ದೇಶಭಕ್ತರು ಯಾರು? ದೇಶದ್ರೋಹಿಗಳು ಯಾರು? ಬ್ರಿಟಿಷರಿಂದ ಮುಕ್ತಗೊಂಡು; ತನ್ನದೇ ಆದ ಸಂವಿಧಾನ ರೂಪಿಸಿ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹೆಗ್ಗಳಿಕೆ ಹೆಗಲಿಗೇರಿಸಿಕೊಂಡು ೬೦ ವರ್ಷಗಳು ಕಳೆದ ನಂತರವೂ ಭಾರತದಲ್ಲಿ ಈ ಪ್ರಶ್ನೆ ಪ್ರಸ್ತುತವಾಗಿಯೇ ಉಳಿದಿದೆ. ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿದೆಯೆ? ಪ್ರಸ್ತುತ ಬಹಳ ಚರ್ಚೆಯಲ್ಲಿರುವುದು ‘ಜೆಎನ್ಯು ಘಟನೆ’. ಭಾರತದ ಪ್ರಜಾಪ್ರಭುತ್ವದ ದೇಗುಲ ಸಂಸದ್ಭವನದ ಮೇಲೆ ದಾಳಿ ಮಾಡಿದ ಉಗ್ರ ಅಫ್ಜಲ್ಗೆ ಜೈಕಾರ; ಅಫ್ಜಲ್ ನೀನು ಕೈಗೊಂಡ ಕಾರ್ಯ ಸಫಲವಾಗುವ ತನಕ ನಾವು ವಿರಮಿಸೆವು – ಎಂಬಿತ್ಯಾದಿ ಘೋಷಣೆಗಳು ಜವಾಹರಲಾಲ್ ನೆಹರು ಹೆಸರಿನ ದಿಲ್ಲಿಯ ವಿಶ್ವವಿದ್ಯಾಲಯದಲ್ಲಿ ಕೇಳಿಬಂದವು. ಇಂತಹ ವಿದ್ಯಾರ್ಥಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು. ದೇಶದ ಪರವಾಗಿ ನಿಲ್ಲಬೇಕಿದ್ದ ಪ್ರಮುಖ ಪಕ್ಷಗಳು (ಕಾಂಗ್ರೆಸ್, ಜೆಡಿಯು, ಸಿಪಿಎಂ, ಆಮ್ ಆದ್ಮಿ ಇತ್ಯಾದಿ) ಜಿದ್ದಿಗೆ ಬಿದ್ದವರಂತೆ ಅಫ್ಜಲ್ಗೆ ಜೈಕಾರ ಹಾಕಿದವರ ಪರವಾಗಿ ನಿಂತವು. ಪ್ರಗತಿಪರರೆಂದು ಹಣೆಪಟ್ಟಿ ಹಚ್ಚಿಕೊಂಡ ಕೆಲ ಮಾಧ್ಯಮ ವರ್ಗದವರೂ ಬೀದಿಗಿಳಿದು ಬೆಂಬಲ ವ್ಯಕ್ತಪಡಿಸಿದರು. ದುರ್ದೈವದ ಸಂಗತಿಯೆಂದರೆ ಇದೇ ಸಂದರ್ಭದಲ್ಲಿ ದೇಶರಕ್ಷಣೆಗಾಗಿ ಹುತಾತ್ಮರಾದ ಸೈನಿಕರ ಬಗ್ಗೆ ಈ ಯಾವ ಮಂದಿಯೂ ಬೀದಿಗಿಳಿದದ್ದಾಗಲಿ, ಹುತಾತ್ಮ ಯೋಧರ ಪರವಾಗಿ ಮಾತನಾಡಿದ್ದಾಗಲಿ ಕೇಳಲೇ ಇಲ್ಲ. ಯಾಕೆ ಹೀಗೆ? ಇಂತಹ ಘಟನೆಗಳು ಭಾರತದಲ್ಲಿ ನಿರಂತರವಾಗಿ ನಡೆಯುತ್ತಿರುವುದರ ಹಿನ್ನೆಲೆ ಏನು?
ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಹಾಗೂ ಇಂತಹ ಸೋಗಲಾಡಿ ಚಿಂತಕರ ಬಂಡವಾಳ ಬಯಲು ಮಾಡುವ ದಿಟ್ಟ ಪ್ರಯತ್ನವನ್ನು ‘ಟಿಪ್ಪು ಮತ್ತು ಕೊಡವರು; ಬಚ್ಚಿಟ್ಟ ಸತ್ಯ ಬಿಚ್ಚಿಟ್ಟಾಗ…’ ಎಂಬ ಈ ಕೃತಿಯಲ್ಲಿ ಕಾಣಬಹುದು.
ಈ ಕೃತಿಯನ್ನು ಬರೆದ ಅಡ್ಡಂಡ ಕಾರ್ಯಪ್ಪನವರು ನೀನಾಸಂ ನಂತಹ ಪ್ರತಿಷ್ಠಿತ ರಂಗಭೂಮಿಯಲ್ಲಿ ಕೆಲಸ ಮಾಡಿದ ಅನುಭವಿಗಳು. ರಂಗಭೂಮಿಯನ್ನು ಕನ್ನಡ ಮತ್ತು ಕೊಡವ ಭಾಷೆಯ ಕೊಂಡಿಯಾಗಿ, ಅದನ್ನು ಚಳವಳಿಯಾಗಿ ರೂಪಿಸಿದವರು. ಸ್ವತಃ ಕೊಡವ ಜನಾಂಗಕ್ಕೆ ಸೇರಿದ ಅಡ್ಡಂಡ ಕಾರ್ಯಪ್ಪನವರು ಕೃತಿಯ ಪ್ರಾರಂಭದಲ್ಲಿಯೇ ಟಿಪ್ಪುವಿನ ಬಗೆಗೆ ಬರೆಯಲು ತಮಗಿರುವ ಅರ್ಹತೆಯನ್ನು ಅಫಿಡವಿಟ್ ರೂಪದಲ್ಲಿ (‘ಇದು ನನ್ನ ಜಾತ್ಯತೀತ ಅಫಿಡವಿಟ್’) ನೀಡಿದ್ದಾರೆ. ಒಬ್ಬ ಕೊಡಗಿನ ಕೊಡವನಾಗಿ, ಟಿಪ್ಪುವಿನಿಂದ ಆಕ್ರಮಣಕ್ಕೆ ಒಳಪಟ್ಟ ಜನಾಂಗದವನಾಗಿ, ಟಿಪ್ಪುವಿನಿಂದ ಮತಾಂತರಕ್ಕೆ, ಹಿಂಸೆಗೆ, ಹತ್ಯೆಗೆ ಒಳಪಟ್ಟ ಹಿರಿಯರ ಸಂಬಂಧಿಕನಾಗಿ, ಟಿಪ್ಪುವಿನ ಬಗ್ಗೆ ‘ಬಚ್ಚಿಟ್ಟ ಸತ್ಯವನ್ನು ಬಿಚ್ಚಿಡಲು’ ಪ್ರಯತ್ನಿಸುತ್ತಿದ್ದೇನೆ…(ಪುಟ ೧೦), ಎಂದೂ, ನನ್ನ ಆರೋಪ ಮತ್ತು ಸಿಟ್ಟು ಇರುವುದು ಟಿಪ್ಪುವಿನ ವಿರುದ್ಧವೇ ವಿನಾ ಮುಸ್ಲಿಮರ ವಿರುದ್ಧವಲ್ಲ ಎಂದೂ ಲೇಖಕರು ಸ್ಪಷ್ಟವಾಗಿ ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ಕನ್ನಡ ನಾಡಿನ ಸಾಮಾನ್ಯ ಆಡಳಿತಗಾರರಲ್ಲೊಬ್ಬ; ಇದಕ್ಕೂ ಹೆಚ್ಚಿಗೆ ಹೇಳಬೇಕೆಂದರೆ ಆತ ಒಬ್ಬ ಮತಾಂಧ ಅಧಿಪತಿ. ದಿಲ್ಲಿ ದರಬಾರ್ ನಡೆಸಿದ ಔರಂಗಜೇಬನ ದಕ್ಷಿಣದ ಪ್ರತಿರೂಪವೇ ಟಿಪ್ಪು ಎಂಬುದು ಲೇಖಕರ ಸ್ಪಷ್ಟ ಅಭಿಪ್ರಾಯ. ಎರಡು ಭಾಗಗಳಲ್ಲಿ ಟಿಪ್ಪುವಿನ ಚರಿತ್ರೆಯನ್ನು ತೆರೆದಿಟ್ಟಿರುವ ಲೇಖಕರು ಮೊದಲ ಭಾಗದಲ್ಲಿ ಇತಿಹಾಸದಲ್ಲಿರುವ ಟಿಪ್ಪುವಿನ ನಿಜವಾದ ಮುಖಗಳನ್ನು ಪರಿಚಯಿಸಿದ್ದಾರೆ; ಎರಡನೇ ಭಾಗದಲ್ಲಿ ಟಿಪ್ಪುವಿನಂತಹ ಸಾಮಾನ್ಯ ಆಡಳಿತಗಾರನಿಗೆ ‘ಮೈಸೂರಿನ ಹುಲಿ’ ಎಂಬ ಪಟ್ಟಕಟ್ಟಿ ಅದರ ಸುತ್ತ ಹೆಣೆಯಲಾದ ಕಟ್ಟುಕತೆಗಳ ಬಣ್ಣ ಬಯಲು ಮಾಡಿದ್ದಾರೆ.
ಸಾಮಾನ್ಯ ಸೈನಿಕನಾಗಿ ಮೈಸೂರಿನ ಸೇನೆಯನ್ನು ಸೇರಿದ ಹೈದರಾಲಿ, ಮೈಸೂರಿನ ರಾಜನ ದೌರ್ಬಲ್ಯವನ್ನು ಬಳಸಿ ಸೇನಾಧಿಪತಿಯಾದದ್ದು; ತನ್ನದೇ ಸಂಸ್ಥಾನ ಕಟ್ಟುವ ಕನಸಿನೊಂದಿಗೆ ಸಣ್ಣಪುಟ್ಟ ಪಾಳೆಗಾರರ ಮೇಲೆ ದಾಳಿ ನಡೆಸಿ, ಲೂಟಿ ಮಾಡಿ ಸೈನ್ಯ ಕಟ್ಟಿದ್ದು; ರಾಜನಿಗೆ ಮೋಸದಿಂದ ವಿಷಪ್ರಾಶನ ಮಾಡಿಸಿದ್ದು; ರಾಜಮಾತೆಯ ಬಂಧನ – ಹೀಗೆ ಕುತಂತ್ರದ ಮೂಲಕ ಮೈಸೂರಿನ ಗದ್ದುಗೆಯೇರಿದ್ದು ಹಾಗೂ ಶ್ರೀಮಂತ ಕೊಡಗನ್ನು ಕಬಳಿಸುವ ಆಸೆ ವಿಫಲವಾದಾಗ ಅಸಂತೃಪ್ತ ಕೊಡಗಿನ ಹಾಲೇರಿ ಸಂತತಿ ಲಿಂಗರಾಜನ ಆಪ್ತನಾಗಿ, ಆತನ ಮೂಲಕ ಕೊಡವರ ಮುಖಂಡರನ್ನು ತನ್ನತ್ತ ಸೆಳೆದು, ಮೋಸದಿಂದ ೭೦೦ಕ್ಕೂ ಅಧಿಕ ಕೊಡವರ ರುಂಡಗಳನ್ನು ಕಡಿದು ಕೊಡಗನ್ನು ವಶಪಡಿಸಿಕೊಂಡದ್ದು (ಪು. ೨೭); – ಹೀಗೆ ಕುತಂತ್ರದ ಹೈದರಾಲಿಯ ರಾಜಚರಿತೆಯೂ ಪುಸ್ತಕದಲ್ಲಿ ಸ್ಥೂಲವಾಗಿ ನಿರೂಪಗೊಂಡಿದೆ.
‘ಟಿಪ್ಪು ಪ್ರತಿಯೊಂದು ಪಟ್ಟಣದಲ್ಲಿಯೂ ಒಂದೊಂದು ಮಸೀದಿಯನ್ನು ಕಟ್ಟಿಸಿದ. ಪ್ರತಿಯೊಂದಕ್ಕೂ ಒಬ್ಬೊಬ್ಬ ಮುಅಜ್ಜಾನ್, ಒಬ್ಬೊಬ್ಬ ಮೌಲ್ವಿಯನ್ನು ನೇಮಿಸಿದ್ದ… ತನ್ನ ಧರ್ಮಕ್ಕೆ ಸೇರಿಲ್ಲದಂತಹವರ ಬಗ್ಗೆ ದ್ವೇಷಭಾವನೆಯನ್ನಿರಿಸಿಕೊಂಡಿದ್ದ… ಟಿಪ್ಪು ಕಡಮೆ ಬುದ್ಧಿಶಕ್ತಿಯ ಕ್ರೂರಿ, ವಂಚಕ, ದುರಾಚಾರಿಯಾಗಿ ರೂಪುಗೊಂಡಿದ್ದ ಎಂದು ತಂದೆಯೇ ವ್ಯಥೆಪಡುತ್ತಿದ್ದ. ಎಷ್ಟೋ ವೇಳೆ ನಾಯರ್ ಸಮುದಾಯದಿಂದ ಮುಸ್ಲಿಂ ಜಾತಿಗೆ ಮತಾಂತರಗೊಂಡಿದ್ದ ‘ಆಯಾಜ್’ ತನ್ನ ಮಗನಾಗಿದ್ದರೆ ಒಳ್ಳೆಯದಿತ್ತು ಎಂದು ಹೈದರ್ ಹೇಳುತ್ತಿದ್ದ… ಟಿಪ್ಪು ತನ್ನ ವಂಚಕ ಬುದ್ಧಿಯಿಂದ ಕೊನೆಗೊಂದು ದಿನ ತನ್ನನ್ನೇ ಕೊಲ್ಲಬಹುದು ಎಂದು ಹೈದರ್ ಟಿಪ್ಪುವಿನಿಂದ ಒಂದು ಮುಚ್ಚಳಿಕೆಯನ್ನು (೧೭೬೮) ಇಕರಾರ್ ನಾಮಾವನ್ನು ಬರೆಸಿಕೊಂಡಿದ್ದ’ (ಪು.೩೮) ಎಂಬ ಮುಸ್ಲಿಂ ಇತಿಹಾಸಕಾರ ಕೀರ್ಮಾನಿಯ ಮಾತುಗಳನ್ನು ಉಲ್ಲೇಖಿಸಿ ಪ್ರಾರಂಭದಲ್ಲಿಯೇ ಟಿಪ್ಪುವಿನ ನಿಜಸ್ವರೂಪವನ್ನು ಬಯಲಿಗೆಳೆಯಲಾಗಿದೆ.
ಕೊಡಗಿನ ಆಧಿಪತ್ಯ ಸ್ಥಾಪಿಸಲು ಟಿಪ್ಪು ನಡೆಸಿದ ಕುತಂತ್ರ (ಕೊಡವರ ಹೆಂಗಸರ ಬಹುಪತಿತ್ವ ಮುಂತಾದ ಗೊಲ್ಲು-ಅದರ ಸತ್ಯಸಂಗತಿ); ದೇವಸ್ಥಾನಗಳ ಧ್ವಂಸ; ಕೊಡವ ಧಾರ್ಮಿಕ ನಂಬಿಕೆಗಾದ ಆಘಾತ (ತಲಕಾವೇರಿಯ ಪೂಜೆ, ಹುತ್ತರಿ ನಿಂತುಹೋದದ್ದು, ಭಾಗಮಂಡಲೇಶ್ವರ ದೇವಮೂರ್ತಿಯ ಧ್ವಂಸವನ್ನು ತಪ್ಪಿಸಲು ಕಾಡಿಗೆ ತಂದು ಗುಪ್ತವಾಗಿ ನಡೆಸುತ್ತಿದ್ದ ಪೂಜೆ); ಬ್ರಿಟಿಷರು ಅಟ್ಟಹಾಸ ಮೆರೆದ ಜಲಿಯನ್ವಾಲಾಬಾಗ್ ಹತ್ಯಾಕಾಂಡಕ್ಕೆ ಸಮನಾದ ದೇವಟಿಪರಂಬಿ ಹತ್ಯಾಕಾಂಡ (ಒಂದು ಅಂದಾಜಿನ ಪ್ರಕಾರ ದೇವಟಿಪರಂನಲ್ಲಿ ಸೇರಿದ್ದ ಕೊಡವರ ಸಂಖ್ಯೆ ೪೦ ಸಾವಿರ); ಎಲ್ಲೆಮೀರಿದ ಕ್ರೌರ್ಯದ ಮೂಲಕ ನಡೆಸಿದ ಮತಾಂತರ (ಆ ಕಾಲಘಟ್ಟದ ಅನೇಕ ದಾಖಲೆ-ಕೃತಿಗಳಲ್ಲಿ ನೀಡಲಾದ ವಿವರಗಳನ್ನು ಉಲ್ಲೇಖಿಸಲಾಗಿದೆ); ಮೈಸೂರಿನಿಂದ ನಾಲ್ಕು ವರ್ಗದ ಮುಸ್ಲಿಮರನ್ನು ಕೊಡಗಿಗೆ ಕಳುಹಿಸಿ, ಕೊಡವರಿಂದ ಭೂಮಿಯನ್ನು ಕಿತ್ತು ಅವರಿಗೆ ಜಹಗೀರ್ ಎಂದು ನೀಡಿ, ಕೊಡವ ಹೆಂಗಸರನ್ನು ಇವರಿಗೆ ಜೀತದಾಳಾಗಿ ಇರಿಸಿದ್ದು; – ಹೀಗೆ ಟಿಪ್ಪು ಕೊಡಗಿನ ಹಾಗೂ ಕೊಡವರ ಮೇಲೆ ನಡೆಸಿದ ಕ್ರೌರ್ಯದ ಪರಿಚಯ ಪುಸ್ತಕದಲ್ಲಿದೆ.
ಕ್ಷಾತ್ರತ್ವಕ್ಕೆ ಹೆಸರಾದ ಕೊಡವರು ನಿರಂತರವಾಗಿ ಪ್ರತಿರೋಧ ನೀಡುತ್ತಲೇ ಇದ್ದರು ಎಂಬ ಅಂಶವನ್ನೂ ಲೇಖಕರು ಇತಿಹಾಸದ ದಾಖಲೆಗಳಿಂದ ಹೊರತೆಗೆದು ನಿರೂಪಿಸಿದ್ದಾರೆ. ಹೈದರಾಲಿಗೆ ಸೆಡ್ಡುಹೊಡೆದ ವೀರ ಕನ್ನಂಡ ದೊಡ್ಡಯ್ಯ (ಪು.೨೨), ಹೈದರಾಲಿ ಮತ್ತು ಟಿಪ್ಪು ೩೨ ಬಾರಿ ಕೊಡಗಿನ ಮೇಲೆ ದಾಳಿ ಮಾಡಿದ್ದರೂ ಇದರಲ್ಲಿ ಕನಿಷ್ಠ ಮೂವತ್ತು ಬಾರಿಯಾದರೂ ಸೋತದ್ದು (ಪು. ೪೯); ಕೊಡವ ರಾಜ ವೀರರಾಜೇಂದ್ರನ ಮುಕ್ತಿಗೆ ಕೊಡವರು ನಡೆಸಿದ ಯತ್ನ; ಕಾಡು ಸೇರಿದ್ದ ಕೊಡವ ಯೋಧರು ನೀಡಿದ ತಿರುಗೇಟುಗಳನ್ನು ಹಾಗೂ ಕೊಡಗಿನ ಸ್ವಾಭಿಮಾನವನ್ನು ಉಳಿಸಿಕೊಳ್ಳುವ ಸಲುವಾಗಿ ವೀರರಾಜೇಂದ್ರ ಒಡೆಯ ಬ್ರಿಟಿಷರೊಂದಿಗೆ ನಡೆಸಿದ ಸ್ನೇಹವ್ಯವಹಾರ; ಅದಕ್ಕಾಗಿ ಬರೆದ ಪತ್ರ ಹಾಗೂ ಇತರ ಮಾಹಿತಿಗಳನ್ನೂ ದಾಖಲೆಗಳನ್ನೂ ಕಾಣಬಹುದು (ಪು. ೮೩). ಟಿಪ್ಪು ಕೇವಲ ಹಿಂದುಗಳು-ಕೊಡವರು ಮಾತ್ರವಲ್ಲದೇ, ಸ್ವತಃ ಮುಸ್ಲಿಮರಿಗೂ ಬೇಡವಾಗಿದ್ದ ಎಂಬ ಸಂಗತಿಗಳನ್ನೂ ಪುಸ್ತಕದಲ್ಲಿ ಕಾಣಬಹುದು (ಪು. ೮೦).
ಪುಸ್ತಕದ ಎರಡನೇ ಭಾಗದಲ್ಲಿ ಮರಣದ ನಂತರ ಟಿಪ್ಪುವನ್ನು ಹೇಗೆ ವೈಭವೀಕರಿಸಲಾಯಿತು; ಅಸಹಾಯ ಸನ್ನಿವೇಶ ಹಾಗೂ ಜೀವಭಯದಿಂದ ಕೈಗೊಂಡ ಕೆಲ ನಿರ್ಧಾರಗಳನ್ನೇ ದೊಡ್ಡದು ಮಾಡಿ ಹೇಗೆ ವ್ಯವಸ್ಥಿತವಾಗಿ ಆತನನ್ನು ‘ಮೈಸೂರಿನ ಹುಲಿ’ ಎಂದು ಚಿತ್ರಿಸಲಾಯಿತು ಎಂಬುದನ್ನು ಬಯಲಿಗೆಳೆದಿದ್ದಾರೆ. ಟಿಪ್ಪು ಭಾರತದ ಮೊದಲ ಸ್ವಾತಂತ್ರ್ಯಯೋಧ, ಮಹಾನ್ ರಾಷ್ಟ್ರೀಯವಾದಿ ಎಂಬುದನ್ನು ಅಲ್ಲಗಳೆಯುವ ಲೇಖಕರು ಆಫಘನಿಸ್ತಾನದ, ತುರ್ಕಿಯ ವಿದೇಶೀ ದೊರೆಗಳನ್ನು ಹಾಗೂ ಫ್ರೆಂಚರನ್ನು ಭಾರತಕ್ಕೆ ದಂಡುಸಮೇತ ಬರುವಂತೆ ಅಹ್ವಾನಿಸಿರುವ ಟಿಪ್ಪು ಯಾವ ರೀತಿ ರಾಷ್ಟ್ರೀಯವಾದಿ, ಧರ್ಮಸಹಿಷ್ಣು? – ಎಂದು ಪ್ರಶ್ನಿಸುತ್ತಾರೆ (ಪು. ೧೦೮); ಟಿಪ್ಪುವನ್ನು ಸರ್ವಧರ್ಮ ಸಹಿಷ್ಣು ಎಂಬ ಅಸತ್ಯವನ್ನು ಛಿದ್ರಗೊಳಿಸುವ ಲೇಖಕರು ಇದಕ್ಕೆ ೧೦ ಸಾಕ್ಷಿಗಳನ್ನು ನೀಡಿದ್ದಾರೆ (ಪು. ೧೧೨). ಕೇವಲ ದೇವನಹಳ್ಳಿಯಲ್ಲಿ ಹುಟ್ಟಿದಾಕ್ಷಣ ಈತ ಭಾರತೀಯನಾಗಲಿಲ್ಲ. ಆತ ಇಡೀ ಹಿಂದೂಸ್ಥಾನವನ್ನು ಇಸ್ಲಾಮೀಕರಣಗೊಳಿಸಬೇಕೆಂಬ ಹುಚ್ಚುದೊರೆಯಾಗಿದ್ದ ಎನ್ನುವುದನ್ನು ಆತ ಬರೆದ ಅನೇಕ ಪತ್ರಗಳ ದಾಖಲೆಯ ಮೂಲಕ ಸಮರ್ಥವಾಗಿ ಮಂಡಿಸಲಾಗಿದೆ.
ಆತನ ಕನ್ನಡ ಪ್ರೀತಿಯ ಬಗೆಗೆ ಬೊಬ್ಬೆ ಹಾಕುವವರನ್ನು ತರಾಟೆಗೆ ತೆಗೆದುಕೊಳ್ಳುವ ಲೇಖಕರು, ಆತ ಮೈಸೂರಿನ ಅರಸರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಬದಲಿಸಿ ಪಾರ್ಸಿ ಭಾಷೆಯನ್ನು ಬಳಕೆಗೆ ತಂದಿದ್ದು; ರೂಢಿಯಲ್ಲಿದ್ದ ಕಂದಾಯ ಇಲಾಖೆಯ ಆಡಳಿತ ಪರಿಭಾಷೆಯನ್ನು ‘ಪಾರ್ಸೀ’ಕರಣಗೊಳಿಸಿದ್ದು; ತನ್ನ ಆಡಳಿತಕ್ಕೊಳಪಟ್ಟ ಊರಿನ ಚಾರಿತ್ರಿಕ ಹೆಸರುಗಳನ್ನು ಬದಲಾಯಿಸಿ ಮುಸ್ಲಿಂ ಹೆಸರುಗಳನ್ನು ಹಾಕಿದ್ದು; ಹಿಂದೂ ಪಂಚಾಂಗಗಳಿಗೆ ಬದಲಾಗಿ ಪ್ರವಾದಿ ಮಹಮದ್ರ ಜೀವನ ಘಟನೆಗಳನ್ನು ಆಧಾರವಾಗಿ ಹೊಂದಿದ್ದ ‘ಇಸ್ಲಾಮಿ ಪಂಚಾಂಗ’ವನ್ನು ಜಾರಿಗೆ ತಂದದ್ದು; ನಾಣ್ಯಗಳಲ್ಲಿ ಪ್ರವಾದಿ ಮಹಮ್ಮದ್-ಖಲೀಫರ ಹೆಸರಿನ ‘ಇಮಾಮೀ’ ನಾಣ್ಯಗಳನ್ನು ಬಳಕೆಗೆ ತಂದವನು ಹೇಗೆ ಕನ್ನಡವನ್ನು ಬೆಳೆಸಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ. ಮಾತ್ರವಲ್ಲ ಇದಕ್ಕೆ ಸಮರ್ಥ ಮಾಹಿತಿಗಳನ್ನೂ ನೀಡಿದ್ದಾರೆ.
ಡೋಂಗೀ ಜಾತ್ಯತೀತವಾದಿಗಳ ಜಾಯಮಾನದವರ ಬಣ್ಣ ಬಯಲು ಮಾಡಿರುವ ಲೇಖಕರು ಗಿರೀಶ್ ಕಾರ್ನಾಡ್ರು ಬರೆದ ‘ತುಘಲಕ್’ ನಾಟಕ ಚರಿತ್ರೆಯೋ ಅಥವಾ ಸ್ವಂತ ಕಲ್ಪನೆಯೋ ಎಂಬ ಟೀಕೆ ಬಂದಾಗ ಚರಿತ್ರೆಯ ಸತ್ಯಗಳು ಎಂದು ಬಡಬಡಿಸಿ, ಅನಂತರ ಟೀಕೆ ಹೆಚ್ಚಾಗುತ್ತಿದ್ದಂತೆ ‘ನನ್ನ ತುಘಲಕ್ ಐತಿಹಾಸಿಕ ತುಘಲಕ್ ಅಲ್ಲ. ಅದೊಂದು ಕಾಲ್ಪನಿಕ ಪಾತ್ರ. ನನಗೆ ಇತಿಹಾಸ ಬರೆಯುವುದಿದ್ದರೆ ಇತಿಹಾಸವನ್ನೇ ಬರೆಯುತ್ತಿದ್ದೆನೇ ಹೊರತು ನಾಟಕ ಬರೆಯುವ ಗೋಜಿಗೆ ಹೋಗುತ್ತಿರಲಿಲ್ಲ’ ಎಂದ ಸಮಯಸಾಧಕತನವನ್ನು ಸವಿವರವಾಗಿ ನೀಡಿದ್ದಾರೆ. ದೂರದರ್ಶನದಲ್ಲಿ ಪ್ರಸಾರಕ್ಕಾಗಿ ಟಿಪ್ಪುಸುಲ್ತಾನನ ಪರಾಕ್ರಮವನ್ನು ಅತಿವೈಭವೀಕರಿಸಿ ಸಂಜಯ್ಖಾನ್ ನಿರ್ದೇಶಿಸಿದ ಧಾರಾವಾಹಿ ಸುಪ್ರೀಂ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡು, ಅದು ಕಾಲ್ಪನಿಕವೆಂದು ಗೋಗರೆದದ್ದು ಮುಂತಾದ ಢೋಂಗೀ ಬುದ್ಧಿಜೀವಿಗಳ ಬಂಡವಾಳವನ್ನು ಲೇಖಕರು ಸಮರ್ಥವಾಗಿ ಹರಾಜಿಗೆ ಹಾಕಿದ್ದಾರೆ.
‘ದಕ್ಷಿಣದ ಕಾಶ್ಮೀರ’ ಎಂದೇ ಕರೆಯಲ್ಪಡುವ ಕೊಡಗಿನ ಹಾಗೂ ಕೊಡವ ಜನಾಂಗದ ಇತಿಹಾಸ, ಸಂಸ್ಕೃತಿ, ಸ್ವಾಭಿಮಾನಗಳ ಪರಿಚಯವನ್ನೂ ಪುಸ್ತಕದಲ್ಲಿ ಕಾಣಬಹುದು. ಒಟ್ಟಾರೆ ಕೃತಿ ಟಿಪ್ಪುವಿನ ನಿಜಸ್ವರೂಪವನ್ನು ಪರಿಚಯಿಸುವುದರ ಜೊತೆಗೆ ಕೊಡವ ಸಂಸ್ಕೃತಿ, ಅದರ ಕ್ಷಾತ್ರತೆಯನ್ನೂ ಕಣ್ಣಮುಂದೆ ತೆರೆದಿಡುವ ಒಂದು ಮಹತ್ತ್ವದ ಕೃತಿ.
ವಿಷಯವನ್ನು ಸಮರ್ಥವಾಗಿ ಮಂಡಿಸುವ ದೃಷ್ಟಿಯಿಂದ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದರೂ ಅವುಗಳ ಸಮರ್ಥ ವಿಂಗಡನೆಯಾದಂತೆ ಕಂಡುಬರುವುದಿಲ್ಲ. ಢೋಂಗೀ ಸೆಕ್ಯುಲರ್ವಾದಿಗಳು ನಡೆಸಿದ ಟಿಪ್ಪು ವೈಭವೀಕರಣದ ಹಲವು ಸಂಗತಿಗಳು ಮೊದಲ ಭಾಗದಲ್ಲಿಯೇ ಬಂದು ಹೋಗುತ್ತವೆ. ಇಂತಹ ಕೆಲವು ಸಂಗತಿಗಳಿಗೆ ಹೊರತಾಗಿಯೂ ಪುಸ್ತಕ ಕನ್ನಡ ನಾಡಿನ ಇತಿಹಾಸದ ಸತ್ಯಕಥನವನ್ನು ಹೊರತಂದ ಅಪರೂಪದ ಕೃತಿಯಾಗಿದೆ.
ನಾಡಿನ ಖ್ಯಾತ ಸಂಶೋಧಕ ನಾಡೋಜ ಡಾ|| ಎಂ. ಚಿದಾನಂದಮೂರ್ತಿ ಅವರು ‘ಒಂದು ಅಮೋಘ, ನಿರ್ಭಿಡೆಯ ದಿಟ್ಟ ಕೃತಿ’ ಎಂದಿರುವುದು ಮಾತ್ರವಲ್ಲದೆ ನೂರಾರು ವಾಸ್ತವ ಆಧಾರಗಳನ್ನು ನೀಡಿ ಅಡ್ಡಂಡ ಕಾರ್ಯಪ್ಪನವರು ಈ ಕೃತಿ ರಚಿಸಿದ್ದಾರೆ. ಈಗಾಗಲೇ ಪ್ರಕಟವಾಗಿರುವ ನನ್ನ ‘ಮೂಲ ದಾಖಲೆಗಳಲ್ಲಿ ಹುದುಗಿದ್ದ ಟಿಪ್ಪು’ ಕೃತಿಯನ್ನು ಇದು ಗುಣದಲ್ಲಿ, ಗಾತ್ರದಲ್ಲಿ, ಮಾಹಿತಿಯಲ್ಲಿ ಮೀರಿ ಬೆಳೆದು ನಿಂತಿದೆ; ಒಂದು ದೃಷ್ಟಿಯಲ್ಲಿ ನನ್ನ ಕೃತಿಯನ್ನು ಸೋಲಿಸಿದೆ… ಎಂಬ ಪ್ರಮಾಣಪತ್ರವನ್ನೇ ನೀಡಿದ್ದಾರೆ (ಮುನ್ನುಡಿ). ಒಟ್ಟಾರೆಯಾಗಿ ಈ ಕೃತಿಯ ಮೂಲಕ ಲೇಖಕರು ಟಿಪ್ಪುವಿನ ಅನೇಕ ಬಚ್ಚಿಟ್ಟ ಸತ್ಯಗಳನ್ನು ನಿಸ್ಸಂಕೋಚವಾಗಿ ಬಿಚ್ಚಿಟ್ಟಿದ್ದಾರೆ.
ಟಿಪ್ಪು ಮತ್ತು ಕೊಡವರು ಬಚ್ಚಿಟ್ಟ ಸತ್ಯ ಬಿಚ್ಚಿಟ್ಟಾಗ…
ಲೇಖಕರು : ಅಡ್ಡಂಡ ಕಾರ್ಯಪ್ಪ
ಪ್ರಕಾಶಕರು : ರಂಗಭೂಮಿ ಕೊಡಗು ಪ್ರಕಾಶನ
ಪೊನ್ನಂಪೇಟೆ, ಕುಂದರಸ್ತೆ – ೫೭೧ ೨೧೬
ಕೊಡಗು, ಕರ್ನಾಟಕ
ದೂರವಾಣಿ : ೦೮೨೭೪-೨೪೯೩೩೪
ಮೊಬೈಲ್ : ೯೪೪೮೪೨೨೩೪೩
ಆಕಾರ : 1/8 ಡಿಮೈ
ಪುಟಗಳು : xii + 214
ಬೆಲೆ : ರೂ. 200
ok