- ಶಾರದಾ ವಿ. ಮೂರ್ತಿ
‘ಕಂಕುಳಲ್ಲಿ ಮಗುವನ್ನು ಚಚ್ಚಿಕೊಂಡು ಊರು ತುಂಬಾ ಹುಡುಕಿದರಂತೆ’ ಎನ್ನುವ ಗಾದೆಯನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಒಂದು ವಸ್ತುವನ್ನೋ, ಅತಿ ಜೋಪಾನವಾಗಿರಿಸಬೇಕಾದ ಒಂದು ಕಾಗದದ ತುಂಡನ್ನೋ ಎಲ್ಲಿಯೋ ಇಟ್ಟು ಇನ್ನೆಲ್ಲಿಯೋ ಹುಡುಕುವುದು ನನ್ನಂತಹವರಿಗಂತೂ ಅತಿ ಸ್ವಾಭಾವಿಕ. ಇನ್ನೂ ವಿಪರ್ಯಾಸವೆಂದರೆ ನಾವು ಏನನ್ನು ಹುಡುಕುತ್ತಿದ್ದೇವೆ ಎಂಬುದೇ ಮರೆತುಹೋಗಬಹುದು. ಕಾರಣವೆಂದರೆ ನಾವು ಹುಡುಕುವ ಭರಾಟೆಯಲ್ಲಿ ಎಂದೋ ಸುರಕ್ಷಿತವಾಗಿರಲಿ ಎಂದು ಅಡಗಿಸಿಟ್ಟಿದ್ದು ಅಂದು
ಗಂಟೆಗಳ ಹುಡುವಿಕೆಯಲ್ಲೂ ಸಿಗದಿದ್ದುದು, ಇಂದು ಕಣ್ಮುಂದೆ ಪ್ರತ್ಯಕ್ಷವಾಗಿ… ಆಹಾ! ಅದೆಂತಹ ದಿವ್ಯ ಆನಂದ… ಅದರ ಬೆಂಬತ್ತಿದ ಮನ ಇಂದು ಕಿತ್ತು ರಾಶಿ ಹಾಕಿದ್ದೇತಕ್ಕೆ ಎನ್ನುವುದನ್ನೇ ಮರೆತುಬಿಡುವಂತಹ ಸ್ಥಿತಿ. ಆದರೆ ಮತ್ತೆಷ್ಟೋ ಹೊತ್ತಿಗೆ ಮತ್ತೆ ಹುಡುಕಾಟ ಪ್ರಾರಂಭ. ಮನಸ್ಸಿಗೆ ಕಾಟ ಕೊಡುವ ಈ ಕಾರ್ಯಕ್ರಮವು ಮೆದುಳನ್ನು ಮೆಲ್ಲಗೆ ಚುಚ್ಚಿ ಘಾಸಿಗೊಳಿಸುತ್ತಲೇ ಇರುತ್ತದೆ. ಒಟ್ಟಾರೆ ನಾವಿಟ್ಟ ವಸ್ತು ನಮ್ಮ ಕೈಗೆ ಸಿಕ್ಕದೆ ಎಲ್ಲಿಟ್ಟಿದ್ದೇವೆಂಬುದೇ ಮರೆತುಹೋಗಿ, ನಾವೂ ಬಿಡದೆ ಅದಿಲ್ಲದೆ ಆಗುವುದೇ ಇಲ್ಲ ಎಂಬಂತಹ ಗುಂಗಿನಲ್ಲಿ ಇರುವ ಕೆಲಸವೆಲ್ಲ ಬಿಟ್ಟು ಬುಡಮೇಲು ಮಾಡಿ ಕಿತ್ತಾಡುವ ಕ್ರಿಯೆಗೆ ಹುಡುಕಾಟವೆನ್ನಬಹುದು. ಆ ವಸ್ತು ಸಿಕ್ಕಲು ಕೆಲವೊಮ್ಮೆ ಗಂಟೆಗಳೇ ವ್ಯರ್ಥವಾದಾಗ ಇದಕ್ಕಾಗಿ ಇಷ್ಟು ಹುಡುಕುವ ಆವಶ್ಯಕತೆ ಇತ್ತೆ ಎಂಬ ವಿಷಾದದ ಗೆರೆ ಮುಖದಲ್ಲಿ ಮಿಂಚಿ ಮರೆಯಾಗುವಾಗ ಕಾಲವೂ ಮಿಂಚಿರುತ್ತದೆ.
ಇಡೀ ದಿನ ಕನ್ನಡಕ ಹಾಕಿಕೊಳ್ಳಲು ಸರಿಹೋಗದು ಎಂಬ ಅನಿಸಿಕೆಯಿಂದ ಕುಳಿತಲ್ಲಿಯೋ ನಿಂತಲ್ಲಿಯೋ ಅದನ್ನೆಲ್ಲಿಯೋ ಇಟ್ಟು ಹುಡುಕಾಡುವುದು, ಒಮ್ಮೊಮ್ಮೆ ಅದನ್ನು ಹಾಕಿಕೊಂಡೇ ಹುಡುಕುವುದು ನನ್ನ ಮರೆವಿಗೆ, ಹುಡುಕಾಟದ ಒಲವಿಗೆ ಪ್ರತ್ಯಕ್ಷ ನಿದರ್ಶನ.
ಅದಲು–ಬದಲು
ಅಂದೊಮ್ಮೆ ಮನೆಗೆ ಹತ್ತಿರದ ನೆಂಟರೊಬ್ಬರು ಬಂದಾಗ, ನನಗೋ ಪ್ರಕಟವಾದ ನನ್ನ ಲೇಖನವೊಂದನ್ನು ಅವರಿಗೆ ತೋರಿಸುವ ಧಾವಂತ. ಮೇಜಿನ ಮೇಲಿಟ್ಟಿದ್ದ ಕನ್ನಡಕವನ್ನೇರಿಸಿಕೊಂಡು ಹುಡುಕುವ ಕ್ರಿಯೆಗೆ ತೊಡಗಬೇಕೆನ್ನುವಷ್ಟರಲ್ಲಿ ಬಂದಾಕೆ, “ನಿಮಗೆ ಈ ಕನ್ನಡಕ ಸರಿಹೋಗುತ್ತದೆಯೆ” ಎಂದು ಕೇಳಿದ ಪ್ರಶ್ನೆ ಬಲು ವಿಚಿತ್ರವೆನಿಸಿತು. “ನನ್ನ ಕನ್ನಡಕ ನನಗೆ ಸರಿಹೋಗದೆ ಏನು” ಎಂದು ತುಸು ಗೊಂದಲದಲ್ಲಿಯೇ ಉತ್ತರಿಸಿದ್ದೆ. “ಆದರೆ ಅದು ನನ್ನ ಕನ್ನಡಕ… ಇಬ್ಬರದೂ ಒಂದೇ ರೀತಿ ಇರಬಹುದು” ಎಂದು ಬಂದಾಕೆ ತುಸು ಸಂಕೋಚದಿಂದಲೇ ನುಡಿದಿದ್ದರು. “ಇಲ್ಲ…ಇಲ್ಲ… ಇದು ನನ್ನದೇ ಕನ್ನಡಕ… ನೀವು ಕನ್ನಡಕ ಮರೆತು ಬಂದಿರಬಹುದು” ನನ್ನ ಧ್ವನಿ ಅಷ್ಟೇ ಕಡಕ್ ಆಗಿತ್ತು. ಆಗ ಅವರ ಅತ್ತಿಗೆ, “ಅವರು ಕನ್ನಡಕ ತಂದಿದ್ದರು, ಅದು ನೋಡಲು
ಹೀಗೆಯೇ ಇತ್ತು. ನಿಮ್ಮದೇ ಕನ್ನಡಕ ಬೇರೆಲ್ಲಾದರೂ ಇಟ್ಟು ಮರೆತಿದ್ದೀರಾ ಎಂದು ಒಮ್ಮೆ ನೋಡುತ್ತೀರಾ…” ಎಂದು ಅತಿ ನಯವಾಗಿಯೇ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಕೇಳಿಕೊಂಡಿದ್ದರೂ ನನಗೆ ಅವಮಾನವಾದಂತಾಗಿತ್ತು.
ಅಷ್ಟು ಹೊತ್ತಿಗೆ ಇದನ್ನೆಲ್ಲ ಗಮನಿಸುತ್ತಿದ್ದ ಮಗ, “ಅಮ್ಮಾ ನೋಡು… ನಿನ್ನ ಕನ್ನಡಕ ಪೇಪರ್ ಒಳಗೆ ಮುಚ್ಚಿಹೋಗಿದೆ” ಎಂದು ಹೇಳುತ್ತಾ ಅವರೆದುರಿಗೇ ತಂದುಕೊಟ್ಟಾಗ ನನ್ನ ಮುಖ ನೋಡಬೇಕಿತ್ತು. ಬಂದವರಿಗೆ ಅವರ ಕನ್ನಡಕ ಹಿಂತಿರುಗಿಸಿದಾಗ ಸದ್ಯಃ ಸಿಕ್ಕಿತಲ್ಲ ಎಂಬ ಭಾವದಿಂದ ನಮ್ಮ ಮನೆಯಿಂದ ಹೋಗುವವರೆಗೂ ಅವರು ಕನ್ನಡಕವನ್ನು ಹಾಕಿಕೊಂಡೇ ಇದ್ದರು. ಬೇರೆಲ್ಲಾದರೂ ಹೋದಾಗ ಕನ್ನಡಕವನ್ನು ತೆಗೆದಿಟ್ಟರೆ ಆಗುವ ಫಜೀತಿ ಅವರಿಗೆ ಚೆನ್ನಾಗಿಯೆ ಅನುಭವವಾಗಿ ಪಾಠವೊಂದನ್ನು ಕಲಿತಿರಬೇಕು. ಈ ಪ್ರಸಂಗವಾದ ನಂತರ ಒಮ್ಮೆ ಸಮಾರಂಭವೊಂದರಲ್ಲಿ ಸಿಕ್ಕಾಗ, “ನಾನೀಗ ಕನ್ನಡಕ ಬದಲಾಯಿಸಿದ್ದೇನೆ… ಬೇರೆ ತರಹವೇ ಇದೆ” ಎಂದಾಗ ನನಗೆ ಹೇಗೆ ಹೇಗೋ ಆಗಿತ್ತು.
ಮೂಲಕಾರಣ
ಊರಿಗೆ ಹೋಗುವಾಗ ಅತಿ ಜಾಣತನದಿಂದ ಅಮೂಲ್ಯ ವಸ್ತು-ಒಡವೆಗಳನ್ನು ಯಾರಿಗೂ ಊಹಿಸಲು ಆಗದಂತೆ ಜೋಪಾನವಾಗಿಟ್ಟು, ಅದನ್ನೊಂದು ಪುಟ್ಟ ಡೈರಿಯಲ್ಲಿ ಬರೆದಿಟ್ಟು ಆಮೇಲೆ ಆ ಡೈರಿಯೇ ನಾಪತ್ತೆಯಾಗಿ ಹುಡುಕುವ ಕ್ರಿಯೆ ಸಾಂಗವಾಗಿ ಮುಂದುವರಿಯುತ್ತದೆ. ಪ್ರಯಾಣದ ಮುಗಿದ ನಂತರ ಇರುವ ಎಷ್ಟೋ ಕೆಲಸದೊಂದಿಗೆ ಈ ಹುಡುಕುವ ಕ್ರಿಯೆಯನ್ನೂ ಗತ್ಯಂತರವಿಲ್ಲದೆ ಮಾಡಲೇಬೇಕಾಗುತ್ತದೆ. ಹೀಗೆ ಹುಡುಕಾಟದ ಮೂಲ ಕಾರಣವನ್ನು ಬೆದಕುತ್ತಾ ಹೋದರೆ ಮರೆವು ಮತ್ತು ವ್ಯವಸ್ಥಿತವಾಗಿ ಜೋಡಿಸಿಡುವ ಶಿಸ್ತು ಇಲ್ಲದಿರುವಿಕೆ ಎಂದೇ ಹೇಳಬೇಕಾಗುತ್ತದೇನೋ. ಎಷ್ಟು ಚಿಕ್ಕ ಅಂಗಡಿಯಲ್ಲಿ ಎಷ್ಟೆಲ್ಲ ವಸ್ತುಗಳನ್ನು ಹೇಗೆ ಅಚ್ಚುಕಟ್ಟಾಗಿ ಜೋಡಿಸಿಟ್ಟಿರುತ್ತಾರೆ; ಗಿರಾಕಿಗಳು ಕೇಳಿದ ಆಕ್ಷಣದಲ್ಲೇ ಆ ವಸ್ತುವನ್ನು ಕೊಡುವ ಚಾಕಚಕ್ಯತೆಯನ್ನು ಹೊಂದಿರುತ್ತಾರೆ. ಎಲ್ಲೆಲ್ಲೂ ಮಾಲ್ಗಳು ಅವತರಿಸಿರುವ ಈ ಯುಗದಲ್ಲಿ ಚಿಕ್ಕ ಅಂಗಡಿಗಳವರು ವಸ್ತುಗಳನ್ನು ಗ್ರಾಹಕರಿಗೆ ಕೊಡುವಾಗ ಗುಣಮಟ್ಟದೊಂದಿಗೆ ಶೀಘ್ರವಾಗಿ ಕೊಡುವ ಕಲೆಯೂ ಕರಗತವಾಗಿರಲೇಬೇಕು. ಈಗಂತೂ ಗಿರಾಕಿಗಳಿಗೆ ನಿಮಿಷವೂ ಕಾಯುವ ವ್ಯವದಾನವಿರುವುದಿಲ್ಲ.
ಹಾಗೆಯೇ ಮನೆಯಲ್ಲಿ ನಾವಿಟ್ಟಿರುವ ವಸ್ತುಗಳು ಅಥವಾ ಯಾವುದೇ ಪುಸ್ತಕ, ಪತ್ರಿಕೆ ಇರಬಹುದು. ತಾಸುಗಟ್ಟಲೆ ಹುಡುಕುವ ಪ್ರಮೇಯ ಬಾರದೆ ಆ ಕ್ಷಣವೆ ಕೈಗೆ ದೊರೆಯುವಂತಾದರೆ… ಆಹಾ… ಎಂತಹ ಖುಶಿ…. ‘ನಮ್ಮ ಮನೆಯಲ್ಲಿ ಎಲ್ಲವೂ ಇದೆ… ಹುಡುಕಬೇಕಷ್ಟೆ’ ಎಂಬ ಮಾತು ತೃಪ್ತಿ ಕೊಡದು. ಆ ವಸ್ತುವಿಗಾಗಿ ಅಂದಿನ ಬೇರೆ ಕೆಲಸವೆಲ್ಲವೂ ಹಾಳು. ನಮಗೆ ಆ ವಸ್ತು ಸಿಗುವವರೆಗೂ ಹುಡುಕುತ್ತಾ ಹುಡುಕುತ್ತಾ ತಲೆಯಲ್ಲಿ ಗುಂಗಿ ಹುಳು
ಕೊರೆಯುತ್ತಿದ್ದರೆ ಬೇರೆ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳಲು ಮನಸ್ಸು ಮುಕ್ತವಾಗಿರದು.
ಸೋರಿಹೋಗುವ ಸಮಯ
ಇಂದು ಬೇಕಾದದ್ದು, ಮುಂದೆ ಎಂದೋ ಬೇಕಾಗಬಹುದಾದದ್ದು ಎಂದು ಎಲ್ಲವನ್ನೂ ಗುಡ್ಡೆಹಾಕಿಕೊಳ್ಳುವ ನಮ್ಮ ಮನಃಸ್ಥಿತಿಯೆ ಹುಡುಕಾಟಕ್ಕೆ ಮುಖ್ಯ ಕಾರಣವೇನೊ. ಎಷ್ಟೊಂದು ಹಣ ಕೊಟ್ಟು ಕೊಂಡಿರುವ ವಸ್ತುವನ್ನು ಕಸಕ್ಕೆ ಹಾಕಲು ಮನಸ್ಸೇ ಬಾರದ ಸ್ಥಿತಿ. ಮುಂದೆ ಎಂಬ ಕಾಲ ವರ್ಷಾನುಗಟ್ಟಲೆಯೂ ಆಗಿ, ಅದನ್ನು ನೋಡುವ ಸಂದರ್ಭವೇ ಒದಗಿ ಬಾರದಿರಬಹುದು. ಹಾಗೊಮ್ಮೆ ಎಂದೋ ಬೇಕಾದಾಗ ಅದನ್ನು ಎಲ್ಲಿಟ್ಟಿದ್ದೇವೆ ಎಂಬುದೇ ನೆನಪಿಗೆ ಬಾರದು. ನಾವೇನೋ ದೊಡ್ಡಮನಸ್ಸು ಮಾಡಿ ಒಂದಷ್ಟು ವಸ್ತುಗಳನ್ನು ಕಡಮೆ ಮಾಡಿಕೊಂಡರೆ, ಮರುದಿನವೇ ಆ ವಸ್ತು ಬೇಕಾಗಿಬಿಡುತ್ತದೆ. ಹಣ ಕೊಟ್ಟು ಮತ್ತೆ ಆ ವಸ್ತುವನ್ನು ಕೊಳ್ಳುವಾಗ ಇದ್ದುದನ್ನು ಕೊಟ್ಟುದಕ್ಕೆ ಪಶ್ಚಾತ್ತಾಪವಾಗಿ ಅದನ್ನೇ ನಾಲ್ಕಾರು ಸಲ ಉರು ಹಾಕಿಕೊಳ್ಳುತ್ತಾ ಮನೆಯಲ್ಲಿರುವವರ ತಲೆ ಚಿಟ್ಟುಹಿಡಿಸಿಬಿಡುತ್ತೇವೆ. ಇಂತಹ ಮನೋಭಾವವಿದ್ದರಂತೂ ಮನೆಯಲ್ಲಿ ಬೇಕಾದದ್ದಕ್ಕಿಂತ ಬೇಡವಾದದ್ದೇ ಧಂಡಿಯಾಗಿ ಸೇರಿಕೊಂಡುಬಿಡುತ್ತದೆ. ನಿರ್ದಾಕ್ಷಿಣ್ಯವಾಗಿ ಆಗಿಂದಾಗಲೆ ಖಾಲಿಮಾಡುವ ನಿಷ್ಠುರತೆ ಅಥವಾ ಕಠೋರತೆ ನಮ್ಮಲ್ಲಿದ್ದರೆ ಮಾತ್ರ ಈ ಹುಡುಕಾಟದಲ್ಲಿ ಸೋರಿಹೋಗುವ ಸಮಯವನ್ನು ಉಳಿಸಬಹುದು.
ಆದರೆ ಹೀಗೆ ಗಂಟೆಗಟ್ಟಲೆ ಹುಡುಕುತ್ತಾ ಇರುವಾಗ, ತಟ್ಟನೆ ಆ ವಸ್ತು ಎಲ್ಲಿಟ್ಟಿದ್ದೇನೆಂದು ನೆನಪಾಗಿ ಅಲ್ಲಿ ನೋಡಿದಾಗ ಆ ಕ್ಷಣವೇ ಅದನ್ನು ಕಂಡಾಗ ಹಾಳುಮರೆವನ್ನು ಬೈದುಕೊಂಡರೂ, ಆ ವಸ್ತು ಸಿಕ್ಕಿದಾಗ ಆಗುವ ಸಂತೋಷಕ್ಕೆ ಸಮವುಂಟೆ?
ಒಮ್ಮೆ ದೀಪಾವಳಿಯ ಸಂದರ್ಭ. ಧಾರ್ಮಿಕ ಸಮಾರಂಭವೊಂದಕ್ಕೆ ಹೋಗಿದ್ದೆವು. ಸರಿ, ಅಲ್ಲಿ ನನ್ನ ಕಾಲುಂಗುರ ಎಲ್ಲೋ ಕಳೆದುಕೊಂಡಿದ್ದು ನನ್ನ ಗಮನಕ್ಕೆ ಬಂದಮೇಲೆ ಕೇಳಬೇಕೆ… ಮನಸ್ಸು ದೇವರ ಮೇಲೆಯೋ, ಕಾರ್ಯಕ್ರಮದ ಮೇಲೆಯೋ ನಿಲ್ಲದೆ ಕಣ್ಣುಗಳು ಕಾಲುಂಗುರವನ್ನೆ ಅರಸುತ್ತಿದ್ದವು. ಅಲ್ಲಿರುವ ಕಾರ್ಪೆಟ್, ಮಣ್ಣಿನ ನೆಲ, ನಾನು ಓಡಾಡಿದ ಸ್ಥಳ ಎಲ್ಲೆಲ್ಲೂ ಹುಡುಕುತ್ತಲೇ ಇದ್ದೆ. ಆ ವಿಸ್ತಾರವಾದ ಜಾಗ ಹಾಗೂ ಅಷ್ಟೊಂದು ಜನಜಂಗುಳಿಯಲ್ಲಿ ಎಲ್ಲಿ ಸಿಕ್ಕೀತು? ಹೇಗೂ ಅದು ಸವೆದುಹೋಗಿತ್ತು, ಹೊಸದನ್ನು ಖರೀದಿಸಬೇಕು ಎಂಬ ಯೋಚನೆಯಲ್ಲಿದ್ದವಳಿಗೆ ಈಗ ಹೊಸದನ್ನು ಕೊಳ್ಳುವ ಅವಕಾಶ ಎಂದುಕೊಂಡರೂ, ಮನಸ್ಸು ಮತ್ತೆ ಆ ಕಾಲುಂಗುರದ ಸುತ್ತವೇ ಗಿರಕಿ ಹೊಡೆಯುತ್ತಿತ್ತು. ನನ್ನ ಹುಡುಕಾಟಕ್ಕೆ ತಂಗಿ ಹಾಗೂ ಗೆಳತಿಯರೂ ಜೊತೆಗೂಡಿದ್ದರು. ಕೊನೆಗೂ ಹುಡುಕಾಟ ವ್ಯರ್ಥವಾಗಿತ್ತು.
ಮನೆಗೆ ಬಂದೊಡನೆ ಮನೆಯವರು ಕಾರ್ಯಕ್ರಮ ಹೇಗಿತ್ತು ಎಂದು ವಿಚಾರಿಸಿದರೆ ಕಾಲುಂಗುರ ಕಳೆದುಹೋದ ವಿಷಯವನ್ನೇ ಮೊದಲು ವರದಿ ಮಾಡಿದ್ದೆ. ಅಚ್ಚರಿಯೆಂದರೆ ಮಗಳು ಮುಷ್ಟಿಯೊಳಗೆ ಏನನ್ನೋ ತಂದು ನನ್ನ ಅಂಗೈಯಲ್ಲಿ ಮುಚ್ಚಿಟ್ಟುಹೋಗಿದ್ದಳು. ಕಾಲುಂಗುರವೆಂದು ಬೇರೆ ಹೇಳಬೇಕಿಲ್ಲವಲ್ಲ. ಮನೆಯಲ್ಲಿ ಬಿದ್ದಿದ್ದು ಜಾತ್ರೆಯಲ್ಲಿ ಹುಡುಕಿದರೆ ಸಿಕ್ಕೀತೆ! ನನ್ನ ರೀತಿಗೆ ನನಗೇ ಇರಸುಮುರಸಾಗಿತ್ತು. ಆಗಲೇ ‘ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲು ಮಣ್ಣುಗಳ ಗುಡಿಯೊಳಗೆ… ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಿಮ್ಮೊಳಗೆ’ ಎಂದು ಡಾ. ಶಿವರುದ್ರಪ್ಪನವರು ಬರೆದಿರುವ ಕವನದ ಸಾಲುಗಳು ಮನಸ್ಸಿಗೆ ಬಂದಿದ್ದವು.
ಇರುವುದನ್ನು ಬಿಟ್ಟು ಇಲ್ಲದುದರ ಕಡೆಗೆ…
ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅರಸುವ ಸ್ಥಿತಿ ನಮ್ಮದು. ಎಲ್ಲರೊಳಗಿರುವ ಆತ್ಮವನ್ನು ಗುರುತಿಸುವಂತೆ ಸ್ವಾಮಿ ವಿವೇಕಾನಂದರು, ಪೂಜ್ಯ ಬಸವಣ್ಣನವರು ಅದೆಷ್ಟುಬಾರಿ ಕರೆಕೊಟ್ಟಿದ್ದಾರೊ… ಆದರೆ ಬೇರೆಯವರೊಳಗೆ ಆತ್ಮವನ್ನು ಗುರುತಿಸುವ ಬದಲು, ಇರುವುದೋ ಇಲ್ಲದ್ದೋ ಕ್ಷುಲ್ಲಕವಾದುದನ್ನು ಹುಡುಕುವುದರಲ್ಲೇ ಸಮಯ ಕಳೆಯುತ್ತೇವೆ.
ಈ ಜಗತ್ತನ್ನು ಬಿಟ್ಟುಹೋಗುವಾಗ ನಾವು ಇಲ್ಲಿಂದ ಏನೂ ತೆಗೆದುಕೊಂಡು ಹೋಗಲಾಗದೆಂಬುದು ವಾಸ್ತವ. ನಾವು ಮಾಡಿದ ಪಾಪ-ಪುಣ್ಯಗಳಷ್ಟೇ ನಮ್ಮೊಂದಿಗೆ ಬರುತ್ತವೆ ಎಂಬ ನಂಬಿಕೆ. ಆದರೂ ಒಂದು ಚಿಕ್ಕ ವಸ್ತು ಕಳೆದುಹೋದಾಗ ಅದೇಕೆ ಅಷ್ಟು ಹುಡುಕುತ್ತೇವೆ ಎಂಬುದೇ ವಿಸ್ಮಯ. ಹಾಗೆಯೆ ಮನಸ್ಸಿಗೇಕೋ ಶಾಂತಿಯೇ ಇಲ್ಲ. ಸ್ಥಳ ಬದಲಾವಣೆಯಾದರೆ ಸರಿ ಹೋದೀತು ಎಂಬ ಕಲ್ಪನೆಯಿಂದ ಊರೂರು ಸುತ್ತುತ್ತೇವೆ. ಆದರೆ ಚಿಂತೆಯ ಚಿತೆ ದಹಿಸುತ್ತಿರುವಾಗ ತೃಪ್ತಿಗಾಗಿ ಹುಡುಕಾಟ ನಡೆಸಲಾದೀತೆ?
ಸದಾ ಎಲ್ಲರ ಜೊತೆಜೊತೆಯಲ್ಲೇ ಇರುವ, ಅದಿಲ್ಲದೆ ಜೀವನವೇ ನಡೆಯದು ಎಂಬಂತಿರುವ ಮೊಬೈಲ್ಫೋನ್ನನ್ನು ಎಲ್ಲೋ ಇಟ್ಟು ಸಿಗದಿದ್ದರೆ ಬೇರೆಯ ಫೋನ್ನಿಂದ ಒಂದು ಮಿಸ್ಡ್ಕಾಲ್ ಕೊಟ್ಟರೆ ಹುಡುಕಾಟದ ಶ್ರಮ ತಪ್ಪುತ್ತದೆ. ಆದರೆ ಎಲ್ಲೋ ಯಾರೋ ಬೇಕೆಂದೇ ಕದ್ದಿದ್ದರೆ ಈ ಮಿಸ್ಡ್ಕಾಲ್ನಿಂದ ಏನೂ ಪ್ರಯೋಜನವಾಗದು.
ಇನ್ನು ನಿಧಿಯ ಹುಡುಕಾಟಕ್ಕಾಗಿ ಏನೆಲ್ಲಾ ನಂಬಿಕೆಗಳು, ದಂತಕಥೆಗಳು, ಜೌತಿಷ್ಯ ಚಾಲ್ತಿಯಲ್ಲಿವೆ ಎಂದರೆ ಸಖೇದಾಶ್ಚರ್ಯವಾಗುತ್ತದೆ. ಆಸೆಯೇ ದುಃಖಕ್ಕೆ ಮೂಲ ಎಂದು ನಾವು ತಿಳಿದಿದ್ದೇವೆ. ಅದರಲ್ಲೂ ಬೇರೊಬ್ಬರ ಸಂಪತ್ತು ನಮ್ಮದಾಗಬೇಕೆಂಬ ದುರಾಸೆಯ ಹುಡುಕಾಟ ದುಷ್ಫಲವನ್ನೇ ತಾರದಿದ್ದೀತೆ. ಎಲ್ಲೋ ಅವಿತಿರಬಹುದಾದ ನಿಧಿಯ ಹುಡುಕಾಟದಲ್ಲಿ ತನ್ನೊಳಗೆ ಇರಬೇಕಾದ ಮಾನವೀಯತೆಗೇ ತಿಲಾಂಜಲಿಯಿಡುತ್ತಿರುವುದು ಶೋಚನೀಯ ಸಂಗತಿ. ಮೂಢನಂಬಿಕೆಗೆ ಮಾರುಹೋದವರು ಏನೇನೋ ಪೂಜೆ, ಬಲಿ ಎಂದೆಲ್ಲ ತಮ್ಮ ಹಣವನ್ನಲ್ಲದೆ ಬೇರೆ ಮಕ್ಕಳನ್ನೂ, ವ್ಯಕ್ತಿಗಳನ್ನೂ ಕೊಲೆ ಮಾಡುವುದು… ನಿಧಿ ನಿಜವಾಗಿಯೂ ಇದ್ದುದೇ ಆದರೂ, ತಮಗೆ ಸಿಗುವುದೇ ಆದರೂ ಬೇರೆಯವರ ಸಮಾಧಿಯ ಮೇಲೆ ಅವರ ಕುಟುಂಬದವರ ದುಃಖ, ಶಾಪದ ದಳ್ಳುರಿಯಲ್ಲಿ ಸುಖದ ಹುಡುಕಾಟ ನಡೆಸುವ ಮನುಷ್ಯನ ನೀಚತನ ಅತ್ಯಂತ ಪೈಶಾಚಿಕವೆನಿಸುತ್ತದೆ. ಏಳು ಹೆಡೆಯ ಸರ್ಪ ಕೊಪ್ಪರಿಗೆ ಹಣವನ್ನು ಕಾಯುತ್ತಿರುವುದು, ಅದನ್ನು ತಮ್ಮದಾಗಿಸಿಕೊಳ್ಳಲು ಆಕಾಂಕ್ಷಿಗಳು ಪಡುವ ಪಾಡು… ಇಲ್ಲದುದನ್ನು ದಕ್ಕಿಸಿಕೊಳ್ಳಲು ಮಾಡುವ ಸಂಚು… ಇಂತಹ ಹುಡುಕಾಟದಿಂದ ಸುಖವೆಂದೂ ಸಿಗದು.
ಬೇರೆಯವರು ನಮ್ಮ ಮನೆಗೆ ಬಂದು ಹುಡುಕಾಡುವ ಸ್ಥಿತಿಯನ್ನಂತೂ ಎಂದೂ ತಂದುಕೊಳ್ಳಲಾಗದು. ಬಂದವರು ಹುಡುಕುವುದು, ಮನೆಯವರು ಕೈ ಕೈ ಹಿಸುಕಿಕೊಳ್ಳುತ್ತಾ ನೋಡುತ್ತಾ ಸುಮ್ಮನೆ ನಿಂತಿರುವುದು…
ಸ್ವಯಾರ್ಜಿತ ಸಂಕಟ
ತಮ್ಮ ದುಡಿಮೆಗೂ ಸೇರಿಸಿಟ್ಟ ಆಸ್ತಿಗೂ ತಾಳಮೇಳವಿಲ್ಲದೆ ಐಶಾರಾಮೀ ಜೀವನ ನಡೆಸುತ್ತಿರುವವರಿಗೆ ನಿರಾಳತೆ ಎಂದೂ ಇರದು. ತಮ್ಮ ದುಡಿಮೆಯ ಮೊತ್ತವನ್ನು ಸರಿಯಾಗಿ ದಾಖಲಿಸದೆ ತೆರಿಗೆ ವಂಚಿಸಿದವರಿಗೆ ನಿಶ್ಚಿಂತೆ ಹೇಗಿದ್ದೀತು… ‘ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಬಂದರೆ ‘ಬಚ್ಚಲಲ್ಲಿ ಬಂಗಾರ ಬಚ್ಚಿಟ್ಟವನಿಗೆ ಬೆಚ್ಚಗಿನ ಚಿನ್ನದ ತಗಡು ಹೊದ್ದರೂ ನಿದ್ದೆ ಬಾರದು’. ಎಲ್ಲೆಲ್ಲಿಯೋ ಅಡಗಿಸಿಟ್ಟ ಅವರ ಕಷ್ಟವಂತೂ ಹೇಳತೀರದು. ಕಳ್ಳಕಾಕರ ಭಯಕ್ಕೆ ಹೊರಗೆ ಕಾವಲುಗಾರರಿರಬಹುದು.
ಆದರೆ ಅಂತರಾತ್ಮದ ಎಚ್ಚರಿಕೆಗೆ ಕಿವುಡು ಪ್ರದರ್ಶಿಸಿದರೂ ಒಳಗಿನ ಒಂದು ಮೂಲೆಯಲ್ಲಿ ಅಪರಾಧೀಭಾವ ಕಾಡದಿದ್ದೀತೆ?
ನಿರಂತರ ನೆಮ್ಮದಿಯ ಹುಡುಕಾಟದಲ್ಲಿ ಊಟ, ನಿದ್ದೆಯನ್ನೂ ಕಳೆದುಕೊಳ್ಳುವಂತಹ ತಾವೇ ತಂದುಕೊಂಡ ಸಂಕಟ. ಎಲ್ಲರತ್ತ ಸಂಶಯದ ನೋಟ. ತಮ್ಮ ವಿರುದ್ದ ದೂರು ಸಲ್ಲಿಸುವವರು ತಮ್ಮ ಆಪ್ತವಲಯದಲ್ಲಿಯೇ ಇದ್ದಾರೆಯೆ ಎಂಬ ತೀರದ ಹುಡುಕಾಟ. ಅಲ್ಲಿ ಇಲ್ಲಿ ಲೆಕ್ಕ ಸಿಗದಂತೆ ಅತಿ ನಂಬಿಕಸ್ತರು ಎಂದುಕೊಂಡವರಿಗೆ ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಒಂದಿಷ್ಟು ಕೊಟ್ಟು, ಸದಾ ಅವರ ಮೇಲೆ ಕಣ್ಣಿಟ್ಟು.. ಅಬ್ಬಾ! ಏನೆಲ್ಲಾ ಕಸರತ್ತು ಮಾಡಿದರೂ ಇವರ ಪಾಲಿನ ಯಮಕಿಂಕರರಂತೆ ಕೊನೆಗೂ ಬಂದೇಬಿಡುತ್ತಾರೆ. ಆದರೂ ಗಟ್ಟಿ ಹೃದಯ ಇವರದು. ಅವರು ಮನೆಯ ಮೂಲೆ ಮೂಲೆಯನ್ನೂ ಹುಡುಕುವಾಗಲೂ ಇವರಿಗೆ ಇನಿತಾದರೂ ಪಶ್ಚಾತ್ತಾಪದ ಭಾವವಿಲ್ಲ. ಮನಸ್ಸನ್ನೇ ಕತ್ತಲಾಗಿಸಿಕೊಂಡ ಇವರಿಗೆ ಹೃದಯ ತೆರೆಯುವುದೇ ಬೇಕಿಲ್ಲವಲ್ಲ. ಟಿ.ವಿ. ಪರದೆಯ ಮೇಲೆ, ವಾಟ್ಸ್ಆ್ಯಪ್ಗಳಲ್ಲಿ ವರ್ಣರಂಜಿತವಾಗಿ ಇವರ ಮನೆಯ ಹುಡುಕಾಟದ ವಿವರ ಬರುತ್ತಿದ್ದರೆ, ಇವರು ಆಕ್ರೋಶ ವ್ಯಕ್ತಪಡಿಸುತ್ತಾ ಹುಡುಕಾಟಕ್ಕೆ ಕಾರಣರಾದವರ ಬಗ್ಗೆ ಸೇಡು ತೀರಿಸಿಕೊಳ್ಳುವ ಮಸಲತ್ತಿನಲ್ಲಿರುತ್ತಾರೆ.
ಹಿಂದೆಲ್ಲಾ ಚಂದಮಾಮದ ಕಥೆಗಳಲ್ಲಿ ಏಳುಮಲ್ಲಿಗೆ ತೂಕದ ರಾಜಕುಮಾರಿಯನ್ನು ಎಲ್ಲೋ ಊರಿನಾಚೆ ದೂರದ ಕಾಡಿನಲ್ಲಿ ಏಳು ಬೆಟ್ಟಗಳ ಕೆಳಗೆ ಯಾವುದೋ ಗುಹೆಯಲ್ಲಿ ರಾಕ್ಷಸನು ಬಂಧಿಸಿರುವನೆಂದೂ, ಅವನ ಪ್ರಾಣ ಮತ್ತೆ ಯಾವುದೋ ಬೆಟ್ಟದ ಕಲ್ಲುಬಂಡೆಯ ಕೆಳಗಿನ ಪೆಟ್ಟಿಗೆಯಲ್ಲಿ ಹಕ್ಕಿಯ ರೂಪದಲ್ಲಿರುವುದಾಗಿಯೂ ಓದುತ್ತಿದ್ದೆವು. ಮುಂದೇನಾಗುವುದೋ ಎಂದು ಉಸಿರು ಬಿಗಿಹಿಡಿದು ಓದುತ್ತಿದ್ದರೆ, ಕೊನೆಗೂ ಸುಂದರ ರಾಜಕುಮಾರನೊಬ್ಬ ಆ ಕಷ್ಟಗಳನ್ನೆಲ್ಲಾ ಜಯಿಸಿ ರಾಕ್ಷಸನ ಪ್ರಾಣವಿರುವ ಆ ಪೆಟ್ಟಿಗೆಯನ್ನು ಹುಡುಕಿ ರಾಜಕುಮಾರಿಯನ್ನು ಬಿಡುಗೊಡೆಗೊಳಿಸಿ ಮದುವೆಯಾಗುವಾಗ ನಮಗೋ ‘ಸದ್ಯಃ’ ಎನ್ನುವ ನಿರಾಳ ನಿಟ್ಟುಸಿರು.
ಪೊಲೀಸರಿಗೆ ಹುಡುಕಾಡುವ ಕೆಲಸ ಕೊಡುವವರೇ ಕಳ್ಳರು. ಎಲ್ಲಿಯೂ ಕಳ್ಳತನವೇ ಇಲ್ಲದಿದ್ದರೆ, ಮೋಸ-ವಂಚನೆಗಳೇ ಇಲ್ಲದಿದ್ದರೆ ಪೊಲೀಸ್ ಇಲಾಖೆಯ ಅಗತ್ಯವೇ ಇರುತ್ತಿರಲಿಲ್ಲ. ಒಂದು ರೀತಿಯಲ್ಲಿ ಕಳ್ಳರು, ಅಪರಾಧಿಗಳು ಎಷ್ಟೊಂದು ಜನರಿಗೆ ಅನ್ನದಾತರೆಂದು ಹೇಳಲೇಬೇಕಾಗುತ್ತದೆ. ಆದರೂ ಈ ರೀತಿಯ ಅನ್ನದಾತರ ಆವಶ್ಯಕತೆ ಸಮಾಜಕ್ಕೆ ಬೇಡವೆಂಬುದೇ ಸದಭಿರುಚಿಯ ಸಮಾಜದ ಆಶಯ.
ಶೋಧನೆಯಿಂದ ಸಂಶೋಧನೆಯೆಡೆಗೆ
‘ನಾವು ಯಾರು?’ ಎಂಬುದನ್ನು ನಾವಿನ್ನೂ ಹುಡುಕಿಕೊಳ್ಳುತ್ತಲೇ ಇದ್ದೇವೆ. ಪ್ರಾಯಶಃ ಮಹಾತ್ಮರಿಗಷ್ಟೇ ಅರಿವಾಗುವ ‘ನಾನು’ ಎಂಬುದರ ಹುಡುಕಾಟ ನಮಗೆಲ್ಲರಿಗೂ ಬಿಸಿಲ್ಗುದುರೆಯೇ ಸರಿ. ನಾವೇ ನಮ್ಮ ಅಂತರಾಳವನ್ನು ಬೆದಕಿ ನಮ್ಮೊಳಗಿನ ಆತ್ಮವನ್ನು ಕಂಡುಕೊಂಡಲ್ಲಿ, ಹಾಗೆಯೇ ಪರರ ಆತ್ಮವನ್ನೂ ಗುರುತಿಸಿ ಪ್ರೀತಿ ತೋರುವ ಔನ್ನತ್ಯವನ್ನು ತೋರಿದಲ್ಲಿ ನಾವು ಹುಡುಕಾಟದಲ್ಲಿ ಯಶಸ್ವಿಯಾದಂತೆ.
ಹಾಗೆಂದು ಹುಡುಕಾಟಕ್ಕೇ ಪೂರ್ಣವಿರಾಮ ಹಾಕುವುದು ಸಲ್ಲದು. ಕೆಲವು ಬಾರಿ ಒಳ್ಳೆಯ ಹುಡುಕಾಟ ಭಾರೀ ಅಚ್ಚರಿಯ ಫಲಿತಾಂಶಗಳನ್ನು ತಂದುಕೊಡುತ್ತದೆ. ಮರದಿಂದ ಸೇಬಿನಹಣ್ಣು ಮೇಲೆ ಹೋಗದೆ ಕೆಳಗೇ ಬಿದ್ದಿದ್ದೇಕೆ ಎಂಬ ವಿಚಾರವನ್ನು ನ್ಯೂಟನ್ ಎಡೆಬಿಡದೆ ಬೆದಕತೊಡಗಿದಾಗಲೆ ಗುರುತ್ವಾಕರ್ಷಣ ಶಕ್ತಿಯ ಅರಿವಾದದ್ದು. ಹೀಗೆಯೇ ಅನೇಕ ಹುಡುಕಾಟಗಳು ವಿವಿಧ ಅವಿಷ್ಕಾರಗಳಿಗೆ ಕಾರಣೀಭೂತವಾಗಿವೆ. ಅನೇಕ ವಿಚಾರಗಳ ಮಂಥನ, ಅವುಗಳ ಬೇರುಮಟ್ಟದ ಹುಡುಕಾಟ, ವರ್ಷಾನುಗಟ್ಟಲೆಯ ಶ್ರಮದ ಫಲ, ಸಾಧನೆಯ ಸಿದ್ಧಿ ಕೊಡುತ್ತದೆ.
ದ್ವಿಮುಖ ಪರಿಣಾಮ
ಹಿಂದೆ ಹೊಸ ಭೂಭಾಗಗಳ ಅನ್ವೇಷಣೆಯ ಮಹತ್ತ್ವಾಕಾಂಕ್ಷೆ ಇಟ್ಟುಕೊಂಡ ವಿದೇಶೀ ನಾವಿಕರು ಕೊನೆಗೂ ತಮ್ಮ ಗುರಿಯನ್ನೇನೋ ತಲಪಿದ್ದರು. ಹಾಗೆ ಹೊರಟ ಪೆÇೀರ್ಚುಗಲ್ಲಿನ ವಾಸ್ಕೋಡಗಾಮನಿಗೆ ನಮ್ಮ ದೇಶ ಹುಡುಕಿದ ಸಂಭ್ರಮವಾದರೆ ಭಾರತಕ್ಕೆ
ದುರದೃಷ್ಟ. ವಾಸ್ಕೋಡಗಾಮನ ಹಿಂದೆ ಡಚ್ಚರು, ಫ್ರೆಂಚರು ಹಾಗೂ ಬ್ರಿಟಿಷರು ಹಿಂಡುಹಿಂಡಾಗಿ ಇಲ್ಲಿಗೆ ಬಂದಿದ್ದಾಯಿತು. ಇಲ್ಲಿಯ ಸಂಪತ್ತಿನ ಹುಡುಕಾಟದಲ್ಲಿ ಮೊಗೆದಷ್ಟೂ ಐಶ್ವರ್ಯವನ್ನು ಬಾಚಿಕೊಂಡು ಮತ್ತೂ ಅಂತ್ಯವಿಲ್ಲದ ದಾಹಕ್ಕೊಳಗಾಗಿ ಮತ್ತಷ್ಟು, ಇನ್ನಷ್ಟು ಬೆದಕುತ್ತಾ ಇಲ್ಲಿಯೇ ನೆಲೆ ನಿಂತುಬಿಟ್ಟರಲ್ಲ! ಶಾಶ್ವತ ಹುಡುಕಾಟಕ್ಕೆಳಸಿ ಎಲ್ಲವನ್ನೂ ನುಂಗಿ ನೀರು ಕುಡಿಯುವ ಹವಣಿಕೆಯಲ್ಲಿ ಇಲ್ಲಿಯೇ ಬೇರುಬಿಟ್ಟು ಬ್ರಿಟಿಷರು ಭಾರತೀಯರ ಮೇಲೆ ಸವಾರಿ ಮಾಡತೊಡಗಿದ್ದು ಈಗ ಇತಿಹಾಸ. ಅವರ ಹುಡುಕಾಟದ ಫಲ ಭಾರತೀಯರಿಗಂತೂ ತೀರಾ ದುಬಾರಿಯಾಯಿತು.
ಶೋಧವೈವಿಧ್ಯ
ಹುಡುಕುವುದರಲ್ಲೂ ನಾನಾ ವಿಧಗಳಿವೆ. ಪರರಲ್ಲಿ ದೋಷಗಳನ್ನೇ ಹುಡುಕುವುದು ಕೆಲವರಿಗೆ ಪರಮಪ್ರಿಯ ಹವ್ಯಾಸ. ಬೇರೆಯವರ ಮಾತಿನಲ್ಲಿ, ಕೃತಿಯಲ್ಲಿ ತಪ್ಪು ಹುಡುಕುವುದರಲ್ಲಿ ಅಂತಹವರು ಬಲು ನಿಸ್ಸೀಮರು. ಆ ಗುಣವಿದ್ದವರು ಬೇರೆಯವರನ್ನು ಮೆಚ್ಚಿಕೊಳ್ಳುವುದು ಬಲು ಕಷ್ಟ. ಒಳ್ಳೆಯ ಪುಸ್ತಕವೊಂದನ್ನು ಕೊಟ್ಟರೆ
ಅವರು ಅದರಲ್ಲಿರುವ ನಕಾರಾತ್ಮಕ ಅಂಶಗಳನ್ನು ಮೊದಲು ಹುಡುಕುತ್ತಾರೆ. ಯಾವುದೇ ತಿಂಡಿ-ತಿನಿಸನ್ನು
ಕೊಟ್ಟರೆ ಅದು ಸೊಗಸಾಗಿದ್ದರೂ ಅವರು ಅದರಲ್ಲಿಯೂ ಒಂದು ತಪ್ಪು ಹುಡುಕಿಯೇ ಹುಡುಕುತ್ತಾರೆ. ಇಂತಹ ಹುಡುಕಾಟದ ಬುದ್ಧಿಗೆ ಮುಗುಳುನಗುವಿನ ಮೌನ ಪ್ರತಿಕ್ರಿಯೆಯಷ್ಟೇ ಸಾಕೆನಿಸುತ್ತದೆ. ತಪ್ಪು ಹುಡುಕುವಿಕೆಯಿಂದ ನಮಗೆ ಆ ಗಳಿಗೆಯಲ್ಲಿ ಬೇಸರವಾದರೂ ಮುಂದೆ ನಮ್ಮ ಓದು-ಬರಹ, ಅಡುಗೆ-ತಿಂಡಿ ಎಲ್ಲವೂ ಖಂಡಿತ ಸುಧಾರಿಸುತ್ತವೆ. ‘ನಿಂದಕರಿರಬೇಕು’ ಎಂಬಂತೆ ನಮ್ಮೆಲ್ಲ ಕಾರ್ಯಗಳನ್ನೂ ದುರ್ಬೀನಿನಲ್ಲಿಟ್ಟು ಹುಡುಕುವವರಿದ್ದರೆ, ಅವರು ಹೇಳಿದ್ದಕ್ಕೆ ಬೇಸರಿಸದೆ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಆಗ ನಾವು ಪರಿಪೂರ್ಣತೆಯತ್ತ ಸಾಗಬಹುದೇನೋ… ನಾನು ನಾನೇ ಆಗುವುದನ್ನು ಕಲಿಯಬೇಕಾದರೆ ಇವೆಲ್ಲವೂ ಅಗತ್ಯವೆಂದೇ ಎನಿಸುತ್ತದೆ.
ರಾಜಕೀಯಕ್ಕೊಮ್ಮೆ ಕಾಲಿಟ್ಟುಬಿಟ್ಟರೆ ಸಾಕು, ಈ ತಪ್ಪು ಹುಡುಕುವ ಗುಣ ಅದೆಷ್ಟು ವಿಜೃಂಭಿಸುತ್ತದೆಂದರೆ ಒಂದು ಪಕ್ಷದವರು ತಮ್ಮ ಸಾಧನೆಯೆಂದು ಬೀಗಿಕೊಂಡ ಯೋಜನೆಯನ್ನೇ ಕೆಲಹೊತ್ತಿನಲ್ಲಿ ಇನ್ನೊಂದು ಪಕ್ಷದವರು ತೀರಾ ತಿರುವುಮುರುವು ಮಾಡಿ ಅವಗುಣಗಳನ್ನು ಬಿಂಬಿಸಿ ಆಗಷ್ಟೇ ಉಬ್ಬಿಕೊಂಡಿದ್ದ ಬೆಲೂನನ್ನು ಠುಸ್ ಎನಿಸಿಬಿಡುತ್ತಾರೆ. ಹಾಗೆಂದು ತಪ್ಪು ಹುಡುಕುವ ಕಲೆಯೂ ಅಷ್ಟು ಸುಲಭವಲ್ಲವೆಂದು ಪ್ರಕಾಶನಕ್ಕೆ ಸಿದ್ಧವಾಗುವ ಕರಡುಪ್ರತಿಯನ್ನು ತಿದ್ದುವಾಗ ನಮಗೆ ಅರಿವಾಗುತ್ತದೆ. ಅದು ಕೃತಿರೂಪಕ್ಕೆ ಬಂದಾಗಷ್ಟೇ ತಪ್ಪುಗಳು ನಿಚ್ಚಳವಾಗಿ ಕಂಡು ನಮ್ಮನ್ನು ಅಣಕಿಸುವುದುಂಟು.
ಅಳಿಲುಗಳು ಧಾನ್ಯವನ್ನೊ, ಬೀಜವನ್ನೊ ತಮ್ಮ ಚಳಿಗಾಲದ ಉಪಯೋಗಕ್ಕೆಂದು ಎಲ್ಲೋ ಮಣ್ಣಿನಲ್ಲಿ ಹೂತಿಟ್ಟಿರುತ್ತವಂತೆ. ಪಾಪ, ಅವುಗಳ ಹುಡುಕಾಟಕ್ಕೆ ಸಿಗದ ಬೀಜಗಳು ಕೊನೆಗೆ ಮೊಳೆತು ಸಸಿಯಾಗಿ ಮರಗಳಾಗುತ್ತವೆ. ಹುಡುಕಾಟದಲ್ಲಿ ಸೋತರೂ ಪರಿಸರ ರಕ್ಷಣೆಯಲ್ಲಿ ಅಳಿಲುಗಳು ಮಹತ್ತ್ವದ ಪಾತ್ರ ವಹಿಸುತ್ತವೆ.
ಬದುಕಿನ ಹುಡುಕಾಟ, ಸತ್ತ ನಂತರ ಏನಾಗುತ್ತೇವೆಂಬ ಹುಡುಕಾಟದ ತೊಳಲಾಟ… ಒಟ್ಟಾರೆ ಹುಡುಕಾಟದ ಕ್ರಿಯೆ ನಿತ್ಯ, ನಿರಂತರ.