ಈಚಿನ ವರ್ಷಗಳಲ್ಲಿ ನಾವು ಸಾಹಿತ್ಯ ಎಂದು ಏನನ್ನು ಕರೆಯುತ್ತೇವೋ ಅದನ್ನು ಸ್ಥೂಲವಾಗಿ ಎರಡು ವಿಭಾಗಗಳಲ್ಲಿ ಗುರುತಿಸಬಹುದು. ಕಾದಂಬರಿ, ನಾಟಕ, ಕಥೆ, ಕವಿತೆ ಇತ್ಯಾದಿ ಪ್ರಕಾರಗಳನ್ನು ಕಲ್ಪನಾಧಾರಿತ ಸಾಹಿತ್ಯ ಎಂದು ಕರೆದರೆ ವಿಮರ್ಶೆ, ಗಂಭೀರ ಪ್ರಬಂಧ, ವೈಚಾರಿಕ ಲೇಖನ, ಅಂಕಣ ಮುಂತಾದವುಗಳನ್ನು ವಿಚಾರ, ಮಾಹಿತಿ, ಅಭಿಪ್ರಾಯಗಳನ್ನು ಆಧರಿಸಿದ ಸಾಹಿತ್ಯ ಎಂದು ಕರೆಯಬಹುದು. ಇತ್ತೀಚಿನ ವರ್ಷಗಳಲ್ಲಿ ಪುಸ್ತಕ ಪ್ರಕಾಶನ ಮತ್ತು ಮಾರಾಟವನ್ನು ನೋಡಿದರೆ, ಈ ಎರಡನೆಯ ರೀತಿಯ ಬರಹಳಿಗೂ ಕಲ್ಪನಾಧಾರಿತ ಸಾಹಿತ್ಯದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಓದುಗರು ಇದ್ದಾರೆ ಎಂಬ ಸಂಗತಿ ಗೊತ್ತಾಗುತ್ತದೆ. ಹೀಗಾಗಿ ಸಂಸ್ಕೃತಿ, ಇತಿಹಾಸ ಮತ್ತು ಐತಿಹಾಸಿಕ ವ್ಯಕ್ತಿಗಳ ಕುರಿತಾದ ಪುಸ್ತಕಗಳು, ಅಂಕಣಗಳ ಸಂಕಲನ ಮುಂತಾದ ಪುಸ್ತಕಗಳು ಹೆಚ್ಚು ಹೆಚ್ಚು ಮುದ್ರಣವಾಗುತ್ತಿವೆ ಮತ್ತು ಮಾರಾಟವಾಗುತ್ತಿವೆ. ಒಟ್ಟಿನಲ್ಲಿ ಚಿಂತನೆ ಅಥವಾ ವಿಚಾರಪ್ರಧಾನವಾದ ಪುಸ್ತಕಗಳಿಗೆ ಸಾಕಷ್ಟು ಬೇಡಿಕೆಯಿರುವುದು ಸತ್ಯ.
ಆದರೆ, ಸಾಕಷ್ಟು ಗಂಭೀರವಾದ, ಅಳವಾದ ತಾತ್ವಿಕ ಅಥವಾ ಗಹನವಾದ ವಿಚಾರಗಳನ್ನು ಒಳಗೊಂಡ ಪುಸ್ತಕಗಳ ಬಗ್ಗೆ ಅನೇಕ ಸುಶಿಕ್ಷಿತರು ಕೂಡ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಕಾಣುತ್ತದೆ. ಆ ಅಭಿಪ್ರಾಯವೇನೆಂದರೆ “ಇದು ನಮಗೆಲ್ಲ ಅರ್ಥವಾಗುವುದಿಲ್ಲ.” ಎಂಬುದಾಗಿದೆ. ಹೀಗೆ ಹೇಳುವವರಲ್ಲಿ ಸ್ನಾತಕೋತ್ತರ ಪದವಿ ಪಡೆದು ಶಾಲಾಕಾಲೇಜುಗಳಲ್ಲಿ ಸುದೀರ್ಘ ಕಾಲ ಬೋಧಿಸಿದವರೂ ಇದ್ದಾರೆ. ಸರಳವಾಗಿ ಇರುವ ಬರಹಗಳಾದರೆ ಅರ್ಥವಾಗುತ್ತದೆ ಎನ್ನುತ್ತಾರೆ. ಆದರೆ ಸರಳವೆಂಬುದು ಅಷ್ಟು ಸರಳವಲ್ಲ! ಸರಳ ಎನ್ನುವುದು ಬಹಳ ಸಲ ಕೇವಲ ಸೂಪರ್ಫಿಶಿಯಲ್ ಆದುದಾಗಿರುತ್ತದೆ. ಮೇಲುಮೇಲಿಂದ ಕಾಣುವುದು ಮಾತ್ರ ಆಗಿರುತ್ತದೆ. ಆ ‘ಸರಳ’ ದೃಷ್ಟಿಗೆ ಕಲಕಿದ ನೀರಿನ ಅಡಿಯಲ್ಲಿ ಏನಿದೆ ಎಂದು ಕಾಣದೇ ಇರಬಹುದು. ಅಂತಹ ಬರಹಗಳೂ ಅಷ್ಟೇ; ಅಡಿಯಲ್ಲಿ ಇದ್ದುದನ್ನು ಕಾಣಿಸಲಾರವು. ಇದನ್ನು ಸ್ಪಷ್ಟಪಡಿಸಲು ಒಂದು ಉದಾಹರಣೆಯನ್ನು ನೋಡಬಹುದು.
ಪುನಃ ‘ಸರಳವಾಗಿ’ ಅರ್ಥವಾಗಲು ಟಿಪ್ಪುವಿನ ಬಗೆಗೆ ಬರೆಯಬಹುದಾದುದನ್ನೇ ತೆಗೆದುಕೊಳ್ಳೋಣ. ಟಿಪ್ಪು ಒಬ್ಬ ಅಪ್ರತಿಮ ಸ್ವಾತಂತ್ರö್ಯ ಹೋರಾಟಗಾರ; ಅತ್ಯುತ್ತಮ ಆಡಳಿತಗಾರ; ಎಲ್ಲ ಸಮುದಾಯಗಳನ್ನೂ ಸಮನವಾಗಿ ಕಂಡು ಜನಾನುರಾಗಿಯಾಗಿದ್ದ ಎಂದು ಬರೆದರೆ, ಲೇಖಕ ಏನು ಹೇಳುತ್ತಿದ್ದಾನೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಅದೇ ರೀತಿ ಟಿಪ್ಪು ಒಬ್ಬ ಮತಾಂಧ; ಹಿಂದುಗಳಿಗೆ ಹಿಂಸೆ ಕೊಟ್ಟಿದ್ದ; ಅವನ ಆಡಳಿತವೂ ಸರಿಯಿರಲಿಲ್ಲ ಎಂದು ಮುಂತಾಗಿ ಬರೆದರೂ ಸುಲಭವಾಗಿ ಎಲ್ಲರಿಗೂ ಅರ್ಥವಾಗುತ್ತದೆ. ಲೇಖಕ ಬರೆದುದನ್ನು ಒಪ್ಪುವುದು ಅಥವಾ ಬಿಡುವುದು ಬೇರೆ ಮಾತು. ಹೀಗೆ ಬರೆಯುವ ಬದಲಿಗೆ, ಟಿಪ್ಪು ಹೇಗೆ ಒಬ್ಬ ಶ್ರದ್ಧಾವಂತ ಮುಸ್ಲಿಮನಾಗಿದ್ದ; ಅದು ಹೇಗೆ ಅವನ ವಿಚಾರಗಳನ್ನು ಮತ್ತು ಆಚಾರಗಳನ್ನು ಪ್ರಭಾವಿಸಿತ್ತು; ಅವನು ನಂಬಿದ ಇಸ್ಲಾಮಿನ ಮೂಲಾಂಶಗಳೇನು ಎನ್ನುವುದನ್ನೆಲ್ಲ ವಿಶ್ಲೇಷಿಸಿದರೆ ಅರ್ಥವಾಗುವುದು ಕಡಿಮೆಯಾಗುತ್ತಾ ಹೋಗುತ್ತದೆ. ಇನ್ನು ಅವನ ಹೋರಾಟ, ಆಡಳಿತ, ವ್ಯಕ್ತಿ ಮತ್ತು ಸಮುದಾಯಗಳನ್ನು ಅವನು ನೋಡುತ್ತಿದ್ದ ಬಗೆ- ಇವಕ್ಕೂ ಅವನ ನಂಬಿಕೆಗಳಿಗೂ ಇದ್ದ ಸಂಬAಧವೇನು; ಮುಂತಾದ ಸಂಗತಿಗಳನ್ನು ವಿಶ್ಲೇಷಿಸುವ ಬರಹವಾದರೆ ‘ಅರ್ಥವಾಗುವುದಿಲ್ಲ’ ಎನ್ನುವ ದೂರು ಬಂದೇ ಬರುತ್ತದೆ. ಹೀಗೆ ಸಾಕಷ್ಟು ದೀರ್ಘ ಕಾಲದ ಔಪಚಾರಿಕ ಶಿಕ್ಷಣ ಪಡೆದವರಿಗೆ ಮತ್ತು ಎಷ್ಟೋ ಶಿಕ್ಷಕರಿಗೆ ಕೂಡ ಕೆಲವೊಂದು ಸಂಗತಿಗಳ ಆಳ ಅಗಲಗಳು ‘ಅರ್ಥವಾಗದೆ’ ಇರಲು ಕಾರಣವೇನು?
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ನಮ್ಮ ಬೌದ್ಧಿಕ ಜಗತ್ತನ್ನು ನರೆಟಿವ್ಗಳು ಹೇಗೆ ಆಳುತ್ತವೆ ಎನ್ನುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಿದ್ಧಮಾದರಿಯ ನರೆಟಿವ್ಗಳೇ ನಾವು ಎಷ್ಟೋ ವಿಷಯಗಳ ಆಳಕ್ಕೆ ಇಳಿಯದಂತೆ ನಮ್ಮನ್ನು ತಡೆಯುತ್ತವೆ. ಉದಾಹರಣೆಗೆ “ಜಗತ್ತಿನ ಎಲ್ಲ ಧರ್ಮಗಳೂ ಒಳ್ಳೆಯದನ್ನೇ ಹೇಳಿವೆ.” “ಈಶ್ವರ ಅಲ್ಲಾ ತೇರೇ ನಾಮ್” ಮುಂತಾದ ಹೇಳಿಕೆಗಳು ಜನಪ್ರಿಯಗೊಂಡು ಕಾಲಾಂತರದಲ್ಲಿ ನರೆಟಿವ್ಗಳೇ ಆಗಿವೆ. ಮುಖ್ಯವಾದ ಸಂಗತಿಯೇನೆAದರೆ, ಅಂತಹ ಮೇಲ್ಪದರದ ಹೇಳಿಕೆಯ ಅಡಿಯಲ್ಲಿ ಏನಿದೆ ಎಂದು ಆ ಪದರವನ್ನು ಬಗೆದು ನೋಡದಂತೆ ಅವುಗಳ ಜನಪ್ರಿಯತೆ ಅಥವಾ ಸರ್ವವ್ಯಾಪಕತೆಯು ನಮ್ಮನ್ನು ತಡೆಯುತ್ತದೆ.
ನಮ್ಮ ಶೈಕ್ಷಣಿಕ ವ್ಯವಸ್ಥೆಯು ನಮಗೆ ಕೆಲವು ನರೆಟಿವ್ಗಳನ್ನು, ಆಖ್ಯಾನಗಳನ್ನು ಅಥವಾ ಕಥನಗಳನ್ನು ಕಟ್ಟಿ ಕೊಡುತ್ತವೆ. ಇಲ್ಲಿ ಶೈಕ್ಷಣಿಕ ವ್ಯವಸ್ಥೆ ಎಂದರೆ ಅದು ಕೇವಲ ಶಾಲಾಶಿಕ್ಷಣ ಎಂಬರ್ಥದಲ್ಲಿ ಬಳಸಿಲ್ಲ. ಇನ್ನಷ್ಟು ಸ್ಪಷ್ಟಪಡಿಸುವುದಾದರೆ ವಿಶ್ವವಿದ್ಯಾಲಯಗಳು, ಅಕಾಡೆಮಿಗಳು, ಸೆಮಿನಾರುಹಾಲುಗಳು, ಮುಂಚೂಣಿ ಪತ್ರಿಕೆಗಳು ಇವೆಲ್ಲ ಸೇರಿದ ಜ್ಞಾನಧಿಕಾರ ಕೇಂದ್ರಗಳು ನರೆಟಿವ್ಗಳನ್ನು (ಆಖ್ಯಾನಗಳನ್ನು/ಕಥನಗಳನ್ನು) ಕಟ್ಟಿಕೊಡುತ್ತವೆ. ಆ ಕಥನಗಳು ನಿರ್ದಿಷ್ಟ ಬೌದ್ಧಿಕ ಮಟ್ಟದ್ದಾಗಿ ಮಾತ್ರ ಉಳಿದಿರುತ್ತವೆ. ಹೆಚ್ಚಿನ ಸಲ ನಿರ್ದಿಷ್ಟ ಮತ್ತು ಸಿದ್ಧ ಮಾದರಿಯಲ್ಲಿಯೇ ಇರುತ್ತವೆ. ಅವು ಸಾಮಾನ್ಯವಾಗಿ ತತ್ತ÷್ವಜಿಜ್ಞಾಸೆಯ ಆಳಕ್ಕೆ ಇಳಿಯುವುದನ್ನು ಉತ್ತೇಜಿಸುವುದಿಲ್ಲ. ಹೌದು ಅಥವಾ ಇಲ್ಲ ಎಂಬ ಹಾಗೆ ನೇರ ಪ್ರಶ್ನೆಗೆ ನೇರ ಉತ್ತರದಂತಹ ಚಿಂತನೆಯನ್ನು ಬೆಳೆಸುವುದಕ್ಕಷ್ಟೇ ಇಂತಹ ನರೆಟಿವ್ಗಳು ಸೀಮಿತವಾದಂತೆ ತೋರುತ್ತದೆ. ವಿರ್ಯಾಸವೆಂದರೆ, ಹೀಗೆ ಸರಳವಾಗಿದ್ದರೆ ಮಾತ್ರ ಒಂದು ಆಖ್ಯಾನವು ಜ್ಞಾನಧಿಕಾರ ಕೇಂದ್ರದಿAದ ಇಳಿದು ಜನಜನಿತವಾಗುತ್ತದೆ. ಹೀಗೆ ಸಾಮಾನ್ಯ ಜನರ ಮಟ್ಟದಲ್ಲಿ ಅದು ಅಷ್ಟಕ್ಕೇ ಸೀಮಿತವಾಗಿದ್ದರೆ ಆಶ್ಚರ್ಯ ಪಡಬೇಕಿಲ್ಲ್ಲ; ಆತಂಕವೂ ಇಲ. ಆದರೆ ಸುಶಿಕ್ಷಿತರು ಮತ್ತು ಜನಾಭಿಪ್ರಾಯ ರೂಪಿಸುವ ಸ್ಥಾನಮಾನವನ್ನು ಹೊಂದಿದವರು ಕೂಡ ಅಷ್ಟಕ್ಕೇ ಸೀಮಿತವಾಗಿ ತಮ್ಮ ಚಿಂತನೆಯ ಮಟ್ಟವನ್ನು ಹೊಂದಿದ್ದರೆ ಅದು ಸಮಾಜದ ಏಳಿಗೆಗೆ ಪೂರಕವಲ್ಲ.
ಸಹಜವಾಗಿಯೇ ಜಗತ್ತಿನಲ್ಲಿ ವಿವಿಧ ವಿಚಾರಧಾರೆಗಳು ಹಿಂದೆಯೂ ಇದ್ದವು; ಈಗಲೂ ಇವೆ. ಈ ವಿಚಾರಧಾರೆಗಳು ಬೌದ್ಧಿಕವಾಗಿ ಮೇಲುಗೈ ಪಡೆಯಲು ಹಾಗೂ ನೀತಿನಿರೂಪಣೆಯ ಮೇಲೆ ಪ್ರಭಾವ ಬೀರಲು ಆಖ್ಯಾನಗಳು (ನರೆಟಿವ್ಗಳು/ಕಥನಗಳು) ಸಹಾಯ ಮಾಡುತ್ತವೆ. ಏನನ್ನು ಹೇಳುತ್ತೇವೆ ಎನ್ನುವಷ್ಟೇ ಹೇಗೆ ಹೇಳುತ್ತೇವೆ ಎನ್ನುವುದು ಕೂಡ ಬೌದ್ಧಿಕ ಚರ್ಚೆಗಳಲ್ಲಿ ಮುಖ್ಯವಾಗುತ್ತದೆ. ಹಾಗೆ ನೋಡಿದರೆ ಹೇಗೆ ಹೇಳುತ್ತೇವೆ ಎನ್ನುವುದೇ ಹೆಚ್ಚಿನ ಸಲ ನಮ್ಮ ಆಖ್ಯಾನಗಳ ಪ್ರಭಾವವನ್ನು ನಿರ್ಣಯಿಸುತ್ತದೆ. ಆಖ್ಯಾನಗಳು ಸರಕಾರಗಳ ನೀತಿನಿರೂಪಣೆಗಳನ್ನು ಪ್ರಭಾವಿಸುತ್ತವೆ ಅಷ್ಟೇ ಅಲ್ಲ; ನಿರ್ದಿಷ್ಟ ವಿಷಯಗಳ ಬಗೆಗಿನ ಜನಾಭಿಪ್ರಾಯವನ್ನು ಕೂಡ ನಿರ್ದಿಷ್ಟ ದಿಕ್ಕಿನಲ್ಲಿ ಒಯ್ಯುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅಥವಾ ಹೀಗೂ ಹೇಳಬಹುದು; ಆಖ್ಯಾನಗಳು ಜನಾಭಿಪ್ರಾಯವನ್ನು ರೂಪಿಸಿ ಅದಕ್ಕೆ ತಕ್ಕಂತಹ ನೀತಿನಿರೂಪಣೆಗಳಿಗೂ ಕಾರಣವಾಗುತ್ತವೆ.
ಆಖ್ಯಾನಗಳ ವ್ಯಾಪ್ತಿ ಚಿಕ್ಕದಾಗಿರಬಹುದು. ದೊಡ್ಡದಾಗಿರಬಹುದು. ಬಗೆಬಗೆಯ ವಿಷಯಗಳದ್ದಿರಬಹುದು. ಆರ್ಥಿಕ ವಿಚಾರ, ಸಾಮಾಜಿಕ ವಿಚಾರ, ಭಾಷೆ, ಪ್ರಾದೇಶಿಕತೆ, ರಾಷ್ಟಿçÃಯತೆ, ಇತಿಹಾಸ, ಶಿಕ್ಷಣ ಮಾಧ್ಯಮ ಹೀಗೆ ಪ್ರತಿಯೊಂದು ವಿಷಯದ ಬಗ್ಗೆಯೂ ಆಖ್ಯಾನಗಳು ಕಾಣುತ್ತವೆ. ಒಂದೇ ವಿಚಾರದ ಬಗ್ಗೆ ಭಿನ್ನ ವಿಚಾರಧಾರೆಗಳ ಭಿನ್ನ ಆಖ್ಯಾನಗಳೂ ಇರುತ್ತವೆ. ಹೆಚ್ಚಿನ ಬಾರಿ ಯಾವುದೋ ಒಂದು ಆಖ್ಯಾನವು ಉಳಿದವುಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಆಖ್ಯಾನಗಳು ಕೇವಲ ವಿದ್ಯಮಾನಗಳ ಬಗ್ಗೆ ಅಥವಾ ಸಮಾಜದ ಆಗುಹೋಗುಗಳ ಬಗ್ಗೆಯೇ ಇರಬೇಕೆಂದಿಲ್ಲ. ವ್ಯಕ್ತಿಗಳ ಬಗ್ಗೆಯೂ ಆಖ್ಯಾನಗಳನ್ನು ಕಟ್ಟಲಾಗುತ್ತದೆ. ಗಾಂಧೀಜಿ ಬಗ್ಗೆ, ನೆಹರೂ ಬಗ್ಗೆ, ಅಂಬೇಡ್ಕರ್ ಬಗ್ಗೆ, ಸಾವರ್ಕರ್ ಬಗ್ಗೆ ಹೀಗೆ ಹಲವು ವಿಚಾರ/ವ್ಯಕ್ತಿಗಳ ಬಗ್ಗೆ ಕೂಡ ವಿಭಿನ್ನ ಆಖ್ಯಾನಗಳು ಚಾಲ್ತಿಯಲ್ಲಿವೆ.
ಅನೇಕ ಬಾರಿ ಸುಳ್ಳು ಆಖ್ಯಾನಗಳೂ ಮೇಲುಗೈ ಪಡೆಯುವುದುಂಟು. ಎಷ್ಟೋ ಸತ್ಯಗಳು ಮರೆಯಾಗುವುದೂ ಉಂಟು. ಉದಾಹರಣೆಗೆ, ಸ್ವಾತಂತ್ರ್ಯೋತ್ತರ ಕಾಲದ ಭಾರತದಲ್ಲಿ ನಡೆದ ಹಿಂಸಾಚಾರಗಳ ಕುರಿತಾದ ಆಖ್ಯಾನಗಳಲ್ಲಿ ೧೯೭೦ರ ದಶಕದಿಂದ ಆರಂಭಿಸಿ ಸುಮಾರು ಇಪ್ಪತ್ತೆöÊದು ಮೂವತ್ತು ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಆದಂತಹ ರಾಜಕೀಯ ಹತ್ಯೆಗಳ ವಿಚಾರ ಪ್ರಸ್ತಾಪವಾಗುವುದೇ ಇಲ್ಲ!
ವಿವಿಧ ಆಖ್ಯಾನಗಳ ಸ್ವರೂಪ ಹಾಗೂ ಹಿನ್ನೆಲೆಗಳ ಕುರಿತು ಕನ್ನಡದಲ್ಲಿ ಹೆಚ್ಚು ಚರ್ಚೆ ಆದಂತೆ ಕಾಣುವುದಿಲ್ಲ. ಸಮಕಾಲೀನ ಆಖ್ಯಾನಗಳನ್ನು ಚರ್ಚಿಸುವ ‘ಅನ್ವೀಕ್ಷಿಕೀ’ ಎಂಬ ವಿಶಿಷ್ಟ ಶೀರ್ಷಿಕೆಯ ಪುಸ್ತಕ ಈಚೆಗೆ ಪ್ರಕಟವಾಗಿದೆ. ನಿರೂಪಿತ ವಿಷಯಗಳ ಪುನರ್ಮನನ ಎಂಬರ್ಥದಲ್ಲಿ ಈ ಶೀರ್ಷಿಕೆಯನ್ನು ಬಳಸಿದ್ದಾರೆ. ಸತ್ಯನಾರಾಯಣ ಶಾನಭಾಗರು ಸಂಪಾದಿಸಿದ ಈ ಪುಸ್ತಕವನ್ನು ವಿಶ್ವ ಸಂವಾದ ಕೇಂದ್ರವು ಪ್ರಕಟಿಸಿದೆ. ಈಗಾಗಲೇ ಹೇಳಿದಂತೆ ಆಖ್ಯಾನಗಳು ಸೀಮಿತವಾದ ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ಎಲ್ಲ ಆಖ್ಯಾನಗಳನ್ನು ವಿಶ್ಲೇಷಿಸಲು ಅಸಾಧ್ಯವೇ ಸರಿ. ಇಂದಿನ ಜಗತ್ತಿನಲ್ಲಿ ಮುಖ್ಯವೆನಿಸಿದ ಕೆಲವು ಆಖ್ಯಾನಗಳನ್ನು ವಿಶ್ಲೇಷಿಸುವ ಆರು ದೀರ್ಘ ಲೇಖನಗಳನ್ನು ಈ ಸಂಕಲನವು ಒಳಗೊಂಡಿದೆ.
“ಈ ಪುಸ್ತಕವು ಆಖ್ಯಾನಗಳ ಹಿಂದಿರುವ ವಿದ್ಯಮಾನವನ್ನು, ವಿದ್ಯಮಾನದ ಆಂತರ್ಯದಲ್ಲಿ ಇರುವ ವಿಚಾರವನ್ನು, ವಿಚಾರದ ಗರ್ಭದಲ್ಲಿ ಅಡಗಿರುವ ಸತ್ಯವನ್ನು ಬಗೆದು ನೋಡಲು ಯತ್ನಿಸಿದೆ.” ಎಂದು ಹೇಳುವ ಪ್ರದೀಪ ಮೈಸೂರು ಅವರು ಈ ಸಂಕಲನಕ್ಕೆ ಒಂದು ಒಳ್ಳೆಯ ಪ್ರವೇಶಿಕೆಯನ್ನು ಬರೆದಿದ್ದಾರೆ. ಅಲ್ಲಿ ಅವರು ವಿದ್ಯಮಾನ ಮತ್ತು ಆಖ್ಯಾನ ಇವೆರಡರ ಸಂಬAಧವನ್ನು ಹೇಳುತ್ತಾರೆ. ಆಖ್ಯಾನವು ವಿದ್ಯಮಾನವೊಂದರ ಹಿನ್ನೆಲೆಯಿಂದ ಬಂದರೆ, ವಿದ್ಯಮಾನವು ಆಖ್ಯಾನದಿಂದ ಉಂಟಾಗುವ ಸಾಧ್ಯತೆ ಇದೆ. ಅಂದರೆ ಒಂದು ವಿದ್ಯಮಾನವು ಒಂದು ಆಖ್ಯಾನಕ್ಕೆ ಕಾರಣವಾಗಬಹುದು. ಒಂದು ಅಖ್ಯಾನವು ಒಂದು ವಿದ್ಯಮಾನಕ್ಕೆ ಕಾರಣವಾಗಬಹುದು. ಇಲ್ಲಿ ನಾನೊಂದು ಉದಾಹರಣೆ ನೀಡಬಹುದಾದರೆ: ಕಾಶ್ಮೀರದಲ್ಲಿ ೩೭೦ನೇ ವಿದಿಯನ್ನು ಜಾರಿಗೆ ತಂದುದು ಎಂಬ ವಿದ್ಯಮಾನವು ಒಂದು ಆಖ್ಯಾನಕ್ಕೆ ಕಾರಣವಾಗಿದ್ದರೆ, ಒಂದು ಬಗೆಯ ಆಖ್ಯಾನವೇ ಅದರ ರದ್ದತಿ ಎಂಬ ವಿದ್ಯಮಾನಕ್ಕೆ ಕಾರಣವಾಗಿರಬಹುದು.
ನಾಟಕ, ಕಥೆ, ಕಾದಂಬರಿಗಳAತಹ ಕಲ್ಪನಾಪ್ರಧಾನ ಸಾಹಿತ್ಯ ಮತ್ತು ಕಲಾ ಪ್ರಕಾರಗಳು ಸೃಷ್ಟಿಸುವ ಆಖ್ಯಾನಗಳ ಬಗ್ಗೆ ಈ ಸಂಕಲನದಲ್ಲಿ ಪ್ರತ್ಯೇಕ ಲೇಖನವಿಲ್ಲವಾದರೂ ಆ ಬಗ್ಗೆ ಪ್ರದೀಪರು ಪ್ರವೇಶಿಕೆಯಲ್ಲಿ ಹೇಳುವ “ಸಂಕಥನವು ಹರಳುಗಟ್ಟಿ, ಪ್ರಬುದ್ಧತೆಯನ್ನು ಪಡೆದು, ಜನಜೀವನದ ಭಾಗವಾಗಲು ಕಲೆಯೇ ಮುಖ್ಯ ಮಾರ್ಗ… ಕಲೆಯು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಕಥನವನ್ನು ನಡೆಸುವ ಮೂಲಕ ಆಖ್ಯಾನಗಳನ್ನು ಸೃಷ್ಟಿಸುತ್ತದೆ ಮತ್ತು ಆ ಕಾಲದಲ್ಲಿ ಇರುವ ಆಖ್ಯಾನವನ್ನು ಪಲ್ಲಟಗೊಳಿಸುತ್ತದೆ..” ಎಂಬ ಮಾತುಗಳು ಉಲ್ಲೇಖಾರ್ಹವಾಗಿವೆ.
ಈ ಸಂಕಲನದಲ್ಲಿರುವ ಮೊದಲ ಲೇಖನ ಎಂ.ಕೆ. ಶ್ರೀಧರನ್ ಅವರ ‘ಸುರಾಜ್ಯ ಮತ್ತು ಸರ್ಕಾರ’. ಒಳ್ಳೆಯ ಆಡಳಿತ ಅಥವಾ ‘ಸುರಾಜ್ಯ’ ಎಂದರೇನು? ಸರ್ಕಾರದ ಜವಾಬುದಾರಿ ಹಾಗೂ ಇತಿಮಿತಿಗಳೇನು? ಈ ಬಗೆಗೆ ಯಾವೆಲ್ಲ ರೀತಿಯ ಆಖ್ಯಾನಗಳಿವೆ? ಎಂಬ ಪ್ರಶ್ನೆಗಳನ್ನೆಲ್ಲ ಈ ಲೇಖನವು ಎತ್ತಿಕೊಳ್ಳುತ್ತದೆ. ಸರಕಾರವಿರುವುದು ಆಡಳಿತವನ್ನು ಮಾಡಲು. ಹೀಗಾಗಿ ನಮ್ಮ ವ್ಯವಸ್ಥೆಯಲ್ಲಿ ಯಾವೆಲ್ಲ ಕೊರತೆಗಳಿವೆ ಮತ್ತು ಅಂತಹ ಕೊರತೆಗಳು ಹೇಗೆ ಉತ್ತಮ ಆಡಳಿತಕ್ಕೆ ಅಡ್ಡಿಯಾಗುತ್ತವೆ ಎನ್ನುವುದನ್ನು ಹೇಳಲು ಈ ಲೇಖನವು ಯತ್ನಿಸುತ್ತದೆ. ಪ್ರಜಾಪ್ರಭುತ್ವ ಮತ್ತು ಇತರ ಆಡಳಿತವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನೂ ಸ್ಥೂಲವಾಗಿ ಲೇಖಕರು ಗುರುತಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದೆಯೆನ್ನಲಾಗುವ ಮುಕ್ತತೆ ಮತ್ತು ಸ್ವಾತಂತ್ರö್ಯದ ಸ್ವರೂಪವನ್ನೂ ಗುರುತಿಸುತ್ತಾರೆ. ಪ್ರಜಾಪ್ರಭುತ್ವ ದೇಶಗಳಲ್ಲಿಯೂ ಬೇರೆ ನಮೂನೆಯ ಆಡಳಿತವಿರುವ ದೇಶಗಳಂತೆ ಕೊರತೆಗಳಿದ್ದರೂ ಅದು ‘ಅತುತ್ತಮ ರಾಜ್ಯವ್ಯವಸ್ಥೆ’ ಎಂದು ಬಿಂಬಿತವಾಗಲು ಏನು ಕಾರಣ ಎನ್ನುವುದನ್ನೂ ಲೇಖಕರು ಹೇಳುತ್ತಾರೆ. ಆನಪ್ರತಿನಿಧಿಗಳು ರಾಜರಂತೆ ವರ್ತಿಸಬಾರದು ಎಂದಿದ್ದರೂ ಚುನಾವಣೆಯ ಸಂದರ್ಭ ಹೊರತುಪಡಿಸಿದರೆ ಸಮಾನ್ಯ ಜನರ ಮಟ್ಟಿಗೆ ಅವರು ರಾಜರಂತೆಯೇ ಆಗಿಬಿಡುವ ವ್ಯಂಗ್ಯವನ್ನು ಲೇಖಕರು ನೆನಪಿಸುತ್ತಾರೆ.
ಅಂತಾರಾಷ್ಟಿçÃಯ ಸಂಬAಧಗಳು, ಸಂಕೀರ್ಣತೆಗಳು ಹೇಗೆ ಸುರಾಜ್ಯಕ್ಕೆ ಬಾಧೆ ಕೊಡುತ್ತವೆ ಎನ್ನುವ ಕಡೆಗೂ ಈ ಲೇಖನ ಗಮನಹರಿಸಿದೆ. ದುರ್ಬಲರ ಶಾಂತಿಮAತ್ರವಾಗಲೀ, ‘ನಾವು ಅಂತಾರಾಷ್ಟಿçÃಯವಾದಿಗಳು; ನಮಗೆ ಗಡಿಗಳಿಲ್ಲ; ನಾವು ರಾಷ್ಟçವಾದವೆಂಬ ಸಂಕುಚಿತ ದೃಷ್ಟಿಯವರಲ್ಲ’ ಎನ್ನುವಂತಹ ಆಖ್ಯಾನ-ವ್ಯಾಖ್ಯಾನಗಳಗಲೀ ಆಧುನಿಕ ಅಂತಾರಾಷ್ಟಿçÃಯ ಸ್ಪರ್ಧೆಯಲ್ಲಿ ಉಪಯೋಗಕ್ಕೆ ಬರುವುದಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗಿದೆ; ಆಗುತ್ತಿದೆ. ನಾನು ವಿಶ್ವಪ್ರಜೆ ಎಂದು ಘೋಷಿಸಿಕೊಂಡವನೂ ವೀಸಾ ಇಲ್ಲದೆ ಅಮೆರಿಕಕ್ಕೆ ಹೋಗಲು ವಿಮಾನ ಹತ್ತಲಾರ. ಅಮೆರಿಕ ದೇಶವು ಯಾವುದೋ ನೆಪದಲ್ಲಿ ಸದ್ದಾಮ್ ಹುಸೇನನ ಇರಾಕನ್ನು ಬಗ್ಗು ಬಡಿಯಿತು. ದಕ್ಕಿಸಿಕೊಂಡಿತು. ಇದೀಗ ರಷ್ಯಾ- ಉಕ್ರೇನ್ ಯುದ್ಧ ಈ ಬಗೆಯ ಸಂಕೀರ್ಣತೆಯ ಮತ್ತೊಂದು ಮುಖವನ್ನು ಪರಿಚಯಿಸುತ್ತಿದೆ. ಈ ಯುದ್ಧವು ಆರಂಭವಾಗಿ ದೀರ್ಘ ಕಾಲವಾಗಿದ್ದರೂ, ಅದರ ದುಷ್ಟರಿಣಾಮ ಜಗತ್ತಿನ ಬೇರೆಬೇರೆ ದೇಶಗಳ ಮೇಲೆ ಆಗುತ್ತಿದ್ದರೂ ವಿಶ್ವಸಂಸ್ಥೆ ಏನನ್ನೂ ಮಾಡಲಾಗದೆ ಇರುವುದನ್ನು ನೋಡಿದರೆ ಒಂದು ದೇಶ ಸ್ವಾವಲಂಬಿ ಶಕ್ತಿಯಾಗುವುದು ಎಷ್ಟು ಮುಖ್ಯ ಎನ್ನುವುದು ಅರ್ಥವಾದೀತು. ಸಶಕ್ತನಾದವನ ಶಾಂತಿಮAತ್ರಕ್ಕೆ ಮಾತ್ರ ಬೆಲೆ.
ತಮ್ಮ ನಂಬಿಕೆ ಮಾತ್ರ ಸತ್ಯವೆಂಬ ದೃಷ್ಟಿಯ ಮತೀಯ ಅಸಹಿಷ್ಣುತೆ, ಯುದ್ಧ ಮಾಡದಿದ್ದರೂ ಯುದ್ಧದ ಮಾನಸಿಕತೆ, ಭಯೋತ್ಪಾದನೆ ಇವೆಲ್ಲ ಆಡಳಿತ ವ್ಯವಸ್ಥೆಯ ದಿಕ್ಕುಗೆಡಿಸುತ್ತವೆ. ಸಾರ್ವಜನಿಕ ಅಭಿಪ್ರಾಯಗಳು ದೇಶದ ಸ್ವಂತಿಕೆಯ ಆಧಾರದ ಮೇಲೆ, ಸತ್ಯ ಮತ್ತು ಮೌಲ್ಯಗಳ ಆಧಾರದಲ್ಲಿ ರೂಪುಗೊಳ್ಳಬೇಕು. ಹಾಗಲ್ಲದೆ, ವ್ಯವಸ್ಥಿತ ಅಪಪ್ರಚಾರ ಮತ್ತು ಅಪವ್ಯಾಖ್ಯಾನ-ಆಖ್ಯಾನಗಳ ಮೂಲಕ ರೂಪುಗೊಂಡ ಜನಾಭಿಪ್ರಾಯವೇ ಕಲುಷಿತವಾದುದಾಗಿರುತ್ತದೆ. ಸಂವಿಧಾನವು ಎಲ್ಲ ನಾಗರಿಕರಿಗೂ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಹಕ್ಕುಗಳನ್ನು ನೀಡಿರುವ ಅಂಶವನ್ನು ಲೇಖಕರು ಉಲ್ಲೇಖಿಸುತ್ತಾರೆ. ಭಾರತದಲ್ಲಿ ಬಹುಸಂಖ್ಯಾತ ಎಂದು ಗುರುತಿಸಬಹುದಾದ, ದಬ್ಬಾಳಿಕೆ ಮಾಡಬಹುದಾದ, ಏಕರೂಪಿ ಸಮುದಾಯ ಇಲ್ಲದೆ ಇದ್ದಾಗ್ಯೂ ಸ್ವಾತಂತ್ರೊö್ಯÃತ್ತರ ಭಾರತದಲ್ಲಿ ಅಲ್ಪಸಂಖ್ಯಾತ- ಬಹುಸಂಖ್ಯಾತ ಎನ್ನುವ ನರೆಟಿವ್ ಬಿಟ್ಟು ಸೆಕ್ಯುಲರಿಸಮ್ಮಿನ ನರೆಟಿವ್ ಇಲ್ಲವೇ ಇಲ್ಲ! ಹೀಗಿದ್ದರೂ ಹಲವು ಸಮುದಾಯಗಳು ಆಗಾಗ ಭಾರತದಲ್ಲಿ ‘ವಿಕ್ಟಿಮ್ ಕಾರ್ಡು’ಗಳನ್ನು ಹಿಡಿದುಕೊಂಡು ಬೀದಿಗೆ ಬರುವಂತಹ ಸ್ಥಿತಿಯಿದೆ. ಭಾರತದ ಬುದ್ಧಿಜೀವಿ ವರ್ಗ ಕಳೆದ ಎಪ್ಪತ್ತು ಎಂಬತ್ತು ವರ್ಷಗಳಲ್ಲಿ ಪ್ರತ್ಯೇಕತಾ ಭಾವವನ್ನು ಬೇಳೆಸುವ ನರೆಟಿವ್ಗಳನ್ನು ಯಶಸ್ವಿಯಾಗಿ ಕಟ್ಟುತ್ತಾ ಬಂದಿದೆ. ಇಂತಹ ಹುಸಿ ನರೆಟಿವ್ಗಳನ್ನು ಮುರಿದು ಹೊಸ ಸರಿಯಾದ ಮತ್ತು ಸತ್ಯವನ್ನಾಧರಿಸಿದ ನರೆಟಿವ್ಗಳನ್ನು ಕಟ್ಟುವುದು ಅಷ್ಟು ಸುಲಭದ ಮಾತಲ್ಲ.
ಲೇಖಕರ ಪ್ರಕಾರ ಇಸ್ಲಾಮಿಕ್ ದೇಶಗಳ ಮತವಿಸ್ತರಣೆಯ ಗುರಿಯಾಗಲೀ, ಚೀನಾದಂತಹ ದೇಶಗಳ ಸಾಮ್ರಾಜ್ಯ ವಿಸ್ತರಣೆಯ ಗುರಿಯಾಗಲೀ ಸುರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಲಾರದು. ಅವೆಲ್ಲ ಶೋಷಣೆ, ದಬ್ಬಾಳಿಕೆ, ಯಜಮಾನಿಕೆಯಲ್ಲೇ ಮುಗಿಯುವಂಥವು. ಸದ್ಧರ್ಮದ ಭಾರತೀಯ ಪರಿಕಲ್ಪನೆಯುಳ್ಳ ವಿಕೇಂದ್ರೀಕೃತ ವ್ಯವಸ್ಥೆಯು ಹೆಚ್ಚು ಸುಸ್ಥಿರವಾದುದು; ಕುಟುಂಬವು ಸಮಾಜದ ಮೂಲ ಹಾಗೂ ಸ್ವಯಂಪೂರ್ಣ ಘಟಕವಾಗಿ ಉಳಿದಾಗ ಇದು ಸಾಧ್ಯವಾಗುತ್ತದೆ ಎನ್ನುವುದನ್ನು ಲೇಖಕರು ಒತ್ತು ಕೊಟ್ಟು ಹೇಳುತ್ತಾರೆ.
***
‘ಮಹಮ್ಮದೀಯ ಮತ ಮತ್ತು ಸಮುದಾಯ: ನಾವು ಅರ್ಥೈಸಿಕೊಂಡಿರುವುದೆಷ್ಟು?’ ಎನ್ನುವ ಲೇಖನವನ್ನು ಬರೆದವರು ಚಂದ್ರಶೇಖರ ಜಹಗೀರ್ದಾರ್. ಪಕ್ಕನೆ ಮೇಲುನೋಟಕ್ಕೆ ಈ ಶೀರ್ಷಿಕೆಯಲ್ಲಿರುವ ‘ನಾವು’ ಎನ್ನುವ ಪದವು ಹಿಂದುಗಳು ಅಥವಾ ಹೆಚ್ಚೆಂದರೆ ಮುಸ್ಲಿಮೇತರರನ್ನು ಸೂಚಿಸುತ್ತದೆ ಎಂದು ಅನಿಸಬಹುದು. ಆದರೆ ಹಾಗೆಂದುಕೊAಡರೆ ತಪ್ಪು. ಯಾಕೆಂದರೆ ಇಂದಿನ ನಮ್ಮ ದೇಶದ ಮುಸ್ಲಿಮರು ಕೂಡ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗದು! ಅರ್ಥವಾದವರೂ ಬಹಿರಂಗವಾಗಿ ಹೇಳುತ್ತಾರೆ ಎನ್ನಲಾಗದು. ಜಗತ್ತಿನ ವಿವಿಧ ನಂಬಿಕೆ, ಮತ, ರಿಲಿಜನ್ನುಗಳಿಗೆ ಸಂಬAಧಿಸಿದAತೆ ಎರಡು ನೆಲೆಗಳಲ್ಲಿ ರಿಲಿಜಿಯಸ್ ಪಠ್ಯಗಳ ಅರ್ಥೈಸುವಿಕೆಗಳು ಸಾಮಾನ್ಯವಾಗಿ ಕಂಡುಬರುತ್ತವೆ: ಸಾಂಪ್ರದಾಯಿಕ ಅರ್ಥೈಸುವಿಕೆ ಮತ್ತು ಸುಧಾರಣೆಗೊಂಡ ಅರ್ಥೈಸುವಿಕೆ. ಹಿಂದುಗಳಿಗೆ ನಿರ್ದಿಷ್ಟ ‘ರಿಲಿಜಿಯಸ್’ ಪಠ್ಯ ಅಂತ ಇಲ್ಲದಿದ್ದರೂ ಒಟ್ಟಾರೆಯಾಗಿ, ಪುರಾಣಗಳು, ಶಾಸ್ತçಗಳು, ರೂಢಿಗಳು ಮತ್ತು ನಂಬಿಕೆಗಳನ್ನು ಪರಿಗಣಿಸಿದರೆ ಅಲ್ಲಿಯೂ ಸ್ಥೂಲವಾಗಿ ಈ ಎರಡು ಬಗೆಯ ಅರ್ಥೈಸುವಿಕೆಗಳನ್ನು ಕಾಣಬಹುದು.
ಈ ಎರಡು ನಮೂನೆಗಳ ಬಗ್ಗೆ ಲೇಖಕರು ನೀಡುವ ವಿವರಣೆ ಬಹಳ ಉಲ್ಲೇಖಾರ್ಹವಾಗಿದೆ. “..ಯಹೂದಿ ಮತ್ತು ಕ್ರೆöÊಸ್ತ ಮತಗಳನ್ನೂ ಒಳಗೊಂಡು ಹಲವಾರು ಮತಗಳಲ್ಲಿ ಸಾಂಪ್ರದಾಯಿಕ ಮತ್ತು ಸುದಾರಣೆಗೊಂಡ ಅರ್ಥೈಸುವಿಕೆಗಳಿವೆ. ಸಾಮಾನ್ಯವಾಗಿ ಸುಧಾರಣೆಗೊಂಡ ಅರ್ಥೈಸುವಿಕೆಗಳು ರಾಜ್ಯ ನಿರ್ವಹಣೆಯಲ್ಲಿ ವಿನಿಯೋಗವಾದರೆ, ಸಾಂಪ್ರದಾಯಿಕ ಅರ್ಥೈಸುವಿಕೆಯು ಸಮುದಾಯ-ಕೌಟುಂಬಿಕ-ವೈಯಕ್ತಿಕ ನೆಲೆಗಳಲ್ಲಿ ಉಳಿದುಕೊಂಡಿರಬಹುದು. ಆದರೆ ಇಸ್ಲಾಮ ಮತದಲ್ಲಿ ಸಾಂಪ್ರದಾಯಿಕ ಅರ್ಥೈಸುವಿಕೆಯೇ ಇಸ್ಲಾಮಿಕ್ ದೇಶದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ನೀತಿಗಳಲ್ಲಿ ಉಪಯೋಗವಾಗುತ್ತಿದ್ದು ಇದು ಸಮುದಾಯಗಳಲ್ಲಿನ ಸಂಬAಧಗಳಲ್ಲಿ ಒಂದು ರೀತಿಯ ಒತ್ತಡವನ್ನು ಸೃಷ್ಟಿಸುತ್ತಿದೆ.”
ಈ ಒತ್ತಡದ ಸ್ವರೂಪ ಕೆಲವೊಮ್ಮೆ ವಿಚಿತ್ರವಾಗಿರಬಹುದು. ಇಂದಿನ ಎಲ್ಲ ಸಮಸ್ಯೆಗಳನ್ನೂ ಪ್ರಾಚೀನ ಗ್ರಂಥ/ಶಾಸ್ತçಗಳ ಆಧಾರದಲ್ಲಿ ಪರಿಹರಿಸಬೇಕು ಎಂದು ಯಾರಾದರೂ ಹಿಂದೂವೊಬ್ಬ ಹೇಳಿದರೆ ಅವನು ಭಾರತೀಯತೆಯಿಂದ ಅಷ್ಟು ದೂರ ಹೋದನೆಂದು ಅರ್ಥ. ಹದಿನೈದು ವರ್ಷದ ಹುಡುಗಿಗೆ ಮದುವೆ ಮಾಡಿದ್ದು ಸರಿಯೆ? ವಿಧವೆಯೊಬ್ಬಳ ತಲೆ ಬೋಳಿಸಿದ್ದು ಸರಿಯೆ? ಎನ್ನುವ ಪ್ರಶ್ನೆಗೆ ನ್ಯಾಯಾಲಯವು ವೇದವನ್ನೋ ಮನುಸ್ಮೃತಿಯನ್ನೋ ಮತ್ತೊಂದು ಧರ್ಮಶಾಸ್ತçವನ್ನೋ ನೋಡಿ ಉತ್ತರ ಕಂಡುಕೊಳ್ಳುತ್ತೇನೆAದು ಇಂದು ಹೇಳಿದರೆ ಅದು ಭಾರತೀಯತೆಯಿಂದ, ಹಿಂದುತ್ವದಿAದಷ್ಟೇ ಅಲ್ಲ; ಕೊನೆಗೆ ವೇದ, ಧರ್ಮಶಾಸ್ತç ಅಥವಾ ಮನುಸ್ಮೃತಿಯಿಂದಲೂ ಅಷ್ಟು ದೂರ ಹೋಯಿತೆಂದೇ ಅರ್ಥ. ಆದರೆ ಪುಸ್ತಕಾಧಾರಿತ ರಿಲಿಜನ್ ಒಂದು ತನ್ನ ನೆರೆಯ ನಂಬಿಕೆಗಳ ಮೇಲೆ ಉಂಟುಮಾಡುವ ಒತ್ತಡ ಈ ಬಗೆಯದು ಎನ್ನುವುದನ್ನು ಗಮನಿಸದೆ ಹೋಗಬಾರದು.
ಸಮುದಾಯಗಳು ನಂಬಿರುವ ಮೌಲ್ಯಗಳನ್ನು ತುಲನಾತ್ಮಕವಾಗಿ ನೋಡುವ ಅಗತ್ಯವನ್ನು ಲೇಖಕರು ಪ್ರತಿಪಾದಿಸುತ್ತಾರೆ. ಇಂದ್ರಿಯ ನಿಯಂತ್ರಣ ಮೊದಲಾದ ಹಲವು ವಿಷಯಗಳಲ್ಲಿ ಇರುವ ಸಮಾನತೆ/ವ್ಯತ್ಯಾಸಗಳನ್ನು ತೌಲನಿಕವಾಗಿ ಗುರುತಿಸುತ್ತಾರೆ. ಸ್ವಾರಸ್ಯವೆಂದರೆ ಭಾರತದಲ್ಲಿ ಹಿಂದೂ- ಮುಸ್ಲಿಂ ಸೌಹಾರ್ದವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದ್ದ ನೆಹರೂ ಅವರಾಗಲೀ ನೆಹರೂವಿಯನ್ ಸೆಕ್ಯುಲರಿಸಮ್ಮಿನ ಇತರ ಅಧ್ವರ್ಯುಗಳಾಗಲೀ ಈ ಬಗೆಯ ತೌಲನಿಕ ದೃಷ್ಟಿಯ ವಿವೇಚನೆಯನ್ನು ಮಾಡಿದ್ದು ಕಾಣುವುದಿಲ್ಲ. ಅಥವಾ ವಿವೇಚಿಸಿದ್ದರೂ ಸಾಮರಸ್ಯ, ಸೌಹಾರ್ದದ ಸಾಮಾಜಿಕ ಬದುಕಿಗೆ ಯಾವುದು ಪೂರಕ, ಯಾವುದು ಮಾರಕ ಎಂದು ವಿವೇಚಿಸಿ ಗುಣದೋಷಗಳನ್ನು ಹೇಳಿದ್ದು ಕಾಣುವುದಿಲ್ಲ. ನಿಜ, ಜಾತಿಗಳ ನಡುವಿನ ತಾರತಮ್ಯದ ಸಮಸ್ಯೆ ಬಗ್ಗೆ ಸಾಕಷ್ಟು ಬರೆದವರಿದ್ದಾರೆ. ಆದರೆ ಹಿಂದುಗಳ ನಂಬಿಕೆಗಳು, ವಿವಿಧ ಮತ-ಪಂಥಗಳು, ರಿಲಿಜನ್ ಮೊದಲಾದವುಗಳ ನಡುವಿನ ಸಾಮ್ಯ ವೈಷಮ್ಯಗಳ ಬಗ್ಗೆ ಅಂತಹ ತೌಲನಿಕ ಚರ್ಚೆ ನಡೆದುದಿಲ್ಲ. ಅಂತಹ ತೌಲನಿಕ ವಿವೇಚನೆ ನಡೆದಾಗ ಮಾತ್ರ ಸೌಹಾರ್ದ ಸ್ಥಾಪಿಸುವ, ಉಳಿಸುವ ಹೊಣೆಗಾರಿಕೆಯನ್ನು ಯಾರು ಹೆಚ್ಚು ಹೊರಬೇಕು ಎನ್ನುವುದು ಸ್ಪಷ್ಟವಾಗುತ್ತದೆ. ಲೇಖಕರು ಆ ಸ್ಪಷ್ಟತೆಯನ್ನು ಇಲ್ಲಿ ತಂದಿದ್ದಾರೆ.
*****
‘ನವ ಚಳವಳಿಗಳು- ಸಮಸ್ಯೆ, ಸ್ವರೂಪ, ಸವಾಲು’ ಎನ್ನುವ ಶೀರ್ಷಿಕೆಯುಳ್ಳ ರೋಹಿತ್ ಚಕ್ರತೀರ್ಥ ಅವರ ಲೇಖನ ಈ ಕಾಲದ ಹಲವು ಚಳವಳಿಗಳನ್ನು ಗ್ರಹಿಸಿಕೊಳ್ಳಲು ಬೇಕಾದ ಸೂಕ್ಷö್ಮಗಳನ್ನು ಬಿಡಿಸಿ ಹೇಳಲು ಯತ್ನಿಸುತ್ತದೆ. ಚಳವಳಿಗಳೆಂಬ ವಿದ್ಯಮಾನಗಳನ್ನು ರೂಪಿಸಲು ಬಗೆಬಗೆಯಲ್ಲಿ ಕಟ್ಟಲಾಗುವ ನರೆಟಿವ್ಗಳ ಆಖ್ಯಾನಗಳ ಸ್ವರೂಪವನ್ನು ಲೇಖನ ಬಿಚ್ಚಿಡುತ್ತದೆ. ಲೇಖಕರು ಚಳವಳಿ ಎನ್ನು ಒಮದು ಪರಿಕಲ್ಪನೆಯನ್ನೇ ಪ್ರಶ್ನಿಸುತ್ತಿಲ್ಲ. ಚಳವಳಿ ಎನ್ನುವುದು ಇರಲೇಬಾರದು ಎನ್ನುತ್ತಿಲ್ಲ ಅಥವಾ ಎಲ್ಲಾ ಚಳವಳಿಗಳನ್ನೂ ಋಣಾತ್ಮಕವಾಗಿ ಕಾಣುವುದಿಲ್ಲ. ಬದಲಾಗಿ ಚಳವಳಿಯ ನೆಪದಲ್ಲಿ ಅನ್ಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಮತ್ತು ಸಮಾಜದ ಹಿತಕ್ಕೆ, ದೇಶದ ಹಿತಕ್ಕೆ ಧಕ್ಕೆ ತರುವ ಚಳವಳಿಗಳ ಕಡೆಗೆ ಲೇಖಕರು ನಮ್ಮ ಗಮನವನ್ನು ಸೆಳೆಯುತ್ತಾರೆ. ಹಾಗೆ ನೋಡಿದರೆ ದೇಶಕ್ಕೆ ಮಾರಕವಾದ ಚಳವಳಿಗೆ ವಿರೋಧವಾಗಿ ಚಳವಳಿ ಅಗಬೇಕಾದುದು ಕೂಡ ಅಗತ್ಯವೇ.
ಇಲ್ಲಿ ಲೇಖಕರು ಮುಖ್ಯವಾಗಿ ವಾಮಮಾರ್ಗದ ಚಳವಳಿಗಳನ್ನು ಅಥವಾ ಆಂದೋಲನಗಳನ್ನು ಗುರಿಯಾಗಿಟ್ಟುಕೊಂಡು ವಿಶ್ಲೇಷಣೆ ನಡೆಸಿದ್ದಾರೆ. ಸುಳ್ಳುಗಳನ್ನು ಮತ್ತೆ ಮತ್ತೆ ಒತ್ತಿ ಹೇಳುವ ಮೂಲಕ ಭ್ರಾಮಕ ವಾತಾವರಣವನ್ನು ನಿರ್ಮಿಸಿ ಆ ಮೂಲಕ ಒಂದು ಆಂದೋಲನವನ್ನು ದೀರ್ಘ ಕಾಲ ನಿಲ್ಲಿಸುವ ಬಗೆಯನ್ನು ಹೇಳುತ್ತಾರೆ. ಪರಿಸರದ ಬಗ್ಗೆ ಜನರಿಗಿರುವ ಸಹಜ ಕಾಳಜಿಯನ್ನು ಕೂಡ ಹೇಗೆ ಎನ್ಕಾö್ಯಶ್ ಮಾಡಿಕೊಂಡು ಆಂದೋಲನಗಳನ್ನು ಹುಟ್ಟುಹಾಕಿ ಗಂದಲಗಳನ್ನು ಉಂಟುಮಾಡಬಹುದು ಎನ್ನುವುದನ್ನು ಲೇಖನ ವಿವರಿಸುತ್ತದೆ.
ಋತ್ವಿಕ್ ದೇಸ್ವಾಲ್ ಎಂಬ ಯುವಕನ ಒಂದು ಲೇಖನವನ್ನು ನಿದರ್ಶನವಾಗಿ ಇಟ್ಟುಕೊಂಡು ಯುವಜನತೆಯನ್ನು ಆಂದೋಲನಗಳಿಗೆ ಸೆಳೆಯುವ ಬಗೆಯನ್ನು ಹೇಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚಳವಳಿಯ ನೆಪದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮುಂತಾದ ಸಮಾಜವಿರೋಧಿ ಚಟುವಟಿಕೆಗಳನ್ನು ಕೂಡ ನೈತಿಕ ಎಂಬAತೆ ಸಮರ್ಥಿಸುವುದರ ಬಗ್ಗೆ ರೋಹಿತ್ ಉಲ್ಲೇಖಿಸುತ್ತಾರೆ. ರೈತ ಚಳವಳಿಯ ಸಂದರ್ಭದಲ್ಲಿ ಟ್ರಾಕ್ಟರುಗಳನ್ನು ಯದ್ವಾತದ್ವಾ ಅಪಾಯಕಾರಿಯಾಗಿ ಓಡಿಸಿದ್ದು, ಕೆಂಪುಕೋಟೆಯ ಧ್ವಜಸ್ಥಂಭವನ್ನು ಏರಿದ್ದು ಇವನ್ನೆಲ್ಲ ತಥಾಕಥಿತ ಪ್ರಗತಿಪರರು ಚಳವಳಿಯ ವಿಕೃತಿಯೆಂದು ಕಾಣಲಿಲ್ಲ.
ನಂದಿಗ್ರಾಮದ ಚಳವಳಿ, ನರ್ಮದಾ ಬಚಾವೋ ಆಂದೋಲನ ಇಲ್ಲೆಲ್ಲ ಗ್ರಾಮೀಣರ ಹಿತದ ನೆಪದಲ್ಲಿ ಅನ್ಯ ಉದ್ದೇಶಗಳನ್ನು ಈಡೇರಿಸಿಕೊಂಡ ಬಗ್ಗೆ ಲೇಖಕರು ಬೆಳಕು ಹರಿಸಿದ್ದಾರೆ. ಅದೇರೀತಿಯಲ್ಲಿ ಕೂಡಂಕುಲA ಆಂದೋಲನ, ತೂತುಕುಡಿಯ ತಾಮ್ರದ ಕಾರ್ಖಾನೆ ವಿರೋಧಿ ಆಂದೋಲನ ಇವೆಲ್ಲವುಗಳ ಹಿಂದಿದ್ದ ದೇಸೀಯ ವಿದೇಶೀಯರ ಹುನ್ನಾರಗಳ ಬಗ್ಗೆ ಲೇಖಕರು ಉಲ್ಲೇಖಿಸಿದ್ದಾರೆ. ಮಾಧ್ಯಮಗಳು ಕೂಡ ಇಂತಹ ಹುನ್ನಾರಕೋರರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಬೆಂಬಲವನ್ನು ನೀಡುತ್ತವೆ. ಏನಿಲ್ಲದಿದ್ದರೂ ಅವು ಟಿ.ಆರ್.ಪಿ.ಗೆ ಸಹಕಾರಿ ಎನ್ನುವುದು ಅವುಗಳಿಗೆ ಗೊತ್ತು. ಇಂತಹ ಚಳವಳಿಗೆ ಎನ್.ಜಿ.ಒ.ಗಳ ಹೆಸರಿನಲ್ಲಿ ಸಾಕಷ್ಟು ವಿದೇಶಿ ಹಣ ಬರುತ್ತದೆ. ಪ್ರಚಾರದ ಭರಾಟೆ, ಜಾಹಿರಾತು, ಪತ್ರಿಕಾಗೋಷ್ಠಿಗಳ ವೈಭವ ಇವೆಲ್ಲವೂ ಪ್ರಚಾರದ ಮೇಲೆ ಪರಿಣಾಮ ಬೀರುತ್ತವೆಯಾದ್ದರಿಂದ ಹಣವಿದ್ದರೆ ಮಧ್ಯಮಗಳನ್ನು ತಮ್ಮ ಕಡೆ ಇಟ್ಟುಕೊಳ್ಳುವುದು ಕಷ್ಟವಿಲ್ಲ.
ಟ್ವ್ವಿಟರ್, ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಂ ಮೊದಲಾದ ನವಮಾಧ್ಯಮಗಳು ಸುಲಭವಾಗಿ ಅಪಪ್ರಚಾರಕ್ಕೆ ಅನುಕೂಲವನ್ನು ಒದಗಿಸುತ್ತವೆ. ಒಳ್ಳೆಯ ವಿಚಾರವನ್ನು ಪ್ರಚಾರ ಮಾಡುವುದಕ್ಕಿಂತ ಅಪಪ್ರಚಾರ ಮಾಡುವುದು ಯಾವಾಗಲೂ ಸುಲಭ. ಅದರಲ್ಲೂ ಜನಜೀವನದ ಮೇಲೆ ಪ್ರಭಾವ ಬೀರುವಂತಹ, ಆದರೆ ವಿಷಯದ ಬಗ್ಗೆ ಆಳ ಅರಿವಿಲ್ಲದ ಜನರ ನಡುವೆ ಪರಿಸರ, ರೈತ ಕಾನೂನು ಇತ್ಯಾದಿ ವಿಷಯಗಳ ಬಗ್ಗೆ ಅಪಪ್ರಚಾರ ಮಾಡುವುದು ಸುಲಭ. ತಂತ್ರಜ್ಞಾನವನ್ನು ಆಂದೋಲನಗಳು ಚೆನ್ನಾಗಿ ಬಳಸಿಕೊಳ್ಳುತ್ತವೆ.
ಭಾರತದ ಸ್ಥಿತಿಗತಿಯ ಸಂಪೂರ್ಣ ಪರಿಚಯವಿಲ್ಲದ ಪಶ್ಚಿಮದವರ ನಡುವೆ ಅಪಕಲ್ಪನೆಗಳನ್ನು ಬಿತ್ತಿ ಅವರ ಆಂದೋಲನೋತ್ಸಾಹವನ್ನು ಬಳಸಿಕೊಳ್ಳುವುದು ಇನ್ನೂ ಸುಲಭ. ಭಾರತದ ಬಗ್ಗೆ ವಸಾಹತುಸಾಹಿ ದೊರೆಗಳು ಮತ್ತು ಸ್ವಾತಂತ್ರಾö್ಯನAತರದ ಸುಶಿಕ್ಷಿತರು ಕಟ್ಟಿದ ನರೆಟಿವ್ಗಳು ಕೂಡ ಇದಕ್ಕೆ ಪೂರಕವೇ ಹೌದು. ಭಾರತದಲ್ಲಿ ನಡೆಯುವ ನವಚಳವಳಿಗಳ ಹಿಂದೆ ವಿದೇಶಗಳಲ್ಲಿರುವ ಭಾರತವಿರೋಧಿಗಳ ಕೈವಾಡ/ಬೆಂಬಲ ಇರುವುದು ಕೂಡ ಇಂದು ಸ್ಪಷ್ಟವೇ ಇದೆ. ಖಾಲಿಸ್ತಾನವಾದಿಗಳು, ಕಾಶ್ಮೀರ ಪ್ರತ್ಯೇಕತಾವಾದಿಗಳು ಇವರೆಲ್ಲರೂ ಈ ದೇಶದೊಳಗೆ ಸರಕಾರದ ವಿರುದ್ಧ ಚಳವಳಿ ನಡೆಸುವವರಿಗೆ ಪ್ರೀತಿಪಾತ್ರರೇ ಹೌದು! ಅಂತಾರಾಷ್ಟಿçÃಯ ಸಾಹಿತ್ಯ ಪ್ರಶಸ್ತಿ ಪಡೆದ ಒಬ್ಬರು ತುಕಡೇವಾದಿ ಬುದ್ಧಿಜೀವಿ ಮಹಿಳೆ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಬೇಕೆಂದು ಹೇಳಿದ್ದೂ ವರದಿಯಾಗಿದ್ದುಂಟು.
ವೋಕಿಸಂ ಎನ್ನುವ ಒಂದು ಅಧುನಿಕ ಮನೋಬಾವವನ್ನು ಇಲ್ಲಿ ಲೇಖಕರು ಪರಿಚಯಿಸಿದ್ದಾರೆ. ವೋಕಿಸಂ ಬಗ್ಗೆ ಕನ್ನಡದಲ್ಲಿ ಹೆಚ್ಚು ಬರವಣಿಗೆ ಆಗಿಲ್ಲ. ಸರಳವಾಗಿ ಹೇಳಬೇಂದರೆ, ವ್ಯವಸ್ಥೆಯೆಲ್ಲ ಅಡಿಮೇಲಾಗಬೇಕು ಎನ್ನುವ ಮನೋಭಾವ ಇದು. ಯಾವ ಕಷ್ಟವೂ ಇಲ್ಲದ ಶ್ರೀಮಂತರ ಮಕ್ಕಳು ಇನ್ನೊಬ್ಬರಿಗೆ ‘ದನಿಯಾಗುವ’ ಉತ್ಸಾಹ ತೋರುತ್ತಾ ವೋಕಿಸಂ ಕಡೆಗೆ ಒಲಿಯುತ್ತಿರುವುದು ಈಚಿನ ವಿದ್ಯಮಾನ. ಎಲ್ಲವನ್ನೂ ಕೇವಲ ಶ್ರೀಮಂತ- ಬಡವ, ಶೋಷಕ-ಶೋಷಿತ ಮುಂತಾದ ವಿರುದ್ಧಗಳ ನೆಲೆಯಲ್ಲಿ ಮಾತ್ರ ಅರ್ಥ ಮಾಡಿಕೊಳ್ಳುತ್ತ ಸಮಾಜ ಅಥವಾ ದೇಶವೆಂಬ ವ್ಯವಸ್ಥೆಯ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದ ಸಮೂಹಕ್ಕೆ ಹೊಸ ಬುಡಮೇಲು ಸಿದ್ಧಾಂತಗಳು ಇಷ್ಟವಾಗುತ್ತವೆ. ಅವರ ಗ್ರಹಿಕಾಸಾಮರ್ಥ್ಯ ಕೂಡ ಅಷ್ಟಕ್ಕಷ್ಟೇ. ಜೋರುದನಿಯ ಅಭಿವ್ಯಕ್ತಿ ಸಾಮರ್ಥ್ಯ ಮಾತ್ರ ಇರುತ್ತದೆ. ಎಷ್ಟೋ ನವಚಳವಳಿಗಳನ್ನು ಬೆಂಬಲಿಸುವವರ ಮಹಳ ಮುಖ್ಯ ಲಕ್ಷಣವೇ ಇದು. ಗ್ರಹಿಕಾಸಾಮರ್ಥ್ಯ ಸೊನ್ನೆ; ರೆಟಾರಿಕ್ಗಳ ಆಕರ್ಷಣೆಗೆ ಸುಲಭವಾಗಿ ಸೆಳೆಯಲ್ಪಡುತ್ತಾರೆ. ವೋಕ್ ಸಿದ್ಧಾಂತಿಗಳನ್ನು ಗುರುತಿಸುವುದು ಹೇಗೆ? ರೋಹಿತ್ ಹೇಳುತ್ತಾರೆ: ಅವರು ತಮ್ಮ ಗೋಲ್ ಪೋಸ್ಟ್ ಗಳನ್ನು ಬದಲಾಯಿಸುತ್ತ ಹೋಗುತ್ತಾರೆ. ಇದಕ್ಕೆ ಭಾರತೀಯ ಸಂದರ್ಭದಲ್ಲಿ ನಡೆಯುವ ಸಂಸ್ಕೃತಿ ಕುರಿತಾದ ಚರ್ಚೆಗಳ ಉದಾಹರಣೆಯನ್ನೂ ಲೇಖಕರು ನೀಡಿದ್ದಾರೆ. ವೋಕ್ ಸಿದ್ಧಾಂತಿಗಳು ನೀವು ಗೋಲು ಹೊಡೆವಾಗ ತಮ್ಮ ಗೋಲ್ ಪೋಸ್ಟ್ ಗಳನ್ನು ಆಚೀಚೆ ಬದಲಾಯಿಸುವುದಷ್ಟೇ ಅಲ್ಲ. ಅವರ ಎದುರಿನ ಅವರು ಗೋಲು ಹೊಡೆಯಬೇಕಾದ ಗೋಲ್ ಪೋಸ್ಟನ್ನೂ ತಮ್ಮ ಚೆಂಡು ಹೋಗುವಲ್ಲಿಗೆ ಬದಲಿಸುತ್ತಾರೆ ಎನ್ನುವ ಸೂಚನೆಯೂ ಲೇಖನದಲ್ಲಿದೆ.
****
‘ಪರಿಸರದ ಚರ್ಚೆ- ನೆಲೆ, ಮಾರ್ಗ ಮತ್ತು ಗುರಿ’ ಎನ್ನುವ ಲೇಖನವನ್ನು ಹೆಸರಾಂತ ಪತ್ರಕರ್ತರೂ ಪರಿಸರವಾದಿಯೂ ಆದ ಎಸ್. ಗಿರಿಜಶಂಕರ ಅವರು ಬರೆದಿದ್ದಾರೆ. ಇದನ್ನು ರೋಹಿತ್ ಚಕ್ರತೀರ್ಥರ ಲೇಖನದ ಜೊತೆಗೆ ಓದಿದರೆ ಹೆಚ್ಚು ಪ್ರಯೋಜನವಿದೆ.
ಆರಂಭದಲ್ಲೇ ಈ ಭೂಮಿಯ ಜೀವವೈವಿಧ್ಯವನ್ನು ಸಂಭ್ರಮಿಸುವ, ತೈತ್ತರೀಯ ಅರಣ್ಯಕದ ಶಾಂತಿಮAತ್ರವೊAದನ್ನು ಉದ್ಧರಿಸಿ ಇಡೀ ಲೇಖನದ ಹಿಂದಿರುವ ತಾತ್ತಿ÷್ವಕ ಬುನಾದಿಯೇನು ಎನ್ನುವುದನ್ನು ಸೂಚಿಸಿದ್ದಾರೆ. ಇದೊಂದೇ ಅಲ್ಲ; ಇಡೀ ಚರಾಚರಗಳನ್ನು ಸಮಗ್ರವಾಗಿ ಕಾಣುವ ಹಲವು ಮಂತ್ರಗಳು ಸಿಗುತ್ತವೆ. ನಮ್ಮ ಜನಪದ ಸಾಹಿತ್ಯದಲ್ಲೂ ಇಂತಹ ಆಶಯ ಹೇರಳವಾಗಿ ಸಿಗುತ್ತದೆ. ಸಾಮಾನ್ಯವಾಗಿ ಜಗತ್ತಿನ ಇತರ ದೇಶಗಳ ತತ್ತ÷್ವಗಳಲ್ಲಿ ಮನುಷ್ಯನಿಗೆ ಪ್ರಾಧಾನ್ಯ. ಇತರ ಸಂಪನ್ಮೂಲಗಳು ಮನುಷ್ಯನ ಅಗತ್ಯವನ್ನು ಪೂರೈಸಲಿಕ್ಕೆ. ಅದು ಪರಿಸರಕ್ಕೆ ಮಾರಕ. ಈಚಿನ ವರ್ಷಗಳಲ್ಲಿ ಮುಂದುವರಿದ ದೇಶಗಳು ಪರಿಸರ ಸ್ವಚ್ಛತೆ, ನೀರಿನ ಸ್ವಚ್ಛತೆ ಇತ್ಯಾದಿ ಸಂಗತಿಗಳಲ್ಲಿ ಭಾರತದಿಂದ ಎಷ್ಟೋ ಮುಂದಿದ್ದರೂ ಯಂತ್ರಗಳ ಬಳಕೆಯ ಮೂಲಕ ಪರೋಕ್ಷವಾಗಿ ಪರಿಸರಕ್ಕೆ ಉಂಟುಮಾಡುವ ಹಾನಿಯ ಪ್ರಮಾಣ ಬಹಳ ದೊಡ್ಡದು. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದ್ದ ದೃಷ್ಟಿ ಸಮಗ್ರತೆಯದು. ಕೇವಲ ಮನುಷ್ಯ ಕೇಂದ್ರಿತವಲ್ಲ. ಮನುಷ್ಯನ ಹಿತವು ಪರಿಸರದ ಹಿತವನ್ನು ಅವಲಂಬಿಸಿದೆ ಎನ್ನುವ ದೃಷ್ಟಿಕೋನ.
ಅವರು ಉಲ್ಲೇಖಿಸುವ ಶಾಂತಿಮAತ್ರದ ಅರ್ಥ ಹೀಗೆ: “ವಾಯುವು ನಮಗೆ ಸುಖವುಂಟಾಗುವAತೆ ಬೀಸಲಿ. ನದಿಗಳು ಮಧುರವಾಗಿ ಹರಿಯಲಿ. ಸಸ್ಯಗಳು ಮಧುರವಾಗಿರಲಿ. ದ್ಯುಲೋಕವೂ ಸುಖಕರವಾಗಿರಲಿ. ವೃಕ್ಷ, ಸೂರ್ಯ, ಗೋವಿನ ಕ್ಷೀರ ಸಹ ಮಧುರವಾಗಿರಲಿ.” ಅದೇರೀತಿ ಅಥರ್ವ ವೇದದ ಪೃಥ್ವಿ ಸೂಕ್ತವು ಬಹು ಮುಖ್ಯವಾದುದು. ಪರಿಸರವಾದವು ಕಟ್ಟಿಕೊಳ್ಳಬೇಕಾದ ನರೆಟಿವ್ ಕೂಡ ಹೊಂದಿರಬೇಕದುದು ಇದೇ ತಾತ್ವಿಕ ಬುನಾದಿಯನ್ನು.
ಪರಿಸರದ ಕುರಿತ ಚರ್ಚೆಯಲ್ಲಿ ಮುಖ್ಯವಾಗುವುದು ಮನುಷ್ಯನ ಮಧ್ಯಪ್ರವೇಶದಿಂದಾಗಿ ಅದಕ್ಕೆ ಆಗುವ ಹಾನಿ. ಪರಿಸದ ಪರಿಭಾಷೆ ಮತ್ತು ಅಭಿವೃದ್ಧಿಯ ಪರಿಭಾಷೆ ಇವೆರಡು ಮುಖಾಮುಖಿಯಾಗುವುದನ್ನು ಲೇಖಕರು ಸೂಚಿಸುತ್ತಾರೆ. ಪರಿಸರದ ಚರ್ಚೆಯು ಈ ಎರಡೂ ಪರಿಭಾಷೆಗಳನ್ನು ಅನಿವಾರ್ಯವಾಗಿ ಒಳಗೊಳ್ಳುತ್ತದೆ. ಈ ಮುಖಾಮುಖಿಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ನೀತಿನಿರೂಪಕರಿಗೆ ಹಾಗೂ ಆಡಳಿತಗಾರರಿಗೆ ಅತಿದೊಡ್ಡ ಸವಾಲು.
ಜೀವವೈವಿಧ್ಯ, ಕೈಗಾರಿಕೀಕರಣ, ನಗರೀಕರಣ, ವಿಜ್ಞಾನ-ತಂತ್ರಜ್ಞಾನ ಇವೆಲ್ಲ ಇಂದು ಪರಿಸರಸಂಬAಧೀ ದೇಶೀಯ ಮತ್ತು ಅಂತಾರಾಷ್ಟಿçÃಯ ಚರ್ಚೆಗಳಲ್ಲಿ ಮುಖ್ಯ ಪರಿಕಲ್ಪನೆಗಳಾಗಿ ಬರುತ್ತವೆ. ಅಂತಾರಾಷ್ಟಿçÃಯ ರಾಜಕಾರಣವು ಪರಿಸರದ ಚರ್ಚೆಯಲ್ಲೂ ತಲೆಹಾಕುವುದರಿಂದ ಅಭಿವೃದ್ಧಿಶೀಲ ದೇಶಗಳು ಎದುರಿಸಬೇಕಾದ ಅಂತಾರಾಷ್ಟಿçÃಯ ಸವಾಲು ಇನ್ನಷ್ಟು ಹೆಚ್ಚಿನದು. ಪರಿಸರ ಒಪ್ಪಂದಗಳೆಲ್ಲ ಏಕಪಕ್ಷೀಯವಾಗಿ ಶ್ರೀಮಂತ ಹಾಗೂ ಹೆಚ್ಚು ಕಾರ್ಬನನ್ನು ವಾತಾವರಣಕ್ಕೆ ಸೇರಿಸುವ ಬಲಾಢ್ಯ ದೇಶಗಳ ಹಿತಾಸಕ್ತಿಯನ್ನು ಕಾಪಾಡುತ್ತ ಭಾರತದಂತಹ ದೇಶಗಳ ಮೇಲೆ ಒತ್ತಡವನ್ನು ಹೇರುತ್ತವೆ.
ದೇಶದೊಳಗಿನ ಪರಿಸರ ಹೋರಾಟಗಾರರು ಎಷ್ಟರಮಟ್ಟಿಗೆ ದೇಶದ ಹಿತವನ್ನು ಕಾಪಾಡುತ್ತಾರೆನ್ನುವುದನ್ನು ಅವಲಂಬಿಸಿ ಅಭಿವೃದ್ಧಿ ಮತ್ತು ಪರಿಸರದ ಸಮತೋಲನವು ಸಾಧಿತವಾಗುತ್ತದೆ. ಈ ಹಿನ್ನೆಲಯಲ್ಲಿ ಲೇಖಕರು ತಮಿಳುನಾಡಿನ ಕೂಡುಕುಲಂ ಅಣು ವಿದ್ಯುತ್ ಯೋಜನೆ ಮತ್ತು ನರ್ಮದಾ ಯೋಜನೆಗಳ ಸಂದಭ್ದಲ್ಲಿ ನಡೆದ ಹೋರಾಟದ ಮಗ್ಗುಲುಗಳನ್ನು ಉಲ್ಲೇಖಿಸುತ್ತಾರೆ.
ಪರಿಸರಕ್ಕೆ ಸಂಬAಧಿಸಿದ ತೀರ್ಮಾನಗಳನ್ನು ಸರಕಾರಗಳು ತೆಗೆದುಕೊಳ್ಳುವಾಗ ಜನರ ಅಭಿಪ್ರಾಯಕ್ಕೆ ಬೆಲೆ ಕೊಡಬೇಕು; ಪಾರದರ್ಶಕತೆ ಇರಬೇಕು; ಅದಕ್ಕಾಗಿ ವಿವಿಧ ಸರ್ವೇಕ್ಷಣೆ, ತಜ್ಞರ ಅಭಿಪ್ರಾಯ ಇಂತಹ ದಾಖಲೆಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಮತ್ತು ಅರ್ಥವಾಗುವ ರೀತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ಇರಬೇಕು ಎಂದು ಲೇಖಕರು ಒತ್ತಿ ಹೇಳುತ್ತಾರೆ.
ಸರಕಾರಗಳು ಜವಾಬ್ದಾರಿಯಿಂದ ನಡೆದುಕೊಂಡಾಗ ಶಾಂತಿಯುತವಾಗಿ, ಯಾವುದೇ ಸಮಸ್ಯೆಗಳಿಲ್ಲದೆ ಮನವೊಲಿಕೆಯ ಮೂಲಕ ಪರಿಸರ ಸ್ನೇಹಿ ಯೋಜನೆಗಳು ಅದುದು ಇದೆ. ಚಿಕ್ಕಮಗಳೂರಿನ ಒಂದು ಅಂತಹ ಉದಾಹರಣೆಯನ್ನು ಲೇಖಕರು ನೀಡಿದ್ದಾರೆ. ಅದೇರೀತಿ ಕುದುರೆಮುಖದ ಕಬ್ಬಿಣದ ಅದಿರು ಹೋರಾಟವು ಸೂಕ್ತವಾದ ವೈಜ್ಞಾನಿಕ ಆಧಾರಗಳೊಂದಿಗೆ ನ್ಯಾಯಾಲಯದ ಮೂಲಕ ಯಶಸ್ಸು ಸಾಧಿಸಿದ ವಿವರವೂ ಗಮನಾರ್ಹವಾಗಿದೆ.
ಕೊನೆಯಲ್ಲಿ ಪ್ರಕೃತಿಯೊಂದಿಗೆ ಬದುಕು ಸಾಗಿಸುವ ಹಾಗೂ ಪ್ರಕೃತಿಯ ಬಗೆಗಿನ ಋಣಪ್ರಜ್ಞೆಯನ್ನು ಹೊಂದಿದ ಭಾರತೀಯ ದೃಷ್ಟಿಕೋನವು ಪರಿಸರ ಸಂರಕ್ಷಣೆಗೆ ಪೂರಕವೆನ್ನುವುದನ್ನು ಸೂಚಿಸುತ್ತಾರೆ. ಮಹಾಭಾರತದಂತಹ ಪುರಾಣ ಕೂಡ ಪರಿಸರದ ವಿಚಾರವನ್ನು ಒಳಗೊಂಡ ಬಗೆ ಚೆನ್ನಾಗಿದೆ. ಒಂದು ವನದ ರಕ್ಷಣೆಗೆ ಹುಲಿ ಅಗತ್ಯವೆನ್ನುವ ಸಾಲುಗಳುಳ್ಳ ಶ್ಲೋಕವನ್ನು ಉದ್ಧರಿಸಿದ್ದಾರೆ. ಪ್ರಾಣಿಗಳು ಮತ್ತು ಪರಿಸರ ಒಂದಕ್ಕೊAದು ಪೂರಕ. “..ವ್ಯಾಘ್ರೋ ವನಂ ರಕ್ಷೇದ್ವನಂ ವ್ಯಾಘ್ರಂಚ ಪಾಲಯೇತ್.” ಪರಿಸರ ಕಾಳಜಿಯು ಜಾತಿ, ವರ್ಣ, ಶ್ರೀಮಂತ, ಬಡವ, ಎಂಬ ಭೇದಗಳನ್ನು ಹಾಗೂ ದೇಶದ ಗಡಿಗಳನ್ನು ಮೀರಿದ್ದಾಗಿರಬೇಕು ಎಂಬ ಅಶಯವು ಲೇಖಕರದ್ದಾಗಿದೆ.
***
ಸಮಜಿಕ ಸಾಮರಸ್ಯದ ಬಗ್ಗೆ ರೋಹಿಣಾಕ್ಷ ಶಿರ್ಲಾಲು ಅವರ ಲೆಖನ ಚರ್ಚಿಸುತ್ತದೆ. ಸಮನತೆ ಎನ್ನುವ ಅಧುನಿಕ ಮೌಲ್ಯವು ಸಾಮರಸ್ಯಕ್ಕೆ ಬಹಳ ಮುಖ್ಯ ಎನ್ನುವುದು ಈ ಲೇಖನದ ಸಾರ. ನಮ್ಮ ದೇಶದಲ್ಲಿ ಜಾತ್ರೆಯಂತಹ ಅಚರಣೆಗಳಲ್ಲಿ ಎಲ್ಲಾ ಜಾತಿಗಳ ಜನರಿಗೂ ಅವರದೇ ಪಾತ್ರವಿದ್ದರೂ ಅಸಮಾನತೆ ಅಥವಾ ತಾರತಮ್ಯಕ್ಕೂ ಅಂಥದೇ ಆಚರಣೆಗಳು ಅಥವಾ ದೇವಾಲಯದಂತಹ ತಾಣಗಳು ಕಾರಣವಾಗುವುದನ್ನು ಲೇಖಕರು ಗುರುತಿಸುತ್ತಾರೆ.
ಪಶ್ಚಿಮದಲ್ಲಿ ಅನ್ಯರನ್ನು ‘ಸಹಿಸಿಕೊಳ್ಳುವ’ ಟಾಲರೆನ್ಸ್ ಪರಿಕಲ್ಪನೆಯಿದೆ. ಅದರೆ, ‘ಸಹಿಸಿದರೆ’ ಹೆಚ್ಚು ಪ್ರಯೋಜನವಿಲ್ಲ. ಸಹಿಸುವಿಕೆಯು ನಿಜವಾದ ಸಾಮರಸ್ಯವನ್ನು ಸಧಿಸಲಾರದು. ಅಲ್ಲದೆ ಲೆಕಕರು ಹೇಳುವಂತೆ, ಸಾಮರಸ್ಯವನ್ನು ಸಂಘರ್ಷದಿAದ ಸಾಧಿಸಲು ಸಾಧ್ಯವಿಲ್ಲ; ಬದಲಾಗಿ ಅದಕ್ಕೆ ಬೇಕಾದುದು ತೆರೆದ ಹೃದಯ; ಪರಸ್ಪರರನ್ನು ಸ್ವೀಕರಿಸುವ ಮನಸ್ಥಿತಿ. ಯಾಕೆಂದರೆ ಲೋಕರೂಢಿಯ ಮಾತಿನಂತೆ, ಗೌರವವನ್ನು ಅಥವ ಪ್ರೀತಿಯನ್ನು ಬೇಡಿ ಪಡೆಯಲಾಗದು. ಅದು ಸಹಜವಾಗಿ ಸಾಧ್ಯವಾಗಬೇಕು. ನಮಗಿಂದು ಬೇಕಾದುದು ಸಂಘರ್ಷದ ಆಖ್ಯಾನಗಳಲ್ಲ. ಸಾಮರಸ್ಯಕ್ಕೆ ಯಾವುದು ಪೂರಕ ಎನ್ನುವ ಆಖ್ಯಾನಗಳು. ಏಣಿಯಂತಹ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯಕ್ಕೆ ಎಲ್ಲ ಜಾತಿಗಳೂ ಸಹಜವಾಗಿಯೇ ಹೊಣೆಯನ್ನು ಹೊರಬೇಕಾಗುತ್ತದೆ. ಆದರೆ, ದೇವಾಲಯಗಳಂತಹ ಜಾಗಗಳಲ್ಲಿ ಸಹಪಂಕ್ತಿ ಭೋಜನವು ಇಲ್ಲದೆ, ಬ್ರಾಹ್ಮಣರಿಗೇ ಪ್ರತ್ಯೇಕ ಭೋಜನ ಇತ್ಯಾದಿ ವ್ಯಸ್ಥೆಗಳು ಇದ್ದಾಗ ಹೆಚ್ಚಿನ ಹೊಣೆ ಸಹಜವಾಗಿಯೇ ಬ್ರಾಹ್ಮಣರ ಮೇಲೆ ಹೊರಿಸಲ್ಪಡುತ್ತದೆ. ಬಹಿರಂಗವಾಗಿ ಜಾತಿಮುಕ್ತ ಸಮಾಜವಾಗಬೇಕೆಂದು ಹೇಳುತ್ತಲೇ ರಾಜಕೀಯ ಕಾರಣಗಳಿಗಾಗಿ ಜಾತೀಯತೆಯನ್ನು ಪೋಷಿಸುತ್ತ ಸಮಾಜವನ್ನು ವಿಭಜಿಸುವ ಮತ್ತು ಹಿಂದುಗಳ ನಡುವೆ ಶತಾಯಗತಾಯ ಒಡಕ್ಕನ್ನು ಹುಟ್ಟಿಸಲು ಯತ್ನಿಸುವ ಶಕ್ತಿಗಳ ಬಗ್ಗೆ ಎಚ್ಚರಿಕೆಯನ್ನೂ ಲೇಖಕರು ನೀಡುತ್ತಾರೆ.
ಭಾರತೀಯ ಪರಂಪರೆಯಲ್ಲಿ ಸಮುದಾಯಗಳ ನಡುವಿನ ತಾರತಮ್ಯ ನಿವಾರಣೆ ಮಾಡಿ ಸಾಮರಸ್ಯ ಸಾಧಿಸುವ ನಿಟ್ಟಿನಲ್ಲಿ ಅನೇಕ ಚಿಂತಕರು ಶ್ರಮಿಸಿದ್ದುಂಟು. ಅಧ್ಯಾತ್ಮವನ್ನು ಈ ಸಾಮಾಜಿಕ ಉದ್ದೇಶಕ್ಕೆ ತಕ್ಕಮಟ್ಟಿನ ಯಶಸ್ಸಿನೊಂದಿಗೆ ಬಳಸಿದ ಬಸವಣ್ಣನವರಂತಹ ಸುಧಾರಣಾವಾದಿಗಳಿದ್ದಾರೆ. ಡಾ. ಅಂಬೆಡ್ಕರರ ಪ್ರಯತ್ನಗಳನ್ನು ಲೇಖಕರು ವಿಸೇಷವಾಗಿ ಉಲ್ಲೇಖಿಸಿದ್ದಾರೆ. ಅಸ್ಪೃಶ್ಯತೆಯಂತಹ ಅನಿಷ್ಠಗಳು ಕೇವಲ ದಲಿತರಿಗೆ ಹನಿಯುಂಟುಮಾಡಿಲ್ಲ; ಅದು ಅಚಿತಿಮವಾಗಿ ದೇಶವನ್ನೇ ನಾಶ ಮಾಡುವ ಅನಿಷ್ಠ. ಇಂತಹ ತಾರತಮ್ಯವನ್ನು ನಿವಾರಿಸಲು ಹಿಂದೂ ಮುಖಂಡರು ಮತ್ತು ಸಂಘಟನೆಗಳು ಹಲವು ವರ್ಷಗಳಿಂದ ಶ್ರಮಿಸಿವೆ.
ಲೇಖಕರು ಹೇಳುವಂತೆ, ದಲಿತ ಸಮಾಜದೊಳಗೆ ಜಾಗೃತಿಯನ್ನು ಮೂಡಿಸಲು, ಹೋರಾಟದ ಮನೋಭಾವವನ್ನು, ಹಕ್ಕಿನ ಪ್ರಜ್ಞೆಯನ್ನು ಮೂಡಿಸಲು ಆರಂಭವಾದ ಸಂಘಟನೆಗಳು ಹೋಳುಗಳದುದು ಮಾತ್ರವಲ್ಲ; ಕ್ರೆöÊಸ್ತ ಮಿಷನರಿಗಳು ಮತ್ತು ಕಮ್ಯುನಿಸ್ಟ್ ಪ್ರೇರಿತ ಐಡಿಯಾಲಜಿಗಳಿಂದ ಹೈಜಾಕ್ ಅಗಿರುವುದೂ ಗಮನಕ್ಕೆ ಬರುತ್ತಿದೆ. ಇಂಥ ಸನ್ನಿವೇಶದಲ್ಲಿ ಸಮಾಜವು ವಿಘಟಿತವಾಗದಂತೆ ನೋಡಿಕೊಳ್ಳುವುದು ಅಗತ್ಯವಿದೆ ಎನ್ನುವ ಅಶಯ ಲೇಖಕರದ್ದಾಗಿದೆ.
***
“ಪ್ರಾದೇಶಿಕತೆ ಮತ್ತು ರಾಷ್ಟಿçÃಯತೆ- ಒಂದು ಚಿಂತನೆ” ಎನ್ನುವ ಕೊನೆಯ ಲೇಖನವನ್ನು ಎಂ.ಕೆ. ಶ್ರಿಧರನ್ ಮತ್ತು ಸತ್ಯನಾರಾಯಣ ಶಾನಭಾಗ ಬರೆದಿದ್ದಾರೆ. ಸಂವಿದಾನವನ್ನು ರಚಿಸುವಾಗ ದೇಶದ ಸರಕಾರ ಮತ್ತು ರಾಜ್ಯ ಸರಕಾರಗಳ ಜವಾಬ್ದಾರಿ ಏನು; ಅವುಗಳ ನಡುವೆ ಯಾವ ಯಾವ ವಿಷಯಗಳಲ್ಲಿ ಅಧಿಕಾರದ ಹಂಚಿಕೆ ಹೇಗೆ ಹೇಗೆ ಇರಬೆಕು ಎನ್ನುವುದನ್ನೆಲ್ಲ ಹೇಳಿದ್ದಾರೆ. ಆದರೆ, ಕಾಲಕಾಲಕ್ಕೆ ವಿವಿಧ ಕಾರಣಗಳಿಗಾಗಿ ಬದಲಾಗುವ ಸನ್ನಿವೇಶಗಳಲ್ಲಿ ಯಾವಾಗಲೋ ಮಡಿಟ್ಟ ಸಿದ್ಧ ಸೂತ್ರಗಳು ಕೆಲಸ ಮಾಡಲಾರವು ಎನ್ನುವುದು ನಿಜ. ಹಾಗಾಗಿ ಮತ್ತೆ ಮತ್ತೆ ಪ್ರಾದೇಶಿಕತೆಯ ಚರ್ಚೆಗಳು ಮುನ್ನೆಲೆಗೆ ಬರುತ್ತವೆ. ಪ್ರಾದೇಶಿಕ ಹಿತಾಸಕ್ತಿಯು ಇಡೀ ದೇಶದ ಹಿತಾಸಕ್ತಿಗಿಂತ ಭಿನ್ನವೇ ಎಂಬ ಮುಖ್ಯ ಪ್ರಶ್ನೆಯನ್ನು ಇಟ್ಟುಕೊಂಡು ಈ ಲೇಖನದಲ್ಲಿ ವಿವೇಚನೆ ಸಾಗಿದೆ.
ರಾಜ್ಯಗಳ ನಡುವೆ ನದಿ ನೀರು, ಗಡಿ ವಿವಾದ, ಭಾಷಾ ವಿವಾದ ಇತ್ಯಾದಿ ಸಂಘರ್ಷಗಳು ಇದ್ದಾಗ ಸಹಜವಾಗಿಯೇ ಸ್ಪರ್ಧೆ ಬೆಳೆಯುತ್ತದೆ. ದೇಶದ ಒಗ್ಗಟ್ಟಿಗೆ ಅಷ್ಟರಮಟ್ಟಿನ ಹೊಡೆತ ಬೀಳುತ್ತದೆ. ಇತ್ತೀಚೆಗಂತೂ ಕೆಲವು ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಉತ್ತರದ ರಾಜ್ಯಗಳು ಮತ್ತು ದಕ್ಷಿಣದ ರಾಜ್ಯಗಳು ಎನ್ನುವ ವಿಭಾಗವನ್ನು ಮಾಡುವುದನ್ನು ಕಾಣುತ್ತಿದ್ದೇವೆ.
ರಾಷ್ಟಿçÃಯತೆ ಮತ್ತು ರಾಷ್ಟçವಾದದ ಬಗ್ಗೆ ಈ ದೇಶದಲ್ಲಿ ಕಟ್ಟಲಾದ ನರೆಟಿವ್ ಅನ್ನು ನಾವು ಮೊದಲು ವಿಮರ್ಶೆಗೆ ಒಳಪಡಿಸಬೇಕಿದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೇ ಇದ್ದ ರಾಷ್ಟç ಎನ್ನುವ ಪರಿಕಲ್ಪನೆಯನ್ನು ಪಶ್ಚಿಮದ ಸಂಕುಚಿತ ಅರ್ಥದ ನೇಶನ್ ಎನ್ನುವುದಕ್ಕೆ ಪರ್ಯಾಯವಾಗಿ ಬಳಸಿದಾಗಲೇ ಸಮಸ್ಯೆಯ ಆರಂಭವಾಯಿತು. ಪಶ್ಚಿಮದ ನ್ಯಾಶನಲಿಸಂ ಮತ್ತು ಭಾರತದ ರಾಷ್ಟçವಾದ ಒಂದೇ ಅಲ್ಲ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನೆಶನ್ ಎನ್ನುವ ಪದವು ಒಂದು ಬಾಷೆ/ಸಂಸ್ಕೃತಿಯನ್ನು ಹೊಂದಿದ ಸಮುದಾಯ ಎನ್ನುವ ಸಂಕುಚಿತ ಅರ್ಥದಲ್ಲಿ ಬಳಕೆಗೆ ಬಂದುದು. ಭಾರತದಲ್ಲಿ ರಾಷ್ಟçದ ಕಲ್ಪನೆ ಹಾಗೆ ಸೀಮಿತವಾದುದಾಗಿರಲಿಲ್ಲ. ಈ ಹಿನ್ನೆಲಯಲ್ಲಿ ಈ ಲೇಖನದ ಮಹತ್ವವನ್ನು ಮನಗಾಣಬೇಕು.
ಭಾರತದಲ್ಲಿ ಭಾಷಾವಾರು ರಾಜ್ಯ ವಿಂಗಡನೆ, ಫೆಡೆರಲಿಸಂ ಸ್ವರೂಪ ಇವನ್ನೆಲ್ಲ ಚರ್ಚಿಸಿ ಅಮೆರಿಕದಂತಹ ದೇಶಗಳ ವ್ಯವಸ್ಥೆಯ ಜೊತೆ ಹೋಲಿಸಿ ಇಲ್ಲಿಯ ವ್ಯವಸ್ಥೆಯನ್ನು ಅರ್ಥೈಸಲು ಲೇಖನ ಯತ್ನಿಸುತ್ತದೆಳಿಂಗ್ಲಿಷನ್ನು ಮುಂದಿಟ್ಟುಕೊAಡು ಭಾರತೀಯ ಬಾಷೆಗಳನ್ನು ಕೀಳಾಗಿ ಕಂಡ ಬಗೆಯನ್ನು ಲೇಖನವು ಪ್ರಶ್ನಿಸುತ್ತದೆ.
ಲೇಖನದ ಮುಖ್ಯ ಭಗದಲ್ಲಿ ಪ್ರಾದೇಶಿಕ ಭವನೆಗಳು ಹುಟ್ಟಿ ಬೆಳೆಯಲು ಕಾರಣಗಳೇನು ಎಂದು ವಿವರಿಸಲಾಗಿದೆ. ದೆಹಲಿ ಕೇಂದ್ರಿತ ವ್ಯವಸ್ಥೆ, ರಾಜಕೀಯ ಪಕ್ಷಗಳ ಹೈಕಮಾಂಡ್ ಸಂಸ್ಕೃತಿ, ಪ್ರಾದೇಶಿಕ ಪಕ್ಷಗಳ ರಾಜಕೀಯ ಹಿತಾಸಕ್ತಿ, ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ದಕ್ಷಿಣದ ರಾಜ್ಯದವರಿಗೆ ಕಡಿಮೆ ಅವಕಾಶಗಳು, ಹಿಂದಿ ಭಾಷಿಕರ ಪ್ರಾಬಲ್ಯ, ತೆರಿಗೆ ಹಣದ ಹಂಚಿಕೆಯಲ್ಲಿ ಜನಸಾಂದ್ರತೆಯಿರುವ ಉತ್ತರದ ರಾಜ್ಯಗಳಿಗೆ ಆದ್ಯತೆ ಇವೆಲ್ಲ ಕಾರಣಗಳನ್ನು ಲೇಖಕರು ಚರ್ಚಿಸಿದ್ದಾರೆ.
ಕೇಂದ್ರ ಸರಕಾರವನ್ನು ನಡೆಸುವ ಪಕ್ಷದ ವಿರೋಧವೇ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕತೆ ಮತ್ತು ಪ್ರöತ್ಯೇಕತೆಯ ಬಾವನೆಗೆ ಕುಮ್ಮಕ್ಕು ಸಿಗಲು ಕಾರಣವಾಗುವ ಸಂಗತಿಯನ್ನೂ ಲೇಖನವು ದಾಖಲಿಸಿದೆ. ದೇಶವಿರೋಧಿ ಪಿತೂರಿಗಾರರು ಇಂತಹ ಪ್ರಾದೇಶಿಕ ಭಾವನೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ಕಾಶ್ಮೀರಿ ಅನನ್ಯತೆ ಎನ್ನುವ ಒಂದು ಸುಳ್ಳು ಪರಿಕಲ್ಪನೆಯನ್ನು ಹೇಗೆ ಕೇವಲ ಅಲ್ಲಿಯ ಪ್ರತ್ಯೇಕತಾವಾದಿ ನಾಯಕರಷ್ಟೇ ಅಲ್ಲ; ಇಡೀ ದೇಶದ ತಥಾಕಥಿತ ಪ್ರಗತಿಪರರು ಮುಂದಿಡುತ್ತಿದ್ದಾರೆ ಎನ್ನುವುದನ್ನು ಕಾಣುತ್ತಲೇ ಇದ್ದೇವೆ. ಎಲ್ಲ ರಾಜ್ಯಗಳೂ ಸಂಸ್ಕೃತಿಗಳೂ ಅನನ್ಯವೇ. ರಿಲಿಜಿಯಸ್ ಪ್ರತ್ಯೇಕತೆಯನ್ನು ಬಿಟ್ಟರೆ ಕಾಶ್ಮೀರಿ ಅನನ್ಯತೆ ಎಂಬುದೊAದು ಬೇರೆಯಿಲ್ಲ. ಹೀಗೆಲ್ಲ ಇರುವಾಗ ಪ್ರಾದೇಶಿಕತೆ ಮತ್ತು ರಾಷ್ಟಿçÃಯತೆ ಮುಂತಾದ ಪರಿಕಲ್ಪನೆಗಳ ಬಗ್ಗೆ ಇನ್ನಷ್ಟು ವಿಶ್ಲೇಷಣೆಗಳು ನಡೆಯಬೇಕಿರುವುದು ಸ್ಪಷ್ಟ. ಅಪವ್ಯಾಖ್ಯಾನಗಳು ಮತ್ತು ಸುಳ್ಳನ್ನಾಧರಿಸಿದ ಆಖ್ಯಾನಗಳನ್ನು ಬಗೆದು ನೋಡುವುದು ಅಗತ್ಯ.
ಒಟ್ಟಿನಲ್ಲಿ ಪ್ರಾಂತಗಳ ಪ್ರಗತಿ ಮತ್ತು ದೇಶದ ಪ್ರಗತಿ ಬೇರೆಬೇರೆಯಲ್ಲ ಎನ್ನುವ ದೃಷ್ಟಿ ಈ ಲೇಖನದಲ್ಲಿದೆ.
***
ಒಂದು ವಿದ್ಯಮಾನದ ಇಂಟರ್ಪ್ರೆಟೇಶನ್ ಒಂದು ಆಖ್ಯಾನವಾಗಿ ರೂಪುಗೊಳ್ಳಬಹುದು. ಅಂತೆಯೇ ‘ಮಿಸ್ಇಂಟರ್ಪ್ರೆಟೇಶನ್’ ಕೂಡ ಒಂದು ಅಖ್ಯಾನವಾಗಿ ರೂಪುಗೊಳ್ಳಬಹುದು. ಮತ್ತು ಈ ‘ಮಿಸ್ಇಂಟರ್ಪ್ರೆಟೇಶನ್’ ಉದ್ದೇಶಪೂರ್ವಕವೂ ಆಗಿರಲು ಸಾಧ್ಯವಿದೆ. ಪ್ರವೇಶಿಕೆಯಲ್ಲಿ ಪ್ರದೀಪರು ಈ ಸಂಕಲನವನ್ನು ವಿಚಾರಪ್ರಧಾನವಾದ ‘ಆಖ್ಯಾನಗಳ ಪರಿಚಯ ಪುಸ್ತಕ’ ಎಂದು ಕರೆದಿದ್ದಾರೆ. ಈ ಸಂಕಲನದಲ್ಲ್ಲಿ ವಿವಿಧ ‘ನರೆಟಿವ್’ಗಳನ್ನು ‘ಆಖ್ಯಾನ’ಗಳು ಎಂದು ಕರೆಯಲಾಗಿದೆ. ನರೆಟಿವ್ಗಳು ಸೇರಿ ಡಿಸ್ಕೋರ್ಸುಗಳು(ಸಂಕಥನಗಳು) ರೂಪುಗೊಳ್ಳುತ್ತವೆ ಎನ್ನುವ ಮಾತಿನ ಹಿನ್ನೆಲೆಯಲ್ಲಿ ಆಖ್ಯಾನಗಳನ್ನು ಕಥನಗಳು ಎಂದು ಕರೆಯುವುದು ಹೆಚ್ಚು ಯುಕ್ತವಾದೀತೇನೋ ಎನಿಸುತ್ತದೆ. ಯಾಕೆಂದರೆ ನರೆಟಿವ್ ಗಳು ಎಷ್ಟೋ ಬಾರಿ ಕಟ್ಟಿದ ಕಥೆಗಳೇ ಆಗಿರುವುದೂ ಉಂಟು.
***