ಅಮ್ಮಾ ತಾಯಿ ವಿಭೂತಿ
ರಸವಂತಿ ನೀ ಜಸವಂತಿ
ನೊಸಲಿನ ಹೊಸಲಾಗೆ ಕುಂತಿ ||೧||
ನನಗೋ ಬಸವಣ್ಣನ ನೆನಪೇ ಬಂತಿ
ಹುಳ ಹತ್ತಿ ದೇಹ ಜಂತಿ
ಮೂರರ ಕಾಯ ಆರರ ಗಾಯ
ಇದು ಮಾಯಲು
ವಿಭೂತಿಯ ದಯ ಬೇಕಯ್ಯ
ಅಮ್ಮಾ ತಾಯಿ ವಿಭೂತಿ ||೨||
ಹೃದಯ ಪುಂಡರೀಕ
ಶಿವನ ಹಿಮಾಲಯ
ಗುರು ಪರಮಹಂಸರ ಚಿತ್ತ
ಗುರು ಅಂಬಿಕಾತನಯರ ದತ್ತ
ಈ ಗುರುತೀಗ ಮೂರು ಬೆರಳು
ನೆತ್ತಿಗೆ ವಿಭೂತಿಯ ನೆರಳು
ಅಮ್ಮಾ ತಾಯಿ ವಿಭೂತಿ ||೩||
’ಓಂ ಶಿವೋಹಂ ರಕ್ಷ
ಇದು ದಕ್ಷ ಯಜ್ಞ ಅಲ್ಲ
ಸತಿಯ ಆಹುತಿ ಸಲ್ಲ
ಕಾಮ ಕ್ರೋಧ ಲೋಭ
ಸುಟ್ಟರಾತು ಹೊಲ
ಅದರಲಿ ಬೆಳೆದ ಹತ್ತಿ
ಈ ಈ ಈಭೂತಿ
ಈಭೂತಿ ಆಭೂತಿ
ಅವನದೆ ವಿಭೂತಿ
ಈ ಹೊಲ ಜಲ ಎಲ್ಲ
ಸಕಲ ವಿಕಲವೆಲ್ಲ
ಶಿವಶಕ್ತಿಯದೆ ಕರುಣೆ
ಅಮ್ಮಾ ತಾಯಿ ವಿಭೂತಿ ||೪||
ನೀರಿನಾಗೆ ಕಲಸಿ
ಬೆರಳಿನಲಿ ಬೆರಸಿ
ಹಣೆಯ ಮೇಲೆ ಒರೆಸಿ
ನರಸೀ ನರ್ಸಿ
ನರಸಿಂಗನ ಅರಸಿ
ಮಹಾಲಕುಮಿ ತಾಯಿ
ಜೀವಜಾತಿ ಕಾಯಿ
ಅಮ್ಮಾ ತಾಯಿ ವಿಭೂತಿ ||೫||
ನಾಕು ಮೂಲೆಯಲ್ಲಿ ನಿಂತು
ನಾ ರಕ್ಷೆಗಿರುವೆ ಅಂತು
ಎಲ್ಲಮ್ಮ ಮಲ್ಲಮ್ಮ ಕಾಯಿ
ಬನದವ್ವ ಹಡದವ್ವ ಮಾಯಿ
ಅಮ್ಮಾ ತಾಯಿ ವಿಭೂತಿ ||೬||
ತೇರು ತೇರಿನಲು ಸೇರಿ
ನೀ ಸೇರಿಗು ಸವ್ವಾ ಸೇರು
ನೀನೆ ಕೊಟ್ಟ ನೂಲಿನ
ಈ ಸೀರೆ ಉಡಿಸಿಕೊಂಬೆ
ನಿನ್ನದೆ ಈ ದೇಹ ಕಣ
ನೀನಿತ್ತ ಬಾಗಿಣ
ಬಾಗಿನಾ ನಿನ ಕಾಲ
ಬುಡಕೆ ಬಂದೆ
ಮೂಸುತ ನಾಯಿ
ನೀನೆ ತಾಯಿ ತಂದೆ
ಅಮ್ಮಾ ತಾಯಿ ವಿಭೂತಿ ||೭||
ಸಕಲೈಶ್ವರ್ಯದ ಖಜಾನೆ
ನಿಜಾರ್ಥ ನಿಜಾನೆ
ಮುಝರೆ ಭಳಿರೆ ಭಾಪು
ಪ್ರತಿ ಹಗಲಲು ನಿನ್ನದೆ ಛಾಪು!
ನೀ ಶುದ್ಧರೂಪದ ರುಪಾಯ
ಸಕಲಕು ನೀನೇ ಅಡಿಪಾಯ
ಅಮ್ಮಾ ತಾಯಿ ವಿಭೂತಿ
ರಸವಂತಿ ಜಸವಂತಿ
ನೊಸಲಿನ ಹೊಸಲಾಗೆ ಕುಂತಿ
ಅಮ್ಮಾ ತಾಯಿ ವಿಭೂತಿ ||೮||