ಪ್ರೊ|| ಎಲ್.ಎಸ್. ಶೇಷಗಿರಿರಾಯರನ್ನು ಕುರಿತು ಯಾರೇ ಮಾತನಾಡ ಹೊರಟರೆ ಅಥವಾ ಬರೆಯ ಹೊರಟರೆ ಕೆಲವು ಅಂಶಗಳು ಪದೇಪದೇ ಅನುವೃತ್ತಗೊಳ್ಳುತ್ತಿರುತ್ತವೆ: ಅವರ ಸಜ್ಜನಿಕೆ, ಎಂದೂ ಕುಗ್ಗದ ಸಾಹಿತ್ಯಪರಿಚರ್ಯೋತ್ಸಾಹ, ಕೆಲಸದ ಶಿಸ್ತು ಮತ್ತು ಅಚ್ಚುಕಟ್ಟು, ಪರಿಶ್ರಮದ ನಿರಂತರತೆ, ಗುಣಮಟ್ಟದ ಬಗೆಗೆ ಎಂದೂ ಶಿಥಿಲತೆಗೆ ಆಸ್ಪದ ಕೊಡದಿರುವುದು, ಇತ್ಯಾದಿ. ಕೆಲಸ ಸಣ್ಣದಾಗಲಿ ದೈತ್ಯಗಾತ್ರದ್ದಾಗಲಿ – ಒಮ್ಮೆ ಶೇಷಗಿರಿರಾಯರು ಒಂದು ಕೆಲಸವನ್ನು ವಹಿಸಿಕೊಂಡರೆಂದರೆ ನಿಗದಿಯಾದ ಸಮಯಕ್ಕೆ ಅದನ್ನು ಸರ್ವಾಂಗಸುಂದರವಾಗಿ ಮುಗಿಸಿಯೇ ಮುಗಿಸುವರು. ಈ ವ್ರತನಿಷ್ಠೆಯನ್ನು ಅವರು ಶರೀರ ಜರ್ಜರಿತವಾಗಿ ವಯೋಮಾನ ಶತಾಬ್ದದ ಅಂಚನ್ನು ಬಳಿಸಾರುವವರೆಗೂ ಅಸ್ಖಲಿತವಾಗಿ ಪಾಲನೆ ಮಾಡಿದುದನ್ನು ಒಂದು ಅದ್ಭುತವೆಂದೇ ಭಾವಿಸಬೇಕಾಗುತ್ತದೆ.
ಹಾಗೆಂದು ಅವರ ಬಗಲಿಗೆ ಬಿದ್ದ ಕೆಲಸಗಳೆಲ್ಲ ಮುದಾವಹವಾಗಿದ್ದವೆಂದೋ ರೋಚಕತೆಯಿಂದ ಕೂಡಿರುತ್ತಿದ್ದವೆಂದೋ ಅಲ್ಲ. ಅವರು ನಿರ್ವಾಹ ಮಾಡಿದ ‘ರೇಜಿಗೆ’ ಕೆಲಸಗಳಿಗೆ ಲೆಕ್ಕವಿಲ್ಲ. ದೇವರು ಈ ಹೊತ್ತಿಗೆ ಏನು ಕೆಲಸವನ್ನು ನಮ್ಮ ಕೈಗೆ ಕೊಡುತ್ತಾನೋ ಅದರಲ್ಲಿ ಪೂರ್ಣವಾಗಿ ತೊಡಗಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿ ಏನಿದ್ದೀತು? – ಎಂಬ ಅವರ ಸ್ಥಿತಪ್ರಜ್ಞತೆ ನಿತ್ಯ ವಿಸ್ಮಯಕಾರಿಯಾಗಿತ್ತು. ‘ಕೊಟ್ಟ ಕುದುರೆಯನ್ನೇರು’ ಎಂಬ ಶರಣವಚನಕ್ಕೆ ನಾವು ಕಂಡ ಶ್ರೇಷ್ಠ ನಿದರ್ಶನ ಎಲ್.ಎಸ್. ಶೇಷಗಿರಿರಾಯರು. ಈ ಮನೋಧರ್ಮವೂ ಕಾರ್ಯರೀತಿಯೂ ಇದ್ದದ್ದರಿಂದಲೇ ಅವರು ‘ಗ್ರೀಕ್ ರಂಗಭೂಮಿ ಮತ್ತು ನಾಟಕ’, ‘ಆಧುನಿಕ ಕನ್ನಡ ಸಾಹಿತ್ಯಕ್ಕೆ ಒಂದು ಪ್ರವೇಶಿಕೆ’ (ಇಂಗ್ಲಿಷಿನಲ್ಲಿ), ‘ಕನ್ನಡ ಸಾಹಿತ್ಯದ ಇತಿಹಾಸ’ (ಇಂಗ್ಲಿಷಿನಲ್ಲಿ), ‘ಮಹಾಭಾರತ’ (ಇಂಗ್ಲಿಷಿನಲ್ಲಿ), ‘ತೌಲನಿಕ ಭಾರತೀಯ ಸಾಹಿತ್ಯ’ (ಇಂಗ್ಲಿಷಿನಲ್ಲಿ) ಮೊದಲಾದ (ಒಂದು ಸಾಹಿತಿಸಮೂಹಕ್ಕೂ ಸವಾಲಿನದೇ ಆದ) ನಾಲ್ಕಾರು ಉದ್ಘ ಕೃತಿಗಳನ್ನು ಏಕಾಂಗಿಯಾಗಿ ಸಮರ್ಥವಾಗಿ ರಚಿಸುವುದು ಸಾಧ್ಯವಾಯಿತೇನೊ. ಅವರ ಬಗೆಗೆ “ಗಿರಿಯಷ್ಟು ಸಾಧಿಸಿದರೂ ಕಡೆಗೆ ಶೇಷವೆಷ್ಟೆಂದು ಯಾವತ್ತೂ ಎಣಿಸದವರು” ಎಂದಿದ್ದರು ಜಿ.ಎಸ್. ಶಿವರುದ್ರಪ್ಪ. ಅವರ ಅನುಪಮ ಕೊಡುಗೆಗಳಲ್ಲಿ ವಿವಿಧ ಮಾಲಿಕೆಗಳೂ ಹಲವು ನಿಘಂಟುಗಳೂ ಸೇರಿವೆ.
ನವೋದಯ ಯುಗದ ಹಿರಿಯರು, ತಮ್ಮ ಓರಗೆಯವರು, ಶಿಷ್ಯರು-ಕಿರಿಯರು – ಎಲ್ಲರ ಪ್ರೀತಿಯನ್ನು ಗಳಿಸಿದವರು ಎಲ್.ಎಸ್.ಎಸ್. ಅವರು ಪ್ರಧಾನ ಸಂಪಾದಕತ್ವ ವಹಿಸಿ ಶ್ರಮಪೂರ್ವಕ ನಿರ್ಮಿಸಿದ ‘ಭಾರತ-ಭಾರತಿ ಪುಸ್ತಕ ಸಂಪದ’ವಂತೂ ಇಡೀ ದೇಶದಲ್ಲಿಯೆ ಹೊಸ ದಾಖಲೆಗಳನ್ನು ನಿರ್ಮಿಸಿದುದು ಸುವಿದಿತ. ಅನಂತರದ ಕಾಲದಲ್ಲಿ ಇದೇ ಬಗೆಯ ಅನ್ಯ ಮಾಲಿಕೆಗಳೂ ಅವರ ಸಾರಥ್ಯದಲ್ಲಿ ಪ್ರಕಟಗೊಂಡವು.
ಸಾಹಿತ್ಯೇತಿಹಾಸ, ಮಹಾಭಾರತ – ಇಂತಹ ಹಲವಾರು ಸರ್ಜನಶೀಲ ಗ್ರಂಥಗಳನ್ನು ಎಲ್.ಎಸ್.ಎಸ್. ನಾಡಿಗೆ ನೀಡಿದ್ದಾರೆ. ಅವರಿಗೆ ವಿಶೇಷ ಮನ್ನಣೆಯನ್ನು ಗಳಿಸಿಕೊಟ್ಟ ಒಂದು ಕ್ಷೇತ್ರವೆಂದರೆ ಸಹೃದಯ ವಿಮರ್ಶೆಯದು. ಗಾಢ ಅಧ್ಯಯನ, ವಿವಿಧ ವಿಷಯಜ್ಞಾನ, ಮಂಡನೆಯ ಖಚಿತತೆ – ಈ ಹಲವಾರು ವಿರಳ ಗುಣಗಳು ಎಲ್.ಎಲ್.ಎಸ್. ಅವರಲ್ಲಿ ಅನಾಯಾಸವಾಗಿ ಮೇಳವಿಸಿದ್ದುದನ್ನು ಕನ್ನಡದ ಭಾಗ್ಯವೆಂದು ಒತ್ತಿ ಹೇಳಬೇಕು.
ಹಾ.ಮಾ. ನಾಯಕರು ಉದ್ಗರಿಸಿದ್ದರು: “[ಎಲ್.ಎಸ್.ಎಸ್.] ಎಷ್ಟೊಂದು ಪುಸ್ತಕಗಳನ್ನು ವಿಮರ್ಶಿಸುತ್ತಾರೆ. ಎಷ್ಟೊಂದು ಪುಸ್ತಕಗಳಿಗೆ ಪ್ರಧಾನ ಸಂಪಾದಕರು-ಸಂಪಾದಕರು-ಉಪಸಂಪಾದಕರು; ಎಷ್ಟೊಂದು ಸಭೆ-ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ, ಎಷ್ಟೊಂದು ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಾರೆ – ಎಂಬುದನ್ನು ಯೋಚಿಸುವಾಗ ನನಗೆ ಆಶ್ಚರ್ಯವಾಗುತ್ತದೆ.” ಹೀಗೆ ನಿತ್ಯವಿಸ್ಮಯಗೊಳ್ಳುತ್ತಿದ್ದವರ ಸಂಖ್ಯೆ ಅಗಣಿತ. ಅವರಂತೆ ಬಹುಶ್ರುತರಾಗಿದ್ದವರು ಒಬ್ಬಿಬ್ಬರು ಸಿಕ್ಕಿಯಾರೇನೊ. ಆದರೆ ಅದನ್ನೊಡಗೂಡಿದ್ದ ಸಜ್ಜನಿಕೆ, ನಿತ್ಯ ಸುಲಭತೆ ಮೊದಲಾದ ವ್ಯಕ್ತಿಲಕ್ಷಣಗಳು ಎಲ್.ಎಸ್.ಎಸ್. ಅವರದೇ ಪ್ರತ್ಯೇಕತೆ.
ರಾಷ್ಟ್ರೋತ್ಥಾನ ಸಾಹಿತ್ಯ, ಉತ್ಥಾನ ಪತ್ರಿಕೆ – ಇವಕ್ಕಂತೂ ದಶಕಗಳುದ್ದಕ್ಕೂ ಎಲ್.ಎಸ್.ಎಸ್. ಆಧಾರಸ್ತಂಭವಾಗಿದ್ದು ಪಥದರ್ಶನ ಮಾಡಿದರು. ಆ ಹಿರಿಯರ ಜನ್ಮಶತಾಬ್ದದ ಸಂದರ್ಭದಲ್ಲಿ ಅವರ ಸ್ಮೃತಿಗೆ ಶತಪ್ರಣಾಮಗಳನ್ನು ಸಲ್ಲಿಸುತ್ತಿದ್ದೇವೆ.