ಅದ್ವೈತಸ್ಥಿತಿಯಲ್ಲಿ ಯಾರು ಯಾರಿಗೆ ಏನನ್ನು ಕೊಡುವರು? ಭ್ರಾಂತಿರೂಪ ಹಾಸಿಗೆಯ ಮೇಲೆ ಒಬ್ಬಾತ ಗಾಢವಾದ ಅಜ್ಞಾನದಿಂದ ನಿದ್ರಿಸ್ತನಾಗಿರುವಾಗ ಜನ್ಮ-ಮೃತ್ಯುಗಳ ದುಷ್ಟ ಸ್ವಪ್ನವನ್ನು ಭೋಗಿಸುವನು. ಅನಂತರ ಅಕಸ್ಮಾತ್ತಾಗಿ ಎಚ್ಚೆತ್ತ ಮೇಲೆ ಆ ಎಲ್ಲ ಸ್ವಪ್ನಗಳು ಸುಳ್ಳಾಗುವವು. ತನ್ನಲ್ಲಿಯೇ ತನ್ನ ನಿತ್ಯ ಸದ್ಭಾವದ (ತಾನು ಅಮರನೆಂಬ) ಪ್ರತ್ಯಯವು ಬರುವುದು. ಆದ್ದರಿಂದ ಧನಂಜಯನೇ, ಮನುಷ್ಯನು ನಾಶವಂತ ದೇಹದ ಅಭಿಮಾನವನ್ನು ತಳೆದು, ತಾನೇ ತನ್ನ ನಾಶಕ್ಕೆ ಕಾರಣನಾಗುವನು.
ಈ ಮನವರಿಕೆಯಿಂದ ಅಹಂಕಾರವನ್ನು ಬಿಡಬೇಕು. ಅಂದರೆ ತಾನು ನಿತ್ಯಸಿದ್ಧ ಬ್ರಹ್ಮವಸ್ತುವಾಗುವನು. ಇದರಿಂದ ಸಹಜವಾಗಿ ತಾನೇ ತನ್ನ ಹಿತವನ್ನು ಮಾಡಿಕೊಂಡಂತಾಗುವುದು. ಇಲ್ಲವಾದರೆ ಮೈಹೊದಿಕೆಯುಳ್ಳ ಕೀಟದಂತೆ ತನಗೆ ಪ್ರಿಯವಾದ ಶರೀರದಲ್ಲಿಯೇ ಆತ್ಮಬುದ್ಧಿಯುಳ್ಳವನು, ತಾನೇ ತನ್ನ ವೈರಿಯಾಗುವನು. ಏನು ಹೇಳಲಿ! ಹತಭಾಗಿಗೆ ಲಾಭದ ಸಂಧಿಯುಂಟಾದಾಗ ಕುರುಡುತನದ ಬಯಕೆಯುಂಟಾಗಿ, ತನ್ನ ಕಣ್ಣು ಮುಚ್ಚಿಕೊಂಡು ವಸ್ತುಲಾಭಕ್ಕೆ ಎರವಾಗುವನು. ಅಥವಾ ಯಾವನೊಬ್ಬನು ‘ಮೊದಲಿನವನು ನಾನಲ್ಲ. ಅವನು ಆಳವಾಗಿ ಹೋದನು’ ಎಂದು ಭ್ರಮೆಯಿಂದ ಸಲ್ಲದ ಆಗ್ರಹವನ್ನು ಅಂತಃಕರಣದಲ್ಲಿ ಧರಿಸುವನು. ವಿಚಾರ ಮಾಡಿ ನೋಡಲು ಈಗಿರುವ ನಾನೇ ಮೊದಲಿನವನು ಎಂದು ತಿಳಿಯುವುದು. ಆದರೆ ಮಾಡುವುದೇನು? ಆತನಿಗೆ ಅದು ಸಮ್ಮತವೇ ಆಗುವುದಿಲ್ಲ. ಕನಸಿನಲ್ಲಿ ಮಾಡಲಾದ ವಧೆಯಿಂದ ಯಾವನೊಬ್ಬನೂ ನಿಜವಾಗಿ ಸಾಯುವನೇ? (ಭ್ರಮೆಯಿಂದ ತಾನು ಸುಖಿಯು, ದುಃಖಿಯು, ಕರ್ತೃವು, ಭೋಕ್ತೃವು ಎಂದು ತಿಳಿಯುತ್ತಿರುವಾಗ ಕೂಡ, ಅವನು ಮೇಲಿನ ದೃಷ್ಟಾಂತದಂತೆ ಬ್ರಹ್ಮರೂಪನೇ ಆಗಿರುವನು). ಗಿಳಿಗೆ ಕುಳಿತುಕೊಳ್ಳಲು ಹಚ್ಚಿದ ನಲಿಕೆಯು ಅದರ ಶರೀರದ ಭಾರದಿಂದ ತಿರುಗಿದೆ, ಅದು ನಿಜವಾಗಿ ಹಾರಿಹೋಗಬೇಕು. ಆದರೆ ಅದು ಹಾಗೆ ಮಾಡದೆ ತಾನು ಬಿದ್ದೇನೆಂಬ ಭಯದಿಂದ ಅದನ್ನೇ ಗಟ್ಟಿಯಾಗಿ ಹಿಡಿಯುವುದು, ಗೋಣು ಅಲ್ಲಾಡಿಸುವುದು, ಚಂಚುವಿನಿಂದ ಬಿಗಿಯಾಗಿ ಕಚ್ಚುವುದು, ಭ್ರಮೆಯಿಂದ ತಾನು ನಿಜವಾಗಿಯೇ ಕಟ್ಟಲ್ಪಟ್ಟಿರುವೆನೆಂಬ ದೃಢಭಾವನೆಯಿಂದ ಮೇಲಕ್ಕೆ ಹಾರದೆ, ತನ್ನ ಕಾಲುಬೆರಳುಗಳಿಂದ ನಲಿಕೆಯನ್ನು ಗಟ್ಟಿಯಾಗಿ ಹಿಡಿಯುವುದು. ಹೀಗೆ ಕಾರಣವಿಲ್ಲದೆ ಸಿಕ್ಕಿಬಿದ್ದಿರುವ ಅದನ್ನು ಅನ್ಯರಾರಾದರೂ ಬಂಧಿಸಿರುವರೇ? ಹೇಳು. ಅಂತಹ ಅವಸ್ಥೆಯಲ್ಲಿ ಅದನ್ನು ಅರ್ಧಶರೀರಿಯಾಗುವಂತೆ ಕೊಯ್ದುಕೊಂಡರೂ ಅದು ನಲಿಕೆಯನ್ನು ಬಿಡುವುದಿಲ್ಲ. ಆದ್ದರಿಂದ ತಾನು, ತನ್ನದು ಎಂಬ ಮನದೊಳಗಿನ ಸಂಕಲ್ಪವನ್ನು ಬೆಳೆಸಿಕೊಂಡವನು, ತಾನೇ ತನ್ನ ವೈರಿಯಾಗುವನು. ನಾಶವಂತ ವಸ್ತುವಿನ ಅಭಿಮಾನವನ್ನು ಹಿಡಿಯದವನೇ ಆತ್ಮಾನುಭವಿಯೆಂದು ತಿಳಿಯಬೇಕು.
[‘ಜ್ಞಾನೇಶ್ವರೀಗೀತೆ’, ಅಧ್ಯಾಯ ಆರು.
ಅನುವಾದ: ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ]
How to unsubscribe to utThana newsletter?