ಫೇಸ್ಬುಕ್ ದಿನವೂ ಓದುವುದಿದೆ. ಅದರಲ್ಲೂ ತಿಂಡಿತೀರ್ಥಗಳ ವಿಲೇವಾರಿ ಅತಿ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಸಾಗುತ್ತಿರುತ್ತದೆ. ಇಂತಹ ಒಂದು ತಿಂಡಿಯ ಬಗೆಗೆ ಫೇಸ್ಬುಕ್ನಲ್ಲಿ ಒಂದು ಪ್ರಶ್ನೆ ನನಗೆ ದೊರೆಯಿತು. ಅಂದ್ರೆ ತಿಂಡಿಗೊಂದು ಫೊಟೋ ಇರ್ಲಿಲ್ಲ, ಮಾಡುವ ವಿಧಾನವೂ ಗೊತ್ತಿಲ್ಲ. `ಪಜೆಮಡಿಕೆ’ ಎಂಬ ತಿಂಡಿಯ ಬಗ್ಗೆ ಗೊತ್ತಿದ್ದವರು ತಿಳಿಸಿ – ಎಂಬುದು ಆ ಸರಳ ಪ್ರಶ್ನೆ. ಪಜೆಮಡಿಕೆ ತುಳು ಶಬ್ದ: ಪಜೆ = ಹಸೆ = ಚಾಪೆ. ಮಡಿಕೆ = ಮಡಿಸಿಟ್ಟದ್ದು.
ಅರ್ಥವೇನೋ ತಿಳಿಯಿತು. ಆದರೆ ಈ ತಿಂಡಿಯ ಬಗೆಗೆ ನಾನೂ ಕೇಳಿದ್ದಿಲ್ಲ. ಬಹುಶಃ ಬಾಳೆಲೆಯನ್ನು ಚಾಪೆಯಂತೆ ಸುತ್ತಿ ಅದರೊಳಗೇನಾದರೂ ಹಿಟ್ಟು ತುಂಬಿಸಿ ಅಟ್ಟಿನಳಗೆಯೆಂಬ ಉಗಿಪಾತ್ರೆಯಲ್ಲಿ ಬೇಯಿಸುವುದಾಗಿರಬೇಕು ಎಂಬ ಉತ್ತರ ನನ್ನಿಂದ ಹೋಯಿತು. ಬಾಳೆಲೆಯಿಂದ ಪತ್ರೊಡೆ, ಕಡುಬು, ಹಲಸಿನ ಹಣ್ಣಿನ ಗೆಣಸೆಲೆ ಇವೆಲ್ಲ ನನಗೂ ಗೊತ್ತಿರುವಂಥದ್ದೇ. ತುಳುವರೇ ಅಧಿಕ ಸಂಖ್ಯಾತರು ನಮ್ಮ ಬಾಯಾರು ಗ್ರಾಮದಲ್ಲಿ. ಈ ತಿಂಡಿ ನನಗೆ ಗೊತ್ತಿಲ್ಲದೇ ಹೋಯಿತೇಕೆ ಎಂಬ ಚಿಂತೆಯೂ ಬಾರದಿದ್ದೀತೇ……
* * *
ಮಳೆಮುಗಿಲು ಹಾಕುತ್ತ ಇದೆ, ತೋಟಕ್ಕೆ ಹೋಗಿ ಸುಮ್ಮನೇ ನುಸಿ ಕಚ್ಚಿಸಿಕೊಂಡು ಬರಲೇಕೆ, ಹೀಗೆಲ್ಲ ಯೋಚಿಸುತ್ತ ಇದ್ದಾಗ ನೆರೆಮನೆಯ ಹೇಮಕ್ಕ ಬೇವಿನಸೊಪ್ಪು ಕೊಯ್ದು ತರಲು ಬಂದರು. ತೋಟದಿಂದ ವಾಪಸ್ ಬರುವಾಗ ಕೈಯಲ್ಲಿ ಒಂದಿಷ್ಟು ಬಾಳೆಲೆಯೂ ಬಂದಿತು. ಪತ್ರೊಡೆಗೆ ಬೇಕಾದಂತಹ ಕಾಡುಕೆಸುವಿನ ಸೊಪ್ಪು ಇನ್ನೂ ನೆಲದಿಂದ ಮೇಲೆದ್ದಿಲ್ಲ, ಹೀಗಿರುವಾಗ….
ಬಾಳೆಲೆಯಲ್ಲಿ ನಾಳೆ ಏನು ತಿಂಡಿ?
ಪಜೆಮಡಿಕೆ ಮಾಡೋಣಾಂತ…
ಪಜೆಮಡಿಕೆಯಾ, ಅದನ್ನು ಹೇಗೆ ಮಾಡ್ತೀರಾ?
ಅಯ್ಯೋ, ಗೊತ್ತಿಲ್ವಾ….. ಅಕ್ಕಿ ನುಣ್ಣಗೆ ರುಬ್ಬಬೇಕು, ಹೀಗೆ ಬಾಳೆ ಮೇಲೆ ತೆಳ್ಳಗೆ ಹರಡಬೇಕು……
ಯಾವ ಅಕ್ಕೀ……?
ಕುಸುಬಲಕ್ಕಿ, ಅದೇ ಚೆನ್ನಾಗಿರ್ತದೆ….
ಹೌದಾ, ನಾನೂ ನಾಳೆ ಸಂಜೆ ತಿಂಡಿಗೆ ಮಾಡಿ ನೋಡ್ತೇನೆ….
ಮತ್ತೇ, ಅದಕ್ಕೆ ತೆಂಗಿನತುರಿ, ಬೆಲ್ಲ ಹಾಕಿ ತಿನ್ಬೇಕೂ……
ಓ, ನಾವು ತೆಳ್ಳವು (ನೀರುದೋಸೆ) ತಿನ್ನೂದೂ ಹಾಗೇನೇ…… ಗೊತ್ತಾಯ್ತು ಬಿಡಿ….. ಅಂದಿದ್ದಕ್ಕೆ ಹೇಮಕ್ಕನೂ ಸಮಾಧಾನಪಟ್ಟುಕೊಂಡು ಮನೆಗೆ ಹೋದರು.
ನಾಳೆ ಬೆಳಗಾದ ಮೇಲೆ ಅವರ ಮನೆಗೆ ಹೋಗಿ ಪಜೆಮಡಿಕೆಯ ಸೊಬಗನ್ನು ಕೆಮರಾದಲ್ಲಿ ಸೆರೆಹಿಡಿದು ತರುವ ಯೋಜನೆ ಹಾಕುತ್ತ ಮನೆಯೊಳಗೆ ನಡೆದೆ. ಬೆಳಗಾದೊಡನೆ ಲಗುಬಗೆಯಿಂದ ನನ್ನ ತಿಂಡಿ-ತೀರ್ಥಗಳ ವ್ಯವಸ್ಥೆ ಮುಗಿಸಿ, ಇನ್ನೂ ಏಳದ ಮಗಳಿಗಾಗಿ ಟೇಬಲ್ ಮೇಲೆ ಮುಚ್ಚಿಟ್ಟು, ನಮ್ಮವರ ಅನುಮತಿಯನ್ನೂ ಪಡೆದು ಹೇಮಾ ಚಿದಾನಂದ್ ಮನೆಗೆ ಹೋದೆ. ನಾನು ಬರಬಹುದೆಂಬ ನಿರೀಕ್ಷೆಯೇನೂ ಇಟ್ಟುಕೊಂಡಿರದಿದ್ದ ಹೇಮಾ ಹಾಗೂ ಅವರ ಪತಿ ಉಲ್ಲಸಿತರಾಗಿ ಸ್ವಾಗತಿಸಿದರು.
ಆಯ್ತಾ ತಿಂಡಿ ತಿಂದು?
ಇವ್ರದ್ದಾಯ್ತು, ನಂದು ಇನ್ನು ಆಗ್ಬೇಕಷ್ಟೆ.
ನೀವು ಕಾಫಿ ಕುಡೀರಿ, ಪಜೆಮಡಿಕೆ ಫೋಟೋ ತೆಗೆದ್ಬಿಟ್ಟು ಹೋಗ್ತೇನೆ…..
ಹೇಮಕ್ಕ ಲಗುಬಗೆಯಿಂದ ಒಳಹೋಗಿ ಪಜೆಮಡಿಕೆಗಳನ್ನು ತಂದು ಬಿಡಿಸಿಟ್ಟರು. ಇದನ್ನು ಹೀಗೆ ಬಾಳೆಯಲ್ಲೇ ಬೆಲ್ಲಸುಳಿ ಸೇರಿಸಿಕೊಂಡು ತಿನ್ನಲಿಕ್ಕೆ ಚೆನ್ನಾಗಿರ್ತದೆ. ಇವ್ರಿಗೆ ಶುಗರ್ ಉಂಟಲ್ಲ, ಅದಕ್ಕೆ ಚಟ್ನಿ ಮಾಡಿದ್ದು. ಗಸಿ ಇದ್ರೂ ಸಾಕಾಗ್ತದೆ…… ಹೇಳುತ್ತಾ ಹೋದಂತೆ ಫೋಟೋ ಐ-ಫೋನ್ ಒಳಗೆ ಬಂದಾಗಿತ್ತು.
ಇಂತಿಪ್ಪ ಪಜೆಮಡಿಕೆ ನಮ್ಮ ಅಡುಗೆ ತಜ್ಞೆ ಕಡಂಬಿಲ ಸರಸ್ವತಿ ಬರೆದ `ಅಡಿಗೆ’ ಪುಸ್ತಕದಲ್ಲಿ ಇಲ್ಲವಾಯಿತೇಕೆ ಎಂಬ ಚೋದ್ಯದಿಂದ ಪಾಕಪುಸ್ತಕ ಬಿಡಿಸಿ ಪುಟ ತಿರುವಿ ಹಾಕಲಾಗಿ “ಒಹೊಹೋ… ಇದೆ ಇದೆ; `ಅಕ್ಕಿ ಸುರುಳೆ’ ಎಂಬ ನಾಮಾಂಕಿತದಲ್ಲಿ!”
ಅಕ್ಕಿ ಸುರುಳೆ ಮಾಡಲು ಬೆಳ್ತಿಗೆ ಅಕ್ಕಿ ಬೇಕು ಎಂದು ಅದರಲ್ಲಿದೆ. ನುಣ್ಣಗೆ ಅಕ್ಕಿ ಅರೆಯಬೇಕು. ಹಿಟ್ಟು ದೋಸೆ ಹಿಟ್ಟಿನಂತೆ ದಪ್ಪವಾಗಿರಬೇಕು.
ರುಚಿಗೆ ಉಪ್ಪು ಇರಬೇಕು.
ಬಾಳೆಲೆಯೂ ಊಟದ ಬಾಳೆಲೆಯಷ್ಟು ಉದ್ದ ಇರಲಿ.
ಬಾಳೆಯನ್ನು ಚೆನ್ನಾಗಿ ಒಲೆಯಲ್ಲಿ ಅಥವಾ ಬಿಸಿನೀರಿನಲ್ಲಿ ಅದ್ದಿ ಬಾಡಿಸಿ ಇಡಬೇಕು.
ಒಂದು ಸೌಟು ಹಿಟ್ಟನ್ನು ಬಾಡಿಸಿದ ಬಾಳೆಲೆ ಮೇಲೆ ತೆಳ್ಳಗೆ ಹರಡುತ್ತಾ ಬನ್ನಿ. ಹಿಟ್ಟು ತೆಳ್ಳಗೆ ಹಚ್ಚಿದಷ್ಟೂ ರುಚಿಯೂ ಜಾಸ್ತಿ. ಬಾಳೆಲೆಯ ಆ ತುದಿಯಿಂದ ಈ ತುದಿ ತನಕ ಹಿಟ್ಟು ಸವರಿ ಆಯ್ತೇ, ಚಾಪೆ ಸುತ್ತಿದಂತೆ ಸುರುಳಿ ಮಾಡಿದ್ರಾ, ಇನ್ನು ಅಟ್ಟಿನಳಗೆ(ಇಡ್ಲಿ ಪಾತ್ರೆ)ಯ ಒಳಗೆ ಇಡುತ್ತಾ ಬನ್ನಿ.
ನೆನಪಿರಲಿ, ಹೀಗೆ ಸುರುಳಿಗಳನ್ನು ಇಡುವಾಗ ಅಟ್ಟಿನಳಗೆಯಲ್ಲಿ ನೀರು ಗಳಗಳನೆ ಕುದಿಯುತ್ತಿರಬೇಕು.
ಬೆಳ್ತಿಗೆ ಅಕ್ಕಿಯಲ್ವೇ, ಹತ್ತೇ ನಿಮಿಷದಲ್ಲಿ ಬೇಯುವಂಥದ್ದು!
ಆಯ್ತು, ತಿನ್ನುವುದು ಹೇಗೆ?
ಸುರುಳೆಗಳನ್ನು ಅಥವಾ ಪಜೆಮಡಿಕೆಗಳನ್ನು ಬಿಡಿಸಿಟ್ಟು ಸುರುಳಿಗಳನ್ನು ತೆಗೆದಿಡಿ, ಹೇಗೂ ತುಂಡು ಮಾಡಬೇಕಲ್ಲ, ಪುಡಿ ಪುಡಿಯಾದರೂ ಚಿಂತೆಯಿಲ್ಲ, ಇದನ್ನು ಬಾಣಲೆಯ ಒಗ್ಗರಣೆಗೆ ಹಾಕುವುದು ಮುಂದಿನ ಸಿದ್ಧತೆ.
ಕಾಯಿತುರಿ, ಪುಡಿಬೆಲ್ಲ ಹಾಕಬೇಕು.
ಸೌಟಿನಲ್ಲಿ ತಿರುವಿ, ಬಿಸಿ ಬಿಸಿಯಾಗಿ ಕೆಳಗಿಳಿಸಿ ಬಿಸಿ ಇರುವಾಗಲೇ ತಿನ್ನಿ.
ಇದ್ಯಾವುದೂ ಬೇಡಾ…
ಚಟ್ನಿ ಅಥವಾ ಗಸಿ ಮಾಡಿ ತಿನ್ನಿ…. ಸರಿಯಾ!
ಬಾಳೆಯ ಬದಲು ಅರಸಿಣ ಎಲೆಯಿಂದಲೂ ಮಾಡಬಹುದು, ಒಳಗೆ ಬೆಲ್ಲ ಕಾಯಿತುರಿ ತುಂಬಿಸಿಟ್ಟು ಬೇಯಿಸಿ, ತುಂಬಾ ಪರಿಮಳ ಹಾಗೂ ಸ್ವಾದಿಷ್ಟ. ಆದರೆ ಆಗ ಪಜೆಮಡಿಕೆ ಬದಲಾಗಿ ಗೆಣಸೆಲೆ ಅಥವಾ ಸಿಹಿಕಡುಬು ಆಗುತ್ತದೆ. ನಾಗರಪಂಚಮಿಯಂದು ಅರಸಿಣ ಎಲೆಯಿಂದ ಈ ತಿಂಡಿಯನ್ನು ಮಾಡುವ ವಾಡಿಕೆ ಇದೆ.
ಅರಸಿಣ ಎಲೆಯ ಗೆಣಸೆಲೆಯನ್ನು ಬರೆಯಹೊರಟಾಗ ಇಂತಹದೇ ಇನ್ನೊಂದು ತಿಂಡಿ ಜ್ಞಾಪಕಕ್ಕೆ ಬಂದಿತು. ಇದು ಬಾಲ್ಯದ ನೆನಪು, ರಜಾ ದಿನಗಳಲ್ಲಿ ಕಾಸರಗೋಡಿನಿಂದ ಊರಿನ ತೋಟದ ಮನೆಗೂ ಹೋಗ್ತಿದ್ದೆವು. ಕೆಲವೊಮ್ಮೆ ನಾನೂ ಹಾಗೂ ನನ್ನ ತಮ್ಮ ವೆಂಕಟೇಶ್ ಜೊತೆಯಾಗಿ ಹೋಗ್ತಾ ಇದ್ದಿದ್ದೂ ಇತ್ತು. ಕುಂಬ್ಳೆಯಲ್ಲಿ ಬಸ್ ಬದಲಿಸಿ ಬದಿಯಡ್ಕ ದಾರಿಯ ಇನ್ನೊಂದು ಬಸ್ ಹತ್ತಿ ಮುಗು ಸ್ಟ್ಯಾಂಡ್ ಬಂದಾಗ ಇಳಿದು ಬೀಸ ಬೀಸ ನಡೆದರೆ ಹಳ್ಳಿಮನೆ ತಲಪಬಹುದಾಗಿತ್ತು. ಕುಂಬ್ಳೆಯಲ್ಲಿ ಇಳಿದ ಕೂಡಲೇ ನನ್ ತಮ್ಮ ಹೊಟೇಲ್ಗೆ ಹೋಗುವಾ ಅಂತಿದ್ದ. ಹೇಗೂ ನಡೆಯೋದಿದೆ; ಹೊಟ್ಟೆ ಗಟ್ಟಿ ಮಾಡಿಕೊಂಡೇ ಮುಂದಿನ ಹೆಜ್ಜೆ ಅಲ್ವಾ?
`ಹೋಟಲ್ ಸತ್ಯನಾರಾಯಣ’ದಲ್ಲಿ ಕುಳಿತುಕೊಂಡು ನಾವು ತಿನ್ನುತ್ತ ಇದ್ದಿದ್ದು ಮಸಾಲೆ ದೋಸೆಯೂ ಅಲ್ಲ, ಗೋಳಿಬಜೆಯೂ ಅಲ್ಲ. ಎಲೆ ಅಡೆ ಎಂಬ ಗೆಣಸೆಲೆ ತಿಂಡಿ ತಿಂದು ಸಂತೃಪ್ತರಾಗಿ ಹೊರಡುತ್ತಿದ್ದೆವು. ಇದು ಕೂಡಾ ಪಜೆಮಡಿಕೆಯ ಇನ್ನೊಂದು ರೂಪಾಂತರ. ಇದರಲ್ಲಿ ಕುಸುಬಲಕ್ಕಿಯನ್ನು ನುಣ್ಣಗೆ ಅರೆದ ಹಿಟ್ಟನ್ನು ಬಾಳೆಯಲ್ಲಿ ಹರಡಿಟ್ಟು, ಒಳಗೆ ಬೆಲ್ಲ ಕಾಯಿತುರಿ ಸೇರಿಸಿದ ಅವಲಕ್ಕಿಯನ್ನು ತುಂಬಿಟ್ಟು ಹಬೆಯಲ್ಲಿ ಬೇಯಿಸಿದರಾಯಿತು. ಮನೆ ತಿಂಡಿಯಷ್ಟೇ ಹಿತವಾದ ಇಂತಹ ತಿಂಡಿಗಳು ಇಂದಿನ ಫೈವ್ ಸ್ಟಾರ್ ಹೊಟೇಲುಗಳಲ್ಲಿ ಸಿಕ್ಕೀತೇ?
ಬಾಳೆಎಲೆಯನ್ನು ಬಳಸಿ ಮಾಡುವಂತಹ ಈ ಸಾಂಪ್ರದಾಯಿಕ ಖಾದ್ಯಗಳನ್ನು ಬೇಯಿಸಲು ಉಪಯೋಗಿಸುವ ಪಾತ್ರೆಗೆ ದಕ್ಷಿಣ ಕನ್ನಡಿಗರು ಅಟ್ಟಿನಳಗೆ ಅನ್ನುವುದು ವಾಡಿಕೆ. ತುಳುಭಾಷಿಕರ ಪಾಲಿಗೆ ಇದು ಅಟ್ಟಿಕರ. `ಅಟಿಲ್’ ಶಬ್ದವು `ಅಡುಗೆ’ಗೆ ಪರ್ಯಾಯ ಪದವಾಗಿರುತ್ತದೆ. ಹೊಸಗನ್ನಡದಿಂದ ಇದು ಮರೆಯಾಗಿದೆ. ಆದರೂ ಹಿಂದಿನ ಶೈಲಿಯ ಮಾತುಗಾರಿಕೆ ನಮ್ಮಲ್ಲಿ ಇನ್ನೂ ಉಳಿದುಕೊಂಡಿದೆ. ಅಡುಗೆಮನೆಯನ್ನು `ಅಟ್ಟುಂಬೊಳ’ ಎಂದೇ ಹೇಳುವವರು ನಾವು.
ಅಟ್ಟು+ಉಂಬ+ಒಳ = ಅಡುಗೆ ಮಾಡಿ ಉಣ್ಣುವ ಒಳ ಕೋಣೆ. ಹೀಗೆ ಅರ್ಥ ವಿವರಣೆ ಬಂದೀತು.
ಭಾಷಾ ಶೈಲಿ ಒಂದೊಂದು ಪ್ರದೇಶದಲ್ಲಿ ಭಿನ್ನ ರೂಪ ತಳೆಯುವುದಕ್ಕೆ ಅಟ್ಟಿನಳಗೆಯೇ ನಿದರ್ಶನ. ಹವ್ಯಕರ ಕನ್ನಡದಲ್ಲಿಯೇ ಪುತ್ತೂರು, ಸುಳ್ಯ ಕಡೆ ಇದೇ ಅಟ್ಟಿನಳಗೆ ಕಡುಬಿನ ಕಳಸಿಗೆ ಅನ್ನಿಸಿಕೊಂಡಿದೆ. ಮನೆಯ ಸದಸ್ಯರ ಸಂಖ್ಯೆಗನುಗುಣವಾಗಿ ಅಟ್ಟಿನಳಗೆಯ ಗಾತ್ರ, ಸಿರಿವಂತರ ಮನೆಯಲ್ಲಿ ತಾಮ್ರದ ಅಟ್ಟಿನಳಗೆಗಳು, ಬಹುಶಃ ಪುರಾತನ ಕಾಲದಲ್ಲಿ ಮಣ್ಣಿನ ಅಟ್ಟಿನಳಗೆಗಳೂ ಇದ್ದಿರಬಹುದು, ನಾವು ಕಂಡಿಲ್ಲ.
ಮನೆಮಾತು ಮತ್ತೇನೋ ಆಗಿರುವ ಮುರಳೀ ಮೇಸ್ಟ್ರು ಬಂದಿದ್ದರು.
ನೀವೇನಂತೀರಾ ಈ ಪಾತ್ರೆಗೆ?
ಇಡ್ಲಿ ಪಾತ್ರೆ ಎಂದು ಉತ್ತರಿಸಿದ ಮೇಸ್ಟ್ರು, ಒಂದು ಫೋಟೊ ಹಾಕಿ ತೋರಿಸಿದರೆ ಒಳ್ಳೆಯದು ಎಂಬ ಸಲಹೆಯನ್ನೂ ಕೊಟ್ಟರು. ಆಧುನಿಕ ಶೈಲಿಯಲ್ಲಿ ಸ್ಟೀಮ್ ಕುಕ್ಕರ್ ಎನ್ನದೆ ವಿಧಿಯಿಲ್ಲ. ಭಾರತೀಯರ ಪಾಕಶಾಸ್ತ್ರ ವೈಜ್ಞಾನಿಕ ತಳಹದಿಯನ್ನೂ ಹೊಂದಿದೆ. ಅಟ್ಟಿನಳಗೆಯಲ್ಲಿ ಬಾಳೆಲೆ ಸುತ್ತಿ ಬೇಯಿಸಿಟ್ಟ ಇಂತಹ ಕಡುಬುಗಳು ಹಲವಾರು ದಿನ ಹಾಳಾಗದೆ ಉಳಿಯುವಂತಹವು. ದಿನಕ್ಕೊಮ್ಮೆ ಅಟ್ಟಿನಳಗೆಯನ್ನು ಒಲೆಗೇರಿಸಿದರಾಯಿತು. ಈಗ ನಾವು ಪ್ರತಿದಿನವೂ ಉಪಯೋಗಿಸುವ ಪ್ರೆಶರ್ ಕುಕ್ಕರ್, ಇದೇ ಅಟ್ಟಿನಳಗೆಯ ಆಧುನಿಕ ಆವಿಷ್ಕಾರ.?