ನಾನೀಗ ಒಂಟಿಯಾಗಿದ್ದೆ. ಮನಸ್ಸು ಕೊತಕೊತ ಕುದಿಯುತ್ತಿತ್ತು. ಕೃಪ ಕೃತವರ್ಮರಿಬ್ಬರೂ ನನ್ನನ್ನು ಬಿಟ್ಟು ಹೊರಟು ಹೋದರು. ನಾನು ಎಲ್ಲಿ ಹೋಗಲಿ? ಇಷ್ಟು ಹೊತ್ತಿಗಾಗಲೇ ನಾನು ಮಾಡಿದ ದಾರುಣ ಕೊಲೆ ಎಲ್ಲರಿಗೂ ತಿಳಿದಿರುತ್ತದೆ.
ಆಚಾರ್ಯಪುತ್ರ ಅಶ್ವತ್ಥಾಮ ರಾತ್ರಿಹೊತ್ತು ಶಿಬಿರಕ್ಕೆ ನುಗ್ಗಿ ಮಲಗಿದ್ದ ಯೋಧರನ್ನು ಕಡಿದು ಕೊಂದ ಎಂಬ ವಾರ್ತೆ ಪಾಂಡವರ ಕಿವಿಗೂ ಬಿದ್ದಿರುತ್ತದೆ. ತಮ್ಮ ಸೇನಾನಿಯನ್ನು, ತಮಗಾಗಿ ಹೋರಾಡಿ ಗೆಲುವು ತಂದುಕೊಟ್ಟ ಸೈನಿಕರನ್ನು, ಅದಕ್ಕಿಂತ ಹೆಚ್ಚಾಗಿ ಎಳೆಯ ಉಪಪಾಂಡವರನ್ನು ಕತ್ತರಿಸಿ ಕೊಲೆ ಮಾಡಿದ ನನ್ನ ಕುರಿತು ಆಕ್ರೋಶ ಮುಗಿಲು ಮುಟ್ಟಿರುತ್ತದೆ. ಹಾಹಾಕಾರ ಎದ್ದಿರುತ್ತದೆ.
ಆಕ್ರೋಶ ಹುಟ್ಟಲಿ. ನನ್ನ ಪಕ್ಷದವರನ್ನು ಸದೆದು ಗೆದ್ದವರ ಗೆಲುವಿನಲ್ಲೂ ಒಂದು ಸೋಲು ಅವರಿಗೆ. ಅಸಹಾಯಕತೆ ಎಂದರೇನು ಎಂದು ಅರಿವಾಗಲಿ. ಪಾಂಡವರ ಬೆನ್ನು ಕಟ್ಟಿದ ಕೃಷ್ಣನಿಗೂ ತಮ್ಮವರ ಸಾವು ನೀಡುವ ನೋವೇನು ಎನ್ನುವುದು ತಿಳಿಯಲಿ. ನಮ್ಮ ವಿರೋಧಿಗಳು ನರಳಲಿ. ಒಂದು ಕ್ಷಣ ನೆಮ್ಮದಿಯ ಭಾವ ಸುಳಿಯಿತು. ಒಂದು ಕ್ಷಣ ಮಾತ್ರ. ಅದರ ಬೆನ್ನಿಗೇ ಅಜ್ಞಾತ ಭೀತಿ ಕಾಣಿಸಿಕೊಂಡಿತು. ಯಾತರ ಭೀತಿ? ಕ್ರುದ್ಧರಾದ ಭೀಮಾರ್ಜುನರ ಉರಿಯುವ ಮುಖಗಳು ಮನಃಪಟಲದಲ್ಲಿ ಕಾಣಿಸಿ ಎದೆ ತಲ್ಲಣಿಸುವಂತೆ ಮಾಡಿದವು. ನನ್ನನ್ನು ಹೀಗೆಯೇ ಉಳಿಯಗೊಡುವರೆ ಅವರು?
ಯುದ್ಧ ಮುಗಿದ ಬಳಿಕವೂ ಶಿಬಿರಕ್ಕೆ ನುಗ್ಗಿ ಕಂಡ ಕಂಡವರನ್ನು ಕತ್ತರಿಸಿ ಚೆಲ್ಲಿ ‘ಯುದ್ಧವಿನ್ನೂ ಮುಗಿದಿಲ್ಲ’ ಎನ್ನುವ ಸಂದೇಶವನ್ನು ತಲಪಿಸಿ ಬಂದೆನಲ್ಲ! ಈಗ ಹೊಡೆಯುವ ಸರದಿ ಅವರದು. ನನ್ನನ್ನು ಹುಡುಕಿ ಪ್ರತೀಕಾರ ಮಾಡಿಯಾರು. ಅಂದರೆ ಒಂದೋ ನಾನು ಅವರನ್ನು ಎದುರಿಸಬೇಕು; ಸಾಧ್ಯವಾದರೆ ಹೋರಾಡಬೇಕು. ಗೆಲ್ಲಬೇಕು. ನನ್ನ ಯೋಚನೆಯಲ್ಲಿದ್ದ ವ್ಯಂಗ್ಯಕ್ಕೆ ನನಗೇ ನಗು ಬಂತು. ಗೆಲ್ಲುವುದಿದ್ದರೆ ಕಳೆದ ಹದಿನೆಂಟು ದಿನಗಳ ಯುದ್ಧದಲ್ಲಿ ಗೆಲ್ಲುತ್ತಿರಲಿಲ್ಲವೆ? ಅಷ್ಟು ದೊಡ್ಡ ಸೈನ್ಯವನ್ನಿಟ್ಟುಕೊಂಡು, ಭೀಷ್ಮ, ದ್ರೋಣರಂತಹ ಮಹಾರಥರ ಬೆಂಬಲವಿದ್ದೂ ಸೋತವರು ನಾವು. ಈಗ ಎಲ್ಲ ಕಳಕೊಂಡು ರಿಕ್ತನಾಗಿರುವ ನಾನು ಹೋರಾಡಿ ಗೆಲ್ಲುವುದೆ? ಗೆಲ್ಲುವುದಿರಲಿ, ಉಳಿದರೆ ಸಾಕು ಎಂಬ ಪರಿಸ್ಥಿತಿ ನನ್ನದು. ಈಗ ಹೇಗೆ ಪಾಂಡವರನ್ನು ಎದುರಿಸಬೇಕು?
ಒಂದು ಕ್ಷಣ ನನ್ನ ಯೋಚನಾಶಕ್ತಿಯೇ ಹ್ರಾಸವಾದಂತೆ ಭಾಸವಾಯಿತು. ನನ್ನೆದುರು ಬಾಯ್ತೆರೆದು ನಿಂತ ಕರಾಳತೆಗೆ ದಿಗ್ಭ್ರಾಂತನಾದೆ. ನಾನು ಅವೇಶದಲ್ಲಿ ಮಾಡಿದ ಕೃತ್ಯದ ಪರಿಣಾಮ ಸದ್ಯವೇ ಎದುರಾಗಲಿತ್ತು. ಈ ವೇಳೆಗೆ ರಾತ್ರಿಯ ಘಟನೆಯನ್ನು ತಿಳಿದ ಪಾಂಡವರು ಖಂಡಿತ ಸುಮ್ಮನಿರಲಾರರು. ಪ್ರತಿಕಾರ ಮಾಡಿಯೇ ಮಾಡುತ್ತಾರೆ. ಮಕ್ಕಳನ್ನು ಕಳಕೊಂಡ ಅವರ ರೋಷ ದ್ವೇಷಗಳು ಈ ವೇಳೆಗೆ ಮುಗಿಲು ಮುಟ್ಟಿರುತ್ತವೆ. ನಾನು ಎಸಗಿದ ಕೃತ್ಯ ಅಷ್ಟು ಘೋರವಾಗಿತ್ತು. ನನ್ನಲ್ಲಿದ್ದ ಆವೇಶ ಇಳಿದು ಕಠೋರ ವಾಸ್ತವ ಕಣ್ಣೆದುರು ಕುಣಿಯತೊಡಗಿತು.
ವಿಸ್ತಾರವಾದ ಕುರುಕ್ಷೇತ್ರದ ಬಯಲಿನಲ್ಲಿ ಕೊಳೆಯುತ್ತಿದ್ದ ಹೆಣಗಳ ನಡುವೆ ನಿಂತಿದ್ದ ನನಗೆ ಬೆತ್ತಲಾದ ಅನುಭವವಾಗುತ್ತಿತ್ತು. ಕ್ಷಣಿಕ ಉದ್ರೇಕಕ್ಕೆ ವಿವೇಕದ ಕಡಿವಾಣ ತೊಡಿಸುತ್ತಿದ್ದರೆ ಈ ಸನ್ನಿವೇಶವನ್ನು ಎದುರಿಸುವ ಸಂದರ್ಭ ಬರುತ್ತಿರಲಿಲ್ಲ. ಆ ಗಳಿಗೆಯಲ್ಲಿ ಅಳಿದುಹೋದ ತಂದೆಯ ಮುಖ ಮನಸ್ಸಿನಲ್ಲಿ ಕಾಣಿಸಿಕೊಂಡಿತು. ‘ಮಗೂ, ಯುದ್ಧ ಬೇರೆ. ಕಗ್ಗೊಲೆ ಬೇರೆ. ಯುದ್ಧಕ್ಕೆ ಒಂದು ಸಮರ್ಥನೆಯಿದೆ. ಆದರೆ ಕೊಲೆಗೆ ಸಮರ್ಥನೆಯಿಲ್ಲ. ನೀನು ಯೋಧನಾಗಿದ್ದರೆ ಹೀಗೆ ಮಾಡುತ್ತಿರಲಿಲ್ಲ. ನೀನು ಕೌರವರ ಕಡೆ ನಿಂತು ಹೋರಾಟ ಮಾಡಿದೆ ಎಂದು ಪಾಂಡವರು ಶಾಶ್ವತ ದ್ವೇಷ ಇಟ್ಟುಕೊಳ್ಳುತ್ತಿರಲಿಲ್ಲ. ಅವರ ಆಶ್ರಯದಲ್ಲಿ ನೆಮ್ಮದಿ ಕಂಡುಕೊಳ್ಳಬಹುದಿತ್ತು. ಆದರೀಗ ಅವರ ದ್ವೇಷ ಕಟ್ಟಿಕೊಂಡು ಎಲ್ಲಿಗೆ ಹೋಗುತ್ತೀಯೆ ಮಗು?’ ಎಂದು ಅವರು ಕೇಳಿದಂತಾಯಿತು.
ಹೌದು. ಎಲ್ಲಿಗೆ ಹೋಗಲಿ ನಾನು?
ಕ್ರುದ್ಧ ಭೀಮಾರ್ಜುನರ ವೈರಕ್ಕೆ ಪಾತ್ರನಾದ ನನಗೆ ಆಶ್ರಯವೆಲ್ಲಿ? ಭೀತಿ ಹೆಚ್ಚುತ್ತ ನನ್ನನ್ನು ನುಂಗಿ ನೊಣೆಯತೊಡಗಿತು. ನಿಂತಲ್ಲಿ ನಿಲ್ಲಲಾರದೆ ಪರಿತಪಿಸತೊಡಗಿದೆ. ಇಷ್ಟಾಗಿಯೂ ಭಯವಾಗುತ್ತಿತ್ತೇ ಹೊರತು, ಮಾಡಿದ ಕೆಲಸದ ಕುರಿತು ಪಶ್ಚಾತ್ತಾಪವೇನೂ ಹುಟ್ಟಲಿಲ್ಲ ನನ್ನಲ್ಲಿ. ನನಗದು ತಪ್ಪು ಅನಿಸಲಿಲ್ಲ. ತಪ್ಪೆಂದು ಭಾವಿಸಿದರೆ ತಾನೇ ಪಶ್ಚಾತ್ತಾಪದ ಪ್ರಶ್ನೆ? ನನಗಿದ್ದ ದಾರಿ ಒಂದೇ. ಪಾಂಡವರು ನನ್ನನ್ನು ನೋಡುವ ಮೊದಲು ಇಲ್ಲಿಂದ ಪಾರಾಗಿ ಎಲ್ಲಾದರೂ ಓಡಿಹೋಗುವುದು. ಆದರೆ ಎಲ್ಲಿಗೆ?
ಇದ್ದಕ್ಕಿದ್ದಂತೆ ನನಗೆ ವ್ಯಾಸ ಮಹರ್ಷಿಗಳ ನೆನಪು ಬಂತು. ಹೌದು, ಪಾಂಡವರ ಸಹಿತ ಎಲ್ಲರಿಗೂ ಆದರಣೀಯರಾದ ವ್ಯಾಸರ ಬಳಿಯಲ್ಲಿ ಮಾತ್ರ ನಾನು ಸುರಕ್ಷಿತನಾಗಿರಬಲ್ಲೆ. ಅವರು ಇಲ್ಲೇ ಎಲ್ಲೋ ಇದ್ದಾರೆಂದು ಕೇಳಿದ್ದೆ. ಹೇಗಾದರೂ ಅವರ ಸಾನ್ನಿಧ್ಯವನ್ನು ಸೇರಿದರೆ ಪಾಂಡವರ ಆಕ್ರೋಶದಿಂದ ಪಾರಾಗಬಹುದೆನಿಸಿತು. ಮತ್ತೆ ಯೋಚಿಸಲಿಲ್ಲ ನಾನು. ಯುದ್ಧಭೂಮಿಯನ್ನು ಬಿಟ್ಟು ಧಾವಿಸಿದೆ.
ಯಾರೋ ಹಳ್ಳಿಗರನ್ನು ಕೇಳಿಕೊಂಡು ವ್ಯಾಸರ ಪರ್ಣಕುಟಿಯ ಸಮೀಪಕ್ಕೆ ತಲಪಿದಾಗ ಅವರು ಪ್ರಾತಃಕಾಲದ ಅಧ್ಯಯನ, ಬೋಧನೆಗಳನ್ನು ಪೂರೈಸಿದ್ದರಷ್ಟೆ. ಅವರನ್ನು ಕಂಡು ನನ್ನ ಸ್ಥಿತಿಯನ್ನು ಕೆಲವೇ ಮಾತುಗಳಲ್ಲಿ ಬಿನ್ನವಿಸಿಕೊಂಡೆ. “ನನಗೆಲ್ಲವೂ ತಿಳಿದಿದೆ ಮಗೂ, ಮೊದಲು ಸ್ನಾನ, ಆಹ್ನಿಕಗಳನ್ನು ಮುಗಿಸಿ ಬಾ. ರಕ್ತಸಿಂಚಿತ ವಸ್ತ್ರಗಳನ್ನು ಕಳಚಿ ನಾರುಮಡಿಯನ್ನುಟ್ಟು ಬಾ. ಹಸಿದಿರಬೇಕು ನೀನು. ಒಂದಿಷ್ಟು ಅಹಾರವನ್ನು ಸ್ವೀಕರಿಸು. ಮನಸ್ಸು ಕ್ಷೋಭೆಯಿಂದಿದ್ದಾಗ ಯೋಚನೆಗಳನ್ನು ನಿಯಂತ್ರಿಸಲಾಗದು. ಹೋಗು, ವಟುಗಳು ದಾರಿತೋರಿಸುತ್ತಾರೆ” ಎಂದು ತಮ್ಮ ಸಹಜ ಶಾಂತ ದನಿಯಲ್ಲಿ ನುಡಿದರು. ಅವರು ನಗುಮುಖದಿಂದ ಆಡಿದ ಮಾತುಗಳು ಹಿತವೆನಿಸಿದವು.
ಅವರ ಆಣತಿಯಂತೆ ಸ್ನಾನಾದಿಗಳನ್ನು ಮುಗಿಸಿ ಬಂದಾಗ ಮನಸ್ಸು ಒಂದಿಷ್ಟು ತಿಳಿಯಾದಂತಾಯಿತು. ಅವರೆದುರು ಬಂದಾಗ ಎದುರಿಗಿದ್ದ ದರ್ಭಾಸನ ತೋರಿಸಿ, “ಬಾ ಮಗು, ಕುಳಿತುಕೋ” ಎಂದರು. ಕುಳಿತೆ.
ತಮ್ಮ ಪ್ರಸನ್ನ ಮುಖಮುದ್ರೆಯೊಂದಿಗೆ ನನ್ನನ್ನೇ ದಿಟ್ಟಿಸಿ ನೋಡಿದರು. “ಏನಪ್ಪಾ, ಯಾಕೆ ಈ ಸ್ಥಿತಿಯನ್ನು ತಂದುಕೊಂಡೆ? ಈ ಯುದ್ಧ ಎನ್ನುವುದು ಎಲ್ಲರ ಮನಸ್ಸನ್ನೂ ಕಲ್ಲೋಲಗೊಳಿಸಿದೆ. ನಿನಗಾದುದು ವಿಶೇಷವಲ್ಲ. ಎಲ್ಲ ಸಮಸ್ಯೆಗೂ ಪರಿಹಾರವುಂಟು. ಭೀಮಾರ್ಜುನರು ಹಗೆತನ ಸಾಧಿಸುವಂತಹ ಕೆಲಸವೇನು ಮಾಡಿದೆ? ಎಂದರೆ ಏನೆಲ್ಲ ನಡೆಯಿತು ಎನ್ನುವುದನ್ನು ವಿವರವಾಗಿ ಹೇಳಬೇಕು. ಯಾವುದನ್ನೂ ಮುಚ್ಚಿಡಬೇಡ” ಎಂದವರು ಆಶ್ವಾಸನೆಯ ನಗುವನ್ನು ಬೀರಿದರು.
ಅವರೆದುರು ಏನನ್ನೂ ಅಡಗಿಸಲಿಲ್ಲ. ನಡೆದುದೆಲ್ಲವನ್ನೂ ವಿವರವಾಗಿ ಹೇಳಿದೆ. ಅಷ್ಟು ಹೊತ್ತು ಮೌನವಾಗಿ ಕೇಳಿದ ಮಹರ್ಷಿಗಳು ನನ್ನ ಮಾತು ಮುಗಿದ ಬಳಿಕವೂ ಕೊಂಚ ಹೊತ್ತು ಮಾತನಾಡಲಿಲ್ಲ.
ಒಂದು ನಿಡಿದಾದ ಉಸಿರು ಚೆಲ್ಲಿದರು ಮಾತ್ರ.
ಮತ್ತೆ ನುಡಿದರು, “ಇದೆಲ್ಲ ಆಗಲೇಬೇಕಿತ್ತು ಮಗು. ಯುದ್ಧಕ್ಕಿರುವ ಭೀಕರ ಮುಖದ ದರ್ಶನವಾಗದೆ ಯಾರೂ ಬುದ್ಧಿ ಕಲಿಯುವುದಿಲ್ಲ. ಬಹು ಹಿಂದೆಯೇ
ಇದನ್ನು ತಾಯಿ ಸತ್ಯವತಿಗೆ ಹೇಳಿದ್ದೆ. ಅದು ದಿಟವಾಯಿತು. ಆದರೆ ಈ ಭೀಕರತೆಯ ದರ್ಶನಕ್ಕೆ ವಿಧಿ ನಿನ್ನನ್ನಾರಿಸಿದ್ದು ಮಾತ್ರ ವಿಷಾದಕರ. ಹೋಗಲಿ, ಬ್ರಾಹ್ಮಣನಾಗಿ ಇಂತಹ ಕಗ್ಗೊಲೆ ಮಾಡಿದ ನಿನಗೆ ಶುದ್ಧನಾಗುವುದಕ್ಕೆ ಪ್ರಾಯಶ್ಚಿತ್ತ ವಿಧಿ ಆಗಬೇಕು. ಅದು ಕೇವಲ ಸಾಂಕೇತಿಕವಾದುದು. ಆದರೆ ನಿನ್ನ ಕಣ್ಣುಗಳಲ್ಲಿ ಇನ್ನೂ ಕೆಂಪು ಮಾಸಿಲ್ಲ. ಯೋಚಿಸು, ನೀನು ಮಾಡಿದ್ದು ಧರ್ಮವಲ್ಲ. ಅಕ್ಷಮ್ಯ ಅಪರಾಧ. ಹಾಗೆಂದು ಅಂತರಂಗದಲ್ಲಿ ಪಶ್ಚಾತ್ತಾಪ ಹುಟ್ಟಿದರೆ ಮಾತ್ರ ಸುದೀರ್ಘಾವಧಿಯಲ್ಲಾದರೂ ಶುದ್ಧನಾಗುವ ಅವಕಾಶವಿದೆ. ಮೂಲತಃ ನಿನಗೆ ಶುದ್ಧೀಕರಣದ ಅದಮ್ಯ ಹಂಬಲ ಹುಟ್ಟಬೇಕು. ಹೇಳು, ಮಾಡಿದ ಘೋರ ಕಾರ್ಯದ ಕುರಿತು ಅಸಹ್ಯ ಅನಿಸುತ್ತದೆಯೆ?”
ಕೊನೆಯ ಮಾತಿಗೆ ಬಂದಾಗ ಅವರ ಕಣ್ಣುಗಳು ನನ್ನನ್ನು ಬಗೆಯುವಂತೆ ದಿಟ್ಟಿಸುತ್ತಿದ್ದವು.
ಅವರ ಪ್ರಶ್ನೆಗೆ ಉತ್ತರಿಸಲಿಲ್ಲ ನಾನು. ಮುಹೂರ್ತ ಕಾಲ ಮೌನವಾಗಿ ನೆಲವನ್ನೇ ನೋಡುತ್ತಿದ್ದೆ. ಏನೆಂದು ಉತ್ತರಿಸಲಿ ಅವರಿಗೆ? ಅವರೇನೋ ಪ್ರಾಯಶ್ಚಿತ್ತ ಕರ್ಮ ಮಾಡಿಸಲು ಸಿದ್ಧರಿದ್ದಾರೆ. ಆದರೆ ಸ್ಪಷ್ಟವಾಗಿ ಸೂಚಿಸಿದರಲ್ಲ, ನಿನಗೆ ಪಶ್ಚಾತ್ತಾಪ ಭಾವ ಹುಟ್ಟಿದರೆ ಮಾತ್ರ ಎಂದು. ನನ್ನೊಳಗೆ ಅಂತಹ ಒಂದು ಭಾವ ಹುಟ್ಟಿಯೇ ಇಲ್ಲ. ಈಗಲೂ ಶಿಬಿರದಲ್ಲಿ ನಡೆಸಿದ ಹತ್ಯಾಕಾಂಡ ತಪ್ಪು ಎನಿಸುತ್ತಿರಲಿಲ್ಲ. ಅಂದ ಬಳಿಕ ಪ್ರಾಯಶ್ಚಿತ್ತ ಯಾರಿಗೆ? ನನಗಿದ್ದದ್ದು ಪಾಂಡವರ ಭಯ. ಕೃಷ್ಣನ ಭಯ. ಏನು ಮಾಡಿದ್ದೇನೋ ಅದು ಮಾಡಬೇಕಾದುದೇ ಎನಿಸುತ್ತಿದೆ. ಅದರಲ್ಲೂ ಆ ದೃಷ್ಟದ್ಯುಮ್ನ! ನನ್ನ ತಂದೆಯವರ ಶರೀರವನ್ನು ಕೊಚ್ಚಿಹಾಕಿದನಲ್ಲ, ಆ ಕೊಲೆಗಡುಕ. ಅವನನ್ನು ಕೊಂದರೆ ಅದು ತಪ್ಪಾಗುವುದು ಹೇಗೆ? ಇಷ್ಟಕ್ಕೂ ನಾನು ಮಾಡಿದ್ದು ನನ್ನೊಡೆಯನ ತೃಪ್ತಿಗಾಗಿ ಹೊರತು ಸ್ವಾರ್ಥವೇನೂ ಅದರಲ್ಲಿರಲಿಲ್ಲ. ಮತ್ತೇಕೆ ಪಶ್ಚಾತ್ತಾಪ? ಅದೇ ಇಲ್ಲದ ಮೇಲೆ ಪ್ರಾಯಶ್ಚಿತ್ತಕ್ಕೆ ಏನು ಅರ್ಥ?
ಅದನ್ನೇ ವ್ಯಾಸರಿಗೆ ಉತ್ತರವಾಗಿ ನುಡಿದೆ.
“ಸರಿ ವತ್ಸಾ. ನಿನಗೆ ಇಚ್ಛೆಯಿಲ್ಲದ ಮೇಲೆ ಅದನ್ನು ಹೇರುವುದುಂಟೆ? ಬಾಯಾರಿದವನಿಗೆ ನೀರು ಕೊಡುವುದು ಧರ್ಮ. ಆದರೆ ಬಾಯಾರಿಕೆಯೇ ಇಲ್ಲ ಎನ್ನುವವನಿಗಲ್ಲ. ಇದೆಲ್ಲ ಒತ್ತಾಯಿಸಿ ಒಪ್ಪಿಸಬಹುದಾದ ವಿಚಾರಗಳಲ್ಲ. ನಾನದನ್ನು ಮಾಡುವವನೂ ಅಲ್ಲ. ಸರಿ, ನಾನು ತೋರುವ ದಾರಿ ಬೇಡವೆಂದ ಬಳಿಕ ಇಲ್ಲಿಗೆ ಯಾಕೆ ಬಂದೆ? ಮುಂದೆ ಏನು ಮಾಡುತ್ತೀಯೆ?” ವ್ಯಾಸರು ಪ್ರಶ್ನಿಸಿದರು.
“ಮಹರ್ಷೇ…ನನ್ನ ಮುಂದಿನ ದಾರಿ ನನಗೇ ಸ್ಫುಟವಾಗಿಲ್ಲ. ಇಲ್ಲಿಯವರೆಗೆ ಬಂದ ದಾರಿಯೇ ಸರಿಯೋ ತಪೆÇ್ಪೀ ಎಂಬ ಗೊಂದಲದಲ್ಲಿದ್ದೇನೆ ನಾನು. ಹುಟ್ಟು ಬ್ರಾಹ್ಮಣ್ಯದಲ್ಲಾದರೂ, ಅಭ್ಯಾಸ ಮಾಡುವಾಗ ಶಾಸ್ತ್ರಕ್ಕಿಂತ ಶಸ್ತ್ರ ಪ್ರಿಯವಾಯಿತು. ಅದೇನೂ ನಿಷಿದ್ಧವಲ್ಲವಂತೆ. ಅಂತೂ ನಾನು ಅತ್ಯಾಸಕ್ತಿಯಿಂದ ಕಲಿತೆ. ಹಾಗೆ ನೋಡಿದರೆ ನನಗೆ ಬ್ರಾಹ್ಮಣನಿಗಿರಬೇಕಾದ ತೃಪ್ತಿ ಎಂಬುದು ನನ್ನಲ್ಲಿರಲೇ ಇಲ್ಲ.”
“ಮೂಲತಃ ಅದು ನಿನ್ನ ತಂದೆಗೇ ಇರಲಿಲ್ಲ. ಮತ್ತೆ ನಿನಗೆಲ್ಲಿಂದ ಬರಬೇಕು?”
“ನಾನು ಬರೇ ವಾಂಶಿಕ ವಿಚಾರವನ್ನು ಹೇಳುವುದಲ್ಲ” ವ್ಯಾಸರ ಮಾತಿಗೆ ಪ್ರತಿಯಾಗಿ ಹೇಳಿದೆ, “ನನ್ನ ಎಳವೆಯಲ್ಲಿ ಹಾಲು ಕುಡಿಯಬೇಕೆಂಬ ಹಂಬಲ ಬಹಳವಿತ್ತು. ಒಡನಾಟದ ಹುಡುಗರೆಲ್ಲ ಹಾಲು ಕುಡಿದು ಬಂದೆವು ಎನ್ನುವಾಗ ಆಸೆಯಾಗುತ್ತಿತ್ತು. ಎದೆಯಲ್ಲಿ ಹಾಲಿಲ್ಲದ ತಾಯಿಯಲ್ಲಿ ಇದನ್ನು ಹೇಳಿದರೆ ನಿಟ್ಟುಸಿರು ಬಿಡುತ್ತಿದ್ದರು. ನಿನ್ನ ತಂದೆಗೆ ಗೊತ್ತಾದರೆ ನೊಂದುಕೊಳ್ಳುತ್ತಾರೆ ಮಗನೆ. ಅವರಲ್ಲಿ ಹೇಳಬೇಡ” ಎನ್ನುತ್ತಿದ್ದಳು. ಹಾಲಿಗೆ ಹಸುವೇ ಇಲ್ಲದ ಆಶ್ರಮ ನಮ್ಮದು. ತಂದೆಯವರಲ್ಲಿ ಕಲಿತ ಯಾವ ಅರಸು ಮಕ್ಕಳೂ ನಮ್ಮ ಆಶ್ರಮಕ್ಕೆ ಹಸುವನ್ನು ದಾನ ಕೊಡುವಷ್ಟು ಉದಾರಿಗಳಾಗಿರಲಿಲ್ಲ. ಆದರೂ ತಾಯಿ ಅಕ್ಕಿಯಹಿಟ್ಟನ್ನು ನೀರಿನಲ್ಲಿ ಕದರಿ ಕೊಡುತ್ತಿದ್ದಳು. ಬೆಳ್ಳಗಿರುತ್ತಿದ್ದ ಅದನ್ನೇ ಹಾಲೆಂದು ಕುಡಿದು ಹಿಗ್ಗುತ್ತಿದ್ದೆ. ಅಂತಹ ದಿನಗಳಲ್ಲಿ ಹುಟ್ಟಿದ ಅಸಂತೃಪ್ತಿ ಸ್ವಾಮಿ ಇದು.
“ಅದು ತೀರದ ದಾಹವೊಂದನ್ನು ನನ್ನಲ್ಲಿ ಉಂಟುಮಾಡಿದೆ. ಎಷ್ಟು ಕುಡಿದರೂ ತೃಪ್ತಿಯಿಲ್ಲ. ಹಸ್ತಿನಾವತಿಗೆ ಬಂದ ಬಳಿಕ ಕೇವಲ ಹಾಲಿನದಲ್ಲ ಅಧಿಕಾರದ, ಮಣ್ಣಿನ, ಕೀರ್ತಿಯ.. ಇನ್ನೂ ಹತ್ತು ಹಲವು ದಾಹಗಳು ಹುಟ್ಟಿದವು. ಮೊದಮೊದಲು ಹಟಕ್ಕೆ ಬಿದ್ದವನಂತೆ ತಂಬಿಗೆಗಟ್ಟಲೆ ಹಾಲು ಕುಡಿಯುತ್ತಿದ್ದೆ. ಅಜೀರ್ಣವಾಗುತ್ತಿದ್ದುದೂ ಉಂಟು. ಎಲ್ಲವೂ ಹೆಚ್ಚು ಬೇಕು ಎನ್ನುವ ಆಸೆ ಎಳವೆಯಲ್ಲೇ ಹುಟ್ಟಿದ್ದು ಎಂದು ಗುರುದೇವ ಈಗ ಎನಿಸುತ್ತಿದೆ. ಅಂದು ಅನಾಥರಂತೆ ಪಾಂಚಾಲರಾಜ ದ್ರುಪದನಲ್ಲಿ ಆಶ್ರಯ ಬೇಡಿದಾಗ ಅವನು ತೋರಿಸಿದ ತಿರಸ್ಕಾರವನ್ನು ನೆನೆದರೆ ಇಂದಿಗೂ ಮೈ ಉರಿಯುತ್ತದೆ. ಅವನ ಕುರಿತು ಕ್ಷಮಾಭಾವ ನನ್ನಲ್ಲೆಂದೂ ಮೂಡಲಾರದು. ಬ್ರಾಹ್ಮಣ ಕ್ಷಮಾಶೀಲನಾಗಿರಬೇಕು ಎಂದು ಶಾಸ್ತ್ರ ಹೇಳುತ್ತದೆ. ಆ ಗುಣವೇ ಇಲ್ಲದ ನಾವು ಬ್ರಾಹ್ಮಣರಾಗುತ್ತೇವೆಯೆ?
“ಸೇಡು, ಹಟ, ಯುದ್ಧ ಇದೇ ನಮ್ಮ ಸ್ವಭಾವವಾಗಿದೆ. ನಾವು ಕ್ಷತ್ರಿಯರಾಗಿದ್ದೇವೆ ಮಹರ್ಷಿಗಳೇ..ಹೀಗೆ ನಡೆದು ಬಂದ ದಾರಿಯ ಗೊಂದಲವೇ ತೀರದಿರುವಾಗ ಮುಂದಿನ ದಾರಿ ಸ್ಫುಟವಾದೀತೇ ನನಗೆ? ಕ್ಷಮಿಸಬೇಕು ಮಹರ್ಷಿಗಳು. ನಾನು ಪ್ರಾಯಶ್ಚಿತ್ತಕ್ಕೆ ಸಿದ್ಧನಿಲ್ಲ.”
“ಅದು ನಿನ್ನ ವಿಧಿ. ಎಂತಹ ಪಾತಕಕ್ಕೂ ಪಶ್ಚಾತ್ತಾಪ ಪಟ್ಟವನಿಗೆ ಪ್ರಾಯಶ್ಚಿತ್ತವಿದೆ ಎನ್ನುವುದಕ್ಕೆ ಇಷ್ಟು ಹೇಳಬೇಕಾಯಿತು ಮಗು. ಮುಂದೇನಾದೀತು ಎನ್ನುವುದನ್ನು ಊಹಿಸಬಲ್ಲೆ. ಆದರೆ ಅದನ್ನು ನಿವಾರಿಸಬಹುದಿತ್ತು. ನಿನಗೇ ಅದು ಬೇಡವಾದರೆ ಒತ್ತಾಯವಿಲ್ಲ. ನಿನ್ನಿಚ್ಛೆಯಂತೆ ನೀನು ಸಾಗುವವನಾದರೆ ಇಲ್ಲಿಗೆ ಬರುವ ಆವಶ್ಯಕತೆಯೇ ಇರಲಿಲ್ಲ. ಆದರೂ ಬಂದೆ. ಇರಲಿ, ಈಗ ನಮ್ಮಿಂದ ಆಗಬೇಕಾದ್ದೇನು?” ವ್ಯಾಸರು ನುಡಿದರು.
“ನನಗೆ ಸದ್ಯಕ್ಕೆ ರಕ್ಷಣೆ ಬೇಕು ಗುರುವರ್ಯ. ನನ್ನ ಕುರಿತು ಪಾಂಡವರಿಗೆ ಕ್ರೋಧ ಉಂಟಾಗಿದೆ. ಅವರೇನು ಮಾಡುವರೋ ಎಂಬ ಭೀತಿ ಕಾಡುತ್ತಿದೆ. ನಿಮ್ಮ ರಕ್ಷಣೆಯಲ್ಲಿ ನನಗೆ ಆಪತ್ತು ಬರಲಾರದೆಂಬ ಭರವಸೆಯಿಂದ ಇಲ್ಲಿಗೆ ಬಂದೆ. ನನ್ನನ್ನು ಉಳಿಸುವುದು ನಿಮಗೆ ಬಿಟ್ಟದ್ದು” ದಯನೀಯವಾಗಿ ಅವರನ್ನು ಬೇಡಿದೆ ನಾನು.
“ಹೂಂ. ಈಗ ನನ್ನನ್ನೂ ಕ್ಷತ್ರಿಯನಾಗು ಎನ್ನುತ್ತೀಯೇನು? ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪವಿಲ್ಲ ನಿನಗೆ. ಅದೇ ಸರಿಯೆಂದು ನೀನು ಭಾವಿಸುವೆ. ಹಾಗಿದ್ದ ಮೇಲೆ ಅದರ ಮುಂದಿನ ಪರಿಣಾಮಗಳಿಗೂ ನೀನೇ ಬಾಧ್ಯನಷ್ಟೆ. ರಕ್ಷಣೆ ಬೇಕಾದವನು ರಕ್ಷಿಸುವವನ ನಿಬಂಧನೆಗೆ ಒಳಪಡದ ಮೇಲೆ ರಕ್ಷಣೆಯೆಂತು ಸಾಧ್ಯ? ಪಾಂಡವರು ಯುದ್ಧ ನಿಲ್ಲಿಸಿದ ಬಳಿಕ ಅದನ್ನು ಪುನರಾರಂಭಿಸಿದ ಹೊಣೆ ನಿನ್ನದು. ಯುದ್ಧಕ್ಕೆ ತೊಡಗಿದವನು ಶಸ್ತ್ರ ಕೆಳಗಿಡದೆ ಅವನನ್ನು ರಕ್ಷಿಸಲಾಗದು. ಪಾಂಡವರ ಪ್ರಶ್ನೆಗೆ ನಾನು ಉತ್ತರದಾಯಿಯಾಗಲಾರೆ. ಉತ್ತರಿಸುವುದು ನಿನ್ನ ಹೊಣೆ. ಒಂದು ಮಾತನ್ನು ಸ್ಪಷ್ಟವಾಗಿ ಹೇಳುತ್ತೇನೆ. ನಿನ್ನ ಮೇಲೆ ಮೊದಲ ಆಕ್ರಮಣವಾಗದಂತೆ ಮಾತ್ರ ನೋಡಿಕೊಳ್ಳಬಲ್ಲೆ. ನೀನು ಅವರ ಮೇಲೆ ಕೈಯೆತ್ತಕೂಡದು. ನೋಡೋಣ, ಅವರು ಇಲ್ಲಿಗೆ ಬರಲಿ. ಅಷ್ಟು ಹೊತ್ತು ನನ್ನ ಬಳಿಯೇ ಇರು” ಅವರು ಮಾತು ಮುಗಿಸಿ ವಟುವೊಬ್ಬನನ್ನು ಕರೆದರು. ಅವನು ಒಳಬಂದ. “ನೋಡು, ಇನ್ನು ಕೊಂಚ ಕಾಲದಲ್ಲಿ ಪಾಂಡವರು ಹಾಗೂ ಕೃಷ್ಣ ಇಲ್ಲಿಗೆ ಬರುತ್ತಾರೆ. ಅವರು ಬರುವ ಸೂಚನೆ ದೊರೆತ ಕೂಡಲೇ ನನ್ನನ್ನು ಎಚ್ಚರಿಸು” ಇಷ್ಟನ್ನು ಹೇಳಿ ಧ್ಯಾನಲೀನರಾದರು.
ನಾನು ಅವರ ಸಮ್ಮುಖದಲ್ಲಿ ಮೌನವಾಗಿ ಕುಳಿತೇ ಇದ್ದೆ. ನನ್ನ ಬುದ್ಧಿ ಮಂಕಾಗಿತ್ತು. ಮುಂದೇನು ಎನ್ನುವ ಪ್ರಶ್ನೆಗೆ ಉತ್ತರವಿಲ್ಲದೆ, ಆ ಕುರಿತು ಯೋಚಿಸಲೂ ಆಗದ ಅಸಹಾಯಕತೆಯಲ್ಲಿ ಕುದಿಯುತ್ತ, ಕಣ್ಮುಚ್ಚಿದ್ದ ವ್ಯಾಸರ ಮುಖವನ್ನು ದಿಟ್ಟಿಸುತ್ತ ಎಷ್ಟೋ ಕಾಲ ಕಳೆದೆ.
ಇದ್ದಕ್ಕಿದ್ದಂತೆ ಹೊರಗೆ ಏನೋ ಗದ್ದಲದ ಧ್ವನಿ ಕೇಳಿಸಿತು. ವ್ಯಾಸರು ನಿಯೋಜಿಸಿದ್ದ ವಟು ಒಳಗೆ ಧಾವಿಸಿ ಬಂದ. “ಗುರುದೇವ” ಎಂಬ ಅವನ ಕರೆಗೆ ಕಾಯುತ್ತಿದ್ದವರಂತೆ ಅವರು ಕಣ್ತೆರೆದರು. “ಎರಡು ರಥಗಳು ಈ ಕಡೆಗೆ ಧಾವಿಸಿ ಬರುತ್ತಿವೆ ಗುರುದೇವ” ಎಂದು ವಟು ನುಡಿದ. ಒಮ್ಮೆ ಸಣ್ಣ ಹುಂಕಾರ ಮಾಡಿದ ವ್ಯಾಸರು ಮೇಲೆದ್ದರು. ನಾನು ಅವರ ಬೆನ್ನಾಗಿ ಹೊರಗೆ ನಡೆದೆ. (ಇನ್ನೂ ಇದೆ)