ನಿಮಗೆ ನೀವೇ ರೂವಾರಿ
ಗ್ರಾಮ್ಯದಾವರಣವೇ ತಳಮೂಲ
ಮುಂದೆ ನೀವು ಬೆಳೆದು ಆದದ್ದು ವಿಶಾಲ ಆಲ!
ನಿಮ್ಮನರಿಯಲುಂಟೇ ನನ್ನ ಅಳವು?
ಮುಕ್ತ ಮನವಾಗಿ ನಿಮ್ಮಿರವು ತೆರವು
ಡಿವಿಜಿ ನನಗೆ ನೀವು ಸೋಜಿಗ
ಎಲ್ಲ ಅರಿತು ಅರ್ಥೈಸಿದಿರಿ ಈ ಜಗ!
***
ಬೆಳಕಿನೊಡನೆ ತಳುಕು ಹಾಕಿ
ಶಿಖರದತ್ತ ಹೆಜ್ಜೆ ಹಾಕಿ-
ಪ್ರತಿಘಟ್ಟದಲ್ಲೂ
ಅನುಭವದಟ್ಟದಲ್ಲೂ
ಹತ್ತಿ ಇಳಿದು ನಿಂತು ಕುಂತು ನಡೆದು ಮಿಡಿದು
ಸವಿದು ಅಳೆದು ಸುರಿದು ಬಿರಿದು ತೆರೆದು
ಹರಿಸಿದಿರಿ ಒಟ್ಟಾರೆ ಜ್ಞಾನಧಾರೆ….
ಮಂಕುತಿಮ್ಮನ ಕಗ್ಗದಲಿದೆ ನಿಮ್ಮ ಚಹರೆ!
***
ಡಾ|| ದೊಡ್ಡರಂಗೇಗೌಡ
ಲೇಖಕರು ಸುಪ್ರಸಿದ್ಧ ಕವಿಗಳು
ವೀರಯೋಧನಿಗೆ…
ಅತುಲ ನೀಲ ಕಡಲಿಗೆ ನೀರ ಪಯಣ ಸಾಗಿದೆ |
ಬಿಂದು ಸಿಂಧು ಸೇರಿದೆ, ಜೀವ ಸೂತ್ರ ಉಸುರಿದೆ ||
ರವಿಗೆ ಗಗನ ಏರುವಾಸೆ, ಭುವಿಯ ನೀರ ಹೀರುವಾಸೆ |
ಬಾಷ್ಪ-ಪುಷ್ಪ ಅರಳಿದೆ, ಮುಗಿಲ ರೂಪ ತಳೆದಿದೆ ||
ಮಳೆಗೆ ಇಳೆಯ ಸ್ನೇಹ ಬೆಸುಗೆ, ಇಳೆಗೆ ಮಳೆಯ ತೇವದೊದಿಕೆ |
ಜೀವ-ಭಾವ ತುಂಬಿದೆ, ಹಸಿರ ಹೊಸತು ತಂದಿದೆ ||
ಗಿರಿಯ ಮೇಲೆ ಹಿಮದ ಛಾಪ, ಕಣಿವೆ ಕೊರೆದು ನದಿ ಪ್ರಲಾಪ |
ಗುಡ್ಡ-ಬೆಟ್ಟ ಸುತ್ತಿದೆ, ಬಯಲು ಸೀಮೆಗಿಳಿದಿದೆ ||
ಭೂಮಿಯೊಳಗೆ ಇಳಿವ ತವಕ, ನೆಲದ ದಾಹ ತೀರೊತನಕ |
ಝರಿಯು ನೆಲದಿ ಚಿಮ್ಮಿದೆ, ಒಡಲು ತುಂಬಿ ತುಳುಕಿದೆ ||
ಹರಿವ ನೀರ ಹೆಜ್ಜೆ-ಗೆಜ್ಜೆ, ಥಳಕು-ಬಳಕು ಭಾವ ಲಜ್ಜೆ |
ನೀರು ತೆವಳಿ ದಣಿದಿದೆ, ಹಳ್ಳ-ಕೊಳ್ಳ ತುಂಬಿದೆ ||
ಹಲವು ರೂಪ ಧರಿಸಿಕೊಂಡು, ಮಣ್ಣ ಬಣ್ಣ ಮೆತ್ತಿಕೊಂಡು |
ಅಬ್ಬಿ ನೆಲದಿ ಕುಣಿದಿದೆ, ಸುಗ್ಗಿ ಕಾಲ ತಂದಿದೆ ||
ಬರಡು ಭುವಿಗೆ ಚಿಗುರುವಾಸೆ, ತೆನೆಯ ಬಿಚ್ಚಿನಲಿಯುವಾಸೆ |
ಧಾನ್ಯ ಕಣಜ ತುಂಬಿದೆ, ದುಡಿಮೆ ಹಿರಿಮೆ ಗಳಿಸಿದೆ ||
—-
ನಾರಾಯಣ ಶೆಣೈ ಕೆ.
ಲೇಖಕರು ಭೂವಿಜ್ಞಾನ ಪ್ರೊಫೆಸರ್ ಹಾಗೂ
ಪರಿಸರ ಚಳವಳಿ ಕಾರ್ಯಕರ್ತರು
Comments are closed.