ಸುಮಾರು ೧೯೨೦ರಿಂದ ೧೯೭೫ರ ವರೆಗಿನ ಅವಧಿಯಲ್ಲಿ ಕುಂದಾಪುರದ ಸುತ್ತಮುತ್ತಲಿನ ಬದುಕನ್ನು ಗಾಢವಾಗಿ ಕಟ್ಟಿಕೊಡುವ ಜೀವನಕಥನ ಇಲ್ಲಿದೆ. ಅಂತೆಯೇ ಸೂರ್ಯುಪಾದ್ರು ಬದುಕನ್ನರಸಿ ತಿರುಗಿದ ಪ್ರದೇಶಗಳ ಸಾಕ್ಷ್ಯಚಿತ್ರವೂ ದೊರೆಯುತ್ತದೆ. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ಬರಹದ ಚಿತ್ರಕ ಶಕ್ತಿ ಅನ್ಯಾದೃಶ. ಪರಿಸ್ಥಿತಿ, ಪರಿಸರ, ವ್ಯಕ್ತಿ, ಕಾಲ ಎಲ್ಲವನ್ನೂ ಗಮನಿಸುತ್ತ ಸಾಗುತ್ತದೆ ಕಥನ.
ಅಪ್ಪಯ್ಯನ ಭಾರ ಎಷ್ಟು ಅಂತ ಮಕ್ಕಳಿಗೆ ಗೊತ್ತಾಗದಿದ್ದರೂ, ಅವರೇ ಹೆಣವಾದಾಗ ಆ ಭಾರದ ತೀವ್ರತೆ ಎಷ್ಟು ಅಂತ ಹೊರುವಾಗ ಹೆಜ್ಜೆಹೆಜ್ಜೆಗೆ ಅನುಭವಕ್ಕೆ ಬರುತ್ತಿತ್ತು. ಹೆಣಭಾರ ಎಂಬ ಶಬ್ದ ಅಗ್ಗಕ್ಕೆ ಚಲಾವಣೆಗೆ ಬಂದದ್ದಲ್ಲ. ನಿಶ್ಚೇತನ ಕಲೇವರವನ್ನು ಚಟ್ಟದ ಮೇಲೆ ಇರಿಸಿದಾಗಲೇ ಹೆಣವು ನೋಡಲಿಕ್ಕೆ ಹೇಗಿರುತ್ತದೆ ಅಂತ ಗೊತ್ತಾದದ್ದು. ಆಹಾ, ಎಂತಹ ಪ್ರಶಾಂತ ಮುಖ. ಈ ಪ್ರಸನ್ನತೆ ಸತ್ತ ಮೇಲೆಯೇ ಏಕೆ ಅಮರುತ್ತದೋ! ರಾಗದ್ವೇಷಾದಿ ಉಪಾಧಿಗಳಿಲ್ಲದ ಸ್ಥಿತಿ ಅಂದರೆ ಇದೇ ಇರಬೇಕು…”
– ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರು ಬದುಕಿನ ಕೊನೆಯುಸಿರೆಳೆದಾಗ ಅವರ ಮಗ ಶಂಕರನಾರಾಯಣ ಉಪಾಧ್ಯಾಯರ ಉದ್ಗಾರ ಇದು, ‘ಅಪ್ಪಯ್ಯನ ಆಸ್ತಿಕತೆ’ ಎನ್ನುವ ಪುಸ್ತಕದಲ್ಲಿ ಇಂತಹದೊಂದು ಪ್ರಸನ್ನತೆಗೆ ಇಡೀ ಬದುಕಿನಲ್ಲಿ ಗಳಿಸಿದ್ದ ಆಸ್ತಿ ಕಾರಣ. ಆ ಆಸ್ತಿ ಎಂಥದೆಂದರೆ; “ಸೂರ್ಯ ಉಪಾದ್ರು ತನ್ನ ಅಪರಕರ್ಮಕ್ಕೆ ಇರಲಿ ಎಂದೇ ಮಿಯ್ಯಾರಿನಲ್ಲಿ ಕಟ್ಟಿಟ್ಟಿದ್ದ ಬಟ್ಟೆಯ ಗಂಟನ್ನು ಉತ್ತರಕ್ರಿಯೆ ನಡೆಯುತ್ತಿರುವ ಕೂಡ್ಲಿಗೆ ಹೊತ್ತು ತಂದರು. ತಂದರೆ… ನಾಲ್ಕು ವರ್ಷದಿಂದ ಆರೈಕೆ ಇಲ್ಲದೆ ಅನಾಥವಾದ ವಸ್ತ್ರನಿಚಯ, ಅಪ್ಪಯ್ಯನಿಗಿಂತ ಮೊದಲೇ ಆಯುಷ್ಯ ತೀರಿ ಫಡ್ಚ ಆಗಿತ್ತು. ಅಪ್ಪಯ್ಯನ ಪುಡಿಪೌರೋಹಿತ್ಯದ ಸಂಪಾದನವನ್ನು ನಿಷ್ಕಾರಣವಾಗಿ ಹಸಿದ ಒರಲೆ(ಗೆದ್ದಲು) ಗಡದ್ದಾಗಿ ಫಳಾರ ಮಾಡಿತ್ತು. ಅಪ್ಪಯ್ಯನ ಮರಣೋತ್ತರ ಕ್ರಿಯೋಪಕರಣವಾಗಬೇಕಿದ್ದ ಅವರದ್ದೇ ಸೋದ್ದಿಷ್ಟ (ತನ್ನ ಅಪರಕ್ಕಾಗಿಯೇ) ಸಂಗ್ರಹ ಅರ್ಧಕ್ಕರ್ಧ ಜೀರ್ಣಶೀರ್ಣವಾಗಿ ಚಿಂದಿ ಉಡಾಯಿಸಿತ್ತು.
“ಋಣವಿಶೇಷವಿದ್ದರೆ ಮೃತಾತ್ಮವು ಅದರ ತೀರುವಿಕೆಗಾಗಿ ಮತ್ತೆ ಜನ್ಮವೆತ್ತುತ್ತದಂತೆ. ಅಪ್ಪಯ್ಯನ ವಿಷಯದಲ್ಲಿ ಆನೃಣ್ಯವೆಂಬುದು ಅವರಿಂದಲೇ ಸಾಧಿತವಾಗಿತ್ತು. ಆಸ್ತಿಯನ್ನು ಮಾಡಹೋಗಿ ಸಾಲದ ಗಾಣಕ್ಕೆ ಎತ್ತಾದವರಲ್ಲ. ವ್ಯಾವಹಾರಿಕವಾದ ಅರ್ಥಋಣ ಚಿಟಿಕೆಯಷ್ಟೂ ಇರಲಿಲ್ಲ.” ಇಂತಹ ಋಣಮುಕ್ತರ ಬದುಕಿನ ಆಸ್ತಿ ಎಂದರೆ ಆಸ್ತಿಕತೆಯೇ. ಬದುಕಿನುದ್ದಕ್ಕೂ ನೆಲೆಗಾಗಿ ಹುಡುಕಾಟ, ಹೊಟ್ಟೆಪಾಡಿಗಾಗಿ ಸಿಕ್ಕ ಉದ್ಯೋಗ, ತನ್ನ ಗಳಿಕೆಯನ್ನು ಮೀರಿ ಬಳಸದ ಸಂಯಮ, ಬಡತನಕ್ಕೆ ಮಣಿಯದ ಅಭಿಮಾನ, ಕೊನೆಯಲ್ಲಿ ಋಣಮುಕ್ತವಾದ ಇಹ.
ಈ ವೈದಿಕನ ಸನಾತನ ಶ್ರದ್ಧೆ, ಜೀವನೋತ್ಸಾಹ, ಕಾವ್ಯಾಸಕ್ತಿ, ವೈರಾಗ್ಯ-ವಿವೇಕಗಳನ್ನು ಚಿತ್ರಿಸಿರುವ ರೀತಿ ಅನನ್ಯವಾದದ್ದು. ಬಳಸಿದ ಭಾಷೆಯೂ ಸೂರ್ಯನಾರಾಯಣ ಉಪಾಧ್ಯಾಯರ ವೇದವಿದ್ಯೆ ಮತ್ತು ಯಕ್ಷಗಾನದ ನಾದಗಳ ಸಾಮರಸ್ಯದಂತಿದೆ. ವೈದಿಕ ಪರಿಸರದ ಸಂಸ್ಕೃತ ಮತ್ತು ಕುಂದಾಪುರದ ಕನ್ನಡಗಳ ಹದವಾದ ಪಾಕ ಕನ್ನಡಕ್ಕೇ ಹೊಸತಾಗಿದೆ. ಸೂರ್ಯುಪಾದ್ರ ಜೀವನ ವೃತ್ತಾಂತದಲ್ಲಿ ಬರುವವರೆಲ್ಲ ಅವರವರ ಮನೆಮಾತುಗಳಲ್ಲಿಯೇ ಮಾತಾಡುತ್ತಾರೆ. ಲೇಖಕರ ನಿರೂಪಣೆಯ ಭಾಷೆ ವಿನೂತನ ಮಿಶ್ರಣ, ಕಾವ್ಯರಸಿಕರಿಗೆ ಆಪ್ಯಾಯಮಾನ.
ಸುಮಾರು ೧೯೨೦ರಿಂದ ೧೯೭೫ರ ವರೆಗಿನ ಅವಧಿಯಲ್ಲಿ ಕುಂದಾಪುರದ ಸುತ್ತಮುತ್ತಲಿನ ಬದುಕನ್ನು ಗಾಢವಾಗಿ ಕಟ್ಟಿಕೊಡುವ ಜೀವನಕಥನ ಇಲ್ಲಿದೆ. ಅಂತೆಯೇ ಸೂರ್ಯುಪಾದ್ರು ಬದುಕನ್ನರಸಿ ತಿರುಗಿದ ಪ್ರದೇಶಗಳ ಸಾಕ್ಷ್ಯಚಿತ್ರವೂ ದೊರೆಯುತ್ತದೆ. ಶಂಕರನಾರಾಯಣ ಉಪಾಧ್ಯಾಯರ ಬರಹದ ಚಿತ್ರಕ ಶಕ್ತಿ ಅನ್ಯಾದೃಶ. ಪರಿಸ್ಥಿತಿ, ಪರಿಸರ, ವ್ಯಕ್ತಿ, ಕಾಲ ಎಲ್ಲವನ್ನೂ ಗಮನಿಸುತ್ತ ಸಾಗುತ್ತದೆ ಕಥನ. ನಿರೂಪಣೆಯ ಶೈಲಿಗೆ ಒಂದು ಉದಾಹರಣೆ: “ಸೂರ್ಯನ ತಾಪದ ತಾಪತ್ರಯವಿರಲಿಲ್ಲ. ಕಾರ್ ತಿಂಗಳು ಅದಾಗಲೇ ಆರಂಭವಾಗಿ ಹಳ್ಳ ತೋಡು ಹೊಳೆಸಾಲುಗಳು ನೀರ್ದುಂಬಿಕೊಳ್ಳುತ್ತಿದ್ದವು. ಸೂರ್ಯನು ಮೋಡದ ಕೊಡೆಯನ್ನು ಹಿಡಿದೇ ಬಾನಗುಂಟ ಒಗ್ಗಾಲಿ ರಥದಲ್ಲಿ ಸಂಚರಣರತನಾಗಿದ್ದ. ಮೇಘೈರ್ಮೇದುರಮಂಬರಂ. ಅಲ್ಲೊಮ್ಮೆ ಇಲ್ಲೊಮ್ಮೆ ಮರೆತು ಬರುವ ನೆಂಟನಂತೆ ಜರ್ರ ಮಳೆ ಹುಯಿದು ಹೀಗೆ ತೋರಿ ಹಾಗೆ ಮರೆಯಾಗುತ್ತಿತ್ತು. ಕೊರ್ಗಿಯಿಂದ ಬಡಗುದಿಕ್ಕಾಗಿ ಉಪಾದ್ರ ಪಯಣ ಜಾರಿಯಲ್ಲಿತ್ತು.”
ಶತಾವಧಾನಿ ಡಾ. ರಾ. ಗಣೇಶರು ಪುಸ್ತಕದ ಆರಂಭದಲ್ಲಿ ಬರೆದ ‘ಆಸ್ತಿ-ಕತೆಗೊಂದು ಅಸ್ತುಂಕಾರ’ದಲ್ಲಿ ಕೃತಿಯ ಶೈಲಿಯ ಬಗ್ಗೆ ಹೇಳಿರುವುದು ಹೀಗೆ: ‘ಅಪ್ಪಯ್ಯನ ಆಸ್ತಿ-ಕತೆ’ ಮೇಲ್ನೋಟಕ್ಕೊಂದು ವ್ಯಕ್ತಿಜೀವನಕಥನವಾದರೂ ಇದರಲ್ಲಿ ಕವಿತೆ, ಹರಟೆ, ಪ್ರಬಂಧ, ರೂಪಕ, ಕಾದಂಬರಿಗಳಂಥ ಹಲವಾರು ಸಾಹಿತ್ಯಪ್ರಕಾರಗಳ ರೂಪ-ರೇಖೆಗಳೂ ವ್ಯಭಿಚಾರಿಭಾವಗಳಾಗಿ ಸುಳಿದಾಡುತ್ತವೆ. ಮುಖ್ಯವಾಗಿ ಇಲ್ಲಿರುವುದು ನಾಟಕದ ನಿರೂಪಣೆ, ನಾಟಕೀಯ ನಿರೂಪಣೆ. ವಿಶೇಷತಃ ಯಕ್ಷಗಾನ ತಾಳ-ಮದ್ದಲೆಗಳ ಪೀಠಿಕೆ-ಸಂವಾದಗಳ ಶೈಲಿ ದಟ್ಟವಾಗಿ ತೋರಿಕೊಳ್ಳುವುದು ಆಕಸ್ಮಿಕವೇನಲ್ಲ. ಇದು ಕೊರ್ಗಿಯವರ ಜಾಯಮಾನ.”
ಕೃತಿಗೆ ಈ ಶೈಲಿಯೇ ಬೇಕಾದುದಕ್ಕೆ ಕಾರಣ ಸೂರ್ಯುಪಾದ್ರ ಸ್ವಭಾವ. ಅದನ್ನು ಪುಸ್ತಕದ ಸಾಲುಗಳಲ್ಲಿಯೇ ಗುರುತಿಸಬಹುದು. “ಬೇಸಾಯ, ಪೌರೋಹಿತ್ಯ, ಚೀಟುಬೂದಿ, ಕವಡೆ, ಪಂಚಾಂಗ, ಕಲ್ಯಾಣಿಯ (ಹೆಂಡತಿ) ಕಟಿಪಿಟಿ, ಕಾವೇರಿ(ಮಗಳು)ಯ ನಿಗಾ… ಇವೆಲ್ಲ ಬಹಿರುಪಾಧಿಗಳ ಭಾರವನ್ನು ಉಪಾದ್ರು ಹಗುರಗೊಳಿಸಿಕೊಳ್ಳುತ್ತಿದ್ದುದೂ ಸ್ವಾಂತರಂಗದ ಸಾಂತ್ವನವನ್ನು ಕಂಡುಕೊಳ್ಳುತ್ತಿದ್ದುದೂ ಕಲೆಯ ಮೂಲಕ. ಅದು ಸಾಹಿತ್ಯವೋ ತಾಳಮದ್ದಲೆಯೋ ಯಕ್ಷಗಾನವೋ, ಆ ಕಾಲಗರ್ಭವನ್ನು ಹೊಕ್ಕರೆಂದರೆ, ಯಾವ ಈತಿಬಾಧೆಗಳೂ ಇವರನ್ನು ಪೀಡಿಸುತ್ತಿರಲಿಲ್ಲ. ಚಿತ್ತಕ್ಷಾಲನಕ್ಕೆ ಕಲೌಷಧವೇ ಹೊರಗಿಂಡಿ. ಯಾವ ಆಹಾರ್ಯ ತಾಲೀಮುಗಳ ಹಂಗಿಲ್ಲದೆ ಕುಳಿತಲ್ಲೇ ನಿಸೂರಾಗಿ ನಿರ್ವಹಿಸಬಹುದಾದ ಪ್ರಕಾರ ಎಂದರೆ ತಾಳಮದ್ದಲೆ.”
ವೈದಿಕರು ಶಾಸ್ತçಜಡರು ಅನ್ನುವುದು ಸಾಮಾನ್ಯ ಅಭಿಪ್ರಾಯ. ಅನೇಕರ ಅನುಭವವೂ ಕೂಡಾ. ಈ ಕೃತಿಯಲ್ಲಿ ಬರುವ ಸಂದರ್ಭವೊಂದು ಹೀಗಿದೆ: “ವಿಧಿ ವೈಕಟ್ಯ ಎಂಥದು! ಕಂಚಾರ್ತಿಯ ವಧು ಜಲಜಾಕ್ಷಿ ಇನ್ನೂ ಹನ್ನೆರಡರ ಹುಡುಗಿ. ಗಂಡು ಅಂದರೇನೆಂದೇ ತಿಳಿಯದ ವಯಸ್ಸಿಗೆ ಗಂಡ ಎಂಬ ಶಬ್ದವಾದರೂ ಅರ್ಥವಾಗುವುದು ಹೇಗೆ? ಮದುವೆ ಅಂತ ಒಂದು ಸಂಸ್ಕಾರವಾಗಿ ತವರನ್ನು ತೊರೆವ ಮುನ್ನವೇ, ಪರಿಚಯವೂ ಇಲ್ಲದ ಪತಿಯೆಂಬ ಪದಾರ್ಥ ಪ್ರೇತವಾಯಿತು. ಕೆಟ್ಟಕಟ್ಟಳೆಯ ಚಿತ್ತೋದ್ವೇಧಕ ನಿರಗ್ನಿಚಿತೆಯಲ್ಲಿ ಆ ಅಬೋಧಮುಗ್ಧಬಾಲೆ ಉರಿದು ಹುರಿದು ಹೋದಳು.” – ಪರಿಸ್ಥಿತಿಯನ್ನು ಹೀಗೆ ಹೇಳಿದ ಮರುವಾಕ್ಯದಲ್ಲಿಯೇ ಅದರ ವಿಮರ್ಶೆಯನ್ನೂ ಮಾಡುತ್ತಾರೆ. “ಎರಡೂ ಮನೆತನದವರು ಜಾತಕ ಪ್ರಶ್ನೆಗಳಲ್ಲಿ ಲೋಕೋತ್ತರ ಖ್ಯಾತಿ ಇದ್ದವರು. ಎಲ್ಲ ಜಾತಕಶೋಧಕರ ಕಣ್ಣನ್ನೂ ವಿಧಿ ಯಾಮಾರಿಸಿ ಬಿಟ್ಟಿತೇ? ಗಂಡನ ಮನೆಯ ಕತೆ ಅಂತಿರಲಿ, ಗಂಡನ ಮನೆಯ ದಿಕ್ಕೂ ಗೊತ್ತಿರದ ವಧು ಒಬ್ಬಳನ್ನು ವಿಧವೆ ಎಂದಿತು ನಿಯಮನಿಗಲನಿಬದ್ಧವಾದ (ನಿಯಮವೆಂಬ ಶೃಂಖಲೆಯಿಂದ ಬಿಗಿಯಲ್ಪಟ್ಟ) ಸಮಾಜ. ಗತಿಹೀನಳಾದ ಆ ಸತಿಯು ಮೈನೆರೆವವರೆಗೆ ಕಾದು, ನೀನು ಋತುಮತಿ ಅಂತ ಅಂತಃಪ್ರಕೃತಿ ಘೋಷಿಸಿದಾಗ, ಜಲಜಾಕ್ಷಿಯ ಬಾಳ್ದಲೆಯ ಮೇಲೆ ಬಾಳು (ಕ್ಷೌರಿಕನ ಕತ್ತಿ) ಹರಿದಾಡಿತು.”
ಇಲ್ಲೆಲ್ಲ ಭಾಷೆ ತೊಡಕೆನಿಸಿದರೂ ಭಾವ ಓದುಗನ ಅಂತರಂಗವನ್ನು ಕಲಕಿಬಿಡುತ್ತದೆ. ಆದರೆ ಇದು ವೇದವಿಧಿಯಲ್ಲ ಎನ್ನುವ ವಿವರಣೆಯೂ ಈ ಕಥೆಯಲ್ಲಿ ಬರುತ್ತದೆ. ಗಂಡ ಸತ್ತ ಹೆಣ್ಣಿನ ತಲೆ ಬೋಳಿಸಿ ವಿರೂಪ ಮಾಡುವ ವಿಕೃತಿ, ಧರ್ಮಶಾಸ್ತ್ರದ ವಿಧಿ ಎಂದೇ ನಂಬಿಕೊಂಡಿರುವ ಬ್ರಾಹ್ಮಣವಲಯದಲ್ಲಿ; ವೇದ, ಶಾಸ್ತ್ರ, ಪುರಾಣಗಳಲ್ಲಿರುವ ಸಂಗತಿಗಳನ್ನು ಓದಿ ಸರಿಯಾದ ಅರ್ಥವನ್ನು ಗ್ರಹಿಸಿದ ಬಿರ್ತಿ ರಾಮಚಂದ್ರಶಾಸ್ತ್ರಿಗಳು ಸೂರ್ಯುಪಾದ್ರಿಗೆ ಹೇಳಿದ ಮಾತು ಉಲ್ಲೇಖನೀಯ. “ವಿಧವೆಯರಿಗೆ ಕೇಶವಪನ ಅನುಮರಣಗಳು ವೇದವಿಹಿತವಲ್ಲ. ಕವಿ ಬಾಣನು ತನ್ನ ಹರ್ಷ ಚರಿತದಲ್ಲಿ, ಜನಿತವೇಣೀಬಂಧಾನಿ, ನಿರಂಜನರಂಜನಾರೋಚಿಷೀಂ ಚಷಕಮಧುನಿಮುಖಕಮಲ-ಪ್ರತಿಬಿಂಬಾನ್ಯದೃಶ್ಯಂತ ಭಟೀನಾಮ್ ಅಂತ ಏಕವೇಣೀಬಂಧನವು ವಿಧವೆಯ ಚಿಹ್ನೆ ಅನ್ನುತ್ತಾನೆ. ಬೌಧಾಯನ ಪಿತೃಮೇಧ ಸೂತ್ರಗಳಲ್ಲಿ ಶವದಹನ ಸಮಯದಲ್ಲಿ ಗಂಡಸರು ಮಾತ್ರ ವಪನ ಮಾಡಿಕೊಳ್ಳಬೇಕೆಂದೂ, ಸ್ತ್ರೀಯರಿಗೆ ಖಂಡಿತವಾಗಿಯೂ ಇಲ್ಲವೆಂದೂ ಹೇಳಿದೆ. ‘ನ ಸ್ತ್ರೀಣಾಂ ಕೇಶವಪನಂ ವಿದ್ಯತೇ.’ ಮನು ಯಾಜ್ಞವಲ್ಕ್ಯ ಸ್ಮೃತಿಯಲ್ಲೂ ಹೇಳಿಲ್ಲ. ಸ್ಕಾಂದಪುರಾಣದಲ್ಲಿರುವ ‘ವಿಧವಾಕಬರೀಬಂಧಃ’ ಎಂಬೊಂದು ಆಲಂಕಾರಿಕ ಶಬ್ದ, ಹನ್ನೊಂದನೇ ಶತಮಾನದ ಅನಂತರ ಈ ಪಾಟಿ ಉಧ್ವಸ್ತಗೊಳಿಸಿದೆ. ಯಾವ ಪ್ರಾಚೀನ ಸ್ಮೃತಿಯಲ್ಲೂ ವಪನವನ್ನು ವಿಧಿಸಿಲ್ಲ.
ವೇದವು ಮಾನುಷಜೀವನದ ಕುರಿತು ಎಷ್ಟು ಉದಾರವಾಗಿದೆ! ಗಂಡ ಸತ್ತ ಸ್ತ್ರೀಯನ್ನು ಉದ್ದೇಶಿಸಿ ಹೇಳುವ ಋಗ್ವೇದದ ಮಂತ್ರ ನೋಡಿ, ‘ಉದೀರ್ಷ ನಾರ್ಯಭಿ ಜೀವಲೋಕಂ ಗತಾಸುಮೇತಮುಪಶೇಷ ಏಹಿ. ಹಸ್ತಗ್ರಾಭಸ್ಯ ದಿಧಿಷೋಸ್ತವೇದಂ ಪತ್ಯುರ್ಜನಿತ್ವಮಭಿ ಸಂಬಬೂಥ.’ – “ಓ ನಾರಿ, ಮೃತನಾದ ಈ ಪತಿಯ ಆಸೆಯನ್ನು ಬಿಟ್ಟು, ಉಳಿದವರಲ್ಲಿ, ಜೀವಂತವಾಗಿರುವ ಎರಡನೆ ಪತಿಯನ್ನು ಪಡೆದುಕೋ.” “ಕೋ ವಾಂ ಶಯುತ್ರಾ ವಿಧವೇವ ದೇವರಂ ಮರ್ಯಂ ನ ಯೋಷಾ ಕೃಣುತೇ ಸವಸ್ಥ ಆ. ದೇವರನನ್ನು ವಿಧವೆಯು, ವಿವಾಹಿತ ಸ್ತ್ರೀಯು ಪತಿಯೊಂದಿಗಿದ್ದಂತತೆಯೇ ಜೊತೆ ಮಾಡಿಕೊಂಡು.. ಯಾರು ವಿಧವೆಗೆ ದ್ವಿತೀಯ ಪತಿಯೋ ಅವನೇ ದೇವರ. ದೇವರಃ ಕಸ್ಮಾತ್ ಕಸ್ಮಾತ್ ದ್ವಿತಿಯೋ ವರ ಉಚ್ಯತೇ ಅಂತದೆ ನಿರುಕ್ತ.
ಇತಿಹಾಸ ಪುರಾಣದಲ್ಲಾದರೂ ಇದಕ್ಕೆ ಪುರಾವೆ ಉಂಟೋ? ಬೇರೆ ಬೇರೆ ಕಾಲಘಟ್ಟದಲ್ಲಿ ಮನುಷ್ಯರೇ ಮಾಡಿಕೊಂಡ ಅಮಾನುಷಪದ್ಧತಿ ಇದು. ಕುಂಕುಮ ಬಳೆ ಕಾಲುಂಗುರ ಕರಿಮಣಿ ಅಂತೆಲ್ಲ ಭಂಜನ ಮಾಡ್ತಾರಲ್ಲ. ಅವುಗಳ ಧಾರಣಕ್ಕೆ ಮಂತ್ರಾಧಾರ ಉಂಟೋ? ಅವೆಲ್ಲ ಅಲಂಕಾರ ಅಷ್ಟೆ – ಮೈಗೆ ಬಟ್ಟೆ ಹಾಕಿಕೊಂಡ ಹಾಗೆ. ಹೋಗಲಿ, ಈ ಪ್ರಧ್ವಂಸನ ಕ್ರಿಯೆಗೆ ಮಂತ್ರಗಳಿದ್ದಾವೋ? ಅದೂ ಇಲ್ಲ. ಗಂಡ ಸತ್ತ ಅಂದರೆ, ಇವಳೂ ಸತ್ತ ಹಾಗೆಯೇ ಅಂತ ವೈಧವ್ಯ ಲಾಂಛನಗಳನ್ನು ಹೇರಿ ಹಟ್ಟಿಯ ಜಾನುವಾರಿನಂತೆ ಕೀಳಾಗಿ ಅಸ್ಪೃಶ್ಯವಾಗಿ ಕಾಣುವವರು ದೇವಮಾನವರೋ?
ಬೇಜಾರು ಮಾಡಿಕೊಳ್ಳಬೇಡಿ, ನಿಮ್ಮ ಮೊದಲ ಹೆಂಡತಿ ಹೋದರು. ಮತ್ತೆ ನೀವು ಇನ್ನೊಂದು ಮದ್ವೆ ಆದ್ರೋ ಇಲ್ವೋ! ಅದೇ ನೀವು ಹೋಗಿದ್ರೆ ಬದ್ಕಿ ಉಳಿದ ನಿಮ್ಮ ಆ ಹೆಂಡತಿ ಇನ್ನೊಂದು ಮದುವೆ ಮಾಡಿಕೊಳ್ಳಲಿಕ್ಕೆ ಬಿಡುತ್ತಿದ್ದರಾ” – ಇವೆಲ್ಲ ನಡೆದ ಘಟನೆಗಳು. ಮಾನವ ಬದುಕಿನ ವಿಕಾಸದ ಪರಮೋನ್ನತಿಯನ್ನು ಕಲ್ಪಿಸಿದ ಸಂಸ್ಕೃತಿಯಲ್ಲಿ ನುಸುಳಿದ ವಿಕೃತಿಯ ಕುರಿತು ಸಾಧಾರವಾಗಿ ಆಡಿದ ಮಾತುಗಳು ಮತ್ತೆ ಮತ್ತೆ ನಮ್ಮನ್ನು ಕಾಡುತ್ತವೆ.
ಈ ಪುಸ್ತಕದಲ್ಲಿ ಬರುವ ಸೂರ್ಯುಪಾದ್ರ ಮಗಳು ಕಾಯ(ಕಾವೇರಿ)ನ ವೃತ್ತಾಂತವೂ ಮುಖ್ಯವಾದದ್ದು. ಅಪ್ಪ-ಮಗಳ ಪ್ರೀತಿಯ ಪರಾಕಾಷ್ಠೆಯನ್ನು ಇಲ್ಲಿ ಕಾಣಬಹುದು. ಕಾಯ ಉಪಾಧ್ಯಾಯರ ಮೊದಲ ಹೆಂಡತಿಯ ಮಗಳು. ಅವಳ ಅಜ್ಜ (ತಾಯಿಯ ತಂದೆ) ತನ್ನ ಶ್ರೀಮಂತಿಕೆಗೆ ಸಮನಲ್ಲದ ಬಡವನೆಂದು ಅಳಿಯನನ್ನು ದೂರಮಾಡಿದ್ದರು. ಮೊಮ್ಮಗಳನ್ನು ಮಾತಾಡಿಸುತ್ತಿರಲಿಲ್ಲ. ಅಪ್ಪನ ವಿರೋಧವನ್ನೂ ಲೆಕ್ಕಿಸದೆ ಕಾಯನ ಮದುವೆಗೆ ಬಂದಿದ್ದವರು ಅವಳ ಸೋದರಮಾವ ಸೌಕೂರು ವಿಶ್ವ ಅಡಿಗಳು. ಬಂದವರು ಹೊಸ ಜೋಡಿಗೆ ಉಡುಗೊರೆ ನೀಡಿ ಸೇಸೆ ತಳಿದವರು ಆಡಿದ ಮಾತು, ಕರುಳಬಳ್ಳಿಯ ಸಂಬಂಧದ ಆರ್ದ್ರತೆಯನ್ನು ಪರಿಚಯಿಸುತ್ತದೆ. ಓದುಗನ ಕಣ್ಣನ್ನೂ ತೇವಗೊಳಿಸುತ್ತದೆ. “ನಂಗೆ ಮಾತಾಡುಕೆ ಬತ್ತಿಲ್ಲೆ. ನಾ ಮಾತ್ಗಾರ ಅಲ್ಲ. ಆದ್ರೆ ನಂಗೆ ಅನ್ಸಿದ್ ನಾಕ್ ಮಾತಾಡ್ಕಂತ ಮಾಡಿದ್ದೆ. ಕಾಯ ನಮ್ಮನೆ ಹೆಣ್ಣು. ನನ್ನಪ್ಪಯ್ಯನ ಮಗಳ ಮಗಳು. ಕಾಯ, ಕೈಮುಗದು ಕೇಂತೆ, ನಿನ್ನಮ್ಮನ ಮನೆ ಸೌಕೂರ್. ಮರಿಬಡ. ಈ ಹಿಂದೆ ಎಂತೆಲ್ಲ ಆಯ್ತ್ ಅದ್ ಈಗ ಬ್ಯಾಡ. ನಿನ್ನಮ್ಮನ ಮನೆಲಿ ನಾsನಿದ್ದೆ. ಕಮಲಕ್ಕನಿಗಾದ ಪ್ರಮಾದಕ್ಕೆ ನಾನು ಕ್ಷಮೆ ಕೇಂತೆ. ಏಗ್ಳಿಗ್ ನೀ ಸೌಕೂರ್ ಅಜ್ಜನ ಮನೆಗ್ ಬಂದ್ರೂ ಬಾಗ್ಲ್ ತೆರ್ದ ಇರತ್. ಈ ವಿಶ್ವ ಇದ್ದ ಅಂಬದ್ ನೆನಪಿರ್ಲಿ. ಸಾವ್ಕಾರ್ಕೆ ಬಿಡ್ಲಕ್, ಆದ್ರೆ ಸಂಮಂದ ಬಿಡುಕಾಗ ಅಲ್ದಾ. ಸೂರಿ ಭಾವ, ನಿಮ್ಗೂ ನಾ ಕೇಂಡ್ಕಂಬ್ದ್ ಅಷ್ಟೇ. ಹೆಚ್ ಹೇಳ್ವಷ್ಟ್ ತೆಳದವ್ ಅಲ್ಲ.” ಉಮ್ಮಳಿಸುವ ಕಣ್ಣೊರತೆಯಲ್ಲಿ ವಿಶ್ವಡಿಗಳು ಸಭಾಮುಖವಾಗಿ ಸಾಷ್ಟಾಂಗ ವಂದನೆ ಮಾಡಿ, ಭಾವೋದ್ವೇಗದಲ್ಲಿ ಅಶ್ವತ್ಥಕಟ್ಟೆಯತ್ತ ನಡೆದರು.
ಪ್ರತಿಷ್ಠೆಯನ್ನು ಮೀರಿ ಪ್ರೀತಿಯನ್ನು ಬದುಕಿಸುವ ಸುಂದರ ಕ್ಷಣ ಅದು. ನಂತರ ಕಾಯನನ್ನು ಸಾಲಂಕೃತ ದಂಡಿಗೆಯಲ್ಲಿ ಕಳಿಸುವಾಗ ಭಾವದ ಹೊಯ್ಲಿಗೆ ಪಕ್ಕಾದ ಉಪಾದ್ರ ಸ್ಥಿತಿ, ಅಭಿವ್ಯಕ್ತಿಗಳನ್ನು ಓದಿಯೇ ಅನುಭವಿಸಬೇಕು. ಮನುಷ್ಯನ ಸಣ್ಣತನದ ಪರಮಾವಧಿಯನ್ನೂ ಈ ಕಥನದಲ್ಲಿ ಕಾಣಬಹುದು. ತನ್ನ ತಾಯಿಯ ವಿಷಯವನ್ನು ಹೇಳುವಾಗಲೂ ಮೋಹ ಮುಜುಗರವಿಲ್ಲದೆ ಬರೆಯುವ ಲೇಖಕರ ಸಾಕ್ಷಿಭಾವಕ್ಕೆ ಬೆರಗಾಗುತ್ತೇವೆ.
ಸೂರ್ಯುಪಾದ್ರು ಗ್ರಾಮೀಣರ ಶ್ರದ್ಧೆ ನಂಬುಗೆಗಳ ನಡುವೆಯೇ ಬದುಕುತ್ತಿದ್ದವರು. ವಿಭೂತಿ ಮಂತ್ರಿಸುವ, ಚೀಟಿ ಕಟ್ಟುವ ಎಲ್ಲ ವಿಧಾನಗಳನ್ನೂ ಅನುಸರಿಸಿ ಮನೆಬಾಗಿಲಿಗೆ ಬಂದ ಅಬೋಧಮುಗ್ಧರನ್ನು ಸಂತೈಸುತ್ತಿದ್ದರು. ಮೈಮೇಲೆ ಬಂದವರಿಗೂ ಮಂತ್ರದ ಚಿಕಿತ್ಸೆ ನೀಡುತ್ತಿದ್ದರು. ಆದರೆ ಆ ಕುರಿತ ಅವರ ಅಭಿಪ್ರಾಯ ಹೀಗಿತ್ತು: “ಮೈಮೇಲೆ ಬತ್ತಾ ಮಣ್ಣಾ! ಅದ್ಯಾವ್ದೋ ಚೌಂಡಿ ನಾನ್-ಅನ್ನತ್ತೆ ಅದು. ಆ ಛೌಂಡಿಗೆ ನನ್ನ ಗುರ್ತು ಹ್ಯಾಂಗಿಕ್? (ಹೇಗಿದ್ದೀತು) ಅದ್ ಕನ್ನಡ, ಅದ್ರಲ್ಲೂ ಗ್ರಾಮ್ಯಭಾಷೆನ ಕಲ್ತದ್ದೆಲ್ಲಿ. ತನ್ಗೆ ಕೋಳಿ ಬೇಕನತ್. ಕೋಳಿ ಕೊಯ್ದುಕೊಟ್ಟರೆ ಮೋರುದು ಚೌಂಡಿಯಾ ಅಲ್ಲಾ ಈ ಮನಶ್ನಾ. ಪಾಪ, ಏನೋ ಭ್ರಾಂತು. ಅಲ್ ಹೋಯಿ (ಹೋಗಿ), ಇದೆಲ್ಲ ಗಪ್ಳಾಸ್ (ಡೋಂಗಿ) ಅಂಬ್ಕಾತ್ತಾ? ಕೈಲಾದ್ರೆ ಒಳ್ಳೆದ್ ಮಾಡೂದ್. ಇಲ್ಲಾಂದ್ರೆ ಬ್ಯಾರೆಯವರ ಹತ್ರ ಹೋಗಿ ಅನ್ನೋದು” – ಇಂತಹದೊಂದು ವಿವೇಕ, ಅನುಕಂಪ ಅವರಿಗಿತ್ತು.
ಸೂರ್ಯುಪಾದ್ರ ಬದುಕಿನುದ್ದಕ್ಕೂ ಹೆಣೆದುಕೊಂಡ ಬಂದ ಯಕ್ಷಗಾನದ ರುಚಿ ಓದುಗರಿಗೆ ರಸಗವಳ. ಯಕ್ಷಗಾನದ ರಚನೆ, ನಟನೆ ಮತ್ತು ತಾಳಮದ್ದಲೆಯ ಅರ್ಥಗಾರಿಕೆ ಉಪಾಧ್ಯಾಯರ ಬದುಕಿನ ರಸಘಟ್ಟಿಗಳು. ಕೈಯಲ್ಲಿ ಯಾವುದೇ ಕೆಲಸವಿರಲಿ, ತಲೆಗೆ ಹೊರೆ-ನಡಿಗೆಗೆ ಹರದಾರಿ ದೂರದ ಪಯಣವಿರಲಿ, ಮನಸಿನಲ್ಲಿ ಯಕ್ಷಗಾನ ಪದ್ಯಗಳ ರಚನೆಯೋ ಮನನವೋ ನಡೆದೇ ಇರುತ್ತಿತ್ತು. ಅವರ ಕಾವ್ಯಕೌಶಲಕ್ಕೆ, ಭಾಷಾಪ್ರೀತಿಗೆ ‘ಘಟೋತ್ಕಚನ ಹುಟ್ಟಿನ ಕಥೆಯ’ ಈ ಒಂದು ವಾರ್ಧಕ ಸಾಕು.
ಕಪ್ಪೊಡೆಯನನ್ವಯಕ್ಕೊಪ್ಪುವನೆ ಕೇಳ್ ಪಗಲ್|
ಕಪ್ಪು ತಿಳಿಯದನ ಮಗ ಕಪ್ಪುಹಗೆಮಗನು ಸಹ|
ಕಪ್ಪದಾಸೆಯೊಳು ಮುದುಕಪ್ಪನಿಂ ಪಾಂಡವರ ಕಪ್ಪುಮನೆಗಟ್ಟಲಲ್ಲಿ||
ಕಪ್ಪು ಹೊತ್ತಲಿ ಕಪ್ಪುಗೊರಳನಂತಿಹ ಭೀಮ|
ಕಪ್ಪರಿಸುತೈವರಂ ಕಪ್ಪುತಿರುಗನ ಕೊಂದು|
ಕಪ್ಪುಮೈಮಗ ವ್ಯಾಸನಪ್ಪಣೆಯೊಳು ಹಿಡಿಂಬಿಗಪ್ಪ ಮದುವೆಯ ಗೈಸಿದಂ||
– ಇಲ್ಲಿ ಕಪ್ಪು ಎನ್ನುವ ಶಬ್ದದಲ್ಲಿಯೇ ಕಾವ್ಯದ ಬೆಳಕು ಮತ್ತೆಮತ್ತೆ ಮಿಂಚುತ್ತದೆ. ‘ಬೆಂದರೇನು ಬೆವತರೇನು, ಬಣ್ಣಕೊಡುವ ಬೆರಗನ್ನು ಭಗವಂತನೂ ಕೊಡಲಾರ’ ಎನ್ನುವ ಲೇಖಕರ ಮಾತು ಅನುಭವಿಸಿದವರಿಗೇ ಗೊತ್ತು.
ಕಥೆಯುದ್ದಕ್ಕೂ ಕುಟುಂಬವಾತ್ಸಲ್ಯ, ಬಂಧುಪ್ರೇಮ ಮತ್ತೆಮತ್ತೆ ಮೆರೆಯುತ್ತದೆ. ಚಿಕ್ಕಪ್ಪನ ಸಂತೋಷಕ್ಕಾಗಿ ಹೊಗೆಸೊಪ್ಪಿನ ಕಥೆಕಟ್ಟಿ ಯಕ್ಷಗಾನ ಬರೆಯುತ್ತಾರೆ. ಶ್ರದ್ಧೆಯಿಂದ ಕೇಳಿದವರಿಗೆ ಭಕ್ತಿಗೀತೆ ಬರೆದುಕೊಡುತ್ತಾರೆ. ಅಷ್ಟೇ ಪ್ರೀತಿಯಿಂದ ಬೀಡಿ-ಭಂಗಿಯ ಬಗೆಗೂ ಪದ್ಯ ಬರೆಯುತ್ತಾರೆ. ಬದುಕಿನ ಎಲ್ಲ ಸಂಗತಿಗಳನ್ನೂ ಕಾವ್ಯವಾಗಿಸಬಲ್ಲ ದೃಷ್ಟಿಯೇ ನಿಜವಾದ ಅಧ್ಯಾತ್ಮ. ಉಪಾದ್ರು ತಮಗಿದ್ದ ಬೀಡಿ ಸೇದುವ ವ್ಯಸನವನ್ನು ಹೇಗೆ ಅನುಭವಿಸುತ್ತಿದ್ದರು ಎನ್ನುವುದನ್ನು ಓದುಗನೂ ಅನುಭವಿಸುವ ರೀತಿಯಲ್ಲಿ ಲೇಖಕರು ಅದನ್ನು ವರ್ಣಿಸಿದ್ದಾರೆ, ಆ ವ್ಯಸನವೂ ಒಂದು ಕಲಾತ್ಮಕ ಅಭಿವ್ಯಕ್ತಿ ಎನ್ನುವ ಹಾಗೆ!
ಲೋಭವೆಣಿಸದ ವೈದಿಕ ವೃತ್ತಿ, ನಿರಂತರ ಕಾವ್ಯ ರಚನೆಯ ಹಂಬಲ. ಸಂಗ್ರಹದ ಆಲೋಚನೆಯೇ ಇಲ್ಲದ ಬದುಕು. ಅಂದAದಿನ ಊಟಕ್ಕೆ ಹಾದಿಯಾದರೆ ಸಾಕೆಂಬ ಅಲ್ಪತೃಪ್ತಿ. ಸನಾತನ ಶ್ರದ್ಧೆಯನ್ನು ಇಡಿಯಾಗಿ ಬದುಕಿದ ಸೂರ್ಯನಾರಾಯಣ ಉಪಾಧ್ಯಾಯರ ಜೀವನವೃತ್ತಾಂತವನ್ನು ಓದುವುದೆಂದರೆ ವೇದ, ವೈದಿಕ, ಬ್ರಾಹ್ಮಣ್ಯಗಳ ಕುರಿತು ತಿಳಿಯುವುದೇ ಆಗಿದೆ. ವೈದಿಕವೆಂದರೆ ಶೋಷಣೆ ಎನ್ನುವವರು ಈ ಪುಸ್ತಕವನ್ನು ಓದಬೇಕು. ಉಪಾಧ್ಯಾಯರು ಬದುಕಿನುದ್ದಕ್ಕೂ ಮಾಡಿಕೊಂಡು ಬಂದ ಭಾಷಾ ಸರಸ್ವತಿಯ ಆರಾಧನೆ ಮಧುರ.
ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಈ ಬೃಹದ್ಗ್ರಂಥವನ್ನು (ರಾಯಲ್ ಸೈಜಿನ ೬೯೦ ಪುಟಗಳು. ಬೆಲೆ ರೂ. ೫೦೦/-) ಮೊಬೈಲಿನಲ್ಲಿಯೇ ಟಂಕಿಸಿದ್ದೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಬೇಕಾದ ವಿಸ್ಮಯ! ಅವರಿಗೆ ಕನ್ನಡದ ಓದುಗರು ಕೃತಜ್ಞರು. ಈ ಹೊತ್ತಗೆಯನ್ನು ಪ್ರಕಟಿಸಿದ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರಮ ಅಭಿನಂದನೀಯ.