ಈ ಬಾರಿಯ ರಾಜ್ಯಮಟ್ಟದ ಬೆಸ್ಟ್ ಫೊಟಾಗ್ರಫಿ ಅವಾರ್ಡ್ಗೆ ಆದಿತ್ಯ ಒಳ್ಳೊಳ್ಳೆಯ ಫೋಟೊ ತೆಗೆಯಲು ಪ್ರಯತ್ನಿಸುತ್ತಿದ್ದ. ಸಮಯ ಹೇಗೂ ಸಾಕಷ್ಟು ಇತ್ತು. ಹಾಗಾಗಿ ಅದ್ಭುತ, ರಮ್ಯ ಎನ್ನಿಸುವ ಸ್ಥಳಗಳಿಗೆ ಹೋಗಬೇಕೆಂದುಕೊಂಡಂತೇ ಮೊದಲು ಜೋಗದ ಸಿರಿಗೆ ಧಾವಿಸಿದ.
ಆದಿತ್ಯ ಬಾಲ್ಯದಿಂದಲೇ ಫೋಟೋ ತೆಗೆಯುವ ಹವ್ಯಾಸ ಬೆಳೆಸಿಕೊಂಡಿದ್ದ. ಮನೆಯಲ್ಲಿ ಅಷ್ಟೇ ಅಲ್ಲ ಸಂಬಂಧಿಕರ ಮನೆಗಳಲ್ಲಿ ಯಾವುದಾದರೂ ಕಾರ್ಯಕ್ರಮವಿರುವಾಗಲೂ ಒಳ್ಳೆಯ ಕ್ಯಾಮೆರಾವಿರುವ ತಂದೆಯ ಮೊಬೈಲ್ ಹಿಡಿದುಕೊಂಡು “ಏ ಎಲ್ಲಾರೂ ಚೆಂತಂಗ ನಿಲ್ಲರಿ ನಾ ಫೋಟೊ ತಗೀತೀನಿ” ಎಂದು ಓಡಾಡಿ ಬಹಳ ಚೆನ್ನಾಗಿಯೇ ಫೋಟೊ ತೆಗೆಯುತ್ತಿದ್ದ. ಆತನ ತಾಯಿ ವೇದಳಿಗೆ ಮಗನ ಹವ್ಯಾಸ ಇನ್ನಿಲ್ಲದ ಖುಷಿ ನೀಡಿತ್ತು. ಎಲ್ಲರೊಂದಿಗೂ “ನಮ್ಮ ಆದಿತ್ಯಾ ಭಾಳ ಚೆಂದ ಫೋಟೊ ತಗೀತಾನಾ” ಎಂದು ಹೇಳುತ್ತಲೇ ಓಡಾಡುತ್ತಿದ್ದಳು. ಅಷ್ಟೇ ಅಲ್ಲ ಹಿತ್ತಲಿನ ಗಿಡ ಮರ ಬಳ್ಳಿ ವಿಶೇಷವಾಗಿ ಅರಳಿದ ಹೂವುಗಳನ್ನು ಒಟ್ಟಿನಲ್ಲಿ ತನಗೆ ಹೊಸದೇನಾದರೂ ಫೋಟೊ ತೆಗೆಯುವಂತಹ ಚಿತ್ರ ಗೋಚರಿಸಿದರೆ ಅದನ್ನು ತೋರಿಸಿ ‘ಏ ಇದನ್ನು ಫೋಟೊ ತೆಗಿಯೊ’ ‘ಅದನ್ನ ಫೋಟೊ ತೆಗಿಯೊ’ ಎಂದೆನ್ನುತ್ತ ಆತನಿಂದ ಫೋಟೊ ತೆಗೆಸಿ “ಭಾಳ ಚೆಂದ ತಗದಿಪಾ” ಎಂದೆಲ್ಲ ಪ್ರೋತ್ಸಾಹಿಸುತ್ತಿದ್ದಳು.
ಆದಿತ್ಯ ಬೆಳೆದಂತೆಲ್ಲ ಆತನ ಹವ್ಯಾಸ, ಜೊತೆಗೆ ತಾಯಿಯ ಪ್ರೋತ್ಸಾಹ ಬೆಳೆಯುತ್ತಾ ಸಾಗಿತು. ಸಂದರ್ಭ ಸಿಕ್ಕಾಗಲೆಲ್ಲ ತಾಯಿಯು ಮಗನಿಗೆ “ಫೋಟೊ ಅಂದ್ರ ಬರೇ ಫೋಟೊ ಅಷ್ಟ ಅಲ್ಲಾ, ಅವು ಕಥೀನೂ ಆಗಬಹುದು, ಕವನಾನೂ ಆಗಬಹುದು. ಹಂಗ ಆಗುವಂಗ ನೀ ಫೋಟೊ ತಗೀಬೇಕು” ಎಂದೆಲ್ಲ ಫೋಟೊದ ಮಹತ್ತ್ವವನ್ನು ತಿಳಿಸುತ್ತಾ ಒಂದು ಬಗೆಯಲ್ಲಿ ಮಾರ್ಗದರ್ಶನ ನೀಡುತ್ತಿದ್ದಳು.
ಕಾಲೇಜು ತಲಪುವುದರಲ್ಲಿ ಆತನ ಹವ್ಯಾಸ ಬೆಳೆದು ಆತ ಒಬ್ಬ ಒಳ್ಳೆಯ ಫೋಟೊಗ್ರಾಫರ್ ಎಂದೆನ್ನಿಸಿಕೊಂಡ. ಜೊತೆಗೆ ಆತನಿಗೆ ಒಂದೆರಡು ಸಣ್ಣಪುಟ್ಟ ಪ್ರಶಸ್ತಿಗಳೂ ದೊರೆತು ಮತ್ತಷ್ಟು ಉತ್ಸಾಹಭರಿತನಾದ. ಆತನ ತಾಯಿ ಆತನಿಗೆ ಒಳ್ಳೆಯ ಕ್ಯಾಮೆರಾ ಕೊಡಿಸಿದ ನಂತರವಂತೂ ಆತ ಮೂರೂ ಹೊತ್ತೂ ಆ ಕ್ಯಾಮೆರಾದಲ್ಲಿಯೇ ಮುಳುಗಿಹೋದ.
ಆದಿತ್ಯ ಎಲ್ಲಿಯಾದರೂ ಹೋಗುವಾಗ ಆತನಿಗೆ ಸಿಗುವ ನಿಸರ್ಗಸಿರಿಯ ಫೋಟೊಗಳನ್ನು ಸೆರೆಹಿಡಿಯುತ್ತಿದ್ದ. ಅಷ್ಟೆ ಏಕೆ? ಬೇರೆ ಊರಿಗೆ ಬಸ್ಸಿನಲ್ಲಿ ಹೋಗುವಾಗಲೂ ಕಿಟಕಿಯ ಪಕ್ಕವೇ ಕುಳಿತು ಚಲಿಸುವ ಬಸ್ಸಿನಿಂದಲೂ ಸಹ ನದಿ ಹಳ್ಳ ಕೊಳ್ಳ, ಸೂರ್ಯೋದಯ, ಸೂರ್ಯಾಸ್ಥ ಎಂದೆಲ್ಲ ಫೋಟೊ ಕ್ಲಿಕ್ಕಿಸಿ, ಆ ಫೋಟೊಗಳ ಸ್ಟೇಟಸ್ ಇಟ್ಟು ಆ ಚಿತ್ರದ ಕುರಿತಾಗಿ ಒಂದೆರಡು ಸಾಲುಗಳನ್ನು ಬರೆಯುತ್ತಿದ್ದ. ಈ ವಿಷಯವಂತೂ ಕಥೆಗಾರ್ತಿ ವೇದಳಿಗೆ ಎಲ್ಲಿಲ್ಲದ ಸಂತಸವನ್ನು ಎರೆಯುತ್ತಿತ್ತು. ಅಷ್ಟೆ ಅಲ್ಲ ಆತ ತೆಗೆದ ಫೋಟೊಗಳು ಆಕೆಗೆ ಹಲವಾರು ಕಥೆಗಳನ್ನು ಹೇಳುತ್ತಲಿದ್ದವು.
ಕ್ಯಾಮೆರಾ ಹಿಡಿದು ಹುಣ್ಣಿಮೆ ಹಾಗೂ ಹತ್ತಿರದ ದಿನಗಳಲ್ಲಿ ಆತ ಟೆರೆಸ್ ಮೇಲಿಂದ ಸಾಕಷ್ಟು ಪ್ರಯತ್ನಪಟ್ಟು ತದೇಕಚಿತ್ತದಿಂದ ಚಂದಿರನ ಫೋಟೊ ಕ್ಲಿಕ್ಕಿಸುತ್ತಿದ್ದ. ಜೊತೆಗೆ ಬಾನಂಗಳದಲ್ಲಿ ಹೊಳೆಯುವ ಬೆಳ್ಳಿ ಚುಕ್ಕೆ, ಸಪ್ತರ್ಷಿಮಂಡಲ ಮುಂತಾದ ನಕ್ಷತ್ರಗಳನ್ನು ಸೆರೆಹಿಡಿಯುತ್ತಿದ್ದ. ಅಂತಹ ದೃಶ್ಯಗಳನ್ನು ವೇದ ಬಹಳ ಸಂಭ್ರಮದಿಂದ ನೋಡುತ್ತಿದ್ದಳು. ಆಗೆಲ್ಲ ಆಕೆಯ ಕಣ್ಣಿಗೆ ಆತ ಒಬ್ಬ ಖಗೋಳಜ್ಞನಂತೆ ಕಾಣಿಸುತ್ತಿದ್ದ.
* * *
ಚಿಕ್ಕಂದಿನಿAದಲೇ ವೇದ ತನ್ನ ಇಬ್ಬರು ಮಕ್ಕಳಾದ ಆದಿತ್ಯ ಹಾಗೂ ಅಪೂರ್ವರಿಗೆ ಪಕ್ಷಿಗಳನ್ನು ತೋರಿಸಿ ಅವರು ಆಗಸದತ್ತ ಮುಖ ಮಾಡಿ ನೋಡುವ ಅಭ್ಯಾಸ ಬೆಳೆಸಿದ್ದಳು. ಇದರಿಂದ ಆದಿತ್ಯ ಹೊಸ ಬಗೆಯ ಪಕ್ಷಿ ಕಂಡಕೂಡಲೇ ಅದನ್ನು ನೋಡಿ ಖುಷಿಪಟ್ಟು ಅದು ಯಾವ ಪಕ್ಷಿಯೆಂದು ತಿಳಿಯದಾದಾಗ ಗೂಗಲ್ನಲ್ಲಿ ಹುಡುಕಿ ಪಕ್ಷಿಯ ಕುರಿತು ಅರಿತುಕೊಳ್ಳುತ್ತಿದ್ದ. ಜೊತೆಗೆ ಆ ವಿಷಯವನ್ನು ತಾಯಿಗೂ ಹೇಳುತ್ತಿದ್ದ. ತನ್ನ ಹಳ್ಳಿಯಲ್ಲಿರುವ ಹೊಲ ತೋಟ ಗದ್ದೆಗಳಲ್ಲಿ ಪಕ್ಷಿಗಳನ್ನು ಹುಡುಕಿ, ಫೋಟೊ ತೆಗೆದು ತಾಯಿಗೆ ತೋರಿಸಿ ಸಂಭ್ರಮಿಸುತ್ತಿದ್ದ.
ಮುಂಗಾರಿನ ಸುಂದರವಾದ ಒಂದು ಮುಂಜಾವಿನಲ್ಲಿ ಹಿತ್ತಲಿನ ಮಾಮರದಲ್ಲಿಂದ ಹೊಸ ಸ್ವರದ ಆಲಾಪನೆಯು ಆದಿತ್ಯನನ್ನು ಸೆಳೆದುಕೊಂಡಿತ್ತು. ಕೂಡಲೇ ಎಚ್ಚೆತ್ತು ತನ್ನ ಕ್ಯಾಮೆರಾ ಎತ್ತಿಕೊಂಡು ಅದ್ಯಾವ ಪಕ್ಷಿ ಎಂದು ಆತ ಮರದ ಹತ್ತಿರ ಹೋಗಿ ಮರದ ಮೇಲೆ ಪರೀಕ್ಷಾ ದೃಷ್ಟಿಯನ್ನು ಹೊರಡಿಸಿದಾಗ, ಹೊಸ ಬಗೆಯ ಪಕ್ಷಿ ಕಂಡಂತಾಗಿ ಕುತೂಹಲದಿಂದ ನಿಧಾನವಾಗಿ ಹೆಜ್ಜೆ ಇಟ್ಟು ಹತ್ತಿರ ಹೋಗಿ, ಅಲುಗಾಡದೇ ಉಸಿರು ಬಿಗಿಹಿಡಿದು ದೃಷ್ಟಿಯನ್ನು ಸಂಪೂರ್ಣವಾಗಿ ಅದರ ಮೇಲೆ ಕೇಂದ್ರೀಕರಿಸಿದ ಮೇಲೆ ಪಕ್ಷಿ ಸ್ಪಷ್ಟವಾಗಿ ಗೋಚರಿಸಿದ ನಂತರ ಅರಿಯದಂತೆ ಅರೆ! ಚಾತಕ ಪಕ್ಷಿ ಎಂದು ಪಿಸುಗುಟ್ಟಿ ತಕ್ಷಣವೇ ಆ ಸದ್ದಿಗೆ ಪಕ್ಷಿ ಹಾರಿಹೋಗುವ ಭಯ ಆವರಿಸಿ, ಅರಿಯದೇ ತನ್ನಿಂದಾದ ಪ್ರಮಾದಕ್ಕೆ ಪಶ್ಚಾತ್ತಾಪಪಟ್ಟು, ಮುಂದೆ ಉಸಿರನ್ನು ಮತ್ತಷ್ಟು ಬಿಗಿಹಿಡಿದು ಕಣ್ಣರೆಪ್ಪೆಯನ್ನೂ ಬಡಿಯದೇ ನೆಟ್ಟದೃಷ್ಟಿಯಿಂದ ಪಕ್ಷಿಯನ್ನೇ ದಿಟ್ಟಿಸತೊಡಗಿದ. ನಿಧಾನವಾಗಿ ಕ್ಯಾಮರಾ ಕಣ್ಣಿಗೆ ಆ ಪಕ್ಷಿಯನ್ನು ತೋರಿಸಿದ್ದ. ದೂರದಿಂದಲೇ ತನ್ನ ಮಗ ಪಕ್ಷಿಯನ್ನು ತನ್ನ ಕ್ಯಾಮರಾದೊಳಗೆ ಸೆರೆಹಿಡಿವ ದೃಶ್ಯವನ್ನು ಕಂಡ ವೇದೆ ಕೂಡಲೇ ತನ್ನ ಮೊಬೈಲನಿಂದ ಮಗನ ಫೋಟೊ ತೆಗೆದು ತನ್ನ ಮಗ ಪೂರ್ಣಚಂದ್ರ ತೇಜಸ್ವಿ ಎಂದು ಇನ್ನಿಲ್ಲದ ಹೆಮ್ಮೆಯಿಂದ ಬೀಗಿದ್ದಳು.
ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯವನ್ನು ತಾಯಿಗೆ ತೋರಿಸಿದಾಗ, ತಾಯಿ “ನಾನೂ ಒಂದ ಪಕ್ಷಿ ಫೋಟೊ ತಗದೀನಿ ನೋಡೊ” ಎಂದು ತನ್ನ ಮೊಬೈಲಿನಲ್ಲಿರುವ ಆತ ಕ್ಯಾಮೆರಾ ಹಿಡಿದು ಫೋಟೊ ತೆಗೆಯುತ್ತಿದ್ದ ಫೋಟೊ ತೋರಿಸುವುದರೊಂದಿಗೆ ಆತನ ಕಾರ್ಯವನ್ನು ಶ್ಲಾಘಿಸಿದ್ದಳು. ಅಷ್ಟರಲ್ಲಿ ಅಪೂರ್ವ ಕೂಡ ಓಡೋಡಿ ಬಂದು “ಎಲ್ಲೆ ನೋಡೂಣು, ನನಗಷ್ಟ ತೋರಸರಿ ಬರೇ ನೀವಷ್ಟ ನೋಡಬ್ಯಾಡ್ರಿ,” ಎಂದು ಅಣ್ಣನ ಕ್ಯಾಮೆರಾ ಕಸಿದುಕೊಂಡು ಆ ಪಕ್ಷಿಯನ್ನು ನೋಡಿ “ಅಯ್ಯ ಇದೇನ ಹಿಂಗ ಐತಿ? ಮೊಕಕ್ಕ ಕರೇ ಅರಬಿ ಕಟ್ಟಗೊಂಡ ಕಳ್ಳರಂಗ ಐತೆಲಾ” ಎಂದ ಅವಳ ಮಾತಿನಿಂದ ವೇದಳಿಗೆ ನಗು ಉಕ್ಕಿತ್ತು. ಕೂಡಲೇ ಮಗಳಿಗೆ ‘ಅದು ಚಾತಕ ಪಕ್ಷಿ’ ಎಂದು ಆ ಚಿತ್ರವನ್ನು ತೋರಿಸುತ್ತಾ ಆ ಪಕ್ಷಿಗೆ ಕಪ್ಪು ಬಣ್ಣ, ಹಿಂದೆ ಉದ್ದನೆಯ ಪುಕ್ಕ, ಕತ್ತಿನ ತಳಭಾಗದಲ್ಲಿ ಬಿಳಿಬಣ್ಣ, ಎಲ್ಲಕ್ಕಿಂತ ಮಿಗಿಲಾಗಿ ನೆತ್ತಿಯ ಮೇಲೆ ದಟ್ಟವಾದ ಕೂದಲಿನ ಜುಟ್ಟು, ಆ ಜುಟ್ಟಿನಲ್ಲಿಯೇ ಅದು ಮಳೆಯ ನೀರನ್ನು ಸಂಗ್ರಹಿಸಿಕೊಳ್ಳುತ್ತದೆ. ಅಂಬರದ ನೀರೇ ಅದಕ್ಕೆ ಆಧಾರ ಎಂಬೆಲ್ಲ ವಿವರವನ್ನು ನೀಡಿದ್ದಳು. ಅದನ್ನೆಲ್ಲ ಕೇಳಿಸಿಕೊಂಡ ಅಪೂರ್ವ ಆ ಜೀವಂತ ಪಕ್ಷಿಯನ್ನೇ ನೋಡಲೆಂದು ಮರದತ್ತ ಓಡಿದಳು. ಆದರೆ ಅಷ್ಟರಲ್ಲಾಗಲೇ ಅದು ಹಾರಿಹೋಗಿ ಆಕೆ ಪೆಚ್ಚುಮೋರೆ ಹೊತ್ತು ಬರುವಂತಾಯಿತು.
* * *
ಈ ಬಾರಿಯ ರಾಜ್ಯಮಟ್ಟದ ಬೆಸ್ಟ್ ಫೊಟಾಗ್ರಫಿ ಅವಾರ್ಡ್ಗೆ ಆದಿತ್ಯ ಒಳ್ಳೊಳ್ಳೆಯ ಫೋಟೊ ತೆಗೆಯಲು ಪ್ರಯತ್ನಿಸುತ್ತಿದ್ದ. ಸಮಯ ಹೇಗೂ ಸಾಕಷ್ಟು ಇತ್ತು. ಹಾಗಾಗಿ ಅದ್ಭುತ, ರಮ್ಯ ಎನ್ನಿಸುವ ಸ್ಥಳಗಳಿಗೆ ಹೋಗಬೇಕೆಂದುಕೊಂಡಂತೇ ಮೊದಲು ಜೋಗದ ಸಿರಿಗೆ ಧಾವಿಸಿದ.
ಮಳೆಗಾಲದ ಮೈದುಂಬಿ ದುಮ್ಮಿಕ್ಕುವ ಆ ಜೋಗದ ಸಿರಿಯ ಸೊಬಗಿಗೆ ಸಾಟಿಯುಂಟೇ? ಒಮ್ಮಿಂದೊಮ್ಮೆಯೇ ಕಪ್ಪುಮೋಡ ಹಾಗೂ ಮಂಜಿನ ಮುಸುಕಿನಲ್ಲಿ ಮುಚ್ಚಿಹೋಗುತ್ತಿದ್ದ ಜಲಧಾರೆ ಜೋರಾಗಿ ಬಿದ್ದು ತೆರೆಸರಿದಾಗ, ಒಂದೆರಡು ಕ್ಷಣಗಳ ಕಾಲ ಶೃಂಗಾರ ಕಾವ್ಯದಂತೆ ತನ್ನ ಅನನ್ಯ ಸೌಂದರ್ಯವನ್ನು ಮೆರೆದು ಮತ್ತೆ ಮೋಡಗಳ ಮರೆಯಲ್ಲಿ ಮರೆಮಾಚಿಬಿಡುವ ಆ ನಯನ ಮನೋಹರ ದೃಶ್ಯವನ್ನು ಜನರ ನೂಕುನುಗ್ಗಲಿನಲ್ಲೇ ಹರಸಾಹಸಪಟ್ಟು ಅನನ್ಯ ದೃಶ್ಯವನ್ನು ಕಾವ್ಯಲಹರಿಯಂತೆ ಆದಿತ್ಯ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ.
ಆದಿತ್ಯನ ಫೋಟೊ ಪಯಣ ಮುರುಡೇಶ್ವರದ ಸಮುದ್ರದತ್ತ ಸಾಗಿತು. ಆ ಮುರುಡೇಶ್ವರದಲ್ಲಿಯ ಅತೀ ಎತ್ತರವಾದ ದ್ವಾರಬಾಗಿಲಿನ ಮೇಲಿಂದ ಒಂದೆಡೆ ಉಕ್ಕುವ ಸಮುದ್ರ ಮತ್ತೊಂದೆಡೆ ಹಚ್ಚಹಸುರಿನ ಮಧ್ಯ ಬೃಹದಾಕಾರದ ಪರಮೇಶ್ವರನ ಮೂರ್ತಿ ಹಾಗೂ ಸುತ್ತಲಿನ ಸೌಂದರ್ಯ ಜೊತೆಗೆ ಮೀನುಗಾರರು ಮೀನು ಹಿಡಿಯುವ, ಅವರು ತಮ್ಮ ಹಡಗನ್ನು ಸಮುದ್ರಕ್ಕೆ ನೂಕುವ ಮುಂತಾದ ದೃಶ್ಯಗಳು ಆತನ ಕ್ಯಾಮೆರಾದಲ್ಲಿ ಬಂಧಿತವಾದವು.
ಮೈಸೂರಿನ ಹತ್ತಿರವಿರುವ ತಲಕಾಡಿನಲ್ಲಿ ಎಲ್ಲಿ ನೋಡಿದಲ್ಲೆಲ್ಲ ಮರಳಿನ ರಾಶಿಗಳು ಆ ಸ್ಥಳ ಮರಳುಗಾಡೇ ಎಂಬಷ್ಟು ಗಾಢವಾದ ನಂಬಿಕೆಯನ್ನು ಹುಟ್ಟಿಸುತ್ತಿದ್ದವು. ಆ ವಿಶಿಷ್ಟವಾದ ಫೋಟೊಗಳೂ ಕೂಡ ಆತನ ಕ್ಯಾಮೆರಾದಲ್ಲಿ ದಾಖಲಾದವು.
ಅಷ್ಟು ಸಾಲದೆಂಬಂತೆ ಕಾಡುಮೇಡು ಅಲೆದು ನದಿ ಝರಿ ಹಳ್ಳ ಕೊಳ್ಳ, ಮರಗಿಡ, ಹೂವುಹಣ್ಣು, ಪಕ್ಷಿ-ಪ್ರಾಣಿ ಎಂದೆಲ್ಲ ಪ್ರಕೃತಿ ಸೌಂದರ್ಯದ ಫೋಟೊ ಕ್ಲಿಕ್ಕಿಸಿದ. ಹಾಗೇ ರಾತ್ರಿಯೆಲ್ಲ ನಿದ್ದೆಗೆಟ್ಟು ಆಗಸದ ಅಲೆಮಾರಿಗಳ ಚಿತ್ರ ಸೆರೆಹಿಡಿದ. ಸೂರ್ಯೋದಯ, ಸೂರ್ಯಾಸ್ತಗಳ ಫೋಟೊಗಳೂ ಕೂಡ ಸೆರೆಯಾದವು.
ಈ ಮಧ್ಯ, ಆದಿತ್ಯ, ತಾಯಿಯೊಂದಿಗೆ ಬೇರೆ ಊರಿಗೆ ಹೊರಟ. ಆ ದೊಡ್ಡದಾದ ಬಸ್ ನಿಲ್ದಾಣದಲ್ಲಿ, ತಾಯಿ ಮಗ ಇಬ್ಬರೂ ಬಸ್ಸಿಗಾಗಿ ಕಾಯುತ್ತ ಕುಳಿತರು. ಹತ್ತಿರದಲ್ಲಿಯೇ ಗಂಟುಮೂಟೆ ಕಟ್ಟಿಕೊಂಡು ಅಲೆಮಾರಿ ಗುಂಪೊಂದು ಬೀಡುಬಿಟ್ಟಿತ್ತು. ಆ ಗುಂಪಿನ ವರುಷದ ಮಗು ಅಳತೊಡಗಿದಾಗ, ಆ ಮಗುವಿನ ತಾಯಿ ಸೀರೆಯೊಂದನ್ನು ಗಂಟಿನಿAದ ಎಳೆದುಕೊಂಡು ಮತ್ತೊಬ್ಬ ಹೆಣ್ಣುಮಗಳ ಸಹಾಯದಿಂದ ಆ ಸೀರೆಯನ್ನೇ ಜೋಲಿ ಮಾಡಿ ಮಗುವನ್ನು ಮಲಗಿಸಿ ಆ ಕಡೆಗೊಬ್ಬಳು ಈ ಕಡೆಗೊಬ್ಬಳು ಸೀರೆಯ ಅಂಚನ್ನು ಹಿಡಿದು ತೂಗತೊಡಗಿದರು. ಅಳುವ ಮಗು ಸುಮ್ಮನಾಗಿ ಹಾಯಾಗಿ ನಿದ್ರಿಸತೊಡಗಿತು.
ವೇದ, ಆ ದೃಶ್ಯವನ್ನು ನೋಡಿದ ತಕ್ಷಣ ಆದಿತ್ಯನ ಗಮನವನ್ನು ಅತ್ತ ಸೆಳೆದು “ಏ ನೋಡೊ ಅಪ್ಪಿ ಎಲ್ಲಾ ಇದ್ದೂ ಏನೂ ಇಲ್ಲದಾಂಗ ಕೊರಗಿಕೊಂತ ಬದುಕು ಮಂದಿ ಮುಂದ ಏನೂ ಇರಲೀಕೂ ತಮ್ಮ ಕಡೆ ಇರೂದ ಒಂದ ಸ್ವರ್ಗ ಅಂತ ತಿಳಕೊಂಡ ಖುಷಿ ಖುಷಿಲೆ ಎಲ್ಲಾ ಇದ್ದಾರನ್ನ ಮೀರಿಸಿ ಬದಕತಾರಲ್ಲ ಇಂಥಾರ ದೊಡ್ಡಾರು. ಹಂಗ ನೋಡಿದ್ರ ಸರಳ ಬದುಕುವಾರಿಗೆ ಬದುಕು ಭಾಳ ಸರಳ” ಎನ್ನುತ್ತ ಆ ಅಲೆಮಾರಿಗಳತ್ತ ಕೈ ಮಾಡಿ ತೋರಿಸಿದಳು. ಕೂಡಲೇ ಆದಿತ್ಯನ ಕ್ಯಾಮೆರಾ, ಏನೆಲ್ಲ ಕತೆ ಹೇಳುವ ಆ ದೃಶ್ಯವನ್ನು ಸೆರೆಹಿಡಿದು ಖುಷಿಯಿಂದ ಬೀಗಿತು.
* * *
ಹೆಚ್ಚುಕಡಮೆ ನಾಲ್ಕೈದು ತಿಂಗಳುಗಳಿಂದ ಸ್ಪರ್ಧೆಗಾಗಿ ನೂರಾರು ಫೋಟೊಗಳನ್ನು ಹೊತ್ತ ಆದಿತ್ಯನ ಕ್ಯಾಮೆರಾಕ್ಕೆ ಈಗ ಪರೀಕ್ಷೆಯ ಸಮಯ. ಆ ಎಲ್ಲ ಫೋಟೊಗಳನ್ನು ತನ್ನ ಲ್ಯಾಪ್ಟಾಪಿಗೆ ಹಾಕಿ, ತಾಯಿ ಮಗ ಇಬ್ಬರೂ ಸೇರಿ ಸ್ಪರ್ಧೆಗೆ ಕಳುಹಿಸಲ್ಪಡುವ ಫೋಟೊವನ್ನು ಆಯ್ಕೆ ಮಾಡತೊಡಗಿದರು.
ಅಂತಿಮವಾಗಿ ತಾಯಿ ಹಾಗೂ ಮಗ ಇಬ್ಬರೂ ಸೇರಿ ಆಯ್ಕೆಮಾಡಿದ ಆ ಅದ್ಭುತ ಫೋಟೊ ಸ್ಪರ್ಧೆಗೆ ಕಳುಹಿಸಲ್ಪಟ್ಟಿತು.
ಆದಿತ್ಯನ ಸತತವಾದ ಪರಿಶ್ರಮ, ಶ್ರದ್ಧೆ, ಹೊಸದೃಷ್ಟಿ ಜೊತೆಗೆ ಆತನ ತಾಯಿಯ ಪ್ರೋತ್ಸಾಹ ನಿತ್ಯ ನಿರಂತರ ಪ್ರೋತ್ಸಾಹ, ಆಶೀರ್ವಾದ ಆತನಿಗೆ ಫಲ ನೀಡುವುದರಲ್ಲಿ ಸಫಲವಾಗಿತ್ತು. ಆದಿತ್ಯನ ಕ್ಯಾಮೆರಾ ಈಗ ತಾಯಿ ಹಾಗೂ ಮಗ ಇಬ್ಬರೂ ಜೊತೆಗೂಡಿ ಎತ್ತಿಕೊಂಡ ಬಹುಮಾನದ ಫೋಟೊ ಹೊತ್ತು ಧನ್ಯತಾಭಾವದಿಂದ ಸಂಭ್ರಮಿಸಿತ್ತು.