ಇ ಡೀ ನಗರದಲ್ಲೇ ಆ ಗೃಹಸ್ಥ ಅತ್ಯಂತ ವ್ಯವಹಾರ ಕುಶಲಿ ಅಂತ ಪ್ರಸಿದ್ಧನಾಗಿದ್ದ. ಇಷ್ಟಾಗಿ ಯಾರ ತಂಟೆಗೂ ಆತ ಹೋಗುತ್ತಿರಲಿಲ್ಲ. ತಾನಾಯಿತು, ತನ್ನ ಪಾಡಾಯಿತು. ಮತ್ತೊಬ್ಬರ ಹಣಕಾಸಿಗೆ ಆಸೆ ಪಡುತ್ತಿರಲಿಲ್ಲ. ತನ್ನದನ್ನು ಬೇರೊಬ್ಬರಿಗೆ ಕೊಡುತ್ತಲೂ ಇರಲಿಲ್ಲ. ಪೇಟೆಬೀದಿಯಲ್ಲಿ ಅವನಿಗೆ ಸ್ವಂತದ್ದೇ ಆದ ಅಂಗಡಿಯೊಂದಿತ್ತು. ಈ ವ್ಯಾಪಾರದಿಂದ ಸಂಸಾರದ ಕತೆ ಸುಗಮವಾಗಿಯೇ ಸಾಗಿತ್ತು.
ಒಂದು ದಿನ ಬೆಳಗಿನ ಹನ್ನೊಂದು ಗಂಟೆ. ಚಳಿಗಾಲದ ಎಳೆಬಿಸಿಲಲ್ಲಿ ಸುಖವಾಗಿ ಈತ ಮೈಕಾಸುತ್ತಾ ಕೂತಿದ್ದಾಗ ಹಳ್ಳಿಯ ಬಾಲ್ಯಗೆಳೆಯ ಬಂದ. ಇವನಿಗೆ ತುಂಬ ಸಂತೋಷವಾಯಿತು.
ಬಾ ಬಾ ಮಿತ್ರ. ತುಂಬ ಖುಶಿಯಾಯ್ತು ನೀನು ಬಂದದ್ದು. ಹೇಗೂ ಅಂಗಡಿಗೂ ರಜೆ. ಆನಂದವಾಗಿ ಮಾತಾಡುತ್ತಾ ದಿನಕಳೆಯೋಣ.
ಆಮೇಲೆ ಆ ಗೃಹಸ್ಥ ಮಡದಿಯನ್ನು ಕೂಗಿ ಕರೆದ. ನೋಡು, ಇವನು ನನ್ನ ಗೆಳೆಯ….ಇವತ್ತು ಇಲ್ಲೇ ಊಟಕ್ಕೆ ಇರ್ತಾನೆ. ರುಚಿರುಚಿಯಾಗಿ ಅಡಿಗೆ ಮಾಡು…. ಹ್ಞಾ…. ಒಂದು ಮಾತು! ಎರಡನ್ನು ಒಂದು ಮಾಡು…. ಒಂದನ್ನು ಎರಡು ಮಾಡಿಬಿಡು. ತಿಳಿಯಿತೇ? ಎಂದ. ಹೆಂಡತಿ ನಗುನಗುತ್ತಾ ತಲೆಯಾಡಿಸಿ ಅಡಿಗೆ ಮನೆಗೆ ಹೋದಳು!.
ಎಲ್ಲ ಮುಗಿಸಿ ಆಕೆ ಊಟಕ್ಕೆ ಎಲೆ ಹಾಕಿದಾಗ ಮಧ್ಯಾಹ್ನ ನಾಲ್ಕು ಗಂಟೆ. ದಂಟಿನ ಎಲೆಯ ಪಲ್ಯ; ಅದರದ್ದೇ ಕಾಂಡದ ಸೊಗಸಾದ ಹುಳಿ! ಹಸಿದಿದ್ದ ನೆಂಟ ನಾಲ್ಕು ತುತ್ತು ಹೆಚ್ಚಾಗಿಯೇ ತಿಂದ. ಅಮೇಲೆ ಮಿತ್ರರಿಬ್ಬರೂ ಗಡದ್ದಾಗಿ ನಿದ್ದೆ ತೆಗೆದರು. ಪೇಟೆಯೆಲ್ಲ ಸುತ್ತಿ ಬಂದರು.
ರಾತ್ರಿಯಾಯಿತು ಊಟಕ್ಕೇಳಿ! ಗೃಹಿಣಿ ಕರೆದಳು. ಅಯ್ಯೋ ಇಲ್ಲ ತಾಯಿ…. ಮಧ್ಯಾಹ್ನ ಉಂಡದ್ದು ಗಂಟಲ್ಲೇ ಇದೆ ಅಂದ ನೆಂಟ. ಗೃಹಸ್ಥನೂ ಉಣ್ಣಲಿಲ್ಲ. ಇಬ್ಬರೂ ಮಜ್ಜಿಗೆ ಕುಡಿದು ಮಲಗಿದರು. ಅಂದ ಹಾಗೆ ಮಿತ್ರಾ, ನಿನ್ನ ಹೆಂಡತಿಗೆ ಎರಡನ್ನು ಒಂದು ಮಾಡು; ಒಂದನ್ನು ಎರಡು ಮಾಡು ಅಂದೆಯಲ್ಲ ಹಾಗೆಂದರೇನು? ನೆಂಟ ಕೇಳಿದ.
ಗೃಹಸ್ಥ ನಗುತ್ತಾ ಉತ್ತರಿಸಿದ- ದಂಟಿನ ಎಲೆಯ ಪಲ್ಯ, ಕಾಂಡದ ಹುಳಿ – ಒಂದನ್ನು ಎರಡು ಮಾಡುವುದು; ಮಧ್ಯಾಹ್ನದ ಊಟ – ರಾತ್ರಿಯ ಊಟ ಎರಡನ್ನೂ ಒಂದೇ ಮಾಡಿದ್ದು, ನಾಲ್ಕು ಗಂಟೆಯ ಆ ತಡವಾದ ಊಟ!
ಎರಡೊಂದು ಮಾಡು!
Month : May-2015 Episode : Author : ಭಾರತೀ ಕಾಸರಗೋಡು