ಅಮ್ಮಾ, ನೀನೇನು ನನಗೀಗ ತಿಂಡಿ ಕೊಡ್ತೀಯೋ ಇಲ್ವೋ ಹೇಳಿ ಬಿಡು…. ಇಗೋ, ನಾನಂತು ಹೊರಟೆ ಶಾಲೆಗೆ….”
ಯಾಕೋ ಪುಟ್ಟಾ, ಹೀಗೆ ನನ್ನ ಕೈಕಾಲು ಬೀಳಿಸ್ತಾ ಇದ್ದೀ ಇವತ್ತು? ರೊಟ್ಟಿ ಬೇಯ್ತಾ ಇದೆ. ಚಟ್ನಿ ರುಬ್ತಿದೀನಿ…. ಇನ್ನೆರಡೇ ನಿಮಿಷ ಕಣೋ…..
ಹೋಗಮ್ಮಾ….. ಎರಡೇ ನಿಮಿಷ ಅಂತ ಇಪ್ಪತ್ತು ನಿಮಿಷದಿಂದ ಹೇಳ್ತಾನೇ ಇದ್ದೀ. ನನಗೆ ಹೊತ್ತಾಯ್ತು ಗೊತ್ತಾ?”
ಅಂಥದ್ದೇನೋ ಕಂದ ವಿಶೇಷ ಇವತ್ತು?
ಅಯ್ಯೋ ಅಮ್ಮ, ಇವತ್ತಿನ ಸಮಾರಂಭಕ್ಕೆ ಬರ್ತಾ ಇರೋರು ಸರ್ ಎಂ. ವಿಶ್ವೇಶ್ವರಯ್ಯ ಅವರು. ಗೊತ್ತಾಯ್ತಾ? ಅವರನ್ನು ಹತ್ತಿರದಿಂದ ನೋಡ್ಬೇಕು ಅಂತ ಆಸೆ. ನಾನೇ ವಿದ್ಯಾರ್ಥಿಮುಖಂಡ ಅಮ್ಮ. ಸಾಧ್ಯ ಆದ್ರೆ ಅವರನ್ನು ಗೌರವದಿಂದ ಉಪಚಾರ ಮಾಡ್ಬೇಕು ಅಂತಲೂ ತುಂಬ ಆಸೆ.”
ಹೌದೇನೋ ಪುಟ್ಟಾ, ವಿಶ್ವೇಶ್ವರಯ್ಯನೋರು ನಿಮ್ಮ ಶಾಲೆಗೆ ಬರ್ತಾರಾ? ಅವರಂತು ಶಿಸ್ತಿನ ಮೂರ್ತಿನೇ ಅಂತೆ! ತಡಮಾಡ್ಬೇಡ….. ಇಗೋ ರೊಟ್ಟಿ-ಚಟ್ನಿ ಸಿದ್ಧ! ತಿಂದು ಒಡ್ತಾ ಇರು ಶಾಲೆಕಡೆ….
ನೇಸರ ಹಾಗೇ ಮಾಡಿದ. ಅವನು ಶಾಲೆಯ ಬಳಿ ಬಂದಾಗ ಎಲ್ಲೆಲ್ಲೂ ಸಡಗರ…. ತಳಿರು ತೋರಣ…. ಹೂವುಗಳು….. ಬಾವುಟಗಳು! ಉಪಾಧ್ಯಾಯರ ಮುಖಗಳಲ್ಲಿ ಗೌರವಭಾವದೊಂದಿಗೆ ಆತಂಕ ಸಹ!
ನೇಸರನಂತು ಊರಿಗೆ ಮುಂಚೆ ಶಾಲೆಯ ಹೆಬ್ಬಾಗಿಲಲ್ಲೇ ನಿಂತುಬಿಟ್ಟ. ಸ್ನೇಹಿತರು ಇದೇನೋ ಇಷ್ಟು ಬೇಗನೇ ಕಾಯ್ತಾ ನಿಂತಿದ್ದೀ? ಸರ್ ಎಂ.ವಿ. ಅವರು ಬರೋದು ಹತ್ತುಗಂಟೆಗೆ ಕಣೋ ಅಂದರೆ, ಪರವಾಗಿಲ್ಲಪ್ಪ…. ಅವರು ಶಿಸ್ತಿಗೆ, ಸಮಯಪಾಲನೆಗೆ ತುಂಬ ಮಹತ್ತ್ವ ಕೊಡ್ತಾರೆ. ಸಮಯಕ್ಕೆ ಸರಿಯಾಗಿ, ಒಂದು ಸೆಕೆಂಡೂ ವ್ಯತ್ಯಾಸ ಆಗದಹಾಗೆ ಬಂದು ಬಿಡ್ತಾರೆ. ನಾನು ಕಾಯ್ತೀನಪ್ಪ ಅಂದುಬಿಟ್ಟ ನೇಸರ.
ಹತ್ತುಗಂಟೆಗೆ ಸರಿಯಾಗಿ ವಿಶ್ವೇಶ್ವರಯ್ಯ ಅವರ ಕಾರು ಶಾಲೆಯೊಳಗೆ ಬಂದಿತು. ಉಳಿದೆಲ್ಲ ಗಣ್ಯರ ಜತೆಯಲ್ಲೇ ನೇಸರನೂ ಎಂ.ವಿ. ಅವರ ಬಳಿಗೆ ಓಡಿದ; ಹಿಂದೆ ಹಿಂದೆ ಸುತ್ತಾಡಿದ. ಅವರ ಶಿಸ್ತಿನ ನಿಲವುಗಳನ್ನು, ಚುರುಕು ಕಣ್ಣೋಟವನ್ನು ಗಂಭೀರ ಮಂದಹಾಸವನ್ನು ನೋಡಿ ನೋಡಿ ಆನಂದಪಟ್ಟ.
ಸರ್ ಎಂ.ವಿ. ಒಂದಿಷ್ಟು ಸಮಯ ವ್ಯರ್ಥಮಾಡದೆ ನೇರವಾಗಿ ವೇದಿಕೆಯ ಬಳಿ ಹೋಗಿ ತಮಗೆ ಮೀಸಲಾಗಿದ್ದ ಆಸನದಲ್ಲಿ ಕುಳಿತುಕೊಂಡರು. ಬೆಳಗಿನಿಂದ ಇನ್ನಾವುದೋ ಕಾರ್ಯಕ್ಷೇತ್ರದಲ್ಲಿ ದುಡಿದು ಬಂದಿದ್ದ ಅವರು ಸಾಕಷ್ಟು ಬಳಲಿದ್ದರು. ಹಣೆಯ ಮೇಲಿನ ಬೆವರನ್ನು ಮೆಲ್ಲಗೆ ಒರೆಸಿಕೊಳ್ಳುತ್ತಾ ಒಮ್ಮೆ ಸುತ್ತ ಕಣ್ಣಾಡಿಸಿದರು. ಅವರ ನೋಟವನ್ನು ಗ್ರಹಿಸಿದವನಂತೆ ನೇಸರ ಕೂಡಲೇ ಓಡಿಹೋಗಿ ಅವರ ಮುಂದೆ ನಿಂತ.
ತುಂಬ ನೀರಡಿಕೆಯಾಗಿದೆ, ಒಂದು ಲೋಟ ನೀರು ತಂದು ಕೊಡ್ತೀಯಾ ಮಗೂ? ಮೃದುವಾಗಿ ಕೇಳಿದರು.
ವಿಧೇಯತೆಯಿಂದ ಕುತ್ತಿಗೆ ಅಲ್ಲಾಡಿಸಿ ಒಳಗೋಡಿದ ನೇಸರನಿಗೆ ಒಂದು ಆಲೋಚನೆ – ಇಷ್ಟೊಂದು ಗಣ್ಯವ್ಯಕ್ತಿಗೆ ಬರೀ ನೀರೇ? ತಾಳು…. ಅಂತ ಅತಿಥಿಗಳಿಗಾಗಿಯೇ ತಂದಿರಿಸಿದ್ದ ಎಳನೀರನ್ನು ಕೆತ್ತಿಸಿ, ಶುಭ್ರವಾದ ಲೋಟಕ್ಕೆ ಹಾಕಿ, ತಟ್ಟೆಯಲ್ಲಿರಿಸಿಕೊಂಡು ಎಂ.ವಿ. ಅವರ ಬಳಿ ಬಂದ, ಎಳನೀರು ಸಾರ್! ದಯವಿಟ್ಟು ತಗೊಳ್ಳಿ”. ಭಯ-ಭಕ್ತಿಗಳಿಂದ ಮುನ್ನೀಡಿದ.
ವಿಶ್ವೇಶ್ವರಯ್ಯ ನಸುವೇ ನಕ್ಕರು….. ಮೆಲ್ಲಗೆಂದರು – ಬಾಯಾರಿದಾಗ ನೀರೇ ಬೇಕು ಮಗೂ…. ಮೊದಲು ನೀರು ಕೊಡು….. ಈ ಎಳನೀರನ್ನು ಆಮೇಲೆ ಖಂಡಿತ ತಗೊಳ್ತೀನಿ….”
ಒಂದು ವಾತ್ಸಲ್ಯದ ನಗುವನ್ನು ಸೂಸಿ, ಎಂ.ವಿ. ಮತ್ತೆ ಹೇಳಿದರು – – “There is no substitute for MOTHER and WATER.’’