ಧೀಮಿಕಿಟ ತಾ ಥೈ ಢಣನನನ ಢಣನನ
ಧಿಮಿತ ತಕಿಟ ಧಿಮಿ ಡಮರು ನಿನಾದ
ಮೇಘಮಾರುತಗಳ ಚಲನ ಪ್ರರೋಧ
ಕರ್ಣಸುಧಾ ಧ್ವನಿ ಆಲಿತ ಸುಲಲಿತ
ಝೇಂಕರಣ ಹೂಂಕರಣ ಭೋರ್ಗರಿತ
ಧೀಮಿಕಿಟ ತಾ ಥೈ ಢಣನನನ ಢಣನನ
ಹೀಗೆ ಕೇಳುವಾಗ ಶಬ್ದೋಚ್ಚಾರದ ಜೊತೆಗೆ ಡಮರುವಿನ ಧ್ವನಿ ನಿಮಗೆ ಕೇಳುತ್ತಿರುವಂತೆ ಭಾಸವಾದರೆ ಅದುವೆ ಸಂಗೀತ ಸ್ಫುರಿಸುವಿಕೆಗೆ ಇರುವ ಶಕ್ತಿ. ನಾದದಲ್ಲಿನ ಭಾವಾವೇಶವೇ ತನ್ನ ಅಂತರಂಗದ ಇರುವಿಕೆಯನ್ನು ಪ್ರಸ್ತುತಗೊಳಿಸಿ ತನ್ನೊಳಗೆ ಚಿತ್ತೈಸಿಕೊಂಡುಬಿಡುತ್ತದೆ. ಗೌಡಮಲ್ಹಾರ ರಾಗದ ವೈಶಿ್ಷ್ಟಯವೇ ಹಾಗೆ ದೇಹಲಾಸ್ಯವನ್ನೊ, ಜಟಿಲತೆಯನ್ನೊ ಸುಲಲಿತಗೊಳಿಸಿ ಆಹ್ಲಾದ ಮತ್ತು ಚೈತನ್ಯಗೊಳಿಸುವುದೇ ಆಗಿದೆ.
ಕಳೆದ ಸಂಚಿಕೆಯಲ್ಲಿ ರಾಗ ಮೇಘಮಲ್ಹಾರದ ವೈಶಿಷ್ಟ್ಯವನ್ನು ನೋಡಿದೆವು. ಮಲ್ಹಾರದ ವಿಶೇಷವೇ ರಾಗ-ಸಂಗೀತದೊಂದಿಗೂ ತಾಳ-ವಾದ್ಯಗಳೊಂದಿಗೂ ನೃತ್ಯವೂ ಜೊತೆಗೂಡುವುದು. ಆ ರಾಗದ ರಾಗಿಣಿಯರಲ್ಲಿ ಒಂದಾದ ಗೌಡಮಲ್ಹಾರ ಕೂಡ ಇದೇ ಬಗೆಯದು. ಡಮರುವಿನಿಂದ ಅಲೆಯಲೆಯಾಗಿ ಹೊರಟ ನಾದದಂತೆ, ದೂರದ ಪರ್ವತಶಿಖರಗಳ ಮೇಲೆ ರಮಣೀಯವಾಗಿ ಗುಡುಗು ಸಿಡಿಲುಗಳಿಂದ ತೇಲಿಹೋಗುವ ಮೋಡಗಳ ಆರ್ಭಟದ ದೃಶ್ಯರೂಪಕವಾಗಿದೆ.
ಆದರೆ ಈ ರಾಗ ವಿಪ್ರಲಂಭ ಶೃಂಗಾರದ್ದು. ಮಳೆ ಸುರಿದು ನಾಯಕಿ ತೋಯ್ದು ಭಯಗೊಳ್ಳುವ ಸಂದರ್ಭವಿಲ್ಲ. ಅದರ ಬದಲು ದೂರದ ಮೋಡಗಳ ಗುಡುಗು ಸಿಡಿಲು ಮತ್ತು ಕೋರೈಸುವ ಬೆಳಕಿನ ರೂಪಕಗಳನ್ನು ಅನುಭವಕ್ಕೆ ತಂದೊಡ್ಡುತ್ತವೆ. ಇಲ್ಲಿ ನಾಯಕಿ ಈ ಕ್ಷಣದಲ್ಲಿ ತನ್ನ ಇನಿಯ ಸನಿಹದಲ್ಲಿ ಇದ್ದಿರಬಹುದಾದಲ್ಲಿ ಉಂಟಾಗಬಹುದಾದ ಮಧುರ ಅನುಭವಗಳನ್ನು ಕಲ್ಪಿಸಿಕೊಳ್ಳುತ್ತ, ಸ್ವತಃ ರೋಮಾಂಚಿತಳಾಗುವುದಾಗಿದೆ. ಹೃದಯಕ್ಕೆ ಹತ್ತಿರವಾದ ವ್ಯಕ್ತಿಯ ಅನುಪಸ್ಥಿತಿಯಲ್ಲಿ ಆ ವ್ಯಕ್ತಿಯ ಪ್ರಸ್ತುತತೆಯನ್ನು ಆಲೋಚಿಸುವುದಾಗಿದೆ. ಇಂಗ್ಲಿಷಿನಲ್ಲಿ ಹೇಳುವಂತೆ ’ಮಿಸ್’ ಮಾಡಿಕೊಳ್ಳುವುದು ಎಂಬ ಭಾವ.
ಗೌಡಮಲ್ಹಾರವು ಮಳೆಗಾಲದ ಎಲ್ಲ ಸಮಯದಲ್ಲೂ ಸಂಗೀತಗಾರರನ್ನು ಪ್ರೇರೇಪಿಸುವ ಮತ್ತು ಅವರನ್ನು ಹೆಚ್ಚು ಆರ್ದ್ರಗೊಳಿಸಿರುವ ರಾಗ. ಹಾಗೆ ಕಲಾವಿದನು ಇಲ್ಲಿ ರಾಗದ ತಾತ್ಪರ್ಯಕ್ಕಿಂತ ಹಾಡಿನ ಥಾಟ್ ಪ್ರಕಾರದೊಂದಿಗೆ ಚಿತ್ರಬರೆಯುತ್ತಾ ಹೋಗಿರುವುದು ವ್ಯಕ್ತವಾಗುತ್ತದೆ. ಅಂದರೆ ಧ್ವನಿಸುವ ಆಂತರ್ಯದ ಶುದ್ಧತೆಯ ಪ್ರಕಟೀಕರಣವಾಗಿದೆ. ಗೌಡ್ ಎಂಬುದರ ಅರ್ಥವೇ ಆಭೂಷಣ ಎಂದಾಗಿದೆ. ಹೀಗಾಗಿ ಶುದ್ಧವಾದ ವಿಚಾರಗಳನ್ನು ಆಭೂಷಣಧಾರಿಗಳಾಗಬೇಕೆನ್ನುತ್ತವೆ ಈ ರೂಪಕ ಚಿತ್ರಣಗಳು.
ಈ ಚಿತ್ರವು (ಕೃತಿ ೧) ಬಿಲಾವಲ್ ಥಾಟ್ಗೆ ಸೇರಿದ್ದಾಗಿದ್ದು, ರಾಗದ ಭಾವವು ವಿಪ್ರಲಂಭಶೃಂಗಾರವಾದ್ದರಿಂದ ಈ ಚಿತ್ರಸಂಯೋಜನೆಯ ನಡುವೆ ಇರುವ ನಾಯಕಿ ಉಪ್ಪರಿಗೆಯಲ್ಲಿ ಕುಳಿತು ಡಮರು ನುಡಿಸುತ್ತಿದ್ದಾಳೆ. ದೂರದಲ್ಲಿ ಗುಡುಗು ಸಿಡಿಲಿನಿಂದ ಆರ್ಭಟಿಸುತ್ತಿರುವ ಮೋಡಗಳ ರಾಶಿಗಳಿವೆ. ಈ ಹಿಂದಿನ ರಾಗದಲ್ಲಿ ಕಂಡಂತೆ ಆಕೆ ಭಯಭೀತಳಾಗಿಲ್ಲ, ನಿರ್ಲಿಪ್ತ ಮುಖದಲ್ಲಿನ ಆಂತರ್ಯ ಭಾವದ ತಾತ್ಪರ್ಯವನ್ನು ಆಕೆಯ ಹಿಂದೆ ಸುಮವರಳಿಸಿ ನಿಂತ ಗಿಡವೊಂದು ಸಂಕೇತಿಸುತ್ತಿದೆ. ಇಲ್ಲಿ ಡಮರು ನುಡಿಸುವಿಕೆಯ ಪ್ರಕ್ರಿಯೆಯ ಲಕ್ಷ್ಯವು ಆಕೆಗಿಲ್ಲವಾದರೂ, ಡಮರುವಿನ ನಿನಾದ ಆಕೆಯ ಭಾವದ ಕೈಹಿಡಿದು ಸಾಗಿದೆ.
ಘನ ಗರಾಜೆ ಬರಕಹಾ ಆಯಿ
ಗರಜೆ ಗರಜೆ ಮೋಹೆ ಡರವಾವೆ
ನಾದ ದಿಲಾವೇ ಮೋಹೆ ಯಾದ್ ಪಿಯಾಕೆ
ಪಿಯಾ ಪಿಯಾ ಸುನ್ ಕೋಯಲ್ ಕೀ
ಮನ್ ಮೇ ಸೋಕ್ ಪಿಯಾ ಕಬ್ ಆವೇ
ನಾದ ಗರಾಜ ಮೋಹೆ ಯಾದ ಸತಾವೇ
– ಎಂಬಲ್ಲಿ ಇನಿಯನ ನೆನಪು ಆಕೆಯನ್ನು ಕಾಡುವ ಸಂಗತಿಯಾಗಿದೆ. ಇನ್ನು ಮಳೆಯಾಗುವ ಸಂದರ್ಭ ಇದಲ್ಲ. ಇದು ಕೇವಲ ಮೋಡ, ಗುಡುಗು ಆರ್ಭಟಗಳ? ಎಂಬುದನ್ನು ಕಲಾವಿದ ಸಾರಗೊಳಿಸಲು ಹಿನ್ನೆಲೆಯನ್ನು (ಆಕಾಶ) ತಿಳಿ ಹಳದಿ ಬಣ್ಣದಲ್ಲಿ ಚಿತ್ರಿಸಿದ್ದಾನೆ. (ಕಾಲ ಮತ್ತು ಋತುಮಾನಗಳ ಕಾರಣದಿಂದಾಗಿ ಕೃತಿಯಲ್ಲಿನ ಬಣ್ಣಗಳು ಕಂದುಗಟ್ಟಿವೆ).
ಗಿರಿ-ಕಣಿವೆಗಳ ನಡುವೆ ಹುಟ್ಟಿಬಂದ ರಾಗಮಾಲಾ ಕೃತಿಗಳು ಮೊಗಲ್ ಸಾಮ್ರಾಟರ
ಪೋಷಣೆಗೊಳಗಾಗತೊಡಗಿದ ನಂತರ ಇಸ್ಲಾಮೀ ಕಲೆಯ ಪ್ರಭಾವವೂ ಕೃತಿಗಳ ರಚನೆಯಲ್ಲಿ ಕಾಣಲಾರಂಭಿಸಿತು. ಇದನ್ನು ಇಲ್ಲಿನ ಕೃತಿಯ ಆಲಂಕಾರಿಕ ಚೌಕಟ್ಟು ರಚನೆಯಲ್ಲಿ ಕಾಣುವಂತೆ ಕೃತಿಯ ಒಳಾವರಣದಲ್ಲಿಯೂ, ನೆಲಹಾಸು ಪೀಠೋಪಕರಣಗಳಲ್ಲೂ ಚಿತ್ರಿತವಾಗಿರುವ ಪರಿಯಿಂದ ಗಮನಿಸಬಹುದು.
ಮೊಗಲ್ ಸಾಮ್ರಾಟರ ಆಳ್ವಿಕೆಯಲ್ಲಿ ಹಿಂದೂಸ್ತಾನಿ ಸಂಗೀತ ರಾಗಗಳು ಪೋಷಣೆಗೊಂಡು ಪ್ರಭಾವಕ್ಕೆ ಒಳಗಾದಂತೆ ಚಿತ್ರರಚನೆಯಲ್ಲಿಯೂ ಪ್ರಭಾವ ಬೀರಿವೆ.
ಪ್ರಭಾವದ ಅಂತಹ ಪರಿಣಾಮಗಳನ್ನು ಮುಂದಿನ ಅಧ್ಯಾಯಗಳಲ್ಲಿ ನೋಡೋಣ.
ಗೌಡಮಲ್ಹಾರ ಕುರಿತಾದ ಇನ್ನೂ ಕೆಲವು ರಾಗಮಾಲಾ ಕೃತಿಗಳನ್ನು ನೋಡೋಣ. ದೃಶ್ಯರೂಪದಲ್ಲಿ ಈ ಹಿಂದಿನ ಕೃತಿಗೂ ಈ ಕೃತಿಗಳಿಗೂ ಎಳ್ಳಷ್ಟೂ ಸಾಮ್ಯವಿಲ್ಲವಾದರೂ, ಈ ಎಲ್ಲ ಕೃತಿಗಳು ಗೌಡಮಲ್ಹಾರ ರಾಗದ ಕುರಿತಾದದ್ದೇ ಎಂಬುದು ಬಹುಮುಖ್ಯ ಸಂಗತಿ.
ಮೊದಲ ಕೃತಿ ದೇಸೀ ಸಂಗೀತದಲ್ಲಿ ಮತ್ತು ಎರಡನೇ ಕೃತಿಯು ಮಾರ್ಗ ಸಂಗೀತದಲ್ಲಿದೆ. ಪ್ರಾಚೀನ ಕಾಲದಿಂದಲೂ ಭಕ್ತಿ ರಚನೆ ಗೀತೆಗಳ ಧೃಪದ್ ಗಾಯನದಿಂದ ಹಿಡಿದು ಖ್ಯಾಲ್ ಪ್ರಸ್ತುತಿವರೆಗೆ ಎರಡೂ ಬಗೆಯ ಗಾಯನವು ನಿರಂತರ ಪ್ರಚಲಿತವಿದ್ದವು. ಹಿಂದೂಸ್ತಾನಿ ಸಂಗೀತದಲ್ಲಿ ಭಜನೆಯೂ ಒಂದು ಅಂಗವಾಗಿದೆ. ಭಗವಂತನ ಕೃಪೆಗಾಗಿ ಭಕ್ತಿರಸದ ಗಾಯನವನ್ನು ಮಾಡುತ್ತಿದ್ದರು. ಸೂರದಾಸ, ಮೀರಾಬಾಯಿ, ಕಬೀರ ಮತ್ತು ತುಳಸೀದಾಸರು ಶಾಸ್ತ್ರೀಯವಾಗಿ ಭಜನೆಗೀತೆಗಳನ್ನು ಹಾಡುತ್ತಿದ್ದರು.
ಕೃತಿ ೨ ಮತ್ತು ೩ರಲ್ಲಿ ಇದೇ ಬಗೆಯ ಭಕ್ತಿರಸದ ಅನುಭಾವಿಕತೆಯ ರೂಪಕವಿದೆ. ಸೃಷ್ಟಿಕರ್ತನ ಅಮೋಘ ಕೈಚಳಕ ಬಣ್ಣಿಸುವ ಸುತ್ತಲಿನ ಪರಿಸರದ ಮೋಹಭರಿತ ಸೃಷ್ಟಿರಚನೆಗಳನ್ನು
ಕಂಡು ವಿಸ್ಮಯಪಡುವ ಮತ್ತು ಆ ಮೂಲಕ ತನ್ನ ಸೃಷ್ಟಿಗೆ ಕಾರಣವಾದ ನಿರಾಕಾರಶಕ್ತಿಯ ನೆನೆದು ದೈವೀಬಲದ ಸ್ಮರಣೆಯ ಚಿತ್ರಣವನ್ನು ಗಾಯನದ ಆಶಯದೊಂದಿಗೆ ಚಿತ್ರಿಸಲಾಗಿದೆ. ಇಲ್ಲಿ ಸೃಷ್ಟಿಕರ್ತನಾದ ಭಗವಂತನಿಲ್ಲ; ಪೂಜಿಸುವ ವಿಗ್ರಹಗಳಿಲ್ಲ; ಮತ್ತಾವ ಬಗೆಯ ಭಕ್ತಿಧಾರೆಯನ್ನು ಚಿಮ್ಮಿಸುವ ದೃಷ್ಟಾಂತವಿಲ್ಲ! ಚಿತ್ರ ೨ರಲ್ಲಿ ಕೇವಲ ದಿವ್ಯಜಗತ್ತಿನ ಸಕಲ ಚರಾಚರ ಸೃಷ್ಟಿ ಸಂಕೇತಗಳೊಂದಿಗೆ ತಾನೂ ಒಂದಾಗಿ ಕುಳಿತ ಯೋಗಿಯಿದ್ದಾನೆ, ಆತ ನಮ್ಮೊಳಗಿನ ಮನಸ್ಸೇ ಆಗಿರಲೂಬಹುದೆಂಬ ಆಶಯವನ್ನು ಕಲಾವಿದ ಹೊಂದಿದ್ದಾನೆ. ಹೀಗಾಗಿ ಇಲ್ಲಿ ಯೋಗಿ ಕಣ್ಣುಮುಚ್ಚಿ ಧ್ಯಾನಾಸಕ್ತನಾಗದೆ, ಭಕ್ತಿಗ್ರಂಥಗಳ ಪಠಣ ಬದಿಗಿರಿಸಿ ತನ್ನ ಸುತ್ತಲಿನ ಇಹ-ಪರ ವಸ್ತುಗಳ ವೀಕ್ಷಣೆಯಲ್ಲಿಯೇ ಎಲ್ಲದಕ್ಕೂ ಕಾರಣಕರ್ತನ ಅನುಪಸ್ಥಿತಿಯನ್ನು ತವಕಿಸುತ್ತ ಭಕ್ತಿಭಾವದ ಉನ್ನತ ಶ್ರೇಣಿಯಲ್ಲಿದ್ದಾನೆಂಬುದಕ್ಕೆ ವಿವರಣೆಯಾಗಿದ್ದಾನೆ.
ಕೃತಿರಚನೆಯಲ್ಲಿ ವಾಸ್ತವಿಕತೆ ಸಹಜವಾಗಿ ಮೂಡಿಬರುವಂಥದ್ದು. ಇಲ್ಲಿ ಕಲಾವಿದ ತಾವರೆ ಕೊಳದಲ್ಲಿ ಹಂಸವೊಂದು ಚಲಿಸುತ್ತಿದ್ದರೆ ಮತ್ತೊಂದು ಹಂಸ ಮುಳುಗು ಹಾಕಿ ಆಹಾರ ಪಡೆಯುವ ಕ್ರಿಯೆಯೊಂದರಲ್ಲಿ ತೊಡಗಿರುವ ಚಿತ್ರಣ ಇಲ್ಲಿ ಅನಾಯಾಸವಾಗಿ ಮೂಡಿಬಂದಿದೆ. ಹಾಗೆ ಇನ್ನೊಂದೆಡೆ ಪಕ್ಷಿಗಳು ರೆಕ್ಕೆ ಬಡಿಯುತ್ತಾ ಚಲನಗತಿಯನ್ನು ಸಂಕೇತಿಸುತ್ತಿದ್ದರೆ, ಅವುಗಳ ಹಿಂದಿನ ಮರದ ಕಾಂಡದ ಟೊಳ್ಳು ಪೊಟರೆಗಳು ಆಶ್ರಯ ಕಲ್ಪಿಸುವ ಪ್ರಕೃತಿಸಹಜ ಸೃಷ್ಟಿಯ ಸಂಕೇತಗಳಾಗಿವೆ.
ಕೃತಿ ೩ರಲ್ಲಿ ಆಸ್ಥಾನದಲ್ಲಿ ಭಕ್ತಿರಸದ ಭಾವವನ್ನು ಸ್ಫುರಣಗೊಳಿಸುವ ಇನ್ನೊಂದು ದೃಶ್ಯವಿದೆ. ಇಲ್ಲಿ ಅರಮನೆಯ ಸಭಾಂಗಣದಲ್ಲಿ ಗಾಯನದೊಂದಿಗೆ ವಾದ್ಯಗಳನ್ನು ನುಡಿಸುವವರು ಮಗ್ನರಾಗಿದ್ದರೆ ಜೊತೆಗೆ ಕೃತಿ ೩ ನೃತ್ಯವೂ ಸಾಗಿದೆ. ಅಂತಃಪುರದಲ್ಲಿ ಈ ಎಲ್ಲ ಸಂಗತಿಗಳನ್ನು ತನ್ನ ಸಖಿಯೊಂದಿಗೆ ಹಂಚಿಕೊಳ್ಳುತ್ತಿರುವ ರೂಪಕವೊಂದರ ಮೇಲೆ ಕಲಾವಿದ ಚಿತ್ರ ರಚಿಸಿದ್ದಾ
ನೆ. ಜಡತ್ವವನ್ನು ಹೊರಗಟ್ಟಿ ಮನೋಲ್ಲಾಸಭರಿತನಾದ ನಾಯಕನನ್ನು ಕೃತಿಸಂಯೋಜನೆಯ ಪ್ರಧಾನ ಭಾಗದಲ್ಲಿರಿಸಲಾಗಿದೆ.
* * * * *
೧೯೯೭ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಸುವರ್ಣವರ್ಷ ಸಂಭ್ರಮಾಚರಣೆಯ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯೊಳಗಿರುವ ದಿವಾನ್-ಎ-ಆಮ್ ಸಭಾಂಗಣದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಂಡಿತ್ ಭೀiಸೇನ್ ಜೋಶಿಯವರು ಗೌಡಮಲ್ಹಾರ್ ರಾಗದಲ್ಲಿ ’ಈ ಪರಿಯ ಸೊಬಗು’ ಗೀತೆಯನ್ನು ಪ್ರಸ್ತುತಪಡಿಸಿದರು. ಯಾರ ಕೋರಿಕೆಯೂ ಇಲ್ಲದೆ ಕನ್ನಡದ ಪುರಂದರದಾಸರ ರಚನೆ ಆಯ್ಕೆಯಾಗಲು ಕಾರಣ ಅಂದಿನ ಮೋಡಕವಿದ ವಾತಾವರಣದಿಂದ ಅವರು ಪ್ರೇರಿತರಾಗಿದ್ದರೆಂಬುದು. ಬಹುತೇಕ ಗೌಡಮಲ್ಹಾರ್ ರಾಗವು ಪಶ್ಚಿಮ ಭಾರತದುದ್ದಕ್ಕೂ ಅದರಲ್ಲೂ ಮುಂಬೈ ಭಾಗದ ಪ್ರದೇಶದಲ್ಲಿ ಹೆಚ್ಚಿನ ಒಲವು ಗಳಿಸಿದ್ದು ಇನ್ನೊಂದು ಕಾರಣವಿದ್ದಿರಲೂಬಹುದು.
ಚಲನಚಿತ್ರ ಗೀತೆಗಳಲ್ಲಿ ಗೌಡಮಲ್ಹಾರ್
೧೯೬೬ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ ’ಸಂಧ್ಯಾರಾಗ’ದಲ್ಲಿ ಪುರಂದರದಾಸರ ರಚನೆ ’ಈ ಪರಿಯ ಸೊಬಗು’ ಭೀಮಸೇನ್ ಜೋಶಿ ಹಾಡಿರುವ ಭಾಗ, ೧೯೩೮ರಲ್ಲಿ ತೆರೆಕಂಡ ’ಭಾಬಿ’ ಚಿತ್ರದಲ್ಲಿ ಅಭಿನಯಿಸಿ ಸ್ವತಃ ಹಾಡಿರುವ ರೇಣುಕಾದೇವಿ ಅವರ ’ಝೂಕಿ ಆಯೀ ರೇ ಬದರಿಯಾ ಸಾವನ್ ಕೀ’ ಗೀತೆ, ’ಆಶೀರ್ವಾದ್’ ಚಿತ್ರದಲ್ಲಿ ಲತಾಮಂಗೇಶ್ಕರ್ ಹಾಡಿರುವ ’ಝೀರ್ ಝೀರ್ ಬರಸೇ ಸಾವನಿ ಆಂಕ್ಹೀಯಾ’ ಮತ್ತು ೧೯೬೭ರಲ್ಲಿ ತೆರೆಕಂಡ ’ನೂರ್ಜಹಾನ್’ ಚಿತ್ರದಲ್ಲಿ ಸುಮನ್ ಕಲ್ಯಾಣ್ಪುರ್ ಹಾಡಿದ ಗೀತೆ ’ಶರಾಬೀ ಯೇ ಸಾವನ್ ಕಾ ಮೌಸಮ್.’
ಗೌಡಮಲ್ಹಾರ್ ಗೀತಗಾಯನವು ಬಹುತೇಕ ದರ್ಬಾರಿನ ಅಂಗಳಕ್ಕೆ ಬಂದನಂತರ ಸಾಮ್ರಾಟರ ಮೆಚ್ಚುಗೆ ಗಳಿಸಿದವು ಮಿಯಾ ಕೀ ಮಲ್ಹಾರ್ ಮತ್ತು ಕಾಫೀ ಥಾಟ್ನಲ್ಲಿನ ಮೇಘಮಲ್ಹಾರ್ ಗೀತೆಗಳು.
(ಮುಂದಿನ ಸಂಚಿಕೆಯಲ್ಲಿ ಅಮೂರ್ತ ರೂಪದ ’ರಾಗಿಣಿ ದೇಶಖ್ಯಾ’)