ಮೊನ್ನೆ ಬೆಳಗ್ಗೆ ನಮ್ಮ ಮನೆಯ ಹತ್ತಿರದ ಹಳ್ಳಿಯ ಕೆರೆ ಕಡೆಗೆ ಹೋಗಿದ್ದೆ. ಅಪಾರ್ಥ ಮಾಡ್ಕೋಬೇಡಿ. ಈ ಹಿಂದೆ ಹಳ್ಳಿಗಳ ಕಡೆ ಹೇಳ್ತಿದ್ರಲ್ಲ ‘ಒಸಿ ಕೆರೆ ಕಡೀಕ್ ಹೋಗ್ ಬತ್ತೀನಿ’ ಅಂತ. ನಾನು ಹೋಗಿದ್ದು ಅದಕ್ಕಲ್ಲ. ಈಗೀಗ ಹಳ್ಳಿಯವರೂ ಕೆರೆ ಕಡೆಗೆ ಅದಕ್ಕೆ ಹೋಗುವುದಿಲ್ಲ ಅನ್ನಿ – ‘ಸ್ವಚ್ಛ ಭಾರತ್ ಅಭಿಯಾನ್’ ಎಫೆಕ್ಟು!
ಇರಲಿ, ವಿಷಯಕ್ಕೆ ಬರೋಣ. ನಾನು ಕೆರೆ ಕಡೆಗೆ ಹೋಗಿದ್ದು ಅಲ್ಲಿ ಕಾಣಸಿಗುವ ಹಕ್ಕಿಗಳ ಫೋಟೋ ತೆಗೆಯುವುದಕ್ಕೆ. ಹಾಗೆ ಹೊರಟಾಗ ನನಗೆ ಸಾಥ್ ನೀಡಿದ್ದು, ರಜಕ್ಕೆಂದು ನಮ್ಮಲ್ಲಿಗೆ ಬಂದಿದ್ದ, ನನ್ನ ಚಿಕ್ಕಪ್ಪನ ಮಗ ಮುರಳಿಯ ಸುಪುತ್ರ ಅಭಯ. ದೂರ ದೂರದ ದೇಶಗಳಿಂದ ಹಲವು ಬಗೆಯ ಪಕ್ಷಿಗಳು ಆ ಕೆರೆಗೆ ಬರುತ್ತವೆ. ಅಷ್ಟು ದೂರ ಪಯಣಿಸಿ ಹಕ್ಕಿಗಳು ನಮ್ಮಲ್ಲಿಗೆ ಬಂದಾಗ ಫೋಟೊನಾದ್ರೂ ತೆಗೆಯದಿದ್ದರೆ ಹೇಗೆ? ಕೆರೆಯಂಚಿನಲ್ಲಿ ನಡೆದುಕೊಂಡು ಹೋಗ್ತಾ ಹಕ್ಕಿಗಳ ಫೋಟೋ ತೆಗೀತಾ ಇದ್ವಿ. ಕಾಲಿಗೆ ಏನೋ ತಡೆದ ಹಾಗಾಗಿ ಮುಗ್ಗರಿಸಿದೆ. ಬಳ್ಳಿಯೊಂದು ಕಾಲಿಗೆ ಸಿಕ್ಕಿ ನನ್ನನ್ನು ಬೀಳಿಸುವುದರಲ್ಲಿತ್ತು. ಬೀಳುವುದನ್ನೇನೊ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದೆ. ಆದರೆ ಸಾವರಿಸಿಕೊಂಡು ಹಿಂತಿರುಗಿ ನೋಡುತ್ತಿದ್ದಂತೆಯೇ
ಆಶ್ಚರ್ಯ, ಗಾಬರಿ, ಆತಂಕ, ಕಳವಳ ಇತ್ಯಾದಿ ಇತ್ಯಾದಿ ಇತ್ಯಾದಿ ನೆಗೆಟೀವ್ ಫೀಲಿಂಗುಗಳು ಒಟ್ಟಿಗೇ ಬಂದು ಮನಸ್ಸಿಗೆ ಮುತ್ತಿಗೆಹಾಕಿದವು. ಶಾಕ್ ಆಗಿದ್ದು ಯಾಕಪ್ಪಾಂದ್ರೆ, ನಾನು ಹಿಂದೆ ತಿರುಗಿ ನೆಲದ ಕಡೆಗೆ ನೋಡಿದಾಗ ಅಲ್ಲೊಂದು ಮಿದುಳು ಬಿದ್ದಿದ್ದನ್ನು ಕಂಡಿದ್ದೆ. ಕೇವಲ ಎಡವಿದ್ದಕ್ಕೆ ಮಿದುಳೇ ಬಿದ್ದುಹೋಯ್ತಲ್ಲಪ್ಪಾ ಇನ್ನೇನು ಗತಿ ಎನಿಸಿ ಈ ಎಲ್ಲಾ ಭಾವನೆಗಳು ಒಕ್ಕರಿಸಿಕೊಂಡಿದ್ದು. ತಲೆಯನ್ನು ಮುಟ್ಟಿ ನೋಡಿಕೊಂಡೆ. ಎಲ್ಲೂ ಓಪನ್ ಆಗಿರಲಿಲ್ಲ! ಆದರೂ ಏನೋ ಆತಂಕ. ಮನುಷ್ಯಜೀವನದಲ್ಲಿ ಎಡವಿದರೆ ಏನೇನನ್ನೋ ಕಳೆದುಕೊಳ್ತಾನೆ, ನಿನ್ನ ಮಿದುಳೇನು ಮಹಾ ಅಂತ ನೀವೆನ್ನಬಹುದು. ಆದರೆ ಆಗಿನ ನನ್ನ ಪರಿಸ್ಥಿತಿಯಲ್ಲಿ ಯಾರೇ ಇದ್ದಿದ್ರೂ ಗಾಬರಿಯಂತೂ ಆಗಿರೋದು.
ಒಂದು ಕ್ಷಣ ಅಷ್ಟೇ. ಮರುಕ್ಷಣವೇ ನನ್ನ ಮಿದುಳು ಚುರುಕಾಯ್ತು!
‘ಅಲ್ಲಾ…. ನನ್ನ ಮಿದುಳು ಕೆಳಗೆ ಬಿದ್ದುಹೋಗಿದ್ದಿದ್ರೆ, ನನಗೆ ಇಷ್ಟೆಲ್ಲಾ ಭಾವನೆಗಳು ಹೇಗೆ ಬರ್ತಿದ್ವು? ಮಿದುಳು ಬಿದ್ದುಹೋಗಿದೆ ಅಂತ ಗೊತ್ತಾಗಬೇಕಾದ್ರೂ ತಲೇಲಿ ಮಿದುಳಿರಬೇಕಲ್ವಾ? ತಲೆ ಮುಟ್ಟಿ ನೋಡ್ಕೊಳ್ಳೋಕಾದ್ರೂ ಹೇಗೆ ಗೊತ್ತಾಯ್ತು? ಆದ್ದರಿಂದ ಅದು ನನ್ನ ಮಿದುಳಾಗಿರಲು ಸಾಧ್ಯವಿಲ್ಲ’ ಹೀಗೆ ತರ್ಕಬದ್ಧವಾಗಿ ಯೋಚಿಸಿದ ಮೇಲೆ ‘ಸಧ್ಯಃ! – ಅದು ನಂದಲ್ಲ’ ಎನ್ನೋದು ಗ್ಯಾರಂಟಿಯಾಗಿ ಸಮಾಧಾನವಾಯ್ತು. ‘ತರ್ಕಬದ್ಧವಾಗಿ ಯೋಚಿಸೋಕೆ ಮಿದುಳಿರಲೇಬೇಕು’ ಎನ್ನೋ ಸಾಮಾನ್ಯ ಜ್ಞಾನವಿರೋ ನಿಮಗೂ ಅದು ನನ್ನ ಮಿದುಳಲ್ಲ ಅನ್ನಿಸ್ತಿರಬೇಕು, ಅಲ್ಲವೇ? ‘ಅದು ನನ್ನದಲ್ಲ ಸರಿ, ಮತ್ತಾರದ್ದು?’ ನನ್ನ ಹಿಂದೆ ಬರ್ತಾ ಇದ್ದ ಅಭಯನಿಗೆ ಅದನ್ನು ತೋರಿಸಿ ಕೇಳ್ದೆ – “ಇಲ್ಲೊಂದು ಮಿದುಳು ಬಿದ್ದಿದೆಯಲ್ಲ, ನೀನೇನಾದ್ರೂ ಬೀಳಿಸ್ಕಂಡ್ಯೇನೊ?” ಎಂದು.
ಅಭಯ ಒಂಭತ್ತು ಮುಗಿಸಿ ಹತ್ತನೇ ಕ್ಲಾಸಿಗೆ ಹೋಗ್ತಾ ಇರೋ ಈಗಿನ ಕಾಲದ ಹುಡುಗ. “ಮಿದುಳು ಅಂದ್ರೆ ಬ್ರೈನ್ ತಾನೇ?” ಅಂತ ನನ್ನನ್ನೇ ಕೇಳಿ ಕನ್ಫರ್ಮ್ ಮಾಡ್ಕೊಂಡು, ಸ್ವಲ್ಪವೂ ಗಾಬರಿ ಮಾಡ್ಕೊಳ್ದೆ “ಆ ಮಿದುಳು ನನ್ನದಲ್ಲ” ಎಂದು ಒಂಚೂರೂ ಆತಂಕವಿಲ್ಲದೆ ನುಡಿದ.
“ಅದು ಹೇಗೆ ಅಷ್ಟು ಕಾನ್ಫಿಡೆಂಟಾಗಿ ಹೇಳ್ತೀಯೋ” ಎಂದು ಕೇಳಿದೆ.
“ಅದು ಬಿದ್ದಿರೋದು ನನ್ನ ನಿಮ್ಮ ನಡುವೆ ಇರೋ ಜಾಗದಲ್ಲಿ. ನಾನಿನ್ನೂ ಆ ಜಾಗ ಕ್ರಾಸ್ ಮಾಡೇ ಇಲ್ಲ. ಅದು ನನ್ನದು ಹೇಗಾಗುತ್ತೆ? ಅಲ್ದೆ ಅದರ ಸೈಜ್ ನೋಡಿ. ನಂಗಿನ್ನೂ ಹದ್ನಾಕು ವರ್ಷ. ಅಷ್ಟು ದೊಡ್ದ ಮಿದುಳು ಇರೋಕೆ ಸಾಧ್ಯಾನಾ?” ಅಂತ ನನ್ನನ್ನೇ ಪ್ರಶ್ನೆ ಮಾಡ್ದ! ಮತ್ತೂ ಮುಂದುವರಿದು “ದೊಡ್ದವರ ಮಿದುಳು ಮೂರು ಪೌಂಡ್ ಅಂದರೆ ಹತ್ ಹತ್ರ ಒಂದೂಕಾಲು ಕೇಜಿ ಇರುತ್ತೆ. 140 ಮಿಲೀಮೀಟರ್ ಅಗಲ ಮತ್ತೆ 167 ಮಿಲೀಮೀಟರ್ ಉದ್ದ ಇರುತ್ತೆ. ಇದು ಅಷ್ಟ್ ಇರೋ ಹಂಗಿದೆ. ಸೋ, ಯಾರೋ ದೊಡ್ಡೋರ್ದೇ ಇರ್ಬೇಕು” ಅಂತ ಮಿದುಳಿನ ಬಗ್ಗೆ ಪಾಠವನ್ನೇ ಮಾಡಿಬಿಟ್ಟ – ಕಿರುಗಣ್ಣಲ್ಲಿ ನನ್ನನ್ನೇ ನೋಡ್ತಾ! ‘ಕೈ ತೋರಿಸಿ ಅವಲಕ್ಷಣ ಎನ್ನಿಸಿಕೊಂಡ’ ಹಾಗಾಯ್ತು ನನ್ನ ಸ್ಥಿತಿ! ನನ್ನದಲ್ಲ ಅನ್ನೋ ಸಮಜಾಯಷಿ ಕೋಡೋಕೂ ತೋಚಲಿಲ್ಲ ನನಗೆ.
ಬಹುಶಃ ನಾವು ಅವನ ವಯಸ್ಸಿನಲ್ಲಿದ್ದಾಗ, ಯಾರಾದ್ರೂ ಹಿರಿಯರು ಈ ಪ್ರಶ್ನೆ ಕೇಳಿದ್ದಿದ್ರೆ, ಅರ್ಧ ಹೆದರಿಕೆ, ಅರ್ಧ ದಾಕ್ಷಿಣ್ಯಕ್ಕೆ, ಏನೂ ಯೋಚ್ನೆ ಮಾಡ್ದೆ ‘ನನ್ನದಿದ್ರೂ ಇರಬಹುದು’ ಅಂತ ಒಪೊಕಂಡು ಬಿಡ್ತಿದ್ವೇನೋ! ಹಿರಿಯರ ಎದುರು ತರ್ಕ ಮಂಡಿಸೋ, ವಾದ ಮಾಡೋ ವಾಡಿಕೆ ಇರಲಿಲ್ಲವಲ್ಲ ಆಗ. ಅಥವಾ ಒಂದು ಎಕ್ಸ್ಟ್ರಾ ಇದ್ದರೆ ಒಳ್ಳೆಯದೇ ಅಲ್ವೇ ಅಂತ್ಲೂ ಎನ್ನಿಸ್ತಿತ್ತೇನೋ. ‘ಈ ಗೈಡ್ ತಗಂಡ್ರೆ ಅರ್ಧ ಪಾಸಾದಂಗೆ ಅಂತ ಅಂಗಡಿಯವನು ಹೇಳಿದಾಗ ಬೀಚಿಯವರ ತಿಂಮ, ಇನ್ನೂ ಒಂದು ಕಾಪಿ ತಗಳಣ, ಪೂರ್ತಿ ಪಾಸ್ ಆಗಬಹುದು’ ಅಂದ ಹಾಗೆ!
ಇಬ್ಬರದ್ದೂ ಅಲ್ಲ ಅದು ಅಂತ ಖಾತ್ರಿಯಾದ ಮೇಲೆ ನಿರಾಳನಾದೆ ನಾನು. ಅಭಯ ತಲೆ ಕೆಡಿಸ್ಕೊಂಡೇ ಇರ್ಲಿಲ್ಲ, ನಿರಾಳನಾಗೋಕೆ! ಪಾಪ, ಯಾರದ್ದೋ ಏನೋ, ಮನೆಗೆ ಹೋದ್ಮೇಲೆ ಗೊತ್ತಾಗಿ ಎಷ್ಟು ಒದ್ದಾಡಿರ್ತಾರೋ? {ಅವರಿಗೆ ತಾನಾಗೇ ಹೇಗೆ ಗೊತ್ತಾಗುತ್ತೆ? ಯಾರಾದ್ರೂ ಹೇಳಿ ಗೊತ್ತಾಗ್ಬೇಕಲ್ಲಾ! ಒದ್ದಾಡೋಕೂ ಮಿದುಳು ಬೇಕಲ್ಚೇ?} ಈಗ ನಾನೇನೂ ಮಾಡುವಂತಿರಲಿಲ್ಲ. ಕಳೆದುದು ಸಿಕ್ಕಿದೆ ಅಂತ ಪೊಲೀಸಿನವರಿಗೆ ಹೇಳೋಣ ಅಂದ್ರೆ, ಹೇಳಿ ಕೇಳಿ ಇದು ಮಿದುಳಿನ ವಿಷಯ. ಅವರು ಹೇಗೆ ರಿಯಾಕ್ಟ್ ಮಾಡ್ತಾರೋ?
ಹಾಗೇ ಮುಂದುವರಿದು ನಮ್ಮ (ಫೋಟೋ ತೆಗೆಯೋ) ಕೆಲಸ ಮುಗಿಸಿಕೊಂಡು ಮನೆಗೆ ಬಂದ್ವಿ. ಮನೆಗೆ ಬಂದ ಮೇಲೂ ನನಗೆ ಅದರದ್ದೇ ಯೋಚನೆ. ತಲೆಯಲ್ಲಿ ಭದ್ರವಾಗಿದ್ದ ಮಿದುಳನ್ನು ಉಪಯೋಗಿಸಿ ಮಿದುಳಿನ ಬಗ್ಗೆಯೇ ಒಂದು ಲೇಖನ ಮಾಡಲು ಕುಳಿತೆ.
ನಾವು ಚಿಕ್ಕೋರಿದ್ದಾಗ ಶಾಲೆಗಳಲ್ಲಿ ಮೇಷ್ಟ್ರುಗಳು ಹೊಡೆಯುತ್ತಿದ್ದ ಒಂದು ಕಾಮನ್ ಡೈಲಾಗ್ ‘ನಿನ್ ತಲೇಲೇನ್ ಸಗಣಿ ತುಂಬ್ಕೊಂಡಿದ್ಯಾ?’ ಕೆಲವರು ಗೊಬ್ಬರ ಅಂದಿರಬಹುದು, ಇನ್ನು ಕೆಲವರು ಲದ್ದಿ ಅಂದಿರಬಹುದು. ಅರ್ಥ ಮಾತ್ರ ಒಂದೇ – ಮಿದುಳಿನ ಜಾಗದಲ್ಲಿ ಮಿದುಳಿನ ಬದಲು ಕೆಲಸಕ್ಕೆ ಬಾರದ {?!?} ಸಗಣಿ ತುಂಬಿದೆ ಅಂತ. ‘ತಟ್ಟಿದರೆ ಬೆರಣಿಯಾಗುವ, ಸುಟ್ಟರೆ ವಿಭೂತಿಯಾಗುವ, ಹಾಗೆಯೇ ಬಿಟ್ಟರೆ ಮೇಲು ಗೊಬ್ಬರವಾಗುವ’ ಸಗಣಿಯನ್ನು ಕುರಿತು ಪಾಠ ಮಾಡಿದವರೇ ಅದು ಹೇಗೆ ಅದನ್ನು ನಿರುಪಯುಕ್ತ ಎಂದು ಎನ್ನುತ್ತಿದ್ದರೋ ನಾಕಾಣೆ!
‘ನಿನ್ ತಲೆ ಏನ್ ದನ ಕಾಯೋಕೆ ಹೋಗಿದ್ಯಾ?’ ಎನ್ನುವ ಮಾತನ್ನೂ ಕೂಡ ಮೇಷ್ಟ್ರುಗಳು ಒಮ್ಮೊಮ್ಮೆ ಉಪಯೋಗಿಸುತ್ತಿದ್ದುದುಂಟು. ದನ ಕಾಯುವುದು ನಿಕೃಷ್ಟ ಕೆಲಸ ಎನ್ನುವ ತೀರ್ಮಾನವೂ ಎಷ್ಟು ತಪ್ಪು ಎಂದು ಅವರಿಗೆ ಮಾತಿನ ಭರದಲ್ಲಿ ಹೊಳೆಯುತ್ತಿರಲಿಲ್ಲವೋ ಏನೋ. ಇನ್ನು ಕೆಲವರು ‘ನಿಂಗೆ ತಲೇನೇ ಇಲ್ಲ’ ಅಂದಿರಲೂಬಹುದು. ಇಲ್ಲಿ ತಲೆ ಎನ್ನುವುದು ಮಿದುಳು ಎನ್ನುವ ಅರ್ಥದಲ್ಲಿಯೇ ಉಪಯೋಗಿಸಲ್ಪಟ್ಟಿದೆ ಎನ್ನುವುದು ನಿಶ್ಚಿತ. ಹಾಗೆಯೇ ಬ್ರೈನ್ಲೆಸ್ – ಮಿದುಳಿಲ್ಲದವ – ಎಂದೂ ಕೆಲವರನ್ನು ಹಂಗಿಸುವ ಪರಿಪಾಠವಿದೆ. ಫಿಸಿಕಲ್ ಆಗಿ ಮಿದುಳು ಅದರ ಜಾಗದಲ್ಲಿಯೇ ಇದ್ದರೂ ಅದರ ಕ್ಯಪಾಸಿಟಿ ಕಡಮೆ ಅಥವಾ ಶೂನ್ಯ, ಜತೆಗೆ ಅದರ ಉಪಯೋಗ ಸರಿಯಾಗಿ ಆಗುತ್ತಿಲ್ಲ ಎನ್ನುವುದು ಅವರ ಮಾತಿನ ಅರ್ಥ ಎನಿಸುತ್ತದೆ.
ಇಲ್ಲಿ ಕೈಲಾಸಂ ಜೋಕ್ ಒಂದು ನೆನಪಿಗೆ ಬರುತ್ತೆ – ಒಮ್ಮೆ ವಿದೇಶಿ ನಟಿಯೊಬ್ಬಳು ಕೆ.ವಿ. ಅಯ್ಯರ್ರವರ ಜಿಮ್ಗೆ ಬಂದಿದ್ದಳು. ಅಲ್ಲಿ ಹುಡುಗರು ವ್ಯಾಯಾಮ ಮಾಡುವುದನ್ನು ನೋಡಿ ತಾನೂ ಮಾಡಬಲ್ಲೆ ಎಂದು ತಲೆಕೆಳಗಾಗಿ ನಿಂತಳಂತೆ. ಮೊದಲೇ ಕೆಂಪು ಕೆಂಪು. ಅವಳ ಮುಖ ಮೂತಿಯೆಲ್ಲಾ ಮತ್ತಷ್ಟು ಕೆಂಪಾಗಿ ಹೋಯಿತು. ನಾಚುತ್ತಾ, “ನೋಡಿ, ತಲೆಕೆಳಗಾಗಿ ನಿಂತಾಗಲೆಲ್ಲ ಹೀಗೇ ಆಗುತ್ತೆ. ರಕ್ತ ನನ್ನ ತಲೆಗೆ ನುಗ್ಗಿಬಿಡುತ್ತೆ” ಎಂದಳು. ಅಲ್ಲೇ ಕುಳಿತಿದ್ದ ಕೈಲಾಸಂ ಅವಳ ತಲೆಯತ್ತ ದೃಷ್ಟಿ ನೆಟ್ಟು “ನಿರ್ವಾತದೆಡೆಗೆ ದ್ರವ ನುಗ್ಗುವುದು ಸಹಜ” ಎಂದರಂತೆ! ಹುಡುಗರಿಗೆ ತಕ್ಷಣಕ್ಕೆ ಅರ್ಥವಾಗಲಿಲ್ಲ, ಸುಮ್ಮನಿದ್ದರಂತೆ. ಆಕೆ ಹೊರಹೋದ ನಂತರ ಕೈಲಾಸಂ “ನಾನು ಹೇಳಿದ ಜೋಕ್ ಅರ್ಥವಾಯ್ತೇನ್ರೋ? ಅಯ್ಯೋ, ಏನು ಬುದ್ಧಿವಂತರಪ್ಪಾ. ನಿರ್ವಾತದೆಡೆಗೆ ದ್ರವ ನುಗ್ಗುವುದು ಸಹಜ ಅಂದ್ರೆ, ಅವಳ ತಲೆ ಖಾಲಿ ಇತ್ತು, ಅದಕ್ಕೇ ರಕ್ತ ಆ ಕಡೆ ಹರೀತು ಅಂತ. ತಿಳೀತೇನ್ರೋ ಬೆಪ್ಪುಗಳಾ” ಎಂದು ವಿವರಿಸಿದರಂತೆ! ಆಗ ಅಲ್ಲಿದ್ದವರೆಲ್ಲಾ ಬಿದ್ದು ಬಿದ್ದು ನಕ್ಕರಂತೆ.
“ಏನು ಮಗು, ಏನೂ ಓದೋದಿಲ್ವೇ ನೀನು? ಬರೀ ಎಕ್ಸರ್ಸೈಜ್ ಮಾಡಿ ಮಸಲ್ಸ್ ಬೆಳೆಸ್ತಿದೀಯಾ? ಬ್ರೈನೂ ಬೆಳೀಲಿ ಮಗು. ಬ್ರಾನ್ ಅಂಡ್ ಬ್ರೈನ್ ಕೆನ್ ಗೋ ಟುಗೆದರ್ ಅನ್ನೋದನ್ನ ಪ್ರೂವ್ ಮಾಡಿ ತೋರಿಸ್ಬೇಕು ಈ ಪ್ರಪಂಚಕ್ಕೆ” ಎಂದು ಕೆ.ವಿ. ಅಯ್ಯರ್ ಅವರಿಗೆ ಒಮ್ಮೆ ಕೈಲಾಸಂ ಹೇಳಿದ್ದರಂತೆ. ಸುಮ್ಮನೆ ಮೈ ಬೆಳೆಸಿಕೊಂಡ್ರೆ ಏನೂ ಉಪಯೋಗವಿಲ್ಲ, ತಲೇನೂ {ಅಂದರೆ ಮಿದುಳು} ಬೆಳೆಸ್ಕೋಬೇಕು ಅಂತ ಅವರ ಅಭಿಪ್ರಾಯ. ಇದು ನಮ್ಮೆಲ್ಲರಿಗೂ ಒಂದು ಬುದ್ಧಿ ಮಾತೇ ಸರಿ. ಒಂದು ಹಂತದವರೆಗೆ ಮಿದುಳಿನ ಗಾತ್ರ ಹಿಗ್ಗುತ್ತಾ ಹೋಗಿ, ಆನಂತರ ಅದರ ಫಿಸಿಕಲ್ ಬೆಳವಣಿಗೆ ನಿಂತರೂ, ನಿರಂತರ ಅಧ್ಯಯನ ಮತ್ತು ಅನುಭವದಿಂದ ಅದರ ಸಾಮಥ್ರ್ಯ ಹೆಚ್ಚಬಲ್ಲದು. ಆದರೆ ಆ ದಿಸೆಯಲ್ಲಿ ನಮ್ಮ ಪ್ರಯತ್ನ ಸಾಗಬೇಕಷ್ಟೇ!
ಜಿರಲೆಗಳಿಗೂ ಪುಟಾಣಿ ಮಿದುಳಿದೆಯಂತೆ. ಆದರೆ ಮಿದುಳೇನು, ತಲೆಯಿಲ್ಲದೆಯೂ ಬದುಕುವ ಸಾಮಥ್ರ್ಯವಿದೆಯಂತೆ ಅವಕ್ಕೆ! ತಲೆ ತೆಗೆದರೂ ಅವು ಒಂದು ವಾರ ಕಾಲ ಬದುಕಬಲ್ಲವು ಎಂದು ವಿಜ್ಞಾನ ಹೇಳುತ್ತೆ. ಆದರೆ ಮನುಷ್ಯರು ಮಿದುಳಿಲ್ಲದೆ {?} ಬದುಕಬಲ್ಲರು, ತಲೆಯಿಲ್ಲದೆ ಸಾಧ್ಯವಿಲ್ಲ! ದೊಡ್ಡ ಶಹರುಗಳಿಗೆ ವಲಸೆಹೋಗುವ ಜನರಿಗೆ ಕೆಲವರು ಹೇಳುವ ಕಿವಿಮಾತು ‘ತಲೆಯಿಲ್ದಿದ್ರೂ ಬದುಕಬಹುದು ಮಾರಾಯಾ, ರೊಕ್ಕ ಮಾತ್ರ ಬೇಕೇ ಬೇಕು ಅಲ್ಲಿ ಬದುಕೋಕೆ’ ಇನ್ನು ಕೆಲವರು ‘ತಲೇಲಿ ಮಿದುಳಿದ್ರೆ ಎಲ್ಲಿ ಬೇಕಾದ್ರೂ ಬದುಕಬಹುದು’ ಎನ್ನುವುದುಂಟು. ಇವೆರಡೂ ಪರಸ್ಪರ ವಿರೋಧವೆನಿಸಿದರೂ ಸಮಯ ಸಂದರ್ಭಕ್ಕೆ ತಕ್ಕಂತೆ ಸತ್ಯವಾಗಬಹುದು.
ಒಟ್ಟಿನಲ್ಲಿ ಮಿದುಳು ಇಲ್ಲಾ ಎಂಬುದು ತೀರಾ ಹೀನಾಯಸ್ಥಿತಿಗೆ ಸಮಾನ ಎನ್ನುವುದು ಈ ಎಲ್ಲ ಮಾತಿನ ಸಾರ. ಆದರೆ ಅಪಘಾತದಲ್ಲಿ ಏಟುಬಿದ್ದು ಮಿದುಳು ನಿಷ್ಕ್ರಿಯವಾದಾಗ [ಬ್ರೈನ್ ಡೆಡ್ ಅಂತಾರಲ್ಲ ಆ ಸ್ಥಿತಿ], ಆ ವ್ಯಕ್ತಿಯ ಇತರ ಅಂಗಗಳು ಹಲವರಿಗೆ ಉಪಯೋಗಕ್ಕೆ ಬರುವುದನ್ನು ನೋಡಿದರೆ ಬ್ರೈನ್ ಇದ್ದರೂ ಲಕ್ಷ ಸತ್ತರೂ ಲಕ್ಷ ಎನ್ನುವ ಹೊಸ ಗಾದೆಯನ್ನೇ ಸೃಷ್ಟಿಸಬಹುದು ಎನಿಸುತ್ತದೆ! ಅಂತಹ ದುಃಖದ ಪರಿಸ್ಥಿತಿಯಲ್ಲೂ ತಮ್ಮ ಹತ್ತಿರದವರ ಅಂಗಾಂಗಗಳನ್ನು ಕೆಲವರ ಪ್ರಾಣ ಉಳಿಸಲು ದಾನಮಾಡುವ ಮನುಷ್ಯತ್ವವುಳ್ಳ ಮನುಷ್ಯರಿಗೊಂದು ಸಲಾಂ.
ಈಗಿನ ಕಾಲದ ಮಕ್ಕಳ ಮಿದುಳಿನ ವಿಷಯದಲ್ಲಿ ಹೀಗೆಲ್ಲ ಹೇಳುವಂತಿಲ್ಲ. ಕಾರಣ ಅವುಗಳ ಮಿದುಳಿನ ಕ್ಯಪಾಸಿಟಿ ನಮ್ಮ ಕಾಲದ ಮಿದುಳುಗಳಿಗಿಂತ ಬಹಳ ಹೆಚ್ಚಿರುತ್ತದೆ. ‘ಇದರ ಬ್ರೈನ್ ನೋಡಿ ಕಂಪ್ಯೂಟರ್ಗಿಂತ ಫಾಸ್ಟ್’ ಎನ್ನುವ ಮಾತನ್ನು ಆಗೀಗ ಕೇಳುತ್ತಿರುತ್ತೇವೆ. ‘ಹುಟ್ಟುವಾಗಲೆ ಎಷ್ಟೋ ಪೋರೀಗ್ರಾಮ್ಗಳನ್ನು ತಲೇಲಿ ತುಂಬ್ಕೊಂಡೇ ಹುಟ್ತಾವೇನೋ ಈಗಿನ ಮಕ್ಕಳು’ ಎನಿಸುವುದೂ ಉಂಟು. ಹೊಸ ಕೆಮರಾನೋ ಮೊಬೈಲೋ ಲ್ಯಾಪ್ಟಾಪೋ ತೆಗೆದುಕೊಂಡು ಅದನ್ನು ಉಪಯೋಗಿಸುವುದು ಹೇಗೆ ಎಂದು ಅರ್ಥವಾಗದೆ ನಾವು ಒದ್ದಾಡುತ್ತಿರುತ್ತೇವೆ. ಅದನ್ನೇ ಮೂರು ವರ್ಷದ ಮಗುವಿಗೆ ಕೊಟ್ಟು ನೋಡಿ, ಅದರ ಮೂಲವನ್ನೇ ಜಾಲಾಡಿಬಿಡುತ್ತದೆ! ನಮ್ಮ ಮಿದುಳು ಕೇವಲ ಹಾರ್ಡ್ವೇರಾದ್ರೆ, ಅವುಗಳದ್ದು ಸಾಫ್ರ್ಟ್ವೇರು ತುಂಬಿದ ಹಾರ್ಡ್ವೇರು!
ವಿಷಯ ಎಲ್ಲಿಂದೆಲ್ಲಿಗೋ ಹೋಗ್ತಾ ಇದೆ. ಕೆರೆಯ ದಡದಲ್ಲಿ ಬಿದ್ದಿದ್ದ ಮಿದುಳಿನ ಕಡೆ ಮತ್ತೆ ಗಮನ ಹರಿಸೋಣ.
ಪಕ್ಕದ ಹಳ್ಳಿಯ ಎಷ್ಟೋ ಜನ ದನ ಮೇಯಿಸಲು ಕೆರೆಯ ಕಡೆಗೆ ಬರೋದುಂಟು. ಒಂದಷ್ಟು ಜನ ಮೀನು ಹಿಡಿಯೋಕೂ ಬರ್ತಾರೆ. ನನ್ನ ಹಾಗೆ ಒಂದಿಬ್ಬರು ಫೆÇೀಟೋ ತೆಗೆಯೋಕೆ ಬರೋದೂ ಉಂಟು. ಅವರಲ್ಲಿ ಯಾರದ್ದಾದರೂ ಆಗಿರಬಹುದೇ ಎನಿಸಿತು. ಮರುದಿನ, ನಮ್ಮ ಮನೆಗೆ ಹಾಲು ಕೊಡಲು ಬರುವ ಅದೇ ಹಳ್ಳಿಯ ಗೀತಳನ್ನು ಕೇಳಿದೆ “ನಿಮ್ಮ ಹಳ್ಳೀಲಿ ಯಾರಾದ್ರೂ ಮಿದುಳು ಕಳ್ಕೊಂಡಿದಾರಾ?” ಅಂತ. ಅವಳೂ ಎಸ್ಸೆಸೆಲ್ಸಿ ತನಕ ಓದಿದ್ದಾಳಾದ್ರಿಂದ ಮಿದುಳು ಎನ್ನೋ ಶಬ್ದ ಅವಳಿಗೆ ಗೊತ್ತಿತ್ತು. ಆದರೆ ಅದನ್ನು ಕಳೆದುಕೊಳ್ಳೋದು ಅಂದರೇನು ಅಂತ ಅವಳಿಗೆ ಅರ್ಥವಾಗಲಿಲ್ಲವೇನೋ. ಸುಮ್ಮನೆ ನನ್ನ ಮುಖ ನೋಡುತ್ತಾ ನಿಂತಳು. ನನ್ನ ಮಿದುಳಿಗೆ ಅವಳ ಗೊಂದಲ ಅರ್ಥವಾಯಿತು. ಹಿಂದಿನ ದಿನದ ಘಟನೆ, ನನ್ನ ಅನುಮಾನ ಎಲ್ಲವನ್ನೂ ಅವಳಿಗೆ ವಿವರಿಸಿ ಹೇಳಿದೆ. “ಹಂಗೇನೂ ಯಾರೂ ಮಾತಾಡ್ಕತಿಲ್ಲ ಸಾರ್, ನಮ್ಮೂರಲ್ಲಿ” ಅಂದಳು.
ಒಂದು ಕ್ಷಣ ಬಿಟ್ಟು “ಮೊನ್ನೆ ದನ ಮೇಯಿಸ್ತಿರೂವಾಗ ಒಂದು ಹೆಲಿಕಾಪ್ಟರ್ ಕೆರೆ ಮೇಲಿಂದ ಹೋಯ್ತಪ್ಪಾ. ಯಾರೋ ಮಿನಿಸ್ಟ್ರೋ, ಗಿನಿಸ್ಟ್ರೋ ಇದ್ದಂಗಿತ್ತು” ಎಂದಳು! ‘ರಾಜ್ಯ ಆಳೋದಕ್ಕೆ ಬ್ರೈನ್ ಬೇಡ – ಮಸಲ್ ಪವರ್ ಸಾಕು. ಇದೊಂದು ಹೊರೆ ಯಾಕೆ’ ಅಂತ ಯಾರಾದ್ರೂ ರಾಜಕಾರಣಿಗಳು ಕೆಳಗೆ ಎಸೆದು ಹೋಗಿರುವ ಸಾಧ್ಯತೆಯೂ ಇದೆಯಲ್ಲವೇ?! ಅಥವಾ ಅಕಸ್ಮಾತ್ ಕೆಳಗೆ ಬಿದ್ದುಹೋಗಿ ಅವರಿಗೆ ಗೊತ್ತಾಗಲಿಲ್ಲವೋ? ಈ ವಿಷಯ ಊಹೆ ಮಾಡೋದ್ರಲ್ಲಿ ನನಗಿಂತ ಗೀತಾಳೇ ವಾಸಿ ಎಂದು ಆಗ ನನ್ನ ಮಿದುಳಿಗೆ ಹೊಳೆಯಿತು! ಎಲ್ಲರ ಮಿದುಳಿಗೂ ಅದರದ್ದೇ ಆದ ಇತಿ ಮಿತಿಗಳಿರುತ್ವೆ. ಅದಕ್ಕೆ ನಾನೂ ಹೊರತಲ್ಲ, ಅಲ್ಲವೇ?!
ಗೀತಾ ಹುಟ್ಟುಹಾಕಿದ ಸಂಶಯ ನನ್ನನ್ನು ಸುಮ್ಮನೆ ಕೂರಲು ಬಿಡದೇ ಮುಂದಿನೆರಡು ದಿನಗಳು ಟೀವಿ ವಾಹಿನಿಗಳ ಬ್ರೇಕಿಂಗ್ ನ್ಯೂಸ್ಗಳನ್ನು ಬಿಟ್ಟೂಬಿಡದೆ ನೋಡುವಂತೆ ಮಾಡಿತ್ತು. ಯಾವ ರಾಜಕಾರಣಿಯೂ ತಮ್ಮ ಮಿದುಳನ್ನು ಕಳೆದುಕೊಂಡ ಬ್ರೇಕಿಂಗ್ ನ್ಯೂಸ್ ಬರಲೇ ಇಲ್ಲ. ಮಿದುಳು ಕಳೆದುಕೊಂಡಿದ್ದಾರೆ ಎನ್ನುವ ನ್ಯೂಸ್ ಬಂದಿದ್ದರೆ, ಮತ್ತೊಂದು ಬ್ರೇಕಿಂಗ್ ನ್ಯೂಸಿಗೂ ಅವಕಾಶವಿತ್ತು: ‘ಅದು ಇದ್ದುದಾದರೂ ಹೌದೇ?’ ಈ ವಿಷಯದ ಚರ್ಚೆಗೆಂದು ಒಂದಷ್ಟು ಜನರನ್ನು ಸ್ಟುಡಿಯೋಗೆ ಕರೆದು ಅವರ ಮಿದುಳನ್ನು ಜಾಲಾಡಿ, ವೀಕ್ಷಕರ ಮಿದುಳನ್ನೂ ಕೆಡಿಸಿಬಿಡುತ್ತಿದ್ದರು ನಮ್ಮ ‘ಠೀವಿ’ ನಿರೂಪಕರು. ಒಟ್ಟಿನಲ್ಲಿ ಟಿವಿ ಚಾನಲ್ಗಳಿಗೆ ಒಂದೆರಡು ವಾರಕ್ಕಾಗುವಷ್ಟು ಸರಕು ಸಿಕ್ಕುವುದು ತಪ್ಪಿತ್ತು!
ಎಷ್ಟು ತಲೆ ಕೆಡಿಸಿಕೊಂಡರೂ, ಕೊನೆಗೂ ಕೆರೆಯ ದಡದಲ್ಲಿ ಕಂಡ ಮಿದುಳು ಯಾರದ್ದು ಎನ್ನುವುದು ಗೊತ್ತಾಗಲೇ ಇಲ್ಲ. ಈ ಲೇಖನ ಬರೆದು ಮುಗಿಸಿದ ಮೇಲೂ….
ನಿಮ್ಮಲ್ಲಿ ಯಾರದ್ದಾದರೂ ಆಗಿದ್ದರೆ {?} ಎನ್ನುವ ಕಾರಣದಿಂದ ಈ ಲೇಖನವನ್ನು ಪ್ರಕಟಿಸುತ್ತಿದ್ದೇನೆ!
{ವಿ ಸೂ : – ಈ ಪ್ರಬಂಧದ ಶೀರ್ಷಿಕೆಯನ್ನು – ಒಂದು ‘ಮಿದುಳಿನ ಕಥೆ’ ಅಥವಾ ‘ಒಂದು ಮಿದುಳಿನ’ ಕಥೆ ಅಥವಾ ‘ಒಂದು {ಮಿದುಳಿನ} ಕಥೆ’ – ಹೇಗಾದರೂ ಓದಿಕೊಳ್ಳಿ, ನಿಮ್ಮ ನಿಮ್ಮ ಮಿದುಳು ಹೇಳಿದ ಹಾಗೆ! ಕೆರೆಯ ದಡದಲ್ಲಿ ಕಂಡ ಮಿದುಳಿನಾಕಾರದ ಒಂದು ಕಲ್ಲು ಈ ತಲೆಹರಟೆಯ ಪ್ರಬಂಧಕ್ಕೆ ಪ್ರೇರಣೆ!}