ಭೈರವ್ ರಾಗವು ಶಿವನ ಮುಖಭಾವದ ಸಂಕೇತವಾದದ್ದು. ಈ ರಾಗ ಮುಂಜಾನೆ ಕಾಲದ್ದು. ಹೇಮಂತಋತುವಿನ ಈ ರಾಗದ ವರ್ಣ ಗಾಢ ಕೆಂಪು. ’ಸಂಗೀತರತ್ನಾಕರ’ದಲ್ಲಿ ಶುದ್ಧ ಭೈರವ್ ಎಂದೇ ರಾಗವನ್ನು ಉಲ್ಲೇಖಿಸಿದೆ. ಪುಂಡರೀಕವಿಠಲನ ಪ್ರಕಾರ ಮೊಟ್ಟಮೊದಲ ಪುರುಷರಾಗವೇ ಶುದ್ಧ ಭೈರವ್.
ರಾಗಮಾಲಾ ಕಲಾಕೃತಿಗಳನ್ನು ಕುರಿತು ಕಳೆದ ಸಂಚಿಕೆಯಲ್ಲಿ ನೋಡಿದೆವು. ಈ ಬಾರಿ ಮತ್ತೆರಡು ರಾಗಗಳ ಕುರಿತು ಇರುವ ಚಿತ್ರಗಳನ್ನು ನೋಡೋಣ. ರಾಗಮಾಲಾ ಚಿತ್ರರಚನೆಯಲ್ಲಿ ಕಲಾವಿದನು ಸಂಗೀತವನ್ನು ಆಸ್ವಾದಿಸುವ ಮನಃಸ್ಥಿತಿಯೊಂದಿಗೆ, ಅದನ್ನು ದೃಶ್ಯರೂಪಕ್ಕೆ ಅಳವಡಿಸುವಾಗ ತನ್ನ ಸುತ್ತಲಿನ ಭೌಗೋಳಿಕ ಪರಿಸರವೂ ಆತನ ಪಾಲಿಗೆ ಬಹುಮುಖ್ಯ ಸಂಗತಿಯಾಗುತ್ತದೆ. ಕಾಲ, ಸ್ಥಳ ಮತ್ತು ಪರಿಸರದಲ್ಲಿನ ಹವಾಮಾನ ಬದಲಾವಣೆಗಳು, ನಿತ್ಯಜೀವನದ ಸಣ್ಣ ಸಣ್ಣ ಸಂಗತಿಗಳೂ ಇಲ್ಲಿ ಪ್ರಾಮುಖ್ಯ ಪಡೆದುಕೊಳ್ಳುತ್ತವೆ. ಅದನ್ನು ಕಲಾವಿದ ಮುಗ್ಧಭಾವದಲ್ಲಿ ಸೆರೆಹಿಡಿಯುವ ವಿಧಾನ ಮತ್ತು ಅದನ್ನು ಸಾದರಪಡಿಸುವಲ್ಲಿನ ಆತನ ಕ್ರಿಯಾಶೀಲತೆಯೇ ನಮ್ಮನ್ನು ಚಕಿತಗೊಳಿಸುತ್ತದೆ; ಅ? ಅಲ್ಲದೆ, ಕೃತಿ ಕುರಿತಂತೆ ಒಂದು ರೀತಿಯ ಗಾಂಭೀರ್ಯಭಾವವನ್ನೂ ಅದರೊಂದಿಗೆ ಅವ್ಯಕ್ತವಾದ ಆನಂದವನ್ನೂ ನೋಡುಗನಲ್ಲಿ ಉಂಟುಮಾಡುತ್ತದೆ.
ಆಹಿರ್ ಭೈರವ್ ಒಂದು ಹಿಂದೂಸ್ತಾನೀ ರಾಗ. ಇದಕ್ಕೆ ಹತ್ತಿರವಾದ ಇನ್ನೊಂದು ಹೆಸರು ಚಕ್ರವಾಕ. ಕರ್ನಾಟಕ ಸಂಗೀತದಲ್ಲಿ ೧೬ನೇ ಮೇಳಕರ್ತವಾದ ಈ ರಾಗವನ್ನು ಹಿಂದೂಸ್ತಾನೀ ಭೈರವ್ ಥಾಟ್ಗೆ ಸೇರಿಸಲಾಗುತ್ತದೆ. ಆಹಿರ್ ಭೈರವ್ ಹಾಗೂ ಚಕ್ರವಾಕವು ಒಂದೇ ಆದರೂ ಹಾಡುವ ಶೈಲಿಯಲ್ಲಿ ವ್ಯತ್ಯಾಸವಿದೆ. ಹಾಗೆಯೆ ರಾಗಮಾಲಾ ಚಿತ್ರರಚನೆಯಲ್ಲಿಯೂ ಪ್ರದೇಶ, ಪರಿಸರ ಬದಲಾದಂತೆ ಸಂಗೀತವನ್ನು ರಾಗದೊಂದಿಗೆ ಆಸ್ವಾದಿಸುವ ಮತ್ತು ಅದನ್ನು ದೃಶ್ಯರೂಪದಲ್ಲಿ ಅಭಿವ್ಯಂಜಿಸುವ ವಿಧಾನಗಳು ಬದಲಾಗಿರುವುದನ್ನು ಕಾಣಬಹುದು.
ಸಮಕಾಲೀನ ಸಂದರ್ಭದಲ್ಲಿ, ಕಲಾಕೃತಿಗಳನ್ನು ನೋಡುವ ಭಾರತೀಯ ಮನಃಸ್ಥಿತಿಯಲ್ಲಿ, ಕಲಾಕೃತಿಗಳನ್ನು ಕಂಡಾಗ ಅವುಗಳು ಕಲಾತ್ಮಕವಾಗಿಯೂ, ವರ್ಣಮಯವಾಗಿಯೂ ಆಕರ್ಷಕವೆಂದೆನಿಸುತ್ತವೆ. ಅದರೊಂದಿಗೆ ಕೃತಿಯೊಳಗಿನ ಅರ್ಥವಿವರಣೆಗಳನ್ನು ಹುಡುಕುವುದು ಬಹು ಸಹಜ ಸಂಗತಿ. ರಾಗಮಾಲಾ ಕಲಾಕೃತಿಗಳು ಕೆಲವೊಮ್ಮೆ ಅಮೂರ್ತ ಸ್ವರೂಪದವಾಗಿ ಗೋಚರಗೊಳ್ಳುವುದಕ್ಕೆ ಬಹುಮುಖ್ಯ ಕಾರಣ ಹಿಂದೂಸ್ತಾನೀ ಸಂಗೀತಪ್ರಕಾರ. ನಾವೆಲ್ಲ ಹಿಂದೂಸ್ತಾನೀ ಸಂಗೀತಶಾಸ್ತ್ರದ ಬರವಣಿಗೆಯನ್ನು ಮೊದಲು ಗಮನಿಸಿದಾಗ ಅದು ಬಹಳ ಗೊಂದಲಗಳಿಂದ ತುಂಬಿರುವಂತೆ ಭಾಸವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಹಿಂದೂಸ್ತಾನೀ ಸಂಗೀತಕ್ಕೆ ನಿರ್ದಿಷ್ಟ ಸ್ವರಲಿಪಿ ಇಲ್ಲದಿರುವುದು.
ಅಲ್ಲದೆ, ಕೇಳುವಿಕೆಯಿಂದ ಗುರು-ಶಿಷ್ಯ ಪರಂಪರೆಯೊಂದಿಗೆ ಈ ಸಂಗೀತಪ್ರಕಾರವನ್ನು ಕಲಿಸಲಾಗುತ್ತಿತ್ತು. ಹೀಗಾಗಿಯೇ ಘರಾನಾ ಎಂಬ ಪರಂಪರೆಯು ಶಾಸ್ತ್ರೀಯ ಸಂಗೀತವನ್ನು ಸಾಂಪ್ರದಾಯಿಕವಾಗಿ ಕಲಿಸುತ್ತಾ ಉಳಿಸುತ್ತಾ ಬರಲು ಕಾರಣವಾಗಿದೆ.
ಸ್ವರ ಉಚ್ಚಾರಣೆಯಲ್ಲಿ ಒಂದು ಶ್ರುತಿಯಿಂದ ಮತ್ತೊಂದು ಶ್ರುತಿಗೆ ಚಲನೆಗೊಳ್ಳುವುದನ್ನು, ಗತಿಯನ್ನು ಕುರಿತು ಉಲ್ಲೇಖಿಸಿದ್ದು ಪುಂಡರೀಕ ವಿಠಲ. ಸಂಗೀತದ ಸ್ವರಗಳ ಏರಿಳಿತದ ಮತ್ತು ರಾಗಗಳ ಲಯದ ಭಾವೋಚ್ಚಾರಣೆಯೇ ಶಿಕ್ಷಣದ ಮುಖ್ಯ ಬೋಧನವಾಗಿರುತ್ತದೆ.
ಚಿತ್ರರಚನೆಯಲ್ಲಿ ಇದನ್ನು ಪುನರ್ನಿರೂಪಿಸುವಾಗ ಈ ಗತಿ ವಿಧಾನವು ಚಿತ್ರದಲ್ಲಿನ ಆಕೃತಿಗಳಿಗೆ ಬಳಸಲಾದ ಬಣ್ಣ, ಅವುಗಳ ತೀವ್ರತೆ ಇಲ್ಲವೆ ಪಾರದರ್ಶಕತೆ ಹಾಗೂ ಆಕೃತಿಗಳ ಅಂಚಿಗೆ ತೀಡಲಾದ ರೇಖೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಪ್ರತಿ ಋತುವಿಗೂ ಒಂದು ನಿರ್ದಿಷ್ಟ ರಾಗವಿದ್ದಂತೆ ಒಂದು ನಿರ್ದಿಷ್ಟ ಬಣ್ಣವನ್ನೂ ಹೆಸರಿಸಲಾಗಿದೆ. ಹಾಗೆ ಕೃತಿಯಲ್ಲಿನ ಹಿನ್ನೆಲೆ ಮತ್ತು ವಸ್ತ್ರಗಳ ಬಣ್ಣ, ಆಲಂಕಾರಿಕ ಸಂಕೇತ, ಚಿಹ್ನೆಗಳು ಇವೆಲ್ಲವೂ ಒಂದು ನಿರ್ದಿಷ್ಟ ಪರಿಮಾಣದೊಂದಿಗೆ ಅನುಸರಿಸಿರುವುದನ್ನು ಸಾಮಾನ್ಯವಾಗಿ ರಾಗಮಾಲಾ ಚಿತ್ರಗಳಲ್ಲಿ ಕಾಣಬಹುದು. ಇನ್ನು ಆಕೃತಿಗಳನ್ನು ರೂಪಿಸುವಲ್ಲಿ, ಮರ-ಗಿಡ, ಕಟ್ಟಡ ಮತ್ತು ಪರ್ವತಗಳನ್ನು ಚಿತ್ರಿಸಿರುವ ವಿಧಾನದಲ್ಲೂ ಹೆಚ್ಚು ವಿವರಣೆಯಿಲ್ಲದೆ ಅವುಗಳನ್ನು ಸರಳಗೊಳಿಸಿ ರೇಖೆಯಿಂದಲೇ ಚಿತ್ರಿಸುತ್ತಿದ್ದ ರೀತಿಯೂ ನಿರ್ದಿಷ್ಟ. ಕೆಲವೊಮ್ಮೆ ಚಿತ್ರಕೃತಿಯಲ್ಲಿಯೂ ಪ್ರಧಾನವಾಗಿ ಇರಿಸಿಲಾಗಿರುವ ಹಿನ್ನೆಲೆಯ ತಿಳಿ ಹಳದಿವರ್ಣ, ಹಾಗೆಯೆ ತಿಳಿ ನೀಲವರ್ಣದ ಆಕಾಶ ಮತ್ತು ಆ ಆಕಾಶ ಶುಭ್ರವಾಗಿದೆ ಎಂಬ ಭಾಸ ಉಂಟಾಗಲು ಅಲ್ಲಲ್ಲಿ ತಿಳಿ ಬಿಳಿ ಬಣ್ಣವನ್ನು ಪಾರದರ್ಶಕದಂತೆ ಬಳಸುವ ವಿಧಾನ; ಮಳೆ, ಮೋಡ, ಆಕಾಶವನ್ನು ಆಯಾ ಋತುವಿನ ಉಲ್ಲೇಖಿತ ವರ್ಣವನ್ನು ಬಳಸಿ ಚಿತ್ರಿಸುತ್ತಿದ್ದ ರೀತಿ – ಇದು ನಿಜಕ್ಕೂ ಕುತೂಹಲವನ್ನು ಉಂಟುಮಾಡುತ್ತದೆ.
ರಾಗ ಭೈರವ್
ಭೈರವ್ ರಾಗವು ಶಿವನ ಮುಖಭಾವದ ಸಂಕೇತವಾದದ್ದು. ಈ ರಾಗ ಮುಂಜಾನೆ ಕಾಲದ್ದು. ಹೇಮಂತ ಋತುವಿನ ಈ ರಾಗದ ವರ್ಣ ಗಾಢ ಕೆಂಪು. ’ಸಂಗೀತರತ್ನಾಕರ’ದಲ್ಲಿ ಶುದ್ಧ ಭೈರವ್ ಎಂದೇ ರಾಗವನ್ನು ಉಲ್ಲೇಖಿಸಿದೆ. ಪುಂಡರೀಕ ವಿಠಲನ ಪ್ರಕಾರ ಮೊಟ್ಟಮೊದಲ ಪುರು?ರಾಗವೇ ಶುದ್ಧ ಭೈರವ್.
ಶಾಂತ ಹಾಗೂ ಭಕ್ತಿರಸದ ಈ ರಾಗವು ಶಿವನ ಆರಾಧನೆಯ ಆಶಯದ್ದಾಗಿದೆ. ಜೊತೆಗೆ ಸಿಖ್ ಸಮುದಾಯದ ೩೧ ರಾಗಗಳ ರಚನೆಯಿಂದ ಕೂಡಿರುವ ಪವಿತ್ರ ’ಗುರು ಗ್ರಂಥಸಾಹಿಬ್’ನ ೨೪ನೆ ರಚನೆಯು ಭೈರವ್ ರಾಗದಿಂದ ಕೂಡಿದೆ.
ಶುದ್ಧ ಭೈರವ್ ರಾಗದ ರಾಗಮಾಲಾ ಚಿತ್ರಗಳನ್ನು ನೋಡೊಣ. ಇಲ್ಲಿ ಮೊದಲ ಚಿತ್ರದಲ್ಲಿ ಶುಭ್ರ ಮುಂಜಾನೆಯಲ್ಲಿ ಶಿವನ ಆರಾಧನೆಯಲ್ಲಿ ತೊಡಗಿರುವ ಸ್ತ್ರೀಯೋರ್ವಳಿದ್ದಾಳೆ. ಈಕೆಯ ಆಕೃತಿ ಪ್ರಧಾನವಾಗಿ ಚಿತ್ರಿತವಾಗಿದೆ. ಪು?ಗಳಿಂದ ಅರ್ಚಿಸುತ್ತಿರುವ ಆಕೆ ನವವಸ್ತ್ರಧಾರಿಣಿಯಾಗಿದ್ದಾಳೆ. ಧರಿಸಿರುವ ಬಟ್ಟೆಯ ಬಣ್ಣ, ಚಿತ್ತಾರಗಳು ಮತ್ತು ಆಕೆ ಕುಳಿತ ಭಂಗಿ ಜೊತೆಗೆ ಆ ಕಟ್ಟಡದ ನೆಲಹಾಸು, ದೇವ ಮಂಟಪ ಎಲ್ಲವೂ ಹೊಸ ವರ್ಣಲೇಪನದಲ್ಲಿ ಕಂಗೊಳಿಸುತ್ತಿದೆ. ಅಲ್ಲಿ ಕಸೂತಿ ರೂಪದ ಸೂಕ್ಷ್ಮ ವಿವರಗಳನ್ನು ಅಲಂಕಾರಯುತವಾಗಿ ಕಲಾವಿದ ಚಿತ್ರಿಸಿದ ರೀತಿ ಗಮನಿಸಿದರೆ ಒಂದು ಹಬ್ಬದ ದಿನದಂದು ನಡೆಸುವ ಪೂಜೆಯ ಸಂದರ್ಭ ಇದಾಗಿದೆ. ಪ್ರಮುಖ ಹಬ್ಬಗಳಾದ ದಸರಾ, ದೀಪಾವಳಿ ಹಬ್ಬಗಳನ್ನು ಆಚರಿಸುವುದು ಶರದ್, ಹೇಮಂತ ಋತುಗಳಲ್ಲೇ.
ಇನ್ನು ಶಿವಲಿಂಗದ ಮೇಲೆ ಉಗ್ರರೂಪದ ಮುಖವಾಡವಿದೆ. ಭೈರವರೂಪದ ಪ್ರತೀಕವನ್ನು ಕಲಾವಿದ ಇಲ್ಲಿ ಚಿತ್ರಿಸಿದ್ದಾನೆ. ಲಿಂಗದ ಮೇಲಿನ ಅಭಿ?ಕದ ನೀರು ಕೆಳಗೆ ಸಣ್ಣ ಮಂಡಲದಲ್ಲಿ ಬಿದ್ದು ಮುಂದೆ ಹರಿಯುತ್ತಿದೆ. ಇದು ಸಣ್ಣ ಜಲಪಾತವನ್ನು ಲಿಂಗದ ಮೇಲೆ ಬೀಳುವಂತೆ ಮತ್ತು ಅದು ಮುಂದೆ ಹರಿದು ತೀರ್ಥರೂಪವಾಗಿ ಹೋಗುವ ಚಿತ್ರಣವನ್ನು ಗಮನಿಸಿದಾಗ ಭಾರತದಲ್ಲಿ ಪರ್ವತ ಪ್ರದೇಶಗಳಲ್ಲಿ ಇಂಥ ದೃಶ್ಯ ಸಹಜಸಾಮಾನ್ಯ (ನದಿಯ ಉಗಮಸ್ಥಳದಲ್ಲಿ ಅದನ್ನು ತೀರ್ಥರೂಪವಾಗಿಸಲು ಹೀಗೆ ನಿರ್ಮಿಸಲಾಗುತ್ತದೆ). ಚಿತ್ರದ ಹಿನ್ನೆಲೆಯಲ್ಲಿ ತಿಳಿ ಬೂದುವರ್ಣದ ಬೆಟ್ಟಗಳು ಮುಂಜಾನೆ ಕಾಣುವ ಹಿಮಪರ್ವತಗಳ ರೂಪಕವಾಗಿದೆ. ಭೈರವ್ ರಾಗದಲ್ಲಿ ವ್ಯಕ್ತವಾಗುವ ಶುದ್ಧಭಾವ ಹಾಗೂ ನಸುಕಿನ ವೇಳೆಯಲ್ಲಿನ ಹಬ್ಬದ ಆನಂದಮಯ ಭಾವವನ್ನು ಪ್ರಕಟೀಕರಿಸುವ ರೀತಿಯನ್ನು ಈ ಕಲಾಕೃತಿಯಲ್ಲಿ ಕಲಾವಿದ ಸೆರೆಹಿಡಿದಿದ್ದಾನೆ.
ಭೈರವಿ ರಾಗಿಣಿ
’ಪ್ರಕಾಶವನ್ತಿ ಪ್ರಭಾವವನ್ತಿ ಶಿವಚರಿತಾನಿ ಸದಾ ವದ ಚರಣ, ವಿಲೋಕನೇನ ಮನೋಭವಂ ಸಮದಹದುಗ್ರೋ ರತಿಪತಿಂ ವಿ?ಗಳೇ ಧೃತೋಜವಾತ್ ಜಲಧಿ ಪ್ರಮಂಥೇ ಕೃಪಾವಲಾತ್’ – ಎಂಬ ಶಿವಸ್ತುತಿಯ ವಿವರಣೆಯ ದೃಶ್ಯರೂಪವಾಗಿರುವ ಈ ರಾಗಮಾಲಾ ಚಿತ್ರಗಳಲ್ಲಿ ಇದು ಭೈರವಿ ರಾಗಿಣಿ ಕುರಿತಾದದ್ದು. ಭೈರವಿ ರಾಗವು ಭಾವಪ್ರಧಾನ ಮತ್ತು ಕೇವಲ ಸಂತೋ?ವನ್ನು ಪ್ರತಿನಿಧಿಸುವುದಿಲ್ಲ, ಬದಲಿಗೆ ಅಧ್ಯಾತ್ಮ ಭಾವದ ಉತ್ಕಟ ಆನಂದವನ್ನು ಉಂಟುಮಾಡುವಂಥದ್ದು. ಈ ರಾಗ ಭಕ್ತಿರಸವನ್ನು ಉಂಟುಮಾಡುವ ಬದಲಿಗೆ ಅಂತರಂಗದ ಪರಿಶುದ್ಧತೆಯನ್ನು ಸಾದರಪಡಿಸುವಂಥದ್ದು. ಹೀಗಾಗಿ ಸಂಗೀತಕಚೇರಿಗಳ ಕೊನೆಯಲ್ಲಿ ಈ ರಾಗವನ್ನು ಪ್ರಸ್ತುತಪಡಿಸಲಾಗುತ್ತದೆ.
ಭೈರವ್ ರಾಗದ ಮೂಲ
ಭೈರವ್ ರಾಗದ ಮೂಲವು ಭೀರ್ವ ಎಂಬ ಬುಡಕಟ್ಟು ಜನಾಂಗದಿಂದ ಬಂದಿರಬಹುದೆಂಬ ಒಂದು ಅಭಿಪ್ರಾಯವಿದೆ. ಇದಕ್ಕೆ ಪುಷ್ಟಿ ಕೊಡಲೆಂಬಂತೆ ರಾಜಾಶ್ರಯದಲ್ಲಿ ಚಿತ್ರಿಸಿದ ಕಲಾವಿದರ ರಚನೆ ಹಾಗು ಗುಡ್ಡಗಾಡು, ಕಣಿವೆ ಪ್ರದೇಶದಲ್ಲಿ ಅಭ್ಯಾಸ ನಿರತರಾಗಿದ್ದ ಚಿತ್ರರಚನೆ ವಿಧಾನದಲ್ಲಿ ವ್ಯತ್ಯಾಸ ಕಾಣಬಹುದು.
ಈ ಚಿತ್ರದಲ್ಲಿ ಭೈರವಿ ರಾಗಿಣಿಯ ರೂಪಾಂತರವನ್ನು ಕಲಾವಿದನು ಚಿತ್ರಿಸಿದ್ದಾನೆ. ರಾಗದ ಶುದ್ಧತೆ ಹಾಗೂ ಶ್ರೀಮಂತಿಕೆಯನ್ನು ದೃಶ್ಯರೂಪಕ್ಕೆ ವರ್ಗಾಯಿಸುವಲ್ಲಿ ಚಿನ್ನದ ವರ್ಣವನ್ನು ನೆರವಿಗೆ ಬಳಸಿದೆ. ಭೈರವಿ ರಾಗದ ಗತಿಯಂತೆ ಕೃತಿಯಲ್ಲಿಯೂ ಆನಂದಭಾವವನ್ನು ಸಾಧಾರಣ ರೂಪಕದಲ್ಲಿ ಚಿತ್ರಿಸಿರುವ ಜೊತೆಗೆ ಮನುಜದೇಹವನ್ನು ಗರಿ?ಪ್ರಮಾಣದಲ್ಲಿ ಇರಿಸಿ, ಸುತ್ತಲ ಜಗತ್ತನ್ನು ವಿಶಾಲಗೊಳಿಸಿರುವ ಕ್ರಮ ಗಮನಿಸಿದರೆ ಪ್ರಕೃತಿ-ಸೃಷ್ಟಿಯ ಅಗಾಧತೆಯಲ್ಲಿ ಮನುಷ್ಯಜನ್ಮದ ಸಾರ್ಥಕ್ಯವನ್ನು ಹಾಗೂ ಅದನ್ನು ಅಧ್ಯಾತ್ಮರೂಪದಲ್ಲಿ ಭಜಿಸುವ ಮೂಲಕ ಅದರ ಪರಿಜ್ಞಾನವನ್ನು ಅರಿಯಬೇಕೆಂಬುದನ್ನು ರಾಗದ ಮೂಲಕ ವ್ಯಕ್ತಪಡಿಸಲು ಹೊರಟಿರುವ ಸಂದೇಶವನ್ನು ಇಲ್ಲಿ ದೃಶ್ಯರೂಪವಾಗಿ ಚಿತ್ರಿಸಲಾಗಿದೆ.
ಕಟ್ಟಡವನ್ನು ಮೀರಿ ಬೇಳೆದ ದೈತ್ಯಾಕಾರದ ಎರಡು ಮರಗಳನ್ನು ಎಲೆಗಳೂ ಒಳಗೊಂಡಂತೆ ಇಡೀ ಮರವನ್ನು ಗಾಢ ಕಪ್ಪು ವರ್ಣದಲ್ಲಿ ಚಿತ್ರಿಸುವ ಮೂಲಕ ರಾತ್ರಿಯ ನಿರಾವತೆಯನ್ನು ಹಾಗು ನೆಲ ಹಾಗು ಆಗಸವನ್ನು ಪ್ರತ್ಯೇಕಿಸಲು ಬೂದು ಹಾಗು ಕಪ್ಪು ಬಣ್ಣವನ್ನು ಬಳಸಿರುವ ರೀತಿ ಹಾಗು ಅಲ್ಲಲ್ಲಿ ಹೊಳೆಯುವ ನಕ್ಷತ್ರಗಳಿಗೆ ಕಾಗದದ ಬಿಳಿ ಭಾಗವನ್ನು ಹಾಗೆ ಉಳಿಸಿಕೊಂಡು ಆ ಮೂಲಕ ರಾತ್ರಿಯ ಪರಮಶಾಂತ ವಾತಾವರಣ ಸ್ಥಿತಿಯನ್ನು ಕಲಾವಿದ ಸೃಷ್ಟಿಸಿದ್ದಾನೆ.
ಚಲನಚಿತ್ರ ಗೀತೆಗಳಲ್ಲಿ ಭೈರವ್ ರಾಗ
’ಸಂಸಾರ್’ ಹಿಂದೀ ಚಿತ್ರದಲ್ಲಿ ಯೇಮನಿ ಶಂಕರಶಾಸ್ತ್ರೀ ಸಂಗೀತ ಸಂಯೋಜನೆಯಲ್ಲಿ ಲತಾ ಮಂಗೇಶ್ಕರ್ ಹಾಡಿರುವ ’ಅಮ್ಮಾ ರೋಟಿ ದೇದೇ, ಬಾಬಾ ರೋಟಿ ದೇದೇ’ ಹಾಡು ಭೈರವ್ ರಾಗದಲ್ಲಿದೆ. ಹಾಗೆಯೆ ಆಹಿರ್ ಭೈರವ್ ರಾಗದಲ್ಲಿರುವ, ಕನ್ನಡ ಚಲನಚಿತ್ರ – ’ಜನುಮದ ಜೋಡಿ’ಯಲ್ಲಿ ಡಾ| ರಾಜ್ಕುಮಾರ್ ಹಾಡಿರುವ ’ದೇಹವೆಂದರೆ ಮನುಜ’ ಎಂಬ ಹಾಡು, ’ಮಹಾಕ್ಷತ್ರಿಯ’ ಚಿತ್ರದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿರುವ ’ಈ ಭೂಮಿ ಬಣ್ಣದ ಬುಗುರಿ’ ಎಂಬ ಹಾಡು ಕೂಡ ಹೌದು.
ಈ ಕಲಾಕೃತಿಯ ಕಾಲಮಾನ ಅಂದಾಜು ೧೬೪೦-೫೦, ಹಿಮಾಚಲ ಪ್ರದೇಶದ ಮಂಡಿ ಸ್ಥಳದ್ದು. ಇದನ್ನು ೯ ಇಂಚು ಉದ್ದ ೬.೫ ಇಂಚು ಅಗಲದ ಕಾಗದದ ಮೇಲೆ ಜಲವರ್ಣದಲ್ಲಿ ಚಿತ್ರಿಸಲಾಗಿದೆ. (ಸಂಗ್ರಹ: ರೋಜರ್ ಫಂಡ್ ೧೯೫೮)
(ಮುಂದಿನ ರಾಗ: ದೀಪಿಕಾ)
ಲೇಖಕರು ದೃಶ್ಯಕಲಾವಿದರು ಹಾಗೂ ಕಲಾಇತಿಹಾಸಕಾರರು