ಸಿಹಿ ಇರಲಿ ಕಹಿ ಇರಲಿ ಏನೇ ಇರಲಿ
ನಿಲುಕದ ದ್ರಾಕ್ಷಿಗೆ ಕೈಚಾಚದಿರಬೇಕು
ಹಿತ್ತಲದ ಮದ್ದು ಹಿತವೆಂದು ಬಗೆದು
ಅದನುಂಡು ನೆಮ್ಮದಿಯಿಂದ ಇರಬೇಕು.
ಬದುಕಿನ ಗಾಣದಲಿ ಕಬ್ಬಾಗಿ ನುರಿದು
ಸಿಹಿ ಹಂಚಿ ಕಹಿ ನುಂಗಿ ನಗಬೇಕು
ವಿಷವನುಂಡು ಸಾಕ್ಷಾತ್ ಪರಶಿವನು
ವಿಷಕಂಠನಾದುದನು ಮರೆಯದಿರಬೇಕು.
ನೆರಳು ನೀಡುವ ಮರ ದಾಹ ನೀಗುವ ಜಲ
ಪರಹಿತದಿ ಸಂತೃಪ್ತಿ ಕಾಣುವ ತೆರದಲಿ
ಒಳಿತಿಗಾಗಿಯೆ ಮತಿಯ ಮಥಿಸುತಿರಬೇಕು
ಹಿರಿತನಕೆ ಮಣಿದು ಘನತೆಯ ಮೆರೆಯಬೇಕು.
ಬದುಕಿನ ಕದನದಲಿ ಹೋರಾಟಕಂಜದೆ
ನೋವು-ನಲಿವಿಗೆ ಎದೆಯೊಡ್ಡಿ ನಿಲ್ಲಬೇಕು
ಸೋಲನ್ನು ಮೆಟ್ಟಿ ಗೆಲುವಿಗೆತ್ನಿಸಬೇಕು
ಬೆಳಕಿನೊಂದಿಗೆ ಕತ್ತಲೆಯನ್ನೂ ಸಹಿಸಬೇಕು.
ಆತುರ ಪಡದೆ ಅವಸರ ಪಡದೆ ಇರಬೇಕು
ಸಂಯಮದ ಸವಾರಿ ಸುರಕ್ಷಿತವೆನ್ನಬೇಕು
ಅನುಭವದ ಬೆಳಕಿನಲಿ ಗುರಿಯಮುಟ್ಟಬೇಕು
ಅಡ್ಡದಾರಿ ಹಿಡಿಯದೆ ಸರಿದಾರಿ ತುಳಿಯಬೇಕು.