ಅದೊಂದು ಭೀಕರವಾದ ಅಪಘಾತ. ೪೧ರ ಹರೆಯದ ಅಮಿ ವ್ಯಾನ್ ಡೈಕನ್ ರೊಮಿನ್ ತನ್ನ ಎಟಿವಿ ವಾಹನದಲ್ಲಿ ಅಮೆರಿಕದ ಅರಿಝೋನಾ ಪ್ರಾಂತದ ಶೋಲೋ ಎಂಬಲ್ಲಿ ಹೋಗುತ್ತಿದ್ದಳು. ವ್ಯಾನ್ ಡೈಕನ್ ಇಳಿಜಾರು ಕಣಿವೆಯ ರಸ್ತೆಯ ಮೇಲೆ ತನ್ನ ವಾಹನ ಚಲಾಯಿಸಿಕೊಂಡು ಹೋಗುತ್ತಿರುವಾಗಲೇ ದುರದೃಷ್ಟ ಅವಳ ಬೆನ್ನುಹತ್ತಿತ್ತು. ಇದ್ದಕ್ಕಿದ್ದಂತೆ ಆ ಇಳಿಜಾರು ಕಣಿವೆಯಲ್ಲಿ ಆಕೆಯ ಎಟಿವಿ ವಾಹನ ಅಪಘಾತಕ್ಕೆ ತುತ್ತಾಯಿತು. ವಾಹನದಿಂದ ಹೊರಗೆಸೆಯಲ್ಪಟ್ಟ ವ್ಯಾನ್ ಡೈಕನ್ ಪ್ರಜ್ಞೆ ತಪ್ಪಿ ನೆಲಕ್ಕುರುಳಿದಳು. ಉಸಿರಾಟ ನಿಂತೇ ಹೋದಂತಾಗಿತ್ತು. ಅಪಘಾತದ ಸುದ್ದಿ ತಿಳಿಯುತ್ತಲೇ ತಕ್ಷಣ ಆಕೆಯನ್ನು ಅಂಬುಲೆನ್ಸ್ನಲ್ಲಿ ಕೊಲರಡೋದ ಪ್ರತಿಷ್ಠಿತ ಕ್ರೆಗ್ ಆಸ್ಪತ್ರೆಗೆ ಕರೆತರಲಾಯಿತು. ಅಪಘಾತದಲ್ಲಿ ಬೆನ್ನುಹುರಿಗೆ ತೀವ್ರ ಪೆಟ್ಟಾಗಿತ್ತು. ಪರಿಣಾಮವಾಗಿ ಆಕೆಯ ಸೊಂಟದ ಕೆಳಭಾಗ ಪೂರ್ತಿ ನಿಷ್ಕ್ರಿಯಗೊಂಡಿತ್ತು. ಬದುಕುಳಿಯುವ ಯಾವ ಭರವಸೆಯೂ ಇರಲಿಲ್ಲ. ಒಂದುವಾರ ಕಾಲ ತುರ್ತು ನಿಗಾ ಘಟಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದಳು.
‘ಗುಡ್ಬೈ’ ಹೇಳಿಬಿಡು!
ಪ್ರಜ್ಞೆಯೇನೋ ಮರಳಿ ಬಂತು. ಆದರೆ ಆಕೆಯನ್ನು ಬದುಕಿಸುವ ಭರವಸೆ ಸ್ವತಃ ಆ ಪ್ರಸಿದ್ಧ ಆಸ್ಪತ್ರೆಯ ಖ್ಯಾತ ಸರ್ಜನ್ಗೂ ಇರಲಿಲ್ಲ. ಶಸ್ತ್ರಚಿಕಿತ್ಸೆಗಾಗಿ ಡೈಕನ್ಳನ್ನು ಆಪರೇಷನ್ ಥಿಯೇಟರ್ಗೆ ಸಾಗಿಸಲು ಸಿದ್ಧತೆ ನಡೆಯಿತು. ಕಣ್ಣಲ್ಲಿ ನೀರು ತುಂಬಿಕೊಂಡಿದ್ದ ಡೈಕನ್ಗೆ ವೈದ್ಯರು ಹೇಳಿದರು: ಕೊನೆಯ ಬಾರಿಗೆ ನಿನ್ನ ಗಂಡನಿಗೆ, ಆಪ್ತರಿಗೆ ಗುಡ್ಬೈ ಹೇಳಿಬಿಡು. ನೀನು ಜೀವಂತವಾಗಿ ಮತ್ತೆ ಆಪರೇಷನ್ ಥಿಯೇಟರ್ನಿಂದ ಹಿಂದಿರುಗಿ ಬರುವ ಸಾಧ್ಯತೆಗಳಿಲ್ಲ. ಅಕಸ್ಮಾತ್ ಬಂದರೂ ಜೀವಚ್ಛವವಾಗಿ ಇರುತ್ತೀಯಾ?
ಬದುಕುವ ಬಗ್ಗೆ ಭರವಸೆ ನೀಡಬೇಕಾದ ವೈದ್ಯರೇ ಹೀಗೆ ಹತಾಶರಾಗಿ ಹೇಳಿದಾಗ ಡೈಕನ್ ತಾನೆ ಏನು ಮಾಡಿಯಾಳು? ದುಃಖತಪ್ತ ಗಂಡ ಹಾಗೂ ಪಂಟರ್ ಆಗಿದ್ದ ಟಾಮ್ ರೊಮಿನ್ಗೆ ಕೊನೆಯ ವಿದಾಯ ಹೇಳಿದಳು. ನೀನು ಬೇರೆ ಯಾರನ್ನಾದರೂ ಪ್ರೀತಿಸಿ, ಬದುಕನ್ನು ಅನುಭವಿಸು ಎಂದು ಅಳುತ್ತಲೇ ವಿನಂತಿಸಿದಳು. ಪತಿ ಟಾಮ್ಗೂ ಆಕೆ ಮತ್ತೆ ಬದುಕಿ ಮೊದಲಿನಂತಾಗುತ್ತಾಳೆಂಬ ಕಿಂಚಿತ್ ಭರವಸೆಯೂ ಇರಲಿಲ್ಲ. ಆಕೆ ಆಪರೇಶನ್ ಥಿಯೇಟರ್ಗೆ ಹೋಗುವ ಮುನ್ನ ಆತನೂ ಕೊನೆಯದಾಗಿ ಆಕೆಗೆ ಕಣ್ಣೀರಿನ ವಿದಾಯ ಹೇಳಿದ.
ಕುಂದದ ಜೀವನೋತ್ಸಾಹ
ತೀವ್ರ ಪೆಟ್ಟುಬಿದ್ದು ಜಜ್ಜಿಹೋಗಿದ್ದ ಆಕೆಯ ಬೆನ್ನುಹುರಿಗೆ ಶಸ್ತ್ರಚಿಕಿತ್ಸೆ ನಡೆಯಿತು. ಚಿಕಿತ್ಸೆ ಮುಗಿದ ಬಳಿಕ ಹೇಳಲಾರದ ಯಮಯಾತನೆ. ತಾನು ಸತ್ತೇ ಹೋಗುತ್ತೇನೆಂಬ ಭಾವನೆ. ಅಂತಹ ಯಮಯಾತನೆಯ ವೇಳೆಯಲ್ಲೂ ಡೈಕನ್ಳ ಜೀವನೋತ್ಸಾಹ, ಬದುಕಲೇಬೇಕೆಂಬ ಛಲ ಮಾತ್ರ ಕುಂದಿರಲಿಲ್ಲ. ಎರಡೇ ವಾರದಲ್ಲಿ ತುರ್ತು ನಿಗಾ ಘಟಕದಿಂದ ಜನರಲ್ ವಾರ್ಡ್ಗೆ ಆಕೆಯನ್ನು ಸ್ಥಳಾಂತರಿಸಿದಾಗ ಡೈಕನ್ ಹೇಳಿದ್ದು: ಓಹ್, ನನಗಾಗಿರುವ ನೋವು ನನ್ನನ್ನು ತೀವ್ರವಾಗಿ ಹಿಂಸಿಸುತ್ತಿದೆ. ಆಗಿರುವ ಅಪಘಾತ ಗಾಬರಿ ಉಂಟುಮಾಡಿದೆ. ಆದರೆ ನಾನಿನ್ನೂ ಜೀವಂತವಾಗಿದ್ದೇನೆ. ಹಾಗಾಗಿ ನಾನಿನ್ನು ಹೆದರಲಾರೆ. ಜೀವವೊಂದಿದ್ದರೆ ನಾನು ಏನನ್ನಾದರೂ ಸಾಧಿಸಬಲ್ಲೆ.
ಸಣ್ಣಪುಟ್ಟ ಶಸ್ತ್ರಚಿಕಿತ್ಸೆ ನಡೆದರೂ ಹೆದರಿ ಕಂಗಾಲಾಗಿ ಅರೆಜೀವವಾಗುವವರೇ ಹೆಚ್ಚು. ಡೈಕನ್ಗೆ ನಡೆದದ್ದು ಬೆನ್ನುಹುರಿಯ ಗಂಭೀರ ಶಸ್ತ್ರಚಿಕಿತ್ಸೆ. ಬೆನ್ನುಹುರಿಗೆ ಕೊಂಚ ಏಟು ತಲಿದರೂ ಬದುಕುಳಿಯುವ ಸಾಧ್ಯತೆ ತೀರಾ ಕಡಮೆ. ಆದರೆ ಎಟಿವಿ ವಾಹನದ ಭೀಕರ ಅಪಘಾತದಲ್ಲಿ ಜಜ್ಜಿ ಬಜ್ಜಿಯಾಗಿದ್ದ ಬೆನ್ನುಹುರಿ ಶಸ್ತ್ರಚಿಕಿತ್ಸೆ ಬಳಿಕವೂ ಡೈಕನ್ ಬದುಕುಳಿದಿದ್ದಳು. ಬದುಕಬೇಕೆಂಬ ಛಲಕ್ಕೆ ಗೆಲವಾಗಿತ್ತು.
‘ಚಿನ್ನದ ಮೀನು’
ಅಷ್ಟಕ್ಕೂ ಈ ವ್ಯಾನ್ ಡೈಕನ್ ಎಂಬ ೪೧ರ ಹರೆಯದ ಮಹಿಳೆ ಸಾಮಾನ್ಯಳೇನಲ್ಲ. ಜಾಗತಿಕ ಒಲಿಂಪಿಕ್ಸ್ ಕ್ರೀಡೆಯಲ್ಲಿ ೬ ಬಾರಿ ಚಿನ್ನದ ಪದಕ ಗಳಿಸಿದ ಖ್ಯಾತ ಈಜುಗಾತಿ. ೧೯೯೬ರಲ್ಲಿ ನಡೆದ ಅಟ್ಲಾಂಟಾ ಒಲಿಂಪಿಕ್ಸ್ ಕ್ರೀಡೆಯಲ್ಲಿ ಈಜಿನಲ್ಲಿ ೪ ಚಿನ್ನದ ಪದಕಗಳನ್ನು ಬಾಚಿದ್ದ ದಿಟ್ಟೆ. ೫೦ ಮೀಟರ್ ಫ್ರೀ ಸ್ಟೈಲ್, ೧೦೦ ಮೀಟರ್ ಬಟರ್ಫ್ಲ್ಯೆ, ೪x೧೦೦ ಫ್ರೀಸ್ಟ್ಯೆಲ್ ಹಾಗೂ ಮೆಡ್ಲೆ ರಿಲೇ – ಈ ನಾಲ್ಕು ವಿಭಾಗದ ಸ್ಪರ್ಧೆಯಲ್ಲೂ ಚಿನ್ನದ ಮೀನಾಗಿ ಹೊರಹೊಮ್ಮಿದ್ದಳು. ೨೦೦೮ರಲ್ಲಿ ಅಮೆರಿಕದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಡೈಕನ್ ‘ಹಾಲ್ ಆಫ್ ಫೇಮ್’ ಕೀರ್ತಿಗೂ ಭಾಜನಳಾಗಿದ್ದಳು.
ಮೀನಿನಂತೆ ಈಜುತ್ತಿದ್ದ ವ್ಯಾನ್ ಡೈಕನ್ ಈಗ ಮಾತ್ರ ವೀಲ್ಚೇರ್ ಬಂಧಿ. ಸೊಂಟದ ಕೆಳಗಿನ ಭಾಗ ಸಂಪೂರ್ಣ ನಿಷ್ಕ್ರಿಯ. ಆದರೇನು, ಡೈಕನ್ಳ ಅಚಲ ನಿರ್ಧಾರ, ಅದಮ್ಯ ಜೀವನೋತ್ಸಾಹಗಳಿಗೆ ಯಾವುದೇ ವೀಲ್ಚೇರ್ನ ಆಸರೆ ಬೇಕಿಲ್ಲ. ನನಗಿದೊಂದು ಪುನರ್ಜನ್ಮ. ತೀವ್ರ ಅಪಘಾತವಾದಾಗಲೂ ಧನಾತ್ಮಕ ಚಿಂತನೆಯನ್ನು ನಾನು ಬಿಟ್ಟುಕೊಡಲಿಲ್ಲ. You can get through anything as long as you have a positive attitude’’ – ಎನ್ನುತ್ತಾಳೆ ಡೈಕನ್.
ಎರಡು ತಿಂಗಳ ಶುಶ್ರೂಷೆ, ವಿಶ್ರಾಂತಿ, ಚಿಕಿತ್ಸೆಯ ಬಳಿಕ ಡೈಕನ್ ಮತ್ತೆ ಆಸ್ಪತ್ರೆಯಿಂದ ತನ್ನ ಮನೆಗೆ ತೆರಳಿದ್ದಾಳೆ. ಅಪಘಾತವಾದಾಗ ಅಂಬುಲೆನ್ಸ್ನಲ್ಲಿ ಆಕೆಯನ್ನು ಕರೆತರಲಾಗಿತ್ತು. ಶಸ್ತ್ರಚಿಕಿತ್ಸೆ, ವಿಶ್ರಾಂತಿಯ ಬಳಿಕ ಸ್ಟ್ರೆಚರ್ ಆಸರೆ ಪಡೆದು, ಗಾಲಿಕುರ್ಚಿಯ ಮೇಲೆ ಕುಳಿತು ಆಸ್ಪತ್ರೆಯಿಂದ ಹೊರಬಂದ ಡೈಕನ್ಳ ಮುಖದಲ್ಲಿ ಮತ್ತದೇ ಮಂದಹಾಸ. ಒಲಿಂಪಿಕ್ ಚಿನ್ನ ಗೆದ್ದಾಗಿನ ಮತ್ತದೇ ಸಂತಸ. ‘ನಾನೀಗ ವೀಲ್ಚೇರ್ ರಾಣಿ’ ಎಂದು ತನಗೆ ತಾನೇ ತಮಾಷೆ ಮಾಡಿಕೊಳ್ಳುತ್ತಾಳೆ.
ದಿವ್ಯಸಂದೇಶ
ಡೈಕನ್ಳ ಎರಡೂ ಕಾಲು ನಿಷ್ಕ್ರಿಯ. ಆದರೆ ಕೈಯ ನಿಯಂತ್ರಣದ ಮೂಲಕವೇ ವಾಹನ ಚಲಾಯಿಸುವುದನ್ನು ಆಕೆ ಕಲಿತಿದ್ದಾಳೆ. ತಾನಾಗಿಯೇ ತನ್ನ ಉಡುಪು ಧರಿಸುತ್ತಾಳೆ. ನೆಲದ ಮೇಲಿರುವ ವಸ್ತುಗಳನ್ನು ತಾನೇ ಎತ್ತಿಕೊಳ್ಳುತ್ತಾಳೆ. ಅಷ್ಟೇ ಅಲ್ಲ, ಈಚೆಗೆ ಬೋಟಿಂಗ್ಗೆ ಹೋಗಿದ್ದಳು. ಚಿಕ್ಕ ಪರ್ವತವೊಂದನ್ನೂ ಹತ್ತಿದ್ದಳು. ಮೃಗಾಲಯವೊಂದಕ್ಕೆ ಭೇಟಿ ನೀಡಿ ಸಂತಸಪಟ್ಟಳು.
ಡೈಕನ್ ತನ್ನಿಂದ ಆಗದು ಎಂದು, ಕಾಲಿಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಒಲಿಂಪಿಕ್ ಚಿನ್ನ ಗೆದ್ದಾಗ ಇದ್ದ ಉತ್ಸಾಹ, ಹುರುಪು, ಛಲ ಈಗ ಸೊಂಟದ ಕೆಳಗೆ ನಿಶ್ಚೇಷ್ಟಿತವಾದಾಗಲೂ ಇದೆ. ಕಾಲಿಲ್ಲದಿದ್ದರೂ ಜೀವನೋತ್ಸಾಹ ಕಳೆದುಕೊಳ್ಳಬೇಕಾಗಿಲ್ಲ ಎಂಬ ದಿವ್ಯ ಸಂದೇಶವನ್ನು ಡೈಕನ್ ರವಾನಿಸಿದ್ದಾಳೆ.