ ತಿಳಿಯಿತು. “ನಾನು ಅಡಿಗರ ಅತಿ ದೊಡ್ಡ ಅಭಿಮಾನಿಯಾದರೂ ಅವರು ಹುಟ್ಟಿದ ಊರನ್ನು ನೋಡಿಲ್ಲ. ನಾಳೆ ನೀವು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಲೇಬೇಕು” ಎಂದರು. ನಾನು ಸಂತೋ?ದಿಂದ ಒಪ್ಪಿದೆ. ಅಲ್ಲೇ ಇದ್ದ ವಿಮರ್ಶಕ ಮುರಳೀಧರ ಉಪಾಧ್ಯರು ಕಾರಿನ ವ್ಯವಸ್ಥೆ ಮಾಡಿದರು. ಮರುದಿನ ನಾವು ಕಿ.ರಂ. ಅವರನ್ನು ಕರೆದುಕೊಂಡು ಮೊಗೇರಿಗೆ ಹೊರಟೆವು. ಮೊಗೇರಿಯಲ್ಲಿ ಕಾರಿನಿಂದ ಇಳಿಯುತ್ತಿದ್ದ ಹಾಗೆ ಭಾವೋದ್ವೇಗಕ್ಕೆ ಒಳಗಾದ ಕಿ.ರಂ. “ಇದು ಜಗತ್ತಿನ ಶ್ರೇ? ಕವಿ ಓಡಾಡಿದ ಮಣ್ಣು. ಇಲ್ಲಿ ಕುಳಿತು ಅವರ ಕಾವ್ಯ ಓದಬೇಕು” ಎಂದು ನೆಲದ ಮೇಲೆಯೇ ಕುಳಿತುಬಿಟ್ಟರು. ಉಪಾಧ್ಯರಿಗೂ ಕುಳಿತುಕೊಳ್ಳುವಂತೆ ಹೇಳಿ, ಅಡಿಗರ ಒಂದು ಕವನವನ್ನು ಓದುವಂತೆ ಸೂಚಿಸಿದರು. ಅದನ್ನು ಕೇಳಿ ಕಿ.ರಂ. ವ್ಹಾ ವ್ಹಾ ಎಂದು ತಲೆದೂಗುತ್ತಿದ್ದಾಗ ನಮ್ಮನ್ನು ಆ ಹಳ್ಳಿಯ ಜನರು ದೂರದಿಂದ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು.
* * *
ಅಡಿಗರನ್ನು ನಾನು ಭೇಟಿಯಾದದ್ದು ಕೇವಲ ನಾಲ್ಕು ಸಲ. ಪ್ರತಿ ಬಾರಿ ಅವರೊಡನೆ ಮಾತಾಡಿದಾಗಲೂ ಒಳನೋಟಗಳಿಂದ ಕೂಡಿರುತ್ತಿದ್ದ ಅವರ ಮಾತುಗಳ ಜೊತೆಗೆ, ಅವರ ತುಂಟ ನಗು, ಏನಾದರೂ ಕುಶಾಲು ಮಾಡಿ ಕಣ್ಣು ಮಿಟುಕಿಸುವ ರೀತಿ ನನ್ನನ್ನು ಬಹುಕಾಲ ಕಾಡುತ್ತಿತ್ತು. ಕೊನೆಯದಾಗಿ ನಾನು ಅವರನ್ನು ಕಂಡದ್ದು ೧೯೯೨ರಲ್ಲಿ. ಅದಾದ ಕೆಲವೇ ದಿನಗಳಲ್ಲಿ ಅವರ ನಿಧನದ ಸುದ್ದಿ ಬಂತು. ಅವರಿಗೆ ಶ್ರದ್ಧಾಂಜಲಿ ಸೂಚಿಸಲು ನಾನು ಬರೆದ ಒಂದು ಕಿರುಗವನ ಹೀಗಿದೆ:
ಅಡಿಗರ ಚಂಡೆ ಮದ್ದಳೆ
ಕಿವಿ ಹೊಕ್ಕಿದ್ದರೆ
ಮೋಹನ ಮುರಲಿ
ಕೇಳಲು ಸಿಕ್ಕಿದ್ದರೆ
ಅಥವಾ ಅವರೇ ಒಮ್ಮೆ
ಏನಯ್ಯಾ ಎಂದು
ಕಣ್ಣು ಹೊಡೆದು
ಬೊಚ್ಚುಬಾಯಲ್ಲಿ ನಕ್ಕಿದ್ದರೆ
ತಪ್ಪಾಯಿತೆಂದು ಬಹುಶಃ
ಬಿಟ್ಟು ಹೋಗುತ್ತಿದ್ದ
ಕಾಲಪುರುಷ!