ಒಡಿಸ್ಸಾದಲ್ಲಿರುವ ಪುರಿ ಜಗನ್ನಾಥ ಮಂದಿರ, ಕೋನಾರ್ಕದ ಸೂರ್ಯ ಮಂದಿರ ಜಗತ್ಪ್ರಸಿದ್ಧ; ಭಕ್ತರು, ಇತಿಹಾಸಪ್ರೇಮಿಗಳು, ವಾಸ್ತುಶಿಲ್ಪ ಪ್ರಿಯರು ಜೀವನದಲ್ಲಿ ಒಂದು ಬಾರಿಯಾದರೂ ಸಂದರ್ಶಿಸಲು ಬಯಸುವ ಸ್ಥಳವಿದು. ಒರಿಸ್ಸಾದ ರಾಜಧಾನಿ ಭುವನೇಶ್ವರದಲ್ಲೂ ಹಲವಾರು ಮಂದಿರಗಳಿವೆ. ಇವು ಭಕ್ತರ, ಪ್ರವಾಸಿಗರ ಮನಸೆಳೆದರೂ ಹೆಚ್ಚೇನೂ ಗೌಜೆಬ್ಬಿಸದೆ ಹೋಗಿರಬಹುದು; ಆದರೆ ಮಂದಿರಗಳ ಇತಿಹಾಸ ಅರಿತಾಗ ಅದರ ವಾಸ್ತುಶಿಲ್ಪದ ಸೌಂದರ್ಯ ನೋಡಿದಾಗ ಮೂಕವಿಸ್ಮಿತರಾಗುವುದು ಖಂಡಿತ. ಇಂತಹದ್ದೇ ಅನುಭವ ನಮಗಾಗಿದ್ದು ಇತ್ತೀಚೆಗೆ ಭುವನೇಶ್ವರದಲ್ಲಿರುವ ಮಂದಿರಗಳಿಗೆ ಭೇಟಿ ಕೊಟ್ಟಾಗ. ಭುವನೇಶ್ವರವನ್ನು ‘ಭಾರತದ ಮಂದಿರಗಳ ನಗರ’ ಎಂದೂ ಕರೆಯುತ್ತಾರೆ.
ಅಂದ ಹಾಗೆ ಒರಿಸ್ಸಾಗೆ ಕಳಿಂಗ ರಾಜ್ಯವೆಂದು ಹೆಸರಿತ್ತು, ಮೌರ್ಯ ಸಾಮ್ರಾಟ ಅಶೋಕನೊಡನೆ ನಡೆದ ಇಲ್ಲಿನ ಯುದ್ಧ ಇತಿಹಾಸ ಪ್ರಸಿದ್ಧ.
ಇಲ್ಲಿರುವ ಹೆಚ್ಚಿನ ಮಂದಿರಗಳು ೭ನೆಯ ಶತಮಾನದಿಂದ ೧೩ನೆಯ ಶತಮಾನದವರೆಗೆ ಕಟ್ಟಿದಂತವು. ಮಂದಿರಗಳ ವಾಸ್ತುಶಿಲ್ಪ ಕಳಿಂಗ ಶೈಲಿಯಲ್ಲಿದೆ ಹಾಗೂ ಮರಳು ಕಲ್ಲಿನಿಂದ ಕಟ್ಟಲಾಗಿದೆ. ಶತಮಾನಗಳು ಸಂದರೂ ಸುಸ್ಥಿತಿಯಲ್ಲೇ ಇವೆ, ಮಂದಿರಗಳ ನಿರ್ವಹಣೆಯಂತೂ ಅತ್ಯುತ್ತಮ. ಮಂದಿರಗಳಲ್ಲಿ ನಮ್ಮಲ್ಲಿರುವಂತೆ ಪ್ರದಕ್ಷಿಣೆ ಹಾಕಲು ವ್ಯವಸ್ಥೆ ಇಲ್ಲ, ಗರ್ಭಗುಡಿಗೆ ತಾಗಿಕೊಂಡು ಮುಂಭಾಗದಲ್ಲಿ ನಿಂತು ಪ್ರಾರ್ಥಿಸಲು ಸಭಾಂಗಣವಿರುತ್ತದೆ, ಇದನ್ನು ಜಗಮೋಹನ ಎಂದೂ ಕರೆಯುತ್ತಾರೆ.
ಲಿಂಗರಾಜ ಮಂದಿರ
ಲಿಂಗರಾಜ ಮಂದಿರವನ್ನು ಭುವನೇಶ್ವರದ ಅತ್ಯಂತ ಪವಿತ್ರ ಹಾಗೂ ದೊಡ್ಡ ಮಂದಿರ ಎನ್ನಲಾಗುತ್ತಿದೆ. ಇಲ್ಲಿನ ಗರ್ಭಗುಡಿಯಲ್ಲಿದೆ ವಿಶಿಷ್ಟ ಶಿವಲಿಂಗ, ಇದರ ಎತ್ತರ ಕೇವಲ ೮ ಇಂಚು ಮತ್ತು ಸುತ್ತಳತೆ ೮ ಅಡಿ, ಶಿವಲಿಂಗವು ಸ್ವಯಂಭೂ ಎನ್ನಲಾಗುತ್ತಿದೆ. ಇದು ಮಂದಿರಗಳ ಸಂಕೀರ್ಣ – ಇಲ್ಲಿ ಸುಮಾರು ೫೦ ಚಿಕ್ಕ, ಪುಟ್ಟ ಮಂದಿರಗಳಿವೆ.
ಮಂದಿರದ ವಾಸ್ತುಶಿಲ್ಪ ಕಳಿಂಗ ಶೈಲಿಯಲ್ಲಿದೆ. ಗರ್ಭಗುಡಿಗೆ ಜೋಡಿಸಿಕೊಂಡು ಮುಂಭಾಗದಲ್ಲಿ ಸಭಾಂಗಣವಿದೆ. ಮಂದಿರದ ಪಕ್ಕದಲ್ಲಿ ಭೋಗಮಂದಿರ (ಅಡುಗೆಮನೆ) ಹಾಗೂ ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ನಾಟ್ಯ ಮಂಟಪವಿದೆ. ಮುಖ್ಯ ಮಂದಿರದ ಒಟ್ಟು ಎತ್ತರ ೧೮೦ ಮೀಟರ್. ಒಂದು ರೀತಿಯಲ್ಲಿ ಸಿಲಿಂಡರ್ ಆಕಾರದಲ್ಲಿದ್ದು, ಅದರ ಮೇಲೆ ನೆಲ್ಲಿಕಾಯಿ ಆಕಾರದ ರಚನೆ ಇದೆ. ಅದರ ಮೇಲೆ ಕಲಶ, ತುದಿಯಲ್ಲಿ ಹಾರಾಡುತ್ತಿರುವ ಧ್ವಜ. ಮಂದಿರದ ಹೊರಗೋಡೆಯ ಮೇಲೆ ಸಾಕಷ್ಟು ಕೆತ್ತನೆಗಳಿವೆ. ಗರ್ಭಗುಡಿಗೆ ಹಿಂದೂ ಧರ್ಮದವರು ಮಾತ್ರ ಪ್ರವೇಶಿಸಬಹುದು ಎಂದು ಹೇಳಲಾಗುತ್ತಿದೆ. ಬಿಂದು ಸರೋವರ ಮಂದಿರದ ಪುಷ್ಕರಣಿ.
ಮಂದಿರವನ್ನು ೧೧ನೆಯ ಶತಮಾನದಲ್ಲಿ ‘ಸೋಮವಂಶ’ದ ರಾಜ ‘ಜಜಾತಿ ಕೇಶರಿ’ ಎನ್ನುವವನು ಕಟ್ಟಿಸಿದನಂತೆ. ಇಲ್ಲಿರುವ ಸ್ವಯಂಭೂ ಶಿವಲಿಂಗವನ್ನು ೭ನೆಯ ಶತಮಾನದಿಂದಲೇ ಪೂಜಿಸಲಾಗುತ್ತಿತ್ತು ಎಂದೂ ಹೇಳಲಾಗುತ್ತಿದೆ.
ನಾವು ಭೇಟಿಕೊಟ್ಟಿದ್ದು ಸೋಮವಾರ ಬೆಳಗ್ಗೆ, ಭಕ್ತಾದಿಗಳ ದೊಡ್ಡ ಸಾಲೇ ಇತ್ತು. ಸಭಾಂಗಣದಲ್ಲಿ ಹೋಮ, ಹವನಗಳು ನಡೆಯುತ್ತಿತ್ತು. ಮೊಬೈಲ್ ಮತ್ತು ಕ್ಯಾಮರ ಅಂತೂ ಹೊರಗಡೆಯೇ ಬಿಟ್ಟು ಹೋಗಬೇಕು.
ಅನಂತ ವಾಸುದೇವ ಮಂದಿರ
ಪುರಿ ಜಗನ್ನಾಥ ಮಂದಿರದಂತೆ ಇಲ್ಲಿನ ಮುಖ್ಯ ದೇವರು ಕೃಷ್ಣ, ಸುಭದ್ರ ಮತ್ತು ಬಲರಾಮ. ಇಲ್ಲಿನ ಆಚಾರ, ವಿಚಾರಗಳೂ ಪುರಿ ಜಗನ್ನಾಥ ಮಂದಿರದಂತೆಯೇ ಇದೆ. ಭುವನೇಶ್ವರದಲ್ಲಿ ಹೆಚ್ಚಿನ ಮಂದಿರಗಳು ಶೈವ ಪಂಥದ್ದಾಗಿದ್ದರೂ ಇದು ವೈಷ್ಣವ ಪಂಥದವರದ್ದು.
ಕಳಿಂಗ ಶೈಲಿಯಲ್ಲಿದೆ ಮಂದಿರಗಳು. ಗರ್ಭಗುಡಿಯ ಗೋಡೆ ಮತ್ತು ಶಿಖರದಲ್ಲಿ, ಸಭಾಂಗಣದ ಗೋಡೆಗಳಲ್ಲಿ ಧಾರ್ಮಿಕ ಕಥೆಗಳು, ದೇವ, ದೇವಿಯರನ್ನು ಕೆತ್ತಲಾಗಿದೆ. ಕಟ್ಟಿಗೆ ಒಲೆಯಲ್ಲಿ ಮಣ್ಣಿನ ಪಾತ್ರೆಯಲ್ಲಿ ತಯಾರಾಗುವ ಭಗವಂತನಿಗರ್ಪಿಸುವ ನೈವೇದ್ಯ ಬಹಳ ವಿಶಿಷ್ಟ, ಇದನ್ನು ‘ಅಬಧ’ ಎನ್ನುತ್ತಾರೆ.
ಇದನ್ನು ೧೩ನೆಯ ಶತಮಾನದಲ್ಲಿ ‘ಗಂಗ ರಾಜವಂಶ’ದ ‘ರಾಣಿ ಚಂದ್ರಿಕಾದೇವಿ’ಯು ಕಟ್ಟಿಸಿದಳಂತೆ. ಮಂದಿರ ಕಟ್ಟುವ ಮೊದಲೇ ಇಲ್ಲಿ ವಿಷ್ಣುವಿನ ಪೂಜೆ ನಡೆಯುತಿತ್ತಂತೆ. ಮತ್ತೆ ೧೭ನೆಯ ಶತಮಾನದಲ್ಲಿ ಮರಾಠರು ಇದನ್ನು ನವೀಕರಿಸಿದರಂತೆ.
ರಾಜಾರಾಣಿ ಮಂದಿರ
ಒಂದು ಕಾಲದಲ್ಲಿ ಶಿವನ ಮಂದಿರವಾಗಿತ್ತಾದರೂ ಈಗ ದೇವರ ಮೂರ್ತಿಯಿಲ್ಲ ಹಾಗಾಗಿ ಇಲ್ಲಿ ಪೂಜೆಯೂ ನಡೆಯುತ್ತಿಲ್ಲ. ಈಗ ಸಾಂಸ್ಕöÈತಿಕ, ಕಲಾ ಚಟುವಟಿಕೆಗಳ ತಾಣವಾಗಿದೆ.
ಮಂದಿರವನ್ನು ಕೆಂಪು ಮತ್ತು ಹಳದಿ ಮರಳು ಕಲ್ಲಿನಿಂದ ಕಟ್ಟಿದ್ದಾರೆ. ಇದನ್ನೇ ಸ್ಥಳೀಯ ಭಾಷೆಯಲ್ಲಿ ರಾಜಾರಾಣಿ ಎಂದು ಕರೆಯುತ್ತಾರೆ. ಇದರ ಗೋಡೆಯ ಮೇಲೆ ಮಹಿಳೆ ಮತ್ತು ಉನ್ಮಾದದ ಕೆತ್ತನೆಗಳಿದ್ದು ಇದನ್ನು ‘ಪ್ರೇಮ ಮಂದಿರ’ ಎಂದೂ ಕರೆಯುತ್ತಾರೆ. ಇದೂ ಕಳಿಂಗ ಶೈಲಿಯಲ್ಲಿ ಕಟ್ಟಿದ ಮಂದಿರ, ಗರ್ಭಗುಡಿಗೆ ಜೋಡಿಸಿಕೊಂಡು ಮುಂಭಾಗದಲ್ಲಿ ಸಭಾಂಗಣವಿದೆ. ಸಭಾಂಗಣದ ಮುಚ್ಚಿಗೆಯು ಪಿರಮಿಡ್ ಶೈಲಿಯಲ್ಲಿದ್ದು ಗರ್ಭಗುಡಿಯು ಶಿಖರದ ಹಾಗಿದ್ದು ತುದಿಯಲ್ಲಿ ನೆಲ್ಲಿಕಾಯಿಯಂತಹ ರಚನೆಯಿದೆ. ಗರ್ಭಗುಡಿಯ ಗೋಡೆಯಲ್ಲಿ ಅತ್ಯಂತ ಸುಂದರ ಕೆತ್ತನೆಯಿದೆ. ಗರ್ಭಗುಡಿಯ ಎತ್ತರ ಸುಮಾರು ೧೮ ಮೀಟರ್. ಮಂದಿರದ ಎದುರುಭಾಗದ ಗೋಡೆಯಲ್ಲಿ ಸಿಂಹ, ನಾಗರಾಜ ಮತ್ತು ನಾಗರಾಣಿಯ ಕೆತ್ತನೆ ಇದೆ. ಇವು ಮಂದಿರದ ರಕ್ಷಣೆಗಾಗಿವೆಯಂತೆ. ಮುಂಬಾಗಿಲಿನ ಅಕ್ಕ-ಪಕ್ಕದಲ್ಲಿ ದ್ವಾರಪಾಲಕರಾದ ಚಂಡ, ಪ್ರಚಂಡರ ವಿಗ್ರಹಗಳೂ ಇದೆ. ಹಾಗೆಯೇ ಮುಂಬಾಗಿಲಿನ ಮೇಲ್ಭಾಗದಲ್ಲಿ ನವಗ್ರಹಗಳನ್ನು ಕೆತ್ತಿದ್ದಾರೆ. ಮಂದಿರದ ಗೋಡೆಗಳಲ್ಲಿರುವ ಶಿವ ಮತ್ತು ಪಾರ್ವತಿಯ ಕಲ್ಯಾಣದ ಕೆತ್ತನೆಗಳೂ ಮನಸೆಳೆಯುತ್ತವೆ. ಮತ್ತೊಂದು ವಿಶೇಷ ಸಂಗತಿ ಎಂದರೆ ಮಂದಿರದ ಎಂಟು ದಿಕ್ಕಿನಲ್ಲಿ ಎಂಟು ದೇವತೆಗಳಾದ ಕುಬೇರ, ಇಂದ್ರ, ಯಮ, ಅಗ್ನಿ, ವಾಯು, ನರ್ರಿತಿ, ವರುಣ, ಶಿವನ ಮೂರ್ತಿಗಳಿವೆ.
ಇದನ್ನು ೧೧ನೆಯ ಶತಮಾನದಲ್ಲಿ ‘ಸೋಮವಂಶಿ ರಾಜವಂಶ’ದ ರಾಜ ‘ಇಂದ್ರರಥ’ ಎನ್ನುವವನು ಕಟ್ಟಿಸಿದನಂತೆ. ಮೊದಲಿಗೆ ಇದನ್ನು ಇಂದ್ರೇಶ್ವರ ಮಂದಿರವೆಂದೂ ಕರೆಯುತ್ತಿದ್ದರಂತೆ. ಇದು ಮಂದಿರ ಮಾತ್ರವಲ್ಲ, ಒಂದು ಕಾಲದಲ್ಲಿ ಇದು ಒರಿಸ್ಸಾದ ರಾಜ, ರಾಣಿ ಮಲಗುವ ಸ್ಥಳವೂ ಆಗಿತ್ತು ಎನ್ನುವವರೂ ಇದ್ದಾರೆ.
ಸುತ್ತಲೂ ಮರ, ಗಿಡಗಳಿದ್ದು ವಾತಾವರಣ ತಂಪಾಗಿ ಹಸುರಾಗಿದೆ. ಕತ್ತಲಾಗುತ್ತಿದ್ದಂತೆ ನಾಲ್ಕು ದಿಕ್ಕಿನಿಂದಲೂ ಫೋಕಸ್ ಲೈಟನ್ನು ಹತ್ತಿಸಿದ್ದು, ಅದರ ಬೆಳಕಿನಲ್ಲಿ ಮಂದಿರದ ಸೌಂದರ್ಯ ಇಮ್ಮಡಿಯಾಗುತ್ತದೆ. ಜನವರಿ-ಫೆಬ್ರುವರಿಯಲ್ಲಿ ಮ್ಯೂಸಿಕ್ ಫೆಸ್ಟಿವಲ್ ನಡೆಯುತ್ತದೆ. ಮಂದಿರದ ಉಸ್ತುವಾರಿಯನ್ನು ಆರ್ಕ್ಯಾಲೆಜಿಕಲ್ ಸರ್ವೆ ಆಫ್ ಇಂಡಿಯಾ ಮಾಡುತ್ತಿದೆ.
ಮುಕ್ತೇಶ್ವರ ಮಂದಿರ
ಇದು ಭುವನೇಶ್ವರದಲ್ಲಿ ನೋಡಲೇಬೇಕಾದ ಮಂದಿರವೆಂದರೂ ತಪ್ಪಾಗಲಾರದು. ೧೦ನೆಯ ಶತಮಾನದಲ್ಲಿ ಕಟ್ಟಿದ ಇದನ್ನು ‘ಒಡಿಸ್ಸಾದ ಹವಳ’ ಎನ್ನುವವರೂ ಇದ್ದಾರೆ. ಹಾಗೆನ್ನಲು ಕಾರಣವೂ ಇದೆ, ಇದರ ವಾಸ್ತುಶಿಲ್ಪ, ಕ್ಲಿಷ್ಟವಾದ, ಒಂದಕ್ಕೊಂದು ಹೆಣೆದುಕೊಂಡಂತಿರುವ ಅಲಂಕಾರದ ಕೆತ್ತನೆಗಳು ಅತ್ಯಂತ ಸುಂದರ. ಹೆಸರೇ ಹೇಳುವಂತೆ ಇಲ್ಲಿನ ಮುಖ್ಯ ದೇವರು ಶಿವ – ಗರ್ಭಗುಡಿಯಲ್ಲಿ ಶಿವಲಿಂಗವಿದೆ. ನಾವು ಸಂದರ್ಶಿಸಿದ್ದು ಚಳಿಗಾಲವಾದ್ದರಿಂದ ಶಿವಲಿಂಗಕ್ಕೆ ಸ್ಯಾಟಿನ್ ಬಟ್ಟೆಯ ಅಲಂಕಾರವಿತ್ತು, ಚಳಿಗಾಲಕ್ಕೆ ಇದೇ ಅಲಂಕಾರವಂತೆ ಇಲ್ಲಿ.
ಇದೂ ಮಂದಿರಗಳ ಸಂಕೀರ್ಣ, ೫-೬ ಪುಟ್ಟ ಮಂದಿರಗಳಿವೆ, ಇಲ್ಲೇ ಇದೆ ಸಿದ್ಧೇಶ್ವರ ಮಂದಿರ. ಇಲ್ಲಿನ ಮುಖ್ಯಮಂದಿರದ ಮುಂಭಾಗದಲ್ಲಿ ಸ್ವಾಗತ ಕಮಾನು, ಅನಂತರ ಸಭಾಂಗಣ ಅದಕ್ಕೆ ಜೋಡಿಸಿಕೊಂಡು ಗರ್ಭಗುಡಿ ಇದೆ. ಮುಖ್ಯ ಮಂದಿರವು ಸುಮಾರು ೩೫ ಅಡಿ ಎತ್ತರವಿದ್ದು ಸಿಲಿಂಡರ್ ಆಕಾರದಲ್ಲಿದೆ. ಸಭಾಂಗಣದ ಮುಚ್ಚಿಗೆ ಪಿರಮಿಡ್ ಆಕಾರದಲ್ಲಿದೆ, ಮುಖ್ಯ ಮಂದಿರದ ಗೋಡೆಗಳ ಮೇಲೆ ತಪಸ್ಸಿನಲ್ಲಿರುವ ಪಾರ್ವತಿ, ನರ್ತಿಸುತ್ತಿರುವ ಗಣೇಶನಲ್ಲದೆ ಹಲವು ಭಂಗಿಯಲ್ಲಿರುವ ದೇವಿಯರ ಕೆತ್ತನೆಗಳಿವೆ.
ಮಂದಿರಗಳನ್ನು ಕೆಂಪು ಮರಳು ಕಲ್ಲಿನಿಂದ ಕಟ್ಟಲಾಗಿದೆ. ಪಕ್ಕದಲ್ಲಿ ಹಸಿರು ಹುಲ್ಲಿನ ಲಾನ್ ಇದೆ. ಇದನ್ನು ‘ಸೋಮವಂಶಿ ರಾಜವಂಶ’ದ ‘ರಾಜ ಯಾಯಾತಿ-೧’ ಕಟ್ಟಿಸಿದನಂತೆ. ಮಂದಿರದ ಹಿಂದುಗಡೆ ‘ಮಾರಿಚಿ ಕುಂಡ’ ಎನ್ನುವ ಪುಷ್ಕರಿಣಿ ಇದೆ. ಇದರಲ್ಲಿ ಸ್ನಾನ ಮಾಡಿದರೆ ಹೆಣ್ಣುಮಕ್ಕಳ ಬಂಜೆತನ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇಲ್ಲಿನವರಿಗಿದೆ. ಸಮ್ಮೋಹನಗೊಳಿಸುವ ಮಂದಿರದ ವಾಸ್ತುಶಿಲ್ಪ ಆ ಕಾಲದ ಅದ್ಭುತ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ.
ಪರಶುರಾಮೇಶ್ವರ ಮಂದಿರ
ಇದು ಮುಕ್ತೇಶ್ವರ ಮಂದಿರದ ಹಿಂಬದಿಯಲ್ಲಿದೆ. ಇದು ಭುವನೇಶ್ವರದ ಅತ್ಯಂತ ಪುರಾತನ ಮಂದಿರಗಳಲ್ಲೊಂದು, ಪರಶುರಾಮನ ಗುರು ಶಿವನ ಮಂದಿರದಂತೆ ಕಟ್ಟಲಾಗಿದೆ.
ಇಲ್ಲಿಯೂ ಗರ್ಭಗುಡಿಗೆ ಜೋಡಿಸಿಕೊಂಡು ಎದುರು ಭಾಗದಲ್ಲಿ ಪ್ರಾರ್ಥನೆಗಾಗಿ ಸಭಾಂಗಣವಿದೆ. ಸಭಾಂಗಣದ ಮುಚ್ಚಿಗೆ ಮಾತ್ರ ಗೋಪುರದಂತಿರದೆ ಸಮತಟ್ಟಾಗಿದೆ, ಗೋಡೆಗಳಲ್ಲಿ ಆಕರ್ಷಕ ಕಿಟಕಿಗಳಿವೆ. ಸಭಾಂಗಣದ ಗೋಡೆಯಲ್ಲಿ ಗಣೇಶ ಹಾಗೂ ಸಪ್ತಮಾತೃಕೆಯರಾದ ಬ್ರಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡೇಶ್ವರಿಯ ಕೆತ್ತನೆಗಳಿವೆ. ಕೈಲಾಸ ಬೆಟ್ಟವನ್ನು ಮೇಲೆತ್ತುತ್ತಿರುವ ರಾವಣ, ಶಿವನಿಗೆ ಭಿಕ್ಷೆ ಕೊಡುತ್ತಿರುವ ಅನ್ನಪೂರ್ಣ ಮತ್ತು ಪರಶುರಾಮನ ಕೆತ್ತನೆಗಳೂ ಇವೆ.
ಮಂದಿರದ ಗೋಡೆಯ ಮೇಲೆ ಪ್ರಾಣಿಗಳು, ಹೂವುಗಳು, ಧಾರ್ಮಿಕ ಕಥೆಗಳು, ವಿಷ್ಣು, ಗಣೇಶನ ಕೆತ್ತನೆಗಳಲ್ಲದೆ ಗಂಗಾ, ಯಮುನಾ, ಅರ್ಧನಾರೀಶ್ವರನ ಕೆತ್ತನೆಯಿದೆ. ಅಲ್ಲದೆ ಶಿವ, ವಿಷ್ಣು, ಗಣೇಶ, ದುರ್ಗೆಯ ಕೆತ್ತನೆಗಳಿವೆ. ಇಲ್ಲಿ ಅತ್ಯಂತ ಗಮನ ಸೆಳೆಯುವುದು ಶಿವ, ಪಾರ್ವತಿಯ ಕಲ್ಯಾಣೋತ್ಸವದ ಕೆತ್ತನೆ.
ಇಲ್ಲಿರುವ ಮತ್ತೊಂದು ಆಕರ್ಷಣೆಯೆಂದರೆ ಸಹಸ್ರಲಿಂಗ. ಒಂದು ದೊಡ್ಡ ಶಿವಲಿಂಗಕ್ಕೆ ಅಂಟಿಕೊಂಡು ಅದರ ಸುತ್ತ ಸಾವಿರ ಲಿಂಗಗಳನ್ನು ಕೆತ್ತಲಾಗಿದೆ. ಸಹಸ್ರಾರು ವರ್ಷಗಳು ಸಂದರೂ ಮಂದಿರದ ಸೌಂದರ್ಯಕ್ಕೆ ಸ್ವಲ್ಪವೂ ಕುಂದು ಬಂದಿಲ್ಲ. ಮಂದಿರದ ಅಂಗಳದ ಮೂಲೆಯಲ್ಲಿ ಮತ್ತೊಂದು ಶಿವಲಿಂಗವೂ ಕಂಡುಬರುತ್ತದೆ.
ಇದನ್ನು ಸುಮಾರು ೭ನೆಯ ಶತಮಾನದಲ್ಲಿ ‘ಶೈಲೋದ್ಭವ ರಾಜವಂಶ’ದ ‘ಮಾಧವರಾಜ-II’ ಕಟ್ಟಿಸಿದನಂತೆ. ಪರಶುರಾಮೇಶ್ವರ ಮಂದಿರದ ವಾಸ್ತುಶಿಲ್ಪವು ಒಡಿಸ್ಸಾದಲ್ಲಿರುವ ಇತರ ಮಂದಿರಗಳಿಗೆ ಸ್ಫೂರ್ತಿಯಾಯಿತು, ಮುಂದೆ ಇದೇ ಶೈಲಿಯನ್ನು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಅನುಸರಿಸಿದ್ದಾರೆ ಎನ್ನಲಾಗಿದೆ.
ಕೇದಾರ ಗೌರಿ ಮಂದಿರ
ಇದು ಕೇದಾರೇಶ್ವರ ಮತ್ತು ಗೌರಿಯ ಮಂದಿರ; ಕೇದಾರ ಶಿವನ ಮತ್ತೊಂದು ಹೆಸರು. ಹೆಸರಿನಂತೆಯೇ ಇಲ್ಲಿ ಎರಡು ಮಂದಿರವಿದ್ದು ಒಂದು ಶಿವನಿಗಾಗಿ ಮತ್ತೊಂದು ಪಾರ್ವತಿಯ ರೂಪದಲ್ಲಿರುವ ಗೌರಿಗಾಗಿ. ೮ ಅಡಿ ಎತ್ತರದ ಹನುಮಂತನ ವಿಗ್ರಹ, ಸಿಂಹದ ಮೇಲೆ ಕುಳಿತಿರುವ ದುರ್ಗೆಯ ಮೂರ್ತಿ – ಈ ಮಂದಿರದ ಮತ್ತೊಂದು ಆಕರ್ಷಣೆ. ಕೇದಾರ ಗೌರಿ ಮಂದಿರವು ಮುಕ್ತೇಶ್ವರ ಮಂದಿರದ ಪಕ್ಕದಲ್ಲೇ ಇದೆ. ಮಂದಿರದ ವಾಸ್ತುಶಿಲ್ಪ ಕಳಿಂಗ ಬೌದ್ಧ ಶೌಲಿಯಲ್ಲಿದೆ, ಅಂದರೆ ಮಂದಿರದ ಎದುರು ಕಮಾನು ಇದೆ. ಕೇದರ ಗೌರಿ ಮಂದಿರದ ಎತ್ತರ ಸುಮಾರು ೧೪ ಮೀಟರ್.
ರಾಜ ‘ಲಲಾತೇಂದು ಕೇಶರಿ’ ಕೇದಾರ ಗೌರಿ ಮಂದಿರವನ್ನು ಕಟ್ಟಿಸಿದನಂತೆ. ಶಿವ ಮತ್ತು ಪಾರ್ವತಿ ದೇವಿಯು ವಾರಣಾಸಿಯಿಂದ ಬಂದವರು ಇಲ್ಲಿನ ಶಾಂತಿ ಮತ್ತು ಪ್ರಕೃತಿ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲಸಿದರು ಎನ್ನುವ ಕಥೆಯೂ ಇದೆ. ಕೇದಾರ ಮತ್ತು ಗೌರಿ ಎನ್ನುವ ಹೆಸರಿನ ಪ್ರೇಮಿಗಳ ಕಥೆಯೂ ಈ ಮಂದಿರದೊಂದಿಗೆ ಜೋಡಿಸಿಕೊಂಡಿದೆ. ಅಂತ್ಯದಲ್ಲಿ ಪ್ರೇಮಿಗಳಿಬ್ಬರೂ ಸಾವನ್ನಪ್ಪಿ, ಅವರ ನೆನಪಿನಲ್ಲಿ ಈ ಮಂದಿರವನ್ನು ಕಟ್ಟಿಸಲಾಯಿತು ಎಂದು ಹೇಳುವವರೂ ಇದ್ದಾರೆ. ನಾವಿಲ್ಲಿಗೆ ಭೇಟಿಕೊಟ್ಟಾಗ ಭಕ್ತಾದಿಗಳ ಗೌಜಿತ್ತು, ಭಕ್ತರು ಲೋಹದ ನಾಗನನ್ನು ತಂದಿಟ್ಟಿದ್ದರು.
ರಾಮ ಮಂದಿರ
ಇಂದಿನ ದಿನಗಳಲ್ಲಿ ಭುವನೇಶ್ವರದಲ್ಲಿ ಅತಿ ಹೆಚ್ಚು ಭಕ್ತರು ಸಂದರ್ಶಿಸುವ ಮಂದಿರವಿದು. ಇದು ಇತ್ತೀಚಿನದು, ೧೯೭೯ರಲ್ಲಿ ಇದನ್ನು ಖಾಸಗಿ ಟ್ರಸ್ಟ್ ಒಂದು ಕಟ್ಟಿಸಿದ್ದು. ಅದೇ ಟ್ರಸ್ಟ್ ಇದರ ನಿರ್ವಹಣೆ ಮಾಡುತ್ತಿದೆ. ಮಂದಿರದ ಖಾವಿ ಬಣ್ಣದ ಎತ್ತರದ ಶಿಖರ ಬಹಳ ದೂರದವರೆಗೂ ಕಾಣಿಸುತ್ತದೆ.
ಮುಖ್ಯ ಮಂದಿರದಲ್ಲಿ ರಾಮ, ಲಕ್ಷ÷್ಮಣ ಮತ್ತು ಸೀತೆಯ ಬಿಳಿ ಮಾರ್ಬಲಿನ ಮೂರ್ತಿ ಇದೆ. ಹಾಗೆಯೆ ಶಿವ, ಹನುಮಂತನ ಮೂರ್ತಿಗಳೂ ಇದೆ. ಅಕ್ಕಪಕ್ಕದಲ್ಲಿ ಗಣೇಶ, ಶಿವ, ಕೃಷ್ಣ ಮತ್ತು ರಾಧ, ಕಾರ್ತಿಕೇಯ, ಪಂಚಮುಖಿ ಹನುಮನ ಮಂದಿರಗಳಿವೆ.
ಉತ್ತರ ಭಾರತದಲ್ಲಿ ಭಗವಂತನಿಗೆ ಕೆಂಪು ಜರಿ ಬಟ್ಟೆ ಮತ್ತು ಸಿಹಿ ತಿಂಡಿಗಳನ್ನು ಅರ್ಪಿಸುವುದು ಸಾಮಾನ್ಯ. ಇವುಗಳನ್ನು ಮಾರುವ ಅಂಗಡಿಗಳು ಅಕ್ಕಪಕ್ಕದಲ್ಲಿವೆ. ನಾವು ಇಲ್ಲಿಗೆ ಭೇಟಿ ಕೊಟ್ಟಾಗ ಸಾಮೂಹಿಕ ಭಜನೆ ನಡೆಯುತ್ತಿತ್ತು.
ರಾಮನವಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಶಿವರಾತ್ರಿ, ನವರಾತ್ರಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಾರೆಂದು ತಿಳಿದುಬಂತು.
ದೌಲಿ ಬೆಟ್ಟದ ಶಾಂತಿ ಸ್ತೂಪ
ಇದು ಬೌದ್ಧಮಂದಿರ. ಇದು ಭುವನೇಶ್ವರದಿಂದ ಸುಮಾರು ೮ ಕಿ.ಮೀ. ದೂರದಲ್ಲಿ ದಯಾ ನದಿಯ ದಂಡೆಯ ಮೇಲಿರುವ ದೌಲಿ ಬೆಟ್ಟದ ಮೇಲಿದೆ. ಸ್ತೂಪವು ಬಿಳಿಬಣ್ಣದ ಗುಂಬಜದ ಮಾದರಿಯಲ್ಲಿದ್ದು ನಾಲ್ಕು ದಿಕ್ಕಿನಲ್ಲಿ ವಿವಿಧ ಭಂಗಿಯಲ್ಲಿರುವ ಬುದ್ಧನ ಮೂರ್ತಿಯಿದೆ. ಸ್ತೂಪದ ಸುತ್ತ ಕಲ್ಲಿನ ಫಲಕಗಳಿದ್ದು, ಇಲ್ಲಿ ಬುದ್ಧನ ಜೀವನಚರಿತ್ರೆಯನ್ನು ಸಾರುವ ಹಲವು ಕೆತ್ತನೆಗಳಿವೆ. ಬೆಟ್ಟದ ಮೇಲಿರುವ ಸ್ತೂಪದಲ್ಲಿ ನಿಂತು ನೋಡಿದರೆ ಸುತ್ತಲಿನ ಹಸಿರು ತುಂಬಿದ ದೃಶ್ಯ ಹಾಗೂ ಶಾಂತಿ ಮಂತ್ರವನ್ನು ಜಪಿಸುವ ತಂಗಾಳಿ ನಮ್ಮದಾಗುತ್ತದೆ.
ಈ ಶಾಂತಿ ಸ್ತೂಪವನ್ನು ಜಪಾನ್ ಬುದ್ಧ ಸಂಘ ಮತ್ತು ಕಳಿಂಗ ನಿಪ್ಪಾನ್ ಬುದ್ಧ ಸಂಘವು ಜಂಟಿಯಾಗಿ ೧೯೭೨ರಲ್ಲಿ ಕಟ್ಟಿಸಿದರು.
ಇದು ಇತಿಹಾಸ ಪ್ರಸಿದ್ಧ ಸ್ಥಳ, ಇಲ್ಲಿಯೇ ಕ್ರಿ.ಪೂ. ೩ನೆಯ ಶತಮಾನದಲ್ಲಿ ಮೌರ್ಯ ದೊರೆ ಅಶೋಕನಿಗೂ ಮತ್ತು ಕಳಿಂಗ ಸಾಮ್ರಾಜ್ಯಕ್ಕೂ ಯುದ್ಧ ನಡೆಯಿತು. ಕಳಿಂಗದವರು ವೀರಾವೇಶವಾಗಿ ಹೋರಾಡಿದರೂ ಅನಂತರ ಸೋಲಬೇಕಾಯಿತು. ಸಾಮ್ರಾಟ್ ಅಶೋಕ ಗೆದ್ದು ಬೀಗುವ ಬದಲು ಧರೆಗುರುಳಿದ ಲಕ್ಷಾಂತರ ದೇಹಗಳನ್ನು, ಹರಿದ ರಕ್ತವನ್ನು ನೋಡಿ ಕಂಗೆಟ್ಟ, ಪರಿತಪಿಸಿದ. ಕೊನೆಗೆ ಶಾಂತಿಯನ್ನು ಅರಸಿ ಹೊರಟವನು ಬೌದ್ಧ ಧರ್ಮವನ್ನು ಸ್ವೀಕರಿಸಿ ಶಾಂತಿ ಮಂತ್ರವನ್ನು ಜಗತ್ತಿಗೆ ಸಾರಿದ. ಇಲ್ಲಿಯೇ ಅಶೋಕ ಕಟ್ಟಿಸಿದ ಹಲವಾರು ಶಾಂತಿ ಸ್ತೂಪ, ವಿಹಾರಗಳಿವೆ.
ಇಂತಹ ಭಕ್ತಿಯ ಕೇಂದ್ರ ಮತ್ತು ಅದ್ಭುತ ವಾಸ್ತುಶಿಲ್ಪದ ಮಂದಿರಗಳಿಂದಲೇ ಭುವನೇಶ್ವರ ಮಾತ್ರವಲ್ಲ ಭಾರತವೂ ಶ್ರೀಮಂತವಾಗಿದೆ.
***




