ಕನ್ನಡದ ಬುದ್ಧನೂ ಕನ್ನಡತಿ ಗೌತಮಿಯೂ ಸಾವಿಲ್ಲದ ಮನೆಯ ಸಾಸಿವೆಯ ಕಥೆಯ ಪಾತ್ರಧಾರಿಗಳಾಗಿ, ನಮ್ಮ ಕಾರಂತಜ್ಜನ ಲೇಖನಿಯಿಂದ ಕಿಸಾಗೌತಮಿ ಎಂಬ ಸುಂದರ ಗೀತನಾಟಕವಾಗಿ ಮೂಡಿಬಂದದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇಲ್ಲಿ ನನಗೊಂದು ಸಂಶಯವಿತ್ತು. ಅದೇನೆಂದರೆ, ಬುದ್ಧ ಯಾಕೆ ಸಾವಿಲ್ಲದ ಮನೆಯಿಂದ ಸಾಸಿವೆಯನ್ನೇ ತರಲು ಹೇಳಿದ? ಮೆಂತೆಯನ್ನೋ ಜೀರಿಗೆಯನ್ನೋ ಕೊತ್ತಂಬರಿಯನ್ನೋ ಹೇಳಲಿಲ್ಲ ಯಾಕೆ? ಸಾವು ಹಾಗೂ ಸಾಸಿವೆ ಪ್ರಾಸ ಹೊಂದುತ್ತದೆ ಎಂದೇ? ಮಧ್ಯದ ‘ಸಿ’ ತೆಗೆದರೆ ಸಾಸಿವೆ ‘ಸಾವೆ’ ಆಗುತ್ತದೆಯಲ್ಲವೇ? ಆದರೆ ಸಾವಿಗೂ ಎಳ್ಳಿಗೂ ಸಂಬಂಧವಿರುವುದಲ್ಲವೇ? ಎಳ್ಳನ್ನೇ ತರಲು ಹೇಳಬಹುದಿತ್ತಲ್ಲ, ಕಪ್ಪು ಎಳ್ಳನ್ನು ಬಿಟ್ಟು ಕಪ್ಪು ಸಾಸಿವೆಯೇ ಯಾಕೆ? ಹಾಗೆ ನೋಡಿದರೆ ಬುದ್ಧ ಮಾತಾಡುತ್ತಿದ್ದುದು ಪಾಳಿ ಭಾಷೆಯಲ್ಲಿ, ಪಾಳಿಯಲ್ಲಿ ಸಾಸಿವೆಗೆ ಏನನ್ನುತ್ತಾರೋ ಗೊತ್ತಿಲ್ಲ. ಈ ಗೌತಮಿಯೋ ಶ್ರಾವಸ್ತಿಯವಳು, ಅವಳಾಡುತ್ತಿದ್ದ ಭಾಷೆ? ಅದೂ ಗೊತ್ತಿಲ್ಲ. ಸಂಗತಿಗಳು ಹೀಗೆಲ್ಲ ಇರುವಾಗ ಈ ಪ್ರಾಸಗೀಸಗಳ ಗೊಡವೆಗೆ ಹೋಗದಿರುವುದೇ ಒಳ್ಳೆಯದು ಅನಿಸಿತ್ತು. ಆದರೆ ಈ ಸಂಶಯವೊಂದು ಉಳಿದೇಬಿಟ್ಟಿತ್ತು. ಇದಕ್ಕೆ ಉತ್ತರವನ್ನು ಬುದ್ಧ ಭಗವಾನರಲ್ಲೇ ಕೇಳಬೇಕಾಗುತ್ತದೇನೋ ಅಂದುಕೊಂಡಿದ್ದೆ.
ಆದರೆ ಮುಂದೆ ಕೆಲವು ಘಟನೆಗಳಿಂದ ಈ ಸಾಸಿವೆಯ ಸಂಶಯ ನಿವಾರಣೆಯಾಗಿತ್ತು.
ಒಮ್ಮೆ ಹೀಗೇ ನಾನು ದಿನನಿತ್ಯ ಓಡಾಡುವ ಬಸ್ಸೊಂದು ನಳನ ರಥದಷ್ಟೇ ವೇಗವಾಗಿ ಹಳ್ಳಿಯ ಕೆಟ್ಟ ರಸ್ತೆಯಲ್ಲಿ ಓಡುತ್ತಿತ್ತು. ಒಂದು ತಿರುವಿನಲ್ಲಿ ನಮ್ಮ ಚಾಲಕ ಬಸ್ಸನ್ನು ತಿರುಗಿಸಿದ ಅತ್ಯದ್ಭುತ ವೇಗಕ್ಕೆ, ಮೆಟ್ಟಿಲ ಬದಿಯ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ತನ್ನ ಕಾಲ ಬುಡದಲ್ಲಿಟ್ಟುಕೊಂಡಿದ್ದ ದಿನಸಿಯ ಚೀಲ ಅಡ್ಡಬಿದ್ದು, ಅದರೊಳಗಿದ್ದ ಒಂದು ಸಣ್ಣ ಕಟ್ಟು ಬಸ್ಸಿನ ಮೆಟ್ಟಿಲ ಮೇಲಿಂದ ಕಪ್ಪೆಯಂತೆ ಕುಪ್ಪಳಿಸಿ ಹೊರ ಹಾರಿಹೋಯಿತು. ‘ಅಯ್ಯೋ ನನ್ನ ಸಾಸಿವೆ ನನ್ನ ಸಾಸಿವೆ….’ ಎಂದು ಅವನು ಕೂಗಿಕೊಳ್ಳುತ್ತಿದ್ದಂತೆಯೇ ‘ಸಾಸಿವೆ ಅಲ್ಲವೇ ದೊಡ್ಡದಲ್ಲ ಬಿಡಿ…’ ನಗುತ್ತಾ ಅಂದ ಕಂಡಕ್ಟರನ ಮಾತಿಗೆ ಸಹಪ್ರಯಾಣಿಕರೆಲ್ಲರು ದನಿಗೂಡಿಸಿದ್ದರಿಂದ ಋತುಪರ್ಣನ ಶಲ್ಯದಂತೆ ಹೊರಬಿದ್ದ ಸಾಸಿವೆಕಾಳಿನ ಕಟ್ಟು ಯೋಜನ ಗಾವುದ ಹಿಂದೆ ಉಳಿದುಹೋಗಿತ್ತು. ‘ಇವತ್ತೊಂದು ದಿನ ಅಡುಗೆಗೆ ಒಗ್ಗರಣೆ ಹಾಕಬೇಡಿ…’ ಎಂದು ಕೆಲವರು ತಮಾಶೆ ಮಾಡಿದರೆ… ‘ಸಾಸಿವೆ ಬದಲು ಜೀರಿಗೆ ಸಿಡಿಸಿ ಒಗ್ಗರಣೆ ಹಾಕಿ…’ ಎಂದು ಕೆಲವು ಮಹಿಳಾಮಣಿಗಳು ಸಲಹಿಸಿದರು. ‘ಒಂದು ದಿನ ಒಗ್ಗರಣೆ ಇಲ್ಲದಿದ್ದರೆ ಊರೇನು ಮುಳುಗಿಹೋಗುವುದಿಲ್ಲ… ಆದರೂ ಒಗ್ಗರಣೆ ಇಲ್ಲದ ಊಟ ಊಟವೇ? ಸೂತಕದ ಊಟದ ಹಾಗಿರುತ್ತದೆ’ ಎಂದರೊಬ್ಬರು. ‘ಒಗ್ಗರಣೆ ಇಲ್ಲದ ಅಡುಗೆ ಅಡುಗೆಯೇ ಅಲ್ಲ ಅದು ಮಠದ ಸ್ವಾಮಿಗಳ ಸಪ್ಪೆ ಅಡುಗೆಯಂತಿರುತ್ತದೆ…’ ಅಜ್ಜಿಯ ಅನುಭವದ ನುಡಿ. ‘ಅಯ್ಯೋ… ಬೇರೆ ಏನನ್ನಾದರು ಬಿಡಬಹುದು… ಒಗ್ಗರಣೆ ಬಿಡಲು ಸಾಧ್ಯವೇ…? ಪಕ್ಕದ ಮನೆಯವರಿಗೆಲ್ಲ ನಾವು ಅಡುಗೆ ಮಾಡಿದ್ದೇವೆ ಅಂತಾದರೂ ಗೊತ್ತಾಗೋದು ಬೇಡವೇ..?’ ಮಾತೆಯೊಬ್ಬರ ಮಾತು. ‘ಒಗ್ಗರಣೆಯನ್ನು ಬಿಟ್ಟು ನೋಡಿದರೂ ನಮ್ಮ ಉಪ್ಪಿನಕಾಯಿಗಳನ್ನೆಲ್ಲ ವರ್ಷಾನುಗಟ್ಟಲೆ ರಕ್ಷಿಸುವ ಒಬ್ಬ ಒಳ್ಳೆಯ ರಕ್ಷಕನಲ್ಲವೇ ಇವನು…? ಈ ಕಾರಣಕ್ಕಾದರೂ ಅವನು ನಮ್ಮಲ್ಲಿರಬೇಡವೇ’ ಮಿದು ಹೃದಯಿ ವೃದ್ಧರೊಬ್ಬರ ಮೃದುವಭಿಪ್ರಾಯ. ‘ಹೌದು ಇದೊಂದು ಒಳ್ಳೆಯ ಪ್ರಿಸರ್ವೇಟಿವ್…’ ವಿದ್ಯಾರ್ಥಿನಿಯೊಬ್ಬಳ ಪುಸ್ತಕ ಜ್ಞಾನ. ‘ಸಣ್ಣ ಮಕ್ಕಳಿರುವಲ್ಲಿ ತಲೆ ತೊಳಸಿ, ದೃಷ್ಟಿ ನಿವಾಳಿಸಿ ಬೆಂಕಿಗೆ ಹಾಕಲಾದರು ಉಪ್ಪಿನೊಂದಿಗೆ ಈ ಸಾಸಿವೆ ಬೇಕೇ ಬೇಕು…’ ಎಂದರೊಬ್ಬ ಹಿರಿಯರು. ಹೀಗೆ ನಾನಾ ವಿಧದಭಿಪ್ರಾಯಗಳು ಬಸ್ಸಿನ ಸೀಟುಗಳ ನಡುವಿನಿಂದ ಮೂಡಿಬಂದವು. ಅಷ್ಟೇ ಅಲ್ಲದೆ ಒಗ್ಗರಣೆಯ ಬಗ್ಗೆ, ಸಾಸಿವೆಯ ಬಗ್ಗೆ ತರಾವರಿ ಚರ್ಚೆಗಳೂ ನಡೆದವು. ‘ಸಾಸಿವೆ ಅಲ್ಲವೇ ಹೋಗಲಿಬಿಡಿ…’ ಎಂದು ಹೇಳಿದವರ್ಯಾರೂ ಅದರ ಮಹತ್ತನ್ನು ನಿರಾಕರಿಸಲಿಲ್ಲ. ಕಿಸಾಗೌತಮಿ ಕಥೆಯಲ್ಲಿನ ಸಂಶಯ ಒಂದು ಮಟ್ಟಿಗೆ ನಿವಾರಣೆಯಾಯಿತು.
ಒಂದು ಮಟಮಟ ಮಧ್ಯಾಹ್ನದ ಏರುಬಿಸಿಲಿನಲ್ಲಿ ವೇಣಿ ಅಜ್ಜಿ ಏದುಸಿರುಬಿಡುತ್ತಾ ಬಂದಳು. ಅಜ್ಜಿಗೆ ಕಾಫಿ ಅಂದರೆ ಪ್ರಾಣ. ಬಂದವರೇ ತಮ್ಮ ಟ್ರಂಕನ್ನು ಮೂಲೆಯಲ್ಲಿರಿಸಿ, ‘ಒಂದು ಲೋಟ ಮಜ್ಜಿಗೆ ಕೊಡೇ ಅಮ್ಮಣ್ಣಿ… ದೊಂಡೆ ಒಣಗಿ ಪ್ರಾಣ ಹೋಗ್ತಿದೆ… ಹಾಗೆ ಮಜ್ಜಿಗೆಗೆ ಜೊಂಯ್ ಅಂತ ಒಂದು ಒಗ್ಗರಣೆಯನ್ನೂ ಹಾಕು…’ ಎಂದಳು. ಕಾಫಿ ಕೇಳುತ್ತಾಳೆ ಅಂದುಕೊಂಡು ಕಾಫಿ ಪಾತ್ರೆಯನ್ನು ಒಲೆಯ ಮೇಲಿರಿಸಿದ್ದ ನಾನು ಅದನ್ನು ತೆಗೆದು ಒಗ್ಗರಣೆ ಸೌಟನ್ನು ಹಿಡಿದುಕೊಂಡು ಹೊರಟೆ. ಪಟಪಟ ಸಾಸಿವೆ ಸಿಡಿಯುತ್ತಿದ್ದಂತೆಯೇ ಅಜ್ಜಿಯ ಸುದ್ದಿಯೂ ಸಿಡಿಯತೊಡಗಿತು. ಅವಳ ಭಜನೆಯ ಸ್ನೇಹಿತೆ ಭಾಗಿ ಮೊಮ್ಮಗಳಿಗೆ, ತನ್ನ ಹಳೆಮನೆಯ ಅಟ್ಟದಲ್ಲಿದ್ದ (ತನ್ನ ತವರು ಮನೆಯ) ಹಿಡಿಯುಳ್ಳ ಮರದ ಒಗ್ಗರಣೆ ಮರಿಗೆಯನ್ನು (ಮೇಲಿನಿಂದ ಮುಚ್ಚಳವನ್ನು ಅತ್ತಿತ್ತ ಜರುಗಿಸುವ ವಿಶಿಷ್ಟ ತಂತ್ರಜ್ಞಾನವುಳ್ಳದ್ದು) ಪ್ರೀತಿಯಿಂದ ಕೊಟ್ಟದ್ದು… ಆಕೆ ವಿದೇಶದಿಂದ ತನ್ನ ಸ್ನೇಹಿತೆ ತಂದ ಒಗ್ಗರಣೆ ಡಬ್ಬಿ ಬಂದ ಮೇಲೆ ಭಾಗಿಯಜ್ಜಿಯ ಉಡುಗೊರೆಯಾದ ಹೊಗೆಹಿಡಿದ ಈ ಮರದ ಮರಿಗೆಯನ್ನು ಪುನಃ ಅಟ್ಟಕ್ಕೆ ಎಸೆದದ್ದು… ಭಾಗಿಯಜ್ಜಿಗೆ ಬೇಜಾರಾಗಿ…. ಎಷ್ಟಾದರೂ ತವರುಮನೆಯದಲ್ಲವೇ… ಅದನ್ನು ಹಿಡಿದುಕೊಂಡು ತನ್ನ ಮಗಳಿಗೆ ಕೊಡಲೆಂದು ಬಸ್ಸು ಹತ್ತಿದ್ದು….. ಬಸ್ಸಿನಲ್ಲಿ ಯಾರೋ ಮ್ಯೂಸಿಯಮ್ಮಿನವರಂತೆ, ನಮಗೆ ಕೊಡ್ತೀರಾ?…. ಅಂತ ಆಕೆಯನ್ನು ಪೀಡಿಸಿದ್ದು…. ಇದನ್ನೆಲ್ಲ ಹೇಳಿ ಕೊನೆಗೆ, ‘ನೀನು ಏನೇ ಹೇಳು ಕಲಿಗಾಲ… ಅಧರ್ಮಕ್ಕೆ ನಾಕುಪಾದ… ನಾವು ಅಜ್ಜಿಯರು ಈಗಿನವರಿಗೆ ಈ ಅಟ್ಟಕ್ಕೆಸೆಯುವ ಹಳೆಯ ವಸ್ತುಗಳಂತೆ….’ ಎಂಬ ಒಗ್ಗರಣೆಯೊಂದಿಗೆ ವೇಣೀಅಜ್ಜಿಯ ಮಾತು ಸಮಾಪ್ತವಾದಾಗ, ನನ್ನ ಒಗ್ಗರಣೆಯೂ ಚಟಪಟ ನಿಲ್ಲಿಸಿತ್ತು. ‘ಸಾಸಿವೆ ಸರಿಯಾಗಿ ಸಿಡಿಯದಿದ್ದರೆ ಕಹಿ ಆಗುತ್ತೆ… ಚೆನ್ನಾಗಿ ಸಿಡಿಸಿದ್ದೀಯ ತಾನೇ? ಮೊನ್ನೆ ಒಂದು ಮದುವೆಯಲ್ಲಿ ಒಗ್ಗರಣೆ ಕರಟಿ ಕಪ್ಪಗಾಗಿ ಊಟ ರುಚಿಸದೆ, ಎಲ್ಲವೂ ರಾಶಿ ರಾಶಿ ಉಳಿದಿತ್ತಂತೆ… ಅದನ್ನ ಮನೆಯ ಹತ್ತಿರವೇ ವಿಲೇವಾರಿ ಮಾಡಿದ್ದರಿಂದ ಮರುದಿನ ವಾಸನೆಯಲ್ಲಿ ಮೂಗುಬಿಡಲು ಆಗದೆ…. ಇನ್ನೊಂದು ಲೋಟ ಕೊಡು’ ಎಂದು ಮತ್ತೊಂದು ಲೋಟ ಮಜ್ಜಿಗೆ ಬಗ್ಗಿಸಿಕೊಂಡು ಕುಡಿದು, ‘ಈಗೀಗ ನಮ್ಮವರ ಮನೆಗಳಲ್ಲಿ ಮಜ್ಜಿಗೆ ಕಡೆಯೋದೇ ನಿಂತೋಗಿದೆ…. ಅದೇನೋ ಪ್ಯಾಕೇಟಿನಲ್ಲಿ ಮೊಸರು ಸಿಗುತ್ತದಂತೆ… ನೀನೂ ಅದನ್ನೇ ತರ್ತೀಯಾ ಅಂದುಕೊಂಡಿದ್ದೆ… ರವೆ ಇಡ್ಲಿಗೆ ಒಗ್ಗರಣೆ ಹಾಕಿದಂತೆ ಕೆಲವರ ಮನೆಯಲ್ಲಿ ದೋಸೆಗೂ ಒಗ್ಗರಣೆ ಹಾಕ್ತಾರೆ ಗೊತ್ತಾ ನಿನ್ಗೆ? ಬಾಣಲೆ ದೋಸೆ ಮಾಡುವಾಗ ಬಾಣಲೆಯಲ್ಲಿ ಹಿಟ್ಟು ಎರೆಯುವ ಮೊದಲು ಸಾಸಿವೆ ಚಟಪಟ ಸಿಡಿಸಿ ಮತ್ತೆ ಎರೆಯುವುದು… ದೋಸೆಯ ಮಧ್ಯೆ ಈ ಸಾಸಿವೆ ಸಿಕ್ಕುವಾಗ ಪಾಯಸದಲ್ಲಿ ಗೋಡಂಬಿ ಸಿಕ್ಕಿದಷ್ಟೇ ಆನಂದವಾಗುತ್ತೆ… ನೀನೂ ಒಮ್ಮೆ ಮಾಡಿ ನೋಡು….’ ನನ್ನನ್ನು ಬಾಯಿ ತೆರೆಯಲೂ ಬಿಡದಂತೆ ಅಜ್ಜಿಯ ಮಾತಿನ ಸಾಸಿವೆ ಚಟಪಟನೆ ಸಿಡಿಯುತ್ತಿತ್ತು. ‘ಅದಿರ್ಲಿ ಅಡಿಗೆ ಏನು ಮಾಡಿದ್ದೀಯಾ…?’ ಅಜ್ಜಿಯೇ ಎಲ್ಲಾ ಪಾತ್ರೆಗಳ ಮುಚ್ಚಳ ತೆಗೆದು ಬಗ್ಗಿ ನೋಡಿ ‘ಓ ಸೌತೆಕಾಯಿ ಹಸಿಸಾಸುವೆ… ಇದಕ್ಕೊಂದು ಚೆಂದದ ಬೇಸಪ್ಪು ಉದ್ದಿನಬೇಳೆ ಒಗ್ಗರಣೆ ಕೊಟ್ಟು ಪರಿಮಳ ಹಾರಿಹೋಗದಂತೆ ಗಟ್ಟಿಯಾಗಿ ಮುಚ್ಚಿಬಿಡೇ ಅಮ್ಮಣ್ಣಿ… ಉಂಡು ಹಾಗೆ ಅಡ್ಡಾಗಿಬಿಡ್ತೀನಿ… ಏನೋ ಸಂಕಟ ಹೊಟ್ಟೆಯಲ್ಲಿ. ಸ.. ನಿನ್ನೆ ಶೀಲ ಹಲಸಿನಕಾಯಿ ದೋಸೆ ಮಾಡಿದ್ದಳು ಅಪರೂಪ ನೋಡು ಸ್ವಲ್ಪ ಹೆಚ್ಚೇ ತಿಂದೆ… ಹಿತ್ತಲಲ್ಲಿ ಶುಂಠಿ ಇದೆಯಾ ನೋಡೇಬಿಡ್ತೇನೆ….’ ಎಂದು ಅಜ್ಜಿ ನನ್ನ ಉತ್ತರಕ್ಕೂ ಕಾಯದೆ ಮಾತಾಡುತ್ತಲೇ ಹಿತ್ತಲಬಾಗಿಲಿನೆಡೆ ಹೋದಳು. ಸೌತೆ ಸಾಸುವೆಗೆ ಸಾಸಿವೆ ಉದ್ದಿನಬೇಳೆಯ ಒಗ್ಗರಣೆಯೂ ಆಯಿತು. ಅಜ್ಜಿಯ ಊಟವೂ ಸಂಪನ್ನವಾಗಿ ಸ್ವಲ್ಪ ಹೊತ್ತಿನಲ್ಲೇ ಪೊಗದಸ್ತಾದ ಗೊರಕೆಯೂ ತೇಲಿಬರತೊಡಗಿತು. ಈ ಅಜ್ಜಿ ಎಚ್ಚರವಿದ್ದರೂ ಸದ್ದೇ ಮಲಗಿದ್ದರೂ ಸದ್ದೇ… ಒಟ್ಟಾರೆ ಜೀವನವನ್ನು ಇಷ್ಟು ಸದ್ದುಗದ್ದಲದೊಂದಿಗೆ ಗಡದ್ದಾಗಿ ಅನುಭವಿಸಲು ಈಗಿನವರಿಗೆ ಸಾಧ್ಯವೇ…? ಅನಿಸಿತು. ಅಂತೂ ಇವೆಲ್ಲದರ ನಡುವೆ ಕಿಸಾಗೌತಮಿಯ ಸಾಸಿವೆಯ ಸಂಶಯವಂತೂ ಸಂಪೂರ್ಣವಾಗಿ ನಿವಾರಣೆಯಾಗಿಹೋಗಿತ್ತು.
ಅವಳು ಅರಳು ಹುರಿದಂತೆ ಮಾತಾಡುತ್ತಾಳೆ ಎಂದು ಹೇಳಿದಾಗ ಅದರಲ್ಲೇನೋ ದೋಷ ಇದ್ದ ಹಾಗೆ ನನಗೆ ಅನ್ನಿಸಿದ್ದುಂಟು…. ಯಾಕೆಂದರೆ ಅರಳು ಅರಳಿ ಸಿಡಿದಾಗ ಒಗ್ಗರಣೆ ಸಿಡಿದಷ್ಟು ಮೋಹಕ ಶಬ್ಧವಾಗುವುದಿಲ್ಲ. ಅದರ ಬದಲಿಗೆ ಸಾಸಿವೆ ಸಿಡಿದಂತೆ ಮಾತಾಡುತ್ತಾಳೆ ಎಂಬುದು ಹೆಚ್ಚು ಒಪ್ಪುವಂಥದ್ದು. ಎಂಥಾ ಆಧುನಿಕ ಚಿಮಣಿಗಳು ಇದ್ದರೂ, ಈ ಒಗ್ಗರಣೆಯ ಪರಿಮಳ ಮನೆಯನ್ನೆಲ್ಲ ಎಷ್ಟು ಹದವಾಗಿ ಆವರಿಸಿಕೊಂಡುಬಿಡುತ್ತದೆ ಎಂಬುದೇ ಒಂದು ಆಶ್ಚರ್ಯ. ಮನುಷ್ಯರ ಇರುವಿಕೆಗೆ, ಅವರ ಅಸ್ಥಿತ್ವಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಎಷ್ಟೇ ಪರಿಚಾರಕರಿರಲಿ ಅಡುಗೆ ತಂಡದ ಮುಖ್ಯಸ್ಥನೇ ಕೊನೆಗೆ ಒಗ್ಗರಣೆಯ ಕೈಂಕರ್ಯ ಕೈಗೊಳ್ಳುವುದು. ಎಲ್ಲ ಖಾದ್ಯಗಳಿಗೂ ಒಟ್ಟಿಗೆ ಒಗ್ಗರಣೆ ತಯಾರಿ ಮಾಡುವ ಅಡುಗೆಯಜ್ಞದ ಪೂರ್ಣಾಹುತಿಯ ಈ ಹಕ್ಕನ್ನು ಅವನು ಯಾರಿಗೂ ಬಿಟ್ಟುಕೊಡುವುದಿಲ್ಲ. ಏನೇ ಆದರೂ ಅಡುಗೆಗೊಂದು ಪೂರ್ಣವಿರಾಮ ಘೋಷಣೆಯಾಗುವುದು ಈ ಸಾಸಿವೆಕಾಳಿನ ಚುಕ್ಕಿಗಳಿಂದಲೇ. ಒಗ್ಗರಣೆಗಿರುವ ಮರ್ಯಾದೆ ಅದು.
ಇಷ್ಟು ಮಹತ್ವವಿರುವ ಈ ಒಗ್ಗರಣೆ ಯಾವಾಗ ಯಾಕಾಗಿ ಪ್ರಾರಂಭವಾಗಿರಬಹುದು…? ಮಂಗರಸನ ಸೂಪಶಾಸ್ತ್ರದಲ್ಲೇನಾದರು ಇದರ ಉಲ್ಲೇಖ ಇದೆಯೇ? ಯಾರಾದರು ಬಲ್ಲವರನ್ನು ಕೇಳಬೇಕು ಅಂದುಕೊಂಡು ಸೋಫಾಕ್ಕೆ ತಲೆಯಾನಿಸಿ ಕುಳಿತಿರುವಾಗ, ಯಾವಾಗಲೋ ನೋಡಿದ ಯಕ್ಷಗಾನ ಪ್ರದರ್ಶನವೊಂದು ನೆನಪಿಗೆ ಬಂತು. ಭೋಜನಪ್ರಿಯ ಬ್ರಾಹ್ಮಣನೊಬ್ಬ ಅರಮನೆಯ ಊಟವನ್ನು ಹೊಗಳುತ್ತಾ ‘ಪಾಯಸಕ್ಕೊಂದು ಒಗ್ಗರಣೆ ಹಾಕಿದ್ದರು ಮಾರಾಯ್ರೆ! ಅದರ ಪರಿಮಳ ಊಟದ ಒಂದು ಘಂಟೆಯ ನಂತರವೂ ನನ್ನ ಕೈಯಲ್ಲಿತ್ತು’ ಎಂದು ಹೇಳುತ್ತಾನೆ. ‘ಪಾಯಸಕ್ಕೆ ಒಗ್ಗರಣೆಯೇ? ಇವನಿಗೆಲ್ಲೋ ತಲೆಕೆಟ್ಟಿರಬೇಕು….’ ಎಂದು ಅಲ್ಲಿದ್ದವರೆಲ್ಲ ನಗುತ್ತಿದ್ದಂತೆಯೇ…. ಅವನು ಹೇಳುತ್ತಿದ್ದುದು ಪಾಯಸಕ್ಕೆ ತುಪ್ಪದಲ್ಲಿ ಹುರಿದು ಹಾಕಿದ್ದ ದ್ರಾಕ್ಷಿ ಗೋಡಂಬಿ ಒಗ್ಗರಣೆಯ ಬಗ್ಗೆ ಎಂಬುದು ಅಲ್ಲಿ ಊಟಮಾಡಿ ಬಂದ ಇನ್ನೊಬ್ಬನಿಂದ ತಿಳಿಯುತ್ತದೆ. ಒಗ್ಗರಣೆಯನ್ನು ಹಗುರಾಗಿ ಪರಿಗಣಿಸುವವರು ಪಂಜೆಯವರ ‘ವೈದ್ಯರ ಒಗ್ಗರಣೆ’ ಕಥೆಯನ್ನು ಓದಲೇಬೇಕು. ಅದರಲ್ಲಿ ವೈದ್ಯರೊಬ್ಬರನ್ನು ಬಲವಂತವಾಗಿ ಅಡುಗೆಗೆ ನಿಲ್ಲಿಸಿದ ಕಾರಣ ಬೇಸತ್ತ ಅವರು ಒಗ್ಗರಣೆಗೆ ಇಂಗಿನ ಬದಲು ಮಣಿಮಂತ ಚೂರ್ಣವನ್ನು ಹಾಕಿ ಅವಾಂತರ ಸೃಷ್ಟಿಸಿದ ಸ್ವಾರಸ್ಯಪೂರ್ಣ ವಿವರಗಳಿವೆ.
ಆರ್ಯಾವರ್ತ ಹಾಗೂ ದಕ್ಷಿಣಾವರ್ತದ ಅಡುಗೆಯನ್ನು ಬೇರ್ಪಡಿಸುವುದು ಈ ಒಗ್ಗರಣೆಯೇ ಎಂದು ಯಾರೋ ಹೇಳಿದ್ದು ನೆನಪಾಯಿತು. ಆದರೆ ಅಲ್ಲಿಯೂ ಒಗ್ಗರಣೆ ಇದೆ, ಸಾಸಿವೆಯ ಬದಲಿಗೆ ಜೀರಿಗೆ ಉಪಯೋಗಿಸುತ್ತಾರಷ್ಟೇ…., ‘ತಡ್ಕಾ’ ಎಂಬುದು ಒಗ್ಗರಣೆಗೂ, ಒಗ್ಗರಣೆ ಹಾಕುವ ಸೌಟಿಗೂ ಅವರು ಉಪಯೋಗಿಸುವ ಹೆಸರು. (ಸಾಸಿವೆಗಂತೂ ‘ಸರಸೋನ್’ ಎಂಬ ಸುಂದರ ಹೆಸರಿದೆ). ಕಾಡಿನಲ್ಲಿ ತನ್ನಷ್ಟಕ್ಕೆ ಬೆಳೆಯುವ ಅಣಬೆಯಂತಹ ಶಿಲೀಂಧ್ರ ಜಾತಿಯ ಖಾದ್ಯಗಳಿಗೆ ಕಬ್ಬಿಣದ ಒಗ್ಗರಣೆ ಕಡ್ಡಾಯವಾಗಿ ಕೊಡಬೇಕು ಎಂದು ನಮ್ಮ ಕೆಲಸದ ಸಿದ್ಧಮ್ಮ ಹೇಳುತ್ತಿದ್ದಳು. ಅದರಲ್ಲಿರುವ ವಿಷ ಪದಾರ್ಥಗಳು ನಾಶವಾಗಲು ಕಬ್ಬಿಣವನ್ನು ಕೆಂಪಗೆ ಕಾಯಿಸಿ ಜೋಂಯ್ ಎಂದು ಅದ್ದುವುದೇ ಕಬ್ಬಿಣದ ಒಗ್ಗರಣೆ. ಅನ್ನಕ್ಕೆ ಒಗ್ಗರಣೆ ಕೊಟ್ಟರೆ ಚಿತ್ರಾನ್ನ, ಅವಲಕ್ಕಿ ಒಗ್ಗರಿಸಿದರೆ ಬೆರೆಸಿದ ಅವಲಕ್ಕಿ, ಹುರಿಯಕ್ಕಿ ಒಗ್ಗರಿಸಿದರೆ ಒಗ್ಗರಣೆ ಮಂಡಕ್ಕಿ, ತರಿಯಕ್ಕಿ ಒಗ್ಗರಿಸಿದರೆ ನುಚ್ಚಿನುಪ್ಪಿಟ್ಟು…. ಇಷ್ಟೇ ಅಲ್ಲ… ಇದರೊಂದಿಗೆ ಎಷ್ಟೊಂದು ಬಗೆಯ ಒಗ್ಗರಣೆಗಳು…. ನೀರುಳ್ಳಿ ಒಗ್ಗರಣೆ, ಬೆಳ್ಳುಳ್ಳಿ ಒಗ್ಗರಣೆ, ಶಾಖಾಹಾರಿಗಳ ಇಂಗಿನೊಗ್ಗರಣೆ (ಸೌತ್ ಇಂಡಿಯನ್ ಸೀಸನಿಂಗ್) ಗಿಡಮೂಲಿಕೆಗಳ ಹರ್ಬಲ್ ಒಗ್ಗರಣೆ (ಇಟಾಲಿಯನ್ ಸೀಸನಿಂಗ್) ಘಂಯೆನ್ನುವ ತುಪ್ಪದೊಗ್ಗರಣೆ…. ಹಾ ತುಪ್ಪದೊಗ್ಗರಣೆ ಅಂದಾಗ ಒಂದು ವಿಷಯ ನೆನಪಾಯಿತು. ಹಿಂದೆ ರಾಜರ ಕಾಲದಲ್ಲಿ ತಯಾರಿಸುತ್ತಿದ್ದ ಕೆಲವು ಮಾಂಸದ ಅಡುಗೆಗೆ ತುಪ್ಪದ ಹೊಗೆಯ ಒಗ್ಗರಣೆ ಕೊಡುತ್ತಿದ್ದರಂತೆ. ಕೆಂಡಕ್ಕೆ ಒಂದು ಚಮಚ ತುಪ್ಪ ಹಾಕಿ ಅದನ್ನು ಮಾಂಸದಡುಗೆಯ ಪಾತ್ರೆಯ ಒಳಗಿಟ್ಟು ಗಟ್ಟಿಯಾಗಿ ಮುಚ್ಚಿ ಅದರಿಂದ ಏಳುವ ಹೊಗೆಯು ಖಾದ್ಯವನ್ನು ಆವರಿಸಿಕೊಂಡು ಪರಿಮಳದೊಂದಿಗೆ ರುಚಿಯನ್ನು ಹೆಚ್ಚಿಸುತ್ತಿತ್ತಂತೆ. ಈಗ ದೊಡ್ಡ ಸ್ಟಾರ್ ಹೋಟ್ಲಿನ ಚೆಫ್ಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಹೊಗೆಯ ಒಗ್ಗರಣೆಗೆ ತುಪ್ಪದ ಜೊತೆಗೆ ದಾಲ್ಚಿನಿ, ಏಲಕ್ಕಿ, ಲವಂಗ ಮುಂತಾದ ಪರಿಮಳದ ಪದಾರ್ಥಗಳನ್ನು ಬೆರೆಸಿ ಅಡುಗೆಯ ರುಚಿ ಹೆಚ್ಚಿಸಲು ಇನ್ನಿಲ್ಲದಂತೆ ಪ್ರಯತ್ನಿಸಿ, ‘ಯೂನಿಕ್ ಆರೋಮ ಮೀನ್ಸ್ ಯೂನಿಕ್ ಟೇಸ್ಟ್…’ ಎಂದು ಬಾಯಿ ಚಪ್ಪರಿಸುವುದನ್ನು ಫುಡ್ ಚ್ಯಾನಲ್ಗಳಲ್ಲಿ ನೋಡಿಯೇ ಇರುತ್ತೇವೆ. ಇಂಗ್ಲೆಂಡಿನ ಅಡುಗೆಯಲ್ಲಿ ಒಗ್ಗರಣೆಯಿದೆಯೋ ಇಲ್ಲವೋ ಗೊತ್ತಿಲ್ಲ… ಆದರೆ ಸೀಸನಿಂಗ್ ಎಂಬುದು ಒಗ್ಗರಣೆಗೆ ಆಂಗ್ಲರು ಬಳಸುವ ಹೆಸರು. ಈ ಇಂಗ್ಲಿಷಿನ ಸೀಸನಿಂಗಿಗೆ ನಾಮಪದ ಇಲ್ಲವೇ ಎಂಬುದು ನನ್ನ ಇನ್ನೊಂದು ಸಂಶಯ. ಸೀಸನಿಂಗ್ ಅನ್ನುವುದೇ ನಾಮಪದ ಎಂದರೆ ಅದನ್ನು ನಾನು ಒಪ್ಪಲಾರೆ, ಭಾಷಾಶಾಸ್ತ್ರಿಗಳು ಈ ಕಡೆ ಗಮನಹರಿಸಬೇಕಾಗಿ ವಿನಂತಿ. (ಭಾಷಾತಜ್ಞರಾದ ನನ್ನ ಯಜಮಾನರ ಉತ್ತರದಿಂದ ನನಗೆ ಸಮಾಧಾನವಾಗಿಲ್ಲ.) ಹಾಗೆಯೇ ‘ಒಗ್ಗರಣೆ’ ಎನ್ನುವುದು ‘ಸೀಕರಣೆ’ಯಂತೆ ಅಚ್ಛ ಕನ್ನಡ ಶಬ್ದ ಎಂಬುದು ನನ್ನ ಅಂಬೋಣ. ಎಲ್ಲದಕ್ಕೂ ಒಂದೊಂದು ದಿನ ಮೀಸಲಿರುವಂತೆ, ಖಾಲಿ ಬಿದ್ದಿರುವ ದಿನವೊಂದನ್ನು ನೋಡಿ ಅದನ್ನು ‘ವಲ್ರ್ಡ್ ಸೀಸನಿಂಗ್ ಡೇ’ಯಾಗಿ ಆಚರಿಸುವಂತೆ ವಿಶ್ವಸಂಸ್ಥೆ ವಿಶ್ವಕ್ಕೆ ಕರೆಕೊಡಬಹುದು. ಎಲ್ಲರೂ ತಮ್ಮ ಮನೆಯ ಖಾದ್ಯಗಳಿಗೆ ಬಗೆಬಗೆಯ ಒಗ್ಗರಣೆಗಳನ್ನು ಹಾಕುವುದು ಮಾತ್ರವಲ್ಲದೆ, ಒಗ್ಗರಣೆ ಸ್ಪರ್ಧೆಗಳನ್ನೂ, ಒಗ್ಗರಣೆ ಭಾಷಣ, ಹಾಡು ಹಸೆಗಳನ್ನೂ ಹಮ್ಮಿಕೊಂಡು ಭರಪೂರವಾಗಿ ಆ ದಿನವನ್ನು ಆಚರಿಸಿಕೊಳ್ಳಬಹುದು. ಮಂತ್ರಿ ಮಹೋದಯರನ್ನು ಕರೆಸಿ ಒಂದು ಭರ್ಜರಿ ಒಗ್ಗರಣೆಯ ಮೂಲಕ ಒಗ್ಗರಣೆ ಸೌಟು, ಒಗ್ಗರಣೆ ಡಬ್ಬಿಗಳ ಪ್ರದರ್ಶನದ ಉದ್ಘಾಟನೆಯನ್ನು ಮಾಡಿಸಿ, ಅವರ ಮಾತಿನೊಗ್ಗರಣೆಯನ್ನೂ ಸವಿಯುವ ಒಂದು ಅವಕಾಶವಿದು. ಏನಂತೀರಿ…?
ಮಲ್ಲಿಗೆಯ ಸುಕುಮಾರ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಹೆಸರು ಕೇಳದವರು ಯಾರಿದ್ದಾರೆ? ಆದರೆ ಅವರು ತಮ್ಮ ಸುಕುಮಾರತನವನ್ನು ಬದಿಗಿರಿಸಿ ಬರೆದ ‘ತೆರೆದ ಬಾಗಿಲು’ ಎಂಬ ಕವಿತೆಯಲ್ಲಿ ಬರುವ ಸಾಲುಗಳು ಇವು ‘…ಹಸಿವು ಹೊಟ್ಟೆಯ ತುಂಬ. ಆಗ ನೆರೆಮನೆಯಿಂದ ಘಮಘಮ ಇಂಗಿನೊಗ್ಗರಣೆ; ಗಾಳಿಯ ಕರುಣೆ. ಹೋಟಲಿನ ಅನ್ನಕ್ಕೆ ವೇಳೆಯೂ ಮೀರಿತ್ತು…’ ತೆರೆದ ಬಾಗಿಲಿನಿಂದ ಎಲ್ಲವು ಒಳ ಬರುವಂತೆ ಇಂಗಿನೊಗ್ಗರಣೆಯ ಪರಿಮಳವೂ ಗಾಳಿಯ ಕರುಣೆಯಿಂದ, ಹಸಿದ ಸಮಯಕ್ಕೆ ಸರಿಯಾಗಿ ಕವಿಯ ಮನೆಯೊಳಗೆ ನುಗ್ಗಿತ್ತು. ಏನು ಪ್ರಯೋಜನ? ಸಾವಿನ ಸುದ್ದಿಯಂತೆ ನಿರರ್ಥಕವಾಗಿ, (ಕವಿಯ ಹೊಟ್ಟೆಯನ್ನು ತುಂಬಿಸದೆ) ಬಂದ ಹಾಗೆಯೇ ತೆರೆದ ಬಾಗಿಲಿನಿಂದ ಹೊರಟುಹೋಯಿತು. ಏನೇ ಆಗಲಿ ಯಃಕಶ್ಚಿತ್ ಒಗ್ಗರಣೆಯೊಂದು ಈ ರೀತಿ ನಿರರ್ಥಕತೆಯ
ಭಾವವನ್ನು ತುಂಬಿಕೊಡುವುದೇ ಒಂದು ವಿಚಿತ್ರ. ಇಲ್ಲಿ ಯಾವುದೂ ಸಣ್ಣದಲ್ಲ.
ಕೊನೆಗೊಂದು ಒಗ್ಗರಣೆ:
ಅಜ್ಜಿಯ ಒಗ್ಗರಣೆ ಸದ್ದಿಗೆ ಬೆಚ್ಚಿದ
ವಿದೇಶೀ ಮೊಮ್ಮಗ ಕೇಳಿದ,
‘ವಾಟ್ ಈಸ್ ದಟ್ ಗ್ರ್ಯಾನೀ?’
‘ಸೀ ಮೈ ಸನ್ ದಿಸ್ ಈಸ್ ಸೀಸನ್ ವಿದ್ ಇಂಗ್’
– ಎಂದಿತು ಅಜ್ಜಿಯ ಬೊಚ್ಚುದನಿ!