ಅಡುಗೆಮನೆಯ ಪ್ರಯೋಗಶಾಲೆಯಲ್ಲಿ ಮಜ್ಜಿಗೆದೋಸೆ ಇನ್ನೊಂದು ರೂಪಾಂತರ ಪಡೆಯಿತು.
ಬೆಳಗಾಗುತ್ತಿದ್ದಂತೆ ಮೊಸರನ್ನು ಮಜ್ಜಿಗೆಯಾಗಿಸುವ ಕಾಯಕ ಆಗಿರಬೇಕಲ್ಲ? ಒಂದು ಕಪ್ ಮಜ್ಜಿಗೆಯಲ್ಲಿ ೩ ಚಮಚ ಮೆಂತ್ಯ ನೆನೆಹಾಕಿ ಇಟ್ಟುಕೊಳ್ಳಿ. ಮೆಂತ್ಯ ನೆನೆದಷ್ಟೂ ಉತ್ತಮ.
ಮಧ್ಯಾಹ್ನ ಊಟವಾಯಿತೇ, ೨ ಕಪ್ ಬೆಳ್ತಿಗೆ ಅಕ್ಕಿಯನ್ನು ನೀರು ಹಾಕಿ ನೆನೆಯಲು ಇಡಿ. ಮುಸ್ಸಂಜೆಯಾಯಿತೇ, ನೆನೆದ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ನೆನೆದ ಮೆಂತ್ಯವನ್ನು ಮಜ್ಜಿಗೆ ಸಹಿತವಾಗಿ ನುಣ್ಣಗೆ ರುಬ್ಬಿಕೊಳ್ಳಿ, ಬೇಕಿದ್ದರೆ ಸ್ವಲ್ಪ ಅಕ್ಕಿಯನ್ನೂ ಸೇರಿಸಿ ರುಬ್ಬಿ. ಮಿಕ್ಸಿಯಲ್ಲಿ ರುಬ್ಬಲು ಒಂದೇ ಬಾರಿಗೆ ಸಾಧ್ಯವಾಗುವುದಿಲ್ಲವೇ; ಉಳಿದ ಅಕ್ಕಿಯನ್ನು ಇನ್ನೊಮ್ಮೆ ರುಬ್ಬಿಕೊಳ್ಳಿ. ಈಗ ಒಂದು ಕಪ್ ನೆನೆಸಿದ ಅವಲಕ್ಕಿಯನ್ನೂ ಸೇರಿಸಿ ನುಣ್ಣಗಾಗಿಸಿ. ರುಬ್ಬಿದ ಹಿಟ್ಟಿಗೆ ಉಪ್ಪು ಸೇರಿಸಿ ದೊಡ್ಡ ತಪ್ಪಲೆಯಲ್ಲಿ ಮುಚ್ಚಿ ೮ ಘಂಟೆಗಳ ಕಾಲ ಇರಿಸಿ.
ಮಾರನೇ ದಿನ ಹಿಟ್ಟು ಹುಳಿ ಬಂದಿರುತ್ತದೆ. ಅದಕ್ಕೆ ಒಂದು ಕಪ್ ಹಾಲು ಸೇರಿಸಿ, ಸೌಟಿನಲ್ಲಿ ಕಲಸಿ ದೋಸೆ ಹೊಯ್ಯಿರಿ. ಕಾಯಿ ಚಟ್ನಿಯೊಂದಿಗೆ ಸವಿಯಿರಿ.
ಉದ್ದು ಬೇಕಿದ್ದವರು ಸೇರಿಸಿಕೊಳ್ಳಬಹುದು. ಹೆಚ್ಚೇನೂ ಬೇಡ. ಒಂದು ಹಿಡಿಯಷ್ಟು ಸಾಕು. ಅದನ್ನು ಮೆಂತ್ಯದ ಜತೆಗೆ ರುಬ್ಬಿಕೊಳ್ಳಬೇಕು. ಧಾನ್ಯಗಳು ನುಣ್ಣಗಾದ ನಂತರವೇ ಅಕ್ಕಿಯನ್ನು ರುಬ್ಬುವುದು ಸರಿಯಾದ ವಿಧಾನ. ಎಲ್ಲವನ್ನೂ ಒಂದೇ ತಪ್ಪಲೆಯಲ್ಲಿ ನೆನೆಹಾಕಿಟ್ಟು ಒಂದೇ ಬಾರಿಗೆ ರುಬ್ಬುವ ಯಂತ್ರದೊಳಗೆ ತುಂಬಿಸಬಾರದು.
*****
“ನಾಳೆ ತಿಂಡಿಗೇನು ಮಾಡ್ತೀಯ?”
“ಉದ್ದಿನ ದೋಸೆ ಆದೀತಲ್ಲ…”
ಇವತ್ತು ಉದ್ದು, ಮೆಂತೆ ಹಾಕಿದ್ದು ತಿಂದಾಯ್ತಲ್ಲ, ನಾಳೆಯೂ ಉದ್ದು ಹಾಕಿದ್ದು ಬೇಡ ಗೌರತ್ತೆ ಅಂದಿದ್ದು.
ಮತ್ತೇನು ಮಾಡಲಿ?
ನೋಡು ಇದು ಸುಲಭದ್ದು. ಉದ್ದು, ಮೆಂತೆ ಏನೂ ಬೇಡ, ಬರೀ ಅಕ್ಕಿ ಸಾಕು, ಮಜ್ಜಿಗೆ ಹೇಗೂ ಇದೆಯಲ್ಲ….
ಹ್ಞೂಂ ಇದೆ.
ಈಗ ಮಾಡಿದ ಬೆಳ್ತಿಗೆ ಅನ್ನ ಇಲ್ವಾ, ಕುಸುಬಲಕ್ಕಿ ಅನ್ನವೂ ಆದೀತು, ಅದನ್ನು ಎರಡು ಹಿಡಿಯಷ್ಟು ತೆಗೆದಿಡು, ಅಕ್ಕಿ ನೆನೆಹಾಕಿಡು, ೨ ಲೋಟ ಅಕ್ಕಿ ಸಾಕು.
ಗೌರತ್ತೆ ಮುಂದುವರಿಸಿದರು, ಅಕ್ಕಿ, ಮಜ್ಜಿಗೆ ಸೇರಿಸಿ ರುಬ್ಬಿಡುವುದು, ರುಬ್ಬಿದ ಹಿಟ್ಟು ತೆಗೆಯುವ ಮೊದಲು ಅದಕ್ಕೆ ಅನ್ನ ಹಾಕಿ ಎರಡು ಸುತ್ತು ತಿರುಗಿಸಿ ತೆಗೆದು, ಉಪ್ಪು ಹಾಕಿಟ್ಟಿರು. ಅಗಲವಾದ ತಪ್ಪಲೆ ಆಗ್ಬೇಕು, ಇಲ್ಲಾಂದ್ರೆ ಹುಳಿ ಬಂದ ಹಿಟ್ಟು ಹೊರಗೆ ಚೆಲ್ಲೀತು.
ನಾಳೆ ಬೆಳಗ್ಗೆ ದೋಸೆ ಹುಯ್ಯುವ ಮೊದಲು ಒಂದು ಲೋಟ ಹಾಲು ಸೇರಿಸಿ ಸೌಟು ಹಾಕಿ ತಿರುಗಿಸಿ ದೋಸೆ ಎರೆದರಾಯಿತು; ದೋಸೆಯನ್ನು ತಿರುವಿಹಾಕುವುದೂ ಬೇಡ.
….ಸೌಟಿನಲ್ಲಿ ಹರಡುವುದೂ ಬೇಕಾಗುವುದಿಲ್ಲ…. ಅದು ಹಾಗೇ ದಪ್ಪ ಬ್ರೆಡ್ ಥರ ಆಗುತ್ತೆ ನೋಡು…..
* * *
ಗೌರತ್ತೆ ಹೇಳಿದಂತಹ ಮಜ್ಜಿಗೆದೋಸೆ ತಿಂದಾಯ್ತಲ್ಲ, ಅಡುಗೆಮನೆಯ ಪ್ರಯೋಗಶಾಲೆಯಲ್ಲಿ ಈ ಮಜ್ಜಿಗೆದೋಸೆ ಇನ್ನೊಂದು ರೂಪಾಂತರ ಪಡೆಯಿತು. ಅದೇನಾಯ್ತೂಂದ್ರೆ ನಾವಿಬ್ಬರೇ ಮನೆಯಲ್ಲಿದ್ದುದರಿಂದ ಇಬ್ಬರಿಗೆ ಬೇಕಾದಷ್ಟೇ ಅಕ್ಕಿ ನೆನೆಹಾಕಿಟ್ಟು ಮಲಗುವ ಮುನ್ನ ಮಜ್ಜಿಗೆಯೊಂದಿಗೆ ರುಬ್ಬಿ ಇಡೋಣ ಅಂತ ಇರುವಾಗಲೇ ಮಗಳು ಬಂದಳು.
ಇನ್ನೀಗ ದೋಸೆ ಹಿಟ್ಟು ಎರಡು ಸೌಟು ಜಾಸ್ತಿಯಾಗಬೇಕಿದೆ, ಏನು ಮಾಡೋಣ? ನೆರವಿಗೆ ಬಂದಿದ್ದು ರಾಗಿಹಿಟ್ಟು. ಜತೆಗೆ ಬಳಸಿದ ವಸ್ತುಗಳ ಅಳತೆ ಹೀಗಿದೆ:
೨ ಕಪ್ ಬೆಳ್ತಿಗೆ ಅಕ್ಕಿ
೨ ಸೌಟು ಬೆಳ್ತಿಗೆ ಅನ್ನ
೧ ಕಪ್ ರಾಗಿ ಹುಡಿ
೧ ಕಪ್ ಮೊಸರು ಅಥವಾ ದಪ್ಪ ಮಜ್ಜಿಗೆ
೧ ಕಪ್ ಹಾಲು
ರುಚಿಗೆ ಉಪ್ಪು.
ಅಂದ್ಕೊಂಡೇ ಇರಲಿಲ್ಲ ಕಣ್ರೀ, ಇಷ್ಟು ಚೆನ್ನಾಗಿ ದೋಸೆ ಬರುತ್ತೇಂತ…. ಮಗಳ ಶಿಫಾರಸ್ಸೂ ಸಿಕ್ತು.
ಟಿವಿಯಲ್ಲಿ ಅಡುಗೆ ಕಾರ್ಯಕ್ರಮಗಳನ್ನು ನೋಡ್ತಾ ಇದ್ದಾಗ ಕಲಿತ ತಿಂಡಿ ಇದು. ಚಪಾತಿ, ಪೂರಿ ಮಾತ್ರ ಲಟ್ಟಿಸಿ ಗೊತ್ತಿದ್ದ ನನಗೆ ‘ನಾನ್’ ಎಂಬ ಹೊಸರುಚಿ ಮಾಡಬೇಕೆಂಬ ಉಮೇದು ಹುಟ್ಟಿತು. ಮಗಳಿಗೆ ಮೈದಾ ಆಗದು, ದೋಸೆಗೆ ತುಸು ಸೇರಿಸಿದ್ರೂ ಗೊತ್ತಾಗಿ ಬಿಡುತ್ತದೆ ಅವಳಿಗೆ. ಮೈದಾ ಯಾಕೆ ಹಾಕಿದ್ದು? ಎಂದು ಸಿಡಿಮಿಡಿ ಮಾಡುವವಳು, ಇದನ್ನು ತಿಂದಾಳೇ….?
ಹೇಳದಿದ್ದರಾಯಿತು, ಗೊತ್ತಾದ ಮೇಲಲ್ವ….
ಸರಿ, ಯೀಸ್ಟ್ ಬೇಕಾಗಿತ್ತು. ಅದನ್ನೂ ತರಿಸಿ ೭-೮ ಯೀಸ್ಟ್ ಹರಳುಗಳನ್ನು ಹಾಲಿನಲ್ಲಿ ಸಕ್ಕರೆಯೊಂದಿಗೆ ನೆನೆಹಾಕಿಟ್ಟು, ೨ ಕಪ್ ಮೈದಾ ಹಾಕಿ ಪೂರಿಹಿಟ್ಟಿನಂತೆ ಕಲಸಿ, ಮಾರನೇ ದಿನ ಲಟ್ಟಿಸಿ ಚಪಾತಿ ಥರ ಬೇಯಿಸಿ ತಿಂದಾಯಿತು. ಇದನ್ನೇ ಎಣ್ಣೆಯಲ್ಲಿ ಕರಿದರೆ ಬಟೂರಾ ಎಂಬ ಇನ್ನೊಂದು ತಿಂಡಿಯೂ ಲಭ್ಯ. ನಾನು ಎಣ್ಣೆಯಲ್ಲಿ ಕರಿದಿಲ್ಲ.
ಯೀಸ್ಟನ್ನು ನಿಯಮಿತವಾಗಿ ತಿಂಡಿತಿನಿಸುಗಳಲ್ಲಿ ಬಳಸಬೇಕು, ಉಪಯೋಗಿಸದೇ ಇದ್ದರೆ ಬೂಸ್ಟು ಬಂದು ಹಾಳಾಗುತ್ತದೆ. ಸುಮ್ಮಸುಮ್ಮನೇ ತಿಂಡಿಗಳಿಗೆ ಯಾಕಾದರೂ ಯೀಸ್ಟ್ ಹಾಕೋಣ?
ಯೀಸ್ಟ್ ಹಾಕದೇ ನಾನ್ ಮಾಡಲು ಸಾಧ್ಯವಿಲ್ಲವೇ?
೧ ಕಪ್ ಮೊಸರು ಅಥವಾ ದಪ್ಪ ಮಜ್ಜಿಗೆ, ಹುಳಿ ಇದ್ದರೆ ಅರ್ಧ ಕಪ್ ಹಾಲು ಸೇರಿಸಿ; ರುಚಿಗೆ ಸಕ್ಕರೆ ಹಾಗೂ ಉಪ್ಪು. ಲಿಂಬೆ ಗಾತ್ರದ ಬೆಣ್ಣೆ, ತುಪ್ಪವೂ ಆದೀತು, ಯಾವುದೂ ಇಲ್ಲವೇ, ಅಡುಗೆಗೆ ಬಳಸುವ ಎಣ್ಣೆಯನ್ನೇ ಅರ್ಧ ಸೌಟು ಸೇರಿಸಿಕೊಳ್ಳಿ. ೩ ಕಪ್ ಮೈದಾದೊಂದಿಗೆ ಇವನ್ನೆಲ್ಲ ಸೇರಿಸಿ ಉಂಡೆಕಟ್ಟಿ ಮುಚ್ಚಿಟ್ಟುಕೊಳ್ಳಿ.
ರಾತ್ರಿ ಕಲಸಿದ್ದೀರಾ, ಮುಂಜಾನೆಗೊಂದು ತಿಂಡಿ ಮಾಡಿಕೊಳ್ಳಬಹುದು. ಬೆಳಗ್ಗೆ ಹಿಟ್ಟು ಕಲಸಿದ್ದೀರಾ, ಸಂಜೆಗೊಂದು ತಿನಿಸು ಮಾಡಲು ಬಂದೀತು. ಇದನ್ನು ಬೇಳೆಕಾಳುಗಳ ಕೂಟು ಅಥವಾ ರಸಂ ಜೊತೆ ಸವಿಯಿರಿ. ಗಟ್ಟಿ ಮೊಸರು, ಸಕ್ಕರೆ ಇದ್ದರೆ ಇನ್ನೂ ಚೆನ್ನ.
ಈಗ ಮಜ್ಜಿಗೆಯಿಂದ ಇಡ್ಲಿ ಮಾಡುವುದು ಹೇಗೆ ಎಂದು ನೋಡೋಣ.
೨ ಕಪ್ ಸಜ್ಜಿಗೆ, ೧ ಕಪ್ ದಪ್ಪ ಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ನೆಲಗಡಲೆ, ಗೋಡಂಬಿ, ದ್ರಾಕ್ಷಿ, ಒಣಮೆಣಸು,
ಕರಿಬೇವು. ಇವೆಲ್ಲವನ್ನೂ ಹಾಕಬೇಕಾಗಿಲ್ಲ, ೨-೩ ಐಟಂ ಸಾಕು.
ಚಿರೋಟಿರವೆಯನ್ನು ಹುರಿದುಕೊಳ್ಳಬೇಕಾದ ಅಗತ್ಯವಿದೆ. ಮೈಕ್ರೋವೇವ್ ಇದ್ದವರು ಅದರಲ್ಲೇ ಹುರಿದುಕೊಳ್ಳಿ. ದಪ್ಪ ರವೆಯನ್ನು ಹುರಿಯುವ ಆವಶ್ಯಕತೆಯಿಲ್ಲ. ಮಜ್ಜಿಗೆಯನ್ನು ಒಂದು ತಪ್ಪಲೆಗೆ ಸುರಿದು ಉಪ್ಪನ್ನು ಸೇರಿಸಿ. ಒಗ್ಗರಣೆಯನ್ನೂ ಹಾಕಿಕೊಳ್ಳಿ. ರವೆಯ ಜತೆಗೆ ಕಲಸಿ, ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ತನ್ನಿ. ಚಿಟಿಕೆ ಅಡುಗೆ ಸೋಡಾ ಹಾಕಬಹುದು, ಹಾಕದಿದ್ದರೂ ನಡೆಯುತ್ತದೆ.
ಇದು ದಿಢೀರ್ ಇಡ್ಲಿ, ನಾಳೆಯ ತನಕ ಕಾಯಬೇಕಾಗಿಲ್ಲ.
ಇಡ್ಲಿ ಬೇಯಿಸುವ ಪಾತ್ರೆಯಲ್ಲಿ ನೀರು ಹಾಕಿಕೊಂಡು ಕುದಿಯಲಾರಂಭಿಸಿದ ನಂತರವೇ ತಟ್ಟೆಗಳಲ್ಲಿ ಹಿಟ್ಟು ತುಂಬಿಸಿ ಒಳಗಿಡಬೇಕು. ಸರಿಯಾಗಿ ಮುಚ್ಚಿ ಒಂದೇ ಹದನಾದ ಉರಿಯಲ್ಲಿ ೭-೮ ನಿಮಿಷ ಬೆಂದರೆ ಸಾಕು, ಇಡ್ಲಿ ಆಯಿತು. ನೀರಾವಿ ಹೊರಗೆ ಹೋಗುತ್ತಾ ಇರಬೇಕು, ಉರಿಯನ್ನು ಕಡಮೆ ಮಾಡಲೂಬಾರದು.?