ವಿಶ್ವದ ಪ್ರತಿಯೊಂದು ಜೀವವೂ ತತ್ತ್ವತಃ ಅಪರಿಮಿತ ಶಕ್ತಿಗಳ ಆಗರ. ವಿಕಾಸ ಮತ್ತು ವಿನಾಶ – ಇದು ಜೀವಸಮುದಾಯರೂಪೀ ಪ್ರಪಂಚದ ಬಹುಮುಖ್ಯ ಲಕ್ಷಣ. ಈ ವಿಕಾಸ-ವಿನಾಶಗಳ ಕಾರಣಸಾಮಗ್ರಿಯಾಗಿ ಅವುಗಳ ನಡುವೆ ಲಾಳಿಯಾಡುವ ವಿಶಿಷ್ಟ ತತ್ತ್ವವೇ ಮನಸ್ಸು. ಕಣ್ಣಿಗೆ ಕಾಣದೆಯೂ ಕೈಗೆ ಸಿಗದೆಯೂ ಆಂತರ್ಯದಲ್ಲಿ ಧುತ್ತೆಂದು ಮುತ್ತುತ್ತಲೇ ಇರುವ ಮನಸ್ಸು ಅಗೋಚರಿ, ಅರೂಪಿ. ಬ್ರಹ್ಮತತ್ತ್ವ ಹೇಗೆ ಮಾತಿಗೂ ಮನಸ್ಸಿಗೂ ಅತೀತವೋ ಹಾಗೆ ಮನಸ್ಸೂ ಕೂಡ ಮಾತಿಗೂ ಬುದ್ಧಿಯ ಕಲನಕ್ಕೂ ಅತೀತ. ಮನಃಶಾಸ್ತ್ರ-ಮನೋವಿಜ್ಞಾನದಂಥ ಮಾನಸಿಕ ಅಧ್ಯಯನ ಸಂಗತಿಗಳು ಮನಸ್ಸೆಂಬ ಹುಚ್ಚುಕುದುರೆಯ ಆಕೃತಿಯನ್ನು ಕಾಣಲು ಮಣಿಸಲು ಸಾವಿರಾರು ವರ್ಷಗಳಿಂದ ಪ್ರಯತ್ನಿಸುತ್ತಿವೆ. ತಕ್ಕಮಟ್ಟಿಗೆ ಸಫಲರಾದರೂ, ಮನಸ್ಸೆಂಬ ಸಂಗತಿಯೇ ಇಲ್ಲ, ಅದು ಕೇವಲ ಪ್ರತಿಕ್ರಿಯಾತ್ಮಕ ನಡೆ ಎಂದು ಹೇಳುವ ಅತಿಕಲ್ಪನೆಯ ಮನೋವಿಜ್ಞಾನ ಶಾಖೆಯೂ ಇದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಆರ್ಷ ಭಾರತೀಯ ಪರಂಪರೆಯಲ್ಲಿ ಮನಸ್ಸಿನ ಸ್ವರೂಪಚಿಂತನ ಮತ್ತು ನಿಗ್ರಹಸಾಧನವಾಗಿ ಯೋಗಶಾಸ್ತ್ರ ಬಹು ಪ್ರಾಚೀನ ಕಾಲದಿಂದ ಕಾಣಿಸಿಕೊಂಡಿದೆ; ಬೆಳೆದುಬಂದಿದೆ; ವೇದದಲ್ಲಿ ಬೀಜವಾಗಿ ಉಪನಿಷತ್ತಿನಲ್ಲಿ ಮೊಳೆತು, ಯೋಗಶಾಸ್ತ್ರಗಳಲ್ಲಿ ಚಿಗುರಿ ಹೂಬಿಟ್ಟು ಫಲಿಸಿದೆ. ವೈದಿಕ ಸಂಪ್ರದಾಯದಲ್ಲಷ್ಟೆ ಅಲ್ಲದೆ ಬೌದ್ಧ ಜೈನ ಸಂಪ್ರದಾಯಗಳಲ್ಲೂ, ಭಕ್ತಿ ಹಠ ನಾಥ ಸಿದ್ಧ ಸೂಫೀ ತಾಂತ್ರಿಕ ಮುಂತಾಗಿ ಬಹುಮುಖೀ ಪರಂಪರೆಗಳಲ್ಲೂ ಯೋಗಸಾಧನೆ ಮತ್ತು ಶಾಸ್ತ್ರನಿರೂಪಣೆಗಳು ಲಭ್ಯ ಇವೆ. ಇವುಗಳಲ್ಲೆಲ್ಲ ಅತ್ಯಂತ ತಾರ್ಕಿಕವೂ ಶಾಸ್ತ್ರೀಯವೂ ವೈಜ್ಞಾನಿಕವೂ ಚಿಂತನಶೀಲವೂ ಆದದ್ದು ಪತಂಜಲ ಮಹರ್ಷಿ ಪ್ರಣೀತವಾದ ‘ಯೋಗಸೂತ್ರ’. ಅದು ಯೋಗದ ವಿಶಾಲ ಸೌಧಕ್ಕೆ ಹದವಾದ ನೆಲಗಟ್ಟನ್ನು ನೀಡುವ ಮೂಲಕ ಆಧಾರಭೂತ ಎನಿಸಿದೆ. ವಿಭಿನ್ನ ಯೋಗಸಂಪ್ರದಾಯಗಳು ಪತಂಜಲಿಯ ಪ್ರಮುಖ ಪ್ರವಾಹದಲ್ಲಿ ಅಲ್ಲಲ್ಲಿ ಪುಟಿಯುವ ಚಿಂತನವೈವಿಧ್ಯದ ಚಿಲುಮೆಗಳು. ಯೋಗಸಂಪ್ರದಾಯದ ವೈವಿಧ್ಯದ ನಡುವೆಯೂ ಚಿತ್ತಸ್ಥಿರತೆಯು ಪ್ರಪ್ರಮುಖ ಸಮಾನ ಸಂಗತಿ.
ಮನಸ್ಸು ಚಂಚಲ (ಚಂಚಲಂ ಹಿ ಮನಃ). ನಿಂತೆಡೆ ನಿಲ್ಲದೆ ನಿರಂತರವಾಗಿ ಚಲಿಸುವುದೇ ಮನಸ್ಸಿನ ಸ್ವರೂಪ. ಅದಕ್ಕೆ ರೂಪ ಇಲ್ಲದಿದ್ದರೂ ಸ್ವರೂಪ ಇದೆ. ಸದಾ ಹೊರಕ್ಕೆ ತುಡಿಯುತ್ತಿರಲು ಜ್ಞಾನೇಂದ್ರಿಯಗಳ ಐದು ದ್ವಾರಗಳೂ, ಇನ್ನೂ ಐದು ಕರ್ಮೇಂದ್ರಿಯಗಳ ‘ಹತ್ಯಾರ’ಗಳೂ ಇವೆ. ಅದು ಏರಬಹುದು; ಇಲ್ಲ ಇಳಿಯಬಹುದು. ಏರಲು ಮೈತ್ರೀ ಕರುಣೆ ಅಹಿಂಸೆ ಭಗವತ್ಪ್ರಣಿಧಾನ ಮುಂತಾದ ಸದ್ಭಾವಗಳಿವೆ. ಇಳಿಯಲು ಅರಿಷಡ್ವರ್ಗಗಳೂ, ಅದರ ಉತ್ಪನ್ನಗಳಾದ ರಾಗ ದ್ವೇಷ ಹಿಂಸಾದಿಗಳೂ ಇವೆ. ಎರಡಕ್ಕೂ ಮನಸ್ಸೇ ಕಾರಣ. ವಿನಾಶಕ್ಕೆ ಇಳಿಯಲು ಚಂಚಲತೆ ಸಾಕು; ವಿಕಾಸಕ್ಕೆ ಏರಲು ಸ್ಥಿರತೆ ಬೇಕು. ಸ್ಥಿರತೆ ಎಂದರೆ ಮನೋನಿಗ್ರಹ (ಚಿತ್ತವೃತ್ತಿನಿರೋಧ); ಮನದ ಪ್ರಸನ್ನ ಸ್ಥಿತಿ (ಚಿತ್ತಪ್ರಸಾದ). ಸರಳವಾಗಿ ಸ್ಥಿರತೆಯೇ ಯೋಗ. ಈ ಸ್ಥಿರತೆ ಭೌತಿಕ ಬದುಕಿಗೂ ಬೇಕು; ಆಧ್ಯಾತ್ಮಿಕ ಸಾಧನೆಗೂ ಬೇಕು. ಸ್ಥಿರತಾ ಯೋಗ ‘ಇಲ್ಲಿಯೂ ಸಲ್ಲುವುದು; ಅಲ್ಲಿಯೂ ಸಲ್ಲುವುದು’.
ಕೃತಿ ಮಹತಿ
ಯೋಗದ ವಿಷಯದಲ್ಲಿ ಸಾರ್ವಜನೀನವೂ ವಿಶ್ವವಿಖ್ಯಾತವೂ ಆದ ಕೃತಿ ‘ಪಾತಂಜಲ ಯೋಗಸೂತ್ರ’. ಷಡ್ದರ್ಶನಗಳಲ್ಲಿ ಒಂದಾದ ಯೋಗದರ್ಶನವನ್ನು ಸಾರವತ್ತಾಗಿ ನಿರೂಪಿಸುವ ಮಹತ್ಕøತಿ, ಮಹರ್ಷಿಕೃತಿ ಯೋಗಸೂತ್ರ. ವೇದೋಪನಿಷತ್ತುಗಳಲ್ಲಿ ಸೂಚಿತವಾದ ಕಾಣ್ಕೆಗಳನ್ನು ತೀವ್ರಚಿಂತನೆಯ ತಪದಲ್ಲಿ ಅನ್ವೇಷಿಸಿ, ವಿಸ್ತಾರವಾಗಿ ವಿಶ್ಲೇಷಿಸಿ, ಅನುಭವದ ಮೂಸೆಯಲ್ಲಿ ಹರಳುಗಟ್ಟಿಸಿ ಅಲ್ಪಾಕ್ಷರದ ಸೂತ್ರರೂಪದಲ್ಲಿ ಸಂಗ್ರಹಿಸಿಡುವ ಕಾಲವೊಂದಿತ್ತು. ಅದು ಸೂತ್ರನಿರ್ಮಾಣದ ಕಾಲ. ಜೀವ ಜಗತ್ ಭಗವತ್ ಸ್ವರೂಪಗಳನ್ನು ಚಿಂತಿಸಿ ದರ್ಶಿಸಿದ್ದರಿಂದಾಗಿ ಅವು ದರ್ಶನಗಳೆನಿಸಿದವು. ಕಣಾದ ಮಹರ್ಷಿಯ ವೈಶೇಷಿಕಸೂತ್ರ, ಗೌತಮ ಮುನಿಯ ನ್ಯಾಯಸೂತ್ರ, ಕಪಿಲ ಮುನಿಯ ಸಾಂಖ್ಯಸೂತ್ರ, ಪತಂಜಲ ಮಹರ್ಷಿಯ ಯೋಗಸೂತ್ರ, ಜೈಮಿನಿ ಮಹರ್ಷಿಯ ಮೀಮಾಂಸಾಸೂತ್ರ ಹಾಗೂ ಬಾದರಾಯಣ ಮಹಾಮುನಿಯ ಬ್ರಹ್ಮಸೂತ್ರ ಇವೇ ಆರು (ಷಡ್) ದರ್ಶನಗಳು. ಈ ಅರ್ಥದಲ್ಲಿ ಪಾತಂಜಲ ಯೋಗಸೂತ್ರಗಳ ಕಾಣ್ಕೆಯನ್ನು ‘ಪಾತಂಜಲ ಯೋಗದರ್ಶನ’ವೆಂದು ಕರೆಯಲಾಗಿದೆ. ಯೋಗದರ್ಶನವು ತಾತ್ತ್ವಿಕ ಸಂಗತಿಗಾಗಿ ಸಾಂಖ್ಯದರ್ಶನವನ್ನು ಹೆಚ್ಚಾಗಿ ಆಧರಿಸಿದೆ. ಆದರೂ ಕೆಲವು ಭಿನ್ನ ಅಭಿಪ್ರಾಯಗಳೂ ಇವೆ. ಸಾಂಖ್ಯದಲ್ಲಿ ಈಶ್ವರತತ್ತ್ವಕ್ಕೆ ಪ್ರಸಕ್ತಿ ಇಲ್ಲ. ಪತಂಜಲಿಯ ಯೋಗದಲ್ಲಿ ಪ್ರಣವ (ಓಂಕಾರ) ವಾಚಕವಾದ ಈಶ್ವರ ತತ್ತ್ವಕ್ಕೆ ಪ್ರಾಶಸ್ತ್ಯ ಇದೆ. ಪುರುಷ (ಆತ್ಮ ಎಂದರೂ ಸರಿ) ಮಾತ್ರ ಸರ್ವವ್ಯಾಪಿ (ಮನಸ್ಸಲ್ಲ) ಎನ್ನುತ್ತದೆ ಸಾಂಖ್ಯ. ಯೋಗದಲ್ಲಿ ಮನಸ್ಸು ಕೂಡ ಆಕಾಶದಂತೆ (ಚಿತ್ತಾಕಾಶ) ಸರ್ವವ್ಯಾಪಿ; ಸಮಷ್ಟಿ. ಇದರಿಂದ ಮನಸ್ಸಿನ ವಿಕೃತಿ ಸುಕೃತಿಗಳನ್ನು ಅರಿತು ಅನುಭವಿಸಿ ದಿವ್ಯಕ್ಕೆ ಏರಿಸುವ ಸಾಧನಾಮಾರ್ಗದ ಶೋಧ ಹಾಗೂ ಸಿದ್ಧಿಪ್ರಾಪ್ತಿ ಯೋಗದರ್ಶನದ ಪರಿಪ್ರೇಕ್ಷ್ಯದಲ್ಲಿ ಪ್ರಮುಖವೆನಿಸಿತು. ಅದರಿಂದಾಗಿ ಯೋಗದರ್ಶನಕ್ಕೆ ಚಿರಂತನ ಮಹತ್ತ್ವ ಲಭಿಸಿತು. ವೈದಿಕ-ಅವೈದಿಕ ಭೇದವಿಲ್ಲದೆ ವಿಕಾಸ ಮತ್ತು ಭಗವದನುಭವಕ್ಕಾಗಿ ತುಡಿದ ದಾರ್ಶನಿಕ ಹಾಗೂ ಸಂತ ಪರಂಪರೆಗೆ ಈ ಯೋಗದರ್ಶನವು ದಾರಿ ದೀಪವಾದದ್ದು ಈ ನೆಲದ ಮನೋಧರ್ಮಕ್ಕೆ ಸಹಜವಾದದ್ದೇ. ಅಲ್ಲದೆ ಪ್ರಪಂಚದ ಚಿಂತನಶೀಲ ಪ್ರಮುಖ ಭಾಷೆಗಳಿಗೆಲ್ಲ ಅನುವಾದಗೊಂಡಿರುವುದೂ ಅಸಹಜವೇನಲ್ಲ. ನಮ್ಮ ಕನ್ನಡ ಭಾಷೆಯಲ್ಲೂ ಪಾತಂಜಲ ಯೋಗದರ್ಶನದ ಅನೇಕ ಅನುವಾದಗಳು ಬಂದಿವೆ. ಶ್ರೀರಾಮಕೃಷ್ಣ ಮಠದ ವ್ಯಾಸಭಾಷ್ಯಸಹಿತವಾದ ಅನುವಾದ ಹಾಗೂ ಸ್ವಾಮಿ ವಿವೇಕಾನಂದರ ರಾಜಯೋಗದಡಿ ಪಾತಂಜಲಸೂತ್ರದ ವಿಶ್ಲೇಷಣೆಯ ಕನ್ನಡ ಅನುವಾದ ಪ್ರಕಟಗೊಂಡು ವರ್ಷಗಳೇ ಕಳೆದಿವೆ. ಈ ಸಾಲಿನಲ್ಲಿ ಪಾತಂಜಲ ಯೋಗಸೂತ್ರಗಳ ಕನ್ನಡ ವ್ಯಾಖ್ಯಾನ, ವಿಶ್ಲೇಷಣೆ ‘ಯೋಗಪ್ರಕಾಶಿಕೆ’ ಇತ್ತೀಚೆಗೆ ಓದುಗರ ಕೈಸೇರಿದೆ. ಇದು ದಿನಪತ್ರಿಕೆಯೊಂದರ ಅಂಕಣ ಲೇಖನ ಸರಣಿಯ ಪುಸ್ತಕ ರೂಪ.
ನಮ್ಮ ನಾಡಿನ ಪ್ರಖ್ಯಾತ ಮಠಗಳಲ್ಲೊಂದಾದ ಸೋದೆಯ ಸ್ವರ್ಣವಲ್ಲಿಯ ಮಹಾಸಂಸ್ಥಾನದ ಭಗವತ್ಪಾದ ಪ್ರಕಾಶನವು ಯೋಗಾಸಕ್ತರಿಗೆ ತುಂಬ ಉಪಯುಕ್ತವಾಗಬಲ್ಲ ಈ ಕೃತಿಯನ್ನು ಹೊರತಂದಿದೆ. ಯೋಗಪ್ರಕಾಶಿಕೆಯು ಯೋಗದ ಒಡಲಿಗೆ ಬೆಳಕು ಬೀರುವ ಕೃತಿ, ಇದನ್ನು ರಚಿಸಿದವರು ಶ್ರೀಮದ್ ಜಗದ್ಗುರು ಶಂಕರಾಚಾರ್ಯ – ಶ್ರೀ ಶ್ರೀಮದ್ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳು. ಸ್ವಾಮಿಗಳು ಯೋಗಸಾಧನೆಯ ಮಾರ್ಗದಲ್ಲಿ ಬಹು ದೂರ ಸಾಗಿದ್ದಾರೆ ಎನ್ನುವುದು ಪ್ರಸ್ತುತ ಗ್ರಂಥದ ವಿಷಯ ನಿರೂಪಣೆಯ ನಡೆಯಲ್ಲಿ ಪರ್ಯಾಯವಾಗಿ ವ್ಯಕ್ತವಾಗುತ್ತಿದೆ. ಇದರಿಂದಾಗಿ ಈ ವ್ಯಾಖ್ಯಾನಕ್ಕೆ ಅಧಿಕೃತತೆ ಒದಗಿಬಂದಿದೆ.
ಸಂಸ್ಥಾನ ಮಹತಿ
ಸಾಂದರ್ಭಿಕವಾಗಿ ಈ ಕೃತಿಯ ಕರ್ತೃವಾದ ಸ್ವಾಮಿಗಳ ಬಗ್ಗೆ ಒಂದೆರಡು ಮಾತುಗಳನ್ನು ಹೇಳಲೇಬೇಕು. ಎಳೆಯ ವಯಸ್ಸಿನಲ್ಲೇ ಸ್ವರ್ಣವಲ್ಲೀ ಪೀಠಕ್ಕೆ ಸಂನ್ಯಾಸಿಯಾಗಿ ಬಂದು ಬೇಡ್ತಿ ಅಣೆಕಟ್ಟು ಯೋಜನೆಯನ್ನು ತಡೆಯುವ ಹೋರಾಟದಲ್ಲಿ ಸ್ವಯಂ ನೇತೃತ್ವ ಮಾರ್ಗದರ್ಶನಗಳೊಂದಿಗೆ ಪಾಲ್ಗೊಂಡು ಯಶಸ್ವಿಯಾದರು. ನೂರಾರು ಎಕರೆ ಸಮೃದ್ಧ ಅರಣ್ಯ, ಕೃಷಿತೋಟಗಳು ಮುಳುಗಡೆಯಾಗದಂತೆ ತಡೆದು ಜನಮಾನಸದಲ್ಲಿ ‘ಹಸಿರು ಸ್ವಾಮೀಜಿ’ ಎಂದೇ ಹೆಸರಾದರು. ಅದರ ನೆನಪೋ ಎಂಬಂತೆ, ಪ್ರತಿವರ್ಷ ಕೃಷಿ ಸಮ್ಮೇಳನ ನಡೆಯುತ್ತದೆ. ಚಾತುರ್ಮಾಸ್ಯದಲ್ಲಿ ದರ್ಶನಕ್ಕೆ ಬರುವ ಧಾರ್ಮಿಕಜನಕ್ಕೆ ಹಸಿರು (ಸಸಿ) ಕೊಟ್ಟು ಹರಸುತ್ತಾರೆ. ಸಂಸ್ಥಾನದ ಚಾಲನೆಯಲ್ಲಿ ತೊಡಗಿ ಈ ಇಪ್ಪತ್ತೈದು ವರ್ಷಗಳಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ವಲಯಗಳ ಅಭ್ಯುದಯದಲ್ಲಿ ತುಂಬ ಕ್ರಿಯಾಶೀಲವಾಗಿ ಸದ್ದಿಲ್ಲದೆ ಅವಿರತ ನಿರತರಾಗಿದ್ದಾರೆ. ಅದರ ವ್ಯಾಪ್ತಿ, ಪಟ್ಟಿ ದೊಡ್ಡದು. ಒಂದೇ ನಿದರ್ಶನವನ್ನು ನೀಡುವುದಾದರೆ, ಹಲವು ವರ್ಷಗಳಿಂದ ಕರ್ನಾಟಕ ರಾಜ್ಯಾದ್ಯಂತ ನಡೆಸುತ್ತಿರುವ ಭಗವದ್ಗೀತಾ ಅಭಿಯಾನ. ಜಾತಿ ಧರ್ಮ ಲಿಂಗ ವಯೋ ತಾರತಮ್ಯಗಳಿಲ್ಲದೆ ಗೀತೆಯ ಸಂದೇಶವನ್ನು ಜನಕ್ಕೆ ತಲಪಿಸಲಾಗುತ್ತಿದೆ; ಸಾವಿರ ಸಾವಿರ ಸಂಖ್ಯೆಯಲ್ಲಿ ಉಚಿತವಾಗಿ ಗೀತೆಯ ಪ್ರತಿಗಳನ್ನು ವಿತರಿಸಲಾಗುತ್ತಿದೆ. ಕರ್ತವ್ಯಪರತೆ, ರಾಷ್ಟ್ರೀಯ ಭಾವೈಕ್ಯ, ಸರ್ವ ಮತಧರ್ಮ ಸಾಮರಸ್ಯ, ಸರ್ವೋದಯ ಆಧ್ಯಾತ್ಮಿಕ ಚಿಂತನೆ, ವ್ಯಸನಮುಕ್ತ ಸಮಾಜನಿರ್ಮಾಣ, ಶೋಕರಾಹಿತ್ಯ, ವ್ಯಷ್ಟಿ-ಸಮಷ್ಟಿ ಕಲ್ಯಾಣಕಾರಿತೆಗಳನ್ನು ಬೋಧಿಸುವುದನ್ನೆ ಈ ಅಭಿಯಾನದ ಗುರಿಯನ್ನಾಗಿಸಿಕೊಳ್ಳಲಾಗಿದೆ.
ಜೊತೆಗೇ ಭಗವದ್ಗೀತೆಯನ್ನು ಕುರಿತು ಬರೆದ ದಿನಪತ್ರಿಕೆಯ ಅಂಕಣ ಲೇಖನಗಳ ಸಂಕಲನ ‘ಗೀತಾಂತರಂಗ’ ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿದೆ. ಸದಾ ಸರಳ ಪ್ರಸನ್ನ ನಡೆ ನುಡಿಯ ಈ ಸ್ವಾಮಿಗಳಿಗೆ ರಾತ್ರಿ 2-3 ಗಂಟೆಗೇ ಬೆಳಗಾಗುತ್ತದೆ. ಬೆಳಗಿನ 10-11 ಗಂಟೆಯವರೆಗೂ ಯಾರ ಕೈಗೂ ಸಿಗಲಾರರು. ಪ್ರಾಯಃ ಅದು ಅವರ ಜಪ ತಪ ಅರ್ಚನೆ ಅನುಷ್ಠಾನ ಯೋಗಸಾಧನೆ ಅಧ್ಯಯನ ಬರವಣಿಗೆಗಳಿಗೆ ಸುಸಮಯ. ತದನಂತರ ದಿನವಿಡೀ ಜನಸಮುದಾಯದ ನಡುವೆ ಇದ್ದು ಜನೋಪಯೋಗೀ ಜಾಗೃತಿ ಮತ್ತು ಕಾರ್ಯಗಳಲ್ಲಿ ತೊಡಗಿರುತ್ತಾರೆ. ಪತ್ರಿಕೆಗಳ ಅಂಕಣಗಳ ಮೂಲಕವೂ ದಿನವೂ ಜನರನ್ನು ತಲಪುತ್ತಾರೆ. ದರ್ಶನ ಶಾಸ್ತ್ರಗಳಲ್ಲಿ ಅವರದು ಪರಿಣತ ಪಾಂಡಿತ್ಯ ಮತ್ತು ನಿಷ್ಣಾತತೆ. ಓದಿದ್ದನ್ನು ಅನುಭವಕ್ಕೆ ತಂದುಕೊಳ್ಳುವ, ಅನುಷ್ಠಾನಕ್ಕೆ ಅಳವಡಿಸುವ ತುಡಿತ ಅವರ ವಿಶೇಷ. ಈ ವಿಶಿಷ್ಟ ತುಡಿತವೇ ಯೋಗಪ್ರಕಾಶಿಕೆ ಗ್ರಂಥವನ್ನು ರೂಪಿಸಿರುವ ಪ್ರಧಾನ ಭೂಮಿಕೆ.
ಬೇರೊಂದು ಬಗೆಯಲ್ಲಿ ಹೇಳುವುದಾದರೆ, ಯೋಗಸೂತ್ರ-ಶಾಸ್ತ್ರಗಳ ಅಧ್ಯಯನ ಅನುವ್ಯವಸಾಯ ಅನುಭವಗಳ ಫಲ ಈ ಯೋಗಪ್ರಕಾಶಿಕೆ.
ವ್ಯಾಸಭಾಷ್ಯ, ವಾಚಸ್ಪತಿಮಿಶ್ರ ಭೋಜರಾಜ ಮತ್ತು ಸದಾಶಿವ ಬ್ರಹ್ಮೇಂದ್ರರ ವ್ಯಾಖ್ಯಾನ, ಅಲ್ಲದೆ ಗೊಲ್ಲಾಪಿಲ್ಲಿ ಅರುಣಾಚಲ ಶಾಸ್ತ್ರಿಯವರ ‘ಯೋಗಸೂತ್ರಾರ್ಥಪ್ರಕಾಶಿಕೆ’ ಎಂಬ ಹಳೆಯ ಕನ್ನಡ ಶೈಲಿಯಲ್ಲಿರುವ ಹಸ್ತಪ್ರತಿ – ಈ ನಾಲ್ಕು ಮೂಲಗಳನ್ನು ಆಧಾರವಾಗಿಟ್ಟುಕೊಂಡು ಸ್ವವಿವೇಚನೆಯಿಂದ ಯೋಗಪ್ರಕಾಶಿಕೆ ರೂಪುಗೊಂಡಿದೆ. ಮೊದಲಿನವರಿಬ್ಬರು ವಿಶೇಷವಾಗಿ ಶಾಸ್ತ್ರಭಾಷಾವಿದರು; ಭೋಜರಾಜನು ಸ್ವಯಂ ಆಡಳಿತಗಾರ ಕಲಿ ಮತ್ತು ಕವಿ; ಸದಾಶಿವಬ್ರಹ್ಮೇಂದ್ರರು ಅವಧೂತ ಯೋಗಿ ವಾಗ್ಗೇಯಕಾರರಾಗಿ (ತಮಿಳು ಪ್ರದೇಶದಲ್ಲಿ ವಿಶೇಷವಾಗಿ) ಪ್ರಸಿದ್ಧರಾಗಿದ್ದ ಪವಾಡಪುರುಷ. ಕೊನೆಯವರು ತನ್ನ ಯೋಗಾನುಭವ ತನ್ನ ತಾಯ್ನುಡಿಗೆ ಸಲ್ಲಬೇಕೆಂಬ ಕಾಳಜಿಯುಳ್ಳವರು. ಪ್ರಕೃತ ಗ್ರಂಥದಲ್ಲಿ ಈ ಎಲ್ಲರ ಅಭಿಮತ ಅಭಿರುಚಿಗಳಿಗೆ ಎದುರಾಗುವುದು ಚೇತೋಹಾರಿ ಅನುಭವ.
ನಿರೂಪಣಾ ಮಹತಿ
ಯೋಗಸೂತ್ರಗಳ ಸಂಕಲನ ಕ್ರಮದಲ್ಲಿ ನಾಲ್ಕು ಭಾಗಗಳಿವೆ: ಸಮಾಧಿಪಾದ, ಸಾಧನಪಾದ, ವಿಭೂತಿಪಾದ ಮತ್ತು ಕೈವಲ್ಯಪಾದ. ಸ್ಥೂಲವಾಗಿ ಹೇಳುವುದಾದರೆ, ಸಮಾಧಿಪಾದವು ಮನಸ್ಸಿನ ಏಕಾಗ್ರತೆ(ಸ್ಥಿರತೆ)ಯನ್ನೂ, ಸಾಧನಪಾದವು ಅದಕ್ಕೆ ಬೇಕಾದ ಮಾರ್ಗೋಪಾಯವನ್ನೂ, ವಿಭೂತಿಪಾದವು ಅದರಿಂದ ಲಭ್ಯವಾಗುವ ಅತಿಪ್ರಾಕೃತಿಕ ಶಕ್ತಿಗಳನ್ನೂ, ಕೊನೆಯದಾದ ಕೈವಲ್ಯಪಾದವು ಬದುಕಿನ ಗುರಿಯಾದ ಆತ್ಮಪೃಥಕ್ಕರಣ ಅಥವಾ ಆತ್ಮವಿವೇಕವನ್ನೂ ನಿರೂಪಿಸಿವೆ. 196 ಸೂತ್ರಗಳಲ್ಲಿ ನಿರೂಪಿತವಾದ ವಿಷಯ ವಿಸ್ತರವನ್ನು 158 ಉಪಶೀರ್ಷಿಕೆಯಡಿ ಈ ಕೃತಿ ವ್ಯಾಖ್ಯಾನಿಸಿದೆ. ಹದಿನೆಂಟು ಪುಟಗಳ ಪರಿವಿಡಿಯ ಆಯೋಜನೆಯೇ ವಿನೂತನವೂ ವಿಶಿಷ್ಟವೂ ಅತ್ಯುಪಯುಕ್ತವೂ ಆಗಿದೆ. ದಪ್ಪ ಅಕ್ಷರಗಳಲ್ಲಿ ಸೂತ್ರಾನುಗುಣವಾದ ವಿಷಯ ಶೀರ್ಷಿಕೆ, ಅದರ ಅಡಿ ಸಣ್ಣ ಅಕ್ಷರಗಳಲ್ಲಿ ಅದಕ್ಕೆ ಸಂಬಂಧಿಸಿದ ಸೂತ್ರ, ಜೊತೆಗೆ ಎಂದಿನಂತೆ ಪುಟಸಂಖ್ಯೆ. ಇದರಿಂದ ಓದುಗನಿಗೆ ತುಂಬ ಪ್ರಯೋಜನವಿದೆ. ತ್ವರಿತವಾಗಿ ಸೂತ್ರ ಮತ್ತು ಅದು ನಿರೂಪಿಸುವ ವಿಷಯಕ್ಕೆ ನೇರ ಕೈಯಿಕ್ಕಿ ಮತ್ತೆ ಮತ್ತೆ ಓದಿ ಮನನ ಮಾಡಬಹುದು. ಮನನಕ್ಕೆ ಪೂರಕವೂ ಪೋಷಕವೂ ಆಗಿ ವಿಷಯ ಶೀರ್ಷಿಕೆಯನ್ನು ಮನದಲ್ಲೆ ಓದುತ್ತ ಅನುಕ್ರಮವಾಗಿ ಸೂತ್ರಗಳನ್ನು ಬಾಯಿಬಿಟ್ಟು ಪಾರಾಯಣ ಮಾಡಬಹುದು. ಅನುಸಂಧಾನಕ್ಕೆ ಈ ಕ್ರಮ ಅತ್ಯಗತ್ಯ. ಅಲ್ಲದೆ ಯೋಗಸೂತ್ರಗಳ ಚೆಲುವನ್ನು, ದಿವ್ಯತೆಯನ್ನು ಆಸ್ವಾದಿಸಿವುದೇ ಅದ್ಭುತ ಅನುಭವ.
ಸರಳತೆಯೊಂದಿಗೇ ಮಹತ್ತನ್ನು ಒಳಗೊಳ್ಳುವ ಜಾಣ್ಮೆ ವಿಷಯ ನಿರೂಪಣೆಯಲ್ಲಿ ಉದ್ದಕ್ಕೂ ಕಾಣುವುದು ಈ ಕೃತಿಯ ವೈಶಿಷ್ಟ್ಯ. ಸೂತ್ರವೆಂದರೆ ಸಾರಸಂಗ್ರಹ. ಯಾವುದೇ ಸೂತ್ರವಾಗಲಿ ಪರಿಭಾಷೆಯಿಂದ ಇಡಿಕಿರಿದಿರುತ್ತದೆ. ಪರಿಭಾಷೆಯನ್ನು ಸರಳ ಮಾತಿನಲ್ಲಿ ವಿವರಿಸಿ ಓದುಗನಿಗೆ ಮನವರಿಕೆ ಮಾಡಿಕೊಡುವ ಕೌಶಲ ಇಲ್ಲಿದೆ. ಮನವರಿಕೆಯಾದವನು ಮನವರಿಕೆ ಮಾಡಿಕೊಡಬಲ್ಲ. ಅಲೆ ಅಲೆಯಾಗಿ ಚಲಿಸುವ ತಿಳಿನೀರಿನಂಥ ಬರವಣಿಗೆ ಈ ಗ್ರಂಥದ ಶಕ್ತಿ. ಮಾದರಿಯಾಗಿ ಒಂದು ನಿದರ್ಶನವನ್ನು ಇಲ್ಲಿ ಮನಗಾಣಬಹುದು:
‘ಇಲ್ಲಿ ಗಮನಿಸಬೇಕಾದ ಒಂದು ಸೂಕ್ಷ್ಮ ಅಂಶವಿದೆ. ಸಾಧಕನಿಗೆ ಯಾವ ವಸ್ತುವು ಅವನ ಸಂಸ್ಕಾರಕ್ಕನುಗುಣವಾಗಿ ಅಭಿಮತವೋ, ಅದೇ ವಸ್ತುವನ್ನು ಆತ ಚಿಂತನೆ ಮಾಡುತ್ತಾನೆ. ಆ ವಸ್ತುವಿನಲ್ಲಿ ಅವನ ಮನಸ್ಸು ನಿಶ್ಚಲಗೊಳ್ಳುತ್ತದೆ. ಹೀಗೆ ಒಂದು ವಿಷಯದಲ್ಲಿ ನಿಶ್ಚಲಗೊಂಡ ಮನಸ್ಸು ಆನಂತರ ಬೇರೆ ವಿಷಯಗಳಲ್ಲಿಯೂ ನಿಶ್ಚಲಗೊಳ್ಳಲು ಪ್ರಾರಂಭಿಸುತ್ತದೆ. ಇದನ್ನು ಉಪಯೋಗಿಸಿಕೊಂಡು ಸಾಧಕನು ಮೊದಲು ಇಷ್ಟವಸ್ತುವನ್ನು ಧ್ಯಾನ ಮಾಡಿ, ಅನಂತರ ಯೋಗಸಾಧನೆಗೆ ಬೇಕಾದ ಈಶ್ವರಚಿಂತನೆಯಲ್ಲಿ ಅಥವಾ ಪ್ರಕೃತಿ-ಪುರುಷ ವಿವೇಕ ಚಿಂತನೆಯಲ್ಲಿ ಏಕಾಗ್ರತೆಯಿಂದ ತೊಡಗಬಹುದಾಗಿದೆ.
‘ಸಾಧಕನು ಈ ಹಿಂದೆ ಹೇಳಿದ ಏಳು ಉಪಾಯಗಳ ಪೈಕಿ ಯಾವುದಾದರೊಂದು ಉಪಾಯದ ಮೂಲಕ ಮನಸ್ಸನ್ನು ನಿಶ್ಚಲಗೊಳಿಸಿಕೊಳ್ಳಬೇಕು. ಹೀಗೆ ನಿಶ್ಚಲಗೊಳಿಸಿಕೊಂಡಿದ್ದರಿಂದ ಉಂಟಾಗುವ ಪ್ರಯೋಜನವೇನು? ಅಥವಾ ಒಬ್ಬ ಸಾಧಕನ ಮನಸ್ಸು ನಿಶ್ಚಲಗೊಂಡಿದೆಯೇ ಎಂಬುದನ್ನು ಅರಿಯುವುದು ಹೇಗೆ? ಈ ಪ್ರಶ್ನೆಗೆ ಮುಂದಿನ ಸೂತ್ರವು ಉತ್ತರ ಕೊಡುತ್ತದೆ. ‘ಪರಮಾಣುಮಹತ್ತತ್ತ್ವಾಂತಃ ಅಸ್ಯ ವಶೀಕಾರಃ’ (1.40) ಈ ಉಪಾಯಗಳ ಮೂಲಕ ಮನಸ್ಸನ್ನು ನಿಶ್ಚಲಗೊಳಿಸಿಕೊಂಡ ಸಾಧಕನು ಅತ್ಯಂತ ಸೂಕ್ಷ್ಮವಾದ ವಸ್ತುವಿನಲ್ಲಿಯೂ ಯಾವುದೇ ತಡೆಯಿಲ್ಲದೇ, ದೀರ್ಘಕಾಲ, ಸ್ಥಿರವಾಗಿ ಮನಸ್ಸನ್ನು ಇಡಬಲ್ಲನು. ಹಾಗೆಯೇ ಅತ್ಯಂತ ದೊಡ್ಡದಾದ ವಿಷಯದಲ್ಲಿಯೂ ಮನಸ್ಸನ್ನು ನಿಲ್ಲಿಸಬಲ್ಲನು. ಅತ್ಯಂತ ಸೂಕ್ಷ್ಮವಾದ ವಿಷಯಕ್ಕೆ ಉದಾಹರಣೆಯಾಗಿ ಪರಮಾಣುವನ್ನು ಈ ಸೂತ್ರದಲ್ಲಿ ಕೊಟ್ಟಿರುತ್ತಾರೆ.
ಅತ್ಯಂತ ದೊಡ್ಡ ವಿಷಯಕ್ಕೆ ಮಹತ್ತತ್ತ್ವವನ್ನು ಕೊಟ್ಟಿರುತ್ತಾರೆ. ಮಹತ್ತತ್ತ್ವವೆಂದರೆ ಎಲ್ಲ ಪ್ರಾಣಿಗಳ ಬುದ್ಧಿಗಳ ಒಟ್ಟೂ ಮೊತ್ತ ಅಥವಾ ಸಮಷ್ಟಿ ಬುದ್ಧಿ. ಇದು ತುಂಬಾ ವ್ಯಾಪಕವಾಗಿರುತ್ತದೆ. ಹೀಗೆ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಂತ ಸ್ಥೂಲ ವಿಷಯಗಳಲ್ಲಿ ಮನಸ್ಸು ನಿಶ್ಚಲವಾಗಿ ನಿಲ್ಲುವಂತಾದರೆ, ಅಂಥ ಸಾಧಕನ ಮನಸ್ಸು ಚಾಂಚಲ್ಯವನ್ನು ಕಳೆದುಕೊಂಡಿದೆ ಎಂಬುದಾಗಿ ಅರ್ಥ. ಇಂಥ ಸಾಧಕನಿಗೆ ಇನ್ನು ಮುಂದೆ ಈ ಪರಿಕರ್ಮ(ಹಿಂದೆ ಹೇಳಿದ ಉಪಾಯ)ಗಳ ಆವಶ್ಯಕತೆ ಇರುವುದಿಲ್ಲ. ಅವನು ಧ್ಯಾನ, ಧಾರಣ, ಸಮಾಧಿಗಳೆಂಬ ಯೋಗ ಅಂಗಗಳ ಕಡೆಗೆ ಧಾವಿಸಿ ಹೆಜ್ಜೆ ಇಡಬಹುದು’ (ಪು. 92).
ವಿಭೂತಿ ಮಹತಿ
ಮನೋನಿಶ್ಚಲತೆಯ ಯೋಗದ ಆತ್ಯಂತಿಕ ಅಥವಾ ಪರಮ ಪ್ರಯೋಜನ ಸಮಾಧಿಸ್ಥಿತಿ ಅರ್ಥಾತ್ ಆತ್ಮಸಾಕ್ಷಾತ್ಕಾರ. ಅದನ್ನೇ ಮೋಕ್ಷವೆಂದೂ ಕರೆಯಲಾಗಿದೆ. ಹಾಗಿದ್ದೂ ವಿಭೂತಿಪಾದ ಹಲವು ಅತಿಪ್ರಾಕೃತಿಕ ಶಕ್ತಿಗಳ ಸಿದ್ಧಿಯನ್ನು ಹೇಳಿದೆ. ಜೊತೆಗೇ ಅದನ್ನು ಬಳಸಿದಲ್ಲಿ ಅದು ಸಾಧಕನ ಸಾಧನೆಗೆ ಹಾನಿಮಾಡುತ್ತದೆ ಎಂದೂ ಎಚ್ಚರಿಸಿದೆ. (ತೇ ಸಮಾಧೌ ಉಪಸರ್ಗಾಃ….) ಈ ಸಂದರ್ಭದಲ್ಲಿ ಶ್ರೀಗಳು ಉಲ್ಲೇಖಿಸಿದ ಮಹಾಯೋಗಿ ಸದಾಶಿವಬ್ರಹ್ಮೇಂದ್ರರ ಮಾತುಗಳು ಮನನೀಯವಾಗಿವೆ:
‘ದ್ರವ್ಯ, ಮಂತ್ರಕ್ರಿಯಾಕಾಲಶಕ್ತಯಃ ಸಾಧುಸಿದ್ಧಿದಾಃ |
ಪರಮಾತ್ಮಪದಪ್ರಾಪ್ತೌ ನೋಪಕುರ್ವಂತಿ ಕಾಶ್ಚನ ||
ಸರ್ವೇಚ್ಛಾಲಾಭಸಂಶಾಂತೌ
ಆತ್ಮಲಾಭೋದಯೋ ಹಿ ಸಃ |
ಸ ಕಥಂ ಸಿದ್ಧಿವಾಂಛಾಯಾಂ
ಮಗ್ನಚಿತ್ತೇನ ಲಭ್ಯತೇ ||
ದ್ರವ್ಯ, ಮಂತ್ರ, ಕ್ರಿಯೆ ಮತ್ತು ಕಾಲಗಳ ಶಕ್ತಿಗಳು ಸಿದ್ಧಿಗಳನ್ನು ಉಂಟುಮಾಡುವುದೇನೋ ನಿಜ. ಆದರೆ ಅವು ಯಾವವೂ ಪರಮಾತ್ಮಪದದ ಪ್ರಾಪ್ತಿಗೆ ಉಪಕರಿಸುವುದಿಲ್ಲ. (ಪರಮಾತ್ಮಪದದ ಪ್ರಾಪ್ತಿಗೆ ವಿವೇಕ-ವೈರಾಗ್ಯಗಳೇ ಸಾಧನ.) ಎಲ್ಲ ಇಚ್ಛೆ ಲಾಭಗಳೂ ಸಂಪೂರ್ಣ ಶಾಂತವಾದಾಗಲೇ ಆ ಆತ್ಮಲಾಭವು ಉದಯಿಸುತ್ತದೆ. ಅಂತಹ ಆತ್ಮಲಾಭವು ಸಿದ್ಧಿಗಳನ್ನು ಅಪೇಕ್ಷಿಸುತ್ತ, ಸಿದ್ಧಿಗಳಲ್ಲೇ ಮುಳುಗಿದ ಸಾಧಕನಿಗೆ ಹೇಗೆ ತಾನೆ ಲಭಿಸಲು ಸಾಧ್ಯವಾದೀತು?’ (ಪು.315)
ಹಾಗಾದರೆ ಯೋಗಶಾಸ್ತ್ರವು ಸಿದ್ಧಿಗಳನ್ನು ಹೇಳುವ ಉದ್ದೇಶವೇನಿರಬಹುದು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಸ್ವಾಮಿಗಳು ತಮ್ಮ ಶಾಸ್ತ್ರದ ಒಳತಿಳಿವಳಿಕೆಯಿಂದ ಹೇಳುವ ಸಮಾಧಾನ ಹೀಗಿದೆ: ‘ಸಾಧಕನಲ್ಲಿ ಶ್ರದ್ಧೆಯನ್ನು ಹುಟ್ಟಿಸಲು ಸಿದ್ಧಿಗಳನ್ನು ಹೇಳಿದ್ದಾರೆ. ಯೋಗಸಾಧನೆಯು ಮುಖ್ಯವಾಗಿ ಅಂತರಂಗದಲ್ಲಿ ಆಗುವ ಒಂದು ಬೆಳವಣಿಗೆ. ಅದು ಎಷ್ಟೋ ಸಲ ಸೂಕ್ಷ್ಮವಾಗಿರುತ್ತದೆ. ಸಾಧಕನಿಗೆ ತನ್ನ ಬೆಳವಣಿಗೆಯೇ ತನಗೆ ಅನೇಕ ಸಲ ಗೊತ್ತಾಗುವುದಿಲ್ಲ. ಸಿದ್ಧಿಗಳು ಆ ಬೆಳವಣಿಗೆಯ ಸೂಚಕಗಳು. ಅದರಿಂದ ಸಾಧಕನು ತನ್ನ ಸಾಧನೆಯ ಬೆಳವಣಿಗೆಯ ಹಂತವನ್ನು ಅರಿತುಕೊಂಡು ಮುಂದಿನ ಹಂತದ ಕಡೆಗೆ ಹೆಜ್ಜೆ ಇಡಲು ಅನುಕೂಲವಾಗುತ್ತದೆ. ಮೋಕ್ಷಸಾಧನೆಯೇ ಯೋಗದ ಮುಖ್ಯ ಗುರಿ. ಆದ್ದರಿಂದ ಈ ವಿಭೂತಿಗಳು ಅವಾಂತರ (ಮಧ್ಯೆ ಸಿಗುವ) ಪ್ರಯೋಜನಗಳೇ ಹೊರತು, ಮುಖ್ಯ ಪ್ರಯೋಜನಗಳಲ್ಲ. ಅವುಗಳನ್ನು ದಾಟಿಯೇ ಮುಂದೆ ಮುಖ್ಯ ಪ್ರಯೋಜನದ ಕಡೆಗೆ ಸಾಗಬೇಕಾಗಿದೆ. ಅದಕ್ಕಾಗಿ ಆ ವಿಭೂತಿಗಳನ್ನು ಅಥವಾ ಸಿದ್ಧಿಗಳನ್ನು ಹೇಳುತ್ತಿದ್ದಾರೆ.’ (ಪು.242)
ವ್ಯಾಖ್ಯಾನ ಮಹತಿ
ಕ್ರಿಯಾಫಲ ನಿರೂಪಣೆಯ ಮೊದಲಲ್ಲಿ ಪರಕಾಯಪ್ರವೇಶದ (..ಚಿತ್ತಸ್ಯ ಪರಶರೀರಾವೇಶಃ 3-39) ಪ್ರಸ್ತಾವವಿದೆ. ಈ ಸೂತ್ರಕ್ಕೆ ಸ್ವಾಮೀಜಿ ನೀಡುವ ವಿವರವು ಅತ್ಯಂತ ಪ್ರಾಜ್ಞವೂ ಮನೋಜ್ಞವೂ ಆಗಿದೆ. ಶರೀರ ಮತ್ತು ಚಿತ್ತದ ಸಂಬಂಧ, ಅದು ಉಂಟುಮಾಡುವ ಭ್ರಮೆ ಮೋಹ ಅನಿವಾರ್ಯ ಅಜ್ಞಾನಗಳ ಕಥನ ಪರ್ಯಾಯವಾಗಿ ಪಡಿಮೂಡಿದೆ. ಯೋಗದ ಅರಿವಿನ ಅಗತ್ಯವನ್ನು ಮನಗಾಣಿಸಬಲ್ಲ ಶಕ್ತ ನಿರೂಪಣೆ ಇದಾಗಿದೆ. ಕುತೂಹಲದ ಸಂಗತಿಯೆಂದರೆ, ಇಲ್ಲಿ ಕಾಣುವ ಶಂಕರದಿಗ್ವಿಜಯದ ಉಲ್ಲೇಖ. ಶಂಕರರ ಪರಕಾಯಪ್ರವೇಶ ಸಂದರ್ಭವನ್ನು ಕುರಿತು ಮಾತನಾಡಲು ಪಂಡಿತರು, ಶಂಕರಾಭಿಮಾನಿಗಳು ಸಂಕೋಚಪಡುವುದಿದೆ. ಸ್ವಾಮಿಗಳು ಸರಾಗವಾಗಿ ಸಹಜವಾಗಿ ಕಥೆಯೆಂದೇ ಹೇಳಿದ್ದರೂ ಉಲ್ಲೇಖ ಮೆಚ್ಚತಕ್ಕದ್ದೆ. ಪ್ರಾಸಂಗಿಕವಾಗಿ ಇಲ್ಲಿ ಪ್ರಸ್ತಾವಿಸಬಹುದಾದ ಒಂದು ಸಂಗತಿಯೆಂದರೆ, ಶಂಕರದಿಗ್ವಿಜಯಕ್ಕೆ ಪೂರ್ಣ ಭಿನ್ನವಾಗಿ (ಎದುರಾಗಿ?) ಶಂಕರರ ಪರಕಾಯಪ್ರವೇಶ ಪ್ರಸಂಗವನ್ನು ಐತಿಹಾಸಿಕವಾಗಿ ನಿರೂಪಿಸಿದ ಪ್ರಯತ್ನವೊಂದು ಬಂಗಾಲದಲ್ಲಿ ನಡೆದಿದೆ. ಅಮರುಶತಕವನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಬಂಗಾಲದ ರವಿಚಂದ್ರ ಎನ್ನುವ ವ್ಯಾಖ್ಯಾನಕಾರ ಮೂಲತಃ ಅಮರುಶತಕವು ಶಂಕರರದ್ದೆಂದು ಹೇಳುತ್ತಾನೆ. (ಇದ್ದರೂ ಇರಬಹುದು!) ಶಂಕರರು ತಮ್ಮ ಭಾರತಯಾತ್ರೆಯಲ್ಲಿ ಒಮ್ಮೆ ಕಾಶ್ಮೀರಕ್ಕೆ ಹೋದಾಗ, ಇಂದ್ರಿಯ ಲೋಲುಪತೆಯಲ್ಲಿ ಮುಳುಗಿದ್ದ ರಾಜ ಅಮರುಕನನ್ನು ಸಂಧಿಸುತ್ತಾರೆ. ಅಮರುಕನು ಆಸ್ಥಾನಿಕರ ಕವಿಗೋಷ್ಠಿಯಲ್ಲಿ ಶೃಂಗಾರಪದ್ಯ ರಚನೆಯಲ್ಲಿ ಮಗ್ನನಾಗಿದ್ದ. ಆಗ ಅಮರುಕನ ಶರೀರವನ್ನು ಯೋಗಶಕ್ತಿಯಿಂದ ಪ್ರವೇಶಿಸಿದ ಶಂಕರರು ನೂರು ಪದ್ಯಗಳನ್ನು ವಾಚಿಸಿದರಂತೆ. ಒಂದೊಂದೂ ಶೃಂಗಾರಾನುಭವವಾಗಿರುವಂತೆ ಬ್ರಹ್ಮಾನುಭವ ಸೂಚಕವೂ ಆಗಿರುವುದನ್ನು ಅರಿತ ರಾಜ ಅಮರುಕ ಶೃಂಗಾರಾನಂದವನ್ನು ದಾಟಿ ಬ್ರಹ್ಮಾನಂದಕ್ಕೆ ಸಂದನಂತೆ. ಇದರ ನೆನಪಾಗಿ ಆಚಾರ್ಯರು ಈ ಶತಕವನ್ನು ‘ಅಮರುಶತಕ’ ಎಂದೇ ಕರೆದರಂತೆ. ರವಿಚಂದ್ರನು ಅಮರುಶತಕಕ್ಕೆ ಬ್ರಹ್ಮಾನುಭವಪರವಾದ ವ್ಯಾಖ್ಯಾನವನ್ನೂ ರಚಿಸಿ ತನ್ನ ಮಾತನ್ನು ಸಮರ್ಥಿಸಿಕೊಂಡಿದ್ದಾನೆ. (ಈ ಕೃತಿ ಇಂಟರ್ನೆಟ್ನಲ್ಲಿ ಲಭ್ಯ ಇದೆ.) ಅಚ್ಯುತರಾಯನು ಶಾರದಾಗಮ ವ್ಯಾಖ್ಯಾನ ಎನ್ನುವ ಹೆಸರಿನಲ್ಲಿ ಎರಡೂ ನೆಲೆಯ ವ್ಯಾಖ್ಯಾನ ರಚಿಸಿದ್ದಾನೆಂಬ ಉಲ್ಲೇಖವೂ ಇದೆ. ಅಮರುಶತಕದ ಕೆಲವು ಹಸ್ತಪ್ರತಿಗಳ ಕೊನೆಯಲ್ಲಿ ಆದಿಶಂಕರರ ಹೆಸರು ಕಾಣುತ್ತದೆಂದು
ಅದರ ಇಂಗ್ಲಿಷ್ ಅನುವಾದಕರಾದ ಬೈಲಿ, ಏಂಡ್ರೂ ಶೆಲ್ಲಿಂಗ್ ಸೂಚಿಸಿರುವರಂತೆ. ರವಿಚಂದ್ರನ ಒಕ್ಕಣಿಕೆಯೇ ಇತಿಹಾಸಕ್ಕೂ ವಾಸ್ತವಕ್ಕೂ ಹೆಚ್ಚು ಹತ್ತಿರವಿದ್ದಂತೆ ತೋರುತ್ತದೆ. ಇರಲಿ.
ಸಮನ್ವಯ ಮಹತಿ
ದಿನನಿತ್ಯದ ಬದುಕಿನ ಸಂಗತಿಗಳನ್ನು ಉದಾಹರಣೆಯಾಗಿ ನಿದರ್ಶನವಾಗಿ ಹೋಲಿಕೆಯಾಗಿ ಬಳಸಿ ಸಾಮಾನ್ಯ ಓದುಗರನ್ನೂ ತಲಪಲು ಯತ್ನಿಸಿರುವುದು ಯೋಗಪ್ರಕಾಶಿಕೆಯ ಆಕರ್ಷಕ ಗುಣ. ಮತ್ತೊಂದು ಆಕರ್ಷಕವೂ, ವರ್ತಮಾನಕ್ಕೆ ತೀರ ಪ್ರಸ್ತುತವೂ ಆದದ್ದು ಈ ಕೃತಿಯ ಸಮನ್ವಯದೃಷ್ಟಿ. ಇತರ ಯೋಗಕೃತಿಗಳ ಹಾಗೂ ದರ್ಶನಕಾರರ ದೃಷ್ಟಿಗಳನ್ನು ದೂಷಿಸದೆ ಅದರ ಅಂತರಂಗವನ್ನು ಸಮಭಾವದಿಂದ, ಸಮನ್ವಯಭಾವದಿಂದ ನೋಡಿರುವುದು ಕೃತಿಕಾರರ ಉದಾರ ಅಂತರಂಗಕ್ಕೆ ಹಿಡಿದ ಕನ್ನಡಿ. ಇಲ್ಲಿ ಕಾಣುವ ಅಭಿವ್ಯಕ್ತಿಯ ಸರಳತೆ ಹೇಗೆ ದೌರ್ಬಲ್ಯವಲ್ಲವೋ, ಹಾಗೇ ಸಮನ್ವಯದೃಷ್ಟಿಯೂ ಸತ್ಯಚ್ಯುತಿ ಅಲ್ಲ. ಆರಂಭದಲ್ಲಿ ಯೋಗ ಶಬ್ದದ ಅರ್ಥದ ವಿವರಣೆಯನ್ನೇ ನಿದರ್ಶನವಾಗಿ ನೋಡಬಹುದು. ಯೋಗ ಶಬ್ದಕ್ಕೆ ಸಂಯೋಗ (ಕೂಡುವಿಕೆ-ಯುಜಿರ್ ಯೋಗೇ) ಎಂಬ ಅರ್ಥವಿದೆ. ಯೋಗಯಾಜ್ಞವಲ್ಕ್ಯವು ಕಂಠೋಕ್ತವಾಗಿ ‘ಸಂಯೋಗೋ ಯೋಗ ಇತ್ಯುಕ್ತೋ ಜೀವಾತ್ಮಪರಮಾತ್ಮನೋಃ’ ಜೀವಾತ್ಮಪರಮಾತ್ಮರ ಕೂಡುವಿಕೆಯೇ ಯೋಗ ಎನ್ನುತ್ತದೆ. ಇದು ಭಕ್ತಿ ಸಂಪ್ರದಾಯಗಳ ಅಭಿಮತವೂ ಆಗಿದೆ. ಗೀತಗೋವಿಂದದ ಕೃಷ್ಣ ರಾಧೆಯರು ಜೀವಾತ್ಮ ಪರಮಾತ್ಮ ಪ್ರತಿನಿಧಿಗಳೆಂದೇ ಪ್ರಸಿದ್ಧ. ಜೈನ ಸಂಪ್ರದಾಯವು ಮೋಕ್ಷದೊಂದಿಗೆ ಕೂಡುವುದು ಯೋಗ ಎನ್ನುತ್ತದೆ. (ಮೋಕ್ಖೇಣ ಜೋಯಣಾಓ ಜೋಗೋ – ಯೋಗವಿಂಶಿಕಾ ಗಾಥಾ; ಮೋಕ್ಷೇಣ ಯೋಜನಾದೇವ ಯೋಗಃ – ದ್ವಾತ್ರಿಂಶಿಕಾ.) ಮೋಕ್ಷದೊಂದಿಗೆ ಕೂಡುವುದೆಂದರೆ ಮೋಕ್ಷ ಹೊಂದುವುದೆಂದರ್ಥ. ಜೈನಸಿದ್ಧಾಂತಕ್ಕೆ ಅನುಗುಣವಾದ ನಿರ್ವಚನ ಇದು. (ಇದನ್ನು ಹನ್ನೆರಡನೇ ಶತಮಾನದ ಆಚಾರ್ಯ ಹೇಮಚಂದ್ರರು ತಮ್ಮ ಯೋಗಶಾಸ್ತ್ರ ಕೃತಿಯಲ್ಲಿ ಜೈನಸಿದ್ಧಾಂತದ ನಿಲವನ್ನು ಪಾತಂಜಲ ದರ್ಶನದೊಂದಿಗೆ ಸಮನ್ವಯಿಸಿ ಸೊಗಸಾಗಿ ನಿರೂಪಿಸಿದ್ದಾರೆ.) ಯಮನಿಯಮಾದಿ ಯೋಗಾಂಗಗಳನ್ನೂ ಜ್ಞಾನ ಭಕ್ತಿ ಕರ್ಮಾದಿಗಳನ್ನೂ ಯೋಗವೆಂದು ಹೇಳುವುದಿದೆ; ಅವು ಯೋಗಸಾಧನವೂ ಮೋಕ್ಷಸಾಧಕವೂ ಆಗಿರುವುದರಿಂದ ಅಲ್ಲಿ ಯೋಗ ಶಬ್ದವು ಗೌಣಾರ್ಥದಲ್ಲಿದೆ; ಮುಖ್ಯಾರ್ಥದಲ್ಲಲ್ಲ ಎನ್ನುತ್ತಾನೆ ವಿಜ್ಞಾನಭಿಕ್ಷು. ಚಿತ್ತದ ಏಕಾಗ್ರತೆ ಅರ್ಥಾತ್ ಸಮಾಧಿಯೇ ಯೋಗ ಶಬ್ದದ ಮುಖ್ಯಾರ್ಥ (ಯುಜ್ ಸಮಾಧೌ). ಯೋಗವನ್ನು ಚಿತ್ತವೃತ್ತಿ ನಿರೋಧ ಎಂದು ಪತಂಜಲಿ ಮುನಿ ನಿರ್ವಚಿಸಿದ್ದರಿಂದ ಯೋಗ ಎಂದರೆ ಸಮಾಧಿ (ಚಿತ್ತದ ಏಕಾಗ್ರತೆ), ಸಂಯೋಗವಲ್ಲ ಎನ್ನುವುದು ಮುನಿಗೂ ವ್ಯಾಸಭಾಷ್ಯಾದಿ ಪರಂಪರೆಗೂ ಅಭಿಪ್ರೇತವಾದದ್ದು. ಯೋಗಪ್ರಕಾಶಿಕೆಯ ನಿಲವೂ ಅದೇ. ಆದರೆ ಸ್ವಾಮೀಜಿಯವರು ಸಂಯೋಗ (ಕೂಡುವಿಕೆ) ಎಂಬ ಅಭಿಮತವನ್ನು ನಿರಾಕರಿಸದೆ ಸಮನ್ವಯದ ನಿಲವಿನಲ್ಲಿ ನೋಡುತ್ತಾರೆ:
‘ಆದರೂ ಕೂಡುವಿಕೆ ಎಂಬ ಅರ್ಥವನ್ನು ಹೊಂದಿಸಬಹುದು. ಮನಸ್ಸಿನ ಸ್ಥೂಲವೃತ್ತಿಗಳನ್ನು ತಡೆಯುತ್ತಾ ಬಂದರೆ ಅಥವಾ ನಾಶಪಡಿಸುತ್ತಾ ಬಂದರೆ ಮನಸ್ಸು ಸೂಕ್ಷ್ಮವೃತ್ತಿಗಳನ್ನು ಪಡೆಯುತ್ತದೆ. ಸೂಕ್ಷ್ಮವೃತ್ತಿಗಳನ್ನು ಪಡೆಯುವಿಕೆಯನ್ನೇ ಸೂಕ್ಷ್ಮವೃತ್ತಿಗಳೊಂದಿಗೆ ಕೂಡುವಿಕೆಯೆಂಬುದಾಗಿ ಹೇಳಬಹುದು.’ (ಪು.4)
ಅಲ್ಲಿಗೆ ಕೂಡಿಸಿ (ಸಂಯೋಗ) ನೆಲೆಗೊಳಿಸುವುದು (ಸಮಾಧಿ) ಯೋಗ ಎಂದಂತಾಯ್ತು. ಇಂಥ ಅತ್ಯುಪಯುಕ್ತವಾಗಬಲ್ಲ ಅರ್ಥಪೂರ್ಣ ಕೃತಿ ಗುರುಮುಖದಿಂದ ಬಂದಿದೆ. ಆಸಕ್ತರು ಪ್ರಯೋಜನ ಪಡೆಯಬೇಕಾಗಿದೆ ಅಥವಾ ಓದಿಯಾದರೂ ಆಸಕ್ತರಾಗಬೇಕಿದೆ. ಗುರುವಿನ ಪರಮಕರುಣೆಗೆ ಸಪ್ರಶ್ರಯ ಪ್ರಣಾಮಗಳು.