
ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ‘ಯಕ್ಷಗಾನ’ ಒಂದು ಸಾತ್ತ್ವಿಕ ಮನೋರಂಜನಾ sಸಾಧನವಾಗಿ, ಕನ್ನಡಭಾಷೆಯ ಶುದ್ಧ ಕಲೆಯಾಗಿ, ಪುರಾಣಪ್ರಪಂಚವನ್ನು ಆಸಕ್ತ ಪ್ರೇಕ್ಷಕರೆದುರು ತೆರೆದಿಡುವ ಅದ್ಭುತವೂ ಜನಪ್ರಿಯವೂ ಆದ ಕಲೆಯಾಗಿದೆ.
ಕಾಲಕ್ಕೆ ತಕ್ಕಂತೆ ಸಹಜವಾದ ಮತ್ತು ಅನಿವಾರ್ಯವಾದ ಬದಲಾವಣೆಗಳು ಯಕ್ಷಗಾನಕ್ಕೂ ಅನ್ವಯವಾಗುತ್ತದೆ. ಹಿಂದಿನ ಯಕ್ಷಗಾನ ಪ್ರಸಂಗಗಳಿಗೂ, ಈಗಿನ ಯಕ್ಷಗಾನ ಪ್ರಸಂಗಗಳಿಗೂ ಸಾಕಷ್ಟು ಬದಲಾವಣೆಗಳು, ವ್ಯತ್ಯಾಸಗಳು ಆಗಿವೆ. ನಿರೂಪಣೆಯಲ್ಲಿ, ವಸ್ತುವಿನ್ಯಾಸದಲ್ಲಿ, ರಂಗದಲ್ಲಿ – ಹೀಗೆ ಎಲ್ಲ ವಿಧಗಳಲ್ಲೂ ಬದಲಾವಣೆಗೆ
ಒಗ್ಗಿಕೊಂಡಿದೆಯಾದರೂ, ಯಕ್ಷಗಾನ ತನ್ನ ಮೂಲ ಅಡಿಪಾಯದಿಂದ ವಿಮುಖಗೊಂಡು ಪೂರ್ಣವಾಗಿ ವಿರೂಪಗೊಂಡಿಲ್ಲ ಎಂಬುದೂ ಸತ್ಯ ಮತ್ತು ಸಮಾಧಾನಕರ ಸಂಗತಿ.
ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ತನ್ನ ಮಾಂತ್ರಿಕಶಕ್ತಿಯನ್ನು ಯಕ್ಷಗಾನ ಕಿಂಚಿತ್ತೂ ಕಳೆದುಕೊಂಡಿಲ್ಲ. ರಂಗದ ಮೇಲಿನ ಹಲವು ಅದ್ಭುತವೆನ್ನಿಸುವ ದೃಶ್ಯವೈಭವಗಳು, ಯಕ್ಷಗಾನ ಕಲಾವಿದರು ತಮ್ಮ ಬೌದ್ಧಿಕ ಸಾಮಥ್ರ್ಯದ ನೆಲೆಯಲ್ಲಿ ಮಾತಿನ ಮೂಲಕ ಸೃಷ್ಟಿಸುವ ರಸಪ್ರಸಂಗಗಳು ಯಕ್ಷಗಾನದ ಔನ್ನತ್ಯವನ್ನು ಇನ್ನಷ್ಟು ಎತ್ತರಕ್ಕೇರಿಸುತ್ತಿವೆ. ಇಂಥ ರಸಪ್ರಸಂಗಗಳಲ್ಲಿ ಕೆಲವಷ್ಟು ಆಸಕ್ತರನ್ನು ಬೆರಗುಗೊಳಿಸಿದರೆ, ಮತ್ತೆ ಕೆಲವು ಪ್ರಸಂಗಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಕೆಲವೊಂದು ಬಾರಿ ರಸಪ್ರಸಂಗವೆನ್ನಿಸುವುದು ಆಭಾಸಕರವಾಗಿ.. ಇಲ್ಲಾ.. ವಿರಸ ಪ್ರಸಂಗವಾಗಿ ನೋಟಕರ ಬೇಸರಕ್ಕೆ, ಮುಜುಗರಕ್ಕೆ ಕಾರಣವಾಗುವ ಸಂದರ್ಭಗಳೂ ಇಲ್ಲದಿಲ್ಲ.
ಯಕ್ಷರಂಗದ ಇಂಥ ಕೆಲವು ರಸಪ್ರಸಂಗಗಳನ್ನು ಮೆಲುಕು ಹಾಕುವ ಪ್ರಯತ್ನ ಇಲ್ಲಿದೆ.
*****
ಇಬ್ಬರು ಪ್ರಸಿದ್ಧ ಹಾಸ್ಯ ಕಲಾವಿದರು. ಯಕ್ಷಗಾನದಲ್ಲಿ ವಿದೂಷಕ ಪಾತ್ರಧಾರಿಗಳು ಎನ್ನುವುದು ರೂಢಿ. ಮಾತಿನ ಮಲ್ಲರಾಗಿದ್ದ ಈ ಇಬ್ಬರಿಗೂ ಅವರವರದ್ದೇ ಆದ ದೊಡ್ಡ ಅಭಿಮಾನಿ ಬಳಗವಿತ್ತು. ಈ ಅಭಿಮಾನಿ ಬಳಗದ ನಡುವೆ ಒಮ್ಮೆ ವಾಗ್ಯುದ್ಧ ನಡೆಯಿತು. ತಮ್ಮ ಮೆಚ್ಚಿನ ವಿದೂಷಕನೇ ಮಾತಿನಲ್ಲಿ ಮೇಲು ಎಂದು ಪರಸ್ಪರ ಕಚ್ಚಾಡಿ, ಆನಂತರ ಒಂದು ತೀರ್ಮಾನಕ್ಕೆ ಬಂದರು. ಒಂದೇ ವೇದಿಕೆಯಲ್ಲಿ ಈ ಇಬ್ಬರೂ ವಿದೂಷಕರನ್ನು ಮುಖಾಮುಖಿಯಾಗಿಸಿ, ಮಾತಿನ ಸ್ಪರ್ಧೆ ಏರ್ಪಡಿಸಿ, ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸಲು ಮುಂದಾದರು.

ಸರಿ.. ಆ ದಿನ ಬಂತು. ರಂಗದ ಮೇಲೆ ಇಬ್ಬರು ವಿದೂಷಕರೂ ಬ್ರಾಹ್ಮಣ ವೇಷಧಾರಿಗಳಾಗಿ ಮುಖಾಮುಖಿಯಾದರು. ಒಬ್ಬ ಬ್ರಾಹ್ಮಣ ವೇಷಧಾರಿ, “ಓಹೋಹೋ.. ರಾಮಭಟ್ಟರು..ತಮ್ಮ ಮರಣ ಯಾವಾಗ ಆಯಿತು?” ಎಂದು ಕೇಳಿಬಿಟ್ಟ! ಜನರೆಲ್ಲಾ ನಗೆಯಾಡಿದರು. ಆಗ ಮತ್ತೊಬ್ಬ ಬ್ರಾಹ್ಮಣ ಉತ್ತರಿಸಿದ: “ಓಹೋಹೋ..ಶ್ಯಾಮ ಭಟ್ಟರು.. ನನ್ನ ಮರಣ ನಿಮ್ಮ ಶ್ರಾದ್ಧದಲ್ಲಿ ಆಯಿತು.” ಈ ಉತ್ತರ ಕೇಳಿ ಅಭಿಮಾನಿಗಳು ಚಪ್ಪಾಳೆ ತಟ್ಟಿದರು. ಶ್ಯಾಮಭಟ್ಟರ ವೇಷಧಾರಿ ಹೇಳಿದ: “ಅಯ್ಯೋ ರಾಮಭಟ್ಟರೇ..ನೀವು ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡುಬಿಟ್ಟಿರಿ. ನಾನು ಹೇಳಿದ್ದು ನಿಮ್ಮ ಮರಣ ಅಂತಲ್ಲ ಮಾರಾಯ್ರೆ. ನಿಮ್ಮ ಬರೋಣ ಯಾವಾಗ ಅಂತ ಕೇಳಿದೆ. ಸೋತು ಬಿಟ್ಟಿರಲ್ಲಾ ನೀವು” ಎಂದು ಗಹಗಹಿಸಿದ. ಶ್ಯಾಮಭಟ್ಟರ ಅಭಿಮಾನಿಗಳು ‘ಹೋ’ ಎಂದು ಖುಷಿಯಿಂದ ಚೀರಿದರು. ಆಗ ರಾಮಭಟ್ಟರ ವೇಷಧಾರಿ ಮೆಲ್ಲಗೆ ಹೇಳಿದ: “ಸ್ವಾಮಿ ಶ್ಯಾಮಭಟ್ಟರೇ.. ನೀವೂ ನನ್ನ ಮಾತನ್ನು ಅರ್ಥೈಸಿಕೊಂಡಿಲ್ಲ. ನಿಮ್ಮ ಪ್ರಶ್ನೆಗೆ ನಾನು ಸರಿಯಾಗಿಯೇ ಉತ್ತರಿಸಿದ್ದೇನೆ. ನನ್ನ ಉತ್ತರ ಹೀಗಿತ್ತು: ‘ನನ್ನ ಬರೋಣ ನಿಮಿಷಾರ್ಧದಲ್ಲಿ ಆಯಿತು’. ನೀವು ನಿಮ್ಮ ಶ್ರಾದ್ಧ ಅಂತ ತಿಳಿದುಕೊಂಡು ಮಂಗ ಆದಿರಿ..” ರಾಮಭಟ್ಟರ ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ. ಶಬ್ದಗಳೊಡನೆ ಸರ್ಕಸ್ ಮಾಡುವ ಬುದ್ಧಿವಂತಿಕೆಗೆ ಇದೊಂದು ಸ್ಪಷ್ಟ ನಿದರ್ಶನವಲ್ಲವೆ?
*****
ತುಂಬಾ ಹಿಂದೆ.. ಬಹುಶಃ 50ರ ದಶಕದಲ್ಲಿರಬೇಕು.. ಹಿಲಾಲು ಬೆಳಕಿನಲ್ಲಿ ಯಕ್ಷಗಾನ ನಡೆಸುತ್ತಿದ್ದ ಕಾಲವದು. ‘ದ್ರೌಪದಿ ಪ್ರತಾಪ-ಕೌಂಡ್ಲಿಕ ವಧೆ’ ಪ್ರಸಂಗ. ದ್ರೌಪದಿಯನ್ನು ಅರಸುತ್ತ ಹೊರಟ ಅರ್ಜುನ ಪಾತ್ರಧಾರಿ ರಂಗಪ್ರವೇಶ ಮಾಡಿ, ಪ್ರೇಕ್ಷಕರತ್ತ ನೋಡುತ್ತ “ದ್ರೌಪದಿ ನಿಮ್ಮಲ್ಲಿದ್ದಾಳಾ?” ಎಂದು ಪ್ರಶ್ನಿಸಿದ. ಆಗ ಪ್ರೇಕ್ಷಕ ಸಮೂಹದಲ್ಲಿ ಮುಂದೆ ಕುಳಿತಿದ್ದ ವಯಸ್ಸಾದ ಹಳ್ಳಿಯ ಮುಗ್ಧ ಮಹಿಳೆಯೊಬ್ಬಳು ಎದ್ದುನಿಂತು, “ಇಲ್ಲಾ ಒಡೆಯಾ, ದೇವರಾಣೆಯಾಗೂ ನಮ್ಮನೆಗೆ ಆಕಿ ಬಂದಿಲ್ಲ. ಬಂದ್ರೆ ಮುದ್ದಾಂ ನಿಮಗೆ ತಿಳುಸ್ತೀನಿ ಒಡೆಯಾ” ಎಂದು ಕೈ ಮುಗಿದಳಂತೆ!
*****
ಆ ಕಾಲದಲ್ಲಿ ಪ್ರೇಕ್ಷಕರು ಯಕ್ಷಗಾನದಲ್ಲಿ ಎಷ್ಟೊಂದು ತಾದಾತ್ಮ್ಯಭಾವ ಹೊಂದಿರುತ್ತಿದ್ದರು ಹಾಗೂ ಕಲಾವಿದರೂ ತೀರಾ ನೈಜವಾಗಿ ಹೇಗೆ ಅಭಿನಯಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾದ ಪ್ರಸಂಗವೊಂದಿದೆ. ಕೇಳಿ: ಪ್ರಸಂಗ ‘ಭಕ್ತ ಪ್ರಹ್ಲಾದ’. ಪ್ರಹ್ಲಾದ ಒಂದೇಸಮನೆ ಹರಿನಾಮ ಜಪಿಸುವುದನ್ನು ಕಂಡು ಕ್ರೋಧಗೊಳ್ಳುವ ಹಿರಣ್ಯ ಕಶಿಪು ಪಾತ್ರಧಾರಿ, “ಮೂರ್ಖ, ಎಲ್ಲಿದ್ದಾನೆ ಆ ನಿನ್ನ ಹರಿ?” ಎಂದು ಕರ್ಣಕಠೋರವಾಗಿ ಆರ್ಭಟಿಸಿದರಂತೆ. ಆ ರೌದ್ರಾವೇಶಕ್ಕೆ ಬೆಚ್ಚಿದ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ತುಂಬು ಗರ್ಭಿಣಿಯೊಬ್ಬಳು ಅಲ್ಲೇ ಮಗುವಿಗೆ ಜನ್ಮ ನೀಡಿದ್ದಳಂತೆ! ಇದು ನಿಜವಾಗಿ ನಡೆದ ಘಟನೆ. ಆ ಮಗುವಿಗೆ ‘ಪ್ರಹ್ಲಾದ’ ಎಂದೇ ಹೆಸರಿಟ್ಟಿದ್ದಳಂತೆ ಆ ತಾಯಿ. (ಅಂಥ ಅದ್ಭುತ, ಅಮೋಘ ಅಭಿನಯ ನೀಡಿದ ಕಶಿಪು ಪಾತ್ರಧಾರಿ ಈ ಲೇಖಕನ ತಂದೆಯವರು!)
*****
ಕೆಲವೊಮ್ಮೆ ಇಂಥ ರಸಪ್ರಸಂಗಗಳು ಅಭಾಸಕ್ಕೆಡೆ ಮಾಡಿ, ಪ್ರಸಂಗದ ಔಚಿತ್ಯವನ್ನು ಹಾಳು ಮಾಡುವ ಸಂದರ್ಭಗಳೂ ಇವೆ. ಅಂಥ ಒಂದು ಪ್ರಸಂಗ ಒಮ್ಮೆ ಯಕ್ಷಗಾನದ ಇನ್ನೊಂದು ಹೃಸ್ವರೂಪವಾದ ‘ತಾಳಮದ್ದಲೆ’ಯಲ್ಲಿ ನಡೆದಿತ್ತು. ‘ಭೀಷ್ಮ ವಿಜಯ’ ಆಖ್ಯಾನ. ಹೆಸರುವಾಸಿ ಕಲಾವಿದರೊಬ್ಬರು ‘ಅಂಬೆ’ಯ ಪಾತ್ರ ನಿರ್ವಹಿಸುತ್ತ, ತನ್ನ ಸ್ವಯಂವರದ ಕುರಿತು ಹೇಳುತ್ತ, “ನಾನೆಷ್ಟು ಲೋಕೋತ್ತರ ಸುಂದರಿ ಎಂಬುದಕ್ಕೆ ಸಾಕ್ಷಿ. ಇಗೋ ನೋಡಿ, ಬಾಯಲ್ಲಿ ಒಂದೇ ಒಂದು ಹಲ್ಲೂ ಇಲ್ಲದ ಸುಕೇತುವಂಥ ‘ಬೊಚ್ಚುಬಾಯಿ’ಯ ರಾಜಕುಮಾರರೂ ನನ್ನನ್ನು ಮದುವೆಯಾಗಲು ಬಯಸಿ ಬಂದಿದ್ದಾರೆ” ಎಂದುಬಿಟ್ಟರು. ವಸ್ತುಸ್ಥಿತಿಯೆಂದರೆ,

ಸುಕೇತು ಪಾತ್ರ ನಿರ್ವಹಿಸುತ್ತಿದ್ದವರು ವೃದ್ಧರೊಬ್ಬರು. ಅವರ ಬಾಯಲ್ಲಿ ಹಲ್ಲುಗಳಿರಲಿಲ್ಲ ಎಂಬುದೂ ನಿಜವೇ. ಆದರೆ, ಆ ಪ್ರಸಂಗದಲ್ಲಿ ಸುಕೇತು ಒಬ್ಬ ಸುಂದರ ರಾಜಕುಮಾರ! ಅದರ ಅರಿವಿದ್ದೂ ಅಂಬೆ ಪಾತ್ರಧಾರಿ ಆ ರೀತಿ ವೈಯಕ್ತಿಕ ತೇಜೋವಧೆ ಮಾಡಿದ್ದು ಅನುಭವಿ ಕಲಾವಿದರಾಗಿದ್ದ ಆ ವೃದ್ಧರಿಗೆ ಸರಿಕಾಣಲಿಲ್ಲ. ಪ್ರಸಂಗ ಮುಂದುವರೆದು ಸಾಲ್ವನೊಡನೆ ಸುಕೇತು ಯುದ್ಧ ಮಾಡುವ ಸನ್ನಿವೇಶ ಬಂತು. ಸುಕೇತುವಿನ ಪದ್ಯವನ್ನು ಹಾಡಿ ಮುಗಿಸಿದ ಭಾಗವತರನ್ನು ಕುರಿತು, ಸುಕೇತು ಪಾತ್ರಧಾರಿಯಾಗಿದ್ದ ಆ ವೃದ್ಧರು, “ಅಯ್ಯಾ.. ನಾನು ಯುದ್ಧ ಮಾಡುವುದಿಲ್ಲ. ಯಾಕೆ ಗೊತ್ತುಂಟೋ? ಅಂಬೆ ತ್ರಿಪುರಸುಂದರಿ ಎಂದು ಭಾವಿಸಿ, ಮದುವೆಯಾಗುವ ಅಭೀಪ್ಸೆಯಿಂದ ನಾನು ಬಂದದ್ದೇನೋ ಹೌದು. ಆದರೆ, ಇಲ್ಲಿ ನೋಡುವಾಗ.. ನಾಗವೇಣಿಯಾಗಿರಬೇಕಾಗಿದ್ದ ಈ ಅಂಬೆಯ ತಲೆಯಲ್ಲಿ ಒಂದೂ ಕೂದಲಿಲ್ಲ. ಈ ‘ಬೋಳುಮಂಡೆ’ಯ ಅಂಬೆ ನನಗೆ ಬೇಡವೇ ಬೇಡ” ಎಂದುಬಿಟ್ಟರು! (ಅಂಬೆ ಪಾತ್ರಧಾರಿ ತಲೆಯನ್ನು ನುಣ್ಣಗೆ ಬೋಳಿಸಿಕೊಂಡು ಬಂದಿದ್ದರು!) ತನಗಾದ ವೈಯಕ್ತಿಕ ತೇಜೋವಧೆಯನ್ನು ಈ ರೀತಿ ಆ ವೃದ್ಧರು ತೀರಿಸಿಕೊಂಡದ್ದಕ್ಕೆ ಇಡೀ ಸಭೆ ಮೆಚ್ಚುಗೆಯ ಚಪ್ಪಾಳೆ ಹೊಡೆಯಿತಾದರೂ, ಈ ಪ್ರಸಂಗ ಆಖ್ಯಾನದ ಓಟಕ್ಕೆ,
ಓಘಕ್ಕೆ, ಒಟ್ಟಂದಕ್ಕೆ ಕಪ್ಪುಚುಕ್ಕೆಯಾಯಿತು ಎಂಬುದಂತೂ ಸತ್ಯ.
*****
ಹಳ್ಳಿಯೊಂದರಲ್ಲಿ ‘ಗದಾಯುದ್ಧ’ ಯಕ್ಷಗಾನ. ಕೆರೆಮನೆ ಮಹಾಬಲ ಹೆಗಡೆಯವರ ಅಮೋಘ ಅಶ್ವತ್ಥಾಮನನ್ನು ನೋಡಲೆಂದೇ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಆದರೆ ಆ ದಿನ ಅಲ್ಲಿ ಭಯಂಕರ ಮಳೆ. ಆದರೂ ಅಭಿಮಾನಿಗಳು ಯಕ್ಷಗಾನವಾಗಲೇಬೇಕೆಂದು ಹಠ ಹಿಡಿದರು. ಆಗ ಮಹಾಬಲ ಹೆಗಡೆಯವರು ಕರಿಕೋಟು ಧರಿಸಿ, ಕಪ್ಪು ಕನ್ನಡಕ ಹಾಕಿ, ಕೊಡೆಯನ್ನು ಹಿಡಿದು ಅಶ್ವತ್ಥಾಮನಾಗಿ ರಂಗ ಪ್ರವೇಶಿಸಿದ್ದರಂತೆ!
*****
ಒಮ್ಮೆ ಹವ್ಯಾಸಿ ಕಲಾವಿದರು ಪರಸ್ಪರ ವಂತಿಗೆ ಮೂಲಕ ಆಟ ಆಡಿದರು. ಖರ್ಚು-ವೆಚ್ಚ ಅಂದಾಜು
ಮಾಡಿ ಪ್ರತಿಯೊಬ್ಬರಿಗೂ ತಲಾ 50 ರೂ.ಗಳ ವರ್ಗಣೆ ಎಂದು ಅದೇ ಪ್ರಕಾರ ಸಂಗ್ರಹಿಸಿ ಗದಾಯುದ್ಧ ಆಟವಾಡಿದರು. ಆಟದ ಕೊನೆಯ ಹಂತ. ಕೌರವ ಭೀಮನ ಶಿರಕ್ಕೆ ಗದಾಘಾತ ನೀಡಿ ಬೀಳಿಸಿ, ‘ನೋಡಿರಿ ಧರ್ಮಜ ಫಲುಗುಣಾದಿಗಳು..’ ಎಂದು ಪಾಂಡವರನ್ನು ಛೇಡಿಸಿದ ನಂತರ ಅರ್ಜುನ ‘ಇಂದಿರೇಶ ಮುಕುಂದ ಲಾಲಿಸು..’ ಎಂದು ಕೃಷ್ಣನನ್ನು ಪ್ರಾರ್ಥಿಸಿದ ಮೇಲೆ ಕೃಷ್ಣ ಭೀಮನನ್ನು ಎಬ್ಬಿಸುತ್ತಾನೆ. ಪುನ: ಯುದ್ಧವಾಗಿ ಕೌರವ ತೊಡೆಯೊಡೆದು ಬೀಳುತ್ತಾನೆ. ಆ ಸನ್ನಿವೇಶದ ಯುದ್ಧ ಆರಂಭವಾಯಿತು. ಹಿಮ್ಮೇಳದವರು ಯುದ್ಧದ ಬಿಡ್ತಿಗೆ ಬಾರಿಸಿ ಸುಸ್ತಾಗಿ ಮುಕ್ತಾಯ ಬಾರಿಸಿದರು. ಕೌರವ ಬೀಳುವುದೇ ಇಲ್ಲ! ಕೃಷ್ಣ ಹಲವು ಬಾರಿ ಸನ್ನೆಯ ಮೂಲಕ ಸೂಚಿಸಿದ. ಭಾಗವತರು ಬೀಳು, ಬೀಳು ಎಂದು ಕೌರವನಿಗೆ ಸೂಚಿಸುತ್ತ ತಾಳ ತಟ್ಟಿದರು. ಆದರೂ ಕೌರವ ಬೀಳಲೇ ಇಲ್ಲ. ಭಾಗವತರಿಗೆ ಸಿಟ್ಟು ಬಂದು ‘ನೀನು ಬೀಳಬೇಕು ಎಂಬುದೂ ಗೊತ್ತಿಲ್ಲವೆ?’ ಎಂದು ಕೌರವನ ಪಾತ್ರಧಾರಿಗೆ ಗದರಿಸಿ ಹೇಳಿದರು. ಆಗ ಆ ಪಾತ್ರಧಾರಿ ‘ಕೌರವ ಬೀಳಬೇಕೆಂದು ನನಗೆ ಗೊತ್ತಿದೆ. ಆದರೆ ನಾವೆಲ್ಲ 50 ರೂ.ಗಳಂತೆ ವರ್ಗಣೆ ಹಾಕಿ ಈ ಆಟ ಆಡುತ್ತಾ ಇದ್ದೇವೆ. ಉಳಿದ ಎಲ್ಲ ಪಾತ್ರಧಾರಿಗಳೂ ತಮ್ಮ ತಮ್ಮ ವರ್ಗಣೆ ನೀಡಿದ್ದಾರೆ. ಈ ಭೀಮನ ಪಾತ್ರಧಾರಿ ಮಾತ್ರ ಕೇವಲ 30 ರೂ.ಗಳನ್ನು ಕೊಟ್ಟಿದ್ದಾನೆ. ಇನ್ನೂ ಇಪ್ಪತ್ತು ರೂ.ಗಳನ್ನು ಕೊಡಬೇಕು. ಈಗ ನಾನು ಬಿದ್ದರೆ ಆಟ ಮುಗಿದು ಹೋಗುತ್ತದೆ. ನಾಳೆ ಇವ 20 ರೂ.ಗಳನ್ನು ಕೊಡ್ತಾನೆ ಅಂತ ನಂಬ್ಲಿಕ್ಕಾಗುವುದಿಲ್ಲ. ಹಾಗಾಗಿ ನಾನು ಬೀಳುವುದಿಲ್ಲ. ಕೌರವ ಬೀಳದೆ ಭೀಮನ ಪಾತ್ರ ಪೂರ್ತಿಯಾಗುವುದಿಲ್ಲ. ಈತ ತನ್ನ ಪಾತ್ರ ಮುಗಿಸಬೇಕೆಂದಿದ್ದರೆ ಬಾಕಿ 20 ರೂ.ಗಳನ್ನು ಈಗಲೇ ಕೊಡಲಿ. ಬೀಳುತ್ತೇನೆ. ಬೇರೆ ಯಾರಾದರೂ ಜಾಮೀನಾದರೆ ಅಡ್ಡಿಯಿಲ್ಲ’ ಎಂದ. ಆಗ ಭಾಗವತರು ಜಾಮೀನಾಗಿ ಆಟ ಮುಗಿಸಿದರು.
*****
ಗದಾಯುದ್ಧ ಆಟ. ಕಡತೋಕ ಮಂಜುನಾಥ ಭಾಗವತರ ಹಾಡುಗಾರಿಕೆ. ಕೌರವನ ಪಾತ್ರಧಾರಿಯೂ ನುರಿತ ನಟರೇ. ಕೌರವನ ಪ್ರವೇಶವಾಯಿತು. ‘ಕಾಲು ನಡೆಯಲಿ ಹೆಣನ ಪರ್ವತವ ಏರಿಳಿದು’ ಮುಗಿಯಿತು. ಮುಂದೆ ಸಾಗುವಾಗ ‘ಕರದ ಗದೆಯಂ ಪೆಗಲೊಳಾಂತಾ ಸುಯೋಧನಂ/ ಪರಿವ್ರತಿಹರಕ್ತದೋಕುಳಿಯಂತೆಮ್ಮಡುವನು/ತ್ತರಿಸಿ ರಣಧಾರಿಯೊಳೋರ್ವನೇ ಬರುತಿರ್ದನೇನೆಂಬೆನಚ್ಚರಿ ಯನು’ ಈ ವಾರ್ಧಕ ಷಟ್ಪದಿಯನ್ನು ಹೇಳುವ ಕ್ರಮವಿದೆ. ಕೌರವನ ಪಾತ್ರಧಾರಿಗಳು ‘ಹೀಗೆಯೇ ಮುಂದುವರಿಯುತ್ತೇನೆ’ ಎಂದು ಹೇಳಿ ಗದೆಯನ್ನು ಕಂಕುಳಲ್ಲಿ ಅಮುಕಿ ಹಿಡಿದರು. ಕಡತೋಕರು ಆ ಕಡೆಗೆ ನೋಡಿ ಪದ್ಯ ಆರಂಭಿಸಿದರು – ‘ಕರದ ಗದೆಯಂ ಬಗಲೊಳಾಂತಾ ಸುಯೋಧನಂ’. ಆ ನಟರಿಗೆ ಪದ್ಯ ಕೇಳಿಸಿತು. ಓಹೋ ತಾನು ತಪ್ಪಿದೆನೆಂದುಕೊಂಡು ಗದೆಯನ್ನು ಹೆಗಲಿಗೆ ಆನಿಸಿಕೊಂಡರು. ಅದನ್ನು ನೋಡಿ ‘ಕರದ ಗದೆಯಂ ಪೆಗಲೊಳಾಂತ ಸುಯೋಧನ’ ಎಂದು ಭಾಗವತರು ಆರಂಭಿಸಿದರು. ಆ ನಟರಿಗೋ ಗದೆಯನ್ನು ಕಂಕುಳಲ್ಲಿ ಅಮುಕಿಕೊಳ್ಳುವ ರೂಢಿಯೇ ಹೆಚ್ಚಾಗಿತ್ತು. ನಾಲ್ಕು ಹೆಜ್ಜೆ ಹೋಗಿ ಪುನ: ಮೊದಲಿನಂತೆ ಕಂಕುಳಿಗೆ ಸೇರಿಸಿದರು. ಕಡತೋಕರ ಕಣ್ಣು ಆ ಕಡೆಗೇ. ಮತ್ತೆ ‘ಕರದ ಗದೆಯಂ ಬಗಲೊಳಾಂತಾ ಸುಯೋಧನಂ’ ಎಂದರು. ನಾಲ್ಕಾರು ಸಲ ಹೀಗೆಯೇ ಆಯಿತು. ಪ್ರೇಕ್ಷಕರಿಗೆ ನಗೆಯೋ ನಗೆ. ಭಾಗವತರ ಸೂತ್ರಧಾರಿಕೆಯ ಕುಶಲತಂತ್ರ ಕಲಾವಿದನನ್ನು ಪೆಚ್ಚಾಗಿಸಿತ್ತು.
*****
ಕಾಶೀರಾಜನ ಪಾತ್ರ ಮಾಡಿದ ಮಹನೀಯರೊಬ್ಬರು ಪೀಠಿಕೆಯಲ್ಲಿ ಹೇಳಿದ್ದರು: ‘ಮಂತ್ರೀ, ನಾನಾದರೋ ಸುಖ ಸಂತೋಷದಿಂದ ಈ ಕಾಶಿರಾಜ್ಯವನ್ನು ಆಳುತ್ತ ಬಂದಿದ್ದೇನೆ. ಆಡಳಿತ ನಡೆಸುತ್ತ ಇರುವಾಗ ಇದ್ದಕ್ಕಿದ್ದಂತೆ ನನ್ನ ಪತ್ನಿ ಗರ್ಭ ಧರಿಸಿದಳು..’ ಈ ಮಾತನ್ನು ಕೇಳಿ ಜನರೆಲ್ಲ ಗೊಳ್ಳೆಂದು ನಗತೊಡಗಿದರು. ಇವನಿಗೂ ತಿಳಿಯದ ಹಾಗೆ ಇವನ ಹೆಂಡತಿ ಇದ್ದಕ್ಕಿದ್ದಂತೆ ಗರ್ಭ ಧರಿಸಿದ್ದು ಹೇಗೆ? – ಇದು ಪ್ರೇಕ್ಷಕರ ಪ್ರತಿಕ್ರಿಯೆ!
*****
ಆಖ್ಯಾನ- ‘ಸೀತಾ ಕಲ್ಯಾಣ’. ಸೀತಾ ಕಲ್ಯಾಣ ಮುಗಿಸಿ ಅಯೋಧ್ಯೆಗೆ ತೆರಳುವ ಮಾರ್ಗಮಧ್ಯದಲ್ಲಿ ಪರಶುರಾಮ ಸಂಧಿಸುತ್ತಾನೆ. ರಾಮ ವೈಷ್ಣವಧನುವಿಗೆ ಹೆದೆಯೇರಿಸಿ ಪರಶುರಾಮನ ಪುಣ್ಯಲೋಕ ಪಥವನ್ನು ಸೆಳೆದುಕೊಳ್ಳುತ್ತಾನೆ. ಪರಶುರಾಮ ರಾಮನನ್ನು ಕೊಂಡಾಡಿ ಮಹೇಂದ್ರಗಿರಿಗೆ ತೆರಳುತ್ತಾನೆ. ಅಂದಿನ ಪರಶುರಾಮನ ಪಾತ್ರಧಾರಿಗೆ ಆ ತಕ್ಷಣಕ್ಕೆ
ಮಹೇಂದ್ರಗಿರಿಯ ಹೆಸರು ನೆನಪಾಗಲೇ ಇಲ್ಲ. ಎಲ್ಲಿಗಾದರೂ ಹೋಗುತ್ತೇನೆ ಎಂದು ಯಾವುದಾದರೂ ಹೆಸರು ಹೇಳದೆ ನಿರ್ಗಮಿಸುವಂತೆಯೂ ಇಲ್ಲ. ಹಾಗಾಗಿ ಪರಶುರಾಮ ‘ಕೇರಳಕ್ಕೆ ಹೋಗುತ್ತೇನೆ’ ಎಂದುಬಿಟ್ಟ! ಆಗ ಕೇರಳ ಲಾಟರಿ ಪ್ರಚಾರವೂ ಜೋರಾಗಿತ್ತು. ಮನೆಗೆ ಹೊರಡಲು ಸಿದ್ಧರಾಗಿ ನಿಂತ ಇಬ್ಬರು ಹುಡುಗರು ಪರಶುರಾಮ ಮಾತು ಮುಗಿಸುವಷ್ಟರಲ್ಲೇ ‘ಕೇರಳಕ್ಕೆ ಹೋದರೆ ಎರಡು ಲಾಟರಿ ಟಿಕೇಟು ತೆಗೆದುಕೊಂಡು ಬಾ’ ಎಂದು ಕೂಗಿದರು. ಪರಶುರಾಮ ಕಕ್ಕಾವಿಕ್ಕಿ!

*****
ಕೃಷ್ಣಸಂಧಾನ ತಾಳಮದ್ದಲೆ. ಕೃಷ್ಣ ಕೌರವನ ಸಭೆಗೆ ಬಂದು, ಕೌರವ ಸಿಂಹಾಸನದಿಂದ ಬಿದ್ದು, ಎದ್ದು ವಿದುರನನ್ನು ಜರೆದು, ಅವನು ಬಿಲ್ಲು ಮುರಿದು.. ಎಲ್ಲಾ ಆಯ್ತು. ‘ಅಹಹ ಕೇಳಿದೆಯ ಕರ್ಣ’ ಎಂಬ ಪದವೂ ಮುಗಿದು, ‘ಪೆÇಡವಿಗೋಸುಗ ಬಳಗ ಸಹಿತಲಿ ನಡೆಯಬೇಡ..’ ಪದ್ಯಕ್ಕೆ ಅರ್ಥ ಹೇಳುತ್ತಾ ಕೃಷ್ಣ, ‘ಸುಯೋಧನಾ.. ಸುಮ್ಮನೆ ಸಾಯಬೇಡ. ನೀನು-ನಿನ್ನವರು ಉಳಿಯಬೇಕಾದರೆ ಸಂಧಿಗೆ ಒಪ್ಪು. ಕುಶಸ್ಥಲಿ, ವೃಕಸ್ಥಲಿ, ವಾರಣಾವತ, ಆವಂತಿ, ಇಂದ್ರಪ್ರಸ್ಥ ಗ್ರಾಮಗಳನ್ನು ಕೊಡು’ ಎಂದ. ಆಗ ದುರ್ಯೋಧನನ ಪಾತ್ರಧಾರಿ, ‘ಕೃಷ್ಣಾ.. ಐದು ಗ್ರಾಮ ಕೊಡೋಣ. ಅದು ನೀನು ಕೇಳಿದ್ದೇ ಆಗಬೇಕಿಲ್ಲ. ನೇರ್ಲವಳ್ಳಿ, ಮತ್ತೀಗಾರ, ಹೊಸಳ್ಳಿ, ಬೊಮ್ಮನಳ್ಳಿ, ಊರತೋಟ ಈ ಐದು ಗ್ರಾಮಗಳನ್ನು ಕೊಡ್ತೇನೆ. ಸಂಧಿಗೆ ಒಪ್ಪಿಗೆಯೋ?’ ಎಂದು ಕೇಳಿದ. ಜನ ಬಿದ್ದೂ ಬಿದ್ದೂ ನಕ್ಕರು.
*****
ಪಾತ್ರಧಾರಿಗಳು ತಂತಮ್ಮ ನಿಜವಾದ ಹೆಸರುಗಳನ್ನು ಸಂದರ್ಭೋಚಿತವಾಗಿ ಬಳಸಿ ರಂಜಿಸುವುದು, ಪದ್ಯದಲ್ಲಿನ ಕೆಲವು ಶಬ್ದಗಳಿಗೆ ವಿಭಿನ್ನ ಅರ್ಥಪ್ರಯೋಗ ನಡೆಸಿ ಪ್ರೇಕ್ಷಕರನ್ನು ಮುದಗೊಳಿಸುವುದು, (ಉದಾಹರಣೆಗೆ- ‘ರುಕ್ಮಾಂಗದ ಚರಿತ್ರೆ’ ಪ್ರಸಂಗದಲ್ಲಿ ಧರ್ಮಾಂಗದನ ಪಾತ್ರಧಾರಿ ‘ಬಂದನಾಗಾ ಧರ್ಮಾಂಗದ’ ಎಂಬ ಪದ್ಯಕ್ಕೆ ‘ನಾಗ’ ಎಂದು ಸಮೀಕರಿಸುವುದು; ‘ವಿದ್ಯುನ್ಮತಿ ಕಲ್ಯಾಣ’ ಆಖ್ಯಾನದಲ್ಲಿ ಸುಲೋಚನನ ವೇಷಧಾರಿ “ಜಾರ ನೀನು” ಎಂದು ಗದರಿದಾಗ, ಜಯಂತನ ಪಾತ್ರಧಾರಿಯಿಂದ ಥಟ್ಟನೆ “ಜಾರುವುದಿಲ್ಲ ನಾನು” ಎಂಬ ಪ್ರತಿಕ್ರಿಯೆ!) ಲೌಕಿಕ ವಿದ್ಯಮಾನಗಳನ್ನು, ಪ್ರಸ್ತುತ ರಾಜಕೀಯ ಸಂಗತಿಗಳನ್ನು ಪೌರಾಣಿಕ ಪ್ರಸಂಗಗಳಿಗೆ ತಳಕು ಹಾಕಿ, ಸಿಳ್ಳೆ-ಚಪ್ಪಾಳೆ ಗಿಟ್ಟಿಸುವುದು ಮುಂತಾದ ಅನೇಕಾನೇಕ ರಸಪ್ರಸಂಗಗಳನ್ನು ರಂಗದ ಮೇಲೆ ನಾವು ನೋಡಿ, ಆನಂದಿಸಿ, ಅನುಭವಿಸಬಹುದಾಗಿದೆ.