ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ನಿರ್ಮಿತ ಕಗ್ಗಂಟಾಗಿದ್ದ, ಆ ಪ್ರಾಂತಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ಮತ್ತು 35-ಎ ವಿಧಿಗಳ ರದ್ದತಿಗೂ ಜಮ್ಮು-ಕಾಶ್ಮೀರ ಮತ್ತು ಲಢಾಖ್ ಭಾಗಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸುವುದಕ್ಕೂ ಕೇಂದ್ರಸರ್ಕಾರಕ್ಕೆ ಅಧಿಕಾರ ನೀಡಿದ 2019 ಆಗಸ್ಟ್ 5-6ರ ಸಂಸತ್ತಿನ ನಿರ್ಣಯ ಐತಿಹಾಸಿಕವಾಗಿದೆ. ಈ ನಿರ್ಣಯ ಎಂದೋ ಆಗಬೇಕಿತ್ತು ಎಂಬುದು ಇಡೀ ದೇಶದ ಏಕಸ್ವರದ ಪ್ರತಿಕ್ರಿಯೆಯಾಗಿದೆ. ಲೋಕಸಭೆಯಲ್ಲಿ ದಿನಾಂಕ 6ರಂದು ಚರ್ಚೆಯ ಅನಂತರ ನಡೆದ ಮತದಾನದಲ್ಲಿ ಗೊತ್ತುವಳಿಯ ಪರವಾಗಿ 351 ಮತಗಳೂ ವಿರುದ್ಧವಾಗಿ 72 ಮತಗಳೂ ಚಲಾವಣೆಯಾದವು. ಹೀಗೆ ಕಳೆದ ಮೂರು ದಶಕಗಳಿಂದ ದೇಶವನ್ನು ಕಾಡಿದ್ದ ವ್ರಣದ ಉಚ್ಚಾಟನೆಯಾಗಿದೆ. ಸ್ವಾತಂತ್ರ್ಯಾನಂತರದ ಮೊದಲ ಕಾಂಗ್ರೆಸ್ ಸರ್ಕಾರ ಎಸಗಿದ್ದ ಅಕ್ಷಮ್ಯವಾದ ತಪ್ಪು ಈಗ ಪ್ರಕ್ಷಾಳನಗೊಂಡಿದೆ. ಈ ಚಿಕಿತ್ಸಕ ಕ್ರಮಕ್ಕಾಗಿ ದೇಶವಿಡೀ ದೀರ್ಘಕಾಲದಿಂದ ಕಾದಿತ್ತು.
ಎರಡನೇ ಸ್ವಾತಂತ್ರ್ಯಪ್ರಾಪ್ತಿ
‘ಚಕ್ರವರ್ತಿ ಬೆತ್ತಲೆ ಇದ್ದಾನೆ’ ಎಂದು ಘೋಷಿಸಿದ್ದು ಒಂದು ಮಗು. ಅದುವರೆಗೆ ರಾಜನ ಪೆÇೀಷಾಕನ್ನು ಕೀರ್ತಿಸುತ್ತಿದ್ದ ವಂದಿಮಾಗಧರೆಲ್ಲ ಅವನತಮಸ್ತಕರಾಗಬೇಕಾಯಿತು. ಸಂಕಲ್ಪ ದಾಢ್ರ್ಯವಿರುವ ನಾಯಕತ್ವ ಹೇಗಿರುತ್ತದೆಂಬುದನ್ನು ಎಷ್ಟೋ ಕಾಲದ ತರುವಾಯ ದೇಶ ಕಾಣುವಂತಾಯಿತು.
ನಿಜ; ಹಿಂದಿನ ದಶಕಗಳ ಹೊಲಸು ವಾರಸಿಕೆಯ ದುಷ್ಪ್ರಭಾವವೂ ಅದರ ಜನಿತಗಳಾದ ರಾಷ್ಟ್ರಘಾತಕ ನಡವಳಿಗಳೂ ಇನ್ನೂ ಕೆಲಕಾಲ ಮುಂದುವರಿದಾವು. ಆದರೆ ಅವನ್ನು ಸಮರ್ಥವಾಗಿ ಎದುರಿಸುವ ಮನೋಬಲವೂ ಸಿದ್ಧತೆಯೂ ಈಗಿನ ಸರ್ಕಾರಕ್ಕೆ ಇವೆಯೆಂಬುದರ ಬಗೆಗೆ ದೇಶವೆಲ್ಲ ವಿಶ್ವಾಸ ತಳೆದಿದೆ. ಮೊದಲಿಗೆ ಆಗಬೇಕಾಗಿದ್ದುದೆಂದರೆ ಸ್ವಾರ್ಥಶಕ್ತಿಗಳ ಸ್ವಚ್ಛಂದತೆಗೆ ಇನ್ನು ಮುಂದೆ ಅವಕಾಶ ಇರದೆಂಬ ಸಂದೇಶದ ರವಾನೆ. ಈ ಸಂದೇಶವನ್ನು ಜಮ್ಮು-ಕಾಶ್ಮೀರದೊಳಗಿನ ಸಮಾಜವಿರೋಧಿ ವರ್ಗಕ್ಕೆ ಢಾಳಾಗಿ ತಲಪಿಸಿದ್ದಾಗಿದೆ.
ಜಮ್ಮು-ಕಾಶ್ಮೀರ ಜನತೆಗೆ ಎರಡನೇ ಬಾರಿ ಸ್ವಾತಂತ್ರ್ಯ ಲಭಿಸಿದಂತಾಗಿದೆ ಎಂದು ಹೇಳಿದಲ್ಲಿ ಉತ್ಪ್ರೇಕ್ಷೆಯೆನಿಸದು. ಭಾರತದೊಡನೆ ಜಮ್ಮು-ಕಾಶ್ಮೀರದ ವಿಲೀನತೆಯನ್ನು ಸಮಗ್ರಗೊಳಿಸುವುದಕ್ಕಾಗಿ ಆರೂವರೆ ದಶಕಗಳ ಹಿಂದೆ (1953ರ ಮೇ 11) ಪ್ರಾಣಾರ್ಪಣೆ ಮಾಡಿದ್ದ ಹಾಗೂ ಭಾಜಪಾದ ಮೂಲರೂಪವಾದ ಭಾರತೀಯ ಜನಸಂಘದ ಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿಯವರ ಹೌತಾತ್ಮ್ಯ ಈಗ ಸಾರ್ಥಕಗೊಂಡಂತಾಗಿದೆ. ಹೀಗೆ ಈಗಿನ ಕೇಂದ್ರಸರ್ಕಾರದ ದಿಟ್ಟ ಕ್ರಮವು ದೇಶದ ದೃಷ್ಟಿಯಿಂದ ಮಾತ್ರವಲ್ಲದೆ ಭಾರತೀಯ ಜನತಾಪಕ್ಷದ ದೃಷ್ಟಿಯಿಂದಲೂ ಐತಿಹಾಸಿಕವಾಗಿದೆ. ‘ಏಕ್ ದೇಶ್ ಮೇ ದೋ ವಿಧಾನ್, ದೋ ಪ್ರಧಾನ್ ನಹೀ ಚಲೇಂಗೇ’ ಎಂಬ ಮುಖರ್ಜಿಯವರ ಘೋಷವಾಕ್ಯ ಈಗ ಅನ್ವರ್ಥಗೊಂಡಿದೆ. ರಾಜ್ಯವೊಂದರ ಉದ್ಧಟತನವನ್ನು ನಿಯಂತ್ರಿಸದೆ ಅದಕ್ಕೆ ವಿಶೇಷ ಸ್ಥಾನಮಾನವನ್ನು ಕೊಡಮಾಡಿದ ಪ್ರಧಾನಿ ಜವಾಹರಲಾಲ್ ನೆಹರು ಧೋರಣೆಗೆ ಶ್ಯಾಮಪ್ರಸಾದರು ಪ್ರತಿಭಟನೆ ಸೂಚಿಸಿ ಕೇಂದ್ರ ಸಚಿವಸ್ಥಾನಕ್ಕೇ ರಾಜೀನಾಮೆ ಕೊಟ್ಟದ್ದು, ಬಂಧನದಲ್ಲಿ ಮೃತರಾದದ್ದು – ಇವೆಲ್ಲ ಇತಿಹಾಸ.
ಹೊಸ ಅಭ್ಯುದಯಪರ್ವ
ಭಾರತದೆÀಲ್ಲೆಡೆ ಅಮಲಿನಲ್ಲಿರುವ ಕಾಯ್ದೆಗಳೂ ಕಾನೂನು ವ್ಯವಸ್ಥೆಗಳೂ ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುವುದು, ಎಲ್ಲ ಭಾರತೀಯ ಪ್ರಜೆಗಳಿಗೂ ಕಾಶ್ಮೀರದಲ್ಲಿ ನೆಲಸಿ ಆಸ್ತಿ ಕೊಳ್ಳುವ ಅವಕಾಶ, ಕಾಶ್ಮೀರಿಗಳಲ್ಲದವರನ್ನು ವಿವಾಹವಾದ ಹೆಣ್ಣುಮಕ್ಕಳಿಗೂ ಆಸ್ತಿಹಕ್ಕು ನೀಡಿಕೆ, ದಲಿತ, ವಾಲ್ಮೀಕಿ ಮೊದಲಾದ ಸಮುದಾಯಗಳಿಗೆ ಭಾರತದ ಉಳಿದೆಡೆ ಇರುವಂತೆ ವಿಶೇಷ ಅಭ್ಯುದಯಾವಕಾಶಗಳು – ಇವೆಲ್ಲ ಬೇಡವೆಂದು ಯಾರು ತಾನೆ ಹೇಳಲಾದೀತು? ಈ ರೀತಿಯ ಎಲ್ಲ ಸುಧಾರಣೆಗಳಿಗೆ ಕಂಟಕವಾಗಿದ್ದ 370ನೇ ವಿಧಿಯ ರದ್ದತಿಗೆ ಕಾಂಗ್ರೆಸ್ ಪಕ್ಷ ವಿರೋಧ ಸೂಚಿಸುವುದು ಹೇಗೆ ಸಮರ್ಥನೀಯವಾದೀತು? ಮೋದಿ ಸರ್ಕಾರದ ಕ್ರಮವನ್ನು ಪ್ರಜಾಪ್ರಭುತ್ವದ ಕೊಲೆ ಎಂದು ಗುಲಾಂ ನಬಿ ಆಜಾದ್ ಸಂಸತ್ತಿನಲ್ಲಿ ದೂಷಣೆ ಮಾಡಿದರು. ನಿಜವಾಗಿ ಏಳು ದಶಕಗಳ ಕಾಲ ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳದಂತೆ ಶ್ರಮಿಸಿದ್ದುದು ಗುಲಾಬಿ ನಬಿ ಆಜಾದರ ಓರಗೆಯ ಕಾಂಗ್ರೆಸ್ ಪಕ್ಷವೇ ಅಲ್ಲವೆ?
ಆಗಸ್ಟ್ 8ರಂದು ರಾಷ್ಟ್ರವನ್ನುದ್ದೇಶಿಸಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವಿಸಿದ “370ನೇ ವಿಧಿಯಿಂದ ಇದುವರೆಗೆ ಕಾಶ್ಮೀರ ಜನತೆಗೆ ಏನು ಲಾಭವಾಗಿದೆ?” ಎಂಬ ಪ್ರಶ್ನೆಗೆ ಕಾಂಗ್ರೆಸಿನಲ್ಲಿ ಉತ್ತರವಿದೆಯೆ?
ಅದರಂತೆ ಸಂಸತ್ತಿನಲ್ಲಿ “370ನೇ ವಿಧಿಯ ರದ್ದತಿ ಮೊದಲಾದ ಕ್ರಮಗಳಲ್ಲಿ ನಾವು ಯಾವ ನಿಯಮಗಳನ್ನು ಉಲ್ಲಂಘಿಸಿದ್ದೇವೆಯೊ ತಿಳಿಸಿ” ಎಂಬ ಅಮಿತ್ ಶಾರ ಪ್ರಶ್ನೆಗೆ ಕಾಂಗ್ರೆಸ್ ಸಾಂಸದರಾರೂ ಉತ್ತರಿಸದೆ ಮೌನವನ್ನು ಆಶ್ರಯಿಸಬೇಕಾಯಿತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯಂತೂ ಇಡೀ ಕಲಾಪದಲ್ಲಿ ತುಟಿ ಎರಡು ಮಾಡದೆ ಕುಳಿತಿದ್ದು ಅನಂತರ ಹೊರಗಡೆ ಟ್ವೀಟ್ ಮಾಧ್ಯಮದಲ್ಲಿ ಪ್ರತಾಪ ಮೆರೆಯಲು ಯತ್ನಿಸಿದರು. ಸೋನಿಯಾಗಾಂಧಿ- ಪ್ರಿಯಾಂಕಾರೂ ಮೌನವನ್ನು ಆಶ್ರಯಿಸಿದರು.
ದೇಶದ ಜನತೆಯು ಮೋದಿ ಸರ್ಕಾರದ ಕ್ರಮಗಳನ್ನು ಹಾರ್ದಿಕವಾಗಿ ಸ್ವಾಗತಿಸಿರುವುದು ಮಾತ್ರವಲ್ಲದೆ ಪಾಕ್-ಆಕ್ರಮಿತ ಕಾಶ್ಮೀರದ ಸಮಸ್ಯೆಯೂ ಶೀಘ್ರವಾಗಿ ಪರಿಹಾರ ಕಾಣಲೆಂದು ಹಾರೈಸಿದ್ದಾರೆ.
ಕಾಂಗ್ರೆಸಿನ ದಿಶಾಹೀನತೆ
ಸಂಸತ್ತಿನಲ್ಲಿ ಕಾಂಗ್ರೆಸಿನ ವಕ್ತಾರರಾಗಿ ಮಾತನಾಡಿದ ಅಧೀರ ರಂಜನ ಚೌಧರಿಯವರಂತೂ ಕಾಶ್ಮೀರದ್ದು ‘ದ್ವಿರಾಷ್ಟ್ರೀಯ ಸಮಸ್ಯೆ’ ಎಂದು ಹೇಳಿ ಕಾಂಗ್ರೆಸಿಗೇ ಇರುಸುಮುರುಸು ತಂದರು. ‘1948ರಿಂದ ವಿಶ್ವಸಂಸ್ಥೆ ಕಾಶ್ಮೀರಸ್ಥಿತಿಯನ್ನು ನಿರ್ವಹಿಸುತ್ತಿದೆ’ ಎಂದರು ಚೌಧರಿ. ಎಂದರೆ ಭಾರತಕ್ಕೆ ಉಗ್ರಗಾಮಿಗಳನ್ನು ವಿಶ್ವಸಂಸ್ಥೆ ಕಳಿಸುತ್ತಿದೆ ಎಂದು ಹೇಳೋಣವೆ?
“ಕಾಶ್ಮೀರದ್ದು ಕೇವಲ ಭಾರತದ ಆಂತರಿಕ ಸಮಸ್ಯೆಯೇ? – ಎಂಬ ಬಗೆಗೆ ಕಾಂಗ್ರೆಸಿಗೆ ಸಂದೇಹವಿದೆ” ಎಂಬ ಕಾಂಗ್ರೆಸ್ ವಕ್ತಾರರ ಹೇಳಿಕೆ ಪಾಕಿಸ್ತಾನ ಸರ್ಕಾರದ ನಿಲವನ್ನು ಬಿಂಬಿಸಿದೆ. ಇದು ಹೇಗೆ ತಾನೇ ಸ್ವೀಕಾರ್ಯವಾದೀತು? ಇದು ರಾಷ್ಟ್ರವಿರೋಧಿ ಧೋರಣೆಯಲ್ಲವೆ? “ಜಮ್ಮು-ಕಾಶ್ಮೀರದ ಅಂತಃಶತ್ರುಗಳ ಹಟವನ್ನು ಕಾಂಗ್ರೆಸ್ ಪಕ್ಷವೇ ಹಿಂದಿಕ್ಕಿದಂತಾಗಿದೆ” ಎಂಬ ವಿಶ್ಲೇಷಕರೊಬ್ಬರ ಅನಿಸಿಕೆಯನ್ನು ಅಲ್ಲವೆನ್ನಲಾಗದು. ಸಾಲಗಾರ ಬಿಟ್ಟರೂ ಸಾಕ್ಷಿಗಾರ ಬಿಡ!
ಆದರೆ ವಸ್ತುನಿಷ್ಠವಾಗಿ ಚಿಂತಿಸುವ ಹಲವರು ಕಾಂಗ್ರೆಸ್ ಮುಂಚೂಣಿ ನಾಯಕರೇ – ಜ್ಯೋತಿರಾದಿತ್ಯ ಸಿಂಧ್ಯಾ, ಕರಣ್ಸಿಂಗ್, ಜನಾರ್ದನ್ ದ್ವಿವೇದಿ ಮೊದಲಾದವರೇ – ಮೋದಿ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆಂಬುದನ್ನು ಗಮನಿಸಬೇಕು.
ಮರೆಯಬಾರದ ಇತಿಹಾಸ
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನವಿಧಿಯ ತಿರಸ್ಕಾರಾರ್ಹತೆಯನ್ನು ಸಂಸತ್ತಿನಲ್ಲಿ ಸಮರ್ಥವಾಗಿ ಮಂಡಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾರಿಗೆ ಅಭಿನಂದನೆ ಸಲ್ಲುತ್ತದೆ. ಅದರಷ್ಟೇ ಎಲ್ಲರ ಗಮನ ಸೆಳೆದು ಅಪಾರ ಮೆಚ್ಚುಗೆ ಗಳಿಸಿಕೊಂಡದ್ದು ಲಢಾಖಿನ ಸಾಂಸದ ಜ್ಯಾಮ್ಯಾಮ್ ತ್ಸೇರಿಂಗ್ ನ್ಯಾಮ್ಗಾಲರ ಓಜಃಪೂರ್ಣ ಭಾಷಣ. ದಶಕಗಳುದ್ದಕ್ಕೂ ಕಾಂಗ್ರೆಸ್ ಸರ್ಕಾರಗಳಿಂದ ಲಢಾಖ್ ಉಪೇಕ್ಷೆಗೊಳಗಾಗಿದ್ದುದನ್ನು ವರ್ಣಿಸಿದ ಅವರ ಮಂಡನೆ ಮಾರ್ಮಿಕ. ಅತ್ಯಂತ ಪ್ರಭಾವಿಯೂ ಆಗಿತ್ತು.
ಹಿಂದಿನ ಪೀಳಿಗೆಗೆ ತಿಳಿದಿದ್ದ ಆದರೆ ಈಗಿನ ಪೀಳಿಗೆಗೆ ಹೆಚ್ಚು ಪರಿಚಿತವಲ್ಲದ ಇತಿಹಾಸಾಂಶಗಳೂ ಅಮಿತ್ ಶಾರಿಂದ ಪ್ರಸ್ತಾವಿತವಾದವು. ಒಂದು ಕಡೆ ಆಂತರಿಕ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದದ್ದು, ಇನ್ನೊಂದುಕಡೆ ಭಾರತೀಯ ಸೇನೆಯ ಕ್ರಮಕ್ಕೆ ತಡೆಯೊಡ್ಡಿದುದು – ಪ್ರಧಾನಿ ನೆಹರುರವರ ಈ ಅಕ್ಷಮ್ಯ ನಡೆಗಳ ಬಗೆಗೆ ಈಗಿನವರಿಗೆ ಪದೇಪದೇ ತಿಳಿಸಿ ಪಾಕ್-ಆಕ್ರಮಿತ ಕಾಶ್ಮೀರಕ್ಕೆ ಪೂರ್ಣ ಹೊಣೆಗಾರರು ನೆಹರು – ಎಂಬ ತಥ್ಯವನ್ನು ನೆನಪಿಸುತ್ತಿರಬೇಕಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದ ದಾರಿ ತಪ್ಪಿಸಿದ ಕಾಂಗ್ರೆಸಿನ ಕಾಶ್ಮೀರ ನೀತಿ, ಆಮೇಲಿನ ವರ್ಷಗಳ ತುರ್ತುಪರಿಸ್ಥಿತಿ ಹೇರಿಕೆ ಮೊದಲಾದ ಅಸಹ್ಯ ‘ವಾರಸಿಕೆ’ ಈಗಿನ ಹಾಗೂ ಮುಂದಿನ ಪೀಳಿಗೆಗಳಿಗೆ ಅವಶ್ಯವಾಗಿ ಬೋಧಿಸಲ್ಪಡಬೇಕು. ಏಕೆಂದರೆ ಇತಿಹಾಸದ ಪರಿಜ್ಞಾನದ ಕೊರತೆಯಿದ್ದಲ್ಲಿ ಹಿಂದಿನ ದೌಷ್ಟ್ಯ-ದುಃಶಾಸನಗಳು ಪುನರಾವರ್ತನೆಯಾಗಲು ಅವಕಾಶವಾದಂತಾಗುತ್ತದೆ.
ನೈಜ ಅಭಿವೃದ್ಧಿಗೆ ತೆರೆದ ಬಾಗಿಲು
ಭಯೋತ್ಪಾದನೆಗೆ ಪೆÇ್ರೀತ್ಸಾಹನ, ಜಮ್ಮು-ಕಾಶ್ಮೀರದ ದೀರ್ಘಾವಧಿ ಅಭ್ಯುದಯಕ್ಕೆ ತಡೆಗೋಡೆಯಂತಿದ್ದ ಕಾಶ್ಮೀರಿ ಕುಟುಂಬ ರಾಜಕಾರಣ, ಪ್ರಾಂತದೊಳಗಿನ ಸಮಾಜಾಭಿಮುಖ ತರುಣ ಪೀಳಿಗೆಗೆ ಅವಕಾಶಗಳ ನಿರಾಕರಣೆ, ಅಲ್ಲಿಯ ಉಪೇಕ್ಷಿತ ವರ್ಗಗಳ ಬಗೆಗೆ ನಿರ್ಲಕ್ಷ್ಯ – ಈ ಹಲವಾರು ಸಮಸ್ಯೆಗಳ ಮೂಲದಲ್ಲಿದ್ದದ್ದು ಕಾಂಗ್ರೆಸ್-ಪೆÇೀಷಿತ 370ನೇ ವಿಧಿ. ಈ ವಿಧಿ ಈಗ ತೊಲಗಿರುವುದರಿಂದ ಪ್ರಾಂತದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿಯಾಗಿದೆ. ಮೋದಿ ಅವರು ಹೇಳಿದಂತೆ ಜಮ್ಮು-ಕಾಶ್ಮೀರದ ಹೊಸ ಅಭ್ಯುದಯಪರ್ವ ಈಗ ಉದ್ಗಮವಾಗುತ್ತಿದೆ.
ಮೋದಿ ಸರ್ಕಾರದ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿರುವ ಆರ್ಥಿಕ ಸಂಬಂಧಗಳ ಕಡಿತ ಮೊದಲಾದ ಹತಾಶ ನಿರ್ಣಯಗಳಿಂದ ಹಾನಿಯಾಗುವುದು ಪಾಕಿಸ್ತಾನಕ್ಕೇ. ಪಾಕಿಸ್ತಾನ ಕೋರಿರುವಂತೆ ನೆರವನ್ನೂ ಬೆಂಬಲವನ್ನೂ ನೀಡಲು ಅಮೆರಿಕವಾಗಲಿ ವಿಶ್ವಸಂಸ್ಥೆಯಾಗಲಿ ಉತ್ಸಹಿಸದಿರುವುದು ಪಾಕಿಸ್ತಾನಕ್ಕೆ ಮುಖಭಂಗವಾದಂತಾಗಿದೆ. ಪಾಕಿಸ್ತಾನದ ‘ಆಪ್ತಮಿತ್ರ ದೇಶ’ ಚೀಣಾ ಕೂಡ ಮಧ್ಯಪ್ರವೇಶ ಮಾಡದೆ ತಟಸ್ಥವಾಗಿ ಉಳಿದಿದೆ.
ಜಮ್ಮು-ಕಾಶ್ಮೀರದೊಳಗಿನ ಭದ್ರತಾಕ್ರಮಗಳು ಕ್ರಮಕ್ರಮವಾಗಿ ಸಡಿಲಗೊಳ್ಳುತ್ತಿವೆ. ಪ್ರಾಂತದ ಪುನರ್ವಿಭಜನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳೆದ ಆಗಸ್ಟ್ 9ರಂದು ಅಂಕಿತ ನೀಡಿದ್ದಾರೆ. ಹೀಗೆ ಅಧಿಕೃತವಾಗಿ ಜಮ್ಮು-ಕಾಶ್ಮೀರ ಮತ್ತು ಲಢಾಖ್ಗಳು ಮುಂದಿನ ಅಕ್ಟೋಬರ್ 31ರಿಂದ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವ ಪಡೆಯಲಿವೆ.
ಭಾರತಕ್ಕೆ ಕಿರೀಟಸ್ಥಾನದಲ್ಲಿರುವ ಕಾಶ್ಮೀರ ಈಗ ಗ್ರಹಣ ಮುಕ್ತವಾಗಿರುವುದು ಇಡೀ ದೇಶಕ್ಕೆ ಸಂಭ್ರಮ ತಂದಿದೆ.