ನಾವಿರುವ ಪರಿಸ್ಥಿತಿಯನ್ನು ನೆನೆಯುವುದಕ್ಕೇ ಭಯವಾಗುತ್ತಿತ್ತು. ನಮ್ಮ ಮನೆಯ ಹೆಣ್ಣು ನಮ್ಮ ಮನೆಯವರಿಂದಲೇ ಅಪಹರಿಸಲ್ಪಟ್ಟು ನಮ್ಮೂರಿನಲ್ಲೇ ಇದ್ದಾಳೆ. ಎಲ್ಲಿದ್ದಾಳೆಂದೂ ಗೊತ್ತಿದೆ. ಆದರೆ ಬಿಡಿಸಿ ತರುವುದು ಮಾತ್ರ ನಮ್ಮಿಂದಾಗದು. ಇದಕ್ಕಿಂತ ಕೆಟ್ಟ ಸನ್ನಿವೇಶ ಬೇರೊಂದುಂಟೆ?
ನನ್ನ ಹೆಸರು ರಥಕಾರ ಎಂದು. ಹಾಗೆ ನೋಡಿದರೆ ಅದು ನನ್ನ ಅಪ್ಪ ಇಟ್ಟ ಹೆಸರಲ್ಲ. ಅಪ್ಪನಿಟ್ಟ ಹೆಸರೇನೋ ನನಗೆ ನೆನಪಿಲ್ಲ. ಊರಮಂದಿಗೂ ಅದು ನೆನಪಿದ್ದಂತೆ ಕಾಣೆ. ನನ್ನ ಕೆಲಸ ರಥಕಟ್ಟುವುದು, ಮುರಿದುಹೋದ ರಥದ ಭಾಗಗಳನ್ನು ಕಿತ್ತು ಹೊಸದನ್ನು ಜೋಡಿಸುವುದು ಇತ್ಯಾದಿ. ಅದರಲ್ಲಿ ನಾನು ನಿಪುಣನಿದ್ದೆ. ಅಲ್ಲದೆ ಯುದ್ಧರಥಗಳು ಬೇರೆ. ಸಾಮಾನ್ಯ ಪ್ರಯಾಣದ ರಥಗಳು ಬೇರೆ. ಅಂತಃಪುರದ ಸುಕುಮಾರಿಯರಿಗಾಗಿರುವ ರಥಗಳೇ ಬೇರೆ. ಇವುಗಳ ರಚನೆಯಲ್ಲಿ, ಆಸನಗಳ ಅನುಕೂಲದಲ್ಲಿ ವ್ಯತ್ಯಾಸಗಳಿದ್ದವು. ಇದು ರಥದಲ್ಲಿ ಪ್ರಯಾಣಿಸುವವರ ಅನುಭವಕ್ಕೆ ಬರುವಂತಹವು. ವಿವರಣೆಗೆ ನಿಲುಕುವವಲ್ಲ. ಎಲ್ಲ ರಥಕಾರರಿಗೆ ಈ ವ್ಯತ್ಯಾಸಗಳು ತಿಳಿಯುತ್ತಿರಲಿಲ್ಲ. ನಾನೀ ಗುಟ್ಟುಗಳನ್ನು ಅರ್ಥಮಾಡಿಕೊಂಡಿದ್ದೆ. ಹಾಗಾಗಿ ನನಗೆ ಸಾಕಷ್ಟು ಪ್ರಸಿದ್ಧಿಯೂ ಇತ್ತು. ಬಹುಶಃ ಅದೇ ಕಾರಣಕ್ಕೆ ನನ್ನನ್ನು ರಥಕಾರನೆಂದು ಕರೆಯತೊಡಗಿರಬೇಕು ಜನ. ನನಗೂ ಅದೇ ರೂಢಿಯಾಗಿಬಿಟ್ಟಿತ್ತು. ನನ್ನ ಕರ್ಮಶಾಲೆಯಲ್ಲಿ ನಾನು ಹಾಗೂ ನನ್ನ ತಮ್ಮ ಚಿತ್ರಕ ಇಬ್ಬರೂ ದುಡಿಯುತ್ತಿದ್ದೆವು. ಉತ್ತಮ ಕೆಲಸಗಾರರೆಂಬ ಹೆಸರಿದ್ದುದರಿಂದ ಬೇಕಾದಷ್ಟು ಕೆಲಸಗಳು ಬರುತ್ತಿದ್ದವು. ಅರಮನೆಯ ರಥಗಳೂ ನಮ್ಮಲ್ಲಿಗೆ ಬರುತ್ತಿದ್ದವು. ಅದರಲ್ಲೂ ಯುದ್ಧಕಾಲದಲ್ಲಿ ಬಿಡುವಿಲ್ಲದೆ ದುಡಿಯಬೇಕಾಗುತ್ತಿತ್ತು. ಸಾಕಷ್ಟು ವರಮಾನವೂ ಇತ್ತು. ಒಮ್ಮೊಮ್ಮೆ ಚಿತ್ರಕ ನನ್ನಲ್ಲಿ ಹೇಳುವುದಿತ್ತು, “ಅಣ್ಣಾ, ನಾವು ಹೀಗೆಯೇ ದುಡಿದರೆ ನಮ್ಮದೇ ಸೌಧ, ಸೇವಕರು, ಸಂಪತ್ತು ಎಲ್ಲ ಅನುಕೂಲಗಳನ್ನು ಹೊಂದಬಹುದು.” ನಾನು ಆಗೆಲ್ಲ ಸುಮ್ಮನೆ ತಲೆಯಾಡಿಸುತ್ತಿದ್ದೆ. ಕನಸು ಕಾಣುವುದು ತಪ್ಪಲ್ಲವಷ್ಟೆ? ಹೀಗೆಯೆ ಜೀವನ ಸಾಗುತ್ತಿತ್ತು. ಊರಿನಲ್ಲಿ ಗೌರವ, ಬದುಕಿನಲ್ಲಿ ನೆಮ್ಮದಿ ಎಲ್ಲವೂ ಇತ್ತು. ಮುಂದಕ್ಕೂ ಈ ನೆಮ್ಮದಿ ಇರುವುದೆಂದು ನಾನು ತಿಳಿದಿದ್ದೆ, ಮೊನ್ನೆಯವರೆಗೆ.
ದಿನಗಳುರುಳುತ್ತಿದ್ದಂತೆ ಸಂಸಾರ ಬೆಳೆಯಿತು. ನನಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು. ಚನ್ನ ಮತ್ತು ಗುಹ. ಚಿತ್ರಕನಿಗೆ ಮೂವರು ಗಂಡು ಮಕ್ಕಳು, ಒಬ್ಬಳು ಮಗಳು. ಮಕ್ಕಳು ಬೆಳೆದರು. ಮದುವೆಯೂ ಆಯಿತು. ನಾವೆಲ್ಲ ಒಟ್ಟಾಗಿ ದುಡಿಯುತ್ತಿದ್ದೆವು. ಬೇಕಾದಷ್ಟು ಕೆಲಸ. ನನ್ನ ಮಕ್ಕಳು ನನ್ನ ಹಾಗೆ ಅಲ್ಪತೃಪ್ತರು. ಚಿತ್ರಕನ ಪುತ್ರರು ಮಹತ್ತ್ವಾಕಾಂಕ್ಷಿಗಳು. ಒಂದು ದಿನ ಚಿತ್ರಕ ಹೇಳಿದ, “ಅಣ್ಣಾ, ನನ್ನ ದೊಡ್ಡ ಮಗ ಕ್ರತು ಹೇಳುತ್ತಾನೆ, ಕೆಲಸ ಹೆಚ್ಚು ಬರುತ್ತಿದೆ. ಕೆಲಸಗಾರರಿಗೆ ಸ್ಥಳಾವಕಾಶ ಸಾಲದು. ರಥಗಳನ್ನು ನಿಲ್ಲಿಸುವುದೂ ಸಮಸ್ಯೆಯೇ. ಊರ ಹೊರಗೆ ಒಂದು ದೊಡ್ಡ ಮನೆ ವಿಕ್ರಯಕ್ಕಿದೆಯಂತೆ. ಅದನ್ನು ಕೊಂಡುಕೊಳ್ಳೋಣ. ಇಲ್ಲಿ ದೊಡ್ಡಪ್ಪನೂ, ಸೋದರರೂ ದುಡಿಯಲಿ. ನಾವು ಅಲ್ಲಿಗೆ ಹೋಗೋಣ ಅನ್ನುತ್ತಾನೆ.” ತಾವು ಪ್ರತ್ಯೇಕಗೊಳ್ಳುತ್ತೇವೆ ಎಂದು ಸೂಚಿಸುತ್ತಿದ್ದ ಚಿತ್ರಕ. ನಾನು ಮೌನವಾಗಿದ್ದೆ. ಅವನ ಮಾತಿನ ಪರಿಣಾಮಗಳನ್ನು ಚಿಂತಿಸುತ್ತಿತ್ತು ನನ್ನ ಮನಸ್ಸು. ಅವರು ಬೇರೆ ಹೋಗುವುದೆಂದರೆ…. ಬಹುಶಃ ಪಿತ್ರಾರ್ಜಿತದಲ್ಲಿ ಪಾಲು ಕೇಳುವುದಕ್ಕೆ ಇದು ಸನ್ನಾಹವಿರಬೇಕು ಎಂದು ಅರ್ಥವಾಯಿತು. ಕೊಡಬಹುದಿತ್ತು. ಆದರೆ ಎಲ್ಲಿಂದ? ಸಂಪಾದನೆ ಇತ್ತು, ನಿಜ. ಆದರೆ ಮನೆಯ ಹಿರಿಯನಾಗಿ ಎಲ್ಲರ ಹೊಟ್ಟೆ, ಬಟ್ಟೆ, ಮದುವೆ ಇತ್ಯಾದಿ? ಎಲ್ಲ ವೆಚ್ಚವನ್ನೂ ನಾನೇ ವಹಿಸಿಕೊಳ್ಳುತ್ತಿದ್ದೆ. ಇದರಿಂದಾಗಿ ನನ್ನಲ್ಲಿ ಉಳಿಸಿಟ್ಟದ್ದೇನೂ ಇರಲಿಲ್ಲ. ಚಿತ್ರಕ ಅಷ್ಟಿಟ್ಟು ಗಂಟು ಮಾಡಿದ್ದಿರಬಹುದು. ನನ್ನಲ್ಲಿ ಏನೂ ಇರಲಿಲ್ಲ. ಇದ್ದುದು ಒಂದು ಮನೆ, ಪುಟ್ಟ ಹೊಲ ಮಾತ್ರ. ಅದನ್ನು ವಿಭಾಗಿಸಿದರೆ ಒಬ್ಬೊಬ್ಬನಿಗೆ ಎಷ್ಟು ಬಂದೀತು?
ನನ್ನ ಚಿಂತೆ ಅರ್ಥವಾದವನಂತೆ ಚಿತ್ರಕ ಹೇಳಿದ, “ಅಣ್ಣಾ, ನನ್ನ ಭಾಗ ಬೇಕೆಂದು ನಾನು ಕೇಳುತ್ತಿಲ್ಲ. ನಿನಗೆ ಅನುಕೂಲವಾದಾಗ ಕೊಡು. ಅವಸರವೇನಿಲ್ಲ. ನಾವು ಬೇರೆ ಹೋಗುವುದಕ್ಕೆ ನಿನ್ನ ಅನುಮತಿ ಮಾತ್ರ ಬೇಕು.” ಇನ್ನು ನಾನು ಮರಳಿ ಹೇಳುವುದಕ್ಕೇನುಳಿಯಿತು? ಬೇರೆಯಾಗುವ ಯೋಚನೆ ಬಂದ ಬಳಿಕ ತಡೆಯುವುದು ಸರಿಯಲ್ಲವೆನಿಸಿತು. “ಸರಿಯಪ್ಪ” ಎಂದು ನಿಟ್ಟುಸಿರು ಬಿಟ್ಟೆ. ಆಮೇಲೆ ಕೆಲವು ದಿನಗಳಲ್ಲಿ ಅವರು ಪ್ರತ್ಯೇಕವಾಗಿ ವಾಸಿಸತೊಡಗಿದರು. ಮೊದಲೇ ಆಢ್ಯರೊಂದಿಗೆ ವ್ಯವಹರಿಸುವ ಸೂಕ್ಷ್ಮ ಚಿತ್ರಕನ ಮಕ್ಕಳಿಗೆ ಚೆನ್ನಾಗಿ ಸಿದ್ಧಿಸಿತ್ತು. ಅವರೀಗ ಅರಮನೆಯ ರಾಜಪುತ್ರರೊಂದಿಗೆ ಒಡನಾಡುವಷ್ಟು ಬೆಳೆದುಬಿಟ್ಟಿದ್ದರು. ರಾಜರಥಗಳನ್ನು ಕಟ್ಟುವ ಕೆಲಸಗಳನ್ನೆಲ್ಲ ಅವರೇ ವಹಿಸಿಕೊಳ್ಳತೊಡಗಿದರು. ದೊಡ್ಡ ಕರ್ಮಶಾಲೆ, ಹಲವುಮಂದಿ ಸಹಾಯಕರು, ಕೈತುಂಬ ಸಂಪಾದನೆ. ಶ್ರೀಮಂತನಾದ ಚಿತ್ರಕ. ನಾವು ನಮ್ಮ ಬದುಕಿಗೆ ಅಂಟಿಕೊಂಡೆವು. ಈ ನಡುವೆ, `ವನವಾಸ, ಅಜ್ಞಾತವಾಸ ಮುಗಿಸಿಬಂದ ಪಾಂಡುಪುತ್ರರಿಗೂ ಕೌರವರಿಗೂ ಯುದ್ಧವಾಗುವುದಂತೆ’ ಎಂಬ ಸುದ್ದಿ ಹಬ್ಬತೊಡಗಿತು. ಸಾಮಾನ್ಯವಾಗಿ ಯುದ್ಧವಾಗುವುದೆಂದರೆ ನಮಗೆ ಉತ್ಸಾಹವೇ; ಇನ್ನು ನಮಗೆ ಹೆಚ್ಚು ದುಡಿಮೆ, ಸಂಪಾದನೆ ಎಂದು ಹಿಗ್ಗು. ಆದರೆ ಈ ಯುದ್ಧದ ವರ್ತಮಾನದಿಂದ ನನಗೆ ಹಿಗ್ಗು ಉಂಟಾಗಲಿಲ್ಲ. ಪಾಂಡವರು ನಮ್ಮ ಶತ್ರುಗಳೆಂದು ಒಪ್ಪಲು ನನ್ನ ಮನಸ್ಸು ಸಿದ್ಧವಿರಲಿಲ್ಲ. ಇಲ್ಲಿಯವರೆಗೆ ನಾವು ಸಿದ್ಧಪಡಿಸಿದ ರಥಗಳು ನಮ್ಮ ದೊರೆಗಳಿಗೆ ಗೆಲವು ತರಲಿ ಎಂದು ಹಂಬಲಿಸುತ್ತಿದ್ದ ನನಗೆ ಈ ಸಲ ಖೇದವೇ ಉಂಟಾಯಿತು. ನಾವು ಸಿದ್ಧಪಡಿಸುವ ರಥಗಳು ಪಾಂಡವರ ವಿರುದ್ಧ ನಡೆಯುವ ಯುದ್ಧಕ್ಕೆ ಅನ್ನುವುದು ಈ ಖೇದಕ್ಕೆ ಕಾರಣ. ಧಾರ್ಮಿಕರೂ, ಸಾತ್ತ್ವಿಕರೂ ಆದ ಪಾಂಡವರ ಬಗೆಗೆ ನನ್ನಲ್ಲಿ ಆದರವಿತ್ತು. ನೋವನ್ನೇ ನಿತ್ಯವೂ ಉಂಡುಬೆಳೆದ ಅವರಿಗೆ ಜಯ ದೊರೆಯಬೇಕು ಎಂದೇ ನಾನು ಬಯಸುತ್ತಿದ್ದೆ. ಒಂದು ದಿನ ಚನ್ನ, ನನ್ನ ಹಿರಿಯಮಗ ನನ್ನಲ್ಲಿ ಹೇಳಿದ, “ಅಪ್ಪಾ, ಈ ಬಾರಿ ಯದ್ಧರಥದ ಕೆಲಸಗಳು ನಮಗೆ ಬರುವಂತೆ ಕಾಣೆ. ಚಿಕ್ಕಪ್ಪನೂ ಸೋದರರೂ ಎಲ್ಲ ರಥಗಳ ನಿರ್ಮಾಣದ ಹೊರೆಯನ್ನ ತಾವೇ ವಹಿಸಿಕೊಳ್ಳುವರಂತೆ. ಅದಕ್ಕೆಂದೇ ಅರಮನೆಯಿಂದ ವಿಶೇಷ ಆಜ್ಞೆ ಹೊರಟಿದೆಯಂತೆ. ಅವರಿಗೆ ಅರಮನೆಯ ಸಂಪರ್ಕದಿಂದ ಇದು ಸಾಧ್ಯವಾಗಿರಬೇಕು” ಎಂದ. ಒಂದು ಕ್ಷಣ ಅಚ್ಚರಿಯಾದರೂ ಸಾವರಿಸಿಕೊಂಡು ಹೇಳಿದೆ, “ಇರಲಿಬಿಡು ಚನ್ನ. ಚಿತ್ರಕನೇನು ನಮಗೆ ಹೊರಗಿನವನೆ? ಅಥವಾ ನಾವು ಅವರೊಂದಿಗೆ ಸ್ಪರ್ಧಿಸಹೊರಟಿದ್ದೇವೆಯೆ? ಅವರು ತುಂಬ ಸಂಪಾದಿಸಲಿ. ನಮ್ಮ ಪಾಲಿನ ಅನ್ನ ಭಗವಂತ ನಮಗೆ ಕೊಟ್ಟೇ ಕೊಡುತ್ತಾನೆ.” ಚನ್ನ ಮರುಮಾತಾಡಲಿಲ್ಲ. ಎಷ್ಟಾದರೂ ನನ್ನ ಮಗ ತಾನೇ? ಆದರೆ ಅದು ಅಷ್ಟಕ್ಕೆ ಮುಗಿಯಲಿಲ್ಲ. ಕೆಲವು ದಿನಗಳ ಬಳಿಕ ಚಿತ್ರಕ ನನ್ನ ಮನೆಗೆ ಬಂದ. “ಅಣ್ಣಾ, ನಮಗೆ ಅರಮನೆಯಿಂದ ಯುದ್ಧರಥಗಳ ನಿರ್ಮಾಣದ ಹೊಣೆ ಬಂದಿದೆ. ಅದಕ್ಕಾಗಿ ದೊಡ್ಡ ಕರ್ಮಶಾಲೆ ನಿರ್ಮಿಸಬೇಕಿದೆ. ಅದೇ ನಮಗೊಂದು ಸಮಸ್ಯೆಯಾಗಿಬಿಟ್ಟಿದೆ. ವೆಚ್ಚಕ್ಕಾಗಿ ಹೊನ್ನಿನ ಅಗತ್ಯ ಬಹಳವಾಗಿದೆ. ನೀನು ಪಿತ್ರಾರ್ಜಿತದಲ್ಲಿ ನಮ್ಮ ಭಾಗ ಕೊಟ್ಟರೆ ಅನುಕೂಲವಾಗುತ್ತಿತ್ತು” ಎಂದ. ನಾನು ದಿಗ್ಭ್ರಾಂತನಾದೆ. ನಾನು ನಿರೀಕ್ಷಿಸದೇ ಇದ್ದ ಬೆಳವಣಿಗೆ ಇದು. “ಚಿತ್ರಕ, ನನ್ನ ಸ್ಥಿತಿ ತಿಳಿಯದವನಂತೆ ಆಡುತ್ತಿದ್ದೀಯಲ್ಲ. ನಾನು ಎಲ್ಲಿಂದ ಕೊಡಲಿ ಹೇಳು. ಮೊದಲೇ ದುಡಿಮೆಯೂ ತಗ್ಗಿದೆ. ಯುದ್ಧರಥಗಳ ಕೆಲಸವೂ ನಮಗೆ ಬರುವುದು ಕಾಣೆ. ಸಂಕಷ್ಟದಲ್ಲಿರುವ ನನ್ನಲ್ಲಿ ಇದ್ದಕ್ಕಿದ್ದಂತೆ ಭಾಗ ಕೇಳಿದರೆ ಹೇಗಪ್ಪ? ತಮ್ಮನಾಗಿ ನನ್ನ ಪರಿಸ್ಥಿತಿ ಅರ್ಥಮಾಡಿಕೋ.”
ನನ್ನ ಕಳವಳವನ್ನು ಲಕ್ಷಿಸದವನಂತೆ ಅವನೆಂದ, “ಅಣ್ಣ-ತಮ್ಮ ಎಂಬ ಬಾಂಧವ್ಯದ ಮಾತು ಬೇರೆ. ಇದು ನಮ್ಮ ಅಗತ್ಯದ ಹೊತ್ತು. ಕಾಲಾವಧಿಯೊಳಗೆ ರಥಗಳನ್ನು ಸಿದ್ಧಪಡಿಸಿಕೊಡುವ ಹೊಣೆ ನಮ್ಮದು. ನಿನ್ನ ಗೋಳನ್ನು ಕೇಳಿ ಕನಿಕರ ತೋರಿಸಹೊರಟರೆ ನನ್ನ ತಲೆ ಹೋದೀತು. ನನಗೆ ಸಲ್ಲತಕ್ಕುದನ್ನು ಕೊಡುವ ಹೊಣೆ ನಿನ್ನದು. ಈಗ ಕೊಡುವುದಿಲ್ಲ ಎಂಬುದು ನಿನ್ನ ಮಾತೆ?” ನಿರ್ವಿಕಾರದಿಂದ ಅವನಾಡಿದ ನುಡಿಗಳನ್ನು ಕೇಳಿ ಚಕಿತನಾದೆ ನಾನು. ಪಾಲು ಕೊಡಬೇಕೆಂದು ತಂದೆಯವರು ಕಟ್ಟು ವಿಧಿಸಿರಲಿಲ್ಲ. ಹಿರಿಯ ಪುತ್ರನಾಗಿ ಪೂರ್ಣಾಧಿಕಾರ ನನ್ನದು. ಆದರೂ…? ಚಿತ್ರಕ ನನ್ನ ತಮ್ಮ, ಪಿತ್ರಾರ್ಜಿತದಲ್ಲಿ ಒಂದು ಪಾಲು ಕೊಡುವುದು ನನ್ನ ಧರ್ಮ. ಹಾಗೆಂದು ಎಲ್ಲಿಂದ? ಒಂದಿಷ್ಟು ಅವಧಿಯಾದರೂ ದೊರೆತರೆ…. ಅದನ್ನೇ ಆಡಿದೆ.
“ಹುಂ, ನಿನ್ನ ಮಾತು ಹೀಗೆ ಬಂದೀತೆಂದು ಗೊತ್ತಿತ್ತು ನನಗೆ. ಅವಧಿಗಿವಧಿಯ ಪ್ರಶ್ನೆಯಿಲ್ಲ. ಈಗ ಇಲ್ಲದ್ದು ಸಿಕ್ಕಿದರೆಷ್ಟು ಬಿಟ್ಟರೆಷ್ಟು? ನನ್ನ ದೊಡ್ಡಮಗ ಕ್ರತು ಹೇಳಿದ್ದಾನೆ, ಕೊಡದಿದ್ದರೆ ಪಡೆಯುವುದು ಹೇಗೆ ಎಂಬುದು ನಮಗೆ ತಿಳಿದಿದೆ.”
ಮೂಕನಂತೆ ನಿಂತುಬಿಟ್ಟೆ. ಎಷ್ಟು ಬದಲಾಗಿದ್ದಾನೆ ಚಿತ್ರಕ! ಅವನು ದಾಪುಗಾಲಿಡುತ್ತ ಹೋದುದೂ ನನಗೆ ಅರಿವಾಗಲಿಲ್ಲ.
* * *
ಇದೆಲ್ಲ ಕಳೆದು ಒಂದು ಸಪ್ತಾಹ ಆಗಿರಬಹುದು. ನಡುವೆ ಎರಡು ಬಾರಿ ಚಿತ್ರಕನ ಮಕ್ಕಳಿಬ್ಬರು ಬಂದುಹೋದರು. ಅದೇ ಬೇಡಿಕೆ ಅವರದು. ನಾನು ನನ್ನ ಅಸಹಾಯಕತೆಯನ್ನು ಪುನರುಚ್ಚರಿಸಿದೆ. ಹೀಗಿರುವಾಗ ಒಂದು ದಿನ ಮುಂಜಾನೆ ಮನೆ ಸಮೀಪದ ತಟಾಕದಿಂದ ನೀರು ತರಲೆಂದು ಹೋದ ನನ್ನ ಕಿರಿಯ ಸೊಸೆ ಮನೆಗೆ ಮರಳಲಿಲ್ಲ. ನಾವೆಲ್ಲ ಕಂಗೆಟ್ಟು ಹುಡುಕಾಟಕ್ಕೆ ತೊಡಗಿದೆವು. ಸಂಜೆಯಾದರೂ ಅವಳ ಕುರಿತು ಯಾವ ಸುಳಿವೂ ದೊರೆಯಲಿಲ್ಲ. ದೇಹಾಂತ ಮಾಡಿಕೊಂಡಿರಬಹುದೇ ಎಂಬ ಅನುಮಾನವೂ ಸುಳಿಯಿತು. ಆದರೆ ಹಾಗೆ ಮಾಡಿಕೊಳ್ಳಬೇಕಾದ ಸಂದರ್ಭವೇ ಇರಲಿಲ್ಲ: ಮನೆಮಂದಿಯೆಲ್ಲ ಪರಸ್ಪರ ಆಪ್ತತೆಯಿಂದ ಇದ್ದೆವು…. ಗುಹ ಅವಳನ್ನು ತುಂಬ ಪ್ರೀತಿಸುತ್ತಿದ್ದ. ಒಂದು ಕೈಗೂಸು ಅವಳ ಮಡಿಲಿಗೇರಿತ್ತು. ಇಂತಹವಳು ಸಾವನ್ನೇಕೆ ಬಯಸುತ್ತಾಳೆ? ಆದರೂ ಸಂಶಯನಿವೃತ್ತಿಗಾಗಿ ಕೆರೆ, ನದಿ, ಬಾವಿಗಳನ್ನೆಲ್ಲ ಶೋಧಿಸಿ ನೋಡಿದೆವು. ಇಲ್ಲ. ನನ್ನ ಸೊಸೆ ತುಂಬ ಚೆಲುವೆ; ಮುಗ್ಧಳು ಬೇರೆ. ಯಾರಾದರೂ ದುಷ್ಟರು ಅಪಹರಿಸಿರಬಹುದೆ ಎಂದು ಶಂಕಿಸಿದೆ. ಹಾಗೆಂದು ಯಾವ ಸುಳಿವೂ ಇಲ್ಲದೆ ಏನು ಮಾಡಲಾದೀತು? ತಳವಾರನಿಗೆ ದೂರು ಕೊಡಬಹುದು. ಆದರೆ ಈಗಿನ ಆಳ್ವಿಕೆಯಲ್ಲಿ ಹಾಗೆ ದೂರು ಕೊಡುವುದು, ಅದೂ ಹೆಣ್ಣೊಬ್ಬಳ ವಿಚಾರದಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾದೀತೆಂದು ಆ ವಿಚಾರಕ್ಕೆ ಹೋಗಲಿಲ್ಲ. ಅವಳು ಕಣ್ಮರೆಯಾದ್ದರಿಂದ ಮನೆ ಮಸಣದಂತಾಗಿತ್ತು. ಗುಹ ಸಿಡಿಲು ಬಡಿದವನಂತೆ ಇದ್ದ. ನನ್ನ ಮಡದಿ ಹಾಸುಗೆ ಹಿಡಿದಳು. ಗುಹನ ಎಳೆಯ ಮಗು ತಾಯಿಯ ಹಾಲಿಗಾಗಿ ಕಿರುಚಿ ಅಳುತ್ತಿತ್ತು.
ಎರಡು ದಿನಗಳು ಹೀಗೆಯೆ ಸಂದವು. ಆ ದಿನ ನಮ್ಮ ಕೇರಿಯ ಹುಡುಗನೊಬ್ಬ ಅಳುಕುತ್ತ ನನ್ನ ಬಳಿಗೆ ಬಂದು ಒಂದು ಸುದ್ದಿ ಕೊಟ್ಟ. ನೀರಿಗೆಂದು ಹೋದ ನನ್ನ ಸೊಸೆಯನ್ನು ಚಿತ್ರಕನ ಕಡೆಯ ಕಟ್ಟಾಳುಗಳು ಬಲವಂತವಾಗಿ ಹೊತ್ತೊಯ್ದಿದ್ದಾರಂತೆ. ಈ ಹುಡುಗನನ್ನು ಬೆದರಿಸಿ ಯಾರಲ್ಲೂ ಬಾಯಿಬಿಡಬಾರದೆಂದು ಎಚ್ಚರಿಸಿ ಹೋದರಂತೆ. ಪಾಪ, ಹೆದರಿದ ಇವ ಎರಡು ದಿನ ಕಳೆದು ಧೈರ್ಯ ಮಾಡಿ ನನ್ನಲ್ಲಿ ಹೇಳಿದ್ದ. ಇದನ್ನು ಕೇಳಿ ಆಘಾತಕ್ಕೊಳಗಾದೆ ನಾನು. ಮೊದಲಿಗೆ ಇದನ್ನು ನಂಬುವುದಕ್ಕೆ ನನ್ನ ಮನಸ್ಸು ಸಿದ್ಧವಾಗಲಿಲ್ಲ. ಹಾಗೆಂದು ಹೇಳಿದ ಹುಡುಗ ಸುಳ್ಳುಗಾರನಲ್ಲ. ನಂಬದಿರುವುದಕ್ಕೂ ಕಾರಣವಿಲ್ಲ. ಸುದ್ದಿ ಕೇರಿಯಲ್ಲೆಲ್ಲ ಹರಡಿತು. ಆ ರಾತ್ರಿ ನಮ್ಮ ಕೇರಿಯ ಹತ್ತಾರು ಜನ ನನ್ನ ಮನೆಯಲ್ಲಿ ಒಟ್ಟಾದರು. ನನಗೆ ಕಷ್ಟ ಬಂದ ಕಾಲಕ್ಕೆ ಸಹಾಯ ಮಾಡುವಷ್ಟು ಪ್ರೀತಿ ಗೌರವ ಇಟ್ಟುಕೊಂಡವರು ಅವರು. ಸಮಾಲೋಚನೆಯಲ್ಲಿ ಮುಂದೇನು ಎಂಬ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ಸಲಹೆ ಕೊಟ್ಟರು. ಎಲ್ಲರೂ ಒಟ್ಟಾಗಿ ಚಿತ್ರಕನ ಮನೆಗೆ ದಾಳಿ ಮಾಡೋಣ ಎನ್ನುವಲ್ಲಿಂದ ತೊಡಗಿ ದೊರೆಗಳಿಗೆ ದೂರು ಕೊಡೋಣ ಎಂಬಲ್ಲಿಯವರೆಗೆ ಮಾತು ಬಂತು. ಚಿತ್ರಕನ ಮನೆಗೆ ಬೆಂಕಿ ಹಾಕೋಣ ಎಂದವರೂ ಇದ್ದರು. ಕೊನೆಗೆ ಇಂತಹ ವಿಚಾರದಲ್ಲಿ ದುಡುಕುವುದು ಬೇಡ, ನಾಲ್ಕಾರು ಮಂದಿ ಹಿರಿಯರು ಹೋಗಿ ನಯವಾಗಿ ಅವಳನ್ನು ಬಿಟ್ಟುಕೊಡುವಂತೆ ಒಲಿಸುವುದೆಂದು ನಿರ್ಣಯವಾಯಿತು.
ಮರುದಿನ ನಾವು ಐದಾರು ಮಂದಿ ಚಿತ್ರಕನ ಮನೆಗೆ ಹೋದೆವು. ಮೊದಲಿಗೆ ಚಿತ್ರಕ ತಾವು ಹುಡುಗಿಯನ್ನು ಅಪಹರಿಸಿದ್ದೇ ಇಲ್ಲವೆಂದು ವಾದಿಸಿದ. ನಾವು ಪಟ್ಟು ಹಿಡಿದ ಮೇಲೆ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಆದರೆ ಬಿಟ್ಟುಕೊಡುವುದಕ್ಕೆ ಅವನಾಗಲೀ, ಅವನ ಮಕ್ಕಳಾಗಲೀ ಸಿದ್ಧರಾಗಲಿಲ್ಲ. ನಾವು ನಾನಾ ಬಗೆಯಿಂದ ಅವರನ್ನು ಒಲಿಸಿಕೊಳ್ಳುವುದಕ್ಕೆ ಯತ್ನಿಸಿದೆವು. ಅದರೂ ಬಿಟ್ಟುಕೊಡುವುದಿರಲಿ, ಯಾಕಾಗಿ ಅಪಹರಿಸಿದ್ದು ಅನ್ನುವುದನ್ನೂ ಹೇಳಲಿಲ್ಲ. ಚಿತ್ರಕನೂ ಅವನ ಮಕ್ಕಳೂ ಎಷ್ಟು ನಿರ್ದಯಿಗಳಾಗಿ ವರ್ತಿಸಿದರೆಂದರೆ ಅವಳನ್ನೊಮ್ಮೆ ನೋಡುವ ಅವಕಾಶವನ್ನು ಕೂಡ ನಮಗೆ ನೀಡಲಿಲ್ಲ. ನನಗೆ ಒಟ್ಟು ಸಂದರ್ಭದ ಬಗೆಗೆ ಅಸಹ್ಯ ಉಂಟಾಯಿತು. ಎಂತಹ ಹೇಸಿಗೆ ಇದು! ತಮ್ಮದೇ ಕುಟುಂಬದ ಹೆಣ್ಣನ್ನು ಅಪಹರಿಸುವ ನೀಚತನ! ಆಗ ನನಗೆ ನೆನಪಾದದ್ದು `ಯಥಾ ರಾಜಾ ತಥಾ ಪ್ರಜಾಃ’ ಎಂಬ ಮಾತು. ಕೆಲ ವರ್ಷಗಳ ಹಿಂದೆ ರಾಜಸಭೆಯಲ್ಲಿ ಮನೆತನದ ಸೊಸೆಯನ್ನೇ ವಿವಸ್ತ್ರಗೊಳಿಸಿ ಚಂದನೋಡುವ ನೀಚತನವನ್ನು ಪ್ರಭುಗಳೇ ಮಾಡಿದ್ದರಲ್ಲ. ಅಂದ ಮೇಲೆ ಅವರ ಆಳ್ವಿಕೆಯ ಪ್ರಜೆಗಳು ಇನ್ನೇನು ತಾನೇ ಮಾಡಲಾರರು? ಚಿತ್ರಕನ ಅಂಗಳದಲ್ಲಿ ನಿಂತ ನಾವಷ್ಟೂ ಮಂದಿ ಅಸಹಾಯರಾಗಿದ್ದೆವು. ಬಲಾತ್ಕಾರದಿಂದ ಅವಳನ್ನು ಬಿಡಿಸಿಕೊಳ್ಳುವ ಶಕ್ತಿ ನಮಗಿರಲಿಲ್ಲ. ಹಾಗೆಂದು ಇದನ್ನು ಇಲ್ಲಿಗೇ ಬಿಟ್ಟುಬಿಡುವ ಹಾಗೂ ಇಲ್ಲ. ಏನು ಮಾಡುವುದೆಂದು ತಿಳಿಯದೆ ಚಡಪಡಿಸುತ್ತಿದ್ದೆ ನಾನು.
ಆಗ ನಮ್ಮ ಜತೆ ಬಂದಿದ್ದ ಹಿರಿಯನೊಬ್ಬ ಮಾತಾಡಿದ, “ಚಿತ್ರಕ, ನಿನ್ನನ್ನು ಎಳವೆಯಿಂದಲೂ ನಾನು ಬಲ್ಲೆ. ರಥಕಾರನನ್ನೂ ಬಲ್ಲೆ. ಮೊದಲು ಎಷ್ಟು ಸೌಹಾರ್ದದಿಂದ ಇದ್ದಿರಿ ನೀವು. ಅಣ್ಣ-ತಮ್ಮಂದಿರು ಹೇಗಿರಬೇಕು ಎಂಬುದಕ್ಕೆ ದೃಷ್ಟಾಂತದಂತೆ ಬಾಳಿದ ದಿನಗಳನ್ನೊಮ್ಮೆ ನೆನಪಿಸಿಕೊ. ರಥಕಾರ ಬೇರಾರೂ ಅಲ್ಲ. ನಿನ್ನ ಒಡಹುಟ್ಟಿದ ಅಣ್ಣ. ಪರಮ ಸಾಧುವಾದ ಅವನ ಮೇಲೆ ನಿನಗೇಕೆ ಈ ರೀತಿಯ ಹಗೆ? ಇದರಿಂದ ನೀನಾಗಲಿ, ನಿನ್ನ ಮಕ್ಕಳಾಗಲಿ ಏನು ಸಾಧಿಸುವುದಕ್ಕೆ ಹೊರಟಿದ್ದೀರಪ್ಪ? ಒಂದು ಮಾತು ನೆನಪಿಡು ಚಿತ್ರಕ, ಇದು ಒಳ್ಳೆಯ ದಾರಿಯಲ್ಲ. ಒಂದು ವೇಳೆ ಈ ಪ್ರಕರಣ ಬೆಳೆದರೇನಾದೀತು ಬಲ್ಲೆಯ? ಇದೋ ನಾನು ಮುದುಕ. ನಿನಗಿಂತ ಹಿರಿಯ. ಕೈಮುಗಿದು ಕೇಳುತ್ತೇನೆ. ಅವಳನ್ನು ಬಿಟ್ಟುಬಿಡಿ.”
ಆಗ ಚಿತ್ರಕ ಹೇಳಿದ, “ಕಾರಣ ನನ್ನಲ್ಲೇನು ಕೇಳುತ್ತೀರಿ? ಅವನನ್ನು ಕೇಳಿ. ನನ್ನ ಅಗತ್ಯಕ್ಕೆ ಸಹಾಯವಾದೀತೆಂದು ಪಾಲು ಕೇಳಲು ಹೋದರೆ ಕೊಟ್ಟನೇನು? ಇಲ್ಲವೆಂದ. ಎಷ್ಟು ಬೇಡಿಕೊಂಡರೂ ಮತ್ತದೇ ವಿಲಾಪ. ಕೋಣನಿಗೆ ದೊಣ್ಣೆಯೇ ಮದ್ದು. ಈಗ ನೋಡೋಣ, ಕೊಡದೆ ಎಲ್ಲಿ ಹೋಗುತ್ತಾನೆ?” ಈ ಮಾತುಗಳನ್ನು ಕೇಳಿದಾಗಲೇ ನಮಗೆ ಅಪಹರಣದ ಉದ್ದೇಶ ಅರ್ಥವಾದದ್ದು. ಅವನ ಮಾತಿಗೆ ಹಿರಿಯ ಮತ್ತೆ ಹೇಳಿದ, “ಪಾಲು ಪಡೆಯುವುದಕ್ಕಾಗಿ ಈ ಹೀನಾಯಕ್ಕಿಳಿದೆಯಾ? ನಿನಗೆ ಅಲ್ಲಿ ಯಾವ ಪಾಲಿದೆ? ನಿಮ್ಮ ತಂದೆಯವರು ಕಟ್ಟುಪಾಡು ವಿಧಿಸಿದ್ದುಂಟೆ ನಿನಗೆ ಪಾಲು ಸಲ್ಲಬೇಕೆಂದು? ಜ್ಯೇಷ್ಠಪುತ್ರನಾಗಿ ರಥಕಾರನೇನಾದರೂ ಔದಾರ್ಯದಿಂದ ಕೊಟ್ಟರೆ ಉಂಟು. ಇಲ್ಲದಿದ್ದರೆ ಇಲ್ಲ. ಕೊಡದಿದ್ದರೆ ಅದು ಅಧರ್ಮವಾಗುವುದಿಲ್ಲ. ಆದರೂ ಅವನೇನು ಕೊಡುವುದಿಲ್ಲ ಅನ್ನಲಿಲ್ಲವಲ್ಲ. ಯಾವಾಗಲಾದರೂ ಕೊಟ್ಟರೆ ಸಾಕು ಎಂದವನು ನೀನೆ ಅಲ್ಲವೆ? ಈಗ ಇದೆಂತಹ ಅನಾಚಾರ? ತಮ್ಮನಾಗಿ ನೀನು ಹೀಗೆ ಮಾಡಬಹುದೆ? ಇದರಿಂದ ನೀನು ನಾರಕಿಯಾಗುತ್ತಿ ಚಿತ್ರಕ. ಪರದ ಬಗೆಗೂ ಯೋಚನೆಯಿರಲಿ.”
ಚಿತ್ರಕ ಅದಕ್ಕುತ್ತರಿಸುವ ಮುನ್ನವೇ ಅವನ ಹಿರಿಯ ಮಗ ಕ್ರತು ಮಾತನಾಡಿದ, “ನಾವೀಗ ನಿಮ್ಮ ಧರ್ಮೋಪದೇಶ ಕೇಳುವುದಕ್ಕೆ ಸಿದ್ಧರಿಲ್ಲ. ನಮಗೆ ಸಲ್ಲಬೇಕಾದ್ದು ದೊರೆಯದೆ ಅವಳನ್ನು ಬಿಡುವ ಪ್ರಶ್ನೆಯಿಲ್ಲ. ಒಂದೋ ಕೊಡಬೇಕಾದುದನ್ನು ಕೊಟ್ಟು ಅವಳನ್ನು ಬಿಡಿಸಿಕೊಳ್ಳಿ ಅಥವಾ ಪಾಲನ್ನು ದೊಡ್ಡಪ್ಪನೇ ಇರಿಸಿಕೊಳ್ಳಲಿ, ಅವಳು ನಮ್ಮಲ್ಲಿರಲಿ. ನಮಗೊಬ್ಬಳು ದಾಸಿ ಸಿಕ್ಕಿದ ಹಾಗಾಯಿತು. ನೋಡುವುದಕ್ಕೆ ರೂಪವತಿ. ವಿಕ್ರಯ ಮಾಡಿದರೆ ಒಳ್ಳೆಯ ಮೌಲ್ಯ ಬಂದೀತು. ಅಥವಾ… ನಮ್ಮ ಉಪಭೋಗಕ್ಕಾದರೂ ಒದಗಿಯಾಳು…” ಕೊನೆಯ ವಾಕ್ಯ ಹೇಳುವಾಗ ಅವನ ತುಟಿಗಳಲ್ಲಿ ವ್ಯಂಗ್ಯದ ನಗು ಮೂಡಿತು. ಅವನ ಮಾತು ಪೂರ್ಣಗೊಳ್ಳುವಷ್ಟರಲ್ಲಿ ನಮ್ಮ ಹಿಂದಿದ್ದ ಗುಹನೂ, ಅವನ ಜತೆಗೇ ಚನ್ನನೂ “ಏನು ಗಳಹುತ್ತೀಯೆ ಪಾತಕಿ?” ಎಂದಬ್ಬರಿಸುತ್ತ ಅವನ ಕಡೆಗೆ ನುಗ್ಗಿದರು. ಇಬ್ಬರ ಕೈಗಳಲ್ಲೂ ಕಿರುಗತ್ತಿ ಹೊಳೆಯುತ್ತಿದ್ದವು. ಅನಾಹುತವಾಗುವುದೆಂದು ನಾವು ತಡೆಯುವುದಕ್ಕೆ ಧಾವಿಸಿದೆವು. ಅಷ್ಟರಲ್ಲಿ “ನಿಲ್ಲಿ” ಎಂಬ ಗರ್ಜನೆ ಕೇಳಿಸಿತು. ಅಷ್ಟುಹೊತ್ತು ಎಲ್ಲಿದ್ದರೋ ಕಾಣೆ, ನಾಲ್ಕಾರು ಬಿಚ್ಚುಗತ್ತಿಯ ಯೋಧರು ಧುತ್ತೆಂದು ಹಾರಿಬಂದರು. ಅವರ ಆಯುಧಗಳು ನನ್ನ ಮಕ್ಕಳಿಬ್ಬರ ಕೊರಳಿನತ್ತ ಗುರಿಯಿಟ್ಟಿದ್ದವು. ನಾವೆಲ್ಲ ಹೆದರಿಬಿಟ್ಟೆವು. ಯೋಧನಾಯಕ ಅಬ್ಬರಿಸಿದ, “ಯಾರಾದರೂ ಒಂದು ಹೆಜ್ಜೆ ಮುಂದಿಟ್ಟರೆ ಜೋಕೆ. ಏ ಮುದುಕ, ನಿನ್ನ ಮಕ್ಕಳನ್ನು ಹಿಂದೆ ಕರೆ. ಇಲ್ಲವಾದಲ್ಲಿ ಅವರ ತಲೆ ಹಾರಿಸಬೇಕಾಗುತ್ತದೆ ಅಥವಾ ಕಾರಾಗಾರಕ್ಕೆ ತಳ್ಳುತ್ತೇವೆ. ಚಿತ್ರಕ ಹಾಗೂ ಅವನ ಪುತ್ರರು ಈಗ ದುಃಶಾಸನ ಪ್ರಭುಗಳ ಖಾಸಾ ರಥಕಾರರು. ಅವರಿಗೆ ಸಿಂಹಾಸನದ ಪೂರ್ಣ ರಕ್ಷಣೆಯಿದೆ. ನಿಮಗೆ ಬದುಕಬೇಕೆಂದಿದ್ದರೆ ಮರ್ಯಾದೆಯಾಗಿ ಹಿಂದೆ ಸರಿಯಿರಿ.”
ಇಷ್ಟಾಗುವ ಹೊತ್ತಿಗೆ ಕೋಪದಿಂದ ಭುಸುಗುಡುತ್ತಿದ್ದ ನನ್ನಿಬ್ಬರು ಮಕ್ಕಳಿಗೂ ಮೈಮೇಲಿನ ಪ್ರಜ್ಞೆ ಬಂದಿತ್ತು. ಅರಮನೆಯ ರಕ್ಷಣೆಯಿದೆ ಎಂದರೆ ನಾವು ಇವರನ್ನು ಯಾವ ರೀತಿಯಲ್ಲೂ ಎದುರಿಸಲಾರೆವು. ಈ ಸನ್ನಾಹಗಳನ್ನೆಲ್ಲ ನೋಡಿದರೆ ಚಿತ್ರಕನ ಕಡೆಗೆ ಪ್ರಭುಗಳೇ ನಿಂತ ಹಾಗನ್ನಿಸಿತು. ಏನೂ ಮಾಡಲಾರದೆ ಅಸಹಾಯರಾಗಿ, ತಲೆತಗ್ಗಿಸಿ ಷಂಡರಂತೆ ಮರಳಿ ಬಂದೆವು. ಮನೆಗೆ ಬಂದೆವು ನಿಜ, ಹೇಗೆ ಬಂದೆವು ಎಂಬುದು ನನ್ನ ಪ್ರಜ್ಞೆಯಲ್ಲಿರಲಿಲ್ಲ. ಬಂದವನು ಒಳಗಿನ ಕೋಣೆಯಲ್ಲಿ ಮಲಗಿಬಿಟ್ಟೆ. ನಮ್ಮ ಮನೆಯಲ್ಲಿ ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಗುಹನಂತೂ ವಿಭ್ರಾಂತನಂತೆ ಇದ್ದ. ಮಾತಿಲ್ಲ; ಕಥೆಯಿಲ್ಲ. ಕೀಲುಗೊಂಬೆಯಂತೆ. ಎಳೆಯಮಗುವನ್ನು ಸಂಭಾಳಿಸಲಾರದೆ ನನ್ನ ದೊಡ್ಡಸೊಸೆ ಒದ್ದಾಡುತ್ತಿದ್ದಳು. ನನ್ನ ಮಡದಿ ಒಂದೇ ಸಮನೆ ಕಣ್ಣೀರು ಸುರಿಸುವುದು ಕಾಣುತ್ತಿತ್ತು. ಸದ್ಯ ಈ ಆಪತ್ತಿನಿಂದ ಪಾರಾಗುವ ದಾರಿ ತೋರಿಸಪ್ಪಾ ಭಗವಂತ ಎಂದು ನೂರಾರು ಬಾರಿ ಬೇಡಿದೆ. ನಮ್ಮನ್ನು ದೇವರೇ ಕಾಯಬೇಕಷ್ಟೆ. ಏಕೆಂದರೆ ಕಾಯುವ ಹೊಣೆಹೊತ್ತ ದೊರೆಗಳು ಅನಾಚಾರಕ್ಕೆ ಕೈಯಿಕ್ಕಿರುವ ಚಿತ್ರಕ ಮತ್ತು ಅವನ ಮಕ್ಕಳ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವಾಗ ಇನ್ನಾರು ನಮ್ಮನ್ನು ಕಾಯುವುದಕ್ಕೆ ಬಂದಾರು? ನಾವಿರುವ ಪರಿಸ್ಥಿತಿಯನ್ನು ನೆನೆಯುವುದಕ್ಕೇ ಭಯವಾಗುತ್ತಿತ್ತು. ನಮ್ಮ ಮನೆಯ ಹೆಣ್ಣು ನಮ್ಮ ಮನೆಯವರಿಂದಲೇ ಅಪಹರಿಸಲ್ಪಟ್ಟು ನಮ್ಮೂರಿನಲ್ಲೇ ಇದ್ದಾಳೆ. ಎಲ್ಲಿದ್ದಾಳೆಂದೂ ಗೊತ್ತಿದೆ. ಆದರೆ ಬಿಡಿಸಿ ತರುವುದು ಮಾತ್ರ ನಮ್ಮಿಂದಾಗದು. ಇದಕ್ಕಿಂತ ಕೆಟ್ಟ ಸನ್ನಿವೇಶ ಬೇರೊಂದುಂಟೆ? ನೆಲದಮೇಲೆ ಬಿದ್ದುಕೊಂಡು ನಾನು ಹೀಗೆಲ್ಲ ಯೋಚಿಸುತ್ತಿರುವಾಗ ಚನ್ನ ಒಳಗೆ ಬಂದ. “ಅಪ್ಪಾ, ಇನ್ನು ಇದನ್ನೆಲ್ಲ ಸಹಿಸುವುದು ನನ್ನಿಂದಾಗದು. ಅವರು ಅವಳನ್ನು ಬಿಡುವುದಿಲ್ಲ. ತಮ್ಮ ಸ್ವಾರ್ಥಕ್ಕೋ, ಲಾಲಸೆಗೋ ಬಳಸುತ್ತಾರೆ. ದೊರೆಗಳು ಅವರಿಗೇ ಅನುಕೂಲರು. ನ್ಯಾಯ, ಧರ್ಮ, ನೀತಿಗಳೆಲ್ಲ ನಮ್ಮ ಪಾಲಿಗಿಲ್ಲ. ಬಹುಶಃ ದೇವರೂ ದುಷ್ಟರ ಪರವಾಗಿಯೇ ಇದ್ದಾನೋ ಏನೋ. ನಾನೊಂದು ನಿರ್ಣಯಕ್ಕೆ ಬಂದಿದ್ದೇನಪ್ಪ. ನಾನೂ ಗುಹನೂ ನಮ್ಮ ಕೇರಿಯ ನಾಲ್ಕಾರು ಕಟ್ಟಾಳುಗಳನ್ನು ಸೇರಿಸಿಕೊಂಡು ಇಂದು ರಾತ್ರಿ ಚಿತ್ರಕನ ಮನೆಗೆ ನುಗ್ಗುತ್ತೇವೆ. ರಾಜಭಟರು ರಾತ್ರಿ ಪಾನಮತ್ತರಾಗಿ ಬಿದ್ದಿರುತ್ತಾರೆ ಅಥವಾ ಎದ್ದರೂ ಆಯುಧಪ್ರಯೋಗ ಮಾಡುವುದಕ್ಕೆ ನಾವು ಹಿಂಜರಿಯುವುದಿಲ್ಲ. ಹೇಗಾದರೂ ಸರಿ, ಅವಳನ್ನು ಬಿಡಿಸಿ ತರುತ್ತೇವೆ. ಪ್ರಾತಃಕಾಲದ ಮುನ್ನ ಇಲ್ಲಿಂದ ತಲೆತಪ್ಪಿಸಿಕೊಂಡು ದೂರದ ಪಾಂಚಾಲಕ್ಕೋ ಮಥುರೆಗೋ ಹೋಗಿಬಿಡೋಣ. ದಯವಿಟ್ಟು ಇಲ್ಲವೆನ್ನಬಾರದು ಅಪ್ಪಾ.”
ಚನ್ನ ಮಾತು ಮುಗಿಸಿ ನನ್ನ ಮುಖ ನೋಡುತ್ತ ನಿಂತ.?
(….ಮುಂದುವರಿಯುತ್ತದೆ)
Thkiinng like that shows an expert’s touch
ಅದ್ಭುತವಾಗಿದೆ