`ವರಕವಿ’ ಬೇಂದ್ರೆ ಅವರಿಗೊಂದು ನುಡಿನಮನ
ಕರುನಾಡ ಗಾರುಡಿಗ | ವರಕವಿಯೆ, ವಾಙ್ಮಯದ
ಸಿರಿಯೆ, `ಸಾಧನಕೇರಿ’ಯರಸನಿಗೆ ನಮನ |
ಬರಿಯ ಕವಿ ನೀನಲ್ಲ | ಸಿರಿಸರಸ್ವತಿಯಣುಗ
ಗುರುತರದ ಕಾವ್ಯರ್ಷಿ, ಕವಿಕುಲದ ಸುಮನ ||೧||
ನಿನ್ನೆದೆಯ ಗುಡಿಯಲ್ಲಿ | ಕನ್ನಡದ ನುಡಿಯರಸಿ-
ಯನ್ನು ಪೂಜಿಸಿ ಪರಮ ಧನ್ಯತೆಯ ಪಡೆದೆ |
ನಿನ್ನ ಕಾವ್ಯದ ಚೆಲುವಿ | ಗೆನ್ನ ಮನ ಸೋತಿಹುದು
ಅಣ್ಣ, ನಿನ್ನನು ನೆನೆಯದಿಹ ಹೃದಯ ಬರಿದೆ ||೨||
ಕಾಡುಹಕ್ಕಿಯ ತೆರದ | ಆಡುನುಡಿಯೊಳು ಸತತ
ಹಾಡಿ ಕುಣಿಯುತ ಜನರ ನಾಡಿಯನು ಮಿಡಿದೆ |
ನಾಡಿನೆಲ್ಲೆಡೆಯಲ್ಲಿ | ಮಾಡಿ ಬಲು ಮೋಡಿಯನು
ಹಾಡುಹಕ್ಕಿಯೆ, ಧವಳಕೀರ್ತಿಯನು ಮೆರೆದೆ ||೩||
`ಇಳಿದು ಬಾ ತಾಯ್ ಎನುತ | ಉಲಿದು ನುಡಿ ಶಾರದೆಯ
ನಳಿನಭವನೆಡೆಯಿಂದ ಭುವಿಗಿಳಿಸಿ ತಂದೆ |
ಸಲಿಲಪದಕುಸುಮಗಳ | ನೊಲಿದು ಮಾಲೆಯ ಕಟ್ಟಿ
ಮೆಲುನುಡಿಯೊಳರ್ಚಿಸಿದೆ ನಿರುತ ಮುದದಿಂದೆ ||೪||
`ಶ್ರಾವಣ’ದ ಮಳೆಯಂತೆ | ಭಾವಗಳ ಮಳೆಗರೆದು
ಆವರಿಸಿ ಜನಮನಕೆ ತನಿಗಂಪನೆರೆದೆ |
ವಾಮನಾಕಾರದಿಂ | ವ್ಯೋಮದಂಚಿಗೆ ಬೆಳೆದು
ಪಾಮರರ ಪಂಡಿತರ ಹೃದಯಗಳ ಗೆಲಿದೆ ||೫||
`ನಾಕುತಂತಿ’ಯ ಮೀಟಿ | ನಾಕದಾ ಗಾನಸುಧೆ-
ಯೋಕುಳಿಯ ನೀ ಹರಿಸಿ ಮನ್ನಣೆಯ ಪಡೆದೆ |
ಸಾಕೆನದೆ ಕಾವ್ಯರಸ | ಪಾಕಗಳ ಮೊಗೆಮೊಗೆದು
ಏಕಲವ್ಯನ ತೆರದಿ ಗುರಿಯ ಸಾಧಿಸಿದೆ ||೬||
`ಕುರುಡು ಕಾಂಚಾಣ’ದಾ | ಸೆರೆಯೊಳಗೆ ನರಳುತಿಹ
ಮರುಳರನು ಮಾತಿನೊಳೆ ತಿವಿದು ಹಂಗಿಸಿದೆ |
`ಸರಸ’ವೆಂಬುದೆ ಜನನ | `ವಿರಸ’ ಮರಣವು ಎನುತ
ಸರಳ `ಸಮರಸ’ ಜೀವನದ ಮಂತ್ರವೊರೆದೆ ||೭||
||ಕರುನಾಡ…..||