(‘ಅಮೃತ ಕಾಲ’ ಎಂಬ ಪುಸ್ತಕದ ಪರಿಚಯದೊಂದಿಗೆ ಒಂದು ಪೂರಕ ಚಿಂತನೆ)
ಭಾರತ ಬದಲಾಗಿದೆಯೇ ಎಂದು ಸಂದೇಹಪಡುವವರಿಗೆ ಪುಸ್ತಕದ ಬೆನ್ನುಡಿಯಲ್ಲಿ ಅವರು ಹೇಳುವ ಖಚಿತ ಮಾತಿದು – ‘ಭಾರತ ಬದಲಾಗಿದೆ! ಯಾರದ್ದೋ ಇಶಾರೆಯ ಮೇಲೆ ಹೆಜ್ಜೆಯಿಡುವ ದೇಶವಾಗಿ ಉಳಿದಿಲ್ಲ. ಭಾರತ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಗಳೆರಡನ್ನೂ ಮಾಡಿಕೊಂಡು ವೈಶ್ವಿಕ ಮಟ್ಟದಲ್ಲಿ ಪ್ರತಿ ಹಂತದಲ್ಲೂ ಛಾಪು ಮೂಡಿಸುತ್ತಿರುವ ಸುವರ್ಣಯುಗವಿದು. ಎಲ್ಲರೊಂದಿಗೂ ಒಂದೇ ರೀತಿ ವರ್ತಿಸುವ ಅಲಿಪ್ತ ನೀತಿಯ ಜಡತ್ವದಿಂದ ಭಾರತ ಹೊರಬಂದಿದೆ. ಈಗ ಭಾರತ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆಯನ್ನು ರೂಢಿಸಿಕೊಂಡ ಚಲನಶೀಲ ರಾಷ್ಟ್ರ, ಪ್ರೀತಿಯಿಂದ ಬಂದರೆ ಮೈಯೆಲ್ಲ ಹೃದಯವಾಗುವ ಭಾರತ, ಹಗೆಯಿಟ್ಟು ಬರುವವರ ಸುಟ್ಟುಹಾಕುವ ಮುಕ್ಕಣ್ಣ, ಗ್ಲೋಬಲ್ ಸೌತ್ ಎಂಬ ಗುಬ್ಬಚ್ಚಿಗಳಿಗೆ ತಂಗಲು ಕಾನಾದ ಭಾರತವೇ ಪಾಕಿಸ್ತಾನವೆಂಬ ಕಾರ್ಕೋಟಕಗಳಿರುವ ಕಾಡನ್ನೇ ಸುಟ್ಟುಹಾಕಬಲ್ಲ ಕಾಡ್ಗಿಚ್ಚು.’
ಭಾರತ ಬೆಳಗುತ್ತಿದೆ’ ಎಂದು ಅಲ್ಲಲ್ಲಿ ಕೇಳಿಬರುತ್ತದೆ. ಆದರೆ ನಮಗೆ ಈ ಹೇಳಿಕೆಯ ಬಗ್ಗೆಯೇ ಗುಮಾನಿ. ದಿನವೂ ಪತ್ರಿಕೆಯನ್ನೋದುವ, ದೂರದರ್ಶನದ ಸುದ್ದಿಗಳನ್ನು ನೋಡುವ ನಮಗೆ ಇಂತಹ ಹೇಳಿಕೆಗಳ ಬಗ್ಗೆ ಸಂದೇಹವುಂಟಾಗುವುದು ಸಹಜ. ಲಾಗಾಯ್ತಿನಿಂದಲೂ ‘ಭಾರತ ಬಡದೇಶ’, ‘ಭಾರತ ಹಾವಾಡಿಗರ ನಾಡು’ ಎಂದು ಓದಿಕೊಂಡು ಬಂದಿರುವ ನಮಗೆ ಭಾರತ ಬದಲಾಗಿದೆಯೆಂಬುದರ ಬಗ್ಗೆ ವಿಶ್ವಾಸ ಮೂಡದು. ಅನುದಿನವೂ ಭ್ರಷ್ಟಾಚಾರದ ಹಲವು ಮುಖಗಳನ್ನು ಕಾಣುವ ನಮಗೆ ಭಾರತ ಬದಲಾಗುತ್ತಿದೆಯೆಂಬುದರಲ್ಲಿ ನಂಬಿಕೆ ಬರುತ್ತಿಲ್ಲ. ‘ದೇಶ ಅಧೋಗತಿಗೆ ತಳ್ಳಲ್ಪಟ್ಟಿದೆ’ ಎಂದು ಹಲವು ವಿಪಕ್ಷ ನಾಯಕರು ಮತ್ತೆಮತ್ತೆ ಹೇಳಿಕೆ ಕೊಡುತ್ತಿರುವಾಗ ದೇಶ ಬೆಳಗುತ್ತಿರುವುದು ದಿಟವೇ ಎಂಬ ಸಂದೇಹ ಮೂಡುವುದು ಸಹಜ ತಾನೇ. ಇಲ್ಲಸಲ್ಲದ ಸಂಗತಿಗಳ ಬಗ್ಗೆ ಕೂಡಲೇ ಮೂಡುವ ಇಂತಹ ವಿಶ್ವಾಸ ಒಳ್ಳೆಯದರ ಬಗ್ಗೆ ಬೇಗ ಮೂಡುವುದೇ ಇಲ್ಲ.
ಭಾರತ ಬದಲಾಗಿದ್ದರ ಕುರಿತು ವಿವರ ತಿಳಿಸುವ ಕೆಲವು ಲೇಖನಗಳು ಅಲ್ಲಲ್ಲಿ ಸಿಗುತ್ತವೆ. ಆದರೆ ಅವುಗಳಲ್ಲಿ ಹೆಚ್ಚಿನವು ಯಾವುದೋ ಒಂದು ಅಂಶಕ್ಕೆ ಮಾತ್ರ ಸೀಮಿತವಾಗಿರುವಂತಹವು. ಅದೂ ಅಲ್ಲದೆ, ಯಾವುದೋ ಪತ್ರಿಕೆಯಲ್ಲಿ ಪ್ರಕಟವಾಗುವವು ಅನೇಕರನ್ನು ತಲಪುವುದೇ ಇಲ್ಲ. ಇನ್ನು ಕೆಲವರು ಭಾರತ ಬದಲಾಗಿದ್ದರ ವಿರುದ್ಧವಾಗಿ ತಮ್ಮ ವಾದ ಮಂಡಿಸುತ್ತಾರೆ. ಇಂತಹ ಹಲವಾರು ಕಾರಣಗಳಿಂದಾಗಿ ದೇಶ ಬೆಳಗುತ್ತಿದೆಯೆಂಬ ಹೇಳಿಕೆಯ ಸಾಚಾತನದ ಬಗ್ಗೆ ನಮಗೆಲ್ಲ ಸಂದೇಹ ಮೂಡುತ್ತಿದೆ. ಅಲ್ಲದೆ ಹಲವು ಸಂಗತಿಗಳು ನಮಗೆ ಅಷ್ಟಿಷ್ಟು ತಿಳಿದಿರುತ್ತದಾದರೂ ಅವುಗಳ ವಿಸ್ತೃತ ಹಿನ್ನೆಲೆ ತಿಳಿದಿರುವುದಿಲ್ಲ. ತಿಳಿಯುವುದಕ್ಕೆ ದಾರಿಯೂ ಗೊತ್ತಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಕಟವಾದ ‘ಅಮೃತಕಾಲ’ ಎಂಬ ಪುಸ್ತಕ ಹೆಚ್ಚು ಮಹತ್ತ್ವ ಪಡೆಯುತ್ತದೆ. ಇದರ ಲೇಖಕರು ರಾಹುಲ ಹಜಾರೆಯವರು. ‘ನನ್ನ ಮಾತು’ ಎಂಬ ಶೀರ್ಷಿಕೆಯ ಅಡಿಯಲ್ಲಿ ಅವರೆನ್ನುತ್ತಾರೆ – ‘ಭಾರತ ಯಾವತ್ತೂ ಚಿನ್ನದ ಹಕ್ಕಿಯೇ. ಬಂಧಿಸಿ ಪಂಜರದಲ್ಲಿಟ್ಟ ಕಾರಣ ಅದು ದೈನೇಸಿ ಸ್ಥಿತಿಗೆ ಬಂದು ಬಿಟ್ಟಿತ್ತು. ಸದ್ಯದ ಭಾರತದ ಸ್ಥಿತಿ ಹಾಗಿಲ್ಲ. ಅದರ ರೆಕ್ಕೆಗಳಿಗೆ ಬಲ ಬಂದಿದೆ. ದಶದಿಕ್ಕುಗಳಲ್ಲೂ ಸರ್ವ ಕ್ಷೇತ್ರಗಳಲ್ಲೂ ವಿಶ್ವವ್ಯಾಪಿಯಾಗಿ ಭಾರತ ಬೆಳೆಯುತ್ತಿರುವ ವೇಗವಿದೆಯಲ್ಲ, ಅದು ನಿಬ್ಬೆರಗಾಗಿಸುವಂತಹದ್ದು.’
ಭಾರತ ಬದಲಾಗಿದೆಯೇ ಎಂದು ಸಂದೇಹ ಪಡುವವರಿಗೆ ಪುಸ್ತಕದ ಬೆನ್ನುಡಿಯಲ್ಲಿ ಅವರು ಹೇಳುವ ಖಚಿತ ಮಾತಿದು – ‘ಭಾರತ ಬದಲಾಗಿದೆ! ಯಾರದ್ದೋ ಇಶಾರೆಯ ಮೇಲೆ ಹೆಜ್ಜೆಯಿಡುವ ದೇಶವಾಗಿ ಉಳಿದಿಲ್ಲ. ಭಾರತ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಗಳೆರಡನ್ನೂ ಮಾಡಿಕೊಂಡು ವೈಶ್ವಿಕ ಮಟ್ಟದಲ್ಲಿ ಪ್ರತಿ ಹಂತದಲ್ಲೂ ಛಾಪು ಮೂಡಿಸುತ್ತಿರುವ ಸುವರ್ಣಯುಗವಿದು. ಎಲ್ಲರೊಂದಿಗೂ ಒಂದೇ ರೀತಿ ವರ್ತಿಸುವ ಅಲಿಪ್ತ ನೀತಿಯ ಜಡತ್ವದಿಂದ ಭಾರತ ಹೊರಬಂದಿದೆ. ಈಗ ಭಾರತ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆಯನ್ನು ರೂಢಿಸಿಕೊಂಡ ಚಲನಶೀಲ ರಾಷ್ಟ್ರ, ಪ್ರೀತಿಯಿಂದ ಬಂದರೆ ಮೈಯೆಲ್ಲ ಹೃದಯವಾಗುವ ಭಾರತ, ಹಗೆಯಿಟ್ಟು ಬರುವವರ ಸುಟ್ಟುಹಾಕುವ ಮುಕ್ಕಣ್ಣ, ಗ್ಲೋಬಲï ಸೌತ್ ಎಂಬ ಗುಬ್ಬಚ್ಚಿಗಳಿಗೆ ತಂಗಲು ಕಾನಾದ ಭಾರತವೇ ಪಾಕಿಸ್ತಾನವೆಂಬ ಕಾರ್ಕೋಟಕಗಳಿರುವ ಕಾಡನ್ನೇ ಸುಟ್ಟುಹಾಕಬಲ್ಲ ಕಾಡ್ಗಿಚ್ಚು.’
ಈ ಪುಸ್ತಕವನ್ನು ಕುರಿತು ಶ್ರೀವತ್ಸ ಜೋಶಿಯವರು (‘ತಿಳಿರು ತೋರಣ’ ಅಂಕಣದಲ್ಲಿ) ಹೇಳುವ ಮಾತಿದು – ‘ಈ ಮೊದಲಿನ ನಾಯಕರೆಲ್ಲ ನಮ್ಮನ್ನು ಅಲ್ಪತೃಪ್ತರನ್ನಾಗಿಸಿದ್ದರೆ, ಮೋದಿ ನಮ್ಮ ಆಶಾವಾದವನ್ನೇ ಉದ್ದೀಪಿಸಿದರು. ನಾವು ರಾಮಮಂದಿರದ ಚರ್ಚೆಯಾದರೂ ಸಾಕು ಅಂದುಕೊಂಡಿದ್ದೆವು. ಅಯೋಧ್ಯೆಯಲ್ಲೀಗ ಭವ್ಯಮಂದಿರದಲ್ಲಿ ರಾಮಲಲ್ಲಾ ವಿರಾಜಿಸಿದ್ದಾನೆ. ಕಾಶಿಯ ಮಂದಿರ ಸ್ವಚ್ಛವಾದರೆ ಸಾಕು ಅಂದುಕೊಂಡಿದ್ದೆವು, ಮೂಲ ಜ್ಞಾನವಾಪಿ ಮಂದಿರದಲ್ಲಿ ಪೂಜೆಯೂ ಶುರುವಾಗಿದೆ. ಕಾಶ್ಮೀರದಲ್ಲಿ ಶಾಂತಿ ನೆಲೆಸಿದರೆ ಸಾಕು ಅಂದುಕೊಂಡಿದ್ದೆವು, ಆರ್ಟಿಕಲ್ ೩೭೦ ಕಿತ್ತು ಬಿಸಾಕಿದ್ದೂ ಆಯಿತು. ಪಾಕಿಸ್ತಾನ ದಾಳಿ ಮಾಡಿದಾಗೆಲ್ಲ ಹೆಚ್ಚೆಂದರೆ ಅವರ ಜೊತೆಗೆ ಕ್ರಿಕೆಟ್ ಆಡುವುದನ್ನು ನಿಲ್ಲಿಸುತ್ತಿದ್ದೆವು. ಈಗ ಪಾಕಿಸ್ತಾನದ ಒಳನುಗ್ಗಿ ಹೊಡೆದದ್ದಲ್ಲದೆ, ಆ ರಾಷ್ಟ್ರವನ್ನೇ ಅಸ್ಥಿರಗೊಳಿಸಿದ್ದೇವೆ. ಸ್ವದೇಶಿ ವಸ್ತುಗಳ ಬಗ್ಗೆ ಚರ್ಚೆ ಮಾತ್ರ ಮಾಡುತ್ತಿದ್ದೆವು. ಭಾರತ ಆತ್ಮನಿರ್ಭರ ಆಗುತ್ತಿದೆಯಲ್ಲದೆ ಹಲವಾರು ವಸ್ತುಗಳನ್ನು ರಫ್ತು ಮಾಡುತ್ತಿದೆ. ನಮ್ಮ ನಿರೀಕ್ಷೆಗಳಿಗೂ ಮೀರಿ ಮೋದಿಯವರು ಸಾಧಿಸಿದ ಪಟ್ಟಿಯಿದು. ಈ ಪುಸ್ತಕ ತನ್ನ ಪುಟಪುಟದಲ್ಲೂ ಭಾರತದ ಮಹತ್ಸಾಧನೆಗಳನ್ನು ಹೇಳುತ್ತದೆ. ಭಾರತ ಪ್ರಗತಿಯೆಡೆಗೆ ಸಾಗುತ್ತಿರುವ ಜೈತ್ರಯಾತ್ರೆಯ ಅಕ್ಷರ ರೂಪವಿದು.’
ವಿಕಾಸ, ವನವಾಸಿ, ವಿಶ್ವಗುರು, ವಿಶ್ವಾಸ, ವಿರೋಧ, ವೈರಾಣು – ಎಂಬ ಆರು ವಿಭಾಗಗಳಲ್ಲಿ ಒಟ್ಟು ೨೧ ಲೇಖನಗಳ ಮೂಲಕ ಭಾರತದ ವಿಕಾಸಯಾತ್ರೆಯ ಚಿತ್ರ ನೀಡಲು ಈ ಪುಸ್ತಕದಲ್ಲಿ ಪ್ರಯತ್ನಿಸಲಾಗಿದೆ. ಸಾಕಷ್ಟು ಅಂಕಿಅಂಶಗಳ ಮೂಲಕ ವಿವರಣೆ ನೀಡುತ್ತ ವಿಶ್ಲೇಷಣೆಯ ಒಗ್ಗರಣೆಯನ್ನೂ ಸೇರಿಸುತ್ತ ಇಲ್ಲಿ ವಾಸ್ತವಿಕತೆಯನ್ನು ಚಿತ್ರಿಸಲಾಗಿದೆ. ಭಾರತ ಬದಲಾಗಿದೆಯೆಂಬುದನ್ನು ಮನದಟ್ಟು ಮಾಡಿಕೊಡುವ ಒಟ್ಟಾರೆ ಪ್ರಯತ್ನ ಇದಾಗಿದೆ. ಪುಸ್ತಕವನ್ನು ಪೂರ್ತಿ ಓದಿದ ನಂತರ ಅನಿಸುವುದು – ಲೇಖಕರ ಈ ಪ್ರಯತ್ನ ಸಫಲತೆ ಕಂಡಿದೆ ಎಂದು. ಭಾರತದ ವಿಕಾಸಗಾಥೆಯಲ್ಲಿ ಆಸಕ್ತಿಯಿರುವವರೆಲ್ಲ ಒಂದೇ ಗುಟುಕಿಗೆ ಓದುವಂತೆ ಮಾಡುತ್ತದೆ ಈ ಪುಸ್ತಕ.
ಪ್ರತಿ ವಿಭಾಗದ ಆರಂಭಲ್ಲೊಂದು ಪೀಠಿಕೆಯಿರುತ್ತದೆ. ಮುಂದಿನ ಅಧ್ಯಾಯಗಳಲ್ಲಿ ಪ್ರತಿಪಾದಿಸಲಿರುವುದನ್ನು ಸಂಕ್ಷೇಪವಾಗಿ ತಿಳಿಸುತ್ತದೆ ಇದು. ‘ಮೋದಿಯವರು ಅಧಿಕಾರಕ್ಕೆ ಬರುತ್ತಿದ್ದಂತೆಯೆ ವಿಕಾಸದ ಸ್ಪರ್ಶವಿಲ್ಲದ ಕ್ಷೇತ್ರಗಳೇ ಇಲ್ಲ ಎಂಬಂತಾಗಿದೆ. ಕ್ರೀಡೆ, ಪ್ರವಾಸೋದ್ಯಮ, ರಸ್ತೆಗಳ ನಿರ್ಮಾಣ, ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿ, ಸೈನ್ಯದ ಉನ್ನತೀಕರಣ, ಆರ್ಥಿಕ ಅಭಿವೃದ್ಧಿ – ಹೀಗೆ ಎಲ್ಲ ಕ್ಷೇತ್ರಗಳ ಬೆಳವಣಿಗೆಯೂ ಕಣ್ಣಿಗೆ ಬೀಳುತ್ತದೆ.’ ಇಷ್ಟೇ ಹೇಳಿದ್ದರೆ ಅದು ವ್ಯಕ್ತಿಪ್ರಶಂಸೆಯಾಗಷ್ಟೇ ಉಳಿದು ಬಿಡುತ್ತಿತ್ತೇನೋ. ಅದಕ್ಕಾಗಿಯೇ ಲೇಖಕರು ಮುಂದಿನ ಕೆಲ ಅಧ್ಯಾಯಗಳಲ್ಲಿ ಇದನ್ನು ದೃಢೀಕರಿಸುವುದಕ್ಕೆ ಬೇಕಾದ ಸಂಗತಿ, ಅಂಕಿ-ಅಂಶಗಳನ್ನೆಲ್ಲ ಕಲೆಹಾಕಿ, ವಿಶ್ಲೇಷಣೆಯ ಮೆರಗನ್ನೂ ನೀಡಿ ವಾಸ್ತವಿಕತೆಯನ್ನು ತೆರೆದಿಡುತ್ತಾರೆ. ಎಲ್ಲಿಯೂ ತಮ್ಮ ನಿಲವನ್ನು ನಮ್ಮ ಮೇಲೆ ಹೇರಬೇಕೆಂಬ ಹಪಾಹಪಿಯನ್ನು ತೋರದಿರುವ ಲೇಖಕರ ಬರವಣಿಗೆಯ ಸಂಯಮ ಮೆಚ್ಚಬೇಕಾದದ್ದೇ. ವಿಶ್ಲೇಷಣೆಯ ವೇಳೆ ಒಂದಿಷ್ಟು ಮೆಚ್ಚುಗೆ ನುಡಿಗಳು ಬಂದಿದ್ದರೂ ಕೂಡ ಅವೆಂದೂ ವ್ಯಕ್ತಿ ಪ್ರಶಂಸೆಯತ್ತ ಹೆಚ್ಚಾಗಿ ವಾಲುವುದಿಲ್ಲ. ಬರೀ ಅಂಕಿಅಂಶಗಳನ್ನಷ್ಟೇ ನೀಡಿದ್ದರೆ ನೀರಸತೆಯುಂಟಾಗುತ್ತಿತ್ತೇನೋ. ಅಂಕಿಅಂಶಗಳ ಜೊತೆಜೊತೆಗೆ ವಿಶ್ಲೇಷಣೆಯನ್ನೂ ಸೇರಿಸಿದ್ದರಿಂದ ದೇಶದ ಮುನ್ನಡೆಯನ್ನು ಅರ್ಥೈಸಿಕೊಳ್ಳುವತ್ತ ಸಾಗುವಲ್ಲಿ ನಮಗೆ ಸರಿಯಾದ ದಿಕ್ಕು ತೋರಿಬರುತ್ತದೆ.
ಇತ್ತೀಚೆಗೆ ಭಾರತ ಏಷಿಯನ್ ಗೇಮ್ಸ್ನಲ್ಲಿ ೧೦೭ ಪದಕಗಳನ್ನು ಬಾಚಿಕೊಂಡಿತು. ‘ಇಲ್ಲಿ ಕ್ರೀಡಾಪಟುಗಳ ಸಾಧನೆ, ಶ್ರಮ, ಪ್ರತಿಭೆಗಳು ಮುಖ್ಯವೇ ಆದರೂ ಅವರು ಅವಕಾಶವಂಚಿತರಾದರೆ, ಅನುಕೂಲ ಒದಗದೆ ಹೋದರೆ ಮುನ್ನೆಲೆಗೆ ಬರುವುದಾದರೂ ಹೇಗೆ?’ ಎಂದು ಕೇಳುತ್ತ ಲೇಖಕರು ಸರಕಾರ ಒದಗಿಸಿದ ಆರ್ಥಿಕ ನೆರವೇ ಮುಂತಾದವಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ನಮ್ಮ ಮುಂದಿರಿಸಿ – ‘ಪ್ರತಿ ಸ್ಪರ್ಧಾಳುವೂ ಗೆದ್ದಾಗ ಅವರಿಗೆ ಕರೆ ಮಾಡಿ ಅಭಿವಂದನೆ ಸಲ್ಲಿಸುವುದು, ಸೋತವರ ಜೊತೆಗೆ ನಿಂತು ನೈತಿಕ ಬೆಂಬಲ ನೀಡುವುದು ಮುಂತಾದ ರೂಢಿಯನ್ನು ಪ್ರಧಾನಿಗಳು ಹಾಕಿಕೊಂಡಿರುವ ಕುರಿತು ಹಲವಾರು ಕ್ರೀಡಾಳುಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಒಲಂಪಿಕ್ಸ್ನ ನಂತರ ಎಲ್ಲ ಕ್ರೀಡಾಪಟುಗಳನ್ನು ಕರೆದು ಅವರೊಂದಿಗೆ ಪ್ರಧಾನಿಗಳು ಐಸ್ಕ್ರೀಮ್ ಸವಿದದ್ದು, ಹಾಕಿಯಲ್ಲಿ ಸೋತ ತರುಣಿಯರು ಅಳುತ್ತಿರಬೇಕಾದರೆ ಮನೆಯ ಹಿರಿಯನಂತೆ ಅವರಿಗೆ ಸಾಂತ್ವನ ಹೇಳಿದ್ದು, ಗೆದ್ದ ಕ್ರೀಡಾಳುಗಳಿಗೆ ಸಿಗುವ ಭವ್ಯ ಸ್ವಾಗತ, ಪ್ರಧಾನಿಗಳೊಂದಿಗೆ ಔತಣಕೂಟ ಇವೆಲ್ಲ ಕ್ರೀಡಾಳುಗಳ ಮನಃಸ್ಥೈರ್ಯವನ್ನು ಹೆಚ್ಚಿಸಿವೆ’ ಎನ್ನುವ ಮೂಲಕ ಸರಕಾರದ ನಡೆಯನ್ನೂ ನಮ್ಮ ಮುಂದಿರಿಸಿ ನಾವು ಸರಿಯಾದ ನಿಲವು ತಳೆಯುವಲ್ಲಿ ಗಮನ ಸೆಳೆಯುತ್ತಾರೆ.
ರಾಮಮಂದಿರ
ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆ ನೆರವೇರಿದ್ದು ನಮಗೆಲ್ಲ ತಿಳಿದೇ ಇದೆ. ಅದರ ಹಿನ್ನೆಲೆಯಲ್ಲಿ ಶತಕದುದ್ದಕ್ಕೂ ಜರುಗಿದ ನೂರಾರು ಘಟನೆಗಳೂ ನಮಗೆ ತಿಳಿದಿವೆ. ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳ ಸಹನಾಪೂರ್ಣ ನಿಲವು ಹೇಗೆ ಕೆಲಸಮಾಡಿತ್ತು ಎಂಬುದರ ಬಗ್ಗೆ ಬರೆಯುತ್ತ ಲೇಖಕರು ಹೇಳುತ್ತಾರೆ – “ರಾಮನ ಅಸ್ತಿತ್ವದ ಕುರಿತು ನಂಬಿಕೆಯಿಲ್ಲದವರ ಬಾಯಲ್ಲೂ ರಾಮನ ಜಪ ಮಾಡುವಂತೆ ಮಾಡಿದ್ದು ಮೋದಿಯವರೇ ಅಂದರೆ ತಪ್ಪಾಗಲಾರದು. ಹಿಂದೂ ಸಂಘಟನೆಗಳಿಗೂ ಈ ಬಗ್ಗೆ ಸೆಡವಿತ್ತು. ಅಕಸ್ಮಾತ್ ಮೋದಿ ರಾಮಮಂದಿರವನ್ನು ತನ್ನ ಅಧಿಕಾರ ಬಳಸಿ ಕೋರ್ಟಿನ ಆಜ್ಞೆಗೂ ಮುನ್ನವೇ ನಿರ್ಮಿಸಿಬಿಟ್ಟಿದ್ದರೆ ಕಟ್ಟರ್ ಹಿಂದುತ್ವವಾದಿಗಳ ಓಟನ್ನೇನೋ ಪಡೆದು ಬಿಡುತ್ತಿದ್ದರು. ಆದರೆ ಕೋರ್ಟಿನ ತೀರ್ಪಿಲ್ಲದೆ ಕಟ್ಟಿದ ಮಂದಿರವೆಂಬ ಕಳಂಕ ಶತಮಾನಗಳ ತನಕ ಉಳಿದುಬಿಡುತ್ತಿತ್ತು. ರಾಮಮಂದಿರದ ರಾಜಕೀಯ ಲಾಭ ಪಡೆಯುವ ಅವಕಾಶ ಮೋದಿಯವರಿಗೆ ಅಂದೂ ಇತ್ತಲ್ಲವೇ? ಮೋದಿ ಅದೆಂಥಾ ಸಹನಾಮೂರ್ತಿಯಾಗಿರಬಹುದು! ತನ್ನದೇ ಸಿದ್ಧಾಂತದ ಕಟ್ಟರ್ ಮಂದಿಗೆ ತಿಳಿಹೇಳಬೇಕು. ಅತ್ತ ಕೋರ್ಟಿಗೆ ಬೇಕಾಗುವ ಮಾಹಿತಿ, ದಾಖಲೆಗಳನ್ನು ಕೊಡಬೇಕು. ಮುಸ್ಲಿಮರೊಂದಿಗೆ ಸಂಧಾನಕ್ಕೆ ಒಂದು ತಂಡ ತಯಾರು ಮಾಡುವಂತೆ ಹೇಳಿದರೆ ಅದನ್ನೂ ಮಾಡಬೇಕು. ಸಂಧಾನ ಅವರೊಂದಿಗೇಕೆ ಅನ್ನುವ ತನ್ನವರ ಕಟ್ಟರತೆಗೂ ಉತ್ತರ ಕೊಡಬೇಕು. ಅರವತ್ತೆಪ್ಪತ್ತು ವರ್ಷಗಳನ್ನಾಳಿದವರಿಗೆ ಕೋರ್ಟಿನಿಂದ ಪ್ರತಿ ಸರ್ಕಾರೀ ಇಲಾಖೆಯವರೆಗೆ ಅಧಿಕಾರಿಗಳ ಮೇಲೆ ಸಣ್ಣ ಹಿಡಿತವಿದ್ದೇ ಇರುತ್ತದೆ. ಅಂಥದ್ದರಿಂದ ಆದ ವಿಳಂಬವನ್ನು ಕಂಡೂ ಕಾಣದಂತಿರಬೇಕು. ರಾಮಮಂದಿರ ೩೦X೪೦ ಸೈಟಲ್ಲಿ ಮನೆ ಕಟ್ಟಿದಂತಲ್ಲ. ಅದೊಂದು Disputed Area, ಕೋರ್ಟಿಗೆ ಬೇಕಾದ ದಾಖಲೆಗಳನ್ನು ಒದಗಿಸುತ್ತ ಇತ್ತಂಡಗಳಿಗೂ ಮೇಲಿನ ಕೋರ್ಟಿಗೆ ಹೋಗುವ ಅವಕಾಶಗಳನ್ನೂ ಕೊಡುತ್ತ ಹೋಗಬೇಕು. ಇನ್ನು ಸ್ವಪ್ರಚಾರಕ್ಕಾಗಿ ನಾಲಿಗೆ ಹರಿಬಿಡುವ ಬಿಜೆಪಿ ನಾಯಕರು ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆಯೂ ಇದ್ದಾರೆ. ಮೋದಿ ಶ್ರಮಪಟ್ಟು ಕಟ್ಟಿದ ಸೌಧವನ್ನು ಒಂದೇ ಹೇಳಿಕೆಯ ಮೂಲಕ ಒಡೆಯಬಲ್ಲವರಿವರು. ಇವರನ್ನೂ ನಿಯಂತ್ರಿಸಬೇಕು. ಅವರು ಮಾಡುವ ಡ್ಯಾಮೇಜನ್ನೂ ತುಂಬಿಕೊಡಬೇಕು, ಮೋದಿಯಾಗುವುದು ಸುಲಭವಲ್ಲ ಬಿಡಿ. ಮೋದಿಯವರು ಈ ಸಹನಶೀಲತೆಯಿಂದಲೇ, ಕಷ್ಟಗಳ ಅಗ್ನಿಯಲ್ಲಿ ಬೆಂದು ಇನ್ನಷ್ಟು ಪವಿತ್ರವಾಗಿ ಬರುವ ದಹನಶೀಲತೆಯಿಂದಲೇ ಅಂಥ ಹುದ್ದೆಯಲ್ಲಿ ಕುಳಿತಿದ್ದು, ಈ ಸಹನೆಗೆ ದಕ್ಕಿದ ವರವೇನು ಗೊತ್ತೆ? ಜಾಮಾ ಮಸೀದಿಯ ಶಾಹಿ ಇಮಾಮ್ ಮೌಲಾನಾ ಅಹ್ಮದ್ ಬುಖಾರಿಯವರೂ ಮೋದಿಯವರ ಈ ನಡೆಯನ್ನು ಸ್ವಾಗತಿಸಿದರು. ಶಿಯಾ ವಕ್ಫ್ ಬೋರ್ಡಿನ ವಾಸೀಮ್ ರಿಜ್ವಿ – ‘ದೇಶದ ಬಹುತೇಕ ಜನ ಮಂದಿರ ನಿರ್ಮಾಣ ಪರವಿದ್ದರೆ ಅವರ ಭಾವನೆಗೆ ಧಕ್ಕೆ ತರುವುದೇಕೆ?’ ಎಂದು ಪ್ರಶ್ನಿಸಿದರು! ಪ್ರಧಾನಿಯಾದ ನಂತರದ ಮೋದಿಯವರ ಪ್ರತಿ ನಡೆಯೂ ಗಮನಾರ್ಹ… ಕೊನೆಗೂ ಕೋರ್ಟು ತೀರ್ಪನ್ನು ರಾಮಮಂದಿರದ ಪರವಾಗಿ ನೀಡಿತು. ಐದು ಶಶಮಾನಗಳ ಹೋರಾಟ ಮೋದಿಯವರ ಕಾಲಘಟ್ಟದಲ್ಲಿ ಸುಖಾಂತ್ಯವಾದದ್ದು ಕಾಕತಾಳೀಯವೋ ಭಗವದಿಚ್ಛೆಯೋ ದೇವರೇ ಬಲ್ಲ.”
‘ರಾಮಮಂದಿರದ ನಿರ್ಮಾಣ ಚುನಾವಣೆಯ ಗಿಮಿಕ್ಕಿನ ಒಂದು ಭಾಗ’ ಎಂದು ಹೇಳುತ್ತ ಮೋದಿಯವರು ಪ್ರಾಣಪ್ರತಿಷ್ಠೆಯ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಭಾಗವಹಿಸಿದ್ದರಲ್ಲಿ ಹಲವರು ಹುಳುಕು ಕಾಣುತ್ತಾರೆ. ಪ್ರಾಣಪ್ರತಿಷ್ಠೆಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮಂದಿರ ನ್ಯಾಸದ ಪ್ರಮುಖರು ಕೇಳಿಕೊಂಡಾಗ ಮೋದಿಯವರು ಸಹರ್ಷ ಒಪ್ಪಿಕೊಂಡು ಇದಕ್ಕೆ ಸಂಬಂಧಿಸಿದ ಆಚಾರಕ್ಕೆ ತಕ್ಕಂತೆ ಹತ್ತು ದಿನಗಳ ಕಾಲ ಉಪವಾಸ ಮಾಡಿ ಶ್ರದ್ಧೆಯಿಂದ ಕಾರ್ಯಕ್ರಮ ನೆರವೇರುವುದಕ್ಕೆ ಅನುವು ಮಾಡಿಕೊಟ್ಟರು. ಇದನ್ನೆಲ್ಲ ಕುಟುಕುವವರಿಗೆ ಎರಡು ದಿನ ಉಪವಾಸ ಮಾಡುವ ಯೋಗ್ಯತೆಯೂ ಇಲ್ಲದ್ದರಿಂದ ಅಂತಹವರ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಅವರು ತೋರಲಿಲ್ಲ.
‘ರಾಮಮಂದಿರದ ನಿರ್ಮಾಣ ಮಾಡಿ ದುಂದುವೆಚ್ಚ ಮಾಡಲಾಯಿತು. ಇದೇ ಹಣವನ್ನು ಆಸ್ಪತ್ರೆ ಕಟ್ಟಲು ಉಪಯೋಗಿಸಿದ್ದರೆ ಒಂದಷ್ಟು ಉಪಕಾರವಾದರೂ ಆಗುತ್ತಿತ್ತು’ ಎಂದವರು ಸಾಕಷ್ಟು ಜನ. ಅವರನ್ನೇ ಕುರಿತು ಲೇಖಕರೆನ್ನುತ್ತಾರೆ – ‘ಸರ್ಕಾರ ತನ್ನ ಪ್ರಣಾಳಿಕೆಯ ಭಾಗವಾಗಿದ್ದ ಮಂದಿರ ನಿರ್ಮಾಣಕ್ಕೆ ಬಜೆಟ್ಟಿನಿಂದ ಒಂದು ಮೊತ್ತವನ್ನು ಎತ್ತಿಡಬಹುದಿತ್ತು. ಆದರೆ ಸರ್ಕಾರ ಬಿಡಿಗಾಸನ್ನೂ ಇದಕ್ಕಾಗಿ ಖರ್ಚು ಮಾಡಲಿಲ್ಲ. ಭಕ್ತರ ದೇಣಿಗೆಯಿಂದಲೇ ಮಂದಿರ ನಿರ್ಮಾಣ ಎಂದು ತೀರ್ಮಾನ ಮಾಡಿ ಅದರಂತೆಯೇ ನಡೆದುಕೊಳ್ಳಲಾಯಿತು’ ಎಂದು.
ಮಂದಿರ ನಿರ್ಮಾಣಕ್ಕೆ ಹಣ ಖರ್ಚು ಮಾಡಿದ್ದರ ಬಗ್ಗೆ ಹಲವರು ಆಕ್ಷೇಪವೆತ್ತಿದ್ದರು. ಅವರಿಗೆ ಉತ್ತರವೆಂಬಂತೆ ಲೇಖಕರು ಲೆಕ್ಕಾಚಾರವೊಂದನ್ನು ಮುಂದಿಡುತ್ತಾರೆ. ‘ರಾಮಮಂದಿರಕ್ಕೆ ಅಡಿಗಲ್ಲು ಹಾಕಿದ್ದರಿಂದ ಪ್ರಾಣಪ್ರತಿಷ್ಠಾಪನೆಯ ತನಕದ ಖರ್ಚು ೯೦೦ ಕೋಟಿ. ಮಂದಿರ ಪೂರ್ಣವಾಗುವವರೆಗೆ ಅದು ೧೧೦೦ ಕೋಟಿಯಾಗಬಹುದು. ಆದರೆ ಮೊದಲು ಆರು ತಿಂಗಳವರೆಗೆ ಬರಬಹುದಾದ ಪ್ರವಾಸಿಗರ ಅಂದಾಜು ಸಂಖ್ಯೆ ಪ್ರತಿದಿನ ೫ ಲಕ್ಷ. ಪ್ರತಿಯೊಬ್ಬರೂ ಒಂದು ಸಾವಿರ ಖರ್ಚು ಮಾಡಿದರೂ ೨೨ ದಿನಗಳಲ್ಲಿ ಈ ಮೊತ್ತ ವಾಪಸಾದಂತೆಯೇ ಸರಿ. (ಐದು ಲಕ್ಷ ಜನ ಪ್ರತಿದಿನ ಬರಲಾರರು ಎಂದುಕೊಂಡರೂ ಲಕ್ಷಕ್ಕೂ ಕಡಮೆಯಿಲ್ಲದಷ್ಟು ಜನ ಬಂದೇ ಬರುವರೆಂಬುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಇದೇ ಸಂಖ್ಯೆಯನ್ನೇ ಆಧಾರವಾಗಿ ಇರಿಸಿಕೊಂಡರೂ ಕೆಲ ತಿಂಗಳುಗಳಲ್ಲೇ ಹೂಡಿಕೆ ಮಾಡಿದ ಹಣ ಹಿಂದೆ ಬಂದೇ ಬರುತ್ತದೆ. ಇದಲ್ಲದೆ ಪ್ರಾಣಪ್ರತಿಷ್ಠೆಯಾದ ತಿಂಗಳೊಳಗಾಗಿ ದಾನವಾಗಿ ಬಂದ ಹಣ ೨೫ ಕೋಟಿಗೂ ಮಿಕ್ಕಿದೆ) ಇಲ್ಲಿನ ಪ್ರವಾಸೋದ್ಯಮ ಒಂದು ಲಕ್ಷ ಕೋಟಿ ತಲಪಿದ್ದು ೨೦,೦೦೦ ಉದ್ಯೋಗಗಳ ಸೃಷ್ಟಿಯಾಗಲಿದೆ. ಎಲ್ಲ ಸಂಪರ್ಕಾನುಕೂಲಗಳೂ ಒದಗಿದಲ್ಲಿ ದೊಡ್ಡ ಪ್ರಮಾಣದಲ್ಲಿ ವಿದೇಶೀಯರನ್ನೂ ಇದು ಸೆಳೆಯಬಲ್ಲದು. ದಕ್ಷಿಣ ಏಷಿಯಾದ ರಾಷ್ಟ್ರಗಳು ಭಾವನಾತ್ಮಕವಾಗಿ ರಾಮಾಯಣದೊಂದಿಗೆ ಬೆಸೆದುಕೊಂಡಿರುವುದರಿಂದ ಈ ಮಂದಿರ ಅವರನ್ನೆಲ್ಲ ಸೆಳೆಯಬಹುದು. ಇಲ್ಲಿಗೆ ಬಂದವರು ಭಾರತವನ್ನು ಸುತ್ತಿಯೇ ಹೋಗುತ್ತಾರೆ. ಇದೇ ಕಾರಣಕ್ಕೆ ಭಾರತದ ಪ್ರಸಿದ್ಧ ದೇವಾಲಯಗಳ ಆದಾಯದಲ್ಲೂ ಗಣನೀಯವಾಗಿ ಏರಿಕೆ ದಾಖಲಾಗಿದೆ. ಗೋವಾದ ಬೀಚುಗಳು, ಟ್ರಕ್ಕಿಂಗು ಇತ್ಯಾದಿಗಿಂತ ಹೆಚ್ಚು ಜನ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ. ಒಟ್ಟಾರೆ ಪ್ರವಾಸಿಗರ ೬೦%ದಷ್ಟು ಜನ ಈ ಸ್ಪಿರಿಚುಯಲ್ ಟೂರಿಸಂಗೆ ಆಕರ್ಷಿತರಾಗಿದ್ದಾರೆ. ೨೦೨೧ರಲ್ಲಿ ಧಾರ್ಮಿಕ ಕ್ಷೇತ್ರಗಳ ಆದಾಯ ೬೦ ಸಾವಿರ ಕೋಟಿ ಇತ್ತು, ೨೦೨೨ಕ್ಕೆ ಇದು ದುಪ್ಪಟ್ಟಾಗಿ ೧.೩ ಲಕ್ಷ ಕೋಟಿಯಷ್ಟಾಯಿತು. ೨೦೨೧ರಲ್ಲಿ ೧.೦೫ ಮಿಲಿಯನ್ನಿನಷ್ಟು ವಿದೇಶೀಯರು, ೬೭೭ ಮಿಲಿಯನ್ನಿನಷ್ಟು ಭಾರತೀಯರು ಈ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಟ್ಟರೆ, ೨೦೨೨ರಲ್ಲಿ ೧,೪೩೩ ಮಿಲಿಯನ್ ಭಾರತೀಯರು, ೬.೬೪ ಮಿಲಿಯನ್ನಿನಷ್ಟು ಹೊರದೇಶದವರು ಭೇಟಿ ನೀಡಿದ್ದಾರೆ.’
ಪ್ರವಾಸೋದ್ಯಮದ ಬಗ್ಗೆ ಲೇಖಕರ ಹೇಳಿಕೆ ಹೀಗಿದೆ – ‘ಪ್ರವಾಸೋದ್ಯಮವೆಂದರೆ ಒಂದೇ ಆಯಾಮದಿಂದ ಯೋಚಿಸುವ ಕ್ಷೇತ್ರವಲ್ಲ. ದೇವಸ್ಥಾನಗಳಿಗೆ ಯೋಜನೆ ಹಾಕಿಕೊಂಡಂತೆ ಬೀಚುಗಳಿಗೆ ಹಾಕಿಕೊಳ್ಳಲಾಗದು. ಕಣಿವೆಗಳಿಗೂ ಮತ್ತು ಪರ್ವತ ಶ್ರೇಣಿಗಳಿಗೂ ಇರುವ ವಾತಾವರಣಗಳೇ ಬೇರೆ. ಈಶಾನ್ಯ ರಾಜ್ಯಗಳು ಗಡಿ ಸಮಸ್ಯೆಗಳ ಜೊತೆಗೆ, ಸಲೀಸಾಗಿ ರಸ್ತೆಗಳನ್ನು ಮಾಡಲಾಗದ ಪ್ರಕೃತಿಯನ್ನು ಹೊಂದಿವೆ. ಮತ್ತೊಂದೆಡೆ, ಹಳೆಯ ಸರ್ಕಾರಗಳು ಹಚ್ಚಿಟ್ಟ ಬೆಂಕಿಯಿಂದ ಕಾಶ್ಮೀರ ಧಗಧಗಿಸುತ್ತಿದೆ. ಹೀಗಾಗಿ ಹಲವು ಕೋನಗಳಲ್ಲಿ ಯೋಚಿಸಿ ಯೋಜಿಸಿದರೆ ಪ್ರವಾಸೋದ್ಯಮ ಚಿನ್ನದ ಫಸಲು ಬೆಳೆಯಬಲ್ಲ ಕ್ಷೇತ್ರ, ಈ ಸೂಕ್ಷ್ಮಗಳು, ಒಳನೋಟಗಳು ದಕ್ಕದೇ ಹೋದರೆ ಹನಿ ನೀರೂ ಜಿನುಗದ ಮರುಭೂಮಿ.’
ಇತ್ತೀಚಿನ ವರ್ಷಗಳಲ್ಲಿ ತುಂಬ ಚರ್ಚೆಗೊಳಪಟ್ಟ ವಿಷಯ – ‘ಅಗ್ನಿಪಥ’. ಇದನ್ನು ವಿರೋಧಿಸಿ ಒಂದಷ್ಟು ಮೆರವಣಿಗೆಗಳೂ ನಡೆದವು. ದಂಗೆ ಕೂಡ ನಡೆಯಿತು. ಈ ಯೋಜನೆಯ ಹಿನ್ನೆಲೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ರಾಜಕೀಯ ಲಾಭಕ್ಕೋಸ್ಕರ ಆಡಳಿತ ಪಕ್ಷಕ್ಕೆ ಮಸಿಬಳಿಯಬೇಕೆಂಬ ಒಂದೇ ಉದ್ದೇಶದಿಂದ ಮುಗ್ಧ ತರುಣರನ್ನು ಹಳಿ ತಪ್ಪಿಸುವ ಭಾಷಣ ಮಾಡಿ ಸುಕಾಸುಮ್ಮನೆ ಉದ್ವೇಗವನ್ನು ಹುಟ್ಟುಹಾಕಿ ರೋಷವುಕ್ಕುವಂತೆ ಮಾಡಲಾಯಿತು. ಅದಕ್ಕಾಗಿಯೇ ಅಗ್ನಿಪಥದ ಹಿನ್ನೆಲೆಯನ್ನು ವಿವರಿಸಲೆಂದೇ ಈ ಪುಸ್ತಕಸದಲ್ಲಿ ಪ್ರತ್ಯೇಕ ಒಂದು ಅಧ್ಯಾಯವಿದೆ. ಅದರಲ್ಲಿ ಅಗ್ನಿಪಥದ ಗುಣಾಂಶಗಳೇನು, ಅದರಿಂದ ದೊರೆಯುವ ಪ್ರಯೋಜನವೇನು ಎಂಬುದನ್ನೆಲ್ಲ ಚೆನ್ನಾಗಿ ವಿವರಿಸಲಾಗಿದೆ.
‘ಬಿಳಿ ಆನೆಯೊಂದು ಹಾಲು ಕೊಡುವ ಹಸುವಾದ ಬಗೆ ಹೇಗೆ?’ ಎಂಬ ಶೀರ್ಷಿಕೆಯಡಿ ಏರ್ ಇಂಡಿಯಾ ಯಾಕೆ ಬಿಳಿಯಾನೆಯಾಗಿತ್ತು ಎಂಬುದನ್ನು ವಿವರಿಸಿ, ಇಂದು ಅದು ಹಾಲು ಹಿಂಡುವ ಹಸುವಾಗಿ ಹೇಗೆ ಬದಲಾಗುತ್ತಿದೆ ಎಂಬುದನ್ನು ವಿವರಿಸಲಾಗಿದೆ.
ಬಾಹ್ಯಾಕಾಶ
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ದಾಪುಗಾಲಿಡುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಬೇಕಾದರೆ ಮೂಟೆಗಟ್ಟಲೆ ಹಣ ಸುರಿಯಬೇಕು. ಒಂದು ರೀತಿಯಲ್ಲಿ ಜುಟ್ಟಿಗೆ ಮಲ್ಲಿಗೆ ಮಾಲೆ ಕಟ್ಟುವ ಕೆಲಸವಿದು. ಹೊಟ್ಟೆಗೆ ಹಿಟ್ಟಿಲ್ಲದಾಗ ಜುಟ್ಟಿಗೆ ಮಲ್ಲಿಗೆಯೇಕೆ ಎಂಬು ಹಲವರು ಕೇಳುವುದುಂಟು. ಆದರಿಂದು ಅವರೆಲ್ಲ ಬಾಯಿಮುಚ್ಚಿ ತೆಪ್ಪಗೆ ಕುಳಿತಿರಬೇಕಾದ ಸ್ಥಿತಿ ಬಂದಿದೆ.
ಉಪಗ್ರಹದ ಮೂತಿಭಾಗವನ್ನು ಸೈಕಲ್ ಮೇಲಿರಿಸಿ ಸಾಗಿಸಬೇಕಾದ ಸ್ಥಿತಿ ಹಿಂದೊಮ್ಮೆ ಇತ್ತು. ಆದರೆ ಇಂದು ಎಲ್ಲವೂ ಅದಲು ಬದಲು. ಯಾವುದೇ ಊರಿನಲ್ಲಿ ಯಾರನ್ನೂ ಕೇಳದೆ ಅಥವಾ ಅವಲಂಬಿಸದೆ ಯಾವುದೋ ಮೂಲೆಯಲ್ಲಿರುವ ಮನೆಯನ್ನೂ ಕರಾರುವಾಕ್ಕಾಗಿ ಹುಡುಕಿಕೊಂಡು ಹೋಗಬಹುದಾಗಿದೆ. ಕಿಸೆಯಲ್ಲಿ ನಗದಾಗಿ ಒಂದು ರೂಪಾಯಿಯೂ ಇಲ್ಲದೆಯೆ ಎಲ್ಲ ಆರ್ಥಿಕ ವ್ಯವಹಾರಗಳನ್ನೂ ಯುಪಿಐ ಮೂಲಕ ಯಾರು ಬೇಕಾದರೂ ಮಾಡಬಹುದಾಗಿದೆ. ತರಕಾರಿ ಮಾರುವ ಅಶಿಕ್ಷಿತ ಹಳ್ಳಿ ಹೆಂಗಸೂ ಇಂದು ಯುಪಿಐ ಮೂಲಕ ಹಣದ ವಹಿವಾಟು ಮಾಡುತ್ತಾಳೆ. ಸರಕಾರದ ಹತ್ತುಹಲವು ಯೋಜನೆಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ಕೊಟ್ಟಕೊನೆಯ ಫಲಾನುಭವಿ ವ್ಯಕ್ತಿಯವರೆಗೂ ಸುಲಲಿತವಾಗಿ ತಲಪುವಂತಾಗಿರುವುದು ಇದೇ ಯುಪಿಐ ಕಾರಣದಿಂದಲೇ. ಮಧ್ಯವರ್ತಿಗಳ ಕೈಚಳಕಕ್ಕೆ ಅವಕಾಶ ಕಡಮೆಯಾದದ್ದರಿಂದ ಭ್ರಷ್ಟಾಚಾರಕ್ಕೂ ಒಂದಿಷ್ಟು ಕಡಿವಾಣ ಬಿದ್ದಿದೆಯೆನ್ನಬಹುದು. ಹೀಗೆ ಹತ್ತುಹಲವು ಬಗೆಗಳಲ್ಲಿ ಸಾಮಾನ್ಯರ ಬದುಕಿಗೆ ಅಸಾಮಾನ್ಯ ನೆರವು ದೊರಕಿದೆ ಉಪಗ್ರಹಗಳ ಉಡಾವಣೆಯ ಮೂಲಕ. ಜುಟ್ಟಿನ ಮಲ್ಲಿಗೆಯೇ ಹೊಟ್ಟೆಗೆ ಹಿಟ್ಟನ್ನೊದಗಿಸುತ್ತಿರುವ ಪರಿಯಿದು.
ಬಾಹ್ಯಾಕಾಶಕ್ಷೇತ್ರದ ಬಗ್ಗೆ ತಿಳಿಸುವಾಗಲೇ ನಂಬಿ ನಾರಾಯಣ್ ಅವರ ಕಥೆಯೂ ತೆರೆದುಕೊಳ್ಳುತ್ತದೆ. ಭಾರತದ ರಾಕೆಟ್ ಇಂಜಿನ್ನುಗಳ ಡಿಸೈನನ್ನು ಮಾರಿಕೊಳ್ಳಲಾಗುತ್ತಿದೆ ಎಂಬ ಕಥೆ ಕಟ್ಟಿ ನಂಬಿಯವರನ್ನು ಸೆರೆಗಟ್ಟಲಾಯಿತು. ‘ನಮ್ಮಲ್ಲಿ ಸ್ವಂತ ಕ್ರಯೋಜನಿಕ್ ಇಂಜಿನ್ನೇ ಇಲ್ಲ. ನಮ್ಮಲ್ಲಿರುವ ಡಿಸೈನ್ಗಳು ಮುಕ್ತವಾಗಿ ಯಾವುದೇ ಪುಸ್ತಕ ತೆರೆದರೂ ಕಾಣಸಿಗುತ್ತವೆ. ಇದರಲ್ಲಿ ಮಾರಿಕೊಳ್ಳುವುದಂತಹದೇನೂ ಇಲ್ಲ. ಕೊಂಡುಕೊಳ್ಳುವವರೂ ಇರಲು ಸಾಧ್ಯವಿಲ್ಲ’ ಎಂದು ನಂಬಿಯವರು ಪರಿಪರಿಯಾಗಿ ವಿವರಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಪೊಲೀಸರು ತಾವೇ ಸಿದ್ಧಪಡಿಸಿದ ಕಥೆಗೆ ನಂಬಿಯವರು ‘ಹೂಂ’ ಅನ್ನಬೇಕೆಂದು ಒತ್ತಡ ಹೇರಿ ಅವರಿಗೆ ಬಗೆಬಗೆಯ ಚಿತ್ರಹಿಂಸೆ ನೀಡಲಾಯಿತು. ಈ ಎಲ್ಲದರ ಹಿನ್ನೆಲೆಯನ್ನು ವಿಸ್ತಾರವಾಗಿ ವಿವರಿಸಿ, ನಂಬಿಯವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ್ದನ್ನೂ ತಿಳಿಸಿ ಎರಡೂ ತಂಡಗಳ ದೃಷ್ಟಿ-ನಿಲವುಗಳ ಔಚಿತ್ಯವನ್ನು ನಿರ್ಣಯಿಸುವ ಹೊಣೆಯನ್ನು ಲೇಖಕರು ನಮಗೇ ಬಿಡುತ್ತಾರೆ.
ಮುಸ್ಲಿಮರು ಪ್ರಜ್ಞಾವಂತರಾಗಬೇಕಾದ ಕಾಲ
ಈಶಾನ್ಯದ ಸಪ್ತ ಸಹೋದರಿಯರಲ್ಲಿ ಒಂದಾದ ಮಣಿಪುರ ಹೊತ್ತಿ ಉರಿದಿದ್ದು ನಮಗೆಲ್ಲ ಗೊತ್ತೇ ಇದೆ. ಮೈತೇಯಿಗಳಿಗೆ ಮೀಸಲಾತಿ ನೀಡಿದಾಗ ಅಲ್ಲಿ ಹಿಂದೆಂದೂ ಕಾಣದ ದೊಂಬಿಗಳು ನಡೆದವು. ಇದರಲ್ಲಿ ಕುಕ್ಕಿಗಳ ಪಾತ್ರವೇನು, ನುಸುಳುಕೋರರ ಕೈವಾಡವೇನು ಎಂದು ಮುಂತಾದವನ್ನೆಲ್ಲ ವಿವರಿಸಿ, ಈ ಸಮಸ್ಯೆಗೆ ಪರಿಹಾರವಾಗಿ ಮಾಡಬೇಕಾದ ಕೆಲಸವನ್ನೂ ಈ ಪುಸ್ತಕದಲ್ಲಿ ವಿವರಿಸಿದೆ. ಇದಕ್ಕೆ ಹತ್ತಿರವಾದ ಸಿಎಎಯ ಬಗ್ಗೆಯೂ ಈ ಪುಸ್ತಕದಲ್ಲಿ ಚರ್ಚೆಯಿದೆ.
ಕೇಂದ್ರಸರ್ಕಾರ ಮುಸ್ಲಿಂ ವಿರೋಧಿಯಲ್ಲ ಎಂಬುದನ್ನು ವಿವರಿಸುವಾಗ ಮುಸ್ಲಿಮರಲ್ಲಿರುವ ಮುಖ್ಯ ಮೂರು ವಿಭಾಗಗಳನ್ನು – (ಅಶ್ರಫ್ಗಳು, ಅಜ್ಲಪ್ಗಳು, ಅರ್ಜಾಲ್ಗಳು ಎಂದು) ವಿವರಿಸಿ ‘ಪಸ್ಮಂಡಾ’ಗಳು (ಅಜ್ಲಪ್ ಹಾಗೂ ಅರ್ಜಾಲ್ಗಳನ್ನು ಒಟ್ಟಾಗಿ ‘ಪಸ್ಮಂಡಾ’ ಎನ್ನಲಾಗುತ್ತದೆ. ಇವರು ೮೫% ಇದ್ದಾರೆ.) ಎದುರಿಸುತ್ತಿರುವ ಸಮಸ್ಯೆಯೇನು ಎಂದು ತಿಳಿಸಿ ಮುಸ್ಲಿಮರ ಏಳಿಗೆಗಾಗಿ ಇರುವ ಸ್ಕೀಮ್ಗಳ ವಿವರ ನೀಡುತ್ತಾರೆ ಲೇಖಕರು. ‘ಇಮಾಮ್ ಟೋಪಿ ಹಾಕದೆಯೂ ಮುಸ್ಲಿಮರ ಪರ ನಿಲ್ಲಬಹುದು. ಅವರ ಸರ್ವತೋಮುಖ ಬೆಳವಣಿಗೆಗೆ ನೆರವಾಗಬಹುದು’ ಎಂದು ಹೇಳುತ್ತ ‘ಮುಸ್ಲಿಮರು ಪ್ರಜ್ಞಾವಂತರಾಗಲೇಬೇಕಾದ ಕಾಲವಿದು’ ಎಂಬುದನ್ನು ನೆನಪಿಸುತ್ತಾರೆ.
ವಸುಧೈವ ಕುಟುಂಬಕಂ
“ಗ್ಲೋಬಲ್ ಸೌತ್ ಎಂಬುವ ಗುಬ್ಬಚ್ಚಿಗಳಿಗೆ ತಂಗಲು ಕಾನಾಗಿದೆ ಭಾರತ’ ಎಂದು ಹಿಂದೆಯೇ ಹೇಳಿದೆ. ಇದೊಂದು ಆಲಂಕಾರಿಕ ಹೇಳಿಕೆಯಲ್ಲ ಎಂಬುದನ್ನು ದೃಢಪಡಿಸುತ್ತದೆ ಜಿ೨೦ರ ಸಮಾವೇಶ. ಇದರ ಅಧ್ಯಕ್ಷತೆ ಭಾರತಕ್ಕೆ ಸಿಕ್ಕಿತು. ಪ್ರತಿವರ್ಷ ಈ ಅಧ್ಯಕ್ಷತೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹಸ್ತಾಂತರವಾಗುತ್ತ ಹೋಗುವುದರಿಂದ ಈ ಅಧ್ಯಕ್ಷತೆ ಭಾರತಕ್ಕೆ ಸಿಕ್ಕಿದುದರಲ್ಲಿ ಹೆಚ್ಚುಗಾರಿಕೆಯೇನೂ ಇಲ್ಲವೆನ್ನಬಹುದು. ಆದರೆ ನಮ್ಮ ದೇಶ ಇದನ್ನು ಬಳಸಿಕೊಂಡ ಪರಿ ತುಂಬ ವಿಶಿಷ್ಟವಾದದ್ದು. ಜಿ೨೦ ಎಂಬುದು ಜಗತ್ತಿನ ೬೦% ಜನಸಂಖ್ಯೆ ಹೊಂದಿರುವ, ೮೫% ಜಿಡಿಪಿಯನ್ನು ಹೊಂದಿರುವ, ೭೫% ವೈಶ್ವಿಕ ವಹಿವಾಟನ್ನು ಹೊಂದಿರುವ ದೇಶಗಳ ಒಂದು ಗುಂಪಾಗಿದೆ. ಇದಕ್ಕೂ ಮೊದಲು ಜಿ೭ ಎಂಬ ಏಳು ದೇಶಗಳ ಗುಂಪಿತ್ತು. ಈ ಏಳು ಪಾಶ್ಚಾತ್ಯ ದೇಶಗಳು ತಮ್ಮ ಹಿತಾಸಕ್ತಿ ಮತ್ತು ತಮ್ಮ ಆರ್ಥಿಕಾಭಿವೃದ್ಧಿಗೆ ಮಾಡಿಕೊಂಡ ಗುಂಪು ಇದಾಗಿತ್ತು. ಆದರೆ ಒಂದು ದೇಶದಲ್ಲಾಗುವ ಅಲ್ಲೋಲ-ಕಲ್ಲೋಲಗಳು ಇಡೀ ವಿಶ್ವವನ್ನು ಅಲುಗಾಡಿಸಿ ಬಿಡುತ್ತವೆ. ಹೀಗಾಗಿ ‘ಜಿ’ಯನ್ನು ವೃದ್ಧಿಸುವ ತುರ್ತಿದ್ದುದರಿಂದ ೧೯೯೯ರಲ್ಲಿ ಜಿ೨೦ ನಿರ್ಮಾಣವಾಯಿತು. ೨೦೦೮ರ ಆರ್ಥಿಕ ತೊಂದರೆ ಎದುರಿಸಿದ ನಂತರವೇ ಜಿ೨೦ರ ಎಲ್ಲ ದೇಶಗಳು ಈ ಗುಂಪಿನಲ್ಲಿ ಪ್ರಮುಖ ಪಾತ್ರ ವಹಿಸತೊಡಗಿದವು. ಜಿ೨೦ರಲ್ಲಿ ಚರ್ಚೆಯಾಗುವ ವಿಷಯಗಳನ್ನು ಎರಡು ವಿಭಿನ್ನ ವರ್ಗಗಳಾಗಿ ವರ್ಗೀಕರಿಸಬಹುದು. ಅದರಲ್ಲಿ ಒಂದು ಆರ್ಥಿಕ ನಿರ್ಧಾರಗಳು. ಮತ್ತೊಂದು ಶೇರ್ಪಾ ನಿರ್ಧಾರಗಳು. ಆರ್ಥಿಕ ನಿರ್ಧಾರಗಳಲ್ಲಿ ಬೇರೆಬೇರೆ ದೇಶದ ಆರ್ಥಿಕ ಮಂತ್ರಿಗಳು ವೈಶ್ವಿಕ ಅರ್ಥವ್ಯವಸ್ಥೆಯ ಕುರಿತು ಚರ್ಚೆ ಮಾಡುತ್ತಾರೆ. ಅದರಂತೆಯೇ ಶೇರ್ಪಾದಲ್ಲಿ ವಿದೇಶಾಂಗ ವ್ಯವಹಾರಗಳ ಚರ್ಚೆಯಾಗುತ್ತದೆ. ಯಾವ ದೇಶ ಜಿ೨೦ರ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತೋ ಅದಕ್ಕೆ ಇನ್ನಿತರೆ ಹೆಚ್ಚುವರಿ ಅಧಿಕಾರಗಳು ಸಿಗುತ್ತವೆ. ಅದರಲ್ಲೊಂದು ಜಿ೨೦ರಲ್ಲಿಲ್ಲದ ದೇಶಗಳನ್ನೂ ಈ ಸಭೆಗಳಿಗೆ ಆಹ್ವಾನಿಸುವ ಅಧಿಕಾರ. ಹೀಗೆ ಆಹ್ವಾನ ನೀಡುವ ಮೂಲಕ ಒಂದು ಗಟ್ಟಿ ಸಂಬಂಧ ದೇಶದೇಶಗಳ ಮಧ್ಯೆ ಏರ್ಪಡುತ್ತದೆ. ಭಾರತ ಇಲ್ಲಿಯೂ ಗೆದ್ದಿತು. ಭಾರತದ ವಿದೇಶಾಂಗ ವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಕೆಲವು ದೇಶಗಳನ್ನು ಆಹ್ವಾನಿಸಿತು. ಅದರಲ್ಲಿ ಯುಎಇ ಕೂಡಾ ಒಂದು. ಅದಲ್ಲದೆ ಬಾಂಗ್ಲಾದೇಶ, ಈಜಿಪ್ಟ್, ಮಾರಿಷಿಯಸ್, ನೆದರ್ಲೆಂಡ್ಸ್, ನೈಜೀರಿಯಾ, ಓಮನ್, ಸಿಂಗಾಪುರ, ಸ್ಪೇನಿನಂಥ ದೇಶಗಳಿಗೂ ಆಹ್ವಾನ ನೀಡಿತು. ಪ್ರತಿ ದೇಶವೂ ಭಾರತಕ್ಕೆ ಒಂದೊಂದು ರೀತಿಯಲ್ಲಿ ಮುಖ್ಯ. ಅದಲ್ಲದೆ ಭಾರತ ಗ್ಲೋಬಲ್ ಸೌತ್ ದೇಶಗಳ ಧ್ವನಿಯಾಗುತ್ತೇನೆ ಎಂದು ಭರವಸೆ ನೀಡಿದ್ದು ಒಂದು ಮಾಸ್ಟರ್ ಸ್ಟ್ರೋಕ್. ಮೋದಿಯವರು ಬಾಲಿಯ ಜಿ೨೦ ಶೃಂಗಸಭೆಯಲ್ಲಿ ಹೇಳಿದ್ದೇನೆಂದರೆ ಮಲ್ಟಿಲಾಟರಲ್ ಇನ್ಸ್ಟಿಟ್ಯೂಟ್ಗಳಾದ UN, WHO, WTOಗಳೆಲ್ಲವೂ ಅಭಿವೃದ್ಧಿ ಹೊಂದಿದ ದೇಶಗಳ ಇಶಾರೆಯ ಮೇಲೆ ನಡೆಯುವ ಸಂಸ್ಥೆಗಳಾಗಿದ್ದರಿಂದ ವಿಶ್ವದ ಅಭಿವೃದ್ಧಿಯ ದೃಷ್ಟಿಯಿಂದ ಕೆಲಸ ಮಾಡುತ್ತಿಲ್ಲ ಎಂದು. ಭಾರತ ಈಗ ರಷ್ಯಾ, ಸೌದಿ ಅರೇಬಿಯಾ, ಅಮೆರಿಕ, ಇಸ್ರೇಲ್ ಮುಂತಾದ ಯಾವುದೇ ದೇಶದೊಂದಿಗೆ ನಿರಾಯಾಸವಾಗಿ ಮಾತಾಡಬಲ್ಲ ಏಕೈಕ ರಾಷ್ಟ್ರವಾಗಿದೆ. ಭಾರತದ ವಿದೇಶಾಂಗ ನೀತಿ ಹಿಂದೆಂದಿಗಿಂತಲೂ ಅದ್ಭುತವಾದ ಹಂತ ತಲಪಿದೆ. ಈಗ ಭಾರತ ತನ್ನ ಪ್ರಭುತ್ವ ಸಾಧಿಸಲು ಒಳ್ಳೆಯ ಅವಕಾಶಗಳಿವೆ. ಅದಲ್ಲದೆ ಭಾರತ ೧೪೦ ಕೋಟಿ ಜನಸಂಖ್ಯೆ ಇರುವ ದೇಶವಾದ್ದರಿಂದ ಯಾವುದೇ ದೇಶದ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆಯೂ ಹೌದು. ಇಂಥ ದೊಡ್ಡ, ವಿಶ್ವಮಟ್ಟದ ಸಭೆಗಳಿಗೆ ಅತಿಥೇಯರಾಗುವುದರಿಂದ ಜಗತ್ತಿನ ಅಷ್ಟೂ ರಾಷ್ಟ್ರಗಳ ದೃಷ್ಟಿ ನಮ್ಮ ದೇಶದ ಮೇಲೆ ಬೀಳುತ್ತದೆ. ಇದು ನಮ್ಮ ದೇಶದ ಮಟ್ಟಿಗೆ ತನ್ನ ಅಭಿವೃದ್ಧಿಯನ್ನೂ, ಸಂಸ್ಕೃತಿಯನ್ನೂ ವಿಶ್ವಕ್ಕೆ ತೋರಿಸುವ ಸುವರ್ಣಾವಕಾಶ.
ಭಾರತ ಈಗ ಉತ್ಪಾದನೆಯಲ್ಲಿ ಮುಂದುವರಿಯುತ್ತಿದೆ. ನವೀಕರಿಸಬಹುದಾದ ಶಕ್ತಿಯನ್ನು ಹೆಚ್ಚೆಚ್ಚು ಉತ್ಪಾದಿಸುತ್ತಿದೆ. UPI ಈ ದಶಕದ ಅತಿ ದೊಡ್ಡ ಆರ್ಥಿಕ ಕ್ರಾಂತಿಯೆಂದರೆ ತಪ್ಪಾಗಲಾರದು. ಭಾರತದ ಹಲವು ಪ್ರವಾಸಿತಾಣಗಳು ವಿದೇಶಿಗರನ್ನು ಸೆಳೆಯಬಲ್ಲವು. ಇಂಥ ಹಲವು ವಿಷಯಗಳನ್ನು ಜಗತ್ತಿನ ಮುಂದೆ ತೆರೆದಿಡುವ ಸುವರ್ಣಾವಕಾಶವಿದು.”
“ಈ ಬಾರಿಯ ಜಿ೨೦ ಒಂದೇ ನಗರಕ್ಕೆ ಸೀಮಿತವಾಗದೆ ದೇಶವ್ಯಾಪಿಯಾಗಿ ಹಬ್ಬಿತ್ತು. ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು ೬೦ ನಗರಗಳಲ್ಲಿ ೨೦೦ಕ್ಕೂ ಅಧಿಕ ಸಭೆಗಳು ನಡೆದವು. ಬೇರೆ ದೇಶದ ೨೫,೦೦೦ಕ್ಕೂ ಅಧಿಕ ಜನ ಈ ಸಮಾರಂಭಗಳಲ್ಲಿ ಪಾಲ್ಗೊಂಡರು. ಭಾರತ ತನ್ನ ಅಭಿವೃದ್ಧಿಯ ತಾಕತ್ತನ್ನು ತೋರುವ ಯಾವ ಅವಕಾಶವನ್ನೂ ಕಳೆದುಕೊಳ್ಳಲಿಲ್ಲ. UPI ನಿಂದ INFRASTRUCTURE ತನಕ ಎಲ್ಲವನ್ನೂ ವಿಶ್ವದ ಮುಂದಿಟ್ಟಿತು. ಭಾರತ ಈ ನಾಯಕರೆದುರು DIGITAL PUBLIC INFRASTRUCTURE (UPI)ನ ಯೋಜನೆಯನ್ನು ಮುಂದಿಟ್ಟಿತು. ಹಾಗೆಂದರೇನು ಎಂದರೆ ಭಾರತದಲ್ಲಿ UPI, digi lockerಗಳಿರುವಂತೆ ಹೊರದೇಶಗಳಲ್ಲೂ ಇಂಥ ಡಿಜಿಟಲ್ ವ್ಯವಸ್ಥೆಗಳಿರುತ್ತವೆ. ಒಬ್ಬರಿಗೊಬ್ಬರು ಇಂಥ ತಂತ್ರಜ್ಞಾನವನ್ನು ಹಂಚಿಕೊಂಡರೆ ದೊಡ್ಡ ವ್ಯವಸ್ಥೆಯೊಂದನ್ನು ಜಾಗತಿಕ ಮಟ್ಟದಲ್ಲಿ ನಿರ್ಮಾಣ ಮಾಡಬಹುದು ಎಂಬ ಪ್ರಸ್ತಾಪ ಇದಾಗಿತ್ತು.”
ಜಿ೨೦ರ ಅತಿ ಮುಖ್ಯ ಅಂಶವೆಂದರೆ ಆಫ್ರಿಕಾವನ್ನು ಜಿ೨೦ಕ್ಕೆ ಭಾರತವು ತನ್ನದೇ ಮುಂದಾಳುತ್ವದಲ್ಲಿ ಸೇರಿಸಿತು. ‘ಇದು ಕೊನೆಯ ಜಿ೨೦. ಮುಂದಿನದ್ದು ಜಿ೨೧’ ಎಂದು ಪುನರುಚ್ಚರಿಸಿತು. ಆಫ್ರಿಕನ್ ಯೂನಿಯನ್ನನ್ನು ಸೇರಿಸಿಕೊಂಡದ್ದು ಹೇಗೆ ಮಹತ್ತ್ವದ ಘಟನೆಯಾದೀತು ಎಂದರೆ ಆಫ್ರಿಕನ್ ಯೂನಿಯನ್ನಿನಲ್ಲಿ ೫೫ ದೇಶಗಳಿದ್ದು ೧.೩ ಬಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ ಈಜಿಪ್ಟ್, ಇಥಿಯೋಪಿಯಾ, ದಕ್ಷಿಣ ಆಫ್ರಿಕಾದಂಥ ದೇಶಗಳೂ ಬರುತ್ತವೆ. ಆಫ್ರಿಕಾದಲ್ಲಿ ಬಂಡವಾಳ ಹೂಡಲು ಅತಿ ಹೆಚ್ಚು ಅವಕಾಶಗಳಿವೆ. ಆಫ್ರಿಕಾದ ಜನರ ಸರಾಸರಿ ವಯಸ್ಸು ೧೮ ವರ್ಷವಾದ ಕಾರಣ ಯುವಕರಿರುವ ದೇಶ ಮಹತ್ತ್ವಾಕಾಂಕ್ಷೆಯ ಕೇಂದ್ರವಾಗಬಲ್ಲದು. ಕೀನ್ಯಾ ಆಫ್ರಿಕಾದ ಸಿಲಿಕಾನ್ ವ್ಯಾಲಿಯಾಗಿದೆ. ಹಲವಾರು ಸ್ಟಾರ್ಟ್ಅಪ್ಗಳು ಇಲ್ಲಿ ಹುಟ್ಟುತ್ತಿವೆ. ಈ ದೇಶಗಳಲ್ಲಿ ಕೃಷಿಗೆ ಅತಿ ಹೆಚ್ಚು ಅವಕಾಶವಿದೆ. ಚಿನ್ನ ಮತ್ತು ವಜ್ರದ ಅದಿರುಗಳು ಹೇರಳವಾಗಿವೆ. ಭವಿಷ್ಯತ್ತಿನ ತಂತ್ರಜ್ಞಾನವನ್ನು ನಿರ್ಧರಿಸಬಲ್ಲ ಲೀಥಿಯಂನಂಥ ವಿರಳ ಮೂಲವಸ್ತುಗಳ (ಎಲೆಕ್ಟಿçಕ್ ವಾಹನಗಳಿಗೆ ಬಳಸುತ್ತಾರೆ) ಆಗರವಾಗಿದೆ ಆಫ್ರಿಕಾ. ಹೀಗಾಗಿ ಆಫ್ರಿಕಾದ ಸೇರ್ಪಡೆ ಭಾರತದ ಪಾಲಿಗೆ ಗಮನಾರ್ಹ ಗೆಲುವು. ಭಾರತ ೨೦೩೦ರವರೆಗೆ ೧೫೦ ಬಿಲಿಯನ್ ಡಾಲರಿನಷ್ಟು ಬಂಡವಾಳವನ್ನು ಆಫ್ರಿಕಾದಲ್ಲಿ ಹೂಡಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ವಿದೇಶಾಂಗ ವ್ಯವಹಾರ ಅಲಿಪ್ತ ನೀತಿಯಂಥ ಜಡವಸ್ತುವಲ್ಲ. ಕಾಲಕ್ಕೆ ತಕ್ಕಂತೆ ಮಾರ್ಗಗಳನ್ನು ರೂಪಿಸಿಕೊಂಡು ಹರಿಯುವ ಚಲನಶೀಲ ವಸ್ತು. ತನ್ನ ಗುಣಧರ್ಮಗಳನ್ನು ಕಳೆದುಕೊಳ್ಳದೆ ಹಾಕಿದ ಪಾತ್ರೆಗೆ ತಕ್ಕಂತೆ ರೂಪ ಮಾತ್ರ ಬದಲಿಸಿಕೊಳ್ಳುವ ನೀರಿನಂಥ ವಸ್ತು. ಭಾರತದ ವಿದೇಶಾಂಗ ನೀತಿಯ ವಿಷಯದಲ್ಲಿ ನಾವು ಬೆಳೆದ ಎತ್ತರ ಅನುಪಮವಾದದ್ದು. ಅದರ ಸ್ಥೂಲ ವಿವರಣೆ ಇಂತಿದೆ –
ತಪ್ಪಿದ ಮರಣದಂಡನೆ
“ಭಾರತದ ನೌಕಾದಳದಿಂದ ನಿವೃತ್ತರಾದ ನಂತರ ಕತಾರಿಗೆ ಹೋಗಿ ಅಲ್ಲಿನ ‘ದೋಹಾ ಗ್ಲೋಬಲ್ ಟೆಕ್ನಾಲಜೀಸ್ ಆಂಡ್ ಕನ್ಸಲ್ಟನ್ಸಿ ಸರ್ವಿಸಸ್’ನಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂಟು ಜನರನ್ನು ೨೦೨೨ರಲ್ಲಿ ಬಂಧಿಸಲಾಗಿತ್ತು. ತದನಂತರ ಕತಾರೀ ಕೋರ್ಟು ಮರಣದಂಡನೆಯನ್ನು ವಿಧಿಸಿದ ಸುದ್ದಿ ತಿಳಿಯುತ್ತಿದ್ದಂತೆ ಇದನ್ನು ಭಾರತದ ಸೋಲೆಂಬಂತೆ ಹಲವು ಮಾಧ್ಯಮಗಳು ಬರೆದವು. ಕತಾರೀ ಕೋರ್ಟಿನಲ್ಲಿ ಭಾರತ ಈ ಕುರಿತು ಅಪೀಲ್ ಮಾಡಿದಾಗ ಕೋರ್ಟು ಇದನ್ನು ಸ್ವೀಕರಿಸಿತು. ಭಾರತದ ಶಕ್ತಿ ಯಾವ ಮಟ್ಟಿಗಿದೆಯೆಂದರೆ ಬೇರೆ ದೇಶದ ಕೋರ್ಟುಗಳಲ್ಲಿ ಮಾತನಾಡುವುದಷ್ಟೇ ಅಲ್ಲ, ಅಲ್ಲಿನ ಭಾರತದ ರಾಯಭಾರಿಗಳು ಬಂಧಿತರನ್ನೂ ಭೇಟಿಯಾಗಿ ಮಾತುಕತೆ ನಡೆಸಿದರು. ತದನಂತರ ಅವರ ಮರಣದಂಡನೆ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆಗೊಂಡು ಒಂಚೂರು ಉಸಿರು ತೆಗೆದುಕೊಳ್ಳುವಂತಾಯ್ತು. ಭಾರತದ ಅಜಿತ್ ದೋವಲ್, ಜೈಶಂಕರ್ ಇವರನ್ನು ಬಿಡಿಸಿ ತರುವುದರಲ್ಲಿ ಕಾರ್ಯಪ್ರವೃತ್ತರಾದರು. COP೨೮ ಶೃಂಗಸಭೆಗೆಂದು ದುಬೈಗೆ ಹೋದಾಗ ಮೋದಿ ಖುದ್ದು ಕತಾರಿನ ಎಮಿರ್ (ರಾಜ)ನನ್ನು ಭೇಟಿಯಾಗಿ ಮಾತಾಡಿದ್ದು ಕಂಡುಬಂತು. ತೀರಾ ಇತ್ತೀಚೆಗೆ ಒಂದೆರಡು ವಾರಗಳ ಹಿಂದೆ ೭೮ ಬಿಲಿಯನ್ ಡಾಲರಿನಷ್ಟು ಮೊತ್ತದ LNGಯನ್ನು ೨೦೪೮ರವರೆಗೆ ಕತಾರಿನಿಂದ ಖರೀದಿಸುವ ಒಂದು ಬೃಹತ್ ಒಪ್ಪಂದ ಭಾರತ ಮತ್ತು ಕತಾರಿನ ನಡುವೆ ಏರ್ಪಟ್ಟಿತು. ಇಷ್ಟೊಂದು ದೊಡ್ಡ ಮೊತ್ತದ ಮಾರುಕಟ್ಟೆ ದೇಶಕ್ಕೊದಗಿ ಬಂದಾಗ, ಸ್ವತಃ ಪ್ರಧಾನಿಗಳೇ ಮಾತುಕತೆಗೆ ಕೂತಾಗ, ಅವರ ಕೋರ್ಟಿನಲ್ಲಿ ವಾದಿಸುವ ಮಟ್ಟಿಗೆ ದೇಶವೊಂದು ಬೆಳೆದು ನಿಂತಾಗ, ಭಾರತದ ನಾಗರಿಕರನ್ನು ಬಿಡದೆ ಇರುತ್ತಾರೆಯೇ? ಎಲ್ಲರನ್ನೂ ಕತಾರ್ ಬಿಡುಗಡೆಗೊಳಿಸಿಯಾಯಿತು. ಎರಡೂ ಸರ್ಕಾರಗಳು ಈ ಬಂಧಿತ ಅಧಿಕಾರಿಗಳು ಮಾಡಿದ ತಪ್ಪೇನು ಎಂದು ಬಹಿರಂಗವಾಗಿ ಹೇಳಿಲ್ಲ. ಕೆಲವು ಮಾಧ್ಯಮಗಳು ಹೇಳುವ ಹಾಗೆ ಕತಾರಿನ ಬದ್ಧ ವೈರಿ ಇಸ್ರೇಲಿಗೆ ಬೇಹುಗಾರಿಕೆ ಮಾಡುತ್ತಿರುವ ಆರೋಪವಿತ್ತಂತೆ. ಆರೋಪ ಅಷ್ಟು ದೊಡ್ಡಮಟ್ಟದ್ದಿರುವಾಗ ಮುಸ್ಲಿಂ ಕಾನೂನಿರುವ ರಾಷ್ಟ್ರದಿಂದ ಕರೆತರುವುದು ಕಡಮೆ ಸಾಧನೆಯಲ್ಲ. ಅದಲ್ಲದೇ ನೂಪುರ್ ಶರ್ಮಾರ ವಿವಾದಾಸ್ಪದ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದು ಕತಾರ್, ಭಾರತ ಇಸ್ರೇಲ್ ಪರವಾಗಿ ಜಾಸ್ತಿ ವಾಲುತ್ತಿರುವುದನ್ನೂ ಆಂತರ್ಯದಲ್ಲಿಯೇ ಧಿಕ್ಕರಿಸುತ್ತಿತ್ತು. ಭಾರತದ ಕುರಿತು ಪದಪದದಲ್ಲೂ ವಿಷಕಾರುವ ಅಲ್ ಜಜೀರಾ ಪತ್ರಿಕೆ ಮುದ್ರಣವಾಗುವ, ಸೋ ಕಾಲ್ಡ್ ಶಾಂತಿದೂತ ಭಯೋತ್ಪಾದಕ ಶಕ್ತಿಗಳಿಗೆ ಆರ್ಥಿಕ ಸಹಾಯ ಮಾಡಿದ ಎಂಬ ಆರೋಪದಡಿಯಲ್ಲಿ ಹೊರಹೋದ ಜಾಕಿರ್ ನಾಯಕ್ನನ್ನು ತನ್ನ ದೇಶದಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್ಗೆ ಆಹ್ವಾನಿಸಿದ ಕತಾರಿನಿಂದ ಕರೆತಂದದ್ದನ್ನು ವರ್ಣಿಸಲು ಸಾಹಸ ಎಂಬ ಪದ ಸಣ್ಣದಾದೀತು.”
‘ಆಪರೇಷನ್ ರಾಹತ್’ ಎಂಬ ನಾಮದಡಿಯ ಕಾರ್ಯಾಚರಣೆಯಲ್ಲಿ ಭಾರತ ೨೦೧೫ರಲ್ಲಿ ಭಾರತೀಯರನ್ನು ಯಮನ್ನಿನಿಂದ ಕರೆತಂದಿತು. ಸೌದಿ ಅರೇಬಿಯಾ ಯಮನ್ ಮೇಲೆ ದಾಳಿ ಮಾಡಿದಾಗ ಭಾರತ ಸೌದಿಗೆ ಒಂದು ವಾರ ಕಾಲ ಬಾಂಬ್ ದಾಳಿಯನ್ನು ನಿಲ್ಲಿಸಲು ಕೋರಿತು. ಸೌದಿ ಅರೇಬಿಯಾ ಪ್ರತಿ ದಿನ ೯ರಿಂದ ೧೧ರ ತನಕ ದಾಳಿಯನ್ನು ನಿಲ್ಲಿಸಿತು. ಯಮನ್ನಿನೊಂದಿಗೆ ಮಾತಾಡಿ ಏಡನ್ ಬಂದರು ಮತ್ತು ಸನಾದಲ್ಲಿರುವ ವಿಮಾನ ನಿಲ್ದಾಣವನ್ನು ಮುಕ್ತಗೊಳಿಸಲು ಹೇಳಿತು. ಅಲ್ಲಿದ್ದ ೪೮೦೦ ಭಾರತೀಯರನ್ನಲ್ಲದೆ ೧೯೭೨ ವಿದೇಶಿಗರನ್ನೂ ಕರೆತಂದು ಅವರವರ ದೇಶಕ್ಕೆ ಕಳಿಸಲಾಯಿತು. ನೇಪಾಳದ ಭೂಕಂಪದಲ್ಲಿ ಸಿಕ್ಕಿಬಿದ್ದವರನ್ನು ‘ಆಪರೇಷನ್ ಮೈತ್ರಿ’ ಅಡಿಯಲ್ಲಿ (ಹೊರದೇಶದ ೧೭೦ ಜನರೂ ಸೇರಿ), ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಸರ್ಕಾರ ಬಂದಾಗ ‘ಆಪರೇಷನ್ ದೇವಿಶಕ್ತಿ’ ಕಾರ್ಯಾಚರಣೆಯಲ್ಲಿ ಕರೆತಂದರು. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತದ ನೈಜ ಶಕ್ತಿ ಏನೆಂದು ಇಡಿಯ ಜಗತ್ತಿಗೆ ಮತ್ತೊಮ್ಮೆ ತಿಳಿಯುವಂತಾಯ್ತು. ವಿಶ್ವಸಂಸ್ಥೆಯಿಂದ ಹಿಡಿದು ಎಲ್ಲ ದೇಶಗಳು ವಿನಂತಿಸಿಕೊಂಡರೂ ಯುದ್ಧ ನಡೆಯುತ್ತಲೇ ಇರುವಾಗ ನರೇಂದ್ರ ಮೋದಿ ಹೇಳಿದರೆ ಈ ಯುದ್ಧ ನಿಲ್ಲಬಹುದೆಂದು ಅಮೆರಿಕದ ವಕ್ತಾರರು ಹೇಳಿದ್ದರು. ಯುದ್ಧ ನಡೆಯುವ ಸೂಚನೆಗಳು ಕಂಡುಬಂದಾಗ ಸರ್ಕಾರ ವಿನಂತಿಸಿಕೊಂಡರೂ ೪,೦೦೦ ಮಂದಿ ಮಾತ್ರ ಭಾರತಕ್ಕೆ ಬಂದಿದ್ದರು. ಪೋಲೆಂಡ್, ಹಂಗೇರಿ, ರೋಮಾನಿಯಾ, ಕ್ಲೋವಾಕಿಯಾಗಳ ಸಂಪರ್ಕ ಬೆಸೆದುಕೊಂಡು ಭಾರತೀಯರನ್ನು ಉಕ್ರೇನಿನ ಗಡಿ ದಾಟಿಸಿ ಭಾರತಕ್ಕೆ ಕರೆತಂದರು. ಭಾರತದ ಬಾವುಟ ಮತ್ತು ಪಾಸ್ಪೋರ್ಟಿಗೆ ಯಾವ ಮಟ್ಟದ ಬೆಲೆಯಿದೆಯೆಂದರೆ ಪಾಕಿಸ್ತಾನೀಯರೂ ಭಾರತದ ಧ್ವಜ ಹಿಡಿದು ಗಡಿ ದಾಟಿ ಬಂದದ್ದು ವರದಿಯಾಗಿದೆ. ಸುಡಾನಿನಲ್ಲಿ ಯುದ್ಧ ನಡೆದಾಗಲೂ ‘ಆಪರೇಷನ್ ಕಾವೇರಿ’ ಕಾರ್ಯಾಚರಣೆಯಡಿಯಲ್ಲಿ ೩,೦೦೦ಕ್ಕೂ ಅಧಿಕ ಭಾರತೀಯರನ್ನು ಕರೆತಂದರು. ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪವಾದಾಗ ‘ಆಪರೇಷನ್ ದೋಸ್ತ್’ ಎಂಬ ಕಾರ್ಯಾಚರಣೆಯಲ್ಲಿ ಭಾರತ ತಂಡ ಅಲ್ಲಿ ಕೆಲಸ ಮಾಡಿತು. ಸೈನಿಕರಷ್ಟೇ ಅಲ್ಲದೇ ನಮ್ಮ ವೈದ್ಯರೂ ಅಲ್ಲಿ ಕೆಲಸ ಮಾಡಿದ್ದರು. ಸಿರಿಯಾದ ಜನ ಇದನ್ನು ಇವತ್ತಿಗೂ ನೆನೆಯುತ್ತಾರೆ.
“ನಾನೀಗ ಮೋದಿ ಹೊರದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದಗಳ ಸಣ್ಣ ಲೆಕ್ಕ ಕೊಟ್ಟರೂ ವಿದೇಶ ಪ್ರವಾಸಕ್ಕೆ ಆದ ಖರ್ಚಿಗಿಂತ ಬಂದ ಲಾಭವೇ ಹೆಚ್ಚು ಎಂದು ಅನ್ನಿಸದೆ ಇರದು. ಸೀಶೆಲ್ಸ್ ಹಿಂದೂ ಮಹಾಸಾಗರ ಒಪ್ಪಂದ, ಮಾರಿಷಸ್ ಸಮುದ್ರ ಒಪ್ಪಂದ, ಸಿಂಗಾಪೂರ್ ಕೋ ಆಪರೇಷನ್ ಎಂಟಿಟಿಯೊಂದಿಗೆ ನೀತಿ ಆಯೋಗದ ಒಪ್ಪಂದ, ರಷ್ಯಾದ ರೈಲುವಿಭಾಗದೊಂದಿಗೆ, ಭೂಗರ್ಭ ವಿಭಾಗದೊಂದಿಗೆ ತೈಲ ಉದ್ದಿಮೆಯೊಂದಿಗಿನ ಒಪ್ಪಂದ, ಚೀನಾದೊಂದಿಗೆ ಸೌರಶಕ್ತಿಯ ಅಧ್ಯಯನ ಮಾಡುವ ಒಪ್ಪಂದ, ಮಂಗೋಲಿಯಾ ಔಷಧ ಮತ್ತು ಶಿಕ್ಷಣ, ಇರಾನ್ ಗಣಿ ಸಹಕಾರ, ಕತಾರ್ ಕೌಶಲ್ಯವರ್ಧನೆ, ಕೀನ್ಯಾ ಶಸ್ತ್ರಾಸ್ತ್ರ ಮಾರಾಟ, ಸ್ಪೇನ್ ನವೀಕರಿಸಬಹುದಾದ ಇಂಧನ ಮತ್ತು ನಾಗರಿಕ ವಿಮಾನಯಾನ, ಇಸ್ರೇಲ್ ಸ್ಪೇಸ್ ಏಜೆನ್ಸಿ ಮತ್ತು ಇಸ್ರೋಗಳ ನಡುವಿನ ಒಪ್ಪಂದಗಳು, ದಕ್ಷಿಣ ಆಫ್ರಿಕಾದೊಂದಿಗೆ ಕೃಷಿ ಕ್ಷೇತ್ರದ ಒಪ್ಪಂದ, ರಷ್ಯಾದೊಂದಿಗೆ ಆಭರಣಗಳಿಗೆ ಬಳಸುವ ಅಮೂಲ್ಯ ಶಿಲೆಗಳ ಕುರಿತ ಒಪ್ಪಂದ – ಹೀಗೆ ಪಟ್ಟಿ ಬೆಳೆಯುತ್ತಹೋಗುತ್ತದೆ. ಭಾರತದ ಸ್ಟ್ಯಾಂಡರ್ಡ್ ಕೂಡಾ ಬದಲಾಗಿದೆ. ಯಾವ ವಿದೇಶೀ ಕಂಪೆನಿಗಳೊಂದಿಗೆ ನಾವು ಈ ಮೊದಲು ಮಾತಾಡುತ್ತಿದ್ದೆವೋ ಅದಕ್ಕಿಂತ ಉನ್ನತಮಟ್ಟದ ಕಂಪೆನಿಗಳೊಂದಿಗೆ ಈಗ ಮಾತಾಡುತ್ತಿದ್ದೇವೆ. ಇದಿಷ್ಟು ವ್ಯಾಪಾರ ವ್ಯವಹಾರಗಳ ವಿಚಾರವಾಯ್ತು. ಭದ್ರತೆಯ ವಿಚಾರದಲ್ಲೂ ಭಾರತ ಸುಮ್ಮನಿಲ್ಲ. ೨೦೧೬ರಲ್ಲಿ ಸೌದಿ ಅರೇಬಿಯಾಕ್ಕೆ ಭಯೋತ್ಪಾದಕರಿಗೆ ಫಂಡ್ ಮಾಡುವವರ ಪಟ್ಟಿ ಕೊಡುವಂತೆ ಭಾರತ ಹೇಳಿದೆ. ಕಾಶ್ಮೀರದಲ್ಲಿ ಹೂಡಿಕೆಗೆ ಗಲ್ಫ್ ರಾಷ್ಟ್ರಗಳನ್ನು ಆಹ್ವಾನಿಸೋದು ಮೋದಿಯವರ ಚಾಣಾಕ್ಷ ನಡೆ, ಅಫಘಾನಿಸ್ತಾನದಲ್ಲಿ ತಾಲಿಬಾನಿಗಳು ಬಂದು ಕೂತಾಗ ಭಾರತದ ಮೂರು ಬಿಲಿಯನ್ ಡಾಲರ್ ಹೂಡಿಕೆ ನಾಶವಾಯ್ತೆಂದು ಖುಷಿಪಟ್ಟ ದೇಶದ್ರೋಹಿಗಳಿಗೇನೂ ಕಡಮೆ ಇಲ್ಲ. ಅಜಿತ್ ದೋವಲ್ ತಾಲಿಬಾನಿಗಳೊಂದಿಗೆ ಮಾತಾಡಬಹುದಾದ ಜಮಾತ್ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡಿದ ನಂತರ ನಮ್ಮ ಹೂಡಿಕೆಯ ಅಭಿವೃದ್ಧಿ ಕಾರ್ಯಗಳಿಗೆ ಈಗ ತಾಲಿಬಾನಿಗಳದ್ದೇ ರಕ್ಷಣೆ.”
“ಎದುರಾದವರು ಯಾರೇ ಆಗಲಿ, ಚೀನಾದಂಥ ಬೃಹತ್ ರಾಷ್ಟ್ರ, ಪಾಕಿಸ್ತಾನದಂಥ ದುಷ್ಟ ರಾಷ್ಟ್ರ, ಕೆನಡಾದಂಥ ಶ್ರೀಮಂತ ಮುಂದುವರಿದ ರಾಷ್ಟ್ರ, ಮಾಲ್ಡೀವ್ಸನಂಥ ಹೊಸೆದು ಹಾಕಬಹುದಾದ ಕ್ರಿಮಿ ಸದೃಶ ರಾಷ್ಟ್ರ, ಎಲ್ಲಕ್ಕೂ ತಿರುಗಿ ಬೀಳುವಷ್ಟು ಭಾರತ ಸಶಕ್ತವಾಗಿದೆ. ಅಷ್ಟೇ ಅಲ್ಲ, ಭಾರತ ತನ್ನ ಅನುಕೂಲಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಶಕ್ತವಾಗಿದೆ. ನಾವು ಏಕಕಾಲಕ್ಕೆ ಅಮೆರಿಕದಿಂದ ಶಸ್ತ್ರಾಸ್ತ್ರಗಳನ್ನೂ, ರಷ್ಯಾದಿಂದ ಇಂಧನವನ್ನೂ ಖರೀದಿಸುವಷ್ಟು ಶಕ್ತರು. ಏಕಕಾಲಕ್ಕೆ ಇಸ್ರೇಲ್ ಪ್ಯಾಲೆಸ್ತೀನ್ಗೆ ಹೋಗಿ ಬರುವಷ್ಟು ಶಕ್ತರು. ತಿರುಗಿಬಿದ್ದ ಪಾಕ್ನ್ನು ಬಡಿದು ಹಾಕಿ ಚೆನ್ನಾಗಿರುವ ಇತರೆ ಮುಸ್ಲಿಂ ರಾಷ್ಟ್ರಗಳೊಂದಿಗೆ ಸ್ನೇಹದಾಲಿಂಗನ ಮಾಡುವವರು.”
ಆರ್ಟಿಕಲ್ ೩೭೦
ಕಾಶ್ಮೀರದಲ್ಲಿ ೩೭೦ನೇ ಕಲಮನ್ನು ತೆಗೆದು ಹಾಕಿದ್ದು ಒಂದು ಐತಿಹಾಸಿಕ ಘಟನೆ. ಅದನ್ನು ತೆಗೆದುಹಾಕುವುದು ಸಾಧ್ಯವೇ ಇಲ್ಲ ಎಂದು ಎಲ್ಲರೂ ನಂಬಿದ್ದರು. ಅದನ್ನೇನಾದರೂ ತೆಗೆದುಹಾಕಲು ಪ್ರಯತ್ನಿಸಿದರೆ ಇಡೀ ದೇಶವೇ ಹೊತ್ತಿ ಉರಿದೀತು ಎಂದು ಹಲವರು ಹೇಳುತ್ತಿದ್ದರು. ಆದ್ದರಿಂದಲೇ – ‘ಯಾರು ತಾಯಿಯ ಹಾಲು ಕುಡಿದಿದ್ದಾರೋ ಅವರು ಕಾಶ್ಮೀರದಲ್ಲಿ ಭಾರತದ ಧ್ವಜ ಹಾರಿಸಿ ತೋರಿಸಲಿ’ ಎಂಬ ಉದ್ಧಟತನದ ಮಾತುಗಳು ಹಲವೆಡೆ ಕೇಳಿಬರುತ್ತಿದ್ದವು. ಪರಿಪಕ್ವ ದೂರದೃಷ್ಟಿ, ಸುವಿಚಿಂತಿತ ಕಾರ್ಯಯೋಜನೆ ಹಾಗೂ ಒಂದು ಚೂರು ಸುಳಿವು ಕೊಡದೆ ಇನಿತೂ ಎದೆಗುಂದದೆ ಸಾಹಸಕ್ಕೆ ತೊಡಗುವ ಪ್ರವೃತ್ತಿಯಿದ್ದರೆ ಎಂತಹ ಕಷ್ಟದ ಕೆಲಸವನ್ನೂ ಸಾಧಿಸಬಹುದು ಎಂಬುದನ್ನು ನಮ್ಮ ದೇಶ ತೋರಿಸಿಬಿಟ್ಟಿತು.
ಹಾಗೆ ನೋಡಿದರೆ ೩೭೦ನೇ ವಿಧಿಯನ್ನು ಕಿತ್ತೊಗೆಯುವ ಕೆಲಸ ಐದು ವರ್ಷಗಳಿಗೂ ಹಿಂದೆಯೇ ಮೊದಲುಗೊಂಡಿತ್ತು. ಮೆಹಬೂಬಾ ಮುಫ್ತಿಯೊಂದಿಗೆ ಘಟಬಂಧನಕ್ಕೆ ಕೈ ಚಾಚಿದಾಗಲೇ ಈ ಒಂದು ಸಾಹಸಕ್ಕೆ ಶ್ರೀಗಣೇಶ ಹೇಳಿಯಾಗಿತ್ತು. ೨೦೧೮ರಲ್ಲಿ ಭಾಜಪ ತನ್ನ ಬೆಂಬಲ ಹಿಂಪಡೆದುಕೊಂಡುದೂ ಇದೇ ಯೋಜನೆಯ ಒಂದು ಭಾಗ. ಮೆಹಬೂಬಾ ಮಫ್ತಿಯವರು ಬಹುಮತ ಸಾಬೀತುಪಡಿಸುವಷ್ಟು ಶಾಸಕರಿದ್ದಾರೆಂದು ರಾಜ್ಯಪಾಲರಿಗೆ ಫ್ಯಾಕ್ಸ್ ಕಳುಹಿಸಿದರು. ಆದರೆ ರಾಜ್ಯಪಾಲರ ಕಾರ್ಯಾಲಯದ ಫ್ಯಾಕ್ಸ್ ಮಶಿನ್ ಕೆಟ್ಟು ಹೋದದ್ದರಿಂದ ಆ ಫ್ಯಾಕ್ಸ್ ಸಂದೇಶ ರಾಜ್ಯಪಾಲರಿಗೆ ತಲಪಲೇ ಇಲ್ಲ. ಹಾಗೆಯೇ ಸಜ್ಜನ್ ಗನಿ ಲೋನ್ರವರು ಭಾಜಪ ಶಾಸಕರೊಂದಿಗೆ ಸೇರಿ ಸರಕಾರ ರಚಿಸುವ ಇರಾದೆ ವ್ಯಕ್ತಪಡಿಸಿ ಕಳುಹಿಸಿದ ಫ್ಯಾಕ್ಸ್ ಕೂಡ ಅವರಿಗೆ ತಲಪಲಿಲ್ಲ. ಕೊನೆಗೆ “ಇತ್ತಂಡಗಳಿಂದಲೂ ಸರ್ಕಾರ ರಚಿಸುವ ಯಾವುದೇ ಅಧಿಕೃತ ಮಾಹಿತಿಗಳು ಬರದ ಕಾರಣ ರಾಷ್ಟ್ರಪತಿಗಳ ಆಡಳಿತ ಜಾರಿಯಾಗುತ್ತಿದೆ” ಎಂದು ಅವರು ಘೋಷಣೆ ಮಾಡಿದರು. ೨೦೧೯ರ ಮೂರನೇ ಶ್ರಾವಣ ಸೋಮವಾರದಂದು ಕಾಶ್ಮೀರಕ್ಕೆ ಅಸಲಿ ಶ್ರಾವಣ ಬಂದೇಬಿಟ್ಟಿತು.
ಸಂಭವಿಸಬಹುದಾದ ಯಾವುದೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಬೇಕಾದ ಎಲ್ಲ ಬಗೆಯ ತಯಾರಿಯನ್ನೂ ಚಿಕ್ಕ ಸಂಗತಿಯನ್ನೂ ಬಿಡದೇ ಚೆನ್ನಾಗಿ ಕೈಗೊಳ್ಳಲಾಗಿತ್ತು. ವಿಶೇಷವಾಗಿ ರಕ್ಷಣೆಯ ಹೊಣೆಗಾರಿಕೆ ತುಂಬ ಹಿರಿದಾದದ್ದಾಗಿತ್ತು. ಈ ಕುರಿತಂತೆ ಎಲ್ಲ ಬಗೆಯ ತಯಾರಿಯನ್ನು ಮಾಡಿಕೊಳ್ಳಲಾಗಿತ್ತಾದರೂ ಈ ತಯಾರಿ ಏತಕ್ಕಿರಬಹುದು ಎಂಬುದರ ಚಿಕ್ಕ ಸುಳಿವು ಕೂಡ ಯಾರಿಗೂ ಸಿಕ್ಕಿರಲಿಲ್ಲ. ಅಗಸ್ಟ್ ೫ರಂದು ಗೃಹಮಂತ್ರಿಗಳು ಸದನದಲ್ಲಿ ೩೭೦ನೇ ವಿಧಿಯ ರದ್ದತಿಯ ಪ್ರಸ್ತಾವವನ್ನು ಮಂಡಿಸಿದಾಗಷ್ಟೇ ಎಲ್ಲರಿಗೂ ವಿಷಯ ತಿಳಿದುದು. ಅರವತ್ತೆಪ್ಪತ್ತು ವರ್ಷಗಳಿಂದ ಹದಗೆಡಿಸಿದ್ದ ಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಈ ಪ್ರಯಾಸದ ಹಿಂದೆ ಸಾಕಷ್ಟು ಪೂರ್ವತಯಾರಿ, ಯಾವುದೇ ಪರಿಸ್ಥಿತಿ ಉದ್ಭವಿಸಿದರೂ ಎದುರಿಸುವ ಮುನ್ನೆಚ್ಚರಿಗೆ ಹಾಗೂ ಪ್ರಬಲ ಮನೋಬಲವಿದ್ದುದರಿಂದ, ದೇಶದೆಲ್ಲೆಡೆ ಆತಂಕ ಪಸರಿಸಿತ್ತಾದರೂ ದೊಂಬಿಗಳೇನೂ ನಡೆಯಲಿಲ್ಲ. ಕಾಶ್ಮೀರದಲ್ಲಿ ಅಷ್ಟಿಷ್ಟು ನಡೆಯಿತು ಬಿಡಿ. ಸೇನೆಗೆ ಅಷ್ಟಾದರೂ ಕೆಲಸ ಕೊಡಬೇಕಿತ್ತಲ್ಲವೆ? ದೊಂಬಿ ಹೊಡೆದಾಟಗಳ ದೃಶ್ಯವನ್ನು ಕಣ್ತುಂಬಿಕೊಂಡು ಸರಕಾರವನ್ನು ಹಳಿಯಬೇಕೆಂದು ತುದಿಗಾಲಿನಲ್ಲಿ ನಿಂತಿದ್ದ ವಿರೋಧಿಗಳಿಗೆ ಎಲ್ಲಿಲ್ಲದ ನಿರಾಸೆ. ದೊಂಬಿ ಮಾಡಬೇಕೆಂದು ತಯಾರಿ ನಡೆಸಿದ್ದವರ ಕೈಕಾಲು ಅಂದು ಹೆದರಿಕೆಯಿಂದ ನಡುಗತೊಡಗಿದ್ದವು. ದೊಂಬಿ ನಡೆಸಿದರೆ ಏನಾದೀತೆಂಬ ಪರಿಣಾಮವನ್ನು ಊಹಿಸಿಯೇ ಬಾಲ ಮಡಚಿ ಅವರು ಕುಂಯ್ಗುಡತೊಡಗಿದ್ದರು. ಹಲ್ಲು ತೋರಿಸುವುದಿರಲಿ, ಒಮ್ಮೆ ಬಾಯ್ಬಿಟ್ಟು ಬೊಗಳಿದರೂ ಪರಿಣಾಮ ಏನಾದೀತೆಂಬ ಅರಿವು ಅವರಿಗಿತ್ತು. ಪರಿಸ್ಥಿತಿ ಬದಲಾಗಿದೆಯೆಂಬುದು ಅವರಿಗೆ ಮನದಟ್ಟಾಗಿತ್ತು. ಆದ್ದರಿಂದ ದೇಶ ಹೊತ್ತಿ ಉರಿಯುವುದು ಒತ್ತಟ್ಟಿಗಿರಲಿ, ದಟ್ಟ ಹೊಗೆಯೂ ಎಲ್ಲಿಯೂ ಏಳಲೇ ಇಲ್ಲ. ವಾರದೊಳಗಾಗಿ ಎಲ್ಲವೂ ಸಹಜಸ್ಥಿತಿಗೆ ಮರಳಿತ್ತು.
ಈ ಕುರಿತಂತೆ ಇನ್ನೂ ಹೆಚ್ಚಿನ ವಿವರಗಳನ್ನೂ, ಅಂದಿನ ದಿನಗಳಲ್ಲಿ ಕಾಶ್ಮೀರದಲ್ಲಾದ ಪ್ರಗತಿಯನ್ನೂ ಪುಸ್ತಕವನ್ನೋದಿ ನಾವು ತಿಳಿಯಬಹುದಾಗಿದೆ.
೨೦೦೦ ಮುಖಬೆಲೆಯ ನೋಟುಗಳ ರದ್ದತಿಯ ಕಥೆ ನಮಗೆ ತಿಳಿದೇ ಇದೆ. ಅದೊಂದು ತಪ್ಪು ನಡೆ ಎಂದು ಬಿಂಬಿಸಲು ಹಲವಾರು ಪ್ರಯತ್ನಗಳು ನಡೆದವು. ದೇಶದಲ್ಲಿದ್ದ ಕಪ್ಪುಹಣದ ಪ್ರಸರಣವನ್ನು ನಿಗ್ರಹಿಸುವುದಷ್ಟೇ ಈ ರದ್ದತಿಯ ಉದ್ದೇಶವಾಗಿರಲಿಲ್ಲ. ನಮ್ಮ ನೆರೆ ದೇಶವಾದ ಪಾಕಿಸ್ತಾನಕ್ಕೆ ಹೊಡೆತ ಕೊಡುವುದೂ ಇದರ ಹಿಂದಿನ ಗುಪ್ತೋದ್ದೇಶವಾಗಿತ್ತು. ೨೦೧೦ರ ವರದಿಯ ಪ್ರಕಾರ ಭಾರತಕ್ಕೆ ವರ್ಷವೊಂದಕ್ಕೆ ಹರಿದು ಬರುತ್ತಿದ್ದ ಖೋಟಾನೋಟುಗಳ ಮುಖಬೆಲೆ ೧೬೦೦ ಕೋಟಿ. ಇವು ಮುದ್ರಿತವಾಗುತ್ತಿದ್ದುದು ಪಾಕಿನಲ್ಲಿ. ಪಾಕ್ ತನ್ನ ದಿವಾಳಿತನವನ್ನು ಹೇಗಾದರೂ ತೊಲಗಿಸಿಕೊಳ್ಳಲು ಹೆಣಗುತ್ತ ಈ ಅಡ್ಡದಾರಿ ಹಿಡಿದಿತ್ತು. ಛಪ್ಪನ್ ಇಂಚಿನ ಎದೆಯವರನ್ನಷ್ಟೇ ಅಲ್ಲ, ಛಪ್ಪನ್ ಸಂಖ್ಯೆಯನ್ನು ಕಂಡರೂ ಹೆದರುವಂತೆ ಮಾಡುವ ಉದ್ದೇಶವೂ ನೋಟು ರದ್ದತಿಯ ಹಿಂದಿತ್ತು. ಅದರಿಂದಾಗಿಯೇ ನೋಟು ರದ್ದತಿಯು ಜಾರಿಗೊಳ್ಳುತ್ತಿದ್ದಂತೆಯೆ ಖೋಟಾನೋಟಿನ ವ್ಯವಹಾರದ ೪೦% ಭಾಗವನ್ನು ನಿಯಂತ್ರಿಸುತ್ತಿದ್ದ ದಾವೂದ್ ಇಬ್ರಾಹಿಂನ ಸಹಚರ ಜಾವೇದಖಾನ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಈಗ ಹೇಳಿ, ನೋಟ್ಬ್ಯಾನ್ ವಿಫಲವಾಯಿತು ಅಂತೀರಾ?
ಛಪ್ಪನ್ನನ್ನು ಕೇಳಿದರೂ ಪಾಕ್ ಹೆದರಿ ನಡುಗುವಂತಾದುದು ಹೇಗೆ ಎಂಬುದನ್ನು ವಿಸ್ತಾರವಾಗಿ ತಿಳಿಯಲು ನೀವು ಅಮೃತಫಲವನ್ನು ಪೂರ್ತಿ ಓದಲೇಬೇಕು. ಅಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಆರ್ಥಿಕ ಆತಂಕವಾದಿ ಸರೋಸ್ನ ಹಿನ್ನೆಲೆಯೇನು, ಆಂತರಿಕ ಸರೋಸ್ಗಳಿಗೆ ಅಡ್ಡ ನಿಂತಿದ್ದು ಹೇಗೆ, ರೈತರ ಚಳುವಳಿಯ ಹೆಸರಿನಲ್ಲಿ ಖಲಿಸ್ತಾನಿಗಳ ಹುನ್ನಾರ ಹೇಗೆ ನಡೆದಿದೆ, ಇವರಿಗೆ ಸಮರ್ಥನೆ ನೀಡುತ್ತಿರುವ ಕೆನಡಾದ ಕಥೆಯೇನು, ಮುಂದೆ ಅದಕ್ಕೆ ಯಾವ ಗತಿಯಾದೀತು ಎಂದು ಮುಂತಾದ ವಿವರವನ್ನೆಲ್ಲ ನಾವು ಈ ‘ಅಮೃತಫಲ’ದಲ್ಲಿ ಕಾಣಬಹುದಾಗಿದೆ.
ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ನಾಲ್ಕಾರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಟ್ವೀಟ್ ಮಾಡಿದ್ದರಿಂದ ಕನಲಿ ಕೆಂಡವಾದ ಮಾಲ್ಡೀವ್ಸ್ನ ಕೆಲ ಮಂತ್ರಿಗಳು ಈ ಟ್ವೀಟ್ ತಮ್ಮ ಕುರಿತಾದದ್ದೇ ಎಂದುಕೊಂಡು ಭಾರತದ ವಿರುದ್ಧ ನಾಲಿಗೆ ಹರಿಬಿಟ್ಟರು. ಆ ಮೂವರು ಸಚಿವರು ಭಾರತವನ್ನು ಹೀಗಳೆದುದು ಮಾಲ್ಡೀವ್ಸ್ನ ಕಾಲಿಗೆ ಕೊಡಲಿ ಪೆಟ್ಟಾಯಿತು. ಪ್ರವಾಸೋದ್ಯಮವೇ ಉಸಿರಾಗಿದ್ದ, ಭಾರತೀಯರೇ ಹೆಚ್ಚಾಗಿ ಭೇಟಿಕೊಡುತ್ತಿದ್ದ ಆ ದೇಶ ಭಾರತೀಯರು ಸೆಟೆದು ನಿಂತುದರಿಂದ ಕಂಗಾಲಾಗಬೇಕಾಯಿತು. ‘ಚೀನಾದ ಕುಮ್ಮಕ್ಕಿನಿಂದ ಆ ದೇಶ ಭಾರತವನ್ನು ಎದುರು ಹಾಕಿಕೊಳ್ಳುತ್ತಿದೆ. ಭಾರತದಿಂದ ಹಲವಾರು ಬಾರಿ ಉಪಕಾರ ಪಡೆದು ತನ್ನಿಂದ ತಾನೇ ನಾಶವಾಗುವ ಸ್ಥಿತಿ ತಂದುಕೊಂಡಿರುವ ಆ ಪುಟ್ಟ ರಾಷ್ಟ್ರವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರಭಾವ ಬಳಸಿ ಬಗ್ಗುಬಡಿಯಲೆಳಸುವುದು ಸುಮ್ಮನೆ ಶಕ್ತಿ ಹ್ರಾಸಕ್ಕೆ ಕಾರಣವಾದೀತು. ಉಗುರಿನಿಂದ ಚಿಗುಟಬಹುದಾದ ಚಿಗುರಿಗೆ ಕೊಡಲಿ ಬೇಕಿಲ್ಲ’ ಎಂಬುದು ಅಮೃತಫಲದ ಲೇಖಕರ ನಿಲವು.
ಈ ಪುಸ್ತಕದಲ್ಲಿ ಹಲವಾರು ಬಾರಿ ಮೋದಿಯವರ ಉಲ್ಲೇಖವಿದೆ. ಆ ಹೆಸರಿನ ಜಾಗೆಯಲ್ಲಿ ‘ಭಾರತದೇಶ’ವನ್ನಿಟ್ಟುಕೊಂಡರೆ ನಮಗೆ ಭಾರತದ ಇಂದಿನ ವಾಸ್ತವಿಕ ಚಿತ್ರ ದೊರೆತಂತಾಗುತ್ತದೆ. ಇದನ್ನು ತಿಳಿಸುವುದೇ ಲೇಖಕರ ಮೂಲ ಉದ್ದೇಶ ಕೂಡ, ಮೋದಿಯವರ ಪ್ರಶಂಸೆಯಲ್ಲ, ಭಾರತ ಇಂದು ಎತ್ತ ಸಾಗುತ್ತಿದೆ ಎಂಬುದನ್ನು ಅರಿತುಕೊಳ್ಳಲು, ಭಾರತ ಹೇಗೆ ಬೆಳಗುತ್ತಿದೆಯೆಂಬುದನ್ನು ಅರ್ಥೈಸಿಕೊಳ್ಳಲು, ಈ ಪುಸ್ತಕ ವಿಶೇಷವಾಗಿ ನೆರವಿಗೆ ಬರುತ್ತದೆ. ಪ್ರಾಸಂಗಿಕವಾಗಿ ಚಿತ್ರಗಳನ್ನು ಅಲ್ಲಲ್ಲಿ ಅರ್ಥಪೂರ್ಣವಾಗಿ ಜೋಡಿಸಲಾಗಿದೆ. ಎಲ್ಲೂ ಉತ್ಪ್ರೇಕ್ಷೆ ತಲೆ ಹಾಕದಂತೆ, ವ್ಯಕ್ತಿ ಪ್ರಶಂಸೆಯ ಬಣ್ಣ ಬರದಂತೆ, ಸಂಯಮದ ಬರವಣಿಗೆಯನ್ನು ಬಳಸುತ್ತ ಭಾರತದ ವಾಸ್ತವಿಕ ಚಿತ್ರವನ್ನು ಕಟ್ಟಿಕೊಡುವಲ್ಲಿ ‘ಅಮೃತ ಕಾಲ’ವೊಂದು ಸಾರ್ಥಕ ಪ್ರಯತ್ನವೆಂಬುದರಲ್ಲಿ ಎರಡು ಮಾತಿಲ್ಲ.