ಭಾಗ – ೧
ನಿನ್ನ ಹೊರತು ಈ ಹೊಣೆಯನ್ನು ಹೊರಬಲ್ಲವರು ಯಾರೂ ಇಲ್ಲ. ದಯವಿಟ್ಟು ನನ್ನ ತಲೆಯನ್ನು ಕಾಯಬೇಕು. ಹೋಗಿಬರುವೆಯಾ…?” ಎಂದು ಆತ ವಿನಂತಿಸಿದ.
“ನಾಳೆ ಮುಂಜಾನೆ ಭೂಪತಿಗಳು ಉಪಪ್ಲಾವ್ಯಕ್ಕೆ ಹೊರಡುವರಂತೆ. ದೂರದ ಪ್ರಯಾಣ. ನೀನು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಂತೆ. ಅಕ್ಷೋಹಿಣಿ ಸೇನೆಯೂ ಹೊರಡುವುದಂತೆ. ನಿನಗೆ ಗೊತ್ತಿರಲಿ, ಯುದ್ಧ ಮುಗಿದ ಮೇಲೆಯೇ ಹಿಂದಿರುಗುವುದಂತೆ.” ಹೀಗೆಂದು ಭೂಪತಿಗಳ ಸೇವಕನೊಬ್ಬ ಬಂದು ಹೇಳಿಹೋದ. ನಮ್ಮಂತಹವರ ದೈನಿಕವೇ ಹೀಗೆ. ಸದಾ ಸಿದ್ಧರಾಗಿರಬೇಕು. ನಾನು ಮದ್ರದ ಶಲ್ಯ ಭೂಪಾಲರ ಮುಖ್ಯಸಾರಥಿ. ಅವರ ಮೆಚ್ಚಿನ ಸಾರಥಿಯೂ ಹೌದು. ಅವರ ಮೆಚ್ಚುಗೆಗೆ ಪಾತ್ರನಾಗುವುದು ಸುಲಭದ ಮಾತಲ್ಲ. ನಾನು ಸಾರಥಿಯಾಗುವ ಮೊದಲು ಹಲವು ಮಂದಿ ಅವರ ಮೆಚ್ಚುಗೆ ಪಡೆಯಲಾರದೆ ಸೋತಿದ್ದರು. ಅವರ ಸಾರಥಿಯಾಗುವುದು ಗೌರವವೂ ಹೌದು, ಆತಂಕವೂ ಹೌದು. ಯಾಕೆಂದರೆ ಭೂಪತಿಗಳು ಯುದ್ಧಪ್ರವೀಣರು ಮಾತ್ರವಲ್ಲ, ಸಾರಥ್ಯದಲ್ಲೂ ಅದ್ಭುತ ನೈಪುಣ್ಯವುಳ್ಳವರಾಗಿದ್ದರು. ಸದ್ಯ ಜಗತ್ತಿನ ಶ್ರೇಷ್ಠ ಸಾರಥಿಗಳಲ್ಲಿ ಭೂಪತಿಗಳೂ ಒಬ್ಬರಾಗಿದ್ದರು. ಪ್ರತಿಯೊಬ್ಬ ಸಾರಥಿಗೂ ಕನಸಾದ ಅಶ್ವಹೃದಯ ಹಾಗೂ ರಥಕಲ್ಪಗಳನ್ನು ತಿಳಿದಿದ್ದರು ಅನ್ನುವ ಪ್ರತೀತಿಯೂ ಹಬ್ಬಿತ್ತು. ಅವರ ಜ್ಞಾನವನ್ನು ಗಮನಿಸಿದರೆ ಅದು ನಿಜವಿರಬಹುದು ಅನಿಸುತ್ತಿತ್ತು. ಸೂತವರ್ಗದವರಾದ ನಮಗೇ ತಿಳಿಯದ ವಿದ್ಯೆ ಅವರಿಗೆ ಹೇಗೆ ಸಿದ್ಧಿಯಾಯಿತೋ ಯಾರು ಬಲ್ಲರು? ಆದರೆ ಇದರಿಂದಾಗಿ ದೊಡ್ಡ ಸಮಸ್ಯೆಯಾದುದು ಅವರ ಸ್ವಂತ ಸಾರಥಿಗೆ. ಅವನು ಹೇಗೇ ರಥ ನಡೆಸಿದರೂ ಅವರಿಗೆ ಅದರಲ್ಲಿ ಲೋಪವೇ ಕಾಣುತ್ತಿತ್ತು. ಈ ಕಾರಣದಿಂದ ಅವರು ಸಾರಥಿಗಳನ್ನು ಆಗಾಗ ಬದಲಿಸುತ್ತಿದ್ದರಂತೆ. ಅದೆಲ್ಲ ನಾನು ಬರುವವರೆಗೆ ಮಾತ್ರ. ಮೇಲೆ ನಾನೇ ಅವರ ಪ್ರಿಯ ಸಾರಥಿಯಾದೆ. ಹಲವು ವರ್ಷಗಳಿಂದ ಅವರ ರಥಕ್ಕೆ ಪ್ರಧಾನ ಸಾರಥಿ ನಾನೇ. ನನ್ನನ್ನು ಬದಲಿಸುವ ಮಾತಿರಲಿ, ಅನೇಕ ಬಾರಿ ತಮ್ಮ ಅಂತರಂಗದ ರಹಸ್ಯಗಳನ್ನೂ ಅವರು ನನ್ನಲ್ಲಿ ಹೇಳಿಕೊಂಡುದಿತ್ತು. ಹೀಗೆ ಮಾತನಾಡುವಾಗ ಒಡೆಯ ಭೃತ್ಯ ಎಂಬ ಅಂತರವೂ ಅವರಿಗೆ ಮರೆತು ಹೋಗುತ್ತಿತ್ತು. ನನ್ನ ಸಾರಥ್ಯದಿಂದ ಭೂಪತಿಗಳು ತೃಪ್ತರಾಗಿದ್ದರು. ನನಗೆ ಅಶ್ವಹೃದಯ ತಿಳಿದಿರಲಿಲ್ಲ, ನಿಜ. ಆದರೆ ಮನುಷ್ಯಹೃದಯ ಅರ್ಥವಾಗುತ್ತಿತ್ತು. ಭೂಪತಿಗಳಂತಹವರೊಂದಿಗೆ ಹೇಗೆ ವ್ಯವಹರಿಸಬೇಕೆಂದು ತಿಳಿದಿತ್ತು. ದೊಡ್ಡವರ ಸೇವೆಯಲ್ಲಿರುವಾಗ ನಾವು ತಿಳಿದಿರಬೇಕಾದ ರಹಸ್ಯವಿದು ಎಂದು ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು. ಭೂಪತಿಗಳೆದುರು ಏನೂ ಗೊತ್ತಿಲ್ಲದವರಂತೆ ಇರುತ್ತಿದ್ದೆ. ಅವರಿಗೆ ಇಷ್ಟವಾಗುವಂತೆ ನಡೆದುಕೊಳ್ಳುತ್ತಿದ್ದೆ. ಸಾರಥ್ಯಕ್ಕಿಂತ ಇದು ಭೂಪತಿಗಳಿಗೆ ಪ್ರಿಯವಾಗುತ್ತಿತ್ತು. ಆದರೂ ಒಂದು ಬಾರಿ ಮಾತ್ರ ಅವರ ಆಗ್ರಹಕ್ಕೆ ತುತ್ತಾಗಿಬಿಡುವುದರಲ್ಲಿದ್ದೆ.
ಅದು ನಡೆದುದು ಹೀಗೆ: ದೂರದ ಒಂದು ಮಲ್ಲವಿದ್ಯಾಪ್ರದರ್ಶನ ನೋಡಿ ಮರಳುತ್ತಿದ್ದೆವು. ನಾನೂ ಅದೇ ಗುಂಗಿನಲ್ಲಿ ರಥ ನಡೆಸುತ್ತಿದ್ದೆ. ಎಲ್ಲೋ ಒಂದು ಹೊರಳು ದಾರಿಯಲ್ಲಿ ನಾನು ಲಗಾಮು ಎಳೆದುದು ತುಸು ವ್ಯತ್ಯಾಸವಾಗಿ ರಥ ಹೊಯ್ದಾಡಿತು. “ಹ್ಞಾಂ ಇದೇನು ರಥ ನಡೆಸುತ್ತಿದ್ದೀಯಾ ಅಥವಾ…..” ಹಿಂದಿನಿಂದ ಭೂಪತಿಗಳ ಗಂಡುದನಿ ಮೊಳಗಿತು. “ಮಹಾಪ್ರಭುಗಳು ಮನ್ನಿಸಬೇಕು. ತುಸು ಅಜಾಗರೂಕನಾಗಿಬಿಟ್ಟೆ. ಅಪರಾಧವಾಯಿತು” ಎಂದು ಬೇಡಿಕೊಂಡೆ. “ಹೂಂ” ಎಂದರು. ಕ್ಷಣಕಾಲ ಮೌನ. ತಾವು ಕುಳಿತಲ್ಲಿಂದ ಎದ್ದರು. “ಸೂತ, ಬದಿಗೆ ಸರಿ. ನಿನಗಿಂದು ನಿಜವಾದ ಸಾರಥ್ಯ ಅಂದರೇನೆಂದು ತೋರಿಸಿಕೊಡುತ್ತೇನೆ” ಹೀಗೆಂದ ಭೂಪತಿಗಳು ನನ್ನನ್ನು ಬದಿಗೆ ಸರಿಸಿ ತಾವೇ ಕಡಿವಾಣ ಹಿಡಿದರು.
ಅಷ್ಟೇ! ಕುದುರೆಗಳಿಗೆ ಏನು ಸಂಜ್ಞೆ ಮಾಡಿದರೋ ನಾನು ತಿಳಿಯೆ. ಕೈಯ ಚಾವಟಿಯನ್ನೊಮ್ಮೆ ಸುಂಯೆಂದು ಗಾಳಿಯಲ್ಲಿ ಬೀಸಿದ್ದಷ್ಟೆ, ಕುದುರೆಗಳು ಮುಂಗಾಲುಗಳನ್ನೆತ್ತಿ ಒಮ್ಮೆ ಕೆನೆದವು. ಮತ್ತೆ ನಾಗಾಲೋಟವೇ ಅವುಗಳದ್ದು. ನಾನು ಎಷ್ಟು ಉತ್ತೇಜಿಸಿದರೂ ಹದ ವೇಗವನ್ನು ಮೀರದ ಕುದುರೆಗಳಿಂದು ಓಡುವ ರಭಸಕ್ಕೆ ನಾನು ನಿಬ್ಬೆರಗಾಗಿ ಹೋದೆ. ಹಿಂದೆ ಋತುಪರ್ಣ ರಾಜನ ಸಾರಥಿಯಾಗಿದ್ದನಂತಲ್ಲ ನಳ ಚಕ್ರವರ್ತಿ, ಅವನೂ ಹೀಗೆಯೇ ರಥವನ್ನು ಓಡಿಸಿದ್ದನಂತೆ. ಕುಂಡಿನಾಪುರಕ್ಕೆ ಮರುದಿನ ಬೆಳಗ್ಗೆ ಮುಟ್ಟುವುದಕ್ಕಾಗಿ ಓಡುತ್ತಿದ್ದ ರಥದ ವೇಗಕ್ಕೆ ಋತುಪರ್ಣನ ಕೈಯ ಅಂಗವಸ್ತ್ರ ಎಲ್ಲೋ ಬಿದ್ದು ಹೋಯಿತಂತೆ. “ಬಾಹುಕಾ, ರಥ ನಿಲ್ಲಿಸು ಕರವಸ್ತ್ರ ಜಾರಿಹೋಯಿತು’ ಅಂದನಂತೆ ಋತುಪರ್ಣ. “ಮಹಾರಾಜ, ಇನ್ನದು ಸಿಗಲಾರದು. ನಾವು ಯೋಜನಾಂತರ ಮುಂದೆ ಬಂದಾಯಿತು” ಎಂದು ಬಾಹುಕ ಉತ್ತರಿಸಿದನಂತೆ. ಅಷ್ಟೇ ವೇಗದಲ್ಲಿ ಭೂಪತಿಗಳೂ ರಥವೋಡಿಸುತ್ತಿದ್ದಾರೆ ಅನಿಸಿತು ನನಗೆ. ಕ್ಷಣಾರ್ಧದಲ್ಲಿ ನಮ್ಮನ್ನು ಹಿಂಬಾಲಿಸುತ್ತಿದ್ದ ರಾಜಪರಿವಾರ ಕಾಣದಾಯಿತು. ರಥ ರಕ್ಷಕರೂ ಹಿಂದೆ ಬಿದ್ದರು. ಗಾಳಿಯಲ್ಲಿ ಹಾರುತ್ತಿರುವಂತೆ ನಮ್ಮ ರಥ ಧಾವಿಸುತ್ತಿತ್ತು. ಕೆಲವೇ ಗಳಿಗೆಗಳಲ್ಲಿ ಹಲವು ಯೋಜನ ದೂರ ಕಳೆದು ರಾಜಧಾನಿಗೆ ಸಮೀಪ ಬಂದುಬಿಟ್ಟಿದ್ದೆವು. ದೂರದಲ್ಲಿ ರಾಜಪ್ರಾಸಾದದ ಗೋಪುರ ಕಣ್ಣಿಗೆ ಬೀಳುತ್ತಿದ್ದಂತೆ ಕಡಿವಾಣ ನನ್ನ ಕೈಗೆ ಕೊಟ್ಟ ಭೂಪತಿಗಳು ಮರಳಿ ತಮ್ಮ ಸ್ಥಾನಕ್ಕೆ ಹೋದರು.
ಈ ಘಟನೆಯ ಬಳಿಕ ಭೂಪತಿಗಳಿಗೆ ನಾನು ಹೆಚ್ಚು ನಿಕಟನಾದೆ. ಮುಂದಿನ ದಿನಗಳಲ್ಲಿ ಸಾರಥ್ಯಕ್ಕೆ ಸಂಬಂಧಿಸಿ ಅವರು ಹೇಳುತ್ತಿದ್ದುದನ್ನು ಗಮನವಿಟ್ಟು ಕೇಳುತ್ತಿದ್ದೆ. ಕೆಲವು ಸಲ ಏನಾದರೂ ವಿಚಾರವೆತ್ತಿ ನಾನೇ ಅವರನ್ನು ಮಾತನಾಡಿಸುತ್ತಿದ್ದೆ. ತುಂಬ ತಿಳಿದವರಲ್ಲಿ ಒಂದು ದೌರ್ಬಲ್ಯವಿರುತ್ತದೆ. ತಮಗೆ ತಿಳಿದುದನ್ನು ಯಾರಿಗಾದರೂ ಹೇಳಬೇಕೆಂಬ ತವಕವದು. ಶ್ರದ್ಧೆಯಿಂದ ಯಾರಾದರೂ ಕೇಳುವರೆಂದರೆ ಅವರಿಗೆ ಹೇಳುವ ಉತ್ಸಾಹ ಬರುತ್ತದೆ. ತಮ್ಮ ಅನುಭವ ಎಷ್ಟು ದೊಡ್ಡದು ಅನ್ನುವುದನ್ನು ತೋರಿಸಲೆಂದೇ ಮಾತನಾಡುತ್ತಾರೆ. ಭೂಪತಿಗಳನ್ನು ಹೀಗೆ ಮಾತನಾಡಿಸುತ್ತ, ಸ್ವಲ್ಪ ಅವರನ್ನು ಹೊಗಳುತ್ತ…… ಹೀಗೆ ಸಾರಥ್ಯದ ಅನೇಕ ರಹಸ್ಯಗಳನ್ನು ಅವರಿಂದ ನಾನು ಕಲಿತೆ.
ಮದ್ರದೇಶದಲ್ಲಿ ಶಲ್ಯ ಭೂಪತಿಗಳ ಬಗೆಗೆ ವಿಶಿಷ್ಟವಾದ ಗೌರವಭಾವವಿತ್ತು. ಆಳುವ ಅರಸರೆಂದಲ್ಲ; ಅದು ಪ್ರಜೆಗಳಲ್ಲಿ ಎಲ್ಲ ಅರಸರ ಬಗೆಗೂ ಇರುವಂತಹುದೇ. ಆದರೆ ಶಲ್ಯ ಭೂಪತಿಗಳು ಸತ್ಯವಾದಿಗಳೆಂಬ ಪ್ರಸಿದ್ಧಿ ಹರಡಿತ್ತು. ಅವರ ತೀರ್ಥರೂಪರು ಋತಾಯನರೆಂದು ಹೆಸರಾದವರು. ಋತವನ್ನು ಬಿಡದವರೆಂದು ಅದರ ಅರ್ಥವಂತೆ. ಅವರ ಸುಪುತ್ರನಾಗಿ ಭೂಪತಿಗಳು ಆ ಹೆಸರಿಗೆ ತಕ್ಕಂತೆ ವ್ಯಕ್ತಿತ್ವವುಳ್ಳವರಾಗಿದ್ದರು. ಇದು ಒಂದಾದರೆ, ಮದ್ರದ ಜನರಿಗೆ ಮೊದಲಿನಿಂದಲೂ ಇದ್ದ ಕುಪ್ರಸಿದ್ಧಿಯೊಂದನ್ನು ತೊಡೆದುಹಾಕಿದ್ದು ಇನ್ನೊಂದು. ಮದ್ರದ ಜನ ವಿಪರೀತ ಮದ್ಯಪಾನಿಗಳೆಂದೂ ಹಣದಾಸೆಗಾಗಿ ಮನೆಯ ಹೆಣ್ಣುಮಕ್ಕಳನ್ನು ಮಾರುವವರೆಂದೂ ಇತರ ದೇಶಗಳ ಜನರು ಮಾದ್ರರನ್ನು ಹೀನವಾಗಿ ಕಾಣುತ್ತಿದ್ದರು. ಭೂಪತಿಗಳು ಪಟ್ಟಕ್ಕೆ ಬಂದಬಳಿಕ ಈ ಭಾವನೆಯನ್ನು ಬಹುಪಾಲು ತೊಡೆದುಹಾಕಿದ್ದರು. ಅರಸನಾದವನು ಒಳ್ಳೆಯ ಆಳ್ವಿಕೆಯನ್ನು ಕೊಡದಿದ್ದರೂ ಪ್ರಜೆಗಳು ಸಹಿಸಬಲ್ಲರು. ಆದರೆ ತಮ್ಮ ಅಭಿಮಾನಕ್ಕೆ ಕುಂದಾಗುವುದನ್ನು ಸಹಿಸಲಾರರು. ಭೂಪತಿಗಳು ಮಾದ್ರರಿಗೆ ಸ್ವಾಭಿಮಾನದ ನೆಲೆಯನ್ನು ಕಲ್ಪಿಸಿಕೊಟ್ಟವರು. ತಾವೂ ಸುಸಂಸ್ಕೃತರೆಂದು ಅಕ್ಕಪಕ್ಕದ ದೇಶಗಳ ಜನ ಗೌರವಿಸುವಂತೆ ಮಾಡಿದ ಶಲ್ಯ ಭೂಪತಿಗಳ ಬಗೆಗೆ ಮಾದ್ರರು ಸದಾ ಕೃತಜ್ಞರಿದ್ದರು. ಮದ್ರದ ಮೇಲಿದ್ದ ಕಳಂಕವನ್ನು ಹೋಗಲಾಡಿಸಿದ್ದು ಮಾತ್ರವಲ್ಲ, ಹಸ್ತಿನಾವತಿಯಂತಹ ಪ್ರತಿಷ್ಠಿತ ರಾಜಮನೆತನದ ಸಂಬಂಧವನ್ನೂ ಬೆಳೆಸಿದರು. ತಮ್ಮ ತಂಗಿ ಮಾದ್ರಿಯನ್ನು ಹಸ್ತಿನಾವತಿಯ ಪಾಂಡು ಮಹಾರಾಜನಿಗೆ ಕೊಟ್ಟು ವಿವಾಹ ಮಾಡಿ ಆ ಮೂಲಕವೂ ಪ್ರತಿಷ್ಠಿತರೆನಿಸಿಕೊಂಡರು. ಇಂತಹ ಭೂಪತಿಗಳ ಪ್ರಿಯ ಸಾರಥಿಯೆನಿಸಿಕೊಂಡುದು ನನಗೂ ಹೆಮ್ಮೆಯ ವಿಚಾರವೇ ಆಗಿತ್ತು.
ಭೂಪತಿಗಳು ಸಾರಥ್ಯದಲ್ಲಿ ನಿಷ್ಣಾತರು ಮಾತ್ರವಲ್ಲ ಬಹು ಪ್ರಸಿದ್ಧರೂ ಆಗಿದ್ದರು ಎಂದೆನಲ್ಲ. ಅದಕ್ಕೊಂದು ಹಿನ್ನೆಲೆಯಿತ್ತು. ಆ ಪ್ರಕರಣವನ್ನು ನನ್ನ ತಂದೆಯೇ ನನಗೆ ಹೇಳಿದ್ದರು. ಅವರೂ ಅರಮನೆಯಲ್ಲಿ ಸಾರಥಿಯಾಗಿ ಸೇವೆ ಮಾಡಿದವರೇ. ಅವರು ಹೇಳಿದ ಘಟನೆ ನಡೆದುದು ಬಹಳ ಹಿಂದೇನಲ್ಲ. ನಾನು ಹದಿನೈದು ಹದಿನಾರರ ತರುಣನಿದ್ದಾಗ ಇರಬಹುದು. ಭೂಪತಿಗಳ ಭಾವ ಅಂದರೆ ಅವರ ತಂಗಿ ಮಾದ್ರೀಕುಮಾರಿಯ ಪತಿ ಹಸ್ತಿನಾವತಿಯ ಅರಗುವರ ಪಾಂಡುವಿನ ರಥಕ್ಕೆ ಭೂಪತಿಗಳು ಸಾರಥ್ಯ ಮಾಡಿದ ಕಥೆಯದು. ಹಸ್ತಿನಾವತಿಯವರು ಚಕ್ರವರ್ತಿಗಳು ನಿಜ. ಆದರೆ ಅಭಿಷೇಕಗೊಂಡು ಸಿಂಹಾಸನ ಏರಿದ ರಾಜರು ದಿಗ್ವಿಜಯ ಮಾಡಿ ರಾಜರನ್ನು ಗೆಲ್ಲದಿದ್ದರೆ ಚಕ್ರವರ್ತಿ ಎಂದು ಪರಿಗಣಿಸಲ್ಪಡುತ್ತಿರಲಿಲ್ಲ. ಹಾಗಾಗಿ ಪಾಂಡು ನೃಪಾಲನು ಸಿಂಹಾಸನವೇರಿದ್ದರೂ ಚಕ್ರವರ್ತಿಯಾಗಬೇಕಾಗಿದ್ದರೆ ದಿಗ್ವಿಜಯ ಮಾಡುವುದು ಅನಿವಾರ್ಯವಿತ್ತು. ಪಾಂಡು ಸ್ವತಃ ಪರಾಕ್ರಮಿಯಾದರೂ ದಿಗ್ವಿಜಯ ಯಾತ್ರೆಗೆ ಅವನ ರಥಕ್ಕೆ ಒಬ್ಬ ಯೋಗ್ಯ ಹಾಗೂ ನಿಷ್ಣಾತನಾದ ಸಾರಥಿಯ ಅಗತ್ಯವಿತ್ತು. ಅಂತಹವನನ್ನು ಎಲ್ಲಿ ಹುಡುಕುವುದು?
ಹೀಗೆ ಹಸ್ತಿನಾವತಿಯಲ್ಲಿ ರಾಜಬಂಧುಗಳು ಚಿಂತಿಸುತ್ತಿದ್ದಾಗ ಯಾರೋ ನಮ್ಮ ಭೂಪತಿಗಳ ಸಾರಥ್ಯದ ಪ್ರಾವೀಣ್ಯವನ್ನು ಕುರಿತು ಹೇಳಿದರಂತೆ. ಹೇಗೂ ಬಂಧುಗಳಷ್ಟೆ? ಭೂಪತಿಗಳು ಸಾರಥ್ಯ ಮಾಡಿದರಾದೀತೆಂದು ಅವರ ಭಾವನೆಯಾಗಿತ್ತಂತೆ. ಹಾಗೆಂದು ಉನ್ನತ ವರ್ಣದ ಕ್ಷತ್ರಿಯ ಮಹಾರಾಜನಲ್ಲಿ ಕೇಳುವುದೆಂತು ಎಂಬ ಅಳುಕು ಅವರಲ್ಲಿದ್ದಿರಬೇಕು. ಹಾಗಾಗಿ ಭೂಪತಿಗಳಲ್ಲಿ ಇದನ್ನು ಪ್ರಸ್ತಾವಿಸುವುದಕ್ಕೆ ಸಂಕೋಚವಾಗಿ ಅವರು ಮೌನವಾಗಿದ್ದರು. ಇದನ್ನು ಯಾರೋ ನಮ್ಮ ಭೂಪತಿಗಳಿಗೆ ತಿಳಿಸಿದರಂತೆ. ಹೃದಯ ವೈಶಾಲ್ಯವುಳ್ಳ ನಮ್ಮ ಭೂಪತಿಗಳು ಯಾವುದೇ ಸಂಕೋಚವಿಲ್ಲದೆ ತಾವೇ ಮುಂದಾಗಿ ಪಾಂಡು ಮಹಾರಾಜನಿಗೆ ಸಾರಥ್ಯ ಮಾಡುವುದಾಗಿ ಸೂಚಿಸಿದರಂತೆ. ಇದರಿಂದ ಹಸ್ತಿನಾವತಿಯವರಿಗೂ ಸಂತೋಷವಾಯಿತು. ಭೂಪತಿಗಳ ಸಾರಥ್ಯದಲ್ಲಿ ತೊಡಗಿದ ದಿಗ್ವಿಜಯ ಯಶಸ್ವಿಯಾಗಿ ಸಾಗಿತಂತೆ. ಪಾಂಡು ಧನುರ್ಧರನೆಂದೂ, ಯುದ್ಧವೀರನೆಂದೂ ಈ ವಿಜಯಯಾತ್ರೆಯ ಬಳಿಕ ಪ್ರಸಿದ್ಧಿಯೂ ಬಂತು. ಉಳಿದ ರಾಜರನ್ನು ಸೋಲಿಸಿದ್ದರಿಂದ ಚಕ್ರವರ್ತಿ ಪೀಠವೂ ಪಾಂಡುವಿಗಾಯಿತು. ಈ ಎಲ್ಲ ಯಶಸ್ಸಿನ ಹಿಂದಿದ್ದುದು ನಮ್ಮ ಭೂಪತಿಗಳ ಸಾರಥ್ಯದ ಹಿರಿಮೆ. ಇದು ನನ್ನ ಸ್ವಾಮಿನಿಷ್ಠೆಯಿಂದಾಗಿ ನಾನು ಹೇಳುತ್ತಿರುವುದಲ್ಲ. ಹಸ್ತಿನಾವತಿಯವರೇ ಒಪ್ಪಿಕೊಂಡ ವಿಚಾರ. ಯಾಕೆ ಪಾಂಡುವಿಗಿಂತಲೂ ಭೂಪತಿಗಳಿಗೆ ದಿಗ್ವಿಜಯದ ಕೀರ್ತಿ ಅಧಿಕವಾಗಿ ಬಂತು? ಅದಕ್ಕೆ ಅನೇಕ ಕಾರಣಗಳಿದ್ದವು.
ಮೊದಲನೆಯದು ನಮ್ಮ ಭೂಪತಿಗಳ ನಿರಹಂಕಾರ ಮತ್ತು ತ್ಯಾಗ. ಸಾಧಾರಣವಾಗಿ ಕ್ಷತ್ರಿಯರಾದವರು ರಣರಂಗದಲ್ಲಿ ಕಾದಾಟದಲ್ಲಿ ಪಾಲ್ಗೊಳ್ಳಬಯಸುವರೇ ಹೊರತು ಸಾರಥ್ಯದಂತಹ ಸೂತರು ಮಾಡುವ ಕೆಲಸಗಳಿಗೆ ಒಪ್ಪುವುದು ಕಡಮೆ. ಅದರಲ್ಲೂ ಅಭಿಷಿಕ್ತರಾದ ರಾಜರು ಇಂತಹುದನ್ನು ಯೋಚಿಸಲೂ ಆರರು. ಹೀಗಿರುವಾಗ ಸಾರಥ್ಯದಲ್ಲಿ ನಿಷ್ಣಾತರಾದರೂ ಪಾಂಡು ರಾಜನ ರಥದ ಸಾರಥ್ಯವನ್ನು ಒಪ್ಪಿಕೊಂಡುದು ಶಲ್ಯಭೂಪತಿಗಳ ದೊಡ್ಡಸ್ತಿಕೆಯೇ ಸರಿ. ಇನ್ನೊಂದು, ಭೂಪತಿಗಳು ಆ ಕಾಲದ ದೊಡ್ಡ ಯುದ್ಧವೀರರೂ ಆಗಿದ್ದವರು. ದೇಹಬಲ, ಮಲ್ಲಯುದ್ಧ ಪ್ರಾವೀಣ್ಯ ಇವೆರಡರಲ್ಲಿ ಬಹಳ ಕೀರ್ತಿವಂತರಾಗಿದ್ದವರು. ಇಷ್ಟೆಲ್ಲ ಇದ್ದವರು ಯೋಧರಾಗಿ ಹೋರಾಟ ಮಾಡುವುದು ಬಿಟ್ಟು ಬರೇ ನೋಟಕರಾಗುವುದು ಸುಲಭವಲ್ಲ. ಅಷ್ಟು ನಿಸ್ಪೃಹೆಯಿರಬೇಕು. ಅಥವಾ ಸಾರಥ್ಯವನ್ನು ಒಂದು ವಿದ್ಯೆಯಾಗಿ ಗೌರವದಿಂದ ಕಾಣುವವರಾಗಿರಬೇಕು. ಭೂಪತಿಗಳು ಎರಡೂ ಬಗೆಯ ದೃಷ್ಟಿಯುಳ್ಳವರು. ಹಾಗಾಗಿ ಪಾಂಡು ರಾಜನ ಸಾರಥ್ಯಕ್ಕೆ ತಾನಾಗಿ ಮುಂದೆ ಬಂದರು. ಜೈತ್ರಯಾತ್ರೆಯಲ್ಲಾದರೂ ಅಷ್ಟೆ. ಸಾರಥಿಯಾಗಿ ಪೂರ್ಣಸಹಕಾರ ನೀಡಿದರು. ತನ್ನ ತಂಗಿಯ ಗಂಡನೆಂದಿದ್ದರೂ ಇರಬಹುದು, ಪ್ರತಿಷ್ಠೆ ಅಡ್ಡಿಯಾಗಲಿಲ್ಲ. ಸಾರಥಿಯೊಬ್ಬ ಯೋಗ್ಯನಾಗಿದ್ದರೆ ಎಂತಹ ಯುದ್ಧವನ್ನಾದರೂ ಗೆದ್ದುಕೊಳ್ಳಬಹುದು ಎಂಬ ಪ್ರತೀತಿ ಕೂಡ ಹುಟ್ಟಿಕೊಂಡಿತು. ಯುದ್ಧದಲ್ಲಿ ಸಾರಥ್ಯಮಾಡುವುದು ಹುಡುಗಾಟಿಕೆಯಲ್ಲ. ಅದಕ್ಕೆ ಪ್ರತ್ಯೇಕ ಪರಿಣತಿ, ಅದಕ್ಕಿಂತ ಹೆಚ್ಚು ಪ್ರತಿಭೆ ಬೇಕು. ಎಷ್ಟು ಅನುಭವಿಯಾದರೂ ವಿಹಾರ ಯಾತ್ರೆಗೋ, ಪ್ರಯಾಣದ ಕಾಲಕ್ಕೋ ಬಹು ಸೊಗಸಾಗಿ ಲಾಘವದಿಂದ ರಥ ನಡೆಸಿದ ಅನುಭವೀ ಸಾರಥಿಯಾದರೂ ಯುದ್ಧದಲ್ಲಿ ನಿರುಪಯುಕ್ತನಾದುದುಂಟು. ಯುದ್ಧ ಮಧ್ಯೆ ರಥಿಕನಿಗೆ ವಿಶ್ರಾಂತಿ ಅಗತ್ಯವೆನಿಸಿದರೆ ಉಪಾಯದಿಂದ ಮುಖಾಮುಖಿ ಯುದ್ಧವನ್ನು ತಪ್ಪಿಸಿ ರಣರಂಗದಿಂದ ಹೊರಕ್ಕೆ ತರುವುದು ತಿಳಿದಿರಬೇಕು. ಕುದುರೆಗಳಿಗೆ ಆಯಾಸವಾದರೆ ಅದನ್ನು ಗ್ರಹಿಸಬೇಕು. ಪ್ರತಿಭಟ ಅಸ್ತ್ರ ಪ್ರಯೋಗ ಮಾಡಿದರೆ ಚಾತುರ್ಯದಿಂದ ರಥ ಹೊರಳಿಸಿ ಅದರ ಗುರಿತಪ್ಪಿಸಬೇಕು. ರಥಿಕ ವಿಶಿಷ್ಟ ಅಸ್ತ್ರಗಳನ್ನು ಪ್ರಯೋಗಿಸುವ ಸಂದರ್ಭದಲ್ಲಿ ರಥವು ಹಚ್ಚು ಅಲುಗಾಡದೆ ಸ್ಥಿರವಾಗಿ ನಿಂತಿರುವಂತೆ ಎಚ್ಚರ ವಹಿಸಬೇಕು. ರಥಿಕನ ಮನೋಧರ್ಮವನ್ನು ಅವನು ಹೇಳದೆಯೇ ಅರಿತುಕೊಂಡು ಅದಕ್ಕೆ ಸರಿಯಾಗಿ ರಥವನ್ನು ನಡೆಸಬೇಕು. ಹೀಗೆ ಒಂದೇ ಎರಡೇ?
ಇಂತಹ ಯೋಗ್ಯತೆಗಳೆಲ್ಲ ಮೇಳೈಸಿದ್ದರಿಂದಲೇ ಭೂಪತಿಗಳ ಸಾರಥ್ಯವೇ ಪಾಂಡುವಿನ ಗೆಲವಿಗೆ ಕಾರಣ ಎಂಬ ಪ್ರಸಿದ್ಧಿ ಬಂತು.
ಭೂಪತಿಗಳ ಕುರಿತು ಇಂತಹ ಕಥೆಗಳನ್ನು ಕೇಳುತ್ತ ಕೇಳುತ್ತ ನಾನು ಅವರ ಬಗೆಗೆ ಅಭಿಮಾನ ಬೆಳೆಸಿಕೊಳ್ಳುತ್ತ ಬಂದೆ. ತಾನು ಬಹಳ ತಿಳಿದವನಾದರೂ ಸರಳವಾದ ಅವರ ವರ್ತನೆ, ತಾನು ಕಲಿತ ವಿದ್ಯೆಯ ಕುರಿತು ಅವರಿಗಿದ್ದ ಗೌರವ, ತಾನೇ ಸ್ವತಃ ಯುದ್ಧವೀರನಾಗಿದ್ದರೂ ಸಾರಥಿಯಾಗಿ ರಥಿಕನ ಗೆಲವಿಗಾಗಿ ಶ್ರಮಿಸುವ ನಿಸ್ಪೃಹತೆ ಇಂತಹ ಗುಣಗಳೆಲ್ಲ ನನ್ನನ್ನು ಆಕರ್ಷಿಸಿದವು. ಮುಂದೆ ಭೂಪತಿಗಳಿಗೆ ಸಾರಥ್ಯ ಮಾಡಿ ಅವರ ಮೆಚ್ಚುಗೆ ಗಳಿಸುವುದು ನನ್ನ ಗುರಿಯಾಯಿತು. ಸಾರಥ್ಯದ ಅಭ್ಯಾಸವಂತೂ ನನಗೆ ತಂದೆಯಿಂದಲೇ ಬಳುವಳಿಯಾಗಿ ಬಂದಿತ್ತು. ಭೂಪತಿಗಳು ಸಾರಥ್ಯದಲ್ಲಿ ಪರಿಣತರು ಎನ್ನುವುದನ್ನು ತಿಳಿದಮೇಲಂತೂ ಆ ವಿದ್ಯೆಯ ಕುರಿತು ಇನ್ನಷ್ಟು ಆದರ ಮೂಡಿತು. ಇದರ ಪರಿಣಾಮವಾಗಿ ನಾನು ಹೆಚ್ಚು ಶ್ರದ್ಧೆ ವಹಿಸಿ ಅಭ್ಯಾಸ ಮಾಡಿದೆ. ಹೀಗೆ ಬೆಳೆಯುತ್ತಿದ್ದಂತೆ ನನಗೂ ಸಾರಥ್ಯದ ಯೋಗ್ಯತೆ ಇದೆಯೆಂದು ಜನ ಗೌರವಿಸತೊಡಗಿದರು. ಆದರೂ ಸಾಮಾನ್ಯ ಸೂತನ ಮಗನಾದ ನಾನು ಅರಮನೆಯ ಸಾರಥಿಯಾಗುವುದು ಸುಲಭವಾಗಿರಲಿಲ್ಲ. ಅಂತಹ ಆಕಾಂಕ್ಷೆ ಹೊತ್ತ ನನ್ನಹಾಗಿನ ಅನೇಕ ಸೂತರಿದ್ದರು. ದೊಡ್ಡ ಸ್ಥಾನಕ್ಕೇರುವುದಕ್ಕಾಗಲೀ ದೊಡ್ಡವರ ಸಂಪರ್ಕಕ್ಕೆ ಬರುವುದಕ್ಕಾಗಲೀ ಬರೇ ಯೋಗ್ಯತೆ ಸಾಕಾಗುವುದಿಲ್ಲವಲ್ಲ? ಅದಕ್ಕೆ ಒಳದಾರಿಗಳು ತಿಳಿದಿರಬೇಕು. ಅಂತಹ ದಾರಿಯಲ್ಲಿ ಒಯ್ಯಬಲ್ಲವರು ಬೇಕು. ಅವರನ್ನು ಒಲಿಸಿಕೊಳ್ಳುವ ಜಾಣ್ಮೆ ಇರಬೇಕು. ದುರ್ದೈವವೆಂದರೆ ಒಳದಾರಿಗಳು ಗೊತ್ತಿದ್ದು ಎತ್ತರದ ಸ್ಥಾನಕ್ಕೇರಬಲ್ಲವನಿಗೆ ಯೋಗ್ಯತೆ ಇರುವುದಿಲ್ಲ. ಯೋಗ್ಯತೆ ಇದ್ದವನಿಗೆ ಒಳದಾರಿಗಳು ಗೊತ್ತಿರುವುದಿಲ್ಲ. ಹೀಗಾಗಿ ಎಷ್ಟೇ ಪರಿಣತನಾದರೂ ನಾನು ನಮ್ಮ ಕೇರಿಯಲ್ಲೇ ಉಳಿದೆ. ಹಾಗೆಂದು ಅನೇಕ ಮಂದಿ ಸಂಪನ್ನರು, ಪುರಪ್ರಮುಖರು, ವಣಿಕ ಶ್ರೇಷ್ಠರು ನನ್ನ ಸಾರಥ್ಯವನ್ನು ಬಯಸುತ್ತಿದ್ದರು. ಆದರೂ……
ಕೊನೆಗೂ ದೈವ ಕಣ್ತೆರೆಯಿತು. ಭೂಪತಿಗಳ ಗಮನ ಸೆಳೆಯುವ ಅನುಕೂಲ ಸಂದರ್ಭ ನನ್ನ ಪಾಲಿಗೆ ಒದಗಿಬಂತು. ಅದು ನಡೆದುದು ಹೀಗೆ. ರಾಜಕುಟುಂಬಕ್ಕೆ ಎಲ್ಲಾದರೂ ಪ್ರಯಾಣಿಸಬೇಕಾದರೆ ಪ್ರತ್ಯೇಕ ಸಾರಥಿಯ ಅಗತ್ಯ ಬೀಳುತ್ತಿತ್ತು. ಅದಕ್ಕೆಂದೇ ಅರಮನೆಯಲ್ಲಿ ಕೆಲವರು ಸೂತರು ನೇಮಿಸಲ್ಪಡುತ್ತಿದ್ದರು. ಹಾಗೆ ಅರಮನೆಯ ಸಾರಥಿಗಳಾಗಿ ನಮ್ಮ ಕೇರಿಯ ಕೆಲವು ಸೂತರೂ ಇದ್ದರು. ಇವರು ರಾಜಸಾರಥಿಗಳಲ್ಲ. ರಾಜಸಾರಥಿಗಳಾಗಿ ಬೇರೆಯೇ ಸಾರಥಿಗಳಿರುತ್ತಿದ್ದರು. ಇವರಿಗೆ ಅರಮನೆಯಲ್ಲೇ ಸದಾ ಇರಬೇಕಾದ ನಿರ್ಬಂಧವಿರಲಿಲ್ಲ. ಬೇರೆ ಕೆಲಸ ಮಾಡುತ್ತಿರಬಹುದಿತ್ತು. ಆದರೆ ಅರಮನೆಯ ಕರೆ ಬಂದಾಗ ಮಾತ್ರ ತತ್ ಕ್ಷಣ ಎಲ್ಲ ಬಿಟ್ಟು ಅಲ್ಲಿಗೆ ಧಾವಿಸಬೇಕಿತ್ತು. ತಪ್ಪಿಸಿಕೊಳ್ಳುವಂತಿರಲಿಲ್ಲ. ಇಂತಹ ಸೇವೆಗಾಗಿ ಹಲವರಿರುತ್ತಿದ್ದರೂ ಕೆಲವು ಸಲ ತುರ್ತು ಸನ್ನಿವೇಶದಲ್ಲಿ ಒಬ್ಬರೂ ಸಿಕ್ಕದೇ ಹೋಗುವುದೂ ಇತ್ತು. ಆಗಲೂ ಹಾಗೆಯೇ ಆಯಿತು. ನಮ್ಮ ಕೇರಿಯ ಹಿರಿಯ ಸೂತನೊಬ್ಬನಿಗೆ ಅರಮನೆಯ ಕರೆ ಬಂದಾಗ ಅವನು ಅಸ್ವಾಸ್ಥ್ಯದಿಂದ ನರಳುತ್ತಿದ್ದ. ಇದರಿಂದಾಗಿ ಬೇರೊಬ್ಬರು ಅವನ ಬದಲಿಗೆ ಹೋಗುವುದು ಅನಿವಾರ್ಯವೆನಿಸಿತು. ಆದರೆ ಯಾರು? ಯಾರೋ ಒಬ್ಬನಿಗೆ ಇದನ್ನು ವಹಿಸುವಂತಿರಲಿಲ್ಲ. ಪಳಗಿದ ಸಾರಥಿಯೇ ಆಗಬೇಕಿತ್ತು. ಅಲ್ಲದೆ ಅರಮನೆಯ ರಾಣೀವಾಸವನ್ನು ಒಯ್ಯುವ ಕೆಲಸ ತುಂಬ ಹೊಣೆಗಾರಿಕೆಯದು. ಕೊನೆಗೆ ಆತ ನನಗೆ ಕರೆಕಳುಹಿಸಿದ. “ತಮ್ಮಾ, ಹೀಗೊಂದು ಸಂದರ್ಭ ಒದಗಿದೆ. ಅರಮನೆಯ ರಾಣೀವಾಸದವರಿಗೆ ಎಲ್ಲೋ ಹೋಗಬೇಕಾಗಿದೆಯಂತೆ. ನನಗೆ ಕರೆಕಳುಹಿದ್ದಾರೆ. ನಾನಾದರೋ ನಿಃಶಕ್ತಿಯಿಂದ ಏಳಲಾರದ ಸ್ಥಿತಿಯಲ್ಲಿದ್ದೇನೆ. ಅರಮನೆಯ ಕರೆಗೆ ಓಗೊಡದೆ ನಿರ್ವಾಹವಿಲ್ಲ. ನಾನಲ್ಲದಿದ್ದರೆ ಬೇರೆ ಯಾರಾದರೂ ಯೋಗ್ಯ ಸೂತನನ್ನು ಕಳುಹಿಸಲೇ ಬೇಕು. ನಿನ್ನ ಹೊರತು ಈ ಹೊಣೆಯನ್ನು ಹೊರಬಲ್ಲವರು ಯಾರೂ ಇಲ್ಲ. ದಯವಿಟ್ಟು ನನ್ನ ತಲೆಯನ್ನು ಕಾಯಬೇಕು. ಹೋಗಿಬರುವೆಯಾ?” ಎಂದು ವಿನಂತಿಸಿದ. ನಮ್ಮ ಕೇರಿಯ ಹಿರಿಯ. ಅವನ ಮಾತನ್ನು ತಳ್ಳಿಹಾಕುವುದು ಹೇಗೆ? ಅಲ್ಲದೆ ನಾನೂ ಇಂತಹ ಸನ್ನಿವೇಶಕ್ಕಾಗಿ ಕಾಯುತ್ತಿದ್ದೆ. ಆದರೂ, “ಅಯ್ಯಾ, ನಾನಿನ್ನೂ ಅನನುಭವಿ. ಅರಮನೆಯ ಕೆಲಸ ಬೇರೆ. ಹೇಗಾಗುವುದೋ” ಎಂದು ಅನುಮಾನಿಸಿದೆ. ಅದೇನೂ ದೊಡ್ಡ ವಿಚಾರವಲ್ಲವೆಂದು ಅವನು ತಳ್ಳಿಹಾಕಿದ. ಅದೇನೇ ಇದ್ದರೂ ತಾನೇ ಅದಕ್ಕೆ ಹೊಣೆಯೆಂದೂ, ನಾನು ಹೋಗಲೇ ಬೇಕೆಂದೂ ಒತ್ತಾಯಿಸಿದ. ಕೊನೆಗೆ ಒಪ್ಪಿಕೊಂಡೆ.
ಅರಮನೆಗೆ ಬದಲಿ ಸಾರಥಿಯಾಗಿ ಹೋದ ನನ್ನನ್ನು ಭಟರು ಪ್ರಶ್ನಿಸಿದರಾದರೂ ರಾಣೀವಾಸದವರಿಗೆ ಅಂದರೆ ಮಹಾರಾಜ್ಞಿಗೆ ತೀರಾ ತ್ವರೆಯಾಗಿ ದೂರದ ದೇವಮಂದಿರಕ್ಕೆ ಹೋಗಬೇಕಾದುದರಿಂದ ನನ್ನನ್ನು ಹೆಚ್ಚು ಪರೀಕ್ಷಿಸದೆ ಒಳಗೆ ಬಿಟ್ಟರು. ನಾನು ಯೋಗ್ಯ ಅಶ್ವಗಳನ್ನು ತಂದು ರಥಕ್ಕೆ ಹೂಡಿ ಸಿದ್ಧನಾದೆ. ಮಹಾರಾಜ್ಞಿ ಬಂದು ರಥವೇರಿದರು. ಅವರ ಪರಿವಾರ ಹಿಂಬಾಲಿಸುತ್ತಿದ್ದಂತೆ ನಾನು ರಥ ನಡೆಸಿದೆ. ಸಾಕಷ್ಟು ಎಚ್ಚರದಿಂದ, ಕುಳಿತವರಿಗೆ ಒಂದಿಷ್ಟೂ ಅಹಿತವಾಗದಂತೆ ಆದರೆ ಸಾಕಷ್ಟು ವೇಗವಾಗಿ ರಥ ನಡೆಸಿದೆ. ಬರುವಾಗಲೂ ಅಷ್ಟೆ. ಸುರಕ್ಷಿತ ಹಾಗೂ ತ್ವರಿತವಾಗಿ ಅರಮನೆಗೆ ಕರೆತಂದೆ. ರಥವಿಳಿದ ಮಹಾರಾಣಿ ನನ್ನತ್ತ ಮೆಚ್ಚುಗೆಯ ನೋಟವನ್ನು ಹರಿಸಿ ಅಂತಃಪುರಕ್ಕೆ ನಡೆದರು. ನಾನು ರಥಾಶ್ವಗಳನ್ನು ಹಿಂದಿರುಗಿಸಿ ಮರಳಿದೆ. ಇದರ ಪರಿಣಾಮ ನನಗೆ ಅರಿವಾದುದು ಒಂದೆರಡು ದಿನಗಳ ಬಳಿಕ. ಅದೂ ಅರಮನೆಯ ಕರೆ ಬಂದ ಬಳಿಕ.
(ಮೇ ೨೦೧೬ರ ಸಂಚಿಕೆಯಲ್ಲಿ ಮುಂದುವರಿಯುವುದು)