ನಳ ಬಿಡುವವನಿಗೆ ಹೊತ್ತುಗೊತ್ತು ಅಂತೂ ಇರಲೇ ಇಲ್ಲ. ಸರತಿ ಪ್ರಕಾರ ಅವನು ಬೇರೆಬೇರೆ ಓಣಿಗಳಿಗೆ ನೀರು ಬಿಡುವವನು. ಒಮ್ಮೊಮ್ಮೆ ಮಧ್ಯರಾತ್ರಿ ನೀರು ಬಿಟ್ಟರೆ, ಇನ್ನೊಮ್ಮೆ ಬೆಳಗಿನ ಜಾವ ನಾಲ್ಕು ಗಂಟೆಗೆ ಬಿಡುತ್ತಿದ್ದ. ಇವನೇನು ನಿದ್ದೆಯೇ ಮಾಡುವುದಿಲ್ಲವೇನೊ ಎನಿಸುತ್ತಿತ್ತು. ಪ್ರತಿ ಮನೆಯಲ್ಲೂ ಇದ್ದಿದ್ದ ಅಂಡರ್ಗ್ರೌಂಡ್ ಟ್ಯಾಂಕಿಗೆ ನಳದ ನೀರು ಜುಳುಜುಳು ಎಂದು ಬೀಳುವ ಶಬ್ದ ಕೇಳಿ ಯಾರಾದರೊಬ್ಬರು ಗಟ್ಟಿಯಾಗಿ “ಅಕ್ಕೋರ ನಳಾ ಬಂದಾವು ನೋಡ್ರಿ” ಎಂದರೆ ಸಾಕು ಎಂಥ ಕುಂಭಕರ್ಣನಂಥವರೂ ದಢಕ್ಕನೆ ಎದ್ದು ಲಗುಬಗೆಯಿಂದ ನೀರು ತುಂಬತೊಡಗುತ್ತಿದ್ದರು.

ಅಕ್ಕೋರಿ ನಳಾ ಬಂದಾವ ನೋಡ್ರೀ…” ಎಂದು ಯಾರದಾದರೂ ಸ್ವರ ಕೇಳಿದರೆ ಸಾಕು ಪ್ರೇಮಿಯೊಬ್ಬನಿಗೆ ಅವನು ಬಹುಕಾಲದಿಂದ ಪ್ರೀತಿಸುತ್ತಿರುವ ಹುಡುಗಿ ಅವನ ಪ್ರೀತಿಗೆ ಅಸ್ತು ಎಂದಾಗಿನ ಖುಷಿಗಿಂತಲೂ ಹೆಚ್ಚು ಖುಷಿಯಾಗುತ್ತಿತ್ತು ನಮಗೆ. ಈ ಪ್ರಪಂಚದಲ್ಲಿ ಅದಕ್ಕಿಂತ ಸಂತಸದ ಸುದ್ದಿ ನಮ್ಮೂರಿನವರಿಗೆ ಬೇರೊಂದಿರಲಿಲ್ಲ!
ಬಯಲುಸೀಮೆಯ ಬರಗಾಲದೂರು ಎಂದೇ ಪ್ರಸಿದ್ಧವಾದ ಊರು ನನ್ನ ತವರೂರು ವಿಜಯಪುರ (ಆಗ ಬಿಜಾಪುರ). ಹೇಳಲಿಕ್ಕೆ ಐದು ನದಿಗಳು ಹರಿದು ಇದಕ್ಕೆ ಪಂಚನದಿಗಳ ಬೀಡು, ದಕ್ಷಿಣದ ಪಂಜಾಬ್ ಎಂದೆಲ್ಲ ಬಿರುದುಗಳಿದ್ದರೂ ನೀರಿಗೆ ಮಾತ್ರ ತತ್ವಾರ! ಯಾರಾದರೂ ಪ್ರವಾಸಿಗರು ಊರು ನೋಡಲು ಬಂದರೆ ಬೀದಿ ಬೀದಿಗಳಲ್ಲಿ ರೈಲು ಬೋಗಿಗಳಂತೆ, ಚಿಕ್ಕಮಕ್ಕಳು ತಮ್ಮ ಬಣ್ಣಬಣ್ಣದ ಆಟಿಕೆಗಳನ್ನು ಅಂದವಾಗಿ ಸಾಲುಸಾಲಾಗಿ ಜೋಡಿಸಿಟ್ಟಂತೆ, ಉದ್ದಕ್ಕೆ ಜೋಡಿಸಿಟ್ಟ ಕೆಂಪು, ಹಳದಿ, ಹಸಿರು, ಕಂದು – ಹೀಗೆ ಬಣ್ಣಬಣ್ಣದ ಪ್ಲಾಸ್ಟಿಕ್ ಕೊಡಪಾನಗಳು ಬೋರ್ವೆಲ್ ಎದುರಿಗೊ, ನಳದ ಎದುರಿಗೊ ಇಟ್ಟಿದ್ದನ್ನು ನೋಡಿ ಬೆರಗಾಗುವುದು ಸಹಜವೆಂಬಂತೆ ಇತ್ತು ಅಲ್ಲಿನ ಪರಿಸ್ಥಿತಿ!
ಬಾಡಿಗೆ ಮನೆಯಲ್ಲಿದ್ದ ನಾವು ಹೊಸ ಮನೆ ಕಟ್ಟಿಕೊಂಡು ಹೊಸತಾಗಿ ಅಭಿವೃದ್ಧಿಯಾಗುತ್ತಿದ್ದ ಕಾಲೋನಿಗೆ ಶಿಫ್ಟ್ ಆದಾಗ ಆ ಜಾಗ ಮನುಷ್ಯರ ವಾಸವಿಲ್ಲದೆ ಬಿಕೋ ಎನ್ನುತ್ತಿತ್ತು! ಕೆಲವರು ಮನೆಯ ಫೌಂಡೇಶನ್ ಮಾತ್ರ ಹಾಕಿ ಹೋಗಿದ್ದರು. ನಾವು ಮೊದಲಿದ್ದ ಬಾಡಿಗೆಮನೆಯಲ್ಲಿ ಕನಿಷ್ಠ ವಾರಕ್ಕೊಮ್ಮೆಯಾದರೂ ನಳದ ನೀರು ಬರುತ್ತಿತ್ತು. ಆದರೆ ಇಲ್ಲಿ ಜನವಸತಿ ಇಲ್ಲದಿದ್ದರಿಂದ ಮುನ್ಸಿಪಾಲಿಟಿ ನಳದ ಕನೆಕ್ಷನ್ ಇರಲಿಲ್ಲ. ನೀರು ಬೇಕಾದರೆ ದೊಡ್ಡದಾದ ಪಾತಾಳದಷ್ಟು ಆಳವಾದ ಒಂದು ಮೆಟ್ಟಿಲು ಬಾವಿಗೆ ಇಳಿಯಬೇಕಾಗುತ್ತಿತ್ತು. ಬೇಸಿಗೆಕಾಲದಲ್ಲಿ ನೀರಿಲ್ಲದೆ ಆ ಬಾವಿಯ ತಳ ಕಾಣಿಸುತ್ತಿತ್ತು. ಆದರೆ ಬಾವಿಯ ಕಲ್ಲು ಗೋಡೆಗಳ ಸಂದಿಯಲ್ಲಿ ಎರಡು ಕಡೆ ಸಣ್ಣಕ್ಕೆ ಜರಿಯಂತೆ ನೀರ ಸೆಲೆ ಹರಿದು ಬಾವಿ ನೀರು ಬರಿದಾಗದಂತೆ, ನೀರಿಲ್ಲದೆ ನಾವುಗಳು ಜೀವ ಕಳೆದುಕೊಳ್ಳದಂತೆ ನಮ್ಮನ್ನು ಕಾಪಾಡುತ್ತಿತ್ತು. ಆದರೆ ಆ ನೀರಿಗೂ ಸುತ್ತಮುತ್ತಲಿನ ಸ್ಲಂ ಏರಿಯಾದ ಹೆಂಗಸರು ಕೊಡಪಾನ ಹಿಡಿದುಕೊಂಡು ನೀರು ತುಂಬಲು ಬರುತ್ತಿದ್ದರು. ಅಷ್ಟೇ ಅಲ್ಲದೆ ತಮ್ಮ ಮನೆಯ ಹತ್ತಾರು ಮಕ್ಕಳ ಕೈಯಲ್ಲಿ ಒಂದೊಂದು ಕೊಡಪಾನ ಕೊಟ್ಟು ನೀರು ಹೊರಲು ಕರೆತರುತ್ತಿದ್ದರು. ಒಂದೊಂದು ಮನೆಯಲ್ಲಿ ಕನಿಷ್ಟವೆಂದರೂ ಆರೇಳು ಮಕ್ಕಳ ಹಿಂಡು! ಸೇರು, ಪಾವು, ಚಟಾಕು ಎಂದು ಕೇವಲ ಒಂದೆರಡು ವರ್ಷಗಳ ಅಂತರದಲ್ಲಿ ಹುಟ್ಟಿದವರು. ನೀರು ಹೊರಲು ಹುಟ್ಟುತ್ತಲೇ ಟ್ರೈನಿಂಗ್ ಪಡೆದಂತೆ ತಮ್ಮ ಮುಂದೆ ಕ್ಯೂ ನಿಂತವರನ್ನು ಹೇಗಾದರೂ ಮಾಡಿ ದೂಡಿ ಜಗಳಾಡಿಯಾದರೂ ನೀರು ತುಂಬಿಸಿಕೊಂಡು ಹೋಗಲು ಸಮರ್ಥರಾಗಿದ್ದರು. ಆ ಪಿಳ್ಳೆಗಳೆಲ್ಲ ಒಂದೊಂದು ಪ್ಲಾಸ್ಟಿಕ್ ಕೊಡಪಾನ ಹಿಡಿದುಕೊಂಡು ಬಾವಿಯ ಒಂದೊಂದು ಮೆಟ್ಟಿಲಲ್ಲೂ ಎಷ್ಟು ಹೊತ್ತಿಗೆ ನೋಡಿದರೂ ಸರತಿ ಸಾಲಿನಲ್ಲಿ ನಿಂತಿರುತ್ತಿದ್ದರು. ನಾವು ಕ್ಯೂ ನಿಂತಿದ್ದರೂ ನಮ್ಮನ್ನು ತಳ್ಳಿ ಮುಂದೆ ಹೋಗಿ ನೀರು ಗಿಟ್ಟಿಸಿಕೊಳ್ಳುವುದರಲ್ಲಿ ಅವರು ನಿಸ್ಸೀಮರು. ಒಮ್ಮೆಯಂತೂ ಒಬ್ಬಾಕೆ ನನ್ನೊಡನೆ ನೀರಿಗಾಗಿ ಜಗಳವಾಡಿ ನನ್ನ ಕೈಯಿನ ಪ್ಲಾಸ್ಟಿಕ್ ಕೊಡವನ್ನೇ ಒಡೆದುಹಾಕಿದ್ದಳು. ಆ ಜಗಳದಿಂದ ಹೆದರಿ ನನಗೆ ಜ್ವರವೇ ಬಂದಿತ್ತು. ಸುಧಾರಿಸಿಕೊಳ್ಳಲು ಮೂರು ದಿನ ಬೇಕಾಯಿತು!

ಜಗಳಕ್ಕೆ ಹೆದರಿದ ನನ್ನಪ್ಪ-ಅಮ್ಮ ಹಗಲಿನಲ್ಲಿ ನೀರು ತುಂಬುವ ಗೋಜಿಗೆ ಹೋಗದೆ ರಾತ್ರಿ ವೇಳೆ ಮೂರು-ನಾಲ್ಕು ಗಂಟೆ ಹೊತ್ತಿಗೆಲ್ಲ ಮನೆಯಲ್ಲಿ ಮಲಗಿದ್ದ ನಾವು ಮೂವರು ಮಕ್ಕಳನ್ನು ಹಾಗೆಯೆ ಬಿಟ್ಟು ಹೊರಗಿನಿಂದ ಚಿಲಕ ಹಾಕಿಯೋ ಅಥವಾ ಬೀಗ ಹಾಕಿಯೋ ನೀರು ತರಲು ಹೋಗುತ್ತಿದ್ದರು. ಆ ಬಾವಿಯ ಸೆಲೆಯ ಮೂತಿಗೆ ಅಪ್ಪ ಕೊಡಪಾನ ಹಿಡಿದುಕೊಂಡು ನೀರು ತುಂಬಿಸಿಕೊಟ್ಟರೆ ನನ್ನಮ್ಮ ಆ ಕೊಡವನ್ನು ಹೊತ್ತು ಮನೆಗೆ ತರುತ್ತಿದ್ದಳು. ಸುತ್ತಮುತ್ತಲಿನ ಯಾವ ಏರಿಯಾದಲ್ಲಾದರೂ ನಲ್ಲಿ ನೀರು ಬಿಟ್ಟಿದ್ದಾರೆಂದರೆ ಸಾಕು ನಾವು ಅಕ್ಕ-ತಮ್ಮ, ಅಮ್ಮ ಕೊಡ ಹಿಡಿದುಕೊಂಡು ನೀರು ತರಲು ಹೋಗುತ್ತಿದ್ದೆವು. ಅಪ್ಪ ಮನೆಯಲ್ಲಿದ್ದಾಗ ಸೈಕಲ್ನ ಹಿಂಬದಿಯ ಸ್ಟ್ಯಾಂಡ್ನಲ್ಲಿ ಒಂದು ಹಗ್ಗಕ್ಕೆ ಎರಡು ಬದಿ ಕುಣಿಕೆ ಮಾಡಿ ಅದಕ್ಕೆ ತುಂಬಿದ ಕೊಡ ಸಿಕ್ಕಿಸಿ ಅದರ ಮೇಲೊಂದು ಕೊಡ ಇಟ್ಟುಕೊಂಡು ಮೂರು ಕಿಲೋಮೀಟರ್ ದೂರದಿಂದ ಸಿಹಿನೀರು ತರುತ್ತಿದ್ದರು.
ಒಂದು ಕಾಲದಲ್ಲಿ ಹೊಲವಾಗಿದ್ದ ನಮ್ಮ ಮನೆಯಿದ್ದ ಕಾಲೊನಿಯ ಜಾಗವನ್ನು ಅದರ ಮಾಲೀಕರು ೬೦x೪೦, ೩೦x೪೦, ೨೦x೬೦ ಎಂದು ಮೂರು ಬಗೆಯ ನೂರಾರು ಖಾಲಿ ಸೈಟುಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿದ್ದರು. ೨೦ x ೪೦ ಸೈಟುಗಳನ್ನು ರೈಲುಡಬ್ಬಿಗಳಂತೆ ಚಿಕ್ಕ ಚಿಕ್ಕ ಮನೆಗಳಾಗಿ ಕಟ್ಟಿಸಿ ಕಡಮೆ ರೇಟಿಗೆ ಮಾರಾಟಕ್ಕಿಟ್ಟಿದ್ದರು. ಅನೇಕರು ಆ ಮನೆಗಳನ್ನು ಖರೀದಿ ಮಾಡಿದ್ದರೂ, ಇನ್ನೊಂದಷ್ಟು ಜನ ಅಲ್ಲಿ ಸೈಟ್ ಕೊಂಡಿದ್ದರೂ ನರಮನುಷ್ಯರ ವಾಸವಿಲ್ಲದ ಕಾರಣ ಯಾರೂ ಮನೆ ಕಟ್ಟಲು ಧೈರ್ಯ ತೋರದೆ ಎಲ್ಲ ಸೈಟುಗಳೂ ಖಾಲಿ ಬಿದ್ದಿದ್ದವು. ಒಬ್ಬ ವಾಚ್ಮೆನ್ ಮಾತ್ರ ಹಳೆಯದಾದ ಒಂದು ಮನೆಯಲ್ಲಿ ತನ್ನ ಸಂಸಾರದೊಂದಿಗೆ ಇದ್ದಿದ್ದ. ಆಗಾಗ ತಮ್ಮ ಜಾಗವನ್ನು ಯಾರಾದರೂ ಬಂದು ಅತಿಕ್ರಮಿಸಿದ್ದಾರೇನೊ ಎಂದು ನೋಡಿಕೊಂಡು ಹೋಗಲು ಕೆಲವರು ಬರುತ್ತಿದ್ದರು. ಹಾಗೆ ಬಂದವರು ನಮ್ಮ ಮನೆಗೆ ಬಂದು ಒಂದು ಕಪ್ ಚಹಾ ಕುಡಿದು “ಯಪ್ಪಾ, ಇಲ್ಲಿ ಹ್ಯಾಂಗದೀರಿ ಅಕ್ಕೋರ, ನಿಮಗ ಅಂಜಿಕಿ ಆಗೂದಿಲ್ಲೇನ್ರೀ?” ಎಂದು ನಮ್ಮಮ್ಮನ ಧೈರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದರು.
ಒಂದೆರಡು ವರ್ಷಗಳಲ್ಲಿ ನಿಧಾನಕ್ಕೆ ಒಂದೊಂದೇ ಮನೆಗಳ ಕಟ್ಟಡ ನಿರ್ಮಾಣ ಶುರುವಾಯಿತು. ಒಂದೊಮ್ಮೆ ಬಾವಿಯಲ್ಲಿ ಸ್ವಲ್ಪವಾದರೂ ನೀರು ತುಂಬಿದ್ದರೆ ಸಾಕು ಕಾಲೊನಿಯ ವಾಚ್ಮೆನ್ ಬಾವಿ ನೀರನ್ನು ಪಂಪ್ಸೆಟ್ ಮೂಲಕ ದುಡ್ಡಿಗಾಗಿ ಮನೆ ಕಟ್ಟುವವರಿಗೆ ಪೂರೈಸತೊಡಗಿದ. ನೀರಿಲ್ಲದೂರಿನ ಬಾವಿ ಅದೆಷ್ಟು ಮನೆ ಕಟ್ಟಲು ನೀರು ಪೂರೈಸಲು ಸಾಧ್ಯ? ಹೀಗಾಗಿ ಹೊಸತಾಗಿ ಮನೆ ಕಟ್ಟುವವರು ನೀರು ಸಾಲದೇ ಬೋರ್ವೆಲ್ ತೋಡಿಸುತ್ತಿದ್ದರು.
ಬೋರ್ವೆಲ್ ಕೊರೆಯುವ ಶಬ್ದ ಕಿವಿಗೆ ಕರ್ಕಶವಾದರೂ ನಮಗೆ ಒಳಗೊಳಗೆ ಏನೋ ಖುಷಿ! ಇನ್ನು ನೀರಿಲ್ಲದಾಗ ನೀರು ಕೇಳಲು ಅವರ ಮನೆಗೆ ಹೋಗಬಹುದಲ್ಲ ಎಂದು, ಒಳಗೊಳಗೆ ಸಮಾಧಾನ. ದೇವರೇ ಅವರ ಬೋರಲ್ಲಿ ಬೇಗ ನೀರು ಬರಲಿ ಎಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆವು. ಆಗ ಬೋರಿರುವರೇ ನಮ್ಮ ಬಂಧುಗಳು ಎನ್ನುವ ಹಾಗಾಗಿತ್ತು! ಬೋರ್ವೆಲ್ ಇರುವ ಮನೆಯವರನ್ನು ನಮ್ಮಮ್ಮ ಮೆಲ್ಲನೆ ಗೆಳೆತನ ಮಾಡಿಕೊಂಡು ಆಗಾಗ ತಾನು ಮಾಡಿದ ಬಿಸಿಬಿಸಿ ಗೋಳಿಬಜಿಯನ್ನೊ ಅಥವಾ ಉಬ್ಬಿದ ಪೂರಿಯ ಜೊತೆಗೆ ಸಾಗುವನ್ನೊ ಒಂದು ಪಾತ್ರೆಯಲ್ಲಿ ಹಾಕಿಕೊಟ್ಟು ಅವರ ಸ್ನೇಹಗಿಟ್ಟಿಸಿ ಮೆಲ್ಲನೆ “ಎರಡು ಕೊಡ ನೀರು ಕೊಡ್ತೀರೇನ್ರಿ?” ಎಂದು ಕೇಳುತ್ತಿದ್ದಳು. ಅವರೂ ಇವಳು ಕೊಟ್ಟ ತಿಂಡಿಯ ಋಣಕ್ಕೋ ಅಥವಾ ಸಂಜೆಯ ವೇಳೆ ತಮ್ಮೊಡನೆ ಮಾತನಾಡಲು ಒಂದು ಜೊತೆ ಬೇಕಲ್ಲ ಎಂದೋ ಇವಳ ಸ್ನೇಹವನ್ನು ಕಳೆದುಕೊಳ್ಳಲಾರದೆ “ಆಯ್ತು ರ್ರಿ. ಅದ್ರಾಗೇನೈತಿ” ಎಂದು ಹೇಳಿ ನಾವು ಕೊಡಪಾನ ಹಿಡಿದು ಹೋದಾಗಲೆಲ್ಲ ಧಾರಾಳವಾಗಿ ನೀರು ಕೊಡುತ್ತಿದ್ದರು. ಆದರೆ ಆ ನೀರು ಹಾಲು ಅಥವಾ ಚಹಾಕ್ಕೆ ಹಾಕಿದರೆ ಹಾಲು, ಚಹಾ ಒಡೆದು ಹೋಗುತ್ತಿದ್ದವು. ಹೀಗಾಗಿ ಮತ್ತೆ ಪುನಃ ನಾವು ಸುತ್ತಮುತ್ತಲಿನ ಗಲ್ಲಿಗಳಲ್ಲಿ ಮುನಿಸಿಪಾಲಿಟಿ ನಳದ ನೀರು ಬಿಟ್ಟಾಗ ಹೋಗಿ ಹನುಮಂತನ ಬಾಲದಂತಹ ಉದ್ದನೆಯ ಪಾಳಿಯಲ್ಲಿ ನಿಂತು ನೀರು ತರುವುದೇನೂ ತಪ್ಪಲಿಲ್ಲ.
ನಿಧಾನಕ್ಕೆ ನಮ್ಮ ಕಾಲೊನಿಯೂ ಬೆಳೆಯಿತು. ಹಾಗೆಯೇ ಮುನಿಸಿಪಾಲಿಟಿ ನೀರಿನ ಸೌಲಭ್ಯವೂ ಸಿಕ್ಕಿತು. ಆದರೂ ನೀರು ಮಾತ್ರ ವಾರಕ್ಕೊಮ್ಮೆ ಅಥವಾ ಹತ್ತು ದಿನಕ್ಕೊಮ್ಮೆ ಬರುತ್ತಿತ್ತು. ನೀರು ಪೂರೈಕೆಯಾಗುತ್ತಿದ್ದುದು ಭೂತನಾಳ ಕೆರೆಯಿಂದ. ಕೆರೆಯಲ್ಲಿ ನೀರು ತುಂಬಿರುವಾಗ ನೀರು ನಾಲ್ಕು ದಿನಕ್ಕೊಮ್ಮೆ ಬಂದರೆ ನೀರಿಲ್ಲದಾಗ ಹದಿನೈದು ದಿನವಾದರೂ ಆಯಿತು! ಹೀಗಾಗಿ ನಮ್ಮ ಮನೆಗೆ ಬರುವ ನೆಂಟರು ತಾವು ಬರುವ ಮುನ್ನ ಲ್ಯಾಂಡ್ಫೋನಿಗೆ ಫೋನ್ ಮಾಡಿ “ನಳಾ ಈಗ ಎಷ್ಟು ದಿನಕ್ಕೊಮ್ಮೆ ಬರ್ತಾವು? ನಾವು ಬರೂಣ ಬ್ಯಾಡ?” ಎಂದು ವಿಚಾರಿಸಿಯೇ ಬರುತ್ತಿದ್ದರು.
ಆದರೂ ನಮ್ಮ ಮನೆಗೆ ನೆಂಟರು ಬಂದರೆ ನಮಗೂ ಸಂತೋಷವೇ! ಒಂದಷ್ಟು ಮಾತು, ಹರಟೆ, ವಿಶೇಷ ಅಡುಗೆ ಮಾಡಿ ಹಾಕಿ ಉಪಚರಿಸಿ ಅವರ ಕೈಯಲ್ಲೂ ಎರಡು ಕೊಡ ಕೊಟ್ಟು ನಳದ ನೀರಿಗೋ, ಮುನ್ಸಿಪಾಲಿಟಿಯವರು ಹೊಸತಾಗಿ ನಿರ್ಮಿಸಿದ ಬೋರ್ವೆಲ್ ಎದುರಿಗೋ ಕ್ಯೂನಲ್ಲಿ ನಿಂತು ನೀರು ತರಲು ನಾವು ಯಾವ ಮುಲಾಜೂ ಇಲ್ಲದೆ ನೆಂಟರನ್ನೂ ಕಳಿಸುತ್ತಿದ್ದೆವು.
ಈ ಸರ್ಕಾರಿ ಬೋರ್ವೆಲ್ ದೆಸೆಯಿಂದ ನಮ್ಮ ಏರಿಯಾದಲ್ಲಿ ಕಳ್ಳರ ಭಯವೊಂದು ಇರಲಿಲ್ಲ. ಯಾಕೆ ಅಂತೀರಾ? ಹಗಲಿರುಳೆನ್ನದೆ ಯಾರಾದರೊಬ್ಬರು ಬೋರ್ವೆಲ್ನ ಹ್ಯಾಂಡ್ಪಂಪ್ ಹೊಡೆದು ನೀರು ತೆಗೆದುಕೊಂಡು ಹೋಗುತ್ತಲೇ ಇದ್ದರು. ಸುತ್ತಮುತ್ತಲಿನ ಏರಿಯಾದವರು ತಮ್ಮ ಓಣಿಯಲ್ಲಿ ನೀರು ಬರದಿದ್ದಾಗಲೆಲ್ಲ ಬೋರ್ವೆಲ್ ನೀರಿಗಾಗಿ ಕ್ಯೂ ನಿಂತೇ ಇರುತ್ತಿದ್ದರು. ಕೆಲವು ರಿಕ್ಷಾದವರು ತಮ್ಮ ಮನೆಗಾಗಿ ಎಂಟು ಹತ್ತು ಕೊಡ ನೀರು ತುಂಬಿಸಿಕೊಂಡು ತಮ್ಮ ರಿಕ್ಷಾದಲ್ಲಿ ತೆಗೆದುಕೊಂಡು ಹೋಗುತ್ತಿದ್ದರೆ ಡೀಸೆಲ್ಗಿಂತ ನೀರು ದುಬಾರಿ ಎನಿಸುತ್ತಿತ್ತು.
ಅಂತೂ ಇಂತೂ ಎಷ್ಟೋ ವರ್ಷಗಳ ತಪಸ್ಸಿನ ಫಲವೆಂಬಂತೆ ಮನೆಮನೆಗೆ ನಳದ ನೀರಿನ ಸೌಲಭ್ಯ ಸಿಕ್ಕಿತು. ಆದರೂ ವಾರಕ್ಕೊಮ್ಮೆ ಬರುವ ನೀರನ್ನು ಸಂಗ್ರಹಿಸಿಡಲು ಒಂದಷ್ಟು ಸಾಧನಗಳು ಬೇಕೇ ಬೇಕಲ್ಲ!
ಹೀಗಾಗಿ ಟೆರೇಸ್ ಮೇಲೆ ಒಂದು ಸಾವಿರ ಲೀಟರಿನ ನೀರಿನ ಟ್ಯಾಂಕ್ ಜೊತೆಗೆ ನಲ್ಲಿ ಪಾತಾಳದಷ್ಟು ಆಳದಲ್ಲಿ ಇದ್ದಿದ್ದರಿಂದ ಅಲ್ಲೊಂದು ಸಾಧಾರಣ ಎರಡು ಸಾವಿರ ಲೀಟರಿನಷ್ಟು ನೀರು ಹಿಡಿಯುವ ಸಿಮೆಂಟಿನ ಟ್ಯಾಂಕ್ ಇವೆರಡು ನಮ್ಮ ಆಸ್ತಿ!
ಇನ್ನು ನಳ ಬಿಡುವವನಿಗೆ ಹೊತ್ತು ಗೊತ್ತು ಅಂತೂ ಇರಲೇ ಇಲ್ಲ. ಸರತಿ ಪ್ರಕಾರ ಅವನು ಬೇರೆ ಬೇರೆ ಓಣಿಗಳಿಗೆ ನೀರು ಬಿಡುವವನು. ಒಮ್ಮೊಮ್ಮೆ ಮಧ್ಯರಾತ್ರಿ ವೇಳೆ ನೀರು ಬಿಟ್ಟರೆ, ಇನ್ನೊಮ್ಮೆ ಬೆಳಗಿನ ಜಾವ ನಾಲ್ಕು ಗಂಟೆಗೆ ಬಿಡುತ್ತಿದ್ದ. ಇವನೇನು ನಿದ್ದೆಯೇ ಮಾಡುವುದಿಲ್ಲವೇನೊ ಎನಿಸುತ್ತಿತ್ತು. ಪ್ರತಿ ಮನೆಯಲ್ಲೂ ಇದ್ದಿದ್ದ ಅಂಡರ್ಗ್ರೌಂಡ್ ಟ್ಯಾಂಕಿಗೆ ನಳದ ನೀರು ಜುಳುಜುಳು ಎಂದು ಬೀಳುವ ಶಬ್ದ ಕೇಳಿ ಯಾರಾದರೊಬ್ಬರು ಗಟ್ಟಿಯಾಗಿ “ಅಕ್ಕೋರ ನಳಾ ಬಂದಾವು ನೋಡ್ರಿ” ಎಂದರೆ ಸಾಕು ಎಂಥ ಕುಂಭಕರ್ಣನಂಥವರೂ ದಢಕ್ಕನೆ ಎದ್ದು ಲಗುಬಗೆಯಿಂದ ನೀರು ತುಂಬತೊಡಗುತ್ತಿದ್ದರು.
ನಮ್ಮ ಮನೆಯಲ್ಲಂತೂ ಕುಡಿಯುವ ನೀರಿಗಾಗಿ ೭-೮ ಪ್ಲಾಸ್ಟಿಕ್ ಕೊಡಪಾನ, ೨ ಸ್ಟೀಲ್ ಟ್ಯಾಂಕಿ, ಒಂದು ಫೈಬರ್ ಟ್ಯಾಂಕ್ಗಳಲ್ಲಿ ನೀರು ತುಂಬಿ ಅದು ಸಾಲದೆಂಬಂತೆ ಎಲ್ಲ ಚಿಕ್ಕ-ದೊಡ್ಡ ಪಾತ್ರೆಗಳು, ಚೊಂಬು, ಲೋಟ ಎಂದೆಣಿಸದೆ ಎಲ್ಲದರಲ್ಲೂ ನೀರು ಶೇಖರಿಸಿಡುತ್ತಿದ್ದೆವು. ಉಡುಪಿಯಿಂದ ಬಂದಿದ್ದ ನಮ್ಮ ಸಂಬಂಧಿಯೊಬ್ಬರು “ನೀರು ತುಂಬೋಕೆ ಇಷ್ಟೇ ಪಾತ್ರೆ ಸಾಕಾ ಅಥವಾ ಸೌಟು ಚಮಚದಲ್ಲೂ ತುಂಬಿಸ್ತೀರಾ?” ಎಂದು ತಮಾಷೆ ಮಾಡಿದ್ದರು. ನೀರಿರುವ ಊರಿನವರಿಗೆ ನಮ್ಮಂತಹ ಬರಗಾಲದೂರಿನವರ ಬವಣೆ ಹೇಗೆ ಅರ್ಥವಾಗಬೇಕು?
ಎಲ್ಲರಿಗೂ ವರ್ಷಕೊಮ್ಮೆ ದೀಪಾವಳಿಗೆ ಮಾತ್ರ ನೀರು ತುಂಬುವ ಹಬ್ಬವಾದರೆ ನಮಗೆ ನಳ ಬಂದಾಗಲೆಲ್ಲ ನೀರು ತುಂಬುವ ಹಬ್ಬವೇ! ನಳದ ನೀರು ಬಂದಾಗಲೇ ಓಣಿಯ ಎಲ್ಲ ಜನರೂ ಧಾರಾಳವಾಗಿ ಮನಸೋ ಇಚ್ಛೆ ಸ್ನಾನ ಮಾಡಿ, ತಮ್ಮ ಮನೆಯ ಎಲ್ಲ ಬೆಡ್ಶೀಟ್, ಹೊದಿಕೆ, ಕೌದಿ ಮತ್ತು ಇತರ ದೊಡ್ಡ ದೊಡ್ಡ ಬಟ್ಟೆಗಳನ್ನು ಒಗೆಯುತ್ತಿದ್ದರು. ಎಲ್ಲರ ಮನೆಯ ನೀರಿನ ಟ್ಯಾಂಕ್ಗಳೆಲ್ಲ ತುಂಬಿ ಮನೆಯ ಮುಂದಿನ ಪುಟ್ಟ ಕೈತೋಟದ ಹೂಗಿಡಗಳಿಗೆ, ತರಕಾರಿ ಗಿಡಗಳಿಗೆ, ಒಂದೆರಡು ತೆಂಗಿನ ಮರಗಳಿಗೆ ಯಥೇಚ್ಛವಾಗಿ ನೀರು ಬಿಡುತ್ತಿದ್ದರು. ಪಾಪ ಆ ಗಿಡಮರಗಳು ಕೂಡ ವಾರಕ್ಕಾಗುವಷ್ಟು ಭರ್ತಿ ನೀರು ಕುಡಿದು ತೃಪ್ತಿಗೊಳ್ಳುತ್ತಿದ್ದವು. ಉಳಿದ ದಿನಗಳಲ್ಲಿ ಅವಕ್ಕೆ ನೆಲ ಒರೆಸಿದ ನೀರು, ಬಟ್ಟೆ ಅಲುಬಿದ ನೀರು, ಇಲ್ಲವೆ ಅಕ್ಕಿ ತೊಳೆದ ನೀರೇ ಗತಿ! ಏನು ಮಾಡಲಾದೀತು? ಅವೂ ಪರಿಸ್ಥಿತಿಗೆ ಒಗ್ಗಿಬಿಟ್ಟಿದ್ದವು ಎನಿಸುತ್ತದೆ. ಏಕೆಂದರೆ ಆ ನೀರಿಲ್ಲದೂರಿನಲ್ಲೂ ಅವು ಸೊಂಪಾಗಿ ಬೆಳೆದು ಹೂ-ಹಣ್ಣು ಕಾಯಿ ಕೊಡುತ್ತಿದ್ದವು.
ನಾವು ಕರಾವಳಿಗರಿಗೆ ಇಡ್ಲಿ, ದೋಸೆ, ಉತ್ತಪ್ಪ ಇಂತಹ ಅಕ್ಕಿಯ ತಿಂಡಿಗಳೇ ಪ್ರಧಾನ. ಆದರೆ ನಾವು ದೋಸೆಗೆ ಬಳಸುತ್ತಿದ್ದುದು ರೇಷನ್ ಅಕ್ಕಿಯನ್ನು. ಒಂದು ಕೆ.ಜಿ. ರೇಷನ್ ಅಕ್ಕಿಯಲ್ಲಿ ಸಾಧಾರಣ ನೂರು ಗ್ರಾಂನಷ್ಟು ಧೂಳು, ಕಾಲು ಕೆ.ಜಿ.ಯಷ್ಟು ಕಲ್ಲು, ಭತ್ತ ಮತ್ತು ಹುಳುಗಳು ಇರುತ್ತಿದ್ದರಿಂದ ಅದನ್ನು ತೊಳೆಯಲು ಸಾಕಷ್ಟು ನೀರು ಬೇಕಾಗುತ್ತಿತ್ತು. ಹೀಗಾಗಿ ನಳ ಬಂದರೆ ಮಾತ್ರ ನಾವು ದೋಸೆ ಕಾಣುತ್ತಿದ್ದುದು. ಉಳಿದ ದಿನಗಳಲ್ಲಿ ದೋಸೆ ಮಾಡು ಎಂದರೆ ನಮ್ಮಮ್ಮ “ಹೋಗ ಯವ್ವಾ ಹೋಗು. ಇಲ್ಲಿ ಕುಡ್ಯಾಕ್ ನೀರಿಲ್ಲ ಅಂತ ನಾ ಒದ್ದಾಡಾಕತ್ತೀನಿ. ಇನ್ನು ದ್ವಾಸಿ ಎಲ್ಲಿಂದ ಮಾಡಲಿ?” ಎಂದು ತನ್ನ ಅಳಲು ತೋಡಿಕೊಳ್ಳುತ್ತಿದ್ದಳು.
ಒಮ್ಮೊಮ್ಮೆ ಎಲ್ಲೋ ಒಂದು ಕಡೆ ನೀರು ಸರಬರಾಜಾಗುವ ಪೈಪ್ಲೈನ್ ಒಡೆದು ನೀರು ಪೂರೈಕೆಯಾಗದೆ ಮುನ್ಸಿಪಾಲಿಟಿ ಒಂದು ಟ್ಯಾಂಕರ್ ನೀರು ಸರಬರಾಜು ಮಾಡುತ್ತಿತ್ತು. ಆ ನೀರಿಗೂ ಹೊಡೆದಾಟ, ಬಡಿದಾಟ ಜಗಳ. ಆ ಜಗಳ ಬೈಗುಳಗಳೆಲ್ಲ ಕೇವಲ ಕ್ಷಣಿಕ! ಮಧ್ಯಾಹ್ನ ನೀರಿಗಾಗಿ ಬಾಯಿಗೆ ಬಂದಂತೆ ಬಯ್ದಾಡಿಕೊಂಡವರ ಕೋಪ ಸಂಜೆಯ ವೇಳೆಗೆ ಕರಗಿಹೋಗುತ್ತಿತ್ತು. ಸಂಜೆ ಮನೆಯ ಜಗುಲಿಯ ಮೇಲೆ ಕೂತು “ಚಾ ಆತೇನ್ರೀ ಅಕ್ಕೋರ” ಎಂದು ಮತ್ತೆ ಅವರೊಡನೆ ಮಾತಿಗಿಳಿಯುತ್ತಿದ್ದರು.
ಆದರೂ ಈ ನೀರಿನ ಸಮಸ್ಯೆ ಏನೇ ಇದ್ದರೂ ಅದರಿಂದ ನನಗಂತೂ ಲಾಭವೇ ಆಗಿತ್ತು. ಬರಗಾಲದೂರಿನಲ್ಲೂ ನಾನು ನೀರು ಖರ್ಚು ಮಾಡುತ್ತಿದ್ದುದು ಹೆಚ್ಚೇ! ಒಂದು ತಟ್ಟೆ ತೊಳೆಯಲು ಎರಡು ಮೂರು ಚೊಂಬು ನೀರು ಬೇಕು ನನಗೆ. “ಅದೇನ್ ದಬಾದಬಾ ಅಂತ ನೀರು ಚಲ್ತೀಯವ್ವ ತಾಯಿ! ಸಾಕು ಬಿಡು ನೀ ಭಾಂಡೆ ತೊಳದದ್ದು! ಅಷ್ಟ ನೀರಾಗ ನಾಕ ಮಂದಿ ಜಳಕ ಮಾಡ್ತಿದ್ವಿ” ಎಂದು ನನ್ನಮ್ಮ ನನ್ನನ್ನು ಗದರುತ್ತಿದ್ದಳು. ಹೀಗಾಗಿ ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಯಾವ ಕೆಲಸವನ್ನೂ ನನಗೆ ಹೇಳುತ್ತಿರಲಿಲ್ಲ.
“ನೀ ಲಗ್ನಾಗಿ ನೀರಿಲ್ಲದ ಊರಿಗೆ ಹೋಗ್ಬೇಕು ನೋಡು. ಆವಾಗ ಗೊತ್ತಾಕ್ಕತೈತಿ ನಮ್ಮ ತ್ರಾಸ ನಿನಗ” ಎಂದು ನಾನು ಕೈಕಾಲು ತೊಳೆಯಲು ಬಳಸುತ್ತಿದ್ದ ನೀರಿನ ಪ್ರಮಾಣ ನೋಡಿ ಅವಳು ಹಾರೈಸುತ್ತಿದ್ದಳು. ಆದರೂ ಅವಳ ಹಾರೈಕೆ ಫಲಿಸಲಿಲ್ಲ. ಏಕೆಂದರೆ ನಾನು ಮದುವೆಯಾಗಿ ಬಂದಿದ್ದು ವರ್ಷದಲ್ಲಿ ಎಂಟು ತಿಂಗಳು ಮಳೆ ಸುರಿದು ಬಾವಿ ನೀರು ಭರ್ತಿಯಾಗಿ ತುಂಬಿಕೊಂಡಿರುವ ಕರಾವಳಿಗೆ.
ಆದರೆ ಈಗಲೂ ಸುರಿಯುವ ಮಳೆಗೆ ಮಗುವಿನಂತೆ ಕೈಯೊಡ್ಡಿ ನಿಂತಾಗ, ತುಂಬಿದ ಬಾವಿಯಿಂದ ಅನಾಯಾಸವಾಗಿ ತಾಮ್ರದ ಬಿಂದಿಗೆಯಲ್ಲಿ ನೀರೆತ್ತಿ ತರುವಾಗ ಮತ್ತೆ ಆ ಖಾಲಿ ಕೊಡಗಳು ನೆನಪಾಗಿ ಕಣ್ಣಂಚು ಒದ್ದೆಯಾಗುತ್ತವೆ!