ಲಕ್ಷಾಂತರ ಬೀಜಗಳನ್ನು ಪ್ರಸಾರ ಮಾಡಿ ‘ನಿಸರ್ಗದ ತೋಟಿಗ’ ಎನಿಸಿದ, ಲಕ್ಷಾಂತರ ಸೊಳ್ಳೆ, ಕ್ರಿಮಿಕೀಟಗಳನ್ನು ಭಕ್ಷಿಸಿ, ರೈತರಿಗೆ ಫಸಲಿಗೆ ಬೆನ್ನೆಲುಬಾಗಿ ಆರ್ಥಿಕ ಲಾಭ ತಂದುಕೊಡುವ ‘ವನಸುಮ’ವಾಗಿ ಲಕ್ಷಾಂತರ ವರ್ಷಗಳಿಂದ ವಿಕಸಿಸಿದ ಜೀವಿ – ‘ಬಾವಲಿ’. ತುಂಬ ಸಂಕೋಚ ಮತ್ತು ನಾಚಿಕೆಯ ಸ್ವಭಾವದ್ದು. ಅದು ಮನುಷ್ಯರ ಕಣ್ಣಿಗೆ ಬೀಳುವುದೇ ಬಲು ಅಪರೂಪ. ನಾವೂ ಕೂಡ ಅವುಗಳ ಇರುವಿಕೆ ಗ್ರಹಿಸಿದ್ದು ಅಷ್ಟಕ್ಕಷ್ಟೇ! ಅಭ್ಯಸಿಸಿದ್ದು ಕೂಡ, ಬಹುತೇಕ ಇಲ್ಲವೇ ಇಲ್ಲ ಎನ್ನುವ ಪ್ರಮಾಣದಲ್ಲಿ.
ತೊಗಲ ಬಾವಲಿ! ಸ್ಥಳೀಯ ಭಾಷೆಯಲ್ಲಿ ಕಪಟ!
ರೆಕ್ಕೆ ಮತ್ತು ಅದಕ್ಕೆ ಪುಚ್ಛಗಳೇ ಇಲ್ಲದ, ಜೀವ ವಿಕಾಸದ ವಿವಿಧ ಹಂತಗಳಲ್ಲಿ ವಿಕಸನಗೊಂಡು, ತೊಗಲಿನ ಜಾಲ ಬೆಳೆಸಿಕೊಂಡಿದ್ದಕ್ಕೆ ಈ ರೂಢಿನಾಮ! ತನ್ನ ಮುಂಗಾಲುಗಳ ತೊಗಲನ್ನೇ ಜಾಲವಾಗಿ ಹರಡಿ, ಹಾರುವ ‘ಗ್ಲೈಂಡಿಂಗ್’ ಪ್ರಾಣಿ; ಪಕ್ಷಿ ಅಲ್ಲ!
ತಾಯ ಒಡಲನ್ನು ತಬ್ಬಿಕೊಂಡ ಒಂದೇ ಸೂಲಿನ ಒಂದೇ ಮರಿಗೆ ಮೊಲೆಯುಣಿಸುವ, ಹಾರಬಲ್ಲ ಏಕೈಕ ಸ್ತನಿ ಪ್ರಾಣಿ! ಬೆಳಗಿನ ಹೊತ್ತು ಕಾಲುಗುರುಗಳನ್ನು ಬಳಸಿ, ತಲೆ ಕೆಳಗಾಗಿ ಗಿಡಗಳಲ್ಲಿ ನೇತುಬಿದ್ದು, ಸೂರ್ಯಾಸ್ತದ ಬಳಿಕ ರಾತ್ರಿ ಮಾತ್ರ ಹಾರಾಡುವ ನಿಶಾಚರಿ!
ನೆಲದ ಮೇಲೆ ಅಥವಾ ಅಕಸ್ಮಾತ್ ನೆಲಕ್ಕೊರಗಿದರೆ, ಸರಿಯಾಗಿ ನಡೆಯಲೂ ಸಹ ಇವುಗಳಿಗೆ ಸಾಧ್ಯವಿಲ್ಲ! ಗೂಡನ್ನೂ ಕಟ್ಟಿಕೊಳ್ಳದೆ, ತನ್ನ ಎರಡೂ ಮುಂಗೈಗಳನ್ನು ಮಡಚಿದ ಕೊಡೆಯಂತೆ ಸುತ್ತಿಕೊಂಡು, ಬೆಚ್ಚಗೆ ಮಲಗುವ ರೂಢಿ!
ಲಕ್ಷಾಂತರ ಬೀಜಗಳನ್ನು ಪ್ರಸಾರ ಮಾಡಿ, ‘ನಿಸರ್ಗದ ತೋಟಿಗ’ ಎನಿಸಿದ, ಲಕ್ಷಾಂತರ ಸೊಳ್ಳೆ, ಕ್ರಿಮಿಕೀಟಗಳನ್ನು ಭಕ್ಷಿಸಿ ರೈತರಿಗೆ ಫಸಲಿಗೆ ಬೆನ್ನೆಲುಬಾಗಿ ಆರ್ಥಿಕ ಲಾಭ ತಂದುಕೊಡುವ ‘ವನಸುಮ’ವಾಗಿ ಲಕ್ಷಾಂತರ ವರ್ಷಗಳಿಂದ ವಿಕಸಿಸಿದ ಜೀವಿ – ಬಾವಲಿ.
ಅವುಗಳಿಗೆ ತುಂಬ ಸಂಕೋಚ ಮತ್ತು ನಾಚಿಕೆಯ ಸ್ವಭಾವ. ಅವುಗಳು ಮನುಷ್ಯರ ಕಣ್ಣಿಗೆ ಬೀಳುವುದೇ ಬಲು ಅಪರೂಪ. ನಾವೂ ಕೂಡ ಅವುಗಳ ಇರುವಿಕೆ ಗ್ರಹಿಸಿದ್ದು ಅಷ್ಟಕ್ಕಷ್ಟೇ! ಅಭ್ಯಸಿಸಿದ್ದು ಕೂಡ, ಬಹುತೇಕ ಇಲ್ಲವೇ ಇಲ್ಲ ಎನ್ನುವ ಪ್ರಮಾಣದಲ್ಲಿ.
ಮಿತ್ರ ದೇವೇಂದ್ರಸಿಂಗ್ ರಾವತ್ ಅವರ ಪರಿಚಯವಾಗುವವರೆಗೆ ನನಗೂ ಅವುಗಳ ಬಗ್ಗೆ ಆಸಕ್ತಿ ಅರಳಿರಲಿಲ್ಲ.
ಪ್ರಸ್ತುತ ಅವರು ಉತ್ತರಾಖಂಡದ ಶ್ರೀನಗರದಲ್ಲಿರುವ ಹೇಮಾವತಿ ನಂದನ್ ಬಹುಗುಣ ಘ(ರ)ಡವಾಲ್ ವಿಶ್ವವಿದ್ಯಾಲಯದಲ್ಲಿ ವಿಶೇಷವಾಗಿ ಹಿಮಾಲಯದ ತಪ್ಪಲಿನ ಬಾವಲಿಗಳ ಬಗ್ಗೆ ಕಳೆದ ಐದು ವರ್ಷಗಳಿಂದ ಸಂಶೋಧನೆ ನಿರತ ಪ್ರಾಣಿಶಾಸ್ತ್ರಜ್ಞ. ಯುವವಿಜ್ಞಾನಿ ಪ್ರಶಸ್ತಿ ಪುರಸ್ಕೃತರು. ಎರಡು ಅವಧಿಗೆ ಐಡಿಯಾ ವೈಲ್ಡ್ ಗ್ರ್ಯಾಂಟ್ಸ್ ಪಡೆದು ವೈಜ್ಞಾನಿಕವಾಗಿ ಬಾವಲಿಗಳ ಉಲಿಯುವಿಕೆ, ಕರೆ(ಕಾಲ್ಸ್)ಗಳ ವೈವಿಧ್ಯತೆ ಕುರಿತು ಅಜ್ಞಾತ ಗುಹೆಗಳಲ್ಲಿ ಸಂಶೋಧನೆ ನಿರತರು.
ನಾವಿಬ್ಬರೂ ನೇಚರ್ ಕಾರ್ನ್ಸ್ವೇಷನ್ ಫೌಂಡೇಷನ್ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆ ಕುರಿತ ವೈಜ್ಞಾನಿಕ ಬರೆವಣಿಗೆ ಕೋರ್ಸ್ನಲ್ಲಿ ಸಹಪಾಠಿಗಳಾಗಿದ್ದೆವು. ವಿಖ್ಯಾತ ಬರೆಹಗಾರ್ತಿ ಶ್ರೇಯಾದಾಸ್ ಗುಪ್ತಾ ಕಮ್ಮಟದ ನಿರ್ದೇಶಕರಾಗಿದ್ದರು. ಕೊಳಚೆನೀರಿನ ಜೀವಿಗಳು ಮತ್ತು ವಲಸೆಹಕ್ಕಿಗಳ ಮೇಲೆ ಅವುಗಳ ಪರಿಣಾಮ ಕುರಿತು ದೇಶದಾದ್ಯಂತ ಅಧ್ಯಯನ ಕೈಗೊಂಡ ತಮೋಘ್ನ ಸಂಯೋಜಕರಾಗಿದ್ದರು.
ದೇವೇಂದ್ರಸಿಂಗ್ ರಾತ್ರಿ ಇಡೀ ಬಾವಲಿಗಳ ಲೋಕವನ್ನು ನಮ್ಮ ಮುಂದೆ ಅಮೋಘವಾಗಿ ತೆರೆದಿಟ್ಟರು. ನಮ್ಮ ಕೈಯಿಂದಲೇ ಅವುಗಳ ‘ಹೈ ಫ್ರಿಕ್ವೆನ್ಸಿ ಕಾಲ್ ಸೌಂಡ್ಸ್’ ಧ್ವನಿಮುದ್ರಣವನ್ನು ವಿಶೇಷ ಉಪಕರಣದಿಂದ ಮಾಡಿಸಿ, ಆ ಬಾವಲಿ ಯಾವುದು? ಅದರ ಹೆಸರೇನು? – ಎಂಬ ಕುತೂಹಲ ಮೂಡಿಸಿದ್ದರು. ತಮ್ಮ ಬದುಕನ್ನೇ ಬಾವಲಿಗಳ ಅಧ್ಯಯನ ಮತ್ತು ಸಂರಕ್ಷಣೆಗಾಗಿ ಮುಡಿಪಿಟ್ಟ ಯುವವಿಜ್ಞಾನಿಯ ಬದ್ಧತೆ ಕಂಡು ನನಗೆ ಅಭಿಮಾನ ಮೂಡಿತ್ತು.
ಈಗ ಬಾವಲಿಗಳ ಕಡೆ ಚಿತ್ತೈಸೋಣ.
ಹಕ್ಕಿಗಳು ಹೇಗೆ ಹಾರುತ್ತವೆ? ಎಂಬುದೇ ಬಹುತೇಕರಿಗೆ ಗೊತ್ತಿಲ್ಲ! ಇನ್ನು ಬಾವಲಿ? ಬಾವಲಿಗಳು ಕೈರಾಪ್ಟರಾ ಗಣಕ್ಕೆ ಸೇರಿದ ಸ್ತನಿ. ಆದರೆ ಕೆಲ ಅಳಿಲು, ಓತಿ, ಪಾಸಮ್ಸ್ ಮತ್ತು ಕೆಲೂಗ್ಸ್ ಅಲ್ಪ ದೂರದವರೆಗೆ ತೇಲಬಲ್ಲವು; ಹಾರಲಾರವು! ಬಾವಲಿಗಳಿಗೆ ರೆಕ್ಕೆಗಳಿಲ್ಲ. ಹೀಗಾಗಿ ಉದ್ದ, ತೆಳು ಪೊರೆಯಿಂದ ರೂಪಿತವಾದ, ಚರ್ಮ ಪೆಟೋಜಿಯಮ್ ಜಾಲದ ಬೆರಳುಗಳನ್ನು ಬಡಿದು ಹಾರುತ್ತವೆ.
ಈವರೆಗೆ ನಮ್ಮ ದೇಶದಲ್ಲಿರುವ ವಿವಿಧ ಪ್ರಭೇದದ ೧೨೬ ಬಾವಲಿಗಳ ಪೈಕಿ, ನಮ್ಮ ರಾಜ್ಯದಲ್ಲಿ ೩೬ ಪ್ರಜಾತಿಗಳನ್ನು ಮಾತ್ರ ಗುರುತಿಸಲಾಗಿದೆ. ಉಳಿದವು ಅಜ್ಞಾತ! ಜಗತ್ತಿನಾದ್ಯಂತ, ೧,೦೧೭ ಪ್ರಭೇದದ ಬಾವಲಿಗಳಿವೆ ಎಂದು ಪ್ರಾಣಿಶಾಸ್ತçಜ್ಞರು ಹಲವು ಸಂಶೋಧನಾ ಪತ್ರಿಕೆಗಳಲ್ಲಿ ಮಂಡಿಸಿದ್ದಾರೆ.
ಕಿತ್ತೂರು ಕರ್ನಾಟಕದ ಭೀಮಗಡ ವನ್ಯಜೀವಿ ಅಭಯಾರಣ್ಯ (ಕೀರ್ತಿಶೇಷ ಲೆ.ಜ. ಎಸ್.ಸಿ. ಸರದೇಶಪಾಂಡೆ ಅವರ ಮುತುವರ್ಜಿಯಿಂದ ಬದುಕುಳಿದ ‘ಸ್ಯಾಂಕ್ಚುವರಿ’. ಉತ್ತರಾಖಂಡದ ಕುಮಾಂವು ರೆಜಿಮೆಂಟ್ನ ಮುಖ್ಯಸ್ಥರಾಗಿದ್ದವರು.) ಮುಂದುವರಿದ ಭಾಗವಾಗಿ, ಹೆಸರಾಂತ ಪರಿಸರ ತಜ್ಞ ಪ್ರೊ. ಗಂಗಾಧರ ಕಲ್ಲೂರ ಹಾಗೂ ಸದ್ಯ ಧಾರವಾಡದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿರುವ ಮಂಜುನಾಥ ಸುಳ್ಳೊಳ್ಳಿ ತಂಡ, ಭೀಮಗಡ ಅರಣ್ಯದ ಗುಹೆಗಳಲ್ಲಿ ಪ್ರಥಮ ಬಾರಿಗೆ ‘ರಾಟನ್ಸ್ ಫ್ರೀ ಟೇಲ್ಡ್ ಬ್ಯಾಟ್ಸ್’ ಅಪರೂಪಕ್ಕೆ ಗೋಚರಿಸಿದ್ದನ್ನು ದಾಖಲಿಸಿದ್ದು ಉಲ್ಲೇಖನಾರ್ಹ.
ಖಚಿತವಾಗಿ ಎಷ್ಟು ಪ್ರಭೇದಗಳಿವೆ ಹೇಳಿ? ಎಂದರೆ, ಸದ್ಯಕ್ಕೆ ಸ್ಪಷ್ಟ ಉತ್ತರವಿಲ್ಲ! ಬಾವಲಿಗಳ ದೇಹ ಗಾತ್ರಕ್ಕೆ ಅನುಗುಣವಾಗಿ, ಕಣ್ಣಳತೆಯ ಆಧಾರದಲ್ಲಿ ಸಾಮಾನ್ಯವಾಗಿ, ದೊಡ್ಡ ಬಾವಲಿ (ಮೆಗಾ ಬ್ಯಾಟ್ಸ್) ಹಾಗೂ ಚಿಕ್ಕ ಬಾವಲಿ (ಮೈಕ್ರೊ ಬ್ಯಾಟ್ಸ್) ಎಂದು ವಿಂಗಡಿಸಬಹುದು.
ದೊಡ್ಡ ಬಾವಲಿಗಳಿಗೆ ಹಣ್ಣುಗಳೇ ಪ್ರಧಾನ ಆಹಾರ. ಲಭ್ಯತೆಗೆ ಅನುಗುಣವಾಗಿ ಆಯಾ ಋತುಮಾನಕ್ಕೆ ತಕ್ಕಂತೆ ಮಕರಂದ ಸಹ ಹೀರಿ ಉದರಂಭರಣ. ಗಾತ್ರದಲ್ಲಿ ಚಿಕ್ಕ ಬಾವಲಿಗಳು ಕ್ರಿಮಿ, ಕೀಟ ಹಾಗೂ ಹುಳು, ಹುಪ್ಪಟೆಗಳನ್ನು ತಿಂದು ಜೀರ್ಣಿಸಿಕೊಳ್ಳುತ್ತವೆ.
ಚಿಕ್ಕ ಬಾವಲಿಗಳ ಆಯಸ್ಸು ೮ರಿಂದ ೧೦ ವರ್ಷಗಳು. ದೊಡ್ಡ ಬಾವಲಿಗಳು ೩೦ರಿಂದ ೪೦ ವರ್ಷಗಳವರೆಗೆ ಬದುಕಬಹುದು. ದೊಡ್ಡ ಗಾತ್ರದ ಬಾವಲಿಗಳ ತೂಕ ೪೦ರಿಂದ ೧೫೦ ಗ್ರಾಂನಷ್ಟು. ಹಾರುತ್ತಿರುವಾಗ ಹದ್ದಿನಂತೆ ಗೋಚರಿಸುತ್ತವೆ. ಚಿಕ್ಕ ಬಾವಲಿಗಳು ೧೦ರಿಂದ ೨೫ ಗ್ರಾಂ ತೂಗಿದರೆ ಹೆಚ್ಚು. ದೇವೇಂದ್ರಸಿಂಗ್ ಈ ಕಾರ್ಯ ನಿಶಿದಿನ ಹಿಮಾಲಯದ ತಪ್ಪಲಿನ ಅಜ್ಞಾತ ಗುಹೆಗಳಲ್ಲಿ ಮಾಡುತ್ತಿದ್ದಾರೆ.
ಬಾವಲಿಗಳಿಗೆ ಬದುಕು ನಿತ್ಯದ ಸವಾಲು. ಮನುಷ್ಯಕೇಂದ್ರಿತ ಅಭಿವೃದ್ಧಿ ಮತ್ತು ನಗರೀಕರಣದ ಭರಾಟೆ, ಬದಲಾವಣೆಗಳಿಗೆ ಹೊಂದಿಕೊಂಡು ಮನುಷ್ಯನೊಂದಿಗೆ ಬದುಕುತ್ತಿರುವ ಬಾವಲಿಗಳೆಂದರೆ ‘ಇಂಡಿಯನ್ ಫ್ಲಾಯಿಂಗ್ ಫಾಕ್ಸ್’ ತೋಳನ ಮೊಗದ ಬಾವಲಿ ಹಾಗೂ ಗಿಡ್ಡ ಮೂಗಿನ ಬಾವಲಿ. ಹಣ್ಣು ಇವುಗಳ ಪ್ರಮುಖ ಆಹಾರ.
ಬಾವಲಿಗಳು ಸಂಘಜೀವಿ. ಗುಂಪಿನಲ್ಲಿ ವಾಸ. ಪಾಳುಬಿದ್ದ ಮನೆ, ಗುಹೆ, ಕೋಟೆ, ಕೊತ್ತಲಗಳು, ಕಲ್ಲುಬಂಡೆಗಳು, ಬಂಡೆಗಳ ನಡುವಿನ ಕೊರಕಲು, ಕಲ್ಲಿನ ಗೋಡೆಗಳ ನಡುವಿನ ಕಿರಿದಾದ ಸ್ಥಳ, ಪೊಟರೆ, ಒಣಗಿದ ಮರಗಳೇ ಇವುಗಳಿಗೆ ಮನೆ!
ತಾಯಿ ಬಾವಲಿ ವರ್ಷಕ್ಕೆ ಒಂದು ಬಾರಿ ಮಾತ್ರ ಮರಿ ಹಾಕುತ್ತದೆ. ಆ ಮರಿಯನ್ನು ಹೊತ್ತು ಹಾರಲು ಭಾರವೆನಿಸುವವರೆಗೂ ಅಪ್ಪಿಕೊಂಡೇ ಬದುಕುತ್ತವೆ. ಆಹಾರ ಅರಸಿ ಹಾರುವಾಗಲೂ ಅದನ್ನು ಎದೆಯಲ್ಲಿ ಅವುಡುಗಚ್ಚಿಕೊಂಡೇ ಹಾರುತ್ತದೆ. ಆಗಾಗ ಮೊಲೆಯೂಡಿಸುತ್ತದೆ.
ಎತ್ತಿಕೊಂಡು ಹಾರುವುದು ಭಾರವೆನಿಸಿದಾಗ ಬಾವಲಿಗಳು ತಮ್ಮ ಕಾಲೋನಿಯಲ್ಲಿ ‘ಡೇ ಕೇರ್’ ಮಾದರಿಯ ‘ಬೇಬಿ ಸಿಟ್ಟಿಂಗ್’ ಆರಂಭಿಸುತ್ತವೆ. ತಮ್ಮ ಕಾಲೋನಿಯ ಎಲ್ಲ ಮರಿಗಳನ್ನು ಒಂದೆಡೆ ಸೇರಿಸಿ ಗುಂಪಿನ ಹಿರಿಯರ ಸುಪರ್ದಿಗೆ ವಹಿಸಿ, ಆಹಾರ ಹುಡುಕಿ ಹೊರಡುತ್ತವೆ.
ಗಂಡು ಬಾವಲಿ ತುಸು ಗಾತ್ರದಲ್ಲಿ ಮತ್ತು ತೂಕದಲ್ಲಿ ಹೆಣ್ಣಿಗಿಂತ ಹೆಚ್ಚು. ಬೆದೆಗೆ ಬಂದಾಗ ಹೆಣ್ಣನ್ನು ಆಕರ್ಷಿಸಲು ನಾನಾ ರೀತಿಯ ಕಸರತ್ತುಗಳನ್ನು ‘ಕೋರ್ಟ್ಶಿಪ್ ರಿಚ್ಯುವಲ್’ ಅನುಸರಿಸುತ್ತವೆ. ‘ಟೆರಿಟೋರಿಯಲ್ ಫೈಟ್’ನಲ್ಲಿ ಗೆಲ್ಲುವ ಬಲಶಾಲಿ ಗಂಡಿಗೆ ಮಾತ್ರ ಸಂತಾನಾಭಿವೃದ್ಧಿ ಹಕ್ಕು ‘ಮೇಟಿಂಗ್ ರೈಟ್ಸ್’ ಲಭಿಸುತ್ತದೆ. ಪ್ರಜನನ ಋತುವಿನಲ್ಲಿ, ಕೆಲ ಪ್ರಭೇದದ ಬಾವಲಿಗಳಲ್ಲಿ ಗಂಡು ಮತ್ತು ಹೆಣ್ಣು ಬಾವಲಿಗಳ ದೇಹದ ಬಣ್ಣ ಕಾಂತಿಯುಕ್ತವಾಗಿ ಬದಲಾಗುತ್ತದೆ.
ಚಿಕ್ಕ ಗಾತ್ರದ ಬಾವಲಿಗಳು ‘ಹೈ ಫ್ರಿಕ್ವೆನ್ಸಿ ಕಾಲ್ ಸೌಂಡ್ಸ್’, ೨೦ ಕಿಲೋ ಹರ್ಟ್ಸ್ಗಳಿಂದ ೧೫೦ ಕಿಲೋ ಹರ್ಟ್ಸ್ವರೆಗೆ ಶಬ್ದವನ್ನು ಗ್ರಹಿಸುವಷ್ಟು ಸೂಕ್ಷö್ಮ ಮತ್ತು ಸೂಪರ್ಸಾನಿಕ್ ಜೆಟ್ ವಿಮಾನದ ವೇಗದಲ್ಲಿ, ಶಬ್ದವನ್ನಾಧರಿಸಿದ ಚಲನೆಯ ಕೌಶಲ ಅವುಗಳಿಗೆ ಸಿದ್ಧಿಸಿದೆ. ಶಬ್ದ ತರಂಗಗಳ ಮೂಲಕವೇ ಚಿಕ್ಕ ಬಾವಲಿಗಳು ಕೀಟಗಳನ್ನು ಹಿಡಿಯುವುದು ಮತ್ತು ತಿನ್ನುವುದು! ನಮ್ಮ ಕಿವಿಗೆ ಕೇಳಿಸಬಹುದಾದ ಶಬ್ದದ ಸಾವಿರಪಟ್ಟು ಸೂಕ್ಷ್ಮ!
ದೊಡ್ಡ ಬಾವಲಿಗಳು ಹಣ್ಣಿನ ಮರಗಳು ಇರುವುದನ್ನು ಗುರುತಿಸಿ ಅದನ್ನು ನೆನಪಿನಲ್ಲಿಟ್ಟುಕೊಂಡಿರುತ್ತವೆ. ಸಂಜೆಯಾಗುತ್ತಿದ್ದಂತೆ ಹಣ್ಣಿನ ತೋಟಗಳತ್ತ ಹೊರಟು ಉದರಂಭರಣದ ಬಳಿಕ ಮರಳುವಾಗ, ಮಾರ್ಗ ಮಧ್ಯದಲ್ಲಿ ಅದನ್ನು ತಿನ್ನಲು ಒಂದು ಸ್ಥಳ ಮಾಡಿಕೊಂಡಿರುತ್ತವೆ. ಹಣ್ಣನ್ನು ತಿಂದು ಸ್ವಲ್ಪ ವಿಶ್ರಾಂತಿ ಪಡೆದು ನಂತರ ಮತ್ತೆ ಮರಿಗಳಿರುವ ಗಿಡಗಳತ್ತ ಹೊರಡುತ್ತವೆ.
ಧಾರವಾಡದ ಸಾಧನಕೇರಿಯ ಸರ್ಕಾರಿ ಮುದ್ರಣಾಲಯದ ಆವಾರ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಿತ್ಯ ಸಂಜೆ ೬ರಿಂದ ೮ ಗಂಟೆ ಒಳಗೆ ಆಹಾರ ಅರಸಿ ಗೂಡಿನಿಂದ ಹೊರಡುವ ಬಾವಲಿಗಳು, ಮಧ್ಯರಾತ್ರಿ ೧೨ರವರೆಗೆ ಹಣ್ಣು ತಿನ್ನುತ್ತವೆ. ನಂತರ ಅಲ್ಲೇ ತುಸು ವಿಶ್ರಾಂತಿ. ಬಳಿಕ ಬೆಳಗಿನಜಾವ ೩ ಗಂಟೆಗೆ ಹುಡುಕಾಟ ಆರಂಭಿಸಿ, ಬೆಳಗ್ಗೆ ಸುಮಾರು ಐದು ಗಂಟೆಗೆ ಇರುನೆಲೆ ಸೇರುತ್ತವೆ.
ವಿಶಿಷ್ಟ ಶ್ರವಣಾತೀತ ಶಬ್ದ ಗ್ರಹಣ ಸಾಮರ್ಥ್ಯ
ಬಾವಲಿಗಳ ಪ್ರತಿಫಲಿತ ಶಬ್ದಗ್ರಹಣ ಶಕ್ತಿ ಅಥವಾ ವ್ಯವಸ್ಥೆ (ಬ್ಯಾಟ್ ಎಖೋಲೇಷನ್) ಅಲ್ಟಾçಸಾನಿಕ್ ಶಬ್ದಗಳ ಪ್ರತಿಧ್ವನಿಯನ್ನು ಉತ್ಪಾದಿಸಲು ವಿಶೇಷವಾಗಿ ಹೊರಹಾಕಲ್ಪಟ್ಟ ಶಬ್ದ; ಮತ್ತು ಪುನರ್ ಗ್ರಹಿಸುವ ವ್ಯವಸ್ಥೆ ವಿಶಿಷ್ಟವಾದುದು!
ಬಾವಲಿ ಹೊರಡಿಸಿದ ಶ್ರವಣಾತೀತ ಶಬ್ದದ ಹಿಂದಿರುಗಿದ ಪ್ರತಿಧ್ವನಿಗಳು ಮತ್ತು ಹೊರಹೋಗುವ ನಾದ ಹೋಲಿಸಿ, ಅದರ ಮೆದುಳು ಮತ್ತು ಶ್ರವಣೇಂದ್ರಿಯದ ನರಮಂಡಲ, ನಾಗಾಲೋಟದ ಬಾವಲಿಯ ಸುತ್ತಮುತ್ತಲ ಪ್ರದೇಶಗಳ ವಿಸ್ತೃತ ಚಿತ್ರಗಳನ್ನು ಸೃಷ್ಟಿಸುತ್ತದೆ!
ಎಕೋ ಲೋಕೇಷನ್ ಪತ್ತೆ ವಿಧಾನ ಬಾವಲಿಗಳಿಗೆ ಸ್ಥಾನಿಕ ಮತ್ತು ಸಂಪೂರ್ಣ ಕತ್ತಲೆಯಲ್ಲಿ ತನ್ನ ಬೇಟೆಯನ್ನು ವರ್ಗೀಕರಿಸುವ ಶಕ್ತಿ ನೀಡುತ್ತದೆ. ೧೩೦ ಡೆಸಿಬಲ್ ತೀವ್ರತೆಯಲ್ಲಿ ಬಾವಲಿಯ ಕರೆಗಳು ಕೆಲವು ಪ್ರಾಣಿಗಳ ಅತ್ಯಂತ ತೀವ್ರವಾದ ವಾಯುಗಾಮಿ ಧ್ವನಿಗಳನ್ನು ಗ್ರಹಿಸಲು ಈ ಮೂಲಕ ಸಾಧ್ಯ.
ಗಮನಿಸಬೇಕಾದ ಅಂಶ, ಬಾವಲಿಗಳು ಹೊರಡಿಸಿದ ಶಬ್ದ ನಿಗದಿತ ಫ್ರಿಕ್ವೆನ್ಸಿಯಲ್ಲಿ ಹಿಂದಿರುಗಿ, ಮೂಡಿಸುವ ಶಬ್ದ ತರಂಗವನ್ನು ಸ್ಪಷ್ಟವಾಗಿ ಗ್ರಹಿಸುವುದು ಒತ್ತಟ್ಟಿಗೆ! ಜೊತೆಗೆ ತಮ್ಮ ಮತ್ತು ಇತರ ಶಬ್ದ ತರಂಗಗಳೊಡನೆ (ಸಹವರ್ತಿ ಬಾವಲಿಗಳ ಎಖೋಲೇಷನ್ ಕಾಲ್ಸ್) ಮಧ್ಯದ ವ್ಯತ್ಯಾಸವನ್ನು ಗುರುತಿಸಲು ಸಹ ಶಕ್ತವಾಗಿವೆ!
ಕಡಮೆ ಕ್ರಿಯಾ ಆವರ್ತನೆಯ ಪ್ರತಿಧ್ವನಿ (ಎಖೋಲೇಷನ್)ಯಲ್ಲಿ ಬಾವಲಿಗಳು, ತಮ್ಮ ಕರೆ ಮತ್ತು ಹಿಂದಿರುಗಿದ ಪ್ರತಿಧ್ವನಿಗಳನ್ನು ಸಮಯಾಧಾರಿತವಾಗಿ ಬೇರೆಬೇರೆಯಾಗಿ ಗುರುತಿಸುತ್ತವೆ!
ಪ್ರತಿಧ್ವನಿಗಳು ಮರಳುವ ಮೊದಲು ಸಣ್ಣ ಬಾವಲಿ ಹಾರುತ್ತಲೇ ತಮ್ಮ ಸಣ್ಣ ಕರೆಗಳನ್ನು ಮುಗಿಸುತ್ತವೆ! ಏಕೆಂದರೆ, ಈ ಬಾವಲಿಗಳು ತಮ್ಮ ಕರೆ ಹೊರಸೂಸುವ ಸಮಯದಲ್ಲಿ ತಮ್ಮ ಮಧ್ಯಮ ಕಿವಿ ಸ್ನಾಯುಗಳನ್ನು ಸಂಕುಚಿಸಬೇಕು! ಅವು ತಮ್ಮನ್ನು ಕಿವುಡುತನದಿಂದ ತಪ್ಪಿಸಲು ಇದು ತುಂಬಾ ಮುಖ್ಯ.
ಕರೆ ಮತ್ತು ಪ್ರತಿಧ್ವನಿ ನಡುವಿನ ಕಾಲಾವಧಿಯಲ್ಲಿ ಅವುಗಳ ಈ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ಆದ್ದರಿಂದ ಅವು ಸ್ಪಷ್ಟವಾಗಿ ಹಿಂದಿರುಗಿದ ಪ್ರತಿಧ್ವನಿ ಕೇಳಬಹುದು! ಹಿಂದಿರುಗಿದ ಪ್ರತಿಧ್ವನಿಗಳಲ್ಲಿಯ ವಿಳಂಬ, ತಮ್ಮ ಬೇಟೆಯ ವ್ಯಾಪ್ತಿಯ ದೂರ ಮತ್ತು ಸ್ಥಾನವನ್ನು ಅಂದಾಜಿಸುವ ಸಾಮರ್ಥ್ಯವನ್ನು ಬಾವಲಿಗೆ ಒದಗಿಸುತ್ತದೆ!
ಮತ್ತೊಂದು ವಿಶೇಷವೆಂದರೆ, ಬಾವಲಿಗಳು ತಮ್ಮ ಹಾರಾಟದ ವೇಗಕ್ಕೆ ಅನುಗುಣವಾಗಿ ತನ್ನ ಧ್ವನಿ ತರಂಗಗಳನ್ನು ಏರಿಳಿಸಿ, ಬದಲಾಯಿಸಿ ಹೊರಸೂಸುತ್ತವೆ! ಆದ್ದರಿಂದ ಚಲನೆಯಲ್ಲಿದ್ದರೂ ಪ್ರತಿಧ್ವನಿಗಳು ಆವರ್ತನ ಸೂಕ್ತ ಶ್ರವಣಕ್ಕೆ ಅನುಕೂಲವಾಗುವ ವ್ಯಾಪ್ತಿಯಲ್ಲಿಯೇ ಮರಳುತ್ತವೆ! ಹೀಗಾಗಿ ಬಾವಲಿಯೂ ವಿಜ್ಞಾನಿಯೇ!
ಹೀಗಾಗಿ ನಮ್ಮ ದೇಶದಲ್ಲಿರುವ ಬಾವಲಿಗಳ ಪ್ರಭೇದಗಳ ಕುರಿತು ಹೆಚ್ಚಿನ ಅಧ್ಯಯನಗಳು ಸ್ಥಳೀಯವಾಗಿ ನಡೆಯಬೇಕಿದೆ. ಯಾವಾಗಲೋ, ಎಲ್ಲೋ ಜನವಿಜ್ಞಾನಿಗಳು ತಜ್ಞರ ಮಾರ್ಗದರ್ಶನದಲ್ಲಿ ನಡೆಸುವ ಅಧ್ಯಯನಗಳು ಜನರನ್ನು ತಲುಪುತ್ತಿಲ್ಲ. ಬಾವಲಿಗಳ ಅವನತಿಗೆ ಈ ಅಜ್ಞಾನವೂ ಮುಖ್ಯ ಕಾರಣ.
ಬಾವಲಿಗಳನ್ನು ನಮಗಾಗಿ ಉಳಿಸಿಕೊಳ್ಳುವ ಉದ್ದೇಶದಿಂದ, ‘ಬ್ಯಾಟ್ ಕನ್ಸರ್ವೇಷನ್ ಇಂಡಿಯಾ ಟ್ರಸ್ಟ್’ www.batconservationindia.org email: [email protected] ಅನ್ನು ಸ್ಥಾಪಿಸಲಾಗಿದೆ.
ಇಲ್ಲಿ ಬಾವಲಿಗಳ ಕುರಿತು ಸತತ ಅಧ್ಯಯನ ನಡೆಸಲಾಗುತ್ತಿದೆ. ನಾವೂ ಪಾಲ್ಗೊಳ್ಳಬಹುದು. ಬಾವಲಿಗಳ ಕುರಿತು ಮೂಢನಂಬಿಕೆಗಳನ್ನು ದೂರಮಾಡಿ, ಮಿಥ್ಯದ ಆಚೆಗಿನ ಸತ್ಯ ಅರಿಯುವ ಜನವಿಜ್ಞಾನಿಗಳು ನಾವಾಗಬಹುದು! ‘ಹ್ಯಾಪಿ ಬ್ಯಾಟಿಂಗ್’!
ರೈತಸ್ನೇಹಿ – ಕೀಟಭಕ್ಷಕ ಬಾವಲಿ
ಈ ಬಾವಲಿಗಳು, ಬಳಿಕ ತಿಂದ ಹಣ್ಣಿನ ಬೀಜಗಳನ್ನು ಹಿಕ್ಕೆಗಳ ಮೂಲಕ ಬೀಜಪ್ರಸಾರಕ್ಕೆ ಅಣಿಯಾಗುತ್ತವೆ. ನಿಸರ್ಗದ ತೋಟಗರಾಗಿ, ಅವುಗಳ ಇರುನೆಲೆ ಸುತ್ತ ಹಣ್ಣಿನ ಗಿಡ ಮರಗಳ ಹುಟ್ಟಿಗೆ ಮತ್ತು ವೈವಿಧ್ಯತೆ ಕಾಪಾಡಲು ಕಾರಣವಾಗುತ್ತವೆ.
ಕೀಟಗಳನ್ನು ತಿನ್ನುವ ಸಣ್ಣ ಗಾತ್ರದ ಬಾವಲಿಗಳು ಒಂದು ಗಂಟೆಗೆ ಸುಮಾರು ಸಾವಿರ ಸೊಳ್ಳೆ ಹಾಗೂ ಇತರೆ ಕೀಟಗಳನ್ನು ಮುಕ್ಕುತ್ತವೆ! ಇದರಿಂದ ಸೊಳ್ಳೆ, ನೊಣ ಹಾಗೂ ಇತರೆ ಕೀಟಗಳಿಂದ ಬರಬಹುದಾದ, ಹರಡಬಹುದಾದ ರೋಗಗಳನ್ನು ನೈಸರ್ಗಿಕವಾಗಿ ನಿಯಂತ್ರಿಸಿ, ಸಮತೋಲನ ಕಾಪಾಡುತ್ತವೆ. ಕೃಷಿ ಬೆಳೆಗೆ ಕಾಡುವ ಕಾಯಿ ಕೊರಕ ಹುಳು, ರಾತ್ರಿ ವೇಳೆ ಸಂಚರಿಸುವ ಚಿಟ್ಟೆ ಅಥವಾ ಇನ್ನೂ ಲಾರ್ವಾ ಹಂತದಲ್ಲಿರುವ ಚಿಟ್ಟೆಗಳನ್ನು ಹೆಕ್ಕಿ ತಿಂದು ರೈತರ ಬೆಳೆಯ ಅರ್ಧದಷ್ಟು ಕೀಟಹಾನಿಯನ್ನು ನಿಯಂತ್ರಿಸುತ್ತವೆ!.
ಪರಾಗ ಸ್ಪರ್ಶಕ ಬಾವಲಿ
ಹೂಗಳ ಮಕರಂದ ಹೀರುವ ಬಾವಲಿಗಳು, ಮರ ಹಾಗೂ ಗಿಡಗಳಲ್ಲಿ ಪರಾಗಸ್ಪರ್ಶ ಕ್ರಿಯೆಯನ್ನು ನಿರಂತರವಾಗಿ ನಡೆಸುತ್ತವೆ. ಹಣ್ಣಿನ ಇಳುವರಿ ಹೆಚ್ಚುತ್ತದೆ. ಬಾವಲಿಗಳ ಉದರಂಭರಣ ಮಾಡುವಾಗ ಅಲ್ಲಲ್ಲಿ ಹಾಕುವ ಹಿಕ್ಕೆ ಗಿಡಗಳಿಗೆ ಗೊಬ್ಬರ ಹಾಗೂ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಗುಹೆಗಳಿಂದ ಹೆಕ್ಕಿ ತಂದು ಕೃಷಿಭೂಮಿಗೆ ಅವುಗಳ ಹಿಕ್ಕೆ ಹರಡಿ ಗೊಬ್ಬರವಾಗಿ ಬಳಸಿದ ನೆಲಮೂಲ ಜಾಣ್ಮೆ ನಮ್ಮ ಹಿರೀಕರ ಜ್ಞಾನಕೋಶದಲ್ಲಿದೆ!
ನಮ್ಮ ರಾಜ್ಯದಲ್ಲಿ ಕೋಲಾರ ಹಾಗೂ ಬೆಳಗಾವಿಯ ಖಾನಾಪುರದ ಭೀಮಗಡ ವನ್ಯಜೀವಿ ಅಭಯಾರಣ್ಯದ ಗುಹೆಗಳಲ್ಲಿ ಅತಿ ವಿರಳ ಪ್ರಭೇದದ ಬಾವಲಿಗಳಿವೆ. ಅಂದಾಜು ೧೦೦ ೧೫೦ ಉಳಿದಿರಬಹುದು. ಕೋಲಾರದ ಗಣಿಗಾರಿಕೆ ಪ್ರದೇಶದ, ಗುಹೆಯೊಂದರಲ್ಲಿ ಪತ್ತೆಯಾಗಿರುವ ಬಾವಲಿ ಬೇರೆಲ್ಲೂ ಪತ್ತೆಯಾಗಿಲ್ಲ! ಹೀಗಾಗಿಯೇ ಇದಕ್ಕೆ ‘ಕೋಲಾರದ ಎಲೆ ಮೂಗಿನ ಬಾವಲಿ’ ಎಂದು ಹೆಸರಿಡಲಾಗಿದೆ. ಅದು ಅಳಿವಿನ ಅಂಚಿನಲ್ಲಿದೆ.
ಮಧ್ಯಪ್ರದೇಶದ ಜಬಲ್ಪುರದ ಗುಹೆಗಳಲ್ಲಿರುವ ‘ಕಜುರಾಹೊ ಎಲೆಮೂಗಿನ’ ಬಾವಲಿಯೂ, ಕೋಲಾರದ ಇದೇ ಗುಹೆಯಲ್ಲಿ ಪತ್ತೆಯಾಗಿರುವುದು ವಿಶೇಷ!
ವಿಶ್ವದಲ್ಲಿ ಕೇವಲ ಮೂರು ಕಡೆ ಮಾತ್ರ ಕಂಡುಬಂದ, ವಿರಳವಾದ ‘ರಾಟನ್ಸ್ ಫ್ರೀ ಟೇಲ್ಡ್’ ಬಾವಲಿ, ಮೇಘಾಲಯ, ಕಾಂಬೋಡಿಯ ಹಾಗೂ ಖಾನಾಪುರದ ಗುಹೆಗಳಲ್ಲಿ ವಾಸವಾಗಿವೆ. ವಿಲುಪ್ತಿಯ ಅಂಚಿಗೆ ತಲಪಿವೆ.