ಆಶ್ರಮದ ಆವಾರದ ಹೊರಗೆ ಎರಡು ರಥಗಳು ಒಂದರ ಹಿಂದೆ ಒಂದೊಂದು ನಿಂತಿದ್ದವು. ರಭಸವಾಗಿ ಬಂದ ಕಾರಣ ರಥಚಕ್ರಗಳು ಎಬ್ಬಿಸಿದ ಧೂಳಿನ ಪರದೆ ನಿಧಾನವಾಗಿ ನೆಲಕ್ಕಿಳಿಯುತ್ತಿತ್ತು. ಅದರ ಹಿಂದೆ ಅಸ್ಪಷ್ಟವಾದ ಮೂರು ಮತ್ತೊಂದು ಆಕೃತಿಗಳು ಗೋಚರಿಸುತ್ತಿದ್ದವು. ಧೂಳು ಸರಿದು ನಿಚ್ಚಳವಾದಾಗ ಭೀಮಾರ್ಜುನ ಕೃಷ್ಣರು ನಾವಿದ್ದ ಕಡೆಗೆ ನಡೆದು ಬರುತ್ತಿದ್ದರು. ಅವರ ಹಿಂದೆ ಯುಧಿಷ್ಠಿರನೂ ಕಾಣಿಸಿದ. ಕೃಷ್ಣನ ಮುಖದಲ್ಲಿ ಎಂದಿನ ತಿಳಿಯಾದ ನಗು. ಆದರೆ ಸಾಯುಧರಾಗಿದ್ದ ಭೀಮಾರ್ಜುನರಿಬ್ಬರ ಮುಖಗಳು ನಿಗಿನಿಗಿ ಕೆಂಡಗಳಂತೆ ಉರಿಯುತ್ತಿದ್ದವು. ಬಹುಶಃ ನಾನು ಮಾಡಿದ ಅನಾಹುತ ತಿಳಿದು ಅದರ ಪ್ರತಿಕಾರದ ಆಶಯದಿಂದಲೇ ಬಂದಿರಬೇಕು. ಅವರು ಬರುತ್ತಿದ್ದ ಬಗೆಯಿಂದ ಅವರೊಳಗೆ ಕುದಿಯುತ್ತಿರುವ ಕೋಪ ನನ್ನ ಅರಿವಿಗೆ ಬಂತು. ನಾನು ವ್ಯಾಸರ ಬೆನ್ನ ಹಿಂದಕ್ಕೆ ಸರಿದೆ.
ರಭಸವಾಗಿ ನುಗ್ಗಿ ಬರುತ್ತಿದ್ದ ಭೀಮಾರ್ಜುನರು ನನ್ನ ಮುಂದಿದ್ದ ವ್ಯಾಸರನ್ನು ಕಂಡು ಒಂದು ಕ್ಷಣ ತಡೆದರು. ಅವರಿಗೆ ನಾನು ಕಾಣಿಸುವ ಮುನ್ನವೇ ವ್ಯಾಸರು ಗೋಚರಿಸಿದ್ದರಿಂದ ದುಡುಕಲಿಲ್ಲ. ಇನ್ನೇನು, ಆಶ್ರಮದೊಳಕ್ಕೆ ನುಗ್ಗಿಯೇಬಿಡುತ್ತಾರೆ ಎನ್ನುವಂತೆ ಬಂದವರು ಕೊಂಚ ತಡೆದುದರಿಂದ ನಾನು ಉಸಿರುಬಿಟ್ಟೆ.
“ಮಹರ್ಷಿಗಳಿಗೆ ವಂದನೆಗಳು. ಎಲ್ಲಿದ್ದಾನೆ ಆ ಪಾಪಿ ಗುರುಪುತ್ರ?” ಭೀಮ ಅಬ್ಬರಿಸಿದ. ಮೊದಲೇ ಗಟ್ಟಿದನಿಯ ಅವನ ಈಗಿನ ಮಾತಿಗೂ ಗರ್ಜನೆಗೂ ವ್ಯತ್ಯಾಸವಿರಲಿಲ್ಲ. ನಾನು ಅಜ್ಞಾತ ಭೀತಿಯಿಂದ ನಿಂತಲ್ಲೇ ಕಂಪಿಸಿದೆ.
“ಭೀಮಸೇನ, ಶಾಂತನಾಗು. ಹೌದು. ದ್ರೋಣಪುತ್ರ ಅಶ್ವತ್ಥಾಮ ಇಲ್ಲಿದ್ದಾನೆ. ನನ್ನ ಆಶ್ರಮದಲ್ಲಿ ನನ್ನ ಜತೆಗಿದ್ದಾನೆ. ಏನಾಯಿತು? ನಿನಗೆ ಅವನೇಕೆ ಬೇಕು?” ವ್ಯಾಸರು ತಮ್ಮ ಎಂದಿನ ಅನುದ್ವೇಗದ ಕಂಠದಲ್ಲಿ ಮಾತನಾಡಿದರು. ಅಷ್ಟು ಹೊತ್ತಿಗೆ ಉಳಿದವರೂ ಅವನ ಪಕ್ಕಕ್ಕೆ ಬಂದರು.
“ಅವನೇನು ಮಾಡಿದ ಎನ್ನುವುದನ್ನು ಹೇಳಬೇಕೆ? ಯುದ್ಧ ಮುಗಿದ ನಿನ್ನೆ ಮಧ್ಯರಾತ್ರಿ ಶಿಬಿರಕ್ಕೆ ನುಗ್ಗಿ ಮೈಮರೆತು ಮಲಗಿದ್ದ ನೂರಾರು ಮಂದಿಗಳನ್ನು ಕಡಿದು ಕೊಂದಿದ್ದಾನೆ. ಅವರಿಗೆ ಆಯುಧ ಹಿಡಿಯುವ ಅವಕಾಶವನ್ನೂ ನೀಡಲಿಲ್ಲ. ಹೇಗೋ ತಪ್ಪಿಸಿಕೊಂಡ ದೃಷ್ಟದ್ಯುಮ್ನನ ಸಾರಥಿಯಿಂದಲಾಗಿ ಈ ವಾರ್ತೆ ನಮಗೆ ತಿಳಿಯಿತು. ಅವನನ್ನು ಶಿಕ್ಷಿಸಲೆಂದೇ ಬಂದಿದ್ದೇವೆ ನಾವು” ಎಂದ ಭೀಮ.
“ಅಷ್ಟೇ ಅಲ್ಲ ಮಹರ್ಷೇ, ಎಳೆಯರಾದ ದ್ರೌಪದಿಯ ಐವರು ಮಕ್ಕಳನ್ನೂ ಕತ್ತರಿಸಿ ಹಾಕಿದ್ದಾನೆ ಈ ಪಾತಕಿ. ಇವನನ್ನು ಸುಮ್ಮನೆ ಬಿಡಲಾಗದು” ಎಂದ ಅರ್ಜುನ. ಅವನ ಮಾತಿನಲ್ಲಿ ಭೀಮನಲ್ಲಿದ್ದಷ್ಟು ವಿದ್ವೇಷ ಕಾಣಿಸಲಿಲ್ಲ. ಹಾಗೆಂದು ನನ್ನ ಬಗೆಗೆ ನಿಷ್ಠುರನೇ ಇದ್ದಿರಬೇಕು.
ವ್ಯಾಸರು ಅವರಿಗೆ ಯಾವ ಸಮಾಧಾನವನ್ನೂ ಕೊಡುವ ಸ್ಥಿತಿಯಲ್ಲಿರಲಿಲ್ಲ. ನನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುವುದು ಹೇಗೆ ತಾನೇ ಅವರಿಗೆ ಸಾಧ್ಯವಾದೀತು? ಆದರೂ ಅವರೆಂದರು,“ನಿಜ, ಅಶ್ವತ್ಥಾಮ ಅಪರಾಧಿಯೇ. ಅದರಲ್ಲಿ ಸಂಶಯವಿಲ್ಲ. ಅವನು ಶಿಕ್ಷಾರ್ಹನಾದರೂ ಇಲ್ಲಿ ಹಿಂಸೆ ಸಲ್ಲದು. ಇದು ಆಶ್ರಮ. ತಪೆÇೀಭೂಮಿ. ವೇದೋಪದೇಶ ನಡೆಯುವ ಪವಿತ್ರ ಸ್ಥಳ. ವಿದ್ಯಾಮಂದಿರದಲ್ಲಿ ಶಸ್ತ್ರಗಳ ಪ್ರಯೋಗ ನಿಷಿದ್ಧ. ಧರ್ಮಜ್ಞನಾದ ಯುಧಿಷ್ಠಿರನಿದ್ದಾನೆ. ದೇವನಾದ ಕೃಷ್ಣನೂ ಇಲ್ಲಿಯೇ ಇದ್ದಾನೆ. ಅವಸರಿಸಬೇಡಿ…” ವೇದವ್ಯಾಸರು ಭೀಮಾರ್ಜುನರ ಕೋಪದಿಂದ ನನ್ನನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದರು.
“ಮಹರ್ಷೇ, ನಾವಾಗಿ ಇಲ್ಲಿಗೆ ಬಂದುದಲ್ಲ. ಯುದ್ಧ ಮುಕ್ತಾಯವಾದ ಬಳಿಕವೂ ಬರೇ ಸೇಡಿನ ಕೃತ್ಯವಾಗಿ ಅಶ್ವತ್ಥಾಮ ನಡೆಸಿದ ಕೊಲೆಗೆಲಸದ ಪರಿಣಾಮವಿದು. ಅವನು ಮಾಡಿದ ದುಷ್ಕೃತ್ಯದ ಫಲವನ್ನು ಅವನೇ ಉಣ್ಣಬೇಕು. ನಿಮ್ಮ ಔದಾರ್ಯ ಅಸ್ಥಾನದಲ್ಲಿ ಪ್ರಕಟವಾಗಬಾರದು. ಆಗ ಅದೂ ಬೆಲೆಯಿಲ್ಲದೆ ವ್ಯರ್ಥವಾಗುತ್ತದೆ. ಮಾತ್ರವಲ್ಲ ನಿಮ್ಮ ಈ ನಿಶ್ಚಯದಿಂದ ಪ್ರೇರಿತರಾಗಿ ಮುಂದೆ ದುಷ್ಟರು ಋಷ್ಯಾಶ್ರಮಗಳನ್ನು ಆಶ್ರಯ ತಾಣವಾಗಿ ಬಳಸಿದರೆ ಅದರ ಪಶ್ಚಾತ್ ಪರಿಣಾಮಗಳ ಬಗೆಗೂ ತಾವು ಚಿಂತಿಸಬೇಕು. ಕೊಲೆಗಾರನ ಅಪರಾಧವನ್ನು ಹಾಗೆಯೇ ಬಿಟ್ಟುಬಿಡಲಾಗದು. ದಯಮಾಡಿ ಅವನನ್ನು ಶಿಕ್ಷಿಸಲು ಅನುವು ಕೊಡಿ” ಅರ್ಜುನ ಮಾತನಾಡಿದ. ವ್ಯಾಸರು ಮೌನ ತಾಳಿದರು.
ನನಗೆ ಇಲ್ಲಿಯವರೆಗಿದ್ದ ವ್ಯಾಸರ ಕುರಿತಾದ ಭರವಸೆಯೂ ಇಲ್ಲವಾಯಿತು. ಇನ್ನು ಸುಮ್ಮನಿದ್ದರೆ ಅವರು ನನ್ನನ್ನು ಕೈಬಿಡುವರೆಂಬುದು ಸ್ಪಷ್ಟ. ಇನ್ನೇನಿದ್ದರೂ ನನ್ನ ರಕ್ಷಣೆಯನ್ನು ನಾನೇ ಮಾಡಿಕೊಳ್ಳಬೇಕು. ಅವರು ಮುಂದಾಗುವ ಮುನ್ನವೇ ನಾನು ಆಕ್ರಮಣ ಎಸಗುವುದೇ ಸರಿ ಎಂದು ಭಾವಿಸಿದೆ. ನನ್ನ ತಂದೆಯವರು ಉಪದೇಶಿಸಿದ ಬ್ರಹ್ಮಶಿರವೆಂಬ ಮಹಾಸ್ತ್ರದ ಸ್ಮರಣೆ ಬಂತು. ಅದನ್ನು ಅವರಾಗಿ ಉಪದೇಶಿಸಿದ್ದಲ್ಲ. ನಿನ್ನಲ್ಲಿ ಅದಕ್ಕೆ ಅಗತ್ಯವಾದ ಧಾರಣಾ ಶಕ್ತಿ ಇಲ್ಲ ಅಂದಿದ್ದರು. ಆದರೂ ಹಟದಿಂದ ಅವರನ್ನು ಮಣಿಸಿ ಪಡೆದಿದ್ದೆ. ಈಗ ಅದನ್ನು ಪ್ರಯೋಗಿಸುವ ಅನಿವಾರ್ಯ ಬಂದಿದೆ. ಅವರು ಇನ್ನೇನಾದರೂ ಮಾಡುವ ಮೊದಲೇ ನಾನಿದನ್ನು ಪ್ರಯೋಗಿಸಿ ಅವರನ್ನು ನಾಶ ಮಾಡುವುದೇ ಬದುಕುವ ಉಪಾಯವೆಂದು ಯೋಚಿಸಿದೆ.
ಭೀಮಾರ್ಜುನರ ಸಹಿತ ಪಾಂಡವರ ಧ್ವಂಸವನ್ನು ಸಂಕಲ್ಪಿಸಿ ಬ್ರಹ್ಮಶಿರದ ಪ್ರಯೋಗಕ್ಕೆ ಮುಂದಾದೆ.
ಧನುರ್ಬಾಣಗಳು ನನ್ನಲ್ಲಿರಲಿಲ್ಲ. ಆದರೇನು? ಸಮೀಪದಲ್ಲಿ ಬಿದ್ದಿದ್ದ ಜೊಂಡುಹುಲ್ಲನ್ನು ಎತ್ತಿಕೊಂಡು ಮಂತ್ರೋಚ್ಚಾರ ಮಾಡಿ ಬ್ರಹ್ಮಶಿರವನ್ನು ಆವೇಶಗೊಳಿಸಿ ಅದನ್ನೇ ಅಸ್ತ್ರವಾಗಿಸಿ ಪ್ರಯೋಗಿಸಿಯೇಬಿಟ್ಟೆ. ಇಷ್ಟು ಹೊತ್ತು ವ್ಯಾಸರತ್ತಲೇ ಗಮನವಿಟ್ಟಿದ್ದವರಿಗೆ ನಾನೇನು ಮಾಡುತ್ತಿದ್ದೇನೆ ಎಂಬುದರ ಲಕ್ಷ್ಯವಿರಲಿಲ್ಲ. ಇದ್ದಕ್ಕಿದ್ದಂತೆ ಉರಿಗಾರುತ್ತ ಪ್ರಜ್ವಲಿಸಿದ ಅಸ್ತ್ರವನ್ನು ಅವರು ಗಮನಿಸುವ ಮೊದಲೇ ಕೃಷ್ಣ ಜಾಗೃತನಾದ. “ಅರ್ಜುನಾ, ಎಚ್ಚರ. ಅದೋ ಗುರುಪುತ್ರ ಬ್ರಹ್ಮಶಿರೋಸ್ತ್ರ ಪ್ರಯೋಗಿಸುತ್ತಿದ್ದಾನೆ. ನೀನೂ ಅದನ್ನೇ ಪ್ರಯೋಗಿಸು. ಇಲ್ಲವಾದರೆ ಸರ್ವನಾಶವಾಗುತ್ತದೆ” ಎಂದು ಕೂಗಿದ. ಮೊದಲೇ ಅರ್ಜುನನದು ಮಿಂಚಿನ ಚಲನೆ. ಕೃಷ್ಣನ ಮಾತು ಮುಗಿಯುವ ಕ್ಷಣದಲ್ಲಿ ಅವನ ಧನುಸ್ಸಿನಿಂದ ಬೆಂಕಿಯ ನಾಲಗೆ ಚಾಚುತ್ತ ಮಹಾಸ್ತ್ರ ಹೊಮ್ಮಿತು. ಎರಡೂ ಅಸ್ತ್ರಗಳ ಮಹಾಜ್ವಾಲೆಯಿಂದ ವ್ಯಾಸಾಶ್ರಮ ಬೆಳಕಿನಲ್ಲಿ ಮುಳುಗಿತು. ತಮ್ಮ ಅರಿವಿಗೆ ಬರುವ ಮುನ್ನವೇ ಘಟಿಸಿದ ಈ ಅಸ್ತ್ರ ಸಂಘರ್ಷದಿಂದ ವ್ಯಾಸರು ಮಾತಿಲ್ಲದೆ ನಿಂತರು. ಅವರಿಗೆ ಇದರಿಂದ ವಿಷಾದವಾಯಿತು ಎನ್ನುವುದನ್ನು ಅವರ ಮುಖವೇ ಸಾರುತ್ತಿತ್ತು. ಆದರೇನು? ನಾನು ಎಬ್ಬಿಸಿದ ಸಂಚಲನದ ಫಲಿತಾಂಶಕ್ಕೆ ಕಾಯುತ್ತಿದ್ದೆ. ಅಲ್ಲಿನ ವಾತಾವರಣವೆಲ್ಲ ಅಸ್ತ್ರಗಳ ಪರಿಣಾಮದಿಂದ ಸುಟ್ಟುಹೋಗುವುದೋ ಎನ್ನುವಂತೆ ಭಾಸವಾಗುತ್ತಿತ್ತು. ಗಾಳಿ ಬಿಸಿಯೇರಿ ಅಸ್ತ್ರಗಳಿಂದ ಹೊಮ್ಮಿದ ಬೆಂಕಿಯೇ ಬೆಳಕಾಗಿ ಏನೋ ವಿಪರೀತದ ಸೂಚನೆ ನೀಡುವಂತಿತ್ತು. ಆಶ್ರಮವಾಸಿಗಳೆಲ್ಲ ಭೀತಿ, ದಿಗ್ಭ್ರಾಂತಿಗಳಿಂದ ಕಂಗೆಟ್ಟಿದ್ದರು. ಕ್ಷಣಕ್ಷಣಕ್ಕೂ ಎರಡು ಬ್ರಹ್ಮಶಿರೋಸ್ತ್ರಗಳು ತೀಕ್ಷ್ಣತೆ ಹೆಚ್ಚಿಸಿಕೊಳ್ಳುತ್ತಿದ್ದವು. ಅಗ್ನಿವರ್ಷ ಸುರಿಸುತ್ತಿದ್ದವು.
ಏನಾಗುವುದೋ ಎಂಬ ಭೀತಿ ಕಾತರತೆಗಳಿಂದ ಅಲ್ಲಿದ್ದವರೆಲ್ಲ ತಲ್ಲಣಿಸುತ್ತಿದ್ದಂತೆ ಅಲ್ಲಿಗೆ ನಾರದರೇ ಮುಂತಾಗಿ ಹಲವು ಋಷಿಗಳು ಧಾವಿಸಿ ಬಂದರು. “ಅಯ್ಯೋ.. ಇದೇನು ಅನಾಹುತ? ನಿಮ್ಮ ಮಹಾಸ್ತ್ರಗಳ ಪ್ರಯೋಗದಿಂದ ಲೋಕವೇ ದಹಿಸಿಹೋದೀತು. ಅಯ್ಯಾ ಮಹಾವೀರರೆ, ದಯಮಾಡಿ ನಿಮ್ಮ ಅಸ್ತ್ರಗಳನ್ನು ಉಪಸಂಹರಿಸಿ.” ವ್ಯಾಸರೂ ಅಸ್ತ್ರಗಳ ಉಪಸಂಹಾರವನ್ನು ಕೋರಿದರು. ಅವರ ಈ ಒಕ್ಕೊರಲ ಬೇಡಿಕೆಯನ್ನು ಲಕ್ಷಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ.” ನಾನು ಅಸ್ತ್ರಪ್ರಯೋಗ ಮಾಡಿದ ಬಳಿಕ ಉಪಸಂಹರಿಸುವ ಪ್ರಶ್ನೆಯೇ ಇಲ್ಲ. ಅಲ್ಲದೆ ನಾನು ಪಾಂಡವರ ನಾಶಕ್ಕಾಗಿಯೇ ಇದನ್ನು ಪ್ರಯೋಗಿಸಿದ್ದೇನೆ. ಅದು ಸಾಧಿತವಾಗಲೇಬೇಕು” ಎಂದು ಉತ್ತರಿಸಿದೆ.
ಅರ್ಜುನನು ಮಾತ್ರ ಮುನಿಗಳ ಮಾತಿಗೆ ಗೌರವವಿತ್ತು, “ನಾನು ಕೇವಲ ರಕ್ಷಣೆಗಾಗಿ ಈ ಮಾಹಾಸ್ತ್ರ ಪ್ರಯೋಗ ಮಾಡಿದೆ. ನಿಮ್ಮ ಮಾತಿನಂತೆ ಈಗ ಅದನ್ನು ಉಪಸಂಹರಿಸುತ್ತೇನೆ” ಎಂದ. ಅವನ ಅಸ್ತ್ರವು ಶಾಂತವಾಯಿತು.
ವ್ಯಾಸರು ನನ್ನತ್ತ ತಿರುಗಿದರು, “ಮಗೂ ನಿನ್ನ ಮೂರ್ಖತನದಿಂದ ಲೋಕವೇ ದಗ್ಧವಾಗುವ ಸ್ಥಿತಿ ಬಂತು. ಇಂತಹ ಅಸ್ತ್ರ ಪ್ರಯೋಗದಿಂದ ಭೂಮಿಯಲ್ಲಿ ಹನ್ನೆರಡು ವರ್ಷಗಳ ಭೀಕರ ಬರಗಾಲ ಉಂಟಾಗುವುದು. ಜಿತೇಂದ್ರಿಯನಾದ ಪಾರ್ಥ ಅದನ್ನು ಹಿಂದೆಗೆದ. ನೀನೂ ವಿಳಂಬವಿಲ್ಲದೆ ಅದನ್ನು ಉಪಸಂಹರಿಸು.”
“ಸ್ವಾಮಿ, ನಾನು ಪಾಂಡವ ವಿನಾಶಕ್ಕಾಗಿ ಅದನ್ನು ಪ್ರಯೋಗಿಸಿದೆ. ಅದನ್ನು ಉಪಸಂಹಾರ ಮಾಡುವ ಉದ್ದೇಶವೇ ನನಗಿಲ್ಲ. ಅಲ್ಲದೆ ನಾನು ಬಯಸಿದರೂ ಅದನ್ನು ಉಪಸಂಹರಿಸಲಾರೆ. ಅದು ಪಾಂಡವ ಸಂತತಿಯನ್ನು ನಾಶ ಮಾಡದೆ ಬಿಡದು. ಅದೀಗ ಉತ್ತರೆಯ ಗರ್ಭದಲ್ಲಿರುವ ಶಿಶುವನ್ನು ಕೊಂದೇ ತೀರುವುದು.” ನನ್ನ ಮಾತು ಮುಗಿಯುತ್ತಿದ್ದಂತೆ ಕೃಷ್ಣ ಮುಂದೆ ಬಂದ. “ಮೂರ್ಖನೇ, ನೀನು ಅಪೇಕ್ಷಿಸಿದಂತೆಯೇ ಆಗಲಿ. ಉತ್ತರೆಯ ಶಿಶುವನ್ನು ನೀನು ಕೊಂದರೂ ನಾನು ಅದನ್ನು ಬದುಕಿಸಬಲ್ಲೆ. ಪಾಂಡವರ ಉತ್ತರಾಧಿಕಾರಿಯಾಗಿ ಅರುವತ್ತು ವರ್ಷಗಳ ಕಾಲ ಅವನು ಪರೀಕ್ಷಿತನೆಂಬ ಹೆಸರಿನಿಂದ ರಾಜ್ಯವಾಳುತ್ತಾನೆ. ಪರಿಕ್ಷೀಣವಾಗುತ್ತಿರುವ ಕುಲವನ್ನು ಉದ್ಧರಿಸುತ್ತಾನೆ. ನೀನು ಮಾಡುವುದನ್ನು ಮಾಡಿಕೋ.”
ಕೃಷ್ಣನ ಮಾತಿನಿಂದ ಮುನಿಗಳೂ, ಪಾಂಡವರೂ ಹೃಷ್ಟರಾದರು. ವ್ಯಾಸರು ನನ್ನನ್ನು ಕುರಿತು, “ನೋಡಿದೆಯ ಮಗು, ನಿನ್ನ ಅವಿವೇಕದಿಂದ ಆದ ಪರಿಣಾಮವನ್ನು? ಇಲ್ಲಿಯವರೆಗಿನ ನಿನ್ನ ಪಾತಕವನ್ನು ಪಶ್ಚಾತ್ತಾಪದಿಂದಲಾದರೂ ಕಳೆಯಬಹುದಿತ್ತು. ಆದರೆ
ಭೀಕರವಾದ ಅಸ್ತ್ರವನ್ನು ಬತ್ತಳಿಕೆಯಲ್ಲಿಟ್ಟುಕೊಂಡ ನೀನು ಅದನ್ನು ವಿವೇಚನೆಯಿಲ್ಲದೆ ಪ್ರಯೋಗಿಸಿದೆ. ನಿನಗೆ ಅದನ್ನು ಉಪಸಂಹರಿಸಲು ಬೇಕಾದ ಇಂದ್ರಿಯ ಸಂಯಮವೇ ಇಲ್ಲ. ಆದರೂ ಪ್ರಯೋಗಿಸಿದೆ. ಇದರಿಂದ ಒಂದಂತೂ ಖಚಿತ. ನಿನಗೆ ನಿನ್ನ ದುಷ್ಕೃತ್ಯದ ಕುರಿತು ಯಾವುದೇ ಪಶ್ಚಾತ್ತಾಪವಿಲ್ಲ. ನಿನ್ನಂತಹ ಅವಿವೇಕಿ ಶಿಕ್ಷಾರ್ಹನೇ ಹೌದು. ಮುಂದೇನು ಅನುಭವಿಸಬೇಕೋ ಅದನ್ನು ಅನುಭವಿಸಿಯೇ ತೀರಬೇಕು.”
ನಾನು ತಲೆತಗ್ಗಿಸಿದೆ.
ಈಗ ಕೃಷ್ಣನೆಂದ “ಪಾಪಿಯೇ, ನಿನ್ನ ಮತಿಹೀನತೆಯಿಂದ ಆದ ಅನಾಹುತವನ್ನು ನೆನೆದು ಉದ್ಧಾರದ ಅಪೇಕ್ಷೆಯನ್ನು ಹೊಂದುತ್ತಿ ಎಂದು ಅವಕಾಶ ಕಲ್ಪಿಸಿದರೆ ಅದನ್ನು ನಿರಾಕರಿಸುವ ಬುದ್ಧಿ ನಿನ್ನದು. ಅಲ್ಲಿ ಕಗ್ಗೊಲೆ ಮಾಡಿ ವ್ಯಾಸರ ಬಳಿಗೆ ಓಡಿಬಂದೆ. ಅವರ ರಕ್ಷಣೆಯಲ್ಲಿ ಸುರಕ್ಷಿತ ಎಂದು ಭಾವಿಸಿಕೊಂಡೆ. ನಿನ್ನ ಅಪರಾಧಕ್ಕೆ ವ್ಯಾಸರ ತಪಸ್ಸಿನ ರಕ್ಷಣೆಯೇ? ಒಂದು ವೇಳೆ ಅದೇ ಹೌದಾದರೆ ನಾಳೆ ಋಷ್ಯಾಶ್ರಮಗಳೆಲ್ಲ ನಿನ್ನಂತಹ ಕೊಲೆಗಡುಕರನ್ನು ಉಳಿಸುವ ತಾಣಗಳೆನಿಸಲಾರವೆ? ನಿನ್ನಂಥವನ ದೆಸೆಯಿಂದ ಅದೂ ಆಗಬೇಕೇನು? ನಿನಗೆ ನಿನ್ನ ಮಿತಿಯ ಪ್ರಜ್ಞೆಯಿಲ್ಲ. ಹಿಂದೊಮ್ಮೆ ನೀನು ದ್ವಾರಕೆಗೆ ಬಂದಿದ್ದೆ. ನಿನ್ನ ಉದ್ದೇಶವಿದ್ದುದು ನನ್ನ ಕೈಯಲ್ಲಿದ್ದ ಸುದರ್ಶನ ಚಕ್ರವನ್ನು ಪಡೆದುಕೊಳ್ಳುವದು. ಯಾಕೆಂದರೆ ಅಂತಹ ಚಕ್ರ ನಿನ್ನ ವಶದಲ್ಲಿದ್ದರೆ ಪ್ರಪಂಚವನ್ನೇ ಕ್ಷಣಗಳಲ್ಲಿ ಗೆಲ್ಲಬಹುದು. ಅದಕ್ಕಾಗಿ ನೀನು ಅದನ್ನು ಬೇಡಿದೆ. ಸರಿ, ನಾನು ಅದನ್ನು ಕೊಟ್ಟಾಗ ನಿನಗೆ ಎತ್ತುವುದಕ್ಕೂ ಆಗದೇ ಹೋಯಿತು. ನಿನ್ನಲ್ಲಿ ಧಾರಣಾ ಶಕ್ತಿಯಿಲ್ಲ. ಅಂತಹ ಮಹಾಸ್ತ್ರಗಳನ್ನು, ಶಕ್ತಿಗಳನ್ನು ಕೊಡುವಾಗ ಪಡೆಯುವವನಿಗಿಂತ ಕೊಡುವವನಿಗೆ ಹೆಚ್ಚು ಎಚ್ಚರ ಬೇಕು. ಯಾವನ ಕೈಗೆ ನಾವು ಕೊಡುತ್ತೇವೆಯೋ ಅದು ಅವನಲ್ಲಿ ದುರ್ಬಳಕೆ ಆಗಕೂಡದು. ಆತ್ಮಸಂಯಮ ಇದ್ದವನು ಮಾತ್ರ ಇಂತಹ ಶಕ್ತ್ಯಸ್ತ್ರಗಳನ್ನು ಇಟ್ಟಕೊಳ್ಳಬಹುದು. ಅದಿಲ್ಲದವನು ಸಂಗ್ರಹಿಸಿಕೊಂಡರೂ ಅದು ಉಳಿಯಲಾರದು. ಅದೇ ಕಾರಣಕ್ಕಾಗಿ ಸುದರ್ಶನ ನಿನ್ನ ವಶಕ್ಕೆ ಬರಲಿಲ್ಲ. ಅರ್ಜುನ, ನನ್ನ ಅತ್ಯಂತ ಪ್ರಿಯಸಖ, ಅವನೇ ಚಕ್ರಾಯುಧವನ್ನು ಕೇಳಿದವನಲ್ಲ. ಅವನು ಕೇಳಿದ್ದರೆ ಕೊಟ್ಟುಬಿಡುತ್ತಿದ್ದೆ. ಅರ್ಜುನನಲ್ಲಿ ಧಾರಣಾ ಶಕ್ತಿಯಿದೆ. ಆದರೂ ಅವನು ಕೇಳಲಿಲ್ಲ. ನಿನಗೆ ಪ್ರಯೋಗಿಸಿದ ಅಸ್ತ್ರವನ್ನು ಹಿಂತೆಗೆಯಲೂ ಬರುವುದಿಲ್ಲ. ವ್ಯಾಸರು ಎಚ್ಚರಿಸಿದರೂ ದುಡುಕಿ ಯುದ್ಧಕ್ಕೆ ಮುಂದಾದ ನಿನ್ನಂತಹ ಅಧಮನಿಗೆ ಶಿಕ್ಷೆಯಾಗಲೇಬೇಕು.”
ಕೃಷ್ಣ ತನ್ನ ದೀರ್ಘವಾದ ಮಾತಿಗೆ ವಿರಾಮವನ್ನಿತ್ತು ಉಳಿದವರ ಮುಖವನ್ನೊಮ್ಮೆ ನೋಡಿದ. ಅಲ್ಲಿದ್ದವರೆಲ್ಲ ಅವನ ದನಿಗೆ ಕಿವಿಯಾಗಿದ್ದರು. ನನಗೆ ಅವನ ಮಾತು ಇಷ್ಟವಿಲ್ಲವಾದರೂ ಕೇಳುವ ಅನಿವಾರ್ಯ. ಅವನ ಮಾತುಗಳು ನನ್ನ ಮೇಲೆ ಪರಿಣಾಮವನ್ನು ಬೀರಲಿಲ್ಲ. ನನ್ನನ್ನು ಶಿಕ್ಷಿಸುತ್ತೇನೆ ಎನ್ನುತ್ತಿದ್ದಾನೆ. ಏನು ಶಿಕ್ಷೆಯನ್ನು ಕೊಟ್ಟಾನು?
ಕೃಷ್ಣ ನನ್ನತ್ತ ತಿರುಗಿದ, “ತನ್ನ ಐವರು ಮಕ್ಕಳನ್ನು ಕಳೆದುಕೊಂಡ ಓರ್ವ ತಾಯಿಯ ಕಣ್ಣೀರು ಬತ್ತುವ ಮುನ್ನವೇ ನಿನ್ನ ನೆತ್ತರನ್ನು ನೆಲಕ್ಕೆ ಹರಿಸುವುದಕ್ಕಾಗಿ ಬಂದವನು ಭೀಮ. ನಿನ್ನ ತಲೆಯನ್ನು ಕತ್ತರಿಸಲು ಉತ್ಸುಕನಾಗಿದ್ದಾನೆ. ಆದರೆ ನಾನಿದಕ್ಕೆ ಆಸ್ಪದ ಕೊಡಲಾರೆ. ಇಲ್ಲ, ನೀನು ಸಾಯಬಾರದು. ಸತ್ತರೆ ಒಮ್ಮೆಗೆ ನಿನ್ನ ಸಂಕಟ ಮುಗಿಯುತ್ತದೆ. ಹಾಗಾಗ ಕೂಡದು. ನೀನು ನಿತ್ಯ ನರಳುವಂತಾಗಬೇಕು. ಎಂದಿಗೂ ನಿನಗೆ ಮನಃಶಾಂತಿ ಎನ್ನುವುದಿರಕೂಡದು. ಅಂತಹ ಶಿಕ್ಷೆಯನ್ನೇ ವಿಧಿಸುತ್ತೇನೆ. ಆದರೆ ಅದಕ್ಕೂ ಮೊದಲು ನಿನ್ನ ಶಿರಸ್ಸಿನಲ್ಲಿ ಧರಿಸಿಕೊಂಡಿರುವ ಉಜ್ಜ್ವಲವಾದ ಮಣಿ ಇದೆಯಲ್ಲ ಅದನ್ನು ಕೊಡು.”
ಈಗ ನನಗೆ ಆತಂಕವೆನಿಸಿತು. ನನ್ನಲ್ಲಿರುವ ಏಕೈಕ ಸಂಪತ್ತು ಆ ಮಣಿ. ಅದನ್ನು ಇವರು ಕಿತ್ತುಕೊಂಡರೆ ಇನ್ನೇನು ಉಳಿಯಿತು? ಇಲ್ಲ ಇದನ್ನು ಕೊಡಲಾರೆ.
“ಇಲ್ಲ ಕೃಷ್ಣ, ಈ ಮಣಿ ಬಹು ಅಮೂಲ್ಯವಾದುದು. ಇದನ್ನು ಧರಿಸಿದವನಿಗೆ ಯಾವ ಬಾಧೆಗಳೂ ಇಲ್ಲದ ಸೌಖ್ಯ ಒದಗುತ್ತದೆ. ಇದನ್ನು ಕೊಡಲಾರೆ” ಎಂದೆ.
“ನೀನು ಕೊಡುವುದೇನು? ನಾವೇ ಅದನ್ನು ಕತ್ತರಿಸಿ ತೆಗೆದುಕೊಳ್ಳುತ್ತೇವೆ. ನಿನಗೆ ಶಿಕ್ಷೆಯಾದುದರ ಕುರುಹಾಗಿ ನೊಂದ ದ್ರೌಪದಿಗೆ ಅದನ್ನು ತೋರಿಸುವುದಕ್ಕೆ” ಎಂದ ಕೃಷ್ಣ ಭೀಮನಿಗೆ ಸನ್ನೆ ಮಾಡಿದ. ಹೀಗೆ ನನ್ನಲ್ಲಿದ್ದ ಆ ದಿವ್ಯ ಮಣಿ ಅವರ ಕರಗತವಾಯಿತು.
ದಿಕ್ಕು ತೋಚದೆ ನಿಂತಿದ್ದ ನನ್ನನ್ನು ಉದ್ದೇಶಿಸಿ ಕೃಷ್ಣ ಮಾತನಾಡಿದ. ಅವನ ಕಣ್ಣುಗಳಲ್ಲಿ ತಿರಸ್ಕಾರವಿತ್ತು, ಅಸಹ್ಯವಿತ್ತು, ಕ್ರೋಧವಿತ್ತು.
“ಅಶ್ವತ್ಥಾಮ, ನೀನು ಪಾಪಿ. ನಿನಗೆ ಪ್ರಾಣ ತೆಗೆಯುವಂತಹ ಶಿಕ್ಷೆ ಸಾಲದು. ನೀನು ನಿತ್ಯ ನರಳಬೇಕು. ನಿನ್ನ ಕ್ರೌರ್ಯವನ್ನು ನೆನೆ ನೆನೆದು ನವೆಯಬೇಕು. ನಿನ್ನ ಮೈತುಂಬ ಹುಣ್ಣುಗಳಾಗಿ ದುರ್ಗಂಧ ಬೀರುತ್ತಿರಬೇಕು. ಯಾರೂ ನಿನ್ನನ್ನು ಮಾತನಾಡಿಸಬಾರದು. ಏಕಾಂಗಿಯಾಗಿ ಆಶ್ರಯವಿಲ್ಲದೆ ನೀನು ಅಲೆಯುತ್ತಿರಬೇಕು. ನಿರಂತರ ಮೂರು ಸಾವಿರ ವರ್ಷ ಈ ವಿಧಿಯನ್ನು ನೀನು ಅನುಭವಿಸಬೇಕು. ಈ ಯಾತನೆಯೇ ನಿನಗೆ ಶಿಕ್ಷೆ. ಇದು ನನ್ನ ಶಾಪ.”
ನಾನು ಏನೂ ಹೇಳಲಿಲ್ಲ. ಏನನ್ನು ತಾನೇ ಹೇಳಲಿ? ನನ್ನನ್ನು ಕೊಲ್ಲುತ್ತಿದ್ದರೆ ಎಲ್ಲವೂ ಕ್ಷಣಗಳಲ್ಲಿ ಮುಗಿದು ಹೋಗುತ್ತಿತ್ತು. ಆದರೆ ಈ ಶಾಪ ಮೈಗಂಟಿ ನಿತ್ಯವೂ ನಿಧಾನವಾಗಿ ಕೊಲ್ಲುವ ವಿಷದಂತೆ. ನಾನು ನಿಟ್ಟುಸಿರು ಬಿಟ್ಟೆ. ವ್ಯಾಸರೇ ಮೊದಲಾದವರು ಮೌನವಾಗಿ ದಿಟ್ಟಿಸುತ್ತಿದ್ದರು. ಅವರ ಕಣ್ಣುಗಳಲ್ಲಿ ಇದ್ದ ಭಾವ ನನಗೆ ಅರ್ಥವಾಗಲಿಲ್ಲ. ಅದು ಕನಿಕರವಂತೂ ಅಲ್ಲ. ಅದನ್ನು ತಿಳಿಯುವ ಅಪೇಕ್ಷೆಯೂ ನನಗಿರಲಿಲ್ಲ. ನಾನು ನಿಧಾನವಾಗಿ ಅಲ್ಲಿಂದ ಸರಿದು ಕಾಡಿನತ್ತ ಹೆಜ್ಜೆ ಹಾಕಿದೆ. ಶಾಪವು ಬೆನ್ನಿಗಂಟಿದ ಭಾರವಾಗಿ ನನ್ನನ್ನು ಅನುಸರಿಸುತ್ತಿತ್ತು. ಎಲ್ಲದರಿಂದ, ಎಲ್ಲರಿಂದ ದೂರವಾಗಿ ನಿರ್ಜನತೆಯ ಒಂಟಿತನದತ್ತ ಸಾಗಿದೆ.
ಎಲ್ಲಿಯೋ ತೊಡಗಿದ ನನ್ನ ಬದುಕಿನ ಕೊನೆಯಿಲ್ಲದ ಯಾನ ಅದು.