
ದೇವ-ದಾನವರು ಸಮುದ್ರಮಥನ ಮಾಡುವಾಗ ಎಲ್ಲಾ ಸುವಸ್ತುಗಳೂ ಒಂದೊಂದಾಗಿ ಹೊರಬಿದ್ದ ಮೇಲೆ ಅಮೃತ ದೊರೆಯುತ್ತದಲ್ಲ… ಅದರ ಜೊತೆ ಜೊತೆಯಲ್ಲಿಯೇ ಮೇಲೆದ್ದು ಬಂದ ಅದೃಶ್ಯ ವಿಚಾರವೊಂದನ್ನು ಆ ಶ್ರೀಮನ್ನಾರಾಯಣನು ದೇವದಾನವರಿಗೆ ಕಾಣದಂತೆ ಈ ಭರತಖಂಡದ ಶ್ರೀಮಾನ್ ಶ್ರೀಮತಿಯರ ಮನೆಗಳಲ್ಲಿ ಹೃದಯಭಾಗವಾದ ಅಡುಗೆಕೋಣೆಯ ಕಪಾಟಿನ ಮೂಲೆಯಲ್ಲಿರುವ ಒಂದು ಡಬ್ಬಿಯಲ್ಲಿ ಅಡಗಿಸಿಟ್ಟನು ಎಂಬುದು ಈ ಪಾಮರಳ ಸ್ವಯಂಪ್ರೇರಿತ ಸಂಶೋಧನೆ!
ಇದೇ ಒಗ್ಗರಣೆ! ಒಗ್ಗುವ ಆರೋಗಣೆ….
ಒಗ್ಗರಣೆ ಹುಟ್ಟಿದ್ದು ಹೀಗೆ. ಅದನ್ನು ಬಳಸುವ ವಿಧಾನವನ್ನು ದೇವಾದಿದೇವನು ದೇವತೆಗಳಿಗೂ ದಾನವರಿಗೂ ತಿಳಿಸದೇ ಕೇವಲ ಮಾನವರಿಗೆ ಮಾತ್ರ ತಿಳಿಸಲು ಕಾರಣಗಳಿವೆ. ದಾನವರಿಗೆ, ತಿನ್ನುವ ವಿಚಾರದಲ್ಲಿ ರುಚಿ ಪಚಿ ಬಯಸದೇ ಹೊರೆಗಟ್ಟಲೇ ಮಾಂಸ ಮಡ್ಡಿ ಸಿಕ್ಕರಾಯಿತು…. ಮನುಷ್ಯರೋ, ಪ್ರಾಣಿಗಳೋ ಸಿಕ್ಕಿದ್ದನ್ನು ಹಾಗೆ ಹಾಗೆಯೆ ಜೀವಂತ ನುಂಗಿ ತಮ್ಮ ಹಸಿವು ತಣಿಸಿಕೊಳ್ಳುತ್ತಾರೆ. ಇನ್ನು ದೇವತೆಗಳೋ – ಅಮೃತ ಕುಡಿದವರಿಗೆ ಹಸಿವೇ ಇಲ್ಲ!
ಮನುಷ್ಶ ಮಾತ್ರನು ಮಾತ್ರ ಇದಕ್ಕೆಲ್ಲ ಹೊರತಾಗಿ ಆಹಾರವನ್ನು ಹುಡುಕಿ ಅದನ್ನು ತನಗೆ ಬೇಕಾದ ರುಚಿಯಲ್ಲಿ ಬಗೆ ಬಗೆಯಾಗಿ ತಯಾರಿಸಿ ಚಪ್ಪರಿಸಿ ಚಪ್ಪರಿಸಿ ಉಣ್ಣುವವನು. ‘ಬದುಕುವುದೇ ಉಣ್ಣಲು’ ಎನ್ನುವ ಮೂಲಮಂತ್ರವನ್ನು ಸದಾ ಜಪಿಸುವವನು.
ಇತ್ತ ದೇವರು ಒಗ್ಗರಣೆ ಡಬ್ಬಿಯಲ್ಲಿ ಇಟ್ಟಿದ್ದಾದರೂ ಏನು ಎಂದು ನೋಡಿದರೆ ಅರ್ಧ ಚಮಚ ಸಾಸಿವೆ, ಚಿಟಿಕೆ ಇಂಗು ಮತ್ತು ಗಿಂಡಿಯಲ್ಲಿ ಒಂದು ಚಮಚ ಎಣ್ಣೆ, ಇವೆಲ್ಲವನ್ನೂ ಒಲೆಯ ಮೇಲಿಟ್ಟು ಚಟಪಟಗುಡಿಸಲು ಕಬ್ಬಿಣದ ಸೌಟು…. ಇದು ಮೂಲ ಒಗ್ಗರಣೆ.. ಈ ಒಗ್ಗರಣೆಯನ್ನು ಸಾರಿಗೋ, ತಂಬುಳಿಗೋ, ನೀರ್ಗೊಜ್ಜಿಗೋ ಅದ್ದಿದಾಗ ‘ಚೋಂಯ್’ ಎನ್ನುವ ಹಿನ್ನೆಲೆ ಸಂಗೀತದೊಂದಿಗೆ ಹೊರಹೊಮ್ಮುವ ಪರಿಮಳವಿದೆಯಲ್ಲ… ಅದು ಮನುಜರ ನಾಸಿಕಾಗ್ರಗಳನ್ನು ತಾಗಿದಾಗ ಆಗುವ ಆನಂದಕ್ಕೆ ದೇವಲೋಕದ ಅಮೃತವೂ ಸಮವಲ್ಲ ಎಂಬುದು ಅನುಭವೀ ಮಾನವರ ಅನಿಸಿಕೆ. ಆಹಾ….! ಕೇವಲ ಪರಿಮಳವೊಂದೇ ಜಠರಾಗ್ನಿಯನ್ನು ಕೆರಳಿಸಿ, ತಮ್ಮ ಮನೆಯೊಂದೇ ಅಲ್ಲದೆ ಆಚೀಚೆ ಮನೆಯವರ ನಾಲಿಗೆಗಳ ರಸಗ್ರಂಥಿಗಳನ್ನು ಉದ್ರೇಕಿಸಲು ಕಾರಣವೆಂದರೆ ಅದು ಅಸಾಮಾನ್ಯ ವಿಷಯವೇ ಹೌದು.
ಒಗ್ಗರಣೆಗಳಲ್ಲಿ ವಿಧಗಳುಂಟು. ದೇವನಿಂದ ಸಿಕ್ಕಿದ ಈ ಒಗ್ಗರಣೆ ಪದಾರ್ಥಗಳಿಗೆ ಬಾಣಸಿಗರು ಮತ್ತಷ್ಟು ವಿಧದ ಉಪವಸ್ತುಗಳನ್ನು ತಾವೇ ಕೈಯಿಂದ ಹಾಕಿ ಅದರ ಮೌಲ್ಯವರ್ಧನೆ ಮಾಡಿದ್ದು ಎಲ್ಲರ ನಾಸಿಕದಲ್ಲಿಯೂ ಇದೆ ಎಂದರೆ ಅತಿಶಯೋಕ್ತಿಯಲ್ಲ. ಇಂಗಿನೊಗ್ಗರಣೆ, ಬೆಳ್ಳುಳ್ಳೀ ಒಗ್ಗರಣೆ, ಜೀರಿಗೆ ಒಗ್ಗರಣೆ, ಕರಿಬೇವಿನೊಗ್ಗರಣೆ,
ಅಗತ್ಯಕ್ಕೆ ತಕ್ಕಂತೆ ಉದ್ದಿನಬೇಳೆ, ಕಡಲೆಬೇಳೆಗಳನ್ನೂ ಬಳಸಿ ಸ್ವಾದವನ್ನು ಹೆಚ್ಚುಗೊಳಿಸುತ್ತಾರೆ. ಪಲ್ಯ, ಚಿತ್ರಾನ್ನಗಳಿಗೆ ಒಗ್ಗರಣೆಯಿಂದಲೇ ಶುರುಮಾಡಿದರೆ ನೀರ್ಗೊಜ್ಜು, ಸಾರುಗಳಿಗೆ ಕೊನೆಯಲ್ಲಿ ಒಗ್ಗರಿಸುತ್ತಾರೆ. ಅಂತೂ ಒಗ್ಗರಣೆಯಿಲ್ಲದ ಅಡುಗೆಯಿಲ್ಲ… ಒಗ್ಗರಣೆಯಿಲ್ಲದ ಅಡುಗೆ ಅಡುಗೆಯೂ ಅಲ್ಲ.
ಪ್ರತೀ ಮನೆಯ ಹೆಂಗಸರಿಗೆ ಈ ಒಗ್ಗರಣೆಯ ಸಮಸ್ತ ವಿಚಾರಗಳೂ ಗೊತ್ತು ಅನ್ನುವುದರಲ್ಲಿ ಅನುಮಾನವಂತೂ ಇಲ್ಲವೇ ಇಲ್ಲ…!
ಭರತಖಂಡದಲ್ಲಿ ಎಂದು ಉಲ್ಲೇಖಿಸಲು ಕಾರಣವೆಂದರೆ, ವಿದೇಶಗಳ ಆಹಾರಗಳಾದ ಪಿಜ್ಜಾ ಬರ್ಗರ್ಗಳಲ್ಲಾಗಲೀ, ಬನ್ನು ಬ್ರೆಡ್ಡುಗಳಿಗಾಗಲೀ ಒಗ್ಗರಣೆ ಹಾಕುವುದಿಲ್ಲ. ಅದಕ್ಕೆ ನಂಚಿಕೊಳ್ಳುವ ಸಾಸ್, ಮಯೋನೀಸ್ ಯಾವುದರಲ್ಲೂ ಒಗ್ಗರಣೆಯ ಸುವಾಸನೆಯಿಲ್ಲ. ಚೀನಾದವರ ನೂಡಲ್ಸ್, ಸೂಪುಗಳಲ್ಲೂ ಒಗ್ಗರಣೆ ನಾ ಕಾಣೆ.
ಆದರೆ ನಮ್ಮ ಭಾರತೀಯ ಅಡುಗೆಗಳು ಮಾತ್ರ ಒಗ್ಗರಣೆಯಿಂದಲೇ ಹುಟ್ಟಿ ಒಗ್ಗರಣೆಯಿಂದಲೇ ಪೂರ್ಣಗೊಳ್ಳುವವು. ಮನೆಯೊಡತಿ ಮದ್ಯಾಹ್ನದ ಹೊತ್ತಿಗೆ ಸಾರಿಗೋ ನೀರ್ಗೊಜ್ಜಿಗೋ ಇಂಗಿನದೊಂದು ಒಗ್ಗರಣೆ ಕೊಟ್ಟರೆ ಹೊರಹೊಮ್ಮುವ ಸುವಾಸನೆಯೇ ಮನೆಯೊಡೆಯನ ಒಡಲು ಕೆರಳಿಸಿ ಊಟಕ್ಕೆ ಎಬ್ಬಿಸುತ್ತದೆ.
ಹಾಗಾದರೆ ಇಲ್ಲಿ ಒಗ್ಗರಣೆಯ ಕೆಲಸವೇನು?
ಯಾವುದೇ ಪದಾರ್ಥವನ್ನು ರಸವತ್ತಾಗಿ ಉಣ್ಣಲು ರುಚಿಯಾದ ಮೇಲೋಗರಗಳೊಂದೇ ಅಲ್ಲದೆ, ಸಮಯ, ಸ್ಥಳ, ಸ್ವಚ್ಛತೆ, ಒಳ್ಳೆ ಹಸಿವು ಇಷ್ಟೂ ಬೇಕಾಗುತ್ತದೆ. ಎಲ್ಲವೂ ಇದ್ದು ಹಸಿವಿಲ್ಲದಿದ್ದರೆ ಪಂಚಭಕ್ಷ್ಯ ಪರಮಾನ್ನಗಳಿಗೂ ಬೆಲೆಯಿಲ್ಲ ಬೇಡಿಕೆಯಿಲ್ಲ.. ಆದರೆ ಹಸಿವಿಲ್ಲದವರಿಗೂ ಒನ್ ತುತ್ತು ಉಂಡ್ ಬಿಡೋಣ ಅನ್ನುವಂತೆ ಮಾಡುವ ಅಡುಗೆಯವರ ಮಾರ್ಕೆಟಿಂಗ್ ತಂತ್ರವೇ ಈ ಒಗ್ಗರಣೆ!
ಹಾಗಂತ ಒಗ್ಗರಣೆ ಸೀದು ಹೋದರೆ ಸಂಪೂರ್ಣ ಅಡುಗೆಯನ್ನೆ ಕೆಡಿಸಬಲ್ಲದು. ಕಮಟು ವಾಸನೆಯ ಅಡುಗೆಯನ್ನು ಉಣ್ಣುವವರು ಯಾರು?
ಭಾರತೀಯರಲ್ಲಿ ಅದೂ ದಕ್ಷಿಣಭಾರತದವರು ಒಗ್ಗರಣೆ ವಿಧಾನವನ್ನು ಸಮಗ್ರವಾಗಿ ಬಳಸುತ್ತಾರೆ. ಕುಡಿಬಾಳೆಯಲ್ಲಿ ಬಡಿಸಿದ ಮೇಲೋಗರಗಳಲ್ಲಿ ಅನ್ನ, ಉಪ್ಪು, ಸಿಹಿ ಬಿಟ್ಟರೆ ಎಲ್ಲವೂ ಒಗ್ಗರಣೆಗೆ ಒಳಪಟ್ಟವುಗಳೇ.. ಪಲ್ಯ, ಚಟ್ಣಿ, ಕೋಸಂಬರಿ, ಸಾಸ್ವೆ, ಸಾರು, ಸಾಂಬಾರು, ಕೂಟು, ಚಿತ್ರಾನ್ನಗಳನ್ನು ಒಗ್ಗರಣೆಯಿಲ್ಲದಿದ್ದರೆ ಊಹಿಸಿಕೊಳ್ಳುವುದೇ ಕಷ್ಟ.
ಉತ್ತರಭಾರತೀಯರಲ್ಲಿ ಒಗ್ಗರಣೆಯ ಹವಾ ಇಷ್ಟೊಂದಿಲ್ಲ. ‘ದಾಲ್ ತಡ್ಕಾ’ ಎಂದು ಒಂದು ಬೇಳೆಗೆ ಹಾಕಿದ ಒಗ್ಗರಣೆಯನ್ನೇ ಬೊಂಬಡಾ ಹೊಡೆದು ಹೇಳಿಕೊಳ್ಳುತ್ತಾರೆ. ಊಟಕ್ಕೆ ಒಗ್ಗರಣೆಯೆಂಬುದು ಹೊಟ್ಟೆಗೆ ತೃಪ್ತಿ ತಂದುಕೊಟ್ಟರೆ ಮಾತಿನ ಒಗ್ಗರಣೆಗಳು ಜೀವನದ ಸುಖವನ್ನೇ ನಿವಾಳಿಸಿ ಎಸೆಯಬಲ್ಲವು. ಮತ್ತಾರದೋ ಜೀವನವನ್ನು ಕಟ್ಟಿಕೊಡಲೂ ಬಹುದು. ಚಂದವಾಗಿ ಮಾತನ್ನಾಡುತ್ತಾ ಇರುವಾಗ ನಡುವೆ ಆಡುವ ಒಂದು ಕೊಂಕುಮಾತು ಅಂದಿನ ದಿನವನ್ನೇ ಕೆಡಿಸಬಹುದು. ಸ್ನೇಹವೇ ಹಾಳಾಗಬಹುದು. ಒಂದು ಕೊಂಕುಮಾತಿಗೆ ಯುದ್ದಗಳೇ ನಡೆದುಹೋದಾವು. ಕುಟುಂಬಗಳೇ ಬೇರಾದಾವು. ಮಾತಿನ ಒಗ್ಗರಣೆಗಳು ಯಾವಾಗಲೂ ಸೀದುಹೋದಂತೆಯೇ ಕಾಣಿಸುತ್ತವೆ. ಕಮಟು ವಾಸನೆ ಬೀರುತ್ತಾ ಮಾನಸಿಕ ಸ್ವಾಸ್ಥ್ಯವನ್ನೇ ಹಾಳುಮಾಡಿಬಿಡುತ್ತದೆ. ಮುಖ್ಯ ವಿಚಾರದ ಮಹತ್ವವೇ ಮರೆಯಾಗಿ ಒಗ್ಗರಣೆ ಮಾತುಗಳೇ ಮುಖ್ಯಪಾತ್ರ ವಹಿಸಿಬಿಡುತ್ತವೆ. ಅಡುಗೆಯಲ್ಲಿನ ಒಗ್ಗರಣೆ ಪ್ರ್ಯಾಂತ್ಯ ದೇಶದ ಮಿತಿಗೆ ಒಳಪಟ್ಟರೂ, ಮಾತಿನ ಒಗ್ಗರಣೆ ಜನ, ದೇಶ, ಕಾಲ, ಎಲ್ಲವನ್ನೂ ಮೀರಿದುದು. ಪುರಾಣೇತಿಹಾಸದ ಕಾಲದಿಂದಲೂ ಒಗ್ಗರಣೆ ಮಾತುಗಳು ಬದುಕಿನಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಾ ಬಂದಿವೆ. ಮನುಷ್ಯನ ಸ್ಥಾಯಿಭಾವವಾದ ಅಹಂನ ಕಾರಣದಿಂದ ಅನಾಹುತಗಳು ಆಗುತ್ತಲೇ ಬಂದಿದೆ.
ರಾಮಾಯಣ, ಮಹಾಭಾರತ ಯುದ್ಧಗಳ ಸಂದರ್ಭಗಳಲ್ಲಿಯಂತೂ ಈ ಒಗ್ಗರಣೆ ಡಬ್ಬಿಗಳು ಅಸಾಮಾನ್ಯ ಸದ್ದು ಮಾಡಿವೆ. ಕೈಕಯಿಯಲ್ಲಿ ಮಂಥರೆ ಹಾಕಿದ ಒಗ್ಗರಣೆ ಇಡೀ ರಾಮಾಯಣಕ್ಕೇ ನಾಂದಿಯಾಯಿತು. ಸೀತೆ ಮಾಯಾಮೃಗವನ್ನು ಬಯಸಿದಾಗ ಬೇಡವೆಂದ ರಾಮನಲ್ಲಿ ಆಡಿದ ಒಂದು ಮಾತು ಸೀತಾಪಹರಣಕ್ಕೆ ಕಾರಣವಾಯಿತು. ಬೇಕೆಂದೇ ಆಡಿದ ಅಗಸರವನ ಒಂದು ಕೊಂಕು ಮಾತಿಗೆ ತುಂಬು ಗರ್ಭಿಣಿ ಮಾತೆ ಸೀತಾದೇವಿ ಕಾಡಿನ ಪಾಲಾದಳು.
ಇನ್ನು ಮಹಾಭಾರತದಲ್ಲಂತೂ ಶ್ರೀಕೃಷ್ಣನು ಉದ್ದಕ್ಕೂ ಕೈಯಲ್ಲಿ ಒಗ್ಗರಣೆ ಹುಟ್ಟನ್ನು ಹಿಡಿದುಕೊಂಡೇ ಓಡಾಡಿದ್ದಾನೆ. ಆದರೆ ಇಲ್ಲಿಯ ಒಗ್ಗರಣೆ ಮಾತುಗಳು ಲೋಕದ ಸದ್ಗತಿಯ ಗುರಿಯಾಗಿತ್ತು ಅನ್ನುವುದು ಗಮನಿಸಬೇಕಾದದ್ದು. ದ್ರೌಪದಿಯ ಬಹುತೇಕ ನಿಲುವುಗಳು ಕೃಷ್ಣ ಹಾಕಿದ ಒಗ್ಗರಣೆಯ ಪರಿಮಳದಿಂದಲೇ ಉದ್ಭವಿಸಿದವುಗಳು ಎಂದರೆ ತಪ್ಪೇನಿಲ್ಲ.
ಕೌರವ ಪಾಂಡವ ಯುದ್ಧ ನಡೆಯಬಾರದು ಎನ್ನುವುದನ್ನು ತಡೆಯಲು ಬಳಕೆಯಾದ್ದು ಇದೇ ಒಗ್ಗರಣೆ ಡಬ್ಬಿ. ಮುಡಿ ಕಟ್ಟದ ದ್ರೌಪದಿಯ ಹೆರಳು, ಭೀಮನ ಶಪಥ, ಅರ್ಜುನನ ಆವೇಶ, ಕರ್ಣನ ಶಾಪ, ದುರ್ಯೋಧನನ ಪಾಪ … ಹೀಗೆ ಅನೇಕ ವಿಚಾರಗಳಿಗೆ ಕೃಷ್ಣ ಆಗಾಗ ನೆನಪಿಸಿ ನೆನಪಿಸಿ ಘಾಟು ಹೆಚ್ಚಿಸಿದ್ದೇ ಕಾರಣ.
ಕುರುಕ್ಷೇತ್ರದ ಯುದ್ಧದ ಸಮಯದಲ್ಲಿ ಕರ್ಣಾರ್ಜುನರ ಕಾಳಗ ನಡೆಯುವಾಗ, ಕರ್ಣನಿಗೆ ಮದ್ರ ಭೂಪತಿ ಶಲ್ಯನ ಸಾರಥ್ಯ. ಎದುರಾಳಿ ಅರ್ಜುನನ ರಥಕ್ಕೆ ಶ್ರೀಕೃಷ್ಣ ಸಾರಥಿ. ಶಲ್ಯನಿರುವ ವರೆಗೆ ಕರ್ಣನಿಗೆ ಮರಣವಿಲ್ಲ. ಸರ್ಪಾಸ್ತ್ರ ಪ್ರಯೋಗ ಸಂದರ್ಭದಲ್ಲಿ ಶ್ರೀಕೃಷ್ಣ ಶಲ್ಯನ ಕುರಿತು, “ಓಯ್ ಸಲ್ಯಪ್ನೋರೆ, ಈ ಸೂತಪುತ್ರ ಕರ್ಣನಿಗೆ ಮಹಾರಾಜ ಮದ್ರ ಭೂಪತಿಯ ಸಾರಥ್ಯವೇ? ಮಾಡಕ್ಕೆ ಬ್ಯಾರೆ ಕ್ಯಾಮೆ ಇಲ್ವಾ….? ಸಲ್ಯಾ ನಿಂಗೆ ವಯಸ್ಸಾಯ್ತು ಕಣ್ಲಾ” ಎಂದು ಥೇಟ್ ನಮ್ ಮಂಡ್ಯ ಸ್ಟೈಲಲ್ಲಿ ಕೂಗಿದಾಗ ಶಲ್ಯನಿಗೆ ನವರಂದ್ರಗಳಿಗೂ ಒಗ್ಗರಣೆಯ ಮೆಣಸಿನ ಘಾಟು ಹೊಕ್ಕಂತಾಗಿ, ಕರ್ಣನಲ್ಲಿ ತನ್ನ ಶಸ್ತ್ರ ಶಾಸ್ತ್ರದ ಹಿರಿಮೆಯನ್ನು ಸಾರಲು ಸರ್ಪಾಸ್ತ್ರದ ಗುರಿ ಬದಲಾಯಿಸಲು ಹೇಳುತ್ತಾನೆ. ಕರ್ಣ ಕೇಳದಿದ್ದಾಗ ಸಾರಥ್ಯ ತೊರೆದು ನಡೆಯುತ್ತಾನೆ. ಕರ್ಣನ ಅವಸಾನವಾಗುತ್ತದೆ. ಹೀಗೆ ಶ್ರೀಕೃಷ್ಣ ಮಹಾಭಾರತದುದ್ದಕ್ಕೂ ಮಾಡಿದ್ದು ಒಗ್ಗರಣೆ ಕೊಡುವ ಕೆಲಸವೇ. ಜರಾಸಂಧ ವಧೆ ಮತ್ತು ಭೀಮ ದುರ್ಯೋಧನ ಕಾಳಗಗಳಲ್ಲಿ ಕೇವಲ ಮಾತಿನಿಂದಲ್ಲದೇ ಕೈಸನ್ನೆ ಬಾಯಿಸನ್ನೆಗಳ ಮೂಲಕವೂ ಶತೃಧಮನ ಕಾರ್ಯದಲ್ಲಿ ಒಗ್ಗರಣೆ ಡಬ್ಬಿಯ ಉಪಯೋಗ ಮಾಡಿಕೊಳ್ಳುತ್ತಾನೆ. ಮಹಾವಿಷ್ಣುವಿನ ಒಗ್ಗರಣೆ ಡಬ್ಬಿಯಲ್ಲಿ ತರತರದ ಒಗ್ಗರಣೆಗಳಿವೆ. ತನ್ನ ಎಲ್ಲ ಅವತಾರಗಳಲ್ಲೂ ಅಗತ್ಯಕ್ಕೆ ತಕ್ಕಂತೆ ಒಗ್ಗರಣೆ ಹಾಕಿದ್ದಾನೆ.
ಬ್ರಹ್ಮನ ಮಾನಸಪುತ್ರ ನಮ್ಮ ನಾರದ ಮಹರ್ಷಿಗಳೇನು ಒಗ್ಗರಿಸುವ ಕಾರ್ಯದಲ್ಲಿ ಹಿಂದೆ ಬಿದ್ದವರೆಂದುಕೊಂಡಿರಾ? ಸ್ವತಃ ಒಗ್ಗರಣೆ ಕೊಡುವ ಸ್ವಭಾವದವರಲ್ಲದಿದ್ದರೂ ಇನ್ನೊಬ್ಬರು ಕೊಟ್ಟ ಒಗ್ಗರಣೆಯನ್ನು ಸೌಟು ಸಮೇತ ತೆಗೆದುಕೊಂಡು ಹೋಗಿ ಚೋಂಯ್ ಗುಟ್ಟಿಸಿ ಬರುವವರೇ. ಪೋಸ್ಟ್ ಮ್ಯಾನ್ ಕೆಲಸ ಇವರದ್ದು. ಮಗ ಇಂದ್ರಜಿತುವಿನ ಜನನದ ಸಂದರ್ಭದಲ್ಲಿ ರಾವಣ ತನ್ನ ಪೌರುಷದಿಂದ ನವಗ್ರಹಗಳನ್ನೆಲ್ಲ ಎತ್ತಿಕೊಂಡು ಹೋಗಿ ಎಲ್ಲರನ್ನೂ ಏಕಾದಶ ಸ್ಥಾನದಲ್ಲಿ ಇರಿಸುತ್ತಾನೆ. ಅದು ಉಚ್ಛ ಸ್ಥಾನ. ಆ ಸಮಯದಲ್ಲಿ ಹುಟ್ಟಿದವರು ಅಜೇಯರಾಗುತ್ತಾರೆಂಬುದು ಸ್ವತಃ ಜ್ಯೋತಿಷ ಬಲ್ಲವನಾದ ರಾವಣನಿಗೆ ಗೊತ್ತು. ಅವರ್ಯಾರೂ ತಪ್ಪಿಸಿಕೊಂಡು ಹೋಗದಂತೆ ಅವರನ್ನೆಲ್ಲ ಮುಖಅಡಿಯಾಗಿ ತನ್ನ ಪಾದದಿಂದ ಮೆಟ್ಟಿ ಹಿಡಿಯುತ್ತಾನೆ. ಬ್ರಹ್ಮಾಂಡವೆಲ್ಲಾ ಹಾಹಾಕಾರವೆದ್ದು ಚಡಪಡಿಸುತ್ತಿರುವಾಗ ಮಹಾವಿಷ್ಣು ರಾವಣನಲ್ಲಿಗೆ ಕಳಿಸಿದ್ದು ಇದೇ ನಾರದರನ್ನು. ರಾವಣನಲ್ಲಿಗೆ ಬಂದ ನಾರದರು, “ರಾವಣನಂತ ಪೌರುಷವಂತ ಎದೆ ಮೆಟ್ಟಿ ಹಿಡಿಯಬೇಕೇ ಹೊರತು ಬೆನ್ನನ್ನಲ್ಲ…” ಎಂದು ನಾರದರು ಸಣ್ಣಕ್ಕೆ ತಂಬೂರಿ ಮೀಟಿದರು ನೋಡಿ… ರಾವಣನಿಗೆ ಪಿತ್ಥ ನೆತ್ತಿಗೇರಿದಂತಾಗಿ ನವಗ್ರಹಗಳನ್ನು ಇದ್ದಂತೆ ಮುಖ ಮೇಲಾಗಿಸಿದ್ದೇ ತಡ… ಶನಿ ರಾವಣನ ಮೇಲೆ ತನ್ನ ವಕ್ರದೃಷ್ಟಿ ಪ್ರಯೋಗಿಸಿದ ಮತ್ತು ಹನ್ನೆರಡನೆಯ ಮನೆಗೆ ತನ್ನ ಕಾಲು ಚಾಚಿದ. ರಾವಣ ಕೋಪದಿಂದ ಶನಿಯ ಕಾಲು ಕತ್ತರಿಸುತ್ತಾನೆ. ಅಲ್ಲಿಂದ ರಾವಣನಿಗೆ ಶನಿದೆಸೆ ಶುರುವಾಗಿದ್ದು. ಹೀಗೆ ರಾವಣನ ದುರುದ್ದೇಶ ಸಾಧನೆಯಾಗದಂತೆ ನಾರದರು ಒಗ್ಗರಣೆ ಹಾಕಿದರು.
ಮನುಷ್ಯನ ಉನ್ನತಿಗಾಗಲೀ, ಅವನತಿಗಾಗಲೀ ಈ ತರದ ಎಷ್ಟೋ ಒಗ್ಗರಣೆ ಉಕ್ತಿಗಳೇ ತಿರುವು ತಂದಿರುವುದರಲ್ಲಿ ಅನುಮಾನವಿಲ್ಲ.
ಹೀಗೆ ಒಗ್ಗರಣೆ ಅನ್ನುವುದು ಕೇವಲ ಅಡುಗೆಗೆ ಮಾತ್ರ ಬಳಸುವ ವಸ್ತು ಅಲ್ಲದೇ ಅದೊಂದು ಅಗೋಚರ ಸ್ಥಿತಿಯೂ ಹೌದು ಎನ್ನುವುದು ಈ ನಿದರ್ಶನಗಳಿಂದ ನಮಗೆ ತಿಳಿಯುತ್ತದೆ. ಯಾವುದೋ ಒಳ ಉದ್ಧೇಶಗಳನ್ನು ಸಾಧಿಸಿಕೊಳ್ಳಲು ನಡೆಸುವ ಆಂತರಿಕ ಕ್ರಿಯೆ ಇದು. ಯಾರು ಯಾವಾಗ ಯಾರಿಗೆ ಎಲ್ಲಿ ಎಷ್ಟು ಒಗ್ಗರಣೆ ಕೊಡಬೇಕೆಂದು ಅರಿತು ನಡೆದಾಗ, ಒಗ್ಗರಿಸುವವನ ಗುರಿ ಒಳ್ಳೆಯದಿದ್ದಾಗ ಪ್ರಪಂಚಕ್ಕೆ ಒಳಿತಾಗುತ್ತದೆ. ಇಲ್ಲದಿದ್ದಲ್ಲಿ ಕಮಟು ವಾಸನೆಯಿಂದ, ಘಾಟಿನಿಂದ ಕೂಡಿದ್ದಾದರೆ ಸರ್ವನಾಶ ಖಂಡಿತ.