ಮಲ್ಹಾರ ಎಂದರೆ ಶುದ್ಧಿ. ಇದರರ್ಥ ಮನಸ್ಸನ್ನು ಕೆಟ್ಟ ಆಲೋಚನೆಗಳಿಂದ ಶುದ್ಧಗೊಳಿಸುವುದೆ ಆಗಿದೆ. ಅಂದರೆ ಪ್ರಕೃತಿಯಲ್ಲಿರುವ ಕೊಳೆಯೆಲ್ಲ ಮಳೆನೀರಿನಲ್ಲಿ ಕೊಚ್ಚಿ ಹರಿದುಹೋಗುವ ಹಾಗೆ. ಒಂದು ಉನ್ನತ ಅಲೋಚನೆಯತ್ತ ಮುಖ ಮಾಡುವಂತೆ ಮಾಡುವುದು ಮೇಘಮಲ್ಹಾರ ರಾಗದ ಉದ್ದೇಶವಾಗಿದೆ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೇಘರಾಗವು ವ?ಋತುವಿನ ರಾಗವಾಗಿದೆ. ಅದರಲ್ಲೂ ಮಿಯಾ ಮಲ್ಹಾರ್, ಗೌಡ್ ಮಲ್ಹಾರ್ ಮತ್ತು ಮೇಘ ಮಲ್ಹಾರ್ ಅತ್ಯಂತ ಜನಪ್ರಿಯವಾದವು. ಬಹಳ ಹಿಂದೆ ಗೌಡ್ ರಾಗದೊಂದಿಗೆ ರಾಮದಾಸೀ,ರೂಪ ಮಂಜರೀ, ನಟ ಮಲ್ಹಾರ್, ಧುಲಿಹಾ ಮಲ್ಹಾರ್ನಂತಹ ರಾಗಗಳು ಚಾಲ್ತಿಯಲ್ಲಿದ್ದವು. ಪ್ರಸಿದ್ಧ ಸಂಗೀತಕಾರ ತಾನ್ಸೇನ್ ಮೇಘರಾಗಗಳಲ್ಲಿ ಪ್ರಯೋಗ ನಡೆಸಿ ಅವಕ್ಕೆ ಆಧುನಿಕ ಲೇಪನ ನೀಡಿದನೆಂಬ ಪ್ರತೀತಿ ಇದೆ.
ಮೇಘರಾಗಕ್ಕೆ ಆರು ರಾಗಿಣಿಯರು: ಸೊರತ್, ಗೌಂಡ್ ಮಲ್ಹಾರಿ, ಆಸಾ, ಗುಂಗುನಿ, ಸೂಹೂ. ಪುತ್ರರಾಗಗಳು; ಬಿರಧಾರ್, ಗಜಧರ್, ಕೇದಾರ, ಜಬ್ಲಿಧರ್, ನಟ್, ಜಲಧಾರ್, ಶಂಕರ್ ಮತ್ತು ಶ್ಯಾಮ್.
ಮಳೆಗಾಗಿ ಕಾಣದ ನಾಮರೂಪದ ಇಂದ್ರನನ್ನು ಪೂಜಿಸುವ ಬದಲು ಮೇಘಗಳ ತಡೆಯೊಡ್ಡಿ ಮಳೆ ಸುರಿಸುವ ಕಣ್ಣೆದುರಿನ ಸಾಕಾರರೂಪದ ಗೋವರ್ಧನ ಪರ್ವತವನ್ನು ಪೂಜಿಸಲು ಸೂಚಿಸಿದ ಕೃಷ್ಣನ ಮಾತುಗಳಲ್ಲಿ ವಿಶ್ವಾವಿಟ್ಟು ಗೋಪಾಲಕರು ಹಾಗೆ ನಡೆದರು. ಕುಪಿತನಾದ ಇಂದ್ರನ ಆಜ್ಞೆಯ ಮೇರೆಗೆ ಭಯಾನಕ ಮಳೆ ಸುರಿಸುತ್ತಲೇ ಬಂದ ಸಂಬರ್ಥಕನಿಂದ ಇಡೀ ಜೀವಸಂಕುಲದ ರಕ್ಷಣೆಗೆ ಶ್ರೀಕೃಷ್ಣ ಗೋವರ್ಧನವನ್ನೇ ಎತ್ತಿಹಿಡಿಯಬೇಕಾಯಿತು. ಪರಿಪೂರ್ಣರಾಗಿ ಎಲ್ಲವೂ `ನೀನೆ’ ಎಂಬ ಸಮರ್ಪಣೆಯ ಭಾವದೆದುರು ಇಂದ್ರ ಇಲ್ಲಿ ಸೋಲಬೇಕಾಯಿತು. ಇಂದ್ರನ ಗರ್ವ ಮಳೆನೀರಿಗೆ ಕೊಚ್ಚಿಹೋಗಿ ಪರಿಶುದ್ಧಭಾವದಿಂದ ಕೃಷ್ಣನ ಎದುರಿಗೆ ನಿಲ್ಲಬೇಕಾಯಿತು.
ಮಲ್ಹಾರ ಎಂದರೆ ಶುದ್ಧಿ. ಇದರರ್ಥ ಮನಸ್ಸನ್ನು ಕೆಟ್ಟ ಆಲೋಚನೆಗಳಿಂದ ಶುದ್ಧಗೊಳಿಸುವುದೇ ಆಗಿದೆ. ಅಂದರೆ ಪ್ರಕೃತಿಯಲ್ಲಿರುವ ಕೊಳೆಯೆಲ್ಲ ಮಳೆನೀರಿನಲ್ಲಿ ಕೊಚ್ಚಿ ಹರಿದುಹೋಗುವ ಹಾಗೆ. ಒಂದು ಉನ್ನತ ಆಲೋಚನೆಯತ್ತ ಮುಖ ಮಾಡುವಂತೆ ಮಾಡುವುದು ಮೇಘಮಲ್ಹಾರ ರಾಗದ ಉದ್ದೇಶವಾಗಿದೆ.
ಮೇಘರಾಗ ಕುರಿತಂತೆ ರಾಗಮಾಲಾ ಚಿತ್ರಸರಣಿಯಲ್ಲಿ ಹೆಚ್ಚು ಚಿತ್ರಗಳು ಶೃಂಗಾರ ರಸದಲ್ಲಿವೆ, ಶ್ರೀಕೃಷ್ಣ ಮತ್ತು ರಾಧೆಯ ವಿಷಯವನ್ನೇ ಕೇಂದ್ರವಾಗಿರಿಸಿ ಕಲಾವಿದರು ಚಿತ್ರ ಬಿಡಿಸಿದ್ದಾರೆ. ಸ್ವರಗಳ ಸೌಂದರ್ಯ ಮತ್ತು ಲಯಕಾರಿಕೆಯೇ ಇಲ್ಲಿ ಪ್ರಾಧಾನ್ಯ ಪಡೆದಿವೆ. ಹಾವ-ಭಾವ, ಕಾಂತಿ, ಮಾಧುರ್ಯ, ವಿರಹಾಯುಕ್ತಿ, ಔದಾರ್ಯ, ಧೈರ್ಯ – ಮೊದಲಾದ ಅಲಂಕಾರಗಳು ಮೇಘರಾಗದಲ್ಲಿ ಗೋಚರವಾಗುವಂತೆ ಲಾಲಿತ್ಯ, ಕುತೂಹಲ, ಮಂದಸ್ಮಿತ ಹಾಗೂ ಚಕಿತ ಅಲಂಕಾರಗಳೂ ರಾಗಮಾಲಾ ಚಿತ್ರಗಳಲ್ಲಿ ಗೋಚರವಾಗುತ್ತವೆ. ಶ್ರೀಕೃಷ್ಣನ ಬಾಲಲೀಲೆ ಮತ್ತು ರಾಸಲೀಲೆ ಈ ಎರಡನ್ನೂ ಬ್ರಜ್ ಪ್ರದೇಶದ ಜನರು ನೃತ್ಯ, ಅಭಿನಯದೊಂದಿಗೆ ಹಾಡುವುದನ್ನು ಚಿತ್ರಿಸುವುದು ಪ್ರಧಾನಶೈಲಿಯಾಗಿತ್ತು. ಪ್ರಾಚೀನಕಾಲದಲ್ಲಿ ಈ ಶೈಲಿಯನ್ನು ’ಛಲಿಕಾ’ ಎಂತಲೂ ಕರೆಯುವ ವಾಡಿಕೆಯಿತ್ತು. ಕ್ರಮೇಣ ಸ್ವರಗಳ ಮಾಧುರ್ಯವಾದ ಗಾಯನವು ಕೇಳುಗನ ಭಾವಪರವಶಗೊಳಿಸುವ ವಿಧಾನವೇ – ರಾಜಮನೆತನಗಳ ಹೆಚ್ಚು ಪ್ರೋತ್ಸಾಹದ ಕಾರಣದಿಂದಾಗಿಯೋ ಏನೋ – ಗಾಯನಪ್ರಸ್ತುತಿಯೇ ಹೆಚ್ಚು ಪ್ರಭಾವಶಾಲಿಯಾಗಿ ಬೆಳೆಯಿತು. ಚಿತ್ರಕಲಾವಿದರಲ್ಲಿನ ಈ ಬಗೆಯ ಭಾವಪರವಶತೆಯು ಅದರಲ್ಲಿ ಅಮೂರ್ತರೂಪದಲ್ಲಿ ಅಭಿವ್ಯಕ್ತಗೊಂಡಿತು ಮತ್ತು ಅಭಿವ್ಯಕ್ತಿಗೆ ಗೀತಗಾಯನದೊಂದಿಗೆ ನೃತ್ಯವನ್ನೂ ಪ್ರಧಾನವಾಗಿ ಇರಿಸಲಾಯಿತು.
ಚಿತ್ರ ೧ರಲ್ಲಿ ಈ ಬಗೆಯ ದೃಶ್ಯ ಕಾಣಬಹುದು. ಇಲ್ಲಿ ಮಳೆಯ ಆರಾಧನೆ ಸಾಗಿದೆ. ಸಡಗರ, ಸಂಗೀತ, ನೃತ್ಯ ಇಲ್ಲಿ ಮೇಳೈಸಿವೆ, ನಾಯಕಿ ಹಾಗು ಸಖಿಯರ ನೃತ್ಯಭಂಗಿಯಲ್ಲಿ ತಾಳ-ವಾದ್ಯ ಪರಿಕರಗಳೊಂದಿಗೆ ಚಿತ್ರ ಸಂಯೋಜನೆಗೊಂಡಿದೆ. ಪ್ರಧಾನಪಾತ್ರದಲ್ಲಿರುವ ನಾಯಕಿ ಇಲ್ಲಿ ಚಿತ್ರದ ಕೇಂದ್ರಸ್ಥಳದಲ್ಲಿ ತನ್ನ ದಟ್ಟ ಕೇಸರಿ ಬಣ್ಣದ ವಸ್ತ್ರ ಹಾಗೂ ಹಾವಭಾವಗಳಿಂದ ನೋಡುಗರ ಗಮನ ಸೆಳೆದಿದ್ದಾಳೆ. ಆಗಸದಲ್ಲಿ ಗಂಧರ್ವರೂ ಪುಷ್ಪವೃಷ್ಟಿ ಸುರಿಸಿ ಅಲ್ಲಿನ ಆನಂದವನ್ನು ಇಮ್ಮಡಿಗೊಳಿಸುತ್ತಿದ್ದಾರೆ. ಇಲ್ಲಿ ನೆಲಮುಗಿಲುಗಳು ವರ್ಷಧಾರೆಯಿಂದ ಏಕೀಕೃತವಾಗಿವೆ. ದಟ್ಟಮೋಡಗಳು ದೂರದಲ್ಲಿ ಇನ್ನೂ ಮಳೆ ಸುರಿಸುತ್ತಿರುವುದು ಮಳೆಗಾಲ ಮುಗಿದಿಲ್ಲ ಎಂಬುದನ್ನು ಸಂಕೇತಿಸುತ್ತಿದೆ, ಸಿಡಿಲು ಗುಡುಗುಗಳ ಹಿನ್ನೆಲೆಯಲ್ಲಿ ಸರ್ಪಗಳು ಸರಿದಾಡುತ್ತಿವೆ.
ಇನ್ನು ಚಿತ್ರದ ಉಳಿದರ್ಧಭಾಗದಲ್ಲಿ ಮಳೆದೇವತೆಯಾದ ಇಂದ್ರನು ಕೈಯಲ್ಲಿ ವಜ್ರಾಯುಧ ಹಿಡಿದು ನಿಂತಿದ್ದಾನೆ, ಆತನ ಮೈಬಣ್ಣ ಶ್ಯಾಮಲವರ್ಣದ್ದಾಗಿದ್ದು ಹಿನ್ನೆಲೆಯ ದಟ್ಟನೀಲಿವರ್ಣದಲ್ಲಿ ಮುಖಭಾವ ಕಲೆಸಿಹೋಗಿಬಿಡಬಹುದಾದ ಕಾರಣ ಅಲ್ಲಿ ಅರ್ಧಭಾಗಕ್ಕೆ ಮಾತ್ರ ಬಿಳಿ ಬಣ್ಣದಲ್ಲಿ ಪ್ರಭಾವಳಿಯನ್ನು ಕಲಾವಿದ ಚಿತ್ರಿಸಿದ್ದಾನೆ. ಆದರ-ಗೌರವದೊಂದಿಗೆ ಆತನನ್ನು ಬರಮಾಡಿಕೊಳ್ಳಲಾಗುತ್ತಿದೆ. ಇಲ್ಲಿ ಇಂದ್ರನು ತನ್ನ ಗತ್ತು, ಪೌರುಷ ಹಾಗೂ ಶ್ರೇಷ್ಠತೆಯನ್ನು ತಾನೇ ಸಾರಿಕೊಳ್ಳುತ್ತಿರುವಂತೆ ಆತನ ನಿಲವು, ಹಾವಭಾವ ಮತ್ತು ಗಾಢ ಬಣ್ಣಗಳಿಂದ ಕಲಾವಿದ ನಿರೂಪಿಸಿದ್ದಾನೆ. ಇನ್ನು ಸುತ್ತಲಿನ ವಾತಾವರಣ ನೋಡಿದರೆ ದಟ್ಟ ಕರಿ ಮೋಡಗಳು ಅಲ್ಲಿ ಮಳೆ ಸುರಿಸಿ ಹೋಗಿರಬಹುದಾದ ಸಂಕೇತವಿದೆ. ದೂರದಲ್ಲಿನ ಮೋಡಗಳು ಇನ್ನೂ ಮಳೆ ಸುರಿಸುತ್ತಿವೆ. ಗೀತಗಾಯನದಲ್ಲಿ ವ್ಯಕ್ತವಾಗುವ ರೂಪಕ ದೃಶ್ಯವನ್ನೇ ಕಲಾವಿದ ಬಿಡಿಸಿಟ್ಟಂತೆ ಕಾಣುತ್ತದೆ.
* * * * * *
ಈ ಮೇಲಿನ ಚಿತ್ರಗಳು ಮೇಘಮಲ್ಹಾರ ಕುರಿತಂತೆ ವಿಭಿನ್ನ ಪ್ರದೇಶಗಳಲ್ಲಿ ರಚನೆಗೊಂಡ ಚಿತ್ರಣಗಳು. ಕಾಲ, ವಿಷಯಗಳನ್ನು ಅಭಿವ್ಯಕ್ತಗೊಳಿಸಿರುವುದು ಒಂದೇ ಬಗೆಯಾದರೂ ಪ್ರದೇಶದಿಂದ ಪ್ರದೇಶಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಸಂಗೀತ ಕುರಿತ ಆಸ್ವಾದ, ಗ್ರಹಣ ಮತ್ತು ಅನುಭೂತಿಗಳು ವ್ಯತ್ಯಾಸವಾಗುವಂತೆ ಕಲಾಕೃತಿಯಲ್ಲಿನ ಅಭಿವ್ಯಕ್ತ ಆಶಯಗಳೂ ನಿರೂಪಣೆಗಳೂ ಬದಲಾಗುತ್ತವೆ.
ಪಹಾಡಿ ಶೈಲಿಯ ಕೃತಿಯಲ್ಲಿ ಹಿಮಾಲಯದ ಪರಿಸರದ ಹಿನ್ನೆಲೆಯ ಕಲಾವಿದ ಕೃಷ್ಣನನ್ನು ಶೈವಪಂಥದಲ್ಲಿರುವಂತೆ ಚಿತ್ರಿಸಿದರೆ ಮಾಳವಾ ಪ್ರದೇಶದ ಕಲಾವಿದ ನೃತ್ಯದೊಂದಿಗೆ ವಾದನಗಳನ್ನೂ ಚಿತ್ರಿಸಿದ್ದಾನೆ. ರಾಜಸ್ಥಾನ ಶೈಲಿಗೆ ಸೇರಿದ ಚಿತ್ರದಲ್ಲಿ ಶ್ರೀಮಂತಿಕೆಯ ಸೊಬಗು ವ್ಯಕ್ತವಾಗುತ್ತದೆ. ಇಲ್ಲಿನ ಎಲ್ಲ ಕೃತಿಗಳಲ್ಲೂ ಬಾನಾಡಿ ಹಕ್ಕಿ ಸಂಯೋಜನೆಗೊಂಡಿರುವ ರೀತಿ ಏಕಪ್ರಕಾರವಾಗಿರುವುದೇ ಸೋಜಿಗ ಎಂದೆನಿಸುತ್ತದೆ.
ಮಿಯಾ ಮಲ್ಹಾರ್ ರಾಗದ ಇನ್ನೊಂದು ಕೃತಿಯಲ್ಲಿ ವರ್ಷಕಾಲದ ಮೋಡವೆಲ್ಲ ಧರೆಗೆ ಸುರಿಯುತ್ತಿದೆ, ಭಾರೀ ಮಿಂಚು-ಗುಡುಗು ಸದ್ದು, ಭಯಂಕರವಾಗಿ ಗಾಳಿ ಬೀಸಿ ತನ್ನ ಇನಿಯನನ್ನು ಅರಸಿ ಬಂದ ಸುಂದರ ಯುವತಿಯನ್ನು ಭಯಭೀತಳನ್ನಾಗಿ ಮಾಡಿದೆ… ದಾರಿಯಲ್ಲಿ ಮರದ ಪೊಟರೆಯಿಂದ ಹರಿದಾಡುತ್ತಿರುವ ಸರ್ಪಗಳು ಆಕೆಯ ಭಯವನ್ನು ಇಮ್ಮಡಿಗೊಳಿಸಿವೆ, ಇನಿಯನನ್ನು ಸಂಧಿಸುವ ತವಕ, ಭಯ, ಅವಸರ ಎಲ್ಲವೂ ಸೇರಿ ಏನು ಮಾಡಬೇಕು ಎಂಬುದು ಆಕೆಗೆ ತಿಳಿಯದಾಗಿದೆ. ನಡೆಯುವ ಅವಸರದಲ್ಲಿ ಕಳಚಿಕೊಂಡಿರುವ ತನ್ನ ಕಾಲಿನ ಗೆಜ್ಜೆಯನ್ನೇ ಸಖಿ ಎಂದು ತಿಳಿದು, ಶೀಘ್ರದಲ್ಲಿ ತನ್ನ ಇನಿಯನನ್ನು ಸಂಧಿಸುವ ತವಕವನ್ನು ಗೆಜ್ಜೆಯೊಂದಿಗೆ ಹಂಚಿಕೊಳ್ಳುತ್ತಿದ್ದಾಳೆ.
ಬರಸ್ನಾ ಲಗೀ ಲಗೀ ಬಾದರಿಯೋ ಸಾವನ್ ಕೀ
ಅತಿ ಕರೀ ಅತಿ ಭಾರೀ ಭಯಾನಕ್ ಪಾವನ್ ಲಗೀ ಮಾ
ಚಮಕ್ ಚಮಕ್ ಬಿಜುರಿಯಾ ಚಮಕೇ
ಸಿಯರಾ ಪವನ್ ಬಾಹೇ
ಅಬ್ ತೋ ಪ್ಯಾರೀ ಚೌಂಕ್ಪಡೀ ಗರಜನ್ ಲಗೀ….
ಈ ಗೀತೆಯನ್ನು ನಿರೂಪಣೆಗೊಳಿಸಿರುವಂತೆ ಕಲಾವಿದ ಇಲ್ಲಿ ಚಿತ್ರಿಸಿದ್ದಾನೆ. ಈ ಹಿಂದಿನ ಕೃತಿಗಳಂತೆ ಸಂಗೀತದ ಆಹ್ಲಾದವನ್ನೂ, ಆ ಕ್ಷಣದಲ್ಲಿ ಉಂಟಾದ ಭಾವಗಳನ್ನೂ ರೇಖೆ, ವರ್ಣಸಂಕುಲದ ಮೂಲಕ ಅಭಿವ್ಯಕ್ತಪಡಿಸಿದಂತೆ ಇಲ್ಲಿ ಕಲಾವಿದ ಕಾಣುವುದಿಲ್ಲ. ಸಂಕೇತಗಳು ಮತ್ತು ಚಿಹ್ನೆಗಳು ಗೀತೆಯಲ್ಲಿನ ಉಲ್ಲೇಖಗಳನ್ನು ಯಥಾವತ್ತಾಗಿ ಕಥನರೀತಿಯಲ್ಲಿ ಇಲ್ಲಿ ನೋಡಬಹುದು. ಹಿಮಾಚಲಪ್ರದೇಶದ ಕಣಿವೆಪ್ರದೇಶದ ಈ ಕಲಾಕೃತಿಯಲ್ಲಿ ರಾಗದ ಒಂದು ಸುಂದರ ಅನುಭವವನ್ನು ಕಟ್ಟಿಕೊಡಲು ಯತ್ನಿಸಿರುವಂತೆ, ಕಲಾವಿದ ಮುಖ್ಯವಾಗಿ ಇಲ್ಲಿ ಅಂಥ ರೌದ್ರ ಸನ್ನಿವೇಶವನ್ನು ಹೆಚ್ಚಾಗಿ ರಮಣೀಯವಾದ ಪರಿಸರ ಹಾಗೂ ಸ್ತ್ರೀ ಆಕಾರದಲ್ಲಿ ಆಲಂಕಾರಿಕ ವಿವರಗಳೊಡನೆ ಚಿತ್ರಿಸಿರುವುದನ್ನು ಗಮನಿಸಬಹುದು.
ಇನ್ನೊಂದು ಕೃತಿಯು ಗೌಡಮಲ್ಹಾರ್ ರಾಗದ್ದಾಗಿದ್ದು ಈ ರಾಗದ ಕುರಿತು ಮುಂದಿನ ಸಂಚಿಕೆಯಲ್ಲಿ ನೋಡೊಣ.
ಚಲನಚಿತ್ರ ಗೀತೆಗಳಲ್ಲಿ ಮೇಘ ಮಲ್ಹಾರ್ ರಾಗ
ಹಿಂದೀ ಚಿತ್ರ ’ಚಶ್ಮೇ ಬದ್ದೂರ್’ನಲ್ಲಿ ಕೆ.ಜೆ. ಜೇಸುದಾಸ್ ಮತ್ತು ಹೇಮಂತಿ ಶುಕ್ಲಾ ಹಾಡಿರುವ ತೀನ್ ತಾಲ್ನಲ್ಲಿರುವ ’ಕಾಹಾಂ ಸೇ ಆಯೇ ಬದರಾ’ ಗೀತೆ ಮೇಘಮಲ್ಹಾರ್ನಲ್ಲಿದೆ. ೧೯೪೨ರಲ್ಲಿ ತೆರೆಕಂಡ ’ತಾನ್ಸೇನ್’ ಚಿತ್ರದಲ್ಲಿ ಮೇಘಮಲ್ಹಾರದಲ್ಲಿ ಖುರ್ಷಿದಾ ಬೇಗಂ ಹಾಡಿರುವ ’ಬರಸೋರೇ ಓ ಮೊರೇ’ ಹಾಗೆಯೆ ಕನ್ನಡದಲ್ಲಿ ಎಸ್. ಜಾನಕಿ ಹಾಡಿರುವ ’ಸಿಪಾಯಿ’ ಚಿತ್ರದ ’ಮೆಘ ರಾಜಾ’ ಗೀತೆಗಳೂ ಮೇಘಮಲ್ಹಾರದಲ್ಲಿವೆ.