ಕರ್ತವ್ಯವನ್ನು ಮಾಡುವುದೆಂದರೆ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು. ಯಾವುದೇ ಒಂದು ಕುಟುಂಬ, ಸಂಸ್ಥೆ, ದೇಶ ಯಶಸ್ವಿಯಾಗಬೇಕಾದರೆ ಮನುಷ್ಯ ಮೊದಲು ಜವಾಬ್ದಾರಿಯನ್ನು ಹೊರಲು ತಯಾರಿರಬೇಕು.
ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಅವರವರದ್ದೇ ಆದ ಕರ್ತವ್ಯ ಇರುತ್ತದೆ. ನಮ್ಮ ಪಾಲಿನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದರೆ ಜಗತ್ತು ಸುಂದರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಜಗತ್ತು ಒಂದು ಕುಟುಂಬದಂತೆ. ಕುಟುಂಬದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದೇ ಆದರೆ ಆ ಕುಟುಂಬ ಸಮಾಜಕ್ಕೊಂದು ಆದರ್ಶವಾಗುತ್ತದೆ. ತನ್ನ ಕರ್ತವ್ಯದಿಂದ ನುಣುಚಿಕೊಳ್ಳುವುದೆಂದರೆ ಅದೊಂದು ಬೇಜವಾಬ್ದಾರಿತನ. ಇದರಿಂದ ನಮ್ಮ ವ್ಯಕ್ತಿತ್ವ ಕುಗ್ಗುತ್ತದೆ. ಕೆಲಸ ದೊಡ್ಡದಿರಲಿ, ಸಣ್ಣದಿರಲಿ ಅದನ್ನು ನಿಷ್ಠೆಯಿಂದ ನಿರ್ವಹಿಸುವುದರಲ್ಲೇ ಮನುಷ್ಯನ ಶ್ರೇಯಸ್ಸು ಅಡಗಿದೆ, ಸಮಾಜದ ಹಿತವೂ ಅಡಗಿದೆ.
ಭಗವದ್ದೃಷ್ಟಿ
ಈ ಬಗ್ಗೆ ಗಾಂಧಿಯವರು ಹೇಳುವ ಮಾತುಗಳು ಗಮನಾರ್ಹವಾಗಿವೆ: ಒಂದು ದೇಶದ ಪ್ರಧಾನಮಂತ್ರಿಯೇ ಇರಲಿ, ಅಲ್ಲಿನ ಸಾಮಾನ್ಯ ಪೇದೆಯೇ ಇರಲಿ, ತಮ್ಮತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಾರೆಂದಾದರೆ, ಭಗವಂತನಿಗೆ ಇಬ್ಬರೂ ಪ್ರಿಯರಾಗಿರುತ್ತಾರೆ. ಇಬ್ಬರೂ ಭಗವಂತನ ದೃಷ್ಟಿಯಲ್ಲಿ ಸರಿ ಸಮಾನರಾಗಿರುತ್ತಾರೆ.
ಒಬ್ಬ ವ್ಯಕ್ತಿಯನ್ನು ನೀವು ಬೀದಿ ಕಸ ಹೊಡೆಯುವವ ಎಂದು ಕರೆಯುವುದಾದರೆ, ಆತ ಮೈಕಲ್ ಏಂಜಲೋ ಚಿತ್ರ ಬಿಡಿಸಿದ ಹಾಗೆ, ಬೀಥೋವೆನ್ ಸಂಗೀತ ರಚಿಸಿದಂತೆ, ಷೇಕ್ಸ್ಪಿಯರ್ ಕವನ ಬರೆದಂತೆ, ಕಸವನ್ನು ಗುಡಿಸಬೇಕು. ಆತ ಬೀದಿಯ ಕಸ ಎಷ್ಟು ಚೆನ್ನಾಗಿ ತೆಗೆಯಬೇಕೆಂದರೆ ಈ ಭೂಮಿಯಲ್ಲಿ ಮತ್ತು ಸ್ವರ್ಗದಲ್ಲಿ ಇರುವವರೆಲ್ಲರೂ ತನ್ನ ಕೆಲಸವನ್ನು ಅದ್ಭುತವಾಗಿ ಮಾಡುತ್ತಿದ್ದ ಮಹಾನ್ ಬೀದಿ ಕಸ ಗುಡಿಸುವವನೊಬ್ಬನಿದ್ದ ಎಂದು ಹೇಳಬೇಕು ಎಂಬುದಾಗಿ ಕರ್ತವ್ಯದ ಬಗ್ಗೆ ಮಾರ್ಟಿನ್ ಲೂಥರ್ ಕಿಂಗ್ ಹೇಳಿದ್ದಾನೆ. ಹೀಗೆ ಯಾವ ಕರ್ತವ್ಯವೂ, ಕೆಲಸವೂ ನಿಕೃಷ್ಟವಲ್ಲ. ಕೆಲಸ ಸಣ್ಣದಿರಬಹುದು. ಆದರೆ ಅದನ್ನು ಚೆನ್ನಾಗಿ ಮಾಡಿ ತನ್ನ ಕರ್ತವ್ಯವನ್ನು ಪೂರೈಸುವುದರಲ್ಲೆ ದೊಡ್ಡತನವಿದೆ. ಕರ್ತವ್ಯವನ್ನು ನಿರ್ವಹಿಸುವುದರಲ್ಲಿಯೇ ಅದರದ್ದೇ ಆದ ಸಾರ್ಥಕತೆ ಇದೆ. ಡಿ.ವಿ.ಜಿ. ಇದನ್ನೇ ಕಗ್ಗದಲ್ಲಿ ಬಹಳ ಸೊಗಸಾಗಿ ಹೇಳಿದ್ದಾರೆ –
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು |
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ ||
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ |
ಹೊರಡು ಕರೆ ಬರಲ್ ಅಳದೆ – ಮಂಕುತಿಮ್ಮ || (೬೦೧)
ನಿನಗೆ ದೇವರು ಕೊಟ್ಟಿರುವ ಕೆಲಸವನ್ನು ಇದು ಮೇಲು ಅಥವಾ ಕೀಳು, ಎನ್ನುವ ಭಾವನೆ ಬಿಟ್ಟು ಅದು ಎಷ್ಟೇ ಚಿಕ್ಕದಾಗಿದ್ದರೂ, ಮನಸ್ಸಿಟ್ಟು ಆ ಕೆಲಸವನ್ನು ಮಾಡು. ಆ ಕೆಲಸ ಮಾಡಿದಾಗ ಸಿಕ್ಕಿದ ಪ್ರತಿಫಲವನ್ನು, ಗೊಣಗದೆ, ದೇವರು ಕೊಟ್ಟ ಪ್ರಸಾದವೆಂದು ಸ್ವೀಕರಿಸು. ಜೀವನದ ಭಾರವನ್ನು ಪರಮಾರ್ಥವನ್ನು ಬಿಡದೆ ಹೊರು. ನಿನ್ನ ಕರ್ತವ್ಯವನ್ನು ತೃಪ್ತಿಕರವಾಗಿ ಮಾಡಿದ ಮೇಲೆ, ನೀನು ಮಾಡುವುದಿನ್ನೇನೂ ಉಳಿದಿರುವುದಿಲ್ಲ. ಆ ಪರಮಾತ್ಮನ ಕರೆ ಬಂದಾಗ ಸಾವು ಬಂತೆಂದು ದುಃಖಿಸದೆ ಹೊರಡುವುದಕ್ಕೆ ಸಿದ್ಧವಾಗಿರಬೇಕು ಎಂಬುದೇ ಇದರ ಭಾವಾರ್ಥ.
ಮನುಷ್ಯನಾಗಿ ಹುಟ್ಟಿದ ಮೇಲೆ ಕರ್ತವ್ಯವನ್ನು ನಿರಂತರವಾಗಿ ನಾವು ನಿಭಾಯಿಸಬೇಕಾಗುತ್ತದೆ. ಕರ್ತವ್ಯವನ್ನು ಮರೆಯುವುದೆಂದರೆ ಮರಣವನ್ನು ಅಪ್ಪಿಕೊಂಡಂತೆ. ಜೀವಂತಿಕೆಯಿಂದ ಇರುವುದೆಂದರೆ ಕರ್ತವ್ಯದೊಂದಿಗೆ ಬದುಕುವುದು ಎಂದರ್ಥ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ –
ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತಕರ್ಮಕೃತ್ |
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ || (III.೫)
ಯಾರೂ ಸಹ, ಯಾವ ಕಾಲದಲ್ಲಿಯೂ ಕ್ಷಣಮಾತ್ರವೂ ಕೆಲಸಮಾಡದೇ ಇರುವುದಿಲ್ಲ. ನಿಃಸಂದೇಹವಾಗಿ ಎಲ್ಲರೂ ಪ್ರಕೃತಿಯಿಂದ ಉಂಟಾದ ಗುಣಗಳಿಗೆ ಪರವಶವಾಗಿ ಕರ್ಮವನ್ನು ಮಾಡುತ್ತಿರುತ್ತಾರೆ.
ಶ್ರದ್ಧೆಯ ಮಹತ್ತು
ಮಾರ್ಟಿನ್ ಲೂಥರ್ ಕಿಂಗ್
ನಮ್ಮ ಕರ್ತವ್ಯವನ್ನು ಮಾಡುವುದು ಕೂಡ ಒಂದು ರೀತಿಯ ಭಗವಂತನ ಆರಾಧನೆ. ಎಷ್ಟೋ ಜನರು ಜಪ-ತಪ, ಧ್ಯಾನ-ಯೋಗ, ಪೂಜೆ-ಪುನಸ್ಕಾರಗಳಿಂದ ಮಾತ್ರ ಭಗವಂತನನ್ನು ಪಡೆಯಬಹುದು ಎಂಬುದಾಗಿ ಭಾವಿಸಿದ್ದಾರೆ. ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಇಪ್ಪತ್ತನಾಲ್ಕು ಗಂಟೆಯೂ ಧ್ಯಾನ ಮಾಡಲಾಗುವುದಿಲ್ಲ. ಬದಲಿಗೆ ಮಾಡುವ ಕೆಲಸವನ್ನೇ ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ಮಾಡಿದರೆ ಅದೂ ಧ್ಯಾನವೇ, ಅದು ಕೂಡ ಭಗವಂತನ ಪೂಜೆಯೇ.
ಎಷ್ಟೋ ಜನರಿಗೆ ಲೌಕಿಕ ಬದುಕನ್ನು ಪಾರಲೌಕಿಕ ಬದುಕಿನೊಂದಿಗೆ ಸರಿಹೊಂದಿಸುವುದು ಹೇಗೆಂಬುದು ಗೊತ್ತಿಲ್ಲ. ನಾವು ಜೀವಮಾನ ಪೂರ್ತಿ ಲೌಕಿಕ ಬದುಕಿನಲ್ಲೆ ಮುಳುಗಿದರೆ ಪಾರಮಾರ್ಥಿಕ ವಿಚಾರಗಳ ಬಗ್ಗೆ ಚಿಂತನೆ ನಡೆಸಲು ಸಮಯವೆಲ್ಲಿದೆ, ಆಧ್ಯಾತ್ಮಿಕ ಸಾಧನೆಗೆ ಅವಕಾಶವೆಲ್ಲಿದೆ? – ಎಂಬುದಾಗಿ ವ್ಯಥೆಪಡುತ್ತಾರೆ. ಬದುಕಿನ ಕೊನೆಗಾಲದಲ್ಲಿ ಜೀವನವಿಡೀ ಸ್ವಾರ್ಥದ ವಹಿವಾಟಿನಿಂದ, ಲೌಕಿಕ ವ್ಯವಹಾರದಿಂದ ಪರಮಾತ್ಮನ ಸೇವೆ ಮಾಡಲಿಲ್ಲವಲ್ಲ ಎಂಬುದಾಗಿ ಪಶ್ಚಾತ್ತಾಪ ಪಡುವವರು ಹಲವರಿದ್ದಾರೆ.
ಇಂಥ ಜನರಿಗೆ ಸೂಕ್ತ ಮಾರ್ಗದರ್ಶನ ನೀಡುವಂತಹ ಸಂತರ ಪ್ರಸಂಗವೊಂದು ಇಲ್ಲಿದೆ. ಹಿಂದೆ ಇರಾನ್ ದೇಶದಲ್ಲಿ ಅಬೂಹಜಮ್ ಎಂಬ ಸಂತರಿದ್ದರು. ಅಪಾರ ಅನುಭವ, ಆಳವಾದ ಜ್ಞಾನಭಂಡಾರ ಗಳಿಸಿದ್ದ ಅವರನ್ನು ‘ವಿದ್ವಾಂಸರ ಮುಕುಟಮಣಿ’ ಎಂಬ ಬಿರುದನ್ನಿತ್ತು ಅಲ್ಲಿಯ ಚಕ್ರವರ್ತಿಯು ಗೌರವಿಸುತ್ತಿದ್ದ.
ಅವರ ಕೀರ್ತಿ ಮಹಿಮೆಯನ್ನಾಲಿಸಿದ ಶ್ರೀಮಂತ ವ್ಯಾಪಾರಿಯೊಬ್ಬ ಅವರ ಬಳಿಗೆ ಬಂದು ಹೀಗೆ ನಿವೇದಿಸಿದ – ಮಹಾನ್ ಸಂತರೇ, ಎಲ್ಲೆಲ್ಲೂ ನಿಮ್ಮ ಗುಣಗಾನ ಕೇಳಿ ಮಾರ್ಗದರ್ಶನ ಪಡೆಯಲೆಂದು ನಿಮ್ಮ ದರ್ಬಾರಿಗೆ ಬಂದಿದ್ದೇನೆ. ನಾನು ಬಹಳಷ್ಟು ಪ್ರಯತ್ನಿಸಿದರೂ ಪ್ರಾಪಂಚಿಕ ಮೋಹ ತ್ಯಜಿಸಲಾರೆ. ಅದೇ ರೀತಿ ಭಗವಂತನಿಂದ ದೂರ ಹೋಗಲಾರೆ. ನಾನು ಈ ಲೌಕಿಕ ವ್ಯವಹಾರಗಳನ್ನು ನಡೆಸುತ್ತಿದ್ದರೂ ಭಗವಂತನ ಸೇವೆ ಮಾಡುತ್ತಾ ಸ್ವರ್ಗ ಸೇರಲು ಯಾವುದಾದರೂ ಉಪಾಯವಿದೆಯೆ?
ಸಂತರು ಶ್ರೀಮಂತ ವ್ಯಾಪಾರಿಯ ಉಭಯಸಂಕಟ ಅರ್ಥಮಾಡಿಕೊಂಡು ಮುಗುಳ್ನಕ್ಕು ನುಡಿದರು – ಒಂದು ಉಪಾಯವಿದೆ. ನೀನು ವ್ಯಾಪಾರದಲ್ಲಿ ಏನೇ ಸಂಪಾದನೆ ಮಾಡುವುದಿದ್ದರೂ ಸನ್ಮಾರ್ಗ, ಪ್ರಾಮಾಣಿಕತೆಯಿಂದ ಮಾಡುತ್ತಿರು. ಮೋಸದ ಸಂಪಾದನೆ ಬೇಡ. ನೀನು ಏನೇ ಖರ್ಚು ಮಾಡುವುದಿದ್ದರೂ ಇತರರ ಒಳಿತಿಗಾಗಿಯೇ ವೆಚ್ಚ ಮಾಡು.
ಆಗ ವ್ಯಾಪಾರಿ ಪ್ರಶ್ನಿಸಿದ – ಇಂಥ ದಾರಿಯಲ್ಲಿ ನಡೆಯಲು ಸಾಧ್ಯವೇ? ಆದರೆ ಸಂತರು ಅತ್ಯಂತ ಗಾಂಭೀರ್ಯದಿಂದ ಉತ್ತರಿಸಿದರು – ನೋಡಯ್ಯಾ, ಲೌಕಿಕದಲ್ಲಿದ್ದೂ ಭಗವಂತನನ್ನು ಸಂತೋಷಗೊಳಿಸಲು ಮತ್ತಾವ ದಾರಿಯೂ ಇಲ್ಲ. ಇದೊಂದೇ ದಾರಿ. ವ್ಯಾಪಾರಿಗೆ ಅವರ ಗಾಂಭೀರ್ಯದಿಂದ ತಾನು ಸಾಗಬೇಕಾದ ದಾರಿ ಯಾವುದು ಎಂದು ಅರ್ಥವಾಯ್ತು. ತಮ್ಮ ಕರ್ತವ್ಯಗಳ ಸರಿಯಾದ ಪಾಲನೆಯೇ ದೇವರ ಪೂಜೆಯಾಗಿದೆ.
ಭಗವಂತನನ್ನು ಆರಾಧಿಸುವ ಸುಲಭ ವಿಧಾನವೆಂದರೆ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವುದು. ಯಾರಿಗೂ ಹಾನಿ, ತೊಂದರೆ, ವಂಚನೆಯಾಗದಂತೆ ಇಡೀ ಪ್ರಪಂಚದ ಜನರೆಲ್ಲರೂ ತಮ್ಮತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಪೂರೈಸಿ, ಅವುಗಳ ಫಲವನ್ನು ಭಗವಂತನಿಗೆ ಸಮರ್ಪಿಸುವುದೇ ಅತಿದೊಡ್ಡ ಭಗವತ್ ಪೂಜೆ.
ದೇಹವೇ ಮಾದರಿ
ನಮ್ಮ ದೇಹವನ್ನು ಸರಿಯಾಗಿ ಪರೀಕ್ಷಿಸಿದರೆ ನಮಗೆ ಕರ್ತವ್ಯದ ಅರಿವಾಗುತ್ತದೆ. ದೇಹದ ಪ್ರತಿಯೊಂದು ಅಂಗಕ್ಕೂ ಅದರದ್ದೇ ಆದ ಜವಾಬ್ದಾರಿ, ಕರ್ತವ್ಯ ಇರುತ್ತದೆ. ಹೃದಯಕ್ಕೆ ಇಡೀ ದೇಹಕ್ಕೆ ನಿರಂತರವಾಗಿ ರಕ್ತವನ್ನು ಪೂರೈಸುವ ಜವಾಬ್ದಾರಿ ಇರುತ್ತದೆ. ರಕ್ತದಲ್ಲಿದ್ದ ಅಂಗಾರಾಮ್ಲವನ್ನು ಪಡೆದು ಅದಕ್ಕೆ ಶುದ್ಧ ಆಮ್ಲಜನಕವನ್ನು ಒದಗಿಸುವ ಜವಾಬ್ದಾರಿ ಶ್ವಾಸಕೋಶಗಳಿಗಿರುತ್ತದೆ. ದೇಹದ ಕಶ್ಮಲವನ್ನು ಮೂತ್ರದ ಮೂಲಕ ಹೊರಹಾಕುವ ಜವಾಬ್ದಾರಿ ಮೂತ್ರಪಿಂಡಗಳಿಗೆ ಇರುತ್ತದೆ. ತಿಂದ ಆಹಾರವನ್ನು ಕರಗಿಸುವ ಜವಾಬ್ದಾರಿ ಆಮಾಶಯ, ಕರುಳಿಗಿರುತ್ತದೆ. ಪ್ರತಿಯೊಂದನ್ನೂ ಯೋಚಿಸಿ, ನಿರ್ದೇಶಿಸುವ ಜವಾಬ್ದಾರಿ ಮೆದುಳಿಗಿರುತ್ತದೆ. ಹೀಗೆ ದೇಹದ ಪ್ರತಿಯೊಂದು ಅಂಗವೂ ತಮ್ಮತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿದರೆ ಮಾತ್ರ ಮನುಷ್ಯ ಆರೋಗ್ಯವಂತನಾಗಿರುತ್ತಾನೆ. ಯಾವುದೊ ಒಂದು ಅಂಗ ತನ್ನ ಕರ್ತವ್ಯವನ್ನು ನಿಭಾಯಿಸದಿದ್ದರೆ ಮನುಷ್ಯನ ಆರೋಗ್ಯ ಹಾಳಾಗುತ್ತದೆ. ಅಷ್ಟು ಮಾತ್ರ ಅಲ್ಲ, ಇನ್ನೊಬ್ಬರ ಕರ್ತವ್ಯದಲ್ಲಿ ಮೂಗು ತೂರಿಸಿದರೂ ಅವಾಂತರವಾಗುತ್ತದೆ. ‘ಇನ್ನೊಬ್ಬರ ಕರ್ತವ್ಯವನ್ನು ಚೆನ್ನಾಗಿ ಮಾಡುವುದಕ್ಕಿಂತ ತನ್ನ ಕರ್ತವ್ಯವನ್ನು ತಾನು ಮಾಡುವುದು ಉತ್ತಮ. ಅದರಲ್ಲಿ ಲೋಪವಾದರೂ ಚಿಂತೆಯಿಲ್ಲ. ಇನ್ನೊಬ್ಬರ ಕರ್ತವ್ಯವನ್ನು ಮಾಡುವುದು ಶ್ರೇಯಸ್ಕರವಲ್ಲ’ ಇದು ಗೀತೆಯ ಉಪದೇಶ.
ಕಣ್ಣು ಸದಾ ಪ್ರಾಪಂಚಿಕ ಸೌಂದರ್ಯವನ್ನು ನೋಡುತ್ತದೆ. ನಾನು ಆ ಭಾಗ್ಯದಿಂದ ವಂಚಿತನಾಗಿದ್ದೇನೆ. ಒಂದು ದಿನ ನಾನೂ ದೇಹದಿಂದ ಹೊರಬಂದು ಪ್ರಪಂಚವನ್ನು ನೋಡಬೇಕೆಂದು ಕರುಳೇನಾದರೂ ಬಾಯಿಯಿಂದ ಹೊರಬಂದರೆ ಮನುಷ್ಯನ ಗತಿ ಏನಾದೀತು? ಕಣ್ಣು ಹೊರಗಿದ್ದರೆ ಚೆಂದ. ಕರುಳು ಒಳಗಿದ್ದರೇನೇ ಅಂದ.
ಜವಾಬ್ದಾರಿಯ ಅರಿವು
ನಾವು ನಮ್ಮ ಕರ್ತವ್ಯವನ್ನು ಮರೆತು ಯಾವಾವುದೊ ಕ್ಷುಲ್ಲಕ ಕಾರಣಕ್ಕಾಗಿ ಮುಷ್ಕರ ಹೂಡುತ್ತೇವೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡುತ್ತೇವೆ. ಈ ರೀತಿ ಬೇಜವಾಬ್ದಾರಿಯ ವರ್ತನೆ ಪ್ರಜ್ಞಾವಂತ ನಾಗರಿಕರ ಲಕ್ಷಣವಲ್ಲ. ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ. ಇಂತಹ ಹೊಣೆಗಾರಿಕೆ ಇಲ್ಲದೆ ಇದ್ದದ್ದರಿಂದಲೇ ಇನ್ನೂ ಕೂಡ ನಾವು ಜಗತ್ತಿನಲ್ಲಿ ‘ಅಭಿವೃದ್ಧಿ ಹೊಂದಿದ ದೇಶ’ ಆಗದೆ ‘ಅಭಿವೃದ್ಧಿ ಹೊಂದುತ್ತಿರುವ ದೇಶ’ವಾಗಿ ಉಳಿದಿದ್ದೇವೆ.
ಭಾರತೀಯ ಮೂಲದ ಸಿಂಗಾಪುರದ ನಿವಾಸಿಯೊಬ್ಬ ಭಾರತದ ಬಗ್ಗೆ ತನ್ನ ಅನಿಸಿಕೆಯನ್ನು ಈ ರೀತಿ ತೋಡಿಕೊಂಡ: ನಾನು ಈ ಜಗತ್ತಿನ ಅನೇಕ ದೇಶಗಳನ್ನು ಕಂಡಿದ್ದೇನೆ. ಭಾರತದಂಥ ದೇಶ ಇನ್ನೆಲ್ಲಿಯೂ ಇಲ್ಲ. ಇಲ್ಲಿಯ ನೆಲ, ಜಲ, ಹವೆ, ವನ ಹಾಗೂ ಖನಿಜಸಂಪತ್ತು ಎಲ್ಲವೂ ಚೆನ್ನಾಗಿ ಇದೆ. ಇಲ್ಲಿ ಒಳ್ಳೆಯ ನಿಪುಣ ಮಾನವಶಕ್ತಿಯೂ ಇದೆ. ಆದರೆ ಇವೆಲ್ಲ ಇದ್ದೂ ಭಾರತವು ಅಭಿವೃದ್ಧಿ ಹೊಂದುತ್ತಿಲ್ಲ. ಬೆಳೆಯುವುದಕ್ಕೆ ಬೇಕಾದ ಎಲ್ಲ ಗುಣವಿಶೇಷಗಳು ಇದ್ದರೂ ಈ ದೇಶ ಬೆಳೆಯದೆ ಹಿಂದೆ ಬಿದ್ದಿದೆ. ಅದು ಹಿಂದೆ ಬಿದ್ದಿರುವುದಕ್ಕೆ ಒಂದು ಕಾರಣ ಇದೆ. ಇಲ್ಲಿಯ ಜನರಿಗೆ ಕರ್ತವ್ಯದ ಹಾಗೂ ಕಾಲದ ಪ್ರಜ್ಞೆ ಇಲ್ಲ. ಒಂದು ಸಣ್ಣ ಮಾತಿಗೂ ಕೂಡ ಇಲ್ಲಿ ಮುಷ್ಕರ ಹೂಡಲು ಮುಂದಾಗುತ್ತಾರೆ. ಸಿಂಗಾಪುರದಲ್ಲಿ ಮುಷ್ಕರ ಎನ್ನುವ ಮಾತೇ ಇಲ್ಲ.
ನಮ್ಮ ಇಂದಿನ ಪ್ರಧಾನಿ `ಸ್ವಚ್ಛಭಾರತ’ಕ್ಕೆ ಎಲ್ಲರೂ ಕೊಡುಗೆ ಕೊಡಬೇಕೆಂದು ಕರೆ ಕೊಟ್ಟಿದ್ದಾರೆ. ಇದರಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಇದೆ. ನಮ್ಮ ಊರು-ಕೇರಿಯ ಸ್ವಚ್ಛತೆಯ ಜವಾಬ್ದಾರಿ ಸಂಬಂಧಪಟ್ಟ ಪುರಸಭೆಯದ್ದೋ, ನಗರಸಭೆಯದ್ದೋ ಎಂಬುದಾಗಿ ಭಾವಿಸಿ ನಾವು ಕರ್ತವ್ಯಚ್ಯುತರಾದರೆ ಅದೊಂದು ಘೋರ ಅಪರಾಧವಾಗುತ್ತದೆ. ಪ್ರತಿಯೊಬ್ಬರೂ ತಮ್ಮತಮ್ಮ ಮನೆಯ ಮುಂದಿನ ಕಸ ಗುಡಿಸಿದರೆ ಇಡೀ ದೇಶವೇ ಸ್ವಚ್ಛವಾಗುತ್ತದೆ.
ಕರ್ತವ್ಯಶ್ರೇಷ್ಠತೆ
ಇನ್ನೊಬ್ಬರ ಕರ್ತವ್ಯವನ್ನು ನಾವು ಬಹುಬೇಗ ನೆನಪಿಸಿಕೊಡುತ್ತೇವೆ. ಅದೇ ವೇಳೆ ನಮ್ಮ ಕರ್ತವ್ಯವನ್ನು ಮಾಡಲು ಮರೆಯುತ್ತೇವೆ. ವೈದ್ಯರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ, ಉಪಾಧ್ಯಾಯರು ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ನಿರ್ಮಿಸುತ್ತಿಲ್ಲ. ವಕೀಲರು ಅಪ್ರ್ರಾಮಾಣಿಕರು, ವ್ಯಾಪಾರಿಗಳು ಮೋಸಗಾರರು, ಸರ್ಕಾರೀ ಅಧಿಕಾರಿಗಳು ಭ್ರಷ್ಟಾಚಾರಿಗಳು – ಎಂಬಿತ್ಯಾದಿ ಆಪಾದನೆಗಳು ಸಮಾಜದಲ್ಲಿ ಆಗಾಗ ಕೇಳಿಬರುತ್ತವೆ.
ಪತ್ರಕರ್ತರಿಗೂ ಕೆಲವೊಂದು ಕರ್ತವ್ಯವಿದೆ. ಯಾವ ಸುದ್ದಿಯನ್ನು ಪರಿಗಣಿಸಬೇಕು, ಯಾವುದನ್ನು ಕಡೆಗಣಿಸಬೇಕು ಎಂಬ ಜವಾಬ್ದಾರಿ ಪತ್ರಕರ್ತರಿಗಿದೆ. ಋಣಾತ್ಮಕ ಸುದ್ದಿಗಿಂತ ಧನಾತ್ಮಕ ಸುದ್ದಿಗಳನ್ನು ಹೆಚ್ಚು ಪ್ರಕಟಿಸಿ, ನಮ್ಮ ಸುತ್ತಲೂ ಸಕಾರಾತ್ಮಕ ವಾತಾವರಣವನ್ನು ಉಂಟುಮಾಡಿ, ಸ್ವಸ್ಥ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಪತ್ರಕರ್ತರದ್ದು. ಅಷ್ಟು ಮಾತ್ರವಲ್ಲ ಎಲ್ಲಾದರೂ ಅಮಾನವೀಯ ಘಟನೆ ನಡೆಯುವ ಸಂದರ್ಭದಲ್ಲಿ ಕೇವಲ ಸುದ್ದಿಯನ್ನು ಬಿತ್ತರಿಸುವ ಪತ್ರಕರ್ತರಾಗಿರದೆ ತೊಂದರೆಗೆ ಒಳಗಾದವರ ಕಷ್ಟಕ್ಕೆ ಸ್ಪಂದಿಸಿ, ಕೈಲಾದ ಸಹಾಯವನ್ನು ಮಾಡಿ ಮಾನವೀಯತೆಯನ್ನು ತೋರಿಸುವ ಕರ್ತವ್ಯವೂ ಇವರಿಗಿರುತ್ತದೆ.
ಕೆವಿನ್ ಕಾರ್ಟರ್, ಕೆನ್ ಓಸ್ಟರ್ಬ್ರೋಕ್, ಗ್ರೆಗ್ ಮರಿನೋವಿಚ್, ಜೋ ಆಮೋ ಸಿಲ್ವಾ ಇವರೆಲ್ಲರೂ ದಕ್ಷಿಣ ಆಫ್ರಿಕಾದ ಫೋಟೋಗ್ರಾಫರ್ಸ್. ವರ್ಣಭೇದ ನೀತಿಯ ವಿರುದ್ಧ ಭುಗಿಲೆದ್ದಿದ್ದ ಜನಾಂಗೀಯ ಸಮರ, ಸಾಮಾಜಿಕ ಕಲಹ ೧೯೯೦ರ ವೇಳೆಗೆ ತುತ್ತತುದಿಗೇರಿತ್ತು. ಬಿಳಿಯರು-ಕರಿಯರು ಕೊಲೆ, ಕಚ್ಚಾಟದಲ್ಲಿ ತೊಡಗಿದ್ದರು. ಅಂತಹ ಹಿಂಸೆಯ ಹಸಿಹಸಿ ಫೋಟೋಗಳನ್ನು ತೆಗೆಯುವುದೇ ಈ ನಾಲ್ವರು ಛಾಯಾಚಿತ್ರಕಾರರ ಮುಖ್ಯ ದಂಧೆಯಾಗಿತ್ತು. ಜೋಹಾನ್ಸ್ಬರ್ಗ್ನ ಮ್ಯಾಗ್ಝಿನ್ನಲ್ಲಿ ಪ್ರಕಟವಾಗುತ್ತಿದ್ದ ಹೃದಯವಿದ್ರಾವಕ ಚಿತ್ರಗಳೆಲ್ಲ ಇವರದ್ದೇ ಆಗಿರುತ್ತಿದ್ದವು. The Bang–Bang Club ಎಂದೇ ಇವರು ಹೆಸರಾಗಿದ್ದರು. ೧೯೯೧ರಲ್ಲಂತೂ ಈ ಫೋಟೋಗ್ರಾಫರ್ಗಳ ಗ್ಯಾಂಗಿಗೆ ಜಗತ್ತಿನಿಂದ ಅತಿ ದೊಡ್ಡ ಮನ್ನಣೆಯೇ ಸಿಕ್ಕಿತು. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ನ ಕಾರ್ಯಕರ್ತನೊಬ್ಬ ಶ್ವೇತವರ್ಣೀಯನನ್ನು ಚೂರಿಯಿಂದ ಇರಿದು ಸಾಯಿಸುತ್ತಿರುವುದನ್ನು ಸೆರೆಹಿಡಿದಿದ್ದ ಗ್ರೆಗ್ ಮರಿನೋವಿಚ್ನ ಛಾಯಾಚಿತ್ರಕ್ಕೆ ಪುಲಿಟ್ಜರ್ ಪ್ರಶಸ್ತಿ ಬಂತು. ಆದರೆ ಪುಲಿಟ್ಜರ್ ಪ್ರಶಸ್ತಿ ಬಂದ ನಂತರ ಈ ನಾಲ್ವರು ಫೋಟೋಗ್ರಾಫರ್ಗಳಲ್ಲೇ ಮೇಲಾಟ ಆರಂಭವಾಯಿತು. ಅತ್ಯುತ್ತಮ ಚಿತ್ರವನ್ನು ತಾನೇ ತೆಗೆಯಬೇಕೆಂಬ ಸೆಣಸಾಟ ಆರಂಭವಾಯಿತು. ಅದರಲ್ಲೂ ತುಂಬ ಮಹತ್ತ್ವಾಕಾಂಕ್ಷಿಯಾಗಿದ್ದ ಕೆವಿನ್ ಕಾರ್ಟರ್ ತಾನು ಕೆಲಸಮಾಡುತ್ತಿದ್ದ ‘ವೀಕ್ಲಿ ಮೇಯ್ಲ್’ ಪತ್ರಿಕೆಯಿಂದ ರಜೆ ಪಡೆದು, ಒಂದಿಷ್ಟು ಸಾಲ ಮಾಡಿ ೧೯೯೩ರಲ್ಲಿ ಸೂಡಾನ್ನತ್ತ ಹೊರಟ.
ಸೂಡಾನ್ ಭಾರೀ ಬರಕ್ಕೆ ತುತ್ತಾಗಿತ್ತು, ಅರಾಜಕತೆ ಸೃಷ್ಟಿಯಾಗಿತ್ತು. ಜನರು ಜನರನ್ನೇ ಸುಟ್ಟು ತಿನ್ನುವಷ್ಟು ಹಸಿದಿದ್ದರು. ಸೂಡಾನ್ನ ‘ಅಯೋದ್’ ಎಂಬ ಸ್ಥಳಕ್ಕೆ ಆಗಮಿಸಿದ ಕಾರ್ಟರ್ ಒಳ್ಳೆಯ ಫೋಟೋಕ್ಕಾಗಿ ಊರೂರು ಸುತ್ತಲಾರಂಭಿಸಿದ. ಹಸಿವಿನಿಂದ ಬಳಲುತ್ತಿರುವ, ಸಾವನ್ನು ಎದುರುನೋಡುತ್ತಿರುವ, ಅದಾಗಲೇ ಸಾವಿಗೆ ತುತ್ತಾಗಿರುವವರ ಫೋಟೋ ತೆಗೆದ. ಹಾಗೆ ಸುತ್ತುತ್ತಿರುವಾಗ ಎಲ್ಲಿಂದಲೋ ಕೀರಲು ಧ್ವನಿಯೊಂದು ಕೇಳಿಸತೊಡಗಿತು. ಧ್ವನಿಯ ದಿಕ್ಕನ್ನೇ ಹಿಡಿದು ಬಂದರೆ, ಒಂದು ಸಣ್ಣ ಹೆಣ್ಣು ಮಗು ವಿಶ್ವಸಂಸ್ಥೆ ನಡೆಸುತ್ತಿದ್ದ ಗಂಜಿಕೇಂದ್ರದತ್ತ ಹೋಗಲು ಕಷ್ಟಪಡುತ್ತಿರುವುದು ಕಂಡಿತು. ಒಳ್ಳೆಯ ಫೋಟೋ ಸಿಕ್ಕಿತು ಎಂದುಕೊಂಡ ಕಾರ್ಟರ್, ಅದನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುವಷ್ಟರಲ್ಲಿ ಆ ಮಗುವಿನ ಹಿಂದೆ ರಣಹದ್ದೊಂದು ಬಂದು ಕುಳಿತುಕೊಂಡಿತು, ತನ್ನ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ.
ಮಹತ್ತ್ವಾಕಾಂಕ್ಷಿ ಫೋಟೋಗ್ರಾಫರ್ ಕೆವಿನ್ ಕಾರ್ಟರ್
ಆ ಮಗುವಿನ ಯಾತನೆಯನ್ನು ತನ್ನ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದವನೂ ಕೂಡ ಒಬ್ಬ ರಣಹದ್ದೇ ಆಗಿದ್ದ…
ಅನಿರೀಕ್ಷಿತವಾಗಿ ಆಗಮಿಸಿ ಕ್ಯಾಮೆರಾದ ಫ್ರೇಮ್ನೊಳಕ್ಕೆ ಸಿಕ್ಕಿಕೊಂಡ ರಣಹದ್ದಿನ ಫೋಟೋ ಕಾರ್ಟರ್ನ ಅದೃಷ್ಟವನ್ನೇ ಬದಲಾಯಿಸಿಬಿಟ್ಟಿತು! ಸೂಡಾನ್ನಲ್ಲಿನ ಬರದ ಬಗ್ಗೆ ಯಾವುದಾದರೂ ಒಳ್ಳೆಯ ಚಿತ್ರಗಳಿವೆಯೇ ಎಂದು ಶೋಧಿಸುತ್ತಿದ್ದ ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಕಣ್ಣಿಗೆ ಬಿತ್ತು ಕಾರ್ಟರ್ನ ಚಿತ್ರ. ಕೂಡಲೇ ಕಾರ್ಟರ್ನಿಂದ ಫೋಟೋವನ್ನು ಖರೀದಿ ಮಾಡಿದ ನ್ಯೂಯಾರ್ಕ್ ಟೈಮ್ಸ್ ೧೯೯೩, ಮಾರ್ಚ್ ೨೬ರ ತನ್ನ ಸಂಚಿಕೆಯಲ್ಲಿ ಪ್ರಕಟಿಸಿತು. ಇದ್ದಕ್ಕಿದ್ದಂತೆಯೇ ಆ ಚಿತ್ರ ಜಗತ್ತಿನ ಅತ್ಯುತ್ತಮ ಚಿತ್ರವಾಗಿ ಕಾರ್ಟರ್ ಪ್ರಖ್ಯಾತ ಫೋಟೋಗ್ರಾಫರ್ ಆದ. ಆ ಚಿತ್ರವಂತೂ ಆಫ್ರಿಕಾದ ವೇದನೆಯ ಸಂಕೇತವಾಗಿಬಿಟ್ಟಿತು. ಕಾರ್ಟರ್ಗೆ ತಿಂಗಳಿಗೆ ಮೂರು ಸಾವಿರ ಡಾಲರ್ ನೀಡಿ ರಾಯಿಟರ್ಸ್ ಏಜೆನ್ಸಿ ಹೊಸ ಕೆಲಸ ಕೊಟ್ಟಿತು. ಆತನ ಫೋಟೋವನ್ನು ಜಗತ್ತಿನ ಬಹಳಷ್ಟು ಪತ್ರಿಕೆಗಳು ಮರುಪ್ರಕಟ ಮಾಡಿದವು. ಹೀಗೆ ಹೀರೋ ಆದ ಕೆವಿನ್ ಕಾರ್ಟರ್ಗೆ ಪುಲಿಟ್ಜರ್ ಪ್ರಶಸ್ತಿಯೂ ಬಂತು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡು ಆಫ್ರಿಕಾಕ್ಕೆ ವಾಪಾಸ್ಸಾದ.
ಅಂದು ನ್ಯೂಯರ್ಕ್ ಟೈಮ್ಸ್ನಲ್ಲಿ ಕಾರ್ಟರ್ನ ಫೋಟೋ ಪ್ರಕಟವಾದ ನಂತರ ಪತ್ರಿಕಾ ಕಛೇರಿಗೆ ಸಾವಿರಾರು ಪತ್ರಗಳು ಬರಲಾರಂಭಿಸಿದವು. ಎಲ್ಲರದ್ದೂ ಒಂದೇ ಪ್ರಶ್ನೆ – ಆ ಮಗು ಏನಾಯಿತು? ಗಂಜಿಕೇಂದ್ರವನ್ನು ತಲಪಿತೇ? ಇನ್ನೂ ಬದುಕಿದೆಯೇ? ಫೋಟೋ ತೆಗೆದ ಕೆವಿನ್ ಕಾರ್ಟರ್ಗೇ ಮಗು ಏನಾಯಿತು ಎಂಬುದು ತಿಳಿದಿರಲಿಲ್ಲ; ಫೋಟೋ ತೆಗೆದ ನಂತರ ಆತ ಸಿಗರೇಟು ಹಚ್ಚಿಕೊಂಡು ಅಲ್ಲಿಂದ ಮುಂದೆ ಸಾಗಿದ್ದ! ಮಗುವನ್ನು ಗಂಜಿಕೇಂದ್ರಕ್ಕೆ ತಲಪಿಸುವ ತನ್ನ ಕರ್ತವ್ಯವನ್ನು ಮರೆತಿದ್ದ!
ಒಬ್ಬ ಫೋಟೋ ಜರ್ನಲಿಸ್ಟ್ನ ಕೆಲಸ ಫೋಟೋವನ್ನಷ್ಟೆ ತೆಗೆಯುವುದೇ ಅಥವಾ ಆತನಿಗೂ ಸಾಮಾಜಿಕ ಜವಾಬ್ದಾರಿಗಳಿವೆಯೇ? ಅಂದು ಜಗತ್ತಿನಾದ್ಯಂತ ಇಂತಹ ಚರ್ಚೆಯೇ ಆರಂಭವಾಗಿಬಿಟ್ಟಿತು. ಕಾರ್ಟರ್ನ ನಡತೆಯನ್ನೇ ಪ್ರಶ್ನಿಸಲಾಯಿತು. ಆ ಮಗುವಿನ ಯಾತನೆಯನ್ನು ತನ್ನ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದವನೂ ಕೂಡ ಒಬ್ಬ ರಣಹದ್ದೇ ಆಗಿದ್ದ ಎಂದು ‘ಫ್ಲೋರಿಡಾ ಟೈಮ್ಸ್’ ಪತ್ರಿಕೆ ಟೀಕಿಸಿತು. ಕಾರ್ಟರ್ ಕುಗ್ಗಿಹೋದ, ಪಾಪಪ್ರಜ್ಞೆಯಿಂದ ಬಳಲಿದ, ಖಿನ್ನತೆಗೊಳಗಾದ. ಮೂವತ್ಮೂರು ವರ್ಷದ ಕಾರ್ಟರ್ ತಾನೆಸಗಿದ ತಪ್ಪಿನ ಬಗ್ಗೆ ಎಷ್ಟು ನೊಂದುಕೊಂಡನೆಂದರೆ ೧೯೯೪ ಜುಲೈ ೨೭ರಂದು ಬದುಕಿಗೇ ತೆರೆ ಎಳೆದುಕೊಂಡ. ಬಾಲ್ಯವನ್ನು ಕಳೆದಿದ್ದ ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಂಡ. ಆತನ ಆತ್ಮಹತ್ಯೆ ಒಬ್ಬ ಪತ್ರಕರ್ತನಿಗೂ ಸಾಮೂಹಿಕ ಜವಾಬ್ದಾರಿಗಳಿವೆ ಎಂಬುದಕ್ಕೆ ದ್ಯೋತಕವಾಗಿತ್ತು.
ನಮ್ಮ ಬಹುದೊಡ್ಡ ಸಮಸ್ಯೆ ಏನೆಂದರೆ ಯಾರೂ ಜವಾಬ್ದಾರಿಯನ್ನು ಹೊರಲು ಸಿದ್ಧರಿಲ್ಲದಿರುವುದು. ಸರಕಾರದ ಯಾವುದೇ ಕೆಲಸ ಆಗಬೇಕಾದರೂ ಹಲವಾರು ವಿಭಾಗಗಳ ಅನುಮತಿ ಬೇಕಾಗಿರುತ್ತದೆ. ಆದರೆ ಯಾವ ವಿಭಾಗದವರೂ ಹೊಣೆಗಾರಿಕೆ ಹೊರಲು ತಯಾರಿಲ್ಲ. ತನ್ನಲ್ಲಿಗೆ ಬಂದ ಕಡತವನ್ನು ಇನ್ನೊಂದು ವಿಭಾಗದವರಿಗೆ ವರ್ಗಾಯಿಸಿ ತಮ್ಮ ಕೈ ತೊಳೆದುಬಿಡುತ್ತಾರೆ. ಇದರಿಂದ ದೇಶದ ಪ್ರಗತಿ ಕುಂಠಿತವಾಗುತ್ತದೆ.
ಕರ್ತವ್ಯವನ್ನು ಮಾಡುವುದೆಂದರೆ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು. ಯಾವುದೇ ಒಂದು ಕುಟುಂಬ, ಸಂಸ್ಥೆ, ದೇಶ ಯಶಸ್ವಿಯಾಗಬೇಕಾದರೆ ಮನುಷ್ಯ ಮೊದಲು ಜವಾಬ್ದಾರಿಯನ್ನು ಹೊರಲು ತಯಾರಿರಬೇಕು. ಎಲ್ಲಿ ಬೇಜವಾಬ್ದಾರಿ ಇರುತ್ತದೊ ಅಲ್ಲಿ ಸೋಲು ಕಟ್ಟಿಟ್ಟ ಬುತ್ತಿ.
ಪಾಲಿಗೆ ಬಂದ ಕರ್ತವ್ಯವನ್ನು ಮಾಡದೇ ಇರುವುದಕ್ಕೆ ನೂರಾರು ಕಾರಣಗಳನ್ನು ಕೊಡಬಹುದು. ಆದರೆ ಕರ್ತವ್ಯವನ್ನು ಮಾಡಲು ಇರುವ ಒಂದೇ ಕಾರಣವೆಂದರೆ ಆತ್ಮಸಾಕ್ಷಿ. ಕೊನೆಗೆ ಉಳಿಯುವುದು ಏನು ಮಾಡಿದೆವು ಎಂಬುದು ಮಾತ್ರ. ಆತ್ಮಸಾಕ್ಷಿಗೆ ಸರಿಯಾಗಿ ಕರ್ತವ್ಯವನ್ನು ಮಾಡಿದರೆ ಅದು ನಮ್ಮನ್ನು ಉನ್ನತಿಗೊಯ್ಯುತ್ತದೆ. ಅದೇ ನಮ್ಮನ್ನು ಸತ್ಯದೆಡೆಗೆ ಕೊಂಡೊಯ್ಯುತ್ತದೆ. ಪಾಲಿಗೆ ಬಂದ ಕರ್ತವ್ಯಗಳನ್ನು ಮಾಡಿದಾಗ, ವಹಿಸಿದ ಜವಾಬ್ದಾರಿಯನ್ನು ಹೊತ್ತು ಅದನ್ನು ಪೂರ್ಣಗೊಳಿಸಿದಾಗ ಸಿಗುವ ಸಮಾಧಾನ, ತೃಪ್ತಿ ಹಣದಿಂದ ಎಂದೂ ಸಿಗದು.
Comments are closed.