ಲಲಿತಪ್ರಬಂಧ
ಹಳ್ಳಿಯಿಂದ ಮೂರು ಮೈಲಿ ದೂರದಲ್ಲಿದ್ದ ತಾಲ್ಲೂಕು ಕೇಂದ್ರದ ಹೈಸ್ಕೂಲು ಸೇರಿದಾಗ ನಾಲ್ಕಾರು ಗೆಳೆಯರು ಪ್ರತಿದಿನ ನಡೆದೇ ಹೋಗುತ್ತಿದ್ದೆವು. ಊಟದ ಸಮಯದಲ್ಲಿ ಮನೆಗೆ ಹೋಗಿ ಬರಲಾಗದಿದ್ದುದರಿಂದ, ಸ್ಕೂಲಿಗೆ ಹೋಗುವಾಗಲೇ ಮನೆಯವರು ಮೂರು ಕಾಸೋ, ಆರು ಕಾಸೋ ಕೈಲಿಡುವರು. ಮಧ್ಯಾಹ್ನದ ತಿಂಡಿಯ ಸಮಯದಲ್ಲಿ ಕಡ್ಲೆಪುರಿಯೋ, ಬಾಳೆಹಣ್ಣೊ, ಸೀಬೆಕಾಯೋ ತಿಂದು ನೀರು ಕುಡಿದರೆ ಅದೇ ನಮಗೆ ಆವಾಗ ರಿಚ್ಫುಡ್. ಇದು ಐವತ್ತು ವರ್ಷದ ಹಿಂದಿನ ಕತೆ. ಅದೇ ಊರಿನಲ್ಲಿದ್ದ ಕೆಲವು ಹುಡುಗರು ಗಡದ್ದಾಗಿ ಬಿಸಿಬಿಸಿ ಊಟಮಾಡಿ ಬಂದು ತರಗತಿಯಲ್ಲಿ ತೂಕಡಿಸಿ ಬಿಡುತ್ತಿದ್ದರು. ಊಟವಿಲ್ಲದೆ ಸುಸ್ತಾಗಿ ಪಿಳಿಪಿಳಿ ಕಣ್ಣುಬಿಡುತ್ತಾ ಪಾಠ ಕೇಳುತ್ತಿದ್ದವರ ಪಾಲಿಗೆ ನಿದ್ದೆಮಾಡುತ್ತಿದ್ದವರನ್ನು ಏಳಿಸುವ ಕೆಲಸವನ್ನೂ ಗುರುಗಳು ಒಪ್ಪಿಸುತ್ತಿದ್ದರು. ನಿದ್ರಿಸುತ್ತಿದ್ದವರನ್ನು ಕಂಡ ಗುರುಗಳು ‘ತಿವಿ ಅವನ್ನ’ ಅಂದಾಗ, ಪಕ್ಕೆಗೆ ತಿವಿದು ಎಬ್ಬಿಸಬೇಕಾಗುತ್ತಿತ್ತು. ಮುಟ್ಟಿದರೂ ಸಾಕಾಗಿತ್ತು. ತಿವಿ ಅಂತ ಹೇಳಿದರಲ್ಲ ಅಂದದ್ದೆ ಸಾಕು ಜೋರಾಗಿ ತಿವಿದು ಎಬ್ಬಿಸಿಬಿಡುತ್ತಿದ್ದೆವು. ತಿವಿಸಿಕೊಂಡವ ಕೊಂಚ ದಷ್ಟಪುಷ್ಟನಾಗಿದ್ದರೆ ಸ್ಕೂಲು ಬಿಟ್ಟ ನಂತರ ಹೊಡೆದಾಟ ಖಂಡಿತ. ಜಗಳ ಆಗುತ್ತದೆಂದು ತಿಳಿದ ನಾವು ಕೆಲವರಿಗೆ ಕಚಗುಳಿ ಕೊಟ್ಟು ಎಬ್ಬಿಸಿಬಿಡುತ್ತಿದ್ದೆವು. ಕಿಸಕ್ಕನೆ ನಕ್ಕವನನ್ನು ಬೆಂಚಿನ ಮೇಲೆ ಹತ್ತಿಸುತ್ತಿದ್ದದ್ದಂತು ಗ್ಯಾರಂಟಿ. ಹೀಗೆ ಜಗಳಕ್ಕೆ ಅವಕಾಶವಿಲ್ಲದಂತೆ ನಿದ್ದೆ ಮಾಡುತ್ತಿದ್ದವನಿಗೆ ಶಿಕ್ಷೆ ಆಗುವಂತೆ ಮಾಡುತ್ತಿದ್ದೆವು.
ಹೈಸ್ಕೂಲು ಕಟ್ಟಡದಿಂದ ಸ್ವಲ್ಪ ದೂರದಲ್ಲೊಂದು ಹೊಸದಾಗಿ ಚಿಕ್ಕ ಕಟ್ಟಡ ಕಟ್ಟತೊಡಗಿದರು. ಇದನ್ನು ನೋಡಿದ ಹುಡುಗರು ತಮಗೆ ತೋಚಿದಂತೆ ಮಾತನಾಡತೊಡಗಿದರು. ಒಬ್ಬರು ಹೊಸಬಟ್ಟೆ ಅಂಗಡಿ ಬರುತ್ತದಂತೆ ಎಂದರೆ ಮತ್ತೆ ಕೆಲವರು ಸೈಕಲ್ ಶಾಪಂತೆ ಎಂದರು. ಸೈಕಲ್ ಶಾಪಂತೆ ಎಂದು ಕೇಳಿದಾಗ ಕೆಲವರಿಗೆ ಖುಷಿ. ಹೋಂವರ್ಕ್ ಪುಸ್ತಕ ತರಲು ಮರೆತು ಬಂದಿದ್ದರೆ ಬಾಡಿಗೆ ಸೈಕಲ್ ಪಡೆದು ಹೋಗಿ ಬರಬಹುದೆಂದು ಲೆಕ್ಕಹಾಕತೊಡಗಿದರು. ಇನ್ನು ಕೆಲವರು ಹೋಟ್ಲಂತೆ ಅಂದರು. ಕಡೆಗೆ ರಾಮಂಜಪ್ಪ ಎಂಬವರು ಹೊಟೇಲು ಪ್ರಾರಂಭಿಸುತ್ತಾರೆಂಬುದೇ ನಿಶ್ಚಯವಾದದ್ದೇ ತಡ ಕೆಲವರಿಗೆ ಖುಷಿಯೋ ಖುಷಿ. ಏಕೆಂದರೆ ಸ್ಕೂಲಿನ ಹತ್ತಿರ ಯಾವುದೂ ಹೊಟೇಲುಗಳೇ ಇರಲಿಲ್ಲ. ದುಡ್ಡಿದ್ದ ಹುಡುಗರು ಹೊಟೇಲಿಗೆ ಹೋಗಿ ಬರಬೇಕೆಂದರೆ ಊರಾಚೆ ಇದ್ದ ಪೇಟೆಬದಿಗೆ ಹೋಗಿ ಬರಬೇಕಿತ್ತು. ಅಷ್ಟರಲ್ಲಿ ಬೆಲ್ ಹೊಡೆದು ಬಿಡುತ್ತಿದ್ದುದರಿಂದ ಈ ಅನನುಕೂಲಕ್ಕಾಗಿ ಯಾರೂ ಹೊಟೇಲಿನ ಕಡೆ ಮುಖ ಮಾಡದೆ ಇದ್ದವರಿಗೆ ಇದೀಗ ಸ್ಕೂಲಿನ ಹತ್ತಿರವೇ ಹೊಟೇಲು ಬರುತ್ತದೆಂದರೆ ಖುಷಿಯಾಗದಿರುತ್ತದೆಯೇ! ಆದರೆ ಪ್ರತಿದಿನ ಮೂರು ಕಾಸೋ, ಆರು ಕಾಸೋ ಕೈಯಲ್ಲಿ ಹಿಡಿದು ದೂರದ ಹಳ್ಳಿಯಿಂದ ಬರುತ್ತಿದ್ದ ನನ್ನಂಥವರಿಗೆ ಅಂಥಾ ಸಂತೋಷವೇನೂ ಆಗಲಿಲ್ಲ.
ಪೇಟೆ ಬೀದಿಯಲ್ಲಿದ್ದ ಹೆಂಚಿನ ಮನೆಯ ಹೊಟೇಲಿಗಿಂತ ತಾರಸಿ ಕಟ್ಟಡದ ಈ ಹೊಟೇಲು ಚೆಂದ ಕಾಣತೊಡಗಿತು. ಗೋಡೆಯ ಬದಿಗೆ ಹಲಗೆ ಹೊಡೆದಿದ್ದು ನಿಂತು ತಿಂಡಿ ತಿನ್ನುವವರು ಆರಾಮವಾಗಿ ತಿಂದರೆ, ಥಳಥಳ ಹೊಳೆಯುವ ಸ್ಟೀಲ್ ತಳವಿರುವ ಐದಾರು ಸ್ಟೂಲುಗಳಿದ್ದುಅದರ ಮೇಲೂ ಕುಳಿತು ತಿನ್ನಬಹುದಿತ್ತು. ಇದನ್ನೆಲ್ಲ ನಾವು ಸ್ಕೂಲಿಗೆ ಬರುವಾಗ, ಮನೆಗೆ ಹೋಗುವಾಗ ಮಾಡುತ್ತಿದ್ದ ಅಜಮಾಯಿಷಿಯಾದರೂ ಹೊಟೇಲಿಗೆ ಹೋಗಿ ತಿಂಡಿ ತಿನ್ನಲು ಜೇಬಿನಲ್ಲಿ ಕಾಸಿದ್ದರೆ ತಾನೇ!
ಹೊಟೇಲಿಗೆ ಎಲ್ಲೋ ಕೆಲವು ಹುಡುಗರು ಹೋಗುತ್ತಿದ್ದರೂ ಆ ಹೊಟೇಲಿಗೆ ಗಿರಾಕಿಗಳು ಕ್ರಮೇಣ ಹೆಚ್ಚಾಗತೊಡಗಿದರು. ನಾವು ಸ್ಕೂಲಿಗೆ ಹೋಗುವಾಗ, ಸ್ಕೂಲ್ ಬಿಟ್ಟನಂತರ ಮನೆಯ ದಾರಿ ಹಿಡಿಯುವಾಗ ದೋಸೆ ಹೊಯ್ಯುವ ಕಾದ ಹೆಂಚಿನ ಮೇಲೆ ಎರಚುವ ನೀರಿನಿಂದ ‘ಚೊಂಯ್’ ಎಂಬ ಶಬ್ದ ನಮ್ಮ ಕಿವಿಗೆ ಬಿದ್ದಾಗ ಹೊಟೇಲಿನತ್ತ ತಿರುಗಿ ನೋಡಿದರೆ, ಕಾದ ಹೆಂಚಿನ ಮೇಲಿನಿಂದ ದಟ್ಟವಾದ ಹೊಗೆ ಏಳುತ್ತಿದ್ದುದರ ಜೊತೆಗೆ ಮಸಾಲೆದೋಸೆ ವಾಸನೆ ಮೂಗಿಗೆ ಅಡರುತ್ತಿತ್ತು. ‘ಅಯ್ ದೋಸೆ ಹುಯ್ಯುವವನನ್ನು ಮೈಸೂರಿನಿಂದ ಕರೆತಂದಿದ್ದಾರಂತೆ’ ಎಂದು ಒಬ್ಬನೆಂದರೆ ಇಲ್ಲ, ಇಲ್ಲ ನಗರದವನಂತೆ ಎಂದ ಮತ್ತೊಬ್ಬ. ಯಾವ ಊರಿನಿಂದಲಾದರೂ ಬಂದು ಹಾಳಾಗಲಿ, ದೋಸೆ ಹೊಯ್ದು, ಹೊಯ್ದು ನಮ್ಮ ಮೂಗಿಗೆ ‘ಘಂ’ ಎನ್ನುವ ವಾಸನೆ ಸರಿಸಿ ನಾಲಗೆಯಲ್ಲಿ ನೀರೂರಿಸಿ ಬಿಡುತ್ತಿದ್ದಾನಲ್ಲ ಎನಿಸುತ್ತಿತ್ತು.
ದಿನ ಬೆಳಗ್ಗೆ ಸಾಯಂಕಾಲ ಈ ಮಸಾಲೆದೋಸೆ ವಾಸನೆ ನಮ್ಮ ಮನಸ್ಸನ್ನು ಹೇಗೆ ಆಕ್ರಮಿಸಿಕೊಳ್ಳತೊಡಗಿತು ಎಂದರೆ ಹೇಗಾದರೂ ಮಾಡಿ, ಅಂದರೆ ಬೇರೆ ದಾರಿ ಏನು? ಹಣವನ್ನು ಮನೆಯಲ್ಲಿ ಎಗರಿಸಿಯಾದರೂ ದೋಸೆ ತಿನ್ನಬೇಕೆಂದು ನಾವು ನಾಲ್ವರೂ ನಿರ್ಧರಿಸಿದೆವು. ಆದರೆ ನಮ್ಮ ನಮ್ಮ ಮನೆಗಳಲ್ಲಿ ಕಾಸು ಕದಿಯಲು ಬಹುಮತ ಸಿಗದೆ, ನಮಗೆ ಮನೆಯವರು ಶಾಲೆಗೆ ಹೋಗುವಾಗ ಕೊಡುತ್ತಿದ್ದ ಮೂರು ಕಾಸನ್ನೇ ಕೂಡಿ ಹಾಕಿಕೊಳ್ಳಬೇಕೆಂದು ನಿರ್ಧರಿಸಿದೆವು. ದಾರಿಯಲ್ಲಿ ಬರುವಾಗ ಕಿತ್ತು ತರುತ್ತಿದ ಸೀಬೆ ಹಣ್ಣುಗಳನ್ನೇ ತಿಂದು ನೀರು ಕುಡಿದು ಹೇಗೋ ಕಾಸು ಕೂಡಿ ಹಾಕಿದೆವು. ಪುನಃ ನಮ್ಮಲ್ಲೇ ಜಿಜ್ಞಾಸೆ ಪ್ರಾರಂಭವಾಯಿತು. ಮಧ್ಯಾಹ್ನ ಲಂಚ್ ಪೀರಿಯಡ್ನಲ್ಲಿ ದೋಸೆ ತಿನ್ನುವುದೋ ಇಲ್ಲ ಸ್ಕೂಲು ಬಿಟ್ಟನಂತರ ಸಂಜೆ ಮನೆಯ ದಾರಿಯಲ್ಲಿ ತಿನ್ನುತ್ತಾ ಹೋಗುವುದೋ? ಹೊಟೇಲು ಒಳಗೆ ಹೋಗಿ ಕುಳಿತು ತಿನ್ನುವ ರೀತಿ-ರಿವಾಜುಗಳು ತಿಳಿಯದಿದ್ದುದರಿಂದ ಸಂಜೆ ಕಟ್ಟಿಸಿಕೊಂಡು ಕೆರೆ ಏರಿಯ ಮೇಲೆ ಹೋಗುತ್ತಾ ತಿನ್ನುವುದೆಂದು ನಿರ್ಧಾರವಾಯಿತು. ಒಂದು ವಾರದ ಫಸ್ಟ್ಟರ್ಮ್ ಪರೀಕ್ಷೆ. ಓದಿನ ಭರದಲ್ಲಿ ಮಧ್ಯಾಹ್ನದ ತಿಂಡಿಯನ್ನೂ ಮರೆತು ಓದಿದೆವು. ಕಾಸು ಕೂಡಿಸಿ ಪರೀಕ್ಷೆಯ
ಕಡೆಯ ದಿನ ಸಂಜೆ ಕೈಯಲ್ಲಿ ಒಂದೊಂದಾಣೆ ಹಿಡಿದು ಹೊಟೇಲಿನ ಒಳಗೆ ನಾಲ್ಕು ಜನವೂ ಹೋದೆವು.
ಅಲ್ಲಿದ್ದ ಬೋರ್ಡ್ನಲ್ಲಿ ಮಸಾಲೆದೋಸೆ ಒಂದಾಣೆ ಎಂದು ಬರೆದದ್ದರಿಂದ ನಾಲ್ಕು ಜನರೂ ಒಂದೊಂದಾಣೆಯನ್ನು ಗಲ್ಲದ ಮೇಲೆ ಕುಳಿತಿದ್ದ ರಾಮಂಜಪ್ಪನ ಬಳಿ ನಾ ಮುಂದು, ತಾ ಮುಂದು ಎಂದು ನುಗ್ಗಿ ಹಣವನ್ನು ಮೇಜಿನ ಮೇಲೆ ಹಾಕಿ ನಾಲ್ಕು ಮಸಾಲೆದೋಸೆ ಕಟ್ಟಿಕೊಡಿ ಎಂದೆವು. “ಏಯ್ ರಾಘವಾ, ಮಕ್ಕಳು ಬಂದಾರೆ. ಗರಿಗರಿಯಾಗಿ ನಾಲ್ಕು ಮಸಾಲೆ ಹೊಯ್ದು ಬೆಣ್ಣೆ ಹಚ್ಚಿಕೊಡು” ಎಂದರು ಸಂತಸದಿಂದ. ಏಕೆಂದರೆ ನಾಲ್ಕು ಮಸಾಲೆದೋಸೆಗೆ ಒಟ್ಟಿಗೆ ಗಿರಾಕಿ ಸಿಕ್ಕಿಬಿಟ್ಟಿದ್ದೆವಲ್ಲ. ನೀಟಾಗಿ ಪ್ಯಾಕ್ ಮಾಡಿ ಕೊಟ್ಟಿದ್ದನ್ನು ಪ್ರತಿಯೊಬ್ಬರೂ ಕೈಯಲ್ಲಿ ಹಿಡಿದಾಗ ಅತ್ಯದ್ಭುತವಾದ ವಸ್ತುವೊಂದು ಇಂದು ನಮಗೆ ಸಿಕ್ಕಿಬಿಟ್ಟಿದೆಯೆಂಬ ಸಂತಸ. ಯಾರಿಗೂ ದೊರೆಯದಿದ್ದುದು ನಮಗೆ ಸಿಕ್ಕಿದೆಯೆಂಬ ಸಡಗರ, ಎಷ್ಟು ಹೊತ್ತಿಗೆ ರುಚಿ ನೋಡುತ್ತೇವೋ ಎಂಬ ಕಾತರ.
ಊರ ಹೊರಗಿನವರೆಗೂ ಭದ್ರವಾಗಿ ಹಿಡಿದು ಮಧ್ಯೆ ಮಧ್ಯೆ ಘಂ ಎಂದು ಬರುತ್ತಿದ್ದ ವಾಸನೆಯನ್ನು ಆಘ್ರಾಣಿಸುತ್ತ, ನಮ್ಮ ನಮ್ಮ ಕೈಯಲ್ಲಿದ್ದ ದೋಸೆ ಪೆÇಟ್ಟಣವನ್ನು ನೋಡುತ್ತಾ ಊರ ಕಡೆ ಹೆಜ್ಜೆ ಹಾಕಿದೆವು. ಜನ ಸಂಚಾರ ಕಡಮೆಯಾಗುತ್ತಾ ಬಂದದ್ದರಿಂದ ಪುಸ್ತಕದ ಚೀಲವನ್ನು ಎಡಭುಜಕ್ಕೆ ಜೋತಾಡಿಸಿ, ಮೆಲ್ಲಗೆ ಒಬ್ಬೊಬ್ಬರೇ ಪೆÇಟ್ಟಣವನ್ನು ಬಿಚ್ಚತೊಡಗಿದೆವು. ಮೊದಲ ಸಲ ಮಸಾಲೆದೋಸೆ ತಿನ್ನುವ ಹುಮ್ಮಸ್ಸು ಮನಸ್ಸಿನಲ್ಲಿ ತುಂಬಿಕೊಳ್ಳತೊಡಗಿತು. ನಮ್ಮ ಮನೆಗಳಲ್ಲಿ ಮಾಡುತ್ತಿದ್ದ ದೋಸೆಗೆ ಈ ಬಣ್ಣ, ವಾಸನೆಯಾದರೂ ಎಲ್ಲಿರುತ್ತಿತ್ತು. ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿ ಹಾಕಿ ಮಾಡುತ್ತಿದ್ದ ಕರ್ರಗಿನ ರಾಗಿ ದೋಸೆ ಇಲ್ಲವೇ ಅಕ್ಕಿ-ಉದ್ದಿನಬೇಳೆ ಸೇರಿಸಿ ರುಬ್ಬಿದ ಅಕ್ಕಿ ದೋಸೆ. ಇವು ರೊಟ್ಟಿಯಷ್ಟೇ ದಪ್ಪಗೆ ಹೊಯ್ದು ಕೊಡುತ್ತಿದ್ದ ಈ ಎರಡು ರೀತಿಯ ದೋಸೆಯನ್ನು ತಿಂದೂ ತಿಂದೂ
ನಾಲಗೆ ಜಡ್ಡು ಹಿಡಿದುಹೋಗಿತ್ತು. ಕೈಯಲ್ಲಿ ಹಿಡಿದಿರುವ ಮಸಾಲೆದೋಸೆಯನ್ನು ನೋಡುತ್ತಿದ್ದರೆ ಸಾಕು ಮೈ ಪುಳಕಗೊಳ್ಳುತ್ತಿದ್ದರೆ ಬಾಯಲ್ಲಿ ಪಸೆಯೊಡೆದು ಒಸರತೊಡಗಿತ್ತು.
ಪೆÇಟ್ಟಣ ಬಿಚ್ಚುತ್ತಿದ್ದಂತೆ ದೋಸೆಯ ವಾಸನೆ ಗಾಳಿಗೆ ಹರಡಿ ಮೂಗನ್ನು ಅರಳಿಸತೊಡಗಿದರೆ ಬಾಯಲ್ಲಿ ಲಾಲಾರಸ ತುಂಬಿಕೊಳ್ಳತೊಡಗಿತು. ದೋಸೆಯ ನರುಗೆಂಪು ಬಣ್ಣವನ್ನು ನೋಡಿ ವಿಸ್ಮಯದಿಂದ ನಮ್ಮ ಕಣ್ಣುಗಳು ಅಗಲವಾದವು. ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ ಸುರಿಯತೊಡಗಿದ ಲಾಲಾರಸವನ್ನು ನಾಲಗೆಯಿಂದ ತುಟಿಗಳಿಗೆ ಸವರಿ ಒಳಗೆ ನುಂಗುತ್ತಾ ದೋಸೆಯ ರುಚಿಯನ್ನು ಸವಿಯಲು ಕಾತರರಾಗಿದ್ದು, ಜೊತೆಯಲ್ಲಿ ಬರುತ್ತಿದ್ದ ಸಿದ್ದೇಶ ಯಾಕೆ ಹಿಂದೆ ಬಿದ್ದನೆಂದು ತಿರುಗಿ ನೋಡಿದರೆ ಆತ ಹತ್ತು ಹೆಜ್ಜೆ ಹಿಂದಿದ್ದ. ಬಿಚ್ಚಿದ್ದ ಪೇಪರ್ ಹಿಡಿದು ನಿಂತು ಬಿಟ್ಟಿದ್ದಾನೆ. ನಾವು ಮೂವರು ಒಂದೆಡೆ ದೋಸೆಯನ್ನು ಮುರಿದು ಬಾಯೊಳಗಿಟ್ಟುಕೊಳ್ಳುವ ತವಕದಲ್ಲಿದ್ದರೆ ಸಿದ್ದೇಶ ಕಣ್ ಕಣ್ ಬಿಡುತ್ತಾ ನಿಂತಿದ್ದಾನೆ. ಹಿಂದೆ ಹೋಗಿ ನೋಡಿದರೆ ಕೈಯಲ್ಲಿ ಖಾಲಿ ಪೇಪರ್ ಪೆÇಟ್ಟಣ ಬಿಚ್ಚುವ ಆತುರದಲ್ಲಿ ದೋಸೆ ರಸ್ತೆಯ ಮಣ್ಣಿನ ಮೇಲೆ ಬಿದ್ದುಹೋಗಿದೆ. ಇದನ್ನು ನೋಡುತ್ತಿದ್ದಂತೆ ಇಷ್ಟೊತ್ತೂ ಸಂತಸದಿಂದ ಕೂಡಿದ್ದ ನಮ್ಮ ಮೂವರ ಮುಖವೂ ಕೊಂಚ ಗಡುಸಾಯಿತು. ಬಲಗೈಲಿ ಪೆÇಟ್ಟಣ ಹಿಡಿದ ಮೂವರೂ ಎಡಗೈಯಿಂದ ಅವನ ತಲೆಗೆ ಮೊಟಕಿದೆವು. ಪಾಪ, ದೋಸೆ ಕೆಳಗೆ ಬಿದ್ದುಹೋಯಿತೆಂಬ ದುಃಖ ಅವನ ಮನಸ್ಸನ್ನು ಆಕ್ರಮಿಸಿದ್ದರೆ; ನಾವು ಪೂರ್ತಾ ದೋಸೆಯನ್ನು ತಿನ್ನಲಾರದ ಸ್ಥಿತಿಗೆ ತಂದು ನಮ್ಮ ದೋಸೆಯ ಪಾಲಿಗೆ ಬಂದನಲ್ಲ ಎಂಬ ಬೇಸರ ಮನಸ್ಸನ್ನು ತುಂಬಿಕೊಂಡಿತು. ಆದರೂ ನಾವು ಮೂವರೂ ಸ್ವಲ್ಪ ಸ್ವಲ್ಪ ದೋಸೆಯನ್ನು ಮುರಿದು ಅವನ ಪೇಪರಿಗೆ ಹಾಕಿದ ನಂತರ ನಿಧಾನವಾಗಿ ಮೆಲ್ಲುತ್ತಾ ಸಾಗಿದೆವು. ಹಳ್ಳಿಯ ಮನೆಯಲ್ಲಿ ಇಂತಹ ದೋಸೆಯನ್ನು ಎಲ್ಲಿ ಮಾಡುತ್ತಿದ್ದರು? ಎಂತಹ ಘಮಘಮ! ಹಳ್ಳಿಹೈಕಳ ಬಾಯಿಗೆ ಸಿಕ್ಕ ಮಧುರಾತಿಮಧುರ ತಿಂಡಿ. ಆಹಾ ಎಂತಹ ರುಚಿ! ತಿಂದ ಸುಖಾನುಭವದಿಂದ ಮನಸ್ಸು ಪ್ರಫುಲ್ಲವಾಗಿ ಹೋಯಿತು. ಸಿದ್ದೇಶನ ಪಾಲಿನ ದೋಸೆ ಮಣ್ಣು ಪಾಲಾದದ್ದು, ನಾಲ್ವರು ಹಂಚಿಕೊಂಡು ತಿಂದದ್ದು ಎಲ್ಲವನ್ನೂ ಮರೆತು ದೋಸೆ ತಿಂದ ಕೈಯಲ್ಲೇ ಕೈಕೈಹಿಡಿದು ನಲಿದು ಅಜ್ಜಯ್ಯನ ಕೆರೆಯಲ್ಲಿ ಕೈಬಾಯಿ ತೊಳೆದುಕೊಂಡು ಮನೆಯ ದಾರಿ ಹಿಡಿದೆವು.
ಎಂಟನೆಯ ತರಗತಿಯಲ್ಲಿ ನಮ್ಮ ಜೊತೆಯಲ್ಲಿ ಓದುತ್ತಿದ್ದ ಗಜಪತಿ ಎಂಬ ಹುಡುಗ ಫೇಲಾದ ನಂತರ ಹೈಸ್ಕೂಲು ಬಿಟ್ಟು ವ್ಯವಸಾಯವನ್ನೇ ಹಿಡಿದ. ಸ್ಕೂಲು ಬಿಟ್ಟಿದ್ದರೂ ಹೈಸ್ಕೂಲಿದ್ದ ತಾಲ್ಲೂಕು ಕೇಂದ್ರಕ್ಕೆ ವ್ಯವಸಾಯದ ಸಾಮಗ್ರಿ ಕೊಳ್ಳಲು ನಮ್ಮ ಜೊತೆಯಲ್ಲಿಯೇ ಆಗಾಗ್ಗೆ ಬರುತ್ತಿದ್ದ. ಇಲ್ಲ, ನಾವು ಸಂಜೆ ಶಾಲೆಯಿಂದ ಹೊರಡುವ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದ. ಹೀಗೊಮ್ಮೆ ಬಂದಾಗ ‘ರೇಷ್ಮೆಗೂಡು ಮಾರಿದ ಹಣವಿದೆ. ಬನ್ರೋ ಎಲ್ಲರಿಗೂ ಮಸಾಲೆದೋಸೆ ಕೊಡಿಸ್ತೇನೆ’ ಎಂದು ದೋಸೆ ಕೊಡಿಸಿದಾಗ ನಮಗೆಲ್ಲ ಸಂತಸವೋ ಸಂತಸ. ಹೀಗೆ ತಿಂಗಳಿಗೋ, ಎರಡು ತಿಂಗಳಿಗೋ ಒಮ್ಮೆ ಗಜಪತಿ ಕಾಣಿಸಿಕೊಂಡನೆಂದರೆ ಮಸಾಲೆದೋಸೆ ಗ್ಯಾರಂಟಿ ಎಂದೇ ಅರ್ಥ. ಹಾಗೆ ದೋಸೆ ತಿಂದು ಹೋದ ದಿನ ಮನೆಯಲ್ಲಿ ತಿಂಡಿ ಬೇಡವೆಂದು ಹೇಳಿ ಬೈಸಿಕೊಂಡದ್ದೂ ಉಂಟು.
ಹಿಂದೆಲ್ಲ ಹೊಟೇಲಿಗೆ ಹೋಗುತ್ತಿದ್ದವರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಕಾಲ. “ನೀನೇನು ಗತಿಗೆಟ್ಟು ನಿಂತಿದ್ದೀಯಾ ಹೊಟೇಲಿಗೆ ಹೋಗೋಕೆ?” ಎಂದೋ ಇಲ್ಲ, “ಹೊಟೇಲಿಗೆ ಹೋಗೋ ಶೋಕಿ ಶುರುವಾಯ್ತು” ಎಂದೋ ಬೈಯುತ್ತಿದ್ದುದು ಸಾಮಾನ್ಯವಾಗಿತ್ತು. ಪರಸ್ಥಳದಿಂದ ಬಂದವರು ಮಾತ್ರ ವಿಧಿಯಿಲ್ಲದೆ ಹೊಟೇಲನ್ನು ಆಶ್ರಯಿಸುತ್ತಿದ್ದುದು ಒಪ್ಪಿತ ರೀತಿಯಾಗಿತ್ತು. “ನಿಮ್ಮಪ್ಪಂಗೆ ಗೊತ್ತಾದ್ರೆ ಚರ್ಮ ಸುಲೀತಾರೆ ಹುಷಾರು” ಎಂದು ಅಮ್ಮ ಎಷ್ಟೋ ಸಾರಿ ಎಚ್ಚರಿಸುತ್ತಿದ್ದಳು.
ಹೀಗೊಮ್ಮೆ ಗಜಪತಿ ಬಂದಾಗ ಯಾರಪ್ಪ ಮಸಾಲೆದೋಸೆ ಕೊಡಿಸ್ತೀರಾ ಎಂದ. ಬರಿಗೈದಾಸರು ನಾವು ಎಲ್ಲಿಂದ ಐದಾಣೆ ಹೊಂದಿಸೋದು? ಮುಖ ಮುಖ ನೋಡುತ್ತಾ ನಿಂತೆವು. ಆದರೆ ಯಾರಾದರು ಪಂದ್ಯಕಟ್ಟಿದರೆ ಹನ್ನೆರಡು ಮಸಾಲೆದೋಸೆ ತಿಂತೀನಿ. ಜೊತೆಗೆ ನಿಮ್ಗೂ ದೋಸೆ ಕೊಡಿಸ್ತೀನಿ. ಯಾರು ಪಂದ್ಯ ಕಟ್ತೀರಾ ಎಂದು ಸವಾಲು ಹಾಕಿದ. ನಮಗೆಲ್ಲರಿಗೂ ಆಶ್ಚರ್ಯ. ಎರಡು ದೋಸೆ ತಿನ್ನೋದೇ ಕಷ್ಟ. ಅಂಥಾದರಲ್ಲಿ ಹನ್ನೆರಡು ದೋಸೆ ತಿನ್ನೋದೆ?
ಪಂದ್ಯಕ್ಕೆ ಒಪೆÇ್ಕಳ್ಳೋ ಒಪೆÇ್ಕಳ್ಳೋ ಎಂದು ನನ್ನನ್ನು ಎಲ್ಲರೂ ಪುಸಲಾಯಿಸತೊಡಗಿದರು. ಮಧ್ಯಾಹ್ನದ ಪೀರಿಯಡ್ನಲ್ಲಿ ಪುಸ್ತಕ ತೆರೆಗಾದ ನಮ್ಮಪ್ಪ, ಅಮ್ಮನಿಗೆ ಕೊಡು ಎಂದು ಕೊಟ್ಟಿದ್ದ ಎರಡು ರೂಪಾಯಿ ನೋಟು ಪುಸ್ತಕದಲ್ಲೇ ಇಟ್ಟು ಮರೆತು ಸ್ಕೂಲಿಗೆ ತಂದುಬಿಟ್ಟಿದ್ದೆ. ಇದನ್ನು ಸ್ನೇಹಿತರು ನೋಡಿಬಿಟ್ಟಿದ್ದರು. “ಏಯ್, ನಿನ್ನ ಹತ್ತಿರ ಎರಡು ರೂಪಾಯಿ ಇದೆಯಲ್ಲ ಅದರಲ್ಲಿ ಹನ್ನೆರಡಾಣೆ ಖರ್ಚು ಮಾಡೋ. ಗಜಪತಿ ಪಂದ್ಯದಲ್ಲಿ ಸೋತರೆ ಹನ್ನೆರಡಾಣೆ ಹೆಚ್ಚಿಗೆ ಸೇರಿಸಿಕೊಡ್ತಾನೆ. ನಿಂದೇನೂ ಖರ್ಚಾಗಲ್ಲ. ಗೆದ್ದ ಹಣದಲ್ಲಿ ಯಾವಾಗ ಬೇಕಾದ್ರು ಮಸಾಲೆದೋಸೆ ತಿಂತಾ ಇರಬಹುದು” ಎಂದು ಪುಸಲಾಯಿಸತೊಡಗಿದರು. ಒಂದೆಡೆ ಮಸಾಲೆದೋಸೆಯ ಸೆಳೆತ, ಮತ್ತೊಂದೆಡೆ ಸೋತರೆ ಅಪ್ಪನಿಂದ ಬೀಳಬಹುದಾದ ಹೊಡೆತ. ಕಡೆಗೆ ದೋಸೆಯ ಸೆಳೆತವೇ ಗೆದ್ದು ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದೆ. ಕಟ್ಟಿಸಿಕೊಂಡು ಬಂದಿದ್ದ ಹನ್ನೆರಡು ದೋಸೆಯನ್ನು ದಾರಿಯಲ್ಲಿ ಗಜಪತಿ ತಿಂದುಬಿಡಬೇಕೇ! ಗಜಪತಿ ಕೊಡಿಸಿದ್ದ ದೋಸೆಯನ್ನು ನಾವೆಲ್ಲ ತಿಂದು ಮುಗಿಸಿದೆವು.
ಗಜಪತಿ ಕಟ್ಟುಮಸ್ತಾದ ಆಳು. ದುಡಿತಕ್ಕೆ ಮೈಯೊಡ್ಡಿ ದಷ್ಟಪುಷ್ಟವಾಗಿ ಬೆಳೆದಿದ್ದ. ಹನ್ನೆರಡು ದೋಸೆ ಅವನಿಗೆ ಯಾವ ಲೆಕ್ಕ? ಹನ್ನೆರಡಾಣೆ ಪೀಕು ಎಂದು ನನಗೆ ಹೇಳಿದಾಗ ಗುಂಡಿಗೆ ಬಡಿತ ಒಮ್ಮೆಲೆ ಜಾಸ್ತಿಯಾಯಿತು. ಹಣ ಕಳೆದುಕೊಂಡ ಭಯ ಶುರುವಾಯಿತು. ದೋಸೆ ತಿಂದ ಖುಷಿಯಲ್ಲಿ ತೇಲಾಡುತ್ತಿದ್ದವನನ್ನು ಭೂಮಿಗೆ ಎತ್ತಿ ಒಗೆದಂತಾಯ್ತು. ಅಪ್ಪನಿಗೆ ಗೊತ್ತಾದರೆ ನನ್ನ ತಿಥಿ ಗ್ಯಾರಂಟಿ. ಸ್ಕೂಲು ಪುಸ್ತಕವೋ, ಪೆನ್ನೋ ಕೊಂಡಿದ್ದರೆ ಅದಕ್ಕೊಂದು ಅರ್ಥವಿತ್ತು. ಪಂದ್ಯಕಟ್ಟಿ ಹಣ ಕಳೆದೆನೆಂದು ತಿಳಿದರೆ ‘ಈ ವಯಸ್ಸಿಗೆ ಜೂಜು ಬೇರೆ ಕಲ್ತಿದ್ದೀಯಾ’ ಎಂದು ಬಡಿಯದೆ ಬಿಡಲಾರರು ಎನಿಸಿದಾಗ ದೇಹದಲ್ಲಿದ್ದ ತ್ರಾಣ ಉಡುಗಿ ಹೋದಂತಾಗಿ ಹೆಜ್ಜೆ ಎತ್ತಿ ಎತ್ತಿ ಇಡತೊಡಗಿದೆ. ಇತರರು ದೋಸೆ ತಿಂದ ಸಂತಸದಲ್ಲಿದ್ದರೆ ನನಗೆ ಎಲ್ಲವೂ ಖಾಲಿ ಖಾಲಿ ಎನಿಸತೊಡಗಿತು. ಹಣದ ಚಿಂತೆಹತ್ತಿ ಜೋಲು ಮೋರೆ ಹೊತ್ತು ನಡೆದಿದ್ದೆ. ಊರು ಹತ್ತಿರವಾದಂತೆಲ್ಲ ದುಗುಡ ಜಾಸ್ತಿಯಾಗತೊಡಗಿತು. ಊರೊಳಗೆ ಹೆಜ್ಜೆಹಾಕಿದೆ. ಇನ್ನು ಕೊಂಚ ದೂರ ನಡೆದರೆ ಮನೆ ಸಿಕ್ಕಿಯೇ ಬಿಡುತ್ತದೆ. ಬಾಸುಂಡೆ ಏಟಿಗೆ ಮೈಯನ್ನು ಹದಮಾಡಿಕೊಳ್ಳುವುದೇ ಉಳಿದಿರುವ ದಾರಿ ಎಂದು ಯೋಚಿಸುತ್ತಾ ಹೆಜ್ಜೆ ಹಾಕುತ್ತಿದ್ದಾಗ ಪೆಟ್ಟಿಗೆ ಅಂಗಡಿ ದೇವಮ್ಮ ಕರೆದದ್ದು ಕೇಳಿಸಲೇ ಇಲ್ಲ. ‘ಏಯ್, ದೇವಮ್ಮ ಕರೀತಿದ್ದಾಳೆ ನೋಡೋ’ ಎಂದು ಸ್ನೇಹಿತರು ಹೇಳಿದಾಗಲೇ ಈ ಕಡೆ ಜ್ಞಾನ ಹರಿದದ್ದು. ಅಪ್ಪನ ರೂಲು ದೊಣ್ಣೆ ಹಿಡಿದ ಚಿತ್ರವೇ ಕಣ್ಣಮುಂದೆ ಕುಣಿಯತೊಡಗಿತು.
ಇನ್ನು ಇವಳೇನು ಕಿತಾಪತಿ ಮಾಡುತ್ತಾಳೋ ಎಂದು ಹೆದರುತ್ತಲೇ ದೇವಮ್ಮನ ಪೆಟ್ಟಿಗೆ ಅಂಗಡಿ ಕಡೆಗೆ ಹೋದೆ. “ಹೊತ್ತಾರೆ ನಿಮ್ಮಪ್ಪ ಬಂದಿದ್ರು, ಚಿಲ್ರೆ ಹಣ ಇಲ್ದೆ ಎರಡು ರೂಪಾಯಿ ಕೊಟ್ಟಿರ್ಲಿಲ್ಲ. ತಗ ಮಗ, ಅವರ್ಗೆ ಕೊಟ್ಬುಡು” ಎಂದು ಒಂದೊಂದು ರೂಪಾಯಿಯ ಎರಡು ಹೊಸ ನೋಟು ಕೊಟ್ಟಳು. ನಾನು ಅವಳ ಅಂಗಡಿ ಬಳಿ ಹೋಗಿದ್ದಾಗ ಜೊತೆಯಲ್ಲಿದ್ದವರು ಅವರವರ ಮನೆ ದಾರಿ ಹಿಡಿದಿದ್ದರು. ನೋಟು ಹಿಡಿದು ಮನೆ ಕಡೆ ಹೊರಟು, ಪುನಃ ಎಣಿಸಿದಾಗ ಆಶ್ಚರ್ಯ. ಕೊಟ್ಟಿದ್ದು ಒಂದೊಂದು ರೂಪಾಯಿಯ ಎರಡು ಹೊಸ ನೋಟಲ್ಲ! ಒಂದಕ್ಕೊಂದು ಅಂಟಿಕೊಂಡಿದ್ದರಲ್ಲಿ ಮೂರು ನೋಟುಗಳಿದ್ದವು. ಮೂರು ನೋಟುಗಳನ್ನು ನೋಡುತ್ತಿದ್ದಂತೆ ಕೈಕಾಲುಗಳಲ್ಲಿ ಉಡುಗಿ ಹೋಗಿದ್ದ ಶಕ್ತಿ ತುಂಬಿಸಿಕೊಂಡಂತೆನಿಸಿತು. ಹೆಚ್ಚಿಗೆ ಕೊಟ್ಟಿರುವ ಒಂದು ರೂಪಾಯಿಯನ್ನು ಹಿಂದಿರುಗಿಸುವುದೇ ಸರಿ ಎನಿಸಿತು. ಎರಡು ಹೆಜ್ಜೆ ಹಿಂದಕ್ಕೆ ಇಟ್ಟು ಅರೆಗಳಿಗೆ ಯೋಜಿಸಿದೆ. ಪಂದ್ಯದಲ್ಲಿ ಸೋತಿರುವ ಹಣವನ್ನು ಹೊಂಚುವುದಾದರೂ ಹೇಗೆ ಎಂಬ ಯೋಚನೆ ಮನಸ್ಸಿಗೆ ಬಂದು, ಸತ್ಯಸಂಧನಾಗಿ ಹಣ ವಾಪಾಸ್ಸು ಕೊಟ್ಟುಬಿಡಬಹುದು. ಪಂದ್ಯ – ದೋಸೆ ಇವೆರಡರ ನಿಜಸ್ಥಿತಿ ಅಪ್ಪನಿಗೆ ಗೊತ್ತಾದರೆ ಬೆನ್ನಿಗೆ ರೂಲ್ ದೊಣ್ಣೆ ಏಟು ಗ್ಯಾರಂಟಿ ಎನಿಸಿದಾಗ ಸತ್ಯ ಸೋತು, ಒಂದು ರೂಪಾಯಿಯ ನೋಟನ್ನು ಮಡಿಚಿ ಜೇಬಿಗಿಳಿಸಿದೆ. ಮನಸ್ಸಿಗೆ ನಿರಾಳವೆನಿಸಿತು. ಮನೆಗೆ ಹೋದ ತಕ್ಷಣ ಅಪ್ಪಕೊಟ್ಟಿದ್ದ ಹಣ, ದೇವಮ್ಮ ಕೊಟ್ಟಿದ್ದ ಹಣ ಎಂದು ಎರಡನ್ನೂ ಅಮ್ಮನ ಕೈಗೆ ಹಾಕಿ ಖುಷಿಯಿಂದ ಕೈಕಾಲು ಮುಖ ತೊಳೆಯಲು ಹೋದೆ.
ಎಷ್ಟೋ ದಿವಸಗಳ ನಂತರವೇ ತಿಳಿದದ್ದು – ನಮಗೆ ಹಾಕಿದಂತೆ ಈರುಳ್ಳಿ-ಆಲೂಗಡ್ಡೆಯ ಮುದ್ದೆ ಮುದ್ದೆ ಪಲ್ಯ-ಗಿಲ್ಯ ಇಲ್ಲದ ಬರೀ ಚಟ್ನಿ ಸವರಿದ ಖಾಲಿ ಹನ್ನೆರಡು ದೋಸೆಗಳನ್ನು ಗಜಪತಿ ತಿಂದಿದ್ದನೆಂಬುದು.
ಅದು ಹೇಗಾದರಿರಲಿ, ಮಸಾಲೆದೋಸೆಯ ಆಸೆಗೆ ಇನ್ನೆಂದೂ ಇಂಥ ಕೆಲಸ ಮಾಡಬಾರದೆಂಬ ನಿರ್ಧಾರಕ್ಕೆ ಬಂದಿದ್ದೆ.