ಛಂದೋವಿವೇಕ ಎಂಬ ಹೆಸರೇ ತಿಳಿಸುವಂತೆ ಇದು ಛಂದಶ್ಶಾಸ್ತ್ರವನ್ನು ಕುರಿತ ಕೃತಿಯಾಗಿದೆ. ಹಿಂದಿನಿಂದ ಛಂದಶ್ಶಾಸ್ತ್ರದಲ್ಲಿ ಬಂದ ಕೃತಿಗಳಲ್ಲಿ ಹೆಚ್ಚಿನವೆಲ್ಲವೂ ಛಂದಸ್ಸಿನ ಲಕ್ಷಣಗಳನ್ನು ಕುರಿತು, ಐತಿಹಾಸಿಕವಾಗಿ ಛಂದಸ್ಸಿನ ವಿಕಾಸವನ್ನು ಕುರಿತು, ಅಂಕಿ-ಅಂಶಗಳೇ ಪ್ರಧಾನವಾದ ವರ್ಣನಾತ್ಮಕ ಕೃತಿಗಳಾಗಿದ್ದವು. ಎಷ್ಟೋ ಕಡೆಗಳಲ್ಲಿ ಛಂದಸ್ಸಿನ ಸೌಂದರ್ಯಮೀಮಾಂಸೆಯೆಂದು ಹೇಳಿದವೂ ಪದ್ಯಸೌಂದರ್ಯವನ್ನು ಎಂದರೆ ಪದ್ಯಶಿಲ್ಪವನ್ನು ಚರ್ಚಿಸಿರುವುದಾಗಿದೆಯೇ ಹೊರತು ಛಂದಶ್ಶಿಲ್ಪವನ್ನಲ್ಲ. ಆದರೆ ಪ್ರಕೃತಕೃತಿಯಲ್ಲಿ ಮುಖ್ಯವಾಗಿ ಛಂದಸ್ಸಿನ ಸೌಂದರ್ಯವನ್ನು ಕುರಿತ ಹಲವು ಚಿಂತನೆಗಳನ್ನು ಶತಾವಧಾನಿ ಡಾ. ಆರ್. ಗಣೇಶ್ ಅವರು ವಿಶದವಾಗಿ ಮಂಡಿಸಿದ್ದಾರೆ. ಇದಕ್ಕೆ ಅನೇಕ ಪೂರ್ವಕವಿಗಳ, ವಿದ್ವಾಂಸರ, ಶಾಸ್ತ್ರಕಾರರ ರಚನೆಗಳು, ಪದ್ಯಗಳು ಆಧಾರವಾಗಿವೆಯಲ್ಲದೆ ಸ್ವತಃ ಶತಾವಧಾನಿಗಳೇ ನಲವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಕಾವ್ಯ-ಛಂದಸ್ಸು-ಭಾಷೆಗಳಲ್ಲಿ ನಡೆಸಿದ ಅಧ್ಯಯನ-ಅನುಭವಗಳಿಂದ ಕಂಡುಕೊಂಡ ಹಲವು ಒಳನೋಟಗಳು ಈ ವಿಷಯಸ್ಥಾಪನೆಗೆ ದಿಗ್ಗಜಗಳ ಬಲವನ್ನು ಕೊಡುತ್ತವೆ.
ನಮ್ಮ ಪರಂಪರೆಯಲ್ಲಿ ಶಾಸ್ತ್ರಗ್ರಂಥವಾಗಲಿ ಅಥವಾ ಇನ್ನಾವುದೇ ಗ್ರಂಥವಾಗಲಿ, ಅದಕ್ಕೆ ಅನುಬಂಧಚತುಷ್ಟಯ ಎಂಬ ಪ್ರಾಕಾರವನ್ನು ತಿಳಿಸುತ್ತವೆ. ಎಂದರೆ ಆ ಕೃತಿಯ ಅಧಿಕಾರಿ ಯಾರು, ವಿಷಯ ಏನು, ಸಂಬಂಧ ಏನು ಹಾಗೂ ಪ್ರಯೋಜನ ಏನು ಎಂಬ ನಾಲ್ಕು ಅಂಶಗಳು ಮುಖ್ಯವಾಗುತ್ತವೆ. ಇವುಗಳಲ್ಲಿ ಮುಖ್ಯವಾದದ್ದು – ಅಧಿಕಾರಿ. ಎಂದರೆ ಯಾರಿಗೋಸ್ಕರವಾಗಿ ಆ ಕೃತಿ ಹೇಳಲ್ಪಟ್ಟಿದೆ ಎಂಬುದು. ಪ್ರಸ್ತುತ ಛಂದೋವಿವೇಕ ಕೃತಿಯನ್ನು ಗಮನಿಸಿದರೆ, ಈ ಕೃತಿಯು ಛಂದಶ್ಶಾಸ್ತ್ರವನ್ನು ಅಧ್ಯಯನ ಮಾಡುವವರಿಗೆ, ಛಂದೋಬದ್ಧವಾದ ಕವಿತೆಯಲ್ಲಿ ಛಂದಸ್ಸಿನ ಸ್ಥಾನವೇನು, ಅದರ ಸ್ವಾರಸ್ಯವೇನು, ರಸ-ಭಾವಗಳಿಗೆ ಕವಿ ಬಳಸಿದ ಛಂದಸ್ಸು ಹೇಗೆ ಪೂರಕವಾಗಿವೆ – ಎಂಬಂತಹ ಕಾವ್ಯಸೂಕ್ಷ್ಮಗಳನ್ನು ತಿಳಿದುಕೊಳ್ಳುವ ಆಸಕ್ತಿ ಉಳ್ಳವರಿಗೆ ಈ ಗ್ರಂಥವು ಉಪಯುಕ್ತವಾಗುತ್ತದೆ ಎಂಬುದು ಒಂದು ದಿಕ್ಕಾದರೆ, ಕಾವ್ಯದಲ್ಲಿ ಛಂದಸ್ಸು ಏಕೆ? ಛಂದಸ್ಸಿಲ್ಲದೆಯೇ ಕಾವ್ಯವನ್ನು ಬರೆಯಬಹುದಲ್ಲವೇ? ಎಂದು ಹಳೆಯ ಮಾರ್ಗವನ್ನೂ ಅದರ ಸ್ವಾರಸ್ಯವನ್ನೂ ಕಂಡುಕೊಳ್ಳಲಾಗದೆ ನಿಂದಿಸಿ, ಅದರಿಂದ ದೂರ ಸರಿಯುವವರಿಗೂ ಇದು ಉಪಯುಕ್ತವಾದ ಕೃತಿಯಾಗಿದೆ. ಹೀಗಾಗಿ ಈ ಎರಡು ಬಗೆಯ ಜನರೂ ಈ ಕೃತಿಗೆ ಅಧಿಕಾರಿಗಳಾಗುತ್ತಾರೆ.
ಈ ಪುಸ್ತಕದಲ್ಲಿ ಪ್ರವೇಶಿಕೆಯನ್ನೂ ಅನುಬಂಧಗಳನ್ನೂ ಸೇರಿಸಿ ಒಟ್ಟು ಹತ್ತು ಲೇಖನಗಳಿವೆ. ಅನುಬಂಧದಲ್ಲಿ ತಮಿಳು ಹಾಗೂ ತುಳು ಭಾಷೆಯ ಛಂದಸ್ಸುಗಳನ್ನು ಕುರಿತು ಕೆಲವು ಚಿಂತನೆಗಳನ್ನೂ ಅವುಗಳೂ ಕನ್ನಡ ಸಂಸ್ಕೃತಗಳಲ್ಲಿ ಬಳಕೆಯಲ್ಲಿರುವ ಛಂದಸ್ಸುಗಳಿಗೆ ಹೇಗೆ ಸಂವಾದಿಯಾಗಿವೆ ಎಂದೂ ಎರಡು ಲೇಖನಗಳಲ್ಲಿ ತೋರ್ಪಡಿಸಿದ್ದಾರೆ. ಪ್ರವೇಶಿಕೆಯಲ್ಲಿ ಛಂದಸ್ಸು ಎಂಬ ಶಬ್ದದ ನಿಷ್ಪತ್ತಿಯಿಂದ ಮೊದಲಾಗಿ ಮೂಲಭೂತ ಘಟಕಗಳನ್ನು ಹಲವು ಶಾಸ್ತ್ರಕಾರರು ಹೇಗೆ ವಿಂಗಡಿಸಿದ್ದಾರೆ, ಅವುಗಳನ್ನು ಹೇಗೆ ಹೆಸರಿಸಿದ್ದಾರೆ ಎಂದೆಲ್ಲ ವಿವರಿಸಿದ್ದಾರೆ. ಗತಿಸೌಂದರ್ಯವುಳ್ಳ ಛಂದಸ್ಸು ಸತಾನ (ಲಯಾನ್ವಿತ), ವಿತಾನ (ಲಯರಹಿತ) ಎಂದು ಇಬ್ಬಗೆಯಾಗಿವೆ ಎಂದು ಸೇಡಿಯಾಪು ಕೃಷ್ಣಭಟ್ಟರು ಹೇಳಿರುವ ಮಾತುಗಳನ್ನೇ ಸೂತ್ರರೂಪದಲ್ಲಿ ಹೇಳುವುದರ ಜೊತೆಗೆ ಸಂಸ್ಕೃತ ಮತ್ತು ಇದರಿಂದ ಪ್ರಭಾವಿತವಾದ ಇನ್ನಿತರ ಭಾಷೆಗಳನ್ನು ಬಿಟ್ಟು ಬೇರೆ ಯಾವ ವಾಙ್ಮಯದಲ್ಲಿಯೂ ವಿತಾನಚ್ಛಂದಸ್ಸುಗಳು ಕಂಡುಬರುವುದಿಲ್ಲ ಎಂಬ ವಿಶೇಷತೆಯನ್ನು ಪ್ರಸ್ತಾವಿಸುತ್ತಾರೆ. ಬಿ.ಎಂ.ಶ್ರೀ. ಅವರು ಅಂಶಚ್ಛಂದಸ್ಸು ಎಂದು ಹೆಸರು ಕೊಟ್ಟಿರುವ, ತ್ರಿಮೂರ್ತಿಗಣಬಂಧ ಎಂದು ಸೇಡಿಯಾಪು ಅವರು ಗುರುತಿಸಿರುವ, ತ್ರಿಪದಿ ಸಾಂಗತ್ಯ ಮೊದಲಾದ ಬಂಧಗಳನ್ನು ಅದರ ಮೂಲ ಲಕ್ಷಣವನ್ನು ಗಮನಿಸಿ ಕರ್ಷಣಜಾತಿ ಎಂಬ ಹೆಸರೇ ಸೂಕ್ತ ಎಂದು ತೋರಿಸುತ್ತಾರೆ. ಹಾಗೆಯೇ ೩+೫ ಮಾತ್ರೆಗಳ ಗತಿಯನ್ನು ಸೇಡಿಯಾಪು ಅವರು ಸಂಕಲಿತ ಮಧ್ಯಾವರ್ತಗತಿ ಎಂದು ಹೇಳಿದ್ದರೂ ಅದರಲ್ಲಿ ಎರಡು ಗಣಗಳ ಮಧ್ಯದಲ್ಲಿರುವ ಗುರು-ಅಕ್ಷರ ಹೇಗೆ ಅದರ ಗತಿಯನ್ನು ಸರಿದೂಗಿಸುತ್ತದೆ ಎಂದು ತೋರಿಸುತ್ತಾ ಅದಕ್ಕೆ ಸಂತುಲಿತ ಮಧ್ಯಾವರ್ತಗತಿ ಎಂಬ ಹೆಸರು ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದು ಹೇಳುತ್ತಾರೆ.
ಪ್ರವೇಶಿಕೆಯಲ್ಲಿ ಈ ತರಹದ ಅನೇಕ ಮೂಲಭೂತವಾದ ಅಂಶಗಳ ಜೊತೆಗೆ ಅಕ್ಷರಜಾತಿಯ ಗಣಗಳನ್ನು ಯ-ಮ-ತ-ರ-ಜ-ಭ-ನ-ಸ ಎಂಬ ಎಂಟು ಗಣಗಳನ್ನು ಅವುಗಳ ಗತಿಸ್ವರೂಪಕ್ಕೆ ಅನುಗುಣವಾಗಿ ಆರೋಹ-ಅವರೋಹ-ಪ್ಲುತಿ ಮೊದಲಾದ ರೀತಿಯಲ್ಲಿ ವಿಂಗಡಿಸುತ್ತಾರೆ. ಇದು ಕವಿಯಾಗುವವರಿಗೂ ಕಾವ್ಯಾಸ್ವಾದವನ್ನು ಮಾಡುವವರಿಗೂ ಒಂದು ರೀತಿಯಲ್ಲಿ ವೃತ್ತೌಚಿತ್ಯವನ್ನು ಕಂಡುಕೊಳ್ಳಲು ಬಹಳ ಉಪಯುಕ್ತ ಮಾಹಿತಿ. ಏಕೆಂದರೆ ಗುರು-ಲಘುಗಳು ಎಷ್ಟಿದ್ದರೆ ಹೇಗಿದ್ದರೆ ಯಾವ ಗಣವೆಂದು ಲೆಕ್ಕದ ಮೂಲಕ ನೋಡುವುದನ್ನು ವಿದ್ಯಾರ್ಥಿದಶೆಯಲ್ಲಿ ಎಲ್ಲರೂ ಕಲಿತಿರುತ್ತಾರೆ. ಆದರೆ ಯಾವ ಗಣದ ಸ್ವಭಾವ ಯಾವ ರೀತಿ, ಅದು ಯಾವ ಭಾವಕ್ಕೆ ಪೂರಕವಾಗಿ ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಾದಾಗ ಕಾವ್ಯದ ಸ್ವಾರಸ್ಯವನ್ನು ತಿಳಿಯಲು ಇನ್ನಷ್ಟು ಸಾಧ್ಯತೆಗಳನ್ನು ಕಾಣಿಸುತ್ತದೆ.
ಹಿಂದಿನವರೆಲ್ಲ ಹೇಳಿದ ಯತಿಯೆಂಬುದುಸಿರ್ದಾಣಂ ಎಂಬುದೇ ಮೊದಲಾದ ಲಕ್ಷಣವನ್ನು ನಿರಾಕರಿಸದೆಯೇ, ಅದರಲ್ಲಿ ಇನ್ನೂ ಸೂಕ್ಷ್ಮವಾಗಿ ಸೇಡಿಯಾಪು ಅವರ ಕಾಣ್ಕೆಗೆ ಅನುಸಾರವಾಗಿ ವಿತಾನ ಬಂಧಗಳಲ್ಲಿ ಯತಿ ಎಂಬುದು ಎರಡು ವಿಭಿನ್ನ ಗತಿಗಳ ವರ್ಣಘಟಕಗಳ ಸಂಧಿಸ್ಥಾನ ಎಂದೂ ಮತ್ತಷ್ಟು ನಿಷ್ಕರ್ಷೆಯಿಂದ ತೋರಿಸುತ್ತಾರೆ.
ಪ್ರಾಸ: ಒಂದು ವಿವೇಚನೆ ಎಂಬ ಲೇಖನದಲ್ಲಿ ಆದಿಪ್ರಾಸ, ಅಂತ್ಯಪ್ರಾಸ ಹಾಗೂ ಅನುಪ್ರಾಸಗಳೆಂಬ ಮೂರೂ ಬಗೆಗಳಲ್ಲಿ ಆದ ಅನೇಕ ಪ್ರಯೋಗಗಳು, ಅವುಗಳಲ್ಲಿರುವ ಸೌಂದರ್ಯಸ್ವಾರಸ್ಯಗಳು, ಹಾಗೂ ಅವುಗಳ ಮಹತ್ತ್ವ ವಿಸ್ತರಿಸಲ್ಪಟ್ಟಿದೆ. ಆದಿಪ್ರಾಸ ಪದ್ಯದ ಎತ್ತುಗಡೆಗೆ ಹೇಗೆ ಒಂದು ವೈಶಿಷ್ಟ್ಯವನ್ನು ಕೊಡುತ್ತದೆ ಎಂದೂ, ಅಂತ್ಯಪ್ರಾಸದಲ್ಲಿ ಯಾವುದು ಕನಿಷ್ಠಪ್ರಮಾಣ, ಯಾವ ರೀತಿಯಲ್ಲಿ ಬಳಸಿದರೆ ಅದರ ಸ್ವಾರಸ್ಯಕ್ಕೆ ಕುಂದಾಗುತ್ತದೆ ಎಂದು ಉದಾಹರಣೆಗಳ ಜೊತೆಗೆ ತೋರ್ಪಡಿಸಿದ್ದಾರೆ. ಈ ಲೇಖನ ತೀನಂಶ್ರೀ ಅವರು ಹೇಳಿದ ಆದಿಪ್ರಾಸ ಗರತಿ, ಅಂತ್ಯಪ್ರಾಸ ಗಣಿಕೆ, ಅನುಪ್ರಾಸ ಗೆಳತಿ ಎಂಬುದರ ವ್ಯಾಖ್ಯಾನವೇ ಆಗಿದೆ – ಎಂದು ಸರಸವಾಗಿ ಈ ಲೇಖನವನ್ನು ಮುಗಿಸುತ್ತಾರೆ.
ಸೀಸಪದ್ಯ ಮತ್ತು ಸಾನೆಟ್: ಪದ್ಯಶಿಲ್ಪ ವಿವೇಚನೆ ಎಂಬ ಲೇಖನದಲ್ಲಿ ಈ ಎರಡೂ ಛಂದಸ್ಸುಗಳು ಬೆಳೆದು ಬಂದ ಇತಿಹಾಸ, ಅದಕ್ಕೆ ಕನ್ನಡ ತೆಲುಗು ಎರಡೂ ಭಾಷೆಗಳ ಸಾಹಿತ್ಯದಲ್ಲಿ ದೊರೆತ ಸ್ಥಾನ, ಪಾಶ್ಚಾತ್ಯಪ್ರಭಾವದಿಂದ ಬಂದ ಸಾನೆಟ್ಟಿಗೆ ಸೀಸಪದ್ಯ ಹೇಗೆ ಸಂವಾದಿಯಾಗಿ ನಮ್ಮ ಪರಂಪರೆಯಲ್ಲಿ ನಿಂತಿದೆ, ಸೀಸಪದ್ಯದ ಸ್ಥಾನಕ್ಕೆ ಕನ್ನಡದಲ್ಲಿ ಷಟ್ಪದಿಗಳು ಬಂದುದರ ಪರಿಣಾಮ, ತೆಲುಗಿನಲ್ಲಿ ಸೀಸಪದ್ಯದ ಬಲ, ಅಲ್ಲಿ ಷಟ್ಪದಿಗಳು ಕಾಣಿಸಿಕೊಳ್ಳದಿರುವುದಕ್ಕೆ ಕಾರಣ, ಸಾನೆಟ್ಗಿಂತ ಸೀಸಪದ್ಯದಲ್ಲಿ ಇರುವ ವೈವಿಧ್ಯದ ಅವಕಾಶ ಇತ್ಯಾದಿ ಅನೇಕ ಅಂಶಗಳೂ ಸೂಕ್ಷ್ಮಗಳೂ ಈ ಸುದೀರ್ಘ ಲೇಖನದಲ್ಲಿ ಚರ್ಚಿಸಲ್ಪಟ್ಟಿವೆ. ಸಾನೆಟ್ಟಿನ ಕೊನೆಯ ಎರಡು ಪಾದಗಳಲ್ಲಿ ಭಾವದ ಪರಿವರ್ತನೆಯನ್ನು ತೋರಿಸುವಂತೆಯೇ ಸೀಸಪದ್ಯದಲ್ಲಿ ಎತ್ತುಗೀತಿಯ ಭಾಗ ಹೇಗೆ ಪರಿಣಾಮಕಾರಿಯಾದ ಅವಕಾಶವನ್ನು ಕೊಡುತ್ತದೆ ಎಂದು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ. ಕೊನೆಯಲ್ಲಿ ಓದುಗರಿಗೆ ಹೀಗೆ ಹೊಸ ಅಭಿವ್ಯಕ್ತಿಗಾಗಿ ಬೇರೆ ಸಂಸ್ಕೃತಿಯಿಂದ ಬಂದು ಹೋಗುವುದೂ ಪ್ರಾಯೋಗಿಕವಾಗಿ ನಡೆಯುತ್ತದೆಯಾದರೂ ಅವುಗಳ ಸಾರಾಸಾರವನ್ನು ನೋಡಿ, ತಲಸ್ಪರ್ಶಿಯಾದ ಮೀಮಾಂಸೆಯ ಮಟ್ಟದಲ್ಲಿ ವಿವೇಚನೆ ಆಗಬೇಕು. ಅದರ ಮಥಿತಾರ್ಥವನ್ನು ಕವಿ-ವಿಮರ್ಶಕರು ತಮ್ಮ ಮುಂದಿನ ಪ್ರಕಲ್ಪಗಳಲ್ಲಿ ಅನ್ವಯಿಸಿಕೊಳ್ಳಬೇಕು ಎಂಬ ಕಿವಿಮಾತನ್ನೂ ಹೇಳುತ್ತಾರೆ.
ಮುಂದಿನ ಅನುಷ್ಟುಪ್ ಶ್ಲೋಕದ ರಚನಾಶಿಲ್ಪ ಎಂಬ ಲೇಖನವಂತೂ ಕೇವಲ ಮೂವತ್ತೆರಡು ಅಕ್ಷರಗಳ ಅನುಷ್ಟುಪ್ ಎಂಬ ಕಿರಿದಾದ ಮೂರ್ತಿಯ ವಿಶ್ವರೂಪವನ್ನೇ ತೋರಿಸುವಂತಹ ಅಸಾಮಾನ್ಯವಾದ ಲೇಖನವಾಗಿದೆ. ಸಂಸ್ಕೃತಸಾಹಿತ್ಯದಲ್ಲಿ ವೈದಿಕವಾಙ್ಮಯದಿಂದ ಮೊದಲಾಗಿ ವಿಪುಲವಾಗಿ ಕಾಣುವ ಈ ಅನುಷ್ಟುಪ್ ಛಂದಸ್ಸಿನ ಪ್ರತಿ ಪಾದದಲ್ಲಿ ಎಂಟು ಅಕ್ಷರಗಳಲ್ಲಿ ಮೂರಕ್ಕೆ ಮಾತ್ರ ಹಿಂದಿನ ಶಾಸ್ತ್ರಕಾರರು ನಿಯಮವನ್ನು ನಿರೂಪಿಸಿದ್ದಾರೆ. ಹಾಗಿದ್ದರೂ ಅವುಗಳೂ ಬೇರೆ ರೀತಿಯಲ್ಲಿ ಬರುವ ಪ್ರಯೋಗಗಳೂ ಕಾಣುತ್ತವೆ. ಈ ಲೇಖನವು ಅದರ ಪರಿಷ್ಕೃತಲಕ್ಷಣ, ಅತ್ಯುತ್ತಮವಾದ ಗತಿಸಾಧ್ಯತೆಗಳು ಯಾವುವು, ಆ ಗತಿಸಾಧ್ಯತೆಗಳು ಹೇಗೆ ಸೌಂದರ್ಯಕ್ಕೆ ಪೂರಕವಾಗಿವೆ, ಯಾವ ರೀತಿಯಲ್ಲಿ ಬಂದಾಗ ಅನುಷ್ಟುಪ್ ಲಕ್ಷಣಕ್ಕೆ ಪೂರಕವಾಗಿದ್ದರೂ ಸೌಂದರ್ಯಕ್ಕೆ ಕುಂದಾಗುತ್ತದೆ ಎಂಬ ಅನೇಕ ಸ್ವಾರಸ್ಯಗಳನ್ನು ವಿಸ್ತಾರವಾಗಿ ಹಿಡಿದಿಟ್ಟಿದೆ. ಅಲ್ಲದೆ ಕನ್ನಡದಲ್ಲಿ ಈ ಛಂದಸ್ಸು ಬೆಳೆದ ಬಗೆಯನ್ನೂ, ಅದು ಹೆಚ್ಚಾಗಿ ಬೆಳೆಯಲು ತೊಡಕಾಗಿರುವ ಅಂಶಗಳನ್ನೂ ವಿಶದವಾಗಿ ತೋರಿಸುತ್ತದೆ.
ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ ಹಾಗೂ ಆರ್ಯಾಪ್ರಭೇದಗಳ ಗತಿ ವಿವೇಚನೆ ಎಂಬ ಎರಡು ಲೇಖನಗಳಲ್ಲಿ ಹಲವು ದೃಷ್ಟಿಕೋನಗಳಿಂದ ಆ ಛಂದಸ್ಸುಗಳ ಗತಿಯ ಸೌಂದರ್ಯವನ್ನು ಹಾಗೂ ಅವುಗಳಿಗೆ ಸಮೀಪವರ್ತಿಯಾದ ಛಂದಸ್ಸುಗಳ ಜೊತೆಗಿನ ಸಂಬಂಧವನ್ನೂ, ಆರ್ಯಾ-ಆರ್ಯಾಗೀತಿ-ಕಂದಪದ್ಯಗಳ ಬೆಳವಣಿಗೆ, ಮಾತ್ರಾಜಾತಿಗಳ ಸೌಂದರ್ಯ, ದುರ್ಬಲಯತಿಯುಳ್ಳ ವೃತ್ತಗಳಲ್ಲಿ ಯತಿಸ್ಥಾನವನ್ನು ಎಲ್ಲಿ ಸ್ಪಷ್ಟಪಡಿಸಿಕೊಂಡರೆ ಹೆಚ್ಚು ಸೂಕ್ತವಾಗಬಹುದು ಎಂಬುದನ್ನು – ಹೀಗೆ ಅನೇಕ ವಿಷಯಗಳನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ. ವರ್ಣವೃತ್ತಗಳಲ್ಲಿ ಇಷ್ಟೇ ಅಕ್ಷರಗಳಿರಬೇಕೆಂಬುದು ನಿಯಮ. ಕೆಲವು ವೃತ್ತಗಳು ಒಂದೇ ಬಗೆಯ ಗಣಗಳ ಪುನರಾವರ್ತನೆಯಿಂದ ಮಾತ್ರಾಗತಿಯನ್ನು ಪಡೆದು ಸತಾನವೃತ್ತಗಳಾಗಿವೆ. ಹಾಗಲ್ಲದೆ ಬೇರೆ ಬೇರೆಯ ಗಣಗಳ ಮಿಶ್ರಣದಿಂದ ಉಂಟಾದ ವಿತಾನವೃತ್ತಗಳಲ್ಲಿ ಯಾವ ರೀತಿಯ ಘಟಕಗಳಾಗಿ ನೋಡಬಹುದು, ಅವುಗಳ ಗತಿಯಿಂದ ಯಾವ ಬಗೆಯ ಭಾವ ಸ್ಫುರಿಸುವುದಕ್ಕೆ ಅನುಕೂಲವಾಗಿದೆ, ಒಂದು ಗುರುವಿನ ಸ್ಥಾನ ಎರಡು ಲಘುಗಳಾಗಿ ಒಡೆದುಕೊಂಡು ಯಾವ ಬಗೆಯಲ್ಲಿ ಆ ಹೊಸ ಛಂದಸ್ಸು ಬೇರೆಯದಾದ ನಡೆಯನ್ನು ಹೊಂದಿ ವೈಶಿಷ್ಟ್ಯವನ್ನು ಪಡೆದುಕೊಂಡಿದೆ ಎಂಬಂತಹ ಅನೇಕ ವಿಚಾರಗಳನ್ನು ಪ್ರಸ್ತುತಪಡಿಸಿದ್ದಾರೆ. ಪಂಪ ಮೊದಲಾದ ಕವಿಗಳಲ್ಲಿ ವಿರಳವಾಗಿ ಪ್ರಯುಕ್ತವಾಗಿ ಕಾಲಕ್ರಮೇಣ ಕವಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಕನ್ನಡದಲ್ಲಿ ಮರೆಯೇ ಆಗಿಹೋದಂತಹ ವೃತ್ತದ ಗತಿಯನ್ನೂ ಉಳಿದ ಅದರ ಸಮೀಪವರ್ತಿ ಸಂಬಂಧಿಯಾದ ವೃತ್ತಗಳಿಗೆ ಹೋಲಿಸಿ ಯಾವುದು ಹೇಗೆ ಯುಕ್ತವಾಗಿದೆ ಎಂಬ ಅಂತರ್ದೃಷ್ಟಿಯನ್ನೂ ಕೊಡುವಂತಹ ವಿಶೇಷಾಂಶಗಳು ಈ ಲೇಖನದಲ್ಲಿ ಸಾಕಷ್ಟಿವೆ.
ವಂಶಸ್ಥ ವೃತ್ತದ ಐದನೇ ಗುರು ಎರಡು ಲಘುಗಳಾಗಿ ರುಚಿರಾ ಎಂಬ ಹೊಸ ವೃತ್ತವೊಂದು ಹುಟ್ಟಿಕೊಂಡದ್ದನ್ನು ವಿವರಿಸುವಾಗ ಲೇಖಕರು ಪ್ರಸ್ತುತಪಡಿಸಿದ ಅಂಶವನ್ನು ಹೀಗೆ ಸಂಗ್ರಹವಾಗಿ ನೋಡಬಹುದು –
ವಂಶಸ್ಥ: U_U_ [ _ ] UU_U_U_
ರುಚಿರಾ: U_U_ [UU] UU_U_U_
ಈ ಮಾರ್ಪಾಟು ಮೇಲ್ನೋಟಕ್ಕೆ ಸಣ್ಣದೆಂದೆನಿಸಿದರೂ ಪರಿಣಾಮ ಮಾತ್ರ ದೊಡ್ಡದು. ಏಕೆಂದರೆ ಇದರಿಂದ ನಾಲ್ಕು ಲಘುಗಳು ಅವ್ಯವಹಿತವಾಗಿ ಬರುವಂತಾಗಿದೆ. ಇದು ಸಂಸ್ಕೃತದಂತಹ ಭಾಷೆಯ ಸಹಜವಾದ ಪದಪದ್ಧತಿಗೆ ಪೂರ್ಣವಾಗಿ ಒಗ್ಗದ ನಡೆ. ಈ ನಾಲ್ಕು ಲಘುಗಳು ತಮ್ಮ ಗತಿಭಿನ್ನತೆಯ ಕಾರಣ ಯತಿಸ್ಥಾನವನ್ನು ತಮಗಿಂತ ಮುನ್ನ ಬರುವಂತೆ ಮಾಡಿವೆ (ಲೇಖಕರು ಹಿಂದೆಯೇ ಯತಿ ಎಂಬುದು ವಿಭಿನ್ನ ಗತಿಗಳ ಸಂಧಿಸ್ಥಾನ ಎಂದು ಉಲ್ಲೇಖಿಸಿದ್ದನ್ನು ಗಮನಿಸಬಹುದು) – ಹೀಗೆ ವಂಶಸ್ಥದಲ್ಲಿ ದುರ್ಬಲವಾಗಿ ತೋರುತ್ತಿದ್ದ ಯತಿ ರುಚಿರಾ ವೃತ್ತದಲ್ಲಿ ನಾಲ್ಕನೆಯ ಅಕ್ಷರದ ಬಳಿಕವೇ ಕಾಣಿಸಿಕೊಂಡು ಪ್ರಬಲವೂ ಆಗಿದೆ. ಹೀಗೆ ಪ್ರಬಲಯತಿಯುಳ್ಳ ಲಘುಗಾತ್ರದ ವೃತ್ತವಾಗಿರುವ ಕಾರಣ ಕೆಲವರು ವಿದ್ವತ್ಕವಿಗಳು ಮಾತ್ರ ಬಳಸಿದ್ದಾರಲ್ಲದೆ ಸ್ಮರಣೀಯವಾದ ಪದ್ಯಗಳಿಲ್ಲವೆಂಬುದನ್ನು ನೆನೆದಾಗ ಈ ವೃತ್ತನಿರ್ವಾಹದ ಭಾರದಿಂದ ಕವಿಗಳ ಪ್ರತಿಭೆ ಕುಸಿದಿರುವುದನ್ನು ಕಾಣಬಹುದು ಎಂದು ಹೇಳುತ್ತಾರೆ. ಅಲ್ಲದೆಯೆ ಕನ್ನಡದಲ್ಲಿ ಆದಿಪ್ರಾಸದ ತೊಡಕಿರುವುದರಿಂದ ಇಂತಹ ಎಷ್ಟೋ ಚಿಕ್ಕ ವೃತ್ತಗಳು ಕನ್ನಡಕ್ಕೆ ಒದಗಿಬರಲಿಲ್ಲ – ಎಂಬಂತಹ ಸೂಕ್ಷ್ಮವನ್ನೂ ಕಾಣಿಸುತ್ತಾರೆ.
ಛಂದೋವಿನಿಯೋಗ ಎಂಬ ಭಾಗದಲ್ಲಿ ಈ ಕೃತಿಯ ಪ್ರಯೋಜನವನ್ನೂ ವಿಸ್ತರಿಸಿ ಹೇಳಿದ್ದಾರೆ. ಯಾವ ರಸಗಳಿಗೆ ಪೂರಕವಾಗಿ ಯಾವ ಛಂದಸ್ಸುಗಳನ್ನು ಬಳಸುವುದು ಯುಕ್ತ, ಪ್ರಾಚೀನ ಆಲಂಕಾರಿಕರ ಅಭಿಮತವೇನು, ವೃತ್ತವಿನಿಯೋಗದಲ್ಲಿ ಕವಿ ಹೇಗೆ ವಿವೇಕಿಯಾಗಿರಬೇಕು ಎಂಬುದನ್ನು ಹೇಳುತ್ತಾ ಔಚಿತ್ಯವಿಲ್ಲದ ಛಂದಸ್ಸುಗಳನ್ನು ಬಳಸಿ ಕಾವ್ಯಪುರುಷನಿಗೆ ಬೊಜ್ಜನ್ನು ಉಂಟುಮಾಡಬಾರದು, ಹಾಗೆಂದು ಉಪವಾಸ ಕೆಡವಿ ಸೊರಗಿಸಲೂ ಬಾರದು ಎಂದು ಹೇಳುತ್ತಾರೆ. ಜೊತೆಗೆ ಹೊಸತನ್ನು ಹುಡುಕುವ ಮನೋಭಾವದವರಿಗೆ ನೂತನ ಛಂದಸ್ಸುಗಳ ಆವಿಷ್ಕಾರದ ಸಾಧ್ಯತೆಯನ್ನು ಕುರಿತೂ ಅಲ್ಲಿ ಗಮನಿಸಿಕೊಳ್ಳಬೇಕಾದ ಅಂಶಗಳನ್ನು ಕುರಿತೂ ಹೇಳುತ್ತಾರೆ.
ರಾಗ ಮತ್ತು ಛಂದಸ್ಸುಗಳ ನೇಪಥ್ಯದಲ್ಲಿ ನಾದಸೌಂದರ್ಯ ಹಾಗೂ ಗತಿಸೌಂದರ್ಯ – ಎಂಬ ಲೇಖನದಲ್ಲಿ ಸಂಗೀತದ ರಾಗಗಳನ್ನೂ ಸಾಹಿತ್ಯದ ಛಂದಸ್ಸನ್ನೂ ಅಕ್ಕ-ಪಕ್ಕದಲ್ಲಿ ಇಟ್ಟು ಎರಡರ ಸೌಂದರ್ಯಮೀಮಾಂಸೆಯನ್ನು ಮಾಡಿರುವುದು ವಿಶಿಷ್ಟವಾಗಿದೆಯಲ್ಲದೆ ಎರಡೂ ಕಲೆಗಳ ಸೌಂದರ್ಯದ ಅಂತರಂಗವನ್ನು ಹಿಡಿದಿಡುವಂತಹ ವಿಶೇಷಲೇಖನವಾಗಿದೆ. ಇಲ್ಲಿಯೂ ಹಲವು ಬಗೆಯ ಛಂದಸ್ಸುಗಳ ಕುರಿತು, ರಾಗಗಳ ಕುರಿತು, ಎರಡರಲ್ಲೂ ಸಂವಾದಿಯಾಗಿ ಬರುವ ಅಂಶಗಳನ್ನು ಕುರಿತು ಚರ್ಚಿಸುತ್ತಾರೆ.
ಸೇಡಿಯಾಪು ಕೃಷ್ಣಭಟ್ಟರು ಛಂದಸ್ಸಿನ ಸೌಂದರ್ಯವನ್ನು ತಿಳಿಸುವ ಅನೇಕಾಂಶಗಳನ್ನು ಕುರಿತು, ಹಾಗೆಯೇ ಛಂದಸ್ಸಿನ ಗತಿಯನ್ನು ಕುರಿತು ವಿಸ್ತಾರವಾಗಿ ಛಂದೋಗತಿ ಎಂಬ ಪುಸ್ತಕವನ್ನು ಬರೆದಿದ್ದಾರೆ. ಶತಾವಧಾನಿ ಡಾ. ಆರ್. ಗಣೇಶ್ ಅವರು ಬರೆದ ಈ ಛಂದೋವಿವೇಕ ಎಂಬ ಈ ಕೃತಿಯಲ್ಲಿ ಅಲ್ಲಿ ಚರ್ಚಿಸಿದ ಕೆಲವು ಅಂಶಗಳನ್ನೂ ಇನ್ನಷ್ಟು ವಿಸ್ತರಿಸಿದ್ದಾರೆ. ಅಲ್ಲಿ ಹೇಳಿಲ್ಲದ ಹೊಸ ಹೊಳಹುಗಳನ್ನು ತೋರಿಸುವ ಅನೇಕ ಅಂಶಗಳನ್ನು ಇದರಲ್ಲಿ ಪ್ರಸ್ತುತಪಡಿಸಿದ್ದಾರೆ. ಹೀಗೆ ಛಂದೋವಿವೇಕವು ಛಂದೋಗತಿಯ ಮುಂದುವರಿದ ಭಾಗ ಎಂದು ಹೇಳಬಹುದು. ಇಂತಹ ಮಹತ್ತರವಾದ ಕೃತಿಯನ್ನು ರಚಿಸಿದ ಆರ್. ಗಣೇಶ್ ಅವರು ಅದನ್ನು ಸೇಡಿಯಾಪು ಕೃಷ್ಣಭಟ್ಟರ ಪುಣ್ಯಸ್ಮೃತಿಗೆ ಸಮರ್ಪಿಸಿರುವುದು ಸಮುಚಿತವಾಗಿದೆ.
ಬಹುಭಾಷಾವಿದರಾದ ಶತಾವಧಾನಿ ಡಾ. ಆರ್. ಗಣೇಶ್ ಅವರು ಈ ಕೃತಿಯನ್ನು ಬರೆಯುವಲ್ಲಿ ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಪಾಳಿ, ಪ್ರಾಕೃತ, ತುಳು, ಇಂಗ್ಲಿಷ್ ಮೊದಲಾದ ಭಾಷೆಗಳ ಸುಮಾರು ನೂರ ಎಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪರಾಮರ್ಶಿಸಿದ್ದಾರೆ. ಪ್ರತಿಯೊಂದು ಲೇಖನದಲ್ಲಿಯೂ ಸುಲಭಗ್ರಾಹ್ಯವಲ್ಲದ ವಿಷಯಗಳಿಗೆ ಸಾಕಷ್ಟು ಅಡಿಟಿಪ್ಪಣಿಗಳನ್ನು ಕೊಟ್ಟು ಇನ್ನಷ್ಟು ವಿಸ್ತರಿಸಿದ್ದಾರೆ. ಹಲವು ಕಡೆಗಳಲ್ಲಿ ಅವರು ತೋರಿಸಿದ ದಾರಿ ಇನ್ನೆಷ್ಟೋ ಸಂಶೋಧನಪ್ರಬಂಧಗಳನ್ನು ರಚಿಸುವವರಿಗೂ ಪಥಪ್ರದರ್ಶಕವಾಗುವಂತಿದೆ. ಎಲ್ಲ ಬಗೆಯ ಛಂದಸ್ಸುಗಳಿಗೂ ರಸಮಯವಾದ ಪದ್ಯಗಳನ್ನು ಉದಾಹರಣೆಯಾಗಿ ಕೊಟ್ಟಿದ್ದಾರೆ. ಹೀಗೆ ಈ ಛಂದೋವಿವೇಕ ಕೃತಿ ಬಹಳ ಪ್ರೌಢವಾಗಿದ್ದು, ಛಂದಸ್ಸಿನ ಕುರಿತ ಆಳವಾದ ಚಿಂತನೆಯ ವಿಷಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಇದು ಕನ್ನಡದಲ್ಲಿ ಬಂದಿದ್ದರೂ ಕನ್ನಡಭಾಷೆಗಷ್ಟೇ ಸೀಮಿತವಾಗದೆ ಛಂದೋಮಯವಾದ ಪದ್ಯರಚನೆಯುಳ್ಳ ಎಲ್ಲ ಭಾಷೆಗಳಿಗೂ ಅನ್ವಯವಾಗುವಂತಹದ್ದಾಗಿದೆಯೆಂಬುದು ನಿಸ್ಸಂಶಯ.