ಒಬ್ಬ ಮಹಿಳೆ ಇದ್ದಳು. ತುಂಬ ಒಳ್ಳೆಯವಳು. ತನ್ನಷ್ಟಕ್ಕೆ ಸಂಸಾರದಲ್ಲಿ ತೊಡಗಿಸಿಕೊಂಡು ಇದ್ದುಬಿಡುವ ಸ್ವಭಾವ. ಮನೆಯ ಒಪ್ಪ-ಓರಣದಲ್ಲಿ, ರುಚಿರುಚಿಯಾದ ಊಟ-ತಿಂಡಿ ತಯಾರಿಕೆಯಲ್ಲಿ, ಅತಿಥಿ ಸತ್ಕಾರದಲ್ಲಿ, ಆಕೆಗೆ ಸರಿಗಟ್ಟುವವರೇ ಇಲ್ಲ.
ಆದರೂ ಒಂದು ದೋಷವಿತ್ತು ಆಕೆಯಲ್ಲಿ. ಆಗಾಗ ಏನೋ ಅಶಾಂತಿ ಅಮರಿಬಿಡುವುದು ಆಕೆಗೆ! ವಿಪರೀತ ಉದ್ವಿಗ್ನಳಾಗಿಬಿಡುವಳು. ಈ ರೀತಿ ಆವೇಶ ಬಂದಾಗ ಆಕಾಶ-ಭೂಮಿ ಒಂದು ಮಾಡಿಬಿಡೋ ಹಾಗೆ ಕೂಗಾಡುವಳು! ಕೈಗೆ ಸಿಕ್ಕಿದ ಪಾತ್ರೆ-ಪಗಡ ತುಯ್ದು ತುಯ್ದು ಎಸೆದುಬಿಡೋಳು!
ಇವೆಲ್ಲ ಸ್ವಲ್ಪಹೊತ್ತು ಮಾತ್ರ. ಆಮೇಲೆ ಎಲ್ಲ ಯಥಾಪ್ರಕಾರ! ತಾಟು ಮಡಗುವುದು, ರೊಟ್ಟಿ-ಪಲ್ಲೆ ಬಡಿಸುವುದು, ಗಂಡ-ಮಕ್ಕಳು ಉಣ್ಣುವಾಗ ಬೀಸಣಿಗೆ ತಗೊಂಡು ಬೀಸುವುದು…. ಎಲ್ಲವೂ ಸಾಂಗೋಪಾಂಗ!
ಒಂದು ದಿನ ಹೀಗಾಕೆ ಅಡುಗೆಮನೆಯಲ್ಲಿ ಗಲಾಟೆ ಮಾಡುತ್ತಿರುವಾಗ, ಗಂಡನ ಸ್ನೇಹಿತ ಮನೆಗೆ ಬಂದ. ಅಚ್ಚರಿಯಿಂದ ಆತ ಕೇಳಿದ “ಅತ್ತಿಗೆ ಇಷ್ಟೊಂದು ಕೂಗಾಡ್ತಾ ಇದ್ದರೂ, ಶಾಂತನಾಗಿ ಕೂತಿದ್ದೀಯಲ್ಲ? ನಿನಗೂ ಜಗಳ ಆಡಬೇಕು ಅಂತ ಅನ್ನಿಸಲ್ವ?”
“ಇಲ್ಲಪ್ಪ! ನನಗೆ ಯಾವತ್ತೂ ಹಾಗೆ ಅನ್ನಿಸಿಲ್ಲ. ನನ್ನ ಹೆಂಡತಿ ತುಂಬ ಒಳ್ಳೆಯವಳು. ಆದ್ರೆ ಪಾಪ, ಹೀಗೆ ಆವೇಶಪಡ್ತಾಳಲ್ಲ ಅನ್ನೋದೇ ನನಗೆ ದುಃಖ. ಅವಳಿಗೆ ಏನಾಗುತ್ತೋ ಅಂತ ನಾನು ಯೋಚಿಸ್ತೀನಿ. ಬೇರೆಯವರು ಏನು ಬೇಜಾರು ಮಾಡಿದ್ದಾರೋ…. ಹೃದಯದಲ್ಲೇ ಏನಾದ್ರೂ ತಳಮಳವೋ…. ಅಥವಾ ಅವಳ ಮೆದುಳಿನಲ್ಲೇ ಯಾವ ರಾಸಾಯನಿಕ ಬದಲಾವಣೆಗಳೋ…. ಪಾಪ!”
ಹೆಂಡತಿ ಈ ಎಲ್ಲ ಮಾತುಗಳನ್ನು ಕೇಳಿಸಿಕೊಂಡಳು. ಹೊರಗೆ ಬಂದು ಗಂಡನಿಗೆ ಹೇಳಿದಳು – “ನೀವು ತುಂಬ ಒಳ್ಳೆಯವರು. ಇನ್ನು ಮುಂದೆ ಈ ಆವೇಶವನ್ನು ತಕ್ಕಷ್ಟು ನಿಯಂತ್ರಿಸಿಕೊಳ್ತೀನಿ…..”
“ಒಳ್ಳೇದು” ಅಂದ ಗಂಡ.