ಆರ್ಟಿಕಲ್ 370ರ ಅಡಿಯಲ್ಲಿ ಪ್ರತ್ಯೇಕ ಸ್ಥಾನಮಾನ ರದ್ದು – ಹಳೆಯ ಪ್ರಮಾದದ ಉತ್ಪಾಟನ
ಕಳೆದ ಏಳು ದಶಕಗಳಿಂದ ಭಾರತದ ಮುಕುಟಮಣಿ ಜಮ್ಮು-ಕಾಶ್ಮೀರಕ್ಕೆ ಹಿಡಿದಿದ್ದ ಗ್ರಹಣ ಬಿಡುವ ಐತಿಹಾಸಿಕ ಕ್ಷಣ ಕೊನೆಗೂ ನಿರ್ಮಾಣವಾಯಿತು. ಆರ್ಟಿಕಲ್ 370 ಮತ್ತು ಅದರ ದುರುಪಯೋಗದಿಂದ ಭಾರತದ ಸಂವಿಧಾನ ಸೇರಿದ್ದ ಆರ್ಟಿಕಲ್ 35ಎ – ಇವು ಜಮ್ಮು-ಕಾಶ್ಮೀರಕ್ಕೆ ಹಿಡಿದಿದ್ದ ರಾಹು-ಕೇತುಗಳು. ಹೊರನೋಟದಿಂದ ಸಂವಿಧಾನದ ಈ ಎರಡು ಆರ್ಟಿಕಲ್ಗಳು ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುತ್ತವೆ, ಸ್ವಾಯತ್ತ ಆಡಳಿತ ಹಾಗೂ ಅಭಿವೃದ್ಧಿಗೆ ಪೂರಕ, ಕಾಶ್ಮೀರಿಯತ್ತಿನ ಉಳಿವಿಗೆ ಸಹಕಾರಿ, ಜಮ್ಮು-ಕಾಶ್ಮೀರ ಭಾರತದೊಂದಿಗೆ ಸೇರುವ ಸೇತುವೆ ಇತ್ಯಾದಿಯಾಗಿ ಒಂದು ವಾದ ಮಾಡಿದರೂ ಇವೆರಡು ಆರ್ಟಿಕಲ್ಗಳೇ ಜಮ್ಮು-ಕಾಶ್ಮೀರ ರಾಜ್ಯದ ಪ್ರಮುಖ ಸವಾಲುಗಳಾದ ಭಯೋತ್ಪಾದನೆ, ಪ್ರತ್ಯೇಕತಾವಾದ, ಪ್ರಾದೇಶಿಕ ಅಸಮಾನತೆ, ಲಕ್ಷಾಂತರ ಜನರ ಮಾನವಹಕ್ಕುಗಳ ಉಲ್ಲಂಘನೆ ಮೊದಲಾದವುಗಳಿಗೆ ಮೂಲ ಕಾರಣಗಳಾಗಿದ್ದವು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ‘ತಾತ್ಕಾಲಿಕ’ ಎಂದು ಸಂವಿಧಾನಕ್ಕೆ ಸೇರಿಸಲ್ಪಟ್ಟಿದ್ದ 370ನೇ ವಿಧಿ ಎಪ್ಪತ್ತು ದೀರ್ಘ ವರ್ಷಗಳನ್ನು ಬಾಳಿತು. ಸಂವಿಧಾನನಿರ್ಮಾತೃ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿಯ ಮೂಲಕ ಪ್ರತ್ಯೇಕ ಸ್ಥಾನಮಾನ ನೀಡುವುದನ್ನು ಕಟುವಾಗಿ ವಿರೋಧಿಸಿದ್ದರು. 370ರ ಅಡಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಶೇಖ್ ಅಬ್ದುಲ್ಲಾ ನೇತೃತ್ವದಲ್ಲಿ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜ, ಪ್ರತ್ಯೇಕ ರಾಜಕೀಯ ವ್ಯವಸ್ಥೆ ಸ್ಥಾಪಿತಗೊಂಡಿತ್ತು. ಸನಾತನಕಾಲದಿಂದ ಭರತವರ್ಷದ ಅಂಗವಾಗಿದ್ದ ಶಾರದೆಯ ನಾಡು ಕಾಶ್ಮೀರ. ಬ್ರಿಟಿಷ್ ಆಡಳಿತ ಕೊನೆಗೊಂಡ ನಂತರ ಮಹಾರಾಜ ಹರಿಸಿಂಗ್ ವಿಲಯನ ಒಪ್ಪಂದಕ್ಕೆ ಸಹಿಹಾಕುವ ಮೂಲಕ ಆಡಳಿತಾತ್ಮಕ ದೃಷ್ಟಿಯಿಂದ ಭಾರತ ಗಣರಾಜ್ಯದಲ್ಲಿ ಆ ಪ್ರಾಂತ ಏಕೀಕರಣಗೊಂಡಿತ್ತು. ಆದರೆ ಭಾರತದ ಸಂವಿಧಾನದ 370ನೇ ವಿಧಿಯ ಮೂಲಕ ಅಲ್ಲಿ ಪ್ರತ್ಯೇಕತೆಯ ಬೀಜವನ್ನು ಬಿತ್ತಲಾಯಿತು. ಈ ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವ ಸಲುವಾಗಿ ಹೋರಾಡಿದ ಡಾ. ಶ್ಯಾಮಪ್ರಸಾದ ಮುಖರ್ಜಿಯಂತಹ ಧೀಮಂತ ನಾಯಕ ಬಲಿದಾನಗೈದರು. ಅವರ ಬಲಿದಾನವಾದ ಆರೂವರೆ ದಶಕಗಳ ನಂತರವಾದರೂ ನ್ಯಾಯ ಒದಗಿದೆ ಎನ್ನುವುದು ಸಮಾಧಾನದ ಸಂಗತಿ.
ಜಮ್ಮು-ಕಾಶ್ಮೀರ ರಾಜ್ಯ: ಹಿನ್ನೆಲೆ
2.22 ಲಕ್ಷ ಚದರ ಕಿ.ಮೀ. ವ್ಯಾಪ್ತಿಯ ಜಮ್ಮು-ಕಾಶ್ಮೀರದಲ್ಲಿ ಮೂರು ಪ್ರಾಂತಗಳಿವೆ. 36 ಸಾವಿರ ಚದರ ಕಿ.ಮೀ. ವಿಸ್ತೀರ್ಣದ ಜಮ್ಮು, 22 ಸಾವಿರ ಚದರ ಕಿ.ಮೀ. ವಿಸ್ತೀರ್ಣದ ಕಾಶ್ಮೀರ ಹಾಗೂ 1 ಲಕ್ಷದ 64 ಸಾವಿರ ಚದರ ಕಿ.ಮೀ. ವಿಸ್ತೀರ್ಣವುಳ್ಳ ಲಢಾಖ್. ಇದರಲ್ಲಿ 78 ಸಾವಿರ ಚದರ ಕಿ.ಮೀ. (ಪಾಕ್-ಆಕ್ರಮಿತ ಕಾಶ್ಮೀರ ಅಥವಾ ಪಿ.ಒ.ಕೆ. ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ) ಪಾಕಿಸ್ತಾನದ ವಶದಲ್ಲಿಯೂ ಹಾಗೂ ಲಢಾಖ್ ಪ್ರಾಂತದ 37.5 ಸಾವಿರ ಚದರ ಕಿ.ಮೀ. ಮತ್ತು ಪಾಕಿಸ್ತಾನದಿಂದ ಅಕ್ರಮವಾಗಿ ಒಪ್ಪಿಸಲ್ಪಟ್ಟ ಉತ್ತರ ಭಾಗದ 2 ಸಾವಿರ ಚದರ ಕಿ.ಮೀ. ಚೀಣಾದ ವಶದಲ್ಲಿಯೂ ಇದೆ. ಒಂದು ಬಹುಮುಖ್ಯವಾದ ಅಂಶವೆಂದರೆ ಭಿನ್ನ ಭಿನ್ನ ಭಾಷೆಯಾಡುವ, ವಿವಿಧ ಮತಾಚರಣೆಯುಳ್ಳ, ಭೌಗೋಳಿಕವಾಗಿ ಕೂಡ ಸಮರೂಪಿಯಲ್ಲದ ಜಮ್ಮು-ಕಾಶ್ಮೀರದ ಮೂರೂ ಪ್ರಾಂತಗಳು ಐತಿಹಾಸಿಕವಾಗಿ, 1846ರಲ್ಲಿ ಡೋಗ್ರಾ ರಾಜವಂಶದ ಗುಲಾಬ್ಸಿಂಗ್ನ ಆಡಳಿತಕ್ಕೊಳಪಡುವ ವರೆಗೂ ಏಕ ಘಟಕವಾಗಿರಲಿಲ್ಲ. ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳವರೆಗೂ ಜಮ್ಮು ಮತ್ತು ಕಾಶ್ಮೀರದ ನಡುವೆ ನೇರವಾದ ರಸ್ತೆಯ ಸಂಪರ್ಕ ಇರಲಿಲ್ಲ; ಜಮ್ಮುವಿನಿಂದ ಪಂಜಾಬದ ಮುಖಾಂತರವಾಗಿ ಕಾಶ್ಮೀರ ತಲಪಬೇಕಾಗಿತ್ತು. ರಾಷ್ಟ್ರೀಯ ಹೆದ್ದಾರಿ 1ಡಿ ಕಡಿತಗೊಂಡರೆ ಲಢಾಖ್ ಕಾಶ್ಮೀರದಿಂದ ಸಂಪರ್ಕ ಕಳೆದುಕೊಂಡುಬಿಡುತ್ತದೆ. ರಾಜ್ಯದ ಈ ಮೂರು ಪ್ರದೇಶಗಳು ವ್ಯಾವಹಾರಿಕವಾಗಿ, ಸಾಂಸ್ಕøತಿಕವಾಗಿ, ಭಾಷೆ, ಜನಾಂಗ ಹಾಗೂ ಮತಾಚಾರದಿಂದ ಕೂಡ ಒಂದರಿಂದ ಇನ್ನೊಂದು ಭಿನ್ನವಾಗಿವೆ.
ವಿಸ್ತೀರ್ಣದಲ್ಲಿ ರಾಜ್ಯದ ಅತಿದೊಡ್ಡ ಭಾಗ ಲಢಾಖ್ ಪ್ರದೇಶ ಲೇಹ್ ಮತ್ತು ಕಾರ್ಗಿಲ್ಗಳೆಂಬ ಎರಡು ಜಿಲ್ಲೆಗಳನ್ನೊಳಗೊಂಡಿದೆ. ಲೇಹ್ನಲ್ಲಿ ಶೇ. 77 ಬೌದ್ಧ ಸಮುದಾಯ ಹಾಗೂ ಉಳಿದಂತೆ ಷಿಯಾ ಮುಸ್ಲಿಂ ಮತ್ತು ಹಿಂದೂ ಜನವಸತಿಯಿದೆ. ಇಲ್ಲಿಯ ಮುಖ್ಯ ಭಾಷೆ ಬಾಲ್ಟಿ ಮತ್ತು ಲಢಾಖಿ. ಕಾರ್ಗಿಲ್ ಜಿಲ್ಲೆಯಲ್ಲಿ ಶೇ. 80 ಪಹಾಡಿ, ಗುಜ್ಜರ್ ಇತ್ಯಾದಿ ಗುಡ್ಡಗಾಡು ಮುಸ್ಲಿಂ ಸಮುದಾಯ ಹಾಗೂ ಉಳಿದಂತೆ ಅಲ್ಪಸಂಖ್ಯೆಯಲ್ಲಿ ಬೌದ್ಧರಿದ್ದಾರೆ. ಜಮ್ಮು ಪ್ರಾಂತದಲ್ಲಿ ಹಿಂದೂ-ಸಿಖ್ ಮತ್ತು ಮುಸ್ಲಿಂ ಜನಸಂಖ್ಯೆಯ ಅನುಪಾತ 70:30 ಪ್ರತಿಶತದಷ್ಟಿದೆ. ಇವರಲ್ಲಿ 15 ಲಕ್ಷಕ್ಕೂ ಅಧಿಕ ನಿರ್ವಾಸಿತರಿದ್ದಾರೆ. ಇಲ್ಲಿನ ಮುಖ್ಯ ಭಾಷೆ ಡೋಗ್ರಿ.
“ಮಿಸ್ಟರ್ ಅಬ್ದುಲ್ಲಾ, ಭಾರತವು ಕಾಶ್ಮೀರವನ್ನು ರಕ್ಷಿಸಬೇಕೆಂದು ನೀವು ಬಯಸುತ್ತೀರಿ. ನಿಮ್ಮ ಗಡಿಯನ್ನು ಭಾರತವು ರಕ್ಷಿಸಬೇಕೆಂದು ಹೇಳುತ್ತೀರಿ. ಭಾರತವು ನಿಮ್ಮ ನೆಲದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಿಕೊಡಬೇಕೆಂದು ಅಪೇಕ್ಷೆ ಪಡುತ್ತೀರಿ. ಭಾರತವೇ ಕಾಶ್ಮೀರಕ್ಕೆ ಅನ್ನ, ಆಹಾರವನ್ನು ನೀಡಬೇಕೆಂತಲೂ ಹೇಳುತ್ತೀರಿ ಹಾಗೂ ಭಾರತದ ಬೇರೆಬೇರೆ ಭಾಗಗಳಲ್ಲಿ ವಾಸಿಸುವ ಕಾಶ್ಮೀರಿಗಳಿಗೆ ಭಾರತೀಯರಂತೆ ಸಮಾನ ಹಕ್ಕಿರಬೇಕೆಂದೂ ಹೇಳುತ್ತೀರಿ. ಆದರೆ ಕಾಶ್ಮೀರದಲ್ಲಿ ಭಾರತ ಸರ್ಕಾರಕ್ಕೆ, ಭಾರತದ ನಾಗರಿಕರಿಗೆ ಯಾವುದೇ ಹಕ್ಕು-ಅಧಿಕಾರ ನೀಡಲು ನಿರಾಕರಿಸುತ್ತಿದ್ದೀರಿ. ನಿಮಗೆ ಗೊತ್ತಿರಲಿ, ನಾನು ಭಾರತದ ಕಾನೂನು ಮಂತ್ರಿಯಾಗಿ ಭಾರತ ದೇಶಕ್ಕೆ ಯಾವುದೇ ರೀತಿಯ ವಂಚನೆಯಾಗಲು ಬಿಡುವುದಿಲ್ಲ.”
– ಡಾ. ಬಾಬಾಸಾಹೇಬ್ ಅಂಬೇಡ್ಕರ್
ಕಾಶ್ಮೀರ ಪ್ರಮುಖವಾಗಿ ಎರಡು ಪ್ರದೇಶಗಳನ್ನು ಒಳಗೊಂಡಿದೆ: ಶೇ. 70 ಭೂಭಾಗವುಳ್ಳ ಗುಡ್ಡಗಾಡು ಪ್ರದೇಶ ಮತ್ತು ಉಳಿದಂತೆ ಕಾಶ್ಮೀರಿ ಕಣಿವೆ ಪ್ರದೇಶ. ಗುಡ್ಡಗಾಡು ಪ್ರದೇಶದಲ್ಲಿ ಜನಾಂಗೀಯವಾಗಿ ಕಾಶ್ಮೀರಿಗಳಲ್ಲದ ಗುಜ್ಜರ್, ಬಾಕೆರ್ವಾಲ್, ದಾರ್ದ, ಬಾಲ್ಟಿ ಇತ್ಯಾದಿ ಬುಡಕಟ್ಟು ಮುಸ್ಲಿಂ ಜನಾಂಗಗಳು ವಾಸವಾಗಿದ್ದರೆ, ಕಾಶ್ಮೀರ ಕಣಿವೆಯಲ್ಲಿ ಬಹುಸಂಖೈಯಲ್ಲಿ ಸುನ್ನಿ ಮುಸ್ಲಿಂ ವಸತಿಯಿದೆ. ಅಂದರೆ ಕಾಶ್ಮೀರದಲ್ಲಿ ಶೇ. 97 ಮುಸ್ಲಿಂ ಸಮುದಾಯವಿದ್ದರೂ ಪಂಗಡಗಳಾಗಿ ವಿಂಗಡನೆಗೊಂಡಿವೆ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ವಂಚಿತ ಗುಡ್ಡಗಾಡು ಪ್ರದೇಶದ ಮುಸ್ಲಿಂ ಜನರ ಅವಸ್ಥೆ ಕೂಡ ಜಮ್ಮು ಮತ್ತು ಲಢಾಖ್ನ ಸಮಸ್ಯೆಗಳಿಗಿಂತ ತೀರ ಭಿನ್ನವೇನೂ ಅಲ್ಲ. ಉಳಿದಂತೆ ಹಿಂದುಳಿದ ಬುಡಕಟ್ಟು ಮುಸ್ಲಿಂ ಜನರು, ಅಲ್ಪಸಂಖ್ಯ ಹಿಂದೂ-ಸಿಖ್ ಸಮುದಾಯ ಸಾಕಷ್ಟು ಪ್ರಮಾಣದಲ್ಲಿದ್ದಾರೆ.
ಯಾವ ರೀತಿಯಿಂದಲೂ ಒಂದಕ್ಕೊಂದು ಹೋಲಿಕೆಯಿರದ ಮೂರು ಪ್ರತ್ಯೇಕ ಭಾಗಗಳಲ್ಲಿ ಕೇವಲ ಕಾಶ್ಮೀರ ಕಣಿವೆಯ ಅನಂತನಾಗ್, ಶೋಪಿಯಾನ್ ಮತ್ತಿತರ ಒಂದೆರಡು ಜಿಲ್ಲೆಗಳಿಂದ ಮಾತ್ರ ಪ್ರತ್ಯೇಕತೆ ಸ್ವಾಯತ್ತತೆಗಳ ಕೂಗು ಕೇಳಿಬರುತ್ತದೆ. ಪ್ರತ್ಯೇಕತಾವಾದ ಮತ್ತು ಭಾರತವಿರೋಧಿ ಮಾನಸಿಕತೆಯನ್ನು ಬೆಳೆಸಿರುವುದು ರಾಜ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಕಾಶ್ಮೀರಿ ಮಾತನಾಡುವ ಸುನ್ನಿ ಮುಸ್ಲಿಂ ಸಮುದಾಯ ಮಾತ್ರ; ಅವರಲ್ಲಿಯೂ ಅನೇಕ ಪಂಗಡಗಳಿದ್ದು ಭಾರತದೊಂದಿಗಿನ ವಿಲೀನವನ್ನು ಸಂಪೂರ್ಣ ಬೆಂಬಲಿಸುವ ರಾಷ್ಟ್ರವಾದಿ ಜನಸಮುದಾಯವೂ ಗಣನೀಯ ಪ್ರಮಾಣದಲ್ಲಿದೆ. ‘ಹುರಿಯತ್ ಕಾನ್ಫರೆನ್ಸ್’ ಮುಂತಾದ ಪ್ರತ್ಯೇಕತಾವಾದಿ ಸಂಘಟನೆಗಳು, ಸ್ವಾಯತ್ತತೆಯ ಬೇಡಿಕೆಯಿಡುವ ‘ನ್ಯಾಶನಲ್ ಕಾನ್ಫರೆನ್ಸ್’, ‘ಪಿ.ಡಿ.ಪಿ.’ ಮೊದಲಾದ ರಾಜಕೀಯ ಪಕ್ಷಗಳು, ಪಾಕಿಸ್ತಾನಿ ಭಯೋತ್ಪಾದಕರ ಒಳನುಸುಳುವಿಕೆಗೆ ಸಹಾಯ ಮಾಡುವ ಗುಂಪುಗಳು, ಕಲ್ಲೆಸೆತಗಾರರು, ದೆಹಲಿಯ ಬುದ್ಧಿಜೀವಿ ವರ್ಗಗಳಲ್ಲಿ ಪ್ರತ್ಯೇಕತೆಯ ಭಾಷಣ ಬಿಗಿಯುವ ‘ಬುದ್ಧಿಜೀವಿ’ವರ್ಗಗಳವರು, ಮಾಧ್ಯಮಗಳಲ್ಲಷ್ಟೆ ಕಾಶ್ಮೀರವನ್ನು ಪ್ರತಿನಿಧಿಸುವವರು – ಇವರೆಲ್ಲರೂ ಕಣಿವೆಯ ಸುನ್ನಿ ಮುಸಲ್ಮಾನ ಸಮುದಾಯದ ಬೆಂಬಲಿಗರಾಗಿದ್ದಾರೆ. ಜಮ್ಮು-ಕಾಶ್ಮೀರದ ನಾಯಕರೆಂದು ಬಿಂಬಿಸಲ್ಪಡುವ ನ್ಯಾಶನಲ್ ಕಾನ್ಫರೆನ್ಸ್ನ ಅಧ್ಯಕ್ಷ ಮತ್ತು ಕೇಂದ್ರದಲ್ಲಿ ಮಂತ್ರಿಯಾಗಿದ್ದ ಫಾರೂಕ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪೀಪಲ್ಸ್ ಡೆಮೊಕ್ರೆಟಿಕ್ ಪಾರ್ಟಿಯ ಮುಫ್ತಿ ಮಹಮ್ಮದ್ ಸಯೀದ್ ಮತ್ತವರ ಮಗಳು ಮೆಹಬೂಬಾ ಮುಫ್ತಿ, ಜಮ್ಮು-ಕಾಶ್ಮೀರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸೈಫ್ ಉದ್ದೀನ್ ಸೋಜ್, ಮಾಜಿ ಕೇಂದ್ರಮಂತ್ರಿ ಗುಲಾಮ್ ನಬೀ ಆಜಾದ್, ಸಿಪಿಐ-ಎಮ್ನ ಕಾರ್ಯದರ್ಶಿ ಮಹಮ್ಮದ್ ಯೂಸುಫ್ ತರಿಗಾಮಿ, ಸಿಪಿಐನ ಕಾರ್ಯದರ್ಶಿ ಟುಕ್ರೂ, ಪ್ರತ್ಯೇಕತಾವಾದಿ ಮುಂದಾಳುಗಳಾದ ಅಬ್ದುಲ್ ಗನಿ ಭಟ್, ಮಿಜ್ರ್ವಾ ಉಮರ್ ಫಾರೂಕ್, ಯಾಸಿನ್ ಮಾಲಿಕ್, ಶಬ್ಬೀರ್ ಶಾ, ಹುರಿಯತ್ ಕಾನ್ಫರೆನ್ಸ್ನ ಸೈಯದ್ ಅಲಿ ಶಾ ಗಿಲಾನಿ ಇವರೆಲ್ಲ ಒಂದೇ ಪಂಗಡಕ್ಕೆ ಸೇರಿದವರು; ‘ಕಾಶ್ಮೀರಿ ಸುನ್ನಿ ಮುಸಲ್ಮಾನ’ರು. ಅದಲ್ಲದೆ ಜಮ್ಮು-ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ, ಜಮ್ಮು-ಕಾಶ್ಮೀರ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಅಧ್ಯಕ್ಷ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಇವರೆಲ್ಲ ಕಾಶ್ಮೀರಿ ಸುನ್ನಿ ಸಮುದಾಯಕ್ಕೆ ಸೇರಿದವರೇ. ಶೇ. 99 ಕಾಶ್ಮೀರಿ ವ್ಯಾಖ್ಯಾನಕಾರರೂ, ವರದಿಗಾರರೂ ಸುನ್ನಿ ಮುಸ್ಲಿಮರು. ಕಾಶ್ಮೀರದ ಬಹುತೇಕ ಎಲ್ಲ ಸಾಮಾಜಿಕ ಜನಸಂಘಟನೆಗಳು ಸುನ್ನಿ ಮುಸಲ್ಮಾನರ ನಿಯಂತ್ರಣದಲ್ಲೇ ಇವೆ. ರಾಜ್ಯದ ಆಡಳಿತ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ಕಾಶ್ಮೀರಿ ಕಣಿವೆಯ ಸುನ್ನಿ ಮುಸ್ಲಿಮರದೇ ಪ್ರಾಬಲ್ಯವಿದೆ. ಆದರೆ, ಉಳಿದಂತೆ ಷಿಯಾ ವiತ್ತು ಗುಡ್ಡಗಾಡು ಪ್ರದೇಶದ ಗುಜ್ಜರ್, ಪಹಾಡಿ ಇತ್ಯಾದಿ ಮುಸ್ಲಿಂ ಜನರ ನಡುವಿನಿಂದ ಅಥವಾ ರಾಜ್ಯದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಶೇ. 85ಕ್ಕೂ ಮಿಕ್ಕಿ ಭೂಭಾಗ ಹೊಂದಿರುವ ಜಮ್ಮು ಮತ್ತು ಲಢಾಖ್ ಪ್ರಾಂತಗಳಿಂದ ಪ್ರತ್ಯೇಕತೆಯನ್ನು ಪ್ರತಿಪಾದಿಸುವ ಒಂದೇ ಒಂದು ಸಂಘಟನೆಯಾಗಲಿ, ಒಬ್ಬನೇ ಒಬ್ಬ ನಾಯಕನಾಗಲಿ ಇದುವರೆಗೂ ಬೆಳೆದಿಲ್ಲ.
ಹೀಗೆ ಬಂತು 370ನೇ ವಿಧಿ
1947ರಲ್ಲಿ ಜಮ್ಮು-ಕಾಶ್ಮೀರದ ಮೇಲೆ ಆಕ್ರಮಣವೆಸಗಿದ್ದ ಪಾಕಿಸ್ತಾನವು ರಾಜ್ಯದ ಭೂಭಾಗವನ್ನು ಅತಿಕ್ರಮಣ ಮಾಡಿತ್ತು. ಆಗಿನ ಪ್ರಧಾನಿ ನೆಹರು ವಿಷಯವನ್ನು ವಿಶ್ವಸಂಸ್ಥೆಗೆ ಒಯ್ಯಲಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕೆಲವು ಪೂರ್ವಾನ್ವಯ ಷರತ್ತುಗಳೊಂದಿಗೆ ಜನಮತಗಣನೆಯನ್ನು ನಡೆಸುವ ಗೊತ್ತುವಳಿಯನ್ನು ಅಂಗೀಕರಿಸಿತು. ಆ ಷರತ್ತುಗಳೆಂದರೆ ಪಾಕಿಸ್ತಾನ-ಆಕ್ರಮಿತ ಪ್ರದೇಶದಿಂದ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಮತ್ತು ತಾನು ಸ್ಥಾಪಿಸಿದ್ದ ಆಡಳಿತ ವ್ಯವಸ್ಥೆಯನ್ನು ತೆಗೆದುಹಾಕಬೇಕು. ಹಾಗೆಯೇ ಭಾರತದ ಸಂವಿಧಾನವನ್ನು ಜಾರಿಗೊಳಿಸುವ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ನಿರಾಕರಿಸಲ್ಪಡುವುದು. ಈ ಸನ್ನಿವೇಶಗಳ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಭಾರತೀಯ ಗಣರಾಜ್ಯದ ಸಂವಿಧಾನವನ್ನು ವಿಸ್ತರಿಸುವ ಸಲುವಾಗಿ ‘ತಾತ್ಕಾಲಿಕ’ ಮಾರ್ಗೋಪಾಯವಾಗಿ ಬಂದಿದ್ದುದು 370ನೇ ವಿಧಿ. 370ನೇ ವಿಧಿಯು ಜಮ್ಮು-ಕಾಶ್ಮೀರ ರಾಜ್ಯಕ್ಕೆ ಸಂಬಂಧಪಟ್ಟಂತೆ ಕಾನೂನುಗಳನ್ನು ರೂಪಿಸುವ ಹಾಗೂ ವಿಸ್ತರಿಸುವ ಸಂಸತ್ತಿನ ಅಧಿಕಾರವನ್ನು ‘ವಿಲಯನ ಒಪ್ಪಂದ’(Instrument of Accession)ದಲ್ಲಿ ಸೂಚಿಸಿರುವ ವಿಷಯಗಳಿಗೆ ಸೀಮಿತಗೊಳಿಸುತ್ತದೆ. ‘ವಿಲಯನ ಒಪ್ಪಂದ’ದ ಪರಿಶಿಷ್ಟದಲ್ಲಿ ಉಲ್ಲೇಖಿಸಿರುವಂತೆ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಮತ್ತು ಪೂರಕ ವಿಷಯಗಳನ್ನು ಹೊರತುಪಡಿಸಿ ಭಾರತೀಯ ಗಣರಾಜ್ಯ ರೂಪಿಸಿದ ಉಳಿದ ಕಾನೂನುಗಳನ್ನು ಜಾರಿಗೆ ತರಲು ರಾಜ್ಯ ಶಾಸಕಾಂಗದ ಸಮ್ಮತಿಯು ಅಗತ್ಯವಾಗಿತ್ತು. ವಿಧಿ 370 ಕೇವಲ ಈ ಬದಲಾವಣೆಯನ್ನು ಸುಗಮಗೊಳಿಸುವ ಹೆಚ್ಚುವರಿ ವ್ಯವಸ್ಥೆಯಷ್ಟೇ ಆಗಿತ್ತು. ಆದರೆ 370ನೇ ವಿಧಿಯ ನೆಪದಲ್ಲಿ ನಿರಂತರವಾಗಿ ರಾಜಕೀಯ ವಂಚನೆ ಮತ್ತು ಸಂವಿಧಾನದ ನಿಂದನೆ ನಡೆದಿದೆ. ಉದಾಹರಣೆಗೆ, 370ನೇ ವಿಧಿಯು ಜಮ್ಮು-ಕಾಶ್ಮೀರ ರಾಜ್ಯ ಪ್ರತ್ಯೇಕ ರಾಷ್ಟ್ರಧ್ವಜ ಹೊಂದುವ ಅಧಿಕಾರವನ್ನು ಪುರಸ್ಕರಿಸುವುದಿಲ್ಲ; ಹಾಗೆಯೇ ಕೇಂದ್ರದ ಕಾನೂನುಗಳನ್ನು ವಿಸ್ತರಿಸಲು ಅಡ್ಡಿಯಾಗುವಂತಹ ಪ್ರತ್ಯೇಕ ಸಂವಿಧಾನಕ್ಕೂ ಸಮ್ಮತಿಸುವುದಿಲ್ಲ.
1950ರಲ್ಲೇ ಭಾರತ ಸರ್ಕಾರವು ಭಾರತದ ರಾಜ್ಯಗಳ ಮೇಲೆ 370ನೇ ವಿಧಿಯ ಪರಿಣಾಮಗಳನ್ನು ಕುರಿತು ಶ್ವೇತಪತ್ರದಲ್ಲಿ ವಿವರಿಸಿತ್ತು. ಅದರಂತೆ-
ಅ) ಈ ಏರ್ಪಾಡಿನಂತೆ (370ನೇ ವಿಧಿ) ಜಮ್ಮು-ಕಾಶ್ಮೀರ ಭಾರತದ ಭಾಗವಾಗಿರುವುದು.
ಆ) ಅದು ಭಾರತ ಒಕ್ಕೂಟದ (Indian Union) ಭಾಗವಾಗಿರುವುದು ಮತ್ತು ಭಾರತದ ಸಂಸತ್ತಿಗೆ ವಿಲಯನ ಒಪ್ಪಂದದಲ್ಲಿ ಉಲ್ಲೇಖಗೊಂಡ ವಿಷಯಗಳಲ್ಲಿ ಹಾಗೂ ಉಳಿದಂತೆ ರಾಜ್ಯ ಸರ್ಕಾರದ ಸಹಮತಿಯೊಂದಿಗೆ ರಾಜ್ಯಕ್ಕೆ ಸಂಬಂಧಿಸಿದ ಕಾನೂನುಗಳನ್ನು ರೂಪಿಸುವ ಅಧಿಕಾರ ಇರುವುದು.
ಇ) 370ನೇ ವಿಧಿಯ ಅಡಿಯಲ್ಲಿ ಈ ಕೆಳಕಂಡ ಅಂಶಗಳಿಗೆ ಸಂಬಂಧಿಸಿದಂತೆ ಆದೇಶಿಸಲಾಗಿದೆ:
- ಜಮ್ಮು-ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದಂತೆ ಸಂಸತ್ತಿಗೆ ಕಾನೂನು ರಚಿಸುವ ಅಧಿಕಾರವಿರುವ ವಿಷಯಗಳು.
- 1ನೇ ವಿಧಿ (ಒಕ್ಕೂಟದ ಹೆಸರು ಮತ್ತು ಕ್ಷೇತ್ರ ವಿಸ್ತಾರ) ಮತ್ತು 370ನೇ ವಿಧಿಯನ್ನು ಹೊರತುಪಡಿಸಿ ರಾಜ್ಯಕ್ಕೆ ಅನ್ವಯವಾಗುವ ನಿಬಂಧನೆಗಳು.
- ವಿಷಯಗಳನ್ನು ವಿಸ್ತøತವಾಗಿ ಚರ್ಚಿಸುವ ಸಲುವಾಗಿ ಸಂವಿಧಾನ ಸಭೆ (Constituent Assembly)ಯನ್ನು ಘಟಿಸಲಾಗುವುದು.
- ಸಂವಿಧಾನ ಸಭೆಯು ಎಲ್ಲ ವಿಷಯಗಳಲ್ಲಿ ನಿರ್ಣಯಕ್ಕೆ ಬಂದ ನಂತರ 370ನೇ ವಿಧಿಯನ್ನು ರದ್ದುಗೊಳಿಸುವಂತೆ ಅಥವಾ ಬದಲಾವಣೆ ಮತ್ತು ಅಪವಾದಗಳೊಂದಿಗೆ ಜಾರಿಗೊಳಿಸುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ನೀಡುವುದು.
ಈ ಎಲ್ಲ ಭರವಸೆಗಳ ಹೊರತಾಗಿ ಮತ್ತು 1994ರ “ಜಮ್ಮು-ಕಾಶ್ಮೀರ ರಾಜ್ಯ ಭಾರತದ ಅವಿಭಾಜ್ಯ ಅಂಗ” ಎಂದು ಸಂಸತ್ತಿನಲ್ಲಿ ಠರಾವು ಅಂಗೀಕಾರವಾದರೂ, 370ನೇ ವಿಧಿಯ ಹೆಸರಿನಲ್ಲಿ ಎಸಗಲಾಗುತ್ತಿರುವ ತಾರತಮ್ಯಗಳಿಗೆ ಸಮ್ಮತಿಸುತ್ತಿರುವ ಹಳೆಯ ಲೋಪಗಳನ್ನು ಸರಿಪಡಿಸಲು ಯಾವುದೇ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಹಾಗೆಯೇ 1956ರಲ್ಲಿ ಕಾಶ್ಮೀರದ ಸಂವಿಧಾನ ಸಭೆ ವಿಸರ್ಜನೆಗೊಂಡಿತಾದರೂ 370ನ್ನು ಕೊನೆಗೊಳಿಸುವ ವಿಷಯದಲ್ಲಿ ಯಾವುದೇ ನಿರ್ಣಯವನ್ನು ಕೈಗೊಳ್ಳಲೇ ಇಲ್ಲ.
- ಕಾಶ್ಮೀರಕ್ಕಾಗಿ ಪ್ರಾಣ ಕೊಡಲೂ ಸಿದ್ಧ – ಸಂಸತ್ತಿನಲ್ಲಿ ಗೃಹಮಂತ್ರಿ ಅಮಿತ್ ಶಾ ಮಾತು
- ಸಂವಿಧಾನದ 370 ಹಾಗೂ 35ಎ ವಿಧಿ ರದ್ದುಪಡಿಸಿದ ರಾಷ್ಟ್ರಪತಿಯವರ ಆದೇಶ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ಮಸೂದೆ ಕುರಿತು ಸಂಸತ್ತಿನ ಎರಡೂ ಸದನಗಳಲ್ಲಿ ನಡೆದ ಚರ್ಚೆಗೆ ಗೃಹಮಂತ್ರಿ ಅಮಿತ್ ಶಾ ಸುದೀರ್ಘವಾಗಿ ಉತ್ತರ ನೀಡಿದರು. ಅವರ ಮಾತಿನ ಕೆಲವು ಪ್ರಮುಖ ಅಂಶಗಳು ಹೀಗಿವೆ:
- ಜಮ್ಮು-ಕಾಶ್ಮೀರ ಸಹಜ ಸ್ಥಿತಿಗೆ ಮರಳದೆ ಇರುವುದಕ್ಕೆ, ಭಯೋತ್ಪಾದನೆ ಹೆಚ್ಚುವುದಕ್ಕೆ ಹಾಗೂ ಆರ್ಥಿಕ ಹಿನ್ನಡೆಗೆ ಸಂವಿಧಾನದ 370 ಹಾಗೂ 35ಎ ವಿಧಿಗಳು ಕಾರಣವಾಗಿದ್ದವು. ಈ ವಿಧಿಗಳು ಇಡೀ ಭಾರತಕ್ಕೆ ಅನ್ವಯವಾಗುವ ಕಾನೂನುಗಳು ಇಲ್ಲಿ ಜಾರಿಯಾಗುವುದಕ್ಕೆ ಕಂಟಕಗಳಾಗಿದ್ದವು. ಇಂಥ ಕಾನೂನುಗಳನ್ನು ಇಟ್ಟುಕೊಂಡು ಯಾವುದೇ ಕಾರಣಕ್ಕೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕಲು ಆಗುವುದಿಲ್ಲ.
- ಮೂಲತಃ 370ನೇ ವಿಧಿ ತಾತ್ಕಾಲಿಕ ಸ್ವರೂಪದ್ದಾಗಿತ್ತು. ಈ ಹಂಗಾಮಿ ಸ್ಥಾನಮಾನ ಇನ್ನು ಎಷ್ಟು ದಶಕಗಳ ಕಾಲ ಮುಂದೆ ಸಾಗಲು ಅವಕಾಶ ನೀಡಬೇಕು? ಕೇವಲ ಮೂರು ಕುಟುಂಬಗಳು ಮಾತ್ರ 370ನೇ ವಿಧಿಯ ಲಾಭ ಪಡೆದುಕೊಳ್ಳುತ್ತ ಬಂದಿವೆಯೇ ವಿನಾ ಇದರ ಪ್ರಯೋಜನ ಜನರಿಗೆ ತಲಪಲೇ ಇಲ್ಲ,
- ರಿಯಲ್ ಎಸ್ಟೇಟ್ ದರಗಳು ಯಾವತ್ತೂ ಕೂಡ ರಾಷ್ಟ್ರೀಯ ಸರಾಸರಿ ಜತೆ ಹೊಂದಾಣಿಕೆಯಾಗಿಲ್ಲ. ಸಿಮೆಂಟ್ ಬೆಲೆ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಿದೆ. ಪ್ರವಾಸೋದ್ಯಮ ನೆಲಕಚ್ಚಿದೆ. ಏಕೆಂದರೆ ಹೊರಗಡೆಯವರು ಇಲ್ಲಿ ಭೂಮಿಯನ್ನು ಖರೀದಿಸುವಂತಿಲ್ಲ, ಉದ್ಯಮಗಳನ್ನು ನಡೆಸುವಂತಿಲ್ಲ.
- ಶಿಕ್ಷಣದಲ್ಲೂ ರಾಜ್ಯ ಹಿಂದುಳಿಯಲು 370ನೇ ವಿಧಿಯೇ ಕಾರಣ. ಮಕ್ಕಳಿಗೆ ಶಿಕ್ಷಣದ ಖಾತ್ರಿ ನೀಡುವ ಶಿಕ್ಷಣ ಹಕ್ಕು ಕಾಯಿದೆಯನ್ನು ಇಲ್ಲಿ ಜಾರಿಗೊಳಿಸಲು ಆಗುವುದಿಲ್ಲ. ಏಕೆ, ಕಣಿವೆ ರಾಜ್ಯದ ಮಕ್ಕಳು ವಿದ್ಯೆಯ ಲಾಭಗಳನ್ನು ಪಡೆಯಬಾರದೇ?
- ದೇಶದಲ್ಲಿ ಜನರ ಆರೋಗ್ಯ ಸಮಸ್ಯೆಯ ಸುಧಾರಣೆಗಾಗಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ಜಮ್ಮು-ಕಾಶ್ಮೀರದ ಜನತೆಗೆ ಇದರ ಲಾಭ ಸಿಗುತ್ತಿಲ್ಲ. ಕಾರಣ ಡಾಕ್ಟರ್ಗಳೇ ಇಲ್ಲಿಗೆ ಬರುತ್ತಿಲ್ಲ. ಆಸ್ಪತ್ರೆ ಆರಂಭಿಸಲು ಜಾಗವನ್ನು ಖರೀದಿಸುವಂತಿಲ್ಲ.
- 1957ರಲ್ಲಿ ರಾಜ್ಯ ಸರ್ಕಾರವು ವಾಲ್ಮೀಕಿ ಜನಾಂಗದವರನ್ನು (ದಲಿತರನ್ನು) ಜಮ್ಮು ಮತ್ತು ಕಾಶ್ಮೀರಕ್ಕೆ ಕರೆತಂದಿತು. ಅಲ್ಲಿಂದ ಇಲ್ಲಿಯ ತನಕ ದಲಿತರು ಜಮ್ಮು ಪುರಸಭೆಯಲ್ಲಿ ಜಾಡಮಾಲಿ ಕೆಲಸವನ್ನು ಮಾತ್ರ ಮಾಡಲು ಅವಕಾಶವಿದೆ. ಅವರಿಗೆ ಕಾಯಂ ವಾಸದ ದೃಢೀಕರಣ ಪತ್ರ(ಪಿಆರ್ಸಿ)ವನ್ನು ಇಲ್ಲಿ ನೀಡಲಾಗುವುದಿಲ್ಲ. ಈ ಸಮುದಾಯಕ್ಕೆ ಸೇರಿದವರಿಗೆ ಶಿಕ್ಷಕ, ವಕೀಲ, ವೈದ್ಯರಾಗುವ ಅರ್ಹತೆ ಇರಬಹುದು. ಆದರೆ ಅವರು ಬೀದಿ ಕಸ ಗುಡಿಸುವ ಹುದ್ದೆಗೆ ಮಾತ್ರ ಸೀಮಿತರಾಗಿರುತ್ತಾರೆ. ಇಂಥ ಕಾನೂನುಗಳು ಇರಬೇಕೆ?
- ಜಮ್ಮು ಮತ್ತು ಕಾಶ್ಮೀರದ ಮಹಿಳೆಯರು ತಮ್ಮ ರಾಜ್ಯದ ಹೊರಗಿನವರನ್ನು ವಿವಾಹವಾಗುವಂತಿಲ್ಲ. ಒಂದು ವೇಳೆ ಲಗ್ನವಾದರೆ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಆಸ್ತಿಯಲ್ಲಿ ಅವರಿಗೆ ಕಿಂಚಿತ್ತೂ ಪಾಲಿಲ್ಲ.
- ವಿರೋಧ ಪಕ್ಷಗಳು ಆರೋಪಿಸುವಂತೆ ನಾವು ಈ ಪ್ರದೇಶವನ್ನು ಇನ್ನೊಂದು ಕೊಸೊವೊ ಆಗಲು ಬಿಡುವುದಿಲ್ಲ. ಕಾಶ್ಮೀರಕಣಿವೆ ಭೂಮಿಯ ಮೇಲಣ ಸ್ವರ್ಗವಾಗಿತ್ತು, ಮುಂದೆಯೂ ಸ್ವರ್ಗವಾಗಿಯೇ ಉಳಿಯಲಿದೆ. ಜಮ್ಮು-ಕಾಶ್ಮೀರ ಭಾರತದ ಮುಕುಟಮಣಿ. ಕೇವಲ ಐದು ವರ್ಷ ಸಮಯ ಕೊಡಿ. ಅದನ್ನು ಇಡೀ ರಾಷ್ಟ್ರದಲ್ಲಿ ಅತಿ ಹೆಚ್ಚು ಮುಂದುವರಿದ ರಾಜ್ಯವನ್ನಾಗಿ ರೂಪಾಂತರಗೊಳಿಸುತ್ತೇವೆ.
- 370ನೇ ವಿಧಿ ಹೋದರೆ ಕಾಶ್ಮೀರದ ಸಂಸ್ಕøತಿ ಹಾಳಾಗುತ್ತದೆ ಎಂದು ಸಂಸ್ಕøತಿಯ ಹೆಸರಿನಲ್ಲಿ ದಾರಿ ತಪ್ಪಿಸಲಾಗುತ್ತಿದೆ. ಮಹಾರಾಷ್ಟ್ರ, ಗುಜರಾತ್ ಮತ್ತುಳಿದ ದೇಶದ ರಾಜ್ಯಗಳಲ್ಲಿ ಸಂಸ್ಕøತಿ ಇಲ್ಲವೇನು? ಅಲ್ಲಿ ಎಲ್ಲಿ 370ನೇ ವಿಧಿ ಇದೆ?
- ಸರ್ದಾರ್ ಪಟೇಲ್ ಜುನಾಗಢ ಪ್ರಕರಣವನ್ನು ಇತ್ಯರ್ಥಗೊಳಿಸಿದರು, ಇಂದು ಜುನಾಗಢ ಭಾರತದ ಅಂಗವಾಗಿದೆ; ಅಲ್ಲಿ 370ನೇ ವಿಧಿ ಇಲ್ಲ. ಹೈದರಾಬಾದಿನ ವಿಷಯವನ್ನು ನಿರ್ವಹಿಸಿದರು, ಅದೂ ಭಾರತದಲ್ಲಿದೆ; ಅಲ್ಲಿ 370ನೇ ವಿಧಿ ಇಲ್ಲ. ಪಂಡಿತ್ ನೆಹರು ಕಾಶ್ಮೀರ ತನಗೆ ಗೊತ್ತು ಎಂದು ಗೃಹಮಂತ್ರಿ ಪಟೇಲ್ರನ್ನು ಹೊರಗಿಟ್ಟು ಆ ರಾಜ್ಯದ ವಿಷಯವನ್ನು ಕೈಯಲ್ಲಿರಿಸಿಕೊಂಡರು. ಪರಿಣಾಮ 370ನೇ ವಿಧಿಯ ಜೊತೆಗೇ ಜಮ್ಮು ಮತ್ತು ಕಾಶ್ಮೀರ ಇಂದು ದೇಶದೊಂದಿಗಿದೆ. ಅದರಿಂದ ಆದ ಸಮಸ್ಯೆಗಳನ್ನು ನಾವು ಇಂದಿಗೂ ಅನುಭವಿಸುತ್ತಿದ್ದೇವೆ.
- ಪಾಕ್-ಆಕ್ರಮಿತ ಕಾಶ್ಮೀರವು ಭಾರತದ ಅಂಗವಲ್ಲ ಎಂದು ನೀವು ಯೋಚಿಸಿದ್ದೀರಾ? ಈ ವಿಚಾರದಲ್ಲಿ ಕೂಡಲೇ ಕಾಂಗ್ರೆಸ್ ತನ್ನ ನಿಲವನ್ನು ಸ್ಪಷ್ಟಪಡಿಸಲಿ. ಕೇವಲ ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲ, ಪಾಕ್-ಆಕ್ರಮಿತ ಕಾಶ್ಮೀರ, ಅಕ್ಸಾಯ್ ಚಿನ್ ಕೂಡ ಭಾರತದ ಅವಿಭಾಜ್ಯ ಅಂಗಗಳೇ. ಅದಕ್ಕಾಗಿ ನಾವು ಪ್ರಾಣ ಕೊಡಲೂ ಸಿದ್ಧ.
- ಅಂದು ನೆಹರು ಸೇನೆಯನ್ನು ತಡೆಯದೇ ಇದ್ದಿದ್ದರೆ, ಏಕಪಕ್ಷೀಯವಾಗಿ ಕದನವಿರಾಮ ಘೋಷಣೆ ಮಾಡದಿದ್ದರೆ ಇಂದು ಪಾಕ್-ಆಕ್ರಮಿತ ಕಾಶ್ಮೀರ ಭಾರತದಲ್ಲಿ ಇರುತ್ತಿತ್ತು. ಗೃಹಸಚಿವರಾಗಿದ್ದ ಪಟೇಲ್ರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ನೆಹರು ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದರು.
- ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಜಮ್ಮು ಮತ್ತು ಕಾಶ್ಮೀರ ಎಂಬ ನನ್ನ ಪದಪ್ರಯೋಗದಲ್ಲಿ ಪಾಕಿಸ್ತಾನ-ಆಕ್ರಮಿತ ಕಾಶ್ಮೀರವೂ ಸೇರಿದೆ, ಅಕ್ಸಾಯ್ ಚಿನ್ ಕೂಡಾ ಸೇರಿದೆ. ಪಾಕಿಸ್ತಾನ-ಆಕ್ರಮಿತ ಕಾಶ್ಮೀರವನ್ನು ಮತ್ತೆ ನಮ್ಮ ವಶಕ್ಕೆ ಪಡೆಯುವ ಪ್ರಯತ್ನವನ್ನು ನಾವು ಮುಂದುವರಿಸುತ್ತೇವೆ.
- ಜಮ್ಮು-ಕಾಶ್ಮೀರ ಮತ್ತು ಲಢಾಖನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ಕಾಯ್ದೆ ರೂಪಿಸುವ ಈ ಐತಿಹಾಸಿಕ ದಿನ ವಿರೋಧ ಪಕ್ಷದವರು ಹೇಳುವಂತೆ ಇದು ಕರಾಳದಿನವಲ್ಲ. ಈ ಹಿಂದೆ ತುರ್ತುಪರಿಸ್ಥಿತಿ ಹೇರಿ ಕಾಂಗ್ರೆಸ್ ಇಡೀ ದೇಶವನ್ನೇ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಅದು ಕರಾಳದಿನ. ಈಗಿನದು ಐತಿಹಾಸಿಕ ಪ್ರಮಾದವಲ್ಲ; ಐತಿಹಾಸಿಕವಾಗಿ ಆಗಿದ್ದ ಪ್ರಮಾದವನ್ನು ಸರಿಪಡಿಸುವಂಥ ಕ್ರಮ. ಇಂದಿನ ನಮ್ಮ ಕ್ರಮ ಸರಿಯೇ ತಪ್ಪೇ ಎನ್ನುವುದನ್ನು ಇತಿಹಾಸ ನಿರ್ಧರಿಸಲಿದೆ. ಮುಂದೆ ಈ ವಿಚಾರ ಚರ್ಚೆಗೆ ಬಂದಾಗಲೆಲ್ಲ ಜನರು ಪ್ರಧಾನಿ ಮೋದಿಯವರನ್ನು ನೆನಪಿಸಿಕೊಳ್ಳುತ್ತಾರೆ.
- ನಾಗಾಲ್ಯಾಂಡ್ ಸೇರಿದಂತೆ 7 ರಾಜ್ಯಗಳಿಗೆ ಸಂಬಂಧಿಸಿದ 371ನೇ ವಿಧಿಯನ್ನು ದುರ್ಬಲಗೊಳಿಸುವ ಅಥವಾ ಬದಲಾವಣೆ ಮಾಡುವ ಚಿಂತನೆ ಕೇಂದ್ರ ಸರ್ಕಾರಕ್ಕಿಲ್ಲ. 370 ಹಾಗೂ 371ನೇ ವಿಧಿಯ ನಡುವೆ ಸ್ಪಷ್ಟ ವ್ಯತ್ಯಾಸವಿದೆ. ವಿಶೇಷವಾದ 371ನೇ ವಿಧಿಯು ಸಂಬಂಧಪಟ್ಟ ರಾಜ್ಯಗಳಿಗೆ ನಿರ್ದಿಷ್ಟ ಪ್ರಯೋಜನಗಳನ್ನು ಒದಗಿಸುತ್ತವೆ. ಎರಡೂ ವಿಧಿಗಳನ್ನು ಹೋಲಿಸುವ ಅಗತ್ಯವಿಲ್ಲ ಹಾಗೂ 371ನೇ ವಿಧಿಯನ್ನು ಬದಲಿಸುವ ಚಿಂತನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕಿಲ್ಲವೆಂದು ಭರವಸೆ ನೀಡುತ್ತೇನೆ. ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು 371ನೇ ವಿಧಿಗೆ ಹೋಲಿಸಿ ದೇಶವನ್ನು ತಪ್ಪುದಾರಿಗೆ ಎಳೆಯದಿರಿ.
370ನೇ ವಿಧಿಯ ದುರ್ಬಳಕೆ
370ನೇ ವಿಧಿಯ ನಿಂದನೆ ಮತ್ತು ದುರುಪಯೋಗಗಳ ಮೇಲೆ ಗಮನಹರಿಸಿದರೆ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದಂತೆ ಸಂಘಾತ್ಮಕ (Union) ವಿಷಯಗಳ ಯಾದಿಯಲ್ಲಿ 99ರಲ್ಲಿ 6 ಮತ್ತು ಸಹವರ್ತಿ (Concurrent) ಪಟ್ಟಿಯ 52ರಲ್ಲಿ 21 ವಿಷಯಗಳು ಇನ್ನೂ ಹೊರಪಟ್ಟಿರುವುದು ಗೋಚರವಾಗುತ್ತದೆ. ಜಮ್ಮು-ಕಾಶ್ಮೀರದ ಪ್ರಮಾಣವಚನದ ಪಠ್ಯ ಉಳಿದವುಗಳಿಗಿಂತ ಭಿನ್ನವಾಗಿದೆ. ರಾಜ್ಯದ ಶಾಸನಸಭೆಯ ಕಾಲಾವಧಿ ಆರು ವರ್ಷ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ (Prevention of Corruption Act) 1988, ಭಾರತೀಯ ದಂಡಸಂಹಿತೆ (Indian Penal Code), ಗೃಹೀಯ ಹಿಂಸಾ ಕಾಯಿದೆ (Domestic Violence Act), ಧಾರ್ಮಿಕ ಸಂಸ್ಥೆ (ದುರುಪಯೋಗ ನಿಯಂತ್ರಣ) (Religious institutions [prevention of misuse]) ಕಾಯಿದೆ 1988, ಅರಣ್ಯ ಹಕ್ಕು ಕಾಯಿದೆ (Forests Rights Act), ವನ್ಯಜೀವಿ ಸಂರಕ್ಷಣಾ ಕಾನೂನು (Protection of Wild Animals Act) ಇತ್ಯಾದಿಗಳು ಜಮ್ಮು-ಕಾಶ್ಮೀರ ರಾಜ್ಯಕ್ಕೆ ಅನ್ವಯವಾಗುವುದಿಲ್ಲ. ಜಮ್ಮು-ಕಾಶ್ಮೀರದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ ಸಿ.ಬಿ.ಐ.ನ ಅಧಿಕಾರ ಸೀಮಿತವಾಗಿದೆ, ಅಂದರೆ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ದಾಖಲಾದ ದೂರಿನ ಮೇಲೆ ತನಿಖೆ ನಡೆಸಲು ಸಿ.ಬಿ.ಐ. ರಾಜ್ಯ ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ರಾಜ್ಯಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಕಾನೂನು ವ್ಯಾಪ್ತಿ ಅಪೀಲಿಗೆ ಮಾತ್ರ ಸೀಮಿತವಾಗಿದೆ ಮತ್ತು ಫೆಡರಲ್ ಕೋರ್ಟ್ ಆಗಿ ಕಾರ್ಯನಿರ್ವಹಿಸುವ ಅಧಿಕಾರ ಮೊಟಕುಗೊಂಡಿದೆ.
ಕಡೆಯಪಕ್ಷ ರಾಜ್ಯದ ಜನತೆಗೆ 370ನೇ ವಿಧಿಯು ನಿಜವಾಗಿ ಹಿತಕಾರಿಯಾಗಿದೆಯೇ? – ಎನ್ನುವುದನ್ನು ವಿಶ್ಲೇಷಿಸಿದರೆ, ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಜನ ಪ್ರತಿನಿಧಿ ಕಾಯಿದೆ (Peoples’ Representation Act
1950) ರಾಜ್ಯಕ್ಕೆ ಅನ್ವಯವಾಗದೆ ಇರುವುದರಿಂದ ಚುನಾವಣಾ ಕ್ಷೇತ್ರಗಳ ಮರುವಿಂಗಡನೆಯನ್ನು ಜಾರಿಗೆ ತರುವ ಅಧಿಕಾರ ಕೇಂದ್ರಕ್ಕೆ ಇರುವುದಿಲ್ಲ. 2002ರಲ್ಲಿ ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಇಡೀ ದೇಶದಲ್ಲಿ ಕ್ಷೇತ್ರ ಪುನರ್ವಿಂಗಡನೆಯನ್ನು ಕೈಗೊಳ್ಳಲಾಯಿತು. ಕೆಲವು ಆಯ್ದ ಪ್ರದೇಶಗಳ ಹಿತಾಸಕ್ತಿಗೆ ಅನುಗುಣವಾಗಿ 370ನೇ ವಿಧಿಯ ದುರುಪಯೋಗ ನಡೆದಿದೆ. ಜಮ್ಮು ಪ್ರಾಂತದ ಜನಸಂಖ್ಯೆ, ಭೌಗೋಲಿಕ ವಿಸ್ತಾರ ಹಾಗೂ ಮತದಾರರ ಸಂಖ್ಯೆ ಹೆಚ್ಚಿದ್ದರೂ ಕಾಶ್ಮೀರದಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳಿವೆ. ಕಾಶ್ಮೀರ 47 ಸ್ಥಾನಗಳನ್ನು ಹೊಂದಿದ್ದರೆ ಜಮ್ಮು ಕೇವಲ 37 ಸ್ಥಾನಗಳನ್ನು ಹೊಂದಿದೆ. ಸರಿಯಾಗಿ ಕ್ಷೇತ್ರ ಪುನರ್ವಿಂಗಡನೆ ನಡೆದದ್ದೇ ಆದಲ್ಲಿ ಜಮ್ಮುವಿಗೆ 48-50 ಸ್ಥಾನಗಳು ಹಾಗೂ ಕಾಶ್ಮೀರಕ್ಕೆ 35-36 ಸ್ಥಾನಗಳು ದೊರೆಯುತ್ತಿದ್ದವು. ರಾಜ್ಯದಲ್ಲಿ ಇತರ ಹಿಂದುಳಿದ ವರ್ಗಗಳ (ಒ.ಬಿ.ಸಿ.) ಜನಸಂಖ್ಯೆಯ ಬಗ್ಗೆ ಯಾವುದೇ ದಾಖಲೆಗಳಿಲ್ಲ. ರಾಜ್ಯದಲ್ಲಿ ಮಂಡಲ ಆಯೋಗದ ವರದಿ ಜಾರಿಗೆ ಬಂದಿಲ್ಲ. ಹಾಗಾಗಿ ಹಿಂದುಳಿದ ವರ್ಗಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಮೀಸಲಾತಿ ಸೌಕರ್ಯಗಳು ದೊರೆಯುತ್ತಿಲ್ಲ. ಪರಿಶಿಷ್ಟ ಜಾತಿ/ಪಂಗಡ ಮುಂತಾದ ಸಮಾಜದ ವಂಚಿತ ವರ್ಗಗಳಿಗೆ 1991ರ ವರೆಗೂ ಯಾವುದೇ ಮೀಸಲಾತಿ ದೊರೆಯುತ್ತಿರಲಿಲ್ಲ. 1991ರಿಂದ ಅವರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ದೊರೆತರೂ ರಾಜಕೀಯ ಮತ್ತು ರಾಜ್ಯ ಶಾಸನಸಭೆಯಲ್ಲಿ ಇನ್ನೂ ಆರಕ್ಷಣ ದೊರೆತಿರಲಿಲ್ಲ. ರಾಜ್ಯ ಸರ್ಕಾರ ಸಂವಿಧಾನದ 73ನೇ (ಪಂಚಾಯತ್ ರಾಜ್ 1993) ಮತ್ತು 74ನೇ (ಸ್ಥಳೀಯ ಸಂಸ್ಥೆ 1993) ತಿದ್ದುಪಡಿಯನ್ನು ಜಾರಿಗೆ ತರಲು ಕಾನೂನುಗಳನ್ನು ರೂಪಿಸಲು ಕೂಡ ನಿರಾಕರಿಸಿತು. ಆದ್ದರಿಂದ ಜಮ್ಮು-ಕಾಶ್ಮೀರದಲ್ಲಿ ಜನಾಡಳಿತದ ವಿಕೇಂದ್ರೀಕರಣ ಮತ್ತು ಜನಸಾಮಾನ್ಯರಿಗೆ ಅಧಿಕಾರದ ಹಸ್ತಾಂತರ ಇದುವರೆಗೂ ನಡೆದಿಲ್ಲ. ಹಳೆಯ ಜಮ್ಮು-ಕಾಶ್ಮೀರ ಪಂಚಾಯತ್ ರಾಜ್ ಕಾಯಿದೆ 1989ರ ಅನ್ವಯ ಪಂಚಾಯತಿಗಳಿಗೆ ಚುನಾವಣೆಗಳನ್ನು ನಡೆಸಲಾಗುತ್ತಿತ್ತು. ‘ಜಮ್ಮು-ಕಾಶ್ಮೀರ ಮಾಹಿತಿ ಹಕ್ಕು ಕಾಯಿದೆ’ ಮತ್ತು ಅದರ ತಿದ್ದುಪಡಿಗಳು ಕೇಂದ್ರದ ಕಾನೂನಿಗೆ ಯಾವ ಸಮದಲ್ಲೂ ಇಲ್ಲ. ಜಮ್ಮು-ಕಾಶ್ಮೀರ ಮಾಹಿತಿ ಹಕ್ಕು ಕಾಯಿದೆಯು ಕೇಂದ್ರದ ಕಾನೂನು ಕೊಡುವುದಕ್ಕಿಂತ ಹೆಚ್ಚಿನ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು.
ಇನ್ನೊಂದು ಮುಖ್ಯ ಅಂಶವೆಂದರೆ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಕೊಡುತ್ತಿದ್ದ ತಲಾ ಸಹಾಯಧನ ಪಶ್ಚಿಮ ಬಂಗಾಳ ರಾಜ್ಯದ ತಲಾ ಸಹಾಯಧನಕ್ಕಿಂತ 16 ಪಟ್ಟು ಹಾಗೂ ಬಿಹಾರದ ತಲಾ ಸಹಾಯಧನಕ್ಕಿಂತ 12 ಪಟ್ಟು ಜಾಸ್ತಿಯಾಗಿತ್ತು. ಅದರಲ್ಲೂ ಕಾಶ್ಮೀರ ಕಣಿವೆಗೆ ಸುಮಾರು 65-67% ಆರ್ಥಿಕ ಸಂಪನ್ಮೂಲಗಳು ನಿಗದಿಯಾದರೆ ಜಮ್ಮು ಮತ್ತು ಲಢಾಖ್ ಪ್ರಾಂತಗಳು ಸೇರಿ 31-35% ಪಾಲನ್ನು ಪಡೆಯುತ್ತಿದ್ದವು. ಜಮ್ಮು-ಕಾಶ್ಮೀರ ನಿಯತವಾಗಿ ವಿಶೇಷ ಆರ್ಥಿಕ ಪ್ಯಾಕೇಜುಗಳನ್ನು ಮತ್ತು ಪ್ರಧಾನಮಂತ್ರಿ ಪ್ಯಾಕೇಜುಗಳನ್ನು ಪಡೆದುಕೊಳ್ಳುತ್ತಿತ್ತು. ಆದರೆ ಇದಾವುದಕ್ಕು ಲೆಕ್ಕ ಕೊಡುವ ಹೊಣೆಗಾರಿಕೆಯಿಂದ ಮುಕ್ತವಾಗಿತ್ತು, ಏಕೆಂದರೆ ಎಂದೂ ಮಾಹಿತಿಯನ್ನು ಬಹಿರಂಗಗೊಳಿಸಲಾಗುವುದಿಲ್ಲ ಮತ್ತು ದುರ್ಬಲ ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲೂ ಪಡೆಯಲು ಸಾಧ್ಯವಾಗುವುದಿಲ್ಲ.
ಮೋದಿ ಸರ್ಕಾರದ ಬದಲಾದ ಜಮ್ಮು-ಕಾಶ್ಮೀರ ನೀತಿ
ಜಮ್ಮು-ಕಾಶ್ಮೀರದ ಸಮಸ್ಯೆ ಅಸಲಿ ಕಾಶ್ಮೀರದ ಸಮಸ್ಯೆಯಲ್ಲ. ಇದು ದೆಹಲಿಯ ಸಮಸ್ಯೆ ಎಂದು ಹೇಳಲಾಗುತ್ತದೆ. ಸ್ವಾತಂತ್ರ್ಯದ ನಂತರ ಆರಂಭದಿಂದಲೂ ದೆಹಲಿಯ ಗದ್ದುಗೆಂiÀiಲ್ಲಿ ಕುಳಿತ ಸರ್ಕಾರಗಳ ನೀತಿ ಕಾಶ್ಮೀರದ ವಿಲೀನವನ್ನು ಸಂಪೂರ್ಣಗೊಳಿಸಲು ಮತ್ತು ರಾಜ್ಯದ ಮೂರು ಭಾಗಗಳನ್ನು ಸಮಗ್ರವಾಗಿ ಕಾಣಲು ಪೂರಕವಾಗುವಂತಹ ನೀತಿಯನ್ನು ಅನುಸರಿಸಲೇ ಇಲ್ಲ. ಕೇಂದ್ರ ಸರ್ಕಾರದ ನೀತಿಗಳು ಕಾಶ್ಮೀರಿ ಕಣಿವೆ ಕೇಂದ್ರಿತ ಮತ್ತು ಪ್ರತ್ಯೇಕತಾವಾದಿಗಳ ತುಷ್ಟೀಕರಣದಿಂದ ಅವರನ್ನು ಸಮಾಧಾನಪಡಿಸುವ ರೀತಿಯಲ್ಲೇ ನಡೆದುಬಂದವು. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ
ಹಣ, ವಿಶೇಷ ಪ್ಯಾಕೇಜುಗಳು ತುಂಬಾ ಅಧಿಕ. ಅಂಕಿ-ಅಂಶಗಳ ಪ್ರಕಾರ ಕಳೆದ 70 ವರ್ಷಗಳಲ್ಲಿ ದೇಶದ ಜನಸಂಖ್ಯೆಯ ಶೇ. 1ರಷ್ಟಿರುವ ಜಮ್ಮು-ಕಾಶ್ಮೀರ ಶೇ. 10ರಷ್ಟು ಅನುದಾನವನ್ನು ಪಡೆದುಕೊಂಡಿದೆ.
ರಾಜ್ಯ ಸರ್ಕಾರದ ಆದಾಯದ ಪ್ರಮುಖ ಅಂಗ ಕೇಂದ್ರ ಸರ್ಕಾರ ಕೊಡುವ ಅನುದಾನವೇ. ಆದರೆ ಈ ಅನುದಾನ ತಲಪಬೇಕಾದವರಿಗೆ ತಲಪಲೇ ಇಲ್ಲ. ಪಟ್ಟಭದ್ರ್ರರಿಗೆ ಮತ್ತು ಕಾಶ್ಮೀರಿ ಕಣಿವೆಯ ಭ್ರಷ್ಟರ ಕೈಸೇರಿತು ಅಷ್ಟೇ. ಜಮ್ಮುವಿನ ನಿರಾಶ್ರಿತರು, ಲಢಾಖ್ನ ಗುಡ್ಡಗಾಡಿನ ಜನರ ಕಲ್ಯಾಣ ಕನಸಾಗಿಯೇ ಉಳಿದಿದೆ. ಕಾಶ್ಮೀರಿ ಕಣಿವೆಯ ಪ್ರತ್ಯೇಕತಾವಾದ ಕಡಮೆಯಾಗಲಿಲ್ಲ. ವಾಜಪೇಯಿ ಸರ್ಕಾರದ ಅವಧಿಯಲ್ಲಿ ಕಾಶ್ಮೀರಿಯತ್, ಜಮೂರಿಯತ್, ಇನ್ಸಾನಿಯತ್ ಎಂದು ಕೇಂದ್ರದ ನೀತಿಯಲ್ಲಿ ಒಂದಿಷ್ಟು ಬದಲಾವಣೆಗಳು ಕಂಡರೂ ದೊಡ್ಡಮಟ್ಟದ ಯಶಸ್ಸು ಕಂಡುಬರಲಿಲ್ಲ. ಆನಂತರ ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಲ್ಲಿ ಅಧಿಕಾರದಲ್ಲಿದ್ದರೂ ಉಗ್ರವಾದ ಪ್ರತ್ಯೇಕತಾವಾದಗಳು ತಗ್ಗಲಿಲ್ಲ. ಯುಪಿಎ ಸರ್ಕಾರ ಕಳುಹಿಸಿದ ಸಂಧಾನಕಾರರೂ ಪ್ರತ್ಯೇಕತಾವಾದಿಗಳ ಭಾಷೆಯನ್ನೇ ಮಾತನಾಡತೊಡಗಿದರು.
ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರದ ಜಮ್ಮು-ಕಾಶ್ಮೀರದ ನೀತಿ ಹಿಂದಿನ ಸರ್ಕಾರಕ್ಕಿಂತ ಭಿನ್ನವಾಗಿದ್ದನ್ನು ಸ್ಪಷ್ಟವಾಗಿ ಗುರುತಿಸಬಹುದು. ಮೊದಲನೆಯದಾಗಿ ಇದುವರೆಗಿನ ಕಾಶ್ಮೀರಿ ಕಣಿವೆ ಕೇಂದ್ರಿತ ನೀತಿಯ ಬದಲಾಗಿ ರಾಜ್ಯದ ಮೂರೂ ಭಾಗಗಳನ್ನು ಸಮಾನವಾಗಿ ಕಾಣುವ ಮತ್ತು ಎಲ್ಲ ಪ್ರದೇಶಗಳ ಅಭಿವೃದ್ಧಿಗೆ ಒತ್ತುಕೊಡುವ ಕಾರ್ಯ ನಡೆದಿದೆ. ಜಮ್ಮುವಿನಲ್ಲಿಯೂ ಏಮ್ಸ್, ಐಐಐಟಿ, ಯೂನಿವರ್ಸಿಟಿಗಳು ಕಾರ್ಯಾರಂಭ ಮಾಡಿದವು. ಲಢಾಖ್ನ ಪ್ರಗತಿಗೂ ಗಮನ ಹರಿಸಲಾಯಿತು. ಕಾಶ್ಮೀರವಾಗಿದ್ದ ರಾಜ್ಯ ನಿಜಾರ್ಥದಲ್ಲಿ ಜಮ್ಮು-ಕಾಶ್ಮೀರವಾಯಿತು. ಪಾಕ್-ಆಕ್ರಮಿತ ಕಾಶ್ಮೀರವನ್ನು ‘ಪಾಕ್-ಆಕ್ರಮಿತ ಜಮ್ಮು-ಕಾಶ್ಮೀರ’ ಎಂದು ಸಂಬೋಧಿಸುವ ಕ್ರಮವು ಜಾರಿಗೆ ಬಂದಿದ್ದು ಒಂದು ಗಮನಿಸಬೇಕಾದ ಅಂಶ.
ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಕುರಿತು ಕಠಿಣ ನೀತಿಯನ್ನು ಸರ್ಕಾರ ಅನುಸರಿಸಿತು. ಹಿಜಬುಲ್ನಂತಹ ಉಗ್ರ ಸಂಘಟನೆಗಳ ಕಮಾಂಡರ್ಗಳೂ ಸೇರಿದಂತೆ ಅನೇಕ ಉಗ್ರರು ಹತರಾದರು. ಗಡಿಯಾಚೆಯಿಂದ ನಡೆಯುವ ಶೆಲ್ ದಾಳಿಗೆ ಪ್ರತ್ಯುತ್ತರ ನೀಡಲು ಸೇನೆಗೆ ಮುಕ್ತ ಅವಕಾಶ ನೀಡಲಾಯಿತು.
ಹುರಿಯತ್ ಕಾನ್ಫರೆನ್ಸ್ನಂತಹ ಪ್ರತ್ಯೇಕತಾವಾದಿ ಸಂಘಟನೆಯ ಜೊತೆಗೆ ಯಾವುದೇ ಮಾತುಕತೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತು. ಜಮಾತ್-ಎ-ಇಸ್ಲಾಮಿನಂತಹ ಉಗ್ರ ಸಂಘಟನೆ ನಿಷೇಧಿಸಲ್ಪಟ್ಟಿತು. ನಿಷೇಧಿತ ಜಮ್ಮು- ಕಾಶ್ಮೀರ ಲಿಬರೇಶನ್ ಫ್ರಂಟ್ ಮೊದಲಾದ ಪ್ರತ್ಯೇಕತಾವಾದಿ ಸಂಘಟನೆಗಳಿಗೆ ಸೇರಿದ ನಾಯಕರುಗಳ ಮೇಲೆ ಉಗ್ರರಿಗೆ ಹಣ ನೀಡುವ ಆರೋಪದ ಮೇಲೆ ಕೇಸ್ಗಳು ದಾಖಲಾದವು. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯ್ತು. ಅವರನ್ನು ಬಂಧಿಸಿ ಜೈಲಿನಲ್ಲಿಡಲಾಯಿತು.
ತಮಾಷೆಯೆಂದರೆ ಇದುವರೆಗೆ ಸರ್ಕಾರ ಪ್ರತ್ಯೇಕತಾವಾದಿಗಳಿಗೂ ಸರ್ಕಾರಿ ಖರ್ಚಿನಲ್ಲಿ ರಕ್ಷಣೆ ಒದಗಿಸುತ್ತಿತ್ತು. ಮೋದಿ ಸರ್ಕಾರ ಈ ಸವಲತ್ತನ್ನು ಹಿಂಪಡೆದಿದೆ.
ಕೇಂದ್ರಸರ್ಕಾರದ ಅನುದಾನ ಅರ್ಹರಿಗೆ ತಲಪುವಂತೆ ನೋಡಿಕೊಳ್ಳಲಾಯಿತು. ಸರ್ಕಾರದ ಅನುದಾನ ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಬಳಕೆಯಾಯಿತು.
ಪಂಚಾಯತಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದ್ದು ಮೋದಿ ಸರ್ಕಾರದ ಇನ್ನೊಂದು ಸಾಧನೆ. ಎಲ್ಲೆಡೆ ಶೇ. 50ಕ್ಕೂ ಅಧಿಕ ಮತದಾನ ನಡೆಯಿತು. ರಾಜ್ಯದಲ್ಲಿ ಈಗ 4 ಸಾವಿರಕ್ಕೂ ಹೆಚ್ಚು ಸರಪಂಚರುಗಳು ತಮ್ಮ ತಮ್ಮ ಗ್ರಾಮದ ಅಭಿವೃದ್ಧಿ ಕೆಲಸದಲ್ಲಿ ಪಾಲ್ಗೊಂಡಿದ್ದಾರೆ. ಸರ್ಕಾರದ ಅನುದಾನ ನೇರವಾಗಿ ಪಂಚಾಯತಿಗಳ ಮೂಲಕ ಗ್ರಾಮಕ್ಕೆ ತಲಪುತ್ತಿದೆ.
ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಉರುಳಿದ ಮೇಲೆ ಜಾರಿಗೆ ಬಂದ ರಾಷ್ಟ್ರಪತಿ ಆಳ್ವಿಕೆಯಲ್ಲಿ ಆಡಳಿತ ಯಂತ್ರವನ್ನು ಚುರುಕುಗೊಳಿಸಿದ ಪರಿಣಾಮ ಕೇಂದ್ರಸರ್ಕಾರದ ಕಲ್ಯಾಣ ಯೋಜನೆಗಳು ಹೆಚ್ಚು ಜನರನ್ನು ತಲಪುವಂತಾಗಿದೆ. ಪರಿಣಾಮ ಹಿಂದಿನ ಸರ್ಕಾರಗಳಿಗಿಂತ ಈಗಿನ ಆಡಳಿತವೇ ಉತ್ತಮ ಎನ್ನುವ ವಿಚಾರ ಅಲ್ಲಿನ ಜನರಲ್ಲಿಯೂ ಮೂಡಿದೆ. ಹಿಂದೆಲ್ಲ ಪ್ರತಿಬಾರಿ ಕೇಂದ್ರದ ಗೃಹಮಂತ್ರಿ ಅಥವಾ ಪ್ರಧಾನಿ ಕಾಶ್ಮೀರಕ್ಕೆ ಭೇಟಿ ನೀಡಿದಾಗ ಪ್ರತ್ಯೇಕತಾವಾದಿಗಳು ಕರೆಕೊಡುವ ಹರತಾಳ, ಬಂದ್ಗಳು ಸಾಮಾನ್ಯವಾಗಿದ್ದವು. ಆದರೆ ಈಗ ಮೊದಲ ಬಾರಿಗೆ ಈ ಪದ್ಧತಿ ನಿಂತಿದೆ.
370ನೇ ವಿಧಿಯ ಮುಂದುವರಿಕೆಯನ್ನು ಪ್ರತಿಪಾದಿಸುವವರು ಮತ್ತು ಪ್ರತ್ಯೇಕತಾವಾದಿಗಳು 1947ರಲ್ಲಿ ಜಮ್ಮು-ಕಾಶ್ಮೀರಕ್ಕೆ ಪಶ್ಚಿಮ ಪಾಕಿಸ್ತಾನಕ್ಕೆ ವಲಸೆ ಬಂದ ಅಲ್ಪಸಂಖ್ಯಾಕ ಸಿಖ್ ಮತ್ತು ಹಿಂದುಗಳ ಬಗ್ಗೆ ಎಂದೂ ಸೊಲ್ಲನ್ನೆತ್ತುವುದಿಲ್ಲ. ಜಮ್ಮು-ಕಾಶ್ಮೀರ ರಾಜ್ಯದ ಸಂವಿಧಾನದ 6ನೇ ವಿಧಿಯನ್ವಯ ಈ ಅಲ್ಪಸಂಖ್ಯಾತರನ್ನು ರಾಜ್ಯದ ನಾಗರಿಕರೆಂದೇ ಪರಿಗಣಿಸಲಾಗುವುದಿಲ್ಲ, ಕಾರಣ ಅವರು ಅವಿಭಜಿತ ಜಮ್ಮು-ಕಾಶ್ಮೀರ ರಾಜ್ಯದ ಹೊರಗಿನಿಂದ ಬಂದವರು. ಇದಕ್ಕೆ ವ್ಯತಿರಿಕ್ತವಾಗಿ ಜಮ್ಮು-ಕಾಶ್ಮೀರ ಪುನರ್ವಸತಿ ಕಾಯಿದೆಯು (Jammu and Kashmir Resettlement Act 1982) ವಿಭಜನೆಯ ಸಂದರ್ಭದಲ್ಲಿ ಸ್ವ-ಇಚ್ಛೆಯಿಂದ ಪಾಕಿಸ್ತಾನಕ್ಕೆ ವಲಸೆ ಹೋದವರ ಅಧಿಕಾರಗಳನ್ನು ಖಾತ್ರಿಪಡಿಸಿತ್ತು. ಈ ಕಾಯಿದೆಯಂತೆ ಅಂತಹ ವಲಸೆ ಹೋದವರು ಪುನಃ ವಾಪಾಸು ಬರಬಹುದು, ತಮ್ಮ ಆಸ್ತಿಗಳನ್ನು ಮರಳಿ ಪಡೆಯಬಹುದು ಅಥವಾ ತಕ್ಕ ಪರಿಹಾರವನ್ನು ಪಡೆದುಕೊಳ್ಳಬಹುದು. ಇದೇ ಜಮ್ಮು-ಕಾಶ್ಮೀರ ಸರ್ಕಾರ 65 ವರ್ಷಗಳಿಂದ ಟೆಂಟುಗಳಲ್ಲಿ ವಾಸವಾಗಿರುವ, ನ್ಯಾಯಸಮ್ಮತವಾಗಿ ಭಾರತದ ನಾಗರಿಕರಾಗಿರುವ ನಿರಾಶ್ರಿತರನ್ನು ಪುನರ್ವಸತಿಗೊಳಿಸಲು ನಿರಾಕರಿಸುತ್ತ ಬಂದಿತ್ತು. ಪಶ್ಚಿಮ ಪಾಕಿಸ್ತಾನದಿಂದ ವಲಸೆ ಬಂದ ಸುಮಾರು ಎರಡೂವರೆ ಲಕ್ಷ ನಿರಾಶ್ರಿತರಿಗೆ ರಾಜ್ಯದ ನಾಗರಿಕತ್ವವನ್ನು ಕೊಡುವುದರಿಂದ ರಾಜ್ಯದ ಜನಸಂಖ್ಯಾ ಲಕ್ಷಣವು ಏರುಪೇರಾಗುತ್ತದೆ ಎನ್ನುವುದು ಒಂದು ಅಸಂಬದ್ಧ ತರ್ಕ. 2001ರ ಜನಗಣತಿಯಂತೆ ಜಮ್ಮು-ಕಾಶ್ಮೀರದ ಜನಸಂಖ್ಯೆ 10 ದಶಲಕ್ಷ, ಆದ್ದರಿಂದ 1947ಕ್ಕೂ ಮುಂಚೆ, ಅಂದರೆ ರಾಜ್ಯ ಸಂವಿಧಾನದ ಕರಡು ಪ್ರತಿ ತಯಾರಾಗಿ ಜಾರಿಗೆ ಬರುವ ಮೊದಲೇ ವಲಸೆ ಬಂದವರನ್ನು ಪರಿಗಣಿಸುವುದರಿಂದ ರಾಜ್ಯದ ಜನಸಂಖ್ಯಾ ಹರವಿನಲ್ಲಿ ಯಾವ ಏರುಪೇರೂ ಆಗುತ್ತಿರಲಿಲ್ಲ. ಇದೇ ತರಹದ ಅನ್ಯಾಯವನ್ನು ಪಂಜಾಬದಿಂದ ವಲಸೆ ಬಂದ ವಾಲ್ಮೀಕಿ ಸಮಾಜದವರ ಮೇಲೂ ನಡೆಸಲಾಗಿತ್ತು. ನಗರ ಮುನಿಸಿಪಾಲಿಟಿ ಮತ್ತು ಸ್ವಚ್ಛತಾ ಕೆಲಸಗಳಿಗಾಗಿ 1956ರಲ್ಲಿ ಪಂಜಾಬದಿಂದ ವಾಲ್ಮೀಕಿ ಸಮಾಜದ ಸುಮಾರು 150 ಕುಟುಂಬಗಳನ್ನು ಕರೆತರಲಾಯಿತು ಮತ್ತು ಅವರಿಗೆ ರಾಜ್ಯ ನಾಗರಿಕರ (Sಣಚಿಣe Subರಿeಛಿಣ) ಹಕ್ಕುಗಳನ್ನು ನೀಡುವ ಆಶ್ವಾಸನೆಯನ್ನು ನೀಡಲಾಗಿತ್ತು. ತದನಂತರ ಭಂಗಿ/ಜಾಡಮಾಲಿ ಉದ್ಯೋಗದಲ್ಲಿದ್ದವರಿಗೆ ಮಾತ್ರ ಸ್ಟೇಟ್ ಸಬ್ಜೆಕ್ಟ್ ಹಕ್ಕುಗಳನ್ನು ನೀಡಲಾಯಿತು. ರಾಜ್ಯದಲ್ಲಿ ಪ್ರಸ್ತುತ ವಾಲ್ಮೀಕಿ ಸಮಾಜದ ಸುಮಾರು 600 ಕುಟುಂಬಗಳಿವೆ. ಆದರೆ ಇದುವರೆಗೂ ಅವರ ವಸತಿ ಕೇರಿಗಳನ್ನು ಜಮ್ಮು-ಕಾಶ್ಮೀರ ಸರ್ಕಾರ ಸಕ್ರಮ ಮಾಡಿಲ್ಲ. ಕಾಶ್ಮೀರಕ್ಕೆ ಸಂಬಂಧಿಸಿದ ಚರ್ಚೆಗಳ ಅವ್ಯವಸ್ಥೆಯ ರಾಶಿಗಳಲ್ಲಿ ಅಲ್ಪಸಂಖ್ಯಾತ ಸಿಖ್ ಮತ್ತು ಹಿಂದೂಗಳ ಹಕ್ಕು ಅಧಿಕಾರಗಳ ವಂಚನೆಯ ವಿಷಯ ಸದಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
370ನೇ ವಿಧಿಯ ದುರುಪಯೋಗದಿಂದ ಬಂದಿದ್ದು ಆರ್ಟಿಕಲ್ 35ಎ
370ನೇ ವಿಧಿಯನ್ನು ಮುಂದುವರಿಸಬೇಕೆಂದು ಪ್ರತಿಪಾದಿಸುವವರು ‘ಸಂವಿಧಾನ (ಜಮ್ಮು ಕಾಶ್ಮೀರ ರಾಜ್ಯದಲ್ಲಿ ಜಾರಿ) ಆದೇಶ 1954’(Constitution [Application to State of J&K] Order, 1954)ರ ಅನ್ವಯ ಸಂವಿಧಾನದ ಮೂರನೇ ಭಾಗದಲ್ಲಿ ಸೇರಿಸಲಾದ ವಿಧಿ 35ಎಯನ್ನು ಸಾಮಾನ್ಯವಾಗಿ ಪ್ರಸ್ತಾವಿಸುತ್ತಾರೆ. ಗಮನಿಸಬೇಕಾದ ಅಂಶವೆಂದರೆ 35ಎ ವಿಧಿಯು ಪ್ರತ್ಯೇಕವಾಗಿ ಕೇವಲ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಜಾರಿಗೆ ತಂದ ಸಂವಿಧಾನದಲ್ಲಿ ಅಳವಡಿಸಲಾಗಿತ್ತು, ಇದೊಂದು ಸೇರ್ಪಡೆ; ತಿದ್ದುಪಡಿಯಲ್ಲ. ‘ಸಂವಿಧಾನ (ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಜಾರಿ) ಆದೇಶ 1954’ವನ್ನು ಹೊರತುಪಡಿಸಿ ಉಳಿದಂತೆ ಭಾರತದ ಸಂವಿಧಾನದಲ್ಲಿ 35ಎ ವಿಧಿಯು ಕಾಣಸಿಗುವುದಿಲ್ಲ.
ಆರ್ಟಿಕಲ್ 35ಎ ಏನು ಹೇಳುತ್ತದೆ ಎಂದರೆ –
ಅ. ಜಮ್ಮು-ಕಾಶ್ಮೀರ ರಾಜ್ಯದ ಖಾಯಂ ನಿವಾಸಿಗಳು (ಸ್ಟೇಟ್ ಸಬ್ಜೆಕ್ಟ್) ಎನ್ನುವ ವರ್ಗವನ್ನು ಗುರುತಿಸುತ್ತದೆ.
ಬ. ಅಂತಹ ಖಾಯಂ ನಿವಾಸಿಗಳಿಗೆ ಈ ಕೆಳಗೆ ಉಲ್ಲೇಖಿಸಲಾದ ವಿಷಯಗಳಲ್ಲಿ ವಿಶೇಷ ಹಕ್ಕು ಮತ್ತು ಸವ¯ತ್ತುಗಳನ್ನು ನೀಡುವುದರ ಜೊತೆಗೆ ಇತರರಿಗೆ ಈ ವಿಷಯಗಳಲ್ಲಿ ನಿರ್ಬಂಧಗಳನ್ನು ವಿಧಿಸುತ್ತದೆ. ಅವೆಂದರೆ – ರಾಜ್ಯ ಸರ್ಕಾರದ ನೌಕರಿ, ರಾಜ್ಯದಲ್ಲಿ ಸ್ಥಿರಾಸ್ತಿ ಹೊಂದುವುದು, ರಾಜ್ಯದಲ್ಲಿ ಖಾಯಂ ವಾಸ ಮಾಡುವುದು ಮತ್ತು ರಾಜ್ಯ ಸರ್ಕಾರ ನೀಡುವ ವಿದ್ಯಾರ್ಥಿ ವೇತನ ಮೊದಲಾದ ಸವಲತ್ತುಗಳನ್ನು ಪಡೆಯಲು ಅರ್ಹತೆ. ಅಂದರೆ ಸ್ಥೂಲವಾಗಿ ನೋಡುವುದಾದರೆ ರಾಜ್ಯ ಸರ್ಕಾರ ಗುರುತಿಸುವ ಸ್ಟೇಟ್ ಸಬ್ಜೆಕ್ಟ್ಗಳನ್ನು ಹೊರತುಪಡಿಸಿ ಉಳಿದವರಿಗೆ ಜಮ್ಮು-ಕಾಶ್ಮೀರದಲ್ಲಿ ನಿವಾಸಿಯಾಗುವ ಹಾಗೂ ಸರ್ಕಾರದ ಸೇವೆ ಸವಲತ್ತುಗಳನ್ನು ಬಳಸುವ ಅರ್ಹತೆ ಪಡೆಯುವ ಅವಕಾಶವೇ ಇಲ್ಲ!
ಸರಳವಾಗಿ ಕಾಣುವ ಈ ಆರ್ಟಿಕಲ್ನಿಂದಾದ ಪರಿಣಾಮ ದೂರಗಾಮಿ. ಮೊದಲನೆಯದಾಗಿ ಜಮ್ಮು-ಕಾಶ್ಮೀರದ ಖಾಯಂ ನಿವಾಸಿಗಳು ದೇಶದ ಬೇರೆಡೆ ವಲಸೆ ಹೋಗಿ ನೆಲೆಸಬಹುದು, ಯಾವುದೇ ಉದ್ಯೋಗ ವ್ಯವಹಾರ ನಡೆಸಬಹುದು. ಆದರೆ ದೇಶದ ಇತರ ಭಾಗದ ನಿವಾಸಿಗಳಿಗೆ ಜಮ್ಮು-ಕಾಶ್ಮೀರದಲ್ಲಿ ಆ ಅಧಿಕಾರ ಇಲ್ಲ. ಉದಾಹರಣೆಗೆ ಜಮ್ಮು-ಕಾಶ್ಮಿರಕ್ಕೆ ವರ್ಗವಾಗುವ ಕೇಂದ್ರಸರ್ಕಾರದ ನೌಕರರು, ಬ್ಯಾಂಕ್ ನೌಕರರು ಮೊದಲಾದವರು ಅಲ್ಲಿ ಜಮೀನು ಖರೀದಿಸಿ ವಾಸ ಮಾಡುವಂತಿಲ್ಲ. ಅವರ ಮಕ್ಕಳಿಗೆ ಅಲ್ಲಿ ಶೈಕ್ಷಣಿಕ ವಿದ್ಯಾರ್ಥಿ ವೇತನ ಸವಲತ್ತುಗಳು, ಸರ್ಕಾರಿ ನೌಕರಿ ದೊರೆಯವುದಿಲ್ಲ. ಇವರಿಗೆ ಅಲ್ಲಿ ಮತದಾನದ ಅಧಿಕಾರವೂ ಇಲ್ಲ.
ಕಾಶ್ಮೀರಿ ಪಂಡಿತರಲ್ಲಿ ಒಂದಿಷ್ಟು ಆಶಾಭಾವc
1980ರ ದಶಕದ ದ್ವಿತೀಯಾರ್ಧ ಕಾಶ್ಮೀರ ಕಣಿವೆಯಲ್ಲಿ ವಾಸವಾಗಿದ್ದ ಪಂಡಿತ ಸಮುದಾಯಕ್ಕೆ ಅತ್ಯಂತ ಕರಾಳ ದಿನಗಳು. ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್ ಮತ್ತು ಇಸ್ಲಾಮೀ ಉಗ್ರವಾದದ ಅಟ್ಟಹಾಸದಿಂದ ಸುಮಾರು 6 ಲಕ್ಷ ಜನಸಂಖ್ಯೆಯ ಕಾಶ್ಮೀರಿ ಪಂಡಿತ ಸಮುದಾಯ ತಮ್ಮ ಮನೆ, ಉದ್ಯೋಗ, ವ್ಯವಹಾರ, ಆಸ್ತಿಪಾಸ್ತಿಗಳನ್ನು, ಮಂದಿರ ಶ್ರದ್ಧಾಕೇಂದ್ರಗಳು ಇವೆಲ್ಲವನ್ನೂ ಬಿಟ್ಟು ಪ್ರಾಣವನ್ನು ಕೈಯಲ್ಲಿ ಹಿಡಿದು ಓಡಬೇಕಾಯಿತು. ಬೆದರಿಕೆ, ಕೊಲೆ, ಕಿಡ್ನಾಪ್, ನಮ್ಮ ಸಹೋದರಿಯರು – ಹೆಂಗಸರ ಮೇಲೆ ಅತ್ಯಾಚಾರ; ಒಂದೆರಡಲ್ಲ ಕಾಶ್ಮೀರಿ ಹಿಂದುಗಳು ತಾವು ಹುಟ್ಟಿ ಬೆಳೆದ ಭೂಮಿಯಲ್ಲಿ ಎದುರಿಸಿದ ದೌರ್ಜನ್ಯಗಳು. ನೆರೆಹೊರೆಯ ಜನರೇ ಇಸ್ಲಾಮೀ ಮೂಲಭೂತವಾದದಿಂದ ಪ್ರೇರಿತರಾಗಿ ಕಾಶ್ಮೀರಿ ಪಂಡಿತರ ಶತ್ರುಗಳಾಗಿದ್ದರು. ಪ್ರತಿ ಶುಕ್ರವಾರದ ನಮಾಜಿನ ನಂತರ ಪುಂಡರ ಗುಂಪು ದಂಗೆಯೆಬ್ಬಿಸುತ್ತಿತ್ತು. ಪಂಡಿತರು ಇಲ್ಲಿಂದ ಹೊರಡಿ ಎಂದು ಮಸೀದಿಗಳ ಮೈಕಿನಿಂದ ಫರ್ಮಾನು ಹೊರಡುತ್ತಿತ್ತು. ವ್ಯವಸ್ಥಿತವಾಗಿ ನಡೆದ ಈ ಅಮಾನವೀಯ ದೌರ್ಜನ್ಯದ ಪರಿಣಾಮ ಕಾಶ್ಮೀರಿ ಹಿಂದೂಗಳು ಅಲ್ಲಿಂದ ಅನಿವಾರ್ಯವಾಗಿ ವಲಸೆ ಹೋಗುವಂತಾಯಿತು. 1989-90ರ ಈ ಘಟನೆಯನ್ನು ಕಾಶ್ಮೀರಿ ಹಿಂದುಗಳ ‘ಎಕ್ಸೊಡಸ್’ ಎಂದು ಇತಿಹಾಸದಲ್ಲಿ ಗುರುತಿಸಲಾಗುತ್ತದೆ. ತದನಂತರ ಕಾಶ್ಮೀರಿ ಹಿಂದೂಗಳ ಮನೆ ಜಮೀನು ಆಸ್ತಿಪಾಸ್ತಿಗಳ ಮೇಲೆ ಪ್ರತ್ಯೇಕತಾವಾದಿಗಳು ಮತ್ತು ಇಸ್ಲಾಮೀ ತೀವ್ರವಾದಿಗಳು ಕಬ್ಜಾ ಸಾಧಿಸಿದರು.
ಹೀಗೆ ಬಲವಂತದಿಂದ ವಲಸೆ ಬಂದ ಪಂಡಿತ ಸಮುದಾಯ ಸರ್ಕಾರದ ಲೆಕ್ಕದಲ್ಲಿ 62 ಸಾವಿರ ಕುಟುಂಬಗಳು. ತಮ್ಮ ಪೂರ್ವಜರು ಬದುಕಿದ ಭೂಮಿಯನ್ನು ಬಿಟ್ಟಿರಲಾರದೆ ಕಟ್ಟುಬಿದ್ದುದಕ್ಕಾಗಿ ಉಗ್ರರ ಅಟ್ಟಹಾಸದಲ್ಲಿ ಪ್ರಾಣಕಳೆದುಕೊಂಡು ಅಲ್ಲಿಯೇ ಮಣ್ಣಾದವರೆಷ್ಟೋ ಮಂದಿ. ಇಂದಿಗೂ ಸದಾ ಭಯದ ನೆರಳಲ್ಲೇ ಕಾಶ್ಮೀರದಲ್ಲಿ ಬದುಕಿರುವ ಹಿಂದುಗಳ ಸಂಖ್ಯೆ ಅತ್ಯಲ್ಪ. ಅನಿವಾರ್ಯವಾಗಿ ವಲಸೆ ಬಂದವರಲ್ಲಿ ಕೆಲವು ಪರಿವಾರಗಳು ದೇಶದ ವಿವಿಧ ಭಾಗಗಳಲ್ಲಿ ಹೊಸದಾಗಿ ಬದುಕು ಕಟ್ಟಿಕೊಂಡರೆ ಹೆಚ್ಚಿನ ಕುಟುಂಬಗಳು ದೆಹಲಿ ಮತ್ತು ಜಮ್ಮುವಿನ ನಿರಾಶ್ರಿತರ ಶಿಬಿರಗಳಲ್ಲಿ ವಾಸವಾಗಿವೆ. ಇಲ್ಲಿ ನೆಲೆಯಾದವರ ಜೀವನದ ದಯನೀಯ ಸ್ಥಿತಿಯನ್ನು ಕಂಡು ಅರಿಯಬೇಕು. ಯಾವ ಮಾನವಹಕ್ಕು ಹೋರಾಟಗಾರರಿಗೂ ನಿರಾಶ್ರಿತರ ಶಿಬಿರಗಳಲ್ಲಿ ಎರಡು ತಲೆಮಾರಿನಿಂದ ಶೋಚನೀಯ ಬದುಕು ನಡೆಸುತ್ತಿರುವವರು ಕಣ್ಣಿಗೆ ಬಿದ್ದಿಲ್ಲ ಎನ್ನುವುದು ವಾಸ್ತವ.
ಬಲವಂತವಾಗಿ ಹೊರದಬ್ಬಲ್ಪಟ್ಟ ಕಾಶ್ಮೀರಿ ಪಂಡಿತ ಸಮುದಾಯದ ವ್ಯಕ್ತಿ ಇಂದು ತನ್ನ ಬೇರುಗಳನ್ನು ಹುಡುಕಿಕೊಂಡು ಹಿಂದೆ ತಾನೂ ತನ್ನ ಪೂರ್ವಜರೂ ವಾಸವಾಗಿದ್ದ ಸ್ಥಳಕ್ಕೆ
ನೋಡಿಕೊಂಡು ಬರಲು ಹೊರಟರೆ ಹೆಜ್ಜೆಹೆಜ್ಜೆಗೂ ಸವಾಲುಗಳನ್ನು, ಬೆದರಿಕೆಗಳನ್ನು ಎದುರಿಸಬೇಕಾಗಿದೆ. ಒಂದು ಕಾಲದಲ್ಲಿ ನೆರೆಹೊರೆಯಾಗಿದ್ದವರು ಇಂದು ಇವರನ್ನು ಶತ್ರುಗಳಂತೆ ಕಾಣುತ್ತಾರೆ. ಕಾರಣ ಇವರ ಜಮೀನು, ಆಸ್ತಿ ಮನೆಗಳನ್ನು ಅವರು ಕಬ್ಜಾ ಮಾಡಿಕೊಂಡಿದ್ದಾರೆ. ಇವರೇನಾದರೂ ವಾಪಸು ಬಂದರೆ ಹಿಂದಿರುಗಿ ಕೊಡಬೇಕಾಗಬಹುದೆಂಬ ಸ್ವಾರ್ಥ ಚಿಂತನೆ. ಕಾಶ್ಮೀರದ ಎಷ್ಟೋ ಮಂದಿರಗಳು ಮಸೀದಿಗಳಾಗಿವೆ. ಕಾಶ್ಮೀರದ ಶೈವ ಸಂಸ್ಕøತಿಯ ಮೇರುಶಿಖರ ಅಭಿನವಗುಪ್ತರು ತಮ್ಮ ಅಂತಿಮ ದಿನದಲ್ಲಿ ಪ್ರವೇಶಿಸಿ ಸಮಾಧಿಯಾದ ಭೈರವ ಗುಹೆ ರಾತ್ರೋರಾತ್ರಿ ಯಾವುದೋ ಮಸೀದಿಯಾಗಿಬಿಟ್ಟಿದೆ.
ಆರ್ಟಿಕಲ್ 370 ಮತ್ತು 35ಎ ಕೊನೆಗೊಳ್ಳುವುದರೊಂದಿಗೆ ಪ್ರತ್ಯೇಕತಾವಾದ, ಇಸ್ಲಾಮೀ ಭಯೋತ್ಪಾದನೆ ಮತ್ತು ಕಾಶ್ಮೀರಿ ಕಣಿವೆಯ ಸ್ವಾರ್ಥ ರಾಜಕಾರಣಿ ಕುಟುಂಬಗಳ ಕಪಿಮುಷ್ಟಿಯಿಂದ ಜಮ್ಮು-ಕಾಶ್ಮೀರ ಮುಕ್ತವಾಗುವ ಭರವಸೆ ಮೂಡಿದೆ. ತಮ್ಮ ಬೇರಿನಿಂದ ಕಡಿದುಕೊಂಡು ನಿರಾಶ್ರಿತರಾಗಿದ್ದ ಪಂಡಿತ ಸಮುದಾಯ ಮತ್ತೆ ತಮ್ಮ ಪೂರ್ವಜರ ಭೂಮಿಗೆ ಮರಳುವ ಕನಸು ಜಾಗೃತಗೊಂಡಿದೆ.
ಸೂಕ್ಷ್ಮವಾಗಿ ಅವಲೋಕಿಸಿದರೆ 1954ರ ಆದೇಶವು ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಜಾರಿಯಾಗುವಾಗ ಸಂವಿಧಾನದ 14ನೇ ವಿಧಿಯ ನಿಬಂಧನೆಗಳನ್ನು ರದ್ದುಮಾಡಿರುವುದಲ್ಲದೆ ಭಾರತದ ರಾಷ್ಟ್ರಪತಿಗೆ ನೀಡಿರುವ ಅಧಿಕಾರಗಳನ್ನೇ ಮೀರಿರುವುದು ಕಂಡುಬರುತ್ತದೆ. ರಾಜ್ಯ ಶಾಸನಸಭೆಯ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರ ಮತ್ತು ಸಮಾನತೆಯ ಅಧಿಕಾರಗಳಿಂದ ಭಾರತದ ಯಾವ ನಾಗರಿಕನನ್ನೂ ವಂಚಿಸಲಾಗುವುದಿಲ್ಲ. ‘ಕೇಶವಾನಂದಭಾರತಿ ವಿರುದ್ಧ ಕೇರಳ ಸರ್ಕಾರ’ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಆದೇಶಿಸಿರುವಂತೆ ಭಾರತ ಸಂವಿಧಾನದ ಪ್ತಸ್ತಾವನೆ(Pಡಿeಚಿmbಟe)ಯಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಭರವಸೆ ನೀಡಲಾಗಿರುವ ಸಮಾನತೆಯ ಮತ್ತು ಸಮಾನ ಅವಕಾಶಗಳ ಹಕ್ಕು ಸಂವಿಧಾನಿಕ ‘ಮೂಲಭೂತ ಸಂರಚನೆ’ಯ (¨ಃಚಿsiಛಿ Sಣಡಿuಛಿಣuಡಿe) ಭಾಗವಾಗಿದೆ; ಮತ್ತು ಸಂವಿಧಾನದ ಮೂಲಭೂತ ರಚನೆಗೆ ಭಂಗ ಬರುವಂತೆ ರಚಿಸಲ್ಪಟ್ಟ ಯಾವುದೇ ತಿದ್ದುಪಡಿ/ಕಾನೂನು ನಿರರ್ಥಕವಾಗುವುದು. ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನವು ಎಲ್ಲ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ಕೊಡುವುದರ ಜೊತೆಜೊತೆಗೆ ಒಂದು ರಾಜ್ಯದ ಶಾಶ್ವತ ನಿವಾಸಿಗಳಿಗೆ ಮಾತ್ರ ವಿಶೇಷಾಧಿಕಾರ ನೀಡುವುದು ಹೇಗೆ ಸಾಧ್ಯ? – ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಇದು ಭಾರತೀಯ ನಾಗರಿಕರಿಗೆ ಸಂವಿಧಾನದ 14ನೇ ವಿಧಿಯು ನೀಡುವ ಸಮಾನತೆಯ (ಇquಚಿಟiಣಥಿ ಃeಜಿoಡಿe ಐಚಿತಿ) ಅಧಿಕಾರವನ್ನು ಮೊಟಕುಗೊಳಿಸುತ್ತದೆ. ಹಾಗೆಯೇ 15ನೇ ವಿಧಿಯು ಮತ, ಜಾತಿ, ಲಿಂಗ, ಜನ್ಮಸ್ಥಾನ ಹಾಗೂ ಜನಾಂಗಗಳನ್ನು ಆಧರಿಸಿದ ತಾರತಮ್ಯವನ್ನು ನಿಷೇಧಿಸುತ್ತದೆ. ಈ ತರಹದ ವಿಶೇಷಾಧಿಕಾರದ ಆದೇಶವು ಕಳೆದ 65 ವರ್ಷಗಳಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಾದ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಳ್ಳದೆ ರಾಜ್ಯಾಡಳಿತವನ್ನು ಕೆಲವೇ ಜನರ ಸುಪರ್ದಿಗೆ ವಹಿಸುತ್ತಿದೆ. ಈ ವಿಶೇಷಾಧಿಕಾರವು ಪಂಡಿತರುಗಳ ಮಾರಣಹೋಮ, ನಿರಾಶ್ರಿತರ ಬವಣೆಗಳು, ವಿಭಜನೆಯ ಹುಚ್ಚಾಟಗಳು, ಸಮಾನತೆ ಮತ್ತು ವಯಸ್ಕರಿಗೆ ಮತದಾನದ ಹಕ್ಕುಗಳನ್ನು ಆಧರಿಸಿದ ಭಾರತದ ಜನತಂತ್ರದ ಆಶ್ವಾಸನೆ ಮತ್ತು ನೂರಾರು ವರ್ಷಗಳ ಇತಿಹಾಸ ಇವನ್ನೆಲ್ಲ ಮರೆಮಾಚುತ್ತದೆ.
ಕೊನೆಗೊಂಡ ಐತಿಹಾಸಿಕ ಪ್ರಮಾದ
ಆರ್ಟಿಕಲ್ 370(3)ರಲ್ಲಿ ಈ ಸಾರ್ವಜನಿಕ ನೋಟೀಸ್ ಮೂಲಕ ವಿಧಿಯನ್ನು ರದ್ದುಗೊಳಿಸುವ ಅಥವಾ ಕೆಲವು ಮಾರ್ಪಾಡುಗಳೊಂದಿಗೆ ಜಾರಿಗೊಳಿಸುವ ಅಧಿಕಾರವನ್ನು ಭಾರತದ ರಾಷ್ಟ್ರಪತಿ ಹೊಂದಿರುವುದಾಗಿ ಹೇಳಲಾಗಿದೆ. ಅದಕ್ಕಾಗಿ ಜಮ್ಮು-ಕಾಶ್ಮೀರ ರಾಜ್ಯ ಸಂವಿಧಾನ ಸಭೆಯ ಶಿಪಾರಸು ಅಗತ್ಯ. ಆದರೆ ರಾಜ್ಯದ ಸಂವಿಧಾನ ಸಭೆ 1956ರಲ್ಲಿ ವಿಸರ್ಜನೆಯಾಯಿತಾದರೂ ಈ ವಿಷಯದಲ್ಲಿ ರಾಷ್ಟ್ರಪತಿಯವರಿಗೆ ಯಾವುದೇ ಶಿಪಾರಸು ನೀಡಲಿಲ್ಲ. ಹಾಗೆ ನೋಡಿದರೆ ಜಮ್ಮು-ಕಾಶ್ಮೀರ ಸಂವಿಧಾನ ಸಭೆ ಅಸ್ತಿತ್ವದಲ್ಲೇ ಇರದ ಕಾರಣ ರಾಷ್ಟ್ರಪತಿಯವರ ಅಂಕಿತದೊಂದಿಗೆ 370 ವಿಧಿಯನ್ನು ಎಂದಿಗೋ ಕೊನೆಗೊಳಿಸಬಹುದಿತ್ತು. ಆದರೆ ಕಾಶ್ಮೀರದ ಒಂದು ವರ್ಗದ ರಾಜಕಾರಣಿಗಳ ಬೆದರಿಕೆಗೆ ಬಗ್ಗಿದ ಸರ್ಕಾರಗಳು ಈ ದಿಟ್ಟತನವನ್ನು ತೋರಿಸಿಲಿಲ್ಲ.
ಈ ವಿಷಯದಲ್ಲಿ ದೃಢನಿರ್ಧಾರ ತಾಳಿದ ನರೇಂದ್ರ ಮೋದಿ ಸರ್ಕಾರ 370ರಿಂದ ಕಾಶ್ಮೀರವನ್ನು ಮುಕ್ತಗೊಳಿಸುವ ಕಾರ್ಯಕ್ಕೆ ಕೈಹಾಕಿತು. ಎಲ್ಲೆಲ್ಲಿ ಜಮ್ಮು-ಕಾಶ್ಮೀರದ ಸಂವಿಧಾನ ಸಭೆ ಎಂದಿದೆಯೋ ಅಲ್ಲೆಲ್ಲ ‘ಶಾಸಕಾಂಗ ಸಭೆ’ ಎಂದು ಬದಲಾಯಿಸಲಾಯಿತು. 370ರ ಅಡಿಯಲ್ಲಿ ರಾಷ್ಟ್ರಪತಿಗಳ ಅಧಿಕಾರವನ್ನು ಬಳಸಿಕೊಂಡು ಇದುವರೆಗಿನ ಸಂವಿಧಾನ ತಿದ್ದುಪಡಿ ಮತ್ತು ಕಾನೂನುಗಳು ಜಮ್ಮು-ಕಾಶ್ಮೀರದಲ್ಲಿ ಜಾರಿಗೆ ಬರುವಂತೆ ಆದೇಶ ಹೊರಡಿಸಿ ಸಂಕಲ್ಪ ಮಂಡಿಸಲಾಯಿತು. ಹಾಗೆಯೇ ಆರ್ಟಿಕಲ್ 370(3)ರ ಅಡಿಯಲ್ಲಿ ರಾಷ್ಟ್ರಪತಿಗಳಿಗೆ ಇರುವ ಪರಮಾಧಿಕಾರವನ್ನು ಬಳಸಿಕೊಂಡು 370ನೇ ವಿಧಿಯು ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಅಧಿಕಾರವನ್ನು ರದ್ದುಗೊಳಿಸುವ ಸಂಕಲ್ಪವನ್ನು ಮಂಡಿಸಲಾಯಿತು. ಈಗ ತಿದ್ದುಪಡಿ ಮಾಡಿದಂತೆ ಜಮ್ಮು-ಕಾಶ್ಮೀರ ರಾಜ್ಯದ ಶಾಸಕಾಂಗ ಸಭೆಯ ಶಿಪಾರಸಿನ ಪ್ರಶ್ನೆ ಏಳಬಹುದು. ಈಗ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ ಮತ್ತು ಶಾಸನಸಭೆಯನ್ನು ವಿಸರ್ಜಿಸಲಾಗಿದೆ. ಇಂತಹ ಸನ್ನಿವೇಶದಲ್ಲಿ ಆರ್ಟಿಕಲ್ 357ರ ಪ್ರಕಾರ ರಾಜ್ಯ ಶಾಸನ ಸಭೆಯ ಅಧಿಕಾರಗಳು ಸಂಸತ್ತಿಗೆ ಸಿಗುತ್ತವೆ. ಹಾಗಾಗಿ ಕೇಂದ್ರ ಗೃಹ ಸಚಿವರು ಮಂಡಿಸಿದ ಸಂಕಲ್ಪಗಳು ಸಂಸತ್ತಿನ ಅನುಮೋದನೆ ಪಡೆದುಕೊಂಡು ರಾಷ್ಟ್ರಪತಿಗಳ ಅಂಕಿತದೊಂದಿಗೆ 370ನೇ ವಿಧಿಯ ವಿಶೇಷ ಅಧಿಕಾರದ ಅಂಶಗಳು ರದ್ದುಗೊಂಡಿವೆ. 370ನೇ ವಿಧಿಯ ವಿಶೇಷಾಧಿಕಾರ ಕೊನೆಯಾಗುವುದರೊಂದಿಗೆ 35ಎ ವಿಧಿಯೂ ಕೊನೆಗೊಂಡಿದೆ. ಇದರೊಂದಿಗೆ ಜಮ್ಮು-ಕಾಶ್ಮೀರ ವಿಷಯದಲ್ಲಿ ನಡೆದಿದ್ದ ಘೋರ ಪ್ರಮಾದವನ್ನು ಸರಿಪಡಿಸಲಾಗಿದೆ.
ಲಢಾಖ್ಗೆ ನ್ಯಾಯ
ವಿಸ್ತೀರ್ಣದ ದೃಷ್ಟಿಯಿಂದ ಅವಿಭಜಿತ ಜಮ್ಮು-ಕಾಶ್ಮೀರ ರಾಜ್ಯದ ಬಹುದೊಡ್ಡ ಪ್ರದೇಶ ಲಢಾಖ್. ಸುಮಾರು 59 ಸಾವಿರ ಚದರ ಕಿ.ಮೀ. ವ್ಯಾಪ್ತಿಯ ಲಢಾಖ್ ಪ್ರದೇಶದಲ್ಲಿ ಲೇಹ್ ಮತ್ತು ಕಾರ್ಗಿಲ್ ಎರಡು ಜಿಲ್ಲೆಗಳಿದ್ದು ಜನಸಂಖ್ಯೆ ಸುಮಾರು 2.9 ಲಕ್ಷ ಇದೆ. ಮೂಲತಃ ಲೇಹ್ನಲ್ಲಿ ಬೌದ್ಧ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಕಾರ್ಗಿಲ್ನಲ್ಲಿ ಷಿಯಾ ಪಂಥದ ಮುಸ್ಲಿಮರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ವಾಸ್ತವದಲ್ಲಿ ಭೌಗೋಳಿಕವಾಗಿ, ಸಾಂಸ್ಕøತಿಕವಾಗಿ, ಭಾಷೆ, ಆಚರಣೆ ಇನ್ನು ಯಾವ ದೃಷ್ಟಿಯಿಂದ ಕಂಡರೂ ಲಢಾಖ್ ಪ್ರದೇಶ ಕಾಶ್ಮೀರಕ್ಕಿಂತ ತೀರ ಭಿನ್ನವಾಗಿದೆ. ಹಾಗಾಗಿ ಲಢಾಖ್ ಪ್ರತ್ಯೇಕವಾಗಿರಬೇಕು ಜಮ್ಮು-ಕಾಶ್ಮೀರದ ಆಡಳಿತದಿಂದ ಬೇರೆ ಇರಬೇಕೆಂಬ ಕೂಗು ಅಲ್ಲಿ ಮೊದಲಿನಿಂದಲೂ ಕೇಳಿಬರುತ್ತಿತ್ತು.
ಹಾಗೆಯೇ ಕಾಶ್ಮೀರ ಕೇಂದ್ರಿತ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಲಢಾಖ್ ನಿರಂತರವಾಗಿ ಅನ್ಯಾಯವನ್ನು ಅನುಭವಿಸುತ್ತಲೇ ಬಂದಿದೆ. ಸರ್ಕಾರಿ ಉದ್ಯೋಗದಲ್ಲಿ ಲಢಾಖ್ಗೆ ಅವಕಾಶಗಳೇ ಕಡಮೆ. ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕಾಶ್ಮೀರ ಕೇಂದ್ರಿತ ಸರ್ಕಾರಗಳು ಲಢಾಖನ್ನು ಸಂಪೂರ್ಣ ಕಡೆಗಣಿಸಿದವು.
ಬೌದ್ಧಮತೀಯರ ಬಾಹುಳ್ಯವಿರುವ ಲಢಾಖಿನಲ್ಲಿ ವ್ಯವಸ್ಥಿತವಾಗಿ ಜನಸಂಖ್ಯಾ ಅಸಮತೋಲನವನ್ನು ಸೃಷ್ಟಿಸುವ ಕೆಲಸವೂ ನಡೆಯಿತು. ಇಂದು ಇಡೀ ಲಢಾಖನ್ನು ಪರಿಗಣಿಸಿದರೆ ಬೌದ್ಧರ ಜನಸಂಖ್ಯೆಗಿಂತ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಇದೀಗ ಲಢಾಖ್ ಕೇಂದ್ರಾಡಳಿತ ಪ್ರದೇಶ ಸ್ಥಾಪನೆಯೊಂದಿಗೆ ಅಲ್ಲಿನ ಜನರ ದಶಕಗಳ ಹೋರಾಟಕ್ಕೆ ಜಯ ದೊರಕಿದೆ. ಪ್ರದೇಶದ ಪ್ರಗತಿಯ ಆಶಾಭಾವನೆ ಮೂಡಿದೆ.
ಸರ್ಕಾರ ಕೈಗೊಂಡ ಇನ್ನೊಂದು ಮಹತ್ತ್ವದ ನಿರ್ಣಯವೆಂದರೆ ಜಮ್ಮು-ಕಾಶ್ಮೀರ ಮತ್ತು ಲಢಾಖ್ ಪ್ರದೇಶವನ್ನು ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳ ನಿರ್ಮಾಣ ಮಾಡಿರುವುದು. ಇದರಿಂದಾಗಿ ಲಢಾಖ್ ಪ್ರದೇಶದ ದಶಕಗಳ ಬೇಡಿಕೆಯನ್ನು ಪೂರೈಸಿದಂತಾಗಿದೆ ಮತ್ತು ಹಿಂದುಳಿದ ಲಢಾಖ್ ತನ್ನ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಸಾಧ್ಯವಾಗಿದೆ. ಜಮ್ಮು-ಕಾಶ್ಮೀರ ರಾಜ್ಯ ಶಾಸಕಾಂಗವಿರುವ ಕೇಂದ್ರಾಡಳಿತ ಪ್ರದೇಶವಾಗಲಿದ್ದು ಇಂದಿನ ಪರಿಸ್ಥಿತಿಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಇದು ಅತ್ಯಗತ್ಯವಾಗಿದೆ. ಪರಿಸ್ಥಿತಿ ಸಾಮಾನ್ಯಸ್ಥಿತಿಗೆ ಮರಳಿದ ಮೇಲೆ ಜಮ್ಮು-ಕಾಶ್ಮೀರ ಮತ್ತೆ ರಾಜ್ಯವಾಗುವುದೆಂದು ಸರ್ಕಾರ ಭರವಸೆ ನೀಡಿದೆ.
ಇದುವರೆಗಿನ ವರ್ಷಗಳ ಧೋರಣೆಯಿಂದ ಜಮ್ಮು-ಕಾಶ್ಮೀರದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎನ್ನುವುದು ವಾಸ್ತವ. ಹಾಗಾಗಿ ನೀತಿಯ ಬದಲಾವಣೆ ಅನಿವಾರ್ಯ. ಮೋದಿ ಸರ್ಕಾರ ಭಿನ್ನ ದಾರಿಯನ್ನು ತುಳಿಯುವ ಸಾಹಸವನ್ನು ತೋರಿಸಿದೆ. ಒಟ್ಟಾರೆಯಾಗಿ ಭಾರತದ ಮುಕುಟಮಣಿ ಜಮ್ಮು-ಕಾಶ್ಮೀರ ಮತ್ತು ಲಢಾಖ್ಗಳಲ್ಲಿ ಹೊಸತನದ ಗಾಳಿ ಬೀಸಲಿದೆ. ಮತ್ತೆ ಭಾರತದ ಕಿರೀಟ ಜಾಜ್ವಲ್ಯಮಾನವಾಗಿ ಪ್ರಕಾಶಿಸಲಿ.