ಪಳಗಿಸಿದ ಕಾಡಾನೆಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಭಿಕ್ಷೆ ಬೇಡಿಸುವುದು, ಭಾರವಾದ ನಾಲ್ಕು ಕಬ್ಬಿಣದ ಚೂಪಾದ ಮೊನೆ ಇರುವ ಕಾಲ್ಕೋಳಗಳು ಮತ್ತು ಮೈತುಂಬ ಸರಪಳಿ ತೊಡಿಸಿ, ಮೆರವಣಿಗೆಯಲ್ಲಿ ತಾಸುಗಟ್ಟಲೇ ಕಾಯ್ದ ಕೆಂಡದಂತಹ ಟಾರ್ ಅಥವಾ ಕಾಂಕ್ರೀಟ್ ರಸ್ತೆಯ ಮೇಲೆ ಅಂಕುಶದಿಂದ ತಿವಿಯುತ್ತ, ಆಗಾಗ ಕಾಲಿಗೆ ಚೂಪಾದ ಕೋಲಿನಿಂದ ತಿವಿಯುತ್ತ ನಡೆಸುವುದು, ಪ್ರವಾಸೋದ್ಯಮ ಸ್ಥಳಗಳಲ್ಲಿ ಹೊತ್ತು-ಗೊತ್ತಿಲ್ಲದೆ ಜನರನ್ನು ಬೆನ್ನಮೇಲೆ ಕೂರಿಸಿ, ‘ಜಾಲಿ ರೈಡ್’ಮಾಡಿಸುವುದು.. ದಣಿದ ಹೆಣ್ಣಾನೆಗಳು ಅಸಹಕಾರ ತೋರಿದರೆ, ಚೂಪು ಮೊನೆಗಳ ಬಿದಿರು, ಗಳ, ಕೋಲು ಮತ್ತು ಕಬ್ಬಿಣದ ಅಂಕುಶ, ರಾಡ್ಗಳಿಂದ ಸೂಕ್ಷ್ಮ ಭಾಗಗಳಿಗೆ ತಿವಿದು ರಕ್ತ ಒಸರುವಂತೆ ಹೊಡೆಯುವುದು, ಮುಳ್ಳುಗಳಿರುವ ರಿಂಗ್ ಕಾಲಿಗೆ ತೊಡಿಸಿ ನಿಯಂತ್ರಿಸುವುದು…
ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ ಹೇಳುವ ನೀತಿ-ನಿಯಮಗಳು ಆನೆ ಗಾತ್ರದಷ್ಟೇ ಭವ್ಯ ಮತ್ತು ಗಂಭೀರ. ನಡಾವಳಿ ಮಾತ್ರ ಆಡಿಗೆ ಸಮ! ‘ಎಲ್ಲವೂ ಸರಿಯಾಗಿದೆ (ನಮ್ಮ ನಿಯಂತ್ರಣದಲ್ಲಿದೆ) ಮತ್ತು ಸಕಲವೂ ಕುಶಲ’ ಎಂಬಂತೆ ವರದಿ ಸಿದ್ಧಪಡಿಸುವುದು, ಸಲ್ಲಿಸುವುದು, ಆನೆಗಳ ಯೋಗಕ್ಷೇಮ ಮಂಡಳಿಯ ಸಭೆಯನ್ನೇ ಕರೆಯದಿರುವುದು… – ‘ವ್ಯವಸ್ಥೆ’ಯ ಭಾಗವಾಗಿತ್ತು.
ಆನೆ – ಎಂದಾಕ್ಷಣ ನಮ್ಮ ಮನದಲ್ಲಿ ಮೂಡುವ, ಆ ಭವ್ಯ ಚಿತ್ರ ಮತ್ತು ಅನನ್ಯಭಾವ ಶಬ್ದಗಳಿಗೆ ನಿಲಕದ್ದು!
ನಮ್ಮ ಪಾರಿಸಾರಿಕ ಭಿತ್ತಿಯಲ್ಲಿ ಅತ್ಯಂತ ಸೂಕ್ಷ್ಮ, ಅಗಣಿತ ಜಾಣ್ಮೆ ಮತ್ತು ಸಂವೇದನೆಯ ನಿಸರ್ಗದ ತೋಟಿಗರೆಂದರೆ ಆನೆ!
ರಾಷ್ಟ್ರೀಯ ವನ್ಯಜೀವಿ ಯೋಗಕ್ಷೇಮ ಮಂಡಳಿಯಿಂದ ‘ಸೆರೆಹಿಡಿದು ಪಳಗಿಸಲಾದ ಕಾಡಾನೆಗಳ ಯೋಗಕ್ಷೇಮ ಖಾತ್ರಿಪಡಿಸುವ ಸಮಿತಿ’ಯ ಸದಸ್ಯನಾಗಿ, ಧಾರವಾಡ, ಗದಗ-ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಗಳಿಗೆ ನೇಮಕಗೊಂಡ ಗೌರವ ವನ್ಯಜೀವಿ ಪರಿಪಾಲಕ ಹಾಗೂ ಯೋಗಕ್ಷೇಮ ಅಧಿಕಾರಿ ‘ಹ್ಯಾವೋ’ ಆಗಿ ನಾನು ಕಾರ್ಯನಿರ್ವಹಿಸುತ್ತಿದ್ದ ಹೊಸತು.
ಅನೇಕರು ಧ್ವನಿ ಎತ್ತಿದ ಪರಿಣಾಮ, ಎರಡು ದಶಕಗಳ ಹಿಂದಿನ ಸ್ಥಿತಿ ಈಗಿಲ್ಲ. ಬಹಳಷ್ಟು ಸುಧಾರಣೆಗಳು ಸಾಧ್ಯವಾಗಿವೆ. ಮನುಷ್ಯತ್ತ್ವದ ನಡೆ ಈ ನೆಲದ ಯಾವುದೇ ಕಾನೂನಿಗಿಂತ ದೊಡ್ಡದು ಎಂಬ ಭಾವ, ಸ್ವಭಾವವಾಗಲು ದಶಕಗಳೇ ಉರುಳಿಹೋದವು!
ಇಂತಹ ನಿರಾಶಾದಾಯಕ ಬೆಳವಣಿಗೆಗಳ ಮಧ್ಯೆ, ಕಪ್ಪಾದ ಮೋಡಗಳಿಗೆ ಬೆಳ್ಳಿಯ ಅಂಚು ತೊಡಿಸಿದಂತೆ, ಆಶಾದಾಯಕ ನಡೆಯೊಂದು, ಪಳಗಿಸಿದ ಆನೆಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಅದೇ ಸಕ್ರೆಬೈಲು ಆನೆ ಬಿಡಾರ.
ಶಿವಮೊಗ್ಗದಿಂದ ತೀರ್ಥಹಳ್ಳಿ ರಸ್ತೆಯ ಮೇಲೆ, ಕೇವಲ ೧೪ ಕಿಲೋ ಮೀಟರ್ ದೂರದಲ್ಲಿದೆ – ‘ಸಕ್ರೆಬೈಲು ಆನೆ ಬಿಡಾರ’.
ಸೆರೆ ಹಿಡಿಯಲಾದ ಕಾಡಾನೆಗಳನ್ನು ಪಳಗಿಸಿ, ಪೋಷಿಸುವ ರಾಜ್ಯದ ಐತಿಹಾಸಿಕ ಆನೆ ಬಿಡಾರವನ್ನು ಅರಣ್ಯ ಇಲಾಖೆಯ ವನ್ಯಜೀವಿ ಸಂರಕ್ಷಣಾ ವಿಭಾಗ ನೋಡಿಕೊಳ್ಳುತ್ತಿದೆ.
ಬಿಡಾರ ಹೂಡಿರುವ ಮಾವುತರು ಆರೋಗ್ಯಾಕಾಂಕ್ಷಿ, ಅಪೌಷ್ಟಿಕತೆಯಿಂದ ಬಳಲುವ, ವಯೋವೃದ್ಧತೆ ಮತ್ತು ವಿಶೇಷ ಆರೈಕೆಯ ಅಗತ್ಯವುಳ್ಳ ಆನೆಗಳನ್ನೂ ಸಹ ಇಲ್ಲಿ ಮಕ್ಕಳಂತೆ ಸಾಕಿ, ಸಲಹುತ್ತಾರೆ.
ನಿಸರ್ಗದ ಅದ್ಭುತ ಜೀವಿ ಮಾತೃಪ್ರಧಾನ ಕುಟುಂಬದ ಆನೆಯ ಬಗ್ಗೆ ತಿಳಿಯಲು ಮತ್ತು ಮುಟ್ಟಿ ನೋಡಿ, ಸ್ನಾನ ಮಾಡಿಸಿ, ಆಹಾರ ಒದಗಿಸಿ ಖುಷಿಪಡಬಹುದಾದ ಅತ್ಯಪರೂಪದ ಅವಕಾಶ ಇಲ್ಲಿ ಪ್ರವಾಸಿಗರಿಗೆ, ವನ್ಯಜೀವಿ ಆಸಕ್ತರಿಗೆ, ವಿಶೇಷವಾಗಿ ಮಕ್ಕಳಿಗೆ ಲಭ್ಯ.
೧೯೬೦ರಲ್ಲಿ ಸಕ್ರೆಬೈಲು ಆನೆ ಬಿಡಾರವನ್ನು ಪುಂಡಾನೆ ಪಳಗಿಸುವ ತರಬೇತಿ ಶಿಬಿರವಾಗಿ ಅರಣ್ಯ ಇಲಾಖೆ ಪ್ರಾರಂಭಿಸಿತು. ಕಾಡಿನಿಂದ ನಾಡಿಗೆ ನುಗ್ಗುವ ಆನೆಗಳನ್ನು ಬಂಧಿಸಿ ತಂದು, ಸೂಕ್ತ ತರಬೇತಿ ನೀಡಿ ಅತ್ಯಂತ ಕಾಳಜಿ ಮತ್ತು ಪ್ರೀತಿಯಿಂದ ಆರೈಕೆ ಮಾಡುವ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಕ್ರೆಬೈಲು, ಕಾಡಾನೆ ತರಬೇತಿ ಶಾಲೆ!
ಆನೆ ಬಂತೊಂದಾನೆ..!
ಯಾವೂರ ಯಾನೆ..?
ಇಲ್ಲಿಗ್ಯಾಕೆ ಬಂತು..?
ಈ ಪುಟ್ಟ ಪದ್ಯದ ಮೋಡಿಗೆ ಒಳಗಾಗದವರಾರು? ಮೊದಲ ಬಾರಿಗೆ ಆನೆ ಕಂಡಾಗಲಂತೂ, ಅನುಭವಿಸಿದ ಆ ಭಯಮಿಶ್ರಿತ ಪುಳಕ ಶಬ್ದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ?
ಹಾಸನದ ಸಕಲೇಶಪುರದಲ್ಲಿ ಹಾಗೂ ಕೊಡಗಿನ ಯಾವಕಪಾಡಿ ಬಳಿ ಕಾಡಾನೆಗಳ ಆಟಾಟೋಪ ನೋಡಿದ್ದ ನಾನು ತನ್ನದಲ್ಲದ ತಪ್ಪಿಗೆ, ‘ನರಹಂತಕ’, ‘ಪುಂಡಾನೆ’, ‘ಕೊಲೆಗಾರ ಮಖನಾ’.. ಒಂದೆರೆಡಲ್ಲದ ವಿಶೇಷಣಗಳನ್ನು ನಾವೆಲ್ಲ ಬಳಸಿ, ವಿಶ್ಲೇಷಿಸಿದ ‘ನವ ಮಾಧ್ಯಮ ಅನಾಗರಿಕತೆ’ ಪರಿಣಾಮವಾಗಿ, ಶಾಂತ, ಸಾಧು ಸ್ವಭಾವದ ಆನೆ, ಮನುಷ್ಯನಷ್ಟೇ ಭೀಕರವೆಸನಿಸತೊಡಗಿದ ಪರಿಗೆ ದಂಗಾಗಿದ್ದೇನೆ.
ಸಹಜೀವನ; ಬದುಕಿ – ಬದುಕಲು ಬಿಡಿ
ನೆಲಮೂಲದ ಪಾರಂಪರಿಕ ಜ್ಞಾನ ಆಶ್ರಯಿಸಿ, ತೋಟ, ಗದ್ದೆಗಳ ಬದುವಿಗೆ ಘಾಟು ಮೆಣಸಿಕಾಯಿ ಸಸಿ ನೆಟ್ಟು, ತೆಂಗಿನ ನಾರಿನ ಕಾತಿ ಹಗ್ಗಕ್ಕೆ, ತಂಬಾಕು ಸವರಿ ಬೆಂಕಿ ಹಚ್ಚಿ ರಾತ್ರಿಯಿಡೀ ಹೊಗೆಯಾಡುವಂತೆ ಮಾಡಿ, ಆನೆಗಳು ತೋಟ-ಗದ್ದೆಗೆ ನುಗ್ಗಲು ಬಳಸುವ ಹಾದಿಯಲ್ಲಿ ಕಟ್ಟಿಟ್ಟು, ಊರಿಗೆ ಬರದಂತೆ ಮಾಡಿದ ಯಶಸ್ವಿ ಪ್ರಯೋಗಗಳಿಗೆ ತಲೆದೂಗಿದ್ದೂ ಇದೆ.
ಆನೆ ನಡೆದಿದ್ದೇ ಹಾದಿ ಈಗ ಅಲ್ಲ..
ಕಾಡಿನ ಅಂಚಿನ ಟ್ರೆಂಚ್ ದಾಟಲು ಹೋಗಿ ಕಾಲು ಉಳುಕಿಸಿಕೊಂಡ, ವಿದ್ಯುತ್ ತಂತಿ ಸ್ಪರ್ಶಿಸಿ ಸತ್ತ, ಗುಂಡು ತಿಂದ, ಉರುಳಿಗೆ ಸಿಲುಕಿದ, ರೈಲ್ವೇ ಕಂಬಿ ದಾಟಲು ಹೋಗಿ ಸಿಕ್ಕಿಕೊಂಡು ಒದ್ದಾಡಿ ಪ್ರಾಣಬಿಟ್ಟ ಆನೆಗಳ ಬಗ್ಗೆ ಅಭ್ಯಸಿಸಿದ ನನಗೆ ಅವುಗಳ ಬಗ್ಗೆ ತುಂಬಾ ಅನುಕಂಪ. ಈ ನುಡಿಚಿತ್ರ ಸಿದ್ಧಪಡಿಸುವ ವೇಳೆಗೆ ಕಳೆದ ೧೪ ದಿನಗಳಲ್ಲಿ (ಜೂನ್ ೨೮ರ ವರೆಗೆ) ನಮ್ಮ ರಾಜ್ಯದಲ್ಲಿ ಒಟ್ಟು ೧೯ ಆನೆಗಳು ಅಸುನೀಗಿದ ವರದಿಗಳು ಪ್ರಕಟವಾಗಿವೆ. ತುಂಬ ಕೇವಲ ಮತ್ತು ಕ್ಷುಲ್ಲಕ ಕಾರಣಗಳಿಗಾಗಿ ಮಾನವನಿರ್ಮಿತ ಅವಘಡಗಳಿಗೆ ಆನೆಯಂತಹ ದೈತ್ಯ ಪ್ರಾಣಿಗಾಗಿ ಮೀಸಲಿರಿಸಿದ ‘ಆನೆ ಪಥ’ ಕಾರಿಡಾರ್ನಲ್ಲೇ ಅನಾಯಾಸ ಪ್ರಾಣತೆತ್ತ ಪರಿಗೆ ವಿಹ್ವಲಗೊಂಡಿದ್ದೇವೆ. ಇನ್ನು ಲೆಕ್ಕಕ್ಕೆ ಸಿಗದ ಪುಟ್ಟ ಪ್ರಾಣಿಗಳ ಸಾವು ಲೆಕ್ಕಿಸಿದವರಾರು?
ಕೊಡಗಿನ ದಿ. ಕೊಡಂದೇರ್ ಮಾದಪ್ಪ ಚಿಣ್ಣಪ್ಪ (ಕೆ.ಎಂ. ಚಿಣ್ಣಪ್ಪ) ಎಂಬ ನಾಗರಹೊಳೆ-ಬಂಡಿಪುರವನ್ನು ದಶಕಗಳ ಕಾಲ ಜೀವ ಒತ್ತೆ ಇಟ್ಟು ಕಾಯ್ದ ಅರಣ್ಯಾಧಿಕಾರಿ ಪರಿಸರ ಶಿಬಿರಗಳಲ್ಲಿ ಸದೈವ ಹೇಳುತ್ತಿದ್ದ ಮಾತು: “ನನಗೆ ಯಾವ ದಿನವೂ ಹಬ್ಬ-ಹರಿದಿನಗಳಿಲ್ಲ! ನಿತ್ಯವೂ ಸೂತಕವೇ. ಕಾರಣ, ನನ್ನ ಕಾಡಿನ ಯಾವ ಮೂಲೆಯಲ್ಲಿ ಯಾವುದೋ ಒಂದು ಪ್ರಾಣಿ-ಪಕ್ಷಿ ಮನುಷ್ಯರಿಂದಾಗಿ ಸಾವಿಗೀಡಾಗುತ್ತದೆ..” ಹಿರಿಯ ಲೇಖಕ ತಿರು ಟಿ.ಎಸ್. ಗೋಪಾಲ ನಿರೂಪಿತ, ಆತ್ಮಕಥೆ ‘ಕಾಡಿನೊಳಗೊಂದು ಜೀವ..’ ಮಕ್ಕಳಿಗೆ ಓದಿಸಬೇಕು.
ನಾವು ಸಂಕಲ್ಪಿಸಿದಂತೆ..
ಈ ಮಧ್ಯೆ ಎರಡು ದಿನಗಳ ಕೆಳಗೆ ಕರ್ತವ್ಯದ ನಿಮಿತ್ತ ನಾನು ಶಿವಮೊಗ್ಗೆಗೆ ಹೋಗಿದ್ದೆ. ಬಹಳ ದಿನಗಳ ಆಸೆ ಗಾಜನೂರು ವಲಯದ ಸಕ್ರೆಬೈಲು ಆನೆ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಆನೆ ಪಳಗಿಸುವ ರೀತಿ ನೋಡಬೇಕು ಎಂಬುದು.
ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ದಾರಿ ಮೇಲೆ ೧೪ ಕಿಲೋಮೀಟರ್ ದೂರದಲ್ಲಿದೆ ಸಕ್ರೆಬೈಲು ಸಾಕಾನೆ ಶಿಬಿರ. ನಾನು, ನನ್ನ ಶ್ರೀಮತಿ ಮಹಾಲಕ್ಷ್ಮಿ, ಮಿತ್ರ ವಿಜಯ್ ಕುಮಾರ್ ಹಾಗೂ ಅಕ್ಷತಾ ದಂಪತಿಗೆ ಬಹುದಿನಗಳ ನಮ್ಮೀ ಕನಸು ತಿಳಿಸಿದೆವು. ಕಳೆದ ೧೫ ವರ್ಷಗಳಿಂದ ಅವರು ಶಿವಮೊಗ್ಗೆಯ ನಿವಾಸಿಗಳು. ‘ಆನೆ ಹಬ್ಬ’ಕ್ಕೆ ಒಮ್ಮೆ ಸಕ್ರೆಬೈಲಿಗೆ ಅವರು ಹೋಗಿದ್ದು ಬಿಟ್ಟರೆ ಮತ್ತೆಂದೂ ಅವರಿಗೆ ಈ ಅವಕಾಶ ಒದಗಿ ಬಂದಿರಲಿಲ್ಲ!
ಹೀಗಿತ್ತು ಪ್ರವಾಸ!
ಮಿತ್ರ ವಿಜಯ್ ಕಾರು ಅತಿಥಿಗಳನ್ನು ಹೊತ್ತು ವಿಜಯನಗರಕ್ಕೆ ಹೋಗಿತ್ತು. ಅನಿವಾರ್ಯವಾಗಿ ರಿಕ್ಷಾದಲ್ಲಿ ರವಿ ಅಣ್ಣನ ಸಾರಥ್ಯದಲ್ಲಿ ನಾವು ಸಕ್ರೆಬೈಲಿಗೆ ಹೊರಟೆವು. ತುಂತುರು ಮಳೆ. ಮೋಡ ಕವಿದ ವಾತಾವರಣ. ಇಬ್ಬನಿ ಸೂಸಿದ ಹೊಂಜು. ಹಕ್ಕಿಗಳ ಕಲರವ ಗದ್ದೆಗಳಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಅಡಕೆ, ಬಾಳೆ ಮತ್ತು ತೆಂಗಿನ ತೋಟಗಳು. ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು, ಹಾಗಿತ್ತು ಮಲೆನಾಡಿನ ಆ ದೃಶ್ಯ ವೈಭವ.
ಕಾರ್ನೆಲ್ ರ್ನಿಥಾಲಜಿ ಲ್ಯಾಬ್ ಸಿದ್ಧಪಡಿಸಿದ ‘ಇ-ಬರ್ಡ್ ಆ್ಯಪ್’ ತೆರೆದು ಪ್ರವಾಸದುದ್ದಕ್ಕೂ ನನಗೆ ಕಾಣಸಿಕ್ಕ ೨೫ಕ್ಕೂ ಹೆಚ್ಚು ಹಕ್ಕಿಗಳನ್ನು ದಾಖಲಿಸುತ್ತ ಹೊರಟೆ. ‘ಏನಣ್ಣ ಅದು..?’ ತಂಗಿ ಅಕ್ಷತಾ ಪ್ರಶ್ನೆ. ಆಕೆಗೆ ನನ್ನ ಕೆಲಸ ವಿವರಿಸಿದ್ದಾಯಿತು. ಆ್ಯಪ್ ಡೌನಲೋಡ್ ಮಾಡಿಕೊಂಡು ‘ಸಿಟಿಜನ್ ಸೈನ್ಸ್ ಇನಿಶಿಯೇಟಿವ್’ಗೆ ‘ಸಿಟಿಜನ್ ಸೈಂಟಿಸ್ಟ್’ ಆಗಿ ಸ್ವಯಂಸೇವಕಿಯಂತೆ ತನ್ನ ಸುತ್ತಮುತ್ತಲಿನ ಹಕ್ಕಿಗಳ ಬಗ್ಗೆ ದಾಖಲಿಸುವುದನ್ನು ಹೇಳಿಕೊಟ್ಟೆ. ಕಾಣಿಸಿದ ಪಕ್ಷಿಗಳ ಬಗ್ಗೆ ತೋರಿಸಿ ಆಹಾರ-ವಿಹಾರಗಳ ಬಗ್ಗೆ ವಿವರಿಸಿದೆ.
ಅಷ್ಟರೊಳಗೆ ಬಂತು ಸಕ್ರೆಬೈಲು!
ಬೆಳಗ್ಗೆ ೮:೩೦ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಇಲ್ಲಿ ಪಳಗಿಸಿದ ಆನೆಗಳನ್ನು ನಾವು ನೋಡಬಹುದು. ಹಿಂದಿನ ದಿನ ಕಾಡಿಗೆ ಬಿಟ್ಟಿದ್ದ ೧೮ ಆನೆಗಳು ಸಾಲುಸಾಲಾಗಿ ಅರ್ಧಗಂಟೆಯ ಅಂತರದಲ್ಲಿ ಮೈಯೆಲ್ಲ ಕೊಳೆಯಾಗಿಸಿಕೊಂಡು ಗಜಗಾಂಭೀರ್ಯದಲ್ಲಿ ಜಂಗಲ್ ಲಾಡ್ಜಸ್ ಕುಟೀರಗಳ ಆವರಣದಿಂದ ಕ್ಯಾಂಪ್ನತ್ತ ಹೆಜ್ಜೆ ಹಾಕಿದವು.
ಬಂಗಾಳಿ ಮತ್ತು ಉರ್ದು ಮಿಶ್ರಿತ ಭಾಷೆಯಲ್ಲಿ ಮಾವುತರು, ಕಾವಾಡಿಗಳು ಆನೆಗಳಿಗೆ ನಿರ್ದೇಶನ ನೀಡುತ್ತಾರೆ. ವಿಶೇಷವೆಂದರೆ, ಚಾಚೂ ತಪ್ಪದೆ ಆನೆಗಳು ವಿದ್ಯಾರ್ಥಿಯಂತೆ ಪಾಲಿಸುವುದು! ‘ರ್ರ..ರ್ರೆ…’ ತಕ್ಷಣ ಆನೆ ನಿಂತಿತು. ‘ಧಕ್ಕ..ಲೆ..’ ಸೊಂಡಿಲೆತ್ತಿ ನಮಸ್ಕರಿಸಿ, ನಮ್ಮನ್ನು ಆಶೀರ್ವದಿಸಿತು!
‘ಸೈಡ್ ಆಗಿ ಸರ್..’
ಅಷ್ಟರಲ್ಲೇ ಎರಡು ತಿಂಗಳ ಕೆಳಗೆ ಜನಿಸಿದ ಮರಿಯಾನೆ ಅಮ್ಮನೊಂದಿಗೆ ಬಂತು. ಮಾವುತ ಮೇಲೆ ಕುಳಿತಲ್ಲಿಂದ ಎಚ್ಚರಿಸಿದ ‘ಸೈಡ್ ಆಗಿ ಸರ್. ಮರಿಗೆ ಮಾತು ಬರದು… ಕೇಳದು..!’ ನಾನು ಮುದ್ದಾದ ಮರಿ ಮುಟ್ಟಲೇಬೇಕು ಎಂದು ಹಟಕ್ಕೆ ಬಿದ್ದು ಸಮೀಪ ಹೋದೆ. ಅಮ್ಮನ ಬಡದಿಂದ ಸೊಂಡಿಲೆತ್ತಿ ಅಡ್ಡಡ್ಡ ಅಲುಗಾಡಿಸುತ್ತ ದೂಡಲು ಬಂತು. ಆಯತಪ್ಪಿ ಬಿದ್ದಿದ್ದರೆ, ನಾನು ಅಪ್ಪಚ್ಚಿಯಾಗುತ್ತಿದ್ದೆ! ಎರಡು ವರ್ಷಗಳವರೆಗೆ ಮರಿ ಆನೆ ಉಂಡಾಡಿ ಗುಂಡ. ತರಬೇತಿ ಶಾಲೆಗೆ ಅವನಿಗೆ ಅಡ್ಮಿಷನ್ ಇಲ್ಲ!
ಪ್ರಸಂಗಾವಧಾನ ಮೆರೆದ ಮಾವುತ, ಮರಿಯನ್ನು ಅಮ್ಮನ ಮೂಲಕ ನಿಯಂತ್ರಿಸಿದರು. ಸೊಂಡಿಲನ್ನು ಬಳಸಿ, ತನ್ನತ್ತ ಅಮ್ಮ ಆನೆ, ಉಡಾಳ್ ಮಗನನ್ನು ಎಳೆದುಕೊಂಡಳು. ನಾನು ದಿಗಿಲಾಗಿದ್ದೆ. ಗಮನಿಸುತ್ತಿದ್ದ ನನ್ನ ಶ್ರೀಮತಿ ಕಿಟಾರ್ ಎಂದು ಕಿರುಚಿದ್ದಕ್ಕೆ ಉಳಿದವರೆಲ್ಲ ಗಾಬರಿ!
ಮೇಲಿಂದ ಮಾವುತರು ನನಗೆ ಹೇಳಿದರು: “ಸ್ವಾಮೀ, ಕೈಯೋ.. ಕಾಲೋ.. ಮುರೀತಿತ್ತು ಇವತ್ತು ನಿಮ್ದು… ನಸೀಬಿದೆ..’ ಅಂದ್ರು ಹುಸಿಗೋಪದಲ್ಲಿ.
ತುಂಗಾ ಪಾನಂ; ಅಲ್ಲ ಸ್ನಾನಂ!
ತುಂಗಾ ನದಿತೀರದಲ್ಲಿ ಗಾಜನೂರು ಅಣೆಕಟ್ಟೆಯ ಹಿನ್ನೀರಿನಲ್ಲಿ ಮೀಯಲು ನಿತ್ಯ ಬೆಳಗ್ಗೆ ಆನೆಗಳನ್ನು ಕಾಡಿನಿಂದ ಮರಳಿಸಿ ಸರಪಳಿ ಬಿಗಿದು ತರಲಾಗುತ್ತದೆ. ಕೊಕ್ಕೆಯಂತಹ ಅಂಕುಶ ಅವುಗಳ ಕಿವಿಗೆ ನೇತು ಹಾಕಿದ್ದರೆ, ಬಿದಿರಿನ ಚೂಪಾದ ಕೋಲು, ಕಾಲಿಗೆ ತಿವಿದು ನಿಯಂತ್ರಿಸಲು ಮಾವುತರು ಬಳಸುತ್ತಾರೆ.
ನೀರಿನಲ್ಲಿ ತುಸು ದೂರ ಈಜಿ ದಂಡೆಗೆ ಬಂದು ದೊಡ್ಡ ಗುಡ್ಡ ಕುಸಿದಂತೆ ಆನೆಗಳು ಒರಗಿದಾಗ, ದೊಡ್ಡ ಅಲೆ ಬಂದು ದಡಕ್ಕೆ ಅಪ್ಪಳಿಸುತ್ತದೆ! ಎಂದೂ ಆನೆ ಮುಟ್ಟದ ನಾವು, ಮಾವುತರು ಕರೆದಾಗ ಸಮೀಪ ಹೋಗಿ ಸ್ಪರ್ಶಿಸಿದೆವು. ಎಂಥಾ ಒರಟು ಮೈ! ಸೂಜಿಯಂತೆ ಚುಚ್ಚುವ ಹರಿತಾದ ಕೂದಲು! ಸೊಂಡಿಲು ಎತ್ತ್ತಿಡಲಾಗಲಿಲ್ಲ, ನಮ್ಮ ಕೈಯಲ್ಲಿ! ಬ್ರಷ್ ಬಳಸಿ ಮೈ ಉಜ್ಜಿದ್ದೇ ಉಜ್ಜಿದ್ದು! ಒಂದು ಗಂಟೆ ಉಜ್ಜಿ ನಾವೇ ಸುಸ್ತಾದೆವು. ಗಜರಾಜ ಆರಾಮಾಗಿ ಪವಡಿಸಿದ್ದ! ನಮ್ಮ ಕೈ ಸೋತು ಹೋದವು.
ದಂಡೆಯ ಮೇಲೆ ತುಸು ಕೂತು ವಿಶ್ರಮಿಸಿ ಸುಧಾರಿಸಿಕೊಂಡೆವು. ಬಳಿಕ ಮರಿ ಆನೆ ಮೀಯಿಸುವ ಕೆಲಸ. ಅದರ ಕಣ್ಣು, ಪುಟ್ಟ ಕೋರೆ ಹಲ್ಲು, ಬಾಲ, ಕಾಲು… ಮುಟ್ಟಿಮುಟ್ಟಿ ನೋಡಿದೆವು. ಅನಾಮತ್ ಆಗಿ ಹಿಂಬದಿಯ ಕಾಲು ಸರಿಸಿತು. ಅಷ್ಟಕ್ಕೇ ನಾನು ಆಯತಪ್ಪಿ ಬಿದ್ದೆ! ಇನ್ನು ಒದ್ದಿದ್ದರೆ ಗತಿ?
ಮಾವುತರ ನಿರ್ದೇಶನದಂತೆ ಸೊಂಡಿಲಲ್ಲಿ ನೀರೆತ್ತಿಕೊಂಡು ನಮಗೆಲ್ಲ ಪ್ರೋಕ್ಷಿಸಿದವು ಆನೆಗಳು! ಅಶೀರ್ವದಿಸಿದಂತೆ, ತಲೆ ಮೇಲೆ ಸೊಂಡಿಲಿಟ್ಟು ಹರಸಿದವು. ಅಪ್ಪಿಕೊಂಡವು.. ನಿಡುಗಾಲದ ನಮ್ಮ ಪರಿಚಯವಿದ್ದಂತೆ, ಆಪ್ತರು ಎಂಬಂತೆ, ಪ್ರೀತಿಯಿಂದ ನಡೆಸಿಕೊಂಡವು.
ನೇತ್ರಾವತಿ, ಕುಂತಿ, ಭರತ, ಅರ್ಜುನ.. ಹೀಗೆ ೧೮ ಆನೆಗಳಿಗೆ ಹೆಸರಿಡಲಾಗಿದೆ. ಆಯಾ ಹೆಸರು ಕರೆದಾಗ ಆನೆಗಳು ಪ್ರತಿಕ್ರಿಯಿಸಿ ಘೀಳಿಡುತ್ತವೆ. ೫ ಗಂಟೆಯ ಈ ಕಾರ್ಯಕ್ರಮದ ಬಳಿಕ ಮತ್ತೆ ಮಾವುತರು ಆನೆಗಳನ್ನು ಮರಳಿ ಕಾಡಿಗೊಯ್ದು ಮೇಯಲು ಬಿಡುತ್ತಾರೆ. ಒಲ್ಲದ ಮನಸ್ಸಿನಿಂದ ನಾವು ಅಲ್ಲಿಂದ ಹೊರಟೆವು. ಆನೆಗಳನ್ನು ಹಿಂಬಾಲಿಸಿ. ಅವು ಕಾಡಿನತ್ತ; ನಾವು ಕಾಂಕ್ರೀಟ್ ಬೆಂಗಾಡಿನತ್ತ.
ಅರಣ್ಯ ಇಲಾಖೆ ವಿಧಿಸುವ ಶುಲ್ಕದ ವಿವರ
ಸಕ್ರೆಬೈಲು ಆನೆ ಶಿಬಿರದ ಸ್ವಾಗತ ಕಮಾನಿನ ಪಕ್ಕದಲ್ಲಿ ಟಿಕೆಟ್ ಕೌಂಟರ್ ಇದೆ. ಪ್ರತಿ ವಾಹನಕ್ಕೆ ರೂ.೨೦ ಹಾಗೂ ಪ್ರತಿಯೊಬ್ಬರಿಗೆ ಪ್ರವೇಶ ಧನ ತಲಾ ರೂ. ೨೦. ಆನೆ ಸವಾರಿಗೆ, ತಲಾ ೧೦೦ ರೂಪಾಯಿ ಶುಲ್ಕ. ಆನೆಗಳಿಗೆ ಸ್ನಾನ ಮಾಡಿಸುವಿರಾದರೆ, ತಲಾ ೧೦೦ ರೂಪಾಯಿ. ಕ್ಯಾಮೆರಾಗಳಿಗೆ ಪ್ರತ್ಯೇಕವಾಗಿ ೧೦೦ ರೂಪಾಯಿ ಶುಲ್ಕ ಅರಣ್ಯ ಇಲಾಖೆ ವಿಧಿಸುತ್ತದೆ.
ಸಕ್ರೆಬೈಲ್ ಆನೆ ಶಿಬಿರದ
ಹೆಚ್ಚಿನ ಮಾಹಿತಿಗೆ: ೯೧-೮೦-೪೦೫೫೪೦೫೫
ಮಿಂಚಂಚೆ: [email protected]
ಆನ್ಲೈನ್ ಬುಕಿಂಗ್ ಲಿಂಕ್: