ಹಿಂದು ಎಂದರೆ ಏನು/ಯಾರು? ಹಿಂದುತ್ವ ಎಂದರೇನು? – ಇದು ಸರಿಯಾಗಿ ಉತ್ತರ ಸಿಗದ ಅಥವಾ ಅನೇಕ ಉತ್ತರಗಳನ್ನು ಕೊಡುವ ಅಥವಾ ಅಪವ್ಯಾಖ್ಯಾನಕ್ಕೊಳಗಾದ ಸಂಗತಿ. ಸಾವರಕರರಿಂದ ಆರ್ಎಸ್ಎಸ್ನ ಇಂದಿನ ಸರಸಂಘಚಾಲಕರವರೆಗೆ ಅನೇಕ ಮಹನೀಯರು ಹಿಂದು-ಹಿಂದುತ್ವದ ವ್ಯಾಖ್ಯೆಯನ್ನು ಅರ್ಥೈಸುವ, ಅದರ ವ್ಯಾಪ್ತಿಯನ್ನು ನಿರ್ದೇಶಿಸುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ನ್ಯಾಯಾಲಯಗಳೂ ಯತ್ನಿಸಿವೆ. ಲೇಖಕರು ಹೇಳುವಂತೆ ‘ಅದು ಒಂದು ಜೀವನವಿಧಾನ’ ಎಂದಷ್ಟೆ ಹೇಳಿದರೆ ಸ್ಪಷ್ಟತೆ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಹಿಂದುಗಳ ಸಾಮಾನ್ಯ ಗುಣಲಕ್ಷಣಗಳಲ್ಲಿ ಹತ್ತೊಂಭತ್ತು ಅಂಶಗಳನ್ನು ಲೇಖಕರು ಪಟ್ಟಿ ಮಾಡುತ್ತಾರೆ. ಆ ಮೂಲಕ ಹಿಂದುತ್ವದ ವೈಶಿಷ್ಟ್ಯ/ಭಿನ್ನತೆಯನ್ನು ಗುರುತಿಸುವ ಪ್ರಯತ್ನವನ್ನು ಮಾಡುತ್ತಾರೆ.
ಬಹುವಚನಕ್ಕೊಂದೇ ತತ್ತ್ವ
ಏಕತ್ವ-ಅನೇಕತ್ವಗಳ ಹಿಂದುತ್ವ
ಲೇಖಕರು: ಅಜಕ್ಕಳ ಗಿರೀಶ ಭಟ್
ಪ್ರಕಾಶಕರು: ಸಾಹಿತ್ಯ ಪ್ರಕಾಶನ
ಕೊಪ್ಪೀಕರ್ ಬೀದಿ,
ಹುಬ್ಬಳ್ಳಿ – ೫೮೦ ೦೨೦
ಪುಟಗಳು: ೧೭೬
ಗಾತ್ರ: ೧/೮ ಡೆಮಿ
ಬೆಲೆ: ರೂ. ೧೬೦/-
ಸಂಪರ್ಕ: ೯೪೪೮೧ ೧೦೦೩೪
ಹಿಂದು, ಹಿಂದುತ್ವ, ಸನಾತನ ಭಾರತೀಯ ಸಂಪ್ರದಾಯ – ಇವೆಲ್ಲ ಸಂಕುಚಿತ ದೃಷ್ಟಿಯ, ಬಹುತ್ವವಿರೋಧಿ, ಪ್ರತಿಗಾಮೀ ಮತ್ತು ಕೋಮುವಾದಿ ವಿಚಾರಗಳು – ಇದು ತಮ್ಮನ್ನು ತಾವೇ ಪ್ರಗತಿಪರ ಚಿಂತಕರು ಎಂದು ಕರೆದುಕೊಳ್ಳುವ ಲೆಫ್ಟ್-ಲಿಬರಲ್-ಸೆಕ್ಯುಲರ್ ಗುಂಪಿನ ಆಪಾದನೆ. ಹಾಗೆಂದು ಇಂತಹ ಆಪಾದನೆಗಳ ಹಿಂದೆ ತಾರ್ಕಿಕ ವಿಚಾರಸರಣಿ ಇದೆ ಎಂದೇನೂ ಇಲ್ಲ. ಅಂಥವರು ಹಿಂದುತ್ವ-ಬಹುತ್ವಗಳ ಕುರಿತು ಆಳವಾಗಿ ತಿಳಿದುಕೊಂಡವರೇನೂ ಅಲ್ಲ. ಬಹುತೇಕ ಸಂದರ್ಭಗಳಲ್ಲಿ ಯಾವುದೋ ಹಿತಾಸಕ್ತಿಗಳು ಇವುಗಳ ಹಿಂದೆ ಕಾರ್ಯ ಮಾಡುತ್ತಿರುತ್ತವೆ. ಆದರೆ ಇಂತಹ ಆರೋಪಗಳು ಹೀಗಳಿಕೆ-ತೆಗಳಿಕೆಗಳ ಎಲ್ಲೆಯನ್ನು ಮೀರಿ ಪರಂಪರೆಯ ನೆಲಗಟ್ಟನ್ನೇ ಅಲುಗಾಡಿಸತೊಡಗಿದಾಗ ಅವನ್ನು ತರ್ಕಬದ್ಧ ಪ್ರತ್ಯುತ್ತರದ ಮೂಲಕ ಹಿಮ್ಮೆಟ್ಟಿಸುವುದು ಅನಿವಾರ್ಯವಾಗುತ್ತದೆ.
ಹಾಗಾದರೆ ಹಿಂದೂ-ಹಿಂದುತ್ವ ಎಂದರೆ ಏನು? – ಎನ್ನುವ ಪ್ರಶ್ನೆಗೆ ‘ಅದೊಂದು ಜೀವನಪದ್ಧತಿ’ ಎಂದು ಉತ್ತರಿಸಿಬಿಟ್ಟರೆ ಏನನ್ನೂ ಹೇಳಿದಂತೆ ಆಗುವುದಿಲ್ಲ. ಅದು ವಿಶೇಷತೆ-ಗುಣಲಕ್ಷಣ-ಭಿನ್ನತೆಗಳ ವಿವರಣೆಯನ್ನು ಬಯಸುವ ಪ್ರಶ್ನೆ. ಆದ್ದರಿಂದ ಕಾಲದ ಅಗತ್ಯಕ್ಕೆ ತಕ್ಕಂತೆ ನಮ್ಮ ನೆಲೆಯನ್ನು ತೌಲನಿಕ ಮಾರ್ಗದ ಮೂಲಕ ಸ್ಪಷ್ಟಪಡಿಸಿಕೊಳ್ಳುವುದೂ ಅವಶ್ಯವಾಗುತ್ತದೆ. ಇಂತಹ ಹಿಂದುತ್ವದ ತತ್ತ್ವವನ್ನು ವ್ಯಾವಹಾರಿಕ ನೆಲೆಯಲ್ಲಿ ವಿಶದಪಡಿಸುವ ಕಾರ್ಯವನ್ನು ಲೇಖಕ ಡಾ. ಅಜಕ್ಕಳ ಗಿರೀಶಭಟ್ ‘ಬಹುವಚನಕ್ಕೊಂದೇ ತತ್ತ್ವ: ಏಕತ್ವ-ಅನೇಕತ್ವಗಳ ಹಿಂದುತ್ವ’ ಎನ್ನುವ ಕೃತಿಯಲ್ಲಿ ಮಾಡಿದ್ದಾರೆ.
ಸಂಸ್ಕೃತಿ ಚಿಂತನೆ, ವೈಚಾರಿಕ ಸಾಹಿತ್ಯ ಕ್ಷೇತ್ರದಲ್ಲಿ ವಸ್ತುನಿಷ್ಠವಾಗಿ ಗ್ರಹಿಸುವ ವಿರಳಾತಿವಿರಳರಲ್ಲಿ ಓರ್ವರು ಡಾ. ಅಜಕ್ಕಳ ಗಿರೀಶಭಟ್. ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಅನೇಕ ಸರ್ಜನಶೀಲ ಸಾಹಿತ್ಯಕೃತಿಗಳ ರಚನೆಯ ಜೊತೆಗೆ ಹಲವಾರು ವೈಚಾರಿಕ ಲೇಖನಗಳನ್ನು ಬರೆದಿದ್ದಾರೆ, ಅವರ ಹಲವು ಪುಸ್ತಕಗಳು ಪ್ರಕಟವಾಗಿವೆ. ಭೈರಪ್ಪನವರ ‘ಆವರಣ’ ಕಾದಂಬರಿಯ ಹಿನ್ನೆಲೆಯಲ್ಲಿ ಅವರು ರಚಿಸಿದ ‘ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ’ ಸಾಹಿತ್ಯಲೋಕದ ಒಂದು ಉತ್ಕೃಷ್ಟ ವಿಮರ್ಶಾಕೃತಿಯಾಗಿದೆ.
ಯಾಕೀ ಈ ಹೊತ್ತಿಗೆ?
ಪ್ರಸಕ್ತ ಗ್ರಂಥದ ಪೀಠಿಕೆಯಲ್ಲಿ ‘ಈ ಹೊತ್ತಿಗೆ ಯಾಕೆ ಈ ಹೊತ್ತಿಗೆ?’ ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು ಗ್ರಂಥರಚನೆಯ ಹಿನ್ನೆಲೆಯನ್ನು ವಿವರವಾಗಿ ಚರ್ಚಿಸಲಾಗಿದೆ. ಸಾಮಾನ್ಯವಾಗಿ ಕೇಳಿಬರುವ ‘ಎಲ್ಲ ಧರ್ಮಗಳೂ ಒಳ್ಳೆಯದನ್ನೇ ಹೇಳಿವೆ’ ಎನ್ನುವ ಮಾತನ್ನು ಉಲ್ಲೇಖಿಸುತ್ತ, ಇದು ಒಳ್ಳೆಯದನ್ನು ಮಾತ್ರ ಹೇಳಬೇಕು ಎನ್ನುವ ಕಾಳಜಿ ಮತ್ತು ಭಾರತೀಯ ‘ಸನಾತನಿ ಹಿಂದುಗಳ’ ಮೂಲಭೂತ ಧೋರಣೆಯೇ ಎಂದು ಎನಿಸುತ್ತದೆ ಎಂದು ಲೇಖಕರು ಗುರುತಿಸುತ್ತಾರೆ. ಮುಂದುವರಿದು ‘ಎಲ್ಲ ಧರ್ಮಗಳು/ರಿಲಿಜನ್ನುಗಳು ಒಳ್ಳೆಯದನ್ನೇ ಹೇಳಿವೆ’ ಎನ್ನುವಾಗ, ‘ಎಷ್ಟೋ ಶತಮಾನಗಳ ಹಿಂದೆ ರಚಿತವಾದ ಗ್ರಂಥಗಳಲ್ಲಿ ಹೇಳಿದುದರ ವಿಮರ್ಶೆಯಾಗಬೇಕಾದುದೋ ಅಥವಾ ಆಯಾ ರಿಲಿಜನ್/ಧರ್ಮ/ಪಂಥದ ಅನುಯಾಯಿಗಳ ವರ್ತಮಾನದ ನಡವಳಿಕೆ ಮತ್ತು ಅವರು ತಮ್ಮ ತಮ್ಮ ಶಾಸ್ತ್ರ/ಗ್ರಂಥಗಳಿಗೆ ಎಷ್ಟರಮಟ್ಟಿಗೆ ನಿಷ್ಠರಾಗಿ ಅಂಟಿಕೊಂಡಿದ್ದಾರೆ ಎಂಬಿತ್ಯಾದಿ ಅಂಶಗಳ ವಿಮರ್ಶೆಯಾಗಬೇಕಾದುದೋ?’ ಎಂದು ಪ್ರಶ್ನಿಸುತ್ತ, ‘ಬಹುಸಂಸ್ಕೃತಿ’ಗಳು ಒಂದು ಸಮಾಜವಾಗಿ ಬದುಕುವ ದೇಶಕ್ಕೆ ವಿವಿಧ ರಿಲಿಜನ್/ಧರ್ಮ/ಪಂಥ/ಸಂಸ್ಕೃತಿಗಳ ಬಗ್ಗೆ ಒಂದು ಮಟ್ಟಿಗಿನ ತೌಲನಿಕ ಅರಿವು ಇರಬೇಕು ಎನ್ನುವ ಕಾರಣವನ್ನು ಈ ಗ್ರಂಥರಚನೆಗೆ ಹಿನ್ನೆಲೆಯಾಗಿ ನೀಡುತ್ತಾರೆ. ಅದು ಸೂಕ್ತವೂ ಆಗಿದೆ.
ಏನಿದು ಹಿಂದುತ್ವ?
ಹಿಂದು ಎಂದರೆ ಏನು/ಯಾರು? ಹಿಂದುತ್ವ ಎಂದರೇನು? – ಇದು ಸರಿಯಾಗಿ ಉತ್ತರ ಸಿಗದ ಅಥವಾ ಅನೇಕ ಉತ್ತರಗಳನ್ನು ಕೊಡುವ ಅಥವಾ ಅಪವ್ಯಾಖ್ಯಾನಕ್ಕೊಳಗಾದ ಸಂಗತಿ. ಸಾವರಕರರಿಂದ ಆರ್ಎಸ್ಎಸ್ನ ಇಂದಿನ ಸರಸಂಘಚಾಲಕರವರೆಗೆ ಅನೇಕ ಮಹನೀಯರು ಹಿಂದು-ಹಿಂದುತ್ವದ ವ್ಯಾಖ್ಯೆಯನ್ನು ಅರ್ಥೈಸುವ, ಅದರ ವ್ಯಾಪ್ತಿಯನ್ನು ನಿರ್ದೇಶಿಸುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ನ್ಯಾಯಾಲಯಗಳೂ ಯತ್ನಿಸಿವೆ. ಲೇಖಕರೇ ಹೇಳುವಂತೆ ‘ಅದು ಒಂದು ಜೀವನವಿಧಾನ’ ಎಂದಷ್ಟೆ ಹೇಳಿದರೆ ಸ್ಪಷ್ಟತೆ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಹಿಂದುಗಳ ಸಾಮಾನ್ಯ ಗುಣಲಕ್ಷಣಗಳಲ್ಲಿ ಹತ್ತೊಂಭತ್ತು ಅಂಶಗಳನ್ನು ಲೇಖಕರು ಪಟ್ಟಿ ಮಾಡುತ್ತಾರೆ. ಆ ಮೂಲಕ ಹಿಂದುತ್ವದ ವೈಶಿಷ್ಟ್ಯ/ಭಿನ್ನತೆಯನ್ನು ಗುರುತಿಸುವ ಪ್ರಯತ್ನವನ್ನು ಮಾಡುತ್ತಾರೆ. ಹಿಂದುಗಳ ಈ ಸಾಮಾನ್ಯ ಲಕ್ಷಣಗಳು, ಸುಪ್ರೀಂಕೋರ್ಟ್ ನೀಡಿರುವ ‘ಹಿಂದುತ್ವ ಎಂದರೆ ಒಂದು ಜೀವನವಿಧಾನ’ ಎನ್ನುವ ವ್ಯಾಖ್ಯಾನವೂ ಸೇರಿದಂತೆ, ವಿವೇಕಾನಂದರು, ರಾಜಾ ರಾಮಮೋಹನರಾಯ್ ಮೊದಲಾದವರು ಸನಾತನಧರ್ಮಕ್ಕೆ ಸಂವಾದಿಯಾಗಿ ‘ಹಿಂದು’ ಶಬ್ದವನ್ನು ಬಳಸಿದ್ದು, ‘ಹಿಂದುತ್ವ’ ಶಬ್ದವನ್ನು ಮೊದಲು ಬಳಸಿದ ಬಂಗಾಳಿ ಸಾಹಿತಿ ಚಂದ್ರನಾಥ ಬಸು, ಅನಂತರ ಸಾವರಕರ್ ಮೊದಲಾದವರು ನೀಡಿರುವ ಅರ್ಥವ್ಯಾಪ್ತಿಯನ್ನು ಉಲ್ಲೇಖಿಸಿ “ಹಿಂದುತ್ವದ ಪ್ರತಿಪಾದನೆಯೆಂದರೆ, ಹಿಂದುತ್ವದ ಗುಣಗಳನ್ನು ಉಳಿಸಿಕೊಳ್ಳಬೇಕೆಂಬುದರ ಪ್ರತಿಪಾದನೆ. ಅಧ್ಯಾತ್ಮದ ಸತ್ತ್ವವನ್ನೂ ಸ್ವಾತಂತ್ರ್ಯವನ್ನೂ ಉಳಿಸಿಕೊಳ್ಳಬೇಕೆಂಬುದರ ಪ್ರತಿಪಾದನೆ. ಏಕತ್ವ ಮತ್ತು ಅನೇಕತ್ವಗಳನ್ನು ಜೊತೆಜೊತೆಗೆ ಹೊಂದಿರಬೇಕೆಂಬುದರ ಪ್ರತಿಪಾದನೆ” ಎಂದು ಲೇಖಕರು ನಿಷ್ಕರ್ಷಿಸುತ್ತಾರೆ. ಹೀಗಾಗಿ ಬಹುಸಂಸ್ಕೃತಿಗಳು ಉಳಿಯಬೇಕು ಎಂದರೆ ಹಿಂದುತ್ವವೂ ಉಳಿಯಬೇಕು.
ಸಾವರಕರ್- ಅಂಬೇಡ್ಕರ್
ಸಾವರಕರರನ್ನು ಉಲ್ಲೇಖಿಸದೆ ಹಿಂದುತ್ವದ ಚರ್ಚೆ ಪೂರ್ಣವಾಗುವುದಿಲ್ಲ. “ಹಿಂದುತ್ವ ಎನ್ನುವ ಪದದ ಉಲ್ಲೇಖ ಬಂದಾಗಲೆಲ್ಲ ಸಾಮಾನ್ಯವಾಗಿ ಸಾವರಕರರ ಹೆಸರನ್ನೇ ಅವರ ಅಭಿಮಾನಿಗಳೂ ವಿರೋಧಿಗಳೂ ತರುತ್ತಾರೆ” ಎಂದು ಲೇಖಕರೇ ಹೇಳುತ್ತಾರೆ. ಹಿಂದುತ್ವದ ಅರ್ಥವ್ಯಾಪ್ತಿಯನ್ನು ಬಹಳಷ್ಟು ಹಿಗ್ಗಿಸಿದವರು ಸಾವರಕರರು. ಭಾರತವನ್ನು ಮಾತೃಭೂಮಿ ಪಿತೃಭೂಮಿ ಎಂದು ಭಾವಿಸುವವರೆಲ್ಲ ಹಿಂದುಗಳು ಎಂದು ಅವರು ಹೇಳಿದರು. ಅವರು ಪ್ರತಿಪಾದಿಸಿದ ಹಿಂದುತ್ವದ ಕಾರಣವನ್ನು ಮುಂದಿಟ್ಟುಕೊಂಡೇ ‘ರಾಜಕೀಯ ಹಿಂದುತ್ವ’ ಎನ್ನುವ ಹೆಸರು ನೀಡಿ ಎಡಪಂಥೀಯ ಮತ್ತು ತಮ್ಮನ್ನು ಸೆಕ್ಯುಲರ್ ಎಂದು ಕರೆದುಕೊಳ್ಳುವ ವರ್ಗಗಳು ಅವರನ್ನು ವಿರೋಧಿಸುತ್ತವೆ. ‘ಸಾವರಕರ್ ಕಾಲದ ರಿಲಿಜಿಯಸ್ ರಾಜಕೀಯ ಸನ್ನಿವೇಶವನ್ನು ಅರ್ಥ ಮಾಡಿಕೊಂಡರೆ, ಅವರ ರಾಜಕೀಯ ಹಿಂದುತ್ವಕ್ಕೆ ಇರುವ ಹಿನ್ನೆಲೆ ತಿಳಿಯುತ್ತದೆ.’ ಅದು ಅಂದಿನ ಪ್ರಬಲವಾಗಿದ್ದ ಮುಸ್ಲಿಂ ಲೀಗಿನ ಪ್ರತ್ಯೇಕತಾವಾದಿ ರಿಲಿಜಿಯಸ್ ರಾಜಕಾರಣದ ಸನ್ನಿವೇಶ ಎಂದು ಲೇಖಕರು ಗುರುತಿಸುತ್ತಾರೆ. ಅಂದಿನ ಸನ್ನಿವೇಶಕ್ಕೆ ಸೂಕ್ತವಾಗಿ ‘ಸಾವರಕರರು ಪ್ರತಿಪಾದಿಸಿದ್ದು ಹಿಂದುತ್ವದ ಬಹುತ್ವವನ್ನು ಉಳಿಸಿಕೊಳ್ಳಲು ಬೇಕಾದ ಜಾಗೃತಿಯನ್ನು ಮತ್ತು ರಕ್ಷಣಾತ್ಮಕ ಕಾರ್ಯತಂತ್ರವನ್ನು’ ಎನ್ನುವ ನಿಷ್ಕರ್ಷೆಗೆ ಬರುತ್ತಾರೆ. ಸಾವರಕರರ ಸಮಕಾಲೀನರಾಗಿ ಅವರನ್ನು ಹತ್ತಿರದಿಂದ ಕಂಡಿದ್ದ ಅಂಬೇಡ್ಕರ್ ಅವರು ಮುಸ್ಲಿಮರಲ್ಲಿದ್ದ ಪ್ರತ್ಯೇಕತೆಯ ಮನೋಭಾವವನ್ನು ಸ್ಪಷ್ಟವಾಗಿ ಮತ್ತು ಆಧಾರಸಹಿತವಾಗಿ ನಿರೂಪಿಸಿರುವುದನ್ನು ಇಲ್ಲಿ ವಿವರಿಸಲಾಗಿದೆ.
ರಾಷ್ಟ್ರಭಕ್ತಿ ಎಂಬ ಮೌಲ್ಯ
ರಾಷ್ಟ್ರಭಕ್ತಿಯೆಂಬುದು ಭಾವನಾತ್ಮಕ ಸಂಗತಿಯಾದರೂ ಒಂದು ದೇಶದ ಸರ್ವಾಂಗೀಣ ಕ್ಷೇತ್ರಗಳಲ್ಲಿ ಅದು ಪ್ರಮುಖ ಪಾತ್ರವಹಿಸುತ್ತದೆ. ಓರ್ವ ರಾಷ್ಟ್ರಭಕ್ತ ಸರ್ಕಾರೀ ನೌಕರನಿಗೆ ತಾನು ಮಾಡುವ ಕೆಲಸ ದೇಶಸೇವೆ ಅನಿಸಿದರೆ ಆತ ಭ್ರಷ್ಟಾಚಾರಕ್ಕಿಳಿಯಲಾರ. ಓರ್ವ ರಾಷ್ಟ್ರಭಕ್ತ ಶಿಕ್ಷಕನಿಗೆ ಪಾಠಮಾಡುವುದು ಕೇವಲ ಉದ್ಯೋಗ ಎಂದೆನಿಸದು. ರಾಷ್ಟ್ರಭಕ್ತ ವ್ಯಾಪಾರಿಗೆ ಆತನ ವ್ಯವಹಾರ ಕೇವಲ ಹಣ ಗಳಿಸುವ ಮಾರ್ಗವಾಗಿ ಕಾಣದು. ರಾಷ್ಟ್ರಭಕ್ತಿ ಎನ್ನುವ ಭಾವನೆಯು ಹೇಗೆ ಒಂದು ದೇಶದ ಉನ್ನತಿಗೆ ಕಾರಣವಾಗಬಲ್ಲುದು ಎನ್ನುವುದನ್ನು ಇಸ್ರೇಲ್ ದೇಶದ ಉದಾಹರಣೆಯಿಂದ ಲೇಖಕರು ನಿರೂಪಿಸುತ್ತಾರೆ. ಒಂದು ಕೋಟಿಗಿಂತಲೂ ಕಡಮೆ ಜನಸಂಖ್ಯೆಯ ಇಸ್ರೇಲ್ ದೇಶ ಭಾರತ ಸ್ವತಂತ್ರಗೊಂಡ ಕಾಲಘಟ್ಟದ ಆಸುಪಾಸಿನಲ್ಲೇ ಅಸ್ತಿತ್ವಕ್ಕೆ ಬಂದಿತು. ಸುತ್ತಲೂ ವೈರಿ ರಾಷ್ಟ್ರಗಳನ್ನು ಕಟ್ಟಿಕೊಂಡಿರುವ ಇಸ್ರೇಲ್ ಕೃಷಿಯಿಂದ ಹಿಡಿದು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಗಾಧ ಪ್ರಗತಿ ಸಾಧಿಸಿದುದಕ್ಕೆ ಕಾರಣ ‘ಇಡೀ ದೇಶ ಒಂದು ಎಂಬ ಭಾವನೆವನ್ನು ಉದ್ದೀಪಿಸಿ ಉಳಿಸಿಕೊಂಡು ಬೆಳೆಸಿದುದು’. ಆದರೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಈ ರಾಷ್ಟ್ರಭಕ್ತಿಯನ್ನು ಬೆಳೆಸುವಲ್ಲಿನ ಕೊರತೆ ನಮ್ಮ ದೇಶ ಹಿಂದುಳಿಯಲು ಕಾರಣ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಮುಂದುವರಿದು ರಾಜಕೀಯ ಪಕ್ಷದ ಮೇಲಿನ ಸಿಟ್ಟನ್ನು ರಾಷ್ಟ್ರಪ್ರೇಮ ಅಥವಾ ದೇಶಭಕ್ತಿ ಎಂಬ ಪರಿಕಲ್ಪನೆಯ ಮೇಲೆ ತೀರಿಸಿಕೊಳ್ಳುವುದು, ರಾಷ್ಟ್ರಭಕ್ತಿಯನ್ನು ವ್ಯಂಗ್ಯಮಾಡುವ ಪ್ರವೃತ್ತಿ ಬೆಳೆದಿರುವ ಬಗ್ಗೆ ದುರದೃಷ್ಟಕರ ಅಂಶವನ್ನು ಗುರುತಿಸುತ್ತಾರೆ.
ಗಮನಾರ್ಹ ಸಂಗತಿಗಳು
ಒಟ್ಟು ಹದಿನೈದು ಅಧ್ಯಾಯಗಳು ಮತ್ತು ವಿವರವಾದ ಪೀಠಿಕೆಗಳನ್ನೊಳಗೊಂಡ ಈ ಪುಸ್ತಕದಲ್ಲಿ ಭಾಷಾಂತರದ ಸಮಸ್ಯೆ, ರಿಲಿಜನ್ ಮತ್ತು ಹಿಂದೂ ಸಂಪ್ರದಾಯಗಳ ನಡುವಿನ ತೌಲನಿಕ ಚರ್ಚೆ, ಸಂವಿಧಾನ, ಸಾವರಕರ್ ಮತ್ತು ಅಂಬೇಡ್ಕರರ ವಿಚಾರಗಳು, ಸೆಕ್ಯುಲರಿಸಂ ಮತ್ತು ರಿಲಿಜಿಯಸ್ ಫ್ರೀಡಂ, ವಿಮರ್ಶೆಗೆ ತೆರೆದುಕೊಳ್ಳದ ರಿಲಿಜನ್ ಮತ್ತು ಅದರ ಒತ್ತಡ, ರಾಷ್ಟ್ರಭಕ್ತಿ, ಈಗಿನ ಮೌಲ್ಯಗಳು ಮೊದಲಾದ ಅನೇಕ ವಿಷಯಗಳನ್ನು ಕುರಿತು ತೌಲನಿಕ ಚರ್ಚೆಯನ್ನು ಮಾಡಲಾಗಿದೆ. ಪುಸ್ತಕದಲ್ಲಿ ಉಲ್ಲೇಖಿಸಿದ ಸಂಗತಿಗಳಿಗೆ ಸೂಕ್ತ ಆಧಾರಗಳನ್ನು ಟಿಪ್ಪಣಿಯಲ್ಲಿ ನೀಡಲಾಗಿದೆ. ಜೊತೆಗೆ ‘ಪರಾಮರ್ಶನ ಸಾಹಿತ್ಯ’ದ ಅಡಿಯಲ್ಲಿ ಓದುಗರು ಗಮನಿಸಬಹುದಾದ ಆಕರಗ್ರಂಥಗಳ ದೀರ್ಘಪಟ್ಟಿಯನ್ನು ನೀಡಲಾಗಿದೆ. ಅಲ್ಲಲ್ಲಿ ಮುಖ್ಯ ಎನಿಸಬಹುದಾದ ಸಾಲುಗಳನ್ನು ದಪ್ಪ ಅಕ್ಷರಗಳಲ್ಲಿ ಎತ್ತಿ ತೋರಿಸಲಾಗಿದೆ.
ಓದುಗನು ಒಂದು ಸಾಲು ಬಿಡದಂತೆ ಇಡೀ ಪುಸ್ತಕ ಓದಿಸಿಕೊಂಡು ಹೋಗುವ ಸಾಂದ್ರವಾದ ಅಷ್ಟೇ ಸರಳ ಭಾಷೆಯ ವಿಚಾರ ನಿರೂಪಣೆ ಇಲ್ಲಿದೆ. ಇಡೀ ಪುಸ್ತಕದಲ್ಲಿ ಎಲ್ಲಿಯೂ ಭಾವಾವೇಶದ ಮಾತು ಎನಿಸಬಹುದಾದ ಸಾಲು ಬಂದಿಲ್ಲ, ಎಲ್ಲಿಯೂ ತಾರ್ಕಿಕತೆಯನ್ನು ಮೀರಿದ ವಾಕ್ಯವಿಲ್ಲ. ವಿಶಾಲವಾದ ವ್ಯಾಪ್ತಿಯಿರುವ ಈ ವಿಷಯವನ್ನು ಒಂದು ಅರ್ಥಪೂರ್ಣ ಚೌಕಟ್ಟಿನೊಳಗೆ ಮಿತಗೊಳಿಸುವ, ಜೊತೆಗೆ ತಾರ್ಕಿಕ ಸಮಗ್ರತೆಯನ್ನು ತರುವ ಕೆಲಸ ಇಲ್ಲಿ ಸಮರ್ಥವಾಗಿ ಆಗಿದೆ. ಎತ್ತಿಕೊಂಡಿರುವ ಪ್ರತಿಯೊಂದು ವಿಷಯದಲ್ಲಿ ಪೂರ್ವಪಕ್ಷವನ್ನೂ ನೀಡಿ ಚರ್ಚೆಯು ಸಮತೋಲಿತವಾಗಿರುವಂತೆ ಮತ್ತು ವಿಷಯದ ಸ್ಪಷ್ಟತೆ ಇರುವಂತೆ ನಿರೂಪಿಸಲಾಗಿದೆ. ಈ ಗ್ರಂಥ ವೈಚಾರಿಕ ಸಾಹಿತ್ಯದ ಒಂದು ಉತ್ತಮ ಮಾದರಿಯಾಗಿದೆ.
ಹಿಂದುತ್ವದ ವೈಚಾರಿಕ ವಿರೋಧಿಗಳು ಓದಬೇಕಾದ ಕೃತಿ ಇದು. ಹಾಗೆಯೇ ಹಿಂದುತ್ವದ ಪ್ರತಿಪಾದಕರೂ ಓದಲೇಬೇಕಾದ ಪುಸ್ತಕವೂ ಹೌದು. ಏಕೆಂದರೆ ನೈಜ ವೈಚಾರಿಕ ವಿರೋಧಿಗಳು ಹಾಗೂ ವಿತಂಡವಾದಿಗಳಿಗೂ ತರ್ಕಬದ್ಧವಾಗಿ ಉತ್ತರಿಸಬೇಕಾದರೆ ನಮ್ಮನ್ನು ಕುರಿತಾದ ತಿಳಿವಳಿಕೆಯ ಸ್ಪಷ್ಟತೆಯೂ ಅತ್ಯಗತ್ಯ. ಅಂತಿಮವಾಗಿ ‘ಕೊನೆಯಲ್ಲದ್ದು’ ಎನ್ನುವ ಶೀರ್ಷಿಕೆಯ ಈ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಲೇಖಕರೇ ಉಲ್ಲೇಖಿಸಿರುವ ಭಗವದ್ಗೀತೆಯ ವಾಕ್ಯ ‘ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು’ ಎಂಬಂತೆ, ಈ ಪುಸ್ತಕವು ವಿಮರ್ಶೆಗೆ ಅರ್ಹವಾದ ನಮ್ಮ ಸಾಮಾಜಿಕ ಬದುಕಿನ ಅನೇಕ ಪ್ರಶ್ನೆ/ಸಂಗತಿಗಳನ್ನು ಓದುಗನಲ್ಲಿ ಹುಟ್ಟಿಸಿ ಸತ್ಕಾರ್ಯಕ್ಕಿಳಿಯುವ ಸದಿಚ್ಛೆಯನ್ನೂ ಪ್ರೇರೇಪಿಸುತ್ತದೆ.